ಇಂದಿನ ಇತಿಹಾಸ History Today ಫೆಬ್ರುವರಿ 08
2019: ನವದೆಹಲಿ: ’ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯದ (ಪಿಎಂಒ) ಅಧಿಕಾರಿಗಳು ಪರ್ಯಾಯ ಮಾತುಕತೆ ನಡೆಸುವುದಕ್ಕೆ ರಕ್ಷಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದರು’ ಎಂಬುದಾಗಿ ರಕ್ಷಣಾ ಸಚಿವಾಲಯದ ಟಿಪ್ಪಣಿಯನ್ನು ಆಧರಿಸಿ ಆಂಗ್ಲ ಪತ್ರಿಕೆಯೊಂದರಲ್ಲಿ
ಪ್ರಕಟವಾದ ವರದಿ ರಫೇಲ್ ವಿವಾದದ ಬೆಂಕಿಗೆ ಮತ್ತೆ ತುಪ್ಪ ಸುರಿದಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ, ಮಾಧ್ಯಮ ವರದಿಯನ್ನು ’ಸತ್ತ ಕುದುರೆಗೆ ಏಟು’ ಎಂಬುದಾಗಿ ಕೇಂದ್ರ ಸರ್ಕಾರ ತಳ್ಳಿ ಹಾಕಿತು. ರಫೇಲ್ ವಹಿವಾಟಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಪ್ರಬಲ ದಾಳಿಗೆ ಎದಿರೇಟು ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಮಾಧ್ಯಮ ವರದಿಯನ್ನು ಆಧರಿಸಿ ರಫೇಲ್ ವ್ಯವಹಾರದ ವಿಷಯವನ್ನು ಪ್ರಸ್ತಾಪಿಸುವ ಮೂಲಕ ರಾಹುಲ್ ಗಾಂಧಿ ಅವರು ’ಸತ್ತ ಕುದುರೆಯನ್ನು ಹೊಡೆಯುತ್ತಿದ್ದಾರೆ’ ಎಂದು ಚಾಟಿ ಬೀಸಿದರು. ವಿರೋಧ ಪಕ್ಷಗಳು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದೂ ಅವರು ಟೀಕಿಸಿದರು. ಪ್ರಧಾನಿಯವರು ರಕ್ಷಣಾ ಪಡೆಗಳು ಬಳಸಬಹುದಾಗಿದ್ದ ೩೦,೦೦೦ ಕೋಟಿ ರೂಪಾಯಿಗಳನ್ನು ತಮ್ಮ ಕೈಗಾರಿಕೋದ್ಯಮಿ ಮಿತ್ರ ಅನಿಲ್ ಅಂಬಾನಿ ಅವರತ್ತ ತಿರುಗಿಸಿದ್ದಾರೆ ಎಂಬುದಾಗಿ ರಾಹುಲ್ ಗಾಂಧಿ ಅವರು ಮಾಡಿದ ಟೀಕೆಯನ್ನೂ ಪ್ರಶ್ನಿಸಿದ ಸೀತಾರಾಮನ್ ಅವರು, ’ಇದು ಅತ್ಯಂತ ಅಪಾಯಕಾರಿ. ಅವರು ರಕ್ಷಣಾ ಪಡೆಗಳನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆಯೇ?’ ಎಂದು ಕೇಳಿದರು. ರಕ್ಷಣಾ ಸಚಿವರು ಇದಕ್ಕೆ ಮುನ್ನ ಲೋಕಸಭೆಯಲ್ಲಿ ರಫೇಲ್ ವಹಿವಾಟನ್ನು ಸಮರ್ಥಿಸಿದರು. ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಬೇಕು ಎಂದು ಆಗ್ರಹಿಸಿ ವಿರೋಧಿ ಸದಸ್ಯರು ಸದನ ಕಲಾಪವನ್ನು ಅಸ್ತವ್ಯಸ್ತಗೊಳಿಸಿದಾಗ ಸ್ವ ಇಚ್ಛೆಯ ಹೇಳಿಕೆ ನೀಡಿದ ರಕ್ಷಣಾ ಸಚಿವೆ ರಫೇಲ್ ವ್ಯವಹಾರವನ್ನು ಸಮರ್ಥಿಸಿದರು. ರಫೇಲ್
ಮಾತುಕತೆಗಳು ಉತ್ತುಂಗದಲ್ಲಿದ್ದಾಗ,
ಫ್ರೆಂಚ್ ಅಧಿಕಾರಿಗಳ ಜೊತೆಗೆ ಪಿಎಂಒ ಅಧಿಕಾರಿಗಳು ನಡೆಸುತ್ತಿದ್ದ ಪರ್ಯಾಯ ಮಾತುಕತೆಗಳನ್ನು ರಕ್ಷಣಾ ಅಧಿಕಾರಿಗಳು ಆಕ್ಷೇಪಿಸಿದ್ದರು
ಎಂದು ವರದಿ ಪ್ರತಿಪಾದಿಸಿತ್ತು. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅವರು ಪತ್ರಿಕಾ ವರದಿಯ ಭಾಗಗಳನ್ನು ಓದಿ ಹೇಳಿದರು ಮತ್ತು ’ಈ ವರದಿಯು ನಾವು ಒಂದು ವರ್ಷದಿಂದ ಹೇಳುತ್ತಾ ಬಂದದ್ದನ್ನು ದೃಢ ಪಡಿಸಿದೆ’ ಎಂದು
ನುಡಿದರು. ‘ಪ್ರಧಾನಿ ಮೋದಿಯವವರು ರಫೇಲ್ ವ್ಯವಹಾರಕ್ಕೆ ಸಹಿ ಹಾಕುವಲ್ಲಿ ರಕ್ಷಣಾ ಸಚಿವಾಲಯವನ್ನು ಕಡೆಗಣಿಸಿದರು ಎಂಬುದು ’ಸ್ಪಟಿಕದಷ್ಟು ಸ್ಪಷ್ಟ’ ಎಂದು
ರಾಹುಲ್ ಗಾಂಧಿ ನುಡಿದರು. ಪ್ರಧಾನಿ ಮೋದಿ ವಿರುದ್ಧದ ತಮ್ಮ ’ಚೌಕೀದಾರ್ ಚೋರ್ ಹೈ (ಕಾವಲುಗಾರ ಕಳ್ಳ) ಎಂಬ ಆಪಾದನೆಯನ್ನು ಕಾಂಗ್ರೆಸ್ ಅಧ್ಯಕ್ಷರು ಪುನರುಚ್ಚರಿಸಿದರು.
ರಾಹುಲ್ ಗಾಂಧಿ ಅವರು ಬಳಸಿದ ಭಾಷೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಸೀತಾರಾಮನ್ ’ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಸೌಜನ್ಯಯುತ ನಡವಳಿಕೆಯನ್ನು ನಾನು ಪ್ರಾಮಾಣಿಕವಾಗಿ ನಿರೀಕ್ಷಿಸಿದ್ದೆ’ ಎಂದು ಹೇಳಿದರು. ರಕ್ಷಣಾ ಸಚಿವಾಲಯದ ಟಿಪ್ಪಣಿಯನ್ನು ’ಆಯ್ದು’ ಪ್ರಕಟಿಸಿದ ಸುದ್ದಿ ಪತ್ರಿಕೆಯ ’ಪತ್ರ್ರಿಕಾ ನೈತಿಕತೆ’ಯನ್ನೂ ರಕ್ಷಣಾ ಸಚಿವರು ಪ್ರಶ್ನಿಸಿದರು.
’ಸುದ್ದಿ ಪತ್ರಿಕೆಯೊಂದು ರಕ್ಷಣಾ ಕಾರ್ಯದರ್ಶಿಯವರು ಬರೆದ ಕಡತ ಟಿಪ್ಪಣಿಯನ್ನು ಪತ್ರಿಕೆಯು ಪ್ರಕಟಿಸುವುದಾದರೆ,
ರಕ್ಷಣಾ ಸಚಿವರು ಅದಕ್ಕೆ ಕೊಟ್ಟ ಉತ್ತರವನ್ನೂ ಪತ್ರಿಕೆಯು ಪ್ರಕಟಿಸಬೇಕು ಎಂದು ಪತ್ರಿಕಾ ನೈತಿಕತೆ ಹೇಳುತ್ತದೆ’ ಎಂದು ಸೀತಾರಾಮನ್ ನುಡಿದರು. ಆಗ ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕ್ಕರ್ ಜಿ ಅವರು ರಕ್ಷಣಾ ಸಚಿವಾಲಯದ ಟಿಪ್ಪಣಿಗೆ ಶಾಂತವಾಗಿ ಇರುವಂತೆ ಉತ್ತರ ಕೊಟ್ಟಿದ್ದರು. ’ಚಿಂತಿಸುವಂತದ್ದೇನಿಲ್ಲ. ಎಲ್ಲವೂ ಸರಿಯಾಗುತ್ತದೆ’ ಎಂದು ರಕ್ಷಣಾ ಸಚಿವರು ಉತ್ತರಿಸಿದ್ದರು. ಈಗ, ಮನಮೋಹನ್ ಸಿಂಗ್ ಸರ್ಕಾರದ ಕಾಲದಲ್ಲಿ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿ (ಎನ್ಎಎಸಿ) ಸಲಹೆಯನ್ನು ಪ್ರಧಾನ ಮಂತ್ರಿ ಸಚಿವಾಲಯದಲ್ಲಿ (ಪಿಎಂಒ) ಹಸ್ತಕ್ಷೇಪ ಎನ್ನುತ್ತೀರಾ? ಅದು ಏನು?’ ಎಂದು ಸೀತಾರಾಮನ್ ಕೇಳಿದರು. ಲೋಕಸಭೆಯಲ್ಲಿ ರಕ್ಷಣಾ ಸಚಿವರು ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿದ
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ’ಸರ್ಕಾರವು ಬೇಕಾದಷ್ಟು ವಿವರಣೆಗಳನ್ನುನೀಡಿದೆ. ಈಗ ಅದು ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ಹೇಳಿದರು. ’ನಾವು ಜಂಟಿ ಸಂಸದೀಯ ಸಮಿತಿಗಾಗಿ ಒತ್ತಾಯಿಸುತ್ತೇವೆ.
ಆಗ ಎಲ್ಲವೂ ಹೊರಬರುತ್ತದೆ. ನಾವು ಈಗ ಯಾವುದೇ ವಿವರಣೆಗಳನ್ನೂ ನಿರೀಕ್ಷಿಸುವುದಿಲ್ಲ.
ಪ್ರಧಾನಿಯಿಂದ ಕೂಡಾ ಬೇಕಾದಷ್ಟು ವಿವರಣೆಗಳನ್ನು ನಾವು ಕೇಳಿದ್ದೇವೆ’ ಎಂದು
ಅವರು ನುಡಿದರು. ಭಾರತೀಯ ವಾಯುಪಡೆಗಾಗಿ ರಫೇಲ್ ಯುದ್ದ ವಿಮಾನ ಖರೀದಿಗೆ ಸಂಬಂಧಿಸಿದಂತೆ ಫ್ರೆಂಚ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾಗ
ಪಿಎಂಒ ಅಧಿಕಾರಿಗಳು ನಡೆಸುತ್ತಿದ್ದ ಪರ್ಯಾಯ ಮಾತುಕತೆಗಳನ್ನು ಹಿರಿಯ ರಕ್ಷಣಾ ಅಧಿಕಾರಿಗಳು ಆಕ್ಷೇಪಿಸಿದ್ದರು ಎಂದು ಪತ್ರಿಕಾ ವರದಿ ತಿಳಿಸಿತ್ತು. ೩೬ ಯುದ್ಧ ವಿಮಾನಗಳ ಖರೀದಿಗಾಗಿ ೨೦೧೬ರಲ್ಲಿ ಭಾರತ ಮತ್ತು ಫ್ರಾನ್ಸ್ ಅಂತರ್ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ವರದಿಯನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ
ರಾಹುಲ್ ಗಾಂಧಿ ಅಧ್ಯಕ್ಷ ಹೊಲ್ಲಾಂಡೆ ಅವರು ಪ್ರಧಾನಿಯವರು ಅನಿಲ್ ಅಂಬಾನಿ ಹೆಸರನ್ನು ಸೂಚಿಸಿದ್ದುದಾಗಿ
ಹೇಳಿದ್ದಾರೆ. ವಾಯುಪಡೆಯಲ್ಲಿನ ನನ್ನ ಗೆಳೆಯರೇ ನಿಮ್ಮ ಸುರಕ್ಷತೆ ಅಥವಾ ನಿಮ್ಮ ಕುಟುಂಬಗಳ ಸಲುವಾಗಿ ಈ ಹಣವನ್ನು ಬಳಸಬಹುದಾಗಿತ್ತು. ಅಧಿಕಾರಿಯೊಬ್ಬರು
(ಟಿಪ್ಪಣಿ ಬರೆದ ರಕ್ಷಣಾ ಅಧಿಕಾರಿ) ಪತ್ರದಲ್ಲಿ ಇಂತಹ ವಿಚಾರವನ್ನು ತಿಳಿಸುತ್ತಾನೆಂದರೆ
ಅವರು ಅದನ್ನು ಕಾರಣವಿಲ್ಲದೆ ಮಾಡುವುದಿಲ್ಲ. ಪಿಎಂಒ ನಮ್ಮನ್ನು ಕಡೆಗಣಿಸಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಅನಿಲ್ ಅಂಬಾನಿ ಅವರ ಪ್ರತಿನಿಧಿಯಾಗಿದ್ದಾರೆ ಎಂದು ಆಪಾದಿಸಿದ್ದರು. ಈಗ ಸುಪ್ರೀಂಕೋಟ್ ನೀಡಿದ ಇಡೀ ತೀರ್ಪೇ ಪ್ರಶ್ನಾರ್ಹವಾಗಿದೆ.
ಏಕೆಂದರೆ ಸುಪ್ರೀಂಕೋರ್ಟಿನ
ಬಳಿ ದಾಖಲೆಗಳೇ ಇರಲಿಲ್ಲ. ಅವರು ಕೋರ್ಟಿಗೆ ಸುಳ್ಳು ಹೇಳಿದ್ದಾರೆ. ಈ ದಾಖಲೆಗಳು ಸಿಕ್ಕಿದ್ದರೆ ಸುಪ್ರೀಂಕೋರ್ಟ್ ಇಂತಹ ತೀರ್ಪು ಕೊಡುತ್ತಿತ್ತೆ? ಎಂದು ರಾಹುಲ್ ಹೇಳಿದ್ದರು. ’ಈ ಕಟು ಪದಗಳ ಬಳಕೆಯನ್ನು ನಾನು ದ್ವೇಷಿಸುತ್ತೇನೆ. ಆದರೆ ಸತ್ಯ ಹೇಳದೆ ವಿಧಿಯಿಲ್ಲ. ಪ್ರಧಾನಿ ಒಬ್ಬ ಕಳ್ಳ ಎಂಬುದಾಗಿ ರಾಷ್ಟ್ರಕ್ಕೆ ಹೇಳುವುದು ಈಗ ಕರ್ತವ್ಯವಾಗಿದೆ’ ಎಂದೂ ರಾಹುಲ್ ಹೇಳಿದ್ದರು. ಕೇಜ್ರಿವಾಲ್ ಟ್ವೀಟ್: ಈ ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ’ರಫೇಲ್ ಬಗ್ಗೆ ಈದಿನ ಹೊರಬಂದಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಸ್ವತಂತ್ರ ಸಿಬಿಐ ಪಿಎಂಒ ಮೇಲೆ ದಾಳಿ ನಡೆಸಿ ರಫೇಲ್ ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಟ್ವೀಟ್ ಮಾಡಿದರು. ಮೋದಿ ವಿರುದ್ಧ ದೂರು: ಆಪ್ ಸಂಸತ್ ಸದಸ್ಯ ಸಂಜಯ್ ಸಿಂಗ್ ಅವರು ತಾವು ಸಂಸದ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದರು. ಪ್ರಧಾನಿ ವಿರುದ್ಧ ಕ್ರಮ ಕೋರಿ ಸಿಬಿಐಗೂ ಪತ್ರ ಬರೆಯುವುದಾಗಿ ಅವರು ನುಡಿದರು. ‘ಬೆಕ್ಕು ಚೀಲದಿಂದ ಹೊರಕ್ಕೆ ಬಂದಿದೆ’ ಎಂದು ಹೇಳಿದ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು ’ಮೊಹರಾದ ತನ್ನ ಲಕೋಟೆಯಲ್ಲಿ ನೀಡಿದ ವಿವರಗಳಲ್ಲಿ ಕೇಂದ್ರವು ಎಂದೂ ಪಿಎಂಒ ಮಾತುಕತೆಗಳ ಬಗ್ಗೆ ತಿಳಿಸಿಯೇ ಇಲ್ಲ. ಆದ್ದರಿಂದ ಇದು ಸುಪ್ರೀಂಕೋರ್ಟ್ ನಿಂದನೆಯಾಗುತ್ತದೆ’ ಎಂದು ಹೇಳಿದರು. ಸ್ವತಂತ್ರ ಭಾರತದಲ್ಲಿ ಎಂದೂ ಪ್ರಧಾನಿಯೊಬ್ಬರು ಇಂತಹ ಗಂಭೀರ ಆರೋಪದಲ್ಲಿ ಸಿಲುಕಿರಲಿಲ್ಲ. ಬೆಕ್ಕು ಚೀಲದಿಂದ ಹೊರಕ್ಕೆಬಂದಿದೆ ಎಂದು ಅವರು ನುಡಿದರು. ಬಿಜೆಪಿ ಜೊತೆಗೆ ಸೇರಿದವರು ಈಗ ವಿವರಣೆ ನೀಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಟ್ವೀಟ್ ಮಾಡಿದರು.
2019: ಗುರುಗ್ರಾಮ: ತಮ್ಮ ಮೊಬೈಲ್ ಫೋನಿಗೆ ಅಟೋಮ್ಯಾಟಿಕ್ ಆಗಿ ಆಪ್ ಒಂದು ಬಂದು ಸೇರ್ಪಡೆಯಾದ ಬಳಿಕ ಗುರುಗ್ರಾಮದ ೫೨ರ ಹರೆಯದ ವ್ಯಾಪಾರೋದ್ಯಮಿ ಒಬ್ಬರು ತನ್ನ ಬ್ಯಾಂಕ್ ಖಾತೆಯಿಂದ ೬೦,೦೦೦ ರೂಪಾಯಿಗಳನ್ನು ಕಳೆದುಕೊಂಡ ಆಘಾತಕಾರೀ ಘಟನೆ ಘಟಿಸಿತು. ವ್ಯಾಪಾರೋದ್ಯಮಿಯ ಸ್ಮಾರ್ಟ್ ಫೋನಿಗೆ ಕಳುಹಿಸಲ್ಪಟ್ಟಿದ್ದ
ಲಿಂಕ್ ಒಂದನ್ನು ಕ್ಲಿಕ್ ಮಾಡಿದಾಗ ಈ ಅಪ್ಲಿಕೇಶನ್ ಮೊಬೈಲಿನಲ್ಲಿ ಅಳವಡಿಸಲ್ಪಟ್ಟಿತು
ಎಂದು ಹೇಳಲಾಗಿದೆ. ವಂಚಕನು ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಸೋಗಿನಲ್ಲಿ ಈ ಲಿಂಕನ್ನು ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದರು. ಘಟನೆಗೆ
ಸಂಬಂಧಿಸಿದಂತೆ ಸೆಕ್ಟರ್ ೧೦ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೪೨೦ರ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ೨೦೧೮ರ ಸೆಪ್ಟೆಂಬರಿನಲ್ಲಿ ಈ ವಂಚನೆ ನಡೆದಿದೆ ಎಂದು ಪ್ರಕರಣದ ತನಿಖಾಧಿಕಾರಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಎಎಸ್ ಐ) ಮೊಹಮ್ಮದ್ ಆಜಾದ್ ಹೇಳಿದರು. ಸೆಪ್ಟೆಂಬರ್ ೧೦ರಂದು ಬೆಳಗ್ಗೆ ಎಚ್ಚರಗೊಂಡಾಗ ೫೨ರ ಹರೆಯದ ಹರೀಶ್ ಚಂದರ್ ಅವರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಆನ್ಲೈನ್ ಮೂಲಕ ರಾತ್ರೋರಾತ್ರಿ ಎರಡು ಬಾರಿ ಹಣ ವರ್ಗಾವಣೆ ನಡೆದು, ಒಟ್ಟು ೬೦,೦೦೦ ರೂಪಾಯಿಗಳು ಕಡಿತವಾಗಿರುವುದು
ಗಮನಕ್ಕೆ ಬಂದಿತ್ತು. ‘ನಸುಕಿನ ೨.೩೦ರ ವೇಳೆಗೆ ನನ್ನ ಫೋನ್ ನಂಬರಿಗೆ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬಂದಿತ್ತು ಮತ್ತು ಆಟೋಮ್ಯಾಟಿಕ್ ಆಗಿ ಅದು ಬೇರೆ ನಂಬರಿಗೆ ಹೋಗಿತ್ತು. ಈ ಘಟನೆ ನಡೆದ ಮೂರು ದಿನ ಮೊದಲು ನನಗೆ ನನ್ನ ಇನ್ ಕಮ್ ಟ್ಯಾಕ್ಸ್ ರಿಟರ್ನ್ನ್ನು ತಡೆ ಹಿಡಿಯಲಾಗುತ್ತಿದೆ
ಎಂಬ ಸಂದೇಶ ಬಂದಿತ್ತು.’ ‘ ಲಿಂಕ್ ಕ್ಲಿಕ್ ಮಾಡುವಂತೆ ಆ ಸಂದೇಶದಲ್ಲಿ ನನಗೆ ಸೂಚಿಸಲಾಗಿತ್ತು. ನಾನು ಅದನ್ನು ಕ್ಲಿಕ್ ಮಾಡಿದಾಗ ನನ್ನ ಸ್ಮಾರ್ಟ್ ಫೋನಿನಲ್ಲಿ ಆಪ್ ಸೇರ್ಪಡೆಯಾಯಿತು’ ಎಂದು ಅವರು ನುಡಿದರು. ಬಳಿಕ ಖಾತೆಯಿಂದ ಹಣ ನಷ್ಟವಾದ ಬಗ್ಗೆ ದೂರು ನೀಡಲು ನಾನು ಬ್ಯಾಂಕಿಗೆ ಹೋದಾಗ ಬ್ಯಾಂಕ್ ಅಧಿಕಾರಿಗಳೂ ಫೋನನ್ನು ಆಪ್ ಮೂಲಕ ಹ್ಯಾಕ್ ಮಾಡಲಾಗಿರುವುದರಿಂದ ಹಣ ಹೋಯಿತು ಎಂದು ತಿಳಿಸಿದರು ಎಂದು ಚಂದರ್ ಹೇಳಿದರು. ‘ಒಟಿಪಿ
ಯಾವ ನಂಬರಿಗೆ ಆಟೋಮ್ಯಾಟಿಕ್ ಆಗಿ ವರ್ಗಾವಣೆಗೊಂಡಿತ್ತು ಎಂಬುದನ್ನು ನಾವು ಪತ್ತೆ ಹಚ್ಚಿದೆವು. ಈ ಮೊಬೈಲ್ ನಂಬರ್ ಪುಣೆಯಲ್ಲಿ ನೋಂದಣಿಯಾಗಿರುವುದು
ನಮ್ಮ ಗಮನಕ್ಕೆ ಬಂತು’ ಎಂದು ಎಎಸ್‌ಐ ನುಡಿದರು. ಆದರೆ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ. ದೆಹಲಿಯ ಭದ್ರತಾ ಅಧ್ಯಯನಗಳ ಅಂತಾರಾಷ್ಟ್ರೀಯ ಕಾಲೇಜಿನ ನಿರ್ದೇಶಕ ರಾಜ್ ಸಿಂಗ್ ನೆಹ್ರಾ ಅವರು ’ಫೋನ್ ಸಲಕರಣೆಗಳನ್ನು ಹ್ಯಾಕ್ ಮಾಡಲು ಲಿಂಕ್ಗಳನ್ನು ಕಳುಹಿಸುವುದು ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಮಗೆ ಒಂದೇ ಲಿಂಕ್ ಕಾಣಿಸಿದರೂ, ಅದಕ್ಕೆ ನೂರಾರು ಲಿಂಕ್ಗಳು ಜೋಡಣೆಯಾಗಿರುತ್ತವೆ,
ನಮಗೆ ಅವು ಕಾಣಿಸುವುದಿಲ್ಲ. ಆದರೆ ಬಳಕೆದಾರರ ಎಲೆಕ್ಟ್ರಾನಿಕ್ ಉಪಕರಣಗಳು ಹ್ಯಾಕ್ ಆಗುತ್ತವೆ. ಬಳಿಕ ಹ್ಯಾಕರ್ ಆ ಉಪಕರಣದ ಮಾಹಿತಿಯನ್ನು ಅಕ್ರಮ ಚಟುವಟಿಕೆಗಳಿಗಾಗಿ
ಬಳಸಿಕೊಳ್ಳುತ್ತಾನೆ’ ಎಂದು ಅವರು ವಿವರಿಸಿದರು. ಶಂಕಾಸ್ಪದವಾದ ಯಾವುದೇ ಲಿಂಕ್ಗಳನ್ನು ಜನರು ಕ್ಲಿಕ್ ಮಾಡಬಾರದು, ಇಲ್ಲದೇ ಇದ್ದಲ್ಲಿ ಇಂತಹ ವಂಚನೆಗಳಲ್ಲಿ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ನೆಹ್ರಾ ನುಡಿದರು.
2019: ನವದೆಹಲಿ: ಲಕ್ನೋ ಮತ್ತು ನೋಯ್ಡಾ ಸೇರಿದಂತೆ ರಾಜ್ಯದ ಹಲವಡೆ ಸಾರ್ವಜನಿಕ ಉದ್ಯಾನಗಳಲ್ಲಿ ತನ್ನ ಹಾಗೂ ಬಿಎಸ್‌ಪಿ ಲಾಂಛನವಾದ ’ಆನೆ’ಗಳ
ಪ್ರತಿಮೆಗಳನ್ನು ಪ್ರತಿಷ್ಠಾಪಿಸಲು
ವೆಚ್ಚ ಮಾಡಿದ ಸಾರ್ವಜನಿಕ ಹಣವನ್ನು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು ಸರ್ಕಾರಿ ಬೊಕ್ಕಸಕ್ಕೆ ಮರುಪಾವತಿ ಮಾಡಬೇಕಾಗಿ ಬರುತ್ತದೆ ಎಂಬ ಇಂಗಿತವನ್ನು ಸುಪ್ರೀಂಕೋರ್ಟ್ ನೀಡಿತು. ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿಯವರು ಸ್ವಯಂ ಪ್ರಚಾರಕ್ಕಾಗಿ ನಡೆಸಿದ ಈ ಕೃತ್ಯಗಳಿಗೆ ಕೋಟಿಗಟ್ಟಲೆ ರೂಪಾಯಿಗಳಷ್ಟು ಸರ್ಕಾರಿ ಹಣವನ್ನು ವೆಚ್ಚ ಮಾಡಿದ್ದರು ಎಂದು ಆಪಾದಿಸಿ ಸುಪ್ರೀಂಕೋರ್ಟ್ ವಕೀಲ ರವಿಕಾಂತ್ ಅವರು ೨೦೦೯ರಲ್ಲಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ಕಾಲದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಈ ಇಂಗಿತವನ್ನು ನೀಡಿತು. ’ತನ್ನ ಪ್ರತಿಮೆ ಹಾಗೂ ಪಕ್ಷದ ಲಾಂಛನಗಳ ಪ್ರತಿಷ್ಠಾಪನೆಗಾಗಿ
ವೆಚ್ಚ ಮಾಡಿದ ಸಾರ್ವಜನಿಕ ಹಣವನ್ನು ಮಾಯಾವತಿಯವರು ಸರ್ಕಾರಿ ಬೊಕ್ಕಸಕ್ಕೆ ಮರುಪಾವತಿ ಮಾಡಬೇಕಾಗಿ ಬರುತ್ತದೆ ಎಂಬುದು ನಮ್ಮ ಈ ಕ್ಷಣದ ಅಭಿಪ್ರಾಯ’ ಎಂದು ಸಿಜೆಐ ಅವರು ಪ್ರಕರಣದ ಮೌಖಿಕ ವಿಶ್ಲೇಷಣೆ ಮಾಡುತ್ತಾ ಹೇಳಿದರು. ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಸಂಜೀವ ಖನ್ನಾ ಅವರನ್ನೂ ಒಳಗೊಂಡಿರುವ ಪೀಠವು ವಿಷಯವನ್ನು ಏಪ್ರಿಲ್ ೨ರಂದು ಅಂತಿಮ ವಿಚಾರಣೆಗೆ ನಿಗದಿ ಪಡಿಸಿತು. ೨೦೦೮-೦೯ ಮತ್ತು ೨೦೦೯-೧೦ರ ಸಾಲಿನ ಮುಂಗಡಪತ್ರಗಳಲ್ಲಿ ಆಗಿನ ಮುಖ್ಯಮಂತ್ರಿಯವರ ಬಗ್ಗೆ ’ಅಬ್ಬರದ ಪ್ರಚಾರ’ ಮಾಡುವ
ಸಲುವಾಗಿ ಸುಮಾರು ೨೦೦೦ ಕೋಟಿ ರೂಪಾಯಿಗಳನ್ನು ಮೀಸಲು ಇರಿಸಲಾಗಿತ್ತು ಎಂದು ರವಿಕಾಂತ್ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದರು. ಮಾಯಾವತಿ ಮತ್ತು ಅವರ ಪಕ್ಷದ ಲಾಂಛನವಾದ ’ಆನೆ’ಗಳ ಪ್ರತಿಮೆಗಳನ್ನು ಸಾರ್ವಜನಿಕ ತಾಣಗಳಿಂದ ಕಿತ್ತುಹಾಕುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ರವಿಕಾಂತ್ ತಮ್ಮ ಮನವಿಯಲ್ಲಿ ಕೋರಿದ್ದರು. ’ರಾಜ್ಯದ ನೀತಿಯಾಗಿ ಈ ಚಟುವಟಿಕೆಗಳನ್ನು
ನಡೆಸಲಾಗಿತ್ತು. ಇದು ನಿರಂಕುಶ ವರ್ತನೆ ಮತ್ತು ಸಂವಿಧಾನದ ೧೪ನೇ ವಿಧಿಯ ಉಲ್ಲಂಘನೆ. ಸರ್ಕಾರದ ಹಣ ಬಳಸಿ ಸುಮಾರು ೧೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಯಾವತಿ ಮತ್ತು ಆನೆಗಳ ಪ್ರತಿಮೆಗಳ ಸ್ಥಾಪನೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿತ್ತು.
2019: ನವದೆಹಲಿ: ವಿವಾದಾತ್ಮಕ ’ರಫೇಲ್ ವಹಿವಾಟಿಗೆ’ ಸಂಬಂಧಿಸಿದಂತೆ ಫ್ರೆಂಚ್ ಅಧಿಕಾರಿಗಳ ಜೊತೆಗೆ ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ನಡೆಸುತ್ತಿದ್ದ ’ಪರ್ಯಾಯ ಮಾತುಕತೆ’ಗಳನ್ನು ಆಕ್ಷೇಪಿಸಿ ತಮ್ಮ ಸಚಿವಾಲಯವು ನೀಡಿದ್ದ ಟಿಪ್ಪಣಿಯನ್ನು ಆಗಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ’ಅತಿಯಾದ ಪ್ರತಿಕ್ರಿಯೆ’ (ಓವರ್ ರಿಯಾಕ್ಷನ್) ಎಂಬುದಾಗಿ ಬಣ್ಣಿಸಿದ್ದರು. ರಕ್ಷಣಾ ಇಲಾಖೆಯ ಉಪಕಾರ್ಯದರ್ಶಿಯವರು
ನೀಡಿದ್ದ ಟಿಪ್ಪಣಿಯ ಕೆಳಗೇ ತಮ್ಮ ಪ್ರತಿಕ್ರಿಯೆಯನ್ನು ನಮೂದಿಸಿರುವ ಪರಿಕ್ಕರ್ ಅವರು ’ಪಿಎಂಒ ಮತ್ತು ಫ್ರೆಂಚ್ ಅಧ್ಯಕ್ಷರ ಕಚೇರಿಯು ಶೃಂಗಸಭೆಯ ಫಲಿತವಾಗಿ ವಿಷಯದ ಪ್ರಗತಿಯ ಬಗ್ಗೆ ನಿಗಾ ಇಟ್ಟಿರುವಂತೆ ಕಾಣುತ್ತದೆ. ಪ್ಯಾರಾ ೫ ’ಅತಿಯಾದ ಪ್ರತಿಕಿಯೆ’
(ಓವರ್ ರಿಯಾಕ್ಷನ್) ಆಗಿರುವಂತೆ ಕಾಣುತ್ತದೆ’ ಎಂದು
ಬರೆದಿದ್ದರು.
೨೦೧೫ರ ನವೆಂಬರ್ ೨೪ರ ರಕ್ಷಣಾ ಸಚಿವಾಲಯದ ಟಿಪ್ಪಣಿಯಲ್ಲಿ ಪಿಎಂಒದ ಪರ್ಯಾಯ ಮಾತುಕತೆಗಳು ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸಂಧಾನ ತಂಡದ ಸ್ಥಾನವನ್ನು ದುರ್ಬಲಗೊಳಿಸಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಲಾಗಿತ್ತು. ಭಾರತೀಯ ಸಂಧಾನ ತಂಡದ ಭಾಗವಾಗಿ ಇರದ ಯಾರೇ ಅಧಿಕಾರಿಗಳು ಫ್ರೆಂಚ್ ಸರ್ಕಾರದ ಜೊತೆ ಪರ್ಯಾಯ ಮಾತುಕತೆ ನಡೆಸುವುದರಿಂದ ದೂರ ಇರುವುದು ಒಳ್ಳೆಯದು ಎಂಬುದಾಗಿ ನಾವು ಪಿಎಂಒಗೆ ಸಲಹೆ ಮಾಡಬಹುದು ಎಂದು ರಕ್ಷಣಾ ಸಚಿವಾಲಯದ ಟಿಪ್ಪಣಿ ಹೇಳಿತ್ತು. ಸಚಿವರು ಉಲ್ಲೇಖಿಸಿದ ಪ್ಯಾರಾ ೫ ’ಪರ್ಯಾಯ ಮಾತುಕತೆ’ ಪದವನ್ನು ಬಳಸಿದ ರಕ್ಷಣಾ ಸಚಿವಾಲಯದ ಟಿಪ್ಪಣಿಯ ಪ್ಯಾರಾವಾಗಿದೆ. ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ (ಪ್ರಿನ್ಸಿಪಲ್ ಸೆಕ್ರೆಟರಿ) ಅವರ ಜೊತೆಗೆ ಸಮಾಲೋಚನೆ ನಡೆಸುವ ಮೂಲಕ ರಕ್ಷಣಾ ಕಾರ್ಯದರ್ಶಿಯವರು
ವಿಷಯವನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದೂ ಪರಿಕ್ಕರ್ ತಮ್ಮ ಪ್ರತಿಕ್ರಿಯೆಯ ಮುಂದಿನ ವಾಕ್ಯದಲ್ಲಿ ಸಲಹೆ ಮಾಡಿದ್ದರು.
2018: ನವದೆಹಲಿ: ’ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಈಗ ನನಗೂ ಬಾಸ್ ಎಂದು ಈದಿನ ಇಲ್ಲಿ ಹೇಳಿದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ
ಗಾಂಧಿ ಅವರು ಪಕ್ಷವನ್ನು ಬಲಪಡಿಸಲು ರಾಹುಲ್ ಜೊತೆಗೆ ಶ್ರಮಿಸುವಂತೆ ಪಕ್ಷದ ಸಂಸತ್ ಸದಸ್ಯರಿಗೆ ಕರೆ
ನೀಡಿದರು. ರಾಹುಲ್ ಶಕ್ತಿ, ಸಾಮರ್ಥ್ಯದ ಬಗ್ಗೆ ನನಗೆ ಶಂಕೆಯೇ ಇಲ್ಲ ಎಂದು ಎರಡು ದಶಕಗಳ ಕಾಲ ರಾಷ್ಟ್ರೀಯ
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸಿ ತನ್ನ ಪುತ್ರನಿಗೆ ಪಕ್ಷದ ಕಾರ್ಯಭಾರವನ್ನು
ಒಪ್ಪಿಸಿ ಹಿಂಬದಿ ಸೀಟಿಗೆ ಸರಿದಿರುವ ಸೋನಿಯಾ ಗಾಂಧಿ ಅವರು ಸಂಭ್ರಮದೊಂದಿಗೆ ಹೇಳಿದರು. "ಕಾಂಗ್ರೆಸ್ ಅಧ್ಯಕ್ಷನಾಗಿ ರಾಹುಲ್ ಗಾಂಧಿಯ ಶಕ್ತಿ,
ಸಾಮರ್ಥ್ಯ, ಪ್ರೌಢಿಮೆ ಹಾಗೂ ಕೌಶಲದ ಬಗ್ಗೆ ನನಗೀಗ ಯಾವ ಸಂದೇಹಗಳೂ ಇಲ್ಲ; ಎಲ್ಲರೂ ಆತನನ್ನು ಬೆಂಬಲಿಸುವರೆಂದು
ನಾನು ಹಾರೈಸುತ್ತೇನೆ’ ಎಂದು ಸೋನಿಯಾ ಗಾಂಧಿ
ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹೇಳಿದರು. ಕಾಂಗ್ರೆಸ್
ಪಕ್ಷದಲ್ಲಿ ಪ್ರಸ್ತುತ ಎರಡು ಶಕ್ತಿಕೇಂದ್ರಗಳು ಇರುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ ಸೋನಿಯಾ
’ಸುದೀರ್ಘ ಕಾಲದ ಬಳಿಕ ನಾವು ಸಮೂಹವಾಗಿ ಸೇರಿದ್ದೇವೆ. ಈ ಮಧ್ಯೆ ನಾವು ನೂತನ ಕಾಂಗ್ರೆಸ್ ಅಧ್ಯಕ್ಷರನ್ನು
ಆಯ್ಕೆ ಮಾಡಿದ್ದೇವೆ. ನಿಮ್ಮೆಲ್ಲರ ಪರವಾಗಿ ಮತ್ತು ನನ್ನ ಪರವಾಗಿ ನಾನು ರಾಹುಲ್ ಗೆ ಶುಭ ಹಾರೈಕೆಗಳನ್ನು
ಮಾಡುತ್ತಿದ್ದೇನೆ. ಅವರು ಈಗ ನನಗೂ ಬಾಸ್. ಈ ವಿಚಾರದಲ್ಲಿ ಯಾರಲ್ಲೂ ಸಂಶಯ ಉಳಿಯುವುದು ಬೇಡ. ನೀವೆಲ್ಲರೂ
ಅವರ ಜೊತೆ ನನ್ನೊಂದಿಗೆ ಇದ್ದ ಉತ್ಸಾಹ, ನಿಷ್ಠೆಯೊಂದಿಗೆ ಶ್ರಮಿಸುವಿರಿ ಎಂಬ ನಂಬಿಕೆ ನನಗಿದೆ’ ಎಂದು ಅವರು ಹೇಳಿದರು. ಸಂಸದೀಯ
ಪಕ್ಷದ ಅಧ್ಯಕ್ಷೆಯಾಗಿ ತಾವು ಮುಂದುವರಿಯಲಿರುವುದಾಗಿ ಸ್ಪಷ್ಟ ಪಡಿಸಿದ ಸೋನಿಯಾ, ಮುಂದಿನ ಲೋಕಸಭಾ
ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳೀಸಲು ಪಕ್ಷದ ಅಧ್ಯಕ್ಷರು ಮತ್ತು ಸಮಾನ ಮನಸ್ಸಿನ ಪಕ್ಷಗಳ
ಜೊತೆಗೆ ಶ್ರಮಿಸುವುದಾಗಿ ನುಡಿದರು. ಪ್ರಧಾನಿ ನರೇಂದ್ರ
ಮೋದಿ ಅವರ ಕಾರ್ಯಶೈಲಿಯನ್ನು ಟೀಕಿಸಿದ ಸೋನಿಯಾ ಗಾಂಧಿ, "ಆಳುವ ಪಕ್ಷದ ಆಡಳಿತೆಯಲ್ಲಿ ಸಂಸದೀಯ
ಶಕ್ತಿಗಳನ್ನು ದುರ್ಬಲಗೊಳಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು
ಕಳೆದಿವೆ. ಈ ಅವಧಿಯಲ್ಲಿ ಸಂಸದೀಯ ಸಂಸ್ಥೆಗಳು ವ್ಯವಸ್ಥಿತ ದಾಳಿಗೆ ಗುರಿಯಾಗಿವೆ. ಸಂಸತ್ತು ಮಾತ್ರವಲ್ಲದೆ
ನ್ಯಾಯಾಂಗ, ಮಾಧ್ಯಮ ಮತ್ತು ಒಟ್ಟಾರೆಯಾಗಿ ಪೌರ ಸಮಾಜ ದಾಳಿ, ಬೆದರಿಕೆಗೆ ಗುರಿಯಾಗಿವೆ. ರಾಜಕೀಯ ವಿರೋಧಿಗಳ
ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗಿದೆ. ದಲಿತರ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಿವೆ.
ಯಾವುದೇ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿಲ್ಲ; ಹಾಗಾಗಿ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಗಣನೀಯವಾಗಿ
ಹೆಚ್ಚಿದೆ’ ಎಂದು ಹೇಳಿದರು. ಮೋದಿ ಸರ್ಕಾರ ಗರಿಷ್ಠ ಪ್ರಚಾರ, ಕನಿಷ್ಠ ಸಾಧನೆಯಲ್ಲಿ ಮಗ್ನವಾಗಿದೆ
ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿನಲ್ಲಿ ಮಾಡಿರುವುದು ಸೊಕ್ಕಿನ
ಭಾಷಣ ಎಂದು ಖಂಡಿಸಿದ ಸೋನಿಯಾ ’ಹೊಸ ಆರೋಗ್ಯ ವಿಮಾ ಯೋಜನೆ ಸೇರಿದಂತೆ ಎಲ್ಲ ಹಳೆಯ ಯೋಜನೆಗಳನ್ನೇ ಐಂದ್ರ
ಜಾಲಿಕ ಸ್ಪರ್ಶದೊಂದಿಗೆ ಹೊಸ ಪ್ಯಾಕ್’ ಮಾಡಿ ಹೊರ ಬಿಡುವ ಕೆಲಸವನ್ನು
ಸರ್ಕಾರ ಮಾಡುತ್ತಿದೆ ಎಂದು ಸೋನಿಯಾ ಟೀಕಿಸಿದರು.
ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸೋನಿಯಾ, ’ಈ ಸರ್ಕಾರವು ಹಳೆಯ ಯೋಜನೆಗಳಿಗೆ
ಐಂದ್ರಜಾಲಿಕ ಹೊದಿಕೆ ಹೊದಿಸಿ, ಅವುಗಳನ್ನೇ ಹೊಸ ಕಾರ್ಯಕ್ರಮಗಳು ಎಂದು ಪ್ರಕಟಿಸುತ್ತಿದೆ. ವಾಸ್ತವವಾಗಿ
ನಮ್ಮ ಯುಪಿಎ ಸರ್ಕಾರ ಆರಂಭಿಸಿದ್ದ ಯೋಜನೆಗಳನ್ನೇ ಮರುಬಳಕೆ ಮಾಡಿ ಹೊಸ ರೂಪದೊಂದಿಗೆ ಹೊರಬಿಡುತ್ತಿದೆ.
ಹಳೆ ಯೋಜನೆಗಳಿಗೆ ಬಹುಶಃ ನಮ್ಮ ಕಾಲದ ಹೆಸರುಗಳನ್ನು ಮೀರಿಸುವಂತಹ ಹೊಸ ಆಕರ್ಷಕ ವರ್ಣರಂಜಿತ ಹೆಸರುಗಳನ್ನು
ಇಡಲಾಗುತ್ತಿದೆ ಎಂಬುದು ನಿಜ. ಇದನ್ನು ನಾವು ಒಪ್ಪಿಕೊಳ್ಳಬೇಕು.
ಆದರೆ ಇದು ಕನಿಷ್ಠ ಸರ್ಕಾರ, ಗರಿಷ್ಠ ಚಾರದ ಆಟ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ’ಗರಿಷ್ಠ ಮಾರುಕಟ್ಟೆ,
ಕನಿಷ್ಠ ವಿತರಣೆ’ ಎಂದು ಸೋನಿಯಾ ಹೇಳಿದರು.
೨೦೧೪ಕ್ಕಿಂತ
ಮೊದಲು ಭಾರತದಲ್ಲಿ ಏನೂ ನಡೆದಿರಲೇ ಇಲ್ಲ ಎಂದು ಈ ಸರ್ಕಾರ ನಂಬಿದಂತಿದೆ. ಈ ಸೊಕ್ಕು ಮತ್ತು ಅಪ್ರಾಮಾಣಿಕತೆಯು
ಮೋದಿ ಸರ್ಕಾರಕ್ಕೆ ವಾಸ್ತವದ ಸ್ಪರ್ಶವೇ ಇಲ್ಲ, ಅದು ಕೇವಲ ಆಡಂಬರದ ಸುಳ್ಳು ಪ್ರಚಾರದಲ್ಲೇ ಬದುಕುತ್ತಿದೆ
ಎಂಬುದನ್ನು ತೋರಿಸುತ್ತಿದೆ. ಇದಕ್ಕೆ ಬುಧವಾರ ಬೆಳಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಮಾಡಿದ ಭಾಷಣಕ್ಕಿಂತ
ಹೊರತಾದ ಬೇರೆ ಸಾಕ್ಷಿ ಬೇಕಿಲ್ಲ ಎಂದು ಸೋನಿಯಾ ಬಣ್ಣಿಸಿದರು. ಕೃಷಿ
ಕ್ಷೇತ್ರ ಸಂಕಷ್ಟದಲ್ಲಿದೆ, ನಿರುದ್ಯೋಗ ಹೆಚ್ಚುತ್ತಿದೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೆಲಕಚ್ಚುತ್ತಿವೆ.
ದಲಿತರು ಮತ್ತು ಅಲ್ಪಸಂಖ್ಯಾತರು ಧ್ರುವೀಕರಣದ ಪರಿಣಾಮವಾಗಿ ಭೀತಿಯ ನೆರಳಲ್ಲಿ ಬದುಕುತ್ತಿದ್ದಾರೆ
ಎಂದು ಸೋನಿಯಾ ಆಪಾದಿಸಿದರು. ‘ಇಂತಹ ಧ್ರುವೀಕರಣವು ಪ್ರಜಾಪ್ರಭುತ್ವದಲ್ಲಿ ಕ್ರಿಮಿನಲ್
ಅಪರಾಧ. ಸರ್ಕಾರಕ್ಕೆ ಸಾಂಸ್ಥಿಕ ಪ್ರಕ್ರಿಯೆಯಲ್ಲಿ ನಂಬಿಕೆ ಇಲ್ಲ, ಬದಲಿಗೆ ವ್ಯಕ್ತಿಕೇಂದ್ರಿತ ಡಿಪ್ಲಮೆಸಿಯನ್ನು
ಅದು ನೆಚ್ಚಿಕೊಂಡಿದೆ’ ಎಂದು ಸೋನಿಯಾ ಗಾಂಧಿ
ದೂರಿದರು. ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ’ಸರ್ಕಾರ ಮೌನವಾಗಿದೆ’ ಎಂದೂ ಅವರು ಸರ್ಕಾರದ ಮೇಲೆ ದಾಳಿ ನಡೆಸಿದರು.
‘ಯಾವುದೇ ಸಮಯದಲ್ಲಿ ಲೋಕಸಭಾ ಚುನಾವಣೆ ನಡೆಯಬಹುದು. ಅದಕ್ಕೆ ಪಕ್ಷದ ಕಾರ್ಯಕರ್ತರು ಸಜ್ಜಾಗಿರಬೇಕು’ ಎಂದು ನುಡಿದ ಸೋನಿಯಾ, ಇತ್ತೀಚಿನ ಗುಜರಾತ್
ಮತ್ತು ರಾಜಸ್ಥಾನ ಉಪಚುನಾವಣೆಗಳಲ್ಲಿ ಪಕ್ಷವು ಮಾಡಿದ ಸಾಧನೆಗಾಗಿ ಕಾರ್ಯಕರ್ತರನ್ನು ಅಭಿನಂದಿಸಿದರು.
2018: ಕೋಲ್ಕತ: ಹತ್ತು ವರ್ಷಗಳಷ್ಟು
ಹಳೆಯ ಭ್ರಷ್ಟಾಚಾರ ಪ್ರಕರಣ ಒಂದರಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ಬಾಂಗ್ಲಾದೇಶ
ಸುಪ್ರೀಂಕೋರ್ಟ್ ಈದಿನ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು
ವಿಧಿಸಿತು. ಖಲೀದಾ ಜಿಯಾ ಅವರ ಪುತ್ರ ತಾರಿಖ್ ರಹಮಾನ್
ಅವರಿಗೂ ನ್ಯಾಯಾಲಯ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು. ತಾರಿಖ್ ರಹಮಾನ್ ಪ್ರಸ್ತುತ ಲಂಡನ್ ನಲ್ಲಿ
ವಾಸವಾಗಿದ್ದಾರೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ
(ಬಿ ಎನ್ ಪಿ) ಸಂಸತ್ ಸದಸ್ಯ ಖ್ವಾಜಿ ಸಲೀಮುಲ್ ಹಕ್ ಕಮಾಲ್, ಪ್ರಧಾನಿಯ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ಕಮಾಲ್ ಉದ್ದೀನ್
ಸಿದ್ದಿಕ್ ಮತ್ತು ಇತರ ಇಬ್ಬರು ಹಾಗೂ ಒಬ್ಬ ವ್ಯಾಪಾರಿಗೂ ಸುಪ್ರೀಂಕೋರ್ಟ್ ಶಿಕ್ಷೆ ವಿಧಿಸಿತು. ಖಲೀದಾ ಜಿಯಾ ಅವರು ತಮ್ಮ ಮೇಲಿನ ಅಪಾದನೆಗಳನ್ನು ನಿರಾಕರಿಸಿದ್ದರು. ಭ್ರಷ್ಟಾಚಾರ ನಿಗ್ರಹ ಆಯೋಗವು ಖಲೀದಾ ಜಿಯಾ ಮತ್ತು ಇತರ
ಐವರು ೨.೧ ಕೋಟಿ ಬಾಂಗ್ಲಾದೇಶ ತಾಕಾ (೧.೬ ಕೋಟಿ ರೂಪಾಯಿ) ಮೀರಿದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ
ಎಂದು ಆಪಾದಿಸಿ ಪ್ರಕರಣ ದಾಖಲಿಸಿತ್ತು. ಈ ಹಣವು ಅನಾಥರಿಗೆ ಅನುದಾನದ ರೂಪದಲ್ಲಿ ವಿದೇಶೀ ಬ್ಯಾಂಕ್
ಒಂದರಿಂದ ಬಂದಿತ್ತು.
ಜಿಯಾ
ಮತ್ತು ಇತರ ಬಿಎನ್ ಪಿ ನಾಯಕರ ವಿರುದ್ಧ ನಿಧಿ ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ
೩೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಖಲೀದಾ ಜಿಯಾ ಅವರು ೧೯೯೧-೧೯೯೬ ಮತ್ತು ೨೦೦೧-೨೦೦೬ರ
ಅವಧಿಯಲ್ಲಿ ಎರಡು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು.
ಖಲೀದಾ ಜಿಯಾ ಅವರಿಗೆ ಸೆರೆವಾಸದ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಹಿಂಸಾಚಾರ ಸಾಧ್ಯತೆಗಳ ಹಿನ್ನೆಲೆಯಲ್ಲಿ
ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ವರದಿಗಳು
ತಿಳಿಸಿದವು.
ಬಾಂಗ್ಲಾದೇಶ
ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವಾಗ ಖಲೀದಾ ಜಿಯಾ ಅವರು ನ್ಯಾಯಾಲಯ ಕೊಠಡಿಯಲ್ಲೇ ಇದ್ದರು ಎಂದು
ವರದಿಗಳು ಹೇಳಿದವು. ಘರ್ಷಣೆ ಬೆದರಿಕೆ ಹಿನ್ನೆಲೆಯಲ್ಲಿ ತೀರ್ಪು ಹೊರಬೀಳುವುದಕ್ಕೂ ಮೊದಲೇ ಭದ್ರತಾ
ಪಡೆಗಳು ರಸ್ತೆಗಳಲ್ಲಿ ವ್ಯಾಪಕ ಗಸ್ತು ನಡೆಸಿದವು. ಇದಕ್ಕೂ ಮುನ್ನ ಖಲೀದಾ ಬೆಂಬಲಿಗರು ಭಾರೀ ಮೋಟಾರು
ಸೈಕಲ್ ಮೆರವಣಿಗೆ ಮೂಲಕ ನ್ಯಾಯಾಲಯ ಆವರಣಕ್ಕೆ ಬಂದಿದ್ದರು. ಸುಪ್ರೀಂಕೋರ್ಟ್ ಶಿಕ್ಷೆಯ ಪರಿಣಾಮವಾಗಿ ಹಾಲಿ ಪ್ರಧಾನಿಯ
ದೀರ್ಘ ಕಾಲದ ಪ್ರತಿಸ್ಪರ್ಧಿಯಾಗಿರುವ ಖಲೀದಾ ಜಿಯಾ ಅವರನ್ನು ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ
ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸುವ ಸಾಧ್ಯತೆ ಇದೆ.
2018: ಪಾಟ್ನಾ: ಕೇಂದ್ರ ಸಚಿವ ಗಿರಿರಾಜ್
ಸಿಂಗ್ ಮತ್ತು ಇತರ ೩೧ ಮಂದಿಯ ವಿರುದ್ಧ ಪಾಟ್ನಾದಲ್ಲಿನ ದಾನಾಪುರ ಪೊಲೀಸರು ಬೆಲೆಬಾಳುವ ಭೂಮಿ ಕಬಳಿಸಲು
ಸಂಚು ಹೂಡಿದ್ದಾರೆ ಎಂದು ಆಪಾದಿಸಿ ಪ್ರಕರಣ ದಾಖಲಿಸಿದರು. ಸಚಿವರ ವಿರುದ್ಧ ಫೋರ್ಜರಿ ಮತ್ತು ಕ್ರಿಮಿನಲ್ ಒಳಸಂಚು ಆರೋಪ
ಹೊರಿಸಲಾಯಿತು. ಗಿರಿರಾಜ್ ಸಿಂಗ್ ವಿರುದ್ಧ ಪ್ರಕರಣ
ದಾಖಲಾಗಿರುವ ಹಿನ್ನೆಲೆಯಲ್ಲಿ ವಿರೋಧಿ ರಾಷ್ಟ್ರೀಯ ಜನತಾ ದಳವು (ಆರ್ ಜೆಡಿ) ನಿತೀಶ್ ಕುಮಾರ್ ಸರ್ಕಾರದ
ಪ್ರಾಮಾಣಿಕತೆ ಬಗ್ಗೆ ಪ್ರಶ್ನಿಸುವುದರ ಜೊತೆಗೆ ಕೇಂದ್ರ ಸಂಪುಟದಿಂದ ಗಿರಿರಾಜ್ ಸಿಂಗ್ ಅವರನ್ನು ಕೈಬಿಡಬೇಕು
ಎಂದು ಆಪಾದಿಸಿತು. ಇದರೊಂದಿಗೆ ಈ ಪ್ರಕರಣವು ಇದೀಗ ತೀವ್ರ ರಾಜಕೀಯ ಸಮರಕ್ಕೆ ನಾಂದಿ ಹಾಡಿತು. ಕಳೆದ
ವರ್ಷ ಮಾಜಿ ಭೂಸುಧಾರಣಾ ಡೆಪ್ಯುಟಿ ಕಲೆಕ್ಟರ್ (ಡಿಸಿಎಲ್ ಆರ್) ರಾಮನಾರಾಯಣ್ ಪ್ರಸಾದ್ ಅವರು ಗಿರಿರಾಜ್
ಮತ್ತು ಇತರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ
ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಎಲ್ಲ ೩೨ ಮಂದಿಯ ವಿರುದ್ಧ ಸಂಬಂಧಪಟ್ಟ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿತ್ತು. ಈ ಪ್ರಕರಣದಲ್ಲಿ ಸಚಿವರನ್ನು ೨೫ನೇ ಆರೋಪಿಯಾಗಿ ಸೇರ್ಪಡೆ
ಮಾಡಲಾಗಿತ್ತು. ಅಶೋಪುರ ಮೌಜಾದಲ್ಲಿನ ಸುಮಾರು ೨ ಎಕರೆ ವಿಸ್ತೀರ್ಣದ ೪೯೫ ನಂಬರಿನ ನಿವೇಶನವನ್ನು ತನಗೆ
ಮಾವ (ತಾಯಿಯ ಸಹೋದರ) ಕೊಡುಗೆಯಾಗಿ ಕೊಟ್ಟಿದ್ದರು. ಈ ಭೂಮಿಯನ್ನು ಆರೋಪಿಗಳು ಕೃತಕ ದಾಖಲೆಗಳನ್ನು
ಬಳಸಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು ಎಂದು ಅರ್ಜಿದಾರರು ಆಪಾದಿಸಿ ದೂರು ನೀಡಿದ್ದರು.
ಹಲವಾರು ಬೇನಾಮಿ ಆಸ್ತಿ ಸಂಪಾದನೆಯ ಪ್ರಕರಣಗಳಲ್ಲಿ ಸಿಲುಕಿ ಬಸವಳಿದ ಲಾಲು ಪ್ರಸಾದ್ ಯಾದವ್ ಅವರ ಆರ್
ಜೆಡಿ ಗೆ ಈ ಪ್ರಕರಣ ಇದೀಗ ಸರ್ಕಾರದ ವಿರುದ್ಧ ಹರಿಹಾಯಲು ಹೊಸ ಮೇವು ಒದಗಿಸಿದೆ. ಲಾಲು ಪ್ರಸಾದ್ ಅವರಷ್ಟೇ
ಅಲ್ಲ, ಅವರ ಮಕ್ಕಳಾದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಬಿಹಾರಿನ ಮಾಜಿ ಆರೋಗ್ಯ ಸಚಿವ
ತೇಜ್ ಪ್ರತಾಪ್, ಲಾಲು ಪುತ್ರಿ ಮಿಸಾ ಭಾರ್ತಿ ಮತ್ತು ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿಯಾದ ರಾಬಡಿದೇವಿ
ಅವರ ವಿರುದ್ಧವೂ ಇಂತಹವುದೇ ಪ್ರಕರಣಗಳು ದಾಖಲಾಗಿದ್ದವು. ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ
ಆರ್‌ಜೆಡಿಯ ರಾಷ್ಟ್ರವ್ಯಾಪಿ ಯಾತ್ರೆಗೆ ಸಜ್ಜಾಗುತ್ತಿರುವ ತೇಜಸ್ವಿ ಯಾದವ್ ಅವರು ಅವರು ಗಿರಿರಾಜ್
ಸಿಂಗ್ ವಿರುದ್ಧದ ಆರೋಪಗಳನ್ನು ಬಳಸಿಕೊಂಡು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿದರು. ಲಾಲು ಕುಟುಂಬದ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳನ್ನು
ಹೊರಿಸಿರುವ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ ಮೋದಿ ವಿರುದ್ಧ ತೇಜಸ್ವಿ ಯಾದವ್ ವಾಗ್ಬಾಣಗಳನ್ನು
ಎಸೆದರು. ‘ಈಗ ಕೇಂದ್ರ ಸಚಿವರ ವಿರುದ್ದ ಭೂಕಬಳಿಕೆಗಾಗಿ
ಪ್ರಕರಣ ದಾಖಲಾಗಿದೆ. ಬಿಜೆಪಿ ನಾಯಕರು ಈಗೇಕೆ ಮಾತನಾಡುತ್ತಿಲ್ಲ? ಮುಖ್ಯಮಂತ್ರಿ ನಿತೀಶ್ ಕುಮಾರ್
ಈಗೆಲ್ಲಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಅವರು
ತತ್ ಕ್ಷಣವೇ ಗಿರಿರಾಜ್ ಸಿಂಗ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ತೇಜಸ್ವಿ ಆಗ್ರಹಿಸಿದರು. ಆರ್ ಜೆಡಿ
ಉಪಾಧ್ಯಕ್ಷ ಶಿವಾನಂದ ತಿವಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಿರಿರಾಜ್ ಅವರ ’ಪಾಕಿಸ್ತಾನ’ ಟೀಕೆಯನ್ನು ನೆನಪಿಸಿ, ’ಗಿರಿರಾಜ್ ವಿರುದ್ಧ
ಬಿಹಾರದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಪಾಕಿಸ್ತಾನಕ್ಕೆ ಹೋಗುವುದು ಈಗ ಗಿರಿರಾಜ್ ಅವರ ಸರದಿಯಾಗಿದೆ’ ಎಂದು ಮೂದಲಿಸಿದರು. ಇದಕ್ಕೆ ತತ್ ಕ್ಷಣವೇ ಎದಿರೇಟು ನೀಡಿದ ಗಿರಿರಾಜ್ ಸಿಂಗ್
’ನನಗೆ ತೇಜಸ್ವಿ ಅವರ ಟ್ವೀಟ್ ನಿಂದ ಪ್ರಕರಣದ ಬಗ್ಗೆ ಗೊತ್ತಾಗಿದೆ. ಅವರೇ ಇದರ ಶಿಲ್ಪಿಯಾಗಿರುವಂತೆ
ಕಾಣುತ್ತದೆ. ಆದರೆ ಪೂರ್ಣ ಮಾಹಿತಿ ಸಿಗದೆ ನಾನು ಎಫ್ ಐಆರ್ ಬಗ್ಗೆ ಮಾತನಾಡುವುದಿಲ್ಲ. ಏನಿದ್ದರೂ
ನಾನು ನ್ಯಾಯಾಂಗಕ್ಕೆ ಪೂರ್ಣ ಸಹಕಾರದ ಭರವಸೆ ನೀಡುವೆ. ತೇಜಸ್ವಿ ಅವರು ತಂದೆಗೆ ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ
ತಮ್ಮ ಪಕ್ಷವನ್ನು ಪಾರುಮಾಡುವ ಬಗ್ಗೆ ಚಿಂತಿಸಲಿ’ ಎಂದು ಟ್ವೀಟ್ ಮಾಡಿದರು.
2018: ನವದೆಹಲಿ/ ಬೆಂಗಳೂರು: ಮುಂಬರುವ ಕರ್ನಾಟಕ
ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ಮತ್ತು ಜಾತ್ಯತೀತ ಜನತಾದಳ (ಜೆಡಿಎಸ್)
ಮೈತ್ರಿ ಮಾಡಿಕೊಳ್ಳಲಿವೆ ಎಂದು ಬಿಎಸ್‌ಪಿ ಮತ್ತು ಜೆಡಿಎಸ್ ನವದೆಹಲಿಯಲ್ಲಿ ಪ್ರಕಟಿಸಿದವು. ೨೦೧೯ರ ಲೋಕಸಭಾ ಚುನಾವಣೆಯವರೆಗೂ ಮೈತ್ರಿ ಮುಂದುವರೆಯಲಿದೆ
ಎಂದು ಬಿಎಸ್ ಪಿ ನಾಯಕ ಸತೀಶಚಂದ್ರ ಮಿಶ್ರ ಮತ್ತು ಜನತಾದಳ (ಎಸ್) ಮುಖಂಡ ಡ್ಯಾನಿಶ್ ಅಲಿ ಪತ್ರಿಕಾಗೋಷ್ಠಿಯಲ್ಲಿ
ಪ್ರಕಟಿಸಿದರು. ಪಕ್ಷದ ರಾಷ್ಟ್ರೀಯ ಮುಖಂಡ ಮಾಜಿ ಪ್ರಧಾನಿ
ಎಚ್.ಡಿ. ದೇವೇಗೌಡ, ರಾಜ್ಯ ಜನತಾದಳ ನಾಯಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಬಳಿಕ
ಸುದ್ದಿಯನ್ನು ದೃಢ ಪಡಿಸಿದರು. ಚುನಾವಣೆಯಲ್ಲಿ ಉಭಯ
ಪಕ್ಷಗಳ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಒಟ್ಟು ೨೨೪ ಕ್ಷೇತ್ರಗ ಪೈಕಿ ಬಿಎಸ್ ಪಿ ೨೦ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ೩೦ ಜಿಲ್ಲೆಗಳ ೧೪
ಕ್ಷೇತ್ರಗಳಲ್ಲಿ ಜೆಡಿಎಸ್-ಬಿಎಸ್ಪಿ ಮೈತ್ರಿ ಅಭ್ಯರ್ಥಿಗಳು
ಕಣಕ್ಕಿಳಿಯಲಿದ್ದಾರೆ ಎಂದು ಬಿಎಸ್ ಪಿ ಮೂಲಗಳು ತಿಳಿಸಿದವು. ಫೆಬ್ರವರಿ ೧೭ರಂದು ಉತ್ತರ ಪ್ರದೇಶ ಮಾಜಿ
ಮುಖ್ಯಮಂತ್ರಿ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಅದೇ ದಿನ
ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೊಂದಿಗೆ ಬೃಹತ್ ಸಮಾವೇಶ ನಡೆಸುವ ಮೂಲಕ ಚುನಾವಣೆಯಲ್ಲಿ ಬಿಎಸ್ಪಿ-ಜೆಡಿಎಸ್ ಮೈತ್ರಿಯನ್ನು
ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಯಿತು. ಕರ್ನಾಟಕದ ಹಾಲಿ ವಿಧಾನಸಭೆಯ ಅವಧಿ ಮೇ ತಿಂಗಳಲ್ಲಿ
ಕೊನೆಗೊಳ್ಳಲಿದೆ.
2018: ನವದೆಹಲಿ: ೧೯ನೇ ಶತಮಾನದಲ್ಲಿ
ಗ್ರಹಾಂಬೆಲ್ ಅವರು ಕಂಡು ಹಿಡಿದ ಉಪಕರಣ ಒಂದಿದೆ. ಕಳೆದ ೧೩೦ ವರ್ಷಗಳಲ್ಲಿ ಅದ್ಭುತವಾಗಿ ಅದು ಸುಧಾರಣೆಗೊಂಡಿದೆ.
ಅದರ ಹೆಸರು ಟೆಲಿಫೋನ್ ಎಂದು. ನಿಮಗೆ ಇದು ಗೊತ್ತಾ?’ ಎಂದು ಕೇಳುವ ಮೂಲಕ ಸುಪ್ರೀಂಕೋರ್ಟ್ ಸರ್ಕಾರಿ
ವಕೀಲರನ್ನು ’ಅರೆದ’ ಪ್ರಸಂಗ ಸುಪ್ರೀಂಕೋರ್ಟಿನಲ್ಲಿ
ಘಟಿಸಿತು. ಇದೇ ರೀತಿ ಇನ್ನೊಂದು ಸಂದರ್ಭದಲ್ಲಿ ಸುಪ್ರೀಂಕೋರ್ಟ್
’ಇ-ಮೇಲ್’ ಎಂಬೊಂದು ವ್ಯವಸ್ಥೆಯ ಬಗ್ಗೆ ನಿಮಗೆ ಗೊತ್ತಿಲ್ಲವೇ
ಎಂದೂ ಸರ್ಕಾರಿ ವಕೀಲರನ್ನು ಝಾಡಿಸಿತು. ಇವುಗಳ ಲಾಭ
ಪಡೆದುಕೊಳ್ಳಲು ನಿಮಗೇಕೆ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸರ್ಕಾರಿ ಪ್ರಾಧಿಕಾರಗಳ
ಕಿವಿಯನ್ನು ಸುಪ್ರೀಂಕೋರ್ಟ್ ಹಿಂಡಿತು. ‘೧೯ನೇ ಶತಮಾನದಲ್ಲಿ
ಗ್ರಹಾಂಬೆಲ್ ಅವರು ಕಂಡು ಹಿಡಿದ ಉಪಕರಣ ಒಂದಿದೆ. ಕಳೆದ ೧೩೦ ವರ್ಷಗಳಲ್ಲಿ ಅದು ಅಗಾಧವಾಗಿ ಅಭಿವೃದ್ಧಿಗೊಂಡಿದೆ.
ಅದು ಟೆಲಿಫೋನ್ ಎಂದು ಚಿರಪರಿಚಿತವಾಗಿದೆ’ ಎಂದು ನ್ಯಾಯಮೂರ್ತಿಗಳಾದ
ಜೆ. ಚೆಲಮೇಶ್ವರ್ ಮತ್ತು ಸಂಜಯ್ ಕೆ. ಕೌಲ್ ಹೇಳಿದರು. ಎರಡು ವಾರಗಳಾದರೂ ತಮಗೆ ಸರ್ಕಾರದಿಂದ ಸೂಚನೆ
ಬಂದಿಲ್ಲ. ಸೂಚನೆ ಪಡೆಯಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸರ್ಕಾರಿ ವಕೀಲರೊಬ್ಬರು ಹೇಳಿದಾಗ ನ್ಯಾಯಮೂರ್ತಿ
ಹೀಗೆ ಪ್ರತಿಕ್ರಿಯಿಸಿದರು. ಜಾರ್ಖಂಡ್ ಹೈಕೋರ್ಟನ್ನು
ಪ್ರತಿನಿಧಿಸುತ್ತಿದ್ದ ವಕೀಲ ತಪೇಶ್ ಕುಮಾರ್ ಸಿಂಗ್ ಅವರು ಈ ಸೇವಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ
ಸರ್ಕಾರದಿಂದ ಸೂಚನೆ ಪಡೆಯಲು ವೈಯಕ್ತಿಕವಾಗಿ ಯತ್ನಿಸಿದ್ದರು. ಆದರೆ ಸೂಚನೆ ಬಾರದೇ ಇದ್ದುದರಿಂದ ಇನ್ನಷ್ಟು
ಕಾಲಾವಕಾಶ ಕೋರಿದ್ದರು. ‘ನಾವು ರಾಜ್ಯ ಸರ್ಕಾರದ ಪ್ರತಿಕ್ರಿಯೆಗಾಗಿ
ಕಳೆದ ಬಾರಿ ಎರಡು ವಾರಗಳ ಅವಧಿಗೆ ಕಲಾಪ ಮುಂದೂಡಿದ್ದೆವು.. ಸೂಚನೆಗಳನ್ನು ಪಡೆಯಲು ನಿಮಗೆ ಇನ್ನೆಷ್ಟು
ಸಮಯ ಬೇಕು? ಒಂದು ವರ್ಷ ಅಥವಾ ಎರಡು ವರ್ಷಗಳು?’ ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ವಕೀಲರನ್ನು ಪ್ರಶ್ನಿಸಿದರು. ‘ಟೆಲಿಫೋನ್ ಎಂಬ ಈ ಉಪಕರಣವು ನಿಮಗೆ ಕೆಲವೇ ಸೆಕೆಂಡ್‌ಗಳಲ್ಲಿ
ಸೂಚನೆಯನ್ನು ಒದಗಿಸಬಲ್ಲುದು. ನೀವು ಹೊರಕ್ಕೆ ಹೋಗಿ, ಸಂಬಂಧಪಟ್ಟ ನಿಮ್ಮ ಕಾರ್ಯದರ್ಶಿಗೆ ರಿಂಗಣಿಸಿ,
ಕೆಲವು ನಿಮಿಷಗಳ ಬಳಿಕ ನಮಗೆ ಹೇಳಬಹುದು. ಆದರೆ ಸೂಚನೆ ಪಡೆಯುವ ಸಲುವಾಗಿ ಪ್ರಯಾಣ ಮಾಡಿ ಬರಲು ನೀವು
ಇನ್ನೂ ಸಮಯ ಕೇಳುತ್ತಿದ್ದೀರಿ. ಟೆಲಿಫೋನನನ್ನು ಹೇಗೆ ಬಳಸಬೇಕು ಎಂದು ನಿಮಗೆ ಹೇಳಿಕೊಡಬೇಕಾಗಿದೆಯೇನೋ
ಎಂದು ನಮಗೆ ಅಚ್ಚರಿಯಾಗುತ್ತಿದೆ’ ಎಂದು ನ್ಯಾಯಮೂರ್ತಿ
ಕೌಲ್ ನುಡಿದರು. ಇಂತಹುದೆ ಇನ್ನೊಂದು ಪರಿಸ್ಥಿತಿ
ನ್ಯಾಯಮೂರ್ತಿ ಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗೌಡ ಪೀಠವು ಫೆ.7ರ ಬುಧವಾರ ಪ್ರಕರಣವೊಂದರ ವಿಚಾರಣೆ
ನಡೆಸುತ್ತಿದ್ದಾಗ ಉದ್ಭವಿಸಿತ್ತು. ರಾಷ್ಟ್ರವ್ಯಾಪಿ
ನಿರ್ಗತಿಕ ವಿಧವೆಯರ ಪರಿಸ್ಥಿತಿ ಸುಧಾರಿಸಲು ಸಮಗ್ರ ಯೋಜನೆಯೊಂದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ
ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತ್ತು. ಹಲವಾರು ವಕೀಲರು ತಮಗೆ ದಾಖಲೆಗಳು ತಲುಪಿಲ್ಲ ಎಂದು ಪೀಠದ
ಮುಂದೆ ಪ್ರತಿಪಾದಿಸಿದರು. ಕೇಂದ್ರ
ಮತ್ತು ರಾಜ್ಯ ಸರ್ಕಾರಗಳು ಮತ್ತು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಗಳ ಪರವಾಗಿ ಹಾಜರಾಗಿದ್ದ
ವಕೀಲರ ಸಮೂಹದಲ್ಲಿ ದಾಖಲೆಗಳನ್ನು ಕಳುಹಿಸಲಾಗಿದೆಯೇ? ಕಕ್ಷಿದಾರರಿಗೆ ಲಭಿಸಿದೆಯೇ ಇಲ್ಲವೇ ಇತ್ಯಾದಿ
ಮಾತುಕತೆಯಿಂದ ಸ್ವಲ್ಪ ಕಾಲ ಗೊಂದಲದ ಸನ್ನಿವೇಶ ಸೃಷ್ಟಿಯಾಗಿತ್ತು. ಇದರಿಂದ ಸಿಡಿಮಿಡಿಗೊಂಡ ನ್ಯಾಯಮೂರ್ತಿ ಲೋಕುರ್ ಅವರು ದಾಖಲೆಗಳನ್ನು
ಇ-ಮೇಲ್‌ಗಳ ಮೂಲಕ ಏಕೆ ಕಳುಹಿಸಬಾರದು ಎಂದು ವಕೀಲರನ್ನು ಪ್ರಶ್ನಿಸಿದರು. ‘ನೀವು ಡಿಜಿಟಲೀಕರಣ
ಬಗ್ಗೆ ಮಾತನಾಡುತ್ತೀರಿ. ಆದರೆ ನೀವೇ ಸ್ವತಃ ಇ-ಮೇಲ್ ಗಳನ್ನು ಕೂಡಾ ಬಳಸುವುದಿಲ್ಲ. ಯಾವಾಗಲೂ ದಾಖಲೆಗಳನ್ನು
ಅಂಚೆಗಳ ಮೂಲಕವೇ ಏಕೆ ಕಳುಹಿಸಬೇಕು ಮತ್ತು ವಾದ ಪ್ರತಿವಾದದ ಸಂದರ್ಭ ಬಂದಾಗ ದಾಖಲೆಗಳು ತಲುಪಿಲ್ಲ
ಎಂಬುದಾಗಿ ಏಕೆ ಹೇಳಬೇಕು? ಎಂದು ನ್ಯಾಯಮೂರ್ತಿ ಕೇಳಿದರು. ವಾಸ್ತವವಾಗಿ
ಇಂತಹ ವಾದಗಳಿಗೆ ಇನ್ನು ಮುಂದೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ ನ್ಯಾಯಮೂರ್ತಿ ಲೋಕುರ್
ಕೋರ್ಟ್ ಆದೇಶದಲ್ಲೇ ಇ-ಮೇಲ್ ನ್ನು ಔಪಚಾರಿಕವನ್ನಾಗಿ ಮಾಡಲು ನಿರ್ದೇಶಿಸಿದರು. ‘ನಾವು ಕಕ್ಷಿದಾರರ ನಡುವಿನ ಎಲ್ಲ ಸಂಪರ್ಕಗಳನ್ನೂ ಇ-ಮೇಲ್
ಮೂಲಕ ಕಳುಹಿಸಬೇಕು ಎಂದು ಬಯಸುತ್ತೇವೆ. ಇದರಿಂದ ಯಾವುದೇ ಗೊಂದಲ ಆಗುವುದಿಲ್ಲ ಮತ್ತು ದಾಖಲೆಗಳು ರವಾನೆ
ಕಾಲದಲ್ಲಿ ಕಳೆದುಹೋಗುವುದಿಲ್ಲ ಎಂದು ನ್ಯಾಯಮೂರ್ತಿ ಲೋಕುರ್ ಕೋರ್ಟ್ ಆದೇಶದಲ್ಲೇ ನಮೂದಿಸಿದರು.
2018
: ನವದೆಹಲಿ: ಡಾರ್ವಿನ್ನನ ವಿಕಾಸ ವಾದ ಸಿದ್ಧಾಂತವನ್ನು
ಶಾಲೆ, ಕಾಲೇಜುಗಳ ಪಠ್ಯಸೂಚಿಯಿಂದ ಕಿತ್ತು ಹಾಕುವ ಪ್ರಸ್ತಾಪ ಇಲ್ಲ ಎಂದು ರಾಜ್ಯಸಭೆಗೆ ತಿಳಿಸಲಾಯಿತು. ‘ತಳಿಗಳಿಗೆ ಸಂಬಂಧಿಸಿದಂತೆ
ಚಾರ್ಲ್ಸ್ ಡಾರ್ವಿನ್ ಅವರ ವಿಕಾಸವಾದವನ್ನು ೧೨ನೇ ತರಗತಿಯ ಜೀವವಿಜ್ಞಾನದ ವಿಷಯದ ಅಡಿಯಲ್ಲಿ ಪಠ್ಯಸೂಚಿಯಾಗಿ
ಮುಂದುವರೆಸಲಾಗುವುದು ಎಂದು ಸಿಬಿಎಸ್‌ಇ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) ತಿಳಿಸಿದೆ’ ಎಂದು ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ
ಸತ್ಯಪಾಲ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು. ಶಾಲೆ
ಮತ್ತು ಕಾಲೇಜು ಪಠ್ಯಸೂಚಿಯಿಂದ ಡಾರ್ವಿನ್ ವಿಕಾಸವಾದದ ಸಿದ್ಧಾಂತವನ್ನು ತೆಗೆದುಹಾಕುವ ಯಾವುದೇ ಪ್ರಸ್ತಾಪವನ್ನೂ
ಸಚಿವಾಲಯ ಪರಿಶೀಲಿಸುತ್ತಿಲ್ಲ ಎಂದು ಅವರು ಹೇಳಿದರು.
ಔರಂಗಾಬಾದಿನ ಸಮಾರಂಭ ಒಂದರಲ್ಲಿ ಡಾರ್ವಿನ್ ವಿಕಾಸದ ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು ಎಂದು
ಪ್ರತಿಪಾದಿಸಿ, ಶಾಲೆ ಮತ್ತು ಕಾಲೇಜು ಪಠ್ಯಸೂಚಿಯನ್ನು ಬದಲಾಯಿಸ ಬೇಕಾದ ಅಗತ್ಯವಿದೆ ಎಂದು ಹೇಳುವ
ಮೂಲಕ ಸಚಿವ ಸಿಂಗ್ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ರಾಷ್ಟ್ರದ ಉನ್ನತ ವೈಜ್ಞಾನಿಕ ಸಂಸ್ಥೆಗಳ
ವಿಜ್ಞಾನಿಗಳೂ ಸಚಿವರ ಹೇಳಿಕೆಯನ್ನು ಖಂಡಿಸಿದರೆ, ಮಾನವ ಸಂಪನ್ಮೂಲ ಇಲಾಖೆಯ ಸಚಿವ ಪ್ರಕಾಶ ಜಾವಡೇಕರ್
ಅವರು ಇಂತಹ ಹೇಳಿಕೆಗಳಿಂದ ದೂರ ಉಳಿಯುವಂತೆ ಮತ್ತು ಈ ಕೆಲಸವನ್ನು ವಿಜ್ಞಾನಿಗಳಿಗೆ ಬಿಟ್ಟುಬಿಡುವಂತೆ
ಸಿಂಗ್ ಅವರಿಗೆ ಸಲಹೆ ಮಾಡಿದ್ದರು.
2017: ನವದೆಹಲಿ: ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರವಿದೆ’ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತು. ಹೈಕೋರ್ಟ್ ಒಂದರ ಹಾಲಿ ನ್ಯಾಯಮೂರ್ತಿ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದು ಇದೇ ಮೊದಲು. ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ. ಚಲಮೇಶ್ವರ್, ರಂಜನ್ ಗೊಗೊಯ್, ಮದನ್ ಬಿ. ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರಿದ್ದ ಪೀಠ ಈ ಅಪರೂಪದ ನಿರ್ಧಾರ ತೆಗೆದುಕೊಂಡಿತು. ಪೀಠವು, ‘ನ್ಯಾಯಮೂರ್ತಿ ಕರ್ಣನ್ ಆರೋಪಗಳು ನ್ಯಾಯಾಂಗಕ್ಕೆ ಕಳಂಕ ತರುವಂತಹದ್ದು’ ಎಂದು ಅಭಿಪ್ರಾಯಪಟ್ಟಿತು.
2017: ನವದೆಹಲಿ: ‘ಮನಮೋಹನ್ ಸಿಂಗ್ ಓರ್ವ ಅಸಾಧಾರಣ ಮನುಷ್ಯ. ಅವರು ಪ್ರಧಾನಿಯಾಗಿದ್ದಾಗ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆದರೂ ಅವರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದು ಆಶ್ಚರ್ಯಕರ ಸಂಗತಿ. ಬಹುಶಃ ಬಾತ್ರೂಂ ಒಳಗೆ ರೇನ್ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆ ಸಿಂಗ್ ಅವರಿಗಿಂತ ಚೆನ್ನಾಗಿ ಯಾರಿಗೂ ಸಿದ್ಧಿಸಿಲ್ಲ’ ಇದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಾಗ್ದಾಳಿ. ಫ. 7ರಂದು ಲೋಕಸಭೆಯಲ್ಲಿ ರಾಹುಲ್ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ್ದ ಮೋದಿ ಈದಿನ ರಾಜ್ಯಸಭೆಯಲ್ಲಿ ಸಿಂಗ್ ವಿರುದ್ಧ ಹರಿಹಾಯ್ದರು. ನೋಟು ನಿಷೇಧ ವಿಷಯ ಮುಂದಿಟ್ಟುಕೊಂಡು ಸಂಸತ್ ಕಲಾಪದಲ್ಲಿ ಕೋಲಾಹಲ ಎಬ್ಬಿಸುತ್ತಿದ್ದ ಕಾಂಗ್ರೆಸ್ ನಾಯಕರ ನಡೆಯನ್ನು ಟೀಕಿಸಿದ ಮೋದಿ ನೋಟು ನಿಷೇಧ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧದ ಹೋರಾಟವೇ ಹೊರತು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಲ್ಲ ಎಂದು ಪುನರುಚ್ಚರಿಸಿ ದರು. ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಹರಿಹಾಯ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
2009: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಕಾಳ್ಗಿಚ್ಚಿಗೆ 65 ಮಂದಿ ಬಲಿಯಾದರು. ಆ ಪ್ರದೇಶದಲ್ಲಿ ಸುಮಾರು 640 ಮನೆಗಳು ಸಂಪೂರ್ಣ ನಾಶವಾದವು ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿತು. ಹಿಂದೆ 1983ರಲ್ಲಿ ಸಂಭವಿಸಿದ ಇದೇ ರೀತಿಯ ದುರಂತದಲ್ಲಿ 45ಮಂದಿ ಸಾವನ್ನಪ್ಪಿದ್ದರು.
2009: ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತದ ವಶದಲ್ಲಿರುವ ಉಗ್ರ ಅಜ್ಮಲ್ ಕಸಾಬ್ ಸೇರಿದಂತೆ ಇತರೆ ನಾಲ್ವರು ಪಾಕಿಸ್ಥಾನಿ ಪ್ರಜೆಗಳ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಪಾಕ್ ಸರ್ಕಾರ ಪ್ರಕಟಿಸಿತು. ಇದೇ ವೇಳೆಗೆ, ಮುಂಬೈ ಮೇಲೆ ನಡೆದ ಈ ದಾಳಿಗಳ ಪೂರ್ವ ಯೋಜನೆ ಪಾಕ್ ಅಥವಾ ಭಾರತದಲ್ಲಿ ನಡೆದಿಲ್ಲ. ಬದಲಿಗೆ ಯುರೋಪ್ ಖಂಡದಲ್ಲಿ ನಡೆದಿದೆ ಎಂದು ಪಾಕಿಸ್ಥಾನದ ಗೃಹ ಸಚಿವಾಲಯ ತಿಳಿಸಿರುವುದಾಗಿ ಜಿಯೊ ದೂರದರ್ಶನ ಚಾನೆಲ್ ವರದಿ ಮಾಡಿತು.
2008: 1984ರ ಐತಿಹಾಸಿಕ ಭಾರತ-ರಷ್ಯಾ ಜಂಟಿ ಬಾಹ್ಯಾಕಾಶ ಯಾನದಲ್ಲಿ ಪ್ರಯಾಣಿಸಿದ್ದ ಭಾರತದ ರಾಕೇಶ್ ಶರ್ಮಾ ಹಾಗೂ ರಷ್ಯಾದ ಅಂತೋಲಿ ಬೊರೋಜೊವೊಯ್ ಅವರು 24 ವರ್ಷಗಳ ನಂತರ ಫೆಬ್ರುವರಿ 7ರಂದು ನವದೆಹಲಿಯಲ್ಲಿ ಮುಖಾಮುಖಿಯಾದರು. ರಾಜಧಾನಿಯಲ್ಲಿ ನಡೆದ 18ನೇ ವಿಶ್ವ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಬಾಹ್ಯಾಕಾಶ ಕುರಿತು ಪಾಠ ಹೇಳಲು ಹಾಗೂ ತರಬೇತಿ ನೀಡಲು ಇವರಿಬ್ಬರೂ ದೆಹಲಿಗೆ ಆಗಮಿಸಿದರು. `ಇದೊಂದು ಭಾವನಾತ್ಮಕ ಕ್ಷಣ. 24 ವರ್ಷಗಳಲ್ಲಿ ಅಂತೋಲಿ ಅವರೊಂದಿಗೆ ಯಾವುದೇ ಸಂಪರ್ಕವನ್ನೂ ತಾನು ಇಟ್ಟುಕೊಂಡಿರಲಿಲ್ಲ. ಇಷ್ಟೊಂದು ಸಮಯ ಕಳೆದುಹೋದರೂ ನಮ್ಮಿಬ್ಬರ ನಡುವೆ ಯಾವುದೇ ಬದಲಾವಣೆಯಾಗಿಲ್ಲ' ಎಂದು ಶರ್ಮಾ ಭಾವುಕರಾಗಿ ನುಡಿದರು. `ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ' ಎಂದು ಅಂತೋಲಿ ಹೇಳಿದರು. ಬಾಹ್ಯಾಕಾಶ ಯಾನದ ನಂತರ ಭಾರತಕ್ಕೆ ಬಂದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿಯಾಗಿದ್ದೆ ಎಂದೂ ಅವರು ಸ್ಮರಿಸಿದರು.
2008: ಶಿಕ್ಷಣ ತಜ್ಞ ಪ್ರೊ. ಬಿ. ಷೇಕ್ ಅಲಿ, ವಿಜ್ಞಾನ ಲೇಖಕ ಜಿ.ಟಿ. ನಾರಾಯಣರಾವ್, ಸಾಹಿತಿ ಕೋ. ಚೆನ್ನಬಸಪ್ಪ ಅವರಿಗೆ ಮೈಸೂರಿನಲ್ಲಿ ನಡೆದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ 8ನೇ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿಯನ್ನು ಪ್ರದಾನ ಮಾಡಲಾಯಿತು. ಖ್ಯಾತ ಹಿಂದೂಸ್ಥಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಅನುಪಸ್ಥಿತಿಯಲ್ಲಿ ಅವರಿಗೂ ಗೌರವ ಡಿ.ಲಿಟ್ ಪದವಿಯನ್ನು ದೃಢಪಡಿಸಲಾಯಿತು.
2008: ಖ್ಯಾತ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯಕ ಎಚ್. ಕೆ.ನಾರಾಯಣ (74) ಅವರು ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ನಾರಾಯಣ ಅವರು ತಮ್ಮ ಆರನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ತಳೆದರು. 1953ರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದ ಅವರು 1954ರಲ್ಲಿ ಆಕಾಶವಾಣಿ ಕೇಂದ್ರದಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. 1962 ರಲ್ಲಿ ಕಥಕ್ ನೃತ್ಯ ಕಲಾವಿದೆ ಕಾಂತಾ ಅವರನ್ನು ವಿವಾಹವಾದರು. ಅವರಿಬ್ಬರ ಪುತ್ರಿಯರಾದ ಮಂಜು ಮತ್ತು ಚಂದ್ರಿಕಾ ಅವರು ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 1984-85ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, 1987-88ರ ರಾಜ್ಯೋತ್ಸವ ಪ್ರಶಸ್ತಿ ಮತ್ತು 2000ರ ಸಂತ ಶಿಶುನಾಳ ಶರೀಫ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
2008: ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಕಡಲತೀರದಲ್ಲಿ ಆಮೆಯೊಂದಕ್ಕೆ ಚಲನವಲನವನ್ನು ಗ್ರಹಿಸುವ ಉಪಗ್ರಹ ಉಪಕರಣವನ್ನು ಅಳವಡಿಸಿ ಜುಲೈ 25, 2003ರಲ್ಲಿ ಸಮುದ್ರಕ್ಕೆ ಬಿಡಲಾಗಿತ್ತು. ಈ ಆಮೆಯು ಆಹಾರವನ್ನು ಅರಸುತ್ತಾ 20,000 ಕಿ.ಮೀ. ಕ್ರಮಿಸಿ ಈದಿನ ಅಮೆರಿಕವನ್ನು ತಲುಪಿತು. ಈ ಸಂಶೋಧನೆಯಿಂದ ಅಳಿವಿನಂಚಿನಲ್ಲಿ ಇರುವ ಆಮೆಗಳನ್ನು ರಕ್ಷಿಸುವ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಹೆಚ್ಚಿನ ಒತ್ತು ಸಿಗಲು ಸಾಧ್ಯ ಎಂಬುದು ಸಂಶೋಧಕರ ನಂಬಿಕೆ.
2008: ಸಿಮೆಂಟ್ ಕಾರ್ಖಾನೆ ಸೇರಿದಂತೆ ಒಟ್ಟು ಐದು ಖಾಸಗಿ ಕಂಪೆನಿಗಳಿಗೆ ಸುಮಾರು 1,344 ಎಕರೆ ಕೃಷಿ ಭೂಮಿ ಖರೀದಿಸಲು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದ ಕಾರ್ಯಕಾರಿ ಸಮಿತಿ ಅನುಮತಿ ನೀಡಿತು. ಭೂ ಸುಧಾರಣಾ ಕಾಯ್ದೆಯ ವಿಧಿಗಳ, ಕಂಪೆನಿಗಳಿಗೆ ರೈತರಿಂದ ನೇರವಾಗಿ ಭೂಮಿ ಖರೀದಿಸಲು ಅವಕಾಶ ಇದ್ದು, ಅದರ ಪ್ರಕಾರ ಈ ಒಪ್ಪಿಗೆ ನೀಡಲಾಗಿದೆ ಎಂದು ಕಾರ್ಯಕಾರಿ ಸಮಿತಿಯ ಸಭೆ ನಂತರ ರಾಜ್ಯಪಾಲರ ಸಲಹೆಗಾರ ಎಸ್. ಕೃಷ್ಣಕುಮಾರ್ ಪ್ರಕಟಿಸಿದರು. ಇದರಲ್ಲಿ ಸರ್ಕಾರ ಭೂಸ್ವಾಧೀನ ಮಾಡುವುದಿಲ್ಲ, ಬದಲಿಗೆ ಕಂಪೆನಿಯೇ ನೇರವಾಗಿ ರೈತರಿಂದ ಜಮೀನು ಖರೀದಿಸುವುದು ಅವರು ವಿವರಿಸಿದರು.
2008: ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಕ್ಯಾಸಲ್ ರಾಕ್ ಮತ್ತು ಗೋವಾದ ದೂಧಸಾಗರ ನಡುವಿನ ಒಂಬತ್ತು ರೈಲ್ವೆ ಸುರಂಗ ಮಾರ್ಗಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಶಂಕಿತ ಉಗ್ರಗಾಮಿ ಮೊಹಮ್ಮದ್ ಆಸೀಫ್ ಒಪ್ಪಿಕೊಂಡ. ದೂಧಸಾಗರ, ಕ್ಯಾಸಲ್ ರಾಕ್ ಹಾಗೂ ಉಳವಿ ಪ್ರದೇಶದಲ್ಲೂ ಈತ ಕಾರ್ಯಾಚರಣೆ ನಡೆಸಿದ್ದ ಎಂಬ ಮಾಹಿತಿಯ ಆಧಾರದಲ್ಲಿ ಸಿಓಡಿ ಪೊಲೀಸರು ಈ ಪ್ರದೇಶಕ್ಕೆ ತೆರಳಿ ಉಗ್ರರು ಉಳಿಸಿರಬಹುದಾದ ಸಾಕ್ಷ್ಯಗಳಿಗಾಗಿ ಜಾಲಾಡಿದರು. ಸುರಂಗ ಮಾರ್ಗವನ್ನು ಸ್ಫೋಟಿಸಲು ಅದ್ನಾನ್ ನೇತೃತ್ವದಲ್ಲಿ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಅಸೀಫ್ ಬಹಿರಂಗ ಪಡಿಸಿದ್ದಾನೆ ಎಂದು ಸಿಓಡಿ ಮೂಲಗಳು ಹೇಳಿದವು.
2008: ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಜಿ.ಎಸ್. ಭಟ್ ಅವರನ್ನು ಬೀದರಿನಲ್ಲಿರುವ ಕರ್ನಾಟಕ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು.
2008: ಅರಬ್ಬೀ ಸಮುದ್ರದಲ್ಲಿ ಜಾಸ್ತಿಯಾದ ಬಿರುಗಾಳಿಯ ತೀವ್ರತೆ ಪರಿಣಾಮವಾಗಿ ಕಾರವಾರ ಸಮೀಪದ ದೇವಭಾಗ ಕರಾವಳಿ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಆರು ಜನ ಮೀನುಗಾರರ ಪೈಕಿ ಮೂವರು ಮೀನುಗಾರರು ಸಮುದ್ರಪಾಲಾದ ಘಟನೆ ಸಂಭವಿಸಿತು. ಸಮುದ್ರಪಾಲಾದ ಮೀನುಗಾರರನ್ನು ಸತೀಶ್ ಮಹಾಬಲೇಶ್ವರ ಕಿರ್ಲೋಸ್ಕರ್ (40), ಪ್ರವೀಣ ಪ್ರೇಮನಾಥ್ ಕಿರ್ಲೋಸ್ಕರ್ (24) ಹಾಗೂ ಪ್ರವೇಶ ರಾಮದಾಸ್ ಕೇಳಸ್ಕರ್(28) ಎಂದು ಗುರುತಿಸಲಾಯಿತು. ಅವರನ್ನು ಒಯ್ಯುತ್ತಿದ್ದ `ನರಸಿಂಹ ಪ್ರಸಾದ್' ಎಂಬ ಹೆಸರಿನ ದೋಣಿಯೂ ಸಮುದ್ರದಲ್ಲಿ ಮುಳುಗಿತು. ಸಮುದ್ರದಲ್ಲಿ ಈಜುತ್ತಾ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಇತರ ಮೂವರು ಮೀನುಗಾರರಾದ ಗೌರೀಶ್ ಅರುಣ ಕಿರ್ಲೋಸ್ಕರ್, ಹರೀಶ್ ದತ್ತಾ ಗಿರಬ್, ಮಂಗೇಶ್ ಪ್ರಕಾಶ್ ಕಿರ್ಲೋಸ್ಕರ್ ಅವರನ್ನು ಮಲ್ಪೆಯ 'ಮಕರಂದ' ಹೆಸರಿನ ದೋಣಿಯ ಸಿಬ್ಬಂದಿ ಗಮನಿಸಿ ರಕ್ಷಿಸಿದರು.
2008: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತಮಗಿರುವ ಕ್ಷಮಾದಾನದ ಅಧಿಕಾರವನ್ನು ಸ್ವಚ್ಛಂದವಾಗಿ, ಅಸಂವಿಧಾನಿಕವಾಗಿ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯ ಪೀಠವು ಆಂಧ್ರಪ್ರದೇಶ ಸರ್ಕಾರದ ಕೈದಿಗಳ ಬಿಡುಗಡೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ನಿರ್ದೇಶನ ನೀಡಿತು. 2007ರಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಲವು ಕೈದಿಗಳಿಗೆ ಆಂಧ್ರಪ್ರದೇಶ ರಾಜ್ಯಪಾಲರು ಕ್ಷಮಾದಾನ ನೀಡಿದ್ದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು.
2007: ಟಾಟಾ ಉದ್ಯಮ ಸಮೂಹದ ಒಡೆಯ, 69 ವರ್ಷದ ರತನ್ ಟಾಟಾ ಅವರು ಸ್ವತಃ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ಎಫ್-16 ಯುದ್ಧ ವಿಮಾನವನ್ನು ಚಾಲನೆ ಮಾಡಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ -2007 ಉತ್ಸವದಲ್ಲಿ ಹೊಸ ದಾಖಲೆ ಬರೆದರು. ಈ ಮೂಲಕ ಎಫ್- 16 ಚಾಲನೆ ಮಾಡಿದ ಪ್ರಪ್ರಥಮ ಭಾರತೀಯ ಪ್ರಜೆ ಎಂಬ ಕೀರ್ತಿಗೆ ಅವರು ಭಾಜನರಾದರು. ಟಾಟಾ ಅವರು ಟೆಸ್ಟ್ ಪೈಲಟ್ ಪಾಲ್ ಹಟೆನ್ ಡಾರ್ಫ್ ಜೊತೆಗೆ ಇಬ್ಬರೇ ಕುಳಿತುಕೊಳ್ಳಬಹುದಾದ ಲಾಕ್ಹೀಡ್ ಮಾರ್ಟಿನ್ ಕಂಪೆನಿ ಯುದ್ಧ ವಿಮಾನದಲ್ಲಿ ಭೂಮಿಯಿಂದ 18,000 ಅಡಿ ಎತ್ತರದಲ್ಲಿ ಗರಿಷ್ಠ 1625 ಕಿ.ಮೀ. ವೇಗದೊಂದಿಗೆ ಚಾಲನೆ ಮಾಡಿದರು. ಈ ಎಫ್-16 ವಿಮಾನವನ್ನು ಅಮೆರಿಕದ ಪೈಲಟ್ ಗಳು ಫಾಲ್ಕನ್ (ಗಿಡುಗ) ಎಂದು ಕರೆಯುತ್ತಾರೆ. ಇದು ಏಕೈಕ ಬೃಹತ್ ಟರ್ಬೊಜೆಟ್ ಎಂಜಿನ್ ಹೊಂದಿದ್ದು, ವಿಮಾನದ ಒಟ್ಟು ತೂಕಕ್ಕಿಂತ ಹಲವಾರು ಪಟ್ಟು ಹೆಚ್ಚು ತಳ್ಳು ಸಾಮರ್ಥ್ಯ (ಥ್ರಸ್ಟ್) ಪಡೆದಿದೆ. ಹೀಗಾಗಿ ಈ ವಿಮಾನ ನೆಲಕ್ಕೆ ಲಂಬವಾಗಿ ರಾಕೆಟಿನಂತೆ ಮೇಲೇರಬಲ್ಲುದು ಮತ್ತು 16,875 ಕೆ.ಜಿ. ತೂಕದೊಂದಿಗೆ ಸಲೀಸಾಗಿ ಹಾರಬಲ್ಲುದು.
2007: `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಿಂದಾಗಿ ಇಂಗ್ಲೆಂಡಿನಲ್ಲಿ ಮನೆಮಾತಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಭಾರತದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಲು `ಶಿಲ್ಪಾಶೆಟ್ಟಿ ಪ್ರತಿಷ್ಠಾನ' ಸ್ಥಾಪಿಸುವುದಾಗಿ ಲಂಡನ್ನಿನಲ್ಲಿ ಪ್ರಕಟಿಸಿದರು. ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿ ಮಾಡಿದ ಬಳಿಕ ಶಿಲ್ಪಾಶೆಟ್ಟಿ ಈ ವಿಚಾರ ಬಹಿರಂಗಪಡಿಸಿದರು.
2007: ವೆಸ್ಟ್ ಇಂಡೀಸ್ನ ಕ್ರಿಕೆಟಿಗ ಮಾರ್ಲೊನ್ ಸ್ಯಾಮ್ಯುಯೆಲ್ ಅವರು ಬುಕ್ಕಿಯೊಂದಿಗೆ ದೂರವಾಣಿಯಲ್ಲಿ ನಡೆಸಿದ ಮಾತುಕತೆಗೆ ಸಂಬಂಧಿಸಿದಂತೆ ನಾಗಪುರ ಪೊಲೀಸರು ನೀಡಿರುವ ವರದಿ ತಮಗೆ ತಲುಪಿರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ತಿಳಿಸಿತು.
2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿತು.
2006: ರಿಲಯನ್ಸ್ ಮಾಲೀಕತ್ವದ ಕುರಿತು ಇಬ್ಬರೂ ಸಹೋದರರ ನಡುವಣ ವಿವಾದ ಬಗೆ ಹರಿಸುವ ಉದ್ದೇಶದಿಂದ ಮುಖೇಶ್ ಅಂಬಾನಿ ಗುಂಪು ಬಿಟ್ಟುಕೊಟ್ಟಿದ್ದ ನಾಲ್ಕು ಕಂಪೆನಿಗಳ ಅಧ್ಯಕ್ಷರಾಗಿ ಅನಿಲ್ ಅಂಬಾನಿ ಅಧಿಕಾರ ವಹಿಸಿಕೊಂಡರು.
2006: ಖ್ಯಾತ ಪಿಟೀಲುವಾದಕ ದಿವಂಗತ ಪಿಟೀಲು ಕೃಷ್ಣರಾವ್ ಅವರ ಪುತ್ರ ಬಿ. ವಾಸುದೇವರಾವ್ (82) ಮಂಗಳೂರಿನಲ್ಲಿ ನಿಧನರಾದರು. ಐದು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿರುವ ರಾವ್ ಅವರ ಶಿಷ್ಯರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಖ್ಯಾತಿ ಪಡೆದಿದ್ದಾರೆ.
2006: ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ 1,025 ವರ್ಷಗಳಿಂದ ತಲೆ ಎತ್ತಿ ನಿಂತಿರುವ ಭಗವಾನ್ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮೊದಲ ಅಭಿಷೇಕ ಸಹಸ್ರಾರು ಮಂದಿ ಭಕ್ತ ಸಮೂಹದ ನಡುವೆ ಆರಂಭಗೊಂಡಿತು. ಮೊದಲ ಕಲಶದ ಅಭಿಷೇಕ ಭಾಗ್ಯ ರಾಜಸ್ಥಾನ ರಾಜ್ಯದ ಅಜಮೇರ್ ಬಳಿಯ ಕಿಷನ್ ಗಢ ಊರಿನ ಅಶೋಕ ಪಾಟ್ನಿ ಅವರದಾಯಿತು. ಈ ಕಲಶವನ್ನು ಅವರು ಹರಾಜಿನಲ್ಲಿ 1.08 ಕೋಟಿ ರೂಪಾಯಿ ನೀಡಿ ಖರೀದಿಸಿದರು.
2006: ಜನಪ್ರಿಯ ಟಿವಿ ಧಾರಾವಾಹಿ ಕೊಹಿನೂರ್ ಖ್ಯಾತಿಯ ನಟಿ ಕುಲ್ಜಿತ್ ರಾಂಧವಾ (30) ಜುಹು ಪ್ರದೇಶದ ತಮ್ಮ ಅಪಾರ್ಟ್ಮೆಂಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.
2006: ಬೆಂಗಳೂರು ಮೂಲದ ಗುರುಟೀಕ್ ಇನ್ವೆಸ್ಟ್ಮೆಂಟ್ಸ್ (ಮೈಸೂರು) ಸಂಸ್ಥೆಯನ್ನು ಮುಚ್ಚುವಂತೆ ಸೆಬಿ ಆದೇಶ ನೀಡಿತು.
1999: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕೃಷ್ಣಸ್ವಾಮಿ ಸುಂದರ್ ಜಿ ನವದೆಹಲಿಯಲ್ಲಿ ತಮ್ಮ 69ನೇ ವಯಸ್ಸಿನಲ್ಲಿ ಮೃತರಾದರು.
1994: ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕೆಯ ಹಷನ್ ತಿಲಕರತ್ನೆ ಅವರ ವಿಕೆಟ್ ಉರುಳಿಸುವ ಮೂಲಕ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್ ಟೆಸ್ಟ್ ಕ್ರಿಕೆಟಿನಲ್ಲಿ 431 ವಿಕೆಟ್ ಗಳಿಸಿ ದಾಖಲೆ ಸ್ಥಾಪಿಸಿದ್ದ ಸರ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದರು.
1972: ಕಲಾವಿದ ಸೈಯದ್ ಅಸಫ್ ಅಲಿ ಜನನ.
1963: ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಅಜರುದ್ದೀನ್ ಹುಟ್ಟಿದ ದಿನ. ಏಕದಿನ ಕ್ರಿಕೆಟಿನಲ್ಲಿ 9000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
1952: ಕಲಾವಿದ ಶಿವರಾಮು ಕೆ. ಜನನ.
1934: ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಎಚ್. ಆರ್. ಲೀಲಾವತಿ ಅವರು ಎಚ್. ರಾಮಣ್ಣ- ಜಯಲಕ್ಷ್ಮಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1924: ಭಾರತೀಯ ಉದ್ಯಮಿ ವಿಠ್ಠಲ್ ಮಲ್ಯ (1924-1983) ಹುಟ್ಟಿದರು.
1921: ರಾಜಾಜ್ಞೆ ಮೂಲಕ ಭಾರತದಲ್ಲಿ `ಚೇಂಬರ್ ಆಫ್ ಪ್ರಿನ್ಸಸ್' (ರಾಜಕುಮಾರರ ಒಕ್ಕೂಟ) ಸ್ಥಾಪಿಸಲಾಯಿತು. ವೈಸ್ ರಾಯ್ ಅಧ್ಯಕ್ಷರಾಗಿದ್ದ ಈ ಒಕ್ಕೂಟದಲ್ಲಿ 120 ಸದಸ್ಯರಿದ್ದರು. ಸದಸ್ಯರ ಪೈಕಿ 108 ಮಂದಿ ಸಾಮಂತ ರಾಜರು ಹಾಗೂ 12 ಮಂದಿ 127 ಸಾಮಂತೇತರ ರಾಜ್ಯಗಳಿಂದ ಚುನಾಯಿತರಾದ ಪ್ರತಿನಿಧಿಗಳಾಗಿದ್ದರು.
1920: `ಸಿಹಿ ಹುಡುಗಿ' (ಸ್ವೀಟರ್ ಗರ್ಲ್) ಎಂದೇ ಖ್ಯಾತಳಾಗಿದ್ದ ಅಮೆರಿಕಾದ ಚಿತ್ರನಟಿ ಲಾರಾ ಟರ್ನರ್ (1920-1995) ಹುಟ್ಟಿದ ದಿನ.
1897: ಭಾರತದ ರಾಷ್ಟ್ರಪತಿಯಾಗಿದ್ದ ಝಕೀರ್ ಹುಸೇನ್ (1897-1969) ಹುಟ್ಟಿದ ದಿನ.
1872: ಅಂಡಮಾನ್ ದ್ವೀಪದಲ್ಲಿ ಕೈದಿಯೊಬ್ಬನಿಂದ ಭಾರತದ ಗವರ್ನರ್ ಜನರಲ್ ಮೇಯೋ ಹತ್ಯೆ ನಡೆಯಿತು.
1665: ಬ್ರಿಟಿಷರು ಬಾಂಬೆಯನ್ನು (ಈಗಿನ ಮುಂಬೈ) ತಮ್ಮ ವಶಕ್ಕೆ ತೆಗೆದುಕೊಂಡರು. ಬಾಂಬೆ ಮತ್ತು ಸಮೀಪದ ಇತರ ಆರು ದ್ವೀಪಗಳನ್ನು ತನ್ನ ಪತ್ನಿ ಬ್ರಗಾಂಝಾದ ಕ್ಯಾಥರೀನಳಿಂದ ಬಂದ ವರದಕ್ಷಿಣೆಯ ಭಾಗವಾಗಿ ಎರಡನೇ ಚಾರ್ಲ್ಸ್ಗೆ ನೀಡಲಾಯಿತು. 1668ರಲ್ಲಿ ಅದನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರಿಸಲಾಯಿತು.
No comments:
Post a Comment