ನಾನು ಮೆಚ್ಚಿದ ವಾಟ್ಸಪ್

Friday, March 13, 2020

ಇಂದಿನ ಇತಿಹಾಸ History Today ಮಾರ್ಚ್ 13

2020: ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮರುದಿನವೇ  2020 ಮಾರ್ಚ್  13ರ ಶುಕ್ರವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿರುದ್ಧದ ಹಳೆಯ ಪ್ರಕರಣವೊಂದಕ್ಕೆ ಮಧ್ಯಪ್ರದೇಶದ ಕಮಲನಾಥ್ ಸರ್ಕಾರ ಮರುಜೀವ ನೀಡಿದೆ. ಇದೇ ವೇಳೆಗೆ ಸಿಂಧಿಯಾ ಬೆಂಬಲಿಗ ಬಂಡಾಯ ಶಾಸಕರು ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗಲು ಬೆಂಗಳೂರಿನಿಂದ ಭೋಪಾಲ್‌ಗೆ ಹೊರಡುವ ವಿಚಾರದಲ್ಲಿ ಮರುಚಿಂತನೆ ನಡೆಸಿದ್ದು, ತಮಗೆ ವಿಶೇಷ ಭದ್ರತೆ ಒದಗಿಸಬೇಕು ಎಂದು ಬೇಡಿಕೆ  ಇಟ್ಟರು.  ಭೂ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದಾಖಲೆಗಳನ್ನು ತಿರುಚಿದ ಆರೋಪವನ್ನು ಸಿಂಧಿಯಾ ಮತ್ತು ಅವರ ಕುಟುಂಬದ ವಿರುದ್ಧ ಹೊರಿಸಲಾಗಿದೆ. ರಾಜ್ಯದ ಆರ್ಥಿಕ ಅಪರಾಧಗಳ ವಿಭಾಗವು ಈ ಕುರಿತು ತನಿಖೆ ನಡೆಸಲಿದೆ ಎಂದು ಸುದ್ದಿ ಮೂಲಗಳೂ ತಿಳಿಸಿದವು. ‘ಸಿಂಧಿಯಾ ವಿರುದ್ಧ ಸುರೇಂದ್ರನಾಥ್ ಶ್ರೀವಾತ್ಸವ ಅವರು ದಾಖಲೆಗಳನ್ನು ತಿರುಚಿ ವಂಚನೆ ಎಸಗಿದ ಬಗ್ಗೆ ಗುರುವಾರ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಆರ್ಥಿಕ ಅಪರಾಧಗಳ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದರು. ಸಿಂಧಿಯಾ ಮತ್ತು ಅವರ ಕುಟುಂಬ ೨೦೦೯ರಲ್ಲಿ ಮಾರಾಟ ಮಾಡಿದ ಆಸ್ತಿಯಲ್ಲಿ ೬,೦೦೦ ಚದರ ಅಡಿ ಕಡಿಮೆ ಇದೆ. ನಂತರ ಈ ಸಂಬಂಧ ದಾಖಲೆಗಳನ್ನು ತಿರುಚಲಾಗಿದೆ ಎಂಬುದಾಗಿ ಸುರೇಂದ್ರನಾಥ್ ಆಪಾದಿಸಿದ್ದಾರೆ. ಈ ಸಂಬಂಧ ಅವರು ೨೦೧೪ರ ಮಾರ್ಚ್ ೨೬ರಂದು ದೂರು ನೀಡಿದ್ದರು. ಆ ಬಗ್ಗೆ ತನಿಖೆ ನಡೆಸಿದಾಗ ಸಿಂಧಿಯಾ ಅವರಿಂದ ಯಾವುದೇ ತಪ್ಪು ನಡೆದಿಲ್ಲ ಎನ್ನುವುದು ದೃಢಪಟ್ಟಿತ್ತು. ಪ್ರಕರಣವನ್ನು ೨೦೧೮ರಲ್ಲಿ ಸಮಾಪನಗೊಳಿಸಲಾಗಿತ್ತು.  ಸಿಂಧಿಯಾ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಬಂಡೆದ್ದು ಮಂಗಳವಾರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ, ಬುಧವಾರ ಬಿಜೆಪಿ ಸೇರ್ಪಡೆಯಾದರು. ಅದರ ಬೆನ್ನಲ್ಲಿಯೇ ಸುರೇಂದ್ರನಾಥ್ ಮತ್ತೆ ದೂರು ನೀಡಿದ್ದು, ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ತಕ್ಷಣ ಆದೇಶಿಸಿತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).
2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫರೂಖ್ ಅಬ್ದುಲ್ಲ ಅವರನ್ನು 2020 ಮಾರ್ಚ್  13ರ ಶುಕ್ರವಾರ ಏಳು ವಾರಗಳ ಬಂಧನದಿಂದ ಬಿಡುಗಡೆ ಮಾಡಲಾಗಿದ್ದು, ಅವರು ತಮ್ಮ ಗುಪ್ಕಾರ ನಿವಾಸದಿಂದ ಹೊರಕ್ಕೆ ಬಂದರು. ಕೇಂದ್ರ ಸರ್ಕಾರವು ಜಮ್ಮ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ತಮ್ಮ ಮನೆಯಲ್ಲೇ ಬಂಧಿತರಾಗಿದ್ದ ಫರೂಖ್ ಅಬ್ದುಲ್ಲ ಮನೆಯಿಂದ ಹೊರಬರುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಪತ್ರಕರ್ತರ ಜೊತೆ ’ನಾನು (ಬಂಧ)ಮುಕ್ತನಾಗಿದ್ದೇನೆ, ಮುಕ್ತನಾಗಿದ್ದೇನೆ ಎಂದು ಹೇಳುತ್ತಾ ಹರ್ಷ ವ್ಯಕ್ತ ಪಡಿಸಿದರು. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಬ್ದುಲ್ಲ ಅವರನ್ನು ಬಂಧಿಸಲಾಗಿತ್ತು. ‘ನನ್ನ ಸ್ವಾತಂತ್ರ್ಯಕ್ಕಾಗಿ ಮಾತನಾಡಿದ ರಾಜ್ಯ ಮತ್ತು ದೇಶದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ೮೨ರ ಹರೆಯದ ಅಬ್ದುಲ್ಲ ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ).
2020: ಭೋಪಾಲ್: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾರ್ಚ್ ೨೬ರ ರಾಜ್ಯಸಭಾ ಚುನಾವಣೆಗಳಿಗಾಗಿ 2020 ಮಾರ್ಚ್  13ರ ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಮಧ್ಯಪ್ರದೇಶ ಬಿಜೆಪಿ ಕಚೇರಿಯಿಂದ ಹೊರಟ ಸಿಂಧಿಯಾ ಅವರು ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಜ್ಯ ವಿಧಾನಸಭಾ ಸಚಿವಾಲಯಕ್ಕೆ ಆಗಮಿಸಿ ಚುನಾವಣಾ ಅಧಿಕಾರಿಯಾದ ವಿಧಾನಸಭಾ ಮುಖ್ಯ ಕಾರ್‍ಯದರ್ಶಿ ಎಪಿ ಸಿಂಗ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.  ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮ, ಹೊರಹೋಗುತ್ತಿರುವ ರಾಜ್ಯಸಭಾ ಸದಸ್ಯ ಪ್ರಭಾತ್ ಝಾ ಮತ್ತು ಬಿಜೆಪಿಯ ಇತರ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು. ಬಿಜೆಪಿ ಕಚೇರಿ ತಲುಪುವ ಮುನ್ನ ಸಿಂಧಿಯಾ ಅವರು ಮಾಜಿ ಸಚಿವ ನರೋತ್ತಮ ಮಿಶ್ರ ಅವರ ನಿವಾಸದಲ್ಲಿ ಪಕ್ಷದ ಇತರ ನಾಯಕರ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಗುನಾ ಕ್ಷೇತ್ರದ ಮಾಜಿ ಲೋಕಸಭಾ ಸದಸ್ಯರಾದ ಸಿಂಧಿಯಾ ಅವರು ತಮ್ಮ ಅತ್ತೆ  (ತಂದೆಯ ಸಹೋದರಿ) ಬಿಜೆಪಿ ಶಾಸಕಿ ಯಶೋಧರಾ ರಾಜೆ ಸಿಂಧಿಯಾ ಅವರನ್ನೂ ಬೆಳಗ್ಗೆ ಭೇಟಿ ಮಾಡಿದ್ದರು. ಗುರುವಾರ ರಾತ್ರಿ ಸಿಂಧಿಯಾ ಅವರು ಚೌಹಾಣ್ ಅವರು ಏರ್ಪಡಿಸಿದ್ದ ಭೋಜನಕೋಟದಲ್ಲಿ ಭಾಗವಹಿಸಿದ್ದರು. ಬುಧವಾರ ಸಿಂಧಿಯಾ ಅವರು ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ಅವರನ್ನು ಮಧ್ಯಪ್ರದೇಶದಿಂದ ತನ್ನ ರಾಜ್ಯಸಭಾ ಅಭ್ಯರ್ಥಿಯಾಗಿ ಹೆಸರಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).
2020: ತಿರುವನಂತಪುರಂ: ಕೇರಳದ ಕೊಟ್ಟಾಯಂ ಆಸ್ಪತ್ರೆಯ ಕೊರೋನಾವೈರಸ್ ಏಕಾಂಗಿ ವಾರ್ಡಿಗೆ (ಐಸೋಲೇಷನ್ ವಾರ್ಡ್) ದಾಖಲಾಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದಾಗಿ ಕೇರಳ ಸರ್ಕಾರದ ಅಧಿಕಾರಿಯೊಬ್ಬರು 2020 ಮಾರ್ಚ್  13ರ ಶುಕ್ರವಾರ ತಿಳಿಸಿದರು.  ೭೨ ವರ್ಷದ ವ್ಯಕ್ತಿಯ ಸಾವಿಗೆ ನೆತ್ತರುನಂಜು ಅಥವಾ ರಕ್ತವಿಷ (ಸೆಪ್ಟಿಸೆಮಿಯಾ) ಕಾರಣ ಎಂದು ಜಿಲ್ಲಾ ವೈದ್ಯಾಧಿಕಾರಿ ನುಡಿದರು. ರೋಗಿಗೆ ಕೊರೋನಾವೈರಸ್ ಸೋಂಕು ತಗಲಿದ್ದು ಪರೀಕ್ಷೆಯಲ್ಲಿ ಕಂಡು ಬಂದಿರಲಿಲ್ಲ ಎಂದು ಅವರು ಹೇಳಿದರು. ಕೊಟ್ಟಾಯಂನಲ್ಲಿ ಕೆಲವು ಕೊರೋನಾವೈರಸ್ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದಿದ್ದ ಕಾರಣ ಅವರನ್ನು ಮುಂಜಾಗರೂಕತಾ ಕ್ರಮವಾಗಿ ಏಕಾಂಗಿ ವಾರ್ಡಿನಲ್ಲಿ ಇರಿಸಲಾಗಿತ್ತು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಎಎನ್ ಶೀಜಾ ಹೇಳಿದರು. ಭಾರತದ ೮೧ ಕೊರೋನಾ ಸೋಂಕು ಪ್ರಕರಣಗಳಲ್ಲಿ ೧೭ ಪ್ರಕರಣಗಳು ಕೇರಳದಿಂದಲೇ ವರದಿಯಾಗಿವೆ. ಆದಾಗ್ಯೂ ಸರ್ಕಾರೀ ಅಧಿಕಾರಿಗಳು ಮೃತ ವ್ಯಕ್ತಿಯ ಪ್ರಾಥಮಿಕ ಕೊರೋನಾವೈರಸ್ ಪರೀಕ್ಷಾ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಭಾರತದ ಮೊದಲ ಕೊರೋನಾವೈರಸ್ ಸಾವು ನೆರೆಯ ಕರ್ನಾಟಕದಿಂದ ವರದಿಯಾಗಿರುವುದನ್ನು ಕೇಂದ್ರ ಸರ್ಕಾರವು ದೃಢ ಪಡಿಸಿದ ಒಂದು ದಿನದ ಬಳಿಕ ಕೇರಳದಲ್ಲಿ ಸಂಭವಿಸಿರುವ ಸಾವು ಆತಂಕವನ್ನು ಉಂಟು ಮಾಡಿದೆ. ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಮೃತನಾದ ೭೬ರ ಹರೆಯದ ವ್ಯಕ್ತಿಗೆ ಕೊರೋನಾವೈರಸ್ ಸೋಂಕು ತಗುಲಿದ್ದುದು ಕಳೆದ ರಾತ್ರಿ ಗಂಟಲ ದ್ರವದ ಮಾದರಿಯ ಪರೀಕ್ಷಾ ಫಲಿತಾಂಶದಿಂದ ಖಚಿತವಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).
2020: ನವದೆಹಲಿ: ಇಡೀ ಜಗತ್ತನ್ನೇ ಗಡಗಡ ನಡುಗಿಸುತ್ತಿರುವ ಮಾರಕ ಕೋರೋನಾ ವೈರಸ್ ಹೆಮ್ಮಾರಿಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 2020 ಮಾರ್ಚ್  13ರ ಶುಕ್ರವಾರ  ೫೦೦೦ವನ್ನು ದಾಟಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ ೮೧ಕ್ಕೆ ಮುಟ್ಟಿತು.. ಷೇರುಪೇಟೆಯನ್ನು ತಲ್ಲಣಗೊಳಿಸಿರುವ ಕೊರೋನಾ ಚಿನ್ನದ ಮೇಲೂ ಕಣ್ಣ್ನು ಹಾಕಿದ್ದು, ದೆಹಲಿಯಲ್ಲಿ ಚಿನ್ನದ ಬೆಲೆ ೧೦೦೦ ರೂಪಾಯಿಯಷ್ಟು ಕುಸಿಯಿತು. ಸುಪ್ರೀಂಕೋರ್ಟಿನ ವಿಚಾರಣೆ ಮೇಲೂ ಕೋರೋನಾ ನೆರಳುಬಿದ್ದಿದ್ದು ತುರ್ತು ಪ್ರಕರಣಗಳನ್ನು ಮಾತ್ರವೇ ಆಲಿಸುವುದಾಗಿ ಸುಪ್ರೀಂಕೋರ್ಟ್ ಪ್ರಕಟಿಸಿತು. ಕೊರೋನಾ ವೈರಸ್ ಕಬಂಧಬಾಹು ವಿಶ್ವದ ೧೨೧ ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ವ್ಯಾಪಿಸಿ ಸೋಂಕಿತರ ಸಂಖ್ಯೆ ೧,೩೪,೩೦೦ನ್ನು ದಾಟುತ್ತಿದ್ದಂತೆಯೇ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ ೫,೦೪೩ಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಒಟ್ಟು ೩,೧೭೬ ಮಂದಿ ಚೀನಾದಲ್ಲಿ ಸಾವನ್ನಪ್ಪಿದ್ದರೆ, ೧,೦೧೬ ಮಂದಿ ಇಟಲಿಯಲ್ಲಿ ಮತ್ತು ೫೧೪ ಮಂದಿ ಇರಾನಿನಲ್ಲಿ ಸಾವನ್ನಪ್ಪಿದ್ದು- ಈ ಮೂರು ರಾಷ್ಟ್ರಗಳಲ್ಲಿ ಅತ್ಯಧಿಕ ಸಂಖ್ಯೆಯ ಸಾವುಗಳು ಸಂಭವಿಸಿವೆ. ಚೀನಾದ ವುಹಾನ್ ನಗರದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಕೋವಿಡ್-೧೯ ಮೊತ್ತ ಮೊದಲಿಗೆ ಕಂಡು ಬಂದಿತ್ತು. ಭಾರತದಲ್ಲಿ ವೈರಸ್ ದಾಂಗುಡಿ: ಭಾರತದಲ್ಲಿ ಈವರೆಗೆ ಕೊರೋನಾವೈರಸ್ ಸೋಂಕಿದ್ದು ದೃಢ ಪಟ್ಟಿರುವ ೮೧ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ ೬೪ ಮಂದಿ ಭಾರತೀಯರು, ೧೬ ಮಂದಿ ಇಟಲಿ ಪ್ರಜೆಗಳು ಮತ್ತು ಒಬ್ಬ ಕೆನಡಾ ಪ್ರಜೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದಲ್ಲಿ ಸಾವನ್ನಪ್ಪಿದ ಒಬ್ಬ ವ್ಯಕ್ತಿ ಕೋರೋನಾ ವೈರಸ್ ಪರಿಣಾಮವಾಗಿಯೇ ಅಸು ನೀಗಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿದ್ದು, ಭಾರತದಲ್ಲೂ ಒಬ್ಬ ವ್ಯಕ್ತಿ ಬಲಿಯಾದಂತಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).
2020: ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ ೪ ರಷ್ಟು ಹೆಚ್ಚಿಸಿ ಶೇಕಡಾ ೨೧ಕ್ಕೇ ತಲುಪಿಸುವ ಮೂಲಕ ಹೊಸ ವರ್ಷದ ಯುಗಾದಿ ಕೊಡುಗೆಯನ್ನು ನೀಡಲು ಕೇಂದ್ರ ಸಚಿವ ಸಂಪುಟವು 2020 ಮಾರ್ಚ್  13ರ ಶುಕ್ರವಾರ ಅನುಮೋದನೆ ನೀಡಿತು. ಇದರಿಂದ ೪೮ ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ೬೫ ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಪ್ರಕಟಿಸಿದರು. ಇದೇ ವೇಳೆಗೆ ಸಂಪುಟವು ಯೆಸ್ ಬ್ಯಾಂಕ್ ಪುನಾರಚನೆ ಯೋಜನೆಗೂ ಸಂಪುಟವು ಒಪ್ಪಿಗೆ ನೀಡಿತು. ಶೇಕಡಾ ೪ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ಕೇಂದ್ರ ಬೊಕ್ಕಸಕ್ಕೆ ೧೪,೫೯೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಜಾವಡೇಕರ್ ಹೇಳಿದರು. ೨೦೨೦ರ ಜನವರಿ ೧ರಿಂದ ಪೂರ್ವಾನ್ವಯವಾಗಿ ಕೇಂದ್ರ ಸರ್ಕಾರಿ ನೌಕರರ ತುಟಿಭತ್ಯೆಯನ್ನು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಪರಿಹಾರವನ್ನ ಜಾರಿಗೊಳಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಮೂಲವೇತನ ಅಥವಾ ಪಿಂಚಣಿಯ ಶೇಕಡಾ ೧೭ರಷ್ಟಕ್ಕೆ ಇದು ಸೇರ್ಪಡೆಯಾಗಲಿದೆ. ಸಂಪುಟವು ಅನುಮೋದನೆ ನೀಡಿದ ಇತರ ವಿಷಯಗಳ ಬಗ್ಗೆ ಮಾತನಾಡಿದ ಜಾವಡೇಕರ್, ’ಕೇಂದ್ರ ಸಂಪುಟವು ೭೮೦ಕಿಮೀ ಉದ್ದದ ’ಹಸಿರು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ೭,೬೬೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು  ಒಪ್ಪಿಗೆ ನೀಡಿದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ವಾಷಿಂಗ್ಟನ್: ಸಂಪರ್ಕವಿಲ್ಲದ ಕೈಜೋಡಿಸಿ ನಮಸ್ತೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವ ಭಾರತವು ಕೊರೋನಾವೈರಸ್ ವಿರುದ್ಧದ ಸಮರದಲ್ಲಿ ಮುಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ಮಾರ್ಚ್ 12ರ ಗುರುವಾರ ಭೇಟಿ ನೀಡಿದ ಐರಿಶ್ ಪ್ರಧಾನಿ ಲಿಯೋ ವರಡ್ಕರ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. ಪರಸ್ಪರ ಭೇಟಿಯಾದಾಗ ಉಭಯ ನಾಯಕರು ಕೈಕುಲುಕಲಿಲ್ಲ ಮತ್ತು ಅದರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಟ್ರಂಪ್ ಮತ್ತು ವರದಕರ್ ಇಬ್ಬರೂ ಯಾವುದೇ ಪದವನ್ನೂ ಉಸುರದೇ ಕೈಜೋಡಿಸಿ ‘ನಮಸ್ತೆ’ ಮೂಲಕ ಶುಭಾಶಯ ಕೋರಿದುದಾಗಿ ಹೇಳಿದರು. "ನಾನು ಭಾರತದಿಂದ ಹಿಂತಿರುಗಿದ್ದೇನೆ.  ನಾನು ಅಲ್ಲಿ ಯಾರ ಜೊತೆಗೂ ಕೈ ಕುಲುಕಲಿಲ್ಲ. ಅದು ತುಂಬಾ ಸುಲಭ ಕೂಡಾ.  ಏಕೆಂದರೆ ಅವರು ರೀತಿ ಮಾಡುತ್ತಾರೆ’  ಎಂದು ಟ್ರಂಪ್ ಕೈಜೋಡಿಸಿ ‘ನಮಸ್ತೆ’ ಮೂಲಕ ಶುಭಾಶಯ ವಿನಿಮಯ ಮಾಡುವುದನ್ನು ತೋರಿಸಿದರು. ಜಪಾನಿನಲ್ಲಿ ಹೇಗೆ ಶುಭಾಶಯ ಕೋರುತ್ತಾರೆಂದು ತೋರಿಸಲು ಅವರು ಮುಂದಕ್ಕೆ ಬಾಗಿ ತೋರಿಸಿದರು. ‘ಅವರು ತಿರುವಿಗಿಂತ ಬಹಳ ಮುಂದಿದ್ದಾರೆ’ ಎಂದು ಟ್ರಂಪ್ ಉದ್ಗರಿಸಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).
 ಇಂದಿನ ಇತಿಹಾಸ  History Today ಮಾರ್ಚ್ 13  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment