2020: ನವದೆಹಲಿ:
ಮಾರಕ ಕೊರೋನಾವೈರಸ್ ಅಥವಾ ಕೋವಿಡ್ -೧೯ ಸೋಂಕಿಗೆ ಒಳಗಾಗಿರುವವರ
ಸಂಖ್ಯೆ ಭಾರತದಲ್ಲಿ ೩೧ಕ್ಕೆ
ತಲುಪಿದ್ದು, ಸೋಂಕು ಇನ್ನಷ್ಟು ವ್ಯಾಪಿಸದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರವು ತನ್ನ ನೌಕರರ ಹಾಜರಾತಿಯನ್ನು ದಾಖಲಿಸಲು ಜಾರಿಗೊಳಿಸಿದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನು 2020 ಮಾರ್ಚ್ 06ರ ಶುಕ್ರವಾರ ಕೈಬಿಟ್ಟು ಹಳೆಯ
ರಿಜಿಸ್ಟರ್ ವ್ಯವಸ್ಥೆಗೆ ಮರಳಿತು. ಕೊರೋನಾವೈರಸ್
ಸೋಂಕು ಹರಡಲು ಕಾರಣವಾಗಬಹುದು ಎಂಬ ಕಾರಣಕ್ಕಾಗಿ ಬಯೋಮೆಟ್ರಿಕ್ ದಾಖಲಾತಿಯಿಂದ ತನ್ನ ನೌಕರರಿಗೆ ವಿನಾಯ್ತಿ ನೀಡಲು ಕೇಂದ್ರ ನಿರ್ಧರಿಸಿತು. ಬಯೋಮೆಟ್ರಿಕ್ ವ್ಯವಸ್ಥೆಯನ್ನು ೨೦೧೪ರಲ್ಲಿ ಜಾರಿಗೆ ತರಲಾಗಿತ್ತು. ಮಾರ್ಚ್ ೩೧ರವರೆಗೆ ನೌಕರರಿಗೆ ಬಯೋಮೆಟ್ರಿಕ್ ಯಂತ್ರವನ್ನು ಬಳಸುವುದರಿಂದ ವಿನಾಯ್ತಿ ನೀಡಲಾಗಿದೆ ಎಂದು ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾನವ ಸಂಪನ್ಮೂಲ ಮ್ಯಾನೇಜರ್ ಶುಕ್ರವಾರ ಹೊರಡಿಸಿದ ಆದೇಶ ತಿಳಿಸಿತು. ‘ಆದಾಗ್ಯೂ, ಎಲ್ಲ ನೌಕರರೂ ಈ ಅವಧಿಯಲ್ಲಿ ಹಾಜರಾತಿ
ಪುಸ್ತಕದಲ್ಲಿ (ಅಟೆಂಡೆನ್ಸ್ ರಿಜಿಸ್ಟರ್) ತಮ್ಮ ಹಾಜರಾತಿಯನ್ನು ದಾಖಲಿಸಬೇಕು’ ಎಂದು
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಜಯ್ ಕುಮಾರ್ ಸಿಂಗ್ ಅವರು ಹೊರಡಿಸಿದ ಆದೇಶದ ಸುತ್ತೋಲೆ ತಿಳಿಸಿತು. ದೇಶದಲ್ಲಿ ಕೊರೋನಾವೈರಸ್ ಸೋಂಕು ದೃಢ ಪಟ್ಟಿರುವ ಸಂಖ್ಯೆ ಕೇವಲ ೩೧ರಷ್ಟು ಸಣ್ಣ ಪ್ರಮಾಣದ್ದಾಗಿದ್ದರೂ, ಮುಂಜಾಗರೂಕತಾ ಕ್ರಮವಾಗಿ ಬಯೋಮೆಟ್ರಿಕ್ ದಾಖಲಾತಿ ವಿನಾಯ್ತಿಯನ್ನು ನೀಡಲಾಗುತ್ತಿದೆ ಸಿಂಗ್ ಅವರ ಸುತ್ತೋಲೆ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬನಾದ ಮುಕೇಶ್ ಸಿಂಗ್ 2020 ಮಾರ್ಚ್ 06ರ ಶುಕ್ರವಾರ ಮತ್ತೆ ಸುಪ್ರೀಂಕೋರ್ಟ್
ಮೆಟ್ಟಿಲೇರಿದ್ದು ತನ್ನ ಎಲ್ಲ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಪುನಸ್ಥಾಪಿಸಬೇಕು ಎಂದು ಕೋರಿದ. ತನ್ನ ವಕೀಲರು ತನ್ನನ್ನು ದಾರಿ ತಪ್ಪಿಸಿದರು ಎಂದೂ ಆತ ಆಪಾದಿಸಿದ. ಕೇಂದ್ರ
ಸರ್ಕಾರ, ದೆಹಲಿ ಸರ್ಕಾರ ಮತ್ತು ಪ್ರಕರಣದಲ್ಲಿ ಕೋರ್ಟ್ ಸಹಾಯಕರಾಗಿದ್ದ (ಅಮಿಕಸ್ ಕ್ಯೂರಿ) ವಕೀಲೆ ವೃಂದಾ ಗ್ರೋವರ್
ಅವರು ಹೂಡಿದ ಕ್ರಿಮಿನಲ್ ಸಂಚಿನ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಎಂದು ವಕೀಲ ಎಂ.ಎಲ್. ಶರ್ಮ
ಮೂಲಕ ಸಲ್ಲಿಸಲಾದ ಮನವಿಯಲ್ಲಿ ಮುಕೇಶ್ ಸಿಂಗ್ ಕೋರಿದ. ದೆಹಲಿಯ ವಿಚಾರಣಾ ನ್ಯಾಯಾಲಯವು ಗುರುವಾರ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಿ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ಮಾರ್ಚ್ ೨೦ರ ಬೆಳಗ್ಗೆ ೫.೩೦ಕ್ಕೆ ಗಲ್ಲಿಗೇರಿಸಲು
ದಿನಾಂಕ ನಿಗದಿ ಪಡಿಸಿತ್ತು. ‘ಅರ್ಜಿದಾರನು (ಮುಕೇಶ್) ಪ್ರತಿವಾದಿ -೧ (ಗೃಹ ವ್ಯವಹಾರಗಳ
ಸಚಿವಾಲಯ), ಪ್ರತಿವಾದಿ -೨ (ದೆಹಲಿ ಸರ್ಕಾರ) ಮತ್ತು
ಪ್ರತಿವಾದಿ -೩ (ವೃಂದಾ ಗ್ರೋವರ್)
ಮತ್ತು ಸೆಷನ್ಸ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನಲ್ಲಿ ಅರ್ಜಿದಾರನ ಡೆತ್ ವಾರಂಟ್ ಪ್ರಕರಣದಲ್ಲಿ ಹಾಜರಾಗಿದ್ದ ಇನ್ನೊಬ್ಬ ವಕೀಲ- ಇವರು ಹೂಡಿದ ಕ್ರಿಮಿನಲ್ ಸಂಚು ಮತ್ತು ವಂಚನೆಯ ಬಲಿಪಶು’ ಎಂಬುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್ ವಹಿವಾಟಿನ ಮೇಲೆ ಮಿತಿ ವಿಧಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಠೇವಣಿದಾರರು ಚಿಂತಿತರಾಗಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮಾರ್ಚ್ 06ರ ಶುಕ್ರವಾರ ಭರವಸೆ
ನೀಡಿದರು. ‘ನಾವು
ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ. ಈಗ ಆರ್ಬಿಐ
ಯೋಜನೆಯೊಂದನ್ನು ರೂಪಿಸಿದ್ದು, ಆದಷ್ಟೂ ಶೀಘ್ರದಲ್ಲೇ ಬಿಕ್ಕಟ್ಟು ಇತ್ಯರ್ಥವಾಗಲಿದೆ. ಆರ್ಬಿಐ ಮತ್ತು ಸರ್ಕಾರ ವಿಷಯದ ಬಗ್ಗೆ ನಿಗಾ ಇಟ್ಟಿವೆ, ಭೀತರಾಗುವ ಅಥವಾ ಗಾಬರಿಯಾಗುವ ಅಗತ್ಯವಿಲ್ಲ, ನಿಮ್ಮ ಹಣ ಸುಭದ್ರವಾಗಿದೆ ಎಂಬುದಾಗಿ
ಠೇವಣಿದಾರರು ಮತ್ತು ಹೂಡಿಕೆದಾರರಿಗೆ ಭರವಸೆ ನೀಡಯಬಯಸುತ್ತೇನೆ’ ಎಂದು
ಸೀತಾರಾಮನ್ ನುಡಿದರು. ‘ಪ್ರತಿಯೊಬ್ಬರ ಹಿತವನ್ನು ಗಮನಿಸಿ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಬಿಕ್ಕಟ್ಟಿಗೆ ಪರಿಹಾರ ಲಭಿಸಲಿದೆ ಎಂದು ಆರ್ಬಿಐ ಭರವಸೆ ಕೊಟ್ಟಿದೆ ಎಂದು ಸಚಿವರು ಹೇಳಿದರು. ‘೫೦,೦೦೦ ರೂಪಾಯಿಗಳ
ಮಿತಿ ವಿಧಿಸಲಾಗಿದ್ದರೂ, ತುರ್ತು ಕಾರಣಕ್ಕಾಗಿ ಹೆಚ್ಚಿನ ಹಣದ ಅಗತ್ಯ ಇರುವವರು ಕೇಂದ್ರೀಯ ಬ್ಯಾಂಕ್ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸಬಹುದು’ ಎಂದೂ
ಸಚಿವರು ನುಡಿದರು. ೩೦ ದಿನಗಳ ಮಿತಿಯೊಳಗೆ
ಯೆಸ್ ಬ್ಯಾಂಕ್ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇದಕ್ಕೆ ಮುನ್ನ ಹೇಳಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಣೆ ಎಂಬುದಾಗಿ ಕಾಂಗ್ರೆಸ್
ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೂರಿದ ಬೆನ್ನಲ್ಲೇ ಅವರಿಗೆ ಎದಿರೇಟು ನೀಡಿದ ಬಿಜೆಪಿ ನಾಯಕ, ಪಕ್ಷದ ಐಟಿ ಉಸ್ತುವಾರಿ
ನೋಡಿಕೊಳ್ಳುತ್ತಿರುವ ಅಮಿತ್ ಮಾಳವೀಯ ಅವರು ’ಹಾಲಿ ಬಿಕ್ಕಟ್ಟಿಗೆ ಕಾಂಗ್ರೆಸ್ ಹೊಣೆ’ ಎಂದು 2020 ಮಾರ್ಚ್ 06ರ ಶುಕ್ರವಾರ ದೂಷಿಸಿದರು.
‘ಭಾರತದ ಆರ್ಥಿಕತೆಯ ನಾಶಕ್ಕೆ ನರೇಂದ್ರ ಮೋದಿ ಸರ್ಕಾರವೇ ಹೊಣೆ ಎಂಬುದಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು ಇತ್ತೀಚಿನ ಯೆಸ್ ಬ್ಯಾಂಕ್ ಬಿಕ್ಕಟ್ಟನ್ನು ಉಲ್ಲೇಖಿಸಿದ್ದರು. ‘ನೋ
ಯೆಸ್ ಬ್ಯಾಂಕ್. ಮೋದಿ ಅಂಡ್ ಹೀಸ್ ಐಡಿಯಾಸ್ ಹ್ಯಾವ್ ಡಿಸ್ಟ್ರಾಯ್ಡ್ ಇಂಡಿಯಾ’ಸ್ ಇಕಾನಮಿ ’ (ನೊ
ಯೆಸ್ ಬ್ಯಾಂಕ್. ಮೋದಿಯವರು ತಮ್ಮ ಕಲ್ಪನೆಗಳ ಮೂಲಕ ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ.)# ನೋಬ್ಯಾಂಕ್’
ಎಂಬುದಾಗಿ ರಾಹುಲ್ ಟ್ವೀಟ್ ಮಾಡಿದ್ದರು. ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಮಾಳವೀಯ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಭಾರತೀಯ ಬ್ಯಾಂಕುಗಳ ದುರವಸ್ಥೆ ಮತ್ತು ಈಗಿನ ಆರ್ಥಿಕ ಪರಿಸ್ಥಿತಿಗೆ ದೂಷಿಸಬೇಕಾಗಿದೆ ಎಂದು ಹೇಳಿದರು. ‘ನೋ ರಾಹುಲ್, ಅದು
ಪಿ. ಚಿದಂಬರಂ, ನಿಮ್ಮ ಮಾಜಿ ವಿತ್ತ ಸಚಿವರು ಭಾರತದ ಬ್ಯಾಂಕುಗಳ ಈಗಿನ ದುರವಸ್ಥೆ ಮತ್ತು ಹಾಲಿ ಆರ್ಥಿಕ ಸಮಸ್ಯೆಗೆ ಕಾರಣ’ ಎಂದು ಮಾಳವೀಯ ಟ್ವೀಟ್ ಮಾಡಿದರು. ತಮ್ಮ
ಆಪಾದನೆಯನ್ನು ಪುಷ್ಟೀಕರಿಸಲು ಮಾಳವೀಯ ಅವರು ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರ ವಿಡಿಯೋ ಒಂದನ್ನೂ ಟ್ವೀಟ್ಗೆ ಜೋಡಿಸಿ ಪೋಸ್ಟ್
ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment