2020: ಬರೇಲಿ: ಮಾರಕ ಕೊರೋನಾವೈರಸ್ ಸೋಂಕು ಹರಡದಂತೆ ತಡೆಯಲು ಘೋಷಿಸಲಾದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್)ದ ಹಿನ್ನೆಲೆಯಲ್ಲಿ ನಗರಗಳನ್ನು ತ್ಯಜಿಸಿ ಉತ್ತರಪ್ರದೇಶಕ್ಕೆ ಬಂದ ವಲಸೆ ಕಾರ್ಮಿಕರ ಗುಂಪೊಂದನ್ನು ರಸ್ತೆಯಲ್ಲಿ ಕುಳ್ಳಿರಿಸಿ ಕ್ಲೋರಿನ್ ಮಿಶ್ರಿತ ನೀರು ಸಿಂಪಡಿಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಬರೇಲಿ ಜಿಲ್ಲಾ ಆಡಳಿತವು 2020 ಮಾರ್ಚ್ 30ರ ಸೋಮವಾರ ಆಜ್ಞಾಪಿಸಿತು. ವಿರೋಧ ಪಕ್ಷಗಳ ನಾಯಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆಯ ವಿಡಿಯೋ ವೈರಲ್ ಆದ ಬಳಿಕ ಕಾರ್ಮಿಕರನ್ನು ನಡೆಸಿಕೊಂಡ ರೀತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಬಸ್ ನಿಲ್ದಾಣದ ಸಮೀಪ ಘಟಿಸಿದ ಈ ಘಟನೆಯ ವಿಡಿಯೋ ಟ್ವಟ್ಟರಿನಲ್ಲಿ ಪ್ರಕಟವಾಗಿದ್ದು ಗುಂಪಿನಲ್ಲಿ ಮಕ್ಕಳು ಕೂಡಾ ಇದ್ದುದು ಬೆಳಕಿಗೆ ಬಂದಿತ್ತು ಕೆಲವು ಟ್ವಿಟ್ಟರ್ ಬಳಕೆದಾರರು ಕಾರ್ಮಿಕರಿಗೆ ಕೆಮಿಕಲ್ ಬಾತ್ (ರಾಸಾಯನಿಕ ಸ್ನಾನ) ಮಾಡಿಸಲಾಗಿದೆ ಎಂದೂ ದೂರಿದ್ದರು. ವಲಸೆ ಕಾರ್ಮಿಕರ ತಂಡವೊಂದರ ಮೇಲೆ ಕ್ಲೋರಿನ್ ಮಿಶ್ರಿತ ನೀರನ್ನು ಸಿಂಪಡಿಸಿದ್ದನ್ನು ದೃಢ ಪಡಿಸಿದ ಕೋವಿಡ್-೧೯ ಉಪಶಮನ ತಂಡದ ಉಸ್ತುವಾರಿ ವಹಿಸಿದ ನೋಡಲ್ ಅಧಿಕಾರಿ ಅಶೋಕ ಗೌತಮ್ ಅವರು ಸಾರ್ಸ್-ಕೋವ್-೨ ವೈರಸ್ ಹರಡದಂತೆ ತಡೆಯಲು ಇಂತಹ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಿದ್ದರು. ‘ನಾವು ಅವರನ್ನು ಸುರಕ್ಷಿತರಾಗಿ ಇಡಲು ಯತ್ನಿಸಿದೆವು ಮತ್ತು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುವಂತೆ ಅವರಿಗೆ ಸೂಚಿಸಿದ್ದೆವು. ಅವರು ಒದ್ದೆಯಾಗುವುದು ಸಹಜವಾಗಿತ್ತು’ ಎಂದು ಅಧಿಕಾರಿ ಹೇಳಿದ್ದರು. ಸರ್ಕಾರದ ವಿಶೇಷ ಬಸ್ಸುಗಳಲ್ಲಿ ಆಗಮಿಸಿದ ಕಾರ್ಮಿಕರನ್ನು ಒಳಗೊಂಡಂತೆ ಸ್ವಚ್ಛತಾ ಕಾರ್ಯ ಮಾಡುವಾಗ ಕೆಲವು ಅಧಿಕಾರಿಗಳು ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ್ ನುಡಿದರು. ನಾವು ವಿಡಿಯೋ ನೋಡಿದ್ದೇವೆ. ಬರೇಲಿ ನಗರ ನಿಗಮ ಮತ್ತು ಅಗ್ನಿಶಾಮಕ ಇಲಾಖೆಯ ತಂಡಗಳಿಗೆ ಬಸ್ಸುಗಳನ್ನು ಶುಚಿಗೊಳಿಸಲು ಸೂಚಿಸಲಾಗಿತ್ತು. ಆದರೆ ಅವರು ಅತಿಕ್ರಮಿಸಿದರು. ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಆಜ್ಞಾಪಿಸಿದ್ದೇವೆ. ತೊಂದರೆಗೆ ಒಳಗಾದ ಜನರಿಗೆ ಮುಖ್ಯ ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಸುಮಾರು ೩೨,೦೦೦ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, ವಿಶ್ವವನ್ನು ಗಡ ಗಡ ನಡುಗಿಸುತ್ತಿರುವ ಮಾರಕ ಕೊರೋನಾವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕಾಗಿ ಚೀನೀ ವಿಜ್ಞಾನಿಗಳು ’ಸೂಪರ್ ಶಸ್ತ್ರ’ವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ’ಗ್ಲೋಬಲ್ ಟೈಮ್ಸ್’ 2020 ಮಾರ್ಚ್ 30ರ ಸೋಮವಾರ ವರದಿ ಮಾಡಿತು. ‘ಕೊರೋನಾವೈರಸ್ ವಿರುದ್ಧ ಹೋರಾಟಕ್ಕೆ ಹೊಸ ಆಯುಧವೊಂದನ್ನು ಚೀನೀ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ವೈರಸ್ಸನ್ನು ಹೀರಿಕೊಂಡು ನಿಷ್ಕ್ರಿಯಗೊಳಿಸುವಂತಹ ನ್ಯಾನೋವಸ್ತುವೊಂದನ್ನು ತಾವು ಪತ್ತೆ ಹಚ್ಚಿದ್ದು, ಇದು ಕೊರೋನಾವೈರಸ್ಸನ್ನು ಕೊಲ್ಲುವಲ್ಲಿ ಶೇಕಡಾ ೯೬.೫-೯೯.೯ ರಷ್ಟು ದಕ್ಷತೆ ಹೊಂದಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರೆ ಎಂದು ಟೈಮ್ಸ್ ವರದಿ ತಿಳಿಸಿತು. ಈ ನೂತನ ಶಸ್ತ್ರವು ಔಷಧವಲ್ಲ ಅಥವಾ ರಾಸಾಯನಿಕ ಮಿಶ್ರಣವಲ್ಲ, ಬದಲಿಗೆ ಒಂದು ನ್ಯಾನೋ ವಸ್ತು (ಅತಿ ಸೂಕ್ಷ್ಮ ವಸ್ತು) ಎಂದು ಮಾಧ್ಯಮ ಹೇಳಿತು. ಉತ್ಪಾದನಾ ಪ್ರಕ್ರಿಯೆಗಳು, ಉತ್ಪನ್ನಗಳು ಮತ್ತು ಬಣ್ಣಗಳು, ಫಿಲ್ಟರುಗಳು, ಇನ್‌ಸ್ಯುಲೇಷನ್ ಮತ್ತು ಲ್ಯೂಬ್ರಿಕೆಂಟ್ ಅಡಿಟಿವ್‌ಗಳಂತಹ ಆರೋಗ್ಯ ಕಾಳಜಿ ಉತ್ಪನ್ನಗಳಲ್ಲಿ ನ್ಯಾನೋವಸ್ತುಗಳನ್ನು ಬಳಸಲಾಗುತ್ತದೆ. ಆರೋಗ್ಯ ಕಾಳಜಿಗೆ ಕಿಣ್ವದಂತಹ (ಎನಜೈಮ್) ಗುಣಗಳಿರುವ ನ್ಯಾನೋಜೈಮ್‌ಗಳು ಅಥವಾ ನ್ಯಾನೋವಸ್ತುಗಳನ್ನು ಬಳಸಲಾಗುತ್ತದೆ. ‘ನ್ಯಾನೋವಸ್ತುಗಳ ನಿರ್ದಿಷ್ಟ ವಿವರಣೆ ಬಗ್ಗೆ ಇದಮಿತ್ಥಂ ಎಂಬ ಸರ್ವಾನುಮತದ ವಿವರಣೆಯನ್ನು ವಿಜ್ಞಾನಿಗಳು ನೀಡಿಲ್ಲ, ಆದರೆ ನ್ಯಾನೋಮೀಟರ್‌ಗಳಲ್ಲಿ ಅಳತೆ ಮಾಡಬಹುದಾದ ಅವುಗಳ ಸೂಕ್ಷ್ಮ ಗಾತ್ರವನ್ನು ಆಧರಿಸಿ ಅವುಗಳ ಗುಣಲಕ್ಷಣಗಳನ್ನು ಭಾಗಶಃ ನಿರ್ಧರಿಸಲು ಸಾಧ್ಯ ಎಂಬುದಾಗಿ ಒಪ್ಪಿದ್ದಾರೆ’ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಯುಎಸ್ ಎನ್ ಐಎಚ್) ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮಾರಕ ಕೊರೋನಾವೈರಸ್ ಪ್ರಸಾರ ಸರಪಣಿ ತುಂಡರಿಸಿ ಸೋಂಕು ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾಗಿರುವ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸಲಾಗುವುದು ಎಂಬ ವರದಿಗಳು ಆಧಾರ ರಹಿತ ಎಂಬುದಾಗಿ ಕೇಂದ್ರ ಸರ್ಕಾರ 2020 ಮಾರ್ಚ್ 30ರ ಸೋಮವಾರ ಸ್ಪಷ್ಟ ಪಡಿಸಿತು. ‘ದಿಗ್ಬಂಧನ ಅವಧಿ ಮುಕ್ತಾಯವಾದಾಗ ಸರ್ಕಾರವು ಅದನ್ನು ವಿಸ್ತರಿಸಲಿದೆ ಎಂಬುದಾಗಿ ಪ್ರತಿಪಾದಿಸಿರುವ ವದಂತಿಗಳು ಮತ್ತು ವರದಿಗಳು ಇವೆ. ಸಂಪುಟ ಕಾರ್ಯದರ್ಶಿಯವರು ಈ ವರದಿಗಳನ್ನು ನಿರಾಕರಿಸಿದ್ದಾರೆ ಮತ್ತು ಇವೆಲ್ಲವೂ ಆಧಾsರರಹಿತ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ’ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿತು. ‘ಇಂತಹ ವರದಿಗಳನ್ನು ನೋಡಿ ನನಗೆ ಅಚ್ಚರಿಯಾಗಿದೆ, ದಿಗ್ಬಂಧನವನ್ನು ವಿಸ್ತರಿಸುವ ಯಾವುದೇ ಯೋಜನೆಯೂ ಇಲ್ಲ’ ಎಂದು ಸಂಪುಟ ಕಾರ್ಯದರ್ಶಿ ರಾಜೀವ ಗೌಬಾ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಮಾರ್ಚ್ ೨೫ರ ಬುಧವಾರದಿಂದ ದಿಗ್ಬಂಧನ (ಲಾಕ್ ಡೌನ್) ಜಾರಿಗೆ ಬಂದಿದೆ. ಇದರ ಹಿಂದಿನ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಸೋಂಕಿನ ಸರಪಣಿಯನ್ನು ತುಂಡರಿಸುವ ಮತ್ತು ಕೊರೋನಾ ವೈರಸ್ (ಕೋವಿಡ್ -೧೯) ಸಾಂಕ್ರಾಮಿಕ ಪಿಡುಗು ಹರಡದಂತೆ ನಿಯಂತ್ರಿಸುವ ಸಲುವಾಗಿ ದಿಗ್ಬಂಧನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದರು. ದಿಗ್ಬಂಧನದ ಅವಧಿಯಲ್ಲಿ ಎಲ್ಲಿ ಇದ್ದೀರೋ ಅಲ್ಲೇ ಉಳಿದುಕೊಳ್ಳಿ ಎಂದು ಪ್ರಧಾನಿ ಜನರನ್ನು ಆಗ್ರಹಿಸಿದ್ದರು. ಇದಕ್ಕೆ ಮುನ್ನ ಮಾರ್ಚ್ ೧೯ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತಮ್ಮ ಮೊದಲ ರಾಷ್ಟ್ರವ್ಯಾಪಿ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಸಾಂಕ್ರಾಮಿಕ ಸೋಂಕಿನ ಅಪಾಯಗ ಬಗ್ಗೆ ಎಚ್ಚರಿಸಿದ್ದರು ಮತ್ತು ಮಾರ್ಚ್ ೨೨ರಂದು ಜನತಾ ಕರ್ಫ್ಯೂವಿಗೆ ಕರೆ ನೀಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಪಿಡುಗು ಒಡ್ಡಿರುವ ಅಪಾಯ ಇನ್ನಷ್ಟು ಹೆಚ್ಚದಂತೆ ಖಾತರಿ ಪಡಿಸುವ ನಿಟ್ಟಿನಲ್ಲಿ ನಗರಗಳಿಂದ ತಮ್ಮ ಹುಟ್ಟೂರುಗಳತ್ತ ವಲಸೆ ಕಾರ್ಮಿಕರು ಆರಂಭಿಸಿರುವ ’ಮಹಾವಲಸೆ’ಯನ್ನು ನಿಲ್ಲಿಸಲೇ ಬೇಕಾಗಿದೆ ಎಂದು ಕೇಂದ್ರ ಸರ್ಕಾರವು 2020 ಮಾರ್ಚ್ 30ರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಮಾರ್ಚ್ ೨೫ರಿಂದ ಜಾರಿಯಾಗಿರುವ ಮೂರು ವಾರಗಳ ರಾಷ್ಟ್ರೀಯ ದಿಗ್ಬಂಧನ (ಲಾಕ್ ಡೌನ್) ಹಿನ್ನೆಲೆಯಲ್ಲಿ ಆರಂಭವಾಗಿರುವ ಕಾರ್ಮಿಕರ ಮಹಾವಲಸೆಯಿಂದ ಉದ್ಭವಿಸಬಹುದಾದ ಅಪಾಯಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಇಬ್ಬರು ವಕೀಲರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಕೇಂದ್ರದ ನಿಲುವನ್ನು ಸುಪ್ರಿಂಕೋರ್ಟಿಗೆ ವಿವರಿಸಿದರು. ‘ಸರ್ಕಾರವು ವಲಸೆಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಸಂದೇಶ ಹೋಗಬಾರದು. ವಲಸೆಯನ್ನು ನಿಲ್ಲಿಸಲೇಬೇಕು’ ಎಂದು ಮೆಹ್ತ ನುಡಿದರು. ರಾಷ್ಟ್ರವ್ಯಾಪಿ ದಿಗ್ಬಂಧನದ ಪರಿಣಾಮವಾಗಿ ರಾಜಧಾನಿ ದೆಹಲಿಯೂ ಸೇರಿದಂತೆ ನಗರಗಳಿಂದ ಸಹಸ್ರಾರು ವಲಸೆ ಕಾರ್ಮಿಕರು, ಮುಖ್ಯವಾಗಿ ಬದುಕಿನ ಆಧಾರವನ್ನೇ ಕಳೆದುಕೊಂಡ ದಿನಗೂಲಿ ಕಾರ್ಮಿಕರು ತಮ್ಮ ಹುಟ್ಟೂರುಗಳತ್ತ ಮಹಾವಲಸೆ ಹೊರಟಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹಲವರು ಕಾಲ್ನಡಿಗೆಯಲ್ಲೇ ನೂರಾರು ಕಿಲೋ ಮೀಟರ್ ದೂರವನ್ನು ಕ್ರಮಿಸಿ ರಾಜ್ಯಗಳ ಗಡಿ ಸೇರಲು ಹವಣಿಸಿದ್ದಾರೆ. ಇದು ಕೋವಿಡ್ -೧೯ನ್ನು ಗಾಮೀಣ ಭಾರತದಲ್ಲೂ ಹರಡಲು ಕಾರಣವಾಗಬಹುದು ಎಂಬ ಭೀತಿಯನ್ನು ಹುಟ್ಟು ಹಾಕಿದೆ. ಇಬ್ಬರು ವಕೀಲರಾದ ರಶ್ಮಿ ಬನ್ಸಲ್ ಮತ್ತು ಅನುಜ್ ಗುಪ್ತ ಅವರು ತಮ್ಮ ಅರ್ಜಿಯಲ್ಲಿ ಹಲವಾರು ವಲಸೆ ಕಾರ್ಮಿಕರು ವೈರಸ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇರುವುದನ್ನು ಉಲ್ಲೇಖಿಸಿ ಅವರು ರೋಗ ವಾಹಕರಾಗಬಹುದು ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ಮನೆಗಳಿಗೆ ವಾಪಸಾಗುವ ಹತಾಶ ಯತ್ನದಲ್ಲಿ ಕಾರ್ಮಿಕರು ಸಾಮಾಜಿಕ ಅಂತರವನ್ನು ಕೂಡಾ ಕಾಯ್ದುಕೊಳ್ಳುತ್ತಿಲ್ಲ, ಇದು ರೋಗ ಹರಡುವ ಅಪಾಯವನ್ನು ತಂದೊಡ್ಡಿದೆ ಎಂದು ವಕೀಲರಿಬ್ಬರೂ ವಾದಿಸಿದ್ದಾರೆ. ಸೋಂಕು ಮುಕ್ತರಾದ ಬಗೆಗಿನ ಖಾತರಿಯ ವಿನಃ ಪಯಣಿಸಲು ಕಾರ್ಮಿಕರಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸೋಂಕು ಬಾಧಿಸಿರುವವರ ಸಂಖ್ಯೆ ೭,೨೭,೦೮೦ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ೩೪,೬೧೦ಕ್ಕೆ ತಲುಪಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಆರಂಭವಾದ ಸಾಂಕ್ರಾಮಿಕ ಸೋಂಕು ಇದೀಗ ವಿಶ್ವದ ೧೮೩ ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ವ್ಯಾಪಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಏಕಾಂಗಿವಾಸಕ್ಕೆ ಒಳಗಾಗಿದ್ದಾರೆ ಎಂದು ವರದಿಗಳು 2020 ಮಾರ್ಚ್ 30ರ ಸೋಮವಾರ ತಿಳಿಸಿದವು. ಇಟಲಿ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ೧೦,೭೭೯ಕ್ಕೆ ಏರಿದ್ದರೆ, ಸೋಂಕಿನಿಂದ ಬಾಧಿತರಾದ ಪ್ರಕರಣಗಳು ೯೭,೬೮೯ಕ್ಕೆ ಏರಿವೆ. ಸ್ಪೇನಿನಲ್ಲಿ ೭,೩೪೦ ಮಂದಿ ಸಾವನ್ನಪ್ಪಿದ್ದರೆ, ಒಟ್ಟು ಸೋಂಕಿತ ಪ್ರಕರಣಗಳು ೮೫,೧೯೫ಕ್ಕೆ ಏರಿದೆ. ಚೀನಾದಲ್ಲಿ ೮೧,೪೭೦ ಸೋಂಕಿನ ಪ್ರಕರಣ ಮತ್ತು ೩,೩೦೩ ಸಾವುಗಳು ದಾಖಲಾಗಿದ್ದರೆ, ಇರಾನಿನಲ್ಲಿ ೨,೭೫೭ ಸಾವು ಸಂಭವಿಸಿದ್ದು, ೪೧,೪೯೫ ಮಂದಿಗೆ ಸೋಂಕು ತಗುಲಿದೆ. ಫ್ರಾನ್ಸಿನಲ್ಲಿ ೨,೬೦೬ ಸಾವು ಮತ್ತು ೪೦,೧೭೪ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಹೊಸ ೯೨ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೦೭೧ಕ್ಕೆ ಏರಿದೆ. ಮೃತರ ಸಂಖ್ಯೆ ೨೯ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ೨೧೫ಕ್ಕೇ ಏರಿದೆ. ಪಾಕಿಸ್ತಾನದಲ್ಲಿ ೧೬೬೪ ಸೋಂಕು, ೧೮ ಸಾವು ವರದಿಯಾಗಿವೆ. ಪಾಕಿಸ್ತಾನದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಚೀನಾ ಮುಂದಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಹೈದರಾಬಾದ್: ರಾಜ್ಯದಲ್ಲಿ
77 ಮಂದಿಗೆ ಕೊರೋನಾವೈರಸ್ ಸೋಂಕು ತಗುಲುತ್ತಿದ್ದಂತೆಯೇ ತೆಲಂಗಾಣ ಸರ್ಕಾರವು 2020 ಮಾರ್ಚ್ 30ರ ಸೋಮವಾರ
ತನ್ನ ಎಲ್ಲ ನೌಕರರು, ಆಡಳಿತಾಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ವೇತನವನ್ನು ಕಡಿತಗೊಳಿಸಿತು.
ರಾಜ್ಯದ ಆರ್ಥಿಕ ಸ್ಥಿತಿ ಕುಸಿತದ ಕಾರಣ ಕನಿಷ್ಠ ಶೇಕಡಾ 10ರಿಂದ ಗರಿಷ್ಠ ಶೇಕಡಾ 75ರವರೆಗೆ ವೇತನ
ಕಡಿತ ಮಾಡಲು ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಯಿತು. ರಾಜ್ಯದ ಕಂದಾಯ
ಕುಸಿತ ಮತ್ತು ಕೇಂದ್ರದಿಂದ ಬರಬೇಕಾದ ಹಣದ ಪಾಲಿನ ಕೊರತೆ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು ಎನ್ನಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment