ನಾನು ಮೆಚ್ಚಿದ ವಾಟ್ಸಪ್

Saturday, February 2, 2019

ಇಂದಿನ ಇತಿಹಾಸ History Today ಫೆಬ್ರುವರಿ 02

ಇಂದಿನ ಇತಿಹಾಸ History Today ಫೆಬ್ರುವರಿ 02
2019: ನವದೆಹಲಿ: ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕರಾಗಿ ಕೇಂದ್ರ ಸರ್ಕಾರವು ಐಪಿಎಸ್ (ಭಾರತೀಯ ಪೊಲೀಸ್ ಸೇವಾ) ರಿಷಿ ಕುಮಾರ್ ಶುಕ್ಲ ಅವರನ್ನು ನೇಮಕ ಮಾಡಿತು. ಮಧ್ಯಪ್ರದೇಶ ಪೊಲೀಸ್ ವಸತಿ ನಿಗಮದ ಅಧ್ಯಕ್ಷ ರಿಷಿ ಕುಮಾರ್ ಶುಕ್ಲ ಅವರು ೧೯೮೩ರ ಮಧ್ಯಪ್ರದೇಶ ಕೇಡರ್ ಅಧಿಕಾರಿಯಾಗಿದ್ದು, ಮಧ್ಯಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕರು (ಡಿಜಿ).
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಉನ್ನತಾಧಿಕಾರ ಆಯ್ಕೆ ಸಮಿತಿಯು, ಅದರ ಸದಸ್ಯರಲ್ಲಿ ಒಬ್ಬರಾದ ಲೋಕಸಭೆಯ ದೊಡ್ಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಕ್ಷೇಪವನ್ನು ನಿರ್ಲಕ್ಷಿಸಿ, ತನ್ನ ಮುಂದಿದ್ದ ಹೆಸರುಗಳ ಪೈಕಿ ಶುಕ್ಲ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿತು. ಸಚಿವ ಸಂಪುಟದ ನೇಮಕಾತಿ ಸಮಿತಿಯು ಹಿರಿಯ ಐಪಿಎಸ್ ಅಧಿಕಾರಿಯನ್ನು ಹುದ್ದೆ ವಹಿಸಿಕೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ನೂತನ ನಿರ್ದೇಶಕರಾಗಿ ನೇಮಕ ಮಾಡಿತು. ಶುಕ್ಲ ಅವರು ಸರ್ವಾನುಮತದ ಆಯ್ಕೆಯಾಗಿದ್ದರು, ಆದರೆ ಜಾವೇದ್ ಅಹ್ಮದ್ ಅವರು ಕಾಂಗ್ರೆಸ್ಸಿನಮೊದಲ ಆಯ್ಕೆ ಆಗಿದ್ದರು ಎಂದು ಮೂಲಗಳು ತಿಳಿಸಿದವು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪತ್ರವು ಶುಕ್ಲ ಅವರ ನೇಮಕಾತಿಯನ್ನು ದೃಢಪಡಿಸಿತು. ಇದಕ್ಕೆ ಮುನ್ನ ಸಿಬಿಐ ನಿರ್ದೇಶಕನ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬಕ್ಕಾಗಿ ಸುಪ್ರೀಂಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು. ಹಂಗಾಮೀ ನಿರ್ದೇಶಕ ವ್ಯವಸ್ಥೆಯೊಂದಿಗೆ ಸಿಬಿಐ ಮುಂದುವರೆಯುತ್ತಿರುವುದಕ್ಕಾಗಿ ಕೋರ್ಟ್ ತನ್ನ ಅಸಮಾಧಾನಜ ವ್ಯಕ್ತ ಪಡಿಸಿತ್ತು. ಸಿಬಿಐ ನಿರ್ದೇಶಕನ ಹುದ್ದೆಸೂಕ್ಷ್ಮವಾದುದು ಮತ್ತುಮಹತ್ವದ್ದು ಎಂದು ಸುಪ್ರೀಂಕೋರ್ಟ್ ಹೇಳಿದ ಸುಪ್ರೀಂಕೋರ್ಟ್ ಹಂಗಾಮೀ ನಿರ್ದೇಶಕರು ದೀರ್ಘಕಾಲದವರೆಗೆ ಸಂಸ್ಥೆಯ ಮುಖ್ಯಸ್ಥರಾಗಿ ಮುಂದುವರೆಯಬಾರದು ಎಂದು ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಉನ್ನತಾಧಿಕಾರ ನೇಮಕಾತಿ ಸಮಿತಿಯು ತನ್ನ ಎರಡನೇ ಸಭೆಯಲ್ಲಿ ಸಹಮತಕ್ಕೆ ಬಂದ ಒಂದು ದಿನದ ಬಳಿಕ ಸಿಬಿಐ ಮುಖ್ಯಸ್ಥರ ನೇಮಕಾತಿ ಆದೇಶ ಹೊರಬಿದ್ದಿತು. ಜನವರಿ ೧೦ರಂದು ಆಯ್ಕೆ ಸಮಿತಿಯು ಅಲೋಕ ವರ್ಮ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ಬಳಿಕ ಹುದ್ದೆ ಸಿಬಿಯ ನಿರ್ದೇಶಕ ಹುದ್ದೆ ಖಾಲಿ ಬಿದ್ದಿತ್ತು. ಅಲೋಕ ವರ್ಮ ಮತ್ತು ಸಿಬಿಐ ವಿಶೇಷ ನಿರ್ದೇಶಕ ಗುಜರಾತ್ ಕೇಡರಿನ ಐಪಿಎಸ್ ಅಧಿಕಾರಿ ರಾಕೇಶ ಅಸ್ತಾನ ಅವರ ಮಧ್ಯೆ ತೀವ್ರ ಘರ್ಷಣ ನಡೆದು ಪರಸ್ಪರ ಭ್ರಷ್ಟಾಚಾರ ಆರೋಪ ಮಾಡಿಕೊಂಡ ಬಳಿಕ ಕೇಂದ್ರವು ಉಭಯ ಅಧಿಕಾರಿಗಳನ್ನು ಅಧಿಕಾರ ಚ್ಯುತಿಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ಎಂ. ನಾಗೇಶ್ವರ ರಾವ್ ಅವರನ್ನು ಹಂಗಾಮೀ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಅಂತಿಮವಾಗಿ ಆಯ್ಕೆ ಸಮಿತಿಯು ವರ್ಮಾ ಅವರನ್ನು ಅಧಿಕಾರದಿಂದ ಕಿತ್ತು ಹಾಕಿತ್ತು.ಸಿಬಿಐ ನಿರ್ದೇಶಕ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಜಾವೇದ್ ಅಹ್ಮದ್, ಎಸ್. ಎಸ್. ದೆಸ್ವಾಲ್ ಅವರ ಹೆಸರುಗಳು ಕೇಳಿಬಂದಿದ್ದವು.

2019: ಕೋಲ್ಕತ: ಪಶ್ಚಿಮ ಬಂಗಾಳದ ಥಾಕೂರ್ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ತಮ್ಮ ಚೊಚ್ಚಲ ಸರಣಿ ಚುನಾವಣಾ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ಮಸೂದೆ, ಮಧ್ಯಂತರ ಮುಂಗಡಪತ್ರ ಮತ್ತು ಭ್ರಷಾಚಾರ ನಿಗ್ರಹ ಕ್ರಮಗಳಿಗೆ ಒತ್ತು ನೀಡಿ, ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಸಂಯುಕ್ತ ರಂಗ ಕಟ್ಟುವ ಪ್ರಯತ್ನ ನಡೆಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಹೊಸ ದಾಳಿ ನಡೆಸಿದ ಪ್ರಧಾನಿನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂಬ ಕಾರಣಕ್ಕಾಗಿ ಅವರು ಹೆದರಿದ್ದಾರೆ ಎಂದು ಗುಡುಗಿದರು. ಕೋಲ್ಕತದಲ್ಲಿ ಕಳೆದ ತಿಂಗಳು ವಿರೋಧ ಪಕ್ಷಗಳು ಸಂಘಟಿಸಿದ್ದ ವಿಪಕ್ಷ ರಾಲಿಯನ್ನು ಪ್ರಸ್ತಾಪಿಸಿದ ಪ್ರಧಾನಿ ಚಾಯ್ ವಾಲಾ ಉನ್ನತ ವ್ಯಕ್ತಿಗಳ ಮತ್ತು ಬಲಾಢ್ಯರ ಅಕ್ರಮ ಆದಾಯಕ್ಕೆ ತಡೆ ಹಾಕಿದ್ದಾನೆ. ಹೀಗಾಗಿಯೇ ಎಲ್ಲ ರೀತಿಯ ವ್ಯಕ್ತಿಗಳೂ ಕೋಲ್ಕತದಲ್ಲಿ ಒಂದಾಗಿ ಚೌಕೀದಾರನನ್ನು ಕಿತ್ತು ಹಾಕುವ ಪ್ರತಿಜ್ಞೆ ಕೈಗೊಂಡಿದ್ದಾರೆ ಎಂದು ಚುಚ್ಚಿದರು. ‘ಅವರ ಫೊಟೋ ನೋಡಿ. ಅವರು ಎಷ್ಟೊಂದು ಹೆದರಿದಂತೆ ಕಾಣುತ್ತದೆ ಎಂದು ಮೋದಿ ಅವರು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನವರಿ ತಿಂಗಳಲ್ಲಿ ಸಂಘಟಿಸಿದ್ದಸಂಯುಕ್ತ ಭಾರತ ರ್ಯಾಲಿಯಲ್ಲಿ ಪಾಲ್ಗೊಂಡವರನ್ನು ಛೇಡಿಸಿದರು. ನಾಲ್ಕು ವರ್ಷಗಳ ಹಿಂದೆ ಒಬ್ಬರನ್ನು ಒಬ್ಬರು ನೋಡದ ವ್ಯಕ್ತಿಗಳೂ ಕೋಲ್ಕತದಲ್ಲಿ ಸಮಾವೇಶಗೊಂಡರು. ಅವರೆಲ್ಲರೂ ನನ್ನನ್ನು ದೂರುತ್ತಿದ್ದಾರೆ ಏಕೆಂದರೆ ನಾನು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಧಾನಿ ನುಡಿದರು. ಪಶ್ಚಿಮ ಬಂಗಾಳದಲ್ಲಿ ತನಿಖೆ ನಡೆಸದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ತಡೆಯುತ್ತಿರುವುದಕ್ಕಾಗಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆಸಿದ ಪ್ರಧಾನಿ, ’ದೀದಿ ನೀವು ಏನೂ ತಪ್ಪು ಮಾಡಿಲ್ಲವಾದರೆ, ನಿಮಗೆ ಹೆದರಿಕೆ ಏಕೆ? ಯಾವುದರ ಬಗ್ಗೆ ನೀವು ಹೆದರುತ್ತಿದ್ದೀರಿ?’ ಎಂದು ಪ್ರಶ್ನಿಸಿದರು. ಯುಪಿಎ ಆಡಳಿತಾವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ತಮ್ಮನ್ನು ವಿವಿಧ ಪ್ರಕರಣಗಳ ತನಿಖೆಗಾಗಿ ಸಿಬಿಐ ದೆಹಲಿಯಲ್ಲಿ ಗಂಟೆಗಳ ಕುಳಿತುಕೊಳ್ಳಿಸಿತ್ತು ಗೊತ್ತೇಎಂದು ಅವರು ನೆನಪಿಸಿದರು. ನಾನು ಎಂದೂ ಸಂಸ್ಥೆಗಳ ಮೇಲೆ ದಾಳಿ ನಡೆಸಲಿಲ್ಲ. ನನ್ನ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ನೀವು ಇನ್ನಷ್ಟು ಸಂಸ್ಥೆಗಳನ್ನು ತರಬಹುದು ಎಂದು ನಾನು ಹೇಳಿದೆ. ನಾನು ಪ್ರಾಮಾಣಿಕನಾಗಿದ್ದೇನೆ. ನನಗೆ ಹೆದರಿಕೆ ಇಲ್ಲ. ಆದರೆ ಅವರು ಎಷ್ಟೊಂದು ಹೆದರಿದ್ದಾರೆ ಎಂದರೆ ಬಿಜೆಪಿ ಅಧ್ಯಕ್ಷರು ಪಶ್ಚಿಮ ಬಂಗಾಳದ ನೆಲದಲ್ಲಿ ಕಾಲಿಡಲೇಬಾರದು ಎಂದು ಅವರು ಬಯಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಸಂಸತ್ತಿನ ಕೆಳಮನೆಯಲ್ಲಿ ಯಶಸ್ವಿಯಾಗಿ ಅಂಗೀಕರಿಸಲಾಗಿರುವ ಪೌರತ್ವ ಮಸೂದೆಯನ್ನು ಬಗ್ಗೆ ತಮ್ಮ ರ್ಯಾಲಿಗಳಲ್ಲಿ ಒತ್ತು ನೀಡಿ ಪ್ರಸ್ತಾಪಿಸಿದ ಪ್ರಧಾನಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಮೇಲ್ಮನೆಯಲ್ಲಿ (ರಾಜ್ಯಸಭೆ) ಮಸೂದೆಯನ್ನು ಬೆಂಬಲಿಸಬೇಕು ಎಂದು ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ನಡೆದ ಥಾಕೂರ್ ನಗರದಲ್ಲಿ ನಡೆದ ತಮ್ಮ ಮೊದಲ  ರಾಲಿಯಲ್ಲಿ ಹೇಳಿದರು. ಪ್ರಧಾನಿಯವರು ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ಪೂರ್ವ ಭಾರತದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ರಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಅಧಿಕಾರಿಗಳು ಹೇಳಿದರು. ಸ್ವಾತಂತ್ರ್ಯ ಕಾಲದಲ್ಲಿ ದೇಶವು ಹಲವಾರು ಭಾಗಗಳಾಗಿ ವಿಭಜಿಸಲ್ಪಟ್ಟಿತ್ತು. ೧೯೪೭ರಲ್ಲಿ ಹಲವರು ತಮ್ಮ ತಮ್ಮ ದೇಶಗಳಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ನಾವು ಎಲ್ಲಿದ್ದೇವೋ ಅಲ್ಲೇ ನೆಲೆ ನಿಲ್ಲುವುದಾಗಿ ಅವರು ಯೋಚಿಸಿದ್ದರು. ಹೀಗಾಗಿ ಹಲವರು ಆಫ್ಘಾನಿಸ್ಥಾನ, ಪಾಕಿಸ್ತಾನ, ಬಾಂಗ್ಲಾದೇಶ (ಪೂರ್ವ ಪಾಕಿಸ್ತಾನ) ದೇಶಗಳಲ್ಲೇ ನೆಲೆಸಿದ್ದರು. ಬಳಿಕ ಅವರು - ಹಿಂದುಗಳು, ಸಿಕ್ಖರು, ಜೈನರು, ಪಾರ್ಸಿಗಳು ಹಿಂದುಸ್ಥಾನಕ್ಕೆ ಬಂದರು. ಅವರಿಗೆ ದೇಶದಲ್ಲಿ ಜಾಗ ಇಲ್ಲವೇ? ಅವರು ಏನಾದರೂ ಅಪರಾಧ ಎಸಗಿದ್ದಾರೆಯೇ? ಅವರ ಸಮಸ್ಯೆಗಳ ನಿವಾರಣೆಗಾಗಿ ನಾವು ಪೌರತ್ವ ಮಸೂದೆಯ ಉಪಕ್ರಮ ಕೈಗೊಂಡೆವು. ಮಸೂದೆಯನ್ನು ರಾಜ್ಯಸಭೆಯಲ್ಲಿ ಬೆಂಬಲಿಸಿ ಎಂದು ಟಿಎಂಸಿಯನ್ನು ಕೋರಲು ನಾನು ಬಯಸುತ್ತೇನೆ ಎಂದು ಮೋದಿ ನುಡಿದರುಥಾಕೂರ್ ನಗರವು ಬಾಂಗ್ಲಾದೇಶದಿಂದ ಬಂದ ದಲಿತ ನಿರಾಶ್ರಿತರ ಕೇಂದ್ರ ಕಚೇರಿಯಾಗಿದ್ದು, ಇಲ್ಲಿಂದಲೇ ತಮ್ಮ ಚುನಾವಣಾ ರ್ಯಾಲಿಯನ್ನು ಪ್ರಧಾನಿ ಆರಂಭಿಸಿದರು. ಇಲ್ಲಿ ನೆಲೆ ನಿಂತಿರುವ ನಿರಾಶ್ರಿತರಲ್ಲಿ ಬಹುತೇಕ ಮಂದಿ ನಾಮಸುದ್ರ ಸಮುದಾಯದವರು. ಬಹಳಷ್ಟು ಮಂದಿ ಮತುವಾ ಮಹಾಸಂಘ -ಸಾಮಾಜಿಕ ಧಾರ್ಮಿಕ ಸಮುದಾಯಕ್ಕೆ ಸೇರಿದವರು. ಸಮುದಾಯವನ್ನು ೧೯ನೇ ಶತಮಾನದಲ್ಲಿ ಈಗಿನ ಬಾಂಗ್ಲಾದೇಶದ ಸಮಾಜ ಸುಧಾರಕ ಹರಿಚಂದ್ ಥಾಕೂರ್ ಸ್ಥಾಪಿಸಿದ್ದರು. ಸಮುದಾಯದ ಬಹುತೇಕ ಮಂದಿ ಇನ್ನು ರಾಷ್ಟ್ರದ ಪೌರರಾಗಿಲ್ಲ ಎಂದು ಸಮುದಾಯದ ನಾಯಕರು ಪ್ರತಿಪಾದಿಸುತ್ತಾರೆ. ಪಶ್ಚಿಮ ಬಂಗಾಳದ ಜಿಲ್ಲೆಗಳ ಕನಿಷ್ಠ ೭೮ ವಿಧಾನಸಭಾ ಪ್ರದೇಶಗಳಲ್ಲಿ ಮತುವಾಗಳು ಇದ್ದಾರೆ ಎಂದು ಬೊಂಗಾಂವ್ ಕ್ಷೇತ್ರದ ಸಂಸತ್ ಸದಸ್ಯರಾದ ಮಮತಾಬಾಲ ಥಾಕೂರ್ ೨೦೧೬ರಲ್ಲಿ ಹೇಳಿದ್ದರು. ಬೊರೋ ಮಾ ಬಿನಾಪಾನಿ ದೇವಿ ಮತ್ತು ಮತುವಾ ಮಹಾಸಂಘದ ಸಮುದಾಯದ ಮೇಲೆ ನಿಯಂತ್ರಣ ಹೊಂದಿದ್ದಾರೆ ಎಂದು ಥಾಕೂರ್ ಹೇಳಿದ್ದರು.
ಇದಲ್ಲದೆ ಬೊಂಗಾವ್ ಕ್ಷೇತ್ರದಲ್ಲಿ ಬಿಜೆಪಿಯ ಮತಪ್ರಮಾಣ ೨೦೧೪ರ ಲೋಕಸಭಾ ಚುನಾವಣೆಯಿಂದ ೨೦೧೫ರ ಉಪಚುನಾವಣೆ ನಡುವಣ ಅವಧಿಯಲ್ಲಿ ಶೇಕಡಾ ೫ರಷ್ಟು (ಸುಮಾರು ೭೦,೦೦೦) ಹೆಚ್ಚಿದ್ದು, ಕ್ಷೇತ್ರವನ್ನು ಗೆಲ್ಲುವ ಹೆಚ್ಚಿನ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಇಲ್ಲಿಂದಲೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದರು. ಪ್ರಧಾನಿಯವರ ರಾಲಿ ರಾಜಕೀಯ ರಹಿತವಾದದ್ದು ಮತ್ತು ಸಮುದಾಯದ ಸಮ್ಮೇಳನ ಎಂಬುದಾಗಿ ಮತುವಾ ಸಮುದಾಯದ ಅಧಿಕಾರಿಗಳು ಹೇಳಿದರೂ, ಮೋದಿಯವರು ಮಮತಾ ಬ್ಯಾನರ್ಜಿ ಅವರತ್ತ ಗುರಿ ಇಟ್ಟ ಟೀಕೆ ಮತ್ತು ಮುಂಗಡಪತ್ರದ ಶ್ಲಾಘನೆ ಮೂಲಕ ರಾಜಕೀಯ ಭಾಷಣವನ್ನೇ ಮಾಡಿದರು. ಮುಂಗಡಪತ್ರವು ಸ್ಪಷ್ಟ ಚಿತ್ರದ ಆರಂಭದ ಸೂಚನೆಯಾಗಿದೆ. ಸರ್ಕಾರವು ಚುನಾವಣೆಯ ಬಳಿಕ ಪೂರ್ಣ ಪ್ರಮಾಣದ ಮುಂಗಡಪತ್ರ ಮಂಡಿಸಿದಾಗ ಚಿತ್ರ ಇನ್ನಷ್ಟು ಸ್ಪಷ್ಟವಾಗಲಿದೆ ಎಂದು ಮೋದಿ ನುಡಿದರುನಾವು ಚುನಾವಣೆಯ ಬಳಿಕ ಪೂರ್ಣ ಪ್ರಮಾಣದ ಮುಂಗಡಪತ್ರ ಮಂಡಿಸಿದಾಗ ರೈತರು ಮತ್ತು ಅಸಂಘಟಿತ ಕಾರ್ಮಿಕರಿಗೆ ನೀಡಿದ ಅನುಕೂಲಗಳು ಇನ್ನಷ್ಟು ಸ್ಪಷ್ಟವಾಗಲಿವೆ ಎಂದು ಮೋದಿ ಹೇಳಿದರು. ದೇಶದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಯೋಜನೆಗಳನ್ನು ರೈತರು ಮತ್ತು ಮಧ್ಯಮ ವರ್ಗದವರಿಗಾಗಿ ರೂಪುಗೊಂಡಿರುವುದು ಇದೇ ಪ್ರಥಮ. ೧೨ ಕೋಟಿ ರೈತರು ಮತ್ತು ಮಧ್ಯಮ ವರ್ಗದ ಕೋಟಿ ಮಂದಿಗೆ ಯೋಜನೆಗಳಿಂದ ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು. ಕಾಂಗ್ರೆಸ್ ಸರ್ಕಾರವು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಘೋಷಿಸಿದ ಒಂದು ಸಲದ ಸಾಲಮನ್ನಾ ಯೋಜನೆಯನ್ನು ಟೀಕಿಸಿದ ಪ್ರಧಾನಿಇಂತಹ ಯೋಜನೆಗಳು ರೈತರಿಗೆ ಅನುಕೂಲವಾಗುವುದಿಲ್ಲ. ಕೆಲವು ವರ್ಷಗಳ ಬಳಿಕ ರೈತರು ಸಾಲದ ಸುಳಿಯಲ್ಲಿ ಮತ್ತೆ ಬೀಳುತ್ತಾರೆ ಎಂದು ಮೋದಿ ಹೇಳಿದರು. ಕಾಲ್ತುಳಿತದಂತಹ ಸ್ಥಿತಿ, ಗೊಂದಲ: ಪ್ರಧಾನಿಯವರ ಭಾಷಣದ ಮಧ್ಯೆ ಸಭೆಯಲ್ಲಿ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣಗೊಂಡ ಕಾರಣ ಮೋದಿ ಅವರು ತಮ್ಮ ಭಾಷಣವನ್ನು ಕೇವಲ ೨೦ ನಿಮಿಷಗಳಿಗೆ ಮೊಟಕು ಮಾಡಿ ಮುಕ್ತಾಯಗೊಳಿಸಿದರು. ಮೋದಿ ಅವರು ಭಾಷಣ ಮಾಡುತ್ತಿದ್ದಾಗ ಹಿಂದಿನ ಸಾಲುಗಳಲ್ಲಿದ್ದ ಮಂದಿ ಮುಂದಿನ ಸಾಲುಗಳತ್ತ ಬರುವ ಯತ್ನ ನಡೆಸಿದಾಗ ಕೆಲ ಕಾಲ ಕಾಲ್ತುಳಿತ ಮಾದರಿಯ ಸ್ಥಿತಿ ನಿರ್ಮಾಣಗೊಂಡು ಗೊಂದಲ ಉಂಟಾಯಿತು. ಪ್ರಧಾನಿಯವರು ಶಾಂತರಾಗುವಂತೆ ಮನವಿ ಮಾಡಿದರೂ, ಗದ್ದಲದ ಮಧ್ಯೆ ಅದು ಕೇಳಿಸಲಿಲ್ಲ. ಗದ್ದಲದಲ್ಲಿ ಗದ್ದಲದಲ್ಲಿ ಕನಿಷ್ಠ ೧೬ ಮಂದಿ  ಗಾಯಗೊಂಡರು ಮತ್ತು ಕೆಲವು ಬ್ಯಾರಿಕೇಡ್ಗಳು ಮುರಿದವು. ಶಾಂತರಾಗುವಂತೆ ತಾವು ಮಾಡಿದ ಮನವಿ ಫಲ ನೀಡದೇ ಹೋದಾಗ, ತಾವು ಇನ್ನೊಂದು ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಹೇಳಿ ಪ್ರಧಾನಿಯವರು ತಮ್ಮ ಭಾಷಣವನ್ನು ಮೊಟಕು ಮಾಡಿ ಮುಕ್ತಾಯಗೊಳಿಸಿದರು ಮತ್ತು ಅಲ್ಲಿಂದ ಹೊರಟರು.

2019: ಮುಂಬೈ: ಖ್ಯಾತ ಲೇಖಕ, ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಆನಂದ ತೆಲ್ತುಂಬ್ಡೆ ಅವರನ್ನು ಎಲ್ಗಾರ್ ಪರಿಷದ್ - ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಸುಕಿನ ವೇಳೆಯಲ್ಲಿ ಪುಣೆ ಪೊಲೀಸರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಪುಣೆ ಪೊಲೀಸರು ಆನಂದ ತೆಲ್ತುಂಬ್ಡೆ ಅವರನ್ನುಎಲ್ಗಾರ್ ಪರಿಷದ್-ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಿದ್ದು, ಅವರಿಗೆ ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ಜೊತೆಗೆ ಸಂಪರ್ಕ ಇದೆ ಎಂದು ಆಪಾದಿಸಿದ್ದರು. ಪುಣೆಯ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲ್ತುಂಬ್ಡೆ ಬಂಧನದೊಂದಿ ಈವರೆಗೆ ಒಟ್ಟು ೧೦ ಮಂದಿಯನ್ನು ಬಂಧಿಸಿದಂತಾಯಿತು. ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ನಲ್ಲಿ ನಸುಕಿನ .೩೦ ಗಂಟೆಗೆ ತೆಲ್ತುಂಬ್ಡೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೆಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ಪುಣೆಯ ವಿಶೇಷ ನ್ಯಾಯಾಲಯವು ರದ್ದು ಪಡಿಸಿತ್ತು. ಮನವಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಧೀಶ ಕೆ.ಡಿ. ವದನೆ ಅವರುಅವರ ವಿರುದ್ಧದ ಆರೋಪಿತ ಅಪರಾಧಗಳು ಗಂಭೀರ ಸ್ವರೂಪದವಾಗಿವೆ ಮತ್ತು ತನಿಖಾ ಸಂಸ್ಥೆಯಿಂದ (ಪುಣೆ ಪೊಲೀಸರು) ಶಿಕ್ಷಣ ತಜ್ಞನನ್ನು ಸಿಲುಕಿಸುವ ದುರುದ್ದೇಶ ಇರುವಂತೆ ಕಂಡು ಬರುತ್ತಿಲ್ಲ ಎಂದು ಹೇಳಿದ್ದರು. ಪುಣೆ ನ್ಯಾಯಾಲಯದ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಸಲುವಾಗಿ ತೆಲ್ತುಂಬ್ಡೆ ಅವರು ಮುಂಬೈಗೆ ಬಂದಿದ್ದರುಇದಕ್ಕೆ ಮುನ್ನ ಪುಣೆ ಪೊಲೀಸರ ಪರವಾಗಿ ಹಾಜರಾಗಿದ್ದ ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ ಪವಾರ್ ಅವರುಪುಣೆ ಪೊಲೀಸರು ಇತರ ಬಂಧಿತರಲ್ಲಿ ಒಬ್ಬರಿಂದ ವಶಪಡಿಸಿಕೊಂಡಿರುವ ಮಾವೋವಾದಿ ಸಂದೇಶಗಳು ತೆಲ್ತುಂಬ್ಡೆ ಮತ್ತು ಅವರ ಸಹೋದರ ದೇಶಭ್ರಷ್ಟ ಮಾವೋವಾದಿ ಮಿಲಿಂದ್ ತೆಲ್ತುಂಬ್ಡೆಗೆ ಸಂಪರ್ಕ ಇರುವ ಬಗ್ಗೆ ಬೊಟ್ಟು ಮಾಡಿವೆ ಎಂದು ಕೋರ್ಟಿಗೆ ಹೇಳಿದ್ದರು.  ಸುಪ್ರೀಂಕೋರ್ಟ್ ಆದೇಶ: ತೆಲ್ತುಂಬ್ಡೆ ಬಂಧನವು ಸುಪ್ರೀಂಕೋರ್ಟ್ ಅವರಿಗೆ ನೀಡಿದ್ದ ಮಧ್ಯಂತರ ರಕ್ಷಣೆಯ ಉಲ್ಲಂಘನೆಯಾಗಿದೆ ಎಂದು ತೆಲ್ತುಂಬ್ಡೆ ಬೆಂಬಲಿಗರು ಆಪಾದಿಸಿದ್ದರೆ, ಪುಣೆ ಪೊಲೀಸರು ಸುಪ್ರೀಂಕೋರ್ಟ್ ನೀಡಿದ್ದ ರಕ್ಷಣೆಯು ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನಿನ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ಮಾತ್ರ ಎಂದು ಪ್ರತಿಪಾದಿಸಿದರು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ತೆಲ್ತುಂಬ್ಡೆ ಅವರನ್ನು ಆದೇಶದ ದಿನಾಂಕದಿಂದ ನಾಲ್ಕು ವಾರಗಳು ಪೂರ್ಣಗೊಂಡ ಬಳಿಕ, ಅವರು ಕೆಳ ನ್ಯಾಯಾಲಯಗಳಿಂದ ಅಥವಾ ಹೈಕೋರ್ಟಿನಿಂದ ಜಾಮೀನು ಪಡೆಯದೇ ಇದ್ದಲ್ಲಿ ಬಂಧಿಸಬಹುದು. ತೆಲ್ತುಂಬ್ಡೆ ಅವರು ಬಂಧನದಿಂದ ರಕ್ಷಣೆ ಒದಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬಾಂಬೆ ಹೈಕೋರ್ಟ್ ಡಿಸೆಂಬರ್ ೧೫ರಂದು ನೀಡಿದ ತೀರ್ಪಿನ ಬಳಿಕ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಐಐಎಂ -ಅಹ್ಮದಾಬಾದ್ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಬುದ್ಧಿ ಜೀವಿಗಳು ತೆಲ್ತುಂಬ್ಡೆ ಅವರಿಗೆ ಬಹಿರಂಗ ಬೆಂಬಲ ಘೋಷಿಸಿ, ಪುಣೆ ಪೊಲೀಸರು ಬೇಟೆ ನಾಯಿಗಳಂತೆ ಅವರ ಹಿಂದೆ ಬಿದ್ದಿರುವುದನ್ನು ಖಂಡಿಸಿದ್ದರು. ತೆಲ್ತುಂಬ್ಡೆ ಅವರು ಡಾಕ್ಟರೇಟ್ ಪಡೆದಿರುವ ಹಾಗೂ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಗಣ್ಯ ವ್ಯಕ್ತಿಯಾಗಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಗಳಿಸಿರುವ ಅವರು ಹಿಂದೆ ಎಂದೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿಲ್ಲ ಎಂದು ತೆಲ್ತುಂಬ್ಡೆ ಪರ ವಕೀಲ ರೋಹನ್ ನಹರ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಪೇಶ್ವೆಗಳ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ ದಲಿತ ಯೋಧರ ಶೌರ್ಯವನ್ನು ಸಂಭ್ರಮಿಸಲು ಭೀಮಾ ಕೋರೆಗಾಂವ್ನಲ್ಲಿ ಸಂಘಟಿಸಲಾಗಿದ್ದ ಬೃಹತ್ ಸಮಾವೇಶ ಕಾಲದಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು.

2019: ಕೋಲ್ಕತ: ಕೋಲ್ಕತಾದಲ್ಲಿ ಚೊಚ್ಚಲ ಸರಣಿ ಚುನಾವಣಾ ರಾಲಿಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಿಟ್ಟಿನಿಂದ ಕುದಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮೋದಿ ಅವರು ದುರ್ಗಾಪುರದ ಭಾಷಣ ಮುಗಿದ ಬೆನ್ನಲ್ಲೇಅವರ ಅವಧಿ ತಿಂಗಳಲ್ಲಿ ಮುಗಿಯುತ್ತದೆ, ಆದರೆ ಅಧಿಕಾರದಿಂದ ಹೊರಹೋಗಲು ಅವರು ಇನ್ನೂ ಮಾನಸಿಕ ಸಿದ್ಧತೆ ಮಾಡಿಕೊಂಡಿಲ್ಲ ಎಂದು ತಿರುಗೇಟು ನೀಡಿದರು. ಟಿವಿ ವಾಹಿನಿ ಒಂದರ ಜೊತೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪ್ರಧಾನಿಯವರು ಮಾಡಿದ ಟೀಕೆಗಳಿಗೆ ೨೦೦೨ರ ಗುಜರಾತ್ ದಂಗೆ ಸಂಬಂಧಿತ ಆರೋಪಗಳನ್ನು ಉಲ್ಲೇಖಿಸಿ ಪ್ರತಿದಾಳಿ ನಡೆಸಿದರು. ಪೌರತ್ವ ಮಸೂದೆಗೆ ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಬೆಂಬಲ ನೀಡಬೇಕು ಎಂಬುದಾಗಿ ಪ್ರಧಾನಿ ಮೋದಿ ಅವರು ಮಾಡಿದ ಮನವಿಯನ್ನು ಕೂಡಾ ತಿರಸ್ಕರಿಸಿದ ಮಮತಾನಾವು ಮಸೂದೆಗೆ ವಿರುದ್ಧವಾಗಿದ್ದೇವೆ. ಅವರು ಅದನ್ನು ಹಿಂತೆಗೆದುಕೊಳ್ಳಬೇಕು ಎಂದು ಹೇಳಿದರುಕೋಲ್ಕತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಜನವರಿ ೧೯ರಂದು ಎರಡು ಡಜನ್ ವಿರೋಧ ಪಕ್ಷಗಳ ರ್ಯಾಲಿಯನ್ನು ಸಂಘಟಿಸಿದ್ದ  ಮಮತಾ ಬ್ಯಾನರ್ಜಿ ಕೇಂದ್ರವು ತಮ್ಮನ್ನು ವಿರೋಧಿಸಿದ ಯಾರೇ ವ್ಯಕ್ತಿಯ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂಬಿಡುತ್ತಿದೆ ಎಂಬ ತಮ್ಮ ಹಿಂದಿನ ಮಾತನ್ನು ಪುನರುಚ್ಚರಿಸಿದರು. ಮಮತಾ ಬ್ಯಾನರ್ಜಿ ಅವರು ಬಹುಶಃ ತಪ್ಪು ಮಾಡಿರುವುದರಿಂದ ಹೆದರಿದ್ದಾರೆ ಎಂಬ ಮೋದಿ ಅವರ ಟೀಕೆಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು. ’ನೀವು ಏನೂ ತಪ್ಪು ಮಾಡಿಲ್ಲವಾದರೆ ಏಕೆ ಹೆದರುತ್ತೀರಿ? ನನ್ನನ್ನು ಕೂಡಾ ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಲಾಗಿತ್ತು ಎಂದು ಮೋದಿ ದುರ್ಗಾಪುರದಲ್ಲಿ ಹೇಳಿದ್ದರು. ಗುಜರಾತಿನಲ್ಲಿ ದಂಗೆಗಳು ನಡೆದದ್ದು ನಿಜ. ಅವರು ಅಪರಾಧಿಯಾಗಿದ್ದರು, ಹಾಗಾದ ಕಾರಣ ಅವರನ್ನು ಪ್ರಶ್ನಿಸಲಾಗಿತ್ತು (ಸಿಬಿಐನಿಂದ). ಆದರೆ ಕೇವಲ ಅವರನ್ನು ಪ್ರಶ್ನಿಸಲಾಯಿತು ಎಂಬ ಕಾರಣಕ್ಕಾಗಿ ಅವರು ಕೂಡಾ ಇತರರನ್ನು ವಿಚಾರಣೆಗೆ ಗುರಿಪಡಿಸಲು ಸಂಸ್ಥೆಗಳನ್ನು ಬಳಸಬಹುದು ಎಂದು ಅರ್ಥವಲ್ಲ ಎಂದು ಮಮತಾ ಉತ್ತರಿಸಿದರು.  ’ನಾನು ಇದನ್ನು ಹೇಳುತ್ತಿರಲಿಲ್ಲ, ಆದರೆ ಅವರು ರಾಜನಾಥ್ ಸಿಂಗ್ ಅವರ ಪುತ್ರನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಆಪಾದಿಸಿದರು.  ‘ನೈಜ ಫ್ಯಾಸಿಸ್ಟ್ ಮಾದರಿಯಲ್ಲಿ ಅವರು (ಪ್ರಧಾನಿ ಮೋದಿ) ಪ್ರತಿಯೊಬ್ಬನನ್ನೂ ಸಂಸ್ಥೆಗಳ ಮೂಲಕ ಸಿಲುಕಿಸಲು ಯತ್ನಿಸುತ್ತಿದ್ದಾರೆ. . ಕೇಂದ್ರ ಸರ್ಕಾರವು ಹೆಚ್ಚೆಂದರೆ ಇನ್ನು ಒಂದು ತಿಂಗಳು ನಡೆಯುತ್ತದೆ. ಆದರೆ ಅವರು ಮಾನಸಿಕವಾಗಿ ಅಧಿಕಾರದಿಂದ ಹೊರಹೋಗಲು ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿಲ್ಲ ಎಂದು ಮಮತಾ ಹೇಳಿದರು. ವೈಯಕ್ತಿಕ ಟೀಕೆ ಮಾಡಲೂ ಮಮತಾ ಬ್ಯಾನರ್ಜಿ ಹಿಂಜರಿಯಲಿಲ್ಲ. ’ಅವರಿಗೆ ರಾಷ್ಟ್ರದಲ್ಲಿ ಮಿತ್ರ ಪಕ್ಷಗಳೇ ಇಲ್ಲ. ಅವರು ಸ್ವತಃ ಫ್ಯಾಶನ್ನಿನಲ್ಲಿ ಬಂಧಿಯಾಗಿದ್ದಾರೆ. ಅವರಿಗೆ ಏನು ಮಾಡುವ ಸಾಮರ್ಥ್ಯವೂ ಇಲ್ಲ. ಅವರು ತಮ್ಮ ಭಾಷಣಗಳನ್ನು ಕೂಡಾ ಟೆಲಿಪ್ರಮೋಟರುಗಳ ನೆರವಿನೊಂದಿಗೆ ಮಾಡುತ್ತಿದ್ದಾರೆ ಎಂದು ಬ್ಯಾನರ್ಜಿ ನುಡಿದರುರಾಜ್ಯ ಸರ್ಕಾರವು ರಸ್ತೆ, ರೈಲ್ವೇ, ಆರೋಗ್ಯ ಕ್ಷೇತ್ರಗಳಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನವನ್ನು ತಡೆ ಹಿಡಿಯುತ್ತಿದೆ ಎಂಬುದಾಗಿ ಮೋದಿ ಅವರು ಮಾಡಿದ ಆರೋಪವನ್ನೂ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ’ಕೇಂದ್ರವು ಆಳ ಸಮುದ್ರ ಬಂದರು ಮತ್ತು ದೇವಚಾ ಪಚಮಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ತಡೆ ಹಿಡಿದಿರುವುದು ಏಕೆ ಎಂದು ಪ್ರಶ್ನಿಸಿದರು. ‘ಸಾರಧಾ ಮತ್ತುನಾರದಾ ಬರೇ ಜಳ್ಳು. ನಾರದಾ ಕುಟಕು ಮಾತ್ರ. ಚುನಾವಣೆಗಳಿಗಾಗಿ ಒಂದು ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದುದನ್ನು ಜನರು ನೋಡಿದ್ದಾರೆ. ಪ್ರಶ್ನೆಗಳನ್ನು ಕೇಳಲು ಅವರು ಯಾರುಚುನಾವಣೆಗಳಲ್ಲಿ ಅವರು ನೂರಾರು ಕೋಟಿ ರೂಪಾಯಿಗಳನ್ನು ಬಳಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ನುಡಿದರು.  ‘ಮೋದಿ ಅವರು ಎಂದೂ ಚಹಾ ಮಾರಿಯೇ ಇಲ್ಲ ಎಂದು ಬ್ಯಾನರ್ಜಿ ಹೇಳಿದರು. 



2018: ನವದೆಹಲಿ: ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ ಬೊಫೋರ್ಸ್ ಲಂಚ ಪ್ರಕರಣದಲ್ಲಿ ಯುರೋಪ್ ಮೂಲದ ಕೈಗಾರಿಕೋದ್ಯಮಿಗಳಾದ ಹಿಂದುಜಾ ಸಹೋದರರು ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ೨೦೦೫ರ ಮೇ ೩೧ರ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ೧೨ ವರ್ಷಗಳ ವಿಳಂಬದ ಬಳಿಕ ಸಿಬಿಐ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ೬೪ ಕೋಟಿ ರೂಪಾಯಿ ಮೊತ್ತದ ಲಂಚ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ೧೨ವರ್ಷಗಳ ವಿಳಂಬದ ಬಳಿಕ ಮೇಲ್ಮನವಿ ಸಲ್ಲಿಸುವುದು ಬೇಡ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಇತ್ತೀಚೆಗೆ ಸಲಹೆ ಮಾಡಿದ್ದರು. ಏನಿದ್ದರೂ, ಕೆಲವು ಮಹತ್ವದ ದಾಖಲೆಗಳು ಮತ್ತು ಸಾಕ್ಷ್ಯಾಧಾರ ಲಭಿಸಿದ ಹಿನ್ನೆಲೆಯಲ್ಲಿ, ಸಿಬಿಐ ಕಾನೂನು ಅಧಿಕಾರಿಗಳು ಸಮಾಲೋಚನೆಗಳ ಬಳಿಕ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು ಎಂದು ಮೂಲಗಳು ಹೇಳಿದವು. ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ಬಿಜೆಪಿ ನಾಯಕ ಅಜಯ್ ಅಗರ್ ವಾಲ್ ಅವರು, ಸಿಬಿಐಯು ೯೦ ದಿನಗಳ ಅವಧಿಯ ಒಳಗಾಗಿ ವಿಶೇಷ ಮೇಲ್ಮನವಿ (ಎಸ್ ಎಲ್ ಪಿ) ಸಲ್ಲಿಸಲು ವಿಫಲವಾದ ಬಳಿಕ ೨೦೦೫ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು.  ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ರಾಯ್ ಬರೇಲಿಯಿಂದ ಸ್ಪರ್ಧಿಸಿದ್ದ ಅಗರ್ ವಾಲ್ ಅವರು ದಶಕಕ್ಕೂ ಹೆಚ್ಚು ಕಾಲದಿಂದ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣವನ್ನು ಮುನ್ನಡೆಸಿದ್ದರು. ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಆರ್. ಎಸ್. ಸೋಧಿ (ಬಳಿಕ ನಿವೃತ್ತರು) ೨೦೦೫ರ ಮೇ ೩೧ರಂದು ಬೊಫೋರ್ಸ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸಿತ್ತು. ಇದಕ್ಕೆ ಮುನ್ನ ಹೈಕೋರ್ಟಿನ ಇನ್ನೊಬ್ಬ ನ್ಯಾಯಮೂರ್ತಿ ಜೆ.ಡಿ. ಕಪೂರ್ (ಬಳಿಕ ನಿವೃತ್ತರು) ೨೦೦೪ರ ಫೆಬ್ರುವರಿ ೪ರಂದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಪ್ರಕರಣದಲ್ಲಿ ದೋಷಮುಕ್ತರನ್ನಾಗಿ ಮಾಡಿದ್ದರು ಮತ್ತು ಬೊಫೋರ್ಸ್ ಕಂಪೆನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೬೫ರ ಅಡಿಯಲ್ಲಿ ಫೋರ್ಜರಿ ಆರೋಪ ಹೊರಿಸುವಂತೆ ಸಿಬಿಐ ಗೆ ನಿರ್ದೇಶಿಸಿದ್ದರು. ಭಾರತ ಮತ್ತು ಸ್ವೀಡಿಶ್ ಶಸ್ತ್ರಾಸ್ತ್ರ ತಯಾರಕ ಎಬಿ ಬೊಫೋರ್ಸ್ ಕಂಪೆನಿ ಮಧ್ಯೆ ೧೯೮೬ರ ಮಾರ್ಚ್ ೨೪ರಂದು ಭಾರತೀಯ ಸೇನೆಗಾಗಿ ೪೦೦ರಷ್ಟು  ೧೫೫ ಎಂಎಂ ಹೊವಿಟ್ಜರ್ ಬಂದೂಕುಗಳನ್ನು ಸರಬರಾಜು ಮಾಡಲು ,೪೩೭ ಕೋಟಿ ರೂಪಾಯಿ ಮೊತ್ತದ ವ್ಯವಹಾರ ಕುದುರಿಸಲಾಗಿತ್ತು. ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಜಕಾರಣಿಗಳು ಮತ್ತು ರಕ್ಷಣಾ ಸಿಬ್ಬಂದಿಗೆ ಬೊಫೋರ್ಸ್ ಕಂಪೆನಿಯ ಲಂಚ ಪಾವತಿ ಮಾಡಿದೆ ಎಂದು ೧೯೮೭ರ ಏಪ್ರಿಲ್ ೬ರಂದು ಸ್ವೀಡಿಶ್ ರೇಡಿಯೋ ಪ್ರತಿಪಾದಿಸಿತ್ತು. ೧೯೯೦ರ ಜನವರಿ ೨೨ರಂದು ಸಿಬಿಐ ಕ್ರಿಮಿನಲ್ ಸಂಚು, ವಂಚನೆ ಮತ್ತು ಫೋರ್ಜರಿಗಾಗಿ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ  ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಬಿ ಬೊಫೋರ್ಸ್ ಕಂಪೆನಿಯ ಆಗಿನ ಅಧ್ಯಕ್ಷ ಮಾರ್ಟಿನ್ ಆರ್ಡ್ಬೊ ಮತ್ತು ಮಧ್ಯವರ್ತಿ ವಿನ್ ಛಡ್ಡಾ ಮತ್ತು ಹಿಂದುಜಾ ಸಹೋದರರ ವಿರುದ್ಧ ಎಫ್ ಐಆರ್ ದಾಖಲಿಸಿತ್ತು. ಭಾರತ ಮತ್ತು ವಿದೇಶದಲ್ಲಿನ ಕೆಲವು ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳು ೧೯೮೨ರಿಂದ ೧೯೮೭ರ ನಡುವಣ ಅವಧಿಯಲ್ಲಿ ಕ್ರಿಮಿನಲ್ ಸಂಚು ರೂಪಿಸಿದ್ದಲ್ಲದೆ. ಭ್ರಷ್ಟಾಚಾರ, ವಂಚನೆ ಮತ್ತು ಫೋರ್ಜರಿಗಳನ್ನು ನಡೆಸಿದ್ದಾರೆ ಎಂದು ಸಿಬಿಐ ಆಪಾದಿಸಿತ್ತು. ೧೯೯೯ರ ಅಕ್ಟೋಬರ್ ೨೨ರಂದು ಛಡ್ಡಾ, ಒಟ್ಟಾವಿಯೋ ಖ್ವಟ್ರೋಚಿ, ಆಗಿನ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಆರ್ಡ್ಬೊ ಮತ್ತು ಬೊಫೋರ್ಸ್ ಕಂಪೆನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ೨೦೦೦ದ ಅಕ್ಟೋಬರ್ ೯ರಂದು ಹಿಂದುಜಾ ಸಹೋದರರ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯವು ೨೦೧೧ರ ಮಾರ್ಚ್ ೪ರಂದು, ಖ್ವಟ್ರೋಚಿ ಅವರನ್ನು ಗಡೀಪಾರು ಮಾಡಿಸಿಕೊಳ್ಳಲು ರಾಷ್ಟ್ರವು ಈಗಾಗಲೇ ೨೫೦ ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ರಾಷ್ಟ್ರವು ದುಬಾರಿ ಹಣದ ಹೊರೆಯನ್ನು ಹೊತ್ತುಕೊಳ್ಳಲಾಗದು ಎಂದು ಹೇಳಿ ಖ್ವಟ್ರೋಚಿ ಅವರನ್ನು ಪ್ರಕರಣದಿಂದ ದೋಷಮುಕ್ತಿಗೊಳಿಸಿತು. ೧೯೯೩ರ ಜುಲೈ ೨೯-೩೦ರಂದು ಭಾರತದಿಂದ ಪರಾರಿಯಾದ ಖ್ವಟ್ರೋಚಿ ಭಾರತದ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸುವ ಸಲುವಾಗಿ ಒಮ್ಮೆ ಕೂಡಾ ಹಾಜರಾಗಿರಲಿಲ್ಲ. ಖ್ವಟ್ರೋಚಿ ೧೯೯೩ರ ಜುಲೈ ೧೩ರಂದು ಮೃತರಾದರು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಭಟ್ನಾಗರ್, ಛಡ್ಡಾ ಮತ್ತು ಆರ್ಡ್ಬೊ ಅವರೂ ಬಳಿಕದ ದಿನಗಳಲ್ಲಿ ಸಾವನ್ನಪ್ಪಿದರು.

2018: ನವದೆಹಲಿ: ಮನೇಸರ್ ಭೂ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೇಂದ್ರ ತನಿಖಾ ದಳ(ಸಿಬಿಐ) ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ 35 ಮಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸಿತು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಸಿಬಿಐ ಅಧಿಕಾರಿಗಳು ಆರೋಪಿಗಳ ವಿರುದ್ಧ 'ಅಪರಾಧ ಸಂಚು ಮತ್ತು ವಂಚನೆ' ಎಂದು ಹೇಳಿ ದೋಷಾರೋಪ ಪಟ್ಟಿ (ಚಾರ್ಚ್ ಶೀಟ್) ಸಲ್ಲಿಸಿತು. ಪಟ್ಟಿಯಲ್ಲಿ ಅಂದಿನ ಸರ್ಕಾರದ  ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಯುಪಿಎಸ್ಸಿ ಸದಸ್ಯ ಚಟ್ಟರ್ ಸಿಂಗ್ ಹೆಸರನ್ನು ಸಿಬಿಐ ಹೆಸರಿಸಿತು. ಮನೇಸರ್ಭೂ ಒಪ್ಪಂದದ ಸಂದರ್ಭದಲ್ಲಿ ಅಲ್ಲಿನ ಖಾಸಗಿ ಬಿಲ್ಡರ್ಗಳು ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ 400 ಎಕರೆ ಜಾಗವನ್ನು ಕೇವಲ 100 ಕೋಟಿ ರೂ.ಗೆ ಖರೀದಿ ಮಾಡಿದ್ದರು. ಆದರೆ ಅಂದಿನ ಸಂದರ್ಭದಲ್ಲಿ ಎಕರೆ ನಾಲ್ಕು ಕೋಟಿ ಮಾರುಕಟ್ಟೆ ಮೌಲ್ಯವಿರುವುದನ್ನು ಸಿಬಿಐ ಗಮನಿಸಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತು. ಗುರುಗ್ರಾಮದ ಸುತ್ತಮುತ್ತಲಿನ ಪ್ರದೇಶ ಮನೇಸರ್, ನೌರಂಗ್ ಪುರ್ ಮತ್ತು ಲಖ್ನೌಲ್ಲಾ ಗ್ರಾಮಸ್ಥರಿಗೆ ಒಟ್ಟಾರೆ 1,500 ಕೋಟಿ ರೂಪಾಯಿ ಒಪ್ಪಂದದಿಂದ ನಷ್ಟವುಂಟಾಗಿದೆ ಎಂದು ಸಿಬಿಐ ಚಾರ್ಜ್ಶೀಟ್ನಲ್ಲಿ ಹೇಳಿತು. 2015 ಸೆಪ್ಟೆಂಬರ್ ನಲ್ಲಿ ಸಿಬಿಐ ಮನೇಸರ್ ಭೂ ವ್ಯವಹಾರ ಒಪ್ಪಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.

2018: ಹೈದರಾಬಾದ್ : ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರುವರಿ 1ರ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಮುಂಗಡಪತ್ರದಲ್ಲಿ ಆಂಧ್ರ ಪ್ರದೇಶಕ್ಕೆ ಏನನ್ನೂ ನೀಡಿಲ್ಲ ಎಂದು ಆಡಳಿತಾರೂಢ ಎನ್ಡಿಎ ಮೈತ್ರಿಕೂಟದಲ್ಲಿ ಪ್ರಧಾನ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅಸಮಾಧಾನ ಗೊಂಡಿರುವುದು ಬೆಳಕಿಗೆ ಬಂದಿದ್ದು, ಟಿಡಿಪಿ ಸಂಸದರು ಬಿಜೆಪಿ ವಿರುದ್ಧ ಸಮರ ಸಾರಿದರು. ಎನ್ಡಿಎ ಮೈತ್ರಿಕೂಟದಲ್ಲಿ ಇನ್ನು ತಮ್ಮ ಪಕ್ಷ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ  ಫೆಬ್ರುವರಿ 4ರ ಭಾನುವಾರ ತಾವು ಕರೆದಿರುವ ಉನ್ನತ ಮಟ್ಟದ ಸಭೆಯಲ್ಲಿ ಚಂದ್ರಬಾಬು ನಾಯ್ಡು ತೀರ್ಮಾನಿಸಲಿದ್ದಾರೆ ಎಂದು ವರದಿಗಳು ತಿಳಿಸಿದವು. ೨೦೧೪ರಲ್ಲಿ ನೂತನ ತೆಲಂಗಾಣ ರಾಜ್ಯದ ರಚನೆಗಾಗಿ ವಿಭಜನೆಯಾದ ಬಳಿಕ ಆಂಧ್ರ ಪ್ರದೇಶದ ಆದಾಯ ಮೂಲಗಳು ಬತ್ತಿ ಹೋಗಿದ್ದು ಅದು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ೨೦೧೪ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೇರಿ ಟಿಡಿಪಿ ಸ್ಪರ್ಧಿಸಿತ್ತು. ಕೇಂದ್ರದಿಂದ ಆಂಧ್ರಪ್ರದೇಶಕ್ಕೆ ಗಮನಾರ್ಹ ನೆರವು, ಸಹಾಯ ದೊರಕೀತೆಂಬ ಭಾವನೆ ಟಿಡಿಪಿಯದ್ದಾಗಿತ್ತು. ಆದರೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರ ಆಂಧ್ರ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ನಾಯ್ಡು ಅತೃಪ್ತರಾದರು.  ೨೦೧೮-೧೯ರ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಆಂಧ್ರ ಪ್ರದೇಶಕ್ಕೆ ಯಾವ ಕೊಡುಗೆಯನ್ನೂ ನೀಡಲಾಗಿಲ್ಲ. ಹೊಸ ರಾಜಧಾನಿ ಅಮರಾವತಿಯ ನಿರ್ಮಾಣಕ್ಕೆ ಭಾರೀ ಪ್ರಮಾಣದ ಹಣದ ಅಗತ್ಯವಿದ್ದು ಕೇಂದ್ರ ನಿಟ್ಟಿನಲ್ಲಿ ಸಹಕರಿಸುವುದೆಂಬ ವಿಶ್ವಾಸ ಟಿಡಿಪಿಗೆ ಇತ್ತು. ಅದು ಕೂಡ ಈಗ ಹುಸಿಯಾಗಿದೆ ಎಂದು ಚಂದ್ರಬಾಬು ನಾಯ್ಡು ಅವರು ಈದಿನ ಬೆಳಗ್ಗೆ ಕರೆದಿದ್ದ ತಮ್ಮ ಸಂಪುಟ ಸಭೆಯಲ್ಲಿ ತಮ್ಮ ಅಸಮಾಧಾನ, ಅತೃಪ್ತಿ, ನಿರಾಶೆಯನ್ನು ಹೊರಡೆಗಡಹಿದರು ಎಂದು ವರದಿಗಳು ತಿಳಿಸಿದವು. ವಿರೋಧ ಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಟಿಡಿಪಿ ಕಾಲೆಳೆಯಲು ಯತ್ನಿಸುತ್ತಿರುವುದರಿಂದ ಉತ್ಪನ್ನವಾಗುವ ಯಾವುದೇ ಸ್ಥಿತಿಯನ್ನು ಎದುರಿಸುವುದಕ್ಕೆ ಮತ್ತು ಅಗತ್ಯ ಬಿದ್ದರೆ ಬಿಜೆಪಿಯೊಂದಿಗಿನ ತನ್ನ ಸಂಬಂಧಗಳನ್ನು ಕಡಿದುಕೊಳ್ಳುವುದಕ್ಕೆ ಕೂಡ ಟಿಡಿಪಿ ಸಿದ್ಧವಿದೆ ಎಂಬ ಸುಳಿವನ್ನು  ಸಿಎಂ ಚಂದ್ರಬಾಬು ನಾಯ್ಡು ನೀಡಿದರು ಎಂದು ಮೂಲಗಳು ಹೇಳಿದವು. ಟಿಡಿಪಿ ಸಂಸದರ ಸಮರ: ಮಧ್ಯೆ ಕೇಂದ್ರ ಮುಂಗಡ ಪತ್ರದ ಬಗ್ಗೆ ಭ್ರಮನಿರಸನಗೊಂಡಿರುವ ತೆಲುಗುದೇಶಂ ಪಕ್ಷದ ಹಿರಿಯ ಸಂಸದರಲ್ಲಿ ಒಬ್ಬರಾಗಿರುವ ಟಿ.ಜಿ. ವೆಂಕಟೇಶ್ ಅವರು ಮಿತ್ರ ಪಕ್ಷ ಬಿಜೆಪಿ ವಿರುದ್ಧಸಮರ ಘೋಷಿಸಿದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರ ಮುಂಗಡಪತ್ರದ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದ ಬಳಿಕ ಬೆಳವಣಿಗೆ ಸಂಭವಿಸಿತು. ‘ನಾವು ಬಿಜೆಪಿ ವಿರುದ್ಧ ಸಮರ ಘೋಷಣೆ ಮಾಡಲಿದ್ದೇವೆ. ನಮ್ಮ ಮುಂದೆ ಈಗ ಮೂರು ಆಯ್ಕೆಗಳಿವೆ. ಒಂದು - ಬಿಜೆಪಿ ಜೊತೆಗೆ ಹೊಂದಾಣಿಕೆಗೆ ಪ್ರಯತ್ನಿಸುತ್ತಾ ಮುಂದುವರೆಯುವುದು. ಎರಡು- ನಮ್ಮ ಸಂಸತ್ ಸದಸ್ಯರು ರಾಜೀನಾಮೆ ನೀಡುವುದು. ಮೂರು- ಮೈತ್ರಿಯನ್ನು ಮುರಿದುಕೊಳ್ಳುವುದು. ನಾವು ಭಾನುವಾರ ಮುಖ್ಯಮಂತ್ರಿ ನಾಯ್ಡು ಜೊತೆಗಿನ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ವೆಂಕಟೇಶ್ ಹೇಳಿದರು. ಬಿಜೆಪಿ-ಟಿಡಿಪಿ ಮೈತ್ರಿಯಲ್ಲಿನ ಬಿಕ್ಕಟ್ಟಿನ ಸುಳಿವು ಅರುಣ್ ಜೇಟ್ಲಿ ಅವರು ಮುಂಗಡಪತ್ರ ಮಂಡಿಸುವುದಕ್ಕೂ ಮುಂಚೆಯೇ ಗೋಚರವಾಗತೊಡಗಿತ್ತು. ನಾಯ್ಡು ಅವರು ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಗೆ ತೆರಳುವ ಮನ್ನವೇ ಪಕ್ಷದ ಮೂಲಗಳು, ಮುಖ್ಯಮಂತ್ರಿಯವರು ಬಿಜೆಪಿ ಜೊತೆಗೆ ಅಸಂತೃಪ್ತರಾಗಿದ್ದಾರೆ ಎಂದು ಹೇಳಿದ್ದವು. ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೋರಿ ದೆಹಲಿಗೆ ೪೨ ಬಾರಿ ಪಯಣಿಸಿದ್ದರೂ ಅದು ಫಲಪ್ರದವಾಗಿಲ್ಲ ಎಂದು ಸಿಎಂ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ದಾವೋಸ್ ನಿಂದ ವಾಪಸಾದ ಬಳಿಕ ಮುಖ್ಯಮಂತ್ರಿ ನಾಯ್ಡು ಅವರು ಸ್ವತಃ ಬಿಜೆಪಿ ಬಗ್ಗೆ ಟೀಕಿಸಿ, ಬಿಜೆಪಿಯ ಕೆಲವು ಸ್ಥಳೀಯ ನಾಯಕರ ಧೋರಣೆ ಬಗ್ಗೆ ತಾವು ಭ್ರಮನಿರಸನಗೊಂಡಿರುವುದಾಗಿ ಹೇಳಿದ್ದರು. ನಾನು ನನ್ನ ಪಕ್ಷದ ಸದಸ್ಯರನ್ನು ನಿಯಂತ್ರಿಸಿದ್ದೇನೆ. ಅವರ (ಬಿಜೆಪಿ) ವಿರುದ್ಧ ಮಾತನಾಡುವುದು ಬೇಡ ಎಂದು ನಾನು ಪಕ್ಷ ಸದಸ್ಯರಿಗೆ ಹೇಳುತ್ತಲೇ ಬಂದಿದ್ದೇನೆ. ಪರಸ್ಪರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಆದರೆ ಕೆಲವು ರಾಜ್ಯ ಬಿಜೆಪಿ ನಾಯಕರು ಹಲವಾರು ಟೀಕೆಗಳನ್ನು ಮಾಡುತ್ತಿದ್ದಾರೆ. ವರಿಷ್ಠ ಮಂಡಳಿ ಇದನ್ನು ಗಮನಿಸಿ ಪ್ರತಿಕ್ರಿಯಿಸಬೇಕಿತ್ತು. ಅಥವಾ ನಾವು ಬೇಕಾಗಿಲ್ಲ ಎಂದಾಗಿದ್ದರೆ, ನಾನು ಕೈಮುಗಿಯುತ್ತೇನೆ ಮತ್ತು ನಾವು ನಮ್ಮ ದಾರಿಯಲ್ಲಿ ಸಾಗುತ್ತೇವೆ ಎಂದ ನಾಯ್ಡು ಹೇಳಿದ್ದರು. ಬಿಕ್ಕಟ್ಟು ಇದೀಗ ಮುಂಗಡಪತ್ರದೊಂದಿಗೆ ಬಹಿರಂಗಕ್ಕೆ ಬಂದಿತು. ‘ಮುಂಗಡತ್ರವು ಆಂಧ್ರ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನಾವು ಮುಂಗಡಪತ್ರದ ಬಗ್ಗೆ ಭ್ರಮನಿರಸನಗೊಂಡಿದ್ದೇವೆ. ರೈಲ್ವೇ ವಲಯ, ಪೋಲಾವರಂ ಯೋಜನೆಗೆ ನಿಧಿ, ನೂತನ ರಾಜಧಾನಿ ಅಮರಾವತಿಗೆ ಆರ್ಥಿಕ ನೆರವು ಸೇರಿದಂತೆ ಆಂಧ್ರಪ್ರದೇಶದ ಹಲವಾರು ಬಾಕಿ ವಿಷಯಗಳ ಬಗೆಗೂ ಮುಂಗಡಪತ್ರ ಗಮನ ಹರಿಸಿಲ್ಲ ಎಂದು ತೆಲುಗುದೇಶಂ ಸಂಸದೀಯ ಪಕ್ಷದ ನಾಯಕ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ವೈಎಸ್ ಚೌಧರಿ ಹೇಳಿದರು. ವಿಶಾಖಪಟ್ಟಣದ ರೈಲ್ವೇ ವಲಯ ಬೇಡಿಕೆ ಎರಡು ದಶಕಗಳಷ್ಟು ಹಳೆಯದು ಮತ್ತು ಆಂಧ್ರದ ಜನರಿಗೆ ಭಾವನಾತ್ಮಕವಾದ ವಿಷಯ. ಸರ್ಕಾರ ಅದನ್ನು ಪ್ರಕಟಿಸಿಲ್ಲ. ಆಂಧ್ರಪ್ರದೇಶದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅತ್ಯಂತ ಕಡಿಮೆ ಹಣ ಒದಗಿಸಲಾಗಿದೆ. ಜನರಿಗೆ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಭಾವನೆ ಬಂದಿದೆ ಎಂದು ಅಣಕಪಳ್ಳಿಯ ಸಂಸದ ಶ್ರೀನಿವಾಸರಾವ್ ನುಡಿದರು. ಮೈತ್ರಿ ಮುರಿದರೆ ಇದರಿಂದ ಕೇಂದ್ರ ಸರ್ಕಾರದ ಮೇಲಾಗಲೀ, ರಾಜ್ಯದಲ್ಲಿನ ಟಿಡಿಪಿ ಸರ್ಕಾರದ ಮೇಲಾಗಲೀ ಯಾವುದೇ ಪರಿಣಾಮವೂ ಆಗುವುದಿಲ್ಲ. ಉಭಯ ಪಕ್ಷಗಳೂ ತಮ್ಮ ತಮ್ಮ ಕಾಲಮೇಲೆಯೇ ನಿಂತುಕೊಂಡಿವೆ. ಆದರೆ ಅದು ೨೦೧೯ರ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳನ್ನು ಬದಲಾಯಿಸಬಲ್ಲುದು. ಈಗಾಗಲೇ ಮಾಜಿ ಕಾಂಗ್ರೆಸ್ ನಾಯಕ ಮಾಜಿ ಆಂಧ್ರ ಮುಖ್ಯಮಂತ್ರಿ ವೈಎಸ್ ಆರ್ ರೆಡ್ಡಿ ಅವರ ಪುತ್ರ ಜನನ್ಮೋಹನ ರೆಡ್ಡಿ ಅವರು ತಮ್ಮ ವೈಎಸ್ ಆರ್ ಕಾಂಗ್ರೆಸ್ ಬಿಜೆಪಿ ಜೊತೆ ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿರುವುದೂ ಇಲ್ಲಿ ಗಮನಾರ್ಹ.

2018: ನವದೆಹಲಿ: ಭಾರತದಲ್ಲಿ ಕೋಳಿಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿಕೊಲಿಸ್ಟಿನ್ ಹೆಸರಿನ ಪ್ರಬಲ ರೋಗನಿರೋಧಕ ಔಷಧವನ್ನು ನೀಡಲಾಗುತ್ತಿದೆ. ಇದು ಮನುಷ್ಯ ಸೇರಿದಂತೆ ಇತರ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಸರ್ಕಾರೇತರ ಸಂಘಟನೆ ದಿ ಬ್ಯೂರೋ ಆಫ್ ಇನ್ ವೆಸ್ಟಿಗೇಟಿವ್ ಜರ್ನಲಿಸಂ ಸಂಸ್ಥೇಯ ಅಧ್ಯಯನ ವರದಿ ಬಹಿರಂಗ ಪಡಿಸಿತು. ಕೋಳಿ ಸಾಕಾಣಿಕೆ ವೇಳೆ ಕೋಳಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಮಾತ್ರ ಔಷಧ ನೀಡಬೇಕು. ಆದರೆ, ಅಗತ್ಯ ಪ್ರಮಾಣಕ್ಕಿತ ಹೆಚ್ಚಿನ ಔಷಧಗಳನ್ನು ಅನಾರೋಗ್ಯ ಕಾಣಿಸಿಕೊಳ್ಳುವ ಮೊದಲೇ ನೀಡಲಾಗುತ್ತಿದೆ. ಭಾರತದಲ್ಲಿ ನೂರಾರು ಟನ್ಗಳಷ್ಟು ರೋಗನಿರೋಧಕ ಔಷಧಗಳನ್ನು ವೈದ್ಯರ ಶಿಫಾರಸು ಇಲ್ಲದೆಯೇ ಕೋಳಿಗಳಿಗೆ ನೀಡಲಾಗುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿತು. ಅನಾರೋಗ್ಯ ಸುಧಾರಣೆಯ ಲಕ್ಷಣವೇ ಇಲ್ಲದ ಅಂತಿಮ ಹಂತದಲ್ಲಿ ಮಾತ್ರ ರೋಗಿಗಳಿಗೆಕೊಲಿಸ್ಟಿನ್ ಔಷಧವನ್ನು ನೀಡಲಾಗುತ್ತದೆ. ಆದರೆ ಭಾರತಕ್ಕೆ ಟನ್ ಗಟ್ಟಲೆ ಪ್ರಮಾಣದಲ್ಲಿ ರಫ್ತಾಗುತ್ತಿರುವ ಔಷಧವನ್ನು ಕೋಳಿಗಳನ್ನು ಕೊಬ್ಬಿಸುವ ಸಲುವಾಗಿ ಧಾರಾಳವಾಗಿ ಬಳಸಲಾಗುತ್ತಿದೆ ಎಂದು ವರದಿ ಹೇಳಿದೆ. ‘ಭಾರತದ ಕೋಳಿಸಾಕಣೆಯು ಜಾಗತಿಕಸೂಪರ್ಬಗ್ಗಳನ್ನು ನಿರ್ಮಿಸುತ್ತಿದೆ ಎಂದು ಬ್ಯೂರೋ ಆಫ್ ಇನ್ ವೆಸ್ಟಿಗೇಟಿವ್ ಜರ್ನಲಿಸಂ ತನ್ನ ವರದಿಯಲ್ಲಿ ಬಣ್ಣಿಸಿತು. ಬ್ಯೂರೋ ಆಫ್ ಇನ್ ವೆಸ್ಟಿಗೇಟಿವ್ ಜರ್ನಲಿಸಂ ವೆಬ್ ಸೈಟ್ ವರದಿಯನ್ನು ಪ್ರಕಟಿಸಿತು. ‘ರೋಗಗಳಿಂದ ರಕ್ಷಿಸುವ ಸಲುವಾಗಿ ಅಥವಾ ಅವುಗಳು ಬೇಗನೇ ಬೆಳೆಯುವಂತೆ ಮಾಡಲು ಪಕ್ಷಿಗಳಿಗೆ (ಕೋಳಿ) ಕೊಲಿಸ್ಟಿನ್ ರೋಗ ನಿರೋಧಕ ಔಷಧವನ್ನು ಕೊಡಲಾಗುತ್ತಿದೆ. ಹೀಗೆ ಮಾಡುವುದರಿಂದ ಕೋಳಿಗಳು ಬೇಗನೇ ಬೆಳೆದು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ವರದಿ ತಿಳಿಸಿತು.  ‘ಕೊಲಿಸ್ಟಿನ್ ಔಷಧವನ್ನು ಪರಿಸರದ ನಂಜು ಎಂಬುದಾಗಿ ಪರಿಗಣಿಸಬೇಕು ಎಂದು ವಿಶ್ವಸಂಸ್ಥೆಯ ತಜ್ಞ ಪ್ರೊಫೆಸರ್ ವಾಲ್ಶ್ ಹೇಳಿದ್ದನ್ನು ವೆಬ್ ಸೈಟ್ ಉಲ್ಲೇಖಿಸಿತು. ‘ಕೊಲಿಸ್ಟಿನ್ ಔಷಧವನ್ನು ಅತ್ಯಂತ ಅಸ್ವಸ್ಥ ರೋಗಿಗಳಿಗೆ ಮಾತ್ರವೇ ಕೊಡಬೇಕು. ಬೇರೆ ಯಾವುದೇ ಸಂದರ್ಭದಲ್ಲೂ ಇದನ್ನು ಪರಿಸರ ನಂಜು ಎಂದೇ ಪರಿಗಣಿಸಬೇಕು. ಕೋಳಿ ಆಹಾರವಾಗಿ ಔಷಧವನ್ನು ವಿಶ್ವಾದ್ಯಂತ ರಫ್ತು ಮಾಡಬಾರದು ಎಂದು ಪ್ರೊಫೆಸರ್ ವಾಲ್ಶ್ ಹೇಳಿದ್ದರು. ತೀವ್ರ ಸೋಂಕಿಗೆ ಒಳಗಾದ ವಿಷಮ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ಮಾತ್ರವೇಕೊಲಿಸ್ಟಿನ್ ಬಳಸಬೇಕು. ಮನುಷ್ಟರಿಗೆ ಔಷಧವಾಗಿ ಬಳಸುವ ಇದನ್ನು ಪ್ರಾಣಿಗಳಿಗೆ/ ಪಕ್ಷಿಗಳನ್ನುಕೊಬ್ಬಿಸುವ ಸಲುವಾಗಿ ಕೊಡಬಾರದು ಎಂದು ವಿಶ್ವ ಆರೋಗ್ಯ  ಸಂಸ್ಥೆ ಕೂಡಾ ಹೇಳಿತು. ಅಗತ್ಯವಿಲ್ಲದ್ದರೂ   ಔಷಧಗಳನ್ನು ತಿಂದು ಬೆಳೆದ ಕೋಳಿಗಳನ್ನು ಸೇವಿಸುವ ಮನುಷ್ಯರ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಇದರಿಂದ ಮನುಷ್ಯನಿಗೂ ಯಾವುದಾದರೂ ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸಾಮಾನ್ಯ ಔಷಧೋಪಚಾರಕ್ಕೂ ಸ್ಪಂದಿಸದ ಸ್ಥಿತಿ ಎದುರಾಗುತ್ತದೆ ಎಂದು ವರದಿ ವಿವರಿಸಿತು. ಜೀವಿಯೊಂದಕ್ಕೆ ಸಾಮಾನ್ಯ ರೋಗ ನಿರೋಧಕ ಶಕ್ತಿ ಇರುತ್ತದೆ. ಅದೇ ರೀತಿ ಕೋಳಿಗಳಿಗೂ ರೋಗ ನಿರೋಧಕ ಶಕ್ತಿ ಇದೆ. ಇದನ್ನು ಪರಿಗಣಿಸದೆ, ತಜ್ಞ ವೈದ್ಯರ ಸಲಹೆ, ಸೂಚನೆ ಇಲ್ಲದೆಯೆ ಅಗತ್ಯವಿಲ್ಲದಿದ್ದರೂ ರೋಗನಿರೋಧಕಗಳನ್ನು ನೀಡಲಾಗುತ್ತಿದೆ. ಅತಿ ಹೆಚ್ಚು ರೋಗನಿರೋಧಕ ಔಷಧೀಯ ಅಂಶಗಳಿಂದ ಕೂಡಿರುವ ಕೋಳಿಗಳ ಮಾಂಸವನ್ನು ಸೇವಿಸುವ ಮನುಷ್ಯರೂ ಯಾವುದೇ ಚಿಕಿತ್ಸೆಗೆ ಒಗ್ಗದ ಸ್ಥಿತಿ ಎದುರಾಗುತ್ತದೆ ಎಂದು ಅದು ಹೇಳಿತು.


2018: ನವದೆಹಲಿ: ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ರಾಜ್ಯಸಭೆಯಲ್ಲಿ ಗೋ ರಕ್ಷಣಾ ಮಸೂದೆ (೨೦೧೭)ಯನ್ನು ಸದಸ್ಯರ ಖಾಸಗಿ ಮಸೂದೆಯಾಗಿ ಮಂಡಿಸಿದರು. ಸರ್ಕಾರವು ಗೋ ಸಂರಕ್ಷಣೆ ನಿಟ್ಟಿನಲ್ಲಿ ತಾನು ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಸೂದೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ ಬಳಿಕ ಸ್ವಾಮಿ ಅದನ್ನು ಹಿಂತೆಗೆದುಕೊಂಡರು.  ಗೋ ಹಂತಕರಿಗೆ ಮರಣದಂಡನೆ ವಿಧಿಸಬೇಕು ಎಂದು ಅವರು ಮಸೂದೆಯಲ್ಲಿ ಸೂಚಿಸಿದರು. ಗೋ ರಕ್ಷಣೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಕೇಂದ್ರ ಸರ್ಕಾರ ಹಲವಾರು ಕಾರ್ಯಗಳಲ್ಲಿ ಮಗ್ನವಾಗಿದೆ. ಗೋ ರಕ್ಷಣೆ ಮಸೂದೆಯನ್ನು ಜಾರಿಗೆ ತರುವುದು ಬಿಜೆಪಿ ಸಂಸದನಾಗಿ ನನ್ನ ಕರ್ತವ್ಯವಾಗಿದೆ ಎಂದು ಮಸೂದೆಯನ್ನು ಮಂಡಿಸುತ್ತಾ ಸ್ವಾಮಿ ಹೇಳಿದರು. ಮೊಘಲ್ ಸಾಮ್ರಾಜ್ಯದಲ್ಲಿ ಬಹದ್ದೂರ್ ಷಹ ಗೋ ಹತ್ಯೆಯನ್ನು ನಿಷೇಧಿಸಿರುವುದಾಗಿ ಅವರು ಉದಾಹರಣೆ ನೀಡಿದರು. ಗೋ ಹತ್ಯೆಯನ್ನು ಭಾರತದಲ್ಲಿ ಒಂದು ಫ್ಯಾಶನ್ ಮಾಡಿದವರು ಬ್ರಿಟಿಷರು. ಆಧುನಿಕ ವಿಜ್ಞಾನದ ಪ್ರಕಾರ, ಗೋವಿನಿಂದ ಹಲವು ವೈಜ್ಞಾನಿಕ ಉಪಯೋಗಗಳಿ. ಗೋ ಮೂತ್ರದಿಂದ ಆಯುರ್ವೇದ, ಅಲೋಪಥಿ ಔಷಧಗಳನ್ನು ತಯಾರಿಸಲಾಗುತ್ತಿದೆ ಎಂದು ಸ್ವಾಮಿ ವಿವರಿಸಿದರು.


2018: ಮುಂಬಯಿ : ಭಾರತದ ದುರ್ಬಲ ಸಾರ್ವಜನಿಕ ಹಣಕಾಸು ಸ್ಥಿತಿಗತಿಯಿಂದ ಅದರ ಸಾರ್ವಭೌಮ ಕ್ರಮಾಂಕಕ್ಕೆ (sovereign ratings) ಧಕ್ಕೆ ಉಂಟಾಗಬಹುದೆಂದು Fitch Ratings ಹೇಳಿರುವುದನ್ನು ಅನುಸರಿಸಿ, ಈಗಾಗಲೇ ಬಜೆಟ್ನಿರಾಶೆಯಲ್ಲಿ ತೊಳಲಾಡುತ್ತಿರುವ ಮುಂಬಯಿ ಶೇರು ಮಾರುಕಟ್ಟೆಯಲ್ಲಿ, ಈದಿನ  ಶೇರುಗಳ ಮಾರಣ ಹೋಮವೇ ನಡೆಯಿತು. ವಹಿವಾಟುದಾರರು ಮತ್ತು ಹೂಡಿಕೆದಾರರು ತೀವ್ರ ಭೀತಿಯಲ್ಲಿ ಐಟಿ, ಫಾರ್ಮಾ ಮತ್ತು ಬ್ಯಾಂಕಿಂಗ್ವಲಯದ ಶೇರುಗಳನ್ನು ಮನಬಂದಂತೆ ಮಾರತೊಡಗಿದರುಪರಿಣಾಮವಾಗಿ ದಿನಾಂತ್ಯದ ವೇಳೆಗೆ  ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ಸೂಚ್ಯಂಕ 839.91 ಅಂಕಗಳ (ಶೇ.2.34) ಭಾರೀ ನಷ್ಟಕ್ಕೆ ಗುರಿಯಾಗಿ 35,066.75 ಅಂಕಗಳ ಮಟ್ಟಕ್ಕೆ ಕುಸಿಯಿತು; ರಾಷ್ಟ್ರೀಯ ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 256.30 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,760.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು ಫೆ.1ರ  ಬಜೆಟ್ನಲ್ಲಿ  ಒಂದು ಲಕ್ಷ ರೂ. ಮೀರುವ ದೀರ್ಘಾವಧಿ ಶೇರು ಮಾರಾಟದ ಲಾಭದ ಮೇಲೆ ಶೇ.10 ತೆರಿಗೆಯನ್ನು ಹೇರಲಾಗಿತ್ತು. ಸರ್ಕಾರದಿಂದ ಬಹಳಷ್ಟು ಉತ್ತೇಜಕ ಉಪಕ್ರಮಗಳನ್ನು ನಿರೀಕ್ಷಿಸಿದ್ದ ಶೇರು ಮಾರುಕಟ್ಟೆಗೆ ಅವು ಯಾವುವೂ  ದೊರಕಲಿಲ್ಲ; ಬದಲಾಗಿ ಶೇ.10 ಲಾಂಗ್ಟರ್ಮ್ ಕ್ಯಾಪಿಟಲ್ಗೇನ್ಸ್ತೆರಿಗೆಯನ್ನು ಹೇರಲಾದದ್ದು ವಿನಾಶಕಾರಿ ಎಂದು ಅನ್ನಿಸಿತ್ತುಮೇಲಾಗಿ ದೇಶದ ವಿತ್ತೀಯ ಕೊರತೆಯು ಈಗಿನ ಶೇ.3.2ರಿಂದ ಹೆಚ್ಚೆಂದರೆ ಶೇ.3.5ಕ್ಕೆ ಏರಬಹುದು ಎಂಬ ವಿತ್ತ ಸಚಿವರ ಸಮಜಾಯಿಸಿಕೆಯಿಂದ ಶೇರು ಮಾರುಕಟ್ಟೆ ತೃಪ್ತವಾಗಿರಲಿಲ್ಲಮುಂಬಯಿ ಶೇರು ಪೇಟೆಯಲ್ಲಿಂದು 2,961 ಶೇರುಗಳ ವಹಿವಾಟಿಗೆ ಒಳಪಟ್ಟವು. ಪೈಕಿ ಕೇವಲ 310 ಶೇರುಗಳು ಮಾತ್ರವೇ ಮುನ್ನಡೆ ಕಂಡವು; 2,527 ಶೇರುಗಳು ನಷ್ಟಕ್ಕೆ ಗುರಿಯಾದವು; 124 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

2017: ಕಾನ್ಪುರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ಕಾನ್ಪುರ ಜಜ್ವಾವು ಪ್ರದೇಶದಲ್ಲಿ ಫೆ.1ರ ಬುಧವಾರ ಕುಸಿದಿದ್ದ 6 ಮಹಡಿಗಳ ಕಟ್ಟಡದ ಅವಶೇಷಗಳ ಅಡಿಯಿಂದ, ದುರಂತದ ಸುಮಾರು 15 ಗಂಟೆಗಳ ಬಳಿಕ  ಈದಿನ 3 ವರ್ಷದ ಮಗುವನ್ನು ಮೇಲೆತ್ತಿ ರಕ್ಷಿಸಿದರು. ಮಗುವನ್ನು ಲಕ್ಷ್ಮಿ ಎಂಬುದಾಗಿ ಗುರುತಿಸಲಾಗಿದ್ದು ಬಳಿಕ ತಂದೆಗೆ ಒಪ್ಪಿಸಲಾಯಿತು. ಮೂರು ವರ್ಷದ ಮಗುವನ್ನು ಜೀವಂತವಾಗಿ ಹೊರತೆಗೆದಿರುವುದರಿಂದ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರಾದರೂ ಜೀವಂತ ಇರಬಹುದು ಎಂಬ ಆಸೆ ಎನ್ಡಿಆರ್ಎಫ್ ತಂಡದ ಸದಸ್ಯರಲ್ಲಿ ಚಿಗುರೊಡೆಯಿತು.. ಮೂರು ವರ್ಷದ ಬಾಲಕಿ ಲಕ್ಷ್ಮಿಯನ್ನು ಪತ್ತೆ ಹಚ್ಚುವ ವೇಳೆಯಲ್ಲಿ ಆಕೆ ನಿದ್ರಿಸುತ್ತಿದ್ದಳು. ಆಕೆಯನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ತತ್ ಕ್ಷಣವೇ ಒಯ್ಯಲಾಯಿತು ಎಂದು ಎನ್ಡಿಆರ್ಎಫ್ ಸಿಬ್ಬಂದಿ ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ತುರ್ತು ಸೇವಾ ಸಿಬ್ಬಂದಿ ಹಾಗೂ ಪೊಲೀಸ್ ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಅವಶೇಷಗಳ ಅಡಿಯಲ್ಲಿ ಇನ್ನೂ ಒಂದು ಶವ ಪತ್ತೆಯಾಗಿದ್ದು ಸಾವಿನ ಸಂಖ್ಯೆ 6ಕ್ಕೆ ಏರಿತು.
2017: ಕುವೈತ್‌: ಸಿರಿಯಾ, ಇರಾಕ್‌, ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಇರಾಕ್ರಾಷ್ಟ್ರಗಳಿಗೆ ಕುವೈತ್ವೀಸಾ ನಿಷೇಧಿಸಿತು. ಐದು ಪ್ರಮುಖ ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕದ ಅಧ್ಯಕ್ಯ ಡೊನಾಲ್ಡ್ಟ್ರಂಪ್ನಿಷೇಧ ವಿಧಿಸಿದ ಬಳಿಕ ಕುವೈತ್ ನಿರ್ಧಾರಕ್ಕೆ ಮುಂದಾಯಿತು. ಈ ಐದು ರಾಷ್ಟ್ರಗಳ ವಲಸಿಗರು ಕುವೈತ್ಗೆ ಬರಲು ವೀಸಾಗೆ ಅರ್ಜಿ ಸಲ್ಲಿಸದಿರುವಂತೆ ಕುವೈತ್ಸರ್ಕಾರ ತಿಳಿಸಿತು. ಭಯೋತ್ಪಾದನೆ ತಡೆಗೆ ಕುವೈತ್ಸರ್ಕಾರ ಕ್ರಮ ಕೈಗೊಂಡಿದೆ ಎನ್ನಲಾಯಿತು.  ಅಮೆರಿಕದ ನಿರ್ಬಂಧದ ಬಳಿಕ ಐದು ಮುಸ್ಲಿಂ ರಾಷ್ಟ್ರಗಳಿಗೆ ನಿಷೇಧ ವಿಧಿಸಿರುವ ಮೊದಲ ರಾಷ್ಟ್ರ ಕುವೈತ್‌.
2017: ನವದೆಹಲಿ: ಏರ್ಸೆಲ್‌–ಮ್ಯಾಕ್ಸಿಸ್ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ದೂರ ಸಂಪರ್ಕ ಇಲಾಖೆಯ ಮಾಜಿ ಸಚಿವ ದಯಾನಿಧಿ ಮಾರನ್ಮತ್ತು ಅವರ ಸೋದರ ಕಲಾನಿಧಿ ಮಾರನ್ಹಾಗೂ ಇತರರ ವಿರುದ್ಧ ಸಲ್ಲಿಸಿದ್ದ ದೋಷಾರೋಪವನ್ನು ವಿಶೇಷ ನ್ಯಾಯಾಲಯ ರದ್ದುಗೊಳಿಸಿತು. ಇದರೊಂದಿಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಭಾರಿ ದೊಡ್ಡ ಹಿನ್ನಡೆಯಾಯಿತು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ .ಪಿ. ಶೈನಿ ಆದೇಶ ಹೊರಡಿಸಿದರು. ಮಲೇಷ್ಯಾದ ಟೆಲಿಕಾಂ ಕಂಪೆನಿಯಿಂದ ಮಾರನ್ ಅವರು ಸುಮಾರು  547 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ದಯಾನಿಧಿ ಮಾರನ್ ಜೊತೆಗೆ ಅವರ ಸಹೋದರ ಹಾಗೂ ಸನ್ ಟಿವಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಕಲಾನಿಧಿ ಮಾರನ್, ಮ್ಯಾಕ್ಸಿಸ್ ಕಮ್ಯುನಿಕೇಷನ್ ಅಧ್ಯಕ್ಷ ಟಿ.ಆನಂದ ಕೃಷ್ಣ, ಆಸ್ಟ್ರೊ ಆಲ್ ಏಷ್ಯಾ ನೆಟ್ವರ್ಕ್ ಹಿರಿಯ ಅಧಿಕಾರಿ ರಾಲ್ಫ್  ಮಾರ್ಷಲ್, ಆಸ್ಟ್ರೊ ಆಲ್ ಏಷ್ಯಾ ನೆಟ್ವರ್ಕ್, ಸನ್ ಟಿವಿ ಮತ್ತು ಮ್ಯಾಕ್ಸಿಸ್ ಕಮ್ಯುನಿಕೇಷನ್ ಕಂಪೆನಿಗಳ ವಿರುದ್ಧವೂ ಸಿಬಿಐ ಅವ್ಯವಹಾರದ ಆರೋಪ ಮಾಡಿತ್ತು. ಎಲ್ಲ ಆರೋಪಿಗಳನ್ನೂ ಆರೋಪ ಮುಕ್ತಗೊಳಿಸಲಾಗಿದೆ. ಮಾರನ್ ಅವರು ಯಾವಾಗಲೂ ಸಕಾರಾತ್ಮಕವಾಗಿದ್ದರು ಮತ್ತು ನ್ಯಾಯಾಂಗದ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದರು. ಅವರಿಗೆ ಬಹುದೊಡ್ಡ ನಿರಾಳತೆ ಲಭಿಸಿದೆಎಂದು ಮಾರನ್ ವಕೀಲ ಕಪಿಲ್ ಅರೋರ ಮಾಧ್ಯಮಗಳಿಗೆ ತಿಳಿಸಿದರು.
2017: ನವದೆಹಲಿ: ಕಳೆದ ಎರಡು ದಶಕಗಳಿಂದ ಪ್ರತಿ ವರ್ಷವೂ ಭಾರಿ ಸಂಖ್ಯೆಯ ಎಳೆಯ ಮಕ್ಕಳು ಬಿಹಾರಿನ ಮುಜಾಫ್ಪರಪುರದಲ್ಲಿ ನಿಗೂಢ ಮಿದುಳಿನ ಕಾಯಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ದಿಢೀರನೆ ಅತಿಯಾದ ಜ್ವರ ಬಂದು ಪ್ರಜ್ಞೆ ಕಳೆದುಕೊಂಡು ಕೆಳಕ್ಕೆ ಉರುಳಿ ಬಿದ್ದು ಸಾವನ್ನಪ್ಪುವುದು ಏಕೆ ಎಂಬುದು ನಿಗೂಢವಾಗಿತ್ತು. ಬಿಹಾರಿನ ಜನ ನಿಗೂಢ ಕಾಯಿಲೆಯನ್ನು ಚಮಕಿ ಕಿ ಬಿಮಾರಿ ಎಂದು ಕರೆಯುತ್ತಾರೆ. ಅತಿಯಾದ ಶಾಖ, ಅತಿಯಾದ ತೇವ, ಅಪೌಷ್ಟಿಕ ಆಹಾರ, ಮುಂಗಾರು ಮಳೆ ಮತ್ತು ಕೀಟಾಣುಗಳು ರೋಗಕ್ಕೆ ಕಾರಣವಾಗಿರಬಹುದು ಎಂದು ನಂಬಲಾಗಿತ್ತು. ಆದರೆ ವಿಜ್ಞಾನಿಗಳು ಈಗ ರೋಗಕ್ಕೆ ನಿಜವಾದ ಕಾರಣ ಚೀನಾದ ಲಿಚಿ ಹಣ್ಣು ಎಂದು ಹೇಳಿದರು.. ರೋಗಕ್ಕೆ ಕಾರಣ ಈವರೆಗೆ ನಂಬಿದ್ದ ಯಾವುದೂ ಅಲ್ಲ, ಲಿಚಿ ಹಣ್ಣು ಕಾರಣ ಎಂದು ಸಂಶೋಧಕರು ಹೇಳಿದರು. ನವದೆಹಲಿಯ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳಿಂದ ತೀವ್ರ ನರರೋಗಕ್ಕೆ ಕಾರಣ ಪತ್ತೆಯಾಗಿದೆ ಎಂಬುದು ಅವರ ಹೇಳಿಕೆ. ಲಿಚಿ ಹಣ್ಣು ಸೇವನೆ ಮತ್ತು ರೋಗ ಅಂಟುವುದಕ್ಕೆ 24 ಗಂಟೆ ಮೊದಲಿನ ಅವಧಿಯಲ್ಲಿ ಸಂಜೆ ವೇಳೆಯ ಊಟವನ್ನು ಮಾಡದೇ ಇರುವುದು ರೋಗಕ್ಕೆ ಕಾರಣ ಎಂಬುದು ತಮ್ಮ ಅಧ್ಯಯನದಿಂದ ದೃಢ ಪಟ್ಟಿದೆ ಎಂದು ಸಂಶೋಧಕರು ಹೇಳಿದರು.  ಲಿಚಿ ಹಣ್ಣು ತಿಂದ ಬಳಿಕ ಸಂಜೆಯ ಊಟ ಮಾಡದೆ ಉಪವಾಸ ಕೂರುವುದರಿಂದ ರೋಗ ಉಲ್ಬಣಿಸುತ್ತದೆ. ಸೋಂಕು ಕ್ರಿಮಿಗಳು ಮತ್ತು ಕೀಟಗಳು ರೋಗ ತಗುಲಿದ ಸಂದರ್ಭಲ್ಲಿ ಇದ್ದವೆ ಎಂದು ನಡೆಸಲಾದ ಪರೀಕ್ಷೆಗೆ ನಕಾರಾತ್ಮಕ ಉತ್ತರ ಬಂದಿದೆ ಎಂದು ಅಧ್ಯಯನ ತಿಳಿಸಿತು. ಸಂಶೋಧಕರು ಮುಜಾಫ್ಪರಪುರದ ಎರಡು ಆಸ್ಪತ್ರೆಗಳಿಗೆ 2014 ಮೇ 26ರಿಂದ ಜುಲೈ 17ರವರೆಗಿನ ಅವಧಿಯಲ್ಲಿ ದಾಖಲಾಗಿದ್ದ 390 ರೋಗಿಗಳ ಅಧ್ಯಯನ ನಡೆಸಿದ್ದು ಅವರ ಪೈಕಿ 122 ಮಂದಿ (ಶೇ.31) ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರು ಹೇಳಿದರು.
2017: ಚೆನ್ನೈ: ಚೆನ್ನೈಯ ಕಾಮರಾಜಾರ್ ಬಂದರು ಸಮೀಪ ಜನವರಿ 28ರ ಶನಿವಾರ ಎರಡು ನೌಕೆಗಳು ಪರಸ್ಪರ ಢಿಕ್ಕಿ ಹೊಡೆದ ಬಳಿಕ ಸೋರಿಕೆಯಾಗಿರುವ ಟನ್ಗಟ್ಟಲೆ ತೈಲ ಸಮುದ್ರದಲ್ಲಿ ಸುಮಾರು 35 ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದ್ದು ಚೆನ್ನೈ ಕರಾವಳಿಗೂ ತಲುಪಿದೆ ಎಂದು ವರದಿಗಳು ತಿಳಿಸಿದವು.  ಕರಾವಳಿ ಕಾವಲುಪಡೆಯ ನೂರಾರು ಸಿಬ್ಬಂದಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಮೀನುಗಾರರು ಸೋರಿದ ತೈಲವನ್ನು ನೀರಿನಿಂದ ಬೇರ್ಪಡಿಸಲು ಭಾರಿಯಂತ್ರಗಳ ನೆರವಿನೊಂದಿಗೆ ಹರಸಾಹಸ ಪಡುತ್ತಿದ್ದು ಅವರ ಶ್ರಮ ನೀರಿನಲ್ಲಿ ಮಾಡಿದ ಹೋಮವಾಗುತ್ತಿದೆ ಎಂದು ವರದಿಗಳು ಹೇಳಿದವು. ಜನವರಿ 28 ಶನಿವಾರ ಕಾಮರಾಜಾರ್ ಬಂದರಿನ ಸಮೀಪ ಎರಡು ನೌಕೆಗಳು ಪರಸ್ಪರ ಢಿಕ್ಕಿ ಹೊಡೆದ ಬಳಿಕ ಅವುಗಳಿಂದ ಸೋರಿಕೆಯಾಗಿರುವ ಟನ್ಗಟ್ಟಲೆ ತೈಲ ಸಮುದ್ರವನ್ನು ಸೇರಿ ಪರಿಸರ ಮಾಲಿನ್ಯದ ಜೊತೆಗೆ ನೀರಿನಲ್ಲಿರುವ ಜಲಚರಗಳಿಗೆ ಭಾರಿ ಅಪಾಯವನ್ನು ತಂದೊಡ್ಡಿದೆ. ಜಲಮಾಲಿನ್ಯ ಪ್ರದೇಶದಲ್ಲಿ ಸಹಸ್ರಾರು ಆಮೆಗಳು, ಮೀನುಗಳು ಸಾವನ್ನಪ್ಪಿರುವುದಾಗಿ ಪರಿಸರವಾದಿಗಳು ಆತಂಕ ವ್ಯಕ್ತ ಪಡಿಸಿದರು.  ಸುಮಾರು 40 ಟನ್ ತೈಲ ರಾಡಿ ಮತ್ತು 27 ಟನ್ ತೈಲ ಈವರೆಗೆ ಸಮುದ್ರದ ನೀರನ್ನು ಸೇರಿದೆ ಎಂದು ಕರಾವಳಿ ಕಾವಲು ಪಡೆ ಹೇಳಿತು. ಸಮುದ್ರದಲ್ಲಿ ಸುಮಾರು 35 ಕಿಮೀ ವ್ಯಾಪ್ತಿಯಲ್ಲಿ ಸೋರಿದ ತೈಲ ಹರಡಿದೆ ಎಂಬುದನ್ನು ಕರಾವಳಿ ಕಾವಲು ಪಡೆ ಹೆಲಿಕಾಪ್ಟರ್ಗಳು ಪತ್ತೆ ಹಚ್ಚಿದವು. ಮಾಧ್ಯಮ ವರದಿಗಳ ಪ್ರಕಾರ ಈವರೆಗೆ ಸುಮಾರು 40 ಟನ್ ತೈಲ ರಾಡಿಯನ್ನು ನೀರಿನಿಂದ ಹೊರತೆಗೆಯಲಾಗಿದೆ ಎಂದು ಹೇಳಲಾಯಿತು.  ಆದರೂ ಪ್ರಯೋಜನವಾಗಿಲ್ಲ ಎಂದು ವರದಿಗಳು ಹೇಳಿದವು.
2017: ನವದೆಹಲಿ: ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಕಷ್ಟಗಳನ್ನು ಬಹಿರಂಗ ಪಡಿಸಲು ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಬಿಎಸ್ಎಫ್ ಯೋಧ ತೇಜ್ ಬಹಾದುರ್ ಯಾದವ್ ಅವರನ್ನು, ವಿಡಿಯೋಗಳು ಪ್ರಕಟಗೊಂಡ ಬೆನ್ನಲ್ಲೇ ಬಲವಂತವಾಗಿ ನಿವೃತ್ತಿಗೊಳಿಸಿ ಬಂಧಿಸಲಾಗಿದೆ ಎಂದು ತೇಜ್ ಬಹಾದುರ್ ಪತ್ನಿ ಈದಿನ ಪ್ರತಿಪಾದಿಸಿದರು. ತನ್ನ ಪತಿ ತನಗೆ ಬೇರೆ ಯಾರದ್ದೋ ದೂರವಾಣಿ ಮೂಲಕ ಕರೆ ಮಾಡಿ ತನ್ನನ್ನು ಬಂಧಿಸಲಾಗಿದೆ ಹಾಗೂ ಮಾನಸಿಕ ಚಿತ್ರಹಿಂಸೆಗೆ ಗುರಿ ಪಡಿಸಲಾಗಿದೆ ಎಂದು ಹೇಳಿರುವುದಾಗಿಯೂ ತೇಜ್ ಬಹಾದುರ್ ಪತ್ನಿ ಹೇಳಿದರು. . ಅವರಿಗಾಗಿ 31ರಂದು ಕಾದಿದ್ದೆವು. ಆದರೆ ಅವರು ಬರಲಿಲ್ಲ. ದೂರವಾಣಿ ಕರೆ ಮೂಲಕ ತನ್ನನ್ನು ಬಲವಂತವಾಗಿ ನಿವೃತ್ತಿಗೊಳ್ಳಲು ಸೂಚಿಸಲಾಗಿದೆ. ಒಂದು ಗಂಟೆಯ ಒಳಗಾಗಿ ತನ್ನ ನಿವೃತ್ತಿಯನ್ನೂ ರದ್ದು ಪಡಿಸಿ ಬಳಿಕ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ ಎಂದು ತೇಜ್ ಬಹಾದುರ್ ಪತ್ನಿ ಹೇಳಿದರು. ಹೇಗೋ ಬೇರೆಯವರ ಫೋನ್ ಮೂಲಕ ಈದಿನ ಕರೆ ಕರೆ ಮಾಡಿದ್ದಾರೆ ಮತ್ತು ತಾನು ಬಂಧನದಲ್ಲಿ ಇರುವುದಾಗಿಯೂ, ತನಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬುದಾಗಿಯೂ ತಿಳಿಸಿದ್ದಾರೆ ಎಂದು ತೇಜ್ ಬಹಾದುರ್ ಪತ್ನಿ ತಿಳಿಸಿರುವುದಾಗಿ ಎಎನ್ ವರದಿ ಮಾಡಿತು. ಈ ಮಧ್ಯೆ ತೇಜ್ ಬಹಾದುರ್ ಅವರನ್ನು ಬಂಧಿಸಲಾಗಿಲ್ಲ, ಆದರೆ ತನಿಖೆಯಲ್ಲಿ ಆತ ತಪ್ಪಿತಸ್ಥ ಎಂಬುದು ಗೊತ್ತಾಗಿದೆ ಎಂದು ಬಿಎಸ್ಎಫ್ ಮೂಲಗಳನ್ನು ಉಲ್ಲೇಖಿಸಿದ ಎಎನ್ ವರದಿ ತಿಳಿಸಿತು.  ಗಡಿ ಕಾಯುವ ಯೋಧರಿಗೆ ಸಮರ್ಪಕ ಸವಲತ್ತುಗಳನ್ನು ನೀಡಲಾಗುತ್ತಿಲ್ಲ. ಸರಿಯಾದ ಆಹಾರವನ್ನೂ ಒದಗಿಸಲಾಗುತ್ತಿಲ್ಲ ಎಂಬುದಾಗಿ ತೇಜ್ ಬಹಾದುರ್ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಬೆನ್ನಲ್ಲೇ ವೈರಲ್ ಆಗಿತ್ತು. ಬಳಿಕ ಸೇನಾ ಮುಖ್ಯಸ್ಥರು ಸೈನಿಕರಿಗೆ ತಮ್ಮ ಕುಂದುಕೊರತೆ ತಿಳಿಸಲು ವಾಟ್ಸ್ ಆಪ್ ನಂಬರ್ ವ್ಯವಸ್ಥೆ ಮಾಡಿದ್ದರು.
2017: ನ್ಯೂಯಾರ್ಕ್‌: ಹಿಜಾಬ್‌ (ಬುರ್ಖಾ) ಧರಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮುಸ್ಲಿಂ ಧರ್ಮದ ಮಹಿಳಾ ಪೊಲೀಸ್ಸಿಬ್ಬಂದಿ ಮೇಲೆ ಹಿರಿಯ ಅಧಿಕಾರಿಗಳು ದೌರ್ಜನ್ಯ ನಡೆಸಿ ನಿಂದಿಸಿದ ಘಟನೆ ಅಮೆರಿಕದಲ್ಲಿ ಘಟಿಸಿತು. ಅಮೆರಿಕದ ನ್ಯೂಯಾರ್ಕ್ಪೊಲೀಸ್ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 38 ವರ್ಷದ ಡಾನಿಎಲ್ಲಿ ಆಲಂರಾಣಿ ತನಗೆ ಹಿರಿಯ ಅಧಿಕಾರಿಗಳು ಭಯೋತ್ಪಾದಕಿ, ತಾಲಿಬಾನಿ ಎಂದು ನಿಂದಿಸಿದ್ದಾರೆ ಎಂದು ತಮ್ಮದೂರಿನಲ್ಲಿ ದಾಖಲಿಸಿದರು.  2006 ರಿಂದ ಸೇವೆಯಲ್ಲಿರುವ ಆಲಂರಾಣಿಯವರು 2007ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಪ್ರಕರಣಕ್ಕೂ ಮೊದಲು 2012 ರಲ್ಲಿ ಇಬ್ಬರು ಹಿರಿಯ ಅಧಿಕಾರಿಗಳಿಂದ ಹಲ್ಲೆ ನಡೆದಿತ್ತು. ಕುರಿತು ಮ್ಯಾನ್ಹಟ್ಟನ್ಕೋರ್ಟ್ನಲ್ಲಿ ಮೊಕದ್ದಮೆ ನಡೆದಿತ್ತು. ನಂತರ 2015ರಲ್ಲಿ ಮತ್ತೆ ತಮ್ಮ ವಿರುದ್ಧ ಇದೇ ಮಾದರಿ ಹಲ್ಲೆ ನಡೆಯಿತು. ಅದರ ಕಿರುಕುಳದ ದೃಶ್ಯಾವಳಿಗಳು ತಮ್ಮ ಬಳಿ ಇದ್ದು, ಅದರಲ್ಲಿ ಅವಾಚ್ಯ ಪದಗಳಿಂದ ನಿಂದಿಸಿರುವುದು ದಾಖಲಾಗಿದೆ ಎಂದಿದ್ದಾರೆ. ಆಲಂರಾಣಿ ಪರ ವಕೀಲರಾದ ಜೆಸ್ಸಿ ಕರ್ಟಿಸ್ರೋಸ್ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕಕ್ಷಿದಾರಳ ಪರ ಹೋರಾಟ ನಡೆಸಿದ್ದಾರೆ.

2017: ಬೀಜಿಂಗ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಏಕಕಾಲದಲ್ಲಿ 10 ಅಣ್ವಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯದ ಬೃಹತ್ ಕ್ಷಿಪಣಿಯನ್ನು ಪರೀಕ್ಷೆ ನಡೆಸುವ ಮೂಲಕ ತನ್ನ ಸೇನಾ ಶಕ್ತಿಯನ್ನು ಚೀನಾ ಗಣನೀಯವಾಗಿ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಯಿತು. ಚೀನಾ ಡಿಎಫ್-5ಸಿ ಎಂಬ ಕ್ಷಿಪಣಿಯನ್ನು ಪರೀಕ್ಷಿಸಿದೆ. ಇದು 10 ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಅಣ್ವಸ್ತ್ರಗಳು ಬೇರೆ ಬೇರೆ ಗುರಿಗಳಿಗೆ ತಲುಪಲು ಸಾಧ್ಯವಾಗುವಂತೆ ಸಣ್ಣ ವಾಹಕಗಳನ್ನು ಕ್ಷಿಪಣಿ ಹೊಂದಿರಲಿದೆ ಎಂದು ಅಮೆರಿಕದ ವಾಷಿಂಗ್ಟನ್ ಫ್ರೀ ಬೇಕಾನ್ ಪತ್ರಿಕೆ ವರದಿ ಮಾಡಿತು. ಚೀನಾದ ಕ್ಷಿಪಣಿ ಪರೀಕ್ಷೆ ಪ್ರಕ್ರಿಯೆಯನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಗಮನಿಸುತ್ತಿವೆ. ಪಶ್ಚಿಮ ಚೀನಾದಲ್ಲಿರುವ ಶಾಂಕ್ಸಿ ಪ್ರಾಂತ್ಯದ ತೈಯುನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಡಿಎಫ್-5ಸಿ ಕ್ಷಿಪಣಿ 10 ನಕಲಿ ಅಣ್ವಸ್ತ್ರಗಳನ್ನು ಹೊತ್ತು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಕ್ಷಿಪಣಿ 10 ಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. 1980 ದಶಕದಲ್ಲೇ ಚೀನಾ ಸೇನೆಗೆ ಸೇರ್ಪಡೆಯಾದ ಡಿಎಫ್-5 ಕ್ಷಿಪಣಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗಿದೆ ಎಂದು ಪತ್ರಿಕೆ ತಿಳಿಸಿತು..
2009: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿಗೆ ಒಂಬತ್ತು ಪ್ರಕರಣಗಳಲ್ಲಿ ಮುಂಬೈ ವಿಶೇಷ ನ್ಯಾಯಾಲಯವು ಕಾರಾಗೃಹ ಶಿಕ್ಷೆ ವಿಧಿಸಿತು. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಪುಣೆಯ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿ, ನಕಲಿ ಛಾಪಾ ಕಾಗದದ 8 ಪ್ರಕರಣ ಮತ್ತು ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಿಬಿಐನ ವಿಶೇಷ ನ್ಯಾಯಾಲಯವು ಪರಿಗಣಿಸಿತು. ನ್ಯಾಯಾಲಯವು ಪ್ರತಿಯೊಂದು ಪ್ರಕರಣದಲ್ಲಿ ತಲಾ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. ಎಲ್ಲ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬೇಕಾಗುತ್ತದೆ. ತಾನು ಎಚ್‌ಐವಿ ಸೋಂಕು ಪೀಡಿತನಾಗಿರುವುದರಿಂದ ಶಿಕ್ಷೆಯಿಂದ ತನಗೆ ವಿನಾಯ್ತಿ ನೀಡಬೇಕೆಂದು ತೆಲಗಿ ಮನವಿ ಮಾಡಿಕೊಂಡಿದ್ದರೂ ಅದನ್ನು ನ್ಯಾಯಾಲಯವು ಪರಿಗಣಿಸಲಿಲ್ಲ.

2009: ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಅವರನ್ನು ಚುನಾವಣಾ ಆಯುಕ್ತ ಸ್ಥಾನದಿಂದ ತೆರವುಗೊಳಿಸಬೇಕೆಂಬ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರ ಬೇಡಿಕೆಯನ್ನು ಕೇಂದ್ರ ಸರ್ಕಾರ ಸಾರಾ ಸಗಟಾಗಿ ತಳ್ಳಿ ಹಾಕಿತು. ಇದೇ ವೇಳೆ ಮುಂದಿನ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ನವೀನ್ ಚಾವ್ಲಾ ಅವರೇ ನೇಮಕವಾಗಲಿದ್ದಾರೆ ಎಂಬ ಸೂಕ್ಷ್ಮ ಇಂಗಿತವನ್ನೂ ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಬಹಿರಂಗಪಡಿಸಿದರು.

2009: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮೊದಲ ಬಾರಿಗೆ 197 ವಿಧಾನಸಭಾ ಕ್ಷೇತ್ರಗಳ ಭಾವಚಿತ್ರ ಸಹಿತ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿತು.

2009: ಇಬ್ಬರು ಮಹಿಳೆಯರನ್ನು ಒಳಗೊಂಡ ಒಂಬತ್ತು ಮಂದಿ ನಕ್ಸಲರ ತಂಡ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪ ಹಳ್ಳಿಬಿದರಗೋಡಿನ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಬಿ.ಕೆ.ಅರುಣ್‌ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿ, ದಂಪತಿಗೆ ಥಳಿಸಿ ಅಡಿಕೆ ಮೂಟೆ ಹಾಗೂ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿತು. ಅರುಣ್‌ಕುಮಾರ್ ಅವರ ಮನೆಯಲ್ಲಿದ್ದ ಎರಡು ಬಂದೂಕುಗಳನ್ನು ಅಪಹರಿಸಿದ ತಂಡ ಮನೆಯೊಳಗಿರುವ ವಸ್ತುಗಳನ್ನು ಧ್ವಂಸಪಡಿಸಿ ಬೆಂಕಿಯಿಟ್ಟಿತು.. ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಬೆಂಕಿಯಿಟ್ಟಿತು.

2009: ಲಿಯಾಂಡರ್ ಪೇಸ್ ಅವರು ಎಟಿಪಿ ಟೆನಿಸ್‌ನ ಪುರುಷರ ಡಬ್ಬಲ್ಸ್ ವಿಭಾಗದ ರಾಂಕಿಂಗ್ ಪಟ್ಟಿಯಲ್ಲಿ ಮೂರು ಕ್ರಮಾಂಕ ಮೇಲಕ್ಕೇರಿ ಏಳನೇ ಸ್ಥಾನ ಪಡೆದರು. ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಡಬ್ಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದ ಮಹೇಶ್ ಭೂಪತಿ ಅವರು ಆರನೇ ಸ್ಥಾನವನ್ನು ಉಳಿಸಿಕೊಂಡರು. ಜೆಕ್ ಗಣರಾಜ್ಯದ ಲೂಕಾಸ್ ಡೌಹ್ಲಿ ಜೊತೆ ಆಡಿ ಆಸ್ಟ್ರೇಲಿಯಾ ಓಪನ್‌ನ ಸೆಮಿಫೈನಲ್ ಪ್ರವೇಶಿಸಿದ್ದ ಪೇಸ್ ಈ ಹಿಂದೆ 10ನೇ ಸ್ಥಾನದಲ್ಲಿದ್ದರು. ಡೌಹ್ಲಿ ಅವರು ಎರಡು ಸ್ಥಾನ ಮೇಲಕ್ಕೇರಿ 10ನೇ ಕ್ರಮಾಂಕವನ್ನು ಅಲಂಕರಿಸಿದರು. ಈ ಜೋಡಿ ನಾಲ್ಕರ ಘಟ್ಟದ ಪಂದ್ಯದಲ್ಲಿ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯನ್ ಜೋಡಿಯ ಎದುರು ಸೋಲು ಅನುಭವಿಸಿತ್ತು.

2008: ಬೆಂಗಳೂರಿನಲ್ಲಿ ಒಂದೇ ದಿನ ಬಹುದಿನಗಳ ಕನಸು ನನಸಾಯಿತು. ಒಂದು ಕಡೆ ಐಷಾರಾಮಿ `ಸುವರ್ಣ ರಥ' ರೈಲು ಮತ್ತು ಮತ್ತೊಂದು ಕಡೆ ಬಡವರ, ಮಧ್ಯಮ ವರ್ಗದವರ `ಗರೀಬ್ ರಥ' ರೈಲು- ಎರಡೂ ಒಂದೇ ದಿನ ಹಳಿ ಮೇಲೆ ಬಂದವು. ಸುವರ್ಣ ರಥ ರೈಲು ಶ್ರೀಮಂತ ಪ್ರವಾಸಿಗರನ್ನು ಹೊತ್ತು ಸಾಗಿದರೆ, ಗರೀಬ್ ರಥ ರೈಲು ಬಡ/ಮಧ್ಯಮ ವರ್ಗದ ಪ್ರಯಾಣಿಕರನ್ನು ಬೆಂಗಳೂರಿನಿಂದ ಸಿಕಂದರಾಬಾದಿಗೆ ಹೊತ್ತೊಯ್ಯುವುದು. ಯಶವಂತಪುರ ರೈಲು ನಿಲ್ದಾಣದಲ್ಲಿ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುವರ್ಣ ರಥ (ಗೋಲ್ಡನ್ ಚಾರಿಯಟ್) ರೈಲಿಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಆರಂಭಿಸಿದ ಈ ಐಷಾರಾಮಿ ರೈಲು ಪ್ರವಾಸಿಗರನ್ನೇ ನೆಚ್ಚಿಕೊಂಡಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದ ನಂತರ ಇದು ದಕ್ಷಿಣ ಭಾರತದ ಮೊದಲ ಪ್ರವಾಸಿ ರೈಲು. 2002ರಲ್ಲೇ ಈ ಯೋಜನೆಗೆ ಚಾಲನೆ ಸಿಕ್ಕರೂ ಅದು ಜಾರಿಗೆ ಬರಲು ಇಷ್ಟು ವರ್ಷ ಬೇಕಾಯಿತು. ಬೆಂಗಳೂರಿನಿಂದ ಮೈಸೂರು, ಹಾಸನ, ಹಂಪಿ ಮಾರ್ಗವಾಗಿ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕುಸುವ ಈ ರೈಲು ಗದಗ ಮೂಲಕ ಗೋವಾ ತಲುಪುವುದು. ಒಮ್ಮೆಗೆ ಏಳು ದಿನ ಸಂಚರಿಸುವ ಈ ರೈಲಿನಲ್ಲೇ ಪ್ರವಾಸಿಗರಿಗೆ ತಂಗುವ ವ್ಯವಸ್ಥೆ ಮಾಡಲಾಗಿದ್ದು, ತಾರಾ ಹೋಟೆಲ್ ಸೌಕರ್ಯ ನೀಡಲಾಗುತ್ತದೆ. ಸುವರ್ಣರಥ ರೈಲಿಗೆ ಚಾಲನೆ ಕೊಟ್ಟ ವೇದಿಕೆಯಲ್ಲೇ ಸ್ವಲ್ಪ ಹೊತ್ತಿನ ನಂತರ ಬಡವರ ರೈಲು ಎಂದೇ ಖ್ಯಾತಿ ಪಡೆದಿರುವ ಸಂಪೂರ್ಣ ಹವಾನಿಯಂತ್ರಿತ ಗರೀಬ್ ರಥ ರೈಲಿಗೆ ಸಚಿವ ವೇಲು ಚಾಲನೆ ನೀಡಿದರು.

2008: ಆಸ್ಟ್ರೇಲಿಯಾ ಕ್ರಿಕೆಟ್ ಪ್ರಿಯರು ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ವಿರುದ್ಧದ ತಮ್ಮ ಸಮರವನ್ನು ಮತ್ತೆ ಮುಂದುವರೆಸಿ, ಹೋಬರ್ಟಿನಲ್ಲಿ ಸಿಂಹಳೀಯರ ನಾಡಿನ ಕ್ರಿಕೆಟಿಗನ ಮುಖದ ಮೇಲೆ ಮೊಟ್ಟೆ ಎಸೆದರು.

2008: ಬೆಸ್ಟ್ ಬೇಕರಿ ಪ್ರಕರಣದ ಪ್ರಮುಖ ಸಾಕ್ಷಿ ಜಹೀರಾ ಖಾನ್ ಅವರಿಗೆ 38 ಲಕ್ಷ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿತು. ಬೆಸ್ಟ್ ಬೇಕರಿ ಪ್ರಕರಣದಲ್ಲಿ ಹೇಳಿಕೆ ಬದಲಿಸುವ ಸಲುವಾಗಿ ಕಾಂಗ್ರೆಸ್ ಪಾಲಿಕೆ ಸದಸ್ಯ ಚಂದ್ರಕಾಂತ್ ಶ್ರೀವಾತ್ಸವ್ ಅವರಿಂದ ಅಪಾರ ಪ್ರಮಾಣದ ಲಂಚ ಪಡೆದಿರುವ ಆರೋಪ ಜಹೀರಾ ಮೇಲಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತು. ಜಹೀರಾ 2003-04ರಲ್ಲಿ 24 ಲಕ್ಷರೂ, 2004-05ರಲ್ಲಿ 22- ಲಕ್ಷ ರೂ ಹಾಗೂ 2005-06 ನೇ ಸಾಲಿನಲ್ಲಿ 20 ಲಕ್ಷ ರೂ ಆದಾಯ ಗಳಿಸಿದ್ದಾರೆ ಎಂದು ಶ್ರೀವಾತ್ಸವ್ ಹೇಳಿಕೆ ಆಧರಿಸಿ ಆದಾಯ ತೆರಿಗೆ ಇಲಾಖೆ ಮೌಲ್ಯಮಾಪನ ಮಾಡಿತು. ಬೆಸ್ಟ್ ಬೇಕರಿ ಪ್ರಕರಣದ ವಿಚಾರಣೆ ವೇಳೆ ಹೇಳಿಕೆ ಬದಲಿಸಲು ಜಹೀರಾಗೆ ತಾವು  18 ಲಕ್ಷ ರೂ ಲಂಚ ನೀಡಿರುವುದಾಗಿ ಶ್ರೀವಾತ್ಸವ್ ನೀಡಿದ ಹೇಳಿಕೆಯನ್ನು `ತೆಹೆಲ್ಕಾ' ಸುದ್ದಿ ತಾಣ, ರಹಸ್ಯ ಕಾರ್ಯಾಚರಣೆ ಮೂಲಕ ಮುದ್ರಿಸಿಕೊಂಡಿತ್ತು.

2008: ಶಾಲೆಗೆ ಗೈರುಹಾಜರಾದ ವಿಚಾರದಲ್ಲಿ ತನ್ನನ್ನು ರೇಗಿಸಿದರು ಎಂದು ಕುಪಿತನಾದ 10ನೇ ತರಗತಿಯ ವಿದ್ಯಾರ್ಥಿ ತನ್ನ, ಇಬ್ಬರು ಸಹಪಾಠಿಗಳ ಮೇಲೆ ಏರ್ ಗನ್ನಿನಿಂದ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಬೆಂಗಳೂರಿನ ಗಿರಿನಗರ ಸಮೀಪದ ನಾಗೇಂದ್ರ ಬ್ಲಾಕಿನಲ್ಲಿ ನಡೆಯಿತು. ಶ್ರೀನಗರದ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಪ್ರೌಢಶಾಲೆಯ 10ನೇ ತರಗತಿಯ ಆದರ್ಶ ಗುಜ್ಜಾರ್ (16) ಗುಂಡು ಹಾರಿಸಿದ ವಿದ್ಯಾರ್ಥಿ. ಇದೇ ಶಾಲೆಯ ವಿದ್ಯಾರ್ಥಿಗಳಾದ ಎಂ. ಚರಣ್ (16) ಮತ್ತು ಆರ್. ಅರುಣ್ ಕುಮಾರ್ (16) ಗಾಯಗೊಂಡವರು.

2008: ಸಂದೇಶ ಪ್ರತಿಷ್ಠಾನದ ಪ್ರಸಕ್ತ ಸಾಲಿನ ಸಂದೇಶ ಪ್ರಶಸ್ತಿಯನ್ನು 8 ಮಂದಿ ಸಾಧಕರಿಗೆ ಮಂಗಳೂರಿನ ಬಜ್ಜೋಡಿಯ ಸಂದೇಶದ ಹೊರಾಂಗಣದಲ್ಲಿ ಪ್ರದಾನಮಾಡಲಾಯಿತು. ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಾಯ ಚೊಕ್ಕಾಡಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿಯನ್ನು `ಪ್ರಜಾವಾಣಿ'ಯ ಸಹಾಯಕ ಸಂಪಾದಕ ಲಕ್ಷ್ಮಣ ಕೊಡಸೆ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಡೊಲ್ಫಿ ಲೋಬೊ ಕಾಸ್ಸಿಯಾಗೆ, ಸಂದೇಶ ತುಳು ಪ್ರಶಸ್ತಿಯನ್ನು ಪ್ರೊ.ಎ.ವಿ. ನಾವಡ, ಸಂದೇಶ ಕಲಾ ಪ್ರಶಸ್ತಿಯನ್ನು ರಂಗಭೂಮಿಯ ಖ್ಯಾತ ಕಲಾವಿದೆ ಅರುಂಧತಿ ನಾಗ್. ಸಂದೇಶ ಮಾಧ್ಯಮ ಶಿಕ್ಷಣ ಪ್ರಶಸ್ತಿಯನ್ನು ಚಿತ್ರದುರ್ಗದ ಸಾಣೆಹಳ್ಳಿ ಶಿವಸಂಚಾರ ನಾಟಕ ತಂಡ, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಮೂಲ್ಕಿಯ ಫ್ರಾನ್ಸಿಸ್ ಡಿ,ಕುನ್ಹಾ ಹಾಗೂ ಬಿಜೈನ ಹ್ಯಾರಿ ಡಿ'ಸೋಜ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2008: ಮಾಧ್ಯಮಗಳಲ್ಲಿ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಮತ್ತು ಅವರ ಪ್ರೇಯಸಿ ಬ್ರೂನಿ ಪ್ಯಾರಿಸ್ಸಿನಲ್ಲಿ ವಿವಾಹವಾದರು. 53 ವರ್ಷದ ಸರ್ಕೋಜಿ ಮತ್ತು 40 ವರ್ಷದ ಬ್ರೂನಿ ಅವರು ಕುಟುಂಬ ವರ್ಗ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಗಾದರು.

2008: ಶಾಂತಿ ಪ್ರಕ್ರಿಯೆ ಹಾಗೂ ಮಾನವ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಬಾಹ್ಯಾಕಾಶ ಯೋಜನೆ ಕೈಗೊಳ್ಳಲು ಪರಸ್ಪರ ಸಹಕರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡವು. ಇಸ್ರೋ ಹಾಗೂ ನಾಸಾ ಈ ನಿಟ್ಟಿನ ಒಪ್ಪಂದಕ್ಕೆ ಸಹಿಹಾಕಿದವು. ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ನಾಸಾ ಆಡಳಿತಾಧಿಕಾರಿ ಮೈಖೆಲ್ ಗ್ರಿಫ್ಫಿನ್ ಹಾಗೂ ಇಸ್ರೊ ಅಧ್ಯಕ್ಷ ಜಿ. ಮಾಧವನ್ ನಾಯರ್ ಒಪ್ಪಂದಕ್ಕೆ ಸಹಿ ಹಾಕಿದರು. ಚಂದ್ರನ ಮೇಲೆ ಭಾರತ ಕೈಗೊಳ್ಳಲಿರುವ ಮೊಟ್ಟ ಮೊದಲ ಮಾನವರಹಿತ ಪ್ರಯಾಣ `ಚಂದ್ರಯಾನ-1' ಯೋಜನೆಗೂ ಈ ಒಪ್ಪಂದದಡಿ ಅಮೆರಿಕ ಸಹಕಾರ ನೀಡುವುದು.

2008: ದುಬೈನ ಹೊಸ ಯುವರಾಜನಾಗಿ ಶೇಖ್ ಹಮ್ದಾನ್ (26) ನೇಮಕಗೊಂಡರು. ಇವರು ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತಾಮ್ ಪುತ್ರ.

2007: ಬೃಹನ್ ಮುಂಬಯಿ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಶಿವಸೇನೆ- ಬಿಜೆಪಿ ಮೈತ್ರಿಕೂಟವು ನಿಚ್ಚಳ ಬಹುಮತ ಸಾಧಿಸಿ ಪಾಲಿಕೆಯ ಅಧಿಕಾರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಒಟ್ಟು 227 ಸ್ಥಾನಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ - 111, ಕಾಂಗ್ರೆಸ್ 73, ಎನ್ಸಿಪಿ 14, ಎಂಎನ್ಎಸ್ 7 ಮತ್ತು ಇತರರು 23 ಸ್ಥಾನಗಳನ್ನು ಪಡೆದುಕೊಂಡರು.

2007: ಆರ್ಥಿಕ ಸುಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಎ.ಆರ್. ಲಕ್ಷ್ಮಣನ್, ಅಲ್ತಮಸ್ ಕಬೀರ್ ಅವರನ್ನು ಒಳಗೊಂಡ ಪೀಠವು ಈ ತೀರ್ಪು ನೀಡಿತು.

2007: ಧರ್ಮಸ್ಥಳದ ಬಾಹುಬಲಿಗೆ ಎಳನೀರು, ಹಾಲು, ಕಬ್ಬಿನಹಾಲು, ಅರಿಷಿಣಗಳ 1008 ಕಲಶಗಳಿಂದ ಅಭಿಷೇಕ ನಡೆಯಿತು. ಮೊದಲ ಕಲಶ ಪಡೆದ ಹೆಗ್ಗಳಿಕೆ ದೆಹಲಿಯ ಸುರೇಂದ್ರಜೀ ಅವರದಾಯಿತು.

2007: ಜಮೀನು ವಿವಾದದ ಹಿನ್ನೆಲಯಲ್ಲಿ ಬೀದರಿನ ಉದ್ಯಮಿ ಹಾಗೂ ಶಾಸಕ ಗುರಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ವಿಜಯಕುಮಾರ ನಾಗಮಾರಪಳ್ಳಿ (26) ಅವರನ್ನು ಬೀದರಿನಲ್ಲಿ ಹಾಡು ಹಗಲೇ ಚೂರಿಯಿಂದ ಬರ್ಬರವಾಗಿ ಇರಿದು, ಗುಂಡು ಹಾರಿಸಿ ಕೊಲ್ಲಲಾಯಿತು.

2007: ವಿವಾದಾತ್ಮಕ ಕಲಾವಿದ ಎಂ.ಎಫ್. ಹುಸೇನ್ ಅವರ ವುಮನ್ ಅಂಡ್ ಹಾರ್ಸಸ್ (ಮಹಿಳೆ ಮತ್ತು ಕುದುರೆಗಳು) ಕಲಾಕೃತಿಯು ದುಬೈಯಲ್ಲಿ ನಡೆದ ಹರಾಜಿನಲ್ಲಿ 4,41,600 ಡಾಲರುಗಳ ದಾಖಲೆ ಮೊತ್ತಕ್ಕೆ ಮಾರಾಟವಾಯಿತು.

2006: ಜೆಡಿ(ಎಸ್)ನ ಎಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಬಣದ ಇತರ ಶಾಸಕರು ಯಾವುದೇ ಹುದ್ದೆ ಅಲಂಕರಿಸುವ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿತು. ಇದರಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕುಮಾರ ಸ್ವಾಮಿ ದಾರಿ ಸುಗಮಗೊಂಡಿತು.

2006: ಬಹುಭಾಷಾ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ (81) ಈದಿನ ಬೆಳಗ್ಗೆ ಬೆಂಗಳೂರಿನ ಜಯನಗರದ ತಮ್ಮ ಮನೆಯಲ್ಲಿ ನಿಧನರಾದರು. ವೇದ, ವೈದ್ಯಕೀಯ, ಆಯುರ್ವೇದ, ಮನಃಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ, ಸಂಗೀತಕಲೆ, ಜೀವನಚರಿತ್ರೆ, ಅನುವಾದ, ಸಂಪಾದನೆ, ಜೀವನಸಾಧನೆ ಇತ್ಯಾದಿ ಬಹುಮುಖಿ ಕ್ಷೇತ್ರಗಳಲ್ಲಿ ಕೃತಿ ರಚಿಸಿ ತಮ್ಮ ಪ್ರತಿಭೆಯನ್ನು ಅವರು ಮೆರೆದಿದ್ದರು. 1927ರಲ್ಲಿ ಹಾಸನದಲ್ಲಿ ಹುಟ್ಟಿದ ಅವರು ಸಂಸ್ಕತ, ಪಾಳಿ, ಅರ್ಧಮಾಗದಿ ಹಾಗೂ ಅನೇಕ ಆಧುನಿಕ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಟೆಬೆಟಿಯನ್ ಮತ್ತು ಕೆಲವು ಐರೋಪ್ಯ ಭಾಷೆಗಳ ಪರಿಚಯವೂ ಅವರಿಗಿತ್ತು. ಕನ್ನಡ, ಸಂಸ್ಕತ, ಇಂಗ್ಲಿಷ್ ಹಾಗೂ ಪಾಳಿ ಭಾಷೆಗಳಲ್ಲಿ ಅವರು ಕೃತಿಗಳನ್ನು ರಚಿಸಿದ್ದರು. ಕನ್ನಡದಲ್ಲಿ 80ಕ್ಕೂ ಹೆಚ್ಚು, ಇಂಗ್ಲಿಷಿನಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದರು. ಸಂಸ್ಕತದಲ್ಲಿ ಒಂದು ನಾಟಕ, ಪಾಳಿಯಲ್ಲಿ ಎರಡು ಕೃತಿ ರಚಿಸಿದ್ದರು.

2006: ಸಹಸ್ರಾರು ಪ್ರಯಾಣಿಕರನ್ನು ಒಯ್ಯುತ್ತಿದ್ದ ಈಜಿಪ್ಟಿನ ಸಲಾಂ 98 ಹೆಸರಿನ ಹಡಗು ಕೆಂಪು ಸಮುದ್ರದಲ್ಲಿ ರಾತ್ರಿ 10 ಗಂಟೆಗೆ ಮುಳುಗಿದ್ದು ಸಹಸ್ರಾರು ಮಂದಿ ಜಲಸಮಾಧಿಯಾಗಿದ್ದಾರೆ ಎಂದು ವರದಿಯಾಯಿತು. ಈ ಹಡಗಿನಲ್ಲಿ 1310 ಪ್ರಯಾಣಿಕರು, 104 ಸಿಬ್ಬಂದಿ ಇದ್ದರು. ಹರ್ಮದಾ ಬಂದರಿನಿಂದ 40 ಕಿ.ಮೀ. ದೂರದಲ್ಲಿ ಈ ದುರಂತ ಸಂಭವಿಸಿತು.

1990: ಅಧ್ಯಕ್ಷ ಎಫ್. ಡಬ್ಲ್ಯೂ. ಡಿ ಕ್ಲರ್ಕ್ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲಿನ ನಿಷೇಧವನ್ನು ರದ್ದು ಪಡಿಸಿದರು. ಮತ್ತು ನೆಲ್ಸನ್ ಮಂಡೇಲಾ ಅವರ ಬಿಡುಗಡೆಯ ಭರವಸೆ ನೀಡಿದರು. ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಇವು ಮಹತ್ವದ ಹೆಜ್ಜೆಗಳಾದವು.

1987: ಸ್ಕಾಟಿಷ್ ಕಾದಂಬರಿಕಾರ ಅಲಿಸ್ಟೈರ್ ಮೆಕ್ ಲೀನ್ಸ್ ಮ್ಯೂನಿಚ್ಚಿನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಮೃತರಾದರು.

1978: ಕಲಾವಿದ ಜಯಸಿಂಹ ಜನನ.

1963: ಕಲಾವಿದ ಹಿರೇಮಠ ವಿವಿ ಜನನ.

1951: ಕಲಾವಿದ ಸುಂದರರಾಜ್ ಜನನ.

1923: ಖ್ಯಾತ ಹಾಕಿ ಆಟಗಾರ ಕನ್ವರ್ ದಿಗ್ವಿಜಯ್ಸಿಂಗ್ `ಬಾಬು' ಹುಟ್ಟಿದರು. 1970ರಲ್ಲಿ ಈದಿನ ಬ್ರಿಟಿಷ್ ಗಣಿತ ತಜ್ಞ, ತತ್ವಜ್ಞಾನಿ ಬರ್ಟ್ರೆಂಡ್ ರಸ್ಸೆಲ್ ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು.

1915: ಖ್ಯಾತ ಹಾಸ್ಯ ಲೇಖಕ, ಪತ್ರಕರ್ತ ಖುಷವಂತ್ ಸಿಂಗ್ ಈದಿನ ಪಂಜಾಬಿನ ಹದಾಲಿ (ಈಗ ಪಾಕಿಸ್ಥಾನದಲ್ಲಿ ಇದೆ) ಜನಿಸಿದರು.

1914: ಕಲಾವಿದ ಶುದ್ಧೋದನ ಎಂ.ಜೆ. ಜನನ.

1892: ಕಲಾವಿದ ಪಂಚಾಕ್ಷರಿ ಗವಾಯಿ ಜನನ.

1889: ಸ್ವಾತಂತ್ರ್ಯ ಯೋಧೆ ರಾಜಕುಮಾರಿ ಅಮೃತಾ ಕೌರ್ (1889-1964) ಹುಟ್ಟಿದರು. ಅವರು ಸ್ವತಂತ್ರ ಭಾರತದ ಆರೋಗ್ಯ ಸಚಿವರಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದರು.

1884: ರಾಮಚಂದ್ರ ಶುಕ್ಲ (1884-1941) ಜನ್ಮದಿನ. ಇವರು ಹಿಂದಿ ಸಾಹಿತಿ, ವಿಮರ್ಶಕ, ಪ್ರಬಂಧಕಾರರಾಗಿ ಖ್ಯಾತಿ ಗಳಿಸಿದರು.

1869: ವೃತ್ತಿ ರಂಗಭೂಮಿಗೆ ಕರ್ನಾಟಕದ ಶಾಸ್ತ್ರೀಯ ಸಂಗೀತದ ಮೆರುಗು ಹಾಗೂ ರಂಗಪ್ರದರ್ಶನದ ವೈಭವ ಪಾತ್ರಗಳಿಗೆ ವೇಷಭೂಷಣಗಳ ಸಹಜತೆಯನ್ನು ತಂದುಕೊಟ್ಟ ಕಲಾವಿದ ಎ.ವಿ. ವರದಾಚಾರ್ (2-2-1869ರಿಂದ 4-4-1926) ಅವರು ಅನುಮನಪಲ್ಲಿ ರಂಗಸ್ವಾಮಿ ಅಯ್ಯಂಗಾರರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1650: ಇಂಗ್ಲಿಷ್ ನಟಿ ಹಾಗೂ 2ನೇ ಚಾರ್ಲ್ಸನ ಪ್ರೇಯಸಿಯಾದ ನೆಲ್ ಗ್ವಿನ್ (1650-1687) ಹುಟ್ಟಿದ ದಿನ.

1649: ಪೋಪ್ 13ನೇ ಬೆನೆಡಿಕ್ಟ್ (1649-1730) ಹುಟ್ಟಿದ ದಿನ. ಇವರು 1724-1730ರ ಅವಧಿಯಲ್ಲಿ ಪೋಪ್ ಆಗಿದ್ದರು.

1536: ಅರ್ಜೆಂಟೀನಾದ ನಗರ ಬ್ಯೂನೋಸ್ ಏರಿಸನ್ನು ಸ್ಪೇನಿನ ಪೆಡ್ರೋ ಡೆ ಮೆಂಡೋಝಾ ಸ್ಥಾಪಿಸಿದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment