ನಾನು ಮೆಚ್ಚಿದ ವಾಟ್ಸಪ್

Sunday, March 29, 2020

ಇಂದಿನ ಇತಿಹಾಸ History Today ಮಾರ್ಚ್ 29

2020: ನವದೆಹಲಿ: ರಾಷ್ಟವ್ಯಾಪಿ ದಿಗ್ಬಂಧನ (ಲಾಕ್ ಡೌನ್) ನಿರ್ಧಾರ ಬಿಟ್ಟು ಬೇರೆ ದಾರಿ ಇರಲಿಲ್ಲ, ನಿಮಗೆ ತೊಂದರೆಯಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 29ರ ಭಾನುವಾರ ದೇಶದ ಜನತೆಗೆ ಮನವಿ ಮಾಡಿದರು. ಭಾನುವಾg ತಮ್ಮ ಜನಪ್ರಿಯ ಮನ್ ಕೀ ಬಾತ್ ಬಾನುಲಿ ಪ್ರಸಾರ ಭಾಷಣ ಮಾಡಿದ ಪ್ರಧಾನಿ, ದೇಶದಲ್ಲಿ  ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್  ಸೋಂಕನ್ನು ತಡೆಗಟ್ಟಲು ದಿಗ್ಬಂಧನ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯನ್ನು ಗೆದ್ದ ಇಬ್ಬರ ಕಥೆಯನ್ನು ಹೇಳಿ ಕಥೆ ಜನರಿಗೆ ಪ್ರೇರಣೆ ನೀಡಬೇಕು ಎಂದು ನುಡಿದರು. ದಿಗ್ಬಂಧನ ನಿಯಮಗಳನ್ನು ಮುರಿದರೆ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಇದೇ ಕೋವಿಡ್-೧೯ ಪ್ರಕರಣಗಳ ಪರೀಕ್ಷೆ ನಡೆಸುತ್ತಿರುವ ವೈದ್ಯರನ್ನು ಉಲ್ಲೇಖಿಸಿದ ಪ್ರಧಾನಿ, ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರು ಸದಾ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಪರಿವಾರವನ್ನು ನೆನಪಿಸಿಕೊಳ್ಳಿ. ಎಲ್ಲ ಮುನ್ನೆಚ್ಚರಿಕೆಗಳನ್ನು ತಪ್ಪದೆ ಪಾಲಿಸಿ ಎಂದು ಕಿವಿಮಾತು ಹೇಳಿದರು. ಹಣದ ಆಸೆ ಬಿಟ್ಟು, ಜೀವದಯೆಯಿಂದ ವೈದ್ಯರು ಕೆಲಸ ಮಾಡಬೇಕು ಎಂದು ಚರಕರು ಹೇಳಿದ್ದರು. ಈಗಿನ ವೈದ್ಯರು ಅದನ್ನು ಪಾಲಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಮೋದಿ, ಆಶಾ ಕಾರ್ಯಕರ್ತೆಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ಗಳ ಬಗ್ಗೆ ದೇಶ ಕಾಳಜಿ ವಹಿಸಿದೆ. ನಮ್ಮ ನರ್ಸ್ ಸೋದರಿಯರು ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಪಾದಿಸಿದ ಆಶಯಗಳನ್ನು ಎತ್ತಿಹಿಡಿಯುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಸಾಮೂಹಿಕವಾಗಿ ಗಡಿಗಳನ್ನು ದಾಟಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ನಿಯಮಾವಳಿಗಳನ್ನು ಉಲ್ಲಂಘಿಸಲು ವಲಸೆ ಕಾರ್ಮಿಕರಿಗೆ ಅವಕಾಶ ನೀಡಬಾರದು ಎಂಬುದಾಗಿ 2020 ಮಾರ್ಚ್ 29ರ ಭಾನುವಾರ ರಾಜ್ಯಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದ ಕೇಂದ್ರ ಸರ್ಕಾರ ಕಟ್ಟು ನಿಟ್ಟಾಗಿ ಗಡಿಗಳನ್ನು ಮುಚ್ಚುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳ ಮೇಲೆಯೇ ಇದೆ ಎಂಬುದಾಗಿ ನೆನಪಿಸಿತು. ಮಂಗಳವಾರ ಮಧ್ಯರಾತ್ರಿಯ ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ವಲಸೆ ಹೊರಟಿರುವ ಜನರನ್ನು ಪ್ರತ್ಯೇಕಿಸಿ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಏಕಾಂತವಾಸದ ವ್ಯವಸ್ಥೆಗಳಲ್ಲಿ ಮುಂದಿನ ೧೪ ದಿನಗಳ ಕಾಲ ಇರಿಸಬೇಕು ಎಂದೂ ನಿರ್ಧರಿಸಿರುವ ಕೇಂದ್ರ ಸರ್ಕಾರ ವಿಚಾರವನ್ನು ರಾಜ್ಯ ಸರ್ಕಾರಗಳಿಗೆ ತಿಳಿಸಿತು. ವಲಸೆ ಕಾರ್ಮಿಕರು ಹಳ್ಳಿಗಳಲ್ಲಿನ ತಮ್ಮ ಮನೆಗಳನ್ನು ತಲುಪಲು ಪಾದಯಾತ್ರೆ ಮೂಲಕ ಸಾಮೂಹಿPವಾಗಿ ಗುಂಪು ಗುಂಪಾಗಿ ನಗರಗಳಿಂದ ಹಳ್ಳಿಗಳತ್ತ ಗುಳೇ ಹೊರಟದ್ದರಿಂದ ಕೊರೋನಾವೈರಸ್ ವ್ಯಾಪಕವಾಗಿ ಹರಡದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮಗಳ ಮೇಲೆ ತಣ್ಣಿರು ಎರಚಿದಂತಾಗಿದೆ. ಹೀಗಾಗಿ ವಲಸೆ ಕಾರ್ಮಿಕರು ಯಾ ಸ್ಥಳದಲ್ಲಿ ಇದ್ದಾರೆಯೋ ಅದೇ ಸ್ಥಳದಲ್ಲಿ ಅವರಿಗೆ ವೇತನ ಮತ್ತು ಆಹಾರ ಲಭಿಸುವ ಖಾತರಿ ಒದಗಿಸುವಂತೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಕಟ್ಟಾಜ್ಞೆ ಮಾಡಿದೆ. ಕೊರೋನಾವೈರಸ್ ಪ್ರಸರಣ ಸರಪಣಿಯನ್ನು ತುಂಡರಿಸುವ ಸಲುವಾಗಿ ಬೀದಿಗಳಿಗೆ ಇಳಿಯದೆ ಮನೆಗಳ ಒಳಗೇ ಇರುವಂತೆ ಸರ್ಕಾರ ಆದೇಶ ನೀಡಿದ್ದರೂ ಹಲವಾರು ರಾಜ್ಯಗಳಲ್ಲಿ ಸಹಸ್ರಾರು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಪಾದಯಾತ್ರೆ ಮೂಲಕ ಹಳ್ಳಿಗಳಲ್ಲಿನ ತಮ್ಮ ಮನೆಗಳನ್ನು ಸೇರಿಕೊಳ್ಳುವ ತವಕದಿಂದ ಗುಂಪುಗುಂಪಾಗಿ ಸಾಮೂಹಿಕ ವಲಸೆ ಹೊರಟಿದ್ದಾರೆ. ಮಧ್ಯಪ್ರದೇಶದಲ್ಲಿ ಪಾದಯಾತ್ರೆ ಮೂಲಕ ಹುಟ್ಟೂರಿನತ್ತ ಹೊರಟಿದ್ದ ಕಾರ್ಮಿಕನೊಬ್ಬ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕೋಲಾಹಲ ವ್ಯಕ್ತವಾದ  ಬೆನ್ನಲ್ಲೇ ಕೇಂದ್ರ ಸರ್ಕಾರವು ಜನರ ಚಲನವಲನಗಳನ್ನು ತಡೆಯಲು ಕ್ಷಿಪ್ರ ಕ್ರಮ ಕೈಗೊಂಡಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರ ಜೊತೆಗೆ ಶನಿವಾರ ಸಂಜೆ ಮತ್ತು ಭಾನುವಾರ ಬೆಳಗ್ಗೆ ಸಭೆಗಳನ್ನು ನಡೆಸಿದ ಬಳಿಕ ನಗರಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಜನರ ಚಲನವಲನಕ್ಕೆ ಅವಕಾಶ ನೀಡುವುದರ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧದ ಸೂಚನೆಗಳಿವೆ ಎಂಬುದನ್ನು ರಾಜ್ಯ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ನೆನಪಿಸಿತು. ಸರಕು ಸಾಗಣೆಗೆ ಮಾತ್ರ ಅವಕಾಶವಿದೆ ಎಂದೂ ಕೇಂದ್ರ ಸರ್ಕಾರ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020: ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಅಫ್ಘಾನಿಸ್ಥಾನದ ಹೆರಾತ್ ಮತ್ತು ಜಲಾಲಾಬಾದ್ಗಲ್ಲಿನ ತನ್ನ ಎಲ್ಲ ರಾಜತಾಂತ್ರಿಕ ಕಚೇರಿ ಸಿಬ್ಬಂದಿಯನ್ನು ಭಾರತವು ದೇಶದ ರಾಜಧಾನಿ ಕಾಬೂಲ್ಗೆ ಸ್ಥಳಾಂತರಿಸಿದೆ ಎಂದು ನಂಬಲರ್ಹ ಮೂಲಗಳು 2020 ಮಾರ್ಚ್ 29ರ ಭಾನುವಾರ  ತಿಳಿಸಿದವು. ಹೆರಾತ್ ಮತ್ತು ಜಲಾಲಾಬಾದಿನಲ್ಲಿನ ಭಾರತದ ರಾಜತಾಂತ್ರಿಕ ಕಚೇರಿಗಳು ಇರಾನಿನ ಗಡಿಗೆ ಸಮೀಪದಲ್ಲಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸುತ್ತಿರುವ ನೆರೆಯ ರಾಷ್ಟ್ರದಿಂದ ಭಾರೀ ಸಂಖ್ಯೆಯಲ್ಲಿ ಅಪ್ಘನ್ ನಿರಾಶ್ರತರು ನಗರಗಳಿಗೆ ಬರುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು. ಹೆರಾತ್ ಮತ್ತು ಜಲಾಲಾಬಾದ್ ನಗರಗಲ್ಲಿ ಇರುವ ವೈದ್ಯಕೀಯ ಸವಲತ್ತುಗಳು ಕೂಡಾ ಕಾಬೂಲ್ನಲ್ಲಿ ಇರುವಷ್ಟು ಚೆನ್ನಾಗಿಲ್ಲ ಎಂದೂ ಹೇಳಲಾಗಿದೆ. ಕೋವಿಡ್-೧೯ ಕಳವಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ ಮೊದಲ ಕ್ರಮ ಇದಾಗಿದೆ. ಅಫ್ಘನ್ ರಾಜಧಾನಿ ಕಾಬೂಲ್ ನಲ್ಲಿ ಸಿಖ್ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಅಫ್ಘನ್ ರಾಜಧಾನಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಭದ್ರತೆಗಳನ್ನು ಇನ್ನಷ್ಟು ಬಿಗಿಗೊಳಿಸಿರುವ ಬೆನ್ನಲ್ಲೇ ಸಿಬ್ಬಂದಿ ಸ್ಥಳಾಂತರದ ವರದಿ ಬಂದಿದೆ. ಸದರಿ ಬೆಳವಣಿಗೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸ್ಥಳಾಂತರ ಪ್ರಕ್ರಿಯೆಯಲ್ಲಿ ಸ್ಥಳಾಂತರಗೊಳ್ಳುವ ರಾಜತಾಂತ್ರಿಕ ಸಿಬ್ಬಂದಿಯ ನಿರ್ದಿಷ್ಟ ಸಂಖ್ಯೆ ಎಷ್ಟು ಎಂಬುದೂ ತತ್ ಕ್ಷಣಕ್ಕೆ ಗೊತಾಗಿಲ್ಲ.  ಭಾರತವು ಅಫ್ಘಾನಿಸ್ಥಾನದ ಹೆರಾತ್, ಜಲಾಲಾಬಾದ್, ಕಂದಹಾರ ಮತ್ತು ಮಝರ್ --ಶರೀಫ್ ನಾಲ್ಕು ನಗರಗಳಲ್ಲಿ ನಾಲ್ಕು ರಾಜತಾಂತ್ರಿಕ ಕಚೇರಿಗಳನ್ನು ಹೊಂದಿದೆ. ಅಫ್ಘಾನಿಸ್ಥಾನದ ಮೂರನೇ ದೊಡ್ಡ ನಗರವಾಗಿರುವ ಹೆರಾತ್ ಇರಾನ್ ಗಡಿಯನ್ನು ಸಂಧಿಸುವ ಇಸ್ಲಾಮ್ ಖಲಾದಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020: ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಿಗೆ ಸತತ ನಾಲ್ಕನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೂಡಾ ಕೊರೋನಾವೈರಸ್ ಸೋಂಕು ದೃಢಪಟ್ಟಿದ್ದು, ಇದು ಆಕೆಯ ಕುಟುಂಬ ಸದಸ್ಯರನ್ನು ತೀವ್ರ ಚಿಂತೆಗೆ ಈಡು ಮಾಡಿತು. ಮಾರ್ಚ್ ೯ರಂದು ಲಂಡನ್ನಿನಿಂದ ವಾಪಸಾಗಿದ್ದ ಕನಿಕಾ ಕಪೂರ್ ಅವರನ್ನು ಮಾರ್ಚ್ ೨೦ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಆಕೆಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಪರೀಕ್ಷೆಯಿಂದ ಖಚಿತವಾಗಿತ್ತು. ಲಂಡನ್ನಿನಿಂದ ವಾಪಸಾದ ಬಳಿಕ ಕನಿಕಾ ಕಪೂರ್ ಕಾನ್ಪುರ ಮತ್ತು ಲಕ್ನೋಗೆ ಪಯಣಿಸಿದ್ದರು ಮತ್ತು ಲಕ್ನೋದಲ್ಲಿ ಇದ್ದಾಗ ಅವರಿಗೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿತ್ತು. ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಇತರ ಹಲವರಿಗೆ ವೈರಸ್ ಹರಡಿದ್ದಕ್ಕಾಗಿ ಮಾಧ್ಯಮಗಳು ಕನಿಕಾ ಕಪೂರ್ ಅವರನ್ನು ಕೊರೋನಾವೈರಸ್ ಖಚಿತವಾದ ಬಳಿಕ ಟೀಕಿಸಿದ್ದವು. ಏನಿದ್ದರೂ ಆಕೆಯ ಸಂಪರ್ಕಕ್ಕೆ ಬಂದಿದ್ದ ಯಾರಿಗೂ ಕೊರೋನಾವೈರಸ್ ಸೋಂಕು ತಗುಲಿದ ಬಗ್ಗೆ ಈವರೆಗೆ ವರದಿಗಳು ಬಂದಿಲ್ಲ. ಪ್ರಸ್ತುತ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ  (ಎಸ್ಜಿಪಿಜಿಐಎಂಎಸ್) ದಾಖಲಾಗಿರುವ ಕನಿಕಾ ಕಪೂರ್ ಅವರನ್ನು ಆಸ್ಪತ್ರೆ ಆಡಳಿತ ಕೂಡಾ ತಾರಾ ವರ್ತನೆಗಾಗಿ ಟೀಕಿಸಿತ್ತು. ಈ ಮಧ್ಯೆ, ಹೆಸರು ಹೇಳಲು ಇಚ್ಛಿಸದ ಕನಿಕಾ ಕುಟುಂಬದ ಒಬ್ಬ ಸದಸ್ಯರು ಪರೀಕ್ಷಾ ವರದಿಗಳಿಂದ ನಮಗೆ ಚಿಂತೆಯಾಗಿದೆ. ಕನಿಕಾ ಅವರು ಬಹುಶಃ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೇನೋ ಎಂದು ನಮಗೆ ಅನಿಸುತ್ತಿದೆ. ರಾಷ್ಟ್ರವ್ಯಾಪಿ ದಿಗ್ಬಂಧನದ ಕಾರಣ ಅತ್ಯಾಧುನಿಕ ಚಿಕಿತ್ಸೆಗಾಗಿ ಅವರನ್ನು ವಿಮಾನದಲ್ಲಿ ಒಯ್ಯಲೂ ನಮಗೆ ಸಾಧ್ಯವಾಗುತ್ತಿಲ್ಲ. ಆಕೆ ಚೇತರಿಸಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮ ಪಾಲಿಗೆ ಉಳಿದಿದೆ ಎಂದು ಹೇಳಿದರು. ಆದಾಗ್ಯೂ, ಎಸ್ಜಿಪಿಜಿಐಎಂಎಸ್ ಆಸ್ಪತ್ರೆಯ ವೈದ್ಯರು ಗಾಯಕಿಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020: ನವದೆಹಲಿ: ದೇಶಾದ್ಯಂತ ಕೊರೋನಾವೈರಸ್ ಮಹಾಮಾರಿ ಸೋಂಕಿತರ ಸಂಖ್ಯೆ 1000 ದಾಟಿದ್ದು, ಸಾವನ್ನಪ್ಪಿದವರ ಸಂಖ್ಯೆ ೨7ಕ್ಕೆ ತಲುಪಿದೆ ಈಮಧ್ಯೆ, ಭಾರತದಲ್ಲಿ ಸುಮಾರು ೮೬ ಮಂದಿ ಕೋವಿಡ್- ೧೯ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಮಾರ್ಚ್ 29ರ ಭಾನುವಾರ ಭಾನುವಾರ ಪ್ರಕಟಿಸಿತು. ದೇಶಾದ್ಯಂತ ಕೊರೋನಾವೈರಸ್ ಸೋಂಕು ಪೀಡಿತರ ಸಂಖ್ಯೆ ಕ್ಷಿಪ್ರವಾಗಿ ಹರಡುತ್ತಿರುವುದರ ನಡುವೆ ಇದೊಂದು ನೆಮ್ಮದಿ ನೀಡುವ ಸುದ್ದಿಯಾಗಿದ್ದು, ಕೋವಿಡ್ ೧೯ ಸೋಂಕಿತರಲ್ಲಿ ಶೇ.೧೦ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ದೇಶದಲ್ಲಿ ೮೬ ಮಂದಿ ಕೋವಿಡ್ ೧೯ ಪೀಡಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ವಿವರಿಸಿತು. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ೧೯ ಸೋಂಕಿನ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಮತ್ತು  ಕೇರಳ ಎರಡೇ ರಾಜ್ಯಗಳಲ್ಲಿ ಕೊರೋನಾವೈರಸ್  ಸೋಂಕು ಪೀಡಿತರ ಸಂಖ್ಯೆ ಒಟ್ಟು ೪೦೦ರ ಸಮೀಪದಲ್ಲಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ೧೯ ಸೋಂಕಿತರ ಸಂಖ್ಯೆ ೧೮೬ಕ್ಕೆ ಏರಿದ್ದು, ಈವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. ೨೫ ಕೊರೋನಾವೈರಸ್ ಪೀಡಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಕೇರಳದಲ್ಲಿ  ಕೊರೋನಾವೈರಸ್ ಸೋಂಕು ಪೀಡಿತರ ಸಂಖ್ಯೆ ೧೮೨ಕ್ಕೆ ಏರಿದೆ. ದೇಶದಲ್ಲಿ ಈಗಾಗಲೇ ೨೫ ಜನರು ಸಾವನ್ನಪ್ಪಿದ್ದು, ೧೫ ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ವಿವರ ನೀಡಿದೆ.  (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ಮ್ಯಾಡ್ರಿಡ್ (ಸ್ಪೇನ್): ಜಾಗತಿಕ ಪಿಡುಗು ಎಂಬುದಾಗಿ ಪರಿಗಣಿಸಲಾಗಿರುವ ಮಾರಕ ಕೊರೊನಾ ವೈರಸ್ ಸೋಂಕು ಸ್ಪೇನ್ ದೇಶದ ರಾಜಕುಮಾರಿಯನ್ನು ಬಲಿ ತೆಗೆದುಕೊಂಡಿದೆ. ೮೬ ವರ್ಷದ ರಾಜಕುಮಾರಿ ಮಾರಿಯಾ ತೆರೇಸಾ ಅವರಲ್ಲಿ ಕೋವಿಡ್-೧೯ ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು 2020 ಮಾರ್ಚ್ 29ರ ಭಾನುವಾರ ವರದಿ ಮಾಡಿದವು. ಮಾರಿಯಾ ತೆರೇಸಾ ಅವರು ಸ್ಪೇನ್ ರಾಜಕುಮಾರ ಫೆಲಿಪೆ - ಅವರ ಸೋದರ ಸಂಬಂಧಿಯಾಗಿದ್ದಾರೆ. ತೆರೇಸಾ ನಿಧನರಾದ ವಿಚಾರವನ್ನು ಅವರ ಸೋದರ ಪ್ರಿನ್ಸ್ ಸಿಕ್ಸ್ಟೊ ಎನ್ರಿಕ್ ಡಿ ಬೊರ್ಬನ್ ತಮ್ಮ ಫೇಸ್ ಬುಕ್  ಖಾತೆಯಲ್ಲಿ ಹಂಚಿಕೊಂಡರು. ನಮ್ಮ ಸಹೋದರಿ ಮಾರಿಯಾ ತೆರೇಸಾ ಡಿ ಬೊರ್ಬನ್ ಅವರು ಕೋವಿಡ್-೧೯ನಿಂದ ಮೃತರಾಗಿದ್ದಾರೆ ಎಂದು ಪ್ರಿನ್ಸ್ ಸಿಕ್ಸ್ಟೊ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020: ನವದೆಹಲಿ: ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಣೆಯಾದ ಬಳಿಕ ಜನರು ಎದುರಿಸಬೇಕಾಗಿ ಬಂದಿರುವ ಕಷ್ಟ-ನಷ್ಟ, ನೋವುಗಳನ್ನು ತ್ವರಿತವಾಗಿ ಶಮನಿಸುವುದು, ಆರ್ಥಿಕತೆಯನ್ನು ಮರಳಿ ಸರಿದಾರಿಗೆ ತರುವುದು ಮತ್ತು ಆರೋಗ್ಯ ಕಾಳಜಿ ಕ್ರಮಗಳನ್ನು ತ್ವರಿತಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಪ್ರಧಾನ
ಮಂತ್ರಿಗಳ ಕಾರ್ಯಾಲಯವು ೧೦ ವಿಭಿನ್ನ ಉನ್ನತ ಮಟ್ಟದ ಸಮಿತಿಗಳನ್ನು 2020 ಮಾರ್ಚ್ 29ರ ಭಾನುವಾರ ರಚಿಸಿತು. ಈ ಸಮಿತಿಗಳು ಪ್ರಧಾನ ಮಂತ್ರಿಯವರ ಮುಖ್ಯ ಕಾರ್ಯದರ್ಶಿ ಪಿ.ಕೆ. ಮಿಶ್ರ ಅವರ ಒಟ್ಟಾರೆ ಮಾರ್ಗದರ್ಶನದಲ್ಲಿ ವಿವಿಧ ಅಂಶಗಳ ಬಗ್ಗೆ ಪರಿಶೀಲಿಸುವ ಕೆಲಸ ಮಾಡಲಿವೆ ಎಂದು ಮೂಲಗಳು ಹೇಳಿವೆ. ಇದೇ ವೇಳೆಗೆ ದೇಶಾದ್ಯಂತ ಅಗತ್ಯ ಹಾಗೂ ಅಗತ್ಯೇತರ ಸರಕುಗಳ ಸಾಗಣೆಗೆ ಕೇಂದ್ರವು ಅನುಮತಿ ನೀಡಿದ್ದು, ವಲಸೆ ಕಾರ್ಮಿಕರು ಸೇರಿದಂತೆ ವಸತಿ ರಹಿತರಿಗಾಗಿ ಪರಿಹಾರ ಶಿಬಿರಗಳನ್ನು ರಚಿಸಲು ಎಸ್ ಡಿ ಆರ್ ಎಫ್ ಸವಲತ್ತುಗಳನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿತು. ಮಧ್ಯೆ, ವಿಶ್ವಾದ್ಯಂತ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಾಧಿಸಿರುವ ಮಾರಕ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ ಭಾನುವಾರ ೩೧,೪೧೨ಕ್ಕೆ ಏರಿದ್ದು, ಇವರಲ್ಲಿ ಹೆಚ್ಚಿನ ಮಂದಿ ಯುರೋಪಿನವರು ಎಂದು ವರದಿಗಳು ಹೇಳಿವೆ. ಇಂಗ್ಲೆಂಡಿನಲ್ಲಿ ಸಾವಿನ ಸಂಖ್ಯೆ ೧೨೨೮ಕ್ಕೆ ಏರಿದೆ. ಇದೇ ವೇಳೆಗೆ ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ  ರಾಜ್ಯUಳಿಂದ  ಸೋಂಕಿನ ೧೦೬ ಹೊಸ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ವರದಿಯಾಗಿವೆ.ಕೊರೋನಾವೈರಸ್ ಖಚಿತಪಟ್ಟಿರುವ ಪ್ರಕರಣಗಳ ಸಂಖ್ಯೆ 1000 ದಾಟಿದ್ದು, ಅವುಗಳಲ್ಲಿ 27 ಸಾವಿನ ಪ್ರಕರಣಗಳೂ ಸೇರಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದಶಿ ಲವ ಅಗರ್ ವಾಲ್ ಹೇಳಿದರು. ಮಹಾರಾಷ್ಟ್ರದಲ್ಲಿ ಹೊಸ ೨೨ ಪ್ರಕರಣಗಳೊಂದಿಗೆ ಸೋಂಕು ಖಚಿತ ಪಟ್ಟ ಪ್ರಕರಣಗಳ ಸಂಖ್ಯೆ ೨೦೩ಕ್ಕೆ ಏರಿದೆ. ಎರಡು ಸಾವುಗಳು ಭಾನುವಾರ ಮಹಾರಾಷ್ಟ್ರದಿಂದ ವರದಿಯಾಗಿದ್ದು ಸಾವಿನ ಸಂಖ್ಯೆ ೮ಕ್ಕೆ ಏರಿದೆ. ಕರ್ನಾಟಕದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೮೩ಕ್ಕೆ ಏರಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)


No comments:

Post a Comment