ನಾನು ಮೆಚ್ಚಿದ ವಾಟ್ಸಪ್

Tuesday, February 26, 2019

ಪುಲ್ವಾಮ ದಾಳಿಗೆ ಭಾರತದ ಪ್ರತೀಕಾರ, ಜೈಶೆ ನೆಲೆಗಳು ಧ್ವಂಸ

ಪುಲ್ವಾಮ ದಾಳಿಗೆ ಭಾರತದ ಪ್ರತೀಕಾರ, ಜೈಶೆ ನೆಲೆಗಳು ಧ್ವಂಸ
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ 14ರಂದು 40 ಮಂದಿ ಸಿಆರ್ ಪಿಎಫ್ ಯೋಧರನ್ನು ಬಲಿಪಡೆದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಆತ್ಮಹತ್ಯಾ ದಾಳಿಗೆ ಪ್ರತೀಕಾರವಾಗಿ 2019 ಫೆಬ್ರುವರಿ 26ರ ಮಂಗಳವಾರ ಪಾಕಿಸ್ತಾನಕ್ಕೆ ನುಗ್ಗಿ ‘ಸರ್ಜಿಕಲ್ ದಾಳಿ’ ನಡೆಸಿದ ಭಾರತ ಪಾಕ್ ನೆಲದಲ್ಲಿನ ಮೂರು ಭಯೋತ್ಪಾದಕ ನೆಲೆಗಳನ್ನು ಪುಡಿಗಟ್ಟಿದೆ. ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ 200-300 ಮಂದಿ ಹತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಮಂಗಳವಾರ ನಸುಕಿನ 3.30ರ ವೇಳೆಯಲ್ಲಿ  ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದ ಒಳಕ್ಕೆ ನುಗ್ಗಿದ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು  ಬರೋಬ್ಬರಿ 1000 ಕಿ.ಗ್ರಾಂ ತೂಕದ ಬಾಂಬುಗಳನ್ನು  ಉದುರಿಸಿ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 200-300 ಭಯೋತ್ಪಾದಕರು ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.


ಪಾಕಿಸ್ತಾನದ ಒಳಕ್ಕೆ ಸುಮಾರು 24 ಕಿಲೋ ಮೀಟರ್ ಸಾಗಿದ ಭಾರತದ  12 ಮಿರಾಜ್ 2000 ಯುದ್ಧ ವಿಮಾನಗಳು ಬಾಲಾಕೋಟ್, ಚಾಕೋಥಿ ಮತ್ತು ಮುಜಾಫ್ಫರಾಬಾದ್ ರಂಗಗಳಲ್ಲಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದವು. 21 ನಿಮಿಷಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ವಿಮಾನಗಳು ಯಾವುದೇ ಅಡೆತಡೆಯಿಲ್ಲದೆ ಭಾರತಕ್ಕೆ ವಾಪಸಾದವು.


ಭಾರತೀಯ ಯೋಧರನ್ನು ಬಲಿಪಡೆದ ಪಾಕ್ ಪ್ರೇರಿತ ಭಯೋತ್ಪಾದಕರನ್ನು ಅವರ ನೆಲೆಯಲ್ಲೇ ಹೆಡೆಮುರಿ ಕಟ್ಟಿ ಹುಟ್ಟಗಿಸುವ ಮೂಲಕ ಭಾರತ ಕೇವಲ 12 ದಿನಗಳಲ್ಲಿ ಪ್ರತೀಕಾರ ತೀರಿಸಿ ಹುತಾತ್ಮ ಯೋಧರಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸಿ ಆತ್ಮಗಳಿಗೆ  ಶಾಂತಿಯನ್ನು ತಂದು ಕೊಟ್ಟಿದೆ.


ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಸಂಪುಟ ಸಮಿತಿಯ ತುರ್ತು ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:



No comments:

Post a Comment