Friday, March 23, 2018

ಇಂದಿನ ಇತಿಹಾಸ History Today ಮಾರ್ಚ್ 22

ಇಂದಿನ ಇತಿಹಾಸ History Today  ಮಾರ್ಚ್ 22
 2018: ವಾಷಿಂಗ್ಟನ್:  ’ಗಾಳಿಯಿಂದ ನೀರು ಸೃಷ್ಟಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿರುವ ಭಾರತದ ಸ್ಟಾರ್ಟ್‌ಪ್ ಕಂಪೆನಿ ಉರುವು ಇದಕ್ಕೆ ಸಂಬಂಧಿಸಿದ ಜಾಗತಿಕ ಸ್ಪರ್ಧೆಯಲ್ಲಿ ಅಂತಿಮ ಸುತ್ತನ್ನು ಪ್ರವೇಶಿಸಿದ್ದು, ಐದು ಕಂಪೆನಿಗಳ ಜೊತೆಗೆ ಸ್ಪರ್ಧೆಗೆ  ಇಳಿಯಿತು.  ದಿನಕ್ಕೆ ಕನಿಷ್ಠ ೨೦೦೦ ಲೀಟರ್ ನೀರನ್ನು ಗಾಳಿಯಿಂದ ಸೃಷ್ಟಿಸುವ ಉಪಕರಣ ನಿರ್ಮಾಣದ ಎರಡು ವರ್ಷಗಳ ಸ್ಪರ್ಧೆ ಇದಾಗಿದ್ದು, ಶೇಕಡಾ ೧೦೦ರಷ್ಟು ನವೀಕರಿಸಬಹುದಾದ ಇಂಧನವನ್ನು ಬಳಸಿ ಈ ಸಾಧನೆಯನ್ನು ಮಾಡಬೇಕಾಗಿದೆ.   ಹೈದರಾಬಾದ್ ಮೂಲದ ಭಾರತೀಯ ಸಂಸ್ಥೆ ಉರುವು ’ವಾಟರ್ ಅಬಂಡೆನ್ಸ್ ಎಕ್ಸ್ ಪ್ರೈಜ್ ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ಇತರ ನಾಲ್ವರ ಜೊತೆಗೆ ಸ್ಪರ್ಧಿಸಲಿದೆ. ವಿಜೇತರು ಸ್ಪರ್ಧೆಯ ಬಹುಮಾನದ ಮೊತ್ತ ೧.೭೫ ಮಿಲಿಯ ಡಾಲರ್ ಅಂದರೆ ೧೧,೩೯,೩೭,೬೮೭ ರೂಪಾಯಿUಳನ್ನು ಹಂಚಿಕೊಳ್ಳಲಿದ್ದಾರೆ. ೨೫ ರಾಷ್ಟ್ರಗಳಿಂದ ಆಗಮಿಸಿದ ೯೮ ತಂಡಗಳ ಪೈಕಿ ಐದು ತಂಡಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿವೆ. ವಿಜೇತರು ೧.೫ ಮಿಲಿಯ ಡಾಲರ್ ಅಂದರೆ ೯,೭೬,೬೬,೬೫೦ ರೂಪಾಯಿಗಳ ಬಹುಮಾನ ಪಡೆಯಲಿದ್ದು ಅವರ ಹೆಸರುಗಳು ೨೦೧೮ರ ಆಗಸ್ಟ್ ತಿಂಗಳಲ್ಲಿ ಪ್ರಕಟಗೊಳ್ಳಲಿವೆ.  ಲಾಸ್ ಏಂಜೆಲಿಸ್ ಮೂಲದ ಎಕ್ಸ್ ಪ್ರೈಜ್ ಸಂಸ್ಥೆಯು ಬೃಹತ್ ಮಾನವೀಯ ಸವಾಲುಗಳನ್ನು ಪರಿಹರಿಸುವುದಕ್ಕೆ ಬಹುಮಾನ ನೀಡುವ ಸ್ಪರ್ಧೆಯನ್ನು ಸಂಘಟಿಸುತ್ತದೆ. ಅದು ಪ್ರಸ್ತುತ ಟಾಟಾ ಸಮೂಹ ಮತ್ತು ಆಸ್ಟ್ರೇಲಿಯನ್ ಏಡ್ ಬೆಂಬಲದೊಂದಿಗೆ ವಾಟರ್ ಅಡಂಡೆನ್ಸ್ ಪ್ರೈನ್ ಸ್ಪರ್ಧೆಯನ್ನು ಸಂಘಟಿಸಿದೆ.  ಉರುವು ಎಂಜಿನಿಯರಿಂಗ್, ವಿಜ್ಞಾನಗಳು, ವಾಸ್ತುಶಿಲ್ಪ ಮತ್ತು ವಿನ್ಯಾಸ ಹಿನ್ನೆಲೆಗಳನ್ನು ಹೊಂದಿರುವ ಯುವ ತಂಡವಾಗಿದ್ದು ತಾಂತ್ರಿಕವಾಗಿ ಕಾರ್‍ಯಸಾಧ್ಯವಾಗಬಹುದಾದ ಕಠಿಣ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತದೆ. ನೀರಿನ ಸಮಸ್ಯೆ ಬಗೆಹರಿಸಲು ಅದ್ಭುತವಾದ ತಂತ್ರಜ್ಞಾನ ಮತ್ತು ಸೂಕ್ತ ವ್ಯವಸ್ಥೇ ಬೇಕು ಎಂದು ತಂಡದ ಸದಸ್ಯರು ಹೇಳುತ್ತಾರೆ.  ಸ್ವಪ್ನಿಲ್ ಶ್ರೀವಾಸ್ತವ್ ನೇತೃತ್ವದ ಈ ತಂಡದಲ್ಲಿ ಅಮಿತ್, ಭರತ್, ಸಂದೀಪ್ ಮತ್ತು ವೆಂಕಟೇಶ್ ಇತರ ಸದಸ್ಯರು. ಸೌರ ತಾಪ ತಂತ್ರಜ್ಞಾನ ಮತ್ತು ವಸ್ತು ವಿಜ್ಞಾನವನ್ನು ಬಳಸಿಕೊಂಡು ಗಾಳಿಯಿಂದ ನೀರು ಸೃಷ್ಟಿಸುವ ಸಾಧನವನ್ನು ತಂಡ ಅಭಿವೃದ್ಧಿ ಪಡಿಸುತ್ತಿದೆ.  ೨೦೧೮ರ ಜುಲೈ ೨ರಂದು ತಮ್ಮ ಸಾಧನದ ಮೂಲಕ ಶೇಕಡಾ ೧೦೦ರಷ್ಟು ನವೀಕರಿಸಬಹುದಾದ ಇಂಧನ ಬಳಸಿ ಪ್ರತಿದಿನ ಕನಿಷ್ಠ ೨೦೦೦ ಲೀಟರ್ ನೀರನ್ನು ಗಾಳಿಯಿಂದ ಸೃಷ್ಟಿಸಿ ತೋರಿಸಬೇಕಾದ ಸವಾಲು ಈ ಯುವಕರ ಮುಂದಿದೆ. ಲೀಟರಿಗೆ ೨ ಸೆಂಟ್ಸ್ ಮೀರದ ದರದಲ್ಲಿ ಎಲ್ಲೆಂದರಲ್ಲಿ, ಬೇಕಾದಾಗ ನೀರು ಸೃಷ್ಟಿಸಬಲ್ಲಂತಹ ಈ ಸಾಧನ ಜನರಿಗೆ ಎಲ್ಲಿ ಬೇಕಾದರೂ ಶುದ್ಧ ನೀರನ್ನು ಒದಗಿಸಲಿದೆ.

2018: ನವದೆಹಲಿ:  ದೇಶೀ ಅನ್ವೇಷಕದ ಜೊತೆಗೆ ಇದೇ ಮೊತ್ತ ಮೊದಲ ಬಾರಿಗೆ ಭಾರತದ ಶಬ್ದವೇಧಿ ಸಮರ ಕ್ಷಿಪಣಿಯನ್ನು (ಸೂಪರ್ ಸಾನಿಕ್ ಕ್ರೂಸ್ ಮಿಸೈಲ್)  ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದುವರೆಗೆ ಕ್ಷಿಪಣಿಗಳಲ್ಲಿ ಬಳಸಲಾಗುವ ಅನ್ವೇಷಕ (ಸೀಕರ್) ತಂತ್ರಜ್ಞಾನವನ್ನು ರಷ್ಯಾದಿಂದ ಪಡೆಯಲಾಗುತ್ತಿತ್ತು.  ‘ಅಸಾಧಾರಣ ಸೂಪರ್ ಸಾನಿಕ್ ಸಮರ ಕ್ಷಿಪಣಿ ಬ್ರಹ್ಮೋಸ್ನ ಯಶಸ್ವೀ ಪರೀಕ್ಷೆಯನ್ನು ಈದಿನ ಬೆಳಗ್ಗೆ ೮.೪೨ಕ್ಕೆ ರಾಜಸ್ಥಾನದ ಪೊಖ್ರಾನ್ ಪರೀಕ್ಷಾ ವಲಯದಲ್ಲಿ ನಡೆಸಲಾಯಿತು. ಭಾರತ ನಿರ್ಮಿತ ಅನ್ವೇಷಕವನ್ನು ಹೊಂದಿದ್ದ ಕರಾರುವಾಕ್ಕಾಗಿ ದಾಳಿ ನಡೆಸಬಲ್ಲ ಬ್ರಹ್ಮೋಸ್ ಕ್ಷಿಪಣಿಯು ತನ್ನ ನಿಯೋಜಿತ ಪಥದಲ್ಲಿ ಸಾಗಿ ಪಿನ್ ಪಾಯಿಂಟ್ ನಿಖರತೆಯೊಂದಿಗೆ ಗುರಿಗೆ ಬಡಿಯಿತು ಎಂದು ರಕ್ಷಣಾ ಸಚಿವಾಲಯದ ಟ್ವೀಟ್ ತಿಳಿಸಿತು.   ಹೈದರಾಬಾದಿನ ಇಮಾರತ್ ಸಂಶೋಧನಾ ಕೇಂದ್ರದಲ್ಲಿ (ಆರ್ ಸಿಐ), ಡಿಆರ್ ಡಿಒ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅನ್ವೇಷಕವನ್ನು ಅಭಿವೃದ್ಧಿ ಪಡಿಸಲಾಗಿತ್ತು.  ಕ್ಷಿಪಣಿಯ ನಿಖರತೆಯನ್ನು ನಿರ್ಧರಿಸುವ ಅನ್ವೇಷಕ ತಂತ್ರಜ್ಞಾನವನ್ನು ಅತ್ಯಂತ ರಹಸ್ಯವಾಗಿ ಇಡಲಾಗಿದೆ. ಈ ಅನ್ವೇಷಕ ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡಿರುವುದು ಭಾರತದ ಕ್ಷಿಪಣಿ ತಂತ್ರಜ್ಞಾನ ವೃದ್ಧಿಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು ಇದು ಆಮದು ಅವಲಂಬನೆಯನ್ನು ಕಡಿಮೆ ಮಾಡಲಿದೆ.  ಭಾರತ ಮತ್ತು ರಷ್ಯಾದ ಜಂಟಿ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿ, ಸಮುದ್ರ, ಸಮುದ್ರದ ಒಳಗೆ ಮತ್ತು ಬಾನಿನಿಂದ ಭೂ ಮೇಲ್ಮೈ ಮತ್ತು ಸಮುದ್ರದಲ್ಲಿನ ಗುರಿಗಳ ಮೇಲಕ್ಕೆ ಗುರಿ ಇಟ್ಟು ಉಡಾಯಿಸಬಹುದು. ಈ ಶಬ್ದವೇಧಿ ಕ್ಷಿಪಣಿಯು ಮೊದಲಿಗೆ ೨೯೦ ಕಿಮೀ ದೂರ ಸಾಗುವ ಸಾಮರ್ಥ್ಯ ಹೊಂದಿತ್ತು. ಈಗ ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ (ಎಚಿಟಿಸಿಆರ್) ಕ್ಲಬ್ ಗೆ ಪ್ರವೇಶ ಪಡೆದಿರುವುದರಿಂದ ಈ ಕ್ಷಿಪಣಿಯ ವ್ಯಾಪ್ತಿಯನ್ನು ೪೫೦ ಕಿಮೀವರೆಗೆ ವಿಸ್ತರಿಸಲಾಗಿದೆ. ಅದನ್ನು ೬೦೦ ಕಿಮೀವರೆಗೆ ವಿಸ್ತರಿಸುವ ಯೋಜನೆಯಿದೆ.  ಸೇನೆ ಮತ್ತು ನೌಕಾಪಡೆ ಈಗಾಗಲೇ ಕ್ಷಿಪಣಿಯನ್ನು ಸೇರ್ಪಡೆ ಮಾಡಿಕೊಂಡಿವೆ.  ಸೂಪರ್ ಸಾನಿಕ್ ಸಮರ ಕ್ಷಿಪಣಿಯನ್ನು ಈ ಹಿಂದೆ ಭಾರತ ೨೦೧೭ರಲ್ಲಿ ಭಾರತೀಯ ವಾಯು ಪಡೆಯ ಸುಖೋಯಿ ೩೦ಎಂಕೆಐ ಯುದ್ಧ ವಿಮಾನದ ಮೂಲಕ ಯಶಸ್ವಿಯಾಗಿ ಉಡಾಯಿಸಿತ್ತು.  ಕಳೆದ ವರ್ಷ ದುಬೈ ಏರ್ ಶೋದಲ್ಲಿ ಭಾರತ ತನ್ನ ಹೆಮ್ಮೆಯ ಬ್ರಹ್ಮೋಸ್ ಪ್ರದರ್ಶನ ನಡೆಸಿತ್ತು. ಇದು ಅನೇಕ ದೇಶಗಳ ಆಸಕ್ತಿಯನ್ನು ಬಹುವಾಗಿ ಕೆರಳಿಸಿತ್ತು.  ಬ್ರಹ್ಮೋಸ್ ಒಂದು ಮಧ್ಯಮ ವ್ಯಾಪ್ತಿಯ ರಾಮ್‌ಜೆಟ್ ಸೂಪರ್‌ಸಾನಿಕ್ ಸಮರ ಕ್ಷಿಪಣಿ. ಬ್ರಹ್ಮೋಸ್ ಎಂಬ ಪದವನ್ನು ಭಾರತದ ಬ್ರಹ್ಮಪುತ್ರಾ ನದಿ ಮತ್ತು ರಷ್ಯಾದ ಮೋಸ್‌ಕ್ವಾ ನದಿಯ ಹೆಸರನ್ನು ಜತೆಗೂಡಿಸಿ ರಚಿಸಲಾಗಿದೆ.

2018: ನವದೆಹಲಿ: ಇರಾಕಿನಲ್ಲಿ ನಡೆದ  ೩೯ ಮಂದಿ ಭಾರತೀಯರ ಸಾವಿನ ಕಡೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ’ಕಾಂಗ್ರೆಸ್ಸಿನಿಂದ ಮಾಹಿತಿ ಕಳವು (ಡಾಟಾ ಥೆಫ್ಟ್) ಕಥೆಯನ್ನು ಶೋಧಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕಾ ಪ್ರಹಾರ ಮಾಡಿದರು.  ಸರ್ಕಾರವು ಮಾಧ್ಯಮಗಳಿಗೂ ಕಾಟ ಕೊಡುತ್ತಿದೆ ಎಂದೂ ಕಾಂಗ್ರೆಸ್ ಅಧ್ಯಕ್ಷ ಆಪಾದಿಸಿದರು.  ‘ಸಮಸ್ಯೆ: ೩೯ ಭಾರತೀಯರು ಅಸುನೀಗಿದ್ದಾರೆ. ಸುಳ್ಳು ಹೇಳುವ ಮೂಲಕ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿದೆ. ಪರಿಹಾರ: ಕಾಂಗ್ರೆಸ್ ಮಾಹಿತಿ ಕಳುವಿನ ಕಥೆ ಶೋಧಿಸಿ. ಫಲಿತಾಂಶ: ಮಾಧ್ಯಮ ಜಾಲಗಳಿಗೆ ಕಾಟ, ೩೯ ಭಾರತೀಯರು ರಾಡಾರ್ ನಿಂದ ಕಾಣೆ, ಸಮಸ್ಯೆ ಪರಿಹಾರವಾಯಿತು ಎಂದು ರಾಹುಲ್ ಟ್ವೀಟ್ ಮಾಡಿದರು.   ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ಎಸ್‌ಸಿ / ಎಸ್ ಟಿ) (ದೌರ್ಜನ್ಯ ನಿಗ್ರಹ) ಕಾಯ್ದೆಯ ವಿಧಿಗಳನ್ನು ದುರ್ಬಲಗೊಳಿಸುವಿಕೆ ಹಾಗೂ ಇರಾಕಿನಲ್ಲಿ ಸಾವನ್ನಪ್ಪಿದ ಭಾರತೀಯರ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬಗಳು ಎತ್ತುತ್ತಿರುವ ಪ್ರಶ್ನೆಗಳು ಮತ್ತಿತರ ವಿಷಯಗಳಿಂದ ರಾಷ್ಟ್ರದ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಪತ್ರಿಕೆಗಳ ಶೀರ್ಷಿಕೆಗಳ ನಿರ್ವಹಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಆಪಾದಿಸಿತು.  ಕಾಂಗ್ರೆಸ್ ಟೀಕೆಗೆ ದನಿ ಸೇರಿಸಿರುವ ಪಕ್ಷದ ಸಂಪರ್ಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್ ಸುರ್ಜಿವಾಲ ಅವರು, ೩೯ ಭಾರತೀಯರ ಕುಟುಂಬಗಳಿಗೆ ಅವರ ಪ್ರೀತಿಪಾತ್ರ ವ್ಯಕ್ತಿಗಳು ಜೀವಂತವಾಗಿದ್ದಾರೆಯೇ ಇಲ್ಲವೇ ಎಂಬ ವಿಚಾರದ ಬಗೆಗೆ, ವರ್ಷದ ಹಿಂದೆ ಅವರನ್ನು ಕೊಂದ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿದ ಬಳಿಕವೂ ಸರ್ಕಾರ ಸುಳ್ಳು ಹೇಳಿದೆ ಎಂದು ಆಪಾದಿಸಿದರು.  ಇರಾಕಿನ ಮೊಸುಲ್ ನಗರದಲ್ಲಿ ನಾಲ್ಕು ವರ್ಷಗಳ ಹಿಂದೆ ೩೯ ಮಂದಿ ಭಾರತೀಯರನ್ನು ಅಪಹರಿಸಿ ಕೊಂದ ಬಗ್ಗೆ ಮೋದಿ ಸರ್ಕಾರ ರಾಷ್ಟವನ್ನು ದಾರಿ ತಪ್ಪಿಸಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.  ನಾಲ್ಕು ವರ್ಷಗಳ ಕಾಲ ಮೋದಿ ಸರ್ಕಾರ ಮತ್ತು ಸುಷ್ಮಾಜಿ ಅವರು ತಮ್ಮನ್ನು ದಾರಿ ತಪ್ಪಿಸಿದ್ದು ಏಕೆ? ಸಾವಿನ ದಿನಾಂಕವನ್ನು ಸರ್ಕಾರ ಬಹಿರಂಗ ಪಡಿಸದೇ ಇರುವುದು ಏಕೆ? ಈ ಎಲ್ಲ ವರ್ಷಗಳಲ್ಲಿ ಅವರು ಜೀವಂತವಾಗಿದ್ದಾರೆ ಎಂದು ಹೇಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಳಿ ಏನು ಸಾಕ್ಷ್ಯಾಧಾರ ಇತ್ತು? ಕುಟುಂಬಗಳಿಗೆ ಪರಿಹಾರ ಒದಗಿಸಲು ಸರ್ಕಾರ ಒಪ್ಪದೇ ಇರುವುದು ಏಕೆ? ಎಂಬುದಾಗಿ ಕುಟುಂಬಗಳು ಪ್ರಶ್ನಿಸುತ್ತಿವೆ.  ಮೋಸುಲ್ ದುರಂತಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುಳ್ಳು ಅನಾವರಣಗೊಂಡಿದೆ. ಎಲ್ಲ ೩೯ ಮಂದಿ ಭಾರತೀಯರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದನ್ನು ಹುತಾತ್ಮರ ಪ್ರತಿಷ್ಠಾನ ಈಗ ದೃಢ ಪಡಿಸಿದೆ. ಆದರೂ ಮೋದಿ ಸರ್ಕಾರ ಸುಳ್ಳು ಹೇಳಿತು. ಕುಟಂಬಗಳನ್ನು ಮತ್ತು ರಾಷ್ಟ್ರವನ್ನು ವಂಚಿಸಿತು ಎಂದು ಸುರ್ಜಿವಾಲ ಹೇಳಿದರು.

