Sunday, March 4, 2018

ಇಂದಿನ ಇತಿಹಾಸ History Today ಮಾರ್ಚ್ 03

ಇಂದಿನ ಇತಿಹಾಸ History Today ಮಾರ್ಚ್  03

2018: ನವದೆಹಲಿ: ಆಡಳಿತ ವಿರೋಧಿ ಅಲೆ, ಪ್ರಾದೇಶಿಕ ಪಕ್ಷಗಳ ಜೊತೆಗೆ ಚತುರ ಮೈತ್ರಿಗಳನ್ನು ರೂಪಿಸಿಕೊಂಡ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸುವಲ್ಲಿ ಸಫಲವಾಯಿತು.. ಶೂನ್ಯ ಸ್ಥಿತಿಯಲ್ಲಿದ್ದ ಬಿಜೆಪಿಯ ಬಿರುಗಾಳಿಗೆ ತ್ರಿಪುರದಲ್ಲಿ ಎರಡು ದಶಕಗಳ ಅಧಿಕಾರವನ್ನು ಕಳೆದುಕೊಂಡು ಸಿಪಿಎಂ ಧೂಳೀಪಟಗೊಂಡಿತು. ಕಮ್ಯೂನಿಸ್ಟ್ ಭದ್ರಕೋಟೆಯನ್ನು ಧ್ವಂಸಗೊಳಿಸಿದ ಬಿಜೆಪಿ, ತ್ರಿಪುರದಲ್ಲಿ ಸ್ವಂತ ಬಲದೊಂದಿಗೆ ಸರ್ಕಾರ ರಚಿಸಲಿದ್ದು,  ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆಯುವ ಯತ್ನಗಳನ್ನು ಆರಂಭಿಸಿತು. ಮೇಘಾಲಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿರುವ ಕಾಂಗ್ರೆಸ್ ಕೂಡಾ ಸರ್ಕಾರ ರಚನೆ ಯತ್ನಕ್ಕೆ ಕೈ ಹಾಕಿತು. ತ್ರಿಪುರ ವಿಧಾನಸಭೆಯ ೬೦ ಸ್ಥಾನಗಳ ಪೈಕಿ ಬಿಜೆಪಿ ೪೪ ಸ್ಥಾನಗಳನ್ನು ಗೆದ್ದಿತು.  ೨೦೧೩ರಲ್ಲಿ ೫೦ ಸ್ಥಾನಗಳನ್ನು ಗೆದ್ದಿದ್ದ ಸಿಪಿಐ(ಎಂ) ಈ ಬಾರಿ ೧೫ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು. ೨೦೧೩ರಲ್ಲಿ ೧೦ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಶೂನ್ಯ ಸಾಧನೆ ಮಾಡಿತು.  ಬಿಜೆಪಿ ಶೂನ್ಯದಿಂದ ೪೪ ಸ್ಥಾನಗಳಿಗೆ ಏರಿತು.  ಚಾರ್ಲಿಯಾಮ್ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ನಿಧನರಾದ ಕಾರಣ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು. ಅಲ್ಲಿ ಮಾರ್ಚ್ ೧೨ರಂದು ಚುನಾವಣೆ ನಡೆಯಲಿದೆ.  ಬಿಜೆಪಿ ಬಿರುಗಾಳಿಯ ಪರಿಣಾಮವಾಗಿ ತ್ರಿಪುರದಲ್ಲಿ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮಾಣಿಕ್ ಸರ್ಕಾರ ಅವರ ಕನಸು ಭಗ್ನಗೊಂಡಿತು.  ಎಡ ಪಕ್ಷಕ್ಕೆ ಈ ಮೂಲಕ ಭಾರೀ ದೊಡ್ಡ ಹೊಡೆತ ಬಿದ್ದಿತು. ಈ ವರೆಗೆ ದೇಶದಲ್ಲಿ ತ್ರಿಪುರ ಮತ್ತು ಕೇರಳದಲ್ಲಿ ಮಾತ್ರವೇ ಎಡ ಪಕ್ಷದ ಆಳ್ವಿಕೆ ಇತ್ತು. ಇದೀಗ ತ್ರಿಪುರವನ್ನೂ ಕಮ್ಯೂನಿಸ್ಟರು ಕಳೆದುಕೊಂಡರು.  ತ್ರಿಪುರ ಸುಂದರಿ ಮಾತೆಯ ಆಶೀರ್ವಾದದಿಂದಾಗಿ ಬಿಜೆಪಿ ತ್ರಿಪುರದಲ್ಲಿ ಕ್ರಾಂತಿಕಾರಿ ಫಲಿತಾಂಶ ಸಾಧಿಸಿದೆ ಎಂದು ಬಿಜೆಪಿಯ ರಾಮ ಮಾಧವ್ ಹೇಳಿದರು.  ತ್ರಿಪುರಾದಲ್ಲಿ ಬುಡಕಟ್ಟು ಜನರ ಮನಗೆದ್ದ ಬಿಜೆಪಿ: ತ್ರಿಪುರಾದಲ್ಲಿ ಬಿಜೆಪಿ ೨೫ ವರ್ಷಗಳಿಂದ ಅಧಿಕಾರದಲ್ಲಿದ್ದ ಸಿಪಿಎಂ ಅನ್ನು ಮಣ್ಣುಮುಕ್ಕಿಸಿತು. ರಾಜ್ಯದ ಬುಡಕಟ್ಟು ಜನರ ಮನಗೆಲ್ಲಲು ತಂತ್ರ ರೂಪಿಸಿದ್ದ ಬಿಜೆಪಿ, ಅವರ ಬೆಂಬಲದಿಂದಲೇ ’ದೈತ್ಯ ಸಂಹಾರಕ’ನಾಗಿ ಮೂಡಿಬಂದಿತು. ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಪಿಎಂ ಕೇವಲ ೧೫ ಸೀಟುಗಳನ್ನು ಗೆಲ್ಲಲು ಶಕ್ತವಾಯಿತು.  ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಜತೆಗಿನ ಮೈತ್ರಿಯಿಂದಾಗಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ ೩೧ರಷ್ಟಿರುವ ಬುಡಕಟ್ಟು ಮತದಾರರನ್ನು ತಲುಪಲು ಬಿಜೆಪಿಗೆ ಸಾಧ್ಯವಾಯಿತು ಎಂದು ರಾಜಕೀಯ ವೀಕ್ಷಕರು ವಿಶ್ಲೇಷಿಸಿದರು.  ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸುವಲ್ಲಿ ಎಡಪಕ್ಷದ ಕಾರ್ಯತಂತ್ರ ಸೋತಿತು. ಈ ವೈಫಲ್ಯದ ಎಳೆ ಹಿಡಿದೇ ಬಿಜೆಪಿ ರಾಜ್ಯವನ್ನು ಪ್ರವೇಶಿಸಿತು.  ಉದ್ಯೋಗಾವಕಾಶಗಳ ಸೃಷ್ಟಿ, ವಿಶೇಷವಾಗಿ ಬುಡಕಟ್ಟು ಜನರಿಗೆ ಉದ್ಯೋಗಾವಕಾಶಗಳು, ಬಿದಿರು, ಜವುಳಿ ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ ಭರವಸೆಯಿಂದ ಬಿಜೆಪಿ ತ್ರಿಪುರಾದ ಜನರ ಮನಗೆದ್ದಿತು.  ಅಲ್ಲದೆ ಕೇಂದ್ರದಿಂದ ನೇರವಾಗಿ ಆರ್ಥಿಕ ನೆರವು ಪಡೆಯುವಂತಹ ಸ್ವಾಯತ್ತ ರಾಜ್ಯ ಮಂಡಳಿ ಸ್ಥಾಪಿಸುವುದಾಗಿಯೂ ಬಿಜೆಪಿ ಭರವಸೆ ನೀಡಿತ್ತು. ನಾಗಾಲ್ಯಾಂಡಿನಲ್ಲಿ:  ನಾಗಾಲ್ಯಾಂಡಿನಲ್ಲಿ ೨೦೧೩ರಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಹೊಸದಾಗಿ ರಚಿತವಾದ ನ್ಯಾಷನಲಿಸ್ಟ್ ಡೆಮಾಕ್ರಾಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ ಡಿಪಿಪಿ) ಜೊತೆ ಮೈತ್ರಿಕೂಟ ರಚಿಸಿಕೊಂಡು ವಿಧಾನಸಭೆಯ ೬೦ ಸ್ಥಾನಗಳ ಪೈಕಿ 29 ಸ್ಥಾನಗಳಲ್ಲಿ ಜಯಗಳಿಸಿತು.  ೩೮ ಸ್ಥಾನಗಳನ್ನು ಗಳಿಸಿದ್ದ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) 26 ಸ್ಥಾನಗಳಲ್ಲಿ ಜಯಗಳಿಸಿತು. ೨೦೧೩ರಲ್ಲಿ ೮ ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಶೂನ್ಯ ಸಾಧನೆ ಮಾಡಿತು.  ೨೦೧೩ರಲ್ಲಿ ೧೩ ಮಂದಿ ಇತರರು ಗೆದ್ದಿದ್ದರೆ, ಈ ಬಾರಿ ಇಬ್ಬರು ಇತರರು ಗೆದ್ದರು.  ಅಧಿಕಾರಕ್ಕಾಗಿ ಬಿಜೆಪಿ ಮೈತ್ರಿಕೂಟ ಮತ್ತು ಎನ್ ಪಿಎಫ್ ಮಧ್ಯೆ ಸಮಬಲದ ಹಣಾಹಣಿ ನಡೆದಿದ್ದು, ಗೆದ್ದಿರುವ ಪಕ್ಷೇತರರಿಬ್ಬರು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಕಂಡು ಬಂತು.  ಸರ್ಕಾರ ರಚನೆಯ ನಿಟ್ಟಿನಲ್ಲಿ ಬಿಜೆಪಿ ಮತ್ತು ಎನ್ ಡಿಪಿಪಿ ಯಶಸ್ವಿಯಾದರೆ ಎನ್ ಡಿಪಿಪಿ ಸ್ಥಾಪಕ ಮಾಜಿ ಮುಖ್ಯಮಂತ್ರಿ ನೀಫಿಯೂ ರಿಯೋ ನಾಗಾಲ್ಯಾಂಡಿನ ಮುಂದಿನ ಮುಖ್ಯಮಂತ್ರಿಯಾಗಬಹುದು.  26 ಸ್ಥಾನಗಳಲ್ಲಿ ಜಯಗಳಿಸಿರುವ ಮುಖ್ಯಮಂತ್ರಿ ಟಿಆರ್ ಝೆಲಿಯಾಂಗ್ ಅವರ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಹಿಂದೆ ಬಿಜೆಪಿ ಜೊತೆ ಮೈತ್ರಿ ಹೊಂದಿತ್ತು. ಆದರೆ ಚುನಾವಣೆಗೆ ಮುನ್ನ ಬಿಜೆಪಿ ಆ ಮೈತ್ರಿಯನ್ನು ಮುರಿದು ಎನ್ ಡಿಪಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಮೇಘಾಲಯದಲ್ಲಿ : ಮೇಘಾಲಯದ ೬೦ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ೨೧ ಸ್ಥಾನಗಳಲ್ಲಿ ಜಯಗಳಿಸಿತು.  ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ೧೯ ಸ್ಥಾನಗಳಲ್ಲಿ, ಬಿಜೆಪಿ ೨ ಸ್ಥಾನದಲ್ಲಿ, ಯುಡಿಪಿ ಮತ್ತು ಮಿತ್ರ ಪಕ್ಷಗಳು ೮ ಸ್ಥಾನಗಳಲ್ಲಿ, ಇತರರು ೯ ಸ್ಥಾನಗಳಲ್ಲಿ ಜಯಗಳಿಸಿದರು. ೨೦೧೩ರಲ್ಲಿ ೨೯ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಸರ್ಕಾರ ರಚಿಸಲು ಅಗತ್ಯವಿರುವ ೩೧ರ ಮ್ಯಾಜಿಕ್ ನಂಬರ್ ಸಾಧಿಸಲು ವಿಫಲವಾಯಿತು. ಇಲ್ಲಿ ಕೂಡ ೫೯ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಲಯಂನಗರ ಕ್ಷೇತ್ರದ ಅಭ್ಯರ್ಥಿಯ ಹತ್ಯೆಯಾದ ಕಾರಣ ಚುನಾವಣೆಯನ್ನು ರದ್ದುಪಡಿಸಲಾಗಿತ್ತು.  ೨೦೧೮ರ ಹೊಸ ವರ್ಷಾರಂಭದವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದ ರಾಜಕಾರಣದಲ್ಲಿ ಮುಖ್ಯಪಾತ್ರ ವಹಿಸಿದ್ದರೂ ನಂತರದ ದಿನಗಳಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟು ಯುನೈಟೆಡ್ ಡೆಮಾಕ್ರೆಟ್ ಪಾರ್ಟಿ (ಯುಡಿಪಿ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದವು.  ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದರೂ, ಕಾಂಗ್ರೆಸ್ ಪಕ್ಷವನ್ನು ಹೊರಗಿಡುವ ಸಲುವಾಗಿ ಇಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳು ಚುನಾವಣೋತ್ತರ ಹೊಂದಾಣಿಕೆ ನಡೆಸುವ ಸಂಭವವಿದೆ.  ಇದನ್ನು ಬಿಜೆಪಿಯ ಮೇಘಾಲಯ ಪ್ರಭಾರ ನಳಿನ್ ಕೊಹ್ಲಿ ವ್ಯಕ್ತಪಡಿಸಿದರು.  ’ಮೇಘಾಲಯದಲ್ಲಿ  ಜನರು ಕಾಂಗ್ರೆಸ್ ವಿರುದ್ಧ ಮತ ಹಾಕಿದ್ದಾರೆ; ಅಂತೆಯೇ ಕಾಂಗ್ರೆಸ್ ಹೊರಗಿಡಲು ಬಿಜೆಪಿ ಮತ್ತು ಇತರ ಪಕ್ಷಗಳು ಸೇರಿಕೊಂಡು ಚುನಾವಣೋತ್ತರ ಮೈತ್ರಿ ಸಾಧಿಸಲಿದ್ದಾರೆ’ ಎಂದು ಕೊಹ್ಲಿ ಹೇಳಿದರು. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಮತ್ತು ಕಮಲ್ ನಾಥ್ ಅವರನ್ನು ಶಿಲ್ಲಾಂಗ್‌ಗೆ ತರಾತುರಿಯಲ್ಲಿ ಕಳುಹಿಸಿ,  ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಮುಂದಾಯಿತು.  ಮಣಿಪುರ ಮತ್ತು ಗೋವಾದ ಮುಖಭಂಗಗಳು ಪುನರಾವರ್ತನೆಯಾಗದಂತೆ ತಡೆಯಲು ಕಾಂಗ್ರೆಸ್ ಹವಣಿಸಿತು.  ದೇಶದ ೨೯ ರಾಜ್ಯಗಳ ಪೈಕಿ ೧೯ರಲ್ಲಿ ಈಗಾಗಲೇ ಬಿಜೆಪಿ ಆಡಳಿತವಿದೆ. ಇದೀಗ ಈಶಾನ್ಯ ರಾಜ್ಯಗಳಲ್ಲಿ ಕೇಸರಿ ಬಾವುಟ ರಾರಾಜಿಸಿದೆ. ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಬಿಜೆಪಿ ಆಡಳಿವಿದೆ. ಇಂದಿನ ಫಲಿತಾಂಶದೊಂದಿಗೆ ಈಶಾನ್ಯ ಭಾರತದ ಇನ್ನೂ ಎರಡು ರಾಜ್ಯಗಳು ಬಿಜೆಪಿ ತೆಕ್ಕೆಗೆ ಬಂದವು.  ’ಸಂಪೂರ್ಣ ಈಶಾನ್ಯ ಭಾರತ ಬಿಜೆಪಿ ವಶಕ್ಕೆ ಬಂದಿದೆ. ಆರಂಭದಲ್ಲಿ ನಾವು ಕಾಂಗ್ರೆಸ್‌ಮುಕ್ತ ಭಾರತದ ಘೋಷಣೆ ಮಾಡಿದ್ದೆವು. ಅದನ್ನು ’ವಾಮಪಂಥ ಮುಕ್ತ ಭಾರತ’ ಅಂತಲೂ ಹೇಳಬಹುದು’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದರು. ಗೆದ್ದ ಪ್ರಮುಖರು:  ಮೂರು ಬಾರಿ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿದ್ದ ನೀಫಿಯು ರಿಯೋ ಉತ್ತರದ ಅಂಗಮಾಯಿ-೨ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದರು. ಮೇಘಾಲಯದ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಆಮ್‌ಪಟಿ ಮತ್ತು ಸಾಂಗ್‌ಸಕ್ ಕ್ಷೇತ್ರಗಳಿಂದ ಅವರು ಸ್ಪರ್ಧಿಸಿದ್ದರು. ೨೦೧೦ರಿಂದ ಮೇಘಾಲಯದ ಮುಖ್ಯಮಂತ್ರಿಯಾಗಿರುವ ಸಂಗ್ಮಾ, ಆಮ್‌ಪಟಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಕುಲ್ ಚ್ ಹಜೊಂಗ್ ವಿರುದ್ಧ ೬,೦೦೦ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಸಾಂಗ್‌ಸಕ್‌ನಲ್ಲಿ ಎನ್‌ಪಿಪಿಯ ನಿಹಿಮ್ ಡಿ ಶಿರಾ ವಿರುದ್ಧ ಸುಮಾರು ೧,೩೦೦ ಮತಗಳ ಅಂತರಿಂದ ಜಯಗಳಿಸಿದರು.  ಮುಕುಲ್ ಸಂಗ್ಮಾ ಪತ್ನಿ ಡಿಕ್ಕಂಚಿ ಡಿ ಶಿರಾ ಮಹೇಂದ್ರಗಂಜ್ ಕ್ಷೇತ್ರದಲ್ಲಿ ಜಯ ಗಳಿಸಿದರು.  ಇವರು ಬಿಜೆಪಿಯ ಪ್ರೇಮಾನಂದ ಕೊಚ್ ವಿರುದ್ಧ ಸುಮಾರು ೬,೦೦೦ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2018: ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಈಶಾನ್ಯ ನೀತಿ ಕಾರಣ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಲ್ಲಿ ಹೇಳಿದರು. ಮೂರು ಈಶಾನ್ಯ ರಾಜ್ಯಗಳಲ್ಲಿ ಪಕ್ಷವು ಮಾಡಿರುವ ಸಾಧನೆಗಾಗಿ ಕಾರ್‍ಯಕರ್ತರನ್ನು ಅಭಿನಂದಿಸಿದ ಅಮಿತ್ ಶಾ, ’ಈ ವಿಜಯ ಪ್ರಧಾನಿ ನರೇಂದ್ರ ಮೋದಿ ಅವರ ಈಶಾನ್ಯ ನೀತಿಯ (ನಾರ್ತ್ ಈಸ್ಟ್ ಪಾಲಿಸಿ) ವಿಜಯ’ ಎಂದು ಹೇಳಿದರು. ’ನಮ್ಮ ಕಾರ್ಯಕರ್ತರು ತ್ರಿಪುರಾದಲ್ಲಿ ಕಮ್ಯೂನಿಸ್ಟರ ಹಿಂಸೆ ಎದುರಿಸಿದರು. ಅವರಲ್ಲಿ ಹಲವರು ಕೊಲೆಯಾದರು ಕೂಡಾ. ಆದರೆ ಅವರು ನಮಗೆ ದೊಡ್ಡ ವಿಜಯ ತಂದುಕೊಟ್ಟರು’ ಎಂದು ಬಿಜೆಪಿ ಅಧ್ಯಕ್ಷ ನುಡಿದರು.  ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶವು ಕರ್ನಾಟಕದಲ್ಲಿ ಮತ್ತು ಬಳಿಕ ೨೦೧೯ರಲ್ಲಿ ನಾವು ಪಡೆಯಲಿರುವ ಫಲಿತಾಂಶಗಳ ಮುನ್ಸೂಚನೆ’ ಎಂದು ಅಮಿತ್ ಶಾ ಹೇಳಿದರು.  ’ಎಡ’ವು ಭಾರತದ ಯಾವುದೇ ಭಾಗಕ್ಕೂ ’ಬಲ’ವಲ್ಲ ಎಂಬುದನ್ನು ತ್ರಿಪುರಾ ತೋರಿಸಿದೆ (ಲೆಫ್ಟ್ ಈಸ್ ನಾಟ್ ರೈಟ್ ಫಾರ್ ಎನಿ ಪಾರ್ಟ್ ಆಫ್ ಇಂಡಿಯಾ) ಎಂದು ಅವರು ನುಡಿದರು.  ’ನಾವು ಕರ್ನಾಟಕದಲ್ಲಿ ದೊಡ್ಡ ವಿಜಯಕ್ಕೆ ಸಜ್ಜಾಗುತ್ತಿದ್ದೇವೆ’ ಎಂದೂ ಅಮಿತ್ ಶಾ ಹೇಳಿದರು. ’ವಿಜಯದ ಬಳಿಕ ವಿಜಯ ಲಭಿಸುತ್ತಿರುವುದು ಧನಾತ್ಮಕ ಸಂಕೇತ. ಇದು ೨೦೧೯ಕ್ಕೆ ಮೊದಲೇ ನಮ್ಮ ವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಅಮಿತ್ ಶಾ ನುಡಿದರು.

2018: ನವದೆಹಲಿ: ತ್ರಿಪುರದಲ್ಲಿ ಬಿಜೆಪಿಯ ಐತಿಹಾಸಿಕ ವಿಜಯ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡಿನಲ್ಲಿ ಮಿತ್ರ ಪಕ್ಷಗಳ ಉತ್ತಮ ಸಾಧನೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಜನರು ಅಭಿವೃದ್ಧಿಪರ ಎನ್ ಡಿ ಎ ಮೇಲೆ ವಿಶ್ವಾಸ ಇರಿಸಿದ್ದಾರೆ ಮತ್ತು ಅದೇ ವೇಳೆ ನೇತ್ಯಾತ್ಮಕ ಮತ್ತು ಸಂಪರ್ಕರಹಿತ ರಾಜಕಾರಣವನ್ನು ತಿರಸ್ಕರಿದ್ದಾರೆ’ ಎಂದು ಹೇಳಿದರು.  ತ್ರಿಪುರದಲ್ಲಿನ ಬಿಜೆಪಿಯ ಐತಿಹಾಸಿಕ ವಿಜಯವು ಸೈದ್ಧಾಂತಿಕ ನೆಲೆಯಲ್ಲಿ ಲಭಿಸಿದೆ ಎಂದು ಅವರು ನುಡಿದರು.  ಸರಣಿ ಟ್ವೀಟ್ ಗಳನ್ನು ಮಾಡಿದ ಪ್ರಧಾನಿ ಮೋದಿ ಅವರು, "ಜನರು ಪದೇ ಪದೇ, ಚುನಾವಣೆಯ ಬಳಿಕ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಧನಾತ್ಮಕ ಮತ್ತು ಅಭಿವೃದ್ಧಿ ಪರ ಕಾರ್ಯಸೂಚಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಅದೇ ವೇಳೆ ನೇತ್ಯಾತ್ಮಕ, ಬುಡಮೇಲು ಮಾಡುವ ಸಂಪರ್ಕರಹಿತ ರಾಜಕಾರಣವನ್ನು ನಿರಾಕರಿಸಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.  ತ್ರಿಪುರದಲ್ಲಿನ ವಿಜಯವು ಕ್ರೂರ ಶಕ್ತಿ ಮತ್ತು ಬೆದರಿಕೆ ವಿರುದ್ಧ ಪ್ರಜಾಸತ್ತೆ ಸಾಧಿಸಿರುವ ವಿಜಯವಾಗಿದೆ. ಇವತ್ತು ಭಯದ ವಿರುದ್ಧ ಅಹಿಂಸೆ ಮತ್ತು ಶಾಂತಿಯು ವಿಜಯ ಸಾರಿದೆ. ತ್ರಿಪುರಕ್ಕೆ ನಾವು ಉತ್ತಮ ಸರ್ಕಾರವನ್ನು ನೀಡಲಿದ್ದೇವೆ ಮತ್ತು ಅದು ಅಂತಹ ಉತ್ತಮ ಆಡಳಿತಕ್ಕೆ  ಅರ್ಹವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.  ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಬೆಂಬಲಿಸಿದ ನಾಗಾಲ್ಯಾಂಡ್ ಜನತೆಗೆ ಮೋದಿ ಧನ್ಯವಾದ ಹೇಳಿದರು. ಮೇಘಾಲಯದ ಅಭ್ಯುದಯವು ನಮ್ಮ ಸರ್ಕಾರಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ಮೋದಿ ಹೇಳಿದರು. ಸಂಜೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ಪಕ್ಷದಲ್ಲಿ ಕಾಂಗ್ರೆಸ್ ಸಂಸ್ಕೃತಿ ನುಸುಳದಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಕಾರ್ಯಕರ್ತರು ಈಗ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.  ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ತರಲು ಪಕ್ಷವು ಎಲ್ಲವನ್ನೂ ಮಾಡುವುದು ಎಂದು ಅವರು ನುಡಿದರು.  ಭಾಷಣ ಆರಂಭಿಸಿದ ಬಳಿಕ ಮುಸ್ಲಿಮರ ಪ್ರಾರ್ಥನೆ ’ಆಜಾನ್’ ಸಲುವಾಗಿ ಎರಡು ನಿಮಿಷಗಳ ಮೌನ ತಾಳಿದ ಪ್ರಧಾನಿ, ’ಭಾರತ್ ಮಾತಾ ಕೀ ಜಯ್’ ಘೋಷಣೆಯೊಂದಿಗೆ ಮಾತು ಆರಂಭಿಸಿದರು. ತ್ರಿಪುರಾ, ಕರ್ನಾಟಕ, ಕೇರಳ ಮತ್ತಿತರ ಕಡೆ ಕೊಲೆಯಾದ ಪಕ್ಷದ ಕಾರ್‍ಯಕರ್ತರನ್ನು ನೆನಪಿಸಿದ ಪ್ರಧಾನಿ ಹುತಾತ್ಮ ಕಾರ್ಯಕರ್ತರ ಬಲಿದಾನ ಈ ವಿಜಯಕ್ಕೆ ಕಾರಣ ಎಂದು ಹೇಳಿದರು.  ರಾಜಕೀಯವು ಸಿದ್ದಾಂತಗಳ ತಾಕಲಾಟ. ಈ ಪರಾಭವವು ಎಡ ಪಕ್ಷಗಳ ಮಾವೋವಾದಿ ಚಿಂತನೆಯ ಪರಾಭವ. ತ್ತ್ರಿಪುರಾದಲ್ಲಿ ದುರಾಡಳಿತವನ್ನು ಕೊನೆಗೊಳಿಸಲು ಪ್ರಜಾಪ್ರಭುತ್ವ ತಲೆಯೆತ್ತಿದೆ’ ಎಂದು ಹೇಳಿದರು. ಸೂರ್ಯ ಮುಳುಗುವಾಗ ಬಣ್ಣ ಕೆಂಪಾಗುತ್ತದೆ. ಇಲ್ಲೀಗ ಕೆಂಪು ಆಡಳಿತ ಮುಳುಗಿ ಕೇಸರಿ ಬಣ್ಣ ಎಲ್ಲೆಡೆ ಹರಡಿದೆ. ಈಶಾನ್ಯ ಭಾಗದಂತಹ ದೂರದ ಪ್ರದೇಶಗಳಿಗೂ ಬಿಜೆಪಿ ಸರ್ಕಾರದ ಬಗ್ಗೆ ಗೊತ್ತಾಗಿದೆ. ಜನಸಾಮಾನ್ಯರಿಗೆ ಬಿಜೆಪಿ ಕುರಿತ ಸತ್ಯ ಅರಿವಾಗಿದೆ ಎಂದು ಅವರು ನುಡಿದರು.  ವಾಸ್ತುವಿನಲ್ಲೂ ಈಶಾನ್ಯಕ್ಕೆ ಅತ್ಯಂತ ಮಹತ್ವ ಇದೆ. ಈಶಾನ್ಯ ಅತ್ಯಂತ ಪವಿತ್ರ ಭಾಗ.  ಈಗ ಈಶಾನ್ಯವೂ ಭಾರತದ ವಿಕಾಸ ಯಾತ್ರೆಯ ಭಾಗವಾಗಿದೆ ಎಂಬುದು ನನಗೆ ಸಂತಸ ಉಂಟು ಮಾಡಿದೆ ಎಂದು ಮೋದಿ ನುಡಿದರು. ಸೂಯ ಮುಳುಗುವಾಗ ಕೆಂಪು, ಉದಯಿಸುವಾಗ ಕೇಸರಿ ಬಣ್ಣವನ್ನು ಹೊಂದಿರುತ್ತಾನೆ. ಬಿಜೆಪಿಯು ಶೂನ್ಯದಿಂದ ಶಿಖರದತ್ತ ಏಕೆ ಸಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಏಕೆ ಉದಯಿಸುತ್ತಿದೆ ಎಂಬುದನ್ನು ಭಾರತದ ರಾಜಕೀಯ ವಿಶ್ಲೇಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ನುಡಿದರು.  ಈಶಾನ್ಯ ದೆಹಲಿಗಿಂತ ಬಲು ದೂರ ಎಂಬ ಭಾವನೆ ಈಶಾನ್ಯ ಭಾಗದ ಜನರಲ್ಲಿ ಇತ್ತು. ಆದರೆ ನಾವು ಅದನ್ನು ನಿವಾರಿಸಿದ್ದೇವೆ. ನವದೆಹಲಿ ಈಗ ಈಶಾನ್ಯದ ಬಾಗಿಲ ಬುಡಕ್ಕೆ ಬಂದಿದೆ. ಕಳೆದ ೪ ವರ್ಷಗಳಲ್ಲಿ ಹಿಂದಿನ ಯಾವುದೇ ಸರ್ಕಾರವೂ ಕಳಿಸದೇ ಇದ್ದಷ್ಟು ಸಚಿವರನ್ನು ನಾವು ಈಶಾನ್ಯಕ್ಕೆ ಕಳುಹಿಸಿದ್ದೇವೆ. ಪ್ರತಿ ೧೫ ದಿನಕ್ಕೆ ಒಮ್ಮೆ ನಮ್ಮ ಒಬ್ಬ ಸಚಿವ ಅಲ್ಲಿಗೆ ತೆರಳಿ ೨೪ ಗಂಟೆ ಅಲ್ಲಿನ ಜನರೊಂದಿಗೆ ಇದ್ದು ಅವರ ಆಶೋತ್ತರಗಳನ್ನು ಅರಿತುಕೊಂಡು ಈಡೇರಿಸಲು ಯತ್ನಿಸುತ್ತಾನೆ ಎಂದು ಮೋದಿ ನುಡಿದರು. ಜನರು ಅಭಿವೃದ್ಧಿ ರಾಜಕೀಯದ ಸುತ್ತ ಸುತ್ತುತ್ತಾರೆ. ನಮ್ಮ ಕಾರ್ಯಕರ್ತರು ಜನರ ಬಳಿಗೆ ನಿತ್ಯ ತೆರಳುತ್ತಾರೆ ಎಂದು ನುಡಿದ ಪ್ರಧಾನಿ ಕಾಂಗ್ರೆಸ್ ಪಕ್ಷವು ಈಗಿನಂತಹ ಹೀನಾಯ ಸ್ಥಿತಿಗೆ ಹಿಂದೆಂದೂ ಬಂದಿರಲಿಲ್ಲ. ಕೇರಳವಿರಲಿ, ಕರ್ನಾಟಕವಿರಲಿ, ಬಂಗಾಳವಿರಲಿ ಸುಮಾರು ಎರಡು ಡಜನ್ ಕಾರ್ಯಕರ್ತರು ಕೊಲೆಯಾದರು. ಮುಖಾಮುಖಿ ಹೋರಾಟ ಎದುರಿಸಲು ಸಾಧ್ಯವಾದಾಗ ಅವರು ಈ ಮಟ್ಟಕ್ಕೆ ಇಳಿಯುತ್ತಾರೆ. ನಾವು ಮೌನ ವಹಿಸಿದೆವು. ನಾವು ಕ್ರಮ ಕೈಗೊಂಡಾಗ ಅವರು ಇದು ಸೇಡು ಎಂದು ಬೊಬ್ಬಿರಿಯುತ್ತಾರೆ. ಇದು ಸೇಡಲ್ಲ, ರಾಷ್ಟ್ರದ ಅಭಿವೃದ್ಧಿಗಾಗಿ ಕೈಗೊಳ್ಳುವ ಕ್ರಮ’ ಎಂದು ಮೋದಿ ಹೇಳಿದರು.

2018: ಲಂಡನ್ : ನಟ - ರಾಜಕಾರಣಿ ಶತ್ರುಘ್ನ ಸಿನ್ಹ ಅವರಿಗೆ ಬ್ರಿಟನ್ನಿನ ಏಶ್ಯನ್ ವಾಯ್ಸ್ ಸಾಪ್ತಾಹಿಕ ಸುದ್ದಿ ಪತ್ರಿಕೆಯು ತನ್ನ ಹನ್ನೆರಡನೇ ವರ್ಷದ ’ಕಲೆ ಮತ್ತು ಸಾರ್ವಜನಿಕ ಜೀವನ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. ಲಂಡನ್ನಿನ ಸಂಸದೀಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನ್ಹ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಶತ್ರುಘ್ನ ಸಿನ್ಹ ಅವರು ಕಲೆ ಮತ್ತು ರಾಜಕಾರಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು.  "ಆತ್ಮವಿಶ್ವಾಸದಿಂದ ಬದ್ಧತೆ, ಬದ್ಧತೆಯಿಂದ ದೃಢ ಸಂಕಲ್ಪ, ದೃಢ ಸಂಕಲ್ಪದಿಂದ ಭಕ್ತಿ ದೊರಕುತ್ತದೆ. ಈ ಮೂರೂ ಒಟ್ಟಾದಾಗ ಮನುಷ್ಯನಿಗೆ ಆತ್ಮಾನಂದ ಪ್ರಾಪ್ತವಾಗುತ್ತದೆ’ ಎಂದು ೭೨ರ ಹರೆಯದ ಶತ್ರುಘ್ನ ಸಿನ್ಹಾ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಹೇಳಿದರು.  ಈ ಪ್ರಶಸ್ತಿಯ ಮೂಲಕ ನನಗೆ ಇದೇ ಮೊದಲ ಬಾರಿಗೆ ಐತಿಹಾಸಿಕ ವೆಸ್ಟ್ ಮಿನ್‌ಸ್ಟರ್ ಪ್ಯಾಲೇಸ್ ಸಂದರ್ಶಿಸುವ ಅವಕಾಶ ಪ್ರಾಪ್ತವಾಗಿದೆ ಎಂದು ಸಿನ್ಹಾ ಸಂತಸದಿಂದ ನುಡಿದರು.  ೨೨೫ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಶತ್ರುಘ್ನ ಸಿನ್ಹ ೧೯೬೦ರಲ್ಲಿ ನಟನಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ಹಿಂದಿಯ ಜೊತೆ ಇತರ ಕೆಲವು ಭಾರತೀಯ ಭಾಷಾ ಚಿತ್ರಗಳಲ್ಲೂ ಅವರು ನಟಿಸಿದ್ದರು. ಕೇಂದ್ರದ ಆಡಳಿತಾರೂಢ ಬಿಜೆಪಿ ಸದಸ್ಯನಾಗಿರುವ ಶತ್ರುಘ್ನ ಸಿನ್ಹ ಅವರು ಲೋಕಸಭೆಯಲ್ಲಿ ಬಿಹಾರದ ಪಟ್ನಾ ಸಾಹಿಬ್ ಸಂಸದೀಯ ಕ್ಷೇತ್ರದ ಪ್ರತಿನಿಧಿ.  ಇಂಗ್ಲೆಂಡಿನ ಸಂಪುಟ ಸಚಿವ ಸಾಜಿದ್ ಜಾವೀದ್ ಅವರಿಗೂ ಈ ಬಾರಿಯ ಜೀವಮಾನ ಸಾಧನೆಯ ಪ್ರಶಸ್ತಿ ಲಭಿಸಿತು.

2018: ವಾಷಿಂಗ್ಟನ್: ಅಮೆರಿಕದಲ್ಲಿ ಎಚ್-೧ಬಿ ವೀಸಾ ಹೊಂದಿರುವವರ ಸಂಗಾತಿಗಳ ಕೆಲಸದ ಅಧಿಕಾರವನ್ನು ರದ್ದು ಪಡಿಸುವ ನಿರ್ಧಾರವನ್ನು ಟ್ರಂಪ್ ಆಡಳಿತ ವಿಳಂಬಗೊಳಿಸಿತು.  ಇದರಿಂದಾಗಿ ಅಮೆರಿಕದಲ್ಲಿ ದುಡಿಯುತ್ತಿರುವ ಭಾರೀ ಸಂಖ್ಯೆಯ ಭಾರತೀಯ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಸಧ್ಯಕ್ಕೆ ನಿರಾಳತೆ ಲಭಿಸಿತು. ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು (ಡಿಎಚ್ ಎಸ್) ಈವಾರ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಅರ್ಜಿಯಲ್ಲಿ ಎಚ್ ೪ ವೀಸಾ ಬಳಕೆದಾರರ, ಎಚ್-೧ಬಿ ವೀಸಾ ಹೊಂದಿರುವವರ ಕೆಲಸದ ಅಧಿಕಾರವನ್ನು ರದ್ದು ಪಡಿಸುವ ಸಂಬಂಧ ಜೂನ್ ವರೆಗೆ ತಾನು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಇಂತಹ ನಿರ್ಧಾರದಿಂದ ಆಗುವ ಆರ್ಥಿಕ ಪರಿಣಾಮದ ಪರಿಶೀಲನೆಗೆ ತನಗೆ ಸಮಯ ಬೇಕು ಎಂದು ಕೋರಿತು. ೨೦೧೫ರಿಂದ ಉನ್ನತ ಕೌಶಲ್ಯಗಳನ್ನು ಹೊಂದಿರುವ ಹಾಗೂ ವೀಸಾ ಹೊಂದಿರುವ ಎಚ್-೧ಬಿ ವೀಸಾದಾರರ ಸಂಗಾತಿಗಳು ಅಮೆರಿಕದಲ್ಲಿ ದುಡಿಯಲು ಅರ್ಹತೆ ಒದಗಿಸುವ ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ. ಅವರು ಹಿಂದಿನ ಒಬಾಮಾ ಆಡಳಿತ ಜಾರಿಗೊಳಿಸಿದ್ದ ನಿಯಮದ ಅಡಿಯಲ್ಲಿ ಎಚ್-೪ ಅವಲಂಬಿತ ವೀಸಾ ಹೊಂದಿದ್ದಾರೆ.  ಫೆಬ್ರುವರಿ ೨೮ರ ಒಳಗೆ ನಿರ್ಧಾರ ಕೈಗೊಳ್ಳಲು ಡಿಎಚ್ ಎಸ್ ಈ ಹಿಂದೆ ನಿರ್ಧರಿಸಿತ್ತು.  ಸರ್ಕಾರದ ಹಿಂದಿನ ನಿರ್ಣಯಗಳಿಗೆ ಅನುಗುಣವಾಗಿ ವಿಷಯಕ್ಕೆ ಸಂಬಂಧಿಸಿದಂತೆ ೨೦೧೮ರ ಫೆಬ್ರುವರಿಯಲ್ಲಿ ಎನ್ ಪಿಆರ್ ಎಂ (ಉದ್ದೇಶಿತ ನಿಯಮ ರೂಪಿಸುವ ನೋಟಿಸ್) ಜಾರಿ ಸಂಬಂಧವಾಗಿ ಡಿಎಚ್ ಎಸ್ ಕಾರ್ಯ ಮಗ್ನವಾಗಿತ್ತು.  ಏನಿದ್ದರೂ, ೨೦೧೮ರ ಜನವರಿಯಲ್ಲಿ, ಈ ಖಟ್ಲೆಗೆ ಸಂಬಂಧಿಸಿದಂತೆ ಡಿಎಚ್ ಎಸ್ ನಲ್ಲಿ ಎಚ್-೪ ವೀಸಾ ಕುರಿತು ಪರಿಶೀಲಿಸುತ್ತಿರುವ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಯು (ಯುಎಸ್ ಸಿಐಎಸ್) ನಿಯಮವನ್ನು ಮರುಪರಿಶೀಲಿಸಿ ಕರಡು ಪ್ರಸ್ತಾಪಕ್ಕೆ ಮಹತ್ವದ ಪರಿಷ್ಕರಣೆ ಮಾಡುವ ಅಗತ್ಯ ಇದೆ ಎಂದು ತೀರ್‍ಮಾನಿಸಿತು ಎಂದು ಡಿಎಚ್ ಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಹೊಸ ಅರ್ಜಿಯಲ್ಲಿ ತಿಳಿಸಿತು.  ಪರಿಷ್ಕರಣೆಗೆ ಹೊಸ ಆರ್ಥಿಕ ವಿಶ್ಲೇಷಣೆಯ ಅಗತ್ಯ ಇದೆ. ಅದನ್ನು ಮಾಡಲು ಹಲವರು ವಾರಗಳು ಬೇಕಾಗುತ್ತವೆ. ಆದ್ದರಿಂದ ಫೆಬ್ರುವರಿ ಒಳಗೆ ಅದನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದೂ ಡಿಎಚ್ ಎಸ್ ನ್ಯಾಯಾಲಯಕ್ಕೆ ತಿಳಿಸಿತು.  ನಿರ್ಣಯ ರೂಪಿಸುವ ಪ್ರಕ್ರಿಯೆಗೆ ಕನಿಷ್ಠ ಕನಿಷ್ಠ ೪ ತಿಂಗಳ ಕಾಲವಾದರೂ ಬೇಕಾಗುತ್ತದೆ ಎಂಬುದಾಗಿ ಡಿಎಚ್ ಎಸ್ ಹೇಳಿರುವುದು ಬಹುತೇಕ ಭಾರತೀಯ ನೌಕರರೇ ಆಗಿರುವ ಎಚ್-೧ಬಿ ವೀಸಾದಾರರ ಸಂಗಾತಿಗಳಿಗೆ ತಾತ್ಕಾಲಿಕ ನೆಮ್ಮದಿಯನ್ನು ನೀಡಿತು. ಎಚ್-೧ಬಿ ವೀಸಾ ಕಾರ್‍ಯಕ್ರಮವು ವಿದೇಶೀ ವಿಶೇಷ ಕೌಶಲ್ಯಗಳ ನೌಕರರನ್ನು ಅಮೆರಿಕಕ್ಕೆ ನೌಕರಿಗಾಗಿ ಬರಲು ಆಕರ್ಷಿಸುವ ಕಾರ್‍ಯಕ್ರಮವಾಗಿದ್ದು, ಭಾರತ ಮತ್ತು ಚೀನಾದಿಂದ ಬಹುತೇಕ ಮಂದಿ ಇದರ ಅಡಿಯಲ್ಲಿ ಅಮೆರಿಕಕ್ಕೆ ಬರುತ್ತಾರೆ.

2018: ಮುಂಬೈಪಂಜಾಬ್ನ್ಯಾಷನಲ್ಬ್ಯಾಂಕಿಗೆ (ಪಿಎನ್ಬಿ) ಬಹು ಕೋಟಿ ವಂಚನೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿಗಳಾದ ನೀರವ್ಮೋದಿ ಹಾಗೂ ಮೆಹುಲ್ಚೋಕ್ಸಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ಹೊರಡಿಸಲಾಯಿತು.  ಸಂಬಂಧ ವಿಶೇಷ ನ್ಯಾಯಾಲಯ  ಇಬ್ಬರ ವಿರುದ್ಧ ಕ್ರಮಕ್ಕೆ ಆದೇಶ ಮಾಡಿತು.  ವಜ್ರಾಭರಣ ಉದ್ಯಮಿ ನೀರವ್ಮೋದಿ ಹಾಗೂ ಅವರ ಸಂಬಂಧಿ ಗೀತಾಂಜಲಿ ಜೆಮ್ಸ್ ಮೇಹುಲ್ಚೋಕ್ಸಿ ಅವರ ವಿರುದ್ಧ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್) ಅಡಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ನೀಡಿತು.  ನ್ಯಾಯಾಲಯ ನೀಡಿರುವ ಜಾಮೀನು ರಹಿತ ವಾರಂಟ್ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ನೀರವ್ಮೋದಿ ಪರ ವಕೀಲ ವಿಜಯ್ಅಗರ್ವಾಲ್ಹೇಳಿದರು.  ಪ್ರಕರಣ ಹೊರಬಂದ ಬಳಿಕ ನೀರವ್ ಮೋದಿ ದೇಶದಿಂದ ಪರಾರಿಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.  ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ಸ್ಟಾರ್ವಜ್ರಾಭರಣ ಸಂಸ್ಥೆಯ ಐದು ಮಂದಿ ಅಧಿಕಾರಿಗಳನ್ನು ಫೆ.20ರಂದು ಬಂಧಿಸಲಾಗಿತ್ತು. ಮೂಲಕ, ಪ್ರಸ್ತುತ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಬಂಧಿಸಿದಂತಾಗಿತ್ತು. ಪೈಕಿ ಮೂವರು, ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ಮೋದಿ ಅವರ ಕಂಪನಿ ಜೊತೆ ಸಂಪರ್ಕ ಹೊಂದಿದ್ದು, ಮತ್ತೆ ಮೂವರು ಚೋಕ್ಸಿಯವರ ಗೀತಾಂಜಲಿ ಗ್ರೂಪ್ಕಂಪನಿಗೆ ಸೇರಿದವರು.

2008: ರಷ್ಯದಲ್ಲಿ ನಡೆದ ಚುನಾವಣೆಯಲ್ಲಿ ಡಿಮಿಟ್ರಿ ಮೆಡ್ವಡೆವ್ (42) ಅವರು ಶೇ 70.22ರಷ್ಟು ಮತ ಗಳಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಚಲಾಯಿತ ಮತಗಳ ಪೈಕಿ ಶೇ 99ರಷ್ಟು ಮತ ಎಣಿಕೆ ಕೊನೆಗೊಂಡಾಗ ಸಮೀಪದ ಕಮ್ಯುನಿಸ್ಟ್ ಪಾರ್ಟಿ ನಾಯಕ ಗೆನ್ನಡಿ ಜುಗನೊವ್ ಶೇ 17.77ರಷ್ಟು ಹಾಗೂ ಅಲ್ಟ್ರಾ ನ್ಯಾಶನಲಿಸ್ಟ್ ನಾಯಕ ವ್ಲಾಡಿಮಿರ್ ಝಿರಿನೊವಿಸ್ಕಿ ಶೇ 9ರಷ್ಟು ಮತ ಗಳಿಸಿದ್ದರು. ನಿರ್ಗಮನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ಕಳೆದ ಡಿಸೆಂಬರಿನಲ್ಲೇ ರಾಷ್ಟ್ರದ ಮುಂದಿನ ಅಧ್ಯಕ್ಷ ಎಂದು ಬಿಂಬಿತರಾದ ಮೆಡ್ವೆಡೆವ್ ಅವರು ನಂತರ ಮೇ 7ರಂದು ಅಧಿಕಾರ ಸ್ವೀಕರಿಸಿದರು.

2008: ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ 91 ಮಂದಿ ಪ್ರಜೆಗಳಿದ್ದ ದೊಡ್ಡ ದೋಣಿಯೊಂದನ್ನು ಲಂಕಾ ನೌಕಾಪಡೆ ಎಲ್ ಟಿ ಟಿ ಇ ಬಾಹುಳ್ಯದ ಮಲೈತೀವು ಸಮೀಪ ವಶಕ್ಕೆ ತೆಗೆದುಕೊಂಡು ಅದರೊಳಗೆ ಬದುಕಿ ಉಳಿದಿದ್ದ 71 ಮಂದಿಗೆ ಅಗತ್ಯ ಆಹಾರ, ಔಷಧ ಉಪಚಾರ  ನೀಡಿತು. ನೌಕೆಯಲ್ಲಿದ್ದ ಸುಮಾರು 20 ಮಂದಿ ಹಸಿವೆ ಮತ್ತು ನೀರಿನ ಕೊರತೆಯಿಂದ ಇದಕ್ಕೆ ಮುನ್ನವೇ ಮೃತರಾಗಿದ್ದರು. ಬಾಂಗ್ಲಾ- ಮ್ಯಾನ್ಮಾರ್  ಗಡಿಯ ಕಾಕ್ಸ್ ಬಜಾರ್ ಎಂಬಲ್ಲಿಂದ ಈ ನೌಕೆ ಫೆ.9ರಂದು ಥಾಯ್ಲೆಂಡ್ ಮತ್ತು ಮಲೇಷಿಯಾದತ್ತ ಹೊರಟಿತ್ತು. ಮಾನ್ಮಾರಿನ 67 ಮತ್ತು ಬಾಂಗ್ಲಾದ 24 ಮಂದಿ ಉದ್ಯೋಗ ಅರಸಿ ಈ ಅಕ್ರಮ ಯಾನ ಕೈಗೊಂಡಿದ್ದರು. ಆದರೆ ದೋಣಿ ಸಮುದ್ರದಲ್ಲಿ ಕೆಟ್ಟು ಹೋಗಿ 13 ದಿನಗಳ ಕಾಲ ನೀರಲ್ಲಿ ತೇಲುತ್ತ ಶ್ರೀಲಂಕಾ ದಡದತ್ತ ಬಂದಿತ್ತು. ಈ ದೋಣಿಯನ್ನು ಕಂಡ ಮೀನುಗಾರರು ನೌಕಾಪಡೆಗೆ ಮಾಹಿತಿ ಮುಟ್ಟಿಸಿದ್ದರು.

2008: ಎಲ್ ಟಿ ಟಿ ಇ ನಾಯಕ `ಪ್ರಭಾಕರನ್' ಹೆಸರಿನ ಸಿನಿಮಾಕ್ಕೆ ಶ್ರೀಲಂಕಾದ ಸೆನ್ಸಾರ್ ಮಂಡಳಿ ಅನುಮತಿ ನೀಡಿತು. ಸುಮಾರು ಮೂರು ದಶಕಗಳ ಜನಾಂಗೀಯ ಕಲಹದ ಮೇಲೆ ಬೆಳಕು ಚೆಲ್ಲುವ ಪ್ರಥಮ ಪ್ರಯತ್ನ ಇದಾಗಿದ್ದು,  ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಚಿತ್ರ ನಿರ್ಮಿಸಲಾಗಿದೆ ಎಂದು ನಿರ್ಮಾಪಕರು ಕೊಲಂಬೋದಲ್ಲಿ ಪ್ರಕಟಣೆಯಲ್ಲಿ ತಿಳಿಸಿದರು.

2008: ದಕ್ಷಿಣ ಆಫ್ಘಾನಿಸ್ಥಾನದಲ್ಲಿ ರಕ್ಷಣಾ ಪಡೆ ಹಾಗೂ ನ್ಯಾಟೊ ಗುಂಪು ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ 20 ತಾಲಿಬಾನ್ ಉಗ್ರರು ಹತರಾದರು ಅಥವಾ ಗಾಯಗೊಂಡರು ಎಂದು ರಕ್ಷಣಾ ಸಚಿವಾಲಯ ತಿಳಿಸಿತು. ತಾಲಿಬಾನ್ ಉಗ್ರರೇ ಬಹುಸಂಖ್ಯೆಯಲ್ಲಿದ್ದ ದಕ್ಷಿಣ ಪ್ರಾಂತ್ಯದ ಹೆಲ್ಮಂಡ್ನಲ್ಲಿ ಈ ಕಾರ್ಯಾಚರಣೆ ನಡೆಯಿತು.

2008: ಇರಾಕಿನ ರಾಜಧಾನಿ ಬಾಗ್ದಾದಿನ ಮಧ್ಯಭಾಗದಲ್ಲಿ ಕಾರುಬಾಂಬ್ ಸ್ಪೋಟದಿಂದಾಗಿ 23 ಜನ ಮೃತರಾಗಿ 45 ಮಂದಿ ಗಾಯಗೊಂಡರು. ಕಾರ್ಮಿಕ ಸಚಿವಾಲಯ ಕಟ್ಟಡದ ಬಳಿಯ ಮಾರುಕಟ್ಟೆ ಪ್ರದೇಶವಾದ ಬಾಬ್ ಅಲ್ ಮುಝಾಮ್ ಬಳಿ ಬಾಂಬ್ ಸ್ಫೋಟಗೊಂಡಿತು.

2008: ನ್ಯಾಯಾಧೀಶರು ಹಾಗೂ ನ್ಯಾಯಾಂಗ ಅಧಿಕಾರಿಗಳು ಅವರು ಕೆಲಸ ನಿರ್ವಹಿಸಿರುವ ಹಾಗೂ ಅದಕ್ಕಿಂತ ಕೆಳಹಂತದ ಕೋರ್ಟುಗಳಲ್ಲಿ ತಮ್ಮ ನಿವೃತ್ತಿಯ ನಂತರ ವಕೀಲಿ ವೃತ್ತಿ ನಡೆಸಬಾರದು ಎಂಬ ನೂತನ ನಿಯಮ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತು. ಭಾರತೀಯ ವಕೀಲರ ಪರಿಷತ್ತಿನಿಂದ ತಿದ್ದುಪಡಿಯಾಗಿ ಜಾರಿಯಾಗಿರುವ ಈ ನಿಯಮವನ್ನು ರದ್ದು ಮಾಡುವಂತೆ ನಿವೃತ್ತ ನ್ಯಾಯಾಂಗ ಅಧಿಕಾರಿ ವಿ.ಪದ್ಮನಾಭ ಕೆದಿಲಾಯ ಕೋರ್ಟನ್ನು ಕೋರಿದರು. ಈ ಅರ್ಜಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೋಟಿಸ್ ಜಾರಿಗೆ ಆದೇಶಿಸಿದರು. ನೂತನ ನಿಯಮ ಜಾರಿಯಾಗುವುದಕ್ಕಿಂತ ಮುಂಚೆ ಇದ್ದ ನಿಯಮದ ಪ್ರಕಾರ, ನ್ಯಾಯಾಧೀಶರು ಅಥವಾ ನ್ಯಾಯಾಂಗ ಅಧಿಕಾರಿಗಳು ನಿವೃತ್ತಿಗೆ ಮೂರು ವರ್ಷ ಮುಂಚಿತವಾಗಿ ಯಾವ ಕೋರ್ಟಿನಲ್ಲಿ ಕೆಲಸ ನಿರ್ವಹಿಸಿರುತ್ತಾರೆಯೋ, ಅಂತಹ ಕೋರ್ಟುಗಳಲ್ಲಿ ಮಾತ್ರ ನಿವೃತ್ತಿಯ ನಂತರ ಕೇವಲ ಎರಡು ವರ್ಷಗಳು ವಕೀಲಿ ವೃತ್ತಿ ನಡೆಸಬಾರದು ಎಂದಿತ್ತು. ಅವರು ಬೇರೆ ಯಾವುದೇ ಕೋರ್ಟುಗಳಲ್ಲಿ ವೃತ್ತಿ ನಡೆಸಬಹುದಾಗಿತ್ತು. 

2008: ಕರ್ನಾಟಕ ಸಂಗೀತದ ವಿದ್ವಾಂಸ ಚಿಂತಲಪಲ್ಲಿ ನಾಗರಾಜರಾವ್ (97) ಅವರು ಬೆಂಗಳೂರಿನಲ್ಲಿ  ನಿಧನರಾದರು. ವಿದ್ವಾನ್ ಚಿಂತಲಪಲ್ಲಿ ವೆಂಕಟರಾವ್ ಅವರ ಶಿಷ್ಯರಾಗಿದ್ದ ನಾಗರಾಜರಾವ್ ಅವರು ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಅನೇಕ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದರು. `ಸಂಗೀತ ಪರಂಪರಾ ನಿಧಿ', `ಕಲಾಭೂಷಣ', `ಆರ್. ಕೆ. ಪದ್ಮನಾಭ' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿದ್ದವು.

2008: ಜಾಗತಿಕ ಖಾಸಗಿ ಬ್ಯಾಂಕ್ ಎಚ್ ಎಸ್ ಬಿ ಸಿ, ನಿರ್ದೇಶಕರಾಗಿ ಇನ್ಫೋಸಿಸ್ ಮುಖ್ಯಸ್ಥ ನಾಗವಾರ ರಾಮರಾವ್ ನಾರಾಯಣ ಮೂರ್ತಿ ಸಿಬಿಇ (61) ನೇಮಕಗೊಂಡರು. ಇದಕ್ಕಾಗಿ ಮೂರ್ತಿ ವಾರ್ಷಿಕ ರೂ 50 ಲಕ್ಷ (65,000ಪೌಂಡ್) ಸಂಬಳ ಪಡೆಯುವರು. ಈ ನೇಮಕ ಮೇ 1, 2008 ರಿಂದ ನೇಮಕ ಜಾರಿಯಾಗುತ್ತದೆ. ಅವರು ಸ್ವತಂತ್ರ ನಿರ್ದೇಶಕರಾಗಿರುತ್ತಾರೆ ಎಂದು ಎಚ್ ಎಸ್ ಬಿ ಸಿ ತಿಳಿಸಿತು.

2008: ಕನ್ನಡ ಮಾಧ್ಯಮದಲ್ಲಿ ತರಗತಿ ನಡೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. `ಕನ್ನಡ ಮಾಧ್ಯಮದಲ್ಲಿಯೇ ತರಗತಿ ನಡೆಸುತ್ತೇವೆ' ಎಂದು ಶಿಕ್ಷಣ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರೆ ಅದನ್ನು ಪಾಲಿಸುವುದು ಪ್ರತಿಯೊಂದು ಶಾಲೆಯ ಕರ್ತವ್ಯ. ಸ್ವಇಚ್ಛಾ ಯೋಜನೆ ಅಡಿ ಬರೆದುಕೊಡಲಾದ ಈ ಮುಚ್ಚಳಿಕೆಗೆ ಶಿಕ್ಷಣ ಸಂಸ್ಥೆಗಳು ಬದ್ಧವಾಗಿರಲೇಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಸ್ಪಷ್ಟಪಡಿಸಿದರು.

2008: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಲ್ಲಿನ ವಿಳಂಬವನ್ನು ಪ್ರತಿಭಟಿಸಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆ ಭಾಗದ ಜನರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್)ಯ ನಾಲ್ಕು ಜನ ಸದಸ್ಯರು ಲೋಕಸಭೆಗೆ ರಾಜೀನಾಮೆ ನೀಡಿದರು.  

2007: ತುಳು ಭಾಷೆ, ಸಾಹಿತ್ಯ ಮತ್ತು ಕಲೆಯ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ್ದಕ್ಕಾಗಿ ತುಳು ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಗೆ ಡಾ. ವಾಮನ ನಂದಾವರ (ತುಳು ಸಾಹಿತ್ಯ ಸಂಶೋಧನೆ), ರಾಮದಾಸ್ ದೇವಾಡಿಗ (ತುಳು ನಾಟಕ ಚಲನಚಿತ್ರ) ಹಾಗೂ ಮಾಚಾರು ಗೋಪಾಲ ನಾಯ್ಕ (ತುಳು ಜಾನಪದ) ಅವರನ್ನು 2006ನೇ ಸಾಲಿಗೆ ಆಯ್ಕೆ ಮಾಡಲಾಯಿತು.

2006: ಉಸಿರಾಟದ ತೊಂದರೆ ಮತ್ತು ಎದೆನೋವಿನ ಕಾರಣ ಬೆಂಗಳೂರಿನ ವೊಕಾರ್ಡ್ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ವರನಟ ರಾಜಕುಮಾರ್ ಮನೆಗೆ ವಾಪಸಾದರು.

2006: ದಕ್ಷಿಣ ಧ್ರುವ (ಅಂಟಾರ್ಕ್ಟಿಕ್) ಪ್ರದೇಶದ ಕೆಳಗೆ ವೋಲ್ಟೋಕ್ ಹೆಸರಿನ ಸ್ಫಟಿಕ ಶುದ್ಧ ಸರೋವರ ಇರುವುದನ್ನು ತಾವು ಪತ್ತೆ ಹಚ್ಚಿರುವುದಾಗಿ ಈ ಪ್ರದೇಶದಲ್ಲಿ ಸಂಶೋಧನೆ ನಿರತರಾಗಿರುವ ರಷ್ಯಾದ ವಿಜ್ಞಾನಿಗಳು ಸುದ್ದಿ ಕಳುಹಿಸಿದರು. ಈ ಸರೋವರದ ಪತ್ತೆಗಾಗಿ ಅವರು ಹಿಮದ ರಾಶಿಯ ಕೆಳಗೆ 430 ಅಡಿ ಸುರಂಗ ಕೊರೆದಿದ್ದು, 2008ರ ವೇಳೆಗೆ ಸರೋವರದ ಅಸ್ತಿತ್ವ ಸಾಬೀತು ಖಚಿತ ಎಂದು ಹೇಳಿದರು.

2006: ರೈಲ್ವೇ ಸಚಿವಾಲಯ ನೇಮಿಸಿದ್ದ ನ್ಯಾಯಮೂರ್ತಿ ಯು.ಪಿ. ಬ್ಯಾನರ್ಜಿ ಸಮಿತಿಯು ರೈಲ್ವೇ ಮಂಡಳಿ ಅಧ್ಯಕ್ಷ ಜೆ.ಸಿ. ಬತ್ರಾ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿ, ಗೋಧ್ರಾದ ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ಅನಾಹುತ ಒಂದು ಆಕಸ್ಮಿಕ ಎಂದು ಹೇಳಿತು. 2002ರ ಫೆಬ್ರುವರಿ 22ರಂದು ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಕರಸೇವಕರು ಪ್ರಯಾಣಿಸುತ್ತಿದ್ದ ಎಸ್-6 ಬೋಗಿಗೆ ಉದ್ದೇಶ ಪೂರ್ವಕ ಬೆಂಕಿ ಹಾಕಿಲ್ಲ, ಅದೊಂದು ಆಕಸ್ಮಿಕ ಘಟನೆ ಎಂದು ವರದಿ ತಿಳಿಸಿತು. 2005ರ ಜನವರಿಯಲ್ಲಿ ನೀಡಿದ ಮಧ್ಯಂತರ ವರದಿಯಲ್ಲೂ ಬ್ಯಾನರ್ಜಿ ಇದನ್ನೇ ಹೋಲುವ ಅಂಶಗಳನ್ನು ನೀಡಿದ್ದರು. 

1962: ಜಾಕಿ ಜಾಯ್ನರ್ ಕೆರ್ ಸೀ ಹುಟ್ಟಿದ ದಿನ. ಅಮೆರಿಕದ ಅಥ್ಲೆಟಿಕ್ ಆದ ಈಕೆ ಹೆಪ್ಲಾಥಾನಿನಲ್ಲಿ 7000ಕ್ಕೂ ಹೆಚ್ಚು ಪಾಯಿಂಟ್ ಗಳಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1951: ಕಲಾವಿದೆ ಮಾಲತಿ ಶರ್ಮ ಜನನ.

1941: ಕಲಾವಿದ ಎಸ್. ಜಿ. ವಾಸುದೇವ್ ಜನನ.

1923: ಇಬ್ಬರು ಕಿರಿಯ ಪತ್ರಕರ್ತರಾದ ಹೆನ್ರಿ ಆರ್. ಲ್ಯೂಸ್ ಮತ್ತು ಬ್ರಿಟನ್ ಹಡ್ಡನ್ ನ್ಯೂಯಾರ್ಕಿನಲ್ಲಿ `ಟೈಮ್' ಮ್ಯಾಗಜಿನ್ನಿನ ಮೊದಲ ಸಂಚಿಕೆಯನ್ನು ಪ್ರಕಟಿಸಿದರು. 1929ರಲ್ಲಿ ಲ್ಯೂಸ್ ಅವರು ವ್ಯಾಪಾರಿ ಮ್ಯಾಗಜಿನ್ `ಫಾರ್ಚೂನ್'ನ್ನು ಹೊರತಂದರು. 1936ರಲ್ಲಿ ಸಚಿತ್ರ ಮ್ಯಾಗಜಿನ್ `ಲೈಫ್'ನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದರು.

1847: ಅಮೆರಿಕಾದ ಅಲೆಗ್ಸಾಂಡರ್ ಗ್ರಹಾಂ ಬೆಲ್ ಹುಟ್ಟಿದ ದಿನ. ಈತ ಟೆಲಿಫೋನನ್ನು ಸಂಶೋಧಿಸಿ ಖ್ಯಾತಿ ಪಡೆದ ವ್ಯಕ್ತಿ. (2002ರಲ್ಲಿ ಇಟಲಿಯ ವಲಸೆಗಾರ ಆಂಟೋನಿಯೋ ಮೆವುಸ್ಸಿಯನ್ನು `ಟೆಲಿಫೋನ್' ಸಂಶೋಧಕ ಎಂಬುದಾಗಿ ಮಾನ್ಯತೆ ನೀಡುವ ಮೂಲಕ ಅಮೆರಿಕನ್ ಕಾಂಗ್ರೆಸ್ ಅಂಗೀಕೃತ ಇತಿಹಾಸವನ್ನು ಬದಲಾಯಿಸಿತು. ಆಂಟೋನಿಯೋ ಮೆವುಸ್ಸಿ ತನ್ನ ವರ್ಕ್ ಶಾಪ್ನಿಂದ ಬೆಡ್ ರೂಮಿಗೆ ವೈರ್ ಸಂಪರ್ಕ ಇಟ್ಟುಕೊಂಡು ತಾನು ಕೆಲಸ ಮಾಡುತ್ತಿದ್ದಾಗಲೇ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಪತ್ನಿಯ ಜೊತೆಗೆ ಸಂಪರ್ಕ ಹೊಂದಿದ್ದ. ಈತನ ಈ `ಟೆಲೆಟ್ರೊಫೋನ್' ನ್ನು 1860ರಲ್ಲಿ ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು. ಆಗ `ಟೆಲಿಫೋನ್' ಸಂಶೋಧಕ ಗ್ರಹಾಂಬೆಲ್ ಅಲ್ಲ, ಆಂಟೋನಿಯೋ ಮೆವುಸ್ಸಿ ಎಂಬುದು ಬೆಳಕಿಗೆ ಬಂತು.)   

1839: ಜೆಮ್ ಸೆಟ್ ಜಿ ನಾಸ್ಸೇರ್ ವಾನ್ ಜಿ  ಟಾಟಾ (1839-1904) ಹುಟ್ಟಿದರು. ಭಾರತದಲ್ಲಿ ಟಾಟಾ ಉದ್ಯಮ ಸಾಮ್ರಾಜ್ಯ ಸ್ಥಾಪಿಸಿದ ಇವರು ಬಿಹಾರಿನಲ್ಲಿ ಜೆಮ್ ಶೆಡ್ ಪುರದಲ್ಲಿ ಭಾರತದ ಮೊತ್ತ ಮೊದಲ ಆಧುನಿಕ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಿದರು.

1707: ಮೊಘಲ್ ಚಕ್ರವರ್ತಿ ಔರಂಗಜೇಬ್ (1658-1707) ತನ್ನ 88ನೇ ವಯಸ್ಸಿನಲ್ಲಿ ಮೃತನಾದ. 

1581: ನಾಲ್ಕನೇ ಸಿಖ್ ಗುರು ಗುರು ರಾಮದಾಸ್ ನಿಧನರಾದರು. ಅರ್ಜುನ್ ಅವರ ಉತ್ತರಾಧಿಕಾರಿಯಾದರು. 

No comments:

Post a Comment