Wednesday, March 7, 2018

ಇಂದಿನ ಇತಿಹಾಸ History Today ಮಾರ್ಚ್ 06

ಇಂದಿನ ಇತಿಹಾಸ History Today ಮಾರ್ಚ್ 06
 ಶಿಲ್ಲಾಂಗ್: ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ಮೇಘಾಲಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸಂಗ್ಮಾ ಅವರೊಂದಿಗೆ 11 ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಗಂಗಾಪ್ರಸಾದ್ ಅವರು ಪ್ರಮಾಣ ವಚನ ಬೋಧಿಸಿದರು. ಲೋಕಸಭೆಯ ಮಾಜಿ ಸ್ಪೀಕರ್ ಪಿ.. ಸಂಗ್ಮಾ ಅವರ ಪುತ್ರನಾದ 40 ವರ್ಷದ ಕಾನ್ರಾಡ್ ಸದ್ಯ ಲೋಕಸಭಾ ಸದಸ್ಯರಾಗಿದ್ದಾರೆ. 19 ಶಾಸಕರನ್ನು ಹೊಂದಿರುವ ಎನ್ಪಿಪಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾಲ್ಕು ಪಕ್ಷಗಳು ಬೆಂಬಲ ನೀಡಿವೆ. ಆರು ಶಾಸಕರ ಸಂಯುಕ್ತ ಪ್ರಜಾಸತ್ತಾತ್ಮಕ ಪಕ್ಷ (ಯುಡಿಪಿ), ನಾಲ್ವರು ಶಾಸಕರ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಪಿಡಿಎಫ್) ತಲಾ ಇಬ್ಬರು ಶಾಸಕರನ್ನು ಹೊಂದಿರುವ ಬಿಜೆಪಿ ಮತ್ತು ಎಸ್ಎಸ್ಪಿಡಿಪಿ ಮತ್ತು ಒಬ್ಬ ಪಕ್ಷೇತರ ಶಾಸಕ ಸರ್ಕಾರಕ್ಕೆ ಬೆಂಬಲ ನೀಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿಯೇ ಬಹಿಷ್ಕಾರದ ಬಿಸಿ: ಎನ್ಪಿಪಿ ಮೈತ್ರಿಕೂಟದ ಅಂಗಪಕ್ಷವಾಗಿರುವ ಎಸ್ಎಸ್ಪಿಡಿಪಿ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿತ್ತು.ಸಂಗ್ಮಾ ಆಯ್ಕೆ ಏಕಪಕ್ಷೀಯ ಎಂದು ಎಸ್ಎಸ್ಪಿಡಿಪಿ ಆಕ್ಷೇಪ ವ್ಯಕ್ತಪಡಿಸಿತು. ಇದರ ಬೆನ್ನಲ್ಲೇಮೈತ್ರಿ ಸರ್ಕಾರ ಮುನ್ನಡೆಸುವುದು ಸುಲಭದ ಮಾತಲ್ಲಎಂದು ನೂತನ ಮುಖ್ಯಮಂತ್ರಿ ಸಂಗ್ಮಾ ಪ್ರತಿಕ್ರಿಯಿಸಿದರು.  21 ಸ್ಥಾನಗಳಲ್ಲಿ ಜಯಗಳಿಸಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಯಿತು.


2018: ಅಗರ್ತಲಾ: ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿತು. ರಷ್ಯಾದ ಕಮ್ಯುನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದರು.  ದಕ್ಷಿಣ ತ್ರಿಪುರಾದ ಸಬ್ರೂಮ್ ಪಟ್ಟಣದ ವಾಹನ ನಿಲ್ದಾಣದಲ್ಲಿದ್ದ ಲೆನಿನ್ ಸಿಮೆಂಟ್ ಪ್ರತಿಮೆಯನ್ನು ಬಿಜೆಪಿ ಬೆಂಬಲಿಗರು ಉರುಳಿಸಿದರು. ಬೆಲೋನಿಯಾ ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ಇದ್ದ ಲೆನಿನ್ ಪ್ರತಿಮೆಯನ್ನು ಮಾರ್ಚ್ 5ರ ಸೋಮವಾರ ಉರುಳಿಸಲಾಗಿತ್ತು. ಬೆಲೋನಿಯಾದ ಪ್ರತಿಮೆ ಧ್ವಂಸದ ನಂತರ ತ್ರಿಪುರಾದ ವಿವಿಧ ಭಾಗಗಳಲ್ಲಿ ಹಿಂಸಾಚಾರ ತೀವ್ರಗೊಂಡಿತು. ರಾಜಕೀಯಪ್ರೇರಿತ ಹಿಂಸಾಚಾರ ಕುರಿತು ಬಿಜೆಪಿ ಮತ್ತು ಸಿಪಿಎಂ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದವು. ವರದಿ ಕೇಳಿದ ಕೇಂದ್ರ: ರಾಜ್ಯದ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವಾಲಯ ಅವಲೋಕನ ನಡೆಸಿದ್ದು, ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿತು.  ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ರಾಜ್ಯಪಾಲ ತಥಾಗತ ರಾಯ್ ಮತ್ತು ಡಿಜಿಪಿ .ಕೆ. ಶುಕ್ಲಾರಿಂದ ಮಾಹಿತಿ ಪಡೆದರು. ಬಿಜೆಪಿ ಪುಂಡಾಟ: ಸಿಪಿಎಂಚುನಾವಣೆ ಫಲಿತಾಂಶ ಪ್ರಕಟವಾದ ಒಂದು ತಾಸಿನೊಳಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಐಪಿಎಫ್ಟಿ ಕಾರ್ಯಕರ್ತರ ಪುಂಡಾಟ ಆರಂಭವಾಗಿದೆ. ಅವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆಎಂದು ಸಿಪಿಎಂ ಆರೋಪಿಸಿತು.  514 ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಪಕ್ಷದ ಕಾರ್ಯಕರ್ತರ 1,539 ಮನೆಗಳ ಮೇಲೆ ದಾಳಿ ನಡೆಸಲಾಗಿದೆ. 200 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸಿಪಿಎಂ ಆರೋಪಿಸಿತು.  134 ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಿ, ಲೂಟಿ ಮಾಡಲಾಗಿದೆ. 64 ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. 90 ಕಚೇರಿಗಳನ್ನು ಬಿಜೆಪಿಐಪಿಎಫ್ಟಿ ಬೆಂಬಲಿಗರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಜನ್ ಧರ್ ಆರೋಪಿಸಿದರು. ಎಲ್ಲ ಕೃತ್ಯಗಳಿಗೆ ಬಿಜೆಪಿ ಕುಮ್ಮಕ್ಕು ಇದೆ ಎಂದು ಅವರು ದೂರಿದರು.

2018: ಕೊಲಂಬೊ: ಶ್ರೀಲಂಕೆಯ ಕೇಂದ್ರ ಜಿಲ್ಲೆಯಾದ ಕ್ಯಾಂಡಿಯಲ್ಲಿ ಬೌದ್ಧರು ಮತ್ತು ಮುಸ್ಲಿಮ್ ಸಮುದಾಯದ ನಡುವೆ ತೀವ್ರ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರವು ಮಂಗಳವಾರ ದೇಶಾದ್ಯಂತ ೧೦ ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಿತು.  ಶ್ರೀಲಂಕಾದ ಕೇಂದ್ರ ಭಾಗದಲ್ಲಿರುವ ಕ್ಯಾಂಡಿ ಜಿಲ್ಲೆಯಲ್ಲಿ ಎರಡು ಕೋಮುಗಳ ನಡುವೆ ನಡೆಯುತ್ತಿರುವ ಕಲಹ ಇತರೆ ಪ್ರದೇಶಗಳಿಗೆ ಹರಡದಂತೆ ತಡೆಯುವ ಸಲುವಾಗಿ ತುರ್ತು ಪರಿಸ್ಥಿತಿ ಘೋಷಿಸಲು ಶ್ರೀಲಂಕಾ ಸಚಿವ ಸಂಪುಟ ನಿರ್ಧರಿಸಿತು ಎಂದು ವಕ್ತಾರ ದಯಾಸಿರಿ ಜಯಸೇಕರ ಮಾಧ್ಯಮಗಳಿಗೆ ತಿಳಿಸಿದರು. ‘ದೇಶದಲ್ಲಿ ಕೋಮು ಗಲಭೆ ಹರಡದಂತೆ ತಡೆಯಲು, ಸಂಪುಟದ ವಿಶೇಷ ಸಭೆ ಕರೆದು ಹತ್ತು ದಿನಗಳ ಕಾಲ ತುರ್ತುಪರಿಸ್ಥಿತಿ ಜಾರಿ ಮಾಡಲು ನಿರ್ಧರಿಸಲಾಯಿತು’ ಎಂದು ಅವರು ಹೇಳಿದರು. ಮುಸ್ಲಿಮರು ಬಲವಂತದ ಮತಾಂತರ ಹಾಗೂ ಬೌದ್ಧರ ಪ್ರಾಚೀನ ಸ್ಥಳಗಳನ್ನು ಧ್ವಂಸ ಮಾಡುತ್ತಿರುವುದಾಗಿ ಕೆಲವು ಕಟ್ಟಾ ಬೌದ್ಧ ಸಂಘಗಳು ಆರೋಪಿಸಿದ್ದು, ಈ ಬಗ್ಗೆ ಕಳೆದ ಒಂದು ವರ್ಷದಿಂದ ಬೌದ್ಧ ಮತ್ತು ಮುಸ್ಲಿಮ್ ಸಮುದಾಯದ ನಡುವೆ ಸಂಘರ್ಷಗಳು ನಡೆಯುತಿದ್ದವು.  ‘ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ಸಿಂಹಳಿಯ ಬೌದ್ಧರು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಮರ ನಡುವೆ ಸಂಘರ್ಷ ಕಳೆದ ಒಂದು ವರ್ಷದಿಂದ ನಡೆಯುತ್ತಿತ್ತು.  ಅಲ್ಪಸಂಖ್ಯಾತ ಸಮುದಾಯದವರು ಬೌದ್ಧರನ್ನು ಇಸ್ಲಾಮಿಗೆ ಮತಾಂತರ ಮಾಡುತ್ತಿದ್ದಾರೆ. ಬೌದ್ಧರ ಪುರಾತನ ಸ್ಥಳಗಳನ್ನು ನಾಶಪಡಿಸುತ್ತಿದ್ದಾರೆ’ ಎಂದು ಬೌದ್ಧ ಮತದ ತೀವ್ರಗಾಮಿಗಳ ಸಮೂಹ ಆರೋಪಿಸಿತ್ತು. ಪರಿಣಾಮವಾಗಿ ಪ್ರದೇಶದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಇದರ ಜೊತೆಗೆ ಮ್ಯಾನ್ಮಾರಿನ ರೋಹಿಂಗ್ಯಾ ಮುಸ್ಲಿಮರು ಶ್ರೀಲಂಕಾದಲ್ಲಿ ಠಿಕಾಣಿ ಹೂಡಿರುವುದಕ್ಕೂ ಕೆಲವು ಬೌದ್ಧರು ತೀವ್ರ ಅತೃಪ್ತಿ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.  ಮ್ಯಾನ್ಮಾರಿನ ರೊಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಕೆಲವು ಬೌದ್ಧ ರಾಷ್ಟ್ರೀಯವಾದಿಗಳು ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದ ನೆಲೆಯಲ್ಲಿ ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ದೇಶದ ವಿವಿಧ ಭಾಗದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರವನ್ನು ಮಟ್ಟಹಾಕುವ ಸಲುವಾಗಿ ೧೦ ದಿನಗಳ ಕಾಲ ತುರ್ತು ಪರಿಸ್ಥಿತಿ ಜಾರಿಗೊಳಿಸಲು ನಿರ್ಧರಿಸಲಾಯಿತು ಎಂದು ಸರ್ಕಾರದ ವಕ್ತಾರ ದಯಾಸಿರಿ ಜಯಸೇಕರ ಸುದ್ದಿ ಸಂಸ್ಥೆಗಳಿಗೆ ತಿಳಿಸಿದರು.  ‘ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠೋರ ಕ್ರಮ ಜರುಗಿಸಲು ಸಭೆಯಲ್ಲಿ ನಿರ್ಣಯ ತಳೆಯಲಾಯಿತು’ ಎಂದು ಜಯಸೇಕರ ನುಡಿದರು. ಫೇಸ್‌ಬುಕ್ ಮೂಲಕ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ಕ್ಯಾಂಡಿಯಲ್ಲಿ ಮುಸ್ಲಿಮರ ಮಾಲೀಕತ್ವದ ಅಂಗಡಿಗಳಿಗೆ ಕಿಡಿಗೇಡಿಗಳು ಮಾ.5ರ ಸೋಮವಾರ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ನಿಷೇದಾಜ್ಞೆ ಜಾರಿ ಮಾಡಿ, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇಶದ್ಯಾಂತ ಕಟ್ಟೆಚ್ಚರ ವಹಿಸಲಾಗಿದೆ. ಮುಸ್ಲಿಮ್ ಮಾಲೀಕತ್ವದ ಅಂಗಡಿಯೊಂದಕ್ಕೆ ಗುಂಪೊಂದು ಬೆಂಕಿ ಹಚ್ಚಿದ ಬಳಿಕ ಹಿಂಸಾಚಾರ ತಡೆಯಲು ಕ್ಯಾಂಡಿ ಜಿಲ್ಲೆಗೆ ಸೇನೆ ಮತ್ತು ವಿಶೇಷ ಪೊಲೀಸ್ ಪಡೆಯನ್ನು ಲಂಕಾ ಸರ್ಕಾರ ರವಾನಿಸಿತು. ನಿಧಾಸ್ ಟ್ರೋಫಿ ಟಿ೨೦: ನಿಧಾಸ್ ಟ್ರೀಫಿ ಟಿ೨೦ಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತದ ಕ್ರಿಕೆಟ್ ತಂಡ ಕೊಲಂಬೋಗೆ ಆಗಮಿಸಿದ್ದು, ಮಾ.6ರ ಮಂಗಳವಾರ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಮ್ಯಾಚ್ ನಡೆಯಲಿದೆ.  ಹಿಂಸಾಚಾರದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಭದ್ರತೆಯ ಖಾತ್ರಿ ನೀಡುವಂತೆ ಶ್ರೀ ಲಂಕಾ ಸರ್ಕಾರಕ್ಕೆ ಸೂಚಿಸುವಂತೆ ಭಾರತ ಸರ್ಕಾರಕ್ಕೆ ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲ ಮನವಿ ಮಾಡಿದರು.  ಮೊದಲ ಪಂದ್ಯ ನಡೆಯಬೇಕಾದ ರಾಜಧಾನಿ ಕೊಲಂಬೊದಲ್ಲಿ ಪರಿಸ್ಥಿತಿ ಚೆನ್ನಾಗಿದೆ. ಆದ್ದರಿಂದ ಪಂದ್ಯ ನಡೆಯುವ ಬಗ್ಗೆ ಆತಂಕವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದರು.

2018: ಅಗರ್ತಲ: ಭಾರತಿಯ ಜನತಾ ಪಕ್ಷವು ತನ್ನ ತ್ರಿಪುರಾ ರಾಜ್ಯ ಘಟಕದ ಅಧ್ಯಕ್ಷ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿತು. ರಾಜ ಕುಟುಂಬದ ಸದಸ್ಯ ಜಿಷ್ನು ದೇವವರ್ಮನ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಹೆಸರಿಸಲಾಯಿತು.  ಅಗರ್ತಲದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಯಿತು. ನಿತಿನ್ ಗಡ್ಕರಿ ಸೇರಿದಂತೆ ಪಕ್ಷದ ಹಲವಾರು ವರಿಷ್ಠರು ಸಭೆಯಲ್ಲಿ ಪಾಲ್ಗೊಂಡಿದ್ದರು.  ದೇಬ್ ಅವರು ಶೀಘ್ರದಲ್ಲೇ ರಾಜ್ಯಪಾಲ ತಥಾಗತ ರಾಯ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಮಾರ್ಚ್ ೮ ಗುರುವಾರ ಪ್ರಮಾಣ ವಚನ ಸಮಾರಂಭ ನಡೆಯುವ ನಿರೀಕ್ಷೆ ಇದೆ.  ಪ್ರಕಟಣೆಯ ಬಳಿಕ ಮಾಧ್ಯಮಗಳ ಜೊತೆ ಸಂಕ್ಷಿಪ್ತ ಸಂವಹನ ನಡೆಸಿದ ದೇಬ್ ಅವರು ’ತಾವು ತ್ರಿಪುರಾದಲ್ಲಿ ಉತ್ತಮ ಆಡಳಿತ ಮತ್ತು ಶಾಂತಿಯ ಭರವಸೆ ನೀಡುವುದಾಗಿ ಹೇಳಿದರು. ತ್ರಿಪುರಾ ವಿಧಾನಸಭೆಯ ೫೯ ಸ್ಥಾನಗಳ ಪೈಕಿ ೩೫ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ೨೫ ವರ್ಷಗಳ ಎಡರಂಗ ಆಳ್ವಿಕೆಗೆ ತೆರೆ ಎಳೆದಿತ್ತು. ಬಿಜೆಪಿಯ ಮಿತ್ರ ಪಕ್ಷ ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ೮ ಸ್ಥಾನಗಳನ್ನು ಗೆದ್ದಿತ್ತು. ಇದರೊಂದಿಗೆ ಬಿಜೆಪಿ ಮೈತ್ರಿಕೂಟದ ಸಂಖ್ಯಾಬಲ ೪೩ಕ್ಕೆ ಏರಿತ್ತು. ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಜಿಮ್ ತರಬೇತಿದಾರ ದೇಬ್ ಅವರನ್ನು ಮೂರು ವರ್ಷಗಳ ಹಿಂದೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ದೇವವರ್ಮನ್ ಅವರು ಮಾರ್ಚ್ ೧೨ರಂದು ಚುನಾವಣೆ ನಡೆಯಲಿರುವ ಚಾರಿಲಮ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ೫೯ರ ಹರೆಯದ ದೇವವರ್ಮನ್ ಅವರು ದೊರೆ ಪ್ರದ್ಯೋತ ಕಿಶೋರ್ ಮಾಣಿಕ್ಯ ಅವರ ಚಿಕ್ಕಪ್ಪ.

2018: ಕೋಲ್ಕತ: ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ- ಮಾರ್ಕ್ಸಿಸ್ಟ್ (ಸಿಪಿಐ-ಎಂ) ಬೆಂಬಲಿಗರ ಮೇಲಿನ ದಾಳಿಗಳನ್ನು ಮತ್ತು ತ್ರಿಪುರಾದಲ್ಲಿನ ವ್ಲಾಡಿಮೀರ್ ಲೆನಿನ್ ಪ್ರತಿಮೆ ಧ್ವಂಸವನ್ನು ತಾವು ಸಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಲ್ಲಿ ಹೇಳಿದರು. ‘ಕಾರ್ಲ್ ಮಾರ್ಕ್ಸ್ ಅಥವಾ ಮೊಹಮತಿ (ಮಹಾನ್) ಲೆನಿನ್ ಅವರು ನನ್ನ ನಾಯಕರಲ್ಲ. ಆದರೆ ಅವರು ರಷ್ಯಾದಲ್ಲಿ ಗೌರವಾನ್ವಿತರು. ಈ ಜಗತ್ತಿನ ವಿವಿಧ ಕಡೆಗಳಲ್ಲಿ ಮತ್ತು ವಿವಿಧ ದೇಶಗಲಲ್ಲಿ ವಿವಿಧ ಮಂದಿ ನಾಯಕರಾಗಿದ್ದಾರೆ. ಆದರೆ ನೀವು (ಬಿಜೆಪಿ) ಅಧಿಕಾರಕ್ಕೆ ಬಂದಿದ್ದೀರಿ ಎಂಬ ಮಾತ್ರಕ್ಕೆ ನಿಮಗೆ ಮಾರ್ಕ್ಸ್ ಅಥವಾ ಲೆನಿನ್ ಪ್ರತಿಮಗೆಳನ್ನು ಧ್ವಂಸಗೊಳಿಸುವ ಅಧಿಕಾರವಿಲ್ಲ ಎಂದು ಬ್ಯಾನರ್ಜಿ ಬಂಕುರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಗುಡುಗಿದರು. ‘ವಾಸ್ತವವಾಗಿ ನಿಮಗೆ (ಬಿಜೆಪಿ) ಗಾಂಧೀಜಿ, ಮಾರ್ಕ್ಸ್, ಲೆನಿನ್, ಸ್ವಾಮಿ ವಿವೇಕಾನಂದ ಅಥವಾ ನೇತಾಜಿ (ಸುಭಾಶ್ ಚಂದ್ರ ಬೋಸ್) ಪ್ರತಿಮೆಗಳನ್ನು ನಾಶ ಪಡಿಸುವ ಹಕ್ಕಿಲ್ಲ ಎಂದು ಮಮತಾ ಹೇಳಿದರು.  ಸಿಪಿಐ(ಎಂ) ಕಾರ್ಯಕರ್ತರ ಮೇಲಿನ ಹಲ್ಲೆಗಳಲ್ಲು ಖಂಡಿಸಿದ ಅವರು ’ಯಾವುದೋ ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವಂತಿಲ್ಲ ಎಂದು ಅವರು ನುಡಿದರು.  ‘ಅವರು (ಬಿಜೆಪಿ) ಹಿಂಸಾತ್ಮಕ ಪರಿಸರವನ್ನು (ತ್ರಿಪುರಾದಲ್ಲಿ) ಸೃಷ್ಟಿಸಿದ್ದಾರೆ. ಅವರು ಎಲ್ಲವನ್ನೂ ಧ್ವಂಸಗೊಳಿಸುತ್ತಿದ್ದಾರೆ. ಬೇರೆಯವರು ಪ್ರತಿಭಟಿಸುತ್ತಿದ್ದಾರೋ ಇಲ್ಲವೋ ಎಂದು ನಾನು ಲೆಕ್ಕಿಸುವುದಿಲ್ಲ. ಆದರೆ ನಾನು ಪ್ರತಿಭಟಿಸುತ್ತೇನೆ. ಸಿಪಿಐ(ಎಂ) ಜೊತೆಗೆ ನನಗೆ ಸೈದ್ಧಾಂತಿಕ ಜಗಳವಿದೆ, ಅದು ಮುಂದುವರೆಯುತ್ತದೆ ಕೂಡಾ. ಸಿಪಿಐ(ಎಂ) ದಾಳಿಗಳನ್ನು ನಾನು ವಿರೋಧಿಸಿದ್ದೇನೆ. ಈಗ ನಾನು ಬಿಜೆಪಿ ದಾಳಿಗಳನ್ನೂ ಪ್ರತಿಭಟಿಸುತ್ತೇನೆ ಎಂದು ಮಮತಾ ಹೇಳಿದರು. ರಾಜ್ಯದಲ್ಲಿ ಟಿಎಂಸಿ ಕಾರ್‍ಯಕರ್ತರು ಸಿಪಿಐ(ಎಂ) ನ್ನು ದಾಳಿಯ ಗುರಿಗಳನ್ನಾಗಿ ಮಾಡಿಕೊಂಡಿಲ್ಲ ಎಂದು ನುಡಿದ ಮುಖ್ಯಮಂತ್ರಿ, ತಮ್ಮ ಮುಂದಿನ ಹೆಜ್ಜೆ ಬಂಗಾಳ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿ ’ಬಿಜೆಪಿ ಬಂಗಾಳವನ್ನು ಗುರಿಯಾಗಿಟ್ಟುಕೊಂಡರೆ, ಬಂಗಾಳವು ಲಾಲ್ ಖಿಲಾವನ್ನು (ಕೆಂಪು ಕೋಟೆ) ಗುರಿಯನ್ನಾಗಿ ಮಾಡಿಕೊಳ್ಳುವುದು ಎಂದು ಸವಾಲು ಹಾಕಿದರು. ‘ನಮಗೆ ಅಧಿಕಾರ ಹಿಡಿಯುವುದರಲ್ಲಿ ಆಸಕ್ತಿ ಇಲ್ಲ. ಆದರೆ ಇತರ ಪಕ್ಷಗಳು (ಬಿಜೆಪಿಯೇತರ) ಅಧಿಕಾರ ಪಡೆಯುವ ಬಗ್ಗೆ ನಾವು ಖಾತರಿ ನೀಡುತ್ತೇವೆ ಎಂದು ಹೇಳುವ ಮೂಲಕ ಪ್ರಾದೇಶಿಕ ಮೈತ್ರಿಕೂಟ ರಚಿಸುವ ತಮ್ಮ ಇತ್ತೀಚಿನ ವರಸೆಯ ಬಗ್ಗೆ ಸುಳಿವು ನೀಡಿದರು.

2018: ನವದೆಹಲಿ: ರಾಷ್ಟ್ರದ ರಾಜಧಾನಿಯ ವಿಸ್ತರಣೆಯ ಯತ್ನಕ್ಕೆ ಮಿತಿ ಹಾಕುವುದಕ್ಕೆ (ಸೀಲಿಂಗ್ ಡ್ರೈವ್) ರಕ್ಷಣೆ ಒದಗಿಸುವ  ಉದ್ದೇಶದ ದೆಹಲಿ ಮಾಸ್ಟರ್ ಪ್ಲಾನ್ ೨೦೧೨೧ಕ್ಕೆ ತಿದ್ದುಪಡಿ ಮಾಡುವ ವಿಚಾರದಲ್ಲಿ ಮುಂದುವರೆಯದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.  ದೆಹಲಿ ಸರ್ಕಾರವಾಗಲೀ, ದೆಹಲಿ ಅಭಿವೃದ್ಧಿ ಪ್ರಾಧಿಕಾರವಾಗಲೀ (ಡಿಡಿಎ) ಅಥವ್ತಾ ದೆಹಲಿ ಮುನಿಸಿಪಲ್ ಕಾಪೋರೇಷನ್ ಆಗಲೀ ನಗರದ ಮಾಸ್ಟರ್ ಪ್ಲಾನಿಗೆ ತಿದ್ದುಪಡಿ ಸೂಚಿಸುವ ಮುನ್ನ ಪರಿಸರದ ಮೇಲಾಗುವ ಪರಿಣಾಮದ ಅಂದಾಜು ಮಾಡಲಾಗಿದೆಯೇ ಎಂಬ ಬಗ್ಗೆ ಅಫಿಡವಿಟ್ (ಪ್ರಮಾಣಪತ್ರ) ಸಲ್ಲಿಸದೇ ಇರುವುದಕ್ಕೆ ಸುಪ್ರೀಂಕೋರ್ಟ್ ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿತು.  ‘ಇದು ನಿಂದನೆ, ನ್ಯಾಯಾಲಯ ನಿಂದನೆಗಿಂತ ಕಡಿಮೆಯಲ್ಲ. ಇಂತಹ ’ದಾದಾಗಿರಿ ನಿಲ್ಲಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಬಿ. ಲೋಕುರ್ ಮತ್ತು ದೀಪಕ್ ಗುಪ್ತ ಅವರನ್ನು ಒಳಗೊಂಡ ಪೀಠ ಹೇಳಿತು.  ಸರ್ವೋಚ್ಚ ನ್ಯಾಯಾಲಯವು ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮ ಮತ್ತು ಮುನಿಸಿಪಲ್ ಕೌನ್ಸಿಲರ್ ಗುಂಜನ್ ಗುಪ್ತ ಅವರನ್ನು ವಿಷಯಕ್ಕೆ ಸಂಬಂಧಿಸಿದಂತೆ ದೋಷಮುಕ್ತರನ್ನಾಗಿ ಮಾಡಿತು.  ಸೀಲಿಂಗ್ ಡ್ರೈವ್ ಕಾರ್ಯಗತಗೊಳಿಸುವಲ್ಲಿ ಅಧಿಕಾರಿಗಳಿಗೆ ಅಡ್ಡಿ ಉಂಟು ಮಾಡಿದ ಆರೋಪದಲ್ಲಿ ನ್ಯಾಯಾಲಯ ನಿಂದನೆ ನೋಟಿಸ್ ಗಳನ್ನು ಈ ಹಿಂದೆ ನ್ಯಾಯಾಲಯವು ಇವರಿಬ್ಬರ ವಿರುದ್ಧ ಜಾರಿ ಮಾಡಿತ್ತು.  ಪ್ರತಿಭಟನೆಯ ವಿಡಿಯೋ ದೃಶ್ಯಗಳಿರುವ ಸಿಡಿಯನ್ನು ಪೀಠವು ಪರಿಶೀಲಿಸಿದೆ. ಅದರಲ್ಲಿ ಶರ್ಮ ಮತ್ತು ಗುಪ್ತ ಅವರು ಅಧಿಕಾರಿಗಳಿಗೆ ಅಡ್ಡಿ ಉಂಟು ಮಾಡುವಂತೆ ಕಂಡು ಬರುತ್ತಿಲ್ಲ ಎಂದು ಪೀಠವು ಹೇಳಿತು.  ಏನಿದ್ದರೂ, ವಿಡಿಯೋದಲ್ಲಿ ಬಳಸಲಾಗಿರುವ ಅವಹೇಳನಕಾರಿ ಭಾಷೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಪೀಠವು ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಪ್ರತಿಭಟನಕಾರರು ಅವಮಾನಿಸಿದ್ದಾರೆ ಎಂದು ಹೇಳಿತು. ‘ನೀವು ಪ್ರಧಾನಿಯನ್ನಾಗಲೀ, ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನಾಗಲೀ  ಅವರು ಕೇವಲ ನಿಮ್ಮ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕಾಗಿ ಅವಮಾನ ಮಾಡಲಾಗದು. ನೀವು ಅವರಿಗೆ ಗೌರವ ತೋರಿಸಬೇಕು ಎಂದು ಪೀಠವು ಹೇಳಿತು.  ‘ನೀವು ಸಂಸ್ಥೆಯನ್ನು ನಾಶ ಪಡಿಸುತ್ತಿದ್ದೀರಿ. ಇದನ್ನು ಅಂಗೀಕರಿಸಲು ಸಾಧ್ಯವೇ ಇಲ್ಲ. ಈದಿನ ನೀವು ದೆಹಲಿ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯನ್ನು ಅವಮಾನಿಸುತ್ತಿದ್ದೀರಿ. ನಾಳೆ ನೀವು ಒಂದು ರಾಜ್ಯದ ಮುಖ್ಯಮಂತ್ರಿಯನ್ನು, ಬಳಿಕ ರಾಷ್ಟ್ರದ ಪ್ರಧಾನಿಯನ್ನು ಅವಮಾನಿಸುತ್ತೀರಿ ಎಂದು ಪೀಠ ಹೇಳಿತು.  ಮಾಸ್ಟರ್ ಪ್ಲಾನ್ ೨೦೧೨೧ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ  ಒಟ್ಟಾರೆ ಅಭಿವೃದ್ಧಿಗಾಗಿ ನಗರ ಯೋಜನೆ ಮತ್ತು ವಿಸ್ತರಣೆಯ ನೀಲನಕ್ಷೆಯಾಗಿದೆ. ವಸತಿ ನಿವೇಶನಗಳಿಗೆ ಸರಿಸಮವಾಗಿ ಅಂಗಡಿ -ಕಮ್ - ವಸತಿ ನಿವೇಶನಗಳ ಫ್ಲೋರ್ ಏರಿಯಾ ರೇಷಿಯೋವನ್ನು (ಎಫ್ ಎ ಆರ್) ಏಕರೂಪವನ್ನಾಗಿ ಮಾಡಲು ಪ್ರಸ್ತಾಪಿತ ತಿದ್ದುಪಡಿಯು ಉದ್ದೇಶಿಸಿತ್ತು.  ಕೋರ್ಟ್ ಸಹಾಯಕರಾಗಿರುವ (ಅಮಿಕಸ್ ಕ್ಯೂರಿ) ಹಿರಿಯ ವಕೀಲ ರಂಜಿತ್ ಕುಮಾರ್ ಅವರು ಸೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ವರದಿಯನ್ನು ಗಮನಿಸಿ ತಮ್ಮ ಅಫಿಡವಿಟ್ ಗಳನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿತು. ಸೀಲಿಂಗ್ ಪ್ರಕ್ರಿಯೆಗೆ ಶರ್ಮ ಮತ್ತು ಕೌನ್ಸಿಲರ್ ಗುಪ್ತ ಅವರ ಪ್ರಚೋದನೆಯಿಂದ ಪ್ರತಿಭಟನಕಾರರು ತಮ್ಮ ಕರ್ತವ್ಯ ನಿರ್ವಹಿಸದಂತೆ ಅಧಿಕಾರಿಗಳಿಗೆ ಅಡ್ಡಿ ಉಂಟು ಮಾಡಿದರು ಎಂಬುದಾಗಿ ಕೋರ್ಟ್ ಮೇಲ್ವಿಚಾರಣೆಯ ಉಸ್ತುವಾರಿ ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ಪೀಠ ಈ ಹಿಂದೆ ಗಂಭೀರವಾಗಿ ಪರಿಗಣಿಸಿತ್ತು.  ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವುದಕ್ಕೆ ಸಂಬಂಧಿಸಿದ ಕಾನೂನಿನ ಆಡಳಿತ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಹೇಳಿದ್ದ ನ್ಯಾಯಾಲಯ ಅಕ್ರಮ ಕಟ್ಟಡ ನಿರ್ಮಾಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿತ್ತು.  ಕಾನೂನು ಉಲ್ಲಂಘಿಸಿದ ಕಟ್ಟಡಗಳನ್ನು ಗುರುತಿಸಿ ಮೊಹರು ಮಾಡುವಂತೆ ಕೋರ್ಟಿನ ಉಸ್ತುವಾರಿ ಸಮಿತಿಗೆ ಪೀಠವು ಆದೇಶ ನೀಡಿತ್ತು. ಚುನಾವಣಾ ಆಯೋಗದ ಮಾಜಿ ಸಲಹೆಗಾರ ಕೆ.ಜೆ. ರಾವ್, ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್, ಮೇಜರ್ ಜನರಲ್ (ನಿವೃತ್ತ) ಸೋಮ್ ಜಿಂಗನ್ ಅವರನ್ನು ಒಳಗೊಂಡ ಉಸ್ತುವಾರಿ ಸಮಿತಿಯನ್ನು ಸುಪ್ರೀಂಕೋರ್ಟ್ ೨೦೦೬ರ ಮಾರ್ಚ್ ೨೪ರಂದು ನೇಮಿಸಿತ್ತು.

2018: ನವದೆಹಲಿ: ನ್ಯಾಯಾಲಯ ಕೊಠಡಿಯಲ್ಲಿ ಸಿಬಿಐ ಮತ್ತು ಕಾರ್ತಿ ಅವರ ವಕೀಲರ ನಡುವೆ ಇನ್ನೊಂದು ಸುತ್ತಿನ ತೀವ್ರ ವಾಗ್ವಾದದ ಬಳಿಕ ಕಾರ್ತಿ ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ದೆಹಲಿ ಕೋರ್ಟ್ ಇನ್ನೂ ಮೂರು ದಿನಗಳ ಅವಧಿಗೆ ವಿಸ್ತರಿಸಿತು. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ ೯ಕ್ಕೆ ಮುಂದೂಡಿತು.  ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾತ್ರಿ ಚಿದಂಬರಂ ಅವರು ಫೆಬ್ರುವರಿ ೨೮ರಿಂದ ಸಿಬಿಐ ಕಸ್ಟಡಿಯಲ್ಲಿ ಇದ್ದಾರೆ. ಸಿಬಿಐ ಪರ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ಮೊಹರಾದ ಲಕೋಟೆಯಲ್ಲಿ ಹೊಸ ಸಾಕ್ಷ್ಯಾಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ನ್ಯಾಯಾಲಯವು ಕಾರ್ತಿ ಚಿದಂಬರಂ ಕಸ್ಟಡಿಯನ್ನು ವಿಸ್ತರಿಸಿತು.  ‘ಹೊಸ ಸಾಕ್ಷ್ಯಾದಾರವು ಹೊಸ ಕಂಪೆನಿಯನ್ನು ಮುನ್ನೆಲೆಗೆ ತಂದಿದೆ ಮತ್ತು ಡಾಲರುಗಳಲ್ಲಿ ಜಾಗತಿಕ ವಹಿವಾಟು ನಡೆದಿದೆ ರೂಪಾಯಿಗಳಲ್ಲಿ ಅಲ್ಲ ಎಂದು ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು. ‘ಸಾಕ್ಷ್ಯಾಧಾರ ವಾಸ್ತವಿಕವಾದುದಾಗಿದ್ದು ಕಾರ್ತಿ ಅವರನ್ನು ವಿಚಾರಣಾ ಸಂಸ್ಥೆಗೆ ಇನ್ನೂ ಒಂಬತ್ತು ದಿನಗಳ ಅವಧಿಗೆ ಒಪ್ಪಿಸಲು ನ್ಯಾಯಾಲಯವನ್ನು ತೃಪ್ತಿಪಡಿಸಬಲ್ಲುದು ಎಂದು ಮೆಹ್ತ ಹೇಳಿದರು. ‘ನಮಗೆ ನೀಡಲಾಗಿರುವ ಕಸ್ಟಡಿಯ ಅವಧಿಯಲ್ಲಿ ಸಾಕಷ್ಟು ಮಹತ್ವದ ಪ್ರಗತಿಯನ್ನು ನಾವು ಮಾಡಿದ್ದೇವೆ. ಇಂತಹ ಇನ್ನಷ್ಟು ಸಾಕ್ಷ್ಯಧಾರಗಳನ್ನು ಇಟ್ಟುಕೊಂಡು ಅವರನ್ನು ವಿಚಾರಣೆಗೆ ಗುರಿಪಡಿಸು ನಮಗೆ ಇನ್ನೂ ಒಂಬತ್ತು ದಿನಗಳ ಕಸ್ಟಡಿ ಬೇಕು ಎಂದು ಮೆಹ್ತ ನುಡಿದರು. ‘ಕಾರ್ತಿ ಅವರು ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುತ್ತಿಲ್ಲ. ಅವರು ನೀಡುತ್ತಿರುವ ಏಕೈಕ ಉತ್ತರ ’ನನ್ನನ್ನು ರಾಜಕೀಯವಾಗಿ ಗುರಿ ಇಡಲಾಗಿದೆ ಎಂಬುದು ಮಾತ್ರ ಎಂದೂ ಮೆಹ್ತ ಹೇಳಿದರು. ಕಾರ್ತಿ ಚಿದಂಬರಂ ಅವರ ಚಾರ್ಟರ್ಡ್ ಅಕೌಂಟೆಂಟ್ ಅವರ ಹಾರ್ಡ್ ಡಿಸ್ಕ್ ನಲ್ಲಿ ಕೆಲವು ವಿಲ್ ಗಳು ಲಭಿಸಿವೆ. ಇವುಗಳಲ್ಲಿ ಕಾರ್ತಿ ಚಿದಂಬರಂ ಅವರು ಅಡ್ವಾಂಟೇಜ್ ಸ್ಟ್ರಾಟಜಿಕ್ ಪ್ರೈವೇಟ್ ಲಿಮಿಟೆಡ್ ನ ಕೆಲವು ಶೇರುಗಳನ್ನು ಕಾರ್ತಿ ಅವರ ಪುತ್ರಿಗೆ ನೀಡಲಾಗಿದೆ ಎಂದು ತೋರಿಸಲಾಗಿದೆ. ಆದರೆ ಕಾರ್ತಿ ಅವರು ತಮಗೂ ಅಡ್ವಾಂಟೇಜ್ ಸ್ಟ್ರಾಟಜಿಕ್ ಪ್ರೈವೇಟ್ ಲಿಮಿಟೆಡ್ ಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಪ್ರತಿಪಾದಿಸಿದ್ದಾರೆ ಎಂದು ಎಎಸ್ ಜಿ ಮೆಹ್ತ ಅವರು ವಿಚಾರಣೆ ಕಾಲದಲ್ಲಿ ತಿಳಿಸಿದರು.  ಹಿಂದಿನ ವಿಚಾರಣೆ ಕಾಲದಲ್ಲಿ ಸಿಬಿಐ ಇಂದ್ರಾಣಿ ಮುಖರ್ಜಿ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಸಿಬಿಐ ನ್ಯಾಯಾಲಯಕ್ಕೆ ನೀಡಿತ್ತು. ಐಎನ್ ಎಕ್ಸ್ ಮೀಡಿಯಾ ಕ್ಕೆ ಎಫ್ ಐ ಪಿಬಿ ಅನುಮೋದನೆ ದೊರಕಿಸುವ ಸಂಬಂಧವಾಗಿ ಚರ್ಚಿಸಲು ತಾನು ತನ್ನ ಪತಿ ಪೀಟರ್ ಮುಖಜಿ ಜೊತೆಗೆ ಕಾರ್ತಿ ಅವರನ್ನು ಭೇಟಿಯಾಗಿದ್ದುದಾಗಿಯೂ ಮತ್ತು ಈ ಸಂದರ್ಭದಲ್ಲಿ ೭ ಲಕ್ಷ ಡಾಲರ್ ಗಳನ್ನು ನೀಡಿದ್ದುದಾಗಿಯೂ ಈ ಹೇಳಿಕೆಯಲ್ಲಿ ಇಂದ್ರಾಣಿ ಮುಖರ್ಜಿ ತಿಳಿಸಿದ್ದರು. ಏನಿದ್ದರೂ, ಇಂದ್ರಾಣಿ ಹೇಳಿಕೆ ಒಂದನ್ನಷ್ಟೇ ಆಧರಿಸಿ ಕಾರ್ತಿ ಕಸ್ಟಡಿಯನ್ನು ಕೇಳುತ್ತಿಲ್ಲ. ಇದು ಇತರ ಸಾಕ್ಷ್ಯಾಧಾರಗಳ ಒಂದು ಭಾಗ ಮಾತ್ರ ಎಂದೂ ಸಿಬಿಐ ಪ್ರತಿಪಾದಿಸಿತ್ತು. ಸಿಬಿಐ ಪತ್ತೆ ಹಚ್ಚಿರುವ ಸಾಕ್ಷ್ಯಗಳು ಕಾರ್ತಿ ಅವರನ್ನು ಸಿಬಿಐ ಕಸ್ಟಡಿಯಲ್ಲಿ ಮುಂದುವರೆಸಲು ಕಾರಣಗಳಾಗುವುದಿಲ್ಲ ಎಂದು ವಾದಿಸಿದ ಕಾರ್ತಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ’ಇದು ಸಿಬಿಐಯ ರಕ್ತದಾಹ ಎಂದು ಕರೆದಿದ್ದರು. ಏಜೆನ್ಸಿಯು ಬೆಳಗ್ಗೆ ೯ರಿಂದ ಸಂಜೆ ೬ರ ವರೆಗೆ ಪ್ರತಿದಿನ ವಿಚಾರಣೆ ನಡೆಸಿದಲ್ಲಿ ಕಸ್ಟಡಿ ಮೂಲಕ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದೂ ಸಿಂಘ್ವಿ ವಾದಿಸಿದರು.  ‘ಕಸ್ಟಡಿ ಇಲ್ಲದೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಲು  ಕಾರ್ತಿ ಅವರೇನೂ ಬಾಂಬ್ ಹೊಂದಿರುವ ಭಯೋತ್ಪಾದಕನಲ್ಲ ಎಂದೂ ಸಿಂಘ್ವಿ ವಾದಿಸಿದ್ದರು.  ಈದಿನ ಕಾರ್ತಿ ಪರ ಜಾಮೀನು ಅರ್ಜಿಯನ್ನೂ ಅವರು ಸಲ್ಲಿಸಿದ್ದರು.  ಸಮನ್ಸ್ ರದ್ದಿಗೆ ಸುಪ್ರೀಂ ನಕಾರ: ಇದಕ್ಕೆ ಮುನ್ನ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಸಮನ್ಸ್ ರದ್ದುಗೊಳಿಸಬೇಕೆಂದು ಕೋರಿ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಈದಿನ ತಿರಸ್ಕರಿಸಿತ್ತು.  ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಷರತ್ತುಗಳನ್ನು ಉಲ್ಲಂಘಿಸಿ ಮಾರಿಷಸ್‌ನಿಂದ ಹೂಡಿಕೆ ಮಾಡಿರುವ ಪ್ರಕರಣದಲ್ಲಿ ತೆರಿಗೆ ವಂಚನೆ ತನಿಖೆ ಮೇಲೆ ಪ್ರಭಾವ ಬೀರಲು ಕಾರ್ತಿ ಮುಂದಾಗಿದ್ದರು. ಅದಕ್ಕಾಗಿ ಅವರು ಐಎನ್‌ಎಕ್ಸ್ ಮೀಡಿಯಾದಿಂದ ಹಣ ಪಡೆದುಕೊಂಡಿರುವ ಬಗ್ಗೆ ರಾಷ್ಟ್ರೀಯ ತನಿಖಾ ತಂಡವು ವಿಚಾರಣೆ ಕೈಗೊಂಡಿತ್ತು.
2018: ಮಾಸ್ಕೊ: ರಷ್ಯಾದ ವಿಮಾನವು ಸಿರಿಯಾದಲ್ಲಿ ಪತನಗೊಂಡಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ಹೇಳಿತು. ವಿಮಾನದಲ್ಲಿನ ತಾಂತ್ರಿಕ ದೋಷದಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿತು. ಸಿರಿಯಾ ಗಡಿ ಸಮೀಪದ ಲಟಾಕಿಯದ ಮೆಯ್ಮಿಮ್ ವಾಯುನೆಲೆ ಬಳಿ ವಿಮಾನ ಪತನಗೊಂಡಿತು. ವಿಮಾನದಲ್ಲಿದ್ದ ಒಟ್ಟು 26 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಮೃತರಾಗಿದ್ದಾರೆ ಎಂದು ವರದಿ ಹೇಳಿತು.  ಲತಾಕಿಯಾ ಪ್ರಾಂತ್ಯದಲ್ಲಿರುವ ಮೆಮಿನ್ವಾಯು ನೆಲೆಯ ಸಮೀಪ ವಿಮಾನ ಪತನಗೊಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿತು.
2018: ಮುಂಬೈ: ಬಾಲಿವುಡ್ ಹಿರಿಯ ಪೋಷಕ ನಟಿ ಶಮ್ಮಿ (89) ನಿಧನರಾದರು. ಸುಮಾರು 200ಕ್ಕೂ ಅಧಿಕ ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಕೆಲ ಕಾಲದಿಂದ ಅಸ್ವಸ್ಥರಾಗಿದ್ದರು. ನಿರ್ಮಾಪಕ ದಿ.ಸುಲ್ತಾನ್ ಅಹ್ಮದ್ ಅವರ ಪತ್ನಿಯಾದ, ಪಾರ್ಸಿ ಸಮುದಾಯದ ಶಮ್ಮಿ ಅವರ ಮೂಲ ಹೆಸರು ನರ್ಗಿಸ್. ಶಮ್ಮಿ ಆಂಟಿ ಎಂದೇ ಖ್ಯಾತರಾಗಿದ್ದ ಅವರು, ‘ದೇಖ್ ಭಾಯಿ ದೇಖ್ ಹಾಗೂಶ್ರೀಮಾನ್ ಶ್ರೀಮತ್ ಚಿತ್ರಗಳಿಂದ ಹೆಚ್ಚು ಜನಪ್ರಿಯರಾಗಿದ್ದರು. ‘ಶಮ್ಮಿ ಅವರ ನಿಧನದಿಂದ ಏನೊ ಕಳೆದುಕೊಂಡಂತಾಗಿದೆ. ಅವರು ನಮ್ಮ ಕುಟುಂಬದ ನಿಕಟವರ್ತಿಯಾಗಿದ್ದರುಎಂದು ಹಿರಿಯ ನಟ ಅಮಿತಾಭ್ ಬಚ್ಚನ್ ಶೋಕ ವ್ಯಕ್ತ ಪಡಿಸಿದರು.


2008:  `ಮೇಘವೇ ಮೇಘವೇ' ಚಿತ್ರತಂಡವು ಉಕ್ಕಿನಹಕ್ಕಿಯಲ್ಲಿ ಕುಳಿತು ಮೇಘಗಳ ನಡುವೆಯೇ ಧ್ವನಿಸುರುಳಿ ಬಿಡುಗಡೆ ಮಾಡಿ, ಹೊಸ ಅಧ್ಯಾಯ ಬರೆಯಿತು. ಮೋಡಗಳ 
ನಡುವೆಯೇ ಧ್ವನಿಸುರುಳಿ ಹಾಗೂ ಸಿ.ಡಿ. ಬಿಡುಗಡೆ ಮಾಡುವ ತಮ್ಮ ಕನಸನ್ನು ನಿರ್ದೇಶಕ ನಾಗೇಂದ್ರ ಪ್ರಸಾದ್ ಮುಂದಿಟ್ಟಾಗ ಅದಕ್ಕೆ ಸ್ಪಂದಿಸಿದ ನಿರ್ಮಾಪಕ ಎಚ್.ಬಿ.ರಘುಕುಮಾರ್, `ಏರ್ ಡೆಕ್ಕನ್' ವಿಮಾನವೊಂದನ್ನು ಬಾಡಿಗೆಗೆ ಪಡೆದು, ಬೆಂಗಳೂರಿನ ನೆತ್ತಿಯ ಮೇಲೆ ಅದನ್ನು ಹಾರಿಸಿ, ಮೋಡಗಳ ನಡುವೆ ಧ್ವನಿಸುರುಳಿ ಅನಾವರಣಗೊಳಿಸಿ ತಮ್ಮ ನಿರ್ದೇಶಕನ ಕನಸನ್ನು ನನಸಾಗಿಸಿದರು.

2008: ಗ್ರಾಮಸ್ಥರ, ಸಂಘ ಸಂಸ್ಥೆಗಳ ವ್ಯಾಪಕ ಪ್ರತಿರೋಧದಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಉದ್ದೇಶಿತ ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂ ಎಸ್ ಇ ಜೆಡ್) ಮೊದಲ ಹಂತದ ಯೋಜನೆಗೆ ಮಾತ್ರ ತಜ್ಞರ ಸಮಿತಿಯ ಹಸಿರು ನಿಶಾನೆ ಸಿಕ್ಕಿತು. ಎರಡನೆಯ ಹಂತದ ಯೋಜನೆಗೆ ಭೂಸ್ವಾಧೀನ ಪ್ರಕಿಯೆಗೆ ತಡೆ ನೀಡಲಾಯಿತು. ಎಂ ಎಸ್ ಇ ಜೆಡ್ ರಚನೆಗೆ ಅಗತ್ಯವಾದ ಭೂಮಿ ಸ್ವಾಧೀನವನ್ನು ಬಲವಾಗಿ ವಿರೋದಿಸಿದ ಯೋಜನಾ ವ್ಯಾಪ್ತಿಯ ಗ್ರಾಮಗಳಾದ ಪೆರ್ಮುದೆ, ತೆಂಕ ಎಕ್ಕಾರು, ಕುತ್ತೆತ್ತೂರು ಹಾಗೂ ದೇಲಂತಬೆಟ್ಟು ಮತ್ತಿತರ ಹಳ್ಳಿಗಳ ಕೃಷಿಕರನ್ನು ಒಳಗೊಂಡ `ಕೃಷಿಭೂಮಿ ಸಂರಕ್ಷಣಾ ಸಮಿತಿ' ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿತ್ತು. ಕೃಷಿಕರ ಈ ಸಮಿತಿಯ ವಾದವನ್ನು ಎತ್ತಿಹಿಡಿದ ಮೂಲಸೌಕರ್ಯ ಅಭಿವೃದ್ಧಿಯ ತಜ್ಞರ ಸಮಿತಿ ಈ ಬಗ್ಗೆ ಕಳೆದ ಫೆಬ್ರುವರಿ 27 ರಂದು ಸಭೆ ನಡೆಸಿ ಯೋಜನೆಯ ಪ್ರಥಮ ಹಂತಕ್ಕೆ ಮಾತ್ರ ಶಿಫಾರಸು ಮಾಡಿತು ಎಂದು ಸುದ್ದಿ ಮೂಲಗಳು ತಿಳಿಸಿದವು.

2008: ಬೆಂಗಳೂರು ನಗರದಲ್ಲಿ ಎರಡು ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುವುದು ಆರ್ಥಿಕ ದೃಷ್ಟಿಯಿಂದ ಕಾರ್ಯ ಸಾಧುವಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟಿಗೆ ತಿಳಿಸಿತು. ದೇವನಹಳ್ಳಿ ವಿಮಾನನಿಲ್ದಾಣದ ಕಾಮಗಾರಿಯೊಂದಕ್ಕೇ 45 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಈ ವಿಮಾನ ನಿಲ್ದಾಣದ ಜೊತೆಗೆ ಎಚ್ ಎ ಎಲ್ ನಿಲ್ದಾಣವೂ ಕಾರ್ಯನಿರ್ವಹಿಸಿದರೆ ಎರಡನ್ನೂ ಒಟ್ಟೊಟ್ಟಿಗೆ ನಿರ್ವಹಿಸುವುದು ಕಷ್ಟವಾಗುತ್ತದೆ. 8-10 ವರ್ಷ ಗತಿಸಿದರೂ ಈ ಕಾಮಗಾರಿಯ ಹಣ ವಾಪಸು ಬರಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರಿ ವಕೀಲ ಅರವಿಂದ ಕುಮಾರ್ ತಿಳಿಸಿದರು. ಎಚ್ ಎ ಎಲ್ ವಿಮಾನನಿಲ್ದಾಣದಿಂದ ತೆರಳುತ್ತಿದ್ದ ಎಲ್ಲ ವಿಮಾನಗಳು ಇನ್ನು ದೇವನಹಳ್ಳಿಯ ನಿಲ್ದಾಣದಿಂದ ತೆರಳುವುದಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಅನೇಕ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅವರು ಈ ವಾದ ಮಂಡಿಸಿದರು.

2008: ಶಾಲಾ ಬಾಲಕನೊಬ್ಬನನ್ನು ಸಲಿಂಗಕಾಮಕ್ಕೆ ಬಳಸಿಕೊಂಡ ಆರೋಪದಿಂದ ಮುಕ್ತಿ ಪಡೆದ ಸಿದ್ದಗಂಗಾ ಮಠದ ಗೌರಿಶಂಕರ ಸ್ವಾಮೀಜಿ ಈದಿನ ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ನಿರ್ದೋಷಿ ಮತ್ತು ಆರೋಪ ಮುಕ್ತ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.

2008: ನ್ಯಾಯಾಧೀಶರು ಹಾಗೂ ನ್ಯಾಯಾಂಗ ಅಧಿಕಾರಿಗಳು, ಅವರು ಕೆಲಸ ನಿರ್ವಹಿಸಿರುವ ಹಾಗೂ ಅದಕ್ಕಿಂತ ಕೆಳಹಂತದ ಕೋರ್ಟುಗಳಲ್ಲಿ ತಮ್ಮ ನಿವೃತ್ತಿಯ ನಂತರ ವಕೀಲಿ ವೃತ್ತಿ ನಡೆಸಬಾರದು ಎಂಬುದಾಗಿ ಭಾರತೀಯ ವಕೀಲರ ಪರಿಷತ್ತು ಮಾಡಿದ ನಿಯಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಭಾರತೀಯ ವಕೀಲರ ಪರಿಷತ್ತಿನಿಂದ ಜಾರಿಯಾಗಿರುವ ಈ ನಿಯಮವನ್ನು ರದ್ದು ಮಾಡುವಂತೆ ನಿವೃತ್ತ ನ್ಯಾಯಾಂಗ ಅಧಿಕಾರಿ ವಿ.ಪದ್ಮನಾಭ ಕೆದಿಲಾಯ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಈ ಆದೇಶ ಹೊರಡಿಸಿದರು.

2008: ಅಮೆರಿಕದ ಫೋಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲರ್ ಮಿತ್ತಲ್ನ ಮಾಲೀಕ ಲಕ್ಷ್ಮಿ ಮಿತ್ತಲ್ 45 ಶತಕೋಟಿ ಡಾಲರುಗಳ ಒಡೆಯನಾಗಿ ಮೊದಲ ಸ್ಥಾನ ಗಳಿಸಿದರು. ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲರ್ಸ್ ಮಿತ್ತಲ್ನ ಮಾಲೀಕ ಲಕ್ಷ್ಮಿ ಮಿತ್ತಲ್ 45 ಶತಕೋಟಿ ಡಾಲರುಗಳ ಒಡೆಯನಾಗಿ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದು ಪತ್ರಿಕೆ ಹೇಳಿತು. ಒಟ್ಟು 43 ಮತ್ತು 42 ಶತಕೋಟಿ ಡಾಲರುಗಳ ಒಡೆಯರಾಗಿರುವ ಮುಖೇಶ್ ಮತ್ತು ಅನಿಲ್ ಅಂಬಾನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ವಿಶ್ವದ ಅತಿ ದೊಡ್ಡ ರಿಯಲ್ ಎಸ್ಟೇಟ್ ದೊರೆಯಾಗಿರುವ ಕುಶಾಲ್ ಪಾಲ್ ಸಿಂಗ್ ಅವರು 30 ಶತಕೋಟಿ ಡಾಲರು ಆಸ್ತಿಯ ಮಾಲೀಕತ್ವದ ಮೂಲಕ 4ನೆಯ ಸ್ಥಾನ ಪಡೆದರು.

2008: ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ವಂಶವಾಹಿ ಚಿಕಿತ್ಸೆ (ಜೆನೆಟಿಕ್ ಎಂಜಿನಿಯರಿಂಗ್) ಮೂಲಕ ಪರಿಣಾಮಕಾರಿಯಾಗಿ ಗುಣಮುಖ ಮಾಡಲಾಗುತ್ತದೆ ಎಂದು ಹೃದಯತಜ್ಞ ಡಾ.ಧಾನಿರಾಂ ಬರುವಾ ಬೆಂಗಳೂರಿನಲ್ಲಿ ಪ್ರಕಟಿಸಿದರು. `ಈಗಾಗಲೇ 12 ನೂರಕ್ಕೂ ಹೆಚ್ಚು ಹೃದಯರೋಗಿಗಳಿಗೆ ಯಶಸ್ವಿಯಾಗಿ ಇಂತಹ ಚಿಕಿತ್ಸೆ ನೀಡಲಾಗಿದೆ. ತೆರೆದ ಹೃದಯ (ಬೈಪಾಸ್) ಶಸ್ತ್ರಚಿಕಿತ್ಸೆಯು ಹಳೆಯದಾಗಿ ಹೋಗಿದೆ. ವ್ಯಕ್ತಿಯ ಜೀವಕ್ಕೆ ಮೌಲ್ಯ ಕಟ್ಟುವುದು ಅಸಾಧ್ಯ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಿಶೇಷ ಸಂಶೋಧನೆ ಮೂಲಕ ವಂಶವಾಹಿ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದೇನೆ' ಎಂದು ಅವರು ಹೇಳಿದರು.ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಡಾ. ದೀಪಕ್ ಷಾ, ನ್ಯಾಯವಾದಿ ಡಬ್ಲು.ಎಸ್.ರಾನೆ ಹಾಗೂ ಡಾ. ಮುಕುಲ್ ಮಹಾತ್ಮೆ ಅವರು, ವಂಶವಾಹಿ ಚಿಕಿತ್ಸೆಯ ತಮ್ಮ ಅನುಭವವನ್ನು ಹಂಚಿಕೊಂಡರು. ಡಾ. ಧಾನಿರಾಂ ಬರುವಾ ಅವರ ಮುಖ್ಯ ಆಸ್ಪತ್ರೆ ಗುವಾಹಟಿಯಲ್ಲಿ ಇದ್ದು, ಮಾಹಿತಿಗೆ  ದೂರವಾಣಿ ಸಂಖ್ಯೆ: 99450 35627/ 9945326692 ಸಂಪರ್ಕಿಸಬಹುದು.

