ನಾನು ಮೆಚ್ಚಿದ ವಾಟ್ಸಪ್

Sunday, March 22, 2020

ಇಂದಿನ ಇತಿಹಾಸ History Today ಮಾರ್ಚ್ 22

2020: ನವದೆಹಲಿ: ಮಾರಕ ಕೊರೋನಾವೈರಸ್ಸನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಯ ಮೇರೆಗೆ ಭಾರತದಾದ್ಯಂತ 2020 ಮಾರ್ಚ್ 22 ಭಾನುವಾರ ಜನತೆ ಮನೆಗಳ ಒಳಗೇ ಉಳಿದು ಸಮಸ್ತ ಸಾರ್ವಜನಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಮೂಲಕ ಅಭೂತಪೂರ್ವ ಜನತಾ ಕರ್ಫ್ಯೂಆಚರಿಸಿದರು. ಪರಿಣಾಮವಾಗಿ ಇಡೀ ದೇಶ ಜನಸಂಚಾರ, ವಾಹನ ಸಂಚಾರವಿಲ್ಲದೆ ಭಣಗುಟ್ಟಿತು. ಸಂಜೆ 5 ಗಂಟೆಯಾಗುತ್ತಿದ್ದಂತೆಯೇ ಜನರು ತಮ್ಮ ತಮ್ಮ ಮನೆ, ಅಪಾರ್ಟ್ ಮೆಂಟುಗಳಲ್ಲೇ ರಸ್ತೆಗೆ ಅಭಿಮುಖರಾಗಿ ನಿಂತುಕೊಂಡು ಚಪ್ಪಾಳೆ, ಶಂಖ , ಜಯಗಂಟೆಗಳನ್ನು ಭಾರಿಸುವ ಮೂಲಕ ಕೊರೋನಾ ವಿರುದ್ಧ ಸಮರ ಸಾರುತ್ತಿರುವ ವೈದ್ಯಕೀಯ ಮತ್ತಿತರ ಸಿಬ್ಬಂದಿಗೆ ತಮ್ಮ ಕೃತಜ್ಞತೆ ಅರ್ಪಿಸಿದರು.ಇದೇ ವೇಳೆಗೆ ಭಾರತದಲ್ಲಿ ಕೊರೋನಾವೈರಸ್ ಕಳೆದ 24 ಗಂಟೆಗಳಲ್ಲಿ ಮತ್ತೆ ಮೂವರನ್ನು ಬಲಿತೆಗೆದುಕೊಂಡಿದ್ದು,  ಮೃತರ ಸಂಖ್ಯೆ 7ಕ್ಕೆ ಏರಿತು. ಕೋವಿಡ್ ಸೋಂಕಿತರ ಸಂಖ್ಯೆ 370 ದಾಟಿತು. ಈ ಮಧ್ಯೆ ವಿಶ್ವಾದ್ಯಂತ ಕೊರೋನಾವೈರಸ್ಸಿಗೆ ಬಲಿಯಾದವರ ಸಂಖ್ಯೆ 13,000 ದಾಟಿದ್ದು, ವಿಶ್ವಾದ್ಯಂತ ಸುಮಾರು ಒಂದು ಶತಕೋಟಿ ಮಂದಿ ತಮ್ಮ ಮನೆಗಳಿಗೇ ಸೀಮಿತರಾದರು.  ಇಟಲಿಯಲ್ಲಿ ಒಂದೇ ದಿನ 600ಕ್ಕೂ ಹೆಚ್ಚಿನ ದಾಖಲೆ ಸಾವುಗಳು ಸಂಭವಿಸಿದ ಬಳಿಕ ಅಲ್ಲಿನ ಕಾರ್ಖಾನೆಗಳನ್ನೂ ಮುಚ್ಚಲಾಯಿತು. ಕೊರೋನಾವೈರಸ್ ಹರಡುವ ವೇಗ ಹೆಚ್ಚುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು  ವೈರಸ್ ಪೀಡಿತ 23 ರಾಜ್ಯಗಳ 80 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ಬಹುತೇಕ ಸಂಪೂರ್ಣ ನಗರ ಭಾರತ ‘ಲಾಕ್ ಡೌನ್’ಗೆ ಒಳಗಾದಂತಾಗಿದೆ.  ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಸೇರಿದಂತೆ ೨೩ ರಾಜ್ಯಗಳ 80 ಜಿಲ್ಲೆಗಳಿಗೆ ಇದು ಅನ್ವಯವಾಗಲಿದೆ. ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳನ್ನು ಸಂಪೂರ್ಣವಾಗಿ ಮುಚ್ಚಲು ಸರ್ಕಾರ ತೀರ್ಮಾನಿಸಿದ್ದು, ಮೆಟ್ರೋ, ರೈಲು ಹಾಗೂ ಅಂತಾರಾಜ್ಯ ಸಾಮೂಹಿಕ ಸಾರಿಗೆಯನ್ನೂ ರದ್ದು ಪಡಿಸಿತು.  (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 22  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Post a Comment