Wednesday, March 14, 2018

ಇಂದಿನ ಇತಿಹಾಸ History Today ಮಾರ್ಚ್ 13

ಇಂದಿನ ಇತಿಹಾಸ History Today ಮಾರ್ಚ್ 13
2018: ನವದೆಹಲಿ: ಛತ್ತೀಸ್ ಗಢದ ಸುಕ್ಮಾದಲ್ಲಿ ಸುಧಾರಿತ  ಸ್ಫೋಟಕ ಸಾಧನ (ಐಇಡಿ) ಮೂಲಕ ವಾಹನವನ್ನೇ ಸ್ಫೋಟಿಸುವ ಮೂಲಕ ನಕ್ಸಲೀಯರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ೯ ಮಂದಿ ಯೋಧರನ್ನು ಬಲಿತೆಗೆದುಕೊಂಡರು.  ಜಿಲ್ಲೆಯಲ್ಲಿ ವರ್ಷದ ಹಿಂದೆ ಇಂತಹುದೇ ದಾಳಿಯಲ್ಲಿ ನಕ್ಸಲೀಯರು ಸುಮಾರು ಒಂದು ಡಜನ್ ಸಿಆರ್ ಪಿಎಫ್ ಯೋಧರನ್ನು ಬಲಿತೆಗೆದುಕೊಂಡಿದ್ದರು.  ಈದಿನ ಮಧ್ಯಾಹ್ನ ೧೨.೩೦ರ ಸುಮಾರಿಗೆ ಜಿಲ್ಲೆಯ ಕಿಸ್ತರಮ್-ಪಲೋಡಿ ರಸ್ತೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ೨೧೨ನೇ ಬೆಟಾಲಿಯನ್ ಮೇಲೆ ನಕ್ಸಲೀಯರು ಈ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ದಾಳಿಯಲ್ಲಿ ೯ ಯೋಧರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡರು.  ರಸ್ತೆಯಲ್ಲಿ ಮಣ್ಣಿನ ಅಡಿಯಲ್ಲಿ ಹಲವಾರು ಸುಧಾರಿತ ಸ್ಫೋಟಕಗಳನ್ನು ಇರಿಸಿ ಸ್ಫೋಟಿಸುವ ಮೂಲಕ ನಕ್ಸಲೀಯರು ಸಿಆರ್‌ಪಿ ಎಫ್ ವಾಹನವನ್ನೇ ಉಡಾಯಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.  ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೃಹ ಸಚಿವ ರಾಜನಾಥ ಸಿಂಗ್ ಗೌರವ ಸಲ್ಲಿಸಿದರು. ’ಈದಿನ ಸುಕ್ಮಾದಲ್ಲಿ ನಡೆದಿರುವ ಸುಧಾರಿತ ಸ್ಫೋಟ ಸಾಧನಗಳ (ಐಇಡಿ) ಸ್ಫೋಟ ಅತ್ಯಂತ ಚಿಂತಾದಾಯಕ. ದೇಶ ಸೇವೆ ಮಾಡುವ ಹೊತ್ತಿನಲ್ಲಿ ಹುತಾತ್ಮರಾದ ಪ್ರತಿಯೊಬ್ಬ ಭದ್ರತಾ ಸಿಬ್ಬಂದಿಗೂ ನಾನು ತಲೆಬಾಗುತ್ತೇನೆ ಎಂದು ಅವರು ಟ್ವೀಟ್ ಮಾಡಿದರು.  ಗಾಯ ಗೊಂಡಿರುವ ಯೋಧರನ್ನು ವಿಮಾನ ಮೂಲಕ ರಾಯಪುರಕ್ಕೆ ಒಯ್ಯಲಾಯಿತು.. ಬಂಡುಕೋರರು ವಾಹನವನ್ನು ಸ್ಫೋಟಿಸಲು ಹಲವಾರು ಸ್ಫೋಟಕಗಳನ್ನು ಬಳಸಿದ್ದಾರೆ ಎಂದು ರಾಜ್ಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು. ದಾಳಿ ನಡೆದ ಬೆನ್ನಲ್ಲೇ ರಾಜ್ಯದ ರಾಜಧಾನಿ ರಾಯಪುರದಿಂದ ಸುಮಾರು ೫೦೦ ಕಿಮೀ ದೂರದಲ್ಲಿರುವ ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಯಿತು ಎಂದು ಅವರು ನುಡಿದರು. ಮುಂಜಾನೆ ೮ ಗಂಟೆಗೆ ಉಭಯ ಕಡೆಗಳ ನಡುವೆ ಮೊದಲ ಘರ್ಷಣೆ ನಡೆದಿತ್ತು. ಬಳಿಕ ಮಾವೋವಾದಿಗಳು ೨೧೨ನೇ ಬೆಟಾಲಿಯನ್ ನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು ಎಂದು ಅಧಿಕಾರಿಗಳು ಹೇಳಿದರು.  ಕಳೆದ ವರ್ಷ ಮಾರ್ಚ್ ೧೧ರಂದು ಭದ್ರತಾ ಪಡೆಯ ೧೨ ಸಿಬ್ಬಂದಿ ಭೇಜಿ ಪ್ರದೇಶದಲ್ಲಿ ನಡೆದ ನಕ್ಸಲೀಯ ದಾಳಿಯಲ್ಲಿ ಹುತಾತ್ಮರಾಗಿದ್ದರು. ನಕ್ಸಲೀಯರು ಯೋಧರನ್ನು ಕೊಂದು ಅವರ ಬಳಿ ಶಸ್ತ್ರಾಸ್ತ್ರಗಳನ್ನೂ ಲೂಟಿ ಮಾಡಿದ್ದರು.  ಕೆಲವು ದಿನಗಳ ಬಳಿಕ ಏಪ್ರಿಲ್ ೨೪ರಂದು ಸುಕ್ಮಾದಲ್ಲಿ ಸಂಭವಿಸಿದ ಇಂತಹುದೇ ಇನ್ನೊಂದು ಘರ್ಷಣೆಯಲ್ಲಿ ಅರೆ ಸೇನಾ ಪಡೆಯ ೨೪ ಯೋಧರು ಹುತಾತ್ಮರಾಗಿದ್ದರು.  ಈದಿನದ ದಾಳಿಯಲ್ಲಿ ಮಾವೋವಾದಿಗಳು ಸುಕ್ಮಾದಲ್ಲಿ  ೧೦ ಮಂದಿ ಸಿಆರ್ ಪಿಎಫ್ ಯೋಧರನ್ನು ಒಯ್ಯುತ್ತಿದ್ದ ಸ್ಫೋಟಕ ಸಂರಕ್ಷಣಾ ವಾಹನವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು. ಅವರಲ್ಲೂ ಹಲವರು ಸ್ಫೋಟದಲ್ಲಿ ಸತ್ತಿರುವ ಸಾಧ್ಯತೆಗಳಿವೆ ಎಂದು ಛತ್ತೀಸ್ ಗಢ ಪೊಲೀಸ್ ಗೆ ಸೇರಿದ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳ ಘಟಕದ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಡಿ.ಎಂ. ಅವಸ್ಥಿ ಹೇಳಿದರು. ಈದಿನ ಬೆಳಗ್ಗೆ ೮ ಗಂಟೆಗೆ ಸಿಆರ್ ಪಿಎಫ್ ನ ೨೦೧೮ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲೂಟ್ ಆಕ್ಷನ್) ಬೆಟಾಲಿಯನ್ ಮತ್ತು ಮಾವೋವಾದಿಗಳ ನಡುವೆ  ಘರ್ಷಣೆ ಸಂಭವಿಸಿತ್ತು. ೨೦೮ ಕೋಬ್ರಾದ ಪ್ರತಿಕ್ರಿಯೆ ಗಮನಿಸಿ ಮಾವೋವಾದಿಗಳು ಪರಾರಿಯಾದರು. ಪುನಃ ಮಧ್ಯಾಹ್ನ ೧೨.೩೦ಕ್ಕೆ ಮಾವೋವಾದಿಗಳು ಸಿಆರ್ ಪಿಎಫ್ ನ  ೨೧೨ ಬೆಟಾಲಿಯನ್ ತಂಡವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು. ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟಕ ನಿರೋಧ ವಾಹನವನ್ನೇ ಅವರು ಸ್ಫೋಟಿಸಿದರು ಎಂದು ಸಿಆರ್ ಪಿಎಫ್ ಹೇಳಿಕೆ ತಿಳಿಸಿತು.

2018: ನವದೆಹಲಿ: ಜೋಧಪುರದಲ್ಲಿ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ, ಮೆಗಾಸ್ಟಾರ್ ಅಮಿತಾಭ್ ಬಚ್ಚನ್ನ್  ದಿಢೀರನೆ ಅಸ್ವಸ್ಥರಾದ ಘಟನೆ ಘಟಿಸಿತು.  ಚಿತ್ರೀಕರಣ ನಡೆಯುತ್ತಿದ್ದಾಗ ದಿಢೀರನೆ ಅಸ್ವಸ್ಥರಾದ ಬಗ್ಗೆ ಸ್ವತಃ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದರು.  ಅಸ್ವಸ್ಥರಾದ ತಮಗೆ ತತ್ ಕ್ಷಣವೇ ವೈದ್ಯರು ಸ್ಪಂದಿಸಿದರು ಎಂದೂ ಬಚ್ಚನ್ ತಿಳಿಸಿದರು.  ಹವಾಮಾನ ಬದಲಾವಣೆಯಿಂದಾಗಿ ಅಮಿತಾಬ್ ಬಚ್ಚನ್ ಅರೋಗ್ಯದಲ್ಲಿ ಏರುಪೇರು ಕಂಡುಬಂದಿತು ಎಂದು ವರದಿ ಹೇಳಿತು.  ಬಚ್ಚನ್ ಅಸ್ವಸ್ಥತೆಯಿಂದ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ತಂಡ ಕೂಡಾ ಚಿಂತೆಗೀಡಾಗಿದೆ ಎಂದು ವರದಿ ಹೇಳಿತು.  ‘ಆದರೆ ತಮ್ಮ ಆರೋಗ್ಯ ಸುಧಾರಿಸುತ್ತಿದೆ, ಅಭಿಮಾನಿಗಳು ಆತಂಕಪಡಬೇಕಾಗಿಲ್ಲ’  ಎಂದು ಬಚ್ಚನ್ ಬ್ಲಾಗ್ ನಲ್ಲಿ ಮನವಿ ಮಾಡಿದರು.  ಧೂಮ್ ೩ ಸಿನಿಮಾ ನಿರ್ದೇಶಕ ವಿಜಯ್ ಆಚಾರ್ಯ ಕೃಷ್ಣಾ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಚ್ಚನ್ ಜತೆ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2018: ಮುಂಬೈ : ಎಂಜಿನ್ನುಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಎಂಟು ಎ೩೨೦ ನಿಯೋ ವಿಮಾನಗಳ ಹಾರಾಟಕ್ಕೆ ದೇಶದ ವಿಮಾನಯಾನ ನಿಯಂತ್ರಣ ಸಂಸ್ಥೆಯಾಗಿರುವ ಡಿಜಿಸಿಎ ತಡೆ ಒಡ್ಡಿತು.  ಪರಿಣಾಮವಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಮಿತವ್ಯಯದ ೪೭ ವಿಮಾನಗಳ ಹಾರಾಟವನ್ನು ಮಂಗಳವಾರ ಸ್ಥಗಿತಗೊಳಿಸಿತು.  ಇದರ ಜೊತೆಗೆ ಗೋ ಅಂಡ್ ಏರ್ ವಿಮಾನಯಾನ ಸಂಸ್ಥೆಯ ಮೂರು ವಿಮಾನಗಳ ಎಂಜಿನ್ನುಗಳಲ್ಲೂ ದೋಷ ಇರುವುದನ್ನು ಡಿಜಿಸಿಎ ಪತ್ತೆ ಹಚ್ಚಿದ್ದು ಅವುಗಳ ಹಾರಾಟಕ್ಕೂ ತಡೆ ನೀಡಿತು.  ಇಂಡಿಗೋ ಮಾರ್ಚ್ ೧೩ರ ತನ್ನ ದೇಶೀಯ ವಾಯುಯಾನ ಜಾಲದ ೪೭ ವಿಮಾನ ಹಾರಾಟಗಳನ್ನು ರದ್ದು ಪಡಿಸಿರುವುದಾಗಿ ತನ್ನ ವೆಬ್ ಸೈಟಿನಲ್ಲಿ ಅಧಿಕೃತವಾಗಿ ಪ್ರಕಟಿಸಿತು.  ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತ, ಹೈದರಾಬಾದ್, ಬೆಂಗಳೂರು, ಪಟ್ನಾ ಶ್ರೀನಗರ, ಭುವನೇಶ್ವರ, ಅಮೃತಸರ, ಶ್ರೀನಗರ ಮತ್ತು ಗುವಾಹಟಿ ಇವು ರದ್ದಾಗಿರುವ ಇಂಡಿಗೋ ವಿಮಾನ ಹಾರಾಟಗಳಲ್ಲಿ ಮುಖ್ಯವಾದವುಗಳು.  ಮಾರ್ಚ್ ೧೨ರ ಸೋಮವಾರ ಲಕ್ನೋ ಗೆ ಹೋಗಬೇಕಿದ್ದ ಇಂಡಿಗೋ ಏರ್ ಲೈನ್ಸಿನ ವಿಮಾನ ಕೇವಲ ೪೦ ನಿಮಿಷಗಳ ಒಳಗೆ ಆಗಸದಲ್ಲಿ ಎಂಜಿನ್ ವೈಫಲ್ಯಕ್ಕೆ ಕಂಡು ಬಂದಕಾರಣ ಅಹಮದಾಬಾದಿಗೆ ವಾಪಸಾಗಿತ್ತು. ಇದನ್ನು ಅನುಸರಿಸಿ ಡಿಜಿಸಿಎ ವಿಮಾನಗಳ ತೀವ್ರ ತಪಾಸಣೆ ನಡೆಸಿತು. ಆಗ ಇಂಡಿಗೋ ಏರ್ ಲೈನ್ಸಿನ ಎಂಟು ವಿಮಾನಗಳ ಎಂಜಿನ್ನುಗಳು ದೋಷಪೂರಿತವಾಗಿರುವುದು ಕಂಡುಬಂತು. ಪರಿಣಾಮವಾಗಿಯೇ ಇಂಡಿಗೋ ಈದಿನ  ಮಂಗಳವಾರದ ತನ್ನ ೪೭ ವಿಮಾನ ಹಾರಾಟಗಳನ್ನು ರದ್ದು ಪಡಿಸಿತು. ಇಂಡಿಗೋ ದಿನಕ್ಕೆ ೧,೦೦೦ ಹಾರಾಟಗಳನ್ನು ದೇಶೀಯವಾಗಿ ನಡೆಸುತ್ತದೆ. ಸೋಮವಾರ ಇಂಡಿಗೋ ಮತ್ತು ಗೋ ಏರ್ ವಿಮಾನ ಹಾರಾಟಗಳು ರದ್ದಾದ ಕಾರಣ ನೂರಾರು ಪ್ರಯಾಣಿಕರು ಭಾರೀ ಪರದಾಟ ಅನುಭವಿಸಿದ್ದರು.

2018: ನವದೆಹಲಿ: ಬ್ಯಾಂಕ್ ಖಾತೆಗಳು, ತತ್ಕಾಲ್  ಪಾಸ್ ಪೋರ್ಟ್‌ಗಳು ಮತ್ತು ಮೊಬೈಲ್ ಫೋನುಗಳು, ಸರ್ಕಾರದ ವಿವಿಧ ಸೇವೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಆಧಾರ್ ಜೊತೆಗೆ ಕಡ್ಡಾಯವಾಗಿ ಜೋಡಿಸುವ ಮಾರ್ಚ್ ೩೧ರ ಗಡುವನ್ನು ಸುಪ್ರೀಂಕೋರ್ಟ್ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಮುಂದಿರುವ ಪ್ರಕರಣದ ಅಂತಿಮ ತೀರ್ಪಿನವರೆಗೆ ವಿಸ್ತರಿಸಿತು.  ಆಧಾರ್ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆ ಕಾಲದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ಇತರ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಅಶೋಕ ಭೂಷಣ್ ಅವರನ್ನು ಒಳಗೊಂಡ ಪಂಚಸದಸ್ಯ ಸಂವಿಧಾನಪೀಠ ಈ ಆದೇಶ ನೀಡಿತು. ಕಡ್ಡಾಯ ಆಧಾರ್ ಜೋಡಣೆಗೆ ಈ ಹಿಂದೆ ನಿಗದಿಗೊಳಿಸಲಾಗಿದ್ದ ಮಾರ್ಚ್ ೩೧ರ ಗಡುವನ್ನು ವಿಸ್ತರಿಸಬಹುದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುಳಿವು ನೀಡಿತ್ತು. ವಿವಿಧ ಕಲ್ಯಾಣ ಯೋಜನೆಗಳು, ಅಗತ್ಯ ಸೇವೆಗಳು, ಬ್ಯಾಂಕಿಂಗ್ ಮತ್ತು ಫೋನುಗಳನ್ನು ಕಡ್ಡಾಯವಾಗಿ ಆಧಾರ್ ಜೊತೆ ಜೋಡಣೆ ಮಾಡುವ ಸರ್ಕಾರದ ನಿರ್ಧಾರವನ್ನು ಹಲವಾರು ಅರ್ಜಿಗಳ ಮೂಲಕ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.  ಕೇಂದ್ರ ಸರ್ಕಾರವು ಇತರ ವಿಷಯಗಳ ಜೊತೆಗೆ ಚಾಲನಾ ಪರವಾನಗಿ ಮತ್ತ ಮತದಾರರ ಗುರುತಿನ ಚೀಟಿಗಳನ್ನು ಕೂಡಾ ಆಧಾರ್ ಜೊತೆಗೆ ಕಡ್ಡಾಯವಾಗಿ ಜೋಡಣೆ ಮಾಡಲೂ ಯೋಜಿಸುತ್ತಿದೆ. ಬೇನಾಮಿ ವ್ಯವಹಾರಗಳನ್ನು ಮತ್ತು ಕಪ್ಪು ಹಣವನ್ನು ನಿರ್ಮೂಲನಗೊಳಿಸುವ ಸಲುವಾಗಿ ಬ್ಯಾಂಕ್ ಠೇವಣಿಗಳು, ಹೊಸದಾಗಿ ಮೊಬೈಲ್ ಫೋನ್ ಪಡೆಯಲು ಮತ್ತು ಇತರ ಸೇವೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲು ತಾನು ಆಗ್ರಹಿಸುತ್ತಿರುವುದಾಗಿ ಸರ್ಕಾರ ಪ್ರತಿಪಾದಿಸಿತು.  ಠೇವಣಿದಾರರು ಖಾತೆ ತೆರೆಯುವಾಗ/ ಸರ್ಟಿಫಿಕೇಟುಗಳನ್ನು ಖರೀದಿಸುವಾಗ ಆಧಾರ್ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ.  ಅಂತಹ ಠೇವಣಿಗಾಗಿ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆಯನ್ನು ನೀಡದ ಪ್ರತಿಯೊಬ್ಬ ಠೇವಣಿದಾರನೂ ೨೦೧೮ರ ಮಾರ್ಚ್ ೩೧ರ ಒಳಗಾಗಿ ಆಧಾರ್ ಸಂಖ್ಯೆಯನ್ನು ನೀಡಬೇಕಾಗಿತ್ತು.  ಅಕ್ಟೋಬರ್ ತಿಂಗಳಲ್ಲಿ ಸರ್ಕಾರವು ೧೨ ಅಂಕಿಗಳ ಆಧಾರ್ ವಿಶಿಷ್ಠ ಸಂಖ್ಯೆಯನ್ನು ಅಂಚೆ ಕಚೇರಿ ಠೇವಣಿ, ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪತ್ರ (ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್) ಯೋಜನೆ ಮತ್ತು ಕಿಸಾನ್ ವಿಕಾಸ ಪತ್ರಗಳಂತಹ ಸಣ್ಣ ಉಳಿತಾಯ ಯೋಜನೆಗಳಿಗೂ ಕಡ್ಡಾಯಗೊಳಿಸಿತ್ತು.  ವಿವಿಧ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯ ಜೋಡಣೆ ಗಡುವನ್ನು ಸುಪ್ರೀಂಕೋರ್ಟ್ ಕಳೆದ ಡಿಸೆಂಬರ್ ೧೫ರಂದು ೨೦೧೮ರ ಮಾರ್ಚ್ ವರೆಗೆ ವಿಸ್ತರಿಸಿತ್ತು. ಏನಿದ್ದರೂ, ಸಂವಿಧಾನದ ಸೆಕ್ಷನ್ ೭ರ ಅಡಿಯಲ್ಲಿ ಸಬ್ಸಿಡಿಗಳು ಮತ್ತು ಸವಲತ್ತುಗಳಿಗೆ ಸಂಬಂಧಿಸಿದಂತೆ ವಿಧಿಸಲಾಗಿರುವ ೨೦೧೮ರ ಮಾರ್ಚ್ ೩೧ರ ಗಡುವು ವಿಸ್ತರಣೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.  ಆಧಾರ್ ಆಧಾರಿತ ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಇರುವ ಅಡಚಣೆಗಳ ಪರಿಣಾಮವಾಗಿ ಉಪವಾಸಕ್ಕೆ ತುತ್ತಾಗಿ ಹಲವಾರು ಸಾವುಗಳು ಸಂಭವಿಸಿವೆ. ಆದ್ದರಿಂದ ಅವರಿಗೆ ಪರಿಹಾರ ಮಂಜೂರು ಮಾಡುವ ಬಗ್ಗೆ ನ್ಯಾಯಾಲಯ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಫೆಬ್ರುವರಿ ೨೨ರಂದು ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಇದಕ್ಕೆ ಮುನ್ನ ಆಧಾರ್ ಯೋಜನೆಯಡಿ ನಾಗರಿಕರ ಬಯೋ ಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವಲ್ಲಿನ ನ್ಯೂನತೆಗಳನ್ನು ಇನ್ನೊಂದು ಶಾಸನ ರಚನೆಯ ಮೂಲಕ ಬಳಿಕ ನಿವಾರಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.  ೨೦೦೯ರಿಂದ ಯಾವುದೇ ಅಧಿಕಾರವಿಲ್ಲದೆಯೇ ಮಾಹಿತಿಯನ್ನು ಸಂಗ್ರಹಿಸುತ್ತಾ ಬರಲಾಗಿದೆ ಎಂಬ ಆಕ್ಷೇಪವನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ೨೦೧೬ರಲ್ಲಿ ಕಾನೂನು ರೂಪಿಸಿತ್ತು. ಆದರೆ ಹಿಂದೆ ಸಂಗ್ರಹಿಸಲಾದ ಮಾಹಿತಿಯ ವಿಚಾರದಲ್ಲಿ ರಾಜಿಯಾದರೆ ಏನಾದೀತು ಎಂಬ ಬಗ್ಗೆ ಗಮನ ನೀಡುವ ಅಗತ್ಯವಿದೆ ಎಂದು ಭಾವಿಸಲಾಗಿತ್ತು. 

2018: ಮುಂಬೈ : ೧೯೯೩ರ ಮುಂಬೈ ಬಾಂಬ್ ಸ್ಫೋಟಗಳ ಸೂತ್ರಧಾರ ಪಾತಕಿ ದಾವೂದ್ ಇಬ್ರಾಹಿಂ ಗೆ ಪಾಕಿಸ್ತಾನದ ಸಂಪೂರ್ಣ ರಕ್ಷಣೆ ಇದೆ ಎಂಬುದಾಗಿ ಭಾರತ ಪ್ರತಿಪಾದಿಸುತ್ತಾ ಬಂದುದನ್ನು ಇತ್ತೀಚೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿರುವ ದಾವೂದ್ ಬಂಟ ಫಾರೂಕ್ ಟಕ್ಲಾ ದೃಢ ಪಡಿಸಿದ್ದಾನೆ ಎಂದು ವರದಿಗಳು ಹೇಳಿದವು. ತನಿಖಾಧಿಕಾರಿಗಳಿಗೆ ಟಕ್ಲಾ ನೀಡಿರುವ ಹೇಳಿಕೆಯ ಪ್ರಕಾರ ’ದಾವೂದ್ ಕರಾಚಿಯ ವಿಲಾಸೀ ಕ್ಲಿಫ್ಟನ್ ಪ್ರದೇಶದಲ್ಲಿನ ಬೃಹತ್ ಬಂಗಲೆಯಲ್ಲಿ  ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದಾನೆ. ಆತನ ಈ ಮನೆಗೆ ಪಾಕ್ ರೇಂಜರ್ಗಳ ಬಿಗಿ ಭದ್ರತೆ, ರಕ್ಷಣೆ ಇದೆ ಎಂದು ಹೇಳಲಾಯಿತು. ‘ಪಾಕಿಸ್ತಾನಕ್ಕೆ ವಿದೇಶೀ ಗಣ್ಯರು ಭೇಟಿಕೊಡುವ ಸಂದರ್ಭಗಳಲ್ಲಿ ದಾವೂದನನ್ನು ಅಂಡಾ ಗ್ರೂಪ್ ಆಫ್ ಐಲ್ಯಾಂಡ್ ನಿವಾಸಕ್ಕೆ ಅತ್ಯಂತ ಬಿಗಿ ಭದ್ರತೆಯಲ್ಲಿ ಸ್ಥಳಾಂತರಿಸಲಾಗುತ್ತದೆ. ಈ ಪ್ರದೇಶಕ್ಕೆ ದಾವೂದ್ ಮತ್ತು ಆತನ ಪತ್ನಿಯನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ. ಇಲ್ಲಿಗೆ ಪಾಕ್ ರೇಂಜರುಗಳ ಬಿಗಿ ಕಾವಲು ಇದೆ.  ಅಗತ್ಯ ಬಿದ್ದಾಗ ದಾವೂದ್, ಕುಟುಂಬದವರೊಂದಿಗೆ ಸುಲಭದಲ್ಲಿ ಮತ್ತು ಸುರಕ್ಷಿತವಾಗಿ, ಕೇವಲ ಆರು ತಾಸುಗಳ ಒಳಗೆ, ದುಬೈಗೆ ತಲುಪುವ ವ್ಯವಸ್ಥೆಯನ್ನು ಪಾಕ್ ಸರ್ಕಾರ ಮಾಡಿದೆ ಎಂದು ಟಕ್ಲಾ ಹೇಳಿದ. ಹಿಂದೊಮ್ಮೆ ದಾವೂದ್ ಯುಎಇ ಗೆ ಬಂದಿದ್ದಾಗ ಆತನ ಚಲನವಲನಗಳ ಹೊಣೆಗಾರಿಕೆಯನ್ನು ವಹಿಸಿದ್ದು  ತಾನೇ ಎಂಬುದಾಗಿ ಹೇಳಿರುವ ಟಕ್ಲಾ, ತಾನು ದುಬೈಯಲ್ಲಿ  ಅಧಿಕಾರಿಗಳ ಸಹಿತ ಯಾರ ಕಣ್ಣಿಗೂ ಬೀಳದಂತೆ ಸಾಮಾನ್ಯ ಟ್ಯಾಕ್ಸಿ ಚಾಲಕನಾಗಿ ದುಡಿದಿದ್ದುದಾಗಿ ಹೇಳಿದ.  ಇಬ್ಬರು ಗಂಡು ಮಕ್ಕಳನ್ನು ಹೊಂದಿರುವ ಟಕ್ಲಾ, ತನಗೆ ಭಾರತದಲ್ಲೇ ಸಾಯಬೇಕೆಂಬ ಆಸೆ ಇದೆ. ವೃದ್ಧ ತಾಯಿ ಅಸ್ವಸ್ಥೆಯಾಗಿದ್ದು ಸಹೋದರನ ಜೊತೆ ವಾಸವಾಗಿದ್ದಾಳೆ ಎಂದು ಹೇಳಿದ್ದಾನೆ.  ದಾವೂದ್ ಇಬ್ರಾಹಿಂ ಗೆ ಪಾಕಿಸ್ತಾನದಲ್ಲಿ ಕೆಲವು ದುಷ್ಟ ಶಕ್ತಿಗಳಿಂದ ಪ್ರಾಣ ಬೆದರಿಕೆ ಇದೆ. ಸ್ಥಳೀಯ ಗ್ಯಾಂಗ್ ಮತ್ತು ಛೋಟಾ ರಾಜನ್ ಗ್ಯಾಂಗ್ ದಾವೂದ್ ಹತ್ಯೆಗೆ ೨೦೦೦ ದಿಂದ ೨೦೦೫ರ ನಡುವೆ ಹಲವು ಬಾರಿ ಯತ್ನಿಸಿ ವಿಫಲವಾಗಿದ್ದವು ಎಂದು ಟಕ್ಲಾ ಹೇಳಿದ್ದಾನೆ.  ಭಾರತದ ಅಧಿಕಾರಿಗಳು ಶತ ಪ್ರಯತ್ನ ಮಾಡಿದರೂ ದಾವೂದ್ ನನ್ನು ಭಾರತಕ್ಕೆ ತರಲು ಅವರಿಗೆ ಸಾಧ್ಯವಾಗಲಾರದು. ಏಕೆಂದರೆ ಆತನಿಗೆ ಅಷ್ಟೊಂದು ಬಿಗಿ ಭದ್ರತೆ, ರಕ್ಷಣೆಯನ್ನು ಪಾಕಿಸ್ತಾನ ನೀಡಿದೆ ಎಂದೂ ಟಕ್ಲಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ವರದಿಗಳು ತಿಳಿಸಿದವು.

2018: ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೯೪೨ ಕೋಟಿ ರೂಪಾಯಿಗಳ ಇನ್ನೊಂದು ಬೃಹತ್ ವಂಚನೆ ಮೆಹುಲ್ ಚೊಕ್ಸಿ ಅವರ ಗೀತಾಂಜಲಿ ಕಂಪೆನಿಯಿಂದ ನಡೆದಿರುವುದಾಗಿ ದೇಶದ ೨ನೇ ಅತಿದೊಡ್ಡ ರಾಷ್ಟ್ರೀಕೃತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪೊಲೀಸರಿಗೆ ತಿಳಿಸಿದೆ ಎಂದು ರಾಯಿಟರ್‍ಸ್ ವರದಿ ಮಾಡಿತು.  ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಂಚನೆ ಎಂದು ಹೇಳಲಾದ ೧೨,೭೦೦ ಕೋಟಿ ರೂಪಾಯಿಗಳ ವಂಚನೆಯನ್ನು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರ ಎರಡು ವಜ್ರಾಭರಣ ವ್ಯಾಪಾರೋದ್ಯಮ ಕಂಪೆನಿಗಳು ನಡೆಸಿರುವ ವಿಚಾರವನ್ನು ಬ್ಯಾಂಕ್ ಕಳೆದ ತಿಂಗಳು ಬಹಿರಂಗ ಪಡಿಸಿತ್ತು.  ಮೆಹುಲ್ ಚೊಕ್ಸಿ ನಿಯಂತ್ರಣದ ಗೀತಾಂಜಲಿ ಸಮೂಹದ ಕಂಪೆನಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೭,೦೮೦ ಕೋಟಿ ರೂಪಾಯಿಗಳನ್ನು ವಂಚಿಸಿದೆ ಎಂದು ಬ್ಯಾಂಕ್ ತಿಳಿಸಿರುವ ಮಾಹಿತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದರು.  ಈ ಹಿಂದೆ ಬ್ಯಾಂಕ್ ಗೀತಾಂಜಲಿ ಸಮೂಹದ ಕಂಪೆನಿಗಳಿಂದ ೬,೧೩೮ ಕೋಟಿ ರೂಪಾಯಿ ವಂಚನೆಯಾಗಿರುವ ಬಗ್ಗೆ ತಿಳಿಸಿತ್ತು.  ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಹೊಸ ವಿವರಗಳು ಹೊರಬಂದಿರುವ ಹಿನ್ನೆಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಆಗಿರುವ ವಂಚನೆಯ ಒಟ್ಟಾರೆ ಮೊತ್ತ ೨೦೦ ಕೋಟಿ ಡಾಲರುಗಳನ್ನು ಮೀರುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿತು. ಗೀತಾಂಜಲಿ ಸಮೂಹದ ಮುಖ್ಯಸ್ಥ ಮೆಹುಲ್ ಚೊಕ್ಸಿ ಪರ ವಕೀಲರು ಹೊಸ ಆಪಾದನೆಗಳ ಬಗ್ಗೆ ತಮಗೆ ಗೊತ್ತಿಲ್ಲ ಎಂಬುದಾಗಿ ಹೇಳಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಚೊಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಿಸಿ, ತಾವೇನೂ ತಪ್ಪೆಸಗಿಲ್ಲ ಎಂದು ಪ್ರತಿಪಾದಿಸಿದರು.  ಪಂಜಾಬ್ ನ್ಯಾಷನಲ್ ಬ್ಯಾಂಕ್ ಪತ್ರಿಕಾ ವರದಿಗೆ ತತ್ ಕ್ಷಣದ ಪ್ರತಿಕ್ರಿಯೆ ನೀಡಲಿಲ್ಲ.  

2018: ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೇಟ್ ಪಾಸ್ ನೀಡಿದ್ದಾರೆ ಎಂದು ವರದಿಗಳು ತಿಳಿಸಿದವು. ರೆಕ್ಸ್ ಟಿಲ್ಲರ್ ಸನ್ ಅವರನ್ನು ವಿದೇಶಾಂಗ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಕಿತ್ತು ಹಾಕಲಾಗಿದೆ ಎಂದು ಪ್ರಕಟಣೆ ತಿಳಿಸಿತು.  ಸಿಐಎ ನಿರ್ದೇಶಕ ಮೈಕ್ ಪೊಂಪಿಯೊ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ ಎಂದು ವರದಿಗಳು ಹೇಳಿದವು.

2018: ಮುಂಬೈ: ಮಹತ್ವದ ನಿರ್ಧಾರ ಒಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ’ಲೆಟರ್ಸ್ ಆಫ್ ಅಂಡರ್ ಟೇಕಿಂಗ್ (ಎಲ್ ಒಯು- ವಿದೇಶೀ ಸಾಲಪತ್ರ)’ ನೀಡದಂತೆ ಬ್ಯಾಂಕುಗಳ ಮೇಲೆ ನಿಷೇಧ ವಿಧಿಸಿತು.  ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು ೧೩,೦೦೦
ಕೋಟಿ ರೂಪಾಯಿ ವಂಚಿಸಲು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರು ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ’ಲೆಟರ್ಸ್ ಆಫ್ ಅಂಡರ್ ಟೇಕಿಂಗ್ (ಎಲ್ ಒಯು) ಬಳಸಿದ್ದರು ಎಂದು ಆಪಾದಿಸಲಾಗಿತ್ತು. ಈ ಹಿನ್ನೆಲೆಯಲ್ಲೇ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿತು.  ಭಾರತಕ್ಕೆ ಆಮದು ಮಾಡಿಕೊಳ್ಳಲು ವ್ಯಾಪಾರ ಸಾಲಗಳಿಗಾಗಿ ಎಡಿ ಕೆಟಗರಿ ಬ್ಯಾಂಕುಗಳು ಎಲ್ ಒಯುಗಳು/ ಎಲ್ ಒಸಿಗಳನ್ನು ನೀಡುವ ಪರಿಪಾಠವನ್ನು ತತ್ ಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ಒಂದರಲ್ಲಿ ತಿಳಿಸಿತು. ಆಮದು ಬಿಲ್ ಗಳಿಗಾಗಿ ಎಲ್ ಒಯು / ವಿದೇಶೀ ಸಾಲ ಪತ್ರಗಳನ್ನು ನೀಡುವ ಮೂಲಕ ೧೨,೯೬೭.೮೬ ಕೋಟಿ ರೂಪಾಯಿಗಳಷ್ಟು ಹಣವನ್ನು ವರ್ಗಾವಣೆ ಮಾಡುವ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರ್ ಬಿಐ ಇಂತಹ ಸಾಲ ಪತ್ರಗಳನ್ನು ನಿಷೇಧಿಸಲು ತೀರ್ಮಾನಿಸಿದೆ ಎಂದು ವರದಿಗಳು ಹೇಳಿದವು.  ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಬಗ್ಗೆ ಸಿಬಿಐ, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.  ಭಾರತಕ್ಕೆ ಆಮದು ಮಾಡಿಕೊಳ್ಳಲು ವ್ಯಾಪಾರೀ ಸಾಲಗಳಿಗೆ ಲೆಟರ್ಸ್ ಆಫ್ ಕ್ರೆಡಿಟ್ ಮತ್ತು ಬ್ಯಾಂಕ್ ಗ್ಯಾರಂಟಿಗಳನ್ನು ವಿಧಿಗಳ ಪಾಲನೆ ಷರತ್ತುಗಳಿಗೆ ಅನುಗುಣವಾಗಿ ಮುಂದುವರೆಸಬಹುದು ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ತಿಳಿಸಿತು.

2009: ಹಿಂದಿನ ದಿನವಷ್ಟೇ ಹೊಸದಾಗಿ ಮತ್ತೆ ಅಸ್ತಿತ್ವಕ್ಕೆ ಬಂದ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂಗ ಪಕ್ಷಗಳಲ್ಲಿ ಆರಂಭದಲ್ಲಿಯೇ ಅಪಸ್ವರ ಮೂಡಿತು. ಇನ್ನೊಂದೆಡೆ ಪ್ರಧಾನಿ ಪಟ್ಟಕ್ಕೆ ಏರಲು ಮಹಾರಾಷ್ಟ್ರದವರೊಬ್ಬರು ಯತ್ನಿಸುವ ಕಾಲ ಈಗ ಕೂಡಿ ಬಂದಿದೆ ಎಂದು ಹೇಳುವ ಮೂಲಕ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತಾವೂ ಸ್ಪರ್ಧೆಯಲ್ಲಿ ಇರುವ ಇಂಗಿತ ವ್ಯಕ್ತಪಡಿಸಿದರು. ತಮ್ಮನ್ನು ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಎಸ್ಪಿ ನಾಯಕಿ ಮಾಯಾವತಿ ಪಟ್ಟು ಹಿಡಿದದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಇನ್ನೊಂದೆಡೆ ಅಂಗಪಕ್ಷಗಳ ನಾಯಕರು ವಿಭಿನ್ನ ಹೇಳಿಕೆ ನೀಡಿ ತಮ್ಮೊಳಗಿನ ಒಡಕನ್ನು ಬಹಿರಂಗಪಡಿಸಿದರು.

2009: ಪಿತ್ತಜನಕಾಂಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಮೃತ ವ್ಯಕ್ತಿಯ ಪಿತ್ತಜನಕಾಂಗ ಕಸಿ ಮಾಡಿ ಗುಣಪಡಿಸಿರುವುದಾಗಿ ಮಣಿಪಾಲ್ ಆಸ್ಪತ್ರೆಯ ವೈದ್ಯರು ಪ್ರಕಟಿಸಿದರು. ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಪಿತ್ತಜನಕಾಂಗ ಕಸಿ ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಆಂಧ್ರ ಪ್ರದೇಶದ ಮದನಪಲ್ಲಿಯ ರೆಡ್ಡಿ ಬಾಯಿ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದರು. ಮದ್ಯವ್ಯಸನಿಯಾಗಿದ್ದ ಬಾಯಿ ಕೆಲ ತಿಂಗಳುಗಳಿಂದ ಪಿತ್ತಜನಕಾಂಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸದಾ ಹೊಟ್ಟೆ ನೋವು ಕಾಡುತಿತ್ತು. ಸೇವಿಸಿದ ಆಹಾರ ಪಚನವಾಗುತ್ತಿರಲಿಲ್ಲ. ದೇಹ ಊದಿಕೊಳ್ಳುತಿತ್ತು. ಪ್ರಾಣ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರು. ಕುಟುಂಬ ಸದಸ್ಯರು ಬಾಯಿ ಅವರನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಬೇರೆ ವ್ಯಕ್ತಿಯ ಪಿತ್ತಜನಕಾಂಗದ ಅಗತ್ಯವಿದೆ ಎಂದು ವೈದ್ಯರು ಹೇಳಿದಾಗ, ಕುಟುಂಬ ಸದಸ್ಯರು ದಾನಿಗಳಿಗಾಗಿ ಹುಡುಕಾಟ ನಡೆಸಿದರು. ಕೊನೆಯ ಪ್ರಯತ್ನ ಎಂಬಂತೆ ಮಣಿಪಾಲ್ ಆಸ್ಪತ್ರೆಗೆ ಬಂದಾಗ, ತಾಯಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ತಮ್ಮ ಪುತ್ರನ ಪಿತ್ತಜನಕಾಂಗ ದಾನ ಮಾಡಲು ಮುಂದಾದರು.

2009: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮೂಲದ ಅಮೆರಿಕನ್ ಫೆಡರಲ್ ಮುಖ್ಯ ತಾಂತ್ರಿಕ ಅಧಿಕಾರಿ ವಿವೇಕ್ ಕುಂದ್ರಾ ರಜೆ ಮೇಲೆ ತೆರಳಿದರು. ವಾಷಿಂಗ್ಟನ್ ಡಿ.ಸಿ.ಯಲ್ಲಿ ಮುಖ್ಯ ತಾಂತ್ರಿಕ ಅಧಿಕಾರಿಯಾಗಿದ್ದ ಕುಂದ್ರಾ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರನ್ನು ವಾರದ ಹಿಂದೆ ಶ್ವೇತಭವನದಲ್ಲಿ ಮುಖ್ಯ ತಾಂತ್ರಿಕ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಎಫ್‌ಬಿಐ ಅಧಿಕಾರಿಗಳು ಕುಂದ್ರಾ ಅವರ ಹಳೆಯ ಕಚೇರಿಗೆ ದಾಳಿ ಮಾಡಿದ ನಂತರ ಅವರೇ ರಜೆ ಮೇಲೆ ತೆರಳುವ ನಿರ್ಧಾರ ಕೈಗೊಂಡರು ಎಂದು ಶ್ವೇತಭವನದ ಮೂಲಗಳು ಹೇಳಿದವು. ಸುಶೀಲ್ ಬನ್ಸಾಲ್ ಸೇರಿದಂತೆ ಇಬ್ಬರು ಭಾರತೀಯ ಮೂಲದವರನ್ನು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ ಎಂದು ಕುಂದ್ರಾ ಅವರ ಭ್ರಷ್ಟಾಚಾರದ ಕುರಿತು ಮೊದಲ ಬಾರಿಗೆ ವರದಿ ಮಾಡಿದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತಿಳಿಸಿತ್ತು. ಯೂಸುಫ್ ಆಸ್ಕರ್ ಎಂಬ ಮಾಹಿತಿ ಭದ್ರತಾ ಅಧಿಕಾರಿಯನ್ನೂ ಸಹ ಬಂಧಿಸಲಾಯಿತು.

2009: ವಿಶ್ವದಲ್ಲೇ ಅತ್ಯಂತ ಸಣ್ಣದಾದ ಐಪಾಡ್ ಒಂದನ್ನು ಕಂಡು ಹಿಡಿದಿರುವುದಾಗಿ ಅಪಲ್ ಕಂಪೆನಿಯೊಂದು ಪ್ರಕಟಿಸಿತು. ಈ ಹಿಂದಿನ ಮಾದರಿಗಳಿಗಿಂತ ಇದು ಅರ್ಧದಷ್ಟು ಸಣ್ಣದು. ಮೂರನೇ ತಲೆಮಾರಿನ ಐಪಾಡ್ ಎಂದು ಕರೆಯಲಾದ ಇದು 1000 ಹಾಡುಗಳನ್ನು ಸಂಗ್ರಹಿಸಿಕೊಳ್ಳಬಲ್ಲುದು. ಈ ಐಪಾಡ್ ಒಟ್ಟು 14 ಭಾಷೆಗಳಲ್ಲಿ ಮಾತನಾಡಬಲ್ಲುದು. ಅತ್ಯುತ್ತಮ ರಕ್ಷಾ ಕವಚವನ್ನು ಸಹ ಇದು ಹೊಂದಿದೆ.

2009: ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ, ಗಾಂಧಿವಾದಿ ಸತ್ಯವ್ರತ (79) ಅವರು ಈದಿನ ರಾತ್ರಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂತರ್ಜಾತಿ ವಿವಾಹ ವೇದಿಕೆ 'ಮಾನವ ಮಂಟಪ', ಕರ್ನಾಟಕ ಸರ್ವೋದಯ ಮಂಡಳ ಮತ್ತು ಕರ್ನಾಟಕ ಸ್ಮಾರಕ ಗಾಂಧಿ ನಿಧಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಚಿತ್ರದುರ್ಗದವರಾಗಿದ್ದ ಸತ್ಯವ್ರತ ಅವರ ನಿಜವಾದ ಹೆಸರು ಕೊಂಡಾಚಾರ್. ಚಿಕ್ಕವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಪಾಲ್ಗೊಂಡ ಅವರು ಗಾಂಧಿಯವರ ಅನುಯಾಯಿಗಳಾಗಿದ್ದರು. ವಿನೋಬಾ ಭಾವೆಯವರು ಕೈಗೊಂಡ ಭೂಸುಧಾರಣಾ ಚಳವಳಿಯಲ್ಲೂ ಸಕ್ರಿಯ ಪಾತ್ರ ವಹಿಸಿದ ಅವರು ದೇಶ ಮತ್ತು ರಾಜ್ಯದಲ್ಲೆಡೆ ಪಾದಯಾತ್ರೆ ಕೈಗೊಂಡರು. ಆಶ್ರಮದಲ್ಲಿ ಭಾವೆಯವರ ಕಚೇರಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು. ಚಳವಳಿಯಲ್ಲಿ ಜೊತೆಯಾದ ಗುಜರಾತ್ ಮೂಲದ ಲಕ್ಷ್ಮಿ ಅವರೊಡನೆ ವಿವಾಹವಾದ ಅವರು ಜನಪರ ಚಳವಳಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು.

2008: ಸುಳ್ಳು ಮೊಕದ್ದಮೆಯೊಂದರ ಕುರಿತು ನ್ಯಾಯಾಲಯಕ್ಕೆ `ಬಿ' ವರದಿ ಸಲ್ಲಿಸಲು ಫಾರೂಕ್ ಎಂಬ ಗಣಿ ಉದ್ಯಮಿಯೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಶ್ರೀಕಂಠಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ರಾಜ್ಯ ಪೊಲೀಸ್ ಸೇವೆಯಲ್ಲಿದ್ದ ಶ್ರೀಕಂಠಪ್ಪ ಕೆಲವು ವರ್ಷಗಳ ಹಿಂದೆ ಐ ಪಿ ಎಸ್ ಗೆ ಪದೋನ್ನತಿ ಹೊಂದಿದ್ದರು. ಲೋಕಾಯುಕ್ತ ಇತಿಹಾಸದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ `ಖೆಡ್ಡಾ'ಕ್ಕೆ ಬಿದ್ದದ್ದು ಇದೇ ಮೊದಲು. ಲಂಚ ಪಡೆದು ಸಿಕ್ಕಿ ಬಿದ್ದ ಎರಡನೇ ಐಪಿಎಸ್ ಅಧಿಕಾರಿ ಎಂಬ ಅಪಕೀರ್ತಿಯೂ ಅವರಿಗೆ ಸಂದಿತು. 1980ರ ದಶಕದ ಕೊನೆಯಲ್ಲಿ ಹಾವೇರಿಯ ಹೆಚ್ಚುವರಿ ಎಸ್ ಪಿ ಯಾಗಿದ್ದ ಪದಮ್ ಕುಮಾರ್ ಗರ್ಗ್ ಲಂಚ ಸ್ವೀಕರಿಸಿ ಬಂಧನಕ್ಕೆ ಒಳಗಾಗಿದ್ದರು. ಶ್ರೀಕಂಠಪ್ಪ ಅವರು ಪ್ರಸಕ್ತ ವರ್ಷದ 73ದಿನಗಳಲ್ಲಿ ಲಂಚ ಸ್ವೀಕರಿಸಿ ಬಂಧಿತರಾದ 74ನೇ ಅಧಿಕಾರಿ.

2008: ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕವು ದಿನದ ಅಂತ್ಯಕ್ಕೆ 15,357 ಅಂಶಗಳಿಗೆ ಇಳಿಯಿತು. ಷೇರುಪೇಟೆ ಇತಿಹಾಸದಲ್ಲಿ ಇದು ಆರನೆ ಅತಿ ದೊಡ್ಡ ಕುಸಿತವಾಗಿದ್ದು, 2007ರ ಆಗಸ್ಟ್ 31ರ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವೂ (ಎನ್ ಎಸ್ ಇ) ಆರು ತಿಂಗಳ ಹಿಂದಿನ ಮಟ್ಟಕ್ಕೆ (4624 ಅಂಶಗಳಿಗೆ) ಇಳಿಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಲಿಗೆ 110 ಡಾಲರಿನಷ್ಟು ಆಗಿರುವುದು ಷೇರುಪೇಟೆಯ ದಾಖಲೆ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟರು. ಇದೇ ವೇಳೆಗೆ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನವು ಪ್ರತಿ 10 ಗ್ರಾಮುಗಳಿಗೆ ರೂ 240ರಷ್ಟು ಏರಿಕೆ ಕಂಡರೆ, ಬೆಳ್ಳಿ ಬೆಲೆ ತಲಾ ಕೆಜಿಗೆ ರೂ 480ರಷ್ಟು ಹೆಚ್ಚಿತು. ಚಿನ್ನವು ತಲಾ ಹತ್ತು ಗ್ರಾಮುಗಳಿಗೆ ರೂ 13,025ರಷ್ಟಾಗಿ ಹೊಸ ದಾಖಲೆ ಬರೆಯಿತು.

2008: ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಪ್ರೇರಿತವಾದ ಇಸ್ರೇಲಿನ ಯುವ ಜೋಡಿಯೊಂದು ಗಂಗಾವತಿ ತಾಲ್ಲೂಕಿನ ಸಣಾಪುರದಲ್ಲಿ ವೇದ ಮಂತ್ರಗಳೊಂದಿಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಇಸ್ರೇಲ್ ದೇಶದ ಓಮರ್ ಕ್ಲಿಫ್ ಮತ್ತು ಮೇರಮ್ ಜೋಡಿ ಗೌರಿ ರೆಸ್ಟೋರೆಂಟಿನಲ್ಲಿ ವೈದಿಕ ಸಂಪ್ರದಾಯದಂತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಇವರ ವಿದೇಶಿ ಸ್ನೇಹಿತರು, ಪ್ರವಾಸಿಗರು ಭಾರತೀಯ ಶೈಲಿಯ ಈ ವಿವಾಹವನ್ನು ಕಣ್ಣಾರೆ ಕಂಡು ಖುಷಿಪಟ್ಟರು.

2008: ಪ್ರಸ್ತುತ ಸಾಲಿನ ಬಿ. ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯು ಹಿರಿಯ ವಿಮರ್ಶಕ, ಕವಿ, ಕಥೆಗಾರ ಹಾಗೂ ಪ್ರಬಂಧಕಾರ ಡಾ. ಗಿರಡ್ಡಿ ಗೋವಿಂದರಾಜ ಅವರ ಲಲಿತ ಪ್ರಬಂಧ `ಹಿಡಿಯದ ಹಾದಿ' ಕೃತಿಗೆ ದೊರೆಯಿತು. ಗದಗ ಜಿಲ್ಲೆಯ ಅಬ್ಬಿಗೇರಿಯವರಾದ ಡಾ. ಗಿರಡ್ಡಿಯವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. 1996-99ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ತಮ್ಮ ಸಾಹಿತ್ಯ ಕೃಷಿಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ (1972), ಮೈಸೂರು ವಿ.ವಿ. ಸುವರ್ಣ ಮಹೋತ್ಸವ ಬಹುಮಾನ (1972), ರಾಜ್ಯ ಅಕಾಡೆಮಿ ಗೌರವ ಪ್ರಶಸ್ತಿ (1992) ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಡಾ. ಎಂ. ಜಿ. ಹೆಗಡೆ, ಡಾ. ಆರ್. ವಿ. ಭಂಡಾರಿ, ಪ್ರೊ. ಎಂ. ರಮೇಶ ಹಾಗೂ ರಾಜಶೇಖರ ಹೆಬ್ಬಾರ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ. ಗಿರಡ್ಡಿಯವರ `ಹಿಡಿಯದ ಹಾದಿ' ಕೃತಿಯನ್ನು ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: ಸ್ತನ ಕ್ಯಾನ್ಸರನ್ನು ನಿಯಂತ್ರಿಸುವ ವಂಶವಾಹಿಯನ್ನು ಕಂಡುಹಿಡಿದಿರುವುದಾಗಿ ಅಮೆರಿಕ ವಿಜ್ಞಾನಿಗಳು ಪ್ರಕಟಿಸಿದರು. ಎಸ್ ಎ ಟಿ ಬಿ 1 ಹೆಸರಿನ ವಂಶವಾಹಿಯು ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಲ್ಲುದು ಎಂದು ಕ್ಯಾಲಿಫೋರ್ನಿಯಾದ ಲಾರೆನ್ಸ್ ಬರ್ಕೆಲಿ ರಾಷ್ಟ್ರೀಯ ಪ್ರಯೋಗಾಲಯದ ಡಾ. ತೆರುಮಿ ಕೊಹ್ವಿ-ಶಿಗೆ ಮತ್ಸು ಪ್ರಕಟಿಸಿದರು.

2008: ದೇಶದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು ಆರಂಭಗೊಂಡ ಮೇಲೆ ಈಗಿರುವ ವಿಮಾನನಿಲ್ದಾಣಗಳನ್ನು ಮುಚ್ಚುವುದಿಲ್ಲ ಎಂಬುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ವಿಮಾನನಿಲ್ದಾಣ ಪ್ರಾಧಿಕಾರ ನೌಕರರ ಅಸಹಕಾರ ಮುಷ್ಕರ ಈದಿನ ಸಂಜೆ ಕೊನೆಗೊಂಡಿತು.

2008: ದೇಶದಲ್ಲಿ ವಿಶೇಷ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ರೈಲ್ವೆ ಇಲಾಖೆಗೆ ಅಧಿಕಾರ ನೀಡುವ ರೈಲ್ವೆ (ತಿದ್ದುಪಡಿ) ಮಸೂದೆ 2008ಕ್ಕೆ ಸಂಸತ್ತು ತನ್ನ ಸಮ್ಮತಿ ಸೂಚಿಸಿತು. ಮಸೂದೆಯನ್ನು ಲೋಕಸಭೆ ಈ ಮೊದಲೇ ಅಂಗೀಕರಿಸಿತ್ತು. ರಾಜ್ಯಸಭೆ ಈದಿನ ಅದನ್ನು ಧ್ವನಿಮತದಿಂದ ಅಂಗೀಕರಿಸಿತು.

2008: ಗೊಂದಲದ ಗೂಡಾದ ಬೆಂಗಳೂರಿನ ವೈದ್ಯ ಮೊಹಮ್ಮದ್ ಹನೀಫ್ ಪ್ರಕರಣ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಲು ಆಸ್ಟ್ರೇಲಿಯಾ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತು. ನ್ಯೂ ಸೌಥ್ ವೇಲ್ಸ್ ರಾಜ್ಯದ ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ಜಾನ್ ಕ್ಲರ್ಕ್ ಕ್ಯೂ.ಸಿ. ಅವರನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿತು.

2007: ಪಾಕ್ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ಕಿತ್ತು ಹಾಕಲ್ಪಟ್ಟ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರು ವಿಚಾರಣೆ ಎದುರಿಸುವ ಸಲುವಾಗಿ ಸುಪ್ರೀಂ ನ್ಯಾಯಾಂಗಮಂಡಳಿಯ ಎದುರು ಹಾಜರಾದರು.

2007: ಭಾರತೀಯ ಮಹಿಳೆಯರ ಸಬಲೀಕರಣ ಹಾಗೂ ಅವರನ್ನು ರಾಜಕೀಯದಲ್ಲಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಲು ಪ್ರಯತ್ನಿಸ್ದಿದಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಅವರು ಅಮೆರಿಕದ ಪ್ರತಿಷ್ಠಿತ `ವೈಟಲ್ ವಾಯ್ಸಸ್' ಪ್ರಶಸ್ತಿಗೆ ಭಾಜನರಾದರು.

2006: ಬೆಂಗಳೂರಿನ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮೆಟ್ರೋಗೆ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ರಂಗೋಲಿಯನ್ನು ಹೋಲುವ ಲಾಂಛನವನ್ನು ರೂಪಿಸಲಾಗಿದ್ದು ರಾಜ್ಯಪಾಲ ಟಿ.ಎನ್. ಚತುರ್ವೇದಿ ರಾಜಭವನದಲ್ಲಿ ನಮ್ಮ ಮೆಟ್ರೊ ಹೆಸರಿನ ಜೊತೆಗಿರುವ ಈ ಲಾಂಛನವನ್ನು ಬಿಡುಗಡೆ ಮಾಡಿದರು. ಸಾರ್ವಜನಿಕ ಸ್ಪರ್ಧೆ ಮೂಲಕ ಇದನ್ನು ಆಯ್ಕೆ ಮಾಡಲಾಗಿದೆ. ಜಯಂತ್ ಜೈನ್ ಮತ್ತು ಮಹೇಂದ್ರ ಜೈನ್ ಎಂಬ ಯುವಜೋಡಿ ಈ ಸಾಂಕೇತಿಕ ಲಾಂಛನವನ್ನು ರೂಪಿಸಿದವರು.

2006: ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಅಮಾಯಕರ ಸಾವಿಗೆ ಕಾರಣವಾಗುವ ಭಯೋತ್ಪಾದಕರ ಕೃತ್ಯದ ವಿರುದ್ಧ 400 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಇಸ್ಲಾಂ ಧಾರ್ಮಿಕ ಸಂಸ್ಥೆ ದರುಲ್- ಇಫ್ತಾ- ಫಿರಂಗಿ ಮಹಲ್ ಫತ್ವಾ ಹೊರಡಿಸಿತು.

2006: ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷರಾಗಿ 2006-09ರ ಸಾಲಿಗೆ ವಿಜಾಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವಿರೋಧ ಆಯ್ಕೆಯಾದರು.

2006: ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಗೊಳಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ಪೊಲೀಸರು ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಈ ಆರೋಪಿಗಳನ್ನು ಖುಲಾಸೆಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್. ಎಲ್. ಭಯಾನ ಅವರ ತೀರ್ಪು, ವಿಚಾರಣಾ ನ್ಯಾಯಾಲಯದಲ್ಲಿ ಆಗಿರುವ ಗಂಭೀರ ಪ್ರಮಾದ, ಫಿರ್ಯಾದುದಾರರು ಸಂಗ್ರಹಿಸಿರುವ ಸನ್ನಿವೇಶದ ಸಾಕ್ಷ್ಯಗಳನ್ನು ಪರಿಶೀಲಿಸಲು ನ್ಯಾಯಾಲಯ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಯಿತು. 1999ರಲ್ಲಿ ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾದ ಹರಿಯಾಣದ ಮಾಜಿ ಸಚಿವರೊಬ್ಬರ ಪುತ್ರ ಮನು ಶರ್ಮ, ಮಾಜಿ ರಾಜ್ಯಸಭಾ ಸದಸ್ಯ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಹಾಗೂ ಇತರ ಏಳು ಮಂದಿಯನ್ನು ಇತ್ತೀಚೆಗೆ ಪಾಟಿಯಾಲ ನ್ಯಾಯಾಲಯ ಆರೋಪಮುಕ್ತಿಗೊಳಿಸಿತ್ತು.

1986: ಮೈಕ್ರೋಸಾಫ್ಟ್ ಕಂಪೆನಿಯ ಸ್ಟಾಕ್ ಟ್ರೇಡಿಂಗ್ ಆರಂಭವಾಯಿತು. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಬಿಲ್ ಗೇಟ್ಸ್ ಕೋಟ್ಯಧೀಶರಾಗಿ, ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಆಗಬೇಕೆಂಬ ಆಶಯವನ್ನು ಈಡೇರಿಸಿಕೊಂಡರು.

1964: ನ್ಯೂಯಾರ್ಕ್ ನಗರದಲ್ಲಿ ಇಪ್ಪತ್ತೆಂಟು ವರ್ಷದ ಕಿಟ್ಟಿ ಜೆನೋವೆಸ್ ಇರಿತಕ್ಕೆ ಒಳಗಾಗಿ ಸಾಯುತ್ತಿದ್ದಾಗ ಅಲ್ಲಿಯೇ ಇದ್ದ ನೆರೆಹೊರೆಯ 37 ಮಂದಿ ನಿವಾಸಿಗಳು ಯಾವುದೇ ರೀತಿ ಪ್ರತಿಕ್ರಿಯಿಸಲು ವಿಫಲರಾದರು. ವಿನ್ ಸ್ಟನ್ ಮೋಸ್ಲೆ ಎಂಬ ಕೊಲೆಗಾರ ಆಕೆಯನ್ನು ಮೂರು ಕಡೆಗಳಲ್ಲಿ ಇರಿದು ಕೊಂದು ಹಾಕಿದ. ಕನಿಷ್ಠ 37 ಮಂದಿ ಈ ಭೀಕರ ಕೃತ್ಯವನ್ನು ನೋಡುತ್ತಲೇ ಇದ್ದರು. ಆದರೆ ಪ್ರತಿಕ್ರಿಯಿಸಲು ವಿಫಲರಾದರು ಎಂದು ಪೊಲೀಸ್ ತನಿಖೆಯಿಂದ ದಿಟವಾಯಿತು. ಈ ಪ್ರತ್ಯಕ್ಷ ಸಾಕ್ಷಿಗಳು ಪ್ರದರ್ಶಿಸಿದ `ನನಗೇಕೆ ಉಸಾಬರಿ' ಎಂಬ ಈ ವರ್ತನೆ `ಕಿಟ್ಟಿ ಜೆನೋವೆಸ್ ಸಿಂಡ್ರೋಮ್' ಎಂದೇ ಹೆಸರು ಪಡೆಯಿತು.

1943: ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದ ಆರ್. ನಾಗೇಶ್ ಅವರು ರಾಮರಾಜ ಅರಸು- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು.

1940: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಕಾಲದ್ಲಲಿ ಪಂಜಾಬ್ ಗವರ್ನರ್ ಜನರಲ್ ಆಗ್ದಿದ ಮೈಕೆಲ್ ಒ'ಡಾಯರ್ನನ್ನು ಇಂಗ್ಲೆಂಡಿನ ಕಾಕ್ಸ್ ಟನ್ ಹಾಲ್ನಲ್ಲಿ ಗುಂಡಿಟ್ಟು ಕೊಲೆಗೈದರು. ಲಂಡನ್ನಿನಲ್ಲಿ ಜೂನ್ 13ರಂದು ಅವರನ್ನು ಗಲ್ಲಿಗೇರಿಸಲಾಯಿತು. 1974ರ ಜುಲೈ 9ರಂದು ಊಧಮ್ ಸಿಂಗ್ ಚಿತಾಭಸ್ಮವನ್ನು ನವದೆಹಲಿಗೆ ತರಲಾಯಿತು.

1878: ಪ್ರಾದೇಶಿಕ ಪತ್ರಿಕೆಗಳನ್ನು ನಿಯಂತ್ರಿಸಲು ಭಾಷಾವಾರು ಪತ್ರಿಕಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಮರುದಿನವೇ `ಅಮೃತ ಬಜಾರ್ ಪತ್ರಿಕಾ' ಇಂಗ್ಲಿಷ್ ಸುದ್ದಿ ಪತ್ರಿಕೆಯಾಯಿತು.

1855: ಪರ್ಸೀವಲ್ ಲೋವೆಲ್ (1855-1916) ಹುಟ್ಟಿದ. ಅಮೆರಿಕನ್ ಖಗೋಳ ತಜ್ಞನಾದ ಈತ ಪ್ಲೂಟೋ ಗ್ರಹದ ಅಸ್ತಿತ್ವ ಬಗ್ಗೆ ಭವಿಷ್ಯ ನುಡಿದು ಅದಕ್ಕಾಗಿ ಶೋಧ ಆರಂಭಿಸಿ ಕೊನೆಗೆ ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ.

1852: `ನ್ಯೂಯಾರ್ಕ್ ಲ್ಯಾಂಟರ್ನ್' ನಲ್ಲಿ ಕಾರ್ಟೂನ್ ಪಾತ್ರವಾಗಿ `ಅಂಕಲ್ ಸ್ಯಾಮ್' ಚೊಚ್ಚಲ ಹೆಜ್ಜೆ ಇರಿಸಿದ.

1781: ಸರ್ ವಿಲಿಯಂ ಹರ್ಷೆಲ್ `ಯುರೇನಸ್' ಗ್ರಹವನ್ನು ಕಂಡು ಹಿಡಿದ. ಮೂರನೇ ಜಾರ್ಜ್ ಗೌರವಾರ್ಥ ಈ ಗ್ರಹಕ್ಕೆ ಆತ `ಜಾರ್ಜಿಯಂ ಸಿಡಸ್' ಎಂಬುದಾಗಿ ಹೆಸರು ಇಟ್ಟ.

1733: ಜೋಸೆಫ್ ಪ್ರೀಸ್ಟ್ ಲೀ ಹುಟ್ಟಿದ. ಇಂಗ್ಲಿಷ್ ಪಾದ್ರಿ, ಭೌತವಿಜ್ಞಾನಿಯಾದ ಈತ ಆಮ್ಲಜನಕದ ಸಂಶೋಧನೆಯಿಂದ ಖ್ಯಾತಿ ಪಡೆದ.

1639: ಹಾರ್ವರ್ಡ್ ಯುನಿವರ್ಸಿಟಿಗೆ ಪಾದ್ರಿ ಜಾನ್ ಹಾರ್ವರ್ಡ್ ಹೆಸರನ್ನು ಇಡಲಾಯಿತು.

No comments:

Post a Comment