ಇಂದಿನ ಇತಿಹಾಸ History Today ಮಾರ್ಚ್ 19
2018: ನವದೆಹಲಿ: ದೆಹಲಿ ಮುಖ್ಯಮಂತ್ರಿ
ಅರವಿಂದ ಕೇಜ್ರಿವಾಲ್ ಅವರು ಭೇಷರತ್ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ದೆಹಲಿಯ ನ್ಯಾಯಾಲಯವೊಂದು ಸೋಮವಾರ
ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ದಾಖಲಿಸಿದ್ದ ಕ್ರಿಮಿನಲ್
ಮಾನನಷ್ಟ ಮೊಕದ್ದಮೆಯನ್ನು ಮುಕ್ತಾಯಗೊಳಿಸಿತು. ದೆಹಲಿ
ಮುಖ್ಯಮಂತ್ರಿಯವರು ಗಡ್ಕರಿ ಅವರ ಬಳಿ ಭೇಷರತ್ ಕ್ಷಮೆ ಕೋರಿ ಪ್ರಕರಣದಲ್ಲಿ ರಾಜಿಯಾದುದನ್ನು ಅನುಸರಿಸಿ
ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಖಟ್ಲೆಯನ್ನು ಮುಕ್ತಾಯಗೊಳಿಸಿದರು. ‘ನನಗೆ ನಿಮ್ಮ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ.
ನಾವಿಬ್ಬರೂ ಸಾರ್ವಜನಿಕ ರಂಗದಲ್ಲಿ ಇರುವ ಬೇರೆ ಬೇರೆ ಪಕ್ಷಕ್ಕೆ ಸೇರಿದ ಪ್ರಮುಖ ವ್ಯಕ್ತಿಗಳು. ನಿಮ್ಮ
ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ಪರಿಶೀಲಿಸದೆ ನಾನು ಕೆಲವೊಂದು ಟೀಕೆ ಮಾಡಿದ್ದು, ಅದು
ನಿಮ್ಮ ಮನಸ್ಸನ್ನು ನೋಯಿಸಿದ್ದರಿಂದ ನೀವು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೀರಿ.
ಇದಕ್ಕಾಗಿ ನಾನು ವಿಷಾದಿಸುವೆ’ ಎಂದು ಕೇಜ್ರಿವಾಲ್ ಅವರು
ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದರು. ಲೋಕಸಭಾ ಚುನಾವಣೆಗೆ ಮುನ್ನ ತಾವು ತಯಾರಿಸಿದ್ದ ಭಾರತದ
ಅತ್ಯಂತ ಭ್ರಷ್ಟ ನಾಯಕರು ಪಟ್ಟಿಗೆ ಗಡ್ಕರಿ ಅವರ ಹೆಸರನ್ನು ಸೇರಿಸಿ ಅದನ್ನು ಪಕ್ಷದ ಸಭೆಯಲ್ಲಿ ಕೇಜ್ರಿವಾಲ್
ಅವರು ಪ್ರಕಟಿಸಿದ ಬಳಿಕ ೨೦೧೩ರಲ್ಲಿ ಗಡ್ಕರಿ ಅವರು ಕೇಜ್ರಿವಾಲ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ
ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು
ಈಗಾಗಲೇ ಕೇಜ್ರಿವಾಲ್ ವಿರುದ್ಧ ದೋಷಾರೋಪಣೆ ನೋಟಿಸ್
ನೀಡಿತ್ತು. ಕೇಜ್ರಿವಾಲ್ ಕ್ಷಮಾಯಾಚನೆ ಬಗ್ಗೆ ಪ್ರತಿಕ್ರಿಯಿಸಿದ
ದೆಹಲಿಯ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ’ನಾವು ಇಲ್ಲಿ ಇರುವುದು ಸಾರ್ವಜನಿಕರ ಸೇವೆಗಾಗಿ.
ನಮ್ಮ ಹೇಳಿಕೆಗಳ ಪರಿಣಾಮವಾಗಿ ಯಾರಿಗಾದರೂ ನೋವಾದರೆ ನಾವು ಕ್ಷಮೆ ಯಾಚಿಸುತ್ತೇವೆ. ನಾವು ಪ್ರತಿಷ್ಠೆಯ
ಹೋರಾಟವನ್ನು ಮಾಡಲು ಬಯಸುವುದಿಲ್ಲ’ ಎಂದು ಹೇಳಿದರು. ೨೦೧೪ರಲ್ಲಿ ಕೇಜ್ರಿವಾಲ್ ಅವರು ಸಮನ್ಸ್ ಮೇಲೆ ನ್ಯಾಯಾಲಯಕ್ಕೆ
ಹಾಜರಾಗಿದ್ದ ಕೇಜ್ರಿವಾಲ್ ಅವರು ಜಾಮೀನು ನೀಡಲು ನಿರಾಕರಿಸಿದಾಗ ನ್ಯಾಯಾಲಯವು ಅವರನ್ನು ನ್ಯಾಯಾಂಗ
ವಶಕ್ಕೆ ಒಪ್ಪಿಸಿತ್ತು. ಏನಿದ್ದರೂ ಬಳಿಕ ಹೈಕೋರ್ಟ್ ಸಲಹೆ ಮೇರೆಗೆ ಜಾಮೀನು ಬಾಂಡ್ ನೀಡಿ ಅವರು ಸೆರೆಮನೆಯಿಂದ
ಬಿಡುಗಡೆಯಾಗಿದ್ದರು.
2018: ಬೆಂಗಳೂರು: ಲಿಂಗಾಯತರನ್ನು ಪ್ರತ್ಯೇಕ
ಧರ್ಮವಾಗಿ ಪರಿಗಣಿಸಲು ಒಪ್ಪಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ’ಲಿಂಗಾಯತರನ್ನು ಸ್ವತಂತ್ರ
ಧರ್ಮ’ ಎಂಬುದಾಗಿ ಮಾನ್ಯ ಮಾಡುವಂತೆ ಕೇಂದ್ರಕ್ಕೆ
ಶಿಫಾರಸು ಮಾಡಲು ನಿರ್ಧರಿಸಿತು. ಇದರೊಂದಿಗೆ ಈ ವಿಚಾರವಾಗಿ ಕಳೆದ ಹಲವಾರು ತಿಂಗಳುಗಳಿಂದ ಕೇಳಿಬರುತ್ತಿದ್ದ
ಊಹಾಪೋಹಗಳಿಗೆ ತೆರೆ ಎಳೆಯಿತು. ಪ್ರಬಲ ಲಿಂಗಾಯತ ಧರ್ಮಗುರುಗಳ ಜೊತೆಗೆ ಸುದೀರ್ಘ ಕಾಲದ ಅನೌಪಚಾರಿಕ
ಮಾತುಕತೆ ಮತ್ತು ಸಂಪುಟ ಸಭೆಯ ಬಳಿಕ ರಾಜ್ಯ ಸರ್ಕಾರವು
ತಾನು ಕೇಂದ್ರಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಶಿಫಾರಸು ಕಳುಹಿಸುವುದಾಗಿ ಘೋಷಿಸಿತು. ನ್ಯಾಯಮೂರ್ತಿ
ನಾಗಮೋಹನ ದಾಸ್ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿತು. ಸಮಿತಿಯು
ತನ್ನ ಶಿಫಾರಸಿನಲ್ಲಿ ಲಿಂಗಾಯತರನ್ನು ಪ್ರತ್ಯೇಕಧರ್ಮವಾಗಿ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ
ಸೂಚಿಸಿತ್ತು. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ
ಜೊತೆ ಮಾತನಾಡಿದ ಜಲ ಸಂಪನ್ಮೂಲ ಸಚಿವ, ಲಿಂಗಾಯತ ನಆಯಕ ಎಂ.ಬಿ. ಪಾಟೀಲ ಅವರು ’ಈಗ ನಿರ್ಧಾರ ಕೈಗೊಳ್ಳುವುದು
ಕೇಂದ್ರಕ್ಕೆ ಬಿಟ್ಟಿ ವಿಷಯ’ ಎಂದು ಹೇಳಿದರು. ‘ನಮ್ಮ ಹೋರಾಟ ಈದಿನ ತಾರ್ಕಿಕ ಅಂತ್ಯವನ್ನು ಕಂಡಿದೆ. ಲಿಂಗಾಯತರು ಹಿಂದುಗಳಲ್ಲ ಎಂದು ನಾವು ಯಾವಾಗಲೂ ಪ್ರತಿಪಾದಿಸುತ್ತಲೇ
ಬಂದಿದ್ದೇವೆ. ಕೇಂದ್ರವು ನಮ್ಮ ಬೇಡಿಕೆಯನ್ನು ಅಂಗೀಕರಿಸುವುದು ಎಂದು ನಾವು ಹಾರೈಸುತ್ತೇವೆ’ ಎಂದು ಅವರು ನುಡಿದರು. ಹಿಂದು
ಧರ್ಮವನ್ನು ವಿಭಜಿಸುವುದು ಎಂಬ ಕಾರಣಕ್ಕಾಗಿ ಲಿಂಗಾಯತರಿಗೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವುದನ್ನು
ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರೆಸ್ಸೆಸ್) ಈ ಮುನ್ನವೇ ವಿರೋಧಿಸಿತ್ತು. ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ
ವಕ್ತಾರ ಎಸ್. ಪ್ರಕಾಶ್ ಅವರು ’ಇದು ಚುನಾವಣಾ ಕಾಲದಲ್ಲಿ ಮಾಡುತ್ತಿರುವ ಲಿಂಗಾಯತರ ತುಷ್ಟೀಕರಣ. ಕಾಂಗ್ರೆಸ್
ಪಕ್ಷವು ಸಮಾಜವನ್ನು ಒಡೆಯುತ್ತಿದೆ’ ಎಂದು ಆಪಾದಿಸಿದರು. ಸಂಪುಟ ನಿರ್ಧಾರವು ಈಗ ಮುಖ್ಯ ವಿರೋಧ ಪಕ್ಷವಾದ ಬಿಜೆಪಿಯನ್ನು
ಅಡಕತ್ತರಿಯಲ್ಲಿ ಸಿಲುಕಿಸಿದೆ. ಏಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಪಾಲಿಗೆ ಲಿಂಗಾಯತರು ಬೆನ್ನಲುಬು
ಇದ್ದಂತೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ಲಿಂಗಾಯತರಾಗಿರುವುದರಿಂದ
ಪಕ್ಷವನ್ನು ಸಹಜವಾಗಿಯೇ ಇಕ್ಕಟ್ಟಿನಲ್ಲಿ ಸಿಲುಕಿದೆ.
ಯಡಿಯೂರಪ್ಪ
ಅವರ ನಿಕಟವರ್ತಿಯೊಬ್ಬರು ನಾವು ಇದನ್ನು ವಿರೋಧಿಸಿದರೆ, ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ೧೬ಕ್ಕೂ
ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರ ಬೆಂಬಲ ಕಳೆದುಕೊಳ್ಳಬಹುದು. ಇದನ್ನು ಬೆಂಬಲಿಸಿದರೆ, ಆರೆಸ್ಸೆಸ್
ಅದನ್ನು ಮೆಚ್ಚದೇ ಇರಬಹುದು. ನಾವೀಗ ನಿಜಕ್ಕೂ ಅತ್ಯಂತ ಹೆಚ್ಚರಿಕೆಯ ಹೆಜ್ಜೆ ಇಡುವ ಅಗತ್ಯ ಇದೆ’ ಎಂದು ನುಡಿದರು. ವಿಷಯದ
ಚರ್ಚೆಗಾಗಿ ಸಮಾವೇಶಗೊಂಡಿದ್ದ ಸಚಿವ ಸಂಪುಟ ಸಭೆಯಲ್ಲಿ ಅರಾಜಕ ಸ್ಥಿತಿ ಇತ್ತು ಎಂದು ಸುದ್ದಿ ಮೂಲಗಳು
ತಿಳಿಸಿವೆ. ಕೆಲವರು ’ಲಿಂಗಾಯತ ಧರ್ಮ’ ಎಂಬುದಾಗಿ ಕರೆಯಬೇಕು
ಎಂದು ಆಗ್ರಹಿಸಿದರೆ, ಇತರರು ’ವೀರಶೈವ-ಲಿಂಗಾಯತ ಧರ್ಮ’ ಎಂಬುದಾಗಿ ಕರೆಯಬೇಕು
ಎಂದು ಪ್ರತಿಪಾದಿಸಿದರು. ಏನಿದ್ದರೂ ತಜ್ಞರ ಸಮಿತಿ ಅದನ್ನು ಕೇವಲ ಲಿಂಗಾಯತ ಧರ್ಮ ಎಂಬುದಾಗಿ ಕರೆಯಬೇಕು
ಎಂಬುದಾಗಿ ಶಿಫಾರಸು ಮಾಡಿತ್ತು. ಲಿಂಗಾಯತರು ೧೨ನೇ
ಶತಮಾನದ ಸಮಾಜ ಸುಧಾರಕ ಜನ್ಮತಃ ಬ್ರಾಹ್ಮಣನಾಗಿದ್ದು, ಹಿಂದು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು
ಜಾತಿ ರಹಿತ ಸಮಾಜ ಸೃಷ್ಟಿಗಾಗಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದ ಬಸವಣ್ಣ ಅಥವಾ ಬಸವೇಶ್ವರ ಅವರ
ಹಿಂಬಾಲಕರಾಗಿದ್ದಾರೆ. ವೀರಶೈವರು
ಶೈವ ಮತದವರಾಗಿದ್ದು, ಅವರನ್ನು ಲಿಂಗಾಯತರ ಭಾಗ ಎಂಬುದಾಗಿ ಪರಿಗಣಿಸುವುದಿಲ್ಲ ಎಂಬ ವಾದವಿದ್ದರೂ,
ನಾವು ಕೂಡಾ ಲಿಂಗಾಯತರೇ ಮತ್ತು ಧರ್ಮದಲ್ಲಿ ತಮ್ಮನ್ನು ಕೂಡಾ ಸೇರಿಸಬೇಕು ಎಂಬುದು ವೀರಶೈವರ ವಾದ.
ಆದರೆ ವೀರಶೈವರು ಹಿಂದೂಧರ್ಮದ ಭಾಗ, ಬಸವಣ್ಣನ ಹಿಂಬಾಲಕರಲ್ಲ ಎಂಬುದು ಕೆಲವು ವಿದ್ವಾಂಸರ ವಾದ. ರಾಜಕೀಯವಾಗಿ
ಮತ್ತು ಆರ್ಥಿಕವಾಗಿ ಲಿಂಗಾಯತರು ಪ್ರಭಾವಿ ಸಮುದಾಯವಾದ ಕಾರಣ ರಾಜ್ಯ ಸಚಿವ ಸಂಪುಟದ ನಿರ್ಧಾರವು ರಾಜಕೀಯ
ಹಾಗೂ ಸಾಮಾಜಿಕವಾಗಿ ಭಾರಿ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ ಸೋರಿಕೆಯಾಗಿರುವ ಜಾತಿಮತಗಣನೆ ಮಾಹಿತಿಯ
ಪ್ರಕಾರ ರಾಜ್ಯದ ಜನಸಂಖ್ಯೆಯ ಶೇಕಡಾ ೧೪ರಷ್ಟು ಭಾಗ ಲಿಂಗಾಯತರೇ ಇದ್ದಾರೆ ಎನ್ನಲಾಗಿದೆ. ತಮಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಸಮುದಾಯದ
ಸ್ವಾಮೀಜಿಗಳು ಮತ್ತು ನಾಯಕರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ ಬಳಿಕ, ಸಿದ್ದರಾಮಯ್ಯ ಅವರು ವಿಷಯ
ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಿದ್ದರು. ಕಾಂಗ್ರೆಸ್
ಪಕ್ಷವು ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬಾಗವಾಗಿದ್ದು, ಕೆಲವರು ಕೇಂದ್ರಕ್ಕೆ ಶಿಫಾರಸು ಕಳುಹಿಸಿವುದನ್ನು
ವಿರೋಧಿಸಿದ್ದಾದರು. ಜಾತಿಗಳ ಮಧ್ಯೆ ಕಲಹ ಸೃಷ್ಟಿ,
ಜಗದೀಶ ಶೆಟ್ಟರ ಆರೋಪ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ-ಜಾತಿಗಳ ಮಧ್ಯೆ ಕಲಹ ಸೃಷ್ಟಿಸುತ್ತಿದ್ದಾರೆ.
ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಿಧಾನಸಭೆ ವಿರೋಧ
ಪಕ್ಷದ ನಾಯಕ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ
ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,
ಸರ್ಕಾರದ ನಿರ್ಧಾರ ಸ್ಪಷ್ಟವಾಗಿಲ್ಲ ಎಂದು ನುಡಿದರು. ‘ನ್ಯಾಯಮೂರ್ತಿ ನಾಗಮೋಹನ
ದಾಸ್ ಸಮಿತಿ ನೇಮಿಸಿದ್ದು ಅಲ್ಪಸಂಖ್ಯಾತ ಆಯೋಗದಿಂದ. ಅವರು ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ
ನೀಡುವ ಕುರಿತು ವರದಿ ನೀಡಿದ್ದಾರೆ. ಆದರೆ, ಇದುವರೆಗೆ ಪ್ರತ್ಯೇಕ ಧರ್ಮ ಎನ್ನುತ್ತಿದ್ದವರು ಈಗ ಅಲ್ಪಸಂಖ್ಯಾತ
ಸ್ಥಾನಮಾನಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ಶೆಟ್ಟರ ಹೇಳಿದರು.
ಮಾತು ತಪ್ಪಿದ ಮುಖ್ಯಮಂತಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಹುಬ್ಬಳ್ಳಿಯಲ್ಲಿ
ಆರೋಪಿಸಿದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದ ಬೆನ್ನಲ್ಲೇ
ರಂಭಾಪುರಿ ಶ್ರೀ ತುರ್ತು ಪತ್ರಿಕಾಗೋಷ್ಠಿ ನಡೆಸಿದರು. ‘ಸಿದ್ದರಾಮಯ್ಯ ಅವರಿಗೆ ಈಗ ಅಧಿಕಾರ ಇದೆ.
ಬೇಕೆನಿಸಿದ್ದನ್ನು ಮಾಡಲಿ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಅವರು ಹೇಳಿದರು. ‘ತಜ್ಞರ ಸಮಿತಿಯ ಮಾತು ಕೇಳಿಕೊಂಡು ಮುಖ್ಯಮಂತ್ರಿಗಳು
ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.
2018: ಮಾಸ್ಕೋ: ರಷ್ಯಾದ ಅಧ್ಯಕ್ಷರಾಗಿ
ವ್ಯಾಡಿಮೀರ್ ಪುಟಿನ್ ಅವರು ನಾಲ್ಕನೇ ಬಾರಿಗೆ ಭಾರಿ ಮತಗಳೊಂದಿಗೆ ಪುನರಾಯ್ಕೆಯಾದರು. ಕೇಂದ್ರ ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಪುಟಿನ್
ಅವರು ಒಟ್ಟು ಮತಗಳ ಪೈಕಿ ಶೇಕಡಾ ೭೬.೬೮ ಮತಗಳನ್ನು ಪಡೆದಿದ್ದು ಇದು ಅವರು ಈವರೆಗೆ ಪಡೆದಿದ್ದ ಮತಗಳಲ್ಲೇ
ಅತ್ಯಧಿಕ ಎಂದು ಹೇಳಲಾಯಿತು. ವಿರೋಧ
ಪಕ್ಷಗಳು ಮಾ.18ರ ಭಾನುವಾರ ನಡೆದ ಚುನಾವಣೆಯಲ್ಲಿ ಭಾರಿ ವಂಚನೆ ನಡೆದಿದೆ ಎಂದು ಆಪಾದಿಸಿದ್ದರೂ, ಚುನಾವಣೆಯಲ್ಲಿ
೫೫.೫ ಮಿಲಿಯನ್ (೫.೫೫ ಕೋಟಿ) ಮತದಾರರು ಪುಟಿನ್ ಅಭ್ಯರ್ಥನವನ್ನು ಬೆಂಬಲಿಸಿದ್ದಾರೆ ಎಂದು ವರದಿಗಳು
ಹೇಳಿದವು. ಈ ಫಲಿತಾಂಶದ ಪರಿಣಾಮವಾಗಿ ೬೫ರ ಹರೆಯದ ಪುಟಿನ್ ಅವರು ೨೦೧೪ರವರೆಗೆ ಅಂದರೆ ಇನ್ನೂ ಆರು
ವರ್ಷಗಳ ಕಾಲ ರಾಷ್ಟ್ರವನ್ನು ಮುನ್ನಡೆಸಲು ಅಧಿಕಾರ ಪಡೆದರು.
2018: ನವದೆಹಲಿ: ೨ಜಿ ತರಂಗಾಂತರ ಹಗರಣದ
ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಕೇಂದ್ರ ಟೆಲಿಕಾಂ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಮತ್ತು
ಇತರರನ್ನು ಖುಲಾಸೆ ಮಾಡಿ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಜಾರಿ ನಿರ್ದೇಶನಾಲಯವು
(ಇಡಿ) ದೆಹಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತು.
ರಾಜಾ ಮತ್ತು ಕನಿಮೋಳಿ ಅವರಲ್ಲದೆ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರ ಪತ್ನಿ ದಯಾಳು
ಅಮ್ಮಾಳ್, ಶಾಹಿದ್ ಬಲ್ವಾ ಮತ್ತು ಎಸ್ ಟಿಪಿಎಲ್ ನ ವಿನೋದ ಗೋಯೆಂಕಾ, ಕುಸೆಗಾಂವ ಫ್ರುಟ್ಸ್ ಅಂಡ್
ವೆಜಿಟೇಬಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಸಿಫ್ ಬಲ್ವಾ ಮತ್ತು ರಾಜೀವ್ ಅಗರ್ ವಾಲ್, ಚಿತ್ರ ನಿರ್ಮಾಪಕ
ಕರೀಂ ಮೊರಾನಿ, ಪಿ. ಅಮೃತಂ, ಕಲೈಗ್ನಾರ್ ಟವಿಯ ನಿರ್ದೇಶಕ ಶರದ್ ಕುಮಾರ್ ಸೇರಿದಂತೆ ೧೭ ಮಂದಿ ಇತರರನ್ನೂ
ವಿಶೇಷ ನ್ಯಾಯಾಲಯ ಖುಲಾಸೆ ಮಾಡಿತ್ತು. ಜಾರಿ ನಿರ್ದೇಶನಾಲಯವು
ತನ್ನ ದೋಷಾರೋಪ ಪಟ್ಟಿಯಲ್ಲಿ ಡಿಎಂಕೆ ನಡೆಸುತ್ತಿರುವ ಕಲೈಗ್ನಾರ್ ಟಿವಿಯ ಪ್ರವರ್ತಕರಾದ ಸ್ವಾನ್ ಟೆಲಿಕಾಂ
ಪ್ರೈವೇಟ್ ಲಿಮಿಟೆಡ್ (ಎಸ್ ಟಿಪಿಎಲ್) ಸಂಸ್ಥೆಗೆ ೨೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿದೆ ಎಂದು
ತಿಳಿಸಿತ್ತು. ಅದೇ ದಿನ ವಿಚಾರಣಾ ನ್ಯಾಯಾಲಯವು ರಾಜಾ,
ಕನಿಮೋಳಿ ಮತ್ತು ಇತರ ೧೫ ಮಂದಿಯನ್ನು ಖುಲಾಸೆ ಮಾಡಿತ್ತು. ಖುಲಾಸೆಯಾದವರಲ್ಲಿ ಟೆಲಿಕಾಂ ಮಾಜಿ ಕಾರ್ಯದರ್ಶಿ
ಸಿದ್ಧಾರ್ಥ ಬೆಹುರಾ, ರಾಜಾ ಅವರ ಹಿಂದಿನ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ, ಸ್ವಾನ್ ಟೆಲಿಕಾಂ
ಪ್ರವರ್ತಕರಾದ ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯೆಂಕಾ, ಯುನಿಟೆಕ್ ಲಿಮಿಟೆಡ್ ಆಡಳಿತ ನಿರ್ದೇಶಕ
ಸಂಜಯ್ ಚಂದ್ರ ಮತ್ತು ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಮೂರು ಉನ್ನತ ಎಕ್ಸಿಕ್ಯೂಟಿವ್
ಗಳಾದ ಗೌತಮ್ ದೋಶಿ, ಸುರೇಂದ್ರ ಪಿಪರ ಮತ್ತು ಹರಿ ನಾಯರ್ ಅವರನ್ನು ಸಿಬಿಐಯ ಇನ್ನೊಂದು ೨ಜಿ ತರಂಗಾಂತರ
ಪ್ರಕರಣದಲ್ಲಿ ಖುಲಾಸೆ ಮಾಡಿತ್ತು. ೨೦೧೨ರ ಫೆಬ್ರುವರಿ
೨ರಂದು ಸುಪ್ರೀಂಕೋರ್ಟ್ ರದ್ದು ಪಡಿಸಿದ್ದ ೨ಜಿ ತರಂಗಾಂತರರ ಈ ಪರವಾನಗಿಗಳಿಂದಾಗಿ ಬೊಕ್ಕಸಕ್ಕೆ ೩೦,೯೮೪
ಕೋಟಿ ರೂಪಾಯಿ ನಷ್ಟವಾಗಿದೆ ಎಂದ ಸಿಬಿಐ ಆಪಾದಿಸಿತ್ತು. ಏನಿದ್ದರೂ
ವಿಶೇಷ ನ್ಯಾಯಾಧೀಶ ಒ.ಪಿ ಸೈನಿ ಅವರು ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ದಯನೀಯವಾಗಿ
ವಿಫಲಗೊಂಡಿದೆ ಎಂದು ತೀರ್ಪು ನೀಡಿದ್ದರು. ೨ಜಿ ತರಂಗಾಂತರ
ಪ್ರಕರಣಗಳ ತನಿಖೆಗಾಗಿಯೇ ೨೦೧೧ರ ಮಾರ್ಚ್ ೧೪ರಂದು ರಚಿಸಲಾಗಿದ್ದ ವಿಶೇಷ ನ್ಯಾಯಾಲಯವು ಎಸ್ಸಾರ್ ಸಮೂಹದ
ಪ್ರವರ್ತಕರಾದ ರವಿ ಕಾಂತ್ ರೂಯಿಯಾ ಮತ್ತು ಅಂಶುಮಾನ್ ರೂಯಿಯಾ ಮತ್ತು ಇತರ ೬ ಮಂದಿಯನ್ನು ೨ಜಿ ತರಂಗಾಂತರ
ಹಗರಣಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲೂ ಖುಲಾಸೆ ಮಾಡಿತ್ತು. ಸಿಬಿಐ
ದಾಖಲಿಸಿದ್ದ ಮೊದಲ ಪ್ರಕರಣದಲ್ಲಿ ೧೭ ಮಂದಿ ಆರೋಪಿಗಳಿದ್ದರೆ, ಜಾರಿ ನಿರ್ದೇಶನಾಲಯವು ದಾಖಲಿಸಿದ್ದ ೨ನೇ ಪ್ರಕರಣದಲ್ಲಿ ೧೯ ಮಂದಿ
ವಿಚಾರಣಾಧೀನ ಕೈದಿಗಳಿದ್ದರು. ಮೂರನೇ ಪ್ರಕರಣದಲಿ ಎಸ್ಸಾರ್ ಪ್ರವರ್ತಕರು ಸೇರಿದಂತೆ ೮ ಮಂದಿ ಆರೋಪಿಗಳಿದ್ದರು. ಸಿಬಿಐ ಪ್ರಕರಣದಲ್ಲಿ ರಾಜಾ, ಕನಿಮೋಳಿ ಮತ್ತು ಇತರ ೧೫ ಮಂದಿಯನ್ನು
ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿಧಿಗಳ ಅಡಿಯಲ್ಲಿ ತನಿಖೆಗೆ ಒಳಪಡಿಸಲಾಗಿತ್ತು.
ಕ್ರಿಮಿನಲ್ ಸಂಚು, ವಂಚನೆ, ಫೋರ್ಜರಿ, ಅಧಿಕಾರಿಗಳಿಂದ ಸ್ಥಾನ ದುರುಪಯೋಗ, ಲಂಚ ಸ್ವೀಕಾರ ಮತ್ತು ಸಾರ್ವಜನಿಕ
ಸೇವಕನಿಂದ ಕ್ರಿಮಿನಲ್ ದುರ್ವರ್ತನೆ ಅಪರಾಧಗಳಿಗಾಗಿ ಅವರ ವಿರುದ್ಧ ಖಟ್ಲೆಗಳನ್ನು ದಾಖಲಿಸಿಲಾಗಿತ್ತು.
2018: ರಾಂಚಿ: ಬಹುಕೋಟಿ ಮೇವು ಹಗರಣದ
ನಾಲ್ಕನೇ ಪ್ರಕರಣದಲ್ಲೂ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ತಪ್ಪಿತಸ್ಥ
ಎಂದು ರಾಂಚಿಯ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತು.
೪ನೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ, ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರ ಅವರನ್ನು ಕೋರ್ಟ್
ಖುಲಾಸೆಗೊಳಿಸಿತು. ಲಾಲೂಪ್ರಸಾದ್
ಯಾದವ್ ಅವರನ್ನು ಈಗಾಗಲೇ ಮೂರು ಪ್ರಕರಣಗಳಲ್ಲಿ ತಪ್ಪಿತಸ್ಥೆ ಎಂಬುದಾಗಿ ಎಂದು ತೀರ್ಪು ನೀಡಿರುವ ಸಿಬಿಐ
ವಿಶೇಷ ನ್ಯಾಯಾಲಯ ಅವರಿಗೆ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರ,
ಮಾಜಿ ಐಎಎಸ್ ಅಧಿಕಾರಿಗಳು, ಕೆಲವು ಅಧಿಕಾರಿಗಳು ಸೇರಿದಂತೆ ೨೯ ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ೧೯೯೫ರಿಂದ
೧೯೯೬ರ ನಡುವೆ ದುಮ್ಕಾ ಖಜಾನೆಯಿಂದ ೩.೧೩ ಕೋಟಿ ರೂಪಾಯಿ ಹಣವನ್ನು ತೆಗೆದಿರುವ ಪ್ರಕರಣ ಇದಾಗಿದ್ದು,
ಪ್ರಕರಣದಲ್ಲಿ ಇವರೆಲ್ಲರೂ ಆರೋಪಿಗಳಾಗಿದ್ದರು.
2018: ಕೋಲ್ಕತ: ೨೦೧೯ರ ಮಹಾಚುನಾವಣೆಗೆ
ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಮುಕ್ತ ’ತೃತೀಯ ರಂಗ’ ರಚನೆ ಬಗ್ಗೆ ಚರ್ಚಿಸಲು
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ಈದಿನ ಮಧ್ಯಾಹ್ನ
ಕೋಲ್ಕತದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಮುಕ್ತ ಮೈತ್ರಿಕೂಟ ರಚನೆ ಬಗ್ಗೆ
ಮಾತುಕತೆ ನಡೆಸಿದ ಬಗ್ಗೆ ಕೆಸಿಆರ್ ಅವರು ಹೇಳಿದರಾದರೂ, ಮಮತಾ ಬ್ಯಾನರ್ಜಿ ಅವರು ಅಂತಹ ಯಾವುದೇ ಯೋಜನೆಗಳ
ಬಗ್ಗೆ ಬಹಿರಂಗ ಪಡಿಸಲು ನಿರಾಕರಿಸಿದರು. ಬಿಜೆಪಿ
ಮತ್ತು ಕಾಂಗ್ರೆಸ್ ಹೊರತಾದ ಮೈತ್ರಿಕೂಟ ರಚನೆಗೆ ಯತ್ನಿಸುವ ಅಗತ್ಯ ಇದೆ. ಈ ಎರಡೂ ಪಕ್ಷಗಳು ರಾಷ್ಟ್ರಕ್ಕಾಗಿ
ಏನನ್ನೂ ಮಾಡಿಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ನುಡಿದರು. ಮಾತುಕತೆಯ
ಬಳಿಕ ಕೆಸಿಆರ್ ಮತ್ತು ಬ್ಯಾನರ್ಜಿ ಮಾಧ್ಯಮಗಳ ಜೊತೆ ಮಾತನಾಡಿದರು. ’ರಾಷ್ಟ್ರದಲ್ಲಿ ಬದಲಾವಣೆಯ ಅಗತ್ಯ
ಇದೆ’ ಎಂಬ ಬಗ್ಗೆ ತಮ್ಮಿಬ್ಬರಲ್ಲೂ ಒಮ್ಮತ ಇದೆ
ಎಂದು ಉಭಯರೂ ನುಡಿದರು. ‘ಈಗಷ್ಟೇ ಮಾತುಕತೆ ಶುರುವಾಗಿದೆ. ಅದನ್ನು ಮುಂದಕ್ಕೆ ಒಯ್ಯಲು ನಾವು ಇತರ
ಪಕ್ಷಗಳನ್ನೂ ಸಂಪರ್ಕಿಸುತ್ತೇವೆ’ ಎಂದು ತೆಲಂಗಾಣ ನಾಯಕ
ಹೇಳಿದರು. ‘ನಮ್ಮ ರಂಗವು ದೊಡ್ಡ ರಂಗವಾಗಿರುತ್ತದೆ.
ಮಾಮೂಲಿ ಮಾದರಿಗಳಿಗಿಂತ ಅದು ಭಿನ್ನವಾಗಿರುತ್ತದೆ. ರಾಜಕೀಯ ಪರ್‍ಯಾಯಗಳ ಅಗತ್ಯವಿದೆ ಮತ್ತು ರಾಷ್ಟ್ರಕ್ಕೆ
ಬದಲಾವಣೆಯ ಅಗತ್ಯ ಇದೆ’ ಎಂದು ಮಮತಾ ಅವರ ಜೊತೆಗೇ
ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ನುಡಿದರು.
ಅವರ ಮಾತುಗಳಿಗೆ ಸಹಮತ ವ್ಯಕ್ತ ಪಡಿಸಿದ ಬ್ಯಾನರ್ಜಿ, ’ಇದು ಉತ್ತಮ ಆರಂಭ. ರಾಜಕೀಯ ಒಂದು
ನಿರಂತರ ಪ್ರಕ್ರಿಯೆ ಎಂಬುದು ನನ್ನ ಭಾವನೆ. ನಾವು ಏನು ಮಾತನಾಡಿದೆವೋ ಅದು ರಾಷ್ಟ್ರದ ಅಭಿವೃದ್ಧಿಗೆ
ಸಂಬಂಧಿಸಿದ್ದು’ ಎಂದು ಹೇಳಿದರು. ವಿಭಿನ್ನ ವ್ಯಕ್ತಿಗಳ ಜೊತೆಗೆ ಕೆಲಸ ಮಾಡುವಂತಹ ಪರಿಸ್ಥಿತಿಗಳನ್ನು
ರಾಜಕೀಯ ನಿಮ್ಮತ್ತ ಎಸೆಯುತ್ತದೆ. ನಾನು ರಾಜಕೀಯವನ್ನು ನಂಬುತ್ತೇನೆ ಎಂದು ಅವರು ನುಡಿದರು. ಲೋಕಸಭೆಯಲ್ಲಿ ಎನ್ ಡಿಎ ಸರ್ಕಾರದ ವಿರುದ್ಧ ತೆಲುಗುದೇಶಂ
ಪಕ್ಷ ಮತ್ತು ವೈಎಸ್ ಆರ್ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯದ ಬಗೆಗೂ ಉಭಯ ಪಕ್ಷಗಳು ಚರ್ಚಿಸಿದವು
ಎನ್ನಲಾಯಿತು. ರಾಜ್ಯ ಸಚಿವಾಲಯದಲ್ಲಿ ಸಭೆ ನಡೆಯಿತು.
ಟಿಆರ್ ಎಸ್ ಸಂಸದರಾದ ಎಪಿ ಜಿತೇಂದ್ರ ರೆಡ್ಡಿ, ಕೆ. ಕೇಶವರಾವ್ ಮತ್ತು ತೆಲಂಗಾಣದ ಮುಖ್ಯ ಸಲಹೆಗಾರ
ರಾಜೀವ ಶರ್ಮ ಅವರೂ ಸಭೆಯಲ್ಲಿ ಹಾಜರಿದ್ದರು. ಅದಕ್ಕೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಚಂದ್ರ
ಶೇಖರ ರಾವ್ ಅವರು ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರಾಷ್ಟ್ರದ
ಅಭಿವೃದ್ಧಿಯ ವಿಚಾರದಲ್ಲಿ ಖಾತ್ರಿ ನೀಡುವಲ್ಲಿ ದಯನೀಯ ವೈಫಲ್ಯ ಕಂಡಿವೆ ಎಂದು ಆಪಾದಿಸಿದ್ದರು. ರಾಷ್ಟ್ರದ
ಪ್ರಗತಿಯ ಕಾರ್‍ಯಸೂಚಿ ತಯಾರಿ ಸಲುವಾಗಿ ತಾವು ಸಮಾನ ಮನಸ್ಕ ಪಕ್ಷಗಳ ಜೊತೆ ಮಾತುಕತೆ ನಡೆಸುವುದಾಗಿ
ಅವರು ಹೇಳಿದರು. ಕೆಸಿಆರ್ ಅವರು ಅಖಿಲ ಭಾರತ ಮಟ್ಟದಲ್ಲಿ
ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳ ಜೊತೆಗೆ ಶೀಘ್ರದಲ್ಲೇ ಸರಣಿ ಮಾತುಕತೆಗಳನ್ನು
ನಡೆಸುವ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಇದಕ್ಕೆ ಮುನ್ನ
ಹೇಳಿತ್ತು. ಮೂಲಗಳ ಪ್ರಕಾರ ಸಮಾಜವಾದಿ ಪಕ್ಷ, ಡಿಎಂಕೆ
ಮತ್ತು ಬಿಜೆಪಿ ಜೊತೆಗೆ ಮುನಿಸಿಕೊಂಡಿರುವ ಶಿವಸೇನೆಯಂತಹ ಮಿತ್ರ ಪಕ್ಷಗಳ ಜೊತೆಗೂ ಪರ್ಯಾಯ ರಂಗ ರಚಿಸುವ
ನಿಟ್ಟಿನಲ್ಲಿ ಟಿಆರ್ ಎಸ್ ಮಾತುಕತೆ ನಡೆಸಿದೆ ಎಂದು ಹೇಳಲಾಯಿತು. ತೆಲಂಗಾಣದ ಟಿಆರ್ ಎಸ್ ಜೊತೆಗೆ
ಚುನಾವಣಾ ಮೈತ್ರಿಕೂಟ ರಚಿಸುವ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ ಅಧ್ಯಕ್ಷ
ಎನ್.ಚಂದ್ರಬಾಬು ನಾಯ್ಡು ಈ ಮುನ್ನ ಸುಳಿವು ನೀಡಿದ್ದರು.
2018: ಮುಂಬೈ: ಆಕ್ಸಿಸ್ ಬ್ಯಾಂಕಿನಿಂದ
ಯಾವುದೇ ಹೊಸ ಬ್ಯಾಂಕ್ ಖಾತರಿ ಸ್ವೀಕರಿಸಬೇಡಿ ಎಂದು ಟೆಲಿಸಂಪರ್ಕ ಇಲಾಖೆಯು (ಡಿಒಟಿ) ಎಲ್ಲ ಟೆಲಿಕಾಂ
ಕಂಪೆನಿಗಳು ಮತ್ತು ಇಂಟರ್ ನೆಟ್ ಸೇವಾದಾರರಿಗೆ (ಐಎಸ್ ಪಿ) ಸೂಚನೆ ನೀಡಿತು. ಮಾರ್ಚ್ ೧೬ರಂದು ಟೆಲಿಸಂಪರ್ಕ
ಇಲಾಖೆಯು ಈ ಕುರಿತು ಪತ್ರ ಬರೆದಿದ್ದು. ’ಭಾರತ ಸರ್ಕಾರದ ಜೊತೆಗೆ ಆಕ್ಸಿಸ್ ಬ್ಯಾಂಕ್ ಗಂಭೀರ ವಿಶ್ವಾಸದ್ರೋಹ
ಮತ್ತು ಕಾಂಟ್ರಾಕ್ಟ್ ಗೆ ಉಲ್ಲಂಘನೆ ಮಾಡಿದೆ’ ಎಂದು ಟೆಲಿಕಾಂ ಆಪರೇಟರುಗಳಿಗೆ
ತಿಳಿಸಿತು. ಏರ್ ಸೆಲ್ ಸಮೂಹ ಸಂಸ್ಥೆಗಳ ಪರವಾಗಿ ತಾನು
ನೀಡಿದ ಖಾತರಿಯನ್ನು ಗೌರವಿಸುವಲ್ಲಿ ಆಕ್ಸಿಸ್ ಬ್ಯಾಂಕ್ ವಿಫಲವಾಗಿದೆ ಎಂದು ಪತ್ರ ಹೇಳಿತು. ಆಕ್ಸಿಸ್
ಬ್ಯಾಂಕ್ ನೀಡುವ ಖಾತರಿಯ ನವೀಕರಣವನ್ನಾಗಲೀ, ಯಾವುದೇ ಹೊಸ ಬ್ಯಾಂಕ್ ಖಾತರಿಯನ್ನಾಗಲೀ ಸ್ವೀಕರಿಸಬೇಡಿ
ಎಂದು ಪತ್ರ ಟೆಲ್ಕೋಗಳು ಮತ್ತು ಐಎಸ್ಪಿಗಳಿಗೆ ನಿರ್ದೇಶಿಸಿತು. ಏರ್ ಸೆಲ್ ಪರವಾಗಿ ಆಕ್ಸಿಸ್ ಬ್ಯಾಂಕ್ ನೀಡಿದ್ದ ಖಾತರಿಯ
ಮೊತ್ತವನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಆಕ್ಸಿಸ್ ಬ್ಯಾಂಕಿಗೆ ಪ್ರತಿಕ್ರಿಯೆ ಕೋರಿ ಕಳುಹಿಸಲಾದ
ಮಿಂಚಂಚೆಗೆ (ಮೇಲ್) ಈವರೆಗೂ ಉತ್ತರ ಬಂದಿಲ್ಲ. ತಾಳಿಕೊಳ್ಳಲಾಗದ
ಸಾಲ, ದರ ಸಮರ, ಕಾನೂನು ಮತ್ತು ನಿಯಂತ್ರಣ ಸವಾಲುಗಳ ಹಿನ್ನೆಲೆಯಲ್ಲಿ ಏರ್ ಸೆಲ್ ದಿವಾಳಿ ಅರ್ಜಿಯನ್ನು
ಎನ್ ಸಿ ಎಲ್ ಟಿಯ ಮುಂಬೈ ಶಾಖೆಗೆ ಸಲ್ಲಿಸಿತ್ತು. ಕಂಪೆನಿಯು ಸಾಲಗಾರರಿಗೆ ೧೫,೦೦೦ ಕೋಟಿ ರೂಪಾಯಿಗಳನ್ನು
ನೀಡಬೇಕಾಗಿದ್ದು, ಕಾರ್ಯ ನಿರ್ವಹಣಾ ಸಾಲಗಾರರಿಗೆ (ಆಪರೇಷನಲ್ ಕ್ರೆಡಿಟರ್ಸ್) ೩೫,೦೦೦ ಕೋಟಿ ರೂಪಾಯಿ
ನೀಡಬೇಕಾಗಿತ್ತು. ಏರ್ ಸೆಲ್ ಕ್ರಮವಾಗಿ ೯೦೦ ಮೆಗಾಹರ್ಟ್ಸ್,
೧೮೦೦ ಮೆಗಾಹರ್ಟ್ಸ್ ಮತ್ತು ೨೧೦೦ ಮೆಗಾಹರ್ಟ್ಸ್ ಬ್ಯಾಂಡ್ ಗಳನ್ನು ಹೊಂದಿತ್ತು. ನಿಯಮಗಳ ಪ್ರಕಾರ ತನ್ನ ತರಂಗಾಂತರವನ್ನು ಡಿಒಟಿಗೆ ಒಪ್ಪಿಸಿದ
ಬಳಿಕ ಏರ್ ಸೆಲ್ ತನ್ನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
2018: ಕಲಬುರಗಿ: ಪ್ರತ್ಯೇಕ ಲಿಂಗಾಯತ
ಧರ್ಮ ಘೋಷಿಸುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನಲ್ಲೇ ಪ್ರತ್ಯೇಕ ಲಿಂಗಾಯತ
ಧರ್ಮ ವಿರೋಧಿಸಿ ಇಲ್ಲಿನ ಎರಡೂ ಪಂಗಡಗಳ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಗಳು ತಿಳಿಸಿದವು.
ಕಲಬುರಗಿ ನಗರದ ವಲ್ಲಭಭಾಯ್ ಪಟೇಲ್ ಸರ್ಕಲ್ ಬಳಿ ವೀರಶೈವ, ಲಿಂಗಾಯತ ಧರ್ಮದವರು ಪರಸ್ಪರ ಮಾರಾಮಾರಿ
ನಡೆಸಿದ್ದು, ಲಿಂಗಾಯತ ಮುಖಂಡರು ಎಂಎಸ್ ಪಾಟೀಲ್ ಅವರನ್ನು ಥಳಿಸಿದರು ಎಂದು ವರದಿಗಳು ಹೇಳಿದವು. ಪ್ರತ್ಯೇಕ
ಧರ್ಮಕ್ಕೆ ಶಿಫಾರಸು ಮಾಡಿದ್ದನ್ನು ವಿರೋಧಿಸಿ ವೀರಶೈವ ಬಣದವರು ಚಪ್ಪಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ
ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಯಿತು.
ಕೆಲವೆಡೆ ವಿಜಯೋತ್ಸವ: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ
ಶಿಫಾರಸು ಮಾಡಿದ ರಾಜ್ಯ ಸರ್ಕಾರದ ನಿರ್ಧಾgವನ್ನು ಸ್ವಾಗತಿಸಿ ಬಸವಾಭಿಮಾನಿಗಳು ವಿಜಯೋತ್ಸವ ಆಚರಿಸಿ
ಬಗೆಗೂ ವರದಿಗಳು ಬಂದದವು.
2017: ಲಖನೌ: ಯೋಗಿ ಆದಿತ್ಯನಾಥ ಅವರು ಲಖನೌನಲ್ಲಿ ನಡೆದ ಸಮಾರಂಭದಲ್ಲಿ ಈದಿನ
ಮಧ್ಯಾಹ್ನ 2.15 ಕ್ಕೆ ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರಾದ ರಾಮ್ ನಾಯಕ್ ಅವರು ಯೋಗಿ ಆದಿತ್ಯನಾಥ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಯೋಗಿ ಆದಿತ್ಯನಾಥ ಅವರೊಂದಿಗೆ 22 ಕ್ಯಾಬಿನೆಟ್ ದರ್ಜೆ ಸಚಿವರು ಸೇರಿದಂತೆ ಒಟ್ಟು 47 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ರಸಗೊಬ್ಬರ ಸಚಿವ ಅನಂತ್ ಕುಮಾರ್, ಜನ ಸಂಪನ್ಮೂಲ ಸಚಿವೆ ಉಮಾಭಾರತಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅರ್ಚಕನಿಂದ ಸಿಎಂ ಸ್ಥಾನದವರೆಗೆ: ಉತ್ತರಪ್ರದೇಶದ ಗೋರಖ್ನಾಥ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿದ್ದ ಆದಿತ್ಯನಾಥ ಬಿಎಸ್ಸಿ ಪದವೀಧರರು. 1972ರಲ್ಲಿ ಜನಿಸಿದ ಅವರು, 26ನೇ ವಯಸ್ಸಿನಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿ 12ನೇ ಲೋಕಸಭೆಯ ಅತಿ ಕಿರಿಯ ಸಂಸದರೆಂಬ ದಾಖಲೆ ಬರೆದಿದ್ದರು. ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಇವರು ಹಿಂದುತ್ವ ಪ್ರತಿಪಾದಕರಾಗಿಯೇ ಹೆಚ್ಚು ಖ್ಯಾತಿ ಪಡೆದವರು.
2017:
ನವದೆಹಲಿ: ಬಹುಭಾಷಾ ನಟ ಕಮಲ್ ಹಾಸನ್ ಅವರ ಸಹೋದರ, ಖ್ಯಾತ ಸಿನಿಮಾ ನಿರ್ಮಾಪಕ ಚಂದ್ರಹಾಸನ್ (82) ಈದಿನ ಹೃದಯಾಘಾತದಿಂದ ನಿಧನರಾದರು. ಮಗಳು ಸಿನಿಮಾ ನಟಿ ಅನು ಹಾಸನ್ ಅವರ ಲಂಡನ್ನಲ್ಲಿರುವ ನಿವಾಸದಲ್ಲಿ ಚಂದ್ರಹಾಸನ್ ಕೊನೆಯುಸಿರೆಳೆದರು.
ಕೆಲವು ತಿಂಗಳುಗಳ ಹಿಂದೆಯಷ್ಟೇ ಚಂದ್ರಹಾಸನ್ ಅವರ ಪತ್ನಿ ಗೀತಾಮಣಿ ನಿಧನರಾಗಿದ್ದರು. ರಾಜ್‍ಕಮಲ್ ಫಿಲಂಸ್‍ನ ಉಸ್ತುವಾರಿ ವಹಿಸಿದ್ದ ಇವರು ಕಮಲ್ ಹಾಸನ್ ಅವರ ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದರು. ಕಮಲ್ ಹಾಸನ್ ಅವರ ವಿಶ್ವರೂಪಂ ಮತ್ತು ತೂಂಗಾವನಂ ಸಿನಿಮಾದ ನಿರ್ಮಾಣದಲ್ಲಿಯೂ ಇವರು ಕಾರ್ಯ ವಹಿಸಿದ್ದರು.
2009: 1975ರ ನಂತರ ಇದೇ ಮೊದಲ ಬಾರಿಗೆ ಹಣದುಬ್ಬರ ಶೇ.0.44 ಮಟ್ಟಕ್ಕೆ ಕುಸಿಯಿತು. ಬಹುತೇಕ ಆಹಾರ ವಸ್ತುಗಳ ಬೆಲೆಗಳಲ್ಲಿ ಇಳಿಕೆ ಆಗದಿದ್ದರೂ ಹಣದುಬ್ಬರ ಇಳಿಯುವುದು ಮುಂದುವರಿಯಿತು. ಆರ್ಥಿಕತೆ ತೀವ್ರತರದ ಹಿಂಜರಿತಕ್ಕೆ ಸಿಲುಕಲಿದೆ ಎಂಬ ಭೀತಿಯನ್ನು ಇದು ಹುಟ್ಟುಹಾಕಿತು.
2009: ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವ 'ರಂಗ ತೋರಣ'ದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತಂಡ ಪ್ರಥಮ ಸ್ಥಾನ ಪಡೆಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಘಟಕ ಅಲ್ಲಿನ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರತಿಷ್ಠಾನದ ವಿದ್ಯಾರ್ಥಿಗಳು ಪ್ರದರ್ಶಿಸಿದ 'ಮಾಧ್ಯಮ ವ್ಯಾಯೋಗ' ಹಾಗೂ 'ದೂತ ವಾಕ್ಯ' ನಾಟಕಗಳು ಪ್ರಥಮ ಪ್ರಶಸ್ತಿ ಪಡೆದವು. ಜೀವನ್‌ರಾಂ ಸುಳ್ಯ ನಿರ್ದೇಶನದ ಈ ನಾಟಕಗಳು ಕೊಲ್ಕತ, ಕುರುಕ್ಷೇತ್ರ, ಚೆನ್ನೈ, ಮದುರೆ, ಕಲ್ಲಿಕೋಟೆ ಹಾಗೂ ವಾರಾಣಸಿ ಮೊದಲಾದ ಕಡೆ 52 ಪ್ರದರ್ಶನಗಳನ್ನು ಕಂಡಿವೆ. ವಿಶ್ವವಿದ್ಯಾಲಯಗಳ ರಾಷ್ಟ್ರೀಯ ರಂಗೋತ್ಸವದಲ್ಲಿ ಭಾಗವಹಿಸಿ ನಾಲ್ಕು ಬಾರಿ ರಾಷ್ಟ್ರೀಯ ರಂಗಪ್ರಶಸ್ತಿ ಪಡೆದಿವೆ.
2009: ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿನ ಗೊಟ್ಟಿಗೆರೆ ಕೆರೆಯ ಪಕ್ಕದಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರಿಗೆ ('ನೈಸ್') ಹೈಕೋರ್ಟ್ ಹಸಿರು ನಿಶಾನೆ ತೋರಿತು. ಈ ಕೆರೆಯ ಮೇಲೆ ಹಾದು ಹೋಗುವಂತೆ ಎತ್ತರದ ರಸ್ತೆ ನಿರ್ಮಾಣ ಮಾಡಲು 2006ರ ನವೆಂಬರ್ 4ರಂದು ಸರ್ಕಾರ ಹೊರಡಿಸಿದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ರದ್ದು ಮಾಡಿತು. ಈ ಹಿನ್ನೆಲೆಯಲ್ಲಿ 41 ಕಿ.ಮೀ. ಉದ್ದದ ಈ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಕಾನೂನು ಸಮರದಲ್ಲಿ 'ನೈಸ್' ಪರ ತೀರ್ಪು ಹೊರಬಿದ್ದಂತಾಯಿತು.
2009: ಸುಪ್ರೀಂ ಕೋರ್ಟಿನ ಒತ್ತಡದಿಂದಾಗಿ ಕೇಂದ್ರ ಸರ್ಕಾರವು ತಾನು ಈಗಾಗಲೇ ಹೊರಡಿಸಿದ ನೂತನ ಆಹಾರ ಸುರಕ್ಷತಾ ಕಾನೂನನ್ನು ಈದಿನದಿಂದಲೇ ಅನ್ವಯವಾಗುವಂತೆ ಜಾರಿಗೆ ತಂದಿತು. ಇದರಿಂದಾಗಿ ಕೋಕೊ ಕೋಲಾ, ಪೆಪ್ಸಿ ಸಹಿತ ಇತರ ಪಾನೀಯ ಮತ್ತು ಆಹಾರ ತಯಾರಿಕಾ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿದ ವಿವಿಧ ಬಗೆಯ ಪದಾರ್ಥಗಳ ಬಗ್ಗೆ ವಿವರಣೆ ನೀಡುವುದು ಕಡ್ಡಾಯವಾಯಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನೂತನ ಕಾನೂನನ್ನು ಜಾರಿಗೆ ತರಲು ಅಧಿಸೂಚನೆ ಹೊರಡಿಸಬೇಕು ಎಂಬ ಸುಪ್ರೀಂ ಕೋರ್ಟಿನ ತಾಕೀತಿನಿಂದಾಗಿ ಈ ಬೆಳವಣಿಗೆ ನಡೆಯಿತು. 'ಗ್ರಾಹಕರ ಹಿತದೃಷ್ಟಿಯಿಂದ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಮೇಲೆ ಲೇಬಲ್ ಹಚ್ಚುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಡ್ಡಾಯಗೊಳಿಸಿದೆ. ಇದರಿಂದಾಗಿ ಆರೋಗ್ಯಕರ ಮತ್ತು ಪೌಷ್ಟಿಕಾಂಶ ಇರುವ ಆಹಾರದ ಬಗ್ಗೆ ಗ್ರಾಹಕರಿಗೆ ಮಾಹಿತಿ ದೊರೆತಂತಾಗುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಯಿತು.
2009: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಮ್ ತೆಲಗಿಗೆ ಅಹಮದಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ನ್ಯಾಯಾಧೀಶ ಎ. ಪಿ. ಗೊಹಿಲ್ ಅವರು ತೆಲಗಿಯ ಸಹಚರರಾದ ಸಾದಿಕ್ ಇಬ್ರಾಹಿಂ ಮತ್ತು ಪೀಟರ್ ಫರ್ನಾಂಡಿಸ್‌ಗೆ ಕ್ರಮವಾಗಿ ಏಳು ವರ್ಷ ಹಾಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ತೆಲಗಿ ಮತ್ತು ಸಾದಿಕ್‌ಗೆ ತಲಾ 35 ಸಾವಿರ ಹಾಗೂ ಪೀಟರ್‌ಗೆ 30 ಸಾವಿರ ರೂಪಾಯಿಗಳ ದಂಡ ವಿಧಿಸಲಾಯಿತು. ತೆಲಗಿಯ ಬಹುಕೋಟಿ ಛಾಪಾ ಕಾಗದ ಹಗರಣವು ಮೊದಲಿಗೆ ಮಹಾರಾಷ್ಟ್ರದಲ್ಲಿ ಪತ್ತೆಯಾಗಿ, ನಂತರ ದೇಶದ ವಿವಿಧ ರಾಜ್ಯಗಳಲ್ಲೂ ಜಾಲ ಹರಡಿದ್ದು ಬೆಳಕಿಗೆ ಬಂದಿತ್ತು. ಗುಜರಾತಿನಲ್ಲಿ ತೆಲಗಿ ತನ್ನ ಸಹಚರರ ಜತೆ ನಕಲಿ ಛಾಪಾ ಕಾಗದದ ವ್ಯವಹಾರ ನಡೆಸುತ್ತಿದ್ದ ಅನಾರೋಗ್ಯದ ಕಾರಣ ಕನಿಷ್ಠ ಸಜೆಯನ್ನು ನೀಡಬೇಕು ಎಂದು ತೆಲಗಿ ಮನವಿ ಮಾಡಿದ್ದ. ಆದರೆ ಕಾನೂನಿನಲ್ಲಿ ವಂಚನೆಯ ಅಪರಾಧಕ್ಕೆ ಇರುವ ಗರಿಷ್ಠ ಶಿಕ್ಷೆಯನ್ನು ಆತನಿಗೆ ವಿಧಿಸಲಾಯಿತು.
2008: ಬೆಳಗಾವಿ ಸೇರಿದಂತೆ ರಾಜ್ಯ ಗಡಿ ಭಾಗದ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೈಗೊಂಡ ಗೊತ್ತುವಳಿ ವಿರುದ್ಧ ಕರ್ನಾಟಕ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿತು. ಗಡಿ ವಿವಾದ ಕುರಿತು ಆಗಾಗ್ಗೆ ತಗಾದೆ ತೆಗೆಯುವ ಮಹಾರಾಷ್ಟ್ರದ ಚಾಳಿಯನ್ನು ಹಿರಿಯ ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಕಟುವಾಗಿ ಟೀಕಿಸಿದರು. ಕನ್ನಡ ಪರ ಹೋರಾಟಗಾರರು ಪ್ರತಿಭಟನೆಯ ಮೂಲಕ ಪ್ರತಿಕ್ರಿಯಿಸಿದರು. ಕನ್ನಡಿಗರ ಸಹನೆ ಕೆಣಕದಂತೆ ಎಲ್ಲರೂ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್, `ಮಹಾರಾಷ್ಟ್ರ ವಿಧಾನಸಭೆಯಲ್ಲಿನ ಗೊತ್ತುವಳಿ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ' ಎಂದು ಸ್ಪಷ್ಟ ಪಡಿಸಿದರು.
2008: `ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1968' ತಿದ್ದುಪಡಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿ ರಾಜ್ಯದಾದ್ಯಂತ ಜಾರಿಗೆ ಬಂದಿತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು 2007ರ ಡಿಸೆಂಬರ್ 24 ರಂದು ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ರೈತರು ಮತ್ತು ವರ್ತಕರಿಂದ ಬಂದ ಸಲಹೆ ಹಾಗೂ ಆಕ್ಷೇಪಗಳನ್ನೆಲ್ಲ ಪರಿಶೀಲಿಸಿದ ನಂತರ ಕಾಯ್ದೆ ತಿದ್ದುಪಡಿಯ ಅಂತಿಮ ನಿಯಮಾವಳಿಗಳಿಗೆ ಅನುಮೋದನೆ ದೊರಕಿತು. ಈದಿನದಿಂದಲೇ ರಾಜ್ಯದಾದ್ಯಂತ ಹೊಸ ಕಾಯ್ದೆ ಅನುಷ್ಠಾನಕ್ಕೆ ಬಂದಿರುತ್ತದೆ ಎಂದು ಕೃಷಿ ಮಾರಾಟ ಇಲಾಖೆ ತಿಳಿಸಿತು. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಶಾಸನದ ಅನ್ವಯ ರಾಜ್ಯ ಸರ್ಕಾರವೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿತು.
2008: ಹೊಗೇನಕಲ್ ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆ ಚಾಲನೆಯಿಂದ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು, ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಮಂಜೂರಾತಿ ಸಹ ದೊರಕಿದೆ. ಇದರಿಂದ ಯಾವುದೇ ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಬೆಂಗಳೂರಿನಲ್ಲಿ ಹೇಳಿದರು.
2008: ಆರ್ಯ ಈಡಿಗ ಮಹಾಸಂಸ್ಥಾನದ ಕುಲಗುರುಗಳಾದ ಆರ್ಯ ಶ್ರೀ ರೇಣುಕಾನಂದ ಸ್ವಾಮೀಜಿಯವರ ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ ಕಾರ್ಯಕ್ರಮ ಬೆಂಗಳೂರಿಗೆ ಸಮೀಪದ ಮಾಗಡಿ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ನೆರವೇರಿತು. ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿಯವರು ಬೆಳಿಗ್ಗೆ 10.30ಕ್ಕೆ ಸರಿಯಾಗಿ ರೇಣುಕಾನಂದ ಸ್ವಾಮೀಜಿಯವರಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡಿದರು. ಸೋಲೂರಿನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಬೃಹತ್ ನಿವೇಶನದಲ್ಲಿ ನಡೆದ ಈ ಸಮಾರಂಭಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.
2008: ಭಾರತ ತೊರೆದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಲಂಡನ್ ತಲುಪಿದರು. ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ತಾವು ತೆರಳುವ ಸ್ಥಳಕ್ಕೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತ ತೊರೆದು ತಾವು ತೆರಳುತ್ತಿರುವ ಸ್ಥಳ ಬಹಿರಂಗಪಡಿಸಲು ನಿರಾಕರಿಸಿದರು.
2008: ನಿರೀಕ್ಷೆಯಂತೆ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಫಾಹ್ಮಿದಾ ಮಿರ್ಜಾ ಅವರು ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ 60 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಸಭಾಧ್ಯಕ್ಷೆಯಾಗಿ ಆಯ್ಕೆಯಾದರು. ಅವರು ಮುಸ್ಲಿಂ ಲೀಗ್ (ಕ್ಯೂ) ಅಭ್ಯರ್ಥಿ ಸರ್ದಾರ್ ಮೊಹಮದ್ ಇಸ್ಸಾರ್ ಅವರನ್ನು 249-70 ಮತಗಳ ಅಂತರದಲ್ಲಿ ಪರಾಜಯಗೊಳಿಸಿದರು.
2008: `ಸ್ವತಂತ್ರ ಟಿಬೆಟ್'ಗೆ ಒತ್ತಾಯಿಸಿ ಮಾರ್ಚ್ 14ರಂದು ಲ್ಹಾಸಾದಲ್ಲಿ ಹಿಂಸಾಚಾರಕ್ಕೆ ಕಾರಣಕರ್ತರಾಗಿದ್ದ ಸುಮಾರು 105 ಮಂದಿ ಗಲಭೆಕೋರರು ಚೀನಾದ ಪೊಲೀಸರಿಗೆ ಶರಣಾದರು. ಈ ಹಿಂಸಾಚಾರದಲ್ಲಿ ಕನಿಷ್ಠ 13ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದರು. ಆಕ್ರೋಶಗೊಂಡಿದ್ದ ಗಲಭೆಕೋರರ ಶರಣಾಗತಿಗೆ ಟಿಬೆಟಿನ ಸ್ಥಳೀಯ ಸರ್ಕಾರ ಗಡುವು ನೀಡಿದ್ದರ ಹಿನ್ನೆಲೆಯಲ್ಲಿ 105 ಮಂದಿ ಗಲಭೆಕೋರರು ಶರಣಾಗತರಾದರು.
2008: ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ಚಲನಚಿತ್ರ ನಟ ರಘುವರನ್ (60) ಹೃದಯಘಾತದಿಂದ ಚೆನ್ನೈಯಲ್ಲಿ ನಿಧನರಾದರು. ಅವರು ನಟಿ ರೋಹಿಣಿಯವರನ್ನು ವಿವಾಹವಾಗಿದ್ದರು. ಮೃತರು ತಮಿಳು ಭಾಷಾ ಚಿತ್ರಗಳು ಸೇರಿದಂತೆ ತೆಲುಗು, ಕನ್ನಡ, ಮಲೆಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ರಜನಿಕಾಂತ್ ಅವರ `ಶಿವಾಜಿ' ಹಾಗೂ `ಬಾಸ್' ಚಿತ್ರಗಳು ರಘುವರನ್ ನಟಿಸಿದ ಇತ್ತೀಚಿನ ಪ್ರಸಿದ್ಧ ಚಿತ್ರಗಳು, ನಾಯಕ, ಖಳನಾಯಕ, ಪೋಷಕ ನಟ ಮುಂತಾದ ಪಾತ್ರಗಳಲ್ಲಿ ನಟಿಸಿ ಅವರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದರು.
2008: ಭಾರತದ ಗೂಢಚಾರ ಎಂದು ಪಾಕಿಸ್ಥಾನ ಸರ್ಕಾರವು ಪರಿಗಣಿಸಿದ ಸರಬ್ಜಿತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ದಿನವನ್ನು ಪಾಕಿಸ್ಥಾನ ಸರ್ಕಾರವು ಒಂದು ತಿಂಗಳ ಕಾಲ ಮುಂದೂಡಿತು. ಅವರಿಗೆ ಅಧ್ಯಕ್ಷ ಮುಷರಫ್ ಕ್ಷಮಾದಾನ ನೀಡುವ ಸಂಭವವಿದೆ ಎಂದು ವರದಿಗಳು ತಿಳಿಸಿದವು. ಲಾಹೋರ್ ಮತ್ತು ಮುಲ್ತಾನಿನಲ್ಲಿ 1990ರಲ್ಲಿ ನಾಲ್ಕು ಕಡೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿ ಎಂದು ಭಾವಿಸಿ ಬಂಧಿಸಲಾದ ಸರಬ್ಜಿತ್ ಸಿಂಗ್ ಅವರಿಗೆ 1991ರಲ್ಲಿಯೇ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆಗ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಸುಮಾರು 14ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರಬ್ಜಿತ್ ಅವರನ್ನು 2008ರ ಏಪ್ರಿಲ್ ಒಂದರಂದು ಗಲ್ಲಿಗೇರಿಸಲು ಸರ್ಕಾರ ನಿರ್ಧರಿಸಿತ್ತು.
2008: ಭ್ರಷ್ಟಾಚಾರದಲ್ಲಿ ಭಾರತ ವಿಶ್ವದ 180 ರಾಷ್ಟ್ರಗಳಲ್ಲಿ 72ನೇ ಸ್ಥಾನದಲ್ಲಿದೆ. ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ವಿಷಯಸೂಚಿ (ಸಿಪಿಐ) ವರದಿಯಲ್ಲಿ ಇದನ್ನು ತಿಳಿಸಲಾಗಿದ್ದು ವರದಿ ಈದಿನ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿತು.
2008: ಮೇಘಾಲಯ ಪ್ರಗತಿಪರ ಒಕ್ಕೂಟದ (ಎಂಪಿಎ) ನಾಯಕ ಡೊಂಕುಪರ್ ರಾಯ್ ಅವರು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎಸ್.ಎಸ್. ಸಿಧು ಪ್ರಮಾಣ ವಚನ ಬೋಧಿಸಿದರು. ಡಿ.ಡಿ. ಲಪಾಂಗ್ ನೇತೃತ್ವದ 10 ದಿನಗಳ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ಎದುರಿಸುವ ಬದಲು ವಿಶ್ವಾಸಮತಕ್ಕೆ ಮುನ್ನವೇ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಡೊಂಕುಪರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
2008: ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ ಅವರನ್ನು ಎಲ್ಲರೂ ತಪ್ಪಾಗಿ ತಿಳಿದುಕೊಂಡಿದ್ದಾರೆ. ಹಿಂದೂ ಉಗ್ರವಾದ ಮತ್ತು ವಾಸ್ತವದ ನಡುವಿನ ಅರ್ಥ ತಿಳಿಯದವರು ಅವರನ್ನು `ಬಲಿಪಶು' ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈದಿನ ಬಿಡುಗಡೆಯಾದ ಅಡ್ವಾಣಿ ಅವರ `ಮೈ ಕಂಟ್ರಿ, ಮೈ ಲೈಫ್' ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ. ವಾಜಪೇಯಿ ಅವರು ಅಡ್ವಾಣಿ ಅವರೊಂದಿಗೆ ಕಳೆದ ನಿಮಿಷಗಳನ್ನು ಮುನ್ನುಡಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ಭಾರತೀಯ ಜನಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡ 50ಕ್ಕೂ ಹೆಚ್ಚು ವರ್ಷಗಳಿಂದ `ಅಡ್ವಾಣಿ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ' ಎಂದು ವಾಜಪೇಯಿ ಬರೆದಿದ್ದಾರೆ. `ನೈಜ ಜಾತ್ಯತೀತತೆ'ಯ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದವರು ಅಡ್ವಾಣಿ. ಅವರ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಅವರನ್ನು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ಅಡ್ವಾಣಿ ಸಮಗ್ರ ರಾಷ್ಟ್ರೀಯತೆಯಲ್ಲಿ ಇಟ್ಟ ನಂಬಿಕೆಯನ್ನು ಅವರ ಒಡನಾಡಿಗಳು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ' ಎಂದು ವಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸುದೀರ್ಘ ಒಡನಾಟದಲ್ಲಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ ವಾಜಪೇಯಿ ಅವರು ಒಂದೇ ಸಂಸ್ಥೆಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜೊತೆಯಾಗಿ ಕೆಲಸ ಮಾಡಿದವರು ಒಂದೇ ದಿಕ್ಕಿನಲ್ಲಿ ಯೋಚಿಸಬೇಕು ಎಂದೇನಿಲ್ಲ. ಆದರೆ ಈ ಭಿನ್ನಾಭಿಪ್ರಾಯಗಳು ಆರೋಗ್ಯಕರವಾಗಿದ್ದವು. ಒಗ್ಗಟ್ಟನ್ನು ಇನ್ನಷ್ಟು ಬಲಗೊಳಿಸುವಂತಿದ್ದವು' ಎಂದು ಹೇಳಿದ್ದಾರೆ.
2008: ವೈಜ್ಞಾನಿಕ ಕಲ್ಪನೆಗಳ ಜಗತ್ಪ್ರಸಿದ್ಧ ಕಥೆಗಾರ ಆರ್ಥರ್ ಕ್ಲಾರ್ಕ್ (90) ನಿಧನರಾದರು. ಬಾಹ್ಯಾಕಾಶದಲ್ಲಿ ಪ್ರಸಕ್ತ ನಡೆದಿರುವ ಬಹಳಷ್ಟು ಸಾಧನೆಗಳನ್ನೆಲ್ಲ ಅರ್ಧ ಶತಮಾನದ ಹಿಂದೆಯೇ ತಮ್ಮಷ್ಟಕ್ಕೆ ತಾವೇ ಕಲ್ಪಿಸಿಕೊಂಡು ಕಥಾರೂಪ ನೀಡಿದ್ದ ಆರ್ಥರ್ ಕ್ಲಾರ್ಕ್ ಸಾವಿನಿಂದ ವೈಜ್ಞಾನಿಕ ಕಥಾ ಬರವಣಿಗೆಯ ಮಹತ್ವದ ಕೊಂಡಿಯೊಂದು ಕಳಚಿಕೊಂಡಂತಾಯಿತು. ಇಂಗ್ಲೆಂಡಿನಲ್ಲಿ 1917ರಲ್ಲಿ ಜನಿಸಿದ ಇವರು 1956ರ ಸುಮಾರಿಗೆ ಶ್ರೀಲಂಕಾಕ್ಕೆ ಬಂದು ನೆಲೆಸಿದರು. ವೈಜ್ಞಾನಿಕ ಕಲ್ಪನೆಗಳ ಬರಹಗಳಿಗೊಂದು ವಿಶಿಷ್ಠ ರೂಪ ನೀಡಿದ ಕ್ಲಾರ್ಕ್ ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಮಾನವನು ಚಂದ್ರನ ಮೇಲೆ ನಡೆದಾಡುವ ಬಗ್ಗೆ ಅರ್ಧ ಶತಮಾನಗಳ ಹಿಂದೆಯೇ ಕ್ಲಾರ್ಕ್ ಕಲ್ಪಿಸಿಕೊಂಡು ಕಥೆ ಬರೆದಾಗ ಎಲ್ಲರೂ ಲೇವಡಿ ಮಾಡಿದ್ದರು. ಆದರೆ ಅದಾಗಿ ಕೇವಲ ಒಂದೂವರೆ ದಶಕದಲ್ಲಿ ಮಾನವನು ಚಂದ್ರನ ಮೇಲೆ ಕಾಲಿರಿಸಿದ್ದನು. ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಕ್ಲಾರ್ಕ್ ಉಪಗ್ರಹಗಳ ಕಲ್ಪನೆಯೊಂದಿಗೆ ಕಥೆ ಬರೆದಿದ್ದರು. ಆಗ ಕೂಡ ಓದುಗರು `ಇದೆಲ್ಲಾ ಏನು, ಕಲ್ಪನೆಗೂ ಒಂದು ಮಿತಿ ಬೇಡವೆ' ಎಂದಿದ್ದರು. ಆದರೆ ಕೆಲವೇ ಸಮಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಉನ್ನತ ಮಟ್ಟ ತಲುಪಿತು. ಇವತ್ತು ಉಪಗ್ರಹಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವೈಜ್ಞಾನಿಕ ಕಥೆಗಳ ಈ ವಯೋವೃದ್ಧನಿಗೆ 1998ರಲ್ಲಿ ಇಂಗ್ಲೆಂಡ್ ಸರ್ಕಾರವು `ಸರ್' ಗೌರವ ನೀಡಿ ಅಭಿನಂದಿಸಿತ್ತು.
2007: ಅಮೆರಿಕದ ಉತ್ತರ ನೆವಾಡಾ ರಾಜ್ಯ ವಿಧಾನಸಭಾ ಅಧಿವೇಶನವನ್ನು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಿಸುವುದರೊಂದಿಗೆ ಇತಿಹಾಸ ಸೃಷ್ಟಿಯಾಯಿತು. ಉತ್ತರ ನೆವಾಡಾದ ಹಿಂದೂ ದೇವಾಲಯದ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ರಾಜನ್ ಜೆದ್ ವಿಧಾನಸಭೆಯ ಆರಂಭದಲ್ಲಿ ಗಾಯತ್ರಿ ಮಂತ್ರ ಪಠಿಸಿದರು. ನಂತರ ಉಪನಿಷತ್ತಿನಿಂದಲೂ ಕೆಲವು ಶ್ಲೋಕಗಳನ್ನು ಪ್ರಸ್ತುತ ಪಡಿಸಿದರು. 1864ರಲ್ಲಿ ನೆವಾಡಾ ರಾಜ್ಯ ವಿಧಾನಸಭೆ ಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಪ್ರಾರ್ಥನೆ ನೆರವೇರಿಸಿದರು. ಜೆದ್ ಅವರು ಕಾಷಾಯ ವಸ್ತ್ರ, ಹಣೆಯಲ್ಲಿ ಚಂದನದ ತಿಲಕ, ರುದ್ರಾಕ್ಷಿ ಮಾಲೆ ಧರಿಸಿ ಬಂದು ಗಾಯತ್ರಿ ಮಂತ್ರ ಹಾಗೂ ಋಗ್ವೇದದ ಶ್ಲೋಕಗಳನ್ನು ಪಠಿಸಿದರು.
2007: ದಕ್ಷಿಣ ರಷ್ಯಾದ ಗ್ರಾಮವೊಂದರ ವೃದ್ಧಾಶ್ರಮದಲ್ಲಿ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿ 63 ಹಿರಿಯ ನಾಗರಿಕರು ಮೃತರಾಗಿ, 33 ಮಂದಿ ಗಾಯಗೊಂಡರು.
2007: ಇರಾಕಿನಲ್ಲಿ ಸುಮಾರು 148 ಮಂದಿ ಶಿಯಾಗಳನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ, ಸದ್ದಾಮ್ ಹುಸೇನರ ಮಾಜಿ ಸಹಾಯಕರಾಗಿದ್ದ ತಾಹಾ ಯಾಸಿನ್ ರಂಜಾನ್ ಅವರನ್ನು ಬಾಗ್ದಾದಿನಲ್ಲಿ ಬೆಳಗಿನ ಜಾವ ಗಲ್ಲಿಗೇರಿಸಲಾಯಿತು.
2007: ಸೇಂಟ್ ಲೂಸಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್ನಲ್ಲಿ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಗರಿಷ್ಠ ರನ್ (257) ಅಂತರದ ಜಯ ಗಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತು. ಇದರ ಜೊತೆಗೇ ವಿಶ್ವ ಕಪ್ ಕ್ರಿಕೆಟಿನಲ್ಲೇ ಅತಿ ಹೆಚ್ಚು ಮೊತ್ತ (413), ಕೊನೆಯ 10 ಓವರುಗಳಲ್ಲಿ 136 ರನ್ ಗಳಿಕೆಯ ದಾಖಲೆಗಳನ್ನೂ ಭಾರತ ನಿರ್ಮಿಸಿತು. ವಿಶ್ವದ ಮಹಾ ಕ್ರಿಕೆಟ್ ಸಮರಗಳಲ್ಲಿ 25 ಸಿಕ್ಸರ್ ಸಿಡಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟುವ ಮೂಲಕ ಸೌರವ ಗಂಗೂಲಿ ಇನ್ನೊಂದು ದಾಖಲೆ ಸೃಷ್ಟಿಸಿದರು. ಒಂದೇ ಪಂದ್ಯದಲ್ಲಿ 18 ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನೂ ಭಾರತ ಸರಿಗಟ್ಟಿತು.
2007: ಸುಮಾರು 15 ವರ್ಷಗಳಿಂದ ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾಗಿದ್ದ ರಾಘವೇಂದ್ರ ಖಾಸನೀಸ (74) ಅವರು, ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಈದಿನ ಸಂಜೆ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಮಾರ್ಚ್ 20ರಂದು ಹರಿಶ್ಚಂದ್ರ ಘಾಟಿನಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತರಾಗಿದ್ದ ಅವರು ಕಳೆದ ಎರಡೂವರೆ ದಶಕಗಳಲ್ಲಿ ಸುಮಾರು 25 ಅಪರೂಪದ ಕತೆಗಳನ್ನು ನಾಡಿನ ಓದುಗರಿಗೆ ನೀಡಿದ್ದರು. `ಖಾಸನೀಸರ ಕತೆಗಳು' (1984) ಹಾಗೂ `ಬೇಡಿಕೊಂಡವರು' (1989) ಈ ಎರಡು ಕಥಾ ಸಂಕಲನಗಳು. (ಇವೆರಡನ್ನೂ ಸೇರಿಸಿ ಮೂರನೆಯದಾಗಿ ಹೊರಬಂದಿದ್ದ `ಖಾಸನೀಸರ ಸಮಗ್ರ ಕತೆಗಳು'). ಅವರು ಬರೆದದ್ದು ಕಡಿಮೆಯಾದರೂ ಅವರಿಗೆ ಕಥಾ ಪ್ರಪಂಚದಲ್ಲಿ ಶಾಶ್ವತವಾದ ಸ್ಥಾನವನ್ನು ತಂದು ಕೊಟ್ಟದ್ದು `ತಬ್ಬಲಿಗಳು' ಕತೆ. ಉಳಿದಂತೆ `ಮೋನಾಲಿಸಾ', `ಅಲ್ಲಾವುದ್ದೀನನ ಅದ್ಭುತ ದೀಪ', `ಹೀಗೂ ಇರಬಹುದು' ಮುಂತಾದ ಅಪರೂಪದ ಕತೆಗಳನ್ನು ಅವರು ಬರೆದಿದ್ದಾರೆ. ವಿಜಾಪುರದ ಇಂಡಿ ಗ್ರಾಮದಲ್ಲಿ 1933ರಲ್ಲಿ ಜನಿಸಿದ ಖಾಸನೀಸರು ಧಾರವಾಡದಲ್ಲಿ ತಮ್ಮ ಬಿಎ ಪದವಿ ಮುಗಿಸಿದ ನಂತರ ಮುಂಬಯಿಯಲ್ಲಿ ಇಂಗ್ಲಿಷ್ ಎಂ.ಎ. ಓದಿದ್ದರು. ಆನಂತರ ಗ್ರಂಥಾಲಯ ವಿಜ್ಞಾನ ಡಿಪ್ಲೊಮಾ ಪೂರೈಸಿ ಪುಣೆಯ ಎಂಜಿನಿಯರಿಂಗ್ ಕಾಲೇಜು ಒಂದರಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದರು. ಆಮೇಲೆ ಬೆಂಗಳೂರಿಗೆ ಬಂದ ಅವರು 1991ರವರೆಗೂ ಬೆಂಗಳೂರು ವಿವಿಯಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಶಸ್ತಿಗಳು: ಸಾಕಷ್ಟು ಜನಪ್ರಿಯ ಕಥೆಗಾರರಾಗಿದ್ದರೂ ಖಾಸನೀಸರಿಗೆ ಪ್ರಶಸ್ತಿಗಳು ಬಂದದ್ದು ಬಹಳ ಕಡಿಮೆ. 1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಸೃಜನಶೀಲ ಕಥಾ ಪ್ರಶಸ್ತಿ ಹಾಗೂ 1995ರಲ್ಲಿ ಗೌರವ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು. ಮೃತರು ಪತ್ನಿ ಕಾಂತಾ, ಮೂವರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದರು.
2007: ಉದ್ಯಮ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ `ಇಂಡಿಯಾ ಇಂಟರ್ ನ್ಯಾಷನಲ್ ಫೌಂಡೇಷನ್' ನ 2006ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಅನಿವಾಸಿ ಭಾರತೀಯ ಉದ್ಯಮಿ, `ಕೋಬ್ರಾ ಬೀರ್' ಸ್ಥಾಪಕ ಕರಣ್ ಬಿಲಿಮೋರಿಯಾ ಮತ್ತು ಇಂಗ್ಲೆಂಡಿನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸಿದ್ದಕ್ಕಾಗಿ ನೀಡಲಾಗುವ ಪ್ರಶಸ್ತಿಯನ್ನು ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್. ನಂದಕುಮಾರ ಅವರು ಗೆದ್ದುಕೊಂಡರು. 1989ರಲ್ಲಿ, ತಮ್ಮ 28ರ ಹರೆಯದಲ್ಲಿ 20,000 ಪೌಂಡ್ ಸಾಲದೊಂದಿಗೆ `ಕೋಬ್ರಾ ಬೀರ್' ಆರಂಭಿಸಿದ ಲಾರ್ಡ್ ಬಿಲಿಮೋರಿಯಾ ಅದನ್ನು ವಾರ್ಷಿಕ 14.50 ಕೋಟಿ ಪೌಂಡ್ ವಹಿವಾಟು ನಡೆಸುವ ಜಾಗತಿಕ ಬೀರ್ ಕಂಪೆನಿಯನ್ನಾಗಿ ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಬಂತು. 2004ರಲ್ಲಿ ರಾಣಿಯಿಂದ ಸಿಬಿಇ ಪ್ರಶಸ್ತಿಯನ್ನೂ ಪಡೆದ ಬಿಲಿಮೋರಿಯಾ ಲಂಡನ್ನಿನ ಥಾಮಸ್ ವ್ಯಾಲಿ ವಿಶ್ವವಿದ್ಯಾಲಯದ ಕುಲಪತಿ ಕೂಡಾ. ಲಂಡನ್ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ. ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದ ನಂದಕುಮಾರ ಅವರು ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾಭವನದ ಚಟುವಟಿಕೆಗಳನ್ನು ಸಂಘಟಿಸಿ, ಭಾರತೀಯ ಸಂಸ್ಕೃತಿ ಬೆಳೆಸುವ ಮುಖ್ಯಶಕ್ತಿಯಾಗಿದ್ದು, ಸಂಗೀತ, ನೃತ್ಯದ ಪದವಿ ತರಗತಿಗಳ ಆಯೋಜಕರೂ ಹೌದು. ಇಂಗ್ಲೆಂಡಿನ ಜ್ಯುಡಿಷಿಯಲ್ ಅಪಾಯಿಂಟ್ ಮೆಂಟ್ ಕಮೀಷನ್ ಅಧ್ಯಕ್ಷರಾದ ಉಷಾ ಪ್ರಶಾರ್ ಲಂಡನ್ನಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಜಯ್ ಪೆಂಬಾ ತಮಾಂಗ್ ಅವರಿಗೆ ಶೂಟಿಂಗ್ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ಪೇರ್ಸ್ ಬಂಗಾರ, ರಾಜ್ಯವರ್ಧನ್ ಸಿಂಗ್ ರಾಠೋಡ್- ವಿಕ್ರಮ್ ಭಟ್ನಾಗರ್ ಅವರಿಗೆ ಡಬಲ್ ಟ್ರ್ಯಾಪ್ ಫೇರ್ಸ್ ರಜತ, ಅಂಜಲಿ ಭಾಗ್ವತ್- ಅನುಜಾ ಜಂಗ್ ಅವರಿಗೆ 50 ಮೀ. ರೈಫಲ್ ಮೂರು ಭಂಗಿ ಫೇರ್ಸಿನಲ್ಲಿ ಎರಡನೇ ಸ್ಥಾನ, ವೇಟ್ ಲಿಫ್ಟಿಂಗಿನಲ್ಲಿ ಮೊಹಮ್ಮದ್ ಜಾಕೀರ್ ಅಸುದುಲ್ಲಾ ಅವರಿಗೆ ಪುರುಷರ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದವು.
2006: ಬಿಜೆಪಿಯಿಂದ ಉಚ್ಚಾಟಿತರಾದ ಉಮಾಭಾರತಿ ಅವರ ರಾಲಿಯಲ್ಲಿ ಪಾಲ್ಗೊಳ್ಳುವ ಯೋಜನೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಮದನ್ ಲಾಲ್ ಖುರಾನಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷದ ಅಧ್ಯಕ್ಷ ರಾಜನಾಥ್ಸಿಂಗ್ ಅವರು ಅಮಾನತುಗೊಳಿಸಿದರು.
2001: ವೆಸ್ಟ್ ಇಂಡಿಯನ್ ಬೌಲರ್ ಕರ್ಟ್ನ್ ವಾಲ್ಶ್ 500 ಟೆಸ್ಟ್ ವಿಕೆಟುಗಳನ್ನು ಪಡೆದ ಪ್ರಥಮ ಬೌಲರ್ ಎನಿಸಿಕೊಂಡರು. ಟ್ರಿನಿಡ್ಯಾಡ್ನ ಪೋರ್ಟ್ ಆಫ್ ಸ್ಪೇನಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ನಡೆದ ದ್ವಿತೀಯ ಟೆಸ್ಟಿನ ಎರಡನೇ ಇನ್ನಿಂಗ್ಸಿನಲ್ಲಿ ಜಾಕ್ ಕಾಲಿಸ್ ಅವರನ್ನು ಔಟ್ ಮಾಡಿ ಅವರು ಈ ಸಾಧನೆ ಮೆರೆದರು.
1982: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಂಸದೀಯ ಪಟು, ಕಿಸಾನ್ ಮಜ್ದೂರ್ ದಳ ಸ್ಥಾಪಕ ಜೆ.ಬಿ. ಕೃಪಲಾನಿ (1888-1982) ಅವರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು.
1973: ಕಲಾವಿದ ಪ್ರಭುಲಿಂಗಯ್ಯ ಬಿ.ಟಿ. ಜನನ.
1965: ಕಲಾವಿದ ರಾಜಶೇಖರ ಜೆ.ಎಂ. ಜನನ.
1937: ಕಲಾವಿದ ಸತ್ಯನಾರಾಯಣ ಎಂ.ಕೆ. ಜನನ.
1926: ಖ್ಯಾತ ಸಾಹಿತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಮೊಡಂಕಾಪು ಬಳಿಯ ಏರ್ಯ ಲಕ್ಷ್ಮೀನಾರಾಯಣ ಆಳ್ವ ಜನನ.
1924: ಕಲಾವಿದ ಎಂ.ಆರ್. ಗೌತಮ್ ಜನನ.
1912: ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ವೇಷಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ವಾಸುದೇವ ಗಿರಿಮಾಜಿ (19-3-1912ರಿಂದ 24-8-1993) ಗೋವಿಂದರಾವ್ ಗಿರಿಮಾಜಿ- ತುಂಗಮ್ಮ ದಂಪತಿಯ ಮಗನಾಗಿ ಜನಿಸಿದರು. ರಂಗಭೂಮಿ ನಟನೆಯೊಂದಿಗೆ ಸಿನಿಮಾದೊಂದಿಗೂ ನಂಟು. ಕನ್ನಡ, ಹಿಂದಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕ, ನಿರ್ದೇಶಕ, ನಾಯಕ, ಖಳನಾಯಕ ಪಾತ್ರಗಳನ್ನು ನಿರ್ವಹಿಸಿದ್ದರು.
1891: ಅರ್ಲ್ ವಾರನ್ (1891-1974) ಹುಟ್ಟಿದ ದಿನ. 1953-69ರ ಅವಧಿಯಲ್ಲಿ ಅಮೆರಿಕಾದ 14ನೇ ಮುಖ್ಯ ನ್ಯಾಯಾಧೀಶರಾದ ಇವರು ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಹತ್ಯೆಯ ತನಿಖೆಗಾಗಿ ರಚಿಸಲಾದ ಆಯೋಗದ ಅಧ್ಯಕ್ಷರಾಗಿದ್ದರು.
1876: ಸರ್ ಜಾನ್ ಹರ್ಬರ್ಟ್ ಮಾರ್ಷಲ್ (1876-1958) ಹುಟ್ಟಿದ ದಿನ. ಸಿಂಧೂ ಕಣಿವೆ ನಾಗರಿಕತೆಯನ್ನು ಬೆಳೆಸಿದ್ದ ಹರಪ್ಪ ಮತ್ತು ಮೊಹೆಂಜದಾರೊ ನಗರಗಳ ಪತ್ತೆಗೆ ನೆರವಾದ ಉತ್ಖನನಗಳ ಕಾರಣಕರ್ತನಾದ ಈತ ಭಾರತೀಯ ಪುರಾತತ್ವ ಸಮೀಕ್ಷೆಯ 1902-31) ಡೈರೆಕ್ಟರ್ ಜನರಲ್ ಆಗಿದ್ದಾಗ ಈ ಉತ್ಖನನ ನಡೆಯಿತು.
1821: ಸರ್ ರಿಚರ್ಡ್ (ಫ್ರಾನ್ಸಿಸ್) ಬರ್ಟನ್ (1821-1890) ಹುಟ್ಟಿದ ದಿನ. ಈತ `ದಿ ಅರೇಬಿಯನ್ ನೈಟ್ಸ್' ನ ಭಾಷಾಂತರವನ್ನು ಪ್ರಕಟಿಸಿದ ಇಂಗ್ಲಿಷ್ ವಿದ್ವಾಂಸ ಹಾಗೂ ಸಂಶೋಧಕ.
No comments:
Post a Comment