ಇಂದಿನ ಇತಿಹಾಸ History Today ಫೆಬ್ರುವರಿ 22
2019:
ದಕ್ಷಿಣ ಕೊರಿಯಾ(ಸಿಯೋಲ್): ದಕ್ಷಿಣ ಕೊರಿಯಾ ಪ್ರವಾಸದಲ್ಲಿದ್ದ
ಪ್ರಧಾನಿ ನರೇಂದ್ರ ಮೋದಿಯವರಿಗೆ 2018ನೇ ಸಾಲಿನ ಪ್ರತಿಷ್ಠಿತ
"ಸಿಯೋಲ್ ಶಾಂತಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಅಂತಾರಾಷ್ಟ್ರೀಯ ಸಹಕಾರ ಮತ್ತು ವಿಶ್ವದ ಆರ್ಥಿಕ ಅಭಿವೃದ್ಧಿಗೆ ಮೋದಿಯವರು ನೀಡಿದ ಕೊಡುಗೆ ಪರಿಗಣಿಸಿ ಅವರಿಗೆ ಗೌರವ ನೀಡಲಾಗಿದೆ ಎಂದು ಪ್ರಶಸ್ತಿ ಸ್ಥಾಪಿಸಿದ ಸಿಯೋಲ್ ಶಾಂತಿ ಪ್ರತಿಷ್ಠಾನ ತಿಳಿಸಿತು. ಇದೇ ಸಂದರ್ಭದಲ್ಲಿ ಪ್ರಧಾನಿಯವರ ಜೀವನ-ಸಾಧನೆಯ ಕಿರುಚಿತ್ರ ಪ್ರದರ್ಶಿ ಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ "ಪ್ರಶಸ್ತಿ ಮೊತ್ತ 2 ಲಕ್ಷ ಅಮೆರಿಕನ್ ಡಾಲರ್ ಅನ್ನು ಗಂಗಾ ಶುದ್ಧೀಕರಣ ಯೋಜನೆಗೆ ನೀಡುತ್ತೇನೆ. ಈ ಗೌರವ ಭಾರತೀಯರಿಗೆ ಸಲ್ಲುತ್ತದೆ' ಎಂದು ಹೇಳಿದರು. 1990ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿ ಸ್ವೀಕರಿಸು ವವರಲ್ಲಿ ಭಾರತದ ಪ್ರಧಾನಿ 14ನೇಯವರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ರಶಸ್ತಿ ಕೇವಲ ನನಗೆ ವೈಯಕ್ತಿವಾಗಿ ನೀಡಿಲ್ಲ ಎಂದು ನಂಬುತ್ತೇನೆ. ಯಾಕೆಂದರೆ ಇದು 130 ಕೋಟಿ ಭಾರತೀಯರಿಗೆ ದೊರಕಿದ ಗೌರವವಾಗಿದೆ. ಭಾರತ ದೇಶದ ಜನರ ಶ್ರಮ, ಪ್ರಭಾವ, ನೀಡಿದ ಧೈರ್ಯದಿಂದಾಗಿ ಕಳೆದ 5 ವರ್ಷಗಳಲ್ಲಿ ಭಾರತ ಯಶಸ್ವಿ ಸಾಧಿಸಲು ಸಾಧ್ಯವಾಯಿತು ಎಂದರು. ದೇಶದ ಜನರ ಭಾಗವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಅಲ್ಲದೇ ಆ ನಿಟ್ಟಿನಲ್ಲಿ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತ ಕಿರುಚಿತ್ರವನ್ನು
ಪ್ರದರ್ಶಿಸಲಾಯಿತು. ದೃಢ ನಿರ್ಧಾರಗಳ ಮೂಲಕ ದೇಶಿಯ ಹಾಗೂ ಜಾಗತಿಕವಾಗಿ ಶಾಂತಿಗಾಗಿ ಮೋದಿ ಅವರು ನೀಡಿದ ಕೊಡುಗೆಯನ್ನು ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿ ಪರಿಗಣಿಸಿರುವುದಾಗಿ ತಿಳಿಸಿತು. ಕೊರಿಯಾಕ್ಕೆ ಕೃತಜ್ಞತೆ: ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಫೆ.14ರಂದು ಪುಲ್ವಾಮಾ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮತ್ತು ಭಾರತಕ್ಕೆ ಬೆಂಬಲ ನೀಡಿದ ದಕ್ಷಿಣ ಕೊರಿಯಾಕ್ಕೆ ಕೃತಜ್ಞತೆ ಸಲ್ಲಿಸಿದರು.. ಜತೆಗೆ ವಿಶ್ವಕ್ಕೆ ಪಿಡುಗಾಗಿರುವ ಭಯೋತ್ಪಾದನೆಯನ್ನು
ಎಲ್ಲಾ ರಾಷ್ಟ್ರಗಳೂ ಸೇರಿಕೊಂಡು ಎದುರಿಸಬೇಕಾಗಿದೆ
ಎಂದು ಹೇಳಿದರು. ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮಕ್ಕೆ ಮೊದಲು ಪ್ರಧಾನಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್-ಜೆ-ಇನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾಧ್ಯಮ, ಮೂಲ ಸೌಕರ್ಯ ಅಭಿವೃದ್ಧಿ, ಸ್ಟಾರ್ಟಪ್, ಅಂತಾರಾಷ್ಟ್ರೀಯ ಅಪರಾಧ ನಿಯಂತ್ರಣಕ್ಕೆ ಸಹಕಾರ ಸೇರಿದಂತೆ ಆರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಕ್ರಿಸ್ತಶಕ 48ನೇ ಶತಮಾನದಲ್ಲಿ ಅಯೋಧ್ಯೆಯಿಂದ ಕೊರಿಯಾಕ್ಕೆ ತೆರಳಿದ್ದ ರಾಜ ಕಿಂಗ್- ಸುರೋನನ್ನು ವಿವಾಹವಾದ ರಾಣಿ ಹರ್ ಹ್ವಾಂಗ್ ಒಕೆ ಹೆಸರಲ್ಲಿ ಅಂಚೆ ಚೀಟಿ ಹೊರಡಿಸುವ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ.
ಜತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧ್ಯಕ್ಷರ ಅಧಿಕೃತ ನಿವಾಸ "ಬ್ಲೂ
ಹೌಸ್'ನಲ್ಲಿ ಸಾಂಪ್ರದಾಯಿಕ ಸ್ವಾಗತವನ್ನೂ ನೀಡಲಾಯಿತು.
2019: ನವದೆಹಲಿ: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುತ್ತಿರುವ ಜಾಗತಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕೇಂದ್ರ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡು ಅದರ ವ್ಯವಹಾರ ನೋಡಿಕೊಳ್ಳಲು ಆಡಳಿತಾಧಿಕಾರಿಯನ್ನು
ನೇಮಕ ಮಾಡಿತು. ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ ೧೪ರಂದು ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಹೊಣೆಯನ್ನು ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಶ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು.
ಜೈಶ್-ಇ-ಮೊಹಮ್ಮದ್ ಸಂಘಟನೆಯ ಕೇಂದ್ರ ಕಚೇರಿ ಎನ್ನಲಾಗಿರುವ ಬಹಾವಲ್ಪುರದ ಮದ್ರೆಸ್ಸಾತುಲ್ ಸಬೀರ್ ಮತ್ತು ಜಮಾ-ಇ-ಮಸ್ಜಿದ್ ಸುಭಾನಲ್ಲಾ ಆವರಣಗಳನ್ನು ಪಂಜಾಬ್ ಪ್ರಾಂತದ ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿದ್ದು ಅಲ್ಲಿನ ವ್ಯವಹಾರಗಳ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು
ನೇಮಿಸಿದೆ ಎಂದು ಒಳಾಡಳಿತ ಸಚಿವಾಲಯದ ಹೇಳಿಕೆ ತಿಳಿಸಿತು. ೪೦ ಮಂದಿ ಸಿಆರ್ ಪಿಎಫ್ ಯೋಧರನ್ನುಬಲಿ ಪಡೆದ ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಖಂಡಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರಕಟಣೆ ಹೊರಡಿಸುವುದರ ಜೊತೆಗೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಹಣಕಾಸು ಕಣ್ಗಾವಲು ಸಮಿತಿಯಾಗಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್) ತನ್ನ ಸಭೆಯಲ್ಲಿ ಪಾಕಿಸ್ತಾನ ಪ್ರೇರಿತ ಹಿಂಸಾತ್ಮಕ ಭಯೋತ್ಪಾದನಾ ದಾಳಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಕ್ರಮ ಕೈಗೊಂಡಿತು. ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ಮುಂಬೈ ಭಯೋತ್ಪಾದಕ ದಾಳಿಗಳ ಸೂತ್ರಧಾರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್ -ದವಾ (ಜೆಯುಡಿ) ಸಂಘಟನೆಯನ್ನು ನಿಷೇಧಿಸಿದ್ದರು.
2019: ನ್ಯೂಯಾರ್ಕ್/ ವಿಶ್ವಸಂಸ್ಥೆ: ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಪೈಶಾಚಿಕ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ಎಸ್ಸಿ) ಉಗ್ರವಾಗಿ ಖಂಡಿಸಿ ದಾಳಿಯ ಹೊಣೆಗಾರರನ್ನು ಉತ್ತರದಾಯಿಗಳನ್ನಾಗಿ ಮಾಡಿ ಶಿಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿತು. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವಿಗೆ ಸಮರ್ಥನೆ ಲಭಿಸಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಯಿತು. ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅತ್ಯಂತ ಗಮನಾರ್ಹವಾಗಿ, ದಾಳಿಯ ಹೊಣೆ ಹೊತ್ತುಕೊಂಡಿರುವ ಜೈಶ್-ಇ-ಮೊಹಮ್ಮದ್ ಸಂಘಟನೆ ಹೆಸರನ್ನು ಉಲ್ಲೇಖಿಸಲಾಗಿದೆ ಮತ್ತು ಪುಲ್ವಾಮ ದಾಳಿಗೆ ಕಾರಣರಾದ ದುಷ್ಕರ್ಮಿಗಳನ್ನು
ಶಿಕ್ಷೆಯಾಗಿ ಭಾರತಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೋರಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿಕೆಯನ್ನು ಭಾರತ ಸ್ವಾಗತಿಸಿತು. ಆದರೆ
ನಿರ್ಣಯದ ಭಾಗವೇ ಆಗಿದ್ದ ಚೀನಾ ಇದೀಗ ’ಹೇಳಿಕೆಯಲ್ಲಿ ಜೈಶ್-ಇ-ಮೊಹಮ್ಮದ್’ ಸಂಘಟನೆಯ ಹೆಸರು ಪ್ರಸ್ತಾಪವಾಗಿರುವುದು ಅತ್ಯಂತ ಪ್ರಾಸಂಗಿಕವಾಗಿ.
ಇದು ತೀರ್ಪಲ್ಲ’ ಎಂದು
ಹೇಳುವ ಮೂಲಕ ತಿಪ್ಪರಲಾಗ ಹೊಡೆದು, ವಿಶ್ವಸಂಸ್ಥೆ ಹೇಳಿಕೆಯನ್ನು ಗೌಣಗೊಳಿಸುವ ಯತ್ನ ನಡೆಸಿತು. ‘ಭದ್ರತಾ
ಮಂಡಳಿಯ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರುವರಿ ೧೪ರಂದು ನಡೆದ ನೀಚ ಮತು ಹೇಡಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ಕಟು ಪದಗಳಲ್ಲಿ ಖಂಡಿಸಿದ್ದಾರೆ. ಈ ದಾಳಿಯ ಹೊಣೆಗಾರಿಕೆ ತನ್ನದು ಎಂಬುದಾಗಿ ಜೈಶ್-ಇ-ಮೊಹಮ್ಮದ್ (ಜೆಇಎಂ) ಪ್ರತಿಪಾದಿಸಿದೆ’ ಎಂದು ಹೇಳಿಕೆ ತಿಳಿಸಿತು.
2019: ಚೆನ್ನೈ: ತಮಿಳುನಾಡಿನ ಜಲ ಬಿಕ್ಕಟ್ಟು ಇತ್ಯರ್ಥ ಪಡಿಸುವ ಸಾಮರ್ಥ್ಯ ಇರುವ ಪಕ್ಷಕ್ಕೆ ಮತ ನೀಡುವಂತೆ ತಮ್ಮ ಬೆಂಬಲಿಗರಿಗೆ ಕರೆಕೊಟ್ಟಿರುವ ಸೂಪರ್ ರಜನೀಕಾಂತ್ ಅವರು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು
ಅನುಮೋದಿಸಿದ್ದಾರೆ ಎಂದು ಆಡಳಿತಾರೂಢ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮುಖವಾಣಿ ’ನಮದು ಅಮ್ಮ’ ಪ್ರತಿಪಾದಿಸಿತು. ತನ್ನ ಅಭಿಮಾನಿಗಳ ಸಂಘಟನೆಯಾಗಿರುವ ರಜಿನಿ ಮಕ್ಕಳ್ ಮಂದ್ರಮ್ (ಅರ್ಎಂಎಂ) ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ, ಆದರೆ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಜನೀಕಾಂತ್ ಅವರು ಪ್ರಕಟಿಸಿದ್ದರು. ಆರ್ ಎಂಎಂ ಗುರಿ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುವುದು ಎಂದು ನುಡಿದ ಅವರು ತಮಿಳುನಾಡಿನ ಜಲ ಬಿಕ್ಕಟ್ಟು ಇತ್ಯರ್ಥ ಪಡಿಸುವ ಸಾಮರ್ಥ್ಯ ಇರುವ ಪಕ್ಷವನ್ನು ಚುನಾಯಿಸಿ ಎಂದು ಬೆಂಬಲಿಗರಿಗೆ ಕರೆ ನೀಡಿದ್ದರು. ರಜನೀಕಾಂತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆಯ ನಮಧು ಅಮ್ಮ ’ರಜನಿ ಅವರು ಎಐಎಡಿಎಂಕೆ-ಬಿಜೆಪಿ-ಪಿಎಂಕೆ ಮೈತ್ರಿಕೂಟದ ಬಗ್ಗೆ ಮಾತನಾಡಿದ್ದಾರೆ ಎಂದು ಪ್ರತಿಪಾದಿಸಿತು. ‘ಕಾವೇರಿ ವಿಷಯ ದೀರ್ಘ ಕಾಲದಿಂದ ಇದೆಯಾದರೂ, ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾದದ್ದು ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಎಐಎಡಿಎಂಕೆ ಸರ್ಕಾರ ಇರುವಾಗ’ ಎಂದು
’ಕಾಲ ವೊಟ್ಟು ಕಳಗಥುಕೆ’
(ಕಾಲಾ’ರ ಓಟು ಎಐಎಡಿಎಂಕೆಗೆ ಮಾತ್ರ) ಶೀರ್ಷಿಕೆಯ ಲೇಖನದಲ್ಲಿ ಪತ್ರಿಕೆ ಬರೆಯಿತು.
2019: ನವದೆಹಲಿ: ಐಎನ್ ಎಕ್ಸ್ ಮೀಡಿಯಾಕ್ಕೆ ಸಂಬಂಧಿಸಿದ ಹಣವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವು ಶುಕ್ರವಾರ ಸಿಬಿಐಗೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿದವು. ಕೇಂದ್ರೀಯ ತನಿಖಾ ದಳವು ಜನವರಿ ೨೧ರಂದು ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದಿನ ಕೆಲವು ದಿನಗಳಲ್ಲಿ ಚಾರ್ಜ್ಶೀಟ್ ದಾಖಲಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿದವು. ೨೦೦೭ರಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಆಡಳಿತವಿದ್ದಾಗ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯು (ಎಫ್ಐಪಿಬಿ) ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ನೇತೃತ್ವದ ಮಾಧ್ಯಮ ಸಮೂಹಕ್ಕೆ ವಿದೇಶೀ ಹೂಡಿಕೆಗೆ ಒಪ್ಪಿಗೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಇಬ್ಬರನ್ನೂ ಜಾರಿ ನಿರ್ದೇಶನಾಲಯವು ಈ ತಿಂಗಳ ಆದಿಯಲ್ಲಿ ಪ್ರಶ್ನಿಸಿತ್ತು.
ಹಣಕಾಸು ಸಚಿವರಾಗಿದ್ದಾಗ ೩೦೫ ಕೋಟಿ ರೂಪಾಯಿಗಳಷ್ಟು ಮೊತ್ತದ ವಿದೇಶೀ ಹಣ ಹೂಡಿಕೆಗೆ ಕಂಪೆನಿಗೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಅವರ ಜೊತೆಗಿನ ಸಭೆಗಳ ಬಗ್ಗೆ ಚಿದಂಬರಂ ಅವರನ್ನು ಪ್ರಶ್ನಿಸಲಾಗಿತ್ತು
ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದರು.
ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿಯೂ ಚಿದಂಬರಂ ಅವರನ್ನು ಪ್ರಶ್ನಿಸಲಾಗಿತ್ತು.
2018: ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ
ಬೆಂಬಲ ನೀಡುವುದಿಲ್ಲ ಎಂಬುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯು ಅವರು ಹೇಳಿದ ಮರುದಿನವೇ ಮುಂಬೈಯಲ್ಲಿ
ನಡೆದ ಕೆನಡಾ ಪ್ರಧಾನಿಯ ಕಾರ್ಯಕ್ರಮದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಯೊಬ್ಬ ಪಾಲ್ಗೊಂಡ ಘಟನೆ ಘಟಿಸಿತು.
೧೯೮೬ರಲ್ಲಿ ಪಂಜಾಬ್ ಸಚಿವ ಮಲ್ಕಿಯಾತ್ ಸೋಧಿ ಅವರ ಮೇಲೆ ಗುಂಡು ಹಾರಾಟ ನಡೆಸಿದ್ದ ಪ್ರಕರಣದಲ್ಲಿ ಶಿಕ್ಷೆಗೆ
ಒಳಗಾಗಿದ್ದ ಖಲಿಸ್ತಾನ್ ಪ್ರತ್ಯೇಕತಾವಾದಿ ಜಸ್ಪಾಲ್ ಅತ್ವಾಲ್ ಮುಂಬೈಯಲ್ಲಿ ನಡೆದ ಟ್ರುಡೆಯು ಕಾರ್ಯಕ್ರಮದಲ್ಲಿ
ಈದಿನ ಹಾಜರಾಗಿದ್ದುದಲ್ಲದೆ ದೆಹಲಿಯ ಇನ್ನೊಂದು ಕಾರ್ಯಕ್ರಮಕ್ಕೂ ಆಹ್ವಾನ ಪಡೆದ ಘಟನೆ ಬೆಳಕಿಗೆ ಬಂದಿತು.
ಈ ವಿಚಾರ ಬೆಳಕಿಗೆ ಬಂದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯು ಅವರು ಅತ್ವಾಲ್ ಗೆ ಆಹ್ವಾನ ನೀಡಬಾರದಾಗಿತ್ತು
ಎಂದು ಹೇಳಿದರು. ಪತ್ರಕರ್ತರೊಂದಿಗೆ
ಮಾತನಾಡಿದ ಅವರು ’ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಪ್ರಶ್ನಿತ ವ್ಯಕ್ತಿಗೆ ಆಹ್ವಾನ ನೀಡಲೇಬಾರದಿತ್ತು.
ಈ ವಿಷಯ ಗೊತ್ತಾದ ತತ್ ಕ್ಷಣವೇ ನಾವು ಆಹ್ವಾನವನ್ನು ರದ್ದು ಪಡಿಸಿದ್ದೇವೆ. ಸಂಬಂಧಪಟ್ಟ ವ್ಯಕ್ತಿ
ಮತ್ತು ಇಲಾಖೆ ಈ ವಿಚಾರದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಈದಿನ ದೆಹಲಿಯಲ್ಲಿ ಕೆನಡಾ ಹೈಕಮೀನರ್ ಅವರು ಏರ್ಪಡಿಸಿದ್ದ
ಔಪಚಾರಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಟ್ರುಡೆಯು ಅವರ ಜೊತೆಗೆ ಭೋಜನಕೂಟಕ್ಕೂ ಅತ್ವಾಲ್‌ಗೆ ಆಮಂತ್ರಣ
ನೀಡಲಾಗಿತ್ತು ಎಂದು ಕೆನಡಾದ ಸಿಬಿಸಿ ನ್ಯೂಸ್ ವರದಿ ತಿಳಿಸಿತು. ಕೆನಡಾ ಹೈಕಮೀಷನ್ ಆಹ್ವಾನವನ್ನು
ರದ್ದು ಪಡಿಸಿದೆ. ’ಪ್ರಧಾನಿಯವರ ಭದ್ರತೆಗೆ ಸಂಬಂಧಪಟ್ಟ ವಿಚಾರಗಳಲ್ಲಿ ನಾವು ಪ್ರತಿಕ್ರಿಯಿಸುವುದಿಲ್ಲ’ ಎಂದು ಹೈಕಮೀಷನ್ ಹೇಳಿತು. ಟ್ರುಡೆಯು ಅವರ
ಪತ್ನಿ ಸೋಫೀ ಗ್ರೆಗೋಯಿರೆ ಟ್ರುಡೆಯು ಮತ್ತು ಸಂಪುಟ ಸಚಿವ ಅಮರಜೀತ್ ಸೋಹಿ ಅವರ ಅವರ ಜೊತೆಗೆ ಅತ್ವಾಲ್
ಫೋಸ್ ನೀಡಿದ ಫೋಟೋವನ್ನೂ ಸಿಬಿಸಿ ನ್ಯೂಸ್ ಪ್ರಕಟಿಸಿತ್ತು. ಮುಂಬೈಯಲ್ಲಿ ಫೆ.20ರ ಮಂಗಳವಾರ ನಡೆದ
ಭಾರತೀಯ ಚಲನಚಿತ್ರೋದ್ಯಮದ ಸಮಾರಂಭವೊಂದರ ಫೋಟೋ ಇದಾಗಿತ್ತು.
ಈ
ಮಧ್ಯೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದಲ್ಲಿನ ಭಾರತದ ರಾಜತಾಂತ್ರಿಕ ಕಚೇರಿಯಿಂದ
ಅತ್ವಾಲ್‌ಗೆ ವೀಸಾ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ವಿವರಗಳನ್ನು ಕೇಳಿತು. ‘ಇದನ್ನು ಕೆನಡಿಯನ್ನರ
ಬಳಿ ಕೇಳಬೇಕು. ಅದು ಕಣ್ತಪ್ಪಿನ ಪ್ರಮಾದ ಎಂದು ಅವರು ಹೇಳಿದ್ದಾರೆ. ವೀಸಾಕ್ಕೆ ಸಂಬಂಧಿಸಿದಂತೆ, ಅದು
ಹೇಗಾಯಿತು ಎಂದು ನಾನು ಹೇಳಲಾರೆ. ಜನರು ಭಾರತವನ್ನು ಪ್ರವೇಶಿಸಲು ಒಸಿಐ ಕಾರ್ಡುಗಳು, ಇ ವೀಸಾಗಳು
ಇತ್ಯಾದಿ ಹಲವಾರು ಮಾರ್ಗಗಳಿವೆ. ನಾವು ವಿವರಗಳನ್ನು ನೀಡುವಂತೆ ಭಾರತೀಯ ರಾಜತಾಂತ್ರಿಕ ಕಚೇರಿಯನ್ನು
ಕೇಳಿದ್ದೇವೆ ಎಂದು ಸಚಿವಾಲಯ ವಕ್ತಾರ ನುಡಿದರು. ವಲಸೆ ಅಧಿಕಾರಿಗಳು ಇಟ್ಟಿರುವ ಯಾವುದೇ ಕಪ್ಪುಪಟ್ಟಿಯಲ್ಲಿ
ಅತ್ವಾಲ್ ಇಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಕೆನಡಾ ಪ್ರಧಾನಿ ಟ್ರುಡೆಯು
ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಕ್ಕೆ ಒಂದು ದಿನ ಮೊದಲು ಮುಂಬೈಯಲ್ಲಿ ನಡೆದ
ಸಮಾರಂಭದಲ್ಲಿ ಸಂಪುಟ ಸಚಿವೆ ಅಮರಜೀತ್ ಸೋಹಿ ಮತ್ತು ಟ್ರುಡೆಯು ಅವರ ಪತ್ನಿ ಸೋಫೀ ಅವರ ಜೊತೆಗೆ ಅತ್ವಾಲ್
ಇದ್ದ ಚಿತ್ರಗಳು ಬಹಿರಂಗಗೊಳ್ಳುವುದರೊಂದಿಗೆ ಸಮಸ್ಯೆ ಶುರುವಾಗಿತ್ತು. ಸಿಖ್ ಪ್ರತ್ಯೇಕತಾವಾದಿ ಗುಂಪುಗಳಿಗೆ ಆಹ್ವಾನವಿತ್ತದ್ದಕ್ಕಾಗಿ
ಕೆನಡಾ ಪ್ರಧಾನಿ ಮುಜುಗರಕ್ಕೆ ಒಳಗಾಗುವ ಸಂಭವ ಇತ್ತು.
ಫೆ.21ರ ಬುಧವಾರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಜೊತೆಗಿನ ಭೇಟಿ
ಕಾಲದಲ್ಲಿ ಟ್ರುಡೆಯು ಅವರು ತಮ್ಮ ರಾಷ್ಟ್ರವು ಸಂಯುಕ್ತ ಭಾರತವನ್ನು ಬೆಂಬಲಿಸುತ್ತದೆ ಮತ್ತು ಭಾರತ
ಮಾತ್ರವಲ್ಲ ಬೇರಾವುದೇ ಕಡೆಯಲ್ಲೂ ಪ್ರತ್ಯೇಕತಾವಾದಿ ಚಳವಳಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.
ಸಿಂಗ್ ಅವರು ಖಲಿಸ್ತಾನ ವಿಚಾರವನ್ನು ಪ್ರಸ್ತಾಪಿಸಿ, ಪಂಜಾಬಿನಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ
ಪಂಜಾಬನ್ನು ಅಸ್ಥಿರಗೊಳಿಸಲು ಕೆಲಸ ಮಾಡುತ್ತಿರುವ ಕೆನಡಾದಲ್ಲಿನ ಶಕ್ತಿಗಳ ನಿಗ್ರಹಕ್ಕೆ ಸಹಕಾರ ನೀಡುವಂತೆ
ಕೋರಿದಾಗ ಟ್ರುಡೆಯು ಪ್ರತ್ಯೇಕತಾವಾದಿಗಳಿಗೆ ತಮ್ಮ ಬೆಂಬಲವಿಲ್ಲ ಎಂಬ ಖಂಡತುಂಡ ಹೇಳಿಕೆ ನೀಡಿದ್ದರು.
2018: ನವದೆಹಲಿ: ಇದೇ ಪ್ರಪ್ರಥಮ ಬಾರಿಗೆ
ಕೇಂದ್ರೀಯ ತನಿಖಾದಳವು (ಸಿಬಿಐ) ವಿವಿಧ ರಾಷ್ಟ್ರಗಳ ೧೧೯ ಸದಸ್ಯರನ್ನು ಒಳಗೊಂಡ ವಾಟ್ಸಪ್ ಗ್ರೂಪಿನಲ್ಲಿ
ಮಕ್ಕಳ ಅಶ್ಲೀಲ ಚಿತ್ರಗಳ ಜಾಲವನ್ನು ಭೇದಿಸಿತು. ಗ್ರೂಪ್ ಅಡ್ಮಿನಿಸ್ಟ್ರೇಟರ್ ನಿಖಿಲ್ ವರ್ಮ ಎಂಬ
ಉತ್ತರ ಪ್ರದೇಶದ ಕನ್ನೌಜ್ ನಿವಾಸಿಯನ್ನು ಸಿಬಿಐ ಬಂಧಿಸಿತು.
೨೦ರ ಹರೆಯದ ಶಂಕಿತ ವ್ಯಕ್ತಿ ನಿರುದ್ಯೋಗಿ ಬಿಕಾಂ ಪದವೀಧರನಾಗಿದ್ದು, ಆತನನ್ನು ಟ್ರಾನ್ಸಿಟ್ ರಿಮಾಂಡಿನಲ್ಲಿ
ದೆಹಲಿಗೆ ಕರೆತರಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿದವು. ಮುಂಬೈ ನಿವಾಸಿ ಸತ್ಯೇಂದ್ರ ಚೌಹಾಣ್,
ದೆಹಲಿಯ ನಿವಾಸಿಗಳಾದ ನಫೀಸ್ ರಜಾ ಮತ್ತು ಝಹೀದ್ ಹಾಗೂ ನೋಯಿಡಾದ ಆದರ್ಶ ಅವರನ್ನು ವಾಟ್ಸಪ್ ಗ್ರೂಪಿನ
ಇತರ ಅಡ್ಮಿನಿಸ್ಟ್ರೇಟರುಗಳು ಎಂಬುದಾಗಿ ಗುರುತಿಸಲಾಯಿತು. ಅಶ್ಲೀಲ ಚಿತ್ರ, ಸಾಹಿತ್ಯವನ್ನು ’ಕಿಡ್ಸ್
- ಎಕ್ಸ್ ಎಕ್ಸ್ ಎಕ್ಸ್’ ಹೆಸರಿನ ವಾಟ್ಸಪ್ ಗೂಪಿಗೆ
ಅಪ್ಲೋಡ್ ಮಾಡಲಾಗುತ್ತಿತ್ತು. ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ಥಾನ, ಅಮೆರಿಕ, ಮೆಕ್ಸಿಕೊ, ನ್ಯೂಜಿಲೆಂಡ್,
ಚೀನಾ, ನೈಜೀರಿಯಾ, ಬ್ರೆಜಿಲ್ ಮತ್ತು ಕೀನ್ಯಾದ ವ್ಯಕ್ತಿಗಳು ಈ ಗ್ರೂಪಿನ ಸದಸ್ಯರಾಗಿದ್ದರು ಎಂದು
ಏಜೆನ್ಸಿ ತಿಳಿಸಿತು. ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕ್ರಮ
ಕೈಗೊಳ್ಳುವ ಸಲುವಾಗಿ ವಿದೇಶಗಳ ಜೊತೆ ಹಂಚಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿತು. ದೆಹಲಿ, ಉತ್ತರಪ್ರದೇಶ
ಮತ್ತು ಮುಂಬೈಯಲ್ಲಿ ಶಂಕಿತರಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.
ಆರೋಪಿತ ವ್ಯಕ್ತಿಗಳು ಅಶ್ಲೀಲ ಚಿತ್ರ ಸಾಹಿತ್ಯಗಳನ್ನು ಹಂಚಿಕೊಳ್ಳಲು ಹಣ ಸಂಗ್ರಹಿಸುತ್ತಿದ್ದರೇ ಎಂಬ
ಬಗೆಗೂ ಸಿಬಿಐ ತನಿಖೆ ನಡೆಸಿತು.
2018: ವಾಷಿಂಗ್ಟನ್ : ನೋಟು ಅಮಾನ್ಯೀರಕಣ
ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ
ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅಭಿಪ್ರಾಯಪಟ್ಟಿತು. ಭಾರತ ಸೇರಿದಂತೆ ನಾಲ್ಕು
ಪ್ರಮುಖ ದೇಶಗಳ ಜೊತೆಗಿನ ಅಮೆರಿಕದ ದ್ವಿಪಕ್ಷೀಯ ವಾಣಿಜ್ಯ ಕೊರತೆ ಹಿಂದಿನ ವರ್ಷದ ಅವಧಿಗೆ ಹೋಲಿಸಿದಾಗ
೨೦೧೭ರ ಮೊದಲ ಮೂರು ತ್ತೈಮಾಸಿಕದಲ್ಲಿ ಹೆಚ್ಚಿದೆ ಎಂದು ಅಮೆರಿಕ ತಿಳಿಸಿತು. ೧೯೪೮ರಿಂದಲೂ ಗ್ಯಾಟ್
ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಮತ್ತು ಬ್ರೆಜಿಲ್ ಸೇರಿದ ದೇಶಗಳು ತುಂಬಾ ಕಡಿಮೆ ಪ್ರಮಾಣದಲ್ಲಿ
ವಾಣಿಜ್ಯ ಮುಕ್ತವಾಗಿವೆ; ಉನ್ನತ ದರಗಳನ್ನು ಅವು ಕಾಯ್ದಕೊಂಡಿವೆ ಮತ್ತು ಸಾರ್ವತ್ರಿಕ ಬದ್ಧತೆಯನ್ನು
ತಪ್ಪಿಸಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ ತಿಳಿಸಿತು. ಅಮೆರಿಕದ ಆರ್ಥಿಕತೆಯ ಭವಿಷ್ಯ ಅತ್ಯಂತ ಉಜ್ವಲವಾಗಿದೆ ಎಂಬುದಾಗಿ
ಅಧ್ಯಕ್ಷರ ವರದಿ ಚಿತ್ರಿಸಿತು. ಭಾರತದಲ್ಲಿ ಶೇ.೯೦ರಷ್ಟು
ವ್ಯಾಪಾರ ವಹಿವಾಟುಗಳು ನUದು ರೂಪದಲ್ಲಿ ನಡೆಯುತ್ತವೆ. ೨೦೧೬ರ ನವೆಂಬರ್‌ನಲ್ಲಿ ಭಾರತ ಸರ್ಕಾರ ಕೈಗೊಂಡ
೫೦೦ ಮತ್ತು ೧,೦೦೦ ರೂ. ನೋಟುಗಳ ಅಮಾನ್ಯೀಕರಣದ ಪರಿಣಾಮವಾಗಿ ಶೇ.೮೬ರಷ್ಟು ನಗದು ನೋಟುಗಳು ಚಲಾವಣೆಯಿಂದ
ಅಮಾನ್ಯಗೊಂಡವು; ಇದರಿಂದಾಗಿ ದೇಶದ ಆರ್ಥಿಕತೆಗೆ ತೀವ್ರವಾದ ಹೊಡೆತ ಬಿತ್ತು ಎಂದು ವರದಿ ವಿವರಿಸಿತು. ನೋಟು ಅಮಾನ್ಯೀಕರಣದ ಬಳಿಕ ಜಾರಿಯಾದ ಸರಕು ಮತ್ತು ಸೇವಾ
ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಿಂದಾಗಿಯೂ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿತು ಎಂದು ಅಮೆರಿಕ
ಅಧ್ಯಕ್ಷರ ಆರ್ಥಿಕ ವರದಿ ಹೇಳಿತು.
2018: ನವದೆಹಲಿ: ಸಂಜಯ್ ಭನ್ಸಾಲಿ ನಿರ್ದೇಶನದ
’ಪದ್ಮಾವತ್’ ಬಾಲಿವುಡ್ ಚಿತ್ರದಲ್ಲಿ ’ಸತಿ ಪದ್ಧತಿ’ಯನ್ನು ವೈಭವೀಕರಿಸಿದ್ದಕ್ಕಾಗಿ ಚಿತ್ರ ನಿರ್ಮಾಪಕರು
ಮತ್ತು ನಿರ್ದೇಶಕರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು
ದೆಹಲಿ ಹೈಕೋರ್ಟ್ ತಿರಸ್ಕರಿಸಿತು. ಪತಿಯ ಚಿತೆಗೆ ಹಾರಿ ಸಹಗಮನದ ಮೂಲಕ ಪತ್ನಿಯ ತನ್ನನ್ನು ಸ್ವಯಂ
ದಹಿಸಿಕೊಳ್ಳುವ ಪ್ರಾಚೀನ ಪದ್ಧತಿ ’ಸತಿ’ ಪದ್ಧತಿಯಾಗಿದ್ದು, ಅದನ್ನು
ಪ್ರಸ್ತುತ ಕಾನೂನು ನಿಷೇಧಿಸಿದೆ. ಹಂಗಾಮೀ
ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು
’ಅರ್ಜಿದಾರರು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್ ಸಿ) ಸೂಕ್ತ ಸಮಯದಲ್ಲಿ
ಸಂಪರ್ಕಿಸಬೇಕಾಗಿತ್ತು’ ಎಂದು ಸೂಚಿಸುವ ಮೂಲಕ ಅರ್ಜಿಯನ್ನು ವಜಾಗೊಳಿಸಿತು. ಮಂಡಳಿಯು ತನ್ನ ವಿವೇಚನಾಧಿಕಾರವನ್ನು ಎಚ್ಚರಿಕೆಯಿಂದ ಚಲಾಯಿಸಿದೆ
ಮತ್ತು ನಿಯಂತ್ರಣ ರಹಿತ ವೀಕ್ಷಣೆಗಾಗಿ ’ಯು’ ಸರ್ಟಿಫಿಕೇಟನ್ನು ನೀಡಿಲ್ಲ,
ಬದಲಾಗಿ ’ಯು/ಎ’ ಸರ್ಟಿಫಿಕೇಟ್ ನೀಡಿದೆ ಎಂದೂ ಹೈಕೋರ್ಟ್ ತನ್ನ
ವಿವರವಾದ ಆದೇಶದಲ್ಲಿ ತಿಳಿಸಿತು. ಈದಿನದವರೆಗಿನ ಸ್ಥಿತಿಯಂತೆ ಚಿತ್ರವು ಯಾವುದೇ ದೂರುಗಳು ಇಲ್ಲದೆ
ಬಿಡುಗಡೆಯಾಗಿದೆ. ಅರ್ಜಿದಾರರಿಗೆ ತಾವು ಎತ್ತಿದ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷೇಪಗಳೀದ್ದರೆ ಅವರು
ಸೂಕ್ತ ಕಾಲದಲ್ಲಿ ಸಿಬಿಎಫ್ ಸಿ ಮುಂದೆ ದೂರು ಸಲ್ಲಿಸಬಹುದಾಗಿತ್ತು.
ಈ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ. ಆದ್ದರಿಂದ ಅದನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು. ವೈಯಕ್ತಿಕ ಅಭಿಪ್ರಾಯಗಳನ್ನು ಆಧರಿಸಿ ಕಲಾತ್ಮಕ ಕೃತಿಗಳ
ವಿರುದ್ಧ ಆದೇಶಗಳನ್ನು ನೀಡಲಾಗದು ಎಂದೂ ಪೀಠ ಹೇಳಿತು. ಸತಿ ಅಥವಾ ಜೌಹರ್ ದೃಶ್ಯಗಳನ್ನು ಸಿನಿಮಾದಲ್ಲಿ
ಕೊರಿಯಾಗ್ರಾಫ್ ಮಾಡಲಾಗಿದೆ. ಅರ್ಜಿದಾರರು ಎಲ್ಲೂ ಸಿನಿಮಾವು ಸತಿ ಪದ್ಧತಿಯನ್ನು ಬೆಂಬಲಿಸಿದೆ, ಸಮರ್ಥಿಸಿದೆ
ಅಥವಾ ಪ್ರಚಾರ ಮಾಡುತ್ತಿದೆ ಎಂದು ಹೇಳಿಲ್ಲ. ಆದ್ದರಿಂದ ಚಿತ್ರವು ಸತಿ (ತಡೆ) ಕಾಯ್ದೆ ೧೯೮೭ರ ಅಡಿಯಲ್ಲಿ
ದಂಡನಾತ್ಮಕ ಕ್ರಮಕ್ಕೆ ಅರ್ಹವಾಗುವುದಿಲ್ಲ ಎಂದೂ ಕೋರ್ಟ್ ಹೇಳಿತು. ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ತಮ್ಮ ಸಾರ್ವಜನಿಕ
ಹಿತಾಸಕ್ತಿ ಅರ್ಜಿಯಲ್ಲಿ ಸತಿ ಪದ್ಧತಿಯ ದೃಶ್ಯಗಳನ್ನು ಕಡಿತಗೊಳಿಸಬೇಕು ಎಂದು ಕೋರಿದ್ದರು.
2018:
ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ
3,695 ಕೋಟಿ
ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ರೊಟೊಮ್ಯಾಕ್ ಪೆನ್ ಸಂಸ್ಥೆ ಮಾಲೀಕ ವಿಕ್ರಮ್ ಕೊಠಾರಿ ಹಾಗೂ ಆತನ ಪುತ್ರ ರಾಹುಲ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದರು. ಹಲವು ಬ್ಯಾಂಕುಗಳಿಂದ ಸಾಲ ಪಡೆದು ಮರು ಪಾವತಿ ಮಾಡದೇ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರನ್ನೂ ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದರು. ಕಳೆದ ಕೆಲವು ದಿನಗಳಿಂದ ಇಬ್ಬರನ್ನೂ ವಿಚಾರಣೆಗೊಳಪಡಿಸಿ ಈದಿನ ರಾತ್ರಿ ಬಂಧಿಸಿದರು. ವಿಕ್ರಮ್ ಕೊಠಾರಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ಕಾಳಧನ ಸಕ್ರಮ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಿರುವ ಜಾರಿ ನಿರ್ದೇಶನಾಲಯ ಎಫ್ಐಆರ್ ಸಲ್ಲಿಸಿತು. ವಿಕ್ರಮ್ ಕೊಠಾರಿ ಹಾಗೂ ಕುಟುಂಬ ಸದಸ್ಯರು ದೇಶ ಬಿಟ್ಟು ತೆರಳದಂತೆ ಅಧಿಕಾರಿಗಳು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ನಿಗಾ ಇರಿಸಿದರು.
2017: ನವದೆಹಲಿ: ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಸರ್ಕಾರಿ ಕಡತಗಳಿಂದ ನಾಪತ್ತೆಯಾಗಿವೆ ಎಂಬ ಅಂಶ ಬಯಲಾಗಿದೆ ಎಂದು ‘ದಿ ವೈರ್’ ವರದಿ ಮಾಡಿತು. ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಅಂತಿಮ ದೋಷಾರೋಪ ಪಟ್ಟಿ ಮತ್ತು ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯ ದಾಖಲೆಗಳು ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾದ (ಎನ್ಎಐ) ಕಡತಗಳಿಂದ ನಾಪತ್ತೆಯಾಗಿವೆ. ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು 25 ಸಿಡಿಗಳಲ್ಲಿ ಅಡಕವಾಗಿವೆ. ಈ ಸಿಡಿಗಳಲ್ಲಿ ಪ್ರಕರಣದ ಅಂತಿಮ ದೋಷಾರೋಪ ಪಟ್ಟಿ ಮತ್ತು ಶಿಕ್ಷೆ ವಿಧಿಸಿದ ದಾಖಲೆಗಳು ಇಲ್ಲ ಎನ್ನಲಾಯಿತು. ಸಂಶೋಧನೆಯ ಉದ್ದೇಶಕ್ಕಾಗಿ ಗಾಂಧಿ ಹತ್ಯೆಗೆ ಸಂಬಂಧಿಸಿದ ದಾಖಲೆಗಳ ಮಾಹಿತಿ ನೀಡುವಂತೆ ಹೇಮಂತ್ ಪಂಡಾ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಮಾಹಿತಿ ಆಯೋಗಕ್ಕೆ (ಸಿಐಸಿ) ಮನವಿ ಸಲ್ಲಿಸಿದ್ದರು. ಪಂಡಾ ಅವರಿಗೆ ಗಾಂಧಿ ಹತ್ಯೆಯ ದಾಖಲೆಗಳ ಮಾಹಿತಿ ನೀಡುವಂತೆ ಸಿಐಸಿ ಕೇಂದ್ರ ಸಂಸ್ಕೃತಿ ಇಲಾಖೆಯನ್ನು ಕೋರಿತ್ತು. ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾದಲ್ಲಿರುವ ಗಾಂಧಿ ಹತ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಸಂಸ್ಕೃತಿ ಇಲಾಖೆಯು ಪಂಡಾ ಅವರಿಗೆ ಅನುಮತಿ ನೀಡಿತ್ತು. ಹಾಗೆಯೇ ಅವರಿಗೆ ಕೆಲ ದಾಖಲೆಗಳ ಫೋಟೊಕಾಪಿ ಒದಗಿಸಲಾಗಿತ್ತು. ಆದರೆ, ಈ ದಾಖಲೆಗಳ ಪೈಕಿ ಎರಡು ಮುಖ್ಯ ದಾಖಲೆಗಳು ತಮಗೆ ಸಿಗಲಿಲ್ಲ ಎಂದು ಪಂಡಾ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ‘ಪ್ರಕರಣ ಸಂಬಂಧ ದೆಹಲಿ ಪೊಲೀಸರು ಸಲ್ಲಿಸಿದ್ದ ಅಂತಿಮ ದೋಷಾರೋಪ ಪಟ್ಟಿ ಹಾಗೂ ನಾಥೂರಾಮ್ ಘೋಡ್ಸೆಗೆ ಶಿಕ್ಷೆ ವಿಧಿಸಿದ ದಾಖಲೆಗಳು ಸಿಕ್ಕಿಲ್ಲ’ ಎಂದು ಪಂಡಾ ಮಾಹಿತಿ ಆಯೋಗಕ್ಕೆ ತಿಳಿಸಿದ್ದರು. ಗಾಂಧಿ ಹತ್ಯೆ ಪ್ರಕರಣದ ಇತರೆ ಮೂರು ಮಂದಿ ಆರೋಪಿಗಳಾದ ಗಂಗಾಧರ್ ದಹವಟೆ, ಸೂರ್ಯದೇವ್ ಶರ್ಮಾ ಮತ್ತು ಗಂಗಾಧರ್ ಯಾದವ್ ಅವರು ತಲೆಮರೆಸಿಕೊಂಡಿದ್ದರು. ಆದರೆ, ಅವರ ಬಂಧನಕ್ಕೆ ಯಾವ ಕ್ರಮ ಕೈಗೊಳ್ಳಲಾಗಿತ್ತು ಎಂಬ ಉಲ್ಲೇಖ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳು ಎನ್ಎಐ ಬಳಿಯೂ ಇಲ್ಲ ಎಂಬ ಅಂಶವೂ ಬಯಲಾಯಿತು. ನಾಪತ್ತೆಯಾಗಿವೆ ಎನ್ನಲಾದ ದಾಖಲೆಗಳ ಸಂಗ್ರಹಕ್ಕೆ ‘ಅಗತ್ಯ ಕ್ರಮ’ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲ ಅವರು ಪ್ರಧಾನಮಂತ್ರಿ ಕಚೇರಿ ಮತ್ತು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು
ವರದಿ ತಿಳಿಸಿತು.
2009: ನಿಷೇಧಿತ ಎಲ್‌ಟಿಟಿಇ ಸಂಘಟನೆ ಬಹುತೇಕ ತನ್ನವಾಯು ಬಲವನ್ನು ಕಳೆದುಕೊಂಡಿದೆ ಎಂದು ಶ್ರೀಲಂಕಾ ಸೇನೆ ಹೇಳಿತು. ಕೊಲೊಂಬೋ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಎಲ್‌ಟಿಟಿಇಗೆ ಸೇರಿದ 2 ವಿಮಾನಗಳನ್ನು ಶ್ರೀಲಂಕಾ ಭದ್ರತಾ ಪಡೆಗಳು ನಾಶಪಡಿಸಿದ ಬಳಿಕ ಸೇನೆಯ ಅಧಿಕಾರಿಗಳು ಈ ವಿಷಯ ತಿಳಿಸಿದರು. 'ಎಲ್‌ಟಿಟಿಇ ಬಳಿ ಇನ್ನೂ ಹೆಚ್ಚಿನ ವಿಮಾನಗಳು ಇವೆ ಎಂದು ನನಗನಿಸುತ್ತಿಲ್ಲ' ಎಂದು ಸೇನೆ ಅಧಿಕಾರಿಯೊಬ್ಬರು ತಿಳಿಸಿದರು. ಉಗ್ರರು ದಾಳಿಗೆ ಬಳಸಿದ್ದ ವಿಮಾನಗಳನ್ನು ಸೇನೆ ಸೂಕ್ತ ಸಮಯಕ್ಕೆ ಪತ್ತೆ ಹಚ್ಚಿದ್ದರಿಂದ ಕೊಲೊಂಬೋ ನಗರಕ್ಕೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಸಾಧ್ಯವಾಯಿತು ಎಂದು ಅವರು ಹೇಳಿದರು.
2009: ಉತ್ತರ ಚೀನಾದ ಚಾಂಗ್‌ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ, ಅದರಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ಮೃತರಾದುದು ಬೆಳಕಿಗೆ ಬಂತು. ಇದು ಇತ್ತೀಚೆಗೆ ಸಂಭವಿಸಿದ ಗಣಿ ದುರಂತಗಳಲ್ಲೇ ಅತ್ಯಂತ ಭೀಕರವಾದುದು ಎಂದು ಪರಿಗಣಿಸಲಾಯಿತು. ಈವರೆಗೆ 73 ಮೃತದೇಹಗಳು ದೊರಕಿದವು. 21 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ 113 ಮಂದಿ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಭಾರತೀಯ ಕಾಲಮಾನದ ಪ್ರಕಾರ ಹಿಂದಿನ ದಿನ ರಾತ್ರಿ 11.30ಕ್ಕೆ ತುನ್‌ಲಾನ್ ಕಲ್ಲಿದ್ದಲು ಗಣಿಯಲ್ಲಿ ದುರಂತ ಸಂಭವಿಸಿತು. ಆಗ ಕರ್ತವ್ಯದಲ್ಲಿ ತೊಡಗಿದ್ದ 340 ಪಾರಾದರು. 40ಕ್ಕೂ ಹೆಚ್ಚು ಅಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಬಂದವು.
2009: ಭಾರತದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದ 14 ಪ್ರತಿಮೆಗಳನ್ನು ಇಂಗ್ಲೆಂಡಿನಲ್ಲಿರುವ ಪ್ರಸಿದ್ಧ ದೇವಾಲಯವೊಂದರಲ್ಲಿ ನೂರಾರು ಜನರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು. 14 ಅಮೃತ ಶಿಲಾ ಪ್ರತಿಮೆಗಳನ್ನು ಜೈಪುರದಲ್ಲಿ ಕೆತ್ತಲಾಗಿದ್ದು ಬ್ರಿಟನ್ನಿನ ಪಶ್ಚಿಮ ಮಿಡ್‌ಲ್ಯಾಂಡ್ಸಿನ ಡೆರ್ಬಿ ಪಟ್ಟಣದಲ್ಲಿರುವ ಗೀತಾ ಭಗವಾನ್ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಮೂರ್ತಿಗಳು 40 ಸಾವಿರ ಪೌಂಡ್ ಮೌಲ್ಯದ್ದಾಗಿದ್ದು ಭಕ್ತರೇ ಸಂಪೂರ್ಣ ವೆಚ್ಚವನ್ನು ಭರಿಸಿದರು.
2008: ಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ಶೋಯೆಬ್ ಕಸಂ ಘನ್ಸರ್ ಎಂಬಾತನಿಗೆ ನೀಡಲಾದ ಮರಣ ದಂಡನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಆರ್. ವಿ. ರವೀಂದ್ರನ್ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ನ್ಯಾಯಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ ಟಾಡಾ ನ್ಯಾಯಾಲಯ ತಮ್ಮನ್ನು ದೋಷಿಯನ್ನಾಗಿ ಮಾಡಿ ಮರಣ ದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನೂ ವಿಚಾರಣೆಗೆ ಸ್ವೀಕರಿಸಿತು.
2008: ತೀವ್ರ ವಿವಾದಕ್ಕೆ ಒಳಗಾಗಿದ್ದ ಸಕ್ರಮ ಯೋಜನೆಯನ್ನು ಪರಿಷ್ಕರಿಸಿದ ಕರ್ನಾಟಕ ರಾಜ್ಯ ಸರ್ಕಾರ, 20 ಗುಣಿಸು 30 ಮತ್ತು 30 ಗುಣಿಸು 40 ಅಡಿ ಅಳತೆಯ ಅನಧಿಕೃತ ನಿವೇಶನಗಳಿಗೆ ನಿಗದಿ ಪಡಿಸಿದ್ದ ದಂಡ ಶುಲ್ಕದಲ್ಲಿ ದೊಡ್ಡ ಪ್ರಮಾಣದ ರಿಯಾಯಿತಿಯನ್ನು ಪ್ರಕಟಿಸಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬಂದ 118 ಗ್ರಾಮ ಠಾಣಾಗಳಲ್ಲಿನ ನಿವೇಶನಗಳ ಮಾಲೀಕರು ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಈ ಪರಿಷ್ಕೃತ ಸಕ್ರಮ ಯೋಜನೆಗೆ ಸರ್ಕಾರದ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿತು.
2008: ವಾಣಿಜ್ಯ ಉದ್ಧೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿದ ಹೈಕೋರ್ಟ್ ಆದೇಶ ವಿರೋಧಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ನೀಡಿದ ಕರೆಯ ಮೇರೆಗೆ ಈದಿನ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಯಿತು.
2008: ದೋಡಾ ಜಿಲ್ಲೆ ಬದೇರ್ ವಾ ಪಟ್ಟಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಭೇಟಿಗೆ ಒಂದು ಗಂಟೆ ಮೊದಲು ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಭಾರಿ ಹಿಮಪಾತದಿಂದ ಉಂಟಾದ ಪರಿಸ್ಥಿತಿ ಅವಲೋಕಿಸಲೆಂದು ಸೋನಿಯಾ ಹಾಗೂ ಶಿವರಾಜ್ ಪಾಟೀಲ್ ಪಟ್ಟಣಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕೂಲಂಕಷ ಪರಿಶೀಲನೆ ಕೈಗೊಂಡಿತ್ತು. ಆಗ ಬದೇವಾರಿನಿಂದ 3 ಕಿ.ಮೀ.ದೂರದ ದಲಿಘರದಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಇದನ್ನು ಹಿಮದೊಳಗೆ ಹುದುಗಿಸಿಡಲಾಗಿತ್ತು.
2008: ವಿವಾದದ ಸುಳಿಗೆ ಸಿಲುಕಿ ರಾಜಸ್ಥಾನದಲ್ಲಿ ನಿಷೇಧಕ್ಕೆ ಒಳಗಾದ `ಜೋಧಾ ಅಕ್ಬರ್' ಸಿನೆಮಾ ಮಧ್ಯ ಪ್ರದೇಶ ಸರ್ಕಾರದ ಕೆಂಗಣ್ಣಿಗೂ ಗುರಿಯಾಯಿತು. ಚಿತ್ರ ಪ್ರದರ್ಶನಕ್ಕೆ ಮಧ್ಯಪ್ರದೇಶದ ರಜಪೂತ ಸಮುದಾಯದಿಂದ ಭಾರಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜಾರಿಗೆ ಬರುವಂತೆ ಚಿತ್ರ ಪ್ರದರ್ಶನ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು.
2008: ವೆನಿಜುವೆಲಾ ವಿಮಾನವೊಂದು ದಟ್ಟಾರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ 46 ಪ್ರಯಾಣಿಕರು ಮೃತರಾದರು. ಅತಿಎತ್ತರದ ಮೆರಿಡಾ ನಗರದಿಂದ ಕಾರಕಾಸ್ಗೆ ಹೊರಟಿದ್ದ ವಿಮಾನ ಮಾರ್ಗ ಮಧ್ಯೆ ದಟ್ಟ ಅರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.
2008: ಉತ್ತರ ಶ್ರೀಲಂಕಾದಲ್ಲಿ ಸೇನೆ ಮತ್ತು ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 45 ಮಂದಿ ಮೃತರಾದರು. ಮೃತರಲ್ಲಿ 43 ಉಗ್ರರು ಮತ್ತು ಇಬ್ಬರು ಯೋಧರು.
2008: 20 ಲಕ್ಷ ರೂ ಆಸ್ತಿ ತೆರಿಗೆ ಪಾವತಿಸದ ಕಾರಣ ನಟಿ, ಸಮಾಜವಾದಿ ಸಂಸದೆ ಜಯಪ್ರದಾ ಮಾಲಿಕತ್ವದ ಪ್ರಸಿದ್ಧ `ಜಯಪ್ರದಾ' ಚಿತ್ರಮಂದಿರ ಸಂಕೀರ್ಣವನ್ನು ಚೆನ್ನೈ ಮಹಾನಗರ ಪಾಲಿಕೆ ಜಪ್ತಿ ಮಾಡಿತು.
2007: ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.
2007: ದೆಹಲಿಯ ಪ್ರತಿಷ್ಠಿತ `ಚಮನ್ ಲಾಲ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ'ಗೆ ಬೆಂಗಳೂರಿನ ನೇಪಥ್ಯ ಕಲಾವಿದ ಅ.ನ. ರಮೇಶ್ ಆಯ್ಕೆಯಾದರು. ರಮೇಶ್ ಅವರು ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಮೊದಲಾದ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದ ಕಲಾವಿದ.
2007: ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರಕ್ಕೆ ಸ್ಥಳಾಂತರಿಸುವುದರ ಜೊತೆಗೆ ಎರಡು ಆಸ್ಪತ್ರೆ, ವೈದ್ಯಕೀಯ ದಂತವಿಜ್ಞಾನ, ಫಾರ್ಮಸಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು.
2007: ಜವಾಹರಲಾಲ್ ನೆಹರು ಉನ್ನತ ವಿಜ್ಞಾನಗಳ ಕೇಂದ್ರದ ಅಧ್ಯಕ್ಷ ಪ್ರೊ. ಸಿ. ಎನ್. ಆರ್. ರಾವ್ ಅವರು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟಿಗೆ ಆಯ್ಕೆಯಾದರು.
2007: ಇಟಲಿ ಪ್ರಧಾನಿ ರೊಮಾನೊ ಪ್ರೊಡಿ ಅವರು ತಮ್ಮ ವಿದೇಶ ನೀತಿ ಮತ್ತು ಆಫ್ಘಾನಿಸ್ಥಾನದಲ್ಲಿ ಇಟಲಿ ಸೇನೆ ಕಾರ್ಯಾಚರಣೆ ವಿಷಯಗಳ ಕುರಿತ ಸರ್ಕಾರದ ಮಸೂದೆಗೆ ಸೆನೆಟಿನಲ್ಲಿ ಸೋಲು ಉಂಟಾದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
2006: ಹಿರಿಯ ಇತಿಹಾಸಕಾರ್ತೆ, ರಾಷ್ಟ್ರೀಯ ಇಂದಿರಾಗಾಂಧಿ ಕಲಾ ಕೇಂದ್ರದ ಅಧ್ಯಕ್ಷೆ ಕಪಿಲಾ ವಾತ್ಸಾಯನ ಅವರು ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಪ್ರಮಾಣವಚನ ಬೋಧಿಸಿದರು.
2006: ಮುಂಬೈ ಕರ್ನಾಟಕ ಸಂಘವು ಪ್ರತಿವರ್ಷವೂ ಕೊಡುವ ವರದರಾಜ ಆದ್ಯ ಪ್ರಶಸ್ತಿಗೆ ಲೇಖಕ- ಕಲಾವಿದ ಡಿ.ಎಸ್ ಚೌಗಲೆ ಆಯ್ಕೆಯಾದರು.
2006: ಇರಾಕಿನ ಸಮರ್ರಾದಲ್ಲಿ ಇಮಾಮ್ ಅಲಿ ಹಲ್-ಹದಿ ಮತ್ತು ಇಮಾಮ್ ಹಸನ್ ಅಲ್-ಅಸ್ಕರಿ ಸ್ಮರಣಾರ್ಥ ನಿರ್ಮಿಸಲಾದ ಅಲ್ ಅಸ್ಕರಿ ಮಸೀದಿ ಮೇಲೆ ಬಾಂಬ್ ದಾಳಿ ನಡೆದು ಅದನ್ನು ಭಾಗಶಃ ಹಾನಿಗೊಳಿಸಲಾಯಿತು. ಮಸೀದಿಯ ಸ್ವರ್ಣಗುಮ್ಮಟ ಕುಸಿದುಬಿತ್ತು. ನಂತರ ಸಂಭವಿಸಿದ ಗಲಭೆಗಳಲ್ಲಿ ಮೂವರು ಪತ್ರಕರ್ತರು ಸೇರಿದಂತೆ ಹಲವರು ಮೃತರಾದರು.
1965: ಕಲಾವಿದ ಮೈಸೂರು ಕೆ. ಕುಮಾರ್ ಜನನ.
1964: ಬ್ರಿಟಿಷ್ ಸಂಜಾತ ಭಾರತೀಯ ಮಾನವ ಶಾಸ್ತ್ರಜ್ಞ ವೆರೀಯರ್ ಎಲ್ವಿನ್ ನಿಧನರಾದರು. ಗುಡ್ಡಗಾಡು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿದ್ದ ಇವರು ಮಧ್ಯಪ್ರದೇಶದ `ಗೊಂಡ' ಜನಾಂಗದ ಬಗ್ಗೆ ಅಧ್ಯಯನ ನಡೆಸಿದ್ದರು.
1958: ಭಾರತದ ಶಿಕ್ಷಣ ತಜ್ಞ, ರಾಜನೀತಿಜ್ಞ ಮೌಲಾನಾ ಅಬುಲ್ ಕಲಂ ಆಜಾದ್ ನಿಧನರಾದರು.
1957: ಇಂಗ್ಲೆಂಡಿನ ರಾಣಿ ಎಲಿಜಬೆತ್ ಅವರು ತಮ್ಮ ಪತಿ ಡ್ಯೂಕ್ ಆಫ್ ಎಡಿನ್ ಬರ್ಗ್ ಅವರಿಗೆ `ರಾಜಕುಮಾರ' ಎಂಬ ಬಿರುದನ್ನು ದಯಪಾಲಿಸಿದರು.
1949: ನಿಕಿ ಲೌಡಾ ಹುಟ್ಟಿದ ದಿನ. ಈತ ಆಸ್ಟ್ರೇಲಿಯಾದ ಮೋಟಾರ್ ರೇಸಿಂಗ್ ಚಾಂಪಿಯನ್.
1944: ಮಹಾತ್ಮಾ ಗಾಂಧೀಜಿ ಪತ್ನಿ ಕಸ್ತೂರಬಾ ಗಾಂಧಿ ನಿಧನರಾದರು.
1932: ಅಮೆರಿಕಾದ ಸೆನೆಟರ್ ಹಾಗೂ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಸಹೋದರ ಎಡ್ವರ್ಡ್ ಕೆನಡಿ ಹುಟ್ಟಿದ ದಿನ.
1918: ಅತ್ಯಂತ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅಮೆರಿಕನ್ ರಾಬರ್ಟ್ ಪರ್ಶಿಂಗ್ ವಾಡ್ಲೊ (1918-1940) ಹುಟ್ಟಿದ ದಿನ. ಈತನ ಎತ್ತರ 8 ಅಡಿ 11 ಅಂಗುಲಗಳು.
1902: ಫ್ರಿಟ್ಜ್ ಸ್ಟ್ರಾಸ್ ಮಾನ್ (1902-1980) ಹುಟ್ಟಿದ ದಿನ. ಜರ್ಮನ್ ಭೌತ ರಾಸಾಯನಿಕ ತಜ್ಞರಾಗಿದ್ದ ಇವರು ಒಟ್ಟೋ ಹಾನ್ ಜೊತೆ ಸೇರಿ ಯುರೇನಿಯಮ್ಮಿನಲ್ಲಿ ನ್ಯೂಟ್ರಾನ್ ಪ್ರಚೋದಿತ ಪರಮಾಣು ವಿದಳನವನ್ನು ಕಂಡು ಹಿಡಿದರು.
1892: ಇಂದುಲಾಲ್ ಯಾಜ್ಞಿಕ್ (1892-1972) ಹುಟ್ಟಿದ ದಿನ. ಇವರು ಭಾರತದ ತತ್ವಜ್ಞಾನಿಯೂ ಸಮಾಜವಾದಿ ನಾಯಕರೂ ಆಗಿದ್ದರು.
1891: ಚಿತ್ರ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಕಲಾವಿದ ಅ.ನ. ಸುಬ್ಬರಾಯರು (22-2-1891ರಿಂದ 20-5-1981) ಅಕ್ಕಿಹೆಬ್ಬಾಳು ನರಸಿಂಹಯ್ಯ- ವೆಂಕಮ್ಮ ದಂಪತಿಯ ಮಗನಾಗಿ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಅವರು ಕಟ್ಟಿದ ಕಲಾಮಂದಿರವು ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಇತ್ಯಾದಿ ಎಲ್ಲ ರಂಗಗಳ ಬೆಳವಣಿಗೆಗೂ ದುಡಿಯಿತು. ಎಲ್. ಶ್ರೀನಿವಾಸ ಮೂರ್ತಿ, ಎಸ್. ರಾಮನಾಥನ್, ಎನ್. ನಾರಾಯಣ್, ನವರತ್ನರಾಮ್, ದಾಶರಥಿ ದೀಕ್ಷಿತ್ ಮುಂತಾದವರೆಲ್ಲ ಈ ಕಲಾಮಂದಿರದಿಂದ ಬಂದವರೇ. ಕಲಾವಿದ ಎ.ಎಸ್. ಮೂರ್ತೆ ಅವರು ಸುಬ್ಬರಾಯರ ಪುತ್ರ.
1857: ಬ್ರಿಟಿಷ್ ಸೇನಾ ಅಧಿಕಾರಿ ಲಾರ್ಡ್ ಬೇಡೆನ್ ಪೊವೆಲ್ (1857-1941) ಹುಟ್ಟಿದರು. ಬಾಯ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ ್ಸನ ಸ್ಥಾಪಕರಾಗಿ ಇವರು ಖ್ಯಾತರಾಗಿದ್ದಾರೆ. 1889ರಲ್ಲಿ ಇದೇ ದಿನ ಬೇಡೆನ್ ಪೊವೆಲ್ ಅವರ ಪತ್ನಿ ಒಲೇವ್ ಬೇಡೆನ್ ಪೊವೆಲ್ (1889-1977) ಹುಟ್ಟಿದರು. ಇವರು 1930ರಿಂದ ಗರ್ಲ್ ಗೈಡ್ಸ್ ಜಾಗತಿಕ ಮುಖ್ಯಸ್ಥೆಯಾಗಿ ಸಂಘಟನೆಯನ್ನು ಮುನ್ನಡೆಸಿದರು.
1732: ಅಮೆರಿಕನ್ ಜನರಲ್ ಜಾರ್ಜ್ ವಾಷಿಂಗ್ಟನ್ (1732-1799) ಹುಟ್ಟಿದರು. ಮುಂದೆ ಇವರೇ ಅಮೆರಿಕಾದ ಪ್ರಥಮ ಅಧ್ಯಕ್ಷರಾದರು.