ನಾನು ಮೆಚ್ಚಿದ ವಾಟ್ಸಪ್

Tuesday, March 3, 2020

ಇಂದಿನ ಇತಿಹಾಸ History Today ಮಾರ್ಚ್ 03

2020: ನೋಯ್ಡಾ: ವಿದ್ಯಾರ್ಥಿಯೊಬ್ಬನ ಹೆತ್ತವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನೋಯ್ಡಾದ ೧೩೫ನೇ ಸೆಕ್ಟರ್ನಲ್ಲಿ ಇರುವ ಶ್ರೀರಾಮ ಮಿಲೆನಿಯಂ ಶಾಲೆಯ ಆವರಣವನ್ನು ಎರಡು ದಿನಗಳ ಅವಧಿಗೆ ಮುಚ್ಚಲು ಮತ್ತು ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲು 2020 ಮಾರ್ಚ್ 03ರ ಮಂಗಳವಾರ ನಿರ್ಧರಿಸಲಾಯಿತು. ಶಾಲೆಯ ಒಟ್ಟು ೪೦ ಮಂದಿ ವಿದ್ಯಾರ್ಥಿಗಳನ್ನು ವೈರಸ್ ಸಲುವಾಗಿ ಪರೀಕ್ಷಿಸಲಾಗಿದ್ದು, ಅವೆರಲ್ಲರನ್ನು ೨೮ ದಿನಗಳ ಅವಧಿಗೆ ಏಕಾಂಗಿವಾಸಕ್ಕೆ ಕಳುಹಿಸಲಾಗಿದೆ ಎಂದು ಗೌತಮ ಬುದ್ಧ ನಗರದ ಮುಖ್ಯ ವೈದ್ಯಾಧಿಕಾರಿ ಹೇಳಿದರು. ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಶಾಲಾ ಅಧಿಕಾರಿಯೊಬ್ಬರು ಕೂಡಾ ಮಾಧ್ಯಮ ಒಂದಕ್ಕೆ ಬೆಳವಣಿಗೆಗಳನ್ನು ಖಚಿತ ಪಡಿಸಿದರು. ಹೌದು, ಕೋವಿಡ್-೧೯ರ ಸದರಿ ರೋಗಿಯು ನಮ್ಮ ವಿದ್ಯಾರ್ಥಿಯೊಬ್ಬನ ಪಾಲಕರಾಗಿದ್ದಾರೆ. ನಾವು ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿ ಮೇಲೆ ನಿಗಾ ಇಡುವ ಸಲುವಾಗಿ ಆರೋಗ್ಯ ಸಚಿವಾಲಯದ ಜೊತೆಗೆ ಸತತ ಸಂಪರ್ಕ ಹೊಂದಿದ್ದೇವೆ ಎಂದು ಹಿರಿಯ ಶಾಲಾ ಅಧಿಕಾರಿ ನುಡಿದರು. ಶಾಲೆಯನ್ನು ಪ್ರಸ್ತುತ ಎರಡು ದಿನಗಳ ಅವಧಿಗೆ ಮುಚ್ಚಲಾಗುವುದು. ಅವಧಿಯಲ್ಲಿ ಶಾಲಾ ಆವರಣವನ್ನು ಶುಚಿಗೊಳಿಸಲಾಗುವುದು. ಶಾಲೆಯ ಶುಚೀಕರಣದ ಪ್ರಕ್ರಿಯೆಯು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ಒಂದು ಕೊಠಡಿಯನ್ನು ಶುಚೀಕರಿಸಲು ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಬೇಕಾಗುತ್ತದೆ. ನಮ್ಮ ವೈದ್ಯಕೀಯ ತಂಡವು ಚಿಕಿತ್ಸೆಯ ಬಗ್ಗೆ ಶಾಲೆಗೆ ತಿಳಿಸಿದೆ ಎಂದು ಗೌತಮ್ ಬುದ್ದ ನಗರದ ಮುಖ್ಯ ವೈದ್ಯಾಧಿಕಾರಿ ಅನುರಾಗ್ ಭಾರ್ಗವ್ ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಬಗ್ಗೆ ಜನರು ಭಯಭೀತರಾಗಬೇಕಾದ ಅಥವಾ ಗಾಬರಿಯಾಗಬೇಕಾದ ಅಗತ್ಯವಿಲ್ಲ ಎಂದು 2020 ಮಾರ್ಚ್ 03ರ ಮಂಗಳವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು.ರಾಷ್ಟ್ರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತಪಟ್ಟ ಒಂದು ದಿನದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ, ಪರಿಸ್ಥಿತಿಯ ಬಗ್ಗೆ ತಾವು ಹಲವಾರು ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಜೊತೆ ವಿಶೇಷ ಸಮಾಲೋಚನೆ ನಡೆಸಿದ್ದು, ಕೊರೋನಾವೈರಸ್ ನಿಭಾಯಿಸಲು ವಿವಿಧ ಹಂತಗಳ ಸಿದ್ಧತೆ ಬಗ್ಗೆ ಅವಲೋಕಿಸಿರುವುದಾಗಿ ತಿಳಿಸಿದರು. ಭಯಭೀತರಾಗಬೇಕಾದ ಅಥವಾ ಗಾಬರಿಗೊಳ್ಳಬೇಕಾದ ಅಗತ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ. ಸ್ವಯಂ ರಕ್ಷಣೆಗಾಗಿ ಕೆಲವು ಸಣ್ಣ ಆದರೆ ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಟ್ವಿಟ್ಟರ್ ಸಂದೇಶದಲ್ಲಿ ಸಲಹೆ ಮಾಡಿದರು. ಮೂಲಭೂತ ರಕ್ಷಣಾತ್ಮಕ ಕ್ರಮಗಳನ್ನು ವಿವರಿಸುವ ಸೂಚನೆಗಳ ಚಿತ್ರವನ್ನು ಕೂಡಾ ಪ್ರಧಾನಿ ಟ್ವೀಟ್ ಮಾಡಿzರು. ಸೋಂಕು ಹರಡದಂತೆ ತಡೆಯಲು- ಆಗಾಗ ಕೈ ತೊಳೆದುಕೊಳ್ಳಬೇಕು ಮತ್ತು ಶೀನು ಮತ್ತು ಕೆಮ್ಮು ಬಂದಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಪೇಪರಿನಿಂದ ಮುಚ್ಚಿಕೊಳ್ಳಬೇಕು ಎಂಬ ಸೂಚನೆಗಳು ಮೂಲಭೂತ ರಕ್ಷಣಾತ್ಮಕ ಸೂತ್ರಗಳಲ್ಲಿ ಸೇರಿವೆ. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತದ ಮೇಲೆ ಒತ್ತಡ ಹೆಚ್ಚಿಸುವ ಸೂಚನೆಯಾಗಿ ಅಸಾಧಾರಣ ಕ್ರಮವೊಂದರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಷನರ್ ಅವರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತಮ್ಮನ್ನೂ ಕಕ್ಷಿದಾರರಾಗಿ ಸೇರಿಸಿಕೊಳ್ಳುವಂತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಲಾಗದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 2020 ಮಾರ್ಚ್ 03ರ ಮಂಗಳವಾರ ಇದಕ್ಕೆ ಎದಿರೇಟು ನೀಡಿತು. ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರರಾಗಿ ಸೇರಿಸಿಕೊಳ್ಳುವಂತೆ ಸಲ್ಲಿಸಿದ ಅರ್ಜಿಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀಷನರ್, ಚಿಲಿಯ ಮಾಜಿ ಅಧ್ಯಕ್ಷರಾದ ಮಿಶೆಲ್ ಬಚ್ಲೆಟ್ ಅವರು ಕಾನೂನಿನಲ್ಲಿ ಮಾಡಲಾಗಿರುವ ತಾರತಮ್ಯಗಳು ಆಕ್ಷೇಪಾರ್ಹವಾದವುಗಳು ಎಂದು ಹೇಳಿದ್ದಾರೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಧ್ಯಕ್ಷರ ಕ್ರಮಕ್ಕೆ ತೀಕ್ಷ್ಣ ಪದಗಳನ್ನು ಬಳಸಿದ ಹೇಳಿಕೆ ಮೂಲಕ ಎದಿರೇಟು ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಆಂತರಿಕ ವಿಷಯವಾಗಿದೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾರೇ ವಿದೇಶೀ ಕಕ್ಷಿದಾರರಿಗೆ ಯಾವುದೇ ಸ್ಥಾನಾಧಿಕಾರವೂ (ಲೋಕಸ್ ಸ್ಟಾಂಡಿ) ಇರುವುದಿಲ್ಲ ಎಂದು ಹೇಳಿತು.. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ವೇಳೆಯಲ್ಲಿ ಜಾಫ್ರಾಬಾದಿನಲ್ಲಿ ಪೊಲೀಸರತ್ತ ಪಿಸ್ತೂಲ್ ಗುರಿ ಹಿಡಿದಿದ್ದ ಯುವಕನನ್ನು ದೆಹಲಿ ಅಪರಾಧ ಶಾಖೆಯ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಾರುಖ್ ಎಂಬುದಾಗಿ ಗುರುತಿಸಲಾಗಿರುವ ವ್ಯಕ್ತಿಯನ್ನು ಉತ್ತರ ಪ್ರದೇಶದ ಶಾಮ್ಲಿಯಲ್ಲಿ 2020 ಮಾರ್ಚ್ 03ರ ಮಂಗಳವಾರ ಬಂಧಿಸಲಾಯಿತು.  ವ್ಯಕ್ತಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ, ಸಿಟ್ಟಿನ ಭರದಲ್ಲಿ ತಾನು ಗುಂಡು ಹಾರಿಸಿದುದಾಗಿ ಈತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು.  ಬಂಧಿತ ವ್ಯಕ್ತಿ ಪಿಸ್ತೂಲ್ ಹಿಡಿದು ಫೆಬ್ರುವರಿ ೨೪ರಂದು ಜಾಫ್ರಾಬಾದ್ ರಸ್ತೆಗಳಲ್ಲಿ ನಡೆದಾಡುತ್ತಿದ್ದುದು ಕಂಡು ಬಂದಿತ್ತು. ಪರಾರಿಯಾಗುವ ಮುನ್ನ ಪೊಲೀಸ್ ಅಧಿಕಾರಿಯ ಎದುರಲ್ಲೆ ಈತ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಈತ ಪೊಲೀಸರತ್ತ ಪಿಸ್ತೂಲ್ ಗುರಿ ಹಿಡಿದ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈತ ಬಳಸಿದ್ದ ಪಿಸ್ತೂಲ್ ಪತ್ತೆ ಹಚ್ಚಲು ನಾವು ಯತ್ನಿಸುತ್ತಿದ್ದೇವೆ. ಸಿಟ್ಟಿನ ಭರದಲ್ಲಿ ತಾನು ಗುಂಡು ಹಾರಿಸಿದ್ದಾಗಿ ಶಾರೂಕ್ ಹೇಳಿದ್ದಾನೆ. ಈತನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಗಳು ಇಲ್ಲ. ಆದರೆ ಈತನ ತಂದೆಯ ವಿರುದ್ಧ ಮಾದಕ ದ್ರವ್ಯ ಮತ್ತು ಖೋಟಾ ನೋಟಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ ಎಂದು ಅಪರಾಧ ಶಾಖೆಯ ಅಡಿಷನಲ್ ಕಮೀಷನರ್ ಆಫ್ ಪೊಲೀಸ್ ಅಜಿತ್ ಕುಮಾರ್ ಸಿಂಘಾಲ ಹೇಳಿದರುಬಂಧಿಸಿದ ಬಳಿಕ ಶಾರೂಕ್ನನ್ನು ಕೇಂದ್ರ ದೆಹಲಿಯ ಐಟಿಒದಲ್ಲಿನ ದೆಹಲಿ ಪೊಲೀಸರ ಹಳೆ ಕೇಂದ್ರ ಕಚೇರಿಗೆ ಕರೆತರಲಾಗಿದೆ. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ರಾಜಸ್ಥಾನದ ಜೈಪುರ ಆಸ್ಪತ್ರೆಗೆ ದಾಖಲಾಗಿರುವ ಇಟಲಿ ಪ್ರವಾಸಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಮೂಲಗಳು 2020 ಮಾರ್ಚ್ 03ರ ಮಂಗಳವಾರ ತಿಳಿಸಿದವು.ಇದರೊಂದಿಗೆ ಭಾರತದಲ್ಲಿ ಕೊರೋನಾವೈರಸ್ ದೃಢ ಪಟ್ಟ ಪ್ರಕರಣಗಳ ಸಂಖ್ಯೆ ೬ಕ್ಕೆ ಏರಿತು.  ೬೯ರ ಹರೆಯದ ವ್ಯಕ್ತಿಯನ್ನು ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಏಕಾಂಗಿ ವಾರ್ಡಿಗೆ ದಾಖಲಿಸಲಾಯಿತು.    ಮಧ್ಯೆ, ಜೈಪುರದಿಂದ ಬಂದಿರುವ ಇನ್ನೊಂದು ವರದಿಯ ಪ್ರಕಾರ, ಇಟಲಿ ಪ್ರವಾಸಿಯ ಪತ್ನಿಗೆ ಕೂಡಾ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎನ್ನಲಾಗಿದೆ. ಈಕೆಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಯಿತು.  ಮಹಿಳೆಯ ರಕ್ತದ ಮಾದರಿಯನ್ನು ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಇಲಾಖೆ ತಿಳಿಸಿತು.  ನೌಕಾ ಕವಾಯತು ರದ್ದು: ಏತನ್ಮದ್ಯೆ, ಕೊರೋನಾವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿಶಾಖಪಟ್ಟಣದಲ್ಲಿ ಮಾರ್ಚ್ ೧೮ರಂದು ನಡೆಯಬೇಕಾಗಿದ್ದ ಭಾರತೀಯ ನೌಕಾಪಡೆಯ ಮಿಲನ್ ಬಹುರಾಷ್ಟೀಯ ನೌಕಾಪಡೆ ಕವಾಯತನ್ನು ರದ್ದು ಪಡಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಶ್ರೀನಗರ : ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ವಾಹನಗಳ ಮೇಲೆ Uಗಾಮಿಗಳು ನಡೆಸಿದ್ದ ಮಾನವ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ಗಳಿಗೆ ಸಹಾಯ ಮಾಡಿದ್ದ ತಂದೆ ಹಾಗೂ ಮಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು 2020 ಮಾರ್ಚ್ 03ರ ಮಂಗಳವಾರ ಬಂಧಿಸಿದರು. ಕಳೆದ ನಾಲ್ಕು ದಿನಗಳ ಹಿಂದೆ ಪುಲ್ವಾಮಾ ಹಜಿಬಲ್ ಪ್ರದೇಶ ಮೂಲದ ಪೀರ್ ತಾರೀಕ್ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳು ಇಂಶಾಳನ್ನು ಬಂಧಿಸಲಾಗಿದೆ. ಇವರು ಇಬ್ಬರು ಉಗ್ರರಿಗೆ ಆಶ್ರಯ ನೀಡಿ ಬಾಂಬ್ ತಯಾರಿಸಲು ಸಹಾಯ ಮಾಡಿದ್ದರು ಎನ್ನಲಾಯಿತು. ಮಾನವ ಬಾಂಬ್ ದಾಳಿ ದಳದ ಮುಖ್ಯಸ್ಥ ಅದಿಲ್ ಅಹ್ಮದ್ ದಾರ್ನಿಗೆ ಆಶ್ರಯ ನೀಡಲಾಗಿತ್ತು. ಹಲವು ಬಾರಿ ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು ಎಂದು ವಿಚಾರಣೆ ವೇಳೆ ಪೀರ್ ತಾರೀಕ್ ಬಾಯಿ ಬಿಟಿದ್ದಾನೆ ಎಂದು ಮೂಲಗಳು ಹೇಳಿದವು. ೨೦೧೯ರ ವರ್ಷ ಫೆ.೧೪ರಂದು ಸಿಆರ್ಪಿಎಫ್ ಯೋಧರ ಮೇಲೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೋರ ಎಂಬಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment