ನಾನು ಮೆಚ್ಚಿದ ವಾಟ್ಸಪ್

Tuesday, March 17, 2020

ಇಂದಿನ ಇತಿಹಾಸ History Today ಮಾರ್ಚ್ 17

2020: ಮುಂಬೈ: ಲಂಡನ್ನಿನಿಂದ ಹಿಂದಿರುಗಿದ ಬಳಿಕ ಖ್ಯಾತ ಭಜನ್ ಗಾಯಕ ಅನುಪ್ ಜಲೋಟಾ ಅವರು 2020 ಮಾರ್ಚ್ 17ರ ಮಂಗಳವಾರ  ಬೆಳಗ್ಗೆಯಿಂದ ಮುಂಬೈಯ ಅಂಧೇರಿ ಹೊರವಲಯದಲ್ಲಿನ ಹೋಟೆಲ್ ಒಂದರಲ್ಲಿಏಕಾಂಗಿ ವಾಸದಲ್ಲಿ ಇದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವ ಸಲುವಾಗಿ ತಾವು ಏಕಾಂಗಿ ವಾಸದಲ್ಲಿ ಇರುವುದಾಗಿ ಸ್ವತಃ ಅನುಪ್ ಜಲೋಟಾ ಅವರು ಫೇಸ್ ಬುಕ್ ಪೋಸ್ಟಿನಲ್ಲಿ ಪ್ರಕಟಿಸಿದರು. ಯುರೋಪಿಗೆ ಗಾಯನ ಕಚೇರಿ ಸಲುವಾಗಿ ತೆರಳಿದ್ದ ಜಲೋಟಾ ಅವರು ಮಂಗಳವಾರ ನಸುಕಿನಲ್ಲಿ ಮುಂಬೈಗೆ ವಾಪಸಾಗಿದ್ದರು. ಅಂಧೇರಿ ಹೋಟೆಲ್ನಿಂದಲೇ ತಮ್ಮ ಚಿತ್ರವನ್ನು ಫೇಸ್ ಬುಕ್ನಲಿ ಹಂಚಿಕೊಂಡ ಅನುಪ್, ’ನಾನು ಬಿಎಂಸಿಯು ೬೦+ ಪ್ರಯಾಣಿಕರಿಗೆ ಒದಗಿಸಿದ ವೈದ್ಯಕೀಯ ಸವಲತ್ತು ಘಟಕದಲ್ಲಿ ಇದ್ದೇನೆ. ಲಂಡನ್ನಿನಿಂದ ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ನನ್ನನ್ನು ಹೋಟೆಲ್ ಮಿರಾಜ್ಗೆ ಕರೆದೊಯ್ಯಲಾಯಿತು. ವೈದ್ಯರ ತಂಡವೊಂದು ನನ್ನನ್ನು ನೋಡಿಕೊಳ್ಳುತ್ತಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕೋವಿಡ್೧೯ ಭಾರತದಲ್ಲಿ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸಹಕರಿಸುವಂತೆ ಮತ್ತು ನೆರವು ನೀಡುವಂತೆ ನಾನು ಮನವಿ ಮಾಡುತ್ತೇನೆಎಂದು ಜಲೋಟಾ ಫೇಸ್ ಬುಕ್ ಪೋಸ್ಟಿನಲ್ಲಿ ಬರೆದರು.  ಅನುಪ್ ಜಲೋಟಾ ಅವರು ಎರಡು ದಿನಗಳ ಅವಧಿಗೆ ಏಕಾಂಗಿ ವಾಸದಲ್ಲಿ ಇರುತ್ತಾರೆ. ಆದರೆ ಅವರು ಇನ್ನೂ ಕೊರೋನಾವೈರಸ್ ಪರೀಕ್ಷೆಗೆ ಒಳಗಾಗಿಲ್ಲ ಎಂದು ಗಾಯಕನ ವಕ್ತಾರ ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎಯನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನೂ 2020 ಮಾರ್ಚ್ 17ರ ಮಂಗಳವಾರ  ವಿರೋಧಿಸಿದ ಕೇಂದ್ರ ಸರ್ಕಾರವು, ಪ್ರಮಾಣಪತ್ರದ (ಅಫಿದವಿತ್) ಮೂಲಕ ಟೀಕೆಗಳಿಗೆ ಅಂಶ-ಅಂಶ ಉತ್ತರವನ್ನು ಸಲ್ಲಿಸಿತು. ೧೨೯  ಪುಟಗಳ ತನ್ನ ಪ್ರಾಥಮಿಕ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರವುಸಿಎಎ ಯಾವುದೇ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ, ಆದ್ದರಿಂದ ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲಎಂದು ಪ್ರತಿಪಾದಿಸಿತು. ಸಿಎಎ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಪ್ರತಿಪಾದಿಸಿದಂತೆ, ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಅಕ್ರಮ ವಲಸಿಗ ಎಂಬುದಾಗಿ ವರ್ಗೀಕರಿಸಿದ ಯಾವುದೇ ವ್ಯಕ್ತಿಯನ್ನೂ ಉಚ್ಚಾಟಿಸುವುದಿಲ್ಲ ಅಥವಾ ಗಡೀಪಾರು ಮಾಡುವುದಿಲ್ಲ ಎಂದೂ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ತಿಳಿಸಿತು. ಪೌರತ್ವ ತಿದ್ದುಪಡಿ ಕಾಯ್ದೆಯು ಕಾರ್ಯಾಂಗಕ್ಕೆ ಯಾವುದೇ ನಿರಂಕುಶ ಮತ್ತು ಮಾರ್ಗದರ್ಶಿ ಸೂತ್ರ ರಹಿತವಾದ ಅಧಿಕಾರಗಳನ್ನು ನೀಡುವುದಿಲ್ಲ. ಅದು ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಗಳಿಂದ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಕಾನೂನಿಗೆ ಅನುಗುಣವಾಗಿ ಪೌರತ್ವವನ್ನು ನೀಡುತ್ತದೆ ಅಷ್ಟೆಎಂದು ಕೂಡಾ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಹೇಳಿತು.   (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ/ ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಸಲ್ಲಿಸಿದ ಅರ್ಜಿಯನ್ನು 2020 ಮಾರ್ಚ್ 17ರ ಮಂಗಳವಾರ  ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಕಮಲನಾಥ್ ಮತ್ತು ವಿಧಾನಸಭಾ ಕಾರ್ಯದರ್ಶಿಗೆ ನೋಟಿಸುಗಳನ್ನು ಜಾರಿ ಮಾಡಿತು. ಮಧ್ಯೆ ರಾಜ್ಯಪಾಲರ ಗಡುವಿನ ಹೊರತಾಗಿಯೂ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಈದಿನ  ಸದನ ಬಲಾಬಲ ಪರೀಕ್ಷೆ ನಡೆಯಲಿಲ್ಲ. ಬದಲಿಗೆ ವಿಶ್ವಾಸಮತ ಯಾಚನೆ ಏಕೆ ಸಾಧ್ಯವಿಲ್ಲ ಎಂದು ವಿವರಿಸಿ ರಾಜ್ಯಪಾಲ ಲಾಲಜಿ ಟಂಡನ್ ಅವರಿಗೆ ಮುಖ್ಯಮಂತ್ರಿ ಕಮಲನಾಥ್ ಪತ್ರ ಬರೆದರು.  ಸದನದಲ್ಲಿ ಬಲಾಬಲ ಪರೀಕ್ಷೆ ಕೋರಿ ಬಿಜೆಪಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಿ ೧೨ ಗಂಟೆಗಳ ಒಳಗಾಗಿ ಉತ್ತರ ನೀಡುವಂತೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮುಖ್ಯಮಂತ್ರಿ ಕಮಲನಾಥ್ ಮತ್ತು ವಿಧಾನಸಭಾ ಕಾರ್ಯದರ್ಶಿಗೆ  ಸೂಚಿಸಿತು. ಕೊರೋನಾವೈರಸ್ ವಿರುದ್ಧ ಮುಂಜಾಗರೂಕತಾ ಕ್ರಮವಾಗಿ ವಿಧಾನಸಭಾ ಅಧಿವೇಶನವನ್ನು ಸೋಮವಾರ ೧೦ ದಿನಗಳ ಕಾಲ ಮುಂದೂಡಿದ್ದನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಮಂದಿ ಶಾಸಕರ ರಾಜೀನಾಮೆಯ ಪರಿಣಾಮವಾಗಿ ಪತನದ ಅಂಚಿಗೆ ಬಂದಿರುವ ಕಮಲನಾಥ್ ಸರ್ಕಾರವು ವಿಶ್ವಾತ ಮತ ಯಾಚನೆಯನ್ನು ವಿಳಂಬಿಸುತ್ತಿದೆ ಎಂದು ಬಿಜೆಪಿ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು.   (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬನ ಪತ್ನಿ ತನ್ನ ಪತಿಯನ್ನು ಗಲ್ಲಿಗೇರಿಸಬಹುದೆಂಬ ನಿರೀಕ್ಷೆಯಲ್ಲಿ, ಗಲ್ಲಿಗೇರಿಸಲು ನಿಗದಿಯಾಗಿರುವ ದಿನಾಂಕಕ್ಕೆ ಮುನ್ನವೇ ಆತನಿಂದ ವಿಚ್ಛೇದನ ಕೋರಿ 2020 ಮಾರ್ಚ್ 17ರ ಮಂಗಳವಾರ  ಅರ್ಜಿ ಸಲ್ಲಿಸಿದಳು. ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಸಿಂಗ್ ಠಾಕೂರನ ಪತ್ನಿ ಪುನೀತಾ ಔರಂಗಾಬಾದಿನ ಕುಟುಂಬ ನ್ಯಾಯಾಲಯಗಳ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ವಿಚ್ಛೇದನ ಕೋರಿಕೆ ಅರ್ಜಿಯನ್ನು ಸಲ್ಲಿಸಿದಳು.  ೨೦೧೨ರ ಡಿಸೆಂಬರ್ ೧೬ರ ಮಾರಣಾಂತಿಕ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ತನ್ನ ಪತಿ ನಿರಪರಾಧಿ ಎಂಬುದು ತನಗೆ ಮನವರಿಕೆಯಾಗಿದ್ದರೂ, ಬಾಳಿನ ಮುಂದಿನ ದಿನಗಳನ್ನು ಅಕ್ಷಯ್ ಸಿಂಗ್ ವಿಧವೆಯಾಗಿ ಸವೆಸುವುದು ತನಗೆ ಇಷ್ಟವಿಲ್ಲ ಎಂದು ಪುನೀತಾ ತನ್ನ ವಿಚ್ಛೇದನ ಕೋರಿಕೆ ಅರ್ಜಿಯಲ್ಲಿ ತಿಳಿಸಿದಳು. ಹಿಂದೂ ವಿವಾಹ ಕಾಯ್ದೆಯ ೧೩(() ಸೆಕ್ಷನ್ ಅಡಿಯಲ್ಲಿ ಪತಿ ಅತ್ಯಾಚಾರ ಸೇರಿದಂತೆ ಹೀನ ಕೃತ್ಯಕ್ಕಾಗಿ ಶಿಕ್ಷಿತನಾದರೆ ವಿಚ್ಛೇದನ ಪಡೆಯುವ ಅವಕಾಶ ಆತನ ಪತ್ನಿಗೆ ಇದೆ ಎಂದು ಪುನೀತಾಳ ವಕೀಲ ಎಂಕೆ ಸಿಂಗ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ: ನೇಣುಗಂಬ ಏರಲು ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ ಎನ್ನುವ ಹೊತ್ತಿನಲ್ಲಿ ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬ ಅಪರಾಧ ಸಂಭವಿಸಿದ ದಿನ ತಾನು ರಾಜಧಾನಿ ದೆಹಲಿಯಲ್ಲಿ ಇರಲೇ ಇಲ್ಲ ಎಂಬ ಹೊಸ ತಕರಾರನ್ನು 2020 ಮಾರ್ಚ್ 17ರ ಮಂಗಳವಾರ  ತೆಗೆದ. ಇದೇ ವೇಳೆಗೆ ಪ್ರಕರಣದಲ್ಲಿ ನ್ಯಾಯದ ಹತ್ಯೆಯಾಗಿದೆ ಎಂಬುದಾಗಿ ಆಪಾದಿಸಿ ಇದೀಗ ಅಪರಾಧಿಗಳು ಮಾನವ ಹಕ್ಕುಗಳ ಆಯೋಗದ ಕದವನ್ನೂ ತಟ್ಟಿದರು.  ಗಲ್ಲು ಜಾರಿಗೆ ತಡೆ ನೀಡಬೇಕು ಎಂದು ಅವರು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದರು.  ಮುಕೇಶ್ ಸಿಂಗ್ ಪರ ವಕೀಲ ಎಂಎಲ್ ಶರ್ಮ ಅವರು ಮಾರ್ಚ್ ೨೦ರ ಬೆಳಗ್ಗೆ .೩೦ ಗಂಟೆಗೆ ನಿಗದಿಯಾಗಿರುವ ಗಲ್ಲು ಜಾರಿ ಪ್ರಕ್ರಿಯೆಗೆ ತಡೆಯಾಜ್ಞೆ ಕೋರಿ ಅರ್ಜಿಯೊಂದನ್ನು ದೆಹಲಿ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದರು. ಅರ್ಜಿ ಮೇಲಿನ ತನ್ನ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತು. ಪ್ರಕರಣದ ಅಪರಾಧಿಗಳಾದ ಅಕ್ಷಯ್ ಠಾಕೂರ್, ಪವನ್ ಗುಪ್ತ ಮತ್ತು ವಿನಯ್ ಶರ್ಮ ಮೂವರು ತಮ್ಮ ಮರಣದಂಡನೆಗೆ ತಡೆಯಾಜ್ಞೆ ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಅರ್ಜಿ ಸಲ್ಲಿಸಿದ ಒಂದು ದಿನದ ಬಳಿಕ ಮುಕೇಶ್ ಪರ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಹಿಂದಿನ ವಕೀಲರು ತನ್ನನ್ನು ದಾರಿ ತಪ್ಪಿಸಿದರು ಎಂದು ಆಪಾದಿಸಿ ತನ್ನ ಕಾನೂನುಬದ್ಧ ಪರಿಹಾರ ಪಡೆಯುವ ಅವಕಾಶಗಳನ್ನು ಪುನಃಸ್ಥಾಪಿಸಬೇಕು ಎಂಬುದಾಗಿ ಕೋರಿ ಮುಕೇಶ್ ಸಿಂಗ್ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  2020 ಮಾರ್ಚ್ 15ರ ಸೋಮವಾರ ತಿರಸ್ಕರಿಸಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 17  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment