2020: ನವದೆಹಲಿ:
ಕೊರೋನಾ ವೈರಸ್ ಸೋಂಕು ಇನ್ನೂ ಒಬ್ಬರಿಗೆ ತಗುಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ೮೪ಕ್ಕೆ ಏರುತ್ತಿದ್ದಂತೆಯೇ ’ಕೋವಿಡ್-೧೯’ನ್ನು ’ವಿಪತ್ತು’ ಎಂಬುದಾಗಿ 2020 ಮಾರ್ಚ್ 14ರ ಶನಿವಾರ ಅಧಿಸೂಚನೆ
ಹೊರಡಿಸಿದ ಕೇಂದ್ರ ಸರ್ಕಾರ ಎಲ್ಲ ಕೊರೋನಾವೈರಸ್ ಸಾವುಗಳಿಗೂ ’ರಾಜ್ಯ ವಿಪತ್ತು ಪರಿಹಾರ ನಿಧಿ’ಯಿಂದ (ಎಸ್‌ಡಿಆರ್‌ಎಫ್) ೪ ಲಕ್ಷ ರೂಪಾಯಿಗಳ
ಎಕ್ಸ್- ಗ್ರಾಷಿಯಾ ನೀಡುವುದಾಗಿ ಪ್ರಕಟಿಸಿತು. ಇದೇ
ವೇಳೆಗೆ ಭಾರತದಲ್ಲಿ ೭ ಮಂದಿ ಕೊರೋನಾವೈರಸ್
ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಗುಣಮುಖರಾದವರ ಸಂಖ್ಯೆ ೧೦ಕ್ಕೆ ಏರಿದ ಸಂತಸದ ವರ್ತಮಾನವೂ ಬಂದಿತು. ಜಗತ್ತಿನಾದ್ಯಂತ
ಕೊರೋನಾವೈರಸ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ದೇಶಗಳ ಮಧ್ಯೆ ಗಡಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಿ ಸೋಂಕು ಹರಡದಂತೆ ತಡೆಯುವ ಯತ್ನಗಳನ್ನು ತೀವ್ರಗೊಳಿಸಲಾಯಿತು. ‘ಭಾರತದಲ್ಲಿ ಕೋವಿಡ್-೧೯ ವ್ಯಾಪಕಗೊಳ್ಳುತ್ತಿರುವುದನ್ನು ಅನುಸರಿಸಿ ಮತ್ತು ಕೋವಿಡ್ -೧೯ನ್ನು ಸಾಂಕ್ರಾಮಿಕ ಪಿಡುಗು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್‌ಒ) ಘೋಷಿಸಿದ್ದನ್ನು ಅನುಸರಿಸಿ
ಕೇಂದ್ರ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡಲು ಸಾಧ್ಯವಾಗುವಂತೆ ಸೋಂಕನ್ನು ’ವಿಪತ್ತು’ ಎಂಬುದಾಗಿ ಅಧಿಸೂಚನೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ’ ಎಂದು
ಗೃಹ ಸಚಿವಾಲಯವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಏಕಕಾಲಿಕ ವಿಶೇಷ ಕ್ರಮವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿತು.
ಪರಿಹಾರ ಕಾರ್ಯಾಚರಣೆಗಳಲ್ಲಿ
ಪಾಲ್ಗೊಂಡ ವ್ಯಕ್ತಿಗಳು ಸೇರಿದಂತೆ ಕೊರೋನಾವೈರಸ್ ಪರಿಣಾಮವಾಗಿ ಮೃತರಾದವರ ಕುಟುಂಬಗಳಿಗೆ ೪ ಲಕ್ಷ ರೂಪಾಯಿಗಳ
ಪರಿಹಾರ (ಎಕ್ಸ್-ಗ್ರಾಷಿಯಾ) ಪಾವತಿ ಮಾಡಲಾಗುವುದು ಎಂದೂ ಪತ್ರದಲ್ಲಿ ತಿಳಿಸಲಾಯಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಮಹಾಮಾರಿ ಕೊರೋನಾವೈರಸ್ ಸೋಂಕು ನಿಗ್ರಹಕ್ಕಾಗಿ ಸಾರ್ಕ್ ನಾಯಕರ ವಿಡಿಯೋ ಕಾನ್ಫರೆನ್ಸ್ (ವಿಡಿಯೋ ಸಂವಾದ) ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಎಲ್ಲ ಸಾರ್ಕ್ ನಾಯಕರು ಸ್ಪಂದಿಸಿದ್ದು, 2020 ಮಾರ್ಚ್ ೧೫ರ ಭಾನುವಾರ ವಿಡಿಯೋ ಕಾನ್ಫರೆನ್ಸ್ ನಡೆಯುವ ನಿರೀಕ್ಷೆ ಇದೆ ಎಂದು ಸುದ್ದಿ ಮೂಲಗಳು 2020 ಮಾರ್ಚ್ 14ರ ಶನಿವಾರ ತಿಳಿಸಿದವು. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಎಲ್ಲ ಏಳೂ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಾಡಿದ್ದ ಸಲಹೆಯನ್ನು ಅನುಮೋದಿಸಿದ್ದಾರೆ. ಪಾಕಿಸ್ತಾನ ಕೂಡಾ ಸಲಹೆಗೆ ಒಪ್ಪಿಗೆ ಸೂಚಿಸಿದ್ದು ತನ್ನ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳುವರು ಎಂದು ಹೇಳಿತು. ೨೦೧೬ರಲ್ಲಿ ಇಸ್ಲಾಮಾಬಾದಿನಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಶೃಂಗಸಭೆಯು ಕಾಶ್ಮೀರದ ಉರಿಯಲ್ಲಿ ನಡೆದ ಭಾರತದ ಸೇನಾ ಶಿಬಿರದ ಮೇಲೆ ನಡೆದ ಪಾಕ್ ಮೂಲದ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ರದ್ದಾದ ಬಳಿಕ ಸಾರ್ಕ್ ಸಮೂಹವು ಬಹುತೇಕ ನಿಷ್ಕ್ರಿಯವಾಗಿತ್ತು. ಆ ಬಳಿಕ, ಭಾರತವು
ಪ್ರಾದೇಶಿಕ ಸಹಕಾರ ವರ್ಧನೆಗಾಗಿ ಬಿಮ್ಸ್ಟೆಕ್ನಂತಹ ಪರ್ಯಾಯ ಸಮೂಹಗಳತ್ತ ಮುಖ
ಮಾಡಿತ್ತು. ಸಾರ್ಕ್ ಸಮೂಹದ ಪ್ರಮುಖ ರಾಷ್ಟ್ರಗಳಾದ ಅಫ್ಘಾನಿಸ್ಥಾನ, ಭೂತಾನ್, ನೇಪಾಳ, ಮಾಲ್ದೀವ್ಸ್ ಮತ್ತು ಶ್ರೀಲಂಕಾ ದೇಶಗಳ ಉನ್ನತ ನಾಯಕರು ಕೋವಿಡ್ -೧೯ ನಿಯಂತ್ರಣಕ್ಕಾಗಿ ಜಂಟಿ
ನೀತಿಯೊಂದನ್ನು ರೂಪಿಸುವ ಬಗೆಗೆ ಪ್ರಧಾನಿ ಮೋದಿ ಅವರು ಮುಂದಿಟ್ಟ ಸಲಹೆಯನ್ನು ಕೆಲವೇ ಗಂಟೆಗಳಲ್ಲಿ ಒಪ್ಪಿದ್ದರು. ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಆರೋಗ್ಯ ಸಲಹೆಗಾರ ಝಾಫರ್ ಮಿರ್ಜಾ ಅವರು ವಿಡಿಯೋ ಕಾನ್ಪರೆನ್ಸಿನಲ್ಲಿ ಪಾಲ್ಗೊಳ್ಳುವರು ಎಂದು ಪಾಕಿಸ್ತಾನವು ಶುಕ್ರವಾರ ಮಧ್ಯರಾತ್ರಿಯ ಬಳಿಕ ಪ್ರಕಟಿಸಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ಪ್ಯಾರಿಸ್/ ಲಂಡನ್: ಕೊರೊನಾ