 2018: ನವದೆಹಲಿ: ತೆರಿಗೆ ಮುಕ್ತ ಗ್ರಾಚ್ಯುಟಿ ಮೊತ್ತ ನಿಗದಿ ಪಡಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಮತ್ತು ಎಕ್ಸಿಕ್ಯೂಟಿವ್ ಆದೇಶದ ಮೂಲಕ ಹೆರಿಗೆ ರಜಾವನ್ನು ಗರಿಷ್ಠ ೨೬ ವಾರಗಳಿಗೆ ವಿಸ್ತರಿಸಲು ಅವಕಾಶ ಕಲ್ಪಿಸುವ ಮಹತ್ವದ ಗ್ರಾಚ್ಯುಟಿ ಮಸೂದೆಗೆ ಸಂಸತ್ತು  ತನ್ನ ಒಪ್ಪಿಗೆ ನೀಡಿತು.  ಕಳೆದ ೧೪ ದಿನಗಳಿಂದ ವಿವಿಧ ಪಕ್ಷಗಳ ಪ್ರತಿಭಟನೆಗಳ ಪರಿಣಾಮವಾಗಿ ಮಹತ್ವದ ಕಲಾಪ ನಡೆಸಲು ವಿಫಲವಾಗಿದ್ದ ರಾಜ್ಯಸಭೆಯು  ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮೂಲಕ ಗ್ರಾಚ್ಯ್ಯುಟಿ ಪಾವತಿ (ತಿದ್ದುಪಡಿ) ಮಸೂದೆಗೆ ತನ್ನ ಅಂಗೀಕಾರ ನೀಡಿತು.  ಕಾರ್ಮಿಕ ಸಚಿವ ಸಂತೋಷ ಕುಮಾರ  ಗಂಗ್ವಾರ್ ಅವರು ಮಂಡಿಸಿದ ಮಸೂದೆಯನ್ನು ಧ್ವನಿಮತದಿಂದ ಸದನ ಅಂಗೀಕರಿಸಿತು.  ಮಹತ್ವದ ಈ ಮಸೂದೆಗೆ ಲೋಕಸಭೆಯು ಕಳೆದ ವಾರ ತನ್ನ ಒಪ್ಪಿಗೆ ನೀಡಿತ್ತು. ಈ ಮಸೂದೆಯು ಗ್ರಾಚ್ಯುಟಿ ಪಾವತಿ ಕಾಯ್ದೆಯ ಅಡಿಯಲ್ಲಿ ನೌಕರರಿಗೆ ನೀಡಲಾಗುವ ತೆರಿಗೆ ತೆರಿಗೆ ಮುಕ್ತ ಗ್ರಾಚ್ಯುಟಿ ಮಿತಿಯನ್ನು ಈಗಿನ ೧೦ ಲಕ್ಷ ರೂಪಾಯಿಗಳಿಂದ ೨೦ ಲಕ್ಷ ರೂಪಾಯಿಗಳಿಗೆ ಏರಿಸಲು ಸರ್ಕಾರಕ್ಕೆ ಅಧಿಕಾರ ನೀಡುವುದು.  ೭ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಬಳಿಕ ಕೇಂದ್ರ ಸರ್ಕಾರಿ ನೌಕರರ ಗ್ರಾಚ್ಯಟಿ ಮೇಲಿನ ಮಿತಿಯನ್ನು ದುಪ್ಪಟ್ಟುಗೊಳಿಸಿ ೨೦ ಲಕ್ಷ ರೂಪಾಯಿಗಳಿಗೆ ಏರಿಸಲಾಗಿತ್ತು. ಮಹಿಳಾ ನೌಕರರ ಪ್ರಸೂತಿ ರಜೆಯನ್ನು ಈಗಿರುವ ೧೨ ವಾರಗಳಿಂದ ಹೆಚ್ಚು ದಿನಗಳಿಗೆ ನಿಗದಿಗೊಳಿಸಲು ಮತ್ತು ಅದನ್ನು ನಿರಂತರ ಸೇವಾವಧಿ ಎಂಬುದಾಗಿ ಪರಿಗಣಿಸಲು ಅದು ಅವಕಾಶ ನೀಡಿತ್ತು.  ಗರಿಷ್ಠ ಹೆರಿಗೆ ರಜಾವನ್ನು ೨೬ ವಾರಗಳಿಗೆ ಏರಿಸಿದ ಮಾತೃತ್ವ ಅನುಕೂಲ (ತಿದ್ದುಪಡಿ) ಕಾಯ್ದೆಯ (೨೦೧೭) ಹಿನ್ನೆಲೆಯಲ್ಲಿ ಗ್ಯಾಚ್ಯುಟಿ ಪಾವತಿ ಕಾನೂನಿಗೆ ತಿದ್ದುಪಡಿ ತರಲಾಗಿದೆ.

2018: ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಇರಾಕಿನಲ್ಲಿದ್ದ ಭಾರತೀಯ ಕಾರ್ಮಿಕರ ಹತ್ಯೆಗೆ ಸಂಬಂಧಿಸಿದ ಹೇಳಿಕೆಗಾಗಿ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ಸೂಚನೆ ಮಂಡಿಸುವುದಾಗಿ ಕಾಂಗ್ರೆಸ್ ಪ್ರಕಟಿಸಿತು.  ನಾಲ್ಕು ವರ್ಷಗಳ ಹಿಂದೆ ಇರಾಕಿನಲ್ಲಿ ಕಣ್ಮರೆಯಾಗಿದ್ದ ಎಲ್ಲ ೩೯ ಮಂದಿ ಭಾರತೀಯರೂ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿ ಸಂಘಟನೆಯಿಂದ ಕೊಲ್ಲಲ್ಪಟ್ಟಿರುವುದನ್ನು ದೃಢ ಪಡಿಸಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದರು.  ಪಂಜಾಬಿನ ಕಾಂಗ್ರೆಸ್ ಸದಸ್ಯರಾದ ಅಂಬಿಕಾ ಸೋನಿ ಮತ್ತು ಪ್ರತಾಪ್ ಸಿಂಗ್ ಬಜ್ವಾ ಅವರು ’ಎಲ್ಲ ೩೯ ಮಂದಿ ಭಾರತೀಯರೂ ಜೀವಂತವಾಗಿದ್ದರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಸ್ವರಾಜ್ ಅವರು ಭರವಸೆಗಳನ್ನು ನೀಡಿದ್ದರು ಎಂದು ಹೇಳಿದರು.  ಕಾಂಗ್ರೆಸ್ ಪಕ್ಷವು ೨೦೧೪ರಲ್ಲಿ ಗಮನಸೆಳೆಯುವ ಗೊತ್ತುವಳಿ ಮಂಡಿಸಿದಾಗ ಮತ್ತು ಸದನದಲ್ಲಿ ಈ ವಿಷಯ ಪ್ರಸ್ತಾಪವಾದಾಗಲೆಲ್ಲ ಹಲವಾರು ಬಾರಿ ಸುಷ್ಮಾ ಸ್ವರಾಜ್ ಅವರು ಈ ಭರವಸೆಗಳನ್ನು ನೀಡಿದ್ದರು ಎಂದು ಪಕ್ಷ ಪ್ರತಿಪಾದಿಸಿತು. ಸಚಿವರು ನನ್ನ ಮೂಲಗಳನ್ನು ತಿರಸ್ಕರಿಸಿದ್ದರು- ಅಂಬಿಕಾ ಸೋನಿ: ’ನಾನು ವಿಷಯ ಪ್ರಸ್ತಾಪಿಸಿದಾಗ, ಅವರು ನನ್ನ ಮೂಲಗಳನ್ನು ತಿರಸ್ಕರಿಸಿ ಆರು ಮೂಲಗಳನ್ನು ಉಲ್ಲೇಖಿಸಿದ್ದರು, ಬಳಿಕ ಈ ಮೂಲಗಳ ಸಂಖ್ಯೆ ಎಂಟಕ್ಕೆ ಏರಿತ್ತು. ಈಗ ನನ್ನ ಮೂಲ ಸರಿ ಮತ್ತು ಅವರ ಮೂಲ ತಪ್ಪು ಎಂಬುದು ಸಾಬೀತಾಗಿದೆ. ನಾವು ಖಂಡಿತವಾಗಿ ವಿದೇಶಾಂಗ ಸಚಿವೆ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುತ್ತೇವೆ ಎಂದು ಅಂಬಿಕಾ ಸೋನಿ ನುಡಿದರು.  ಸಂಸತ್ ಸದಸ್ಯರಾಗಿ ತನ್ನ ಸಂಸದೀಯ ಹಕ್ಕುಗಳ ಮತ್ತು ವಿನಾಯ್ತಿ/ ರಕ್ಷಣೆಗಳ ಉಲ್ಲಂಘನೆ ಆಗಿದೆ ಎಂಬುದಾಗಿ ಭಾವಿಸುವ ಸದಸ್ಯರು ಸಚಿವರ ಅಥವಾ ಸಹ ಸದಸ್ಯರ ವಿರುದ್ಧ ಹಕ್ಕು ಚ್ಯುತಿ ನಿರ್ಣಯ ಮಂಡಿಸಬಹುದು.  ತಮ್ಮ ಮೂಲಗಳು ಅಪಹೃತ ಭಾರತೀಯರ ಜೊತೆಗಿನ ನೇರ ಸಂಪರ್ಕದವೇ? ಇದಕ್ಕೆ ಸಂಬಂಧಿಸಿದ ವಿಡಿಯೋ ಟೇಪ್ ಇದೆಯೇ? ದೂರವಾಣಿ ಸಂಭಾಷಣೆಯ ದಾಖಲೆ ಇದೆಯೇ ಎಂದು ಸುಷ್ಮಾಜಿ ಅವರು ಹೇಳಬೇಕು ಎಂದು ನಾವು ಬಯಸುತ್ತೇವೆ ಎಂದು ಬಜ್ವಾ ನುಡಿದರು.  ೨೦೧೪ರ ಜೂನ್ ತಿಂಗಳ ಬಳಿಕ ಮೊಸಲ್ ನಗರವು ಐಸಿಸ್ ಕೈವಶವಾದ ಬಳಿಕ ಬಹುತೇಕ ಪಂಜಾಬಿನವರಾಗಿದ್ದ ೪೦ ಮಂದಿ ಭಾರತೀಯರು ಕಣ್ಮರೆಯಾಗಿದ್ದರು. ಅವರಲ್ಲಿ ಒಬ್ಬನಾದ ಹರ್ಜಿತ್ ಮಸ್ಹಿ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ, ಎಲ್ಲ ಇತರ ಭಾರತೀಯರನ್ನು ಕೊಲ್ಲಲಾಗಿದೆ ಎಂದು ಹೇಳಿದ್ದರು.  ಮಸ್ಹಿ ಮಾತುಗಳನ್ನು ಒಪ್ಪಲು ನಿರಂತರ ನಿರಾಕರಿಸಿದ್ದ ಸುಷ್ಮಾ ಅವರು ಖಚಿತ ಸಾಕ್ಷ್ಯಾಧಾರ ಲಭಿಸುವವರೆಗೆ ಕಣ್ಮರೆಯಾಗಿರುವ ವ್ಯಕ್ತಿಗಳನ್ನು ಸಾವನ್ನಪ್ಪಿದ್ದಾರೆ ಎಂದು ತಾನು ಘೋಷಿಸಲಾರೆ ಎಂದು ಹೇಳಿದ್ದರು. ೨೦೧೭ರ ಜುಲೈ ತಿಂಗಳ ಮುಂಗಾರು ಅಧಿವೇಶನ  ಕಾಲದಲ್ಲಿ ಸರ್ಕಾರವು ಅವರನ್ನು (ಅಪಹೃತರನ್ನು) ಪತ್ತೆ ಹಚ್ಚಲು ತನ್ನ ಪ್ರಯತ್ನಗಳನ್ನು ಮುಂದುವರೆಸುವುದು ಎಂದೂ ಸ್ವರಾಜ್ ಹೇಳಿದ್ದರು. 

2018: ಚೆನ್ನೈ: ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಅವರ ಶಿಫಾರಸುಗಳನ್ನು ಪಡೆಯದೆ ಪುದುಚೆರಿ ವಿಧಾನಸಭೆಗೆ ಕೇಂದ್ರವು ಮಾಡಿದ ನಾಮಕರಣಗಳ ವಿರುದ್ಧ ಸಲ್ಲಿಸಲಾಗಿದ್ದ ರಿಟ್ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್  ವಜಾಗೊಳಿಸಿತು.  ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ. ಸುಂದರ್ ಅವರನ್ನು ಒಳಗೊಂಡ ಪೀಠವು ನಾಮಕರಣಗಳನ್ನು ಕ್ರಮಬದ್ಧವಾಗಿಯೇ ಮಾಡಲಾಗಿದೆ. ಆದ್ದರಿಂದ ವಿಧಾನಸಭಾಧ್ಯಕ್ಷ ವಿ. ವೈಥಿಲಿಮಗಮ್ ಅವರು ಈ ನಾಮಕರಣಗಳನ್ನ ಅಂಗೀಕರಿಸಲು ನಿರಾಕರಿಸುವುದು ಸರಿಯಲ್ಲ ಎಂದು ತೀರ್ಪು ನೀಡಿದರು.  ಭಾರತೀಯ ಜನತಾ ಪಕ್ಷದ ಪುದುಚೆರಿ ಘಟಕದ ಮುಖ್ಯಸ್ಥ ವಿ. ಸಾಮಿನಾಥನ್, ಖಜಾಂಚಿ ಕೆ.ಜಿ. ಶಂಕರ್ ಮತ್ತು ಶಿಕ್ಷಣ ತಜ್ಞ ಎಸ್. ಸೆಲ್ವ ಗಣಪತಿ ಅವರನ್ನು ವಿಧಾನಸಭೆಗೆ ಕೇಂದ್ರವು ಮಾಡಿದ ನಾಮಕರಣವನ್ನು ಸಂವಿಧಾನಬಾಹಿರ ಎಂಬುದಾಗಿ ಘೋಷಿಸಬೇಕು ಮತ್ತು ತದನಂತರ ೨೦೧೭ರ ಜುಲೈ ೪ರಂದು ಕೇಂದ್ರ ಸರ್ಕಾರವು ಈ ಸಂಬಂಧ ಪ್ರಕಟಿಸಿದ ಗೆಜೆಟ್ ಪ್ರಕಟಣೆಯನ್ನು ರದ್ದು ಪಡಿಸಬೇಕು ಎಂದು ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.  ನ್ಯಾಯಮೂರ್ತಿಗಳು ಕೆ. ಲಕ್ಷ್ಮೀನಾರಾಯಣನ್ ಮತ್ತು ಎಸ್. ಧನಲಕ್ಷ್ಮಿ ಅವರು ನಾಮಕರಣ ವಿರುದ್ದ ಸಲ್ಲಿಸಿದ್ದ ಎರಡೂ ರಿಟ್ ಅರ್ಜಿಗಳನ್ನು ವಜಾಮಾಡಿದರು.  ಅರ್ಜಿದಾರರ ಪೈಕಿ ಒಬ್ಬರು ಸಚಿವ ಸಂಪುಟವು ಆಯ್ಕೆ ಮಾಡಿದ ವ್ಯಕ್ತಿಗಳನ್ನು ಹೊರತು ಪಡಿಸಿ ಬೇರೆ ಯಾರೇ ವ್ಯಕ್ತಿಗಳನ್ನು ಯಾವುದೇ ರೀತಿಯಲ್ಲೂ ವಿಧಾನಸಭೆಯ ಮೂರು ಸ್ಥಾನಗಳನ್ನು ಭರ್ತಿ ಮಾಡಲು ನಾಮಕರಣ ಮಾಡದಂತೆ ಕೇಂದ್ರ ಸರ್ಕಾರವನ್ನು ನಿಗ್ರಹಿಸಿ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದರು.   ಇನ್ನೊಂದು ಅರ್ಜಿಯು ನಾಮಕರಣವನ್ನು ಸಂವಿಧಾನಬಾಹಿರ ಎಂಬುದಾಗಿ ಘೋಷಿಸುವಂತೆ ಮತ್ತು ಅದಕ್ಕನುಗುಣವಾಗಿ ಕೇಂದ್ರವು ಜುಲೈ ೪ರಂದು ವಿ. ಸಾಮಿನಾಥನ್, ಕೆ.ಜಿ. ಶಂಕರ್ ಮತ್ತು ಎಸ್. ಸೆಲ್ವ ಗಣಪತಿ ಅವರನ್ನು ನೇಮಿಸಿ ಪ್ರಕಟಿಸಿದ ಗೆಜೆಟ್ ಪ್ರಕಟಣೆಯನ್ನು ರದ್ದು ಪಡಿಸಬೇಕು ಎಂದು ಕೋರಿತ್ತು. ಗೋವಾ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿ, ಶಾಸಕರ ನಾಮಕರಣದಿಂದ ಪ್ರಜಾಪ್ರಭುತ್ವವು ಬಲಗೊಳ್ಳಲಿದೆ ಎಂದು ಹೇಳಿದರು. ಇದು ಪ್ರಜಾಪ್ರಭುತ್ವವನ್ನು ಬಲಗೊಳಿಸಲಿದೆ. ಚರ್ಚೆಯನ್ನು ಸುಧಾರಿಸಲಿದೆ. ಆಡಳಿತ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲಿದೆ ಎಂದೂ ಅವರು ನುಡಿದರು.  ಮೇಲ್ಮನವಿ: ಹೈಕೋರ್ಟ್ ತೀರ್ಪಿನ ಅಧ್ಯಯನದ ಬಳಿಕ ಸರ್ಕಾರವು ಪ್ರತಿಕ್ರಿಯೆ ನೀಡುವುದು ಎಂದು ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನುಡಿದರು. ಅರ್ಜಿದಾರರು ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಕ್ತರಾಗಿದ್ದಾರೆ. ಎಂದು ಅವರು ನುಡಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್‍ಯದರ್ಶಿ ಕೆ. ಲಕ್ಷ್ಮೀನಾರಾಯಣನ್ ಅವರು ಸರ್ಕಾರವು ಆದೇಶದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದು ಎಂದು ಹೇಳಿದರು.

2017” ಲಖನೌ: ಉತ್ತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಮತ್ತು ಗೋವುಗಳ ಕಳ್ಳಸಾಗಣೆಯನ್ನು ತಡೆಯಲು ಕಾರ್ಯ ಯೋಜನೆ ರೂಪಿಸುವಂತೆ ಸಿಎಂ ಯೋಗಿ ಆದಿತ್ಯನಾಥ ಅವರು ಯುಪಿ ಪೊಲೀಸರಿಗೆ ಸೂಚನೆ ನೀಡಿದರು.  ರಾಜ್ಯದಲ್ಲಿ ಸಾಕಷ್ಟು ಸಕ್ರಮ ಕಸಾಯಿಖಾನೆಗಳೂ ಸಹ ಕಾರ್ಯ ನಿರ್ವಹಿಸುತ್ತಿರುವುದರಿಂದ ಗೋಹತ್ಯೆ ತಡೆಯಲು ಯಾವ ವಿಧದ ಯೋಜನೆ ರೂಪಿಸುತ್ತಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಮೊದಲ ಹಂತದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡುವವರ ವಿರುದ್ಧ ಮತ್ತು ಅಕ್ರಮ ಕಸಾಯಿ ಖಾನೆ ನಡೆಸುವವರ ವಿರುದ್ಧ ಯಾವುದೇ ಒತ್ತಡಕ್ಕೆ ಒಳಗಾಗದೆ ಕ್ರಮ ತೆಗೆದುಕೊಳ್ಳುವಂತೆ ಯುಪಿ ಸಿಎಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿದವು. ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದರಲ್ಲಿ ಹೊಸದೇನೂ ಇಲ್ಲ. ನಾವು ನಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ವಿಷಯ ತಿಳಿಸಿದ್ದೆವು. ರಾಜ್ಯದಲ್ಲಿ ಯಾವುದೇ ವಿಧದ ಅಕ್ರಮ ಚಟುವಟಿಕೆಗಳು ನಡೆಯಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಯುಪಿ ಸರ್ಕಾರದ ರಾಜ್ಯ ಖಾತೆ ಸಚಿವ ಸಿದ್ದಾರ್ಥ ನಾಥ್ ಸಿಂಗ್ ಮಾಹಿತಿ ನೀಡಿದರು.  ಗೋ ಹತ್ಯೆ ತಡೆಯುವ ಸಂಬಂಧ ರಾಜ್ಯ ಸರ್ಕಾರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಮಂಗಳವಾರ ರಾತ್ರಿ ಕೆಲವು ದುಷ್ಕರ್ವಿುಗಳು ಹಥ್ರಾಸ್ ಜಿಲ್ಲೆಯಲ್ಲಿ ಕೆಲವು ಮಾಂಸದಂಗಡಿಗಳಿಗೆ ಬೆಂಕಿ ಹಚ್ಚಿದರು.  ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಲಖನೌನಲ್ಲಿ ಎರಡು ಕಸಾಯಿಖಾನೆಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದರು.
2017: ಲಂಡನ್‌: ಬ್ರಿಟನ್ ಸಂಸತ್ ಭವನದ ಹೊರಗೆ ಗುಂಡಿನ ದಾಳಿ ನಡೆಯಿತು. ದಾಳಿಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿತು. ದಾಳಿಯಲ್ಲಿ ಓರ್ವ ಮಹಿಳೆ ಮೃತರಾಗಿದ್ದಾರೆ ಹಾಗೂ ಪೊಲೀಸ್ಸಿಬ್ಬಂದಿಯೊಬ್ಬರಿಗೆ ದಾಳಿಕೋರ ಚಾಕುವಿನಿಂದ ಇರಿದಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.
2017: ಜೈಪುರ: ರಾಜಸ್ಥಾನದ ಅಜ್ಮೀರದಲ್ಲಿರುವ ದರ್ಗಾದಲ್ಲಿ 2007ರಲ್ಲಿ ಘಟಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಶೇಷ ಕೋರ್ಟ್ ಇಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಭವೇಶ್ ಪಟೇಲ್ ಮತ್ತು ದೇವೇಂದ್ರ ಗುಪ್ತಾ ಹಾಗೂ ಸುನಿಲ್ ಜೋಷಿ ಅವರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಎನ್ಐಎ ಕೋರ್ಟ್ ಮಾರ್ಚ್ 8 ರಂದು ತೀರ್ಪು ನೀಡಿತ್ತು. ಸುನಿಲ್ ಜೋಷಿ ಈಗಾಗಲೇ ಮೃತರಾಗಿರುವ ಹಿನ್ನೆಲೆಯಲ್ಲಿ ಈದಿನ ಕೋರ್ಟ್ ಉಳಿದ ಇಬ್ಬರು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು.   ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಮತ್ತು ಇತರರನ್ನು ಕೋರ್ಟ್ ಖುಲಾಸೆಗೊಳಿಸಿತ್ತು. 2007 ಅಕ್ಟೋಬರ್ 11 ರಂದು ಅಜ್ಮೀರದ ಖ್ವಾಜಾ ಮೋಯಿದ್ದೀನ್ ಚಿಸ್ತಿ ದರ್ಗಾರದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು, ಘಟನೆಯಲ್ಲಿ ಮೂವರು ಮೃತರಾಗಿ, 15 ಜನರು ಗಾಯಗೊಂಡಿದ್ದರು ಪ್ರಕರಣದ ತನಿಖೆಯನ್ನು ಪ್ರಾರಂಭದಲ್ಲಿ ರಾಜಸ್ಥಾನದ ಎಟಿಎಸ್ ನಡೆಸುತ್ತಿತ್ತು. 2011 ಏಪ್ರಿಲ್ 6 ರಂದು ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಸಂಬಂಧ ಎನ್ಐಎ ಹೊಸದಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು. ಪ್ರಕರಣದ ಸಂಬಂಧ 149 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಮತುತ 451 ಕಡತಗಳನ್ನು ಪರಿಶೀಲಿಸಲಾಗಿತ್ತು.

2017: ಡೆಹ್ರಾಡೂನ್: 'ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಬುರ್ಖಾ ಧರಿಸುವ ಮಹಿಳೆಯರೂ
ಆತನಿಗೆ ಮತ ನೀಡಿದ್ದರು. ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಆತ ಹೃದಯ ಗೆಲ್ಲಬೇಕು' - ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಪ್ಪ ಆನಂದ್ ಸಿಂಗ್ ಭಿಷ್ತ್ ಈರೀತಿಯಾಗಿ ಆದಿತ್ಯನಾಥ್ ಅವರಿಗೆ ಸಲಹೆ ಮಾಡಿದರು.  ಅರಣ್ಯ ರೇಜಂರ್ ಆಗಿ ನಿವೃತ್ತರಾಗಿರುವ 84 ಹರೆಯದ ಬಿಷ್ತ್, ಮುಸ್ಲಿಂ ಮಹಿಳೆಯರೂ ಬಿಜೆಪಿಗೆ ಮತ ನೀಡಿದ್ದಾರೆ. ತ್ರಿವಳಿ ತಲಾಖ್ ಮತ್ತು ಇನ್ನಿತರ ಸಮಸ್ಯೆಗಳನ್ನು ಹೋಗಲಾಡಿಸಲು ಬಿಜೆಪಿ ಸಹಾಯ ಮಾಡುತ್ತದೆ ಎಂಬ ಭರವಸೆಯಿಂದ ಅವರು ಮತ ನೀಡಿದ್ದರು. ಬಿಜೆಪಿ ಮತ್ತು ಆದಿತ್ಯನಾಥ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಿಗಿದೆ. ಆದಿತ್ಯನಾಥ್ ಎಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.  ಉತ್ತರಪ್ರದೇಶದ ಪೌರಿ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಪತ್ನಿ ಸಾವಿತ್ರಿ ಜತೆ ಬಿಷ್ತ್ ವಾಸವಾಗಿದ್ದಾರೆ. ಅಧಿಕಾರ ಸ್ವೀಕರಿಸಿ ಮುಖ್ಯಮಂತ್ರಿ ಗದ್ದುಗೆಗೇರಿದ ದಿನವೇ ಆದಿತ್ಯನಾಥ್, ಜನರಿಗೆ ನೋವುಂಟು ಮಾಡುವ ಯಾವುದೇ ಕೆಟ್ಟ ಮಾತುಗಳನ್ನು ಸಚಿವರು ಆಡಬಾರದು ಎಂದು ಹೇಳಿದ್ದರು. ಅಭಿವೃದ್ಧಿಗಾಗಿ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದರು ಬಿಷ್ತ್

2017: ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ಪಕ್ಷಕ್ಕೆ ವಿದಾಯ ಹೇಳಿದ್ದ ಹಿರಿಯ ರಾಜಕಾರಣಿ ಹಾಗೂ
ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ಷಾ ಅವರ ಸಮ್ಮಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.  ಬಿಜೆಪಿ ಸೇರ್ಪಡೆಯ ಬಳಿಕ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರನ್ನು ಹಾಡಿ ಹೊಗಳಿದರು.ನಾನು ಬಿಜೆಪಿಗೆ ಧನ್ಯವಾದ ಹೇಳುತ್ತೇನೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಂತ ಶ್ರೇಷ್ಠ ನಾಯಕರ ನಾಯಕತ್ವದಲ್ಲಿ ಭಾರತ ಉನ್ನತ ಮಟ್ಟಕ್ಕೇರುತ್ತಿದೆ. ಇವರಿಬ್ಬರು ದೇಶವನ್ನುಶ್ರೇಷ್ಠತೆಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರೆ ಅತಿಶಯವಲ್ಲಎಂದು ಅವರು ನುಡಿದರು. 1999–2004 ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಪಕ್ಷದಿಂದ ಆರಿಸಿ ಮುಖ್ಯಮಂತ್ರಿಯಾಗಿದ್ದ ಎಸ್ಎಂ ಕೃಷ್ಣ ಕೆಲದಿನಗಳ ಹಿಂದೆ ಕಾಂಗ್ರೆಸ್ತೊರೆದಿದ್ದರು. ಕೇಂದ್ರದಲ್ಲಿ ಯುಪಿಎ ಆಡಳಿತವಿದ್ದಾಗ ಮಹಾರಾಷ್ಟ್ರ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು.
2009: ಹದಿನಾರು ತಿಂಗಳ ಹಿಂದೆ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ವಜಾಗೊಂಡಿದ್ದ ಪಾಕಿಸ್ಥಾನ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಈದಿನ ಮತ್ತೆ ಅದೇ ಹುದ್ದೆ ಅಲಂಕರಿಸಿದರು. ನಂತರ ನೂರಾರು ವಕೀಲರು, ರಾಜಕೀಯ ನಾಯಕರು, ನಾಗರಿಕರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರ ಸಮ್ಮುಖದಲ್ಲಿ ಚೌಧರಿಯವರ ಅಧಿಕೃತ ನಿವಾಸದಲ್ಲಿ ಧ್ವಜಾರೋಹಣ ನಡೆಯಿತು. ಈ ಸರಳ ಹಾಗೂ ಪರಿಣಾಮಕಾರಿ ಸಮಾರಂಭಕ್ಕೆ ನೂರಾರು ಹಿರಿಯ ಅಧಿಕಾರಿಗಳು ಕೂಡ ಸಾಕ್ಷಿಯಾದರು. ದೇಶದ ಹಲವೆಡೆಗಳಿಂದ ಆಗಮಿಸಿದ್ದ ಉತ್ಸಾಹಭರಿತ ಚೌಧರಿ ಬೆಂಬಲಿಗರು ಸಮಾರಂಭದ ಸಮಯದಲ್ಲಿ ಮನೆಯ ಹೊರಗಡೆ ಜಮಾಯಿಸಿ, ಅವರಿಗೆ ಶುಭ ಹಾರೈಸಿದರು.

2009: ಕ್ಯಾನ್ಸರಿನಿಂದಾಗಿ ಮರಣ ಶಯ್ಯೆಯಲ್ಲಿದ್ದ ಬ್ರಿಟನ್ನಿನ ರಿಯಾಲಿಟಿ ಶೋ ಟಿವಿ ತಾರೆ ಜೇಡ್ ಗೂಡಿ (27) ಈದಿನ ಮುಂಜಾನೆ ಕೊನೆಯುಸಿರೆಳೆದರು. ಗರ್ಭಕೊರಳಿನ ಕ್ಯಾನ್ಸರಿನಿಂದ ಬಳಲುತ್ತಿದ್ದ ಗೂಡಿ, ಇಬ್ಬರು ಪುತ್ರರು ಹಾಗೂ ಪತಿ ಜಾಕ್ ಟ್ವೀಡ್ ಅವರನ್ನು ಅಗಲಿದರು. ಎಸ್ಸೆಕ್ಸ್‌ನ ಅಪ್‌ಶೈರ್ ನಿವಾಸದಲ್ಲಿ ಅವರು ಅಸುನೀಗಿದರು. 2002ರಲ್ಲಿ 'ಬಿಗ್ ಬ್ರದರ್' ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಗೂಡಿ, ತಾಯಿ ಜಾಕಿ ಮತ್ತು ಗೆಳೆಯ ಜಾಕ್ ಟ್ವೀಡ್ ಅವರೊಂದಿಗೆ 2007ರಲ್ಲಿ ನಡೆದ 'ಬಿಗ್ ಬ್ರದರ್' ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜನಾಂಗೀಯ ನಿಂದನೆ ಮಾಡಿದ ಕಾರಣ ಗೂಡಿ ಶೋದಿಂದ ಹೊರ ಹೋಗಬೇಕಾಯಿತು. ನಂತರ ಇದರಲ್ಲಿ ಶಿಲ್ಪಾ ಶೆಟ್ಟಿ ಜಯಗಳಿಸಿದ್ದರು. ಈ ಜನಾಂಗೀಯ ನಿಂದನೆ ಜಗತ್ತಿನಾದ್ಯಂತ ಭಾರಿ ವಿವಾದಕ್ಕೆ ಎಡೆ ಮಾಡಿತ್ತು. ಕೊನೆಗೆ ಚಾನೆಲ್‌ನ ಮುಖ್ಯಸ್ಥರು ಜನಾಂಗೀಯ ನಿಂದನೆಯನ್ನು ನಿರಾಕರಿಸಿದ್ದರು. ಈ ಎಲ್ಲ ಘಟನೆಯ ನಂತರ ಮಾಧ್ಯಮಗಳಲ್ಲಿ ಜೇಡ್ ಗೂಡಿ ಮಾತ್ರ ರಾರಾಜಿಸತೊಡಗಿದ್ದರು. ಜನಾಂಗೀಯ ನಿಂದನೆ ವಿರೋಧಿಸಿ ಬ್ರಿಟಿಷ್ ಪ್ರಸಾರ ನಿಯಂತ್ರಣ 'ಆಫ್‌ಕಾಂ'ಗೆ 44,500 ದೂರುಗಳು ಬಂದಿದ್ದವು. ಆದರೆ ಗೂಡಿ ಮಾತ್ರ ಬ್ರಿಟನ್‌ನಲ್ಲಿ ಖ್ಯಾತಿಗಳಿಸುತ್ತಲೇ ಹೋದರು. ಶಿಲ್ಪಾ ವಿರುದ್ಧ ತಾನು ಮಾಡಿದ ಆರೋಪಗಳನ್ನು ಗೂಡಿ ಸಹ ನಿರಾಕರಿಸಿದ್ದರು. ಈ ಸಮಯದಲ್ಲಿ ಗೂಡಿ ಹೆಸರಿನ ಸುಗಂಧ ದ್ರವ್ಯವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು. ಆತ್ಮಚರಿತ್ರೆಯ ಪ್ರಕಟಣೆ ತಡೆಹಿಡಿಯಲಾಗಿತ್ತು. ಇಷ್ಟೆಲ್ಲ ಆದರೂ ಅವರು ಎದೆಗುಂದದೆ ರಿಯಾಲಿಟಿ ಶೋದ ಭಾರತದ ಅವತರಣಿಕೆ 'ಬಿಗ್ ಬಾಸ್'ನಲ್ಲಿ ಭಾಗವಹಿಸಿದರು. ಇದರ ನಿರೂಪಕಿಯಾಗಿ ಶಿಲ್ಪಾಶೆಟ್ಟಿಯೇ ಕಾರ್ಯನಿರ್ವಹಿಸಿದ್ದರು. ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗುವವರೆಗೆ ಭಾರತದಲ್ಲೇ ಇದ್ದರು. 1981ರಲ್ಲಿ ಲಂಡನ್ನಿನ ಬಡ ಕುಟುಂಬದಲ್ಲಿ ಹುಟ್ಟಿದ ಗೂಡಿ ತಮ್ಮದೇ ವರ್ಚಸ್ಸಿನಿಂದ ಕ್ಯಾಮೆರಾಗಳ ಬೆಳಕಿನಲ್ಲಿ ಹೆಸರು ಮಾಡುತ್ತಲೇ ಹೋದರು.

2009: ಕೊನೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಭಾರತದ ಕೈ ಜಾರಿ ಹೋಯಿತು. ಕೇಂದ್ರ ಸರ್ಕಾರ ಭದ್ರತೆ ನೀಡಲು ಹಿಂದೇಟು ಹಾಕಿದ್ದರಿಂದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ವಿದೇಶದಲ್ಲಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನ ಕೈಗೊಂಡಿತು. ಈದಿನ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯ ತುರ್ತು ಸಭೆ ಈ ನಿರ್ಧಾರ ಕೈಗೊಂಡಿತು. ಸಭೆಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೂಡ ಪಾಲ್ಗೊಂಡಿದ್ದರು.

2009: ನಾಪೋಕ್ಲು ಸಮೀಪದ ಮೂರ್ನಾಡಿನಲ್ಲಿ ಈದಿನ ಮಧ್ಯಾಹ್ನ ಗುಡುಗು ಸಹಿತ ಆಲಿಕಲ್ಲು ಮಳೆ ರಭಸದಿಂದ ಸುರಿಯಿತು. ಈ ಸಂದರ್ಭದಲ್ಲಿ ಗುತ್ತಿಗೆದಾರ ಸುರೇಶ್ ಮುತ್ತಪ್ಪನವರ ಮನೆಯೆದುರು 3 ಕೆ.ಜಿ. ತೂಕದ ಆಲಿಕಲ್ಲು ಬಿತ್ತು. ಸುಮಾರು ಅರ್ಧಗಂಟೆ ಕಾಲ ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ರಭಸದಿಂದ ಸುರಿಯಿತು.

2009: ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ವರುಣ್ ಗಾಂಧಿಗೆ ಟಿಕೆಟ್ ನೀಡದಿರುವಂತೆ ಚುನಾವಣಾ ಆಯೋಗ ಬಿಜೆಪಿಗೆ ಸೂಚಿಸಿತು. ಕೋಮುಗಳ ನಡುವೆ ದ್ವೇಷ ಕೆರಳಿಸುವ ಭಾಷಣ ಮಾಡಿದ ವರುಣ್ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದೂ ಆಯೋಗ ಹೇಳಿತು. 'ಈ ಚುನಾವಣೆಯಲ್ಲಿ ಬಿಜೆಪಿಯಾಗಲಿ ಅಥವಾ ಇನ್ನಾವುದೇ ಪಕ್ಷವಾಗಲಿ ವರುಣ್‌ಗೆ ಟಿಕೆಟ್ ನೀಡಿದಲ್ಲಿ, ಆ ಪಕ್ಷ ವರುಣ್ ಅಭಿಪ್ರಾಯವನ್ನು ಅನುಮೋದಿಸಿದೆ ಎಂದು ಪರಿಗಣಿಸಬೇಕಾಗುತ್ತದೆ' ಎಂದು ಆಯೋಗ ತಿಳಿಸಿತು.

2009: ಮಾಜಿ ಪ್ರಧಾನಿ ನವಾಜ್ ಷರೀಫ್ ಮೇಲೆ ಮತ್ತೊಂದು ಗದಾಪ್ರಹಾರ ಮಾಡಿದ ಪಾಕಿಸ್ಥಾನ ಸುಪ್ರೀಂಕೋರ್ಟ್, ದ್ವೇಷದ ಮನೋಭಾವ, ನ್ಯಾಯಾಂಗ ಮತ್ತು ರಕ್ಷಣಾ ಇಲಾಖೆಯ ಅಖಂಡತೆಗೆ ತೊಂದರೆ ಉಂಟುಮಾಡುವ ಸ್ವಹಿತಾಸಕ್ತಿಯ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಸಿತು. ನವಾಜ್ ಮತ್ತು ಅವರ ಸೋದರ ಶಹಬಾಜ್ ಷರೀಫ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಪು ನೀಡಿದುದು, ನಂತರ ಸಂಭವಿಸಿದ ಭಾರಿ ಪ್ರತಿಭಟನೆ, ಆದೇಶ ವಾಪಸಾತಿ ಇತ್ಯಾದಿಗಳ ಬಳಿಕ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತು. ತೀರ್ಪನ್ನು ಮರುಪರಿಶೀಲಿಸುವಂತೆ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಈ ಹೇಳಿಕೆ ನೀಡಲಾಯಿತು.

2008: ಗುಲ್ಬರ್ಗದ ಆಳಂದದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಬಣ್ಣ ಎರಚುವ ನೆಪದಲ್ಲಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು.

2008: ಚೀನಾದ ವಾಯವ್ಯ ಭಾಗದಲ್ಲಿರುವ ವೈಗುರ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದಿನ ದಿನ ಸಂಭವಿಸಿದ ಭಾರಿ ಭೂಕಂಪನದಿಂದ ಸಹಸ್ರಾರು ಮನೆಗಳಿಗೆ ಹಾನಿ ಉಂಟಾಗಿ ಸುಮಾರು 44 ಸಾವಿರ ಜನರು ಆಶ್ರಯ ಕಳೆದುಕೊಂಡರು ಎಂದು ಅಧಿಕೃತ ಮೂಲಗಳು ತಿಳಿಸಿದವು. ಮೊದಲು ರಿಕ್ಟರ್ ಮಾಪಕದಲ್ಲಿ 7.3ರಷ್ಟು ಇದ್ದ ಕಂಪನವು ನಂತರ 3.8ಕ್ಕೇ ಇಳಿಯಿತಾದರೂ ಸುಮಾರು 12 ಬಾರಿ ಭೂಮಿಯನ್ನು ಅದುರಿಸಿತು. ದಕ್ಷಿಣ ಕ್ಸಿಯಾಂಗಿನ ಯುತೆನ್, ಕ್ವಿರಾ ಮತ್ತು ಲೋಪ್ನಲ್ಲಿ ಭೂಕಂಪನದಿಂದ ಸುಮಾರು 44 ಸಾವಿರ ಜನರಿಗೆ ತೊಂದರೆಯಾಯಿತು.

2008: ಟಿಬೆಟಿನ ಧಾರ್ಮಿಕ ಮುಖಂಡ ದಲೈಲಾಮ ಅವರ ಜೊತೆ ಮಾತುಕತೆ ನಡೆಸಬೇಕು ಎಂಬ ಸಲಹೆಯನ್ನು ಸಾರಾಸಗಾಟಾಗಿ ತಳ್ಳಿಹಾಕಿದ ಚೀನಾ, ಟಿಬೆಟ್ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಪಣ ತೊಟ್ಟಿತು.

2008: ಆತ್ಮಾಹತ್ಯಾ ದಾಳಿಯಲ್ಲಿ ಮೂವರು ಉಗ್ರರು ಜೀವ ತೆತ್ತು, ಶ್ರೀಲಂಕಾ ನೌಕಾ ಪಡೆಯ ಹಡಗೊಂದನ್ನು ಮುಳುಗಿಸಿದರು ಎಂದು ಎಲ್ ಟಿ ಟಿ ಇ ಪ್ರಕಟಿಸಿತು. ಆದರೆ ನೌಕಾ ದಳವು ಎಲ್ ಟಿ ಟಿ ಇ ಜೊತೆಗೆ ಅಂತಹ ಯಾವುದೇ ಘರ್ಷಣೆಯನ್ನೂ ನಡೆಸಿಲ್ಲ ಎಂದು ಸೇನಾಪಡೆ ತಿಳಿಸಿತು.

2008: ಕರ್ನಾಟಕ ರಾಜ್ಯದಲ್ಲಿ ಮಳೆಯ ಅಬ್ಬರ ನಿಲ್ಲಲಿಲ್ಲ. ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಟೊಮೆಟೋ, ಕಾಫಿ, ಸೂರ್ಯಕಾಂತಿ, ದಾಳಿಂಬೆ, ಕಲ್ಲಂಗಡಿ, ಹುಣಸೆ, ಕನಕಾಂಬರ ಹಾಗೂ ಮಾವಿನ ಮಿಡಿಗೆ ಹಾನಿಯಾಯಿತು. ಕೆಲವು ಜಿಲ್ಲೆಗಳಲ್ಲಿ ನೀರಾವರಿ ಭಾಗದ ಬೆಳೆಗೆ ಮಳೆಯಿಂದ ಅನುಕೂಲವೇ ಆಯಿತು.

2008: ತಮಿಳುನಾಡಿನಲ್ಲಿ ವಾರದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಎರಡು ದಿನಗಳಲ್ಲಿ 12 ಜನ ಮೃತರಾದರು. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ನಾಶವಾಯಿತು. 20 ಸಾವಿರ ಎಕರೆಯಷ್ಟು ಭತ್ತದ ಬೆಳೆ ಜಲಾವೃತಗೊಂಡಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯು (ಪಿಪಿಪಿ) ಪಕ್ಷದ ಉಪಾಧ್ಯಕ್ಷ ಹಾಗೂ ನ್ಯಾಷನಲ್ ಅಸೆಂಬ್ಲಿಯ (ಸಂಸತ್ತು) ಮಾಜಿ ಸ್ಪೀಕರ್ ಸೈಯದ್ ಯೂಸಫ್ ರಾಜಾ ಗಿಲಾನಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು.

2008: ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳ ಹಾರಾಟ ಶನಿವಾರ ಹಿಂದಿನ ದಿನ ನಡುರಾತ್ರಿಯಿಂದ ಆರಂಭಗೊಂಡಿತು. ಇದೇ ಸಮಯಕ್ಕೆ ಬೇಗಮ್ ಪೇಟೆಯಲ್ಲಿನ ಮೊದಲಿನ ವಿಮಾನನಿಲ್ದಾಣವನ್ನು ಮುಚ್ಚಲಾಯಿತು. ಶಂಷಾಬಾದಿನಲ್ಲಿನ ಹೊಸ ವಿಮಾನನಿಲ್ದಾಣದಲ್ಲಿ ಲುಫ್ತಾನ್ಸಾ ವಿಮಾನ ಬಂದಿಳಿಯುತ್ತಿದ್ದಂತೆ ಭವ್ಯ ಸ್ವಾಗತ ನೀಡಲಾಯಿತು.

2007: `ಯುಜಿ' ಎಂದೇ ಖ್ಯಾತರಾಗಿದ್ದ ತತ್ವಜ್ಞಾನಿ ಉಪ್ಪಲೇರಿ ಗೋಪಾಲಕೃಷ್ಣ ಕೃಷ್ಣಮೂರ್ತಿ (89) ಇಟಲಿಯ ವಾಲೆಕ್ರಾಸಿಯಾದಲ್ಲಿ ನಿಧನರಾದರು.

2007: ಭಾರತೀಯ ಸಂಜಾತ ಅಮೆರಿಕನ್ ಗಣಿತಜ್ಞ ಶ್ರೀನಿವಾಸ ಎಸ್. ಆರ್. ವರದನ್ (67) ಅವರು, ಗಣಿತ ಕ್ಷೇತ್ರಕ್ಕೆ ನೀಡಲಾಗುವ 8.50 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರತಿಷ್ಠಿತ 'ಅಬೆಲ್ ಪ್ರಶಸ್ತಿ'ಯನ್ನು ಗೆದ್ದುಕೊಂಡರು. `ಸಂಭವನೀಯ ಸಿದ್ಧಾಂತಕ್ಕೆ ನೀಡಿರುವ ಮೂಲಭೂತ ಕೊಡುಗೆಗಳಿಗಾಗಿ' ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕೌರಾಂಟ್ ಗಣಿತ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಶ್ರೀನಿವಾಸ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಸಮಿತಿಯ ಪ್ರಕಟಣೆ ತಿಳಿಸಿತು. ನೊಬೆಲ್ ಪ್ರಶಸ್ತಿಗೆ ಸರಿಸಮವಾದ ಈ 60 ಲಕ್ಷ ಕ್ರೋನರ್ ಪ್ರಶಸ್ತಿಯನ್ನು ನಾರ್ವೆಯ ಖ್ಯಾತ ಗಣಿತಜ್ಞ ನೀಲ್ಸ್ ಹೆನ್ರಿಕ್ ಅಬೆಲ್ ಅವರ 200ನೇ ಜನ್ಮಶತಮಾನೋತ್ಸವದ ಅಂಗವಾಗಿ ನಾರ್ವೆ ಸರ್ಕಾರವು 2002ರಲ್ಲಿ ಸ್ಥಾಪಿಸಿದೆ. ನಾರ್ವೆಯ ದೊರೆ ಐದನೇ ಹೆರಾಲ್ಡ್ ಅವರಿಂದ ಈ ಪ್ರಶಸ್ತಿಯನ್ನು ಶ್ರೀನಿವಾಸ ಅವರು ಮೇ 22ರಂದು ಓಸ್ಲೋದಲ್ಲಿ ಸ್ವೀಕರಿಸುವರು.

2007: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನ ಸುತ್ತಲಿನ ಪ್ರದೇಶಗಳಲ್ಲಿ ಸತ್ತ ಕಾಗೆಗಳಲ್ಲಿ ಮಾರಣಾಂತಿಕ ಪಕ್ಷಿಜ್ವರ (ಕೋಳಿಜ್ವರ) ಹರಡುವ ವೈರಸ್ ಎಚ್ 5 ಎನ್ 1 ವೈರಸ್ ಇರುವುದು ಪತ್ತೆಯಾಗಿರುವುದಾಗಿ ಇಸ್ಲಾಮಾಬಾದಿನ ಕೃಷಿ ಪ್ರಾಧಿಕಾರ ಪ್ರಕಟಿಸಿತು. ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಾಗೆಗಳಲ್ಲಿ ಈ ವೈರಸ್ ಇರುವುದು ಪತ್ತೆಯಾಯಿತು. ರಾಜಧಾನಿಯ ಉದ್ಯಾನವನಗಳಲ್ಲಿ ಸತ್ತುಬಿದ್ದಿದ್ದ ಎಂಟು ಕಾಗೆಗಳ ದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಎರಡು ಕಾಗೆಗಳಲ್ಲಿ ವೈರಸ್ ಇರುವುದು ಖಚಿತವಾಗಿದೆ ಎಂದು ಆಹಾರ ಮತ್ತು ಕೃಷಿ ಸಚಿವಾಲಯದಲ್ಲಿ ಜಾನುವಾರು ಇಲಾಖೆ ಆಯುಕ್ತ ಮಹಮ್ಮದ್ ಅಫ್ಜಲ್ ಹೇಳಿದರು.

2007: ಪಾಕಿಸ್ಥಾನವು ಸುಮಾರು 700 ಕಿ.ಮೀ. ದೂರ ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ `ಬಾಬರ್' (ಹಾಟ್ಫ್-7) ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಭಾರತದ ಹಲವಾರು ನಗರಗಳನ್ನು ಕ್ರಮಿಸಬಲ್ಲ ಸಾಮರ್ಥ್ಯವುಳ್ಳ್ಳ ಈ ಕ್ಷಿಪಣಿ ರೇಡಾರ್ ಶೋಧಕದ ಕಣ್ತಪ್ಪಿಸಿ, ಅಣ್ವಸ್ತ್ರ ಸೇರಿದಂತೆ ವಿವಿಧ ಯುದ್ಧ ಸಾಮಗ್ರಿಗಳನ್ನು ಬಹುದೂರ ಸಾಗಿಸಬಲ್ಲುದು. ಈ ಹಿಂದೆ 2005ರಲ್ಲಿ, 500 ಕಿ.ಮೀ. ದೂರ ಸಾಗುವ ಸಾಮರ್ಥ್ಯದ ಬಾಬರ್ ಕ್ಷಿಪಣಿಯನ್ನು ಮೊದಲ ಹಂತದ ಪರೀಕ್ಷೆಯಾಗಿ ಉಡಾಯಿಸಿ ಪಾಕಿಸ್ಥಾನವು ವಿಶ್ವದ ಗಮನ ಸೆಳೆದಿತ್ತು. ಚೀನಾ ತಯಾರಿಸಿದ ಕ್ಷಿಪಣಿಯ ಪ್ರತಿರೂಪ ಇದೆಂದು ಹೇಳಲಾಗಿತ್ತು.

2007: ವರ್ಷದಷ್ಟು ಹಿಂದೆ ಅಪಘಾತವೊಂದರಲ್ಲಿ ಮೃತರಾದ ಭಾರತೀಯ ವಿಜ್ಞಾನ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ. ಟಿ. ಚಂದ್ರಶೇಖರ್ ಅವರ ಕುಟುಂಬ ವರ್ಗಕ್ಕೆ 32.78 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶ ನೀಡಿತು. ಚಂದ್ರಶೇಖರನ್ ಅವರು 1980ರ ಆದಿಯಲ್ಲಿ ರಾಷ್ಟ್ರದ ಪ್ರಥಮ ಕಂಪ್ಯೂಟರೀಕೃತ `ಕರೆಂಟ್ ಅವೇರ್ ನೆಸ್ ಸರ್ವೀಸ್' ಕಂಡು ಹಿಡಿದ ಕೀರ್ತಿಗೆ ಭಾಜನರಾಗಿದ್ದರು.

2006: ಲಾಭದಾಯಕ ಹುದ್ದೆಯ ತೂಗುಕತ್ತಿಯಿಂದ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿ ಇರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಇತರರ ರಕ್ಷಣೆಗೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ತರಲು ತಂತ್ರ ಹೂಡಿದೆ ಎಂಬ ಪ್ರತಿಪಕ್ಷಗಳ ಆರೋಪದ ಮಧ್ಯೆಯೇ ಸಂಸತ್ತಿನ ಉಭಯ ಸದನಗಳನ್ನೂ ದಿಢೀರನೆ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನವು ಮಧ್ಯಂತರ ಬಿಡುವು ಇಲ್ಲದೆ ಈ ರೀತಿ ಅರ್ಧದಲ್ಲೇ ಮೊಟಕುಗೊಂಡದ್ದು ಸಂಸದೀಯ ಇತಿಹಾಸದಲ್ಲಿ ಇದೇ ಪ್ರಥಮ.

2006: ಕೇರಳದಲ್ಲಿ ಜಲ ಸಂರಕ್ಷಣೆ ಪ್ರಾಮುಖ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನಗಳಿಗಾಗಿ `ಮಲಯಾಳಂ ಮನೋರಮಾ' ಪತ್ರಿಕೆಗೆ `ಪ್ರತಿಷ್ಠಿತ ಯುನೆಸ್ಕೊ' ಪ್ರಶಸ್ತಿ ಲಭಿಸಿತು. ಜಾಗತಿಕ ಜಲ ಸಂಪನ್ಮೂಲ ವಿಭಾಗದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಕೆನಡಾದ ನಾಗರಿಕರಾಗಿರುವ ಭಾರತೀಯ ಸಂಜಾತ ವಿಜ್ಞಾನಿ ಅಸಿತ್ ಬಿಸ್ವಾಸ್ (67) ಅವರಿಗೆ ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ವಾಟರ್ ಇನ್ ಸ್ಟಿಟ್ಯೂಟ್ ಪ್ರದಾನ ಮಾಡುವ `ಪ್ರತಿಷ್ಠಿತ ಸ್ಟಾಕ್ ಹೋಮ್ ಜಲ ಪ್ರಶಸ್ತಿ' ಲಭಿಸಿತು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಐದನೆಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಗುರಿಕಾರ ಸಮರೇಶ್ ಜಂಗ್ ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಗೆ ಪಾತ್ರರಾದರು. 10 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸಮರೇಶ್ ಜಂಗ್ ದಾಖಲೆಯ 685.4 ಅಂಕ ಗಳಿಸಿ ಚಿನ್ನದ ಪದಕ ಗಿಟ್ಟಿಸಿದರು. ಎಂಟು ವರ್ಷಗಳ ಹಿಂದೆ ಇಂಗ್ಲೆಂಡಿನ ಮೈಕೆಲ್ ಗಾಲ್ಫ್ ಸೃಷ್ಟಿಸಿದ್ದ 679.9 ಅಂಕಗಳ ದಾಖಲೆಯನ್ನು ಸಮರೇಶ್ ಜಂಗ್ ಅಳಿಸಿ ಹಾಕಿದರು.

2001: ಚೆನ್ನೈಯಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರು ಟೆಸ್ಟ್ ಕ್ರಿಕೆಟ್ ಮ್ಯಾಚ್ ಸರಣಿಯ ಕೊನೆಂಯಲ್ಲಿ ಹರ ಭಜನ್ ಸಿಂಗ್ 32ನೇ ವಿಕೆಟ್ ಪಡೆದರು. ಮೂರು ಟೆಸ್ಟ್ ಮ್ಯಾಚ್ ಸರಣಿಯಲ್ಲಿ ಭಾರತೀಯ ಬೌಲರ್ ಪಡೆದ ಅತೀ ಹೆಚ್ಚಿನ ವಿಕೆಟ್ ದಾಖಲೆ ಇದು. ಅನಿಲ್ ಕುಂಬ್ಳೆ ಪಡೆದಿದ್ದ 23 ವಿಕೆಟುಗಳ ದಾಖಲೆಯನ್ನು ಅವರು ಮುರಿದರು.

2001: ಅನಿಮೇಷನ್ ಪಾತ್ರಗಳಾದ `ಯೋಗಿ ಬೀಯರ್' `ಸ್ಕೂಬಿ ಡೂ' `ಫ್ಲಿನ್ ಸ್ಟೋನ್ಸ್' ಇತ್ಯಾದಿಗಳನ್ನು ಸೃಷ್ಟಿಸಿದ ವಿಲಿಯಂ ಹೆನ್ನಾ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಜೋಸೆಫ್ ಬಾರ್ಬೇರಾ ಅವರ ಜೊತೆ ಸೇರಿ ಈ ಅನಿಮೇಷನ್ ಪಾತ್ರಗಳನ್ನು ಅವರು ಸೃಷ್ಟಿಸಿದರು.

1971: ಖ್ಯಾತ ವಾಗ್ಗೇಯಕಾರ ಸಂಪತ್ ಜಯಾ (ಗುರುದಾಸ) ಅವರು ಜಯ ರಾಘವನ್- ಆಲಮೇಲು ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಭಜನೆ ಜನಪ್ರಿಯಗೊಳಿಸುವ ಸಲುವಾಗಿ ಅವರು ಗುರುದಾಸ ಭಜನಾ ಮಂಡಳಿ ಸ್ಥಾಪಿಸಿದರು. ಇವರ ಕೃತಿ ರಚನಾ ಪ್ರತಿಭೆ ಗುರುತಿಸಿ ಇವರಿಗೆ `ಗುರುದಾಸ' ಅಂಕಿತ ನೀಡಲಾಯಿತು.

1963: ಕಲಾವಿದೆ ಸುರೇಖಾ ಕುಲಕರ್ಣಿ ಜನನ.

1957: ಭಾರತವು ಶಕ ವರ್ಷಾಧಾರಿತ ರಾಷ್ಟ್ರೀಯ ಕ್ಯಾಲೆಂಡರನ್ನು ಅಂಗೀಕರಿಸಿತು.

1946: ಜೋರ್ಡಾನ್ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಗಳಿಸಿತು.

1945: ಮಧ್ಯಪ್ರಾಚ್ಯದ ಅರಬ್ ರಾಜ್ಯಗಳ ಒಕ್ಕೂಟ `ಅರಬ್ ಲೀಗ್' ಕೈರೋದಲ್ಲಿ ಸ್ಥಾಪನೆಗೊಂಡಿತು.

1942: ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವ ರಾಜಕೀಯ ಸೂತ್ರ ರೂಪಿಸುವ ಸಲುವಾಗಿ ಸರ್ ಸ್ಟಾಫರ್ಡ್ ಕ್ರಿಪ್ಸ್ ನೇತೃತ್ವದ ಕ್ರಿಪ್ಸ್ ಆಯೋಗ ಭಾರತಕ್ಕೆ ಆಗಮಿಸಿತು. ಈ ಯತ್ನ ವಿಫಲಗೊಂಡು ಕೆಲವು ತಿಂಗಳ ಬಳಿಕ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಯಿತು.

1941: ಕಲಾವಿದ ಲಕ್ಷ್ಮಣ ಭಟ್ ಜನನ.

1893: ಭಾರತದ ಕ್ರಾಂತಿಕಾರಿ ನಾಯಕರಲ್ಲಿ ಒಬ್ಬರಾದ ಸೂರ್ಯ ಸೇನ್ (1893-1934) ಜನ್ಮದಿನ. ಚಿತ್ತಗಾಂಗ್ ಶಸ್ತ್ರಾಗಾರ ಮೇಲಿನ ದಾಳಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.

No comments:

Post a Comment