ಇಂದಿನ ಇತಿಹಾಸ History Today ಮಾರ್ಚ್ 25
2018: ಇಂದೋರ್: ಮಧ್ಯ ಪ್ರದೇಶದಲ್ಲಿನ ಸುಮಾರು ೯೦ ಲಕ್ಷ ಜಾನುವಾರುಗಳ ಪೈಕಿ
ಅಂದಾಜು ೨.೫ ಲಕ್ಷ ಜಾನುವಾರುಗಳಿಗೆ ೧೨ ಅಂಕಿಗಳ ಆಧಾರ್ ವಿಶಿಷ್ಠ ಸಂಖ್ಯೆ ಮಾದರಿಯ ವಿಶಿಷ್ಠ ಗುರುತಿನ
ಸಂಖ್ಯೆಗಳನ್ನು ಹಾಕಲಾಗಿದೆ. ದನ, ಎಮ್ಮೆ ಕೋಣ ಇತ್ಯಾದಿಗಳ ಸುರಕ್ಷತೆ ಹಾಗೂ ಕ್ಷೀರೋತ್ಪಾದನೆ ಹೆಚ್ಚಿಸುವ
ಸಲುವಾಗಿ ಜಾನುವಾರುಗಳಿಗೆ ವಿಶಿಷ್ಠ ಗುರುತಿನ ಸಂಖ್ಯೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ರಾಷ್ಟೀಯ ಡೈರಿ (ಕ್ಷೀರೋತ್ಪನ್ನ) ಅಭಿವೃದ್ಧಿ ಮಂಡಳಿಯ
(ಎನ್ ಡಿಡಿಬಿ) ಮಹತ್ವಾಕಾಂಕ್ಷಿ ಯೋಜನೆಯ ಅಂಗವಾಗಿ ಈ ಜಾನುವಾರುಗಳ ಕಿವಿಗಳಿಗೆ ಯುಐಡಿ ಮಾದರಿಯ ನಂಬರುಗಳನ್ನು
ಹಾಕಲಾಗಿದೆ. ಪಶು
ಉತ್ಪಾದನೆ ಮತ್ತು ಆರೋಗ್ಯ ಕುರಿತ ಮಾಹಿತಿ ಜಾಲ (ಐಎನ್ ಎ ಪಿಎಚ್) ಹೆಸರಿನ ರಾಷ್ಟ್ರವ್ಯಾಪಿ ದಾಖಲೆ
ವ್ಯವಸ್ಥೆಯ ಅಡಿಯಲಿ ದನಗಳು ಮತ್ತು ಎಮ್ಮೆಗಳಿಗೆ ಈ ರೀತಿ ವಿಶಿಷ್ಠ ಗುರುತಿನ ಸಂಖ್ಯೆಗಳನ್ನು ಹಾಕಲಾಗುತ್ತಿದೆ
ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮಧ್ಯಪ್ರದೇಶ ಪಶು ಸಂಗೋಪನಾ ಜಂಟಿ ನಿರ್ದೇಶಕ ಮತ್ತು ಐಎನ್ ಎ
ಪಿಎಚ್ ರಾಜ್ಯ ನೋಡಲ್ ಅಧಿಕಾರಿ ಗುಲಾಬ್ ಸಿಂಗ್ ದಾವರ್ ಅವರು, ’ಜಾನುವಾರುಗಳಿಗೆ ವಿಶಿಷ್ಠ ಗುರುತಿನ
ಸಂಖ್ಯೆ ಹಾಕುವ ಕೆಲಸವನ್ನು ಈ ತಿಂಗಳಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ
೪೦ ಲಕ್ಷ ಸಂಖ್ಯೆ ಯುಐಡಿ ಗುರುತುಗಳನ್ನು ವಿತರಿಸಲಾಗಿದ್ದು, ೨.೫ ಲಕ್ಷ ಜಾನುವಾರುಗಳ ಕಿವಿಗಳಿಗೆ
ಅವುಗಳನ್ನು ಹಾಕಲಾಗಿದೆ’ ಎಂದು ಹೇಳಿದರು. ಮಧ್ಯಪ್ರದೇಶದಲ್ಲಿ
ಎರಡನೇ ಹಂತದಲ್ಲಿ ಎಲ್ಲ ೯೦ ಲಕ್ಷ ಜಾನುವಾರುಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆ ಹಾಕುವುದು ನಮ್ಮ ಯೋಜನೆ’ ಎಂದು ಅವರು ನುಡಿದರು.
ಜಾನುವಾರುಗಳ
ವಿಶಿಷ್ಠ ಗುರುತಿನ ಸಂಖ್ಯೆಯು ಪ್ರಾಣಿಯ ವಯಸ್ಸು, ತಳಿ, ಇತರ ವೈಶಿಷ್ಠ್ಯಗಳನ್ನು ಹೊಂದಿರುತ್ತದೆ.
ಈ ಮಾಹಿತಿಯನ್ನು ಐಎನ್ ಎ ಪಿಎಚ್ ನ ಮಾಹಿತಿ ತಂತ್ರಜ್ಞಾನ ಅಪ್ಲಿಕೇಶನ್ನಿನಲ್ಲಿ ಹಾಕಲಾಗುವುದು. ಇದರಿಂದ
ಪ್ರತಿಯೊಂದು ಗೋವು ಅಥವಾ ಎಮ್ಮೆಯ ವಿಶಿಷ್ಠ ಗುರುತು ಎಲ್ಲ ಕಡೆ ದಾಖಲೆಗಳಲ್ಲೂ ಲಭ್ಯವಾಗುತ್ತದೆ ಎಂದು
ಅವರು ವಿವರಿಸಿದರು. ಜಾನುವಾರು ಯುಐಡಿ ನಂಬರನ್ನು
ಅದರ ಮಾಲೀಕನ ಆಧಾರ್ ನಂಬರಿಗೂ ಜೋಡಿಸಲಾಗುವುದು. ಇದರಿಂದ ಜಾನುವಾರುಗಳ ಅಕ್ರಮ ಮಾರಾಟ, ಖರೀದಿ, ಕಳ್ಳಸಾಗಣೆ
ಮತ್ತು ಜಾನುವಾರುಗಳನ್ನು ಬಳಕೆ ಬಳಿಕ ತ್ಯಜಿಸಿ ಬಿಟ್ಟು ಬಿಡುವುದೇ ಇತ್ಯಾದಿಯೆಲ್ಲವುಗಳ ತಪಾಸಣೆ ಸುಲಭವಾಗುತ್ತದೆ
ಎಂದು ಅವರು ನುಡಿದರು. ಈ
ಮೂಲಕ ನಾವು ಪ್ರಾಣಿಗಳ ಉತ್ಪಾದಕತೆ ಮೇಲೂ ಕಣ್ಣಿಟ್ಟು ಅವುಗಳ ತಳಿ ವೃದ್ಧಿಗೆ ಕ್ರಮ ಕೈಗೊಳ್ಳಬಹುದು.
ಇದರಿಂದ ಜಾನುವಾರು ಒಡೆಯರ ಆದಾಯವೂ ಹೆಚ್ಚಲಿದೆ. ಮಧ್ಯ
ಪ್ರದೇಶವು ಭಾರತದಲ್ಲಿ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಜ್ಯ ಎಂದು ದಾವರ್ ಹೇಳಿದರು.
2018: ಪಾಟ್ನಾ: ೨೦೧೯ ಮತ್ತು ೨೦೧೦ರ
ಚುನಾವಣೆಗಳಲ್ಲಿ ಬಿಹಾರ ರಾಜ್ಯದಲ್ಲಿ ಹೋರಾಟ ನಡೆಯುವುದು ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಮತ್ತು
ಭಾರತೀಯ ಜನತಾ ಪಕ್ಷ (ಬಿಜೆಪಿ) ಮಧ್ಯೆ. ನಿತೀಶ್ ಕುಮಾರ್ ಅವರ ಜನತಾದಳ (ಯು) ಹೇಳಹೆಸರಿಲ್ಲದಂತಾಗುವುದು
ಎಂದು ಆರ್ ಜೆಡಿ ನಾಯಕ, ಲಾಲೂ ಪ್ರಸಾದ್ ಪುತ್ರ ತೇಜಸ್ವಿ ಯಾದವ್ ಹೇಳಿದರು. ಲಾಲು ಪ್ರಸಾದ್ ಅವರ ಅನುಪಸ್ಥಿತಿಯಲ್ಲಿ
ನಡೆದ ರಾಜ್ಯದ ಜೆಹಾನಾ ಬಾದ್ ವಿಧಾನಸಭೆ ಮತ್ತು ಅರಾರಿಯಾ ಲೋಕಸಭೆ ಸ್ಥಾನಗಳನ್ನು ಉಪಚುನಾವಣೆಯಲ್ಲಿ
ಗೆದ್ದುಕೊಂಡ ಹಿನ್ನೆಲೆಯಲ್ಲಿ ಪತ್ರಿಕಾ ಸಂದರ್ಶನ ಒಂದರಲ್ಲಿ ತೇಜಸ್ವಿ ಯಾದವ್ ಈ ಮಾತು ಹೇಳಿದರು. ‘ರಾಜ್ಯದ ಜನರ ಹಿತಕ್ಕಾಗಿ ಮಹಾಮೈತ್ರಿ (ಮಹಾ ಘಟಬಂಧನ್)
ತ್ಯಜಿಸಿ ಬಿಜೆಪಿ ಜೊತೆ ಕೈಜೋಡಿಸಿರುವುದಾಗಿ ನಿತೀಶ್ ಕುಮಾರ್ ನೀಡಿದ್ದ ಹೇಳಿಕೆಯನ್ನು ಜನತೆ ಸಂಪೂರ್ಣವಾಗಿ
ತಿರಸ್ಕರಿಸಿದ್ದಾರೆ ಎಂದು ತೇಜಸ್ವಿ ನುಡಿದರು. ‘ತಮ್ಮ
ಪರಿಸ್ಥಿತಿ ಏನು ಎಂಬುದನ್ನು ನಿತೀಶ್ ಕುಮಾರ್ ಅವರೇ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು
ಯಾವಾಗಲೂ ತಾವು ಅಭಿವೃದ್ಧಿಯ ರಾಜಕೀಯ ಮಾಡುವುದಾಗಿ ಹೇಳುತ್ತಾರೆ. ಅದರೆ ರಾಜಧಾನಿ ಪಾಟ್ನಾದಿಂದ ಕೇವಲ
೧೦೦ ಕಿಮೀ ದೂರದಲ್ಲಿ ಇರುವ ಜೆಹಾನಾಬಾದಿನಲ್ಲಿ ಏನಾಯಿತು? ಅವರ ಪಕ್ಷದ ಅಭ್ಯರ್ಥಿ ಭಾರಿ ಅಂತರದಿಂದ
ಪರಾಭವಗೊಂಡರು ಎಂದು ತೇಜಸ್ವಿ ನೆನಪಿಸಿದರು . ‘ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ತಮಗೆ ಅಗತ್ಯ
ಬಿದ್ದಾಗ ’ಸ್ಟೆಪ್ನಿ’ಯನ್ನು ಬಳಸಿಕೊಳ್ಳುವಂತೆ ’ಸ್ಪೇರ್ ಟೈರ್’ ರೂಪದಲ್ಲಿ ಬಳಸಿಕೊಳ್ಳಲಿದೆ ಎಂದು ಯಾದವ್
ಹೇಳಿದರು. ಅರಾರಿಯಾ ಮತ್ತು ಜೆಹಾನಾಬಾದ್ ಆರ್ ಜೆಡಿಯ
ಪರಂಪರಾಗತ ಕ್ಷೇತ್ರಗಳಲ್ಲ. ಈ ಕ್ಷೇತ್ರಗಳಲ್ಲಿ ನಾವು ಕೆಲವೊಮ್ಮೆ ಗೆದ್ದಿದ್ದೇವೆ, ಕೆಲವೊಮ್ಮ ಸೋತಿದ್ದೇವೆ.
ಆದರೆ ಈ ಬಾರಿ ನಮ್ಮ ಅಭ್ಯರ್ಥಿಗಳು ಉಭಯ ಸ್ಥಾನಗಳನ್ನೂ ಉತ್ತಮ ಅಂತರದೊಂದಿಗೆ ಉಳಿಸಿಕೊಂಡಿದ್ದಾರೆ.
ಜೊತೆಗೆ ತಮ ಮತಪಾಲಿನ ಪ್ರಮಾಣವೂ ಹೆಚ್ಚಿದೆ. ಅರಾರಿಯಾದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಕಾರ್‍ಯಕರ್ತರನ್ನು
ಕರೆತಂದು ಕೋಮುನೆಲೆಯಲ್ಲಿ ಮತಗಳನ್ನು ಧ್ರುವೀಕರಿಸಿದರೂ ಗೆಲುವು ನಮ್ಮ ಕಡೆಗೆ ಬಂದಿದೆ. ನಮಗೆ ಸಾಂಪ್ರದಾಯಿಕ
ಮುಸ್ಲಿಮ್- ಯಾದವ್ ಮತಗಳ ಬೆಂಬಲ ಮಾತ್ರ ಬಂದಿರುವುದಲ್ಲ, ಸಮಾಜದ ಎಲ್ಲ ವರ್ಗಗಳಿಂದಲೂ ಬೆಂಬಲ ಲಭಿಸಿದೆ,
ಮೇಲ್ವರ್ಗದ ಬ್ರಾಹ್ಮಣರೂ ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಅವರು ನುಡಿದರು. ಅರಾರಿಯಾದ
ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರೈ ಅವರು ಆರ್ ಜೆಡಿ ಅಭ್ಯರ್ಥಿ
ಗೆದ್ದರೆ ಅರಾರಿಯಾ ಭಯೋತ್ಪಾದನೆಯ ಸ್ವರ್ಗವಾಗಲಿದೆ ಎಂದಿದ್ದರು. ಈ ಚುನಾವಣೆ ರಾಜ್ಯದಲ್ಲಿನ ಜನರ
’ಮೂಡ್’ ಏನು ಎಂಬುದನ್ನು ಪ್ರತಿನಿಧಿಸಿದೆ ಎಂದು ತೇಜಸ್ವಿ
ಹೇಳಿದರು. ಈ ಹಿನ್ನೆಲೆಯಲ್ಲಿಯೇ ೨೦೧೯ರ ಚುನಾವಣಾ ವ್ಯೂಹವನ್ನು ನಾವು ರಚಿಸಲಿದ್ದೇವೆ ಎಂದೂ ಅವರು
ಹೇಳಿದರು. ಕೇಂಬ್ರಿಜ್ ಅನಾಲಿಟಿಕಾ ವಿವಾದದ ಬಗ್ಗೆ
ಕೇಳಲಾದ ಪ್ರಶ್ನೆಗೆ ತೇಜಸ್ವಿ ಅವರು ’ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್
ಅವರು ಮಾತ್ರವೇ ರಾಷ್ಟ್ರದಲ್ಲಿ ಚುನಾವಣೆಗಳನ್ನು ಗೆಲ್ಲಲು ಕೇಂಬ್ರಿಜ್ ಅನಾಲಿಟಿಕಾದಂತಹ ಪಿಆರ್ ಏಜೆನ್ಸಿಗಳ
ಸಹಾಯ ಪಡೆದರು. ಅಭಿವೃದ್ಧಿ ಕೆಲಸಗಳು ಮತ್ತು ಭರವಸೆಗಳ ಬಗ್ಗೆ ಪೊಳ್ಳು ಕಲ್ಪನೆಗಳನ್ನು ಮೂಡಿಸುವ ಸಲುವಾಗಿ
ಅವರು ಈ ಏಜೆನ್ಸಿಗಳ ನೆರವು ಪಡೆದರು ಎಂದು ತೇಜಸ್ವಿ ಟೀಕಿಸಿದರು. ಮಹಾಮೈತ್ರಿಯಲ್ಲಿ ಆರ್ ಜೆಡಿಯು ರಾಹುಲ್ ಗಾಂಧಿ ಅವರ ನಾಯಕತ್ವವನ್ನು
ಅಂಗೀರಕರಿಸುವುದೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಇತರ ಪಕ್ಷಗಳು ಆರ್ ಜೆಡಿ
ಜೊತೆಗೆ ಬಂದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಹಾ ಮೈತ್ರಿಯ ನಾಯಕನಾಗಿ ಪರಿಗಣಿಸಲು ಆರ್ ಜೆಡಿಗೆ ಯಾವುದೇ
ಸಮಸ್ಯೆ ಇಲ್ಲ. ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಸ್ವತಃ ಕಾಂಗ್ರೆಸ್ ಪಕ್ಷವೂ ಚುನಾವಣೆಗೆ ಮುನ್ನವೇ
ಎಂದೂ ಪ್ರಕಟಿಸಿದ್ದಿಲ್ಲ. ಪರಿಸ್ಥಿತಿ ಬಂದಾಗ ಮೈತ್ರಿಕೂಟದ ನಾಯಕರು ಒಟ್ಟಾಗಿ ಕುಳಿತು ಸರ್ವಾನುಮತದ
ನಿರ್ಧಾರ ಕೈಗೊಳ್ಳುವರು ಎಂದು ಅವರು ಹೇಳಿದರು.
2018: ಕೇಪ್ ಟೌನ್: ದಕ್ಷಿಣ ಆಫ್ರಿಕಾ
ವಿರುದ್ಧ ನಡೆಯುತ್ತಿರುವ ೩ ನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ (ಬಾಲ್ ಟ್ಯಾಂಪರಿಂಗ್)
ಆರೋಪಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ನಾಯಕತ್ವದಿಂದ ಕೆಳಗಿಳಿದರು.
ಸ್ಮಿತ್ ಜೊತೆಗೆ ಉಪನಾಯಕ ಡೇವಿಡ್ ವಾರ್ನರ್ ಅವರೂ ಉಪನಾಯಕ ಸ್ಥಾನವನ್ನು ತ್ಯಜಿಸಿದರು. ಸ್ಮಿತ್
ಬದಲಿಗೆ ಟಿಮ್ ಪೇಯ್ನ್ ಅವರು ಟೆಸ್ಟ್ ಪಂದ್ಯದ ಉಳಿದ ಅವಧಿಗೆ ತಂಡದ ನಾಯಕನಾಗಿ ಮುಂದುವರಿಯುವರು ಎಂದು
ಪ್ರಕಟಣೆ ತಿಳಿಸಿತು. ಈದಿನ ನಡೆಯುತ್ತಿದ್ದ ಟೆಸ್ಟ್
ಪಂದ್ಯದ ೩ ನೇ ದಿನ ಆಸೀಸ್ ತಂಡದ ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಲು
ಯತ್ನಿಸಿದ್ದು ಅದು ಕ್ಯಾಮರಾದಲ್ಲಿ ಸೆರೆಯಾಗಿ ಭಾರಿ ಸುದ್ದಿಯಾಗಿತ್ತು. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ
ತನಿಖೆಗೆ ಆದೇಶಿಸಿತ್ತು, ತನಿಖೆ ಮುಗಿಯುವವರೆಗೂ ನಾಯಕಸ್ಥಾನದಲ್ಲಿ
ಮುಂದುವರಿಯಬಹುದು ಎಂದು ಸ್ಮಿತ್ ಅವರಿಗೆ ಸೂಚಿಸಿತ್ತು.
ಸ್ಮಿತ್ ತಪ್ಪಿದ್ದರೆ ನಾಯಕ ಅವರನ್ನು ಸ್ಥಾನದಿಂದ ತೆಗೆದು ಹಾಕಲು ಆಸ್ಟ್ರೇಲಿಯಾ ಸರ್ಕಾರ
ಸೂಚನೆ ನೀಡಿತ್ತು. ತಮ್ಮ ವಿರುದ್ಧದ ಟೀಕೆಗಳ ಮಧ್ಯೆ
ಸ್ಮಿತ್ ಅವರು ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದರು.
ಸದ್ಯ ವಿಕೆಟ್ ಕೀಪರ್ ಆಗಿರುವ ಟಿಮ್ ಪೇಯ್ನ್ ಅವರು
ತಂಡದ ಸಾರಥ್ಯ ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿದವು. ಬ್ಯಾನ್ಕ್ರಾಫ್ಟ್ ಅವರು ಟೇಪ್ ಬಳಸಿ ಚಂಡನ್ನು
ವಿರೂಪಗೊಳಿಸಲು ಯತ್ನಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ
ಸಾಧ್ಯತೆಗಳಿವೆ. ಪಂದ್ಯದ ಸಂಭಾವನೆಯ ೧೦೦ ಶೇಕಡಾ ದಂಡ ವಿಧಿಸಿ , ಒಂದು ಪಂದ್ಯಕ್ಕೆ ನಿಷೇಧ ಹೇರುವ
ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿದವು.
2018: ನವದೆಹಲಿ: ವಜ್ರಾಭರಣ ವಿನ್ಯಾಸಗಾರ
ನೀರವ್ ಮೋದಿಯ ಫೈರ್ ಸ್ಟಾರ್ ಡೈಮಂಡ್ ಸಮೂಹ ಸಂಸ್ಥೆಗಳ ದಿವಾಳಿ ಅರ್ಜಿ ಪ್ರಕ್ರಿಯೆಯಲ್ಲಿ ಹಕ್ಕು ಪ್ರತಿಪಾದನೆ
ಮಾಡುವ ನಿಟ್ಟಿನಲ್ಲಿ ಡೈಮಂಡ್ ಸಮೂಹ ಕಂಪೆನಿಯಿಂದ ಅಂದಾಜು ೧೩,೦೦೦ ಕೋಟಿ ರೂಪಾಯಿ ವಂಚನೆಗೆ ಈಡಾಗಿರುವ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಯೋಜಿಸಿತು. ಫೈರ್ ಸ್ಟಾರ್
ಡೈಮಂಡ್ ಇಂಟರ್ ನ್ಯಾಷನಲ್ ಕಂಪೆನಿಯ ದಿವಾಳಿ ಪ್ರಕ್ರಿಯೆಯಲ್ಲಿ ಹಕ್ಕು ಪ್ರತಿಪಾದನೆ ಮಾಡುವುದು ಸೇರಿದಂತೆ
ಸಾಲ ವಸೂಲಿ ಮಾಡಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನೂ ಬ್ಯಾಂಕ್ ಶೋಧಿಸುತ್ತಿದೆ ಎಂದು ಮೂಲಗಳು ಹೇಳಿದವು.
ಈ ನಿಟ್ಟಿನಲ್ಲಿ ಮುಂದುವರೆಯಲು ಕಾನೂನು ತಜ್ಞರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಬ್ಯಾಂಕ್ ತೊಡಗಿದೆ
ಎಂದು ಮೂಲಗಳು ಹೇಳಿದವು. ಕಾನೂನು ಸಂಸ್ಥೆಯನ್ನು ಶೀಘ್ರದಲ್ಲೇ
ಈ ಉದ್ದೇಶಕ್ಕಾಗಿ ನೇಮಿಸಲಾಗುವುದು ಎಂದು ವರದಿ ತಿಳಿಸಿತು. ವಿವಿಧ ಪ್ರಕ್ರಿಯೆಗಳ ಅನುಕೂಲ-ಅನಾನುಕೂಲಗಳ
ಪರಿಶೀಲನೆ ಮಾಡಲಾಗುತ್ತಿದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ. ಏನಿದ್ದರೂ ಈ ಬಗ್ಗೆ ಪ್ರತಿಕ್ರಿಯಿಸಲು
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿರಾಕರಿಸಿತು. ಕಳೆದ
ತಿಂಗಳು ನೀರವ್ ಮೋದಿ ಒಡೆತನದ ಫೈರ್ ಸ್ಟಾರ್ ಡೈಮಂಡ್ ಕಂಪೆನಿಯು ನ್ಯೂಯಾರ್ಕ್ ಕೋರ್ಟ್ ಒಂದರಲ್ಲಿ
ದಿವಾಳಿ ಅರ್ಜಿ ಸಲ್ಲಿಸಿತ್ತು. ದಿವಾಳಿ ಕಾನೂನು ಅನ್ವಯಿಸುವ ಬಗ್ಗೆ ಅಮೆರಿಕದ ಟ್ರಸ್ಟಿ ಪ್ರೋಗ್ರಾಮ್
ಪರಿಶೀಲಿಸುತ್ತದೆ. ನೀರವ್ ಮೋದಿ ಮತ್ತು ಅವರ ಮಾವ
ಮೆಹುಲ್ ಚೊಕ್ಸಿ ಅವರು ಕೆಲವು ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಸಾಲ ಖಾತರಿ ಪತ್ರಗಳನ್ನು ಪಡೆಯುವ
ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೧೨,೯೬೮ ಕೋಟಿ ರೂಪಾಯಿಗಳನ್ನು ವಂಚಿಸಿದ್ದರು ಎಂದು ಆಪಾದಿಸಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದು ೨೦೧೧ರ
ಮಾರ್ಚ್ ತಿಂಗಳಿನಿಂದ ನೀರವ್ ಮೋದಿ ಅವರಿಗೆ ಸೇರಿದ ಕಂಪೆನಿಗಳಿಗೆ ಅಕ್ರಮವಾಗಿ ಸಾಲ ಖಾತರಿ ಪತ್ರಗಳನ್ನು
ನೀಡುತ್ತಾ ಬಂದಿತ್ತು ಎನ್ನಲಾಗಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ವಿವಿಧ
ತನಿಖಾ ಸಂಸ್ಥೆಗಳು ರಾಷ್ಟ್ರದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಂತ ಬೃಹತ್ ವಂಚನೆ ಹಗರಣ ಎಂದು ಹೇಳಲಾಗಿರುವ
ಈ ಹಗರಣದ ತನಿಖೆ ನಡೆಸುತ್ತಿವೆ. ಹಗರಣದಲ್ಲಿ ಸಿಲುಕಿರುವ
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಹಾಗೂ ಅವರ ನಿಕಟವರ್ತಿಗಳಿಗೆ ಅಂದಾಜು
೧೫೯೦ ಸಾಲ ಖಾತರಿ ಪತ್ರಗಳನ್ನು ವಿತರಿಸಿದೆ ಎಂದು ಹೇಳಲಾಗಿದೆ. ನೀರವ್ ಮೋದಿ ಮತ್ತು ಬಂಧುಗಳು ಹಾಗೂ
ನೀರವ್ ಮೋದಿ ಸಮೂಹಕ್ಕೆ ೧,೨೧೩ ಸಾಲ ಖಾತರಿ ಪತ್ರಗಳನ್ನು ನೀಡಿದ್ದರೆ, ಮೆಹಲ್ ಚೊಕ್ಸಿ ಮತ್ತು ಅವರ
ಬಂಧುಗಳು ಹಾಗೂ ಗೀತಾಂಜಲಿ ಗ್ರೂಪ್ ಗೆ ೩೭೭ ಸಾಲ ಖಾತರಿ ಪತ್ರಗಳನ್ನು ನೀಡಲಾಗಿದೆ.
ತನಿಖೆ
ಪ್ರಗತಿಯಲ್ಲಿ ಇರುವುದರಿಂದ ಈ ಕಂಪೆನಿಗಳಿಂದ ಮರುಪಾವತಿಯಾಗಿರುವ ಮೊತ್ತ ಎಷ್ಟು ಎಂಬುದು ಸಧ್ಯಕ್ಕೆ
ಲಭ್ಯವಿಲ್ಲ ಎಂದು ವಿತ್ತ ಸಚಿವಾಲಯವು ಸಂಸತ್ತಿಗೆ ನೀಡಿದ ಉತ್ತರ ಒಂದರಲ್ಲಿ ತಿಳಿಸಿತು.
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಆಪ್ ಮಾಹಿತಿಯನ್ನು
ಬಳಕೆದಾರರ ಒಪ್ಪಿಗೆ ಇಲ್ಲದೆ ಹಂಚಿಕೊಂಡ ಆಪಾದನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್
ಗಾಂಧಿ ಅವರು ಈದಿನ ಪ್ರಧಾನಿ ಅವರ ಮೇಲೆ ಟೀಕಾ ಪ್ರಹಾರ
ಮಾಡಿದರು. ಬಿಜೆಪಿ ಅವರ ಟೀಕೆಯನ್ನು ತಳ್ಳಿಹಾಕಿತು.
‘ಮಾಧ್ಯಮಗಳು ಈ ಕಥೆಯನ್ನು ಸಮಾಧಿ ಮಾಡುತ್ತಿವೆ’ ಎಂದೂ ರಾಹುಲ್ ಗಾಂಧಿ
ಆಪಾದಿಸಿದರು. ಬಳಕೆದಾರರ ಅನುಮತಿ ಇಲ್ಲದೆ ಮೋದಿ ಅವರ
ಅಧಿಕೃತ ಆಪ್ -’ನಮೋ ಆಪ್’ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ
ಎಂದು ಫ್ರೆಂಚ್ ಹ್ಯಾಕರ್ ಬಹಿರಂಗ ಪಡಿಸಿದ ಬಗ್ಗೆ ಬಂದ ಮಾಧ್ಯಮ ವರದಿಯೊಂದನ್ನು ಆಧರಿಸಿ ರಾಹುಲ್ ಗಾಂಧಿ
ಈ ದಾಳಿ ನಡೆಸಿದರು. ‘ಹಿ! ನನ್ನ ಹೆಸರು ನರೇಂದ್ರ
ಮೋದಿ. ನಾನು ಭಾರತದ ಪ್ರಧಾನಿ. ನೀವು ನನ್ನ ಅಧಿಕೃತ ಆಪ್ ಗೆ ಸಹಿ ಮಾಡಿದಾಗ, ನಾನು ನಿಮ್ಮ ಎಲ್ಲ ಮಾಹಿತಿಯನ್ನು
ಅಮೆರಿಕ ಕಂಪೆನಿಗಳಲ್ಲಿನ ನನ್ನ ಗೆಳೆಯರಿಗೆ ಕೊಡುವೆ’ ಎಂದು ಟ್ವೀಟ್ ಮಾಡುವ
ಮೂಲಕ ರಾಹುಲ್ ಗಾಂಧಿ ಲೇವಡಿ ಮಾಡಿದರು. ಅದೇ ಟ್ವೀಟ್
ಸಂದೇಶದಲ್ಲಿ ವಿಶೇಷ ಸೂಚನೆ (ಪಿಎಸ್) ಎಂಬುದಾಗಿ ನಮೂದಿಸಿರುವ ರಾಹುಲ್ ಗಾಂಧಿ ಅವರು ’ಮುಖ್ಯ ಮಾಧ್ಯಮಗಳೇ,
ನಿಮಗೆ ಧನ್ಯವಾದಗಳು, ನೀವು ಎಂದಿನಂತೆ, ಈ ನಿರ್ಣಾಯಕ ಕಥೆಯನ್ನು ಸಮಾಧಿ ಮಾಡುತ್ತಿದ್ದೀರಿ’ ಎಂದೂ ಬರೆದರು. ಟ್ವೀಟ್ ಸಂದೇಶಕ್ಕೆ ಅವರು
’ಡಾಟಾ ಥೆಫ್ಟ್ ಅಲೆಗೇಷನ್ಸ್ ರೀಚಸ್ ಪಿಎಂ ಮೋದೀ’ಸ್ ಡೋರ್ ಸ್ಟೆಪ್, ಫ್ರೆಂಚ್
ವಿಜಿಲೆಂಟ್ ಹ್ಯಾಕರ್‍ಸ್ ಸ್ಟನ್ನಿಂಗ್ ರೆವೆಲೇಷನ್’ ಶೀರ್ಷಿಕೆಯ ವರದಿಯನ್ನೂ
ಜೋಡಿಸಿದರು. ಇದಕ್ಕಿಂತ ಒಳ್ಳೆಯದನ್ನು ನಿರೀಕ್ಷಿಸಲಾಗದು-
ಬಿಜೆಪಿ: ರಾಹುಲ್ ಟ್ವೀಟಿಗೆ ಟ್ವಿಟ್ಟರಿನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿಯು ’ಕಾಂಗ್ರೆಸ್ ಮುಖ್ಯಸ್ಥರಿಂದ
ಇದಕ್ಕಿಂತ ಉತ್ತಮವಾದುದನ್ನು ನಿರೀಕ್ಷಿಸಲಾಗದು ಎಂದು ಹೇಳಿತು. ಮಾಹಿತಿಯನ್ನು ಮೂರನೇ ವ್ಯಕ್ತಿಯ ಸೇವೆ ಬಳಸಿ ಗೂಗಲ್ ವಿಶ್ಲೇಷಣೆಯಂತೆ
(ಗೂಗಲ್ ಅನಾಲಿಟಿಕ್ಸ್) ಕೇವಲ ವಿಶ್ಲೇಷಣೆಗಾಗಿ ಬಳಸಲಾಗಿದೆ’ ಎಂದೂ ಟ್ವೀಟ್ ಹೇಳಿತು.
ಭಾರತದಲ್ಲಿ ನಡೆಯುತ್ತಿರುವ ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಲು ನಮೋ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ
ರಾಹುಲ್ ಗಾಂಧಿ ಅವರಿಗೆ ಪ್ರೋತ್ಸಾಹ ನೀಡಲೂ ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ’ ಎಂದೂ ಬಿಜೆಪಿ೪ಇಂಡಿಯಾ ಟ್ವೀಟ್ ತಿಳಿಸಿತು. ರಾಹುಲ್ ಗಾಂಧಿ ಅವರ ಸುಳ್ಳುಗಳಿಗೆ ವ್ಯತಿರಿಕ್ತವಾಗಿ, ವಾಸ್ತವ
ಏನೆಂದರೆ ಮಾಹಿತಿಯನ್ನು ಗೂಗಲ್ ಅನಾಲಿಟಿಕ್ಸ್ ಮಾದರಿಯಲ್ಲಿ ಕೇವಲ ವಿಶ್ಲೇಷಣೆ ಸಲುವಾಗಿ ಬಳಸಲಾಗಿದೆ.
ಅತ್ಯಂತ ಸಾಂದರ್ಭಿಕ ವಿಷಯವನ್ನು ಬಳಕೆದಾರರಿಗೆ ನೀಡಲು ಆಹ್ವಾನಿಸುವ ಸಲುವಾಗಿ ಬಳಕೆದಾರರ ಮಾಹಿತಿಯ
ವಿಶ್ಲೇಷಣೆಯನ್ನು ಮಾಡಲಾಗುತ್ತದೆ’ ಎಂದು ಬಿಜೆಪಿ ಹೇಳಿತು. ಬಳಕೆದಾರರಿಗೆ ಆಪ್ ಯಾವುದೇ ಅನುಮತಿ ಅಥವಾ ಮಾಹಿತಿ ಇಲ್ಲದೆಯೇ
’ಗೆಸ್ಟ್ ಮೋಡ್’ಗೆ ಸಂಪರ್ಕ ಒದಗಿಸುತ್ತದೆ. ಎಲ್ಲ ಸಾಂದರ್ಭಿಕ ಮತ್ತು
ನಿರ್ದಿಷ್ಠ ಕಾರಣದ ಮಾಹಿತಿಗಳಿಗೆ ಮಾತ್ರ ಅನುಮತಿಯ ಅಗತ್ಯ ಇರುತ್ತದೆ ಎಂದೂ ಅದು ಹೇಳಿತು. ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರಿಗೆ ಸಮಾನರಲ್ಲ.
ಆದರೆ ನಮೋ ಆಪ್ ಬಗೆಗಿನ ಅವರ ಭಯ ಬಹಳ ಮೋಜಿನದಾಗಿದೆ. ’#ಡಿಲಿಟ್
ನಮೋ ಆಪ್’ ಸಂದೇಶ ನೀಡಲು ಮೊನ್ನೆ ಅವರು ಯತ್ನಿಸಿದಾಗ,
ನಮೋ ಆಪ್ ಜನಪ್ರಿಯತೆ ಮತ್ತು ಡೌನ್ ಲೋಡ್ ಗಳು ಹೆಚ್ಚಿದವು’ ಎಂದು ಅದು ತಿಳಿಸಿತು. ತಮ್ಮ ಟ್ವೀಟಿನಲ್ಲಿ ರಾಹುಲ್ ಗಾಂಧಿ ಅವರು ’ಪಿಎಸ್. ಮುಖ್ಯ
ಮಾಧ್ಯಮಗಳಿಗೆ ಧನ್ಯವಾದಗಳು, ಈ ನಿರ್ಣಾಯಕ ಕಥೆಯನ್ನು ಸಮಾಧಿಮಾಡುವ ಮೂಲಕ ನೀವು ಮಹಾನ್ ಕೆಲಸ ಮಾಡುತ್ತಿದ್ದೀರಿ’ ಎಂದು ಹೇಳುವ ಮೂಲಕ ಮಾಧ್ಯಮಗಳ ಮೇಲೂ ದಾಳಿ
ನಡೆಸಿದರು. ಫೇಸ್ ಬುಕ್ ನಿಂದ ಮಾಹಿತಿ ಕಳವು ಮಾಡಿದೆ
ಎನ್ನಲಾಗಿರುವ ಕೇಂಬ್ರಿಜ್ ಅನಾಲಿಟಿಕಾ ಸೇವೆಗಳ ಬಳಕೆ
ಮತ್ತು ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ’ಜೋಲಿ ಪಂದ್ಯ’ ನಿರತವಾಗಿವೆ.
2018: ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಒಂದು ಕಪ್ ಕಾಫಿಯ ದುಬಾರಿ
ಬೆಲೆಯ ಬಗ್ಗೆ ಮಾಜಿ ವಿತ್ತ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಮಾಡಿದ ಟ್ವೀಟ್ ಒಂದು
ಈದಿನ ಟ್ವಿಟ್ಟರಿನಲ್ಲಿ ಭಾರಿ ರಾಜಕೀಯ ಚರ್ಚೆಗೆ ಕಾರಣವಾಯಿತು.
ಆದರೆ ಕಡೆಗೂ ಅವರ ಬಗೆಗಿನ ಅನುಕಂಪದ ಟ್ವೀಟ್ ಒಂದು ಅವರಿಗೆ ವಿಮಾನ ನಿಲ್ದಾಣ ಮೂಲೆಯೊಂದರಲ್ಲಿ ನ್ಯಾಯೋಚಿತ
ದರದ ಕಾಫಿಯನ್ನು ದೊರಕಿಸಿ ಕೊಟ್ಟಿತು.
ಈದಿನ
ಬೆಳಗ್ಗೆ ಚಿದಂಬರಂ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ
ಹಲವಾರು ಮಂದಿ ಕಪ್ ಗೆ ೧೮೦ ರೂಪಾಯಿ ನೀಡಿ ಕಾಫಿ ಕೊಳ್ಳುತ್ತಿರುವುದು ತಮಗೆ ಗೊತ್ತಿಲ್ಲದ್ದಕ್ಕಾಗಿ
’ನಾನು ಹಳಬನಾಗಿದ್ದೇನೆಯೇ (ಗತಕಾಲಿಗ)?’ ಎಂದು ಅಚ್ಚರಿ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದರು. ಇನ್ನೊಂದು
ಟ್ವೀಟಿನಲ್ಲಿ ಅವರು ತಮ್ಮ ಬೆಂಬಲಿಗರಿಗೆ ೧೩೫ ರೂಪಾಯಿಗೆ ಒಂದು ಕಪ್ ಚಹಾ ತಿರಸ್ಕರಿಸಿದ್ದು ಸರಿಯಾಗಿದೆಯೇ
ಎಂದೂ ಪ್ರಶ್ನಿಸಿದ್ದರು. ಈ ಎರಡು ಟ್ವೀಟ್ ಗಳಿಗೆ
ಪ್ರತಿಕ್ರಿಯೆಗಳ ಪ್ರವಾಹವೇ ಹರಿಯಿತು. ಹಣದುಬ್ಬರದ ಬಗ್ಗೆ ಅರಿವಿಲ್ಲದ್ದಕ್ಕಾಗಿ ಹಲವರು ಅವರನ್ನು
ಟ್ರೋಲ್ ಮಾಡಿದರೆ, ಕೆಲವರು ಸಿಬಿಐ ಇತ್ತೀಚೆಗೆ ಅವರ ಪುತ್ರನನ್ನು ಬಂಧಿಸಿದ ಬಗ್ಗೆ ಪ್ರಸ್ತಾಪಿಸಿದ್ದರು.
ಈ ಎಲ್ಲ ಟೀಕೆಗಳ ಮಧ್ಯೆ ಚಿದಂಬರಂ ಅವರಿಗೆ ಅನುಕಂಪ ಭರಿತ ಟ್ವೀಟ್ ಮಾಡಿದ ಒಬ್ಬರು ನಿಲ್ದಾಣದ ಹೊರ
ಹೋಗುವ ಟರ್ಮಿನಲ್ ಮೂಲೆಯಲ್ಲಿನ ಸ್ಟಾಲ್ ಒಂದರಲ್ಲಿ ನ್ಯಾಯೋಚಿತ ದರದಲ್ಲಿ ಚಹಾ, ಕಾಫಿ ಲಭಿಸುತ್ತದೆ
ಎಂದು ಸೂಚಿಸುವ ಮೂಲಕ ನೆರವಿನ ಹಸ್ತ ನೀಡಿದರು. ನಗರದಲ್ಲಿ
ಫಿಲ್ಟರ್ ಕಾಫಿಗೆ ಖ್ಯಾತ ರೆಸ್ಟೋರೆಂಟ್‌ಗಳಾದ ಸರವಣ ಭವನ, ಸಂಗೀತಾ ಮತ್ತು ಮದ್ರಾಸ್ ಕಾಫಿ ಹೌಸ್ ಮತ್ತಿತರ
ಕಡೆಗಳಲ್ಲಿ ಕಪ್ ಗೆ ೨೦ ರೂಪಾಯಿಗಳಿಂದ ೩೦ ರೂಪಾಯಿಗಳಷ್ಟು ದರವಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ೧೮೦ ರೂಪಾಯಿಗಳಷ್ಟು ದುಬಾರಿ
ದರ ವಿಧಿಸುವುದು ಹಲವರಿಗೆ ಅಚ್ಚರಿ ಮೂಡಿಸುವುದು ಸಹಜ. ವಿಮಾನ
ನಿಲ್ದಾಣದಲ್ಲಿ ಸಂಗೀತಾ ಮತ್ತು ಮದ್ರಾಸ್ ಕಾಫಿ ಹೌಸ್ ಗಳು ಕಪ್ ಕಾಫಿಗೆ ೪೦ ಮತ್ತು ೫೦ ರೂಪಾಯಿ ವಿಧಿಸುತ್ತವೆ.
ಆದರೆ ವಿತ್ತ ಸಚಿವರು ಏರ್ ಪೋರ್ಟಿನಲ್ಲಿ ಕಾಫಿ ಚಹಾದ ಬೆಲೆ ಬಗ್ಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದು
ಟ್ವಿಟ್ಟರಿನಲ್ಲಿ ಟಾಪ್ ಟ್ರೆಂಡ್ ಆಯಿತು. ಹಲವರಿಗೆ ಚಿದಂಬರಂ ಅವರನ್ನು ಗೇಲಿ ಮಾಡಲು ಸಾಧನವೂ ಆಯಿತು.
2017: ಕೋಟಾ, ರಾಜಸ್ಥಾನ: ರದ್ದಾಗಿರುವ ರೂ.500 ಮತ್ತು ರೂ.1000 ಮುಖಬೆಲೆಯ ಹಳೆಯ ನೋಟುಗಳನ್ನು ಬದಲಿಸಲು ರಾಜಸ್ಥಾನದ ಅನಾಥ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ಮೊರೆ ಹೋದರು. ರೂ. 96,500 ಮೌಲ್ಯದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಳ್ಳಲು ದಾರಿ ಕಾಣದೆ 16 ವರ್ಷದ ಸೋದರ ಹಾಗೂ 12 ವರ್ಷದ ಸೋದರಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆದರು. ರಾಜಸ್ತಾನ ಪೊಲೀಸರು ಸರವಾಡ ಗ್ರಾಮದಲ್ಲಿನ ಬಾಗಿಲು ಮುಚ್ಚಿದ ಮನೆಗಳ ಸರ್ವೆ ನಡೆಸುತ್ತಿದ್ದ ವೇಳೆ ಈ ಅನಾಥ ಮಕ್ಕಳ ಮನೆಯಲ್ಲಿ ಒಂದು ಪೆಟ್ಟಿಗೆ ಸಿಕ್ಕಿತ್ತು. ಈ ಪೆಟ್ಟಿಗೆಯಲ್ಲಿ ರೂ. 96,500 ಮೌಲ್ಯದ ಹಳೆಯ ನೋಟುಗಳು ಪತ್ತೆಯಾಗಿದ್ದವು. ‘ಪತ್ತೆಯಾದ ಹಳೆಯ ನೋಟುಗಳು ಈ ಇಬ್ಬರು ಅನಾಥ ಮಕ್ಕಳಿಗೆ ಸೇರಿದವು. ಅವರ ತಾಯಿ ಜೀವಮಾನವಿಡೀ ದುಡಿದು ಆ ಹಣವನ್ನು ಕೂಡಿಟ್ಟದ್ದರು. ಆದರೆ, ರಿಸರ್ವ್ ಬ್ಯಾಂಕ್ ಅಷ್ಟು ಮೊತ್ತದ ಹಳೆಯ ನೋಟುಗಳನ್ನು ಬದಲಿಸಿಕೊಡಲು ನಿರಾಕರಿಸಿದೆ. ಹೀಗಾಗಿ ಮಕ್ಕಳು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ’ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹರೀಶ್ ಗುರುಬಕ್ಸಾನಿ ತಿಳಿಸಿದರು. ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿ ಆ ಹಣವನ್ನು ತಂಗಿಯ ಹೆಸರಿನಲ್ಲಿ ನಿಶ್ಚಿತ ಠೇವಣಿ (ಎಫ್ಡಿ) ಇಡಲು ಆ ಸೋದರ ಬಯಸಿದ್ದಾನೆ ಎಂದು ಹರೀಶ್ ಹೇಳಿದರು. ‘ನೋಟುಗಳನ್ನು ಬದಲಿಸುವಂತೆ ಕೋರಿ ಬರೆದಿರುವ ಈ ಮಕ್ಕಳ ಕೈಬರಹದ ಪತ್ರವನ್ನು ಪ್ರಧಾನಮಂತ್ರಿ ಕಾರ್ಯಾಯಲಕ್ಕೆ ಕಳಿಸಲಾಗಿದೆ’ ಎಂದು ಅವರು ತಿಳಿಸಿದರು. ‘ಈ ಮಕ್ಕಳ ತಾಯಿ ಪೂಜಾ ಬಂಜಾರ ಅವರು ದಿನಗೂಲಿ ನೌಕರರಾಗಿದ್ದರು. 2013ರಲ್ಲಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮಕ್ಕಳ ತಂದೆ ರಾಜು ಬಂಜಾರ ಈ ಮೊದಲೇ ಮೃತರಾಗಿದ್ದರು. ತಾಯಿಯ ಮರಣದ ನಂತರ ಈ ಮಕ್ಕಳು ಇಲ್ಲಿನ ಅನಾಥಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು. ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಸರವಾಡ ಗ್ರಾಮದ ಆರ್.ಕೆ.ಪುರಂ ಪ್ರದೇಶದಲ್ಲಿ ಅವರ ಮನೆ ಇತ್ತು ಎಂಬುದು ತಿಳಿಯಿತು’ ಎಂದು ಅವರು ಮಾಹಿತಿ ನೀಡಿದರು.
2017:
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಮಾನನಷ್ಟ
ಮೊಕದ್ದಮೆ ಸಂಬಂಧ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರೆ ಎಎಪಿ ಮುಖಂಡರ ವಿರುದ್ಧ ನೋಟಿಸ್ ಜಾರಿ ಮಾಡಿತು. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಹಗರಣದಲ್ಲಿ ಅರುಣ್ ಜೇಟ್ಲಿ ಅವರ ಪಾತ್ರವಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಕೇಜ್ರಿವಾಲ್ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಅವರ ವಿರುದ್ಧ ಜೇಟ್ಲಿ ಒಂದು ಸಿವಿಲ್ ಮತ್ತು ಒಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.
2009: ಚರ್ಮ ರಚನೆಯನ್ನು ನಿಯಂತ್ರಿಸುವ 'ವಂಶವಾಹಿ'ಯನ್ನು (ಜೀನ್) ಭಾರತೀಯ ಮೂಲದ ಅಮೆರಿಕನ್ ಸಂಶೋಧಕ ಅರುಪ್ ಕೆ. ಇಂದ್ರ ಪತ್ತೆ ಹಚ್ಚಿದರು. ಓರೆಗಾಂವ್ (ಓರೆಗಾನ್) ಸ್ಟೇಟ್ ವಿಶ್ವವಿದ್ಯಾಲಯದ (ಒಎಸ್‌ಯು) ಫಾರ್ಮೆಸಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಪ್ ಕೆ. ಇಂದ್ರ ಅವರು ಈ ವಂಶವಾಹಿಗೆ 'ಸಿಟಿಐಪಿ2' ಎಂಬುದಾಗಿ ಹೆಸರು ಇಟ್ಟರು. ಈ ಸಂಶೋಧನೆ ಬಹಳ ಮಹತ್ವದ್ದಾಗಿದ್ದು ಕಜ್ಜಿ, ಸೋರಿಯಾಸಿಸ್‌ನಂತಹ ಚರ್ಮರೋಗ ಹಾಗೂ ಚರ್ಮ ಸುಕ್ಕುಗಟ್ಟುವಿಕೆ ಮುಂತಾದ ಸಮಸ್ಯೆಗಳ ನಿವಾರಣೆಗೆ ಈ ಸಂಶೋಧನೆ ರಾಮಬಾಣವಾಗಬಲ್ಲುದು. ಚರ್ಮವು ಮಾನವ ದೇಹದ ಅತ್ಯಂತ ದೊಡ್ಡ ಅಂಗ. ಇದು ಸೋಂಕು, ಜೀವಾಣುವಿನಲ್ಲಿ ಉತ್ಪನ್ನವಾಗುವ ವಿಷ (ಟಾಕ್ಸಿನ್), ರೋಗ ತರುವ ಕ್ರಿಮಿಗಳು ಮತ್ತು ಸೌರ ವಿಕರಣದ ಸಮಸ್ಯೆಗಳಿಂದ ದೇಹವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಆದರೆ ಚರ್ಮ ಸ್ಥಾಯೀ ಅಂಗವಲ್ಲ. ಚರ್ಮದ ಕೋಶಗಳು ನಿರಂತರವಾಗಿ ಸಾಯುತ್ತಿರುತ್ತವೆ. ಹೀಗೆ ಸತ್ತೊಡನೆಯೇ ಆ ಜಾಗದಲ್ಲಿ ಚರ್ಮದ ಹೊಸ ಕೋಶಗಳು ಬೆಳೆಯುತ್ತವೆ. ಪ್ರತಿ ಮೂರರಿಂದ ನಾಲ್ಕು ವಾರಕ್ಕೆ ಒಮ್ಮೆ ಚರ್ಮವು ಈ ರೀತಿಯಾಗಿ ತನ್ನ ಮೇಲ್ಮೈಯನ್ನು ನವೀಕರಿಸುತ್ತಿರುತ್ತದೆ. ವಾಸ್ತವವಾಗಿ ಈ ರೀತಿ ಪುನರ್‌ರಚನೆಗೊಳ್ಳುವ ಪ್ರಕ್ರಿಯೆ ತಡವಾಗುವುದರ ಪರಿಣಾಮವಾಗಿ ಚರ್ಮ ಸುಕ್ಕುಗಟ್ಟುತ್ತದೆ. ವಯಸ್ಸಾಗುತ್ತಿದ್ದಂತೆಯೇ ಹೀಗಾಗುವುದು ಸಹಜ. ಸಿಟಿಐಪಿ2 ಹೆಸರಿನ ವಂಶವಾಹಿಯ ಚಟುವಟಿಕೆ ಕುಗ್ಗುವುದು ಕೆಲವೊಂದು ಚರ್ಮದ ರೋಗಗಳಿಗೆ ಮುಖ್ಯ ಕಾರಣ. ಹೀಗಾಗಿ ಈ ವಂಶವಾಹಿಯ ಚಟುವಟಿಕೆ ಕುರಿತ ಸಂಶೋಧನೆ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಚರ್ಮದ ವಿವಿಧ ಹಂತಗಳ ಅಭಿವೃದ್ಧಿಯನ್ನು ಸಿಟಿಐಪಿ2 ವಂಶವಾಹಿ ನಿಯಂತ್ರಿಸುತ್ತದೆ. ಅಂತಿಮ ಹಂತದ ರಕ್ಷಣಾತ್ಮಕ ವ್ಯೂಹ ರಚಿಸುವಲ್ಲಿಯೂ ಇದರ ಪಾತ್ರವೇ ಪ್ರಮುಖ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ ಎನ್ನುತ್ತಾರೆ ಅರುಪ್ ಇಂದ್ರ. 1992ರಲ್ಲಿ ಕಲ್ಕತ್ತ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ 2001ರಲ್ಲಿ ಜಾಧವಪುರ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿರುವ ಇಂದ್ರ ಅವರ ಸಂಶೋಧನೆಯ ವಿವರಗಳನ್ನು 'ಇನ್‌ವೆಸ್ಟಿಗೇಟಿವ್ ಡೆರ್ಮಟಾಲಜಿ' ಪತ್ರಿಕೆ ಪ್ರಕಟಿಸಿತು.
2009: ವಿಮಾನ ನಿಲ್ದಾಣ ನಿರ್ಮಾಣಕ್ಕೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿ ಕೊಳ್ಳುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಬಳ್ಳಾರಿಯ ಚಾಗನೂರು ಮತ್ತು ಸಿರಿವಾರದ ರೈತರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಈದಿನ ಬೆಂಗಳೂರಿನಲ್ಲಿ ಮನವಿಪತ್ರ ಸಲ್ಲಿಸಿದರು. ಇದೇ ತಿಂಗಳ 15ರಂದು ಬಳ್ಳಾರಿಯಿಂದ ಪಾದಯಾತ್ರೆ ಆರಂಭಿಸಿದ್ದ ಈ ರೈತರು ಹಿಂದಿನ ದಿನ ರಾತ್ರಿ ನಗರಕ್ಕೆ ಬಂದು ತಲುಪಿದ್ದರು. ಈದಿನ ಬೆಳಗ್ಗೆ ವಿವಿಧ ಸಂಘಟನೆ ಮತ್ತು ಪಕ್ಷಗಳ ಮುಖಂಡರೊಂದಿಗೆ ರಾಜಭವನದವರೆಗೆ ಮೆರವಣಿಗೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಸಿದರು.
2009: ಗದಗದಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರ ಅಧ್ಯಕ್ಷತೆಯ ಸ್ಥಳ ಪರಿಶೀಲನಾ ಸಮಿತಿಯು ಗದಗ ನಗರದ ಹೆಸರನ್ನು ಶಿಫಾರಸು ಮಾಡಿತ್ತು. ಈ ವಿಷಯವನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿತು.
2009: ಅಮೆರಿಕ ಸೇನಾಪಡೆಯ 'ಡ್ರೋನ್' ವಿಮಾನಗಳು 24 ಗಂಟೆಯೊಳಗೆ ವಜೀರಿಸ್ಥಾನದ ಶಂಕಿತ ಉಗ್ರರ ಅಡಗುದಾಣಗಳ ಮೇಲೆ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 12 ಮಂದಿ ಹತರಾದರು. ಉತ್ತರ ವಜೀರಿಸ್ಥಾನದ ಗ್ರಾಮವೊಂದರ ಬುಡಕಟ್ಟು ವ್ಯಕ್ತಿಯೊಬ್ಬನ ಮನೆಯಲ್ಲಿ ತಾಲಿಬಾನ್ ಉಗ್ರರು ಅಡಗಿದ್ದಾರೆಂಬ ಶಂಕೆ ಮೇಲೆ ಹಿಂದಿನ ದಿನ ಮಧ್ಯ ರಾತ್ರಿ ಕಳೆದ ಸ್ವಲ್ಪ ಹೊತ್ತಿಗೆ 'ಡ್ರೋನ್'ನಿಂದ (ದೂರ ನಿಯಂತ್ರಕ ಚಾಲಕ ರಹಿತ್ ವಿಮಾನ) ಎರಡು ಕ್ಷಿಪಣಿಗಳನ್ನು ಉಡಾಯಿಸಿದಾಗ ಐವರು ಹತರಾದರು. ತತ್ ಕ್ಷಣವೇ ತಾಲಿ ಬಾನ್ ಉಗ್ರರು ಮನೆಯನ್ನು ಸುತ್ತುವರಿದು ಯಾರೂ ಅಲ್ಲಿಗೆ ಪ್ರವೇಶಿಸದಂತೆ ನೋಡಿಕೊಂಡರು.
2009: ಸುಲಭ್ ಆರೋಗ್ಯ ಸಮುದಾಯ ಆಂದೋಲನದ ಸ್ಥಾಪಕ ಡಾ. ಬಿಂದೇಶ್ವರ್ ಪಾಠಕ್ ಅವರು 2009 'ಸ್ಟಾಕ್ ಹೋಮ್' ವಾಟರ್ ಪ್ರಶಸ್ತಿಗೆ ಆಯ್ಕೆಯಾದರು. ಸಾರ್ವಜನಿಕ ಆರೋಗ್ಯ ಸುಧಾರಣೆ, ಸ್ವಚ್ಛತೆ ಹಾಗೂ ಮಾನವ ಹಕ್ಕುಗಳ ಸಂರಕ್ಷಣೆಯ ಕಾರ್ಯಕ್ರಮಗಳಿಗಾಗಿ ಈ ಪ್ರಶಸ್ತಿಯನ್ನು ಪಾಠಕ್ ಅವರಿಗೆ ನೀಡಲಾಯಿತು. ಒಬ್ಬ ವ್ಯಕ್ತಿಯ ಪರಿಶ್ರಮದಿಂದಾಗಿ ಲಕ್ಷಾಂತರ ಮಂದಿಯ ಅರೋಗ್ಯ ಸುಧಾರಣೆ ಸಾಧ್ಯ ಎಂಬುದಕ್ಕೆ ಡಾ.ಪಾಠಕ್ ಅವರ ಆಂದೋಲನ ಉದಾಹರಣೆಯಾಗಿದೆ ಎಂದು ಸ್ಟಾಕ್‌ಹೋಮ್‌ನ ಪ್ರಶಸ್ತಿ ಆಯ್ಕೆ ಸಮಿತಿ ವಿಶ್ಲೇಷಿಸಿತು.
2008: ನೈಸ್ ಸಂಸ್ಥೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ಏಳು ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ರಾಜ್ಯದ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು. ಆರು ವಾರಗಳ ಒಳಗೆ ಈ ನೋಟಿಸಿಗೆ ಉತ್ತರ ನೀಡುವಂತೆ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ನ್ಯಾಯಪೀಠ ಆದೇಶಿಸಿತು. ಬಿಎಂಐಸಿ ಕುರಿತಂತೆ 2006ರ ಏಪ್ರಿಲ್ 20ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಈ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು `ನೈಸ್' ಸಂಸ್ಥೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿತ್ತು. ಈ ಎಲ್ಲ ಅಧಿಕಾರಿಗಳು ವೈಯಕ್ತಿಕವಾಗಿ ಹಾಗೂ ಒಟ್ಟಾಗಿ, ಉದ್ದೇಶ ಪೂರ್ವಕವಾಗಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ನೈಸ್ ಆರೋಪಿಸಿತ್ತು. ಯೋಜನೆ ಶೀಘ್ರ ಪೂರ್ಣಗೊಳಿಸಲು ನೆರವಾಗುವಂತೆ ಈ ಅಧಿಕಾರಿಗಳಿಗೆ (ಪ್ರತಿವಾದಿಗಳು) ಆದೇಶಿಸುವಂತೆ ಅದು ಮನವಿ ಮಾಡಿಕೊಂಡಿತ್ತು. 2240 ಕೋಟಿ ರೂ. ವೆಚ್ಚದ ಬಿಎಂಐಸಿ ಯೋಜನೆಯಲ್ಲಿ ನೈಸ್ ಈಗಾಗಲೇ 900 ಕೋಟಿ ರೂ. ವ್ಯಯಿಸಿದೆ. 2006ರ ಏಪ್ರಿಲ್ 20ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂಕೋರ್ಟ್, ಬಿಎಂಐಸಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಯೋಜನೆಗೆ ಅನಗತ್ಯ ಅಡೆತಡೆ ಉಂಟು ಮಾಡಿದ್ದಕ್ಕಾಗಿ ಧರ್ಮಸಿಂಗ್ ನೇತೃತ್ವದ ಸರ್ಕಾರಕ್ಕೆ ರೂ. 5 ಲಕ್ಷ ದಂಡವನ್ನೂ ವಿಧಿಸಿತ್ತು. ಯೋಜನೆ ನೆಪದಲ್ಲಿ `ನೈಸ್' ಸಂಸ್ಥೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ. ನೈಸ್ ನೊಂದಿಗೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರದ್ದುಗೊಳಿಸಬೇಕು ಎಂದು ಅಂದು ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿ (ಜೆಡಿಯು) ಹಾಗೂ ಜಿ.ವಿ. ಶ್ರೀರಾಮರೆಡ್ಡಿ (ಸಿಪಿಎಂ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
2008: ಬಾಹ್ಯಾಕಾಶದಲ್ಲಿ ಉಳಿದ ಇಬ್ಬರು ಸಿಬ್ಬಂದಿಗೆ ಹೃದಯಸ್ಪರ್ಶಿ ವಿದಾಯ ಹೇಳಿದ ಬಳಿಕ ಹಿಂದಿನ ರಾತ್ರಿ ಎಂಡೆವರ್ ಷಟಲ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟು ಭೂಮಿಯತ್ತ ಮರುಪಯಣ ಹೊರಟಿತು. 10 ಮಂದಿ ಬಾಹ್ಯಾಕಾಶ ಯಾನಿಗಳು ದಾಖಲೆಯ ಐದು ಬಾಹ್ಯಾಕಾಶ ನಡಿಗೆ ನಡೆಸಿ ಬಾಹ್ಯಾಕಾಶ ನಿಲ್ದಾಣ ರೊಬೋಟನ್ನು ಮತ್ತು ನೂತನ ಜಪಾನೀ ಕಂಪಾರ್ಟ್ ಮೆಂಟ್ ಒಂದನ್ನೂ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಿದರು. `ನನ್ನ ದೃಷ್ಟಿಯಲ್ಲಿ ಇದೊಂದು ಅಭೂತಪೂರ್ವ ಕಾರ್ಯವಾಗಿತ್ತು' ಎಂದು ಯೋಜನಾ ನಿರ್ವಹಣಾ ತಂಡದ ಅಧ್ಯಕ್ಷ ಲೆರೋಯ್ ಕಾಯಿನ್ ಹೇಳಿದರು.
2008: ಕೀರ್ತಿ ಮತ್ತು ವಿವಾದಗಳ ಉತ್ತುಂಗಕ್ಕೆ ಏರಿದ್ದ ದೆಹಲಿಯ `ಪೊಲೀಸ್ ಎನ್ ಕೌಂಟರ್ ತಜ್ಞ' ರಾಜ್ ಬೀರ್ ಸಿಂಗ್ ಅವರನ್ನು ರಾಷ್ಟ್ರದ ರಾಜಧಾನಿಯ ಹೊರವಲಯದಲ್ಲಿ ಗುಡಗಾಂವ್ನ ಆಸ್ತಿಪಾಸ್ತಿ ಉದ್ಯಮಿಯೊಬ್ಬರು ಗುಂಡಿಟ್ಟು ಕೊಲೆಗೈದರು. `ಝೆಡ್' ದರ್ಜೆಯ ಭದ್ರತೆ ಒದಗಿಸಲಾಗಿದ್ದ ದೆಹಲಿ ಪೊಲೀಸ್ ವಿಶೇಷ ಕಾರ್ಯಾಚರಣಾ ದಳದ ಎಸಿಪಿ, 48 ವರ್ಷದ ಸಿಂಗ್ ಅವರ ತಲೆಗೆ, ಆಸ್ತಿಪಾಸ್ತಿ ಉದ್ಯಮಿ ವಿಜಯ ಭಾರಧ್ವಾಜ್ ಹಿಂದಿನ ದಿನ ರಾತ್ರಿ ಅತ್ಯಂತ ಸನಿಹದಿಂದ ಎರಡು ಬಾರಿ ಗುಂಡು ಹೊಡೆದರು ಎಂದು ಆಪಾದಿಸಲಾಯಿತು.
2008: ಶಂಕಿತ ದಿಮಾ ಹಾಲಂ ದೇವಗಾಹ್ (ಜ್ಯುವೆಲ್) ಉಗ್ರಗಾಮಿಗಳು ದಕ್ಷಿಣ ಅಸ್ಸಾಮಿನ ಉತ್ತರ ಕಾಚಾರ್ ಗುಡ್ಡಗಾಡು ಜಿಲ್ಲೆಯ ರೈಲು ನಿಲ್ದಾಣದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ರೈಲು ಸಿಬ್ಬಂದಿ ಸೇರಿ ನಾಲ್ಕು ಮಂದಿ ಗಾಯಗೊಂಡರು. `ಬ್ಲ್ಯಾಕ್ ವಿಡೋ' ಎಂಬುದಾಗಿಯೂ ಕುಖ್ಯಾತಿ ಪಡೆದಿರುವ ಡಿ ಎಚ್ ಡಿ(ಜೆ) ಉಗ್ರಗಾಮಿಗಳು ಹಿಂದಿನ ದಿನ ರಾತ್ರಿ ಹರಂಗಜಾವೊ ರೈಲು ನಿಲ್ದಾಣಕ್ಕೆ ನುಗ್ಗಿ ಏಕಕಾಲಕ್ಕೆ ಗುಂಡಿನ ಮಳೆಗರೆಯುವುದರೊಂದಿಗೆ ಕಚ್ಛಾ ಬಾಂಬನ್ನೂ ಸಿಡಿಸಿದರು. ಪರಿಣಾಮವಾಗಿ ಇಬ್ಬರು ನಾಗರಿಕರು ಮತ್ತು ಇಬ್ಬರು ರೈಲ್ವೆ ನೌಕರರು ಮೃತರಾದರು ಎಂದು ರೈಲ್ವೇ ಮೂಲಗಳು ತಿಳಿಸಿದವು.
2008: ಗೋಧ್ರಾ ನಂತರದ ಕೋಮು ಗಲಭೆಗಳ ಮರುತನಿಖೆಗಾಗಿ ಪಂಚಸದಸ್ಯ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚನೆಗೆ ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್ ಈ ತಂಡವು ಮೂರು ತಿಂಗಳಲ್ಲಿ ತನ್ನ ವರದಿ ಸಲ್ಲಿಸಬೇಕು ಎಂದು ಸೂಚಿಸಿತು. ಗುಜರಾತಿನ ಹಿರಿಯ ಐಪಿಎಸ್ ಅಧಿಕಾರಿಗಳಾದ ಗೀತಾ ಜೋಹ್ರಿ, ಶಿವಾನಂದ ಝಾ ಮತ್ತು ಆಶಿಶ್ ಭಾಟಿಯಾ ಹಾಗೂ ಸಿಬಿಐ ನಿವೃತ್ತ ನಿರ್ದೇಶಕ ಆರ್. ಕೆ. ರಾಘವನ್ ಮತ್ತು ಮಾಜಿ ಡಿಜಿಪಿ ಸಿ.ಬಿ. ಸತ್ಪಥಿ ಈ ತಂಡದ ಸದಸ್ಯರು.
2008: ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದಲ್ಲಿ ನ್ಯಾಯ ಮಂಡಳಿಯ ಆದೇಶವನ್ನು ಉಲ್ಲಂಘಿಸಿ `ಚೆಕ್ ಡ್ಯಾಮ್' ನಿರ್ಮಿಸುವುದನ್ನು ಮತ್ತು ಹೆಚ್ಚಿನ ನೀರು ಬಳಸುವುದನ್ನು ತಡೆಯಬೇಕೆಂದು ಕೋರಿ ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು. ಕರ್ನಾಟಕ ಏತ ನೀರಾವರಿ ಮತ್ತಿತರ ಯೋಜನೆಗಳನ್ನು ಮುಂದುವರೆಸದಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಈ ಅರ್ಜಿಯಲ್ಲಿ ಮನವಿ ಮಾಡಿತು. `ತನ್ನ ರಾಜ್ಯದ ನೀರಾವರಿಯ ಮೇಲೆ ಪರಿಣಾಮ ಬೀರುವ ಯಾವುದೇ ನೀರಿನ ಸಂಗ್ರಹಕ್ಕೂ ನ್ಯಾಯ ಮಂಡಳಿಯ ಅಂತಿಮ ವರದಿಯಲ್ಲಿ ಅನುಮತಿ ನೀಡಿಲ್ಲ. ಹೀಗಾಗಿ ಕರ್ನಾಟಕ ಯಾವುದೇ ನೀರಾವರಿ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ತಮಿಳುನಾಡು ವಕೀಲರಾದ ಕೆ. ಪರಾಶರನ್ ಮತ್ತು ಆರ್. ಎನ್. ಎಡುಮಾರನ್ ಅರ್ಜಿಯಲ್ಲಿ ತಿಳಿಸಿದರು.
2008: ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶರದ್ ಪವಾರ್ ಅವರು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಭಾರತದ 'ಕ್ರಿಕೆಟ್ ರತ್ನ' ಅನಿಲ್ ಕುಂಬ್ಳೆ ಅವರನ್ನು 37 ಕ್ಯಾರೆಟ್ಟಿನ 1500 ಬೆಲ್ಜಿಯಮ್ ವಜ್ರಗಳು ಹಾಗೂ 239 ಕ್ಯಾರೆಟ್ಟಿನ 640 ರೂಬೀಸ್ ಹರಳುಗಳಿಂದ ಅಲಂಕೃತವಾದ ವಜ್ರ ಲೇಪಿತ ಚಿನ್ನದ ಚೆಂಡನ್ನು ನೀಡಿ ಗೌರವಿಸಿದರು.
2008: ಪಾಕಿಸ್ಥಾನದ 25ನೇ ಪ್ರಧಾನಿಯಾಗಿ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಯೂಸಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು. ಆಡಳಿತಾರೂಢ ಪಕ್ಷಗಳ ಪ್ರಮುಖ ನಾಯಕರಾದ ಅಸೀಫ್ ಆಲಿ ಜರ್ದಾರಿ, ನವಾಜ್ ಷರೀಫ್, ಬಿಲ್ವಾಲ್ ಮೊದಲಾದವರ ಬಹಿಷ್ಕಾರ ಮತ್ತು ಅನುಪಸ್ಥಿತಿಯ ನಡುವೆಯೇ ಅಧ್ಯಕ್ಷೀಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಜಿಲಾನಿ (55) ಅವರಿಗೆ ಪ್ರಮಾಣವಚನ ಬೋಧಿಸಿದರು.
2008: ಭೂತಾನಿನಲ್ಲಿ ನಡೆದ ಮೊತ್ತಮೊದಲ ಸಂಸದೀಯ ಚುನಾವಣೆಯಲ್ಲಿ ಭೂತಾನ್ ಪೀಸ್ ಅಂಡ್ ಪ್ರಾಸ್ಪರಿಟಿ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿತು. ಒಟ್ಟು 47 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಪಡೆಯಿತು. ಚುನಾವಣೆಯಲ್ಲಿ ಮತದಾರರು ದೊರೆಯ ಸಂಬಂಧಿಗಳನ್ನು ತಿರಸ್ಕರಿಸಿದರು. ಉಳಿದ ಮೂರು ಸ್ಥಾನಗಳಲ್ಲಿ ಮಾತ್ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಗೆದ್ದಿತು.
2007: ಇಂದೋರಿನ ಡಾ. ಜೈನ್ಸ್ ಗೋಮೂತ್ರ ಥೆರೆಪಿ ಆಸ್ಪತ್ರೆಯ ಏಳನೇ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ, ಚಿತ್ರನಟ ಶ್ರೀನಾಥ್ ಅವರು ಬೆಂಗಳೂರಿನ ವಿ.ವಿ.ಪುರಂನಲ್ಲಿ ಉದ್ಘಾಟಿಸಿದರು. ಇದರೊಂದಿಗೆ ಈವರೆಗೆ ಉತ್ತರಭಾರತದಲ್ಲಿ ಮಾತ್ರ ಇದ್ದ ಡಾ. ಜೈನ್ಸ್ ಅವರ ಗೋಮೂತ್ರ ಥೆರೆಪಿ ಆಸ್ಪತ್ರೆಯ ಶಾಖೆಗಳು ದಕ್ಷಿಣ ಭಾರತಕ್ಕೂ ಕಾಲಿರಿಸಿದವು. ಆರ್ಯವೈಶ್ಯ ಮಹಾಸಭಾ ಬೆಂಗಳೂರಿನ ಈ ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳುವುದು. ದೇಶಾದ್ಯಂತ 50 ಗೋಮೂತ್ರ ಥೆರೆಪಿ ಆಸ್ಪತ್ರೆಗಳ ಶಾಖೆ ತೆರೆಯುವ ಯೋಜನೆ ಜೈನ್ಸ್ ಸಂಸ್ಥೆಯದು.
2007: ಆಕಾಶದಿಂದ ಆಕಾಶಕ್ಕೆ ಗುರಿ ಇಡುವ ಭಾರತದ ಸ್ವದೇಶೀ ನಿರ್ಮಿತ `ಅಸ್ತ್ರ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರ ಪರೀಕ್ಷಾ ವಲಯದಲ್ಲಿ ನೆರವೇರಿತು.
2007: ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಮಾರ್ಗದರ್ಶಕರಾಗಿದ್ದ ಮಾವೋ ನಕ್ಸಲವಾದಿ ರಾಮಯ್ಯ ಯಾನೆ ದಿಲೀಪ್ ಯಾನೆ ಮಾಸ ಯಾನೆ ರವಿ ಆಂಧ್ರಪ್ರದೇಶದ ವಾರಂಗಲ್ಲಿನಲ್ಲಿ ಪೊಲೀಸರಿಗೆ ಶರಣಾಗತನಾದ. 2004ರಲ್ಲಿ ಒರಿಸ್ಸಾದ ಕೊರಾಪಟ್ ಸೆರೆಮನೆಯ ಗೋಡೆಗಳನ್ನು ಒಡೆದು ಐದು ಶಸ್ತ್ರಾಸ್ತ್ರಗಳೊಂದಿಗೆ ಆತ ಪರಾರಿಯಾಗಿದ್ದ.
2007: ದುಬೈ ಮತ್ತು ಭಾರತದ ನಡುವೆ ಏರ್ ಇಂಡಿಯಾ ಎಕ್ಸ್ ಪ್ರೆಸ್ಸಿನ ಹೊಸ ವಿಮಾನ ತನ್ನ ಮೊದಲ ಹಾರಾಟವನ್ನು ಕತಾರ್ನ ದೋಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭಿಸಿತು.
2007: ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬೆಂಗಳೂರಿನ ಡಾ. ಶ್ರೀಕಾಂತ ಕೆ. ಮೂರ್ತಿ ಅವರಿಗೆ ವಾಷಿಂಗ್ಟನ್ನಿನ `ಸಂಗೀತಪ್ರಿಯ ಡಾಟ್ ಆರ್ಗ್ ಸಂಸ್ಥೆಯು `ರಸಿಕಪ್ರಿಯ' ಪ್ರಶಸ್ತಿ ನೀಡಿ ಗೌರವಿಸಿತು.
2007: ಕ್ರೆಡಿಟ್ ಕಾರ್ಡ್ ಒಂದರ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರದ ಬಳಕೆಯನ್ನು ವಿರೋಧಿಸಿ ಡರ್ಬಾನಿನ ಫೋನಿಕ್ಸ್ ಸೆಟ್ಲ್ ಮೆಂಟ್ ಟ್ರಸ್ಟ್, ದಕ್ಷಿಣ ಆಫ್ರಿಕಾ ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದವು.
2006: ಬಿಜೆಪಿ ಕರ್ನಾಟಕ ಘಟಕದ ನೂತನ ಅಧ್ಯಕ್ಷರಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ. ಸದಾನಂದ ಗೌಡ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.
2006: ಲಾಭದ ಹುದ್ದೆ ವಿವಾದದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. `ಲಾಭದ ಹುದ್ದೆ'ಗೆ ಸಮರ್ಪಕ ವ್ಯಾಖ್ಯಾನ ನೀಡಲು ಸಮಗ್ರ ಮಸೂದೆ ತರಬೇಕು ಎಂಬ ಕೂಗು ವ್ಯಾಪಕಗೊಂಡಿತು. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಜೊತೆ ಕೇಂದ್ರ ಸರ್ಕಾರ ಸಮಾಲೋಚನೆ ಆರಂಭಿಸಿತು.
2006: ಕೃಷ್ಣಾ ನದಿ ನೀರು ನ್ಯಾಯಮಂಡಳಿ ಮುಂದೆ ರಾಜ್ಯದ ಪರ ವಾದ ಮಂಡಿಸಲು ಹಿರಿಯ ವಕೀಲ ಎಫ್. ಎಸ್. ನಾರಿಮನ್ ಅವರನ್ನು ಮುಂದುವರೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕದ ಅಡ್ವೋಕೇಟ್ ಜನರಲ್ ಆರ್.ಎನ್. ನರಸಿಂಹಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
1975: ಸೌದಿ ಅರೇಬಿಯಾದ ದೊರೆ ಫೈಸಲ್ ಅವರನ್ನು ರಿಯಾದಿನ ಅರಮನೆಯಲ್ಲಿ ರಾಜಕುಮಾರ ಮುಸೀದ್ ಗುಂಡಿಟ್ಟು ಕೊಂದ. ಮಾನಸಿಕ ರೋಗಿಯಾಗಿದ್ದ ಈತನನ್ನು ಜೂನ್ ತಿಂಗಳಲ್ಲಿ ಮರಣದಂಡನೆಗೆ ಗುರಿ ಪಡಿಸಲಾಯಿತು.
1971: ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ಮುಕ್ತಿ ವಾಹಿನಿಯ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ನೂರಾರು ಯುವಕರು ಅಸು ನೀಗಿದರು. ಈ ಆಕ್ರಮಣ ಟಿಕ್ಕಾಖಾನ್ ಗೆ `ಬಾಂಗ್ಲಾದೇಶದ ಕಟುಕ' ಎಂಬ ಕುಖ್ಯಾತಿಯನ್ನು ತಂದುಕೊಟ್ಟಿತು.
1957: ಆರು ಐರೋಪ್ಯ ರಾಷ್ಟ್ರಗಳು ರೋಮ್ ಒಪ್ಪಂದಕ್ಕೆ ಸಹಿ ಹಾಕಿ ಐರೋಪ್ಯ ಸಮುದಾಯ (ಯುರೋಪಿಯನ್ ಕಮ್ಯೂನಿಟಿ) ಸ್ಥಾಪಿಸಿಕೊಂಡವು. ಫ್ರಾನ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್, ಪಶ್ಚಿಮ ಜರ್ಮನಿ, ಇಟೆಲಿ ಮತ್ತು ನೆದರ್ ಲ್ಯಾಂಡ್ಸ್ ಇವೇ ಈ ಆರು ರಾಷ್ಟ್ರಗಳು.
1914: ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕನ್ ಕೃಷಿ ವಿಜ್ಞಾನಿ ನಾರ್ಮನ್ ಅರ್ನೆಸ್ಟ್ ಬೊರ್ಲಾಗ್ ಜನ್ಮದಿನ. ಈ ವಿಜ್ಞಾನಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಡೆದ `ಹಸಿರು ಕ್ರಾಂತಿ'ಗೆ ತಳಪಾಯ ಹಾಕಿದವರು.
No comments:
Post a Comment