 2008: ಮಹಾಶಿವರಾತ್ರಿಯಂದು ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಅವಕಾಶ ನಿರಾಕರಿಸಲಾಯಿತು. ಸಾಂಸ್ಕೃತಿಕವಾಗಿ ಪ್ರಾಮುಖ್ಯತೆ  ಪಡೆದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ದೊರೆ ಪಾಲ್ಗೊಳ್ಳುವುದನ್ನು ಕಳೆದ ವರ್ಷದಿಂದ ನೇಪಾಳದ ಹಂಗಾಮಿ ಸರ್ಕಾರ ನಿಷೇಧಿಸಿತ್ತು. ದೊರೆಯ ಆಡಳಿತವನ್ನು ಜನರು ವಿರೋಧಿಸಿದ್ದರಿಂದ ಹಂಗಾಮಿ ಸರ್ಕಾರ `ಭೂತೋ ಜಾತ್ರ, ಇಂದ್ರಜಾತ್ರ' ಇತ್ಯಾದಿ ಪ್ರಮುಖ ಧಾರ್ಮಿ ಕಾರ್ಯಕ್ರಮಗಳಲ್ಲಿ ದೊರೆ  ಭಾಗವಹಿಸುವುದನ್ನು ನಿಷೇಧಿಸಿತ್ತು. ಹಾಗೆಯೇ ಶಿವರಾತ್ರಿಯ ಅಂಗವಾಗಿ ಸ್ವಾಮೀಜಿಗಳ  ಸಮಾವೇಶ ನಡೆದು ಅಲ್ಲಿನ ರಾಷ್ಟ್ರದ ದೊರೆ, ಸ್ವಾಮೀಜಿಗಳಿಗೆ ಕಾಣಕೆನೀಡುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಈ ವರ್ಷ ದೊರೆಗೆ ಈ ಅವಕಾಶ  ನಿರಾಕರಿಸಲಾಯಿತು. ದೊರೆಯ ಬದಲಾಗಿ ಪಶುಪತಿನಾಥ ದೇವಾಲಯದ  `ಗತಿ ಸಂಸ್ಥಾನ'ದವರಿಗೆ ದೊರೆಯ ಮರ್ಯಾದೆ ನೀಡಲಾಯಿತು. 

2008: ಭಾರತದಲ್ಲಿನ ನೇಪಾಳದ ರಾಯಭಾರಿಯಾಗಿ ಡಾ. ದುರ್ಗೇಶ್ ಮಾನ್ ಸಿಂಗ್ ಅವರನ್ನು ಸರ್ಕಾರ ನೇಮಿಸಿತು.

2008: ಮರಾಠಿ ಭಾಷೆಯ ಚಲನಚಿತ್ರ ನಿರ್ದೇಶಕ ಮಹೇಶ್ ಹಡಾವಳೆ ಅವರ `ಟಿಂಗ್ಯಾ' ಚಿತ್ರವು 2007ರ ಲಂಕೇಶ್ ಚಿತ್ರ ಪ್ರಶಸ್ತಿಗೆ ಆಯ್ಕೆಯಾಯಿತು.

 2008: ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ವಾರ್ಷಿಕ ಸಿರಿವಂತರ ಪಟ್ಟಿಯಲ್ಲಿ, ಸಾಫ್ಟ್ವೇರ್ ದೊರೆ ಬಿಲ್ ಗೇಟ್ಸ್ ಮತ್ತು ಮೆಕ್ಸಿಕೊದ ಉದ್ಯಮಿ ಕಾರ್ಲೋಸ್ ಸ್ಲಿಮ್ ಅವರನ್ನು ಹಿಂದಿಕ್ಕಿದ ಅಮೆರಿಕದ ಬಂಡವಾಳ ಹೂಡಿಕೆದಾರ ವಾರನ್ ಬಫೆ, ಮುಂಚೂಣಿ ಸ್ಥಾನಕ್ಕೆ ಏರಿ, ಅಗರ್ಭ ಶ್ರೀಮಂತ ಎಂಬ ಹೆಗ್ಗಳಿಗೆ ಪಾತ್ರರಾದರು.

2007: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೊತ್ತ ಮೊದಲ ಬಾರಿಗೆ 1000 ಕೋಟಿ ರೂಪಾಯಿ ವರಮಾನ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತು. 2006ರಲ್ಲಿ ಇದೇ ದಿನ ಸಂಸ್ಥೆಯು 838 ಕೋಟಿ ರೂಪಾಯಿ ವರಮಾನ ಗಳಿಸಿತ್ತು. 

2007: ಇಂಡೋನೇಷ್ಯದ ಸುಮಾತ್ರಾ ದ್ವೀಪದಲ್ಲಿ ಈದಿನ ಬೆಳಗ್ಗೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ 82 ಜನರು ಮೃತರಾಗಿ, 12ಕ್ಕೂ ಹೆಚ್ಚು ಜನರು ಗಾಯಗೊಂಡರು. ಎರಡು ಗಂಟೆಗಳ ಅಂತರದಲ್ಲಿ ಸಂಭವಿಸಿದ ಈ ಭೂಕಂಪಗಳು ಜನರಲ್ಲಿ ಸುನಾಮಿ ಭೀತಿಯನ್ನೂ ಮೂಡಿಸಿದವು. ರಿಕ್ಟರ್  ಮಾಪಕದಲ್ಲಿ 6.3ರಷ್ಟು  ತೀವ್ರತೆ ದಾಖಲಿಸಿದ ಮೊದಲ ಭೂಕಂಪವು ಮಲೇಷ್ಯಾ ಮತ್ತು ಸಿಂಗಪುರದಲ್ಲಿಯೂ ಅನುಭವಕ್ಕೆ ಬಂದಿತು. ಸುಮಾತ್ರಾ  ದ್ವೀಪ ಬಳಿಯ ಸಾಗರದಾಳದಲ್ಲಿ 2004ರ ಡಿಸೆಂಬರಿನಲ್ಲಿ ಸಂಭವಿಸಿದ್ದ ಭೂಕಂಪದಿಂದ ಉಂಟಾದ ಸುನಾಮಿಯು 1,70,000 ಜನರನ್ನು ಬಲಿ ತೆಗೆದುಕೊಂಡಿತ್ತು.

2007:  ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಫ್ರಾನ್ಸ್ ನೈಟ್ ಪ್ರಶಸ್ತಿ ಕಲಾವಿದೆ ಅಂಜೊಲಿ ಇಳಾ ಮೆನನ್ ಅವರ ಮುಡಿಗೇರಿತು. ಇಂಡೋ-ಫ್ರೆಂಚ್ ಸಂಬಂಧ ಸುಧಾರಣೆಗೆ ಸಹಾಯವಾಗುವಂಥ ಕೃತಿನಿರ್ಮಾಣದಲ್ಲಿ ತೊಡಗಿರುವವರಿಗೆ ಫ್ರೆಂಚ್ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತದೆ.

2007: ವೃತ್ತಿಪರ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಪಡಿಸುವ ತಮಿಳುನಾಡು ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿತು. ಸಿಇಟಿ ಬದಲು ಸಹಜ ಪ್ರಕ್ರಿಯೆ ಮೂಲಕ ಎಲ್ಲವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶ. 2006ರ ಜೂನಿನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಈ ಮಸೂದೆಯನ್ನು  ಅಂಗೀಕರಿಸಲಾಗಿತ್ತು. ಟಿ. ಎ. ಪೈ ಹಾಗೂ ಇಮಾಮ್ ದಾರ್ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ಸುಪ್ರೀಂಕೋರ್ಟ್, ವೃತ್ತಿಪರ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಯಸುವ ಅಭ್ಯರ್ಥಿಗಳ ಅರ್ಹತೆ ಪರಿಗಣಿಸಲು ಸಾಮಾನ್ಯ ಪ್ರವೇಶ ಪರೀಕ್ಷೆ ಏಕೈಕ ಮಾರ್ಗವಾಗಿದೆ ಎಂದು ಹೇಳಿತ್ತು.

2007: ಚಿತ್ರಾ ಪಾಲೇಕರ್ ಚೊಚ್ಚಲ ನಿರ್ದೇಶನದ `ಮಾತಿ ಮಾಯಿ' ಮರಾಠಿ ಚಲನಚಿತ್ರವು ಪ್ರತಿಷ್ಠಿತ `ಲಂಕೇಶ್ ಪ್ರಶಸ್ತಿ'ಗೆ ಆಯ್ಕೆಯಾಗಿದೆ ಎಂದು ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಮಾತಿಮಾಯಿ ಚಿತ್ರವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾ ದೇವಿ ಅವರ ಕಾದಂಬರಿ `ಬಾಯೇನ್' ಆಧಾರಿತ ಚಿತ್ರ.

2007: ಕೋಲಾರದ ಡಾ. ಎಲ್. ಬಸವರಾಜು ಪ್ರತಿಷ್ಠಾನ ನೀಡುವ ಡಾ. ಎಲ್. ಬಸವರಾಜು ಪ್ರಶಸ್ತಿಗೆ ಚಿಂತಕ, ವಿಮರ್ಶಕ ಡಾ. ಕೆ.ವಿ. ನಾರಾಯಣ ಆಯ್ಕೆಯಾದರು.

2007: ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸತ್ ಸದಸ್ಯ ಸುನೀಲ್ ಕುಮಾರ್ ಮಹತೋ ಅವರ ಹತ್ಯೆಯ ಹೊಣೆಗಾರಿಕೆ ತಮ್ಮದು ಎಂದು ಸಿಪಿಎಂ ಮಾವೋವಾದಿಗಳು ಘೋಷಿಸಿದರು. ಮಹತೋ ಅವರು ಗ್ರಾಮಸ್ಥರನ್ನು ಎತ್ತಿಕಟ್ಟಿ 11 ನಕ್ಸಲರನ್ನು ಕೊಂದಿದ್ದರು. ಅದಕ್ಕಾಗಿ ನಾವೀಗ ಅವರನ್ನು ಕೊಂದಿದ್ದೇವೆ ಎಂದು ಹಾಡಿಯಾ ಮತ್ತು ಲಾಂಗೋ ಹಳ್ಳಿಗಳಲ್ಲಿ ಅಂಟಿಸಿದ ಭಿತ್ತಿಪತ್ರಗಳಲ್ಲಿ ಮಾವೋವಾದಿಗಳು ಪ್ರಕಟಿಸಿದರು. 

2007: ಭಾರತ ಮತ್ತು ಶ್ರೀಲಂಕಾ ನಡುವೆ ಇತ್ತು ಎನ್ನಲಾಗಿರುವ ರಾಮಸೇತುವಿನ ಚಿತ್ರವನ್ನು ನಾಸಾ ಉಪಗ್ರಹ ಸೆರೆ ಹಿಡಿದಿದೆ. ಆದರೆ ಅದರ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆಯಿಂದ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿತು.

2006: ಕೊಲ್ಲೂರು ಮೂಕಾಂಬಿಕಾ ದೇವಿಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳೆಯರಾಜ ಅವರು 30 ಲಕ್ಷ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟವನ್ನು ಸಮರ್ಪಿಸಿದರು. ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ದೇವಸ್ಥಾನ ಅರ್ಚಕರೊಡಗೂಡಿ ಶಾಸ್ತ್ರೋಕ್ತವಾಗಿ ದೇವಿಗೆ ಕಿರೀಟವನ್ನು ತೊಡಿಸಿದರು.

2006: ಲಿಬಿಯಾದ ಉನ್ನತ ಶಾಸಕಾಂಗ ಮತ್ತು ಕಾರ್ಯಕಾರಿ ಸಂಸ್ಥೆಯು ಅಲಿ-ಅಲ್ ಮಹಮದಿ ಅವರನ್ನು ನೂತನ ಪ್ರಧಾನಿಯಾಗಿ ಸುಧಾರಣಾವಾದಿಯಾಗಿದ್ದ ಶೋಕ್ರಿ ಘನೇಮ್ ಅವರ ಸ್ಥಾನಕ್ಕೆ ನೇಮಕ ಮಾಡಿತು. ಘನೇಮ್ ಅವರಿಗೆ ರಾಷ್ಟ್ರದ ತೈಲರಂಗದ ಉಸ್ತುವಾರಿ ವಹಿಸಲಾಯಿತು.

2006: ಪ್ರಸ್ತುತ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯು `ಕ್ರಾಷ್' ಚಿತ್ರಕ್ಕೆ ಲಭಿಸಿತು. ಆಂಜ್ ಲೀ ನಿರ್ದೇಶನದ `ಬ್ರೋಕ್ ಬ್ಯಾಕ್ ಮೌಂಟನ್' ಚಿತ್ರವನ್ನು ಮತಗಳಿಕೆಯಲ್ಲಿ `ಕ್ರಾಷ್' ಹಿಂದಿಕ್ಕಿತು. ಆಂಜ್ ಲೀಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು.

2006: ರಾಜ್ಯಸಭೆ ಸದಸ್ಯರಾಗಿರುವಾಗಲೇ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲಯಲ್ಲಿ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಜ್ಯಸಭಾ ಸದಸ್ಯೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಅವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದರು. ಜಯಾ ವಿರುದ್ಧ ಸ್ಪರ್ಧಿಸಿ ಸೋತ ಅಭ್ಯರ್ಥಿ ಮದನ್ ಮೋಹನ್ ಅವರ ಅರ್ಜಿಯನ್ನು ಅನುಸರಿಸಿ ಚುನಾವಣಾ ಆಯೋಗವು ಜಯಾ ಬಚ್ಚನ್ ಅನರ್ಹತೆಗೆ ಶಿಫಾರಸು ಮಾಡಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಜಯಾ ಬಚ್ಚನ್ ಅವರನ್ನು ರಾಜ್ಯ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

2006: ಸಾರ್ವಜನಿಕರ ಒತ್ತಡವನ್ನು ಅನುಸರಿಸಿ ದೆಹಲಿ ಪೊಲೀಸರು ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಹೊಸದಾಗಿ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಹರಿಯಾಣ ಸಚಿವರ ಪುತ್ರ ಮನುಶರ್ಮಾ ಸೇರಿದಂತೆ 9 ಆರೋಪಿಗಳನ್ನು ಖುಲಾಸೆ ಮಾಡಿತ್ತು.

2001: `ನೇಕೆಡ್ ವೈಫ್' ಹೆಸರಿನ ಹೊಸ ಟೈಪ್ ಇ ಮೇಲ್ ವೈರಸ್ ಜಗತ್ತಿನಾದ್ಯಂತ `ವಿಂಡೋಸ್'ನ್ನು ಅಸ್ತವ್ಯಸ್ತಗೊಳಿಸಿತು.

1997: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ ರಾಯಲ್ ವೆಬ್ ಸೈಟನ್ನು ಉದ್ಘಾಟಿಸಿದರು. (http://www.royal.gov.uk) 

1992: `ಮೈಕೆಲೇಂಜೆಲೊ' ಹೆಸರಿನ ವೈರಸ್ ಜಗತ್ತಿನಾದ್ಯಂತ ಪರ್ಸನಲ್ ಕಂಪ್ಯೂಟರುಗಳನ್ನು ಬಾಧಿಸಿ ಕಂಪ್ಯೂಟರ್ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು.

1971: ಪೋರ್ಟ್ ಆಫ್ ಸ್ಪೇನಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವುದರೊಂದಿಗೆ ಸುನಿಲ್ ಗಾವಸ್ಕರ್ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಿದರು. ಅವರು ಔಟಾಗದೆ 65 ಮತ್ತು 67 ರನ್ನುಗಳನ್ನು ಪಡೆದರು.

1970: ಕಲಾವಿದ ನರಸಿಂಹಮೂರ್ತಿ ಸಿ.ಎಂ. ಜನನ.

1961: ಭಾರತದ ಮೊತ್ತ ಮೊದಲ ಆರ್ಥಿಕ ದಿನಪತ್ರಿಕೆ `ಇಕನಾಮಿಕ್ ಟೈಮ್ಸ್' ಅನ್ನು ಟೈಮ್ಸ್ ಆಫ್ ಇಂಡಿಯಾ ಸಮೂಹ ಆರಂಭಿಸಿತು.

1952: ಕಲಾವಿದ ಉಪಾಧ್ಯಾಯ ಡಿ.ಎ. ಜನನ.

1945: ಕಲಾವಿದ ಜಗದೀಶ ಎಚ್. ಎನ್. ಜನನ.

1941: ಕಲಾವಿದ ವೆಂಕಟರಾವ್ ಎಂ.ಪಿ. ಜನನ.

1941: ಕಲಾವಿದ ಕೃಷ್ಣೇಗೌಡ ಬಿ.ಎಂ. ಜನನ.

1937: ವಾಲೆಂಟೀನಾ ತೆರೆಷ್ಕೋವಾ ಹುಟ್ಟಿದರು. ಮುಂದೆ ಗಗನಯಾನಿಯಾದ ಈಕೆ 1963ರ ಜೂನ್ 16ರಂದು ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. 

1928: ಭಾರತದ ವಕೀಲ, ಮುತ್ಸದ್ಧಿ ಸತ್ಯೇಂದ್ರ ಪ್ರಸಾದ ಸಿನ್ಹ (1864-1928) ಬೆಹ್ರಾಂಪುರದಲ್ಲಿ ನಿಧನರಾದರು. 1907ರಲ್ಲಿ ಇವರು ಬಂಗಾಳದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡ ಮೊದಲ ಭಾರತೀಯರೆನಿಸಿದ್ದರು. ಗವರ್ನರ್  ಜನರಲ್ನ ಎಕ್ಸಿಕ್ಯೂಟಿವ್ ಕೌನ್ಸಿಲಿಗೆ ಕಾನೂನು ಸದಸ್ಯರಾಗಿ ನೇಮಕಗೊಂಡ ಮೊದಲಿಗ ಎಂಬ ಹೆಗ್ಗಳಿಕೆ ಕೂಡಾ ಇವರದೇ. ಲಾಯ್ಡ್ ಜಾರ್ಜ್ ಕೈಕೆಳಗೆ ಬ್ರಿಟನ್ನಿನ ವಾರ್ ಕ್ಯಾಬಿನೆಟ್ಟಿನಲ್ಲೂ (ಸಮರ ಸಂಪುಟ) ಸೇವೆ ಸಲ್ಲಿಸಿದ್ದರು.

1920: ಗಂಧದ ಕೆತ್ತನೆ ಕೆಲಸಕ್ಕೆ ಹೆಸರಾದ ಗುಡಿಕಾರ ಕುಟುಂಬದ ಯಶವಂತ ಈರಯ್ಯ ಅವರು ಈರಯ್ಯ- ಕಾಮಾಕ್ಷಿ ಶೆಟ್ಟಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಕಲೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಮರ, ಕಲ್ಲು, ಮಣ್ಣು, ದಂತ ಮತ್ತಿತರ ಕಲೆಗಳಲ್ಲಿ, ಆಕೃತಿ ರಚನೆ, ಅಲಂಕಾರಿಕ ವಸ್ತುಗಳು, ಚಿತ್ರಕಲಾ ಸಂಪುಟ ರಚನೆಯಲ್ಲಿ ಅಪಾರ ಪರಿಣತಿ ಗಳಿಸಿದವರು. ರಾಜ್ಯ  ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1913: ಕಲಾವಿದ ವಿ. ಶ್ರೀಕಂಠ ಅಯ್ಯರ್ ಜನನ.

1697: ಸ್ಟ್ರಿಂಜರ್ ಲಾರೆನ್ಸ್ (1697-1775) ಹುಟ್ಟಿದ. ಬ್ರಿಟಿಷ್ ಸೇನಾ ಕ್ಯಾಪ್ಟನ್ ಆಗಿದ್ದ ಈತ ಬ್ರಿಟಿಷ್ ಆಳ್ವಿಕೆಯಡಿಯಲ್ಲಿ ಭಾರತೀಯ ಸೇನೆಯನ್ನು ಸ್ಥಾಪಿಸಿದ. 

1508: ಮೊಘಲ್ ವಂಶದ ಎರಡನೇ ದೊರೆ ಹುಮಾಯೂನ್ (1508-1556) ಜನಿಸಿದ. ಈತ ಬಾಬರನ ಮಗ ಹಾಗೂ ಉತ್ತರಾಧಿಕಾರಿಯಾಗಿದ್ದು, ಮೊಘಲ್ ವಂಶದಲ್ಲಿ ಶ್ರೇಷ್ಠ ಚಕ್ರವರ್ತಿ ಎಂಬ ಹೆಸರು ಗಳಿಸಿದ ಅಕ್ಬರನ ತಂದೆ.

1475: ಮೈಕೆಲೇಂಜೆಲೋ ಬುರಾನರೊಟ್ಟಿ (1475-1564) ಹುಟ್ಟಿದ ದಿನ. ಇಟಲಿಯ ವರ್ಣಚಿತ್ರಗಾರ, ಶಿಲ್ಪಿ ಹಾಗೂ ವಾಸ್ತುಶಿಲ್ಪಿಯಾದ ಈತ ಮಹಾನ್ ಕಲಾವಿದನೆಂದು ಹೆಸರು ಗಳಿಸಿದ.

No comments:

Post a Comment