2020: ನವದೆಹಲಿ:
ಇಡೀ ವಿಶ್ವವನ್ನೇ ಬಾಧಿಸಿರುವ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟದ ಜಾಗೃತಿಗಾಗಿ 2020 ಮಾರ್ಚ್ ೨೨ರ ಭಾನುವಾರ ಬೆಳಗ್ಗೆ ೭ ಗಂಟೆಯಿಂದ ರಾತ್ರಿ
೯ ಗಂಟೆಯವರೆಗೆ ’ಜನತಾ
ಕರ್ಫ್ಯೂ’ ವಿಧಿಸಿಕೊಳ್ಳಲು
ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 19ರ ಗುರುವಾರ ಜನತೆಗೆ ಕರೆ
ನೀಡಿದರು. ಆರ್ಥಿಕ ಸ್ಥಿತಿ ನಿಭಾವಣೆಗಾಗಿ ’ಆರ್ಥಿಕ ಕಾರ್ಯಪಡೆ’
ರಚನೆಯನ್ನೂ ಅವರು ಪ್ರಕಟಿಸಿದರು. ರಾಷ್ಟ್ರವನ್ನು
ಉದ್ದೇಶಿಸಿ ಭಾಷಣ ಮಾಡಿದ ಅವರು ’ಕೊರೋನಾ ವಿರುದ್ಧದ ಜಾಗೃತಿಗಾಗಿ ನಾವು ’ಜನತಾ ಕರ್ಫ್ಯೂ’ ವಿಧಿಸಿಕೊಳ್ಳಬೇಕಾದ ಅಗತ್ಯವಿದೆ. ಇದೇ ಭಾನುವಾರ ಮಾರ್ಚ್ ೨೨ರಂದು ಬೆಳಗ್ಗೆ ೭ರಿಂದ ರಾತ್ರಿ ೯ರವರೆಗೆ ದೇಶಾದ್ಯಂತ
’ಜನತಾ ಕರ್ಫ್ಯೂ’ ಜಾರಿಯಲ್ಲಿರುತ್ತದೆ. ಇದು ಜನರೇ ಜನರಿಗೋಸ್ಕರ ಹಾಕಿಕೊಳ್ಳುವ ಸ್ವಯಂ ನಿರ್ಬಂಧ. ಇದನ್ನು ಪ್ರತಿಯೊಬ್ಬ ನಾಗರಿಕರೂ ಪಾಲಿಸಬೇಕು’
ಎಂದು ಹೇಳಿದರು. ‘ಇದು ನಮ್ಮ ಸ್ವಯಂ ನಿರ್ಬಂಧದ ಪ್ರತೀಕವಾಗಲಿ. ಇದು ಈ ಮಾರಕ ವೈರಸ್
ವಿರುದ್ಧ ಮುಂಬರುವ ದಿನಗಳಲ್ಲಿ ನಮ್ಮ ಹೋರಾಟಕ್ಕೆ ಮುನ್ನುಡಿಯಾಗಲಿ’ ಎಂದು
ನುಡಿದ ಪ್ರಧಾನಿ, ’ಈ ವಿಚಾರದಲ್ಲಿ ದೇಶವಾಸಿಗಳಲ್ಲಿ
ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯssಸರ್ಕಾರಗಳು, ಸಾಮಾಜಿಕ ಸಂಘಟನೆಗಳು, ಸ್ಕೌಟ್ ಮತ್ತು ಗೈಡ್ ಸಂಘಟನೆಗಳು ಮುಂದಿನ ಎರಡು ದಿನಗಳಲ್ಲಿ ಕಾರ್ಯ ತತ್ಪರವಾಗಬೇಕು’ ಎಂದು
ಹೇಳಿದರು. ‘ಜನತಾ ಕರ್ಫ್ಯೂ ದಿನವಾದ ಭಾನುವಾರ ಸಾಯಂಕಾಲ ೫ ಗಂಟೆಗೆ ನಾವೆಲ್ಲರೂ
ನಮ್ಮ ನಮ್ಮ ಮನೆಯ ಬಾಗಿಲ ಮುಂದೆ ನಿಂತು ಅಥವಾ ಬಾಲ್ಕನಿಯಲ್ಲಿ ನಿಂತು ಈ ಕೋವಿಡ್ ೧೯
ವಿರುದ್ಧ ಹೋರಾಡುವಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಪಾಲನಾ ಕಾರ್ಯಕರ್ತರು, ಪತ್ರಕರ್ತರು ಹಾಗೂ ಸಮಾಜದ ಇತರೇ ಸೇವಾವರ್ಗದ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಬೇಕು’ ಎಂದು
ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ನೂತನ ಕೊರೋನಾವೈರಸ್ ಸೋಂಕಿಗೆ ಭಾರತದಲ್ಲಿ ನಾಲ್ಕನೇ ವ್ಯಕ್ತಿ ಬಲಿಯಾಗಿದ್ದು, ಪಂಜಾಬಿನಿಂದ ನಾಲ್ಕನೇ ಸಾವಿನ ವರದಿ ಬಂದಿರುವುದರ ಮಧ್ಯೆಯೇ ಕೇಂದ್ರ ಸರ್ಕಾರವು ಏಪ್ರಿಲ್ ೪ರವರೆಗೆ ತನ್ನ ಶೇಕಡಾ ೫೦ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ 2020 ಮಾರ್ಚ್ 19ರ ಗುರುವಾರ ಆಜ್ಞಾಪಿಸಿದ್ದಲ್ಲದೆ,, ಮಾರ್ಚ್ ೨೨ರಿಂದ ಒಂದುವಾರ ಎಲ್ಲ
ವಿದೇಶೀ ವಿಮಾನಗಳನ್ನು ಭಾರತಕ್ಕೆ ಬರದಂತೆ ನಿಷೇಧಿಸಿತು. ಏಪ್ರಿಲ್
೪ರವರೆಗೆ ತನ್ನ ಎಲ್ಲ ಇಲಾಖೆಗಳಲ್ಲೂ ಮಧ್ಯಮ ಮತ್ತು ಕಿರಿಯ ಶ್ರೇಣಿಯ ಅಧಿಕಾರಿಗಳಲ್ಲಿ ಶೇಕಡಾ ೫೦ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮತ್ತು ಉಳಿದವರಿಗೆ ಪ್ರತ್ಯೇಕ ಪಾಳಿಗಳಲ್ಲಿ ಕೆಲಸ ಮಾಡುವಂತೆಯೂ ಕೇಂದ್ರ ಸರ್ಕಾರವು ಗುರುವಾರ ಆದೇಶ ನೀಡಿತು. ಸಾರ್ವಜನಿಕ
ಸಾರಿಗೆ ಮೇಲಿನ ಒತ್ತಡ ತಗ್ಗಿಸಲು ಮತ್ತು ಆಡಳಿತ ಯಂತ್ರದಲ್ಲಿ ಕೊರೋನಾವೈರಸ್ ಸೋಂಕು ಹರಡುವ ಸಾಧ್ಯತೆಗಳನ್ನು ಕನಿಷ್ಠಗೊಳಿಸುವ ಸಲುವಾಗಿ ನೀಡಲಾಗಿರುವ ಈ ಸೂಚನೆಯು ಕೇಂದ್ರ
ಸರ್ಕಾರದ ನೌಕರರು, ಸರ್ಕಾರೀ ಸ್ವಾಮ್ಯದ ನೌಕರರು ಮತ್ತು ಕೇಂದ್ರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಸರ್ಕಾರಿ ನೌಕರರ ಪೈಕಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರೂಪ್ ಬಿ ಮತ್ತು ಸಿ
ನೌಕರರಿಗೆ ಮನೆಯಿಂದಲೇ ಕೆಲಸದ ಆದೇಶ ಅನ್ವಯಿಸುತ್ತದೆ. ನೌಕರರನ್ನು ೫೦-೫೦ ಪ್ರಮಾಣದಲ್ಲಿ
ವಿಭಜಿಸಿ ಒಂದು ವರ್ಗಕ್ಕೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲು ಕೇಂದ್ರವು ಅಧಿಸೂಚನೆ ಮೂಲಕ ಎಲ್ಲ ಇಲಾಖಾ ಪ್ರಮುಖರಿಗೂ ನಿರ್ದೇಶನ ನೀಡಿತು. ಹೆಚ್ಚುವರಿ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಅವರು ಸಹಿ ಮಾಡಿರುವ ಅಧಿಸೂಚನೆಯಲ್ಲಿ ಎಲ್ಲ ಸಚಿವಾಲಯಗಳು ಮತ್ತು ಸರ್ಕಾರದ ಇಲಾಖೆಗಳು, ಪ್ರಧಾನ ಮಂತ್ರಿಯ ಕಚೇರಿ ಮತ್ತು ಸಂಪುಟ ಸೆಕ್ರೆಟೇರಿಯೆಟ್, ಪಿಎಸ್ಒ ಮತ್ತು ಸಿಬ್ಬಂದಿ
ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ತಾಂತ್ರಿಕ ನಿರ್ದೇಶಕರಿಗೆ ಅನ್ವಯಿಸುತ್ತದೆ ಎಂದು ಸೂಚಿಸಲಾಯಿತು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಕೊರೋನಾವೈರಸ್ ಸೋಂಕು ತಗುಲಿದ್ದ ಒಬ್ಬ ಭಾರತೀಯ ಇರಾನಿನಲ್ಲಿ ಸಾವನ್ನಪ್ಪಿರುವುದಾಗಿ ಭಾರತ ಸರ್ಕಾರ 2020 ಮಾರ್ಚ್ 19ರ ಗುರುವಾರ ತಿಳಿಸಿತು. ಸೋಂಕು ತಗುಲಿದ ಭಾರತದ ಇತರ ನಾಗರಿಕರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಮತ್ತು ಇರಾನ್ ಸರ್ಕಾರವು ಅವರ ಬಗ್ಗೆ ಕಾಳಜಿ ವಹಿಸಿದೆ ಎಂದೂ ಸರ್ಕಾರ ಪ್ರಕಟಿಸಿತು. ‘ನಾವು ೫೯೦ ಜನರನ್ನು ಅತ್ಯಂತ ಗಂಭೀರ ಸ್ಥಿತಿ ಇರುವ ಇರಾನಿನಿಂದ ತೆರವುಗೊಳಿಸಿದ್ದೇವೆ. ಇರಾನಿನಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ಭಾರತೀಯನ್ನು ಪ್ರತ್ಯೇಕಿಸಿ ಇಡಲಾಗಿದ್ದು ಅಲ್ಲಿನ ಸರ್ಕಾರ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಅವರು ಶೀಘ್ರದಲ್ಲೇ ಚೇತರಿಸುವರು ಮತ್ತು ಅವರನ್ನು ಭಾರತಕ್ಕೆ ಮರಳಿ ಕರೆತರಲಾಗುವುದು ಎಂಬುದು ನಮ್ಮ ವಿಶ್ವಾಸ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದರು. ಇರಾನಿನಿಂದ ೨೦೧ ಭಾರತೀಯರನ್ನು ಬುಧವಾರ ತೆರವುಗೊಳಿಸಲಾಗಿದೆ ಎಂದೂ ಅವರು ನುಡಿದರು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
2020 ಮಾರ್ಚ್
೨೦ರ ಶುಕ್ರವಾರ ಸಂಜೆಯ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸಿ ಬಹುಮತ ಸಾಬೀತು ಪಡಿಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಸುಪ್ರೀಂಕೋರ್ಟ್ 2020 ಮಾರ್ಚ್ 19ರ ಗುರುವಾರ ಆಜ್ಞಾಪಿಸಿತು. ಕೈಗಳನ್ನು ಎತ್ತುವ
ಮೂಲಕ ಮತದಾನ ನಡೆಯಬೇಕು ಮತ್ತು ಸಂಜೆ ೫ ಗಂಟೆಯ ಒಳಗಾಗಿ
ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ
ಮುಗಿಯಬೇಕು. ವಿಧಾನಸಭೆಯ ಇಡೀ ದಿನದ ಕಲಾಪದ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದೂ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಕಮಲನಾಥ್ ಸರ್ಕಾರವು ಬಹುಮತ ಕಳೆದುಕೊಂಡಿದ್ದು ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿಯೇ ವಿಳಂಬಿಸುತ್ತಿದೆ ಎಂದು ಆಪಾದಿಸಿ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ನಡೆಸಲು
ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂಬುದಾಗಿ ಕೋರಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶವನ್ನು ನೀಡಿತು.
ಬಂಡಾಯ ಎದ್ದಿರುವ ೧೬ ಮಂದಿ ಶಾಸಕರು
ಬಯಸಿದರೆ ಸದನ ಬಲಾಬಲ ಪರೀಕ್ಷೆಗೆ ಹಾಜರಾಗಬಹುದು, ಅಂತಹ ಸಂದರ್ಭದಲ್ಲಿ ಅವರಿಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ಪೊಲೀಸರು ಸಾಕಷ್ಟು ಭದ್ರತೆ ಒದಗಿಸಬೇಕು ಎಂದೂ ಪೀಠ ಹೇಳಿತು. ವಿಶ್ವಾಸ ಮತ ಕಲಾಪವನ್ನು ವಿರೋಧಿಸಿದ
ಕಾಂಗ್ರೆಸ್, ರಾಜೀನಾಮೆ ನೀಡಿರುವ ಆಡಳಿತ ಪಕ್ಷದ ೨೨ ಮಂದಿ ಶಾಸಕರನ್ನು
ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ. ಆದ್ದರಿಂದ ಅವರು ಭಯಭೀತಿ ಇಲ್ಲದೆ ತಮ್ಮ ಮತ ಚಲಾಯಿಸುವ ಸ್ಥಿತಿಯಲ್ಲಿ
ಇಲ್ಲ ಎಂದು ಪ್ರತಿಪಾದಿಸಿತ್ತು. ರಾಜೀನಾಮೆಗಳು ಬಲವಂತದ್ದಾಗಿದ್ದು, ಶಾಸಕರು ತಮ್ಮ ಮುಕ್ತ ಇಚ್ಛೆಯಿಂದ ವರ್ತಿಸಿಲ್ಲ ಎಂದೂ ಕಾಂಗ್ರೆಸ್ ವಾದಿಸಿತ್ತು. ಸರ್ಕಾರವು ಬಹುಮತ ಹೊಂದಿದೆಯೇ ಎಂಬುದನ್ನು ನಿರ್ಧರಿಸುವ ಏಕೈಕ ಕಾರ್ಯಸೂಚಿಯನ್ನು ಶುಕ್ರವಾರದ ವಿಧಾನಸಭಾ ಸಮಾವೇಶವು ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
೨೦೧೨ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ ೨೦ರ ಶುಕ್ರವಾರ ಬೆಳಗ್ಗೆ ೫.೩೦ಕ್ಕೆ ಗಲ್ಲಿಗೇರಿಸುವುದನ್ನು
ತಡೆ ಹಿಡಿಯುವಂತೆ ಕೊನೆ ಕ್ಷಣದಲ್ಲಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ 2020 ಮಾರ್ಚ್
19ರ ತಡರಾತ್ರಿ/ 2020 ಮಾರ್ಚ್ 20 ನಸುಕಿನಲ್ಲಿ ವಜಾಗೊಳಿಸಿತು.
ಇದರೊಂದಿಗೆ ಮರಣದಂಡನೆ ಶಿಕ್ಷೆಗೆ ತಡೆಯೊಡ್ಡುವ ಎಲ್ಲಾ ಕಾನೂನು ಹೋರಾಟಗಳು ಅಂತ್ಯಗೊಂಡಿದ್ದು, ದೆಹಲಿ
ಕೋರ್ಟ್ ಆದೇಶದಂತೆ ತಿಹಾರ್ ಸೆರೆಮನೆಯಲ್ಲಿ
2020 ಮಾರ್ಚ್ 20ರ ಬೆಳಗ್ಗೆ
5.30 ಗಂಟೆಗೆ ನಾಲ್ಕೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ. ಅಧಿಕಾರಿಗಳು ಗಲ್ಲಿಗೇರಿಸಲು ಅಂತಿಮ
ಹಂತದ ಸಿದ್ಧತೆಗಳನ್ನು 2020 ಮಾರ್ಚ್ 19ರ ಗುರುವಾರ ಅರಂಭಿಸಿದರು. ತಡರಾತ್ರಿಯ
ತನ್ನ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್ ಅಕ್ಷಯ್ ಕುಮಾರ್
ಸಿಂಗ್ ಪತ್ನಿಯ ವಿಚ್ಛೇದನ ಕೋರಿಕೆ ಅರ್ಜಿಯು ಇತರ ಮೂವರು
ಅಪರಾಧಿಗಳೊಂದಿಗೆ
ಆತನನ್ನು ಗಲ್ಲಿಗೆ ಏರಿಸದಂತೆ ತಡೆ
ನೀಡಲು ಪ್ರಸ್ತುತವಾಗುವುದಿಲ್ಲ ಎಂದು
ಹೇಳಿತು.
ಪ್ರಕರಣದ
ನಾಲ್ವರು ಅಪರಾಧಿಗಳಾದ ಅಕ್ಷಯ್ ಠಾಕೂರ್ (೩೧ವರ್ಷ), ಪವನ್ ಗುಪ್ತಾ (೨೫ವರ್ಷ), ವಿನಯ್ ಶರ್ಮಾ (೨೬ವರ್ಷ) ಹಾಗೂ ಮುಖೇಶ್ ಸಿಂಗ್ (೩೨ ವರ್ಷ) ಇವರ
ಎಲ್ಲ್ಲ ಅರ್ಜಿಗಳನ್ನು ಪಟಿಯಾಲಾ ಹೌಸ್ ಕೋರ್ಟ್ ವಜಾಗೊಳಿಸಿ ನಿಗದಿತ ದಿನಾಂಕದಂದು (೨೦-೦೩-೨೦೨೦)
ಗಲ್ಲಿಗೇರಿಸಲು ನಿರ್ದೇಶನ ನೀಡಿತು. ಶುಕ್ರವಾರ ಬೆಳಿಗ್ಗೆ ೫.೩೦ ಕ್ಕೆ
ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಈ ನಾಲ್ಕೂ ಮಂದಿ
ಅಪರಾಧಿಗಳನ್ನು ಸೆರೆಮನೆ
ಸಂಖ್ಯೆ ೩ರಲ್ಲಿ ಏಕಕಾಲಕ್ಕೆ ಗಲ್ಲಿಗೇರಿಸಲಾಗುವುದು. ಅಧಿಕಾರಿಗಳು ಬುಧವಾರ ಫಾನ್ಸಿ ಕೋಥಾ’ದಲ್ಲಿ (ನೇಣು
ಪ್ರಾಂಗಣ) ಮರಣದಂಡನೆಯ ರಿಹರ್ಸಲ್ ನಡೆಸಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದರು. ವಧಕಾರ ಪವನ್ ಜಲ್ಲಾಡ್ ಜೊತೆಗೆ ಸೆರೆಮನೆ ಅಧಿಕಾರಿಗಳ ಗುರುವಾರ ಬೆಳಿಗ್ಗೆ ಮತ್ತೆ ಸೆರೆಮನೆ ಸಂಖ್ಯೆ ೩ ರ ಒಳಗಿನ
ನೇಣು ಹಾಕುವ ಪ್ರಾಂಗಣವನ್ನು ಪರಿಶೀಲಿಸಿದರು. ನೇಣು ಹಾಕುವ ಸಲುವಾಗಿ ಬಿಹಾರದ ಬಕ್ಸಾರ್ನಿಂದ ತರಲಾದ ೧೦ ಹಗ್ಗಗಳನ್ನು ಗಲ್ಲುಗಂಭಕ್ಕೆ ಕಟ್ಟಲಾಗಿದ್ದು,
ಗುರುವಾರ ಸಂಜೆ ಕೊನೆಯ ಬಾರಿಗೆ ಅವುಗಳನ್ನು ಪರಿಶೀಲಿಸಲಾಗುತ್ತದೆ. ಮೀರತ್ ನಿವಾಸಿ ಪವನ್ ಜಲ್ಲಾಡ್ ಉತ್ತರ ಪ್ರದೇಶದ ಸೆರೆಮನೆ ವಿಭಾಗದವರಾಗಿದ್ದು, ಮರಣದಂಡನೆಗಾಗಿ ತಿಹಾರ್ ಸೆರೆಮನೆ ಅಧಿಕಾರಿಗಳು ಅವರನ್ನು ದೆಹಲಿಗೆ ಕರೆಸಿದ್ದರು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment