Friday, March 9, 2018

ಇಂದಿನ ಇತಿಹಾಸ History Today ಮಾರ್ಚ್ 08

ಇಂದಿನ ಇತಿಹಾಸ History Today ಮಾರ್ಚ್  08

2018: ಹೈದರಾಬಾದ್: ಪ್ರತಿಜೀವಕ ಅಥವಾ ಆಂಟಿಬಯೋಟಿಕ್ ನ್ನು ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಹೈದರಾಬಾದ್ ವಿಶ್ವ ವಿದ್ಯಾಲಯದ ಪ್ರೊಫೆಸರ್ ವೆಂಕಟರಮಣ ಮತ್ತು ಅವರ ಸಂಶೋಧಕರ ತಂಡ ಇದೇ ಮೊತ್ತ ಮೊದಲ ಬಾರಿಗೆ ಪತ್ತೆ ಹಚ್ಚಿದೆ ಎಂದು ವಿಶ್ವ ವಿದ್ಯಾಲಯ ಪ್ರಕಟಿಸಿತು.  ಹೈದರಾಬಾದ್ ವಿಶ್ವ ವಿದ್ಯಾಲಯ ಕ್ಯಾಂಪಸ್ಸಿನ ಬಫೆಲೋ ಲೇಕ್ ನಲ್ಲಿ ಹೊಸ ಬ್ಯಾಕ್ಟೀರಿಯಾಪ್ಲಾಂಕ್ಟೋಪಿರಸ್ ಹೈಡ್ರಿಲ್ಲಾವನ್ನು ಪತ್ತೆ ಹಚ್ಚಲಾಗಿದ್ದು, ಇದು ಬಹುತೇಕ ಔಷಧಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುವ ರೋಗಗಳ ಸಮಸ್ಯೆಗೆ ಪರಿಹಾರ ಒದಗಿಸಬಲ್ಲುದುಎಂದು ವಿಶ್ವ ವಿದ್ಯಾಲಯವು ಹೇಳಿಕೆಯೊಂದರಲ್ಲಿ ತಿಳಿಸಿತು.  ಹೊಸ ಬ್ಯಾಕ್ಟೀರಿಯಾವು ಅಮೋನಿಯಾ ತ್ಯಾಜ್ಯವನ್ನು ಕೂಡಾ ಸ್ವಚ್ಛಗೊಳಿಸಬಲ್ಲುದು, ತನ್ಮೂಲಕ ಪರಿಸರ ಮಾಲಿನ್ಯವನ್ನು ನಿವಾರಿಸಲು ಅನುಕೂಲವಾಗುತ್ತದೆ ಎಂದು ಹೇಳಿಕೆ ತಿಳಿಸಿತು.  ಬ್ಯಾಕ್ಟೀರಿಯಾವನ್ನು ಸ್ಕೂಲ್ ಆಫ್ ಲೈಫ್ ಸೈನ್ಸಸ್ ಸಸ್ಯಗಳ ವಿಜ್ಞಾನ (ಪ್ಲಾಂಟ್ ಸೈನ್ಸ್) ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವೆಂಕಟ ರಮಣ ಮತ್ತು ವಿಶ್ವ ವಿದ್ಯಾಲಯದ ಅವರ ಜೊತೆಗಿನ ಸಂಶೋಧಕರು ಪತ್ತೆ ಹಚ್ಚಿದ್ದಾರೆ ಎಂದು ಹೇಳಿಕೆ ತಿಳಿಸಿತು. ಅತ್ಯಂತ ಪ್ರಬಲವಾದ ಪ್ರತಿಜೀವಕ ಔಷಧಗಳಿಗೂ  ಅನೇಕ ರೋಗಾಣುಗಳು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದರು. ಈಗ ಪ್ರತಿಜೀವಕ ಇಲ್ಲವೇ ಆಂಟಿ ಬಯೋಟಿಕ್ ಉತ್ಪಾದಿಸುವ ಬ್ಯಾಕ್ಟೀರಿಯಾಗಳು ಇಂತಹ ಹೊಸ ಔಷಧ ಅಭಿವೃದ್ಧಿಗೆ ನೆರವಾಗುವ ಸಾಧ್ಯತೆ ಇದೆ. ಬ್ಯಾಕ್ಟೀರಿಯಾವನ್ನು ಹೈಡ್ರಿಲ್ಲಾ ಜಲವಾಸಿ ಸಸ್ಯದಿಂದ ಪ್ರತ್ಯೇಕಿಸಲಾಗಿದೆ. ಸಂಶೋಧನೆಯ ವಿವರವನ್ನುಜರ್ನಲ್ ಆಫ್ ಆಂಟಿಬಯೋಟಿಕ್ಸ್ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿಕೆ ತಿಳಿಸಿತು.

2018: ನವದೆಹಲಿ:ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಧ್ವಂಸ ಕೃತ್ಯಗಳನ್ನು ಸಹಿಸಲಾಗದು. ಇದು ಅತ್ಯಂತ ಖಂಡನೀಯಎಂದು ಹೇಳಿ ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವವರೇ ನಿರ್ದೇಶನ ನೀಡಿದ್ದರ ಹೊರತಾಗಿಯೂ ವಿವಿಧ ರಾಜ್ಯಗಳಲ್ಲಿ ಚಾರಿತ್ರಿಕ ವ್ಯಕ್ತಿಗಳ ಪ್ರತಿಮೆ ನಾಶ/ ವಿರೂಪಗೊಳಿಸುವ ಕೃತ್ಯಗಳು ಮುಂದುವರೆದವು. ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ತಾಲೂಕು ಕಚೇರಿಯ ಮುಂದಿನ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಗಂಟೆಯ ಹೊತ್ತಿಗೆ ಹಾನಿ ಮಾಡಿರುವುದಾಗಿ ಮಲಯಾಳಿ ಪತ್ರಿಕೆಗಳು ವರದಿ ಮಾಡಿದವು.  ದುಷ್ಕರ್ಮಿಗಳು ಗಾಂಧಿ ಪ್ರತಿಮೆಯ ಕನ್ನಡಕವನ್ನು ಮುರಿದಿದ್ದಾರೆ; ಹೂಮಾಲೆಯನ್ನು ನಾಶ ಮಾಡಿದ್ದಾರೆ ಮತ್ತು ಪ್ರತಿಮೆಗೆ ಕಲ್ಲೆಸೆದು ಹಾನಿ ಉಂಟುಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳೆದ ಭಾನುವಾರ ತ್ರಿಪುರದಲ್ಲಿ ಲೆನಿನ್ ಪ್ರತಿಮೆಯನ್ನು, ಬಳಿಕ ತಿರುಪತ್ತೂರಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಬುಧವಾರ ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಪ್ರತಿಮೆ ಧ್ವಂಸ ಕೃತ್ಯವನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದ ಪ್ರಧಾನಿ ಮೋದಿ ಅವರು ರೀತಿಯ ದುಷ್ಕೃತ್ಯಗಳಲ್ಲಿ ತೊಡಗಿದವರನ್ನು ಕಾನೂನು ಪ್ರಕಾರ ಶಿಕ್ಷಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನಿರ್ದೇಶಿಸಿದ್ದರು.  ತಾಲ್ಲೂಕು ಕಚೇರಿ ಸಮೀಪದ ಸಿಸಿಟಿವಿಗಳಲ್ಲಿ ದಾಖಲಾಗಿರುವ ದೃಶ್ಯಗಳಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿದೆ. ೨೦೦೫ರಲ್ಲಿ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಅನಾವರಣಗೊಳಿಸಿದ್ದ ಗಾಂಧಿ ಪ್ರತಿಮೆ ಭಗ್ನಗೊಳಿಸಿರುವುದನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡಿಸಿದವು. ಕಳೆದ ಮಾ.5ರ ಸೋಮವಾರದಿಂದ ಮೂರು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶದ ಮೀರತ್ ಮವಾನ್ ಖುರ್ದದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ, ಕೋಲ್ಕತ್ತದ ಕಾಳಿಘಾಟಿನಲ್ಲಿ ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಪುತ್ಥಳಿ, ವೆಲ್ಲೂರ್ ಜಿಲ್ಲೆಯ ತಿರುಪತ್ತೂರು ನಗರ ಪಾಲಿಕೆ ಆವರಣದಲ್ಲಿದ್ದ ಪೆರಿಯಾರ್ ರಾಮಸ್ವಾಮಿ ಅವರ ಪುತ್ಥಳಿ ಹಾಗೂ ತ್ರಿಪುರದಲ್ಲಿ ಲೆನಿನ್ ಪ್ರತಿಮೆ ಧ್ವಂಸಗೊಳಿಸಿರುವುದು ವರದಿಯಾಯಿತು. ಅಂಬೇಡ್ಕರ್ ಪ್ರತಿಮೆ ವಿರೂಪ: ಮಧ್ಯೆ ಚೆನ್ನೈಯಿಂದ ಬಂದಿರುವ ವರದಿಗಳ ಪ್ರಕಾರ ಚೆನ್ನೈಯ ತಿರುವೊಟ್ಟಿಯೂರ್ ಎಂಬಲ್ಲಿ ಸಂವಿಧಾನ ಶಿಲ್ಪಿ ಬಿ. ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದರು.  ಈದಿನ ಬೆಳಗ್ಗೆ ಗಂಟೆಗೆ ತಿರುವಟ್ಟಿಯೂರ್ ಮಾರುಕಟ್ಟೆಯ ಬಳಿ ಇರುವ ಗ್ರಾಮ ರಸ್ತೆಯಲ್ಲಿದ್ದ ಅಂಬೇಡ್ಕರ್ ಪ್ರತಿಮೆಗೆ ದುಷ್ಕರ್ಮಿಗಳು ಕೆಂಪು ಪೇಂಟ್ ಬಳಿದರು. ವಿಷಯ ತಿಳಿದು  ಪೊಲೀಸರು ಆಗಮಿಸುವ ಮುನ್ನವೇ ದುಷ್ಕರ್ಮಿಗಳು ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ವರದಿಗಳು ತಿಳಿಸಿದವು.  ತಿರುವೊಟ್ಟಿಯೂರ್ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಯಿತು.

2018: ಬೆಂಗಳೂರು: ಸರ್ಕಾರ ನೇಮಕ ಮಾಡಿದ್ದ ಸಮಿತಿ ವಿನ್ಯಾಸಗೊಳಿಸಿರುವ ಹಳದಿ, ಬಿಳಿ, ಕೆಂಪು ಬಣ್ಣಗಳ ಮಧ್ಯೆ ಸರ್ಕಾರಿ ಲಾಂಛನಗಂಡಭೇರುಂಡ’ (ಎರಡು ತಲೆಗಳ ಪೌರಾಣಿಕ ಪಕ್ಷಿ) ಇರುವ ಕರ್ನಾಟಕದ ತ್ರಿವರ್ಣ ನಾಡಧ್ವಜಕ್ಕೆ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ಹೋರಾಟಗಾರರ ಸಮ್ಮತಿ ದೊರಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಅನಾವರಣಗೊಳಿಸಿದರು.ನೂತನ ನಾಡಧ್ವಜದ ವಿನ್ಯಾಸವನ್ನು ನಿರ್ಧರಿಸಲು ರಚಿಸಲಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ನೇತೃತ್ವದ ಸಮಿತಿಯು ಬೆಳಗ್ಗೆ ವಿಧಾನಸೌಧದಲ್ಲಿ ನಾಡಧ್ವಜದ ನೂತನ ವಿನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಅದನ್ನು ಅಂಗೀಕರಿಸಿದ ಮುಖ್ಯಮಂತ್ರಿ ಕೇಂದ್ರಕ್ಕೆ ಕಳುಹಿಸಿಕೊಡುವುದಾಗಿ ಸಮಿತಿಗೆ ಭರವಸೆ ನೀಡಿದರು. ಸಂವಿಧಾನದಲ್ಲಿ ನಾಡಧ್ವಜಗಳಿಗೆ ನಿಷೇಧವಿಲ್ಲ. ಎಲ್ಲ ರಾಜ್ಯಗಳೂ ತಮ್ಮದೇ ಆದ ಧ್ವಜಗಳನ್ನು ಹೊಂದಿರಲು ಅವಕಾಶವಿದೆ ಎಂದು ಅವರು ನುಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಕರೆದ ಸಭೆಯಲ್ಲಿ ಪ್ರತ್ಯೇಕ ನಾಡಧ್ವಜಕ್ಕೆ ಸಂಬಂಧಿಸಿ ಸರ್ಕಾರ ಕೈಗೊಂಡ ನಿರ್ಣಯಕ್ಕೆ  ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಒಕ್ಕೊರಲ ಬೆಂಬಲ ದೊರೆತಿದೆ ಎಂದು ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ರಾಜ್ಯದ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಸಭೆ ಕರೆದಿದ್ದರು. ಇದೇ ಸಂದರ್ಭದಲ್ಲಿ ಹೊಸ ನಾಡಧ್ವಜದ ವಿನ್ಯಾಸವನ್ನು ಅನಾವರಣಗೊಳಿಸಿದರು. ನಾಡಧ್ವಜ ಮತ್ತು ಅದರ ವಿನ್ಯಾಸ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಧ್ವಜ ಮತ್ತು ವಿನ್ಯಾಸಕ್ಕೆ ಸಭೆಯಲ್ಲಿ ಮುಖಂಡರು ಹಾಗೂ ಸಾಹಿತಿಗಳು ತಮ್ಮ ಸಹಮತ ಸೂಚಿಸಿ ಸರಕಾರದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನಾಡಧ್ವಜವನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಕ್ಕೆ ಒಂದು ನಾಡಧ್ವಜ ಬೇಕು ಎಂಬ ಚರ್ಚೆ ಹಿಂದಿನಿಂದಲೂ ನಡೆಯುತ್ತಿತ್ತು. ಇದು ಕನ್ನಡಿಗರ ಅಪೇಕ್ಷೆಯೂ ಆಗಿತ್ತು. ಅದಕ್ಕೆ ನಮ್ಮ ಸರಕಾರ ಧ್ವನಿಯಾಗುವುದರ ಜೊತೆಗೆ ರಾಜ್ಯಕ್ಕೆ ನಮ್ಮದೇ ಆದ ನಾಡಧ್ವಜ ಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ ಎಂದು ಹೇಳಿದರು. ಕಾನೂನು ಪರಿಸ್ಥಿತಿ, ಸಂವಿಧಾನದಲ್ಲಿ ಇರುವ ಅವಕಾಶ, ನಮ್ಮ ಕನ್ನಡ ಬಾವುಟದ ಬಗ್ಗೆ ಇರುವ ಇತಿಹಾಸ ಎಲ್ಲದರ ಬಗ್ಗೆ ಸಮಿತಿ ಅಧ್ಯಯನ ಮಾಡಿ ನಾಡಧ್ವಜ ಮತ್ತು ಅದರ ವಿನ್ಯಾಸ ಕುರಿತು ಸರಕಾರಕ್ಕೆ ವರದಿ ಕೊಟ್ಟಿದೆ. ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದಾಗ ಪ್ರತ್ಯೇಕ ಧ್ವಜ ನಮಗೆ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರೂ ಆಗಿರುವ ಪಾಟೀಲ ಪುಟ್ಟಪ್ಪ ಅವರೂ ನಾಡಧ್ವಜ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸರಕಾರಕ್ಕೆ ಪತ್ರ ಬರೆದಿದ್ದರು. ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಒಂದು ಸಮಿತಿ ರಚಿಸಲಾಗಿತ್ತು. ಕುರಿತು ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಂಪುಟ ತಮಗೆ ವಹಿಸಿತ್ತು ಎಂದು ಮುಖ್ಯಮಂತ್ರಿಯವರು ಹೇಳಿದರು. ಹಿನ್ನೆಲೆಯಲ್ಲಿ ಇಂದು ಸಭೆ ಕರೆದು ಚರ್ಚಿಸಲಾಗಿದ್ದು, ಸಮಿತಿ ಸಿದ್ಧಪಡಿಸಿರುವ ನಾಡಧ್ವಜ ಮತ್ತು ಅದರ ವಿನ್ಯಾಸಕ್ಕೆ ಸಹಮತ ವ್ಯಕ್ತವಾಗಿದೆ ಎಂದು ತಿಳಿಸಿದರು. ಕನ್ನಡ ಬಾವುಟದಲ್ಲಿನ ಹಳದಿ ಮತ್ತು ಕೆಂಪು ಬಣ್ಣ ಜೊತೆಗೆ ಶಾಂತಿಯ ಸಂಕೇತವಾದ ಬಿಳಿಯ ಬಣ್ಣವನ್ನು ಸೇರಿಸಿಕೊಂಡು ನಾಡಧ್ವಜದ ವಿನ್ಯಾಸ ರಚಿಸಲಾಗಿದೆ. ಬಿಳಿಯ ಬಣ್ಣದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನವಾದಗಂಡಭೇರುಂಡಪಕ್ಷಿ  ಇರಲಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು. ಇದು ಐಸಿಹಾಸಿಕ ನಿರ್ಣಯ. ನಿರ್ಧಾರ ಮಾಡುವಾಗ ಯಾವುದೇ ಒಡಕಿನ ಧ್ವನಿ ಇರಬಾರದು. ಒಮ್ಮತದಿಂದ ನಿರ್ಧಾರವಾಗಬೇಕು ಎಂಬ ಕಾರಣಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಸಭೆ ಕರೆಯಲಾಗಿತ್ತು ಎಂದು ತಿಳಿಸಿದರು. ಆದರೆ, ನಾಡಧ್ವಜವನ್ನು ನಾವೇ ಘೋಷಣೆ ಮಾಡುವಂತಿಲ್ಲ. ಅದಕ್ಕೆ ಕೇಂದ್ರದ ಒಪ್ಪಿಗೆ ಬೇಕು. ಹೀಗಾಗಿ ಕೇಂದ್ರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುವುದು. ನಾಡಧ್ವಜಕ್ಕೆ ಒಪ್ಪಿಗೆ ಸೂಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು. ಇಡೀ ದೇಶದಲ್ಲಿ ಮೊದಲ ಬಾರಿಗೆ ಕನ್ನಡ ನಾಡಿನ ಅಸ್ಮಿತೆಗಾಗಿ ರಾಜ್ಯಕ್ಕೆ ತನ್ನದೇ ಆದ ನಾಡಧ್ವಜ ಇರಲಿದೆ. ಯಾವುದೇ ರಾಜ್ಯ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲಿ ವಿರೋಧ ಇಲ್ಲ. ಜೊತೆಗೆ ರಾಷ್ಟ್ರಧ್ವಜಕ್ಕಿಂತ ಕೆಳಗೆ ನಾಡಧ್ವಜ ಹಾರಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಸಾಹಿತಿ ಹಂಪನಾಗರಾಜಯ್ಯ ಅವರು ತ್ರಿವರ್ಣ ಬಣ್ಣದ ನಾಡಧ್ವಜವನ್ನು ವಿನ್ಯಾಸ ರಚಿಸಿದ್ದರು. ನಾಡಧ್ವಜ ವಿನ್ಯಾಸವನ್ನು ರಾಜ್ಯ ಸಂಪುಟ ಸಭೆಗೆ ಹಸ್ತಾಂತರಿಸಿದ್ದರು. ರಾಜಕೀಯ ಸಮರ: ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಾಡಧ್ವಜದ ವಿಚಾರ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿತ್ತು. ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸರ್ಕಾರವು ನಾಡಧ್ವಜ ವಿನ್ಯಾಸ ರೂಪಿಸಲು ಸಮಿತಿ ರಚಿಸಿದಾಗ ಸಿದ್ದರಾಮಯ್ಯ ಅವರು ವಿಭಜನಕಾರಿ ರಾಜಕೀಯ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದರು. ಬಿಜೆಪಿ ನಿಲುವಿನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಕೇಸರಿ ಪಕ್ಷ ವಿಷಯಕ್ಕೆ ಸಂಬಂಧಿಸಿದಂತೆ ಮೌನ ತಾಳಲು ನಿರ್ಧರಿಸಿತ್ತು. ಕೇಂದ್ರ ಗೃಹ ಸಚಿವಾಲಯ ಕೂಡಾ ಆಗ ತನ್ನ ಅಸಮ್ಮತಿ ವ್ಯಕ್ತ ಪಡಿಸಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಕನ್ನಡ ಬಾವುಟ ಸಂವಿಧಾನಬಾಹಿರವಲ್ಲ. ಸಂವಿಧಾನ ಅದನ್ನು ನಿಷೇಧಿಸಿಲ್ಲ. ಒಂದೇ ವಿಚಾರ ಏನೆಂದರೆ ನಾವು ಅದನ್ನು ರಾಷ್ಟ್ರಧ್ವಜಕ್ಕಿಂತ ಕೆಳಮಟ್ಟದಲ್ಲಿ ಹಾರಿಸಬೇಕು ಅಷ್ಟೆ. ನಾವು ಹೇಗಿದ್ದರೂ ಅದನ್ನು ರಾಷ್ಟ್ರಧ್ವಜಕ್ಕಿಂತ ಕೆಳಮಟ್ಟದಲ್ಲೇ ಹಾರಿಸುತ್ತೇವೆ. ವಿನ್ಯಾಸವನ್ನು ನಾವು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಕೇಂದ್ರವು ಅನುಮೋದಿಸುವುದು ಎಂದು ಹಾರೈಸುತ್ತೇವೆ. ಇದಕ್ಕಾಗಿ ದೀರ್ಘ ಕಾಲದಿಂದ ಬೇಡಿಕೆ ಇತ್ತು. ಕಡೆಗೂ ಕನ್ನಡ ಬಾವುಟವನ್ನು ನಾವು ಹೊಂದಿದ್ದೇವೆ ಎಂದು ನನಗೆ ಸಂತಸವಾಗಿದೆ ಎಂದು ನುಡಿದರು. ಬಿಜೆಪಿಯ ರಾಷ್ಟ್ರೀಯತೆಯ ಸಿದ್ಧಾಂತಕ್ಕೆ ಪ್ರತಿಯಾಗಿ ಕನ್ನಡ ರಾಷ್ಟ್ರೀಯತೆಯನ್ನು ಮುಖ್ಯಮಂತ್ರಿ ಅತ್ಯಂತ ಚತುರತೆಯಿಂದ ಬಳಸುತ್ತಿದ್ದಾರೆ. ಕೇಂದ್ರದ ಹಿಂದಿ ಹೇರಿಕೆಯ ವಿರುದ್ಧ ಕೂಡಾ ಹಿಂದೆ ಇಂತಹುದೇ ತಂತ್ರವನ್ನು ಬಳಸಿದ್ದ ಸಿದ್ದರಾಮಯ್ಯ ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರು ಮೆಟ್ರೋದಿಂದ ಹಿಂದಿ ಫಲಕವನ್ನು ತೆಗೆಯಲು ಆಜ್ಞಾಪಿಸಿದ್ದರು. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಪಟ್ಟ ನೀಡಲು ಇಂತಹ ಹಲವಾರು ಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಹೊಸ ಕನ್ನಡ ಧ್ವಜಕ್ಕೆ ಸಂಬಂಧಿಸಿದಂತೆ ಮೌನ ತಾಳಲು ಬಿಜೆಪಿ ನಿರ್ಧರಿಸಿದೆ. ವಿರೋಧಿಸಿದರೆ ಕನ್ನಡ ವಿರೋಧಿ ಎಂಬ ಹಣೆಪಟ್ಟಿ ಲಭಿಸಿ ಮುಂಬರುವ ಚುನಾವಣೆಯಲ್ಲಿ ಮತಗಳಿಗೆ ಧಕ್ಕೆಯಾಗಬಹುದು ಎಂದು ಪಕ್ಷವು ಚಿಂತಿಸಿದೆ. ಇತ್ತೀಚೆಗೆ ಬಿಜೆಪಿ ಕೂಡಾ ಕನ್ನಡ ಭಾವನೆಗಳ ಬಗ್ಗೆ ಎಚ್ಚೆತ್ತಿದ್ದು ತನ್ನದೇ ಆದ ರೀತಿಯಲ್ಲಿ ಕನ್ನಡ ಕಾರ್ಡ್ ಬಳಕೆ ಮಾಡಿತು. ಜನತಾದಳ ಮೊದಲಿಗೆ ನಾಡಧ್ವಜದ ವಿಚಾರವನ್ನು ಚುನಾವಣಾ ಗಿಮಿಕ್ ಎಂಬುದಾಗಿ ತಳ್ಳಿ ಹಾಕಿದ್ದರೂ, ಈಗ ಅದನ್ನು ಸ್ವಾಗತಿಸಿತು.

2018: ಕರಾಚಿ: ಭಯೋತ್ಪಾದಕ ಹಫೀಜ್ ಸಯೀದ್ ನೇತೃತ್ವದ ನಿಷೇದಿತ ಜಮಾತ್ -ಉದ್ -ದವಾ (ಜೆಯುಡಿ) ಸಂಘಟನೆಯ ರಾಜಕೀಯ ದಳವಾಗಿರುವ ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ನೋಂದಣಿ ನಿರಾಕರಿಸಿ ಪಾಕಿಸ್ತಾನದ ಚುನಾವಣಾ ಆಯೋಗ ಕೈಗೊಂಡಿದ್ದ ನಿರ್ಧಾರವನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿತು ಮತ್ತು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.  ಅಮೆರಿಕ ಮತ್ತು ಭಾರತದ ಒತ್ತಡಕ್ಕೆ ಮಣಿದು ತನಗೆ ರಾಜಕೀಯ ಅವಕಾಶ ನಿರಾಕರಿಸಲಾಗಿದೆ ಎಂದು ಪ್ರತಿಪಾದಿಸಿ ಎಂಎಂಎಲ್ ಹೈಕೋರ್ಟ್ ಮೆಟ್ಟಿಲೇರಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಚುನಾವಣಾ ಆಯೋಗವು ಹಫೀಜ್ ಸಯೀದನ ನಿಷೇಧಿತ ಜೆಯುಡಿಯ ರಾಜಕೀಯ ವಿಭಾಗವಾದ ಎಂಎಂಎಲ್ ರಾಜಕೀಯ ಪಕ್ಷವಾಗಿ ನೋಂದಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.
ಸಯೀದ್ ವಾಂಟೆಡ್ ಭಯೋತ್ಪಾದಕ:  ಹಫೀಜ್ ಸಯೀದ್ ಅಮೆರಿಕ ಮತ್ತು ಭಾರತ ತಮ್ಮ ವಶಕ್ಕೆ ಒಪ್ಪಿಸುವಂತೆ ಸೂಚಿಸಿರುವ ಭಯೋತ್ಪಾದಕನಾಗಿದ್ದು ಅಮೆರಿಕವು ಆತನನ್ನು ಹಿಡಿದು ಕೊಟ್ಟವರಿಗೆ ಕೋಟಿ ಡಾಲರುಗಳ ಬಹುಮಾನ ಘೋಷಿಸಿದೆ.
ಪಾಕ್ ಸರ್ಕಾರ ಕೂಡಾ ಎಂಎಂಎಲ್ ನೋಂದಣಿಯನ್ನು ವಿರೋಧಿಸಿತ್ತು. ಪಕ್ಷಕ್ಕೆ ತಾನು ಭದ್ರತಾ ಅನುಮತಿಯನ್ನು ನೀಡುವುದಿಲ್ಲ ಎಂದು ಅದು ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಜೆಯುಡಿ ಮತ್ತು ಅದರ ದತ್ತಿ ದಳವಾದ ಫಲಾಹ್--ಇನ್ ಸಾನಿಯತ್ ದೇಶದ ಒಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಗ್ಬಂಧನಕ್ಕೆ ಒಳಗಾಗಿವೆ ಎಂದು ಒಳಾಡಳಿತ ಸಚಿವಾಲಯವು ಸೆಪ್ಟೆಂಬರ್ ರಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿತ್ತು.ಮಿಲ್ಲಿ ಮುಸ್ಲಿಮ್ ಲೀಗ್ ನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಆರಂಭಿಸಲಾಗಿತ್ತು. ಮಾಜಿ ಪ್ರಧಾನಿ ನವಾಜ್ ಶರೀಫ್ ಅನರ್ಹತೆ ಕಾರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅದು ಸ್ವತಂತ್ರ ಸಾಮರ್ಥ್ಯದೊಂದಿಗೆ ಅಭ್ಯರ್ಥಿಯೊಬ್ಬನನ್ನು ಕಣಕ್ಕೆ ಇಳಿಸಿತ್ತು. ಎಂಎಂಎಲ್ ಲಾಹೋರಿನ ಎನ್ -೧೨೦ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಸಲುವಾಗಿ ಚುನಾವಣಾ ಪ್ರಚಾರವನ್ನೂ ನಡೆಸಿತ್ತು. ಪ್ರಚಾರಕ್ಕೆ ಸಯೀದ್ ನನ್ನು ತೋರಿಸುವ ಬ್ಯಾನರ್ ಗಳನ್ನು ಮತ್ತು ಫೊಟೋಗಳನ್ನು ಬಳಸಿತ್ತು. ಎಂಎಂಎಲ್ ಪ್ರಚಾರ ಮುಖ್ಯವಾಗಿ ಭಾರತ ವಿರೋಧಿ ಪ್ರಚಾರವಾಗಿತ್ತು. ಆಡಳಿತಾರೂಢ ಪಿಎಂಎಲ್ (ಎನ್) ಪಕ್ಷ ಮತ್ತು ಶರೀಫ್  ಅವರು ಭಾರತ ಪರ ಎಂದು ಅದು ಆಪಾದಿಸಿತ್ತು. ಎಂಎಂಎಲ್ ಅಭ್ಯರ್ಥಿ ಪರಾಜಿತಗೊಂಡರೂ ಮುಖ್ಯ ಪ್ರವಾಹದ ಪ್ರಮುಖ ಪಕ್ಷಗಳಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಜಮಾತ್--ಇಸ್ಲಾಮೀ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದ. ಎಂಎಂಎಲ್ ಮತ್ತು ಅದರ ರಾಜಕೀಯ ಪಾತ್ರವನ್ನು ಪ್ರತಿಭಟಿಸಿ ಅಮೆರಿಕ ಲಿಖಿತ ಪ್ರತಿಭಟನೆಯನ್ನು ಕಳಿಸಿದ್ದು, ಇತರ ಹಲವಾರು ರಾಷ್ಟ್ರಗಳು ಕೂಡಾ ತಮ್ಮ ಆತಂಕ ವ್ಯಕ್ತ ಪಡಿಸಿದವು. ಜೆಯುಡಿಯನ್ನು ಮುಖ್ಯ ಪ್ರವಾಹಕ್ಕೆ ತರುವಂತೆ ಇಂಟರ್ -ಸರ್ವೀಸಸ್ ಇಂಟಲಿಜೆನ್ಸ್ (ಐಎಸ್ ) ಕಳೆದ ವರ್ಷ ಸರ್ಕಾರಕ್ಕೆ ಶಿಫಾರಸು  ಮಾಡಿತ್ತು ಆದರೆ ಸರ್ಕಾರ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಎಂದು ಮಾಜಿ ಜನರಲ್ ಶೋಯಿಬ್ ಅಮ್ಜದ್ ತಿಳಿಸಿದ್ದರು. ಮಾ.7ರ ಬುಧವಾರ ಲಾಹೋರ್ ಹೈಕೋರ್ಟ್ ಸಯೀದನನ್ನು ಬಂಧಿಸದಂತೆ ಅಧಿಕಾರಿಗಳನ್ನು ತಡೆ ಹಿಡಿದಿತ್ತು. ಕಳೆದ ಜನವರಿ ಮತ್ತು ಫೆಬ್ರುವರಿಯಲ್ಲಿ ಫೆಡರಲ್ ಸರ್ಕಾರವು ಜೆಯುಡಿ ಮತ್ತು ಫಲಾಹ್-- ಇನ್ ಸಾನಿಯತ್ ವಿರುದ್ಧ ದಿಗ್ಬಂಧನ ಹೇರಿ ಅವುಗಳ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

2018: ನವದೆಹಲಿ: ಅಖಿಲಾ ಎಂದು ಮುನ್ನ ಪರಿಚಿತಳಾಗಿದ್ದ ಹದಿಯಾಳ ಮದುವೆಯನ್ನು ರದ್ದು ಪಡಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು. ಕಳೆದ ಮೇ ೨೪ರಂದು ಹೈಕೋರ್ಟ್ ಶಫೀನ್ ಜಹಾನ್ ಜೊತೆಗಿನ ಆಕೆಯ ಮದುವೆಯನ್ನು ರದ್ದು ಪಡಿಸಿ, ಪಾಲಕರ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ’ಲವ್ ಜಿಹಾದ್ಬಗ್ಗೆ ತನಿಖೆ ನಡೆಸುವಂತೆಯೂ ಹೈಕೋರ್ಟ್ ಆಜ್ಞಾಪಿಸಿತ್ತು.ನ್ಯಾಯಾಲಯದಲ್ಲಿ ತೀರ್ಪಿನ ಮುಖ್ಯಭಾಗವನ್ನು ಓದಿ ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಅವರು ಹದಿಯಾ ಅವರನ್ನು ನ್ಯಾಯಾಲಯಕ್ಕೆ ಕರೆಸಲಾಗಿದ್ದು ಅವರು ಅಲ್ಲಿ ಶಫೀನ್ ಜಹಾನ್ ಜತೆಗೆ ತಮ್ಮ ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಾನೂನು ಪ್ರಕಾರ ಭವಿಷ್ಯದ ದಾರಿ ನಿರ್ಧರಿಸಲು ಅವರು ಮುಕ್ತರಾಗಿದ್ದಾರೆಎಂದು ಹೇಳಿದರು. ಏನಿದ್ದರೂ, ಕೇರಳದಲ್ಲಿ ಸುಸಂಘಟಿತ ಜಾಲವು ಇಸ್ಲಾಮಿಗೆ ಮತಾಂತರ ಮಾಡುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ ಐಎ) ಮುಂದುವರೆಸಲಿದೆಎಂದು ಸುಪ್ರೀಂಕೋರ್ಟ್ ಹೇಳಿತು.ಇದಕ್ಕೆ ಮುನ್ನ ವಾರ ಹದಿಯಾಳ ತಂದೆ ಕೆ.ಎಂ. ಅಶೋಕನ್ ಅವರು ತಮ್ಮ ಪ್ರಯತ್ನಗಳಿಂದಾಗಿ ಪುತ್ರಿಯನ್ನು ಸಿರಿಯಾದ ಉಗ್ರಗಾಮಿ ನಿಯಂತ್ರಿತ ಪ್ರದೇಶಕ್ಕೆ ಸಾಗಿಸುವ ಯತ್ನಕ್ಕೆ ಮತ್ತು ಆಕೆಯನ್ನು ಲೈಂಗಿಕ ಗುಲಾಮಳನ್ನಾಗಿ ಇಲ್ಲವೇ ಮಾನವ ಬಾಂಬ್ ಆಗಿ ಬಳಸದಂತೆ ತಡೆ ಬಿದ್ದಿದೆ ಎಂದು ಸುಪ್ರೀಂಕೋರ್ಟಿನಲ್ಲಿ ಪ್ರತಿಪಾದಿಸಿದ್ದರು. ಹೊಸದಾಗಿ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಅಶೋಕನ್ ಅವರು ತಮ್ಮ ಪುತ್ರಿದುರ್ಬಲ ವಯಸ್ಕಳಾಗಿದ್ದುಆಕೆಯು ತನ್ನನ್ನು ಏಕಾಂತ ಪರಿಸರದಲ್ಲಿ  ತಮ್ಮ ಪಂಥಕ್ಕೆ ಸೇರಿಸಿಕೊಂಡ, ಆಶ್ರಯ, ರಕ್ಷಣೆ ನೀಡಿದ ಮತ್ತು ಧಾರ್ಮಿಕ ಬೋಧನೆಗೆ ಗುರಿಪಡಿಸಿದ ಅಪರಿಚಿತರಿಗೆ ಅತ್ಯಂತ ಹೀನವಾಗಿ ಸಂಪೂರ್ಣವಾಗಿ ಶರಣಾಗತಳಾಗಿದ್ದಾಳೆಎಂದು ತಿಳಿಸಿದ್ದರು. ತಾನು ಸ್ವ ಇಚ್ಛೆಯಿಂದಲೇ ಇಸ್ಲಾಮಿಗೆ ಪರಿವರ್ತಿತಳಾಗಿದ್ದು ಮುಸ್ಲಿಮಳಾಗಿಯೇ ಇರಬಯಸಿರುವುದಾಗಿ ಸುಪ್ರೀಂಕೋರ್ಟಿಗೆ ಪುತ್ರಿ ಸಲ್ಲಿಸಿದ್ದ ಪ್ರಮಾಣ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಅಶೋಕನ್ ಅವರು ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು.
ಹೈಕೋರ್ಟ್ ಆದೇಶವನ್ನು ಜಹಾನ್ ಪ್ರಶ್ನಿಸಿದ ಬಳಿಕ ವಿಷಯ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.ತಾನು ಜಹಾನ್ ಅವರನ್ನು ಸ್ವ ಇಚ್ಛೆಯಿಂದಲೇ ಮದುವೆಯಾಗಿರುವುದಾಗಿ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದ್ದ ಹದಿಯಾ, ಆತನ ಪತ್ನಿಯಾಗಿ ಬದುಕಲು ಕೋರ್ಟಿನ ಅನುಮತಿ ಕೋರಿದ್ದರು. ತನ್ನ ಪತಿಯನ್ನು ಎನ್ ಐಎ ತಪ್ಪಾಗಿ ಭಯೋತ್ಪಾದಕ ಎಂಬುದಾಗಿ ಬಿಂಬಿಸಿದೆ. ಐಸಿಸ್ ಭಯೋತ್ಪಾದಕ ಗುಂಪಿಗೂ ಆತನಿಗೂ ಯಾವುದೇ ಸಂಬಂಧವೂ ಇಲ್ಲ ಎಂದೂ ಆಕೆ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು. ಕಳೆದ ನವೆಂಬರ್ ೨೭ರಂದು ಸುಪ್ರೀಂಕೋರ್ಟ್ ಹದಿಯಾಳನ್ನು ಪಾಲಕರ ವಶದಿಂದ ಮುಕ್ತಗೊಳಿಸಿ, ಪತಿಯ ಜೊತೆ ತೆರಳಲು ಆಕೆ ಅವಕಾಶ ಕೋರಿದ್ದರೂ ಅಧ್ಯಯನ ಮುಂದುವರೆಸಲು ಕಾಲೇಜಿಗೆ ಕಳುಹಿಸಿತ್ತು. ಆಗ, ಹದಿಯಾಗೆ ಅಗತ್ಯ ಭದ್ರತೆ ನೀಡುವಂತೆ ಕೇರಳ ಪೊಲೀಸರಿಗೆ ಸೂಚಿಸಿದ್ದ ಸುಪ್ರೀಂಕೋರ್ಟ್, ಕಾಲೇಜಿನ ಡೀನ್ ಅವರನ್ನು ಪಾಲಕರನ್ನಾಗಿಯೂ ನೇಮಿಸಿತ್ತು.
ಏನಿದು ಪ್ರಕರಣ? ದೇಶದಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿದ ಪ್ರಕರಣವಾಗಿದೆ ಕೇರಳದ ಅಖಿಲಾ (ಹದಿಯಾ) ಎಂಬ ಯುವತಿಯ ಅಂತರ್ಧರ್ಮೀಯ ವಿವಾಹ ಪ್ರಕರಣ. ತಮಿಳುನಾಡಿನ ಸೇಲಂನಲ್ಲಿ ಹೋಮಿಯೋಪಥಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಅಖಿಲಾ, ಶಫೀನ್ ಜಹಾನ್ ಎಂಬ ಮುಸ್ಲಿಂ ಯುವಕನನ್ನು ಕಳೆದ ವರ್ಷದ ಡಿಸೆಂಬರಿನಲ್ಲಿ  ಮದುವೆಯಾಗಿದ್ದರು. ನಂತರ ಅವರು ಇಸ್ಲಾಮಿಗೆ ಮತಾಂತರಗೊಂಡು ತಮ್ಮ ಹೆಸರನ್ನು ಹದಿಯಾ ಎಂದು ಬದಲಾಯಿಸಿಕೊಂಡಿದ್ದರು.
ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು. ‘ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಆಕೆಯನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಯತ್ನ ಇದುಎಂದು ಆರೋಪಿಸಿದ್ದ ಆಕೆಯ ತಂದೆ ಅಶೋಕನ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೇ ತಿಂಗಳಲ್ಲಿ ತೀರ್ಪು ನೀಡಿದ್ದ ಕೇರಳ ಹೈಕೋರ್ಟ್, ಶಫೀನ್ -ಹದಿಯಾ ಮದುವೆಯನ್ನು ಅಸಿಂಧುಗೊಳಿಸಿತ್ತಲ್ಲದೇ ಯುವತಿಯನ್ನು ಪೋಷಕರಿಗೆ ಒಪ್ಪಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ  ಶಫೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿತ್ತು. ಮದುವೆ ಅಸಿಂಧುಗೊಳಿಸುವ ಹಕ್ಕು ಹೈಕೋರ್ಟಿಗೆ  ಇದೆಯೇ ಎಂದು ಕೇಳಿತ್ತು. ಅಲ್ಲದೇ, ಇದು ಬಲವಂತದ ಮದುವೆ ಹೌದೇ ಅಲ್ಲವೇ ಎಂಬುದನ್ನು ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಸೂಚಿಸಿತ್ತು. ಎನ್ಐಎ ಪರವಾಗಿ ಕೋರ್ಟಿಗೆ ಹಾಜರಾದ ವಕೀಲ ಮಣೀಂದರ್ ಸಿಂಗ್ ಅವರು ಹದಿಯಾ ಪ್ರಕರಣದ ತನಿಖೆ ಬಹುತೇಕ ಮುಗಿದಿದೆ ಎಂದು ಕೋರ್ಟಿಗೆ ತಿಳಿಸಿದರು. ಹಾಗಿದ್ದರೂ ಪ್ರಕರಣದ ನಿರ್ಣಾಯಕ ಸಾಕ್ಷಿದಾರರಾದ ಫಸಲ್ ಮುಸ್ತಫ ಮತ್ತು ಶಿರಿನ್ ಶಹಾಂದ್ ಅವರನ್ನು ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ಎನ್ಐಎ ಹೇಳಿತು. ಹದಿಯಾ ಓರ್ವ ಕ್ರಿಮಿನಲ್ ಅಥವಾ ಭಯೋತ್ಪಾದಕಿ ಎಂಬ ರೀತಿಯಲ್ಲಿ  ತಾನು ಆಕೆಯೊಂದಿಗೆ ನಡೆದುಕೊಂಡಿದ್ದೇನೆ ಎಂಬ ಆರೋಪವನ್ನು ಎನ್ಐಎ ಅಲ್ಲಗಳೆಯಿತು.

2018: ನವದೆಹಲಿ: ಆಂಧ್ರ ಪ್ರದೇಶದ ತೆಲುಗುದೇಶಂ ಪಕ್ಷವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆಯ ವಿವಾದದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಸಚಿವರನ್ನು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಸಚಿವ ಸಂಪುಟದಿಂದ ಹಿಂದಕ್ಕೆ ಕರೆಸಿಕೊಂಡಿತು. ನಾಗರಿಕ ವಿಮಾನಯಾನ ಸಚಿವ ಅಶೋಕ ಗಜಪತಿ ರಾಜು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಎಸ್. ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿ, ಅಧಿಕಾರದ ಅವಧಿಯಲ್ಲಿ ಸಹಕಾರ ನೀಡಿದ್ದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಜೊತೆಗೆ ನಡೆಸಿದ ಮಾತುಕತೆ ವಿಫಲಗೊಂಡ ಬಳಿಕ ತೆಲುಗುದೇಶಂ ತನ್ನ ಸಚಿವರನ್ನು ಕೇಂದ್ರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡಿತು. ಇದಕ್ಕೆ ಮುನ್ನ ಚೌಧರಿ ಅವರು ತಾವು ಮತ್ತು ರಾಜು ಅವರು ಅನಿವಾರ್ಯ ಕಾರಣಗಳಿಂದ ಸಚಿವ ಸಂಪುಟದಿಂದ ಕೆಳಗಿಳಿಯುತ್ತಿರುವುದಾಗಿ ಹೇಳಿದ್ದರು. ಆದರೆ ಪಕ್ಷವು ಎನ್ ಡಿಎ ಅಂಗಪಕ್ಷವಾಗಿ ಮುಂದುವರೆಯುವುದು ಎಂದು ಅವರು ತಿಳಿಸಿದ್ದರು.
ದುರದೃಷ್ಟಕರ ವಿಚ್ಛೇದನ: ಕೇಂದ್ರ ಸಂಪುಟದಿಂದ ಹೊರಬರುವ ನಿರ್ಧಾರವನ್ನುದುರದೃಷ್ಟಕರ ವಿಚ್ಛೇದನಕ್ಕೆ  ಹೋಲಿಸಿದ ಚೌಧರಿ, ತಾವು ಮತ್ತು ರಾಜು ಅವರು ಆಂಧ್ರ ಪ್ರದೇಶದಿಂದ ಸಂಸತ್ ಸದಸ್ಯರಾಗಿ ಸೇವೆ ಮುಂದುವರೆಸುವುದಾಗಿ ನುಡಿದರು. ಕೇಂದ್ರವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ, ಆದರೆ ಅಷ್ಟೇ ಮೊತ್ತದ ವಿಶೇಷ ಪ್ಯಾಕೇಜ್ ನೀಡಲು ಸಿದ್ಧ ಎಂಬುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ರಾತ್ರಿ ಹೇಳಿದ ಕೆಲವೇ ಗಂಟೆಗಳಲ್ಲಿ ಚಂದ್ರಬಾಬು ನಾಯ್ಡು ಅವರು ತಮ್ಮ ನಾಯಕರು ಕೇಂದ್ರ ಸಚಿವ ಸಂಪುಟದಿಂದ ನಿರ್ಗಮಿಸುವರು ಎಂದು ಪ್ರಕಟಿಸಿದ್ದರು.
2008: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರಿದರು. ಹಲವು ದಿನಗಳಿಂದ ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಳ್ಳದೆ, ಅತಂತ್ರರಾಗಿದ್ದ ಪ್ರಕಾಶ್ ಮತ್ತು ಅವರ ಬಣದ ಮುಖಂಡರು ಕಾಂಗ್ರೆಸ್ ಸೇರುವುದರ ಮೂಲಕ, ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಕ್ಕೂ ತೆರೆ ಎಳೆದರು. ಎರಡು ಅಥವಾ ಮೂರು ದಿನದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದ ಪ್ರಕಾಶ್ ಅವರು ತರಾತುರಿಯಲ್ಲಿ ಈದಿನ ಮಧ್ಯಾಹ್ನವೇ ಬೆಂಬಲಿಗರ ಜತೆ ಕಾಂಗ್ರೆಸ್ ಸೇರಿದ್ದು ವಿಶೇಷವಾಗಿತ್ತು.
2008: ನಾಗರಹೊಳೆ ವನ್ಯಜೀವಿ ವಿಭಾಗದ ಆನೆಚೌಕೂರು ಮತ್ತಿಗೋಡು ಅರಣ್ಯ ಹಾಗೂ ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯಕ್ಕೆ ಬಿದ್ದ ಬೆಂಕಿ ಈದಿನವೂ ಧಗಿಧಗಿಸಿ ಉರಿಯಿತು. ವೀರನಹೊಸಳ್ಳಿ ವಲಯದ ಕೆಲವು ಭಾಗದಲ್ಲಿ ಕಾಡಿಗೆ ಬೆಂಕಿ ತಗಲಿತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೂ ಬೆಂಕಿ ಕಾಣಿಸಿಕೊಂಡಿತು.

2008: ಮೇಘಾಲಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪೈಪೋಟಿ ಹೊಸ ತಿರುವು ಪಡೆದುಕೊಂಡಿತು. 60ಸದಸ್ಯ ಬಲದ ವಿಧಾನ ಸಭೆಯಲ್ಲಿ ಒಟ್ಟು 31 ಮಂದಿ `ಮೇಘಾಲಯ ಪ್ರಗತಿ ಪರ ಮೈತ್ರಿಕೂಟ' ಎಂಬ ಹೆಸರಿನಲ್ಲಿ ರಾಜ್ಯಪಾಲ ಎಸ್ ಎಸ್ ಸಿದ್ದು ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಯುಡಿಪಿಯ ಅಧ್ಯಕ್ಷ ಡೊಂಕುಪಾರ್ ರಾಯ್ ನೇತೃತ್ವದಲ್ಲಿ ಈ ಶಾಸಕರು ರಾಜ್ಯಪಾಲರ ಎದುರು ಹಾಜರಾದರು.

2008: `ಹಿಮೋಗ್ಲೋಬಿನ್ ಕೊರತೆ'ಯ ರೋಗವು ಅಷ್ಟೇನೂ ಸುದ್ದಿಯಲ್ಲಿ ಇಲ್ಲದೇ ಇದ್ದರೂ ಭಾರತದಲ್ಲಿ ಹೃದಯ ಬೇನೆ ಮತ್ತು ಕ್ಯಾನ್ಸರಿನಷ್ಟೇ ವ್ಯಾಪಕವಾಗಿದೆ. ರಕ್ತಕ್ಕೆ ಕೆಂಪುವರ್ಣ ಕೊಡುವ ಅಥವಾ ದೇಹದೊಳಗೆ ಅತಿ ಅಗತ್ಯವಾದ ಕೆಂಪು ರಕ್ತಕಣಗಳಾದ ಹಿಮೋಗ್ಲೋಬಿನ್ ಕೊರತೆಯ ರೋಗವು ವಂಶಪಾರಂಪರ್ಯವಾಗಿ ಬರುವುದೇ ಹೆಚ್ಚು. ಈ ರೋಗದಿಂದ ಪ್ರಸಕ್ತ ದೇಶದಲ್ಲಿ 3.7 ಕೋಟಿ ಮಂದಿ ಬಳಲುತ್ತಿದ್ದಾರೆ. ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಪ್ರಾಧ್ಯಾಪಕ ಐ ಸಿ ವರ್ಮ ಪ್ರಕಾರ `ಪಶ್ಚಿಮ ಬಂಗಾಳದ ದಕ್ಷಿಣ 24ನೇ ಪರಗಣ ಜಿಲ್ಲೆಯೊಂದರಲ್ಲಿಯೇ ಒಂದು ಅಧ್ಯಯನದ ಪ್ರಕಾರ ಸುಮಾರು ಶೇಕಡಾ 13.7ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ.

2008: ಅಂತಾರಾಷ್ಟ್ರೀಯ  ಮಹಿಳಾ ದಿನಾಚರಣೆಯ ಅಂಗವಾಗಿ  ಎಲ್ಲವನ್ನೂ ಮಹಿಳೆಯರೇ  ನಿರ್ವಹಿಸುವ ಏರ್  ಇಂಡಿಯಾ ವಿಮಾನವೊಂದು ಈದಿನ  ಚೆನ್ನೈಯಿಂದ  ಕೊಲಂಬೊಗೆ ತೆರಳಿತು. ಕ್ಯಾಪ್ಟನ್  ಎಂ.ದೀಪಾ  ಮತ್ತು  ಫ್ಲೈಟ್  ಆಫೀಸರ್  ಎನ್. ಆರ್. ವೇದಾ  ಬಕಾವತಿ ಹಾಗೂ ಇತರ ಮಹಿಳಾ ಸಿಬ್ಬಂದಿಯನ್ನು ಈ ವಿಮಾನವು ಒಳಗೊಂಡಿತ್ತು ಎಂದು ನ್ಯಾಷನಲ್ ಅವಿಯೇಷನ್ ಕಂಪೆನಿಯ ಪ್ರಕಟಣೆ ತಿಳಿಸಿತು. ಗಗನಸಖಿಯರು, ಮಹಿಳಾ  ಸಿಬ್ಬಂದಿ  ಮತ್ತು ಮಹಿಳಾ   ಪ್ರಯಾಣಿಕರನ್ನು ಕೊಲಂಬೊದಲ್ಲಿ ಮಹಿಳಾ ದಿನಾಚರಣೆ  ಅಂಗವಾಗಿ ಗುಲಾಬಿ ಹೂವಿನೊಂದಿಗೆ ಸ್ವಾಗತಿಸಲಾಯಿತು.

2008: ತಾನು ಪಾಕಿಸ್ಥಾನದಲ್ಲಿ ಗೂಢಚರ್ಯೆ ನಡೆಸುತ್ತಿದ್ದೆ ಎಂಬ ಅರ್ಥ ಬರುವಂತೆ ಪ್ರಕಟವಾದ ತಮ್ಮ ಕುರಿತಾದ ಸುದ್ದಿಗಳು ತಿರುಚಿ ಬರೆಯಲ್ಪಟ್ಟಿವೆ ಎಂದು ಪಾಕಿಸ್ಥಾನದಲ್ಲಿ 35ವರ್ಷಗಳ ಜೈಲುವಾಸದ ನಂತರ ಬಿಡುಗಡೆಗೊಂಡು ಭಾರತಕ್ಕೆ ಬಂದ ಕಾಶ್ಮೀರ ಸಿಂಗ್ ಸ್ಪಷ್ಟ ಪಡಿಸಿದರು. ನಾನು ಭಾರತದ ಗೂಢಚಾರಿಯಲ್ಲ ಎಂದು ಕಳೆದ 35 ವರ್ಷಗಳ ಕಾಲ ಪಾಕಿಸ್ಥಾನ ಜೈಲಿನಲ್ಲಿ ಹೇಳುತ್ತಾ ಬಂದಿದ್ದ ಕಾಶ್ಮೀರ ಸಿಂಗ್ ತಾನು ಪಾಕಿಸ್ಥಾನದಲ್ಲಿ ಗೂಢಚರ್ಯೆ ನಡೆಸಲಿಕ್ಕಾಗಿಯೇ ಭಾರತ ಸರ್ಕಾರದಿಂದ ಮಾಸಿಕ 400 ರೂಪಾಯಿಗಳ ವೇತನ ಪಡೆಯುತ್ತಿದ್ದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

2008: ಸುಮಾರು 65 ವರ್ಷದ ವೃದ್ಧೆಯ ಅಂಡಾಶಯದಲ್ಲಿ (ಓವರಿ) ಬೆಳೆದಿದ್ದ 26 ಕೆಜಿ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಲ್ಲಿ ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ತಂಡವು ಯಶಸ್ವಿಯಾಯಿತು. ನವೋದಯ ಆಸ್ಪತ್ರೆ ಆರಂಭಗೊಂಡ ಬಳಿಕ ಇಷ್ಟೊಂದು ದೊಡ್ಡ ಗಡ್ಡೆಗೆ ಶಸ್ತ್ರಚಿಕಿತ್ಸೆ ನಡೆದಿರಲಿಲ್ಲ. ಇದೊಂದು ವಿಶೇಷ ಪ್ರಕರಣವಾಗಿದ್ದು, ಒಂದು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ಸು ಕಂಡಿದ್ದೇವೆ ಎಂದು ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಶಸ್ತ್ರ ಚಿಕಿತ್ಸಾ ತಜ್ಞ ಡಾ ವೀರೇಶ ಹಿರೇಮಠ ತಿಳಿಸಿದರು. ಶಸ್ತ್ರಚಿಕಿತ್ಸೆಗೊಳಗಾದ ವೃದ್ಧೆ ಸಿಂಧನೂರ ಸಮೀಪದ ಬಾಲಾ ಕ್ಯಾಂಪ್ ನಿವಾಸಿ ಮರಿಯಮ್ಮ. ಮಾರ್ಚ್ 6ಂದು ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು.

2008: ತ್ರಿಪುರ ವಿಧಾನಸಭೆಗೆ ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷವು ಬಹುಮತ ಗಳಿಸಿತು. ಈ ಪಕ್ಷದ ಮಾಣಿಕ್ ಸರ್ಕಾರ್ ಸತತ ಮೂರನೇ ಬಾರಿಗೆ ಈ ಪುಟ್ಟ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲು ಸಜ್ಜಾದರು.

2008: ಜಾಗತಿಕ ಚೆಸ್ ಕ್ರೀಡೆಯಲ್ಲಿ ತನ್ನ ಪ್ರಭುತ್ವ ಏನೆಂಬುದನ್ನು ಮತ್ತೊಮ್ಮೆ ಪ್ರಚುರಪಡಿಸಿದ ಭಾರತದ ವಿಶ್ವನಾಥನ್ ಆನಂದ್ ಸ್ಪೇನಿನ ಲಿನಾರೆಸಿನಲ್ಲಿ ಕೊನೆಗೊಂಡ ಮೊರೆಲಿಯಾ- ಲಿನಾರೆಸ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ಅಂತಿಮ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಬಲ್ಗೇರಿಯದ ವೆಸೆಲಿನ್ ಟೊಪಲೊವ್ ಜೊತೆ ಡ್ರಾ ಸಾಧಿಸಿದರು. ಇದರೊಂದಿಗೆ ಸಾಧ್ಯವಿರುವ 14 ಪಾಯಿಂಟುಗಳಲ್ಲಿ 8.5 ಪಾಯಿಂಟ್ ಗಿಟ್ಟಿಸಿಕೊಂಡ ಭಾರತದ ಗ್ರ್ಯಾಂಡ್ ಮಾಸ್ಟರ್ ಅಗ್ರಸ್ಥಾನ ಪಡೆದುಕೊಂಡರು. ಕಳೆದ ವರ್ಷವೂ ಇಲ್ಲಿ ಪ್ರಶಸ್ತಿ ಆನಂದ್ ಪಾಲಾಗಿತ್ತು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರ ಬಿದ್ದ ಒಂದು ತಿಂಗಳ ಬಳಿಕ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ವಿಶೇಷ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತು.

2007: ಎಲ್ಲಿಯವರೆಗೆ ಒಂದು ರಾಜ್ಯದಲ್ಲಿ ಅಧ್ಯಯನ ಮಾಡುವಿರೋ ಅಲ್ಲಿಯವರೆಗೆ ಆ ರಾಜ್ಯದ ಭಾಷೆ ಕಲಿಯುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು. ರಾಜ್ಯದಲ್ಲಿ ಸಿ ಬಿ ಎಸ್ ಇ ಅಥವಾ ಐ ಸಿ ಎಸ್ ಇ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವ ಹೊರದೇಶ ಅಥವಾ ಹೊರರಾಜ್ಯಗಳ ವಿದ್ಯಾರ್ಥಿಗಳು ಒಂದು ವಿಷಯವಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ರಾಜ್ಯ ಸರ್ಕಾರ 2006ರ ಮೇ 25ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿತು.

2007: ಉತ್ತರಖಂಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೇಜರ್ ಬಿ.ಸಿ. ಖಂಡೂರಿ ಡೆಹ್ರಾಡೂನಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

2007: ತನ್ನ ಕಲಾಪವನ್ನು ಸ್ಥಗಿತಗೊಳಿಸಿರುವ ನ್ಯಾಯಮೂರ್ತಿ ಯು.ಎಲ್. ಭಟ್ ಆಯೋಗವನ್ನು ರದ್ದು ಪಡಿಸಿದ ರಾಜ್ಯ ಸರ್ಕಾರವು ಗಣಿ ಲಂಚ ಹಾಗೂ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಿತು.

2006: ಮೂವತ್ತೆರಡು ವರ್ಷಗಳ ಹಿಂದೆ (1974ರಲ್ಲಿ) ಸ್ವಾತಂತ್ರ್ಯ ಹೋರಾಟಗಾರ ಸಿ.ಎಚ್. ನಾರಾಯಣರಾವ್ ಅವರ ಕುಟುಂಬದಿಂದ ಮೂರು ಎಕರೆ ಜಮೀನು ವಶಪಡಿಸಿಕೊಂಡ ಬಿಡಿಎ ಅದಕ್ಕೆ ಪರಿಹಾರವಾಗಿ ಪಾವತಿ ಮಾಡಬೇಕಾಗಿದ್ದ 3.4 ಲಕ್ಷ ರೂಪಾಯಿಗಳನ್ನು ಕೊಡದೆ ಸತಾಯಿಸಿ ಕಡೆಗೂ  ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟಿಗೆ ಈದಿನ ಪ್ರಮಾಣಪತ್ರ ಸಲ್ಲಿಸಿತು. 1974ರಲ್ಲಿ ಆಗಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ಈಗಿನ ನಂದಿನಿ ಬಡಾವಣೆ ನಿರ್ಮಾಣ ಸಲುವಾಗಿ ಈ ಭೂಮಿಯನ್ನು ವಶಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರ ಪಡೆಯಲು ಹೈಕೋರ್ಟ್ ಕಟ್ಟೆ ಏರಿದ್ದ ನಾರಾಯಣರಾವ್ 1993ರಲ್ಲಿ ನಿಧನರಾಗಿದ್ದರು. 1994ರಲ್ಲಿ ಪರಿಹಾರ ಪಾವತಿಗೆ ಹೈಕೋರ್ಟ್ ಸೂಚಿಸಿತ್ತು. ಹಣ ಪಾವತಿ ಆಗದೇ ಹೋದಾಗ ರಾವ್ ಅವರ ಮಕ್ಕಳಾದ ಎಚ್. ಎನ್. ಸುರೇಶ, ಸುನಂದಾ, ಸುಕನ್ಯಾ, ಮತ್ತು ಸೊಸೆ ಕೃಷ್ಣಾ ಗಲಗಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

2006: ಗುಜರಾತಿನ ಬೆಸ್ಟ್ ಬೇಕರಿ ನರಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಜಹೀರಾ ಶೇಖ್ ಅವರಿಗೆ ಪ್ರತಿಕೂಲ ಸಾಕ್ಷ್ಯ ನೀಡ್ದಿದಕ್ಕಾಗಿ ಸುಪ್ರೀಂಕೋರ್ಟ್ ಛಿಮಾರಿ ಹಾಕಿ ಒಂದು ವರ್ಷದ ಸೆರೆಮನೆವಾಸ ಮತ್ತು 50,000 ರೂಪಾಯಿಗಳ ದಂಡ ವಿಧಿಸಿತು.

1999: ನ್ಯೂಯಾರ್ಕ್ ಯಾಂಕೀಸ್ ಬೇಸ್ ಬಾಲ್ ತಾರೆ ಜೋ ಡಿಮ್ಯಾಗ್ಗಿಯೊ ಅವರು ಫ್ಲಾರಿಡಾದ ಹಾಲಿವುಡ್ಡಿನಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು.

1971: ನ್ಯೂಯಾರ್ಕ್ ನಗರದ ಮ್ಯಾಡಿಸನ್  ಸ್ಪೆಯರ್ ಗಾರ್ಡನ್ನಿನಲ್ಲಿ ನಡೆದ ಸ್ಪರ್ಧೆಯಲ್ಲಿ 15 ಸುತ್ತುಗಳಲ್ಲಿ ಜೋ ಫ್ರೇಜಿಯರ್ ಅವರು ಮಹಮ್ಮದ್ ಅಲಿಯನ್ನು ಪರಾಭವಗೊಳಿಸಿ ಜಗತ್ತಿನ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

1961: ಲಂಡನ್ ಫಿಲ್ ಹಾರ್ಮೊನಿಕ್ ಆರ್ಕೆಸ್ಟ್ರಾದ ಸ್ಥಾಪಕ ಸರ್ ಥಾಮಸ್ ಬೀಚಮ್ ತಮ್ಮ 81ನೇ ವಯಸ್ಸಿನಲ್ಲಿ  ನಿಧನರಾದರು.

1948: ಸಾಗರೋತ್ತರ ಸೇವೆಗಾಗಿ ಏರ್ ಇಂಡಿಯಾ ಇಂಟರ್ನ್ಯಾಷನಲ್ ನ್ನು ಸ್ಥಾಪಿಸಲಾಯಿತು.

1936: ಹಿರಿಯ ವೃತ್ತಿ ರಂಗಭೂಮಿ ಕಲಾವಿದ ಎನ್. ಎಸ್. ಜೋಶಿ ಅವರು ಶಿವಭಟ್ಟ ಜೋಶಿ- ಅಂಬಾಬಾಯಿ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಚಿಲ್ಲೂರ ಬಡ್ನಿಯಲ್ಲಿ ಜನಿಸಿದರು.

1930: ಅಮೆರಿಕಾದ 27ನೇ ಅಧ್ಯಕ್ಷ ವಿಲಿಯಂ ಹೊವರ್ಡ್ ಟಫ್ಟ್ ವಾಷಿಂಗನ್ನಿನಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ಮೃತರಾದರು. 

 1879: ಒಟ್ಟೊ ಹಾನ್ (1879-1968) ಹುಟ್ಟಿದ ದಿನ. ನೊಬೆಲ್ ಪ್ರಶಸ್ತಿ ವಿಜೇತನಾದ ಈ ಜರ್ಮನ್ ರಾಸಾಯನಿಕ ತಜ್ಞ ರೇಡಿಯೋ ರಾಸಾಯನಿಕ ತಜ್ಞ ಫ್ರಿಟ್ಜ್ ಸ್ಟ್ರಾಸ್ಮನ್ ಜೊತೆಗೆ ಪರಮಾಣು ವಿದಳನ ಸಂಶೋಧನೆಗಾಗಿ ಖ್ಯಾತಿ ಪಡೆದಿದ್ದಾರೆ.

1874: ಅಮೆರಿಕಾದ 13ನೇ ಅಧ್ಯಕ್ಷ ಮಿಲ್ಲಾರ್ಡ್ ಫಿಲ್ಮೋರ್ ನ್ಯೂಯಾರ್ಕಿನ ಬಫೆಲೋದಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ಮೃತರಾದರು. 

1787: ಕಾರ್ಲ್ ಫರ್ಡಿನಾಂಡ್ ವೊನ್ ಗ್ರಾಫ್ (1787-1840) ಹುಟ್ಟಿದರು. ಜರ್ಮನ್ ಶಸ್ತ್ರಚಿಕಿತ್ಸಕನಾದ ಈತ ಆಧುನಿಕ ಪ್ಲಾಸ್ಟಿಕ್ ಸರ್ಜರಿ ಸೃಷ್ಟಿಯಲ್ಲಿ ನೆರವು ನೀಡಿದ ವ್ಯಕ್ತಿ.

1702: ಇಂಗ್ಲೆಂಡಿನ ದೊರೆ ಮೂರನೇ ವಿಲಿಯಂ ಮೃತನಾದುದನ್ನು ಅನುಸರಿಸಿ ರಾಣಿ ಅನ್ನೆ ಸಿಂಹಾಸನ ಏರಿದಳು. 

No comments:

Post a Comment