ವೈರಸ್ಸನ್ನು ತಮಾಷೆ ಮಾಡಿದ್ದ ಫ್ರಾನ್ಸಿನ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ರೂಡಿ ಗಾಬರ್ಟ್ ಸ್ವತಃ, ಸೋಂಕಿಗೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಂಡನ್ನಿನಲ್ಲಿ ನವಜಾತ ಶಿಶುವಿಗೂ ಕೊರೋನಾವೈರಸ್ ಸೋಂಕು ತಗುಲಿರುವುದು 2020 ಮಾರ್ಚ್ 14ರ ಶನಿವಾರ ಪತ್ತೆಯಾಯಿತು. ಅಮೆರಿಕದ ಎನ್ ಬಿಎನಲ್ಲಿ
ಉಟಾಹ್ಜಾಜ್ ತಂಡದ ಪರ ಆಡುತ್ತಿರುವ ರೂಡಿ
ಗಾರ್ಬರ್ಟ್ ಅವರು ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಮೈಕ್, ಧ್ವನಿಮುದ್ರಣ ಉಪಕರಣಗಳನ್ನೆಲ್ಲ ಒಂದೊಂದಾಗಿ ಮುಟ್ಟಿ ನಂಗೇನು ಆಗಲ್ಲ ಎಂದು ಹೇಳಿದ್ದರು. ಆದರೆ, ಬುಧವಾರ ರಾತ್ರಿಯ ವೇಳೆಗೆ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತವಾಯಿತು! ಪರಿಣಾಮವಾಗಿ ಉಟಾಹ್ ಮತ್ತು ಒಕ್ಲಹಾಮ ಸಿಟಿ ನಡುವಿನ ಬಾಸ್ಕೆಟ್ ಬಾಲ್ ಪಂದ್ಯ ರದ್ದಾಯಿತು. ಇಷ್ಟೇ ಅಲ್ಲದೆ ಕಳೆದ ವಾರ ರೂಡಿ ಗೋಬರ್ಟ್ ಬಳಿಯಲ್ಲಿ ಆಟೋಗ್ರಾಫ್ ಪಡೆದಿದ್ದ ಮಗು ಒಂದಕ್ಕೆ ಕೂಡಾ ಕೊರೊನಾ ಸೋಂಕು ಇರುವುದು ಪತ್ತೆಯಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ದೆಹಲಿಯ ಹಲವಡೆಗಳಲ್ಲಿ 2020 ಮಾರ್ಚ್
14ರ ಶನಿವಾರ ಮಧ್ಯಾಹ್ನ
ದಿಢೀರನೆ ಗುಡುಗು ಮಿಂಚು ಸಹಿತವಾದ ಆಲಿಕಲ್ಲಿನ ಭಾರೀ ಮಳೆ ಸುರಿಯಿತು. ಪರಿಣಾಮವಾಗಿ ರಾಷ್ಟ್ರ ರಾಜಧಾನಿಯ ಹಲವಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಾಷ್ಟ್ರದ ರಾಜಧಾನಿಯಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಉಂಟಾಗಿ ತಾಪಮಾನವು ಋತುವಿನ ಸರಾಸರಿಗಿಂತ ೧೬.೪ ಡಿಗ್ರಿ
ಸೆಲ್ಸಿಯಸ್ಗಿಂತ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿತು. ಬೆಳಗ್ಗೆ ೮.೩೦ಕ್ಕೆ ಶೇಕಡಾ
೮೮ರಷ್ಟು ಆರ್ದ್ರತೆಯ ಮಟ್ಟ ದಾಖಲಾಗಿತ್ತು. "ದೆಹಲಿಯ ಮಧ್ಯ ಭಾಗಗಳಲ್ಲಿ ತುಂಬಾ ಚಿಕ್ಕದಾದ, ಆದರೆ ತೀವ್ರವಾದ ಸಂವಹನ ಮೋಡವಿದೆ, ಇದರಿಂದಾಗಿ ಮುಂದಿನ ೨ ಗಂಟೆಗಳಲ್ಲಿ ಗುಡುಗು
ಮತ್ತು ಆಲಿಕಲ್ಲು ಸಹಿತವಾದ ಮಧ್ಯಮ
ಮಳೆಯಾಗುವ ಸಾಧ್ಯತೆಯಿದೆ. ಅದು ನಂತರ ಕಡಿಮೆಯಾಗುತ್ತದೆ’ ಎಂದು
ಭಾರತ ಹವಾಮಾನ ಇಲಾಖೆ (ಐಎಂಡಿ) ಟ್ವೀಟ್ ಮಾಡಿತ್ತು. ಆಕಾಶವು ಮೋಡಮಯವಾಗಿರುತ್ತದೆ ಮತ್ತು ಸಂಜೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿತ್ತು. "ಗರಿಷ್ಠ ತಾಪಮಾನವು ಸುಮಾರು ೨೭ ಡಿಗ್ರಿ ಸೆಲ್ಸಿಯಸ್ವರೆಗೆ ಏರಿ ನೆಲೆಗೊಳ್ಳುವ ಸಾಧ್ಯತೆಯಿದೆ" ಎಂದು ಹವಾಮಾನ ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಮಹಾರಾಷ್ಟ್ರದ ಬಲ್ದಾನ ಜಿಲ್ಲೆಯಲ್ಲಿ ಕೊರೋನಾವೈರಸ್ ಸೋಂಕಿನ ಶಂಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೭೧ರ ಹರೆಯದ ವ್ಯಕ್ತಿ 2020 ಮಾರ್ಚ್ 14ರ ಶನಿವಾರ ಮಧ್ಯಾಹ್ನ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು. ಈ ವ್ಯಕ್ತಿ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರು ಹೇಳಿದ್ದರು. ಸದರಿ ವ್ಯಕ್ತಿ ಸೌದಿ ಅರೇಬಿಯಾದಿಂದ ವಾಪಸಾಗಿದ್ದರು ಮತ್ತು ಕೊರೋನಾವೈರಸ್ ಸೋಂಕು ತಗುಲಿದ ಗುಮಾನಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿ ತಿಳಿಸಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ:
ಮೊಬೈಲ್ ಹ್ಯಾಂಡ್ಸೆಟ್ಗಳ ಮೇಲಿನ ಸರಕು
ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇಕಡಾ ೧೨ರಿಂದ ೧೮ಕ್ಕೆ ಏರಿಸಲು ಕೇಂದ್ರ ಸರ್ಕಾರವು 2020 ಮಾರ್ಚ್ 14ರ ಶನಿವಾರ ನಿರ್ಧರಿಸಿದ್ದು, ಪರಿಣಾಮವಾಗಿ ಮೊಬೈಲ್ ಫೋನುಗಳು ತುಟ್ಟಿಯಾಗುವ ಸಂಭವ ಇದೆ. ಸೆಲ್ಯುಲಾರ್ ಹ್ಯಾಂಡ್ಸೆಟ್ಗಳ ಸರಕು ಮತ್ತು
ಸೇವಾ ತೆರಿಗೆಯನ್ನು (ಜಿಎಸ್ಟಿ) ಈಗಿನ ಶೇಕಡಾ ೧೨ರಿಂದ ಶೇಕಡಾ ೧೮ಕ್ಕೆ ಏರಿಸಲು ರಾಜಧಾನಿಯಲ್ಲಿ ಶನಿವಾರ ನಡೆದ ಜಿಎಸ್ಟಿ ಮಂಡಳಿಯ ೩೯ನೇ
ಸಭೆಯಲ್ಲಿ ನಿರ್ಧರಿಸಲಾಯಿತು. ಕೇಂದ್ರ ವಿತ್ತ
ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು
ಸಚಿವರು ಮತ್ತು ಕೇಂದ್ರ ಹಾಗೂ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. "ವಿಲೋಮ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೊಬೈಲ್ ಹ್ಯಾಂಡ್ಸೆಟ್ಗಳ ಸರಕು ಮತ್ತು
ಸೇವಾ ತೆರಿಗೆಯನ್ನು ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು" ಎಂದು ನಿರ್ಮಲಾ ಸೀತಾರಾಮನ್ ಶನಿವಾರ
ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಮೊಬೈಲ್ಗಳಿಗೆ ಪ್ರಸ್ತುತ ವಿಧಿಸಲಾಗುತ್ತಿರುವ ಸುಂಕವು ಶೇಕಡಾ ೧೨ ಆಗಿದ್ದರೆ, ಅದರ
ಕೆಲವು ಭಾಗಗಳ ಮೇಲೆ ಶೇಕಡಾ ೧೮ರಷ್ಟು ಸುಂಕ ಬೀಳುತ್ತಿದೆ. ಮೊಬೈಲ್ ಫೋನ್ಗಳು, ಪಾದರಕ್ಷೆಗಳು ಮತ್ತು ಜವಳಿ ಸೇರಿದಂತೆ ಐದು ಕ್ಷೇತ್ರಗಳ ತರಿಗೆ
ದರವನ್ನು ಜಿಎಸ್ಟಿ ಮಂಡಳಿಯು ತರ್ಕಬದ್ಧಗೊಳಿಸಬಹುದು
ಎಂದು ಈ ವಾರದ ಆರಂಭದಲ್ಲಿ
ಸುದ್ದಿ ಮೂಲಗಳು ತಿಳಿಸಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment