ನಾನು ಮೆಚ್ಚಿದ ವಾಟ್ಸಪ್

Saturday, March 21, 2020

ಇಂದಿನ ಇತಿಹಾಸ History Today ಮಾರ್ಚ್ 20

2020: ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ಎದುರಿಸುವ ಮೂಲಕ ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ನೀಡಿದ್ದ ಗಡುವಿಗೆ ಕೆಲವೇ ಗಂಟೆಗಳ ಮುನ್ನ ಮುಖ್ಯಮಂತ್ರಿ ಕಮಲನಾಥ್ ಅವರು 2020 ಮಾರ್ಚ್  20ರ ಶುಕ್ರವಾರ ರಾಜೀನಾಮೆ ನೀಡಿದ್ದು, ಕಾಂಗೆಸ್ ಸರ್ಕಾರ ಪತನಗೊಂಡಿತು. ಬೆನ್ನಲೇ ಬಿಜೆಪಿಯು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಜ್ಜಾಯಿತು. ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರಿಗೆ ನಿಷ್ಠರಾದ ೨೨ ಶಾಸಕರು ರಾಜೀನಾಮೆ ನೀಡುವುದರೊಂದಿಗೆ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದ ರಾಜ್ಯದಲ್ಲಿ 2020 ಮಾರ್ಚ್  20ರ ಶುಕ್ರವಾರ ವಿಧಾನಸಭಾ ಅಧಿವೇಶನಕ್ಕೆ ಆರಂಭಕ್ಕೆ ಮುನ್ನವೇ ಕಮಲನಾಥ್ ಅವರು ರಾಜೀನಾಮೆ ನೀಡುವ ಮೂಲಕ,ಅಧಿಕಾರದ ಹಕ್ಕು ಮಂಡಿಸಲು ಭಾರತೀಯ ಜನತಾ ಪಕ್ಷಕ್ಕೆ ಹಾದಿ ಸುಗಮಗೊಳಿಸಿದರು. ರಾಜ್ಯಪಾಲ ಲಾಲಜಿ ಟಂಡನ್ ಅವರು ಕಮಲನಾಥ್ ಅವರು ರಾಜಭವನಕ್ಕೆ ಆಗಮಿಸಿ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ’ರಾಜ್ಯಪಾಲರು ಕಮಲನಾಥ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಮತ್ತು ನೂತನ ಮುಖ್ಯಮಂತ್ರಿ ಅಧಿಕಾರ ವಹಿಸುವವರೆಗೆ ಉಸ್ತುವಾರಿ ಸಚಿವರಾಗಿ ಮುಂದುವರೆಯುವಂತೆ ಅವರಿಗೆ ಸೂಚಿಸಿದ್ದಾರೆ’ ಎಂದು ರಾಜಭವನದ ಪ್ರಕಟಣೆ ತಿಳಿಸಿತು. ಇದಕ್ಕೂ ಮುನ್ನ ಗುರುವಾರ ರಾತ್ರಿ ತಡವಾಗಿ ವಿಧಾನಸಭಾಧ್ಯಕ್ಷ ಎನ್‌ಪಿ ಪ್ರಜಾಪತಿ ಅವರು ೧೬ ಮಂದಿ ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಪ್ರಜಾಪತಿ ಅವರು ಬಂಡಾಯ ಶಾಸಕರ ರಾಜೀನಾಮೆ ಅಂಗೀಕರಿಸಿದ ಬೆಳವಣಿಗೆಯ ಬಳಿಕ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಮಲನಾಥ್, ’ಬಿಜೆಪಿಯು ಎಂದಿಗೂ ನನ್ನ ಇಚ್ಛಾಶಕ್ತಿಯನ್ನು ಪರಾಭವಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ’ನಾನು ನನ್ನ ಬದುಕಿನುದ್ದಕ್ಕೂ ಮೌಲ್ಯಯುತ ರಾಜಕಾರಣ ನಡೆಸುತ್ತಾ ಬಂದಿದ್ದೇನೆ. ಬಿಜೆಪಿಯು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಶಾಸಕರಿಗೆ ರಾಜೀನಾಮೆ ನೀಡಲು ಇದ್ದ ಒತ್ತಡ ಏನು ಎಂಬುದನ್ನು ಕಾಲವೇ ಹೇಳಲಿದೆ’ ಎಂದು ನುಡಿದ ಕಮಲನಾಥ್ ’ನಾನು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಪ್ರಕಟಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕೊರೋನಾವೈರಸ್ ಸೋಂಕಿನ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨೨ರ  ಭಾನುವಾರ ವಿಧಿಸಿಕೊಳ್ಳಲು ಕರೆಕೊಟ್ಟಿರುವ ’ಜನತಾ ಕರ್ಫ್ಯೂ’ಗೆ ವ ಸರ್ವ ಪಕ್ಷಗಳೂ ಸೇರಿ ವ್ಯಾಪಕ ಬೆಂಬಲ ವ್ಯಕ್ತವಾಗುತಿದ್ದಂತೆಯೇ  2020 ಮಾರ್ಚ್  20ರ ಶುಕ್ರವಾರ ಐದನೇ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ೨೨೩ಕ್ಕೆ ಏರಿತು. ಸಾಂಕ್ರಾಮಿಕ ಪಿಡುಗು ಹರಡದಂತೆ ತಡೆಯುವ ಸಲುವಾಗಿ ಪ್ರಧಾನಿ ನೀಡಿದ ’ಜನತಾ ಕರ್ಫ್ಯೂವಿಗೆ ಸರ್ವ ಪಕ್ಷಗಳೂ ಬೆಂಬಲ ನೀಡಿದ್ದು ವಿವಿಧ ಸಂಘಸಂಸ್ಥೆಗಳು, ಸಾರಿಗೆ ಸಂಸ್ಥೆಗಳೂ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳುವುದಾಗಿ ಪ್ರಕಟಿಸಿವೆ. ಭಾರತೀಯ ರೈಲ್ವೇಯು ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ ೧೦ಗಂಟೆಯವರೆ ಎಲ್ಲ ಪ್ರಯಾಣಿಕರ ರೈಲುಗಳ ಪಯಣವನ್ನು ರದ್ದು ಪಡಿಸಲಾಗುವುದು ಎಂದು 2020 ಮಾರ್ಚ್  20ರ ಶುಕ್ರವಾರ ಪ್ರಕಟಿಸಿತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮುಂಬೈಯ ಎಲ್ಲ ಕಚೇರಿಗಳನ್ನೂ ಮಾರ್ಚ್ ೩೧ರವರೆಗೆ ಮುಚ್ಚಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಕಟಿಸಿದರು.ಜನತಾ ಕರ್ಫ್ಯೂವಿಗೆ ಸರ್ವ ಪಕ್ಷಗಳೂ ಬೆಂಬಲ ಘೋಷಿಸಿದ್ದನ್ನು ಲೋಕಸಭಾಧ್ಯಕ್ಷ ಓ ಬಿರ್ಲಾ ಅವರು ಲೋಕಸಭೆಯಲ್ಲಿ ಪ್ರಕಟಿಸಿ ಎಲ್ಲರಿಗೋ ಧನ್ಯವಾದ ಅರ್ಪಿಸಿದರು. ಇದೇ ವೇಳೆಗೆ ಭಾರತದಲ್ಲಿ ಇಟಲಿಯ ನಾಗರಿಕನೊಬ್ಬ ಕೊರೋನಾವೈರಸ್ಸಿಗೆ ಬಲಿಯಾಗಿದ್ದು, ದೇಶದಲ್ಲಿ ಸಾವಿನ ಸಂಖ್ಯೆಯನ್ನು ೫ಕ್ಕೆ ಏರಿಸಿದೆ. ದೇಶದ ಹಲವಡೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೨೩ಕ್ಕೆ ಏರಿತು. ಕೊರೋನಾವೈರಸ್ ಸೋಂಕಿಗೆ ಒಳಗಾಗಿ ಮೂರು ದಿನಗಳ ಹಿಂದೆ ಚೇತರಿಸಿಕೊಂಡಿದ್ದ ಇಟಲಿಯ ಪ್ರಜೆ ಶುಕ್ರವಾರ ಜೈಪುರದಲ್ಲಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. ಕೊರೋನಾಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭಾರತದಾದ್ಯಂತ ಸಾರ್ವಜನಿಕ ಸಭೆ, ಸಮಾರಂಭಗಳ ನಿಷೇಧ, ಭಾನುವಾರದಿಂದ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಬಂದ್ ಮತ್ತು ಶಾಲೆ, ಕಾಲೇಜುಗಳಿಗೆ ರಜೆ ಸಾರುವ ಮೂಲಕ ದೇಶದಲ್ಲಿ ಸರ್ಕಾರ ಬಹುತೇಕ ’ಲಾಕ್ ಡೌನ್’ ವಿಧಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ೨೦೧೨ರ ಡಿಸೆಂಬರ್ ೧೬ ರಂದು ದೆಹಲಿ ಚಲಿಸುವ ಬಸ್ಸಿನಲ್ಲೆ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರು ಅಪರಾಧಿಗಳನ್ನು 2020 ಮಾರ್ಚ್  20ರ ಶುಕ್ರವಾರ  ಬೆಳಕು ಹರಿಯುವ ಮುನ್ನವೇ ಏಕಕಾಲಕ್ಕೆ ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಯಿತು, ಇದರೊಂದಿಗೆ ಭಾರತದ ಅಂತಃಕರಣವನ್ನೇ ಕಲಕಿದ್ದ, ಸುದೀರ್ಘ ಲೈಂಗಿಕ ದೌರ್ಜನ್ಯ ಇತಿಹಾಸದ ಭಯಾನಕ ಅಧ್ಯಾಯ ಕೊನೆಗೊಂಡಿತು. ಚಲಿಸುತ್ತಿದ್ದ ಬಸ್ಸಿನಲ್ಲಿ ಮಾಧ್ಯಮಗಳು ’ನಿರ್ಭಯಾ’ ಎಂಬುದಾಗಿ ಗುರುತಿಸಿದ ಯುವತಿಯ ಮೇಲೆ ನಡೆದ ಘೋರ ಕೃತ್ಯಕ್ಕಾಗಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗಳಾದ ಮುಕೇಶ್ ಸಿಂಗ್ (೩೨), ಪವನ್ ಗುಪ್ತಾ (೨೫), ವಿನಯ್ ಶರ್ಮಾ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ಬೆಳಗ್ಗೆ ೫.೩೦ ಗಂಟೆಗೆ ನೇಣಿಗೆ ಏರಿಸಲಾಯಿತು.  "ವೈದ್ಯರು ಶವಗಳನ್ನು ಪರೀಕ್ಷಿಸಿದ್ದಾರೆ ಮತ್ತು ಎಲ್ಲಾ ೪ ಮಂದಿಯೂ ಮೃತರಾಗಿರುವುದಾಗಿ ಘೋಷಿಸಿದ್ದಾರೆ" ಎಂದು ತಿಹಾರ್ ಸೆರೆಮನೆಯ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಹೇಳಿದರು. ಸೆರೆಮನೆ ಕೈಪಿಡಿಯ ಪ್ರಕಾರ ಮರಣದಂಡನೆಯ ನಂತರ ಕಡ್ಡಾಯವಾಗಿ ಅರ್ಧ ಘಂಟೆಯವರೆಗೆ ನೇಣು ಬಿಗಿಯಲಾಗಿತ್ತು ಎಂದು ಸೆರೆಮನೆ ಅಧಿಕಾರಿಗಳು ತಿಳಿಸಿದರು. ೧೬,೦೦೦ ಕ್ಕೂ ಹೆಚ್ಚು ಕೈದಿಗಳನ್ನು ಹೊಂದಿರುವ, ದಕ್ಷಿಣ ಏಷ್ಯಾದ ಅತಿದೊಡ್ಡ ಸೆರೆಮನೆ ಸಂಕೀರ್ಣವಾದ ತಿಹಾರ್ ಜೈಲಿನಲ್ಲಿ ನಾಲ್ಕು ಜನರನ್ನು ಒಟ್ಟಿಗೆ ಗಲ್ಲಿಗೇರಿಸಿದ್ದು ಇದೇ ಮೊದಲು. ಗಲ್ಲು ಶಿಕ್ಷೆಯಿಂದ ಪಾರಾಗಲು ಸಾಧ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಕೆ ಮಾಡಿಕೊಂಡ ಬಳಿಕ ಅಪರಾಧಿಗಳನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಗಲ್ಲು ಜಾರಿಗೆ ಮೊದಲ ದಿನಾಂಕವನ್ನು ಜನವರಿ ೨೨ ಕ್ಕೆ ನಿಗದಿಪಡಿಸಿದ ನಂತರ ಗಲ್ಲಿನಿಂದ ಪಾರಾಗಲು ಹತಾಶ ಪ್ರಯತ್ನಗಳನ್ನು ಅಪರಾಧಿಗಳು ನಡೆಸಿದ ಪರಿಣಾಮವಾಗಿ ಗಲ್ಲು ಜಾರಿ ಸುಮಾರು ಎರಡು ತಿಂಗಳ ಕಾಲ ಮುಂದಕ್ಕೆ ಹೋಗಿತ್ತು. ಜೀವ ಉಳಿಸಿಕೊಳ್ಳುವ ಕಟ್ಟ ಕಡೆಯ ಯತ್ನವಾಗಿ ಅಪರಾಧಿಗಳಲ್ಲಿ ಒಬ್ಬಾತ ಗಲ್ಲಿಗೇರಿಸುವುದಕ್ಕೆ ಕೆಲವೇ ಗಂಟೆಗಳ ಮೊದಲು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬಾಗಿಲನ್ನು ಕೂಡಾ ಬಡಿದಿದ್ದ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 20  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Post a Comment