ನಾನು ಮೆಚ್ಚಿದ ವಾಟ್ಸಪ್

Saturday, March 28, 2020

ಇಂದಿನ ಇತಿಹಾಸ History Today ಮಾರ್ಚ್ 28

2020: ನವದೆಹಲಿ: ಕೊರೋನಾವೈರಸ್ ಹರಡದಂತೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ ಬಳಿಕ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಸಿಕ್ಕಿಹಾಕಿಕೊಂಡಿರುವ ಸಹಸ್ರಾರು ಮಂದಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದಲ್ಲಿ ಅವರವರ ಸ್ಥಳಗಳಿಗೆ ತೆರಳಲು ಉತ್ತರ ಪ್ರದೇಶ ಸರ್ಕಾರ ವ್ಯವಸ್ಥೆ ಮಾಡಿದ್ದು, ಭಾರೀ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ದೆಹಲಿ ತ್ಯಜಿಸುತ್ತಿದ್ದಾರೆ ಎಂದು ವರದಿಗಳು 2020 ಮಾರ್ಚ್ 28ರ ಶನಿವಾರ ತಿಳಿಸಿದವು.. ದೆಹಲಿ-ಉತ್ತರಪ್ರದೇಶ ಗಡಿಯ ಮೂಲಕ 2020 ಮಾರ್ಚ್ 28ರ ಶನಿವಾರ ಬೆಳಗ್ಗೆಯಿಂದ ನೂರಾರು ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ  ತೆರಳಿದರು. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (ಯುಪಿಎಸ್ಆರ್ ಟಿಸಿ) ಅವರನ್ನು ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರದ ವಿವಿಧ ಪ್ರದೇಶಗಳಿಂದ ತಮ್ಮ ಸ್ಥಳಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಿತುಮನೆಗೆ ಹಿಂತಿರುಗಲು ಬಯಸುವ ಜನರ ವಿಪರೀತ ದಟಣೆಯ ಪರಿಣಾಮವಾಗಿ ಬಸ್ಸು ಟರ್ಮಿನಲ್ಗಳಲ್ಲಿ ಸಾಮಾಜಿಕ ಅಂತರ ಮೂಲೆಪಾಲಾಗುವಂತೆ ಮಾಡಿತು. ಭಾರೀ ಸಂಖ್ಯೆಯಲ್ಲಿ ಜನರು ಬಸ್ಸುಗಳನ್ನು ಏರುತ್ತಿದ್ದಂತೆಯೇ ಸ್ಥಳೀಯ ಆಡಳಿತವು ಶನಿವಾರ ಜನಸಂದಣಿಯು ಬಸ್ಸುಗಳನ್ನು ತುಂಬುತ್ತಿದ್ದಂತೆ, ಆಡಳಿತವು ಶನಿವಾರ ಐಎಸ್ಬಿಟಿ ಕೌಶಂಬಿಯಲ್ಲಿ ಪ್ರಯಾಣಿಕರ ಥರ್ಮಲ್ ತಪಾಸಣೆ (ಥರ್ಮಲ್ ಸ್ಕ್ರೀನಿಂಗ್) ಆರಂಭಿಸಿತು. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಾರ್ಚ್ ೨೭ರ ಶುಕ್ರವಾರ ಮಧ್ಯರಾತ್ತಿಯವರೆಗೆ ಸುಮಾರು ೮೭ ಬಸ್ಸುಗಳನ್ನು ಓಡಿಸುವ ಮೂಲಕ ವಲಸೆ ಕಾರ್ಮಿಕರಿಗೆ ತಮ್ಮ ಗಮ್ಯಸ್ಥಾನ ಸೇರಿಕೊಳ್ಳಲು ನೆರವಾಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. "ಶನಿವಾರ ಬೆಳಿಗ್ಗೆ ೧೧.೩೦ ರವರೆಗೆ ನಾವು ಸುಮಾರು ೭೯ ಬಸ್ಸುಗಳನ್ನು ಲಕ್ನೋ, ಎಟಾವಾ, ಬರೇಲಿ, ಎಟಾಹ್, ಅಲಿಗಢ, ಮತ್ತು ಗೋರಖ್ಪುರದಂತಹ ವಿವಿಧ ಸ್ಥಳಗಳಿಗೆ ಕಳುಹಿಸಿದ್ದೇವೆ. ಸಿಕ್ಕಿಬಿದ್ದ ಎಲ್ಲ ಕಾರ್ಮಿಕರನ್ನು ಅವರ ಸ್ಥಳಗಳಿಗೆ ಕಳುಹಿಸುವವರೆಗೆ ನಾವು ಬಸ್ಸುಗಳನ್ನು ಕಳುಹಿಸುವುದನ್ನು ಮುಂದುವರಿಸುತ್ತೇವೆ. ನಾವು ಈಗ ಐಎಸ್ಬಿಟಿ ಕೌಶಂಬಿಯಿಂದ ಬಸ್ಗಳನ್ನು ಪುನಾರಂಭಿಸಿದ್ದೇವೆ. ಅಲ್ಲಿಂದ ಎಲ್ಲಾ ಬಸ್ಗಳನ್ನು ಕಳುಹಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ .ಕೆ.ಸಿಂಗ್ ಹೇಳಿದರು. "ನಾವು ಲಾಲ್ ಕುವಾನ್ನಿಂದ ೯೬ ಬಸ್ಸುಗಳನ್ನು ಶುಕ್ರವಾರ ರಾತ್ರಿಯವರೆಗೆ ಕಳುಹಿಸಿದ್ದೇವೆ ಮತ್ತು ಇತರ ಡಿಪೋಗಳಿಂದ ಹೆಚ್ಚಿನ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ನಾವು ಶುಕ್ರವಾರ ೨೦೦ ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದೆವು. ಆದರೆ ಜನರು ತಾವಿರುವ ಸ್ಥಳಗಳಲ್ಲೇ ಇರಬೇಕು ಎಂಬುದಾಗಿ ಸರ್ಕಾರ ಹೊರಡಿಸಿರುವ ಆದೇಶದ ಕಾರಣ ಪೊಲೀಸರು ಕೆಲವು ಬಸ್ಗಳನ್ನು ತಡೆದು ನಿಲ್ಲಿಸಿದ್ದರು. ಆದರೆ ಶುಕ್ರವಾರ ತಡರಾತ್ರಿ ನಾವು ವಿವಿಧ ಸ್ಥಳಗಳಿಗೆ ಬಸ್ಸುಗಳನ್ನು ಕಳುಹಿಸಲು ಆದೇಶಗಳನ್ನು ಪಡೆದಿದ್ದೇವೆ ಎಂದು ಸಿಂಗ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್    ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾ ಸೋಂಕಿನ ವಿರುದ್ಧ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಣೆಯಾದ ನಾಲ್ಕನೇ ದಿನವಾದ ಶನಿವಾರ ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ಸೋಂಕು ತಗುಲಿದ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 28ರ ಶನಿವಾರ ತುರ್ತು ಪರಿಹಾರ ನಿಧಿ ರಚನೆಯನ್ನು ಘೋಷಿಸಿದರುತುರ್ತು ಸ್ಥಿತಿಯಲ್ಲಿ ನೆರವಿಗಾಗಿ ರಚಿಸಲಾಗಿರುವ ಪರಿಹಾರ ನಿಧಿಗೆ ಜನರು ಕೂಡಾ ಕಾಣಿಕೆ ಸಲ್ಲಿಸಿ ಕೊರೋನಾವೈರಸ್ ವಿರುದ್ಧ ಸರ್ಕಾರ ನಡೆಸುತ್ತಿರುವ ಸಮರದಲ್ಲಿ ಸಹಭಾಗಿಗಳಾಗಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದರು. ಪ್ರಧಾನ ಮಂತ್ರಿಯವರ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ನೆರವು ಪರಿಹಾರ ನಿಧಿಯು ಸ್ವಸ್ಥ ಭಾರತ ನಿರ್ಮಾಣದಲ್ಲಿ ಸುದೀರ್ಗ ಮಾರ್ಗದಲ್ಲಿ ಕ್ರಮಿಸಲಿದೆ. ಎಲ್ಲ ರಂಗಗಳ ಜನರೂ ಕೋವಿಡ್-೧೯ರ ವಿರುದ್ಧದ ಭಾರತದ ಸಮರಕ್ಕಾಗಿ ದೇಣಿಗೆ ನೀಡುವ ತಮ್ಮ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಜನರ ಸ್ಫೂರ್ತಿಗೆ ಗೌರವ ನೀಡಿ ನಿಧಿಯನ್ನು ರಚಿಸಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟಿನಲ್ಲಿ ತಿಳಿಸಿದರು. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ  ೧೯೦ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಸೋಂಕಿತ ಪ್ರಕರಣಗಳ ಸಂಖ್ಯೆ ೯೧೮ಕ್ಕೆ ಏರಿತು. ಕೇರಳ ಮತ್ತು ತೆಲಂಗಾಣದಲ್ಲಿ ಮೊತ್ತ ಮೊದಲ ಸಾವುಗಳು ಸಂಭವಿಸಿದ್ದು, ದೇಶದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ೨೦ಕ್ಕೆ ತಲುಪಿತು. ಇದೇ ವೇಳೆಗೆ ವಿಶ್ವಾದ್ಯಂತ ಹೊಸದಾಗಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ,೦೦,೦೦೦ವನ್ನು ಮೀರಿವೆ ಎಂದು ಅಧಿಕೃತವಾಗಿ ಶನಿವಾರ ಪ್ರಕಟಿಸಲಾಯಿತು. ಯುರೋಪ್ ಖಂಡವೊಂದರಲ್ಲೇ  20,000 ಮಂದಿ ಅಸು ನೀಗಿದ್ದು, 48 ಗಂಟೆಗಳಲ್ಲಿ 1 ಲಕ್ಷ ಹೊಸ ಪ್ರಕರಣಗಳು ವರದಿಯಾದವು.  ಈವರೆಗೆ 1,30,000 ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದು ವರದಿಗಳು ಹೇಳಿದವು.  (ವಿವರಗಳಿಗೆಇಲ್ಲಿ ಕ್ಲಿಕ್    ಮಾಡಿರಿ)

2020: ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಪ್ರಸರಣ ತಡೆಯಲು ಮಾರ್ಚ್ ೨೫ರಂದು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಜಾರಿಯಾದ ಬಳಿಕ ದೆಹಲಿ -ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಅತ್ಯಂತ ಅಪರೂಪವಾದ ನೀಲಾಕಾಶವು ಕಂಡು ಬರುತ್ತಿದೆ. ದಿಗ್ಬಂಧನ ಬಳಿಕ ದೆಹಲಿಯ ಪರಿಸರ ಶುಭ್ರವಾಗಿರುವುದನ್ನು 2020 ಮಾರ್ಚ್ 28ರ ಶನಿವಾರ ಅಂಕಿ ಅಂಶಗಳು ಕೂಡಾ ಸಮರ್ಥಿಸಿದವು.  ವಿಜ್ಞಾನ ಮತ್ತು ಪರಿಸರ ಕೇಂದ್ರವು (ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ -ಸಿಎಸ್) ನಡೆಸಿರುವ ಹೊಸ ವಿಶ್ಲೇಷಣೆಯು ಬೆಳಗ್ಗೆ ಮತ್ತು ಸಂಜೆ  ಉತ್ತುಂಗದಲ್ಲಿದ್ದ ಪಿಎಂ . (ಅತಿ ಸೂಕ್ಷ್ಮ ಮಾಲಿನ್ಯ ಕಣಗಳು) ಇದೀಗ ಮಕಾಡೆ ಮಲಗಿರುವುದನ್ನು ಮತ್ತು  ಮುಖ್ಯವಾಗಿ ವಾಹನಗಳು ಮತ್ತು ಕೈಗಾರಿಕೆಗಳಿಂದ ಹೊರ ಸೂಸುವ ಸಾರಜನಕದ ಡೈಆಕ್ಸೈಡ್ (ನೈಟ್ರೋಜನ್ ಡೈ ಆಕ್ಸೈಡ್- ಎನ್ಒ೨) ಸಾಂದ್ರತೆಯ ಕಡಿತವು ಇನ್ನೂ ಹೆಚ್ಚು ಸ್ಪಷ್ಟವಾಗಿ ಗೋಚರಿಸಿರುವುದನ್ನು ತೋರಿಸಿತು. ದೆಹಲಿ, ಗುರುಗ್ರಾಮ್, ಫರಿದಾಬಾದ್, ನೋಯ್ಡಾ ಮತ್ತು ಗಾಜಿಯಾಬಾದಿನಲ್ಲಿ ಪರಿಸರದ ವಿಶ್ಲೇಷಣೆಯನ್ನು ಸಿಎಸ್  ನಡೆಸಿದ್ದು,  ಅದು ಗಂಟೆಯ ಮಾಲಿನ್ಯದ ಪ್ರವೃತ್ತಿಯನ್ನು ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆಯ ವೇಳೆಯಲ್ಲಿನ ಪರಿಸರಕ್ಕೆ ಹೋಲಿಸುವ ಮೂಲಕ ವಾಯುಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಿದೆಈಗ (ದಿಗ್ಬಂಧನ ಅವಧಿಯಲ್ಲಿ) ವೇಳೆಯಲ್ಲಿ ಸಂಚಾರ ದಟ್ಟಣೆ ಇಲ್ಲದೇ ಇರುವುದರಿಂದ ಅತಿ ಸೂಕ್ಷ್ಮ ಮಾಲಿನ್ಯ ಕಣಗಳ ಪ್ರಭಾವ ಶೂನ್ಯಗೊಂಡಿದೆ. ವಿಷಕಾರಿ ವಾಹನ ಮಾಲಿನ್ಯವು ಪರಿಸರಕ್ಕೆ ಸೇರುವ ಪ್ರಮಾಣವನ್ನು ಅಧ್ಯಯನ ಮಾಡುವ ಮೂಲಕ ವಿಶ್ಲೇಷಣೆಯ ಪ್ರತಿ ಗಂಟೆಯ ಮಾಲಿನ್ಯ ಪ್ರವೃತ್ತಿಯನ್ನು ಸಿಎಸ್ ಅಳತೆ ಮಾಡಿದೆ. ವಾಹನ ಸಂಚಾರ ದಟ್ಟಣೆ ಕಡಿಮೆಯಾದಾಗ ಗಂಟೆಯ ಮಾಲಿನ್ಯ ಪ್ರವೃತ್ತಿ ಕುಸಿಯುತ್ತದೆ. ನೈಟ್ರೋಜನ್ ಡೈ ಆಕ್ಸೈಡ್ ಪ್ರವೃತ್ತಿಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಶನಿವಾರ  ಬಿಡುಗಡೆ ಮಾಡಲಾಗಿರುವ ವಿಶ್ಷೇಷಣೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್    ಮಾಡಿರಿ)

2020: ಬೀಜಿಂಗ್: ಕೋವಿಡ್ ೧೯ ಸಾಂಕ್ರಾಮಿಕ ಸೋಂಕಿನ ತವರು ಎನ್ನಿಸಿಕೊಂಡ ಚೀನಾದ ಹುಬೈ ಪ್ರಾಂತ್ಯದಲ್ಲಿ ಸುಮಾರು ಎರಡು ತಿಂಗಳ ಬಳಿಕ ಚೀನಾ ಸರ್ಕಾರ ಎರಡು ತಿಂಗಳ ದಿಗ್ಬಂಧನವನ್ನು  (ಲಾಕ್ ಡೌನ್) ಸಡಿಲಿಕೆ ಮಾಡಿದೆ. ಆದರೆ ಅದರ ಬೆನ್ನಲ್ಲೇ ಸಹಸ್ರಾರು ಮಂದಿ ಹುಬೈ ಪ್ರಾಂತ್ಯ ತೊರೆಯಲು ಮುಂದಾಗಿದ್ದು, ಪರಿಣಾಮವಾಗಿ ಹಿಂಸಾಚಾರ, ಅಪಾರ ಜನಸಂದಣಿಯಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿಗಳು 2020 ಮಾರ್ಚ್ 28ರ ಶನಿವಾರ ತಿಳಿಸಿದವು. ರೈಲುಗಳಲ್ಲಿ ಜನರು ಕಿಕ್ಕಿರಿದಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿತು. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳನ್ನು ಪ್ರಕಟಿಸಲಾಗಿದ್ದು, ಹುಬೈ ಪ್ರಾಂತ್ಯ ಮತ್ತು ನೆರೆಯ ಜಿಯಾಂಕ್ಸಿ ಪ್ರಾಂತ್ಯವನ್ನು ಸಂಪರ್ಕಿಸುವ ಸೇತುವೆ ಸ್ಥಳದಲ್ಲಿ ಮಾರಾಮಾರಿ ನಡೆದಿದೆ ಎಂದು ಕೆನಡಾ ಮಾಧ್ಯಮಗಳಾದ ಗ್ಲೋಬ್ ಮತ್ತು ಮೇಲ್ ವರದಿ ಮಾಡಿದವು. ಅಡೆತಡೆಗಳನ್ನು ತೆರವುಗೊಳಿಸುವಂತೆ ಜನರು ಕೂಗುತಿದ್ದಾರೆ. ಅಪಾರ ಪ್ರಮಾಣದಲ್ಲಿ ಸೇರಿರುವ ಜನರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿತು. ಹುಬೈ ಪ್ರಾಂತ್ಯದಿಂದ ಜಿಯಾಂಕ್ಸಿ ಪ್ರಾಂತ್ಯಕ್ಕೆ ತೆರಳಲು ಹೊರಟ ಜನರನ್ನು ತಡೆದ ಪರಿಣಾಮ ಗಲಭೆ ಆರಂಭವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. (ವಿವರಗಳಿಗೆ ಇಲ್ಲಿ ಕ್ಲಿಕ್    ಮಾಡಿರಿ)

2020: ನವದೆಹಲಿ: ಕೇಂದ್ರ ಸರ್ಕಾರವು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಯಲ್ಲಿ ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ, ಪರಿಣಾಮವಾಗಿ ವಲಸೆ ಕಾರ್ಮಿಕರ ದೈನಂದಿನ ಆದಾಯಕ್ಕೆ ಭಾರೀ ಕುತ್ತು ಉಂಟಾಗಿದೆ ಎಂಬ ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ತಮ್ಮ ತಮ್ಮ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಆಹಾರ, ಬಟ್ಟೆ, ವೈದ್ಯಕೀಯ ಆರೈಕೆ ಇತ್ಯಾದಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಆಡಳಿತಗಳಿಗೆ 2020 ಮಾರ್ಚ್ 28ರ ಶನಿವಾರ ಆದೇಶ ನೀಡಿತು.  ವಲಸೆ ಕಾರ್ಮಿಕರು ಸೇರಿದಂತೆ ವಸತಿ ರಹಿತರಿಗೆ ಆಹಾರ ಮತ್ತು ಆಶ್ರಯ ಸೇರಿದಂತೆ ಸಮರ್ಪಕ ಬೆಂಬಲವನ್ನು ನೀಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ, ನಿರ್ದೇಶನ ನೀಡಿತ್ತು.  ಶನಿವಾರ ಕೇಂದ್ರ ಸರ್ಕಾರವು ತನ್ನ ಅದೇಶವನ್ನು ಪರಿಷ್ಕರಿಸಿ ಬಟ್ಟೆ ಮತ್ತು ವೈದ್ಯಕೀಯ ಆರೈಕೆಯನ್ನು ಕೂಡಾ ಇವುಗಳ ವ್ಯಾಪ್ತಿಗೆ ಸೇರಿಸಿತು. ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಇತ್ಯರ್ಥವಾಗುವವರೆಗೂ ತಾತ್ಕಾಲಿಕ ಪುನರ್ವಸತಿ ಮುಂದುವರೆಯುತ್ತದೆ ಎಂದು ಕೇಂದ್ರ ಹೇಳಿತು. ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಜಿಂದಾಲ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳಿಗೆ ಬರೆದ ಪತ್ರದಲ್ಲಿ, ವಲಸೆ ಕಾರ್ಮಿಕರು ಸೇರಿದಂತೆ ವಸತಿ ರಹಿತ ಜನರಿಗೆ ಪರಿಹಾರ ಕ್ರಮಗಳು ಅನ್ವಯವಾಗಬೇಕು, ದಿಗ್ಬಂಧನ (ಲಾಕ್ ಡೌನ್) ಕ್ರಮಗಳಿಂದಾಗಿ ಸಿಲುಕಿಕೊಂಡವರಿಗೆ ಮತ್ತು ಪರಿಹಾರ ಶಿಬಿರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಅವರಿಗೆ ಆಶ್ರಯ ನೀಡಲಾಗಿದ್ದು, ಅವರಿಗೆ ಆಹಾರವನ್ನು ಒದಗಿಸಲು ಸೂಚಿಸಲಾಗಿದೆ ಎಂದು ತಿಳಿಸಲಾಯಿತು.  (ವಿವರಗಳಿಗೆ ಇಲ್ಲಿ ಕ್ಲಿಕ್    ಮಾಡಿರಿ)

2020: ಅಮೃತಸರ: ಸಿಖ್ ಧಾರ್ಮಿಕ ಮುಖಂಡ ಕೋವಿಡ್ -೧೯ಕ್ಕೆ ಬಲಿಯಾದ ಬಳಿಕ ಸೂಪರ್ ಪ್ರಸಾರಕ (ಸೂಪರ್-ಸ್ಪ್ರೆಡರ್)  ಗುರುವಿನಿಂದ ಕೊರೋನವೈರಸ್ ಸೋಂಕು ತಗುಲಿರಬಹುದೆಂಬ ಶಂಕೆಯಲ್ಲಿ ಕನಿಷ್ಠ ೧೫,೦೦೦ ಜನರು ಪಂಜಾಬಿನಲ್ಲಿ ಕಟ್ಟುನಿಟ್ಟಿನ ನಿರ್ಬಂಧಕ್ಕೆ ಒಳಗಾದರು. ೭೦ ವರ್ಷದ ಗುರು ಬಲದೇವ್ ಸಿಂಗ್ ಅವರು ಪಂಜಾಬ್ ರಾಜ್ಯದ ಒಂದು ಡಜನ್ನಿಗೂ ಹೆಚ್ಚು ಹಳ್ಳಿಗಳಲ್ಲಿ ಉಪದೇಶಕ್ಕೆ ಹೋಗುವುದಕ್ಕೆ ಮುನ್ನ ಯುರೋಪಿನ ಕೊರೋನಾ ವೈರಸ್ ಕೇಂದ್ರ ಬಿಂದುವಾದ ಇಟಲಿ ಮತ್ತು ಜರ್ಮನಿಗೆ ಪ್ರವಾಸ ಮಾಡಿ ಆಗಷ್ಟೇ ಹಿಂದಿರುಗಿದ್ದರು. ಯುರೋಪಿನಿಂದ ವಾಪಸಾದ ಬಳಿಕ ಏಕಾಂಗಿವಾಸದ ಆದೇಶಗಳನ್ನು ನಿರ್ಲಕ್ಷಿಸಿದ್ದ ಗುರುಬಲದೇವ್ ಸಿಂಗ್ ಮತು ಅವರ ಇಬ್ಬರು ಸಹಚರರು ಹಳ್ಳಿ ಹಳ್ಳಿಗಳಲ್ಲಿ ಧರ್ಮ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಕೊರೋನಾವೈರಸ್ಸಿಗೆ ಬಲಿಯಾದ ಸಿಂಗ್ ಜೊತೆಗೆ ಇದ್ದ ಒಟ್ಟು ೧೯ ಸಹಚರರಿಗೂ ಸೋಂಕು ತಗುಲಿರುವುದು ಖಚಿತ ಪಟ್ಟಿದೆ.   ತಂಡ ಧರ್ಮ ಪ್ರಚಾರ ಮಾಡಿದ ೧೫ ಹಳ್ಳಿಗಳಲ್ಲಿ ೧೫,೦೦೦-೨೦,೦೦೦ ಮಂದಿ ಇದ್ದು, ಅಧಿಕಾರಿಗಳು ಇದೀಗ ಎಲ್ಲ ಹಳ್ಳಿಗಳಲ್ಲೂ ದಿಗ್ಬಂಧನ ಹಾಕಿದ್ದಲ್ಲದೆ ಅಲ್ಲಿನ ಜನರೆಲ್ಲರಿಗೂ ಏಕಾಂತವಾಸಕ್ಕೆ ಆಜ್ಞಾಪಿಸಿದ್ದಾರೆ. ಬಲದೇವ್ ಸಿಂಗ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಸಾಯುವವರೆಗೂ ತಂಡ ಅವರ ಜೊತೆಯಲ್ಲೇ ಇದ್ದುಕೊಂಡು ಹಳ್ಳಿಗಳಲ್ಲಿ ಧರ್ಮ ಪ್ರಚಾರ ನಿರತವಾಗಿತ್ತು ಎಂದು ಬಂಗಾ ಜಿಲ್ಲೆಯ ಜಿಲ್ಲಾಧಿಕಾರಿ ಗೌರವ್ ಜೈನ್  2020 ಮಾರ್ಚ್ 28ರ ಶನಿವಾರ ಹೇಳಿದರು.  (ವಿವರಗಳಿಗೆಇಲ್ಲಿ ಕ್ಲಿಕ್    ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 28  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Post a Comment