ನಾನು ಮೆಚ್ಚಿದ ವಾಟ್ಸಪ್

Thursday, February 14, 2019

ಇಂದಿನ ಇತಿಹಾಸ History Today ಫೆಬ್ರುವರಿ 14

ಇಂದಿನ ಇತಿಹಾಸ History Today ಫೆಬ್ರುವರಿ 14
2019: ನವದೆಹಲಿ/ ಶ್ರೀನಗರ: ಪಾಕಿಸ್ತಾನದ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ೨೦೦೧ರಿಂದೀಚೆಗೆ ನಡೆಸಿದ ದಾಳಿಗಳಲ್ಲೇ ಅತ್ಯಂತ ಭೀಕರ ಸ್ವರೂಪದ ದಾಳಿಯನ್ನು  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆಸಿದ್ದು, ಉಗ್ರ ಅಟ್ಟಹಾಸದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ೪೦ ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರು ಹುತಾತ್ಮರಾಗಿ, ೨೦ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು. ಸಿಆರ್ಪಿಎಫ್ ಯೋಧರನ್ನು ಒಯ್ಯುತ್ತಿದ್ದ ಎರಡು ವಾಹನಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಯಿತು.  ಯೋಧರು ಪಯಣಿಸುತ್ತಿದ್ದ ಬಸ್ಸುಗಳಲ್ಲಿ ಒಂದಕ್ಕೆ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ತಂದು ಗುದ್ದುವ ಮೂಲಕ ಭೀಕರ ದಾಳಿಯನ್ನು ನಡೆಸಲಾಯಿತು.  ಪಾಕಿಸ್ತಾನದ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ವರ್ಷದ ಹಿಂದೆ ಸಂಘಟನೆಗೆ ಸೇರಿದ್ದ ಭಯೋತ್ಪಾದಕ ಸುಮಾರು ೩೫೦ ಕಿಗ್ರಾಂಗಳಿಂತಲೂ ಹೆಚ್ಚಿನ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ವೇಗವಾಗಿ ತಂದು ಯೋಧರು ಪಯಣಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತು. ದಾಳಿಯಲ್ಲಿ ಧ್ವಂಸಗೊಂಡಿರುವ ಬಸ್ಸು ಸಿಆರ್ ಪಿಎಫ್ ೭೬ನೇ ಬೆಟಾಲಿಯನ್ಗೆ ಸೇರಿದ್ದು ಎಂದು ವರದಿ ತಿಳಿಸಿತು. ಬಸ್ಸಿನ ಪಯಣಿಗರ ಪಟ್ಟಿಯ ಪ್ರಕಾರ ಒಂದು ಬಸ್ಸಿನಲ್ಲಿ ೩೯ ಮಂದಿ ಇದ್ದರು ಎಂದು ಹೇಳಲಾಯಿತು.  ಸುಧಾರಿತ ಸ್ಫೋಟಕ (ಐಇಡಿ) ಸಾಧನ ಬಳಸಿ ನಡೆಸಲಾದ ಸ್ಫೋಟದ ತೀವ್ರತೆಗೆ ಬಸ್ಸು ಛಿದ್ರಗೊಂಡು ಕಬ್ಬಿಣದ ರಾಶಿಯಾಗಿ ಬಿದ್ದಿದ್ದು, ಮೃತರ ಭಗ್ನಾವಶೇಷಗಳು ಪ್ರದೇಶದಲ್ಲೆಲ್ಲ ಬಿದ್ದವು ಎಂದು ವರದಿ ಹೇಳಿತು.  ‘ಯೋಧರ ವಾಹನಗಳ ಸಾಲಿನಲ್ಲಿ ೭೦ ಬೆಂಗಾವಲು ವಾಹನಗಳಿದ್ದವು. ಅವುಗಳ ಪೈಕಿ ಒಂದು ವಾಹನ ದಾಳಿಗೆ ತುತಾಯಿತು.. ವಾಹನಗಳು ಜಮ್ಮುವಿನಿಂದ ಶ್ರೀನಗರದತ್ತ ಹೊರಟಿದ್ದವು ಎಂದು ಸಿಆರ್ಪಿಎಫ್ (ಕಾರ್ಯಾಚರಣೆ) ಇನ್ಸ್ಪೆಕ್ಟರ್ ಜನರಲ್ ಝುಲ್ಪಿಕರ್ ಹಸನ್ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಯೋತ್ಪಾದಕ ದಾಳಿಯ ತನಿಖೆ ಆರಂಭಿಸಿದ್ದಾರೆ ಎಂದು ಅವರು ನುಡಿದರು.   ‘೭೦ ಬೆಂಗಾವಲು ವಾಹನಗಳಲ್ಲಿ ಸುಮಾರು ೨೫೦೦ ಸಿಬ್ಬಂದಿ ಇದ್ದರು ಎಂದು ಸಿಆರ್ಪಿಎಫ್ ಮಹಾನಿರ್ದೇಶಕ ಆರ್ ಆರ್ ಭಟ್ನಾಗರ್ ಅವರನ್ನು ಉಲ್ಲೇಖಿಸಿ ಇನ್ನೊಂದು ಸುದ್ದಿ ಸಂಸ್ಥೆ ವರದಿ ಮಾಡಿತು.  ‘ಪುಲ್ವಾಮದಲ್ಲಿ ಫಿಯಾದೀನ್ ದಾಳಿ ನಡೆಸಲಾಗಿದ್ದು, ಇದನ್ನು ಸ್ಥಳೀಯ ಯುವಕನೊಬ್ಬ ನಡೆಸಿದ್ದಾನೆ ಎಂದು ದಾಳಿಯ ಹೊಣೆಗಾರಿಕೆ ತನ್ನದು ಎಂಬುದಾಗಿ ಉಗ್ರಗಾಮಿ ಸಂಘಟನೆ ಜೈಶ್--ಮೊಹಮ್ಮದ್ ಹೇಳಿಕೆ ತಿಳಿಸಿದೆ. ದಾಳಿ ನಡೆಸಿದ ಭಯೋತ್ಪಾದಕನನ್ನು ಪುಲ್ವಾಮದ ಕಕಪೋರದ ಅದಿಲ್ ಅಹ್ಮದ್ ಎಂಬುದಾಗಿ ಪೊಲೀಸರು ಗುರುತಿಸಿದ್ದಾರೆ. ಈತ ೨೦೧೮ರಲ್ಲಿ ಜೈಶ್ --ಮೊಹಮ್ಮದ್ ಸಂಘಟನೆಗೆ ಸೇರ್ಪಡೆಯಾಗಿದ್ದ ಅಧಿಕಾರಿಗಳನ್ನು ಉಲ್ಲೇಖಿಸಿದ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಖಂಡನೆ: ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದರು. ‘ಪುಲ್ವಾಮದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ನಡೆದಿರುವ ದಾಳಿ ತುಚ್ಛವಾದುದು. ಪೈಶಾಚಿಕ ದಾಳಿಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ನಮ್ಮ ಪರಾಕ್ರಮಶಾಲಿ ಭದ್ರತಾ ಸಿಬ್ಬಂದಿಯ ಬಲಿದಾನವು ವ್ಯರ್ಥವಾಗಬಾರದು. ಕೆಚ್ಚೆದೆಯ ಹುತಾತ್ಮರ ಕುಟುಂಬಗಳ ಜೊತೆಗೆ ಇಡೀ ರಾಷ್ಟ್ರವೇ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಲಿ ಎಂದು ಹಾರೈಸುವೆ ಎಂಬುದಾಗಿ ಪ್ರಧಾನಿ ಮೋದಿ ಹೇಳಿದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿಯವರು ಗೃಹಸಚಿವ ರಾಜನಾಥ್ ಸಿಂಗ್ ಮತ್ತು ಇತರ ಉನ್ನತ ಅಧಿಕಾರಿಗಳ ಜೊತೆ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ರಾಜನಾಥ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ಸಿಆರ್ ಪಿಎಫ್ ಭಟ್ನಾಗರ್ ಜೊತೆ ದಾಳಿ ಬಗ್ಗೆ ಮಾತನಾಡಿದರು. ಶುಕ್ರವಾರ ಅವರು ಶ್ರೀನಗರಕ್ಕೆ ಭೇಟಿ ನೀಡುವರು.
ಹೇಡಿ ದಾಳಿ- ರಾಹುಲ್: ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಹೇಡಿ  ದಾಳಿ ಎಂಬುದಾಗಿ ಬಣ್ಣಿಸಿದರು. ’ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಹೇಡಿ ದಾಳಿಯಿಂದ ನಾನು ಅತ್ಯಂತ ವ್ಯಾಕುಲಗೊಂಡಿದ್ದೇನೆ. ಹುತಾತ್ಮ ಯೋಧರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತ ಪಡಿಸುತ್ತೇನೆ ಮತ್ತು  ಗಾಯಾಳುಗಳು ಶೀಘ್ರ ಚೇತರಿಸಲಿ ಎಂದು ಹಾರೈಸುತ್ತೇನೆ ಎಂದು ರಾಹುಲ್ ಟ್ವೀಟ್ ಮಾಡಿದರು.  ‘ ಭಯೋತ್ಪಾದಕ ದಾಳಿಗಾಗಿ ಭಯೋತ್ಪಾದಕರಿಗೆ ಮರೆಯಲಾಗದ ಪಾಠ ಕಲಿಸಲಾಗುವುದು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ  ಭರವಸೆ ನೀಡಿದರು. ’ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಮೇಲೆ ನಡೆದಿರುವ ದಾಳಿಯು ಹೇಡಿತನ ಹಾಗೂ ಖಂಡನೀಯ ಕೃತ್ಯ. ರಾಷ್ಟ್ರವು ಹುತಾತ್ಮರಿಗೆ ನಮಿಸುತ್ತದೆ ಮತ್ತು ಹುತಾತ್ಮರ ಕುಟುಂಬಗಳ ಜೊತೆಗೆ ನಿಲ್ಲುತ್ತದೆ. ಗಾಯಾಳುಗಳು ಶೀಘ್ರ ಚೇತರಿಸಲಿ ಎಂದು ಹಾರೈಸುವೆ. ಭಯೋತ್ಪಾದಕರಿಗೆ ಅವರ ಹೀನ ಕೃತ್ಯಕ್ಕಾಗಿ ಮರೆಯಲಾಗದ ಪಾಠ ಕಲಿಸಲಾಗುವುದು ಎಂದು ಜೇಟ್ಲಿ ಹೇಳಿದರು.  ಗುಂಡು ಹಾರಾಟದ ಸದ್ದು: ಭಯೋತ್ಪಾದಕ ದಾಳಿಯು ಜಮ್ಮು -ಶ್ರೀನಗರ ಹೆದ್ದಾರಿಯಿಂದ ಸುಮಾರು೩೦ ಕಿಮೀ ದೂರದ ಲೆತ್ಪೋರಾದಲ್ಲಿ ಮಧ್ಯಾಹ್ನ .೧೫ರ ಸುಮಾರಿಗೆ ಘಟಿಸಿದೆ. ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ  ದಾಳಿ ನಡೆಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು ದೃಢ ಪಡಿಸಿದ್ದಾರೆದಾಳಿಯ ಬೆನ್ನಲ್ಲೇ ಪುಲ್ವಾಮ ಜಿಲ್ಲೆಯಲ್ಲಿನ ಭದ್ರತಾ ಪಡೆಗಳತ್ತ ಗುಂಡುಗಳ ಹಾರಾಟವೂ ನಡೆಯಿತು ಎಂದು ವರದಿಗಳು ಹೇಳಿದವು. ಸುಧಾರಿತ ಸ್ಫೋಟಕ ಸಾಧನವನ್ನು ವಾಹನದಲ್ಲಿ ಇರಿಸಲಾಗಿತ್ತು. ವಾಹನವನ್ನು ಸಿಅರ್ಪಿಎಫ್ ಯೋಧರು, ಜಮ್ಮು  ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸೇನೆಯ ಕಾವಲು ಇರುವ  ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿತ್ತು. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಅರಂಭಿಸಿದರು. ಗಡಿಯಾಚೆಯ ಶಕ್ತಿಗಳು ದಾಳಿಗೆ ಕಾರಣ ಎಂಬುದಾಗಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ದೂರಿರುವುದಾಗಿ ಜಮ್ಮು ಮತ್ತು ಕಾಶ್ಮೀರ ರಾಜಭವನದ ಪಿಅರ್ ಅವರನ್ನು ಉಲ್ಲೇಖಿಸಿದ ವರದಿ ತಿಳಿಸಿತು.ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಡಾಯಕ್ಕೆ ಕಾರಣವಾಗಿರುವ ಶಕ್ತಿಗಳು ಹತಾಶ ಹಾಗೂ ಭ್ರಮನಿರಸನಗೊಂಡಿದ್ದು, ತಮ್ಮ ಅಸ್ತಿತ್ವ ಸಾಬೀತುಪಡಿಸಲು ಬಯಸಿವೆ. ಶಕ್ತಿಗಳಿಗೆ ಗಡಿಯಾಚೆಯ ಜೈಶ್--ಮೊಹಮ್ಮದ್ ಸಂಘಟನೆ ಮಾರ್ಗದರ್ಶನ ಮಾಡಿರುವಂತಿದೆ ಎಂದು ಮಲಿಕ್ ಹೇಳಿದರು. ಸರ್ಕಾರದ ಮೇಲೆ ಕಾಂಗ್ರೆಸ್ ದಾಳಿ: ಭಯೋತ್ಪಾದಕ ದಾಳಿಯ ಬೆನ್ನಲ್ಲೆ ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ ಸರ್ಕಾರದ ಮೇಲೆ ತನ್ನ ದಾಳಿಯನ್ನು ನಡೆಸಿದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲ ಅವರು ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಹುತಾತ್ಮ ಕೆಚ್ಚೆದೆಯ ಯೋಧರಿಗೆ ನಮ್ಮ ಶ್ರದ್ಧಾಂಜಲಿಗಳು ಮತ್ತು ಅವರ ಕುಟುಂಬಗಳಿಗೆ ಸಂತಾಪಗಳು. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಮೋದಿ ಸರ್ಕಾರ ಮಾಡಿಕೊಂಡಿರುವ ರಾಜಿಯ ಪರಿಣಾಮವಾಗಿ ಉರಿ, ಪಠಾಣ್ ಕೋಟ್, ಪುಲ್ವಾಮ ಭಯೋತ್ಪಾದಕ ದಾಳಿಗಳ ಪಟ್ಟಿ ಬೆಳೆಯುತ್ತಿದೆ ಎಂದು ಅವರು ಟ್ವೀಟ್ ಮಾಡಿದರು. ಐದು ವರ್ಷಗಳಲ್ಲಿ ಮೋದಿ ಆಡಳಿತದ ಅಡಿಯಲ್ಲಿ ೧೮ ದೊಡ್ಡ ಪ್ರಮಾಣದ ದಆಳಿಗಳು ನಡೆದಿವೆ. ೫೬ ಅಂಗುಲದ ಎದೆ ಉತ್ತರ ಕೊಡುವುದು ಯಾವಾಗ ಎಂದು ಸುರ್ಜಿವಾಲ ಅವರನ್ನು ಉಲ್ಲೆಖಿಸಿದ ವರದಿ ತಿಳಿಸಿದೆ೨೦೧೬ರ ಸೆಪ್ಟೆಂಬರಿನಲ್ಲಿ ಉರಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ೧೯ ಮಂದಿ ಯೋಧರು ಹುತಾತ್ಮರಾಗಿದ್ದರು. ಬಳಿಕದ ಅತಿಭೀಕರ ಭಯೋತ್ಪಾದಕ ದಾಳಿ ಇದು ಎಂದು ಹೇಳಲಾಯಿತು. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ನ್ಯಾಷನಲ್ ಕಾನ್ಫರೆನ್ಸಿನ ಒಮರ್ ಅಬ್ದುಲ್ಲ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಾಳಿಯನ್ನು ಖಂಡಿಸಿದರು

2019: ಶ್ರೀನಗರ: ಪುಲ್ವಾಮ ಪಟ್ಟಣದ ಅವಂತಿಪೋರದಲ್ಲಿ ಸಿಆರ್ ಪಿಎಫ್ ಬೆಂಗಾವಲು ವಾಹನದ ಮೇಲಿನ ಭೀಕರ ಆತ್ಮಹತ್ಯಾ ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ, ದಾಳಿಯ ಹೊಣೆ ಹೊತ್ತುಕೊಂಡಿರುವ ಜೈಶ್--ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ವಿಡಿಯೋವನ್ನು ಅಂತರ್ಜಾಟದಲ್ಲಿ ಬಿಡುಗಡೆ ಮಾಡಿತು. ದಕ್ಷಿಣ ಕಾಶ್ಮೀರದ ಕಕಪೋರದ ಅದಿಲ್ ಯಾನೆ ವಖಸ್ ವಿಡಿಯೋದಲ್ಲಿ ಜೈಶ್ ಧ್ವಜಗಳನ್ನು, ಅತ್ಯಾಧುನಿಕ ರೈಫಲ್ ಗಳನ್ನು ಹಿಂದಿಟ್ಟುಕೊಂಡು ಕುಳಿತಿರುವುದು ಕಾಣುತ್ತಿತ್ತು.  ವಿಡಿಯೋದ ಆರಂಭದಲ್ಲಿಯೇ ವಿಡಿಯೋ ನಿಮ್ಮನ್ನು ತಲುಪುವ ವೇಳೆಗೆ ನಾನು ಸ್ವರ್ಗದಲ್ಲಿ ಇರುತ್ತೇನೆ. ನಾನು ಜೆಇಎಂ ಜೊತೆಗೆ ಒಂದು ವರ್ಷವನ್ನು ಉಗ್ರಗಾಮಿಯಾಗಿ ಕಳೆದಿದ್ದೇನೆ. ಇದು ಕಾಶ್ಮೀರದ ಜನತೆಗೆ ನನ್ನ ಕೊನೆಯ ಸಂದೇಶ ಎಂಬುದಾಗಿ ಹೇಳಿದ್ದು ಕೇಳುತ್ತಿತ್ತು. ಬಹುಶಃ ಮೊಬೈಲ್ ಪೋನಿನಲ್ಲಿ ಸೆರೆ ದಾಳಿಯ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ವಿಡಿಯೋದಲ್ಲಿಮಾರ್ ದಿಯಾ, ಮಾರ್ ದಿಯಾ ಎಂಬುದಾಗಿ ಬಹುಶಃ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಹೇಳಿದ್ದೂ ಕೇಳಿಸುತ್ತದೆ. ವಿಡಿಯೋ ಘಟನೆಯ ಭೀಕರತೆಯನ್ನು  ಸೆರೆ ಹಿಡಿದಿತ್ತು. ಕೆಲ ಸೆಕೆಂಡ್ಗಳ ಬಳಿಕಅಲ್ಲಿ ಹೆಣಗಳು ಕಾಣುತ್ತಿವೆ ಎಂದು ಹೇಳಿರುವುದೂ ವಿಡಿಯೋದಲ್ಲಿ ದಾಖಲಾಗಿತ್ತು.. ಛಿದ್ರಗೊಂಡ ವಾಹನ, ಚೂರು ಚೂರಾದ ದೇಹದ ಚೂರುಗಳು ಬಿದ್ದಿರುವುದೂ ವಿಡಿಯೋದಲ್ಲಿ ಕಾಣುತ್ತಿತ್ತು. ಇನ್ನೊಂದು ವಾಹನದಿಂದ ಹೊಗೆ ಏಳುತ್ತಿರುವುದೂ ವಿಡಿಯೋದಲ್ಲಿ ದಾಖಲಾಗಿತ್ತು.

2019: ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳ ಮತ್ತು ತನಿಖಾ ಆಯೋಗಗಳ ನಿಯಂತ್ರಣವು ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಂಬುದಾಗಿ ಸುಪ್ರೀಂಕೋರ್ಟಿನ  ದ್ವಿಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಮ್ ಆದ್ಮಿ ಪಕ್ಷ (ಆಪ್) ಸರ್ಕಾರಕ್ಕೆ ಭಾರೀ ಹಿನ್ನಡೆಯಾಯಿತು. ಏನಿದ್ದರೂ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಣ ಪ್ರಮುಖ ವಿವಾದದ ಕೇಂದ್ರವಾಗಿರುವ ಸೇವೆಗಳಿಗೆ ಸಂಬಂಧಿಸಿದಂತೆ ಗೊಂದಲದ ಕಾರ್ಮೋಡ ಕವಿದಿದ್ದು, ಅತ್ಯಂತ ಮಹತ್ವದ ವಿಚಾರವನ್ನು ನ್ಯಾಯಮೂರ್ತಿ ಎಕೆ ಸಿಕ್ರಿ ಮತ್ತು ನ್ಯಾಯಮೂರ್ತಿ ಅಶೋಕ ಭೂಷಣ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ವಿಶಾಲ ಪೀಠಕ್ಕೆ ವರ್ಗಾಯಿಸಿತು. ದ್ವಿಸದಸ್ಯ ಪೀಠವು ಸೇವೆಗಳಿಗೆ ಸಂಬಂಧಿಸಿದಂತೆ ಬಿನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದು ಹಿನ್ನೆಲೆಯಲ್ಲಿ ವಿಷಯವನ್ನು ವಿಶಾಲ ಪೀಠವು ಪರಾಮರ್ಶಿಸಲಿದೆ. ಪ್ರಸ್ತುತ ಸೇವೆಗಳು ಕೇಂದ್ರ ಸರ್ಕಾರದ ಆಧೀನದಲ್ಲಿ ಮುಂದುವರೆಯಲಿವೆಆಮ್ ಆದ್ಮಿ ಪಕ್ಷದ ನಾಲ್ಕನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಕೇಜ್ರಿವಾಲ್ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿತು. ತಮ್ಮ ತೀರ್ಪನ್ನು ಮೊತ್ತ ಮೊದಲಿಗೆ ಓದಿದ ನ್ಯಾಯಮೂರ್ತಿ ಸಿಕ್ರಿ ಅವರು ತನಿಖಾ ಆಯೋಗ ರಚನೆಯ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಇದೆ ಎಂದು ಹೇಳಿದರು ವಿಚಾರವು ಹಿಂದೆ ಪ್ರಮುಖ ವಿವಾದಕ್ಕೆ ಕಾರಣವಾಗಿತ್ತು. ಡಿಡಿಸಿಎ ವ್ಯವಹಾರಗಳು ಮತ್ತು ಸಿಎನ್ಜಿ ಯುಕ್ತತಾ (ಫಿಟ್ನೆಸ್) ಹಗರಣಗಳ ತನಿಖೆಗೆ ಆಪ್ ಸರ್ಕಾರ ಎರಡು ತನಿಖಾ ಆಯೋಗಗಳನ್ನು ರಚಿಸಿದ್ದನ್ನು ಕೇಂದ್ರವು ಅಕ್ರಮ ಎಂಬುದಾಗಿ ಪರಿಗಣಿಸಿದ್ದು ಭಾರೀ ವಾಗ್ವಾದವನ್ನೇ ಹುಟ್ಟು ಹಾಕಿತ್ತು. ಭ್ರಷ್ಟಾಚಾರ ನಿಗ್ರಹವು ಆಮ್ ಆದ್ಮಿ ಪಕ್ಷದ ಪ್ರಮುಖ ಘೋಷಣೆಯಾಗಿದ್ದು ಅದರ ಮುಖ್ಯ ಕೀಲಿ ಕೈ ಆಗಿರುವ ಭ್ರಷ್ಟಾಚಾರ ನಿಗ್ರದ ದಳದ ನಿಯಂತ್ರಣವನ್ನು ಕೂಡಾ ನ್ಯಾಯಮೂರ್ತಿ ಕೇಂದ್ರ ಸರ್ಕಾರಕ್ಕೆ ವಹಿಸಿದರು. ಸೇವೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ನ್ಯಾಯಮೂರ್ತಿ ಸಿಕ್ರಿ ಅವರು ಜಂಟಿ ಕಾರ್ಯದರ್ಶಿ ಮಟ್ಟ ಹಾಗೂ ಅದಕ್ಕೂ ಮೇಲಿನ  ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯನ್ನು ಕೇಂದ್ರ ಸರ್ಕಾರ ನಿರ್ವಹಿಸಬೇಕು ಇತರ ಅಧಿಕಾರಿಗಳ ಮೇಲಿನ ನಿಯಂತ್ರಣ ದೆಹಲಿ ಸರ್ಕಾರದ್ದು ಎಂದು ಹೇಳಿದರುನ್ಯಾಯಮೂರ್ತಿ ಅಶೋಕ ಭೂಷಣ್ ಅವರು ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಿಷಯಗಳಲ್ಲಿ ನ್ಯಾಯಮೂರ್ತಿ ಸಿಕ್ರಿ ಅವರ ಅಭಿಪ್ರಾಯವನ್ನು ಒಪ್ಪಿದರು. ಸೇವೆಗಳು  ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ನಿರ್ವಹಿಸಬೇಕು ಎಂದು ಅವರು ತೀರ್ಪು ನೀಡಿದರುವಿದ್ಯುತ್ ಸರ್ಕಲ್ ದರಗಳು ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿನ ಕೆಲಸಗಳು ಈಗ ದೆಹಲಿ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದೂ ಪೀಠ ಹೇಳಿತು. ತೀರ್ಪಿನ ಪ್ರಕಾರ ಕೃಷಿಭೂಮಿಯ ಕನಿಷ್ಠ ದರ ಕುರಿತ ನಿರ್ಧಾರವು ದೆಹಲಿ ಸರ್ಕಾರಕ್ಕೆ ಸೇರಿದೆ, ಆದರೆ ಇದು ಕೂಡಾ ಆಪ್ ಪಾಲಿಗೆ ಗೆಲುವಿನ ಪರಿಸ್ಥಿತಿಯಲ್ಲ, ವಿಷಯದಲ್ಲಿ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಭಿನ್ನಮತ ಬಂದಲ್ಲಿ ವಿಷಯವನ್ನು ರಾಷ್ಟ್ರಪತಿಗೆ ವಹಿಸಬೇಕು ಎಂದು ಪೀಠ ಹೇಳಿತು. ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರುಗಳನ್ನು ನೇಮಿಸುವ ಅಧಿಕಾರ ದೆಹಲಿ ಸರ್ಕಾರದ ಬಳಿಯೇ ಮುಂದುವರೆಯುತ್ತದೆ ಎಂದು ಕೋರ್ಟ್ ತೀರ್ಪು ನೀಡಿತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ನ್ಯಾಯಮೂರ್ತಿ ಎಕೆ ಸಿಕ್ರಿ ಮತ್ತು ಅಶೋಕ ಭೂಷಣ್ ಅವರ ಪೀಠವು ಕಳೆದ ವರ್ಷ ನವೆಂಬರ್ ೧ರಂದು ಕಾಯ್ದರಿಸಿತ್ತು. ರಾಜಧಾನಿ ನಗರದ ಅಧಿಕಾರಗಳ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹಾಲಿ ಲೆಫ್ಟಿನೆಂಟ್ ಗವರ್ನರ್ (ಎಲ್ -ಜಿ) ಅನಿಲ್ ಬೈಜಾಲ್ ಮತ್ತು ಅವರ ಪೂರ್ವಾಧಿಕಾರಿಗಳಾಗಿದ್ದ ನಜೀಬ್ ಜಂಗ್ ಜೊತೆಗೆ ನಿರಂತರ ಘರ್ಷಣೆ ನಡೆಸಿದ್ದರು. ಉಭಯರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಚೋದನೆ ಮೇರೆಗೆ ತಮ್ಮ ಸರ್ಕಾರದ ಕಾರ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆಪಾದಿಸಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ದೆಹಲಿಗೆ ರಾಜ್ಯ ಸ್ಥಾನಮಾನ ನೀಡಲಾಗದು ಎಂದು ಹೇಳಿತ್ತು. ಆದರೆ ಇದೇ ವೇಳೆಗೆ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರಗಳಿಗೆ ಮಿತಿ ವಿಧಿಸಿತ್ತು. ಏನಿದ್ದರೂಸೇವೆಗಳ ಮೇಲಿನ ನಿಯಂತ್ರಣದ ವಿಷಯವು ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ಮಧ್ಯೆ ವಿವಾದದ ಕೇಂದ್ರವಾಗಿ ಮುಂದುವರೆದಿತ್ತು. ದೆಹಲಿಯು ರಾಷ್ಟ್ರದ ರಾಜಧಾನಿಯಾಗಿರುವುದರಿಂದ ದೆಹಲಿಯ ಆಡಳಿತವನ್ನು ಕೇವಲ ದೆಹಲಿ ಸರ್ಕಾರಕ್ಕೆ ಬಿಟ್ಟು ಬಿಡಲು ಸಾಧ್ಯವಿಲ್ಲ. ರಾಜಧಾನಿ ನಗರವಾಗಿರುವುದರಿಂದ ಅದರ ಸ್ಥಾನಮಾನ ವಿಶಿಷ್ಠವಾದುದಾಗಿದೆ ಎಂದು ಕೇಂದ್ರ ಸರ್ಕಾರವು ಕಳೆದ ವರ್ಷ ಸೆಪ್ಟೆಂಬರ್ ೧೯ರಂದು ಸುಪ್ರೀಂಕೋರ್ಟಿಗೆ ತಿಳಿಸಿತ್ತು.  ದೆಹಲಿಗೆ ರಾಜ್ಯ ಸ್ಥಾನಮಾನವನ್ನು ಕೊಡಲು ಸಾಧ್ಯವೇ ಇಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿನ ಪಂಚ ಸದಸ್ಯ ಪೀಠಕ್ಕೆ ಖಂಡತುಂಡವಾಗಿ ತಿಳಿಸಿತ್ತು. ಸೇವೆಗಳಿಗೆ ಸಂಬಂಧಿಸಿದಂತೆ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರವು  ಶಾಸಕಾಂಗ ಮತ್ತು ಕಾರ್ ನಿರ್ವಹಣಾ (ಎಕ್ಸಿಕ್ಯೂಟಿವ್) ಅಧಿಕಾರಗಳನ್ನು ಹೊಂದಿದೆಯೇ ಎಂಬುದು ಮೂಲಭೂತ ವಿಷಯವಾಗಿದೆ ಎಂದು ಕೇಂದ್ರವು ಪ್ರತಿಪಾದಿಸಿತ್ತು. ರಾಷ್ಟ್ರೀಯ ರಾಜಧಾನಿಯು ಸಂಸತ್ತು ಮತ್ತು ಸುಪ್ರೀಂಕೋರ್ಟ್ನಂತಹ ಮಹತ್ವದ ಸಂಸ್ಥೆಗಳನ್ನು ಹೊಂದಿದೆ ಹಾಗೂ ವಿದೇಶೀ ರಾಜತಾಂತ್ರಿಕರೂ ಇಲ್ಲಿ ವಾಸವಾಗಿದ್ದಾರೆ ಎಂದೂ ಕೇಂದ್ರ ಸರ್ಕಾರವು ಹೇಳಿತ್ತುಇದಕ್ಕೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷದ ಸರ್ಕಾರವು ಜನರಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬಂದಿದ್ದರೂ, ರಾಷ್ಟ್ರದ ರಾಜಧಾನಿಯ ಆಡಳಿತದಲ್ಲಿ ತನ್ನ ಮಾತಿಗೆ ಅತ್ಯಂತ ಕಡಿಮೆ ಬೆಲೆ ಇದೆ ಎಂದು ಪ್ರತಿಪಾದಿಸಿ, ಕಾರಣಕ್ಕಾಗಿಯೇ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಕೋರಿತ್ತು.

2019: ನವದೆಹಲಿ: ಆಪ್ ವರ್ಸಸ್ ಕೇಂದ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಪರವಾಗಿ ನೀಡಿರುವ ತೀರ್ಪು ದೆಹಲಿಯ ಎಲ್ಲರ ಪಾಲಿಗೆ ಆಗಿರುವ ಅನ್ಯಾಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸುಪ್ರೀಂಕೋರ್ಟ್ ತೀರ್ಪಿಗೆ ಖಾರವಾದ ಪ್ರತಿಕ್ರಿಯೆ ನೀಡಿದರು.  ಕೇಜ್ರಿವಾಲ್ ಹೇಳಿಕೆಗಾಗಿ ಅವರ ವಿರುದ್ಧ ಸುಪ್ರೀಂಕೋರ್ಟ್ ನಿಂದನೆ ಅರ್ಜಿ ದಾಖಲಿಸುವುದಾಗಿ ಬಿಜೆಪಿ ಹೇಳಿತು. ಅಧಿಕಾರಗಳ ವಿಭಜನೆ ಸಂಬಂಧ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ’ಯಾವುದೇ ಅಧಿಕಾರಗಳೂ ಇಲ್ಲದೆ ದೆಹಲಿ ಸರ್ಕಾರ ಹೇಗೆ ಕಾರ್ಯ ನಿರ್ವಹಿಸಬೇಕು?’ ಎಂಬುದಾಗಿ ಪ್ರಶ್ನಿಸಿದರು.  ‘ಸರ್ಕಾರವೊಂದು ತನ್ನ ಅಧಿಕಾರಿಗಳ ವರ್ಗಾವಣೆಯನ್ನು ಕೂಡಾ ಮಾಡಲು ಸಾಧ್ಯವಿಲ್ಲವಾದರೆ, ಅದು ಹೇಗೆ ಕಾರ್ ನಿರ್ವಹಿಸಬೇಕು? ಸ್ಥಾನಗಳನ್ನು ಗೆದ್ದಿರುವ ಪಕ್ಷಕ್ಕೆ ಇರುವ ಹಕ್ಕುಗಳು, ೬೭ ಸ್ಥಾನಗಳನ್ನು ಗೆದ್ದಿರುವ ಪಕ್ಷಕ್ಕೆ ಇಲ್ಲ ಎಂದು ಅವರು ನುಡಿದರು.  ‘ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧ ಮತ್ತು ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿದ ಕೇಜ್ರಿವಾಲ್, ದೆಹಲಿ ಸರ್ಕಾರವು ಕಾನೂನುಬದ್ಧ ಪರಿಹಾರಗಳನ್ನು ಕೋರಲಿದೆ ಮತ್ತು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ತನ್ನ ವಕೀಲರ ಜೊತೆ ಮಾತನಾಡಲಿದೆ ಎಂದು ಹೇಳಿದರು.  ‘ಇದೆಂತಹ ಪ್ರಜಾಪ್ರಭುತ್ವ? ದೆಹಲಿ ಸರ್ಕಾರ ಏಕೆ ಶಕ್ತಿಶಾಲಿಯಾಗಿರಬಾರದು? ವಿರೋಧ ಪಕ್ಷವು ಭ್ರಷ್ಟಾಚಾರ ನಿಗ್ರಹ ಶಾಖೆಯನ್ನು (ಎಸಿಬಿ) ಹೇಗೆ ನಡೆಸುತ್ತದೆ? ಸರ್ಕಾರ ಅಧಿಕಾರವಿಲ್ಲದೆ ಕಾರ್ಯ ನಿರ್ವಹಿಸುವುದು ಹೇಗೆ?’ ಎಂದು ಮುಖ್ಯಮಂತ್ರಿ ಪ್ರಶ್ನೆಗಳ ಸುರಿಮಳೆಗೈದರು. ದೆಹಲಿ ಸರ್ಕಾರದ ಸುಲಲಿತ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸರ್ಕಾರವು ಅಡಚಣೆಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಆಪಾದಿಸಿದರು. ದೆಹಲಿಯ ಚುನಾಯಿತ ಸರ್ಕಾರ ಮತ್ತು ಮುಖ್ಯಮಂತ್ರಿ ಕಡತಗಳಿಗೆ ಒಪ್ಪಿಗೆ ಪಡೆಯಲು ಲೆಫ್ಟಿನೆಂಟ್ ಗವರ್ನರ್ ಮನೆಯ ಹೊರಗೆ ೧೦ ದಿನಗಳ ಧರಣಿಯನ್ನು ಏಕೆ ನಡೆಸಬೇಕು? ಎಂದೂ ಕೇಜ್ರಿವಾಲ್ ಪ್ರಶ್ನಿಸಿದರು. ಆಮ್ ಆದ್ಮಿ ಪಕ್ಷವು ವಿಧಾನಸಭೆಯ ೭೦ ಸ್ಥಾನಗಳ ಪೈಕಿ ೬೭ ಸ್ಥಾನಗಳನ್ನು ಗೆದ್ದು ದೆಹಲಿಯಲ್ಲಿ ಸರ್ಕಾರ ರಚಿಸಿದೆ ಎಂದು ಹೇಳಿದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಪ್ಗೆ ಮತ ನೀಡುವಂತೆ ಮತ್ತು ಅದನ್ನು ವಿಜಯಶಾಲಿಯಾಗಿ ಮಾಡುವಂತೆ ದೆಹಲಿಯ ಜನತೆಯನ್ನು ಆಗ್ರಹಿಸಿದರು. ದೆಹಲಿಗೆ ರಾಜ್ಯಸ್ಥಾನಮಾನ ಪಡೆಯಲು ಮತ್ತು ನಿಯಮಗಳನ್ನು ಬದಲಾಯಿಸಲು ಇದೊಂದೇ ಮಾರ್ಗ ಎಂದು ಅವರು ನುಡಿದರು. ಇದಕ್ಕೆ ಮುನ್ನ ಆಮ್ ಆದ್ಮಿ ಪಕ್ಷ ವರ್ಸಸ್ ಕೇಂದ್ರ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು ಎಸಿಬಿಯ ನಿಯಂತ್ರಣವನ್ನು ಕೇಂದ್ರಕ್ಕೆ ನೀಡಿತ್ತು. ಎಸಿಬಿಯಲ್ಲದೆ, ತನಿಖಾ ಆಯೋಗ ರಚನೆಯ ಅಧಿಕಾರಗಳನ್ನೂ  ಕೋರ್ಟ್ ಕೇಂದ್ರಕ್ಕೆ  ನೀಡಿತ್ತು. ಇದೇ ವೇಳೆಯಲ್ಲಿ ವಿದ್ಯುತ್ ಮತ್ತು ಕಂದಾಯ ಇಲಾಖೆಗಳನ್ನು (ಸರ್ಕಲ್ ದರಗಳ ನಿಗದಿ), ಗ್ರೇಡ್ ಮತ್ತು ಗ್ರೇಡ್ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಮತ್ತು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರುಗಳ ನೇಮಕ ಮತ್ತು ಡಿಸ್ಕಾಮ್ ನಿರ್ದೇಶಕರ ನೇಮಕಾತಿಯನ್ನು ದೆಹಲಿ ಸರ್ಕಾರದ ಆಧೀನಕ್ಕೆ ತಂದಿತ್ತುಸುಪ್ರೀಂಕೋರ್ಟ್ ನಿಂದನೆ- ಬಿಜೆಪಿ: ದೆಹಲಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರುಅರವಿಂದ ಕೇಜ್ರಿವಾಲ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿಲ್ಲ, ವಾಸ್ತವವಾಗಿ ಭಾರತದ ಸುಪ್ರೀಂಕೋರ್ಟಿನ ನಿಂದನೆ ಮಾಡಿದ್ದಾರೆ ಎಂದು ಹೇಳಿದರುಕೇಜ್ರಿವಾಲ್ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಲು ಬಿಜೆಪಿ ಯೋಜಿಸುತ್ತಿದೆ ಎಂದು ಅವರು ನುಡಿದರು. ಚುನಾಯಿತ ಮುಖ್ಯಮಂತ್ರಿಯೊಬ್ಬರು ಸುಪ್ರೀಂಕೋರ್ಟಿನ ವಿರುದ್ಧ ಬಳಸಿದ ಭಾಷೆ ನಾಚಿಕೆಗೇಡಿನದು ಎಂದು ಪಾತ್ರ ಹೇಳಿದರು. ಸುಪ್ರೀಂಕೋರ್ಟಿನ ತೀರ್ಪು ಸಂವಿಧಾನ ಬಾಹಿರ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಕೇಜ್ರಿವಾಲ್ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಪಾತ್ರ ನುಡಿದರುದೆಹಲಿ ಜನರ ಕೈಯಲ್ಲಿ ಕೀಲಿ ಕೈ ಇದೆ ಎಂಬುದಾಗಿ ಹೇಳುವ ಮೂಲಕ, ನೀವು ಸುಪ್ರೀಂಕೋರ್ಟಿಗೆ ಬೆದರಿಕೆ ಹಾಕುತ್ತಿದ್ದೀರಾ? ನೀವು ಜನರನ್ನು, ನಿಮ್ಮ ಕಾರ್ಯಕರ್ತರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮತ್ತು ಸುಪ್ರೀಂಕೋರ್ಟಿನ ಮೇಲೆ ಮೇಲೆ ದಾಳಿ ನಡೆಸುವಂತೆ ಪ್ರಚೋದಿಸುತ್ತಿದ್ದೀರಿ. ಸುಪ್ರೀಂಕೋರ್ಟ್ ಕೇವಲ ಕಾನೂನನ್ನು ಎತ್ತಿ ಹಿಡಿದ ಕಾರಣಕ್ಕಾಗಿ, ಕೇವಲ ಭಾರತದ ಸಂವಿಧಾನವನ್ನು ಎತ್ತಿಹಿಡಿದ ಕಾರಣಕ್ಕಾಗಿ ನೀವು ನಿಮ್ಮ ಜನರನ್ನು ಪ್ರಚೋದಿಸುತ್ತಿದ್ದೀರಿ ಎಂದು ಅವರು ಹೇಳಿದರು. ಆಮ್ ಆದ್ಮಿ ಪಕ್ಷವು ದೆಹಲಿಯಲಿ ಅದ್ಭುತವಾಗಿ ಸರ್ಕಾರವನ್ನು ನಡೆಸುತ್ತಿದೆ ಎಂಬ ಕೇಜ್ರಿವಾಲ್ ಹೇಳಿಕೆಯನ್ನು ಪ್ರಶ್ನಿಸಿದ ಪಾತ್ರ, ’ಕೇಂದ್ರವು ಕೆಲಸ ಮಾಡಲು ಬಿಡುತ್ತಿಲ್ಲ ಎಂದಾದರೆ, ಅದ್ಭುತ ಕಾರ್ಯವನ್ನು ಹೇಗೆ ಮಾಡಲು ಸಾಧ್ಯವಾಯಿತು?’ ಎಂದು ಕೇಳಿದರು.  ‘ಒಂದೆಡೆಯಲ್ಲಿ ನೀವು ಅದ್ಭುತ ಸರ್ಕಾರವನ್ನು ನಡೆಸುತ್ತಿರುವುದಾಗಿ ಹೇಳುತ್ತಿದ್ದೀರಿ, ಬಹಳಷ್ಟು ಕೆಲಸ ಮಾಡಿರುವುದಾಗಿ ಹೇಳುತ್ತಿದ್ದೀರಿ. ಇದೇ ವೇಳೆಗೆ ಇನ್ನೊಂದೆಡೆಯಲ್ಲಿ ನಿಮಗೆ ಏನನ್ನೂ ಮಾಡಲು ಬಿಡಲಾಗುತ್ತಿಲ್ಲ ಎನ್ನುತ್ತಿದ್ದೀರಿ. ಕೇಜ್ರಿವಾಲ್ ಅವರ ದ್ವಂದ್ವ ಹೇಳಿಕೆಗಳು ಅವರ ದ್ವಂದ್ವ ಸ್ವಭಾವದ ಹೊರತು ಬೇರೇನೂ ಅಲ್ಲ ಎಂದು ಪಾತ್ರ ಚುಚ್ಚಿದರು.  ಕೇಜ್ರಿವಾಲ್ ಅವರು ಸುಪ್ರೀಂಕೋರ್ಟಿನ ವಿರುದ್ಧ ಸಮರ ಘೋಷಣೆ ಮಾಡಿದ್ದಾರೆ. ನಾವು ಕೇಜ್ರಿವಾಲ್ ವಿರುದ್ಧ ಸುಪ್ರೀಂಕೋರ್ಟ್ ನಿಂದನೆ ಅರ್ಜಿ ದಾಖಲಿಸುತ್ತೇವೆ ಎಂದು ಅವರು ನುಡಿದರು. ದೆಹಲಿಯಲ್ಲಿ  ’ಪ್ರಜಾಪ್ರಭುತ್ವ ಉಳಿಸಿ ರಾಲಿ ನಡೆಸಿದ್ದಕ್ಕಾಗಿ ವಿವಿಧ ವಿರೋಧಿ ಪಕ್ಷಗಳ ನಾಯಕರನ್ನೂ ಪಾತ್ರ ತರಾಟೆಗೆ ತೆಗೆದುಕೊಂಡರು. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬುದಾಗಿ ಪ್ರತಿಪಾದಿಸಿರುವ ಮಮತಾ ಬ್ಯಾನರ್ಜಿ, ಶರದ್ ಪವಾರ್ ಮತ್ತಿತರ ನಾಯಕರೆಲ್ಲ ಎಲ್ಲಿದ್ದೀರಿ? ಈಗ ಕೇಜ್ರಿವಾಲ್ ಅವರು ಸುಪ್ರೀಂಕೋರ್ಟ್ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ನಾಯಕರೆಲ್ಲ ಎಲ್ಲಿದ್ದಾರೆ? ಎಂದು ಪಾತ್ರ ಪ್ರಶ್ನಿಸಿದರು. ಅರವಿಂದ ಕೇಜ್ರಿವಾಲ್ ಅವರನ್ನುಅರಾಜಕತಾವಾದಿ ಕೇಜ್ರಿವಾಲ್ (ಅನಾರ್ಕಿಸ್ಟ್ ಕೇಜ್ರಿವಾಲ್) ಎಂಬುದಾಗಿಯೂ ಅವರ ಆಪ್ (ಎಎಪಿ) ’ಆಪಾದನೆ, ಆಂದೋಳನ ಮತ್ತು ಪ್ರಚಾರ ಪಕ್ಷ ಎಂಬುದಾಗಿಯೂ ಪರಿಚಿತವಾಗಬೇಕಾದಿದೆ ಎಂದೂ ಪಾತ್ರ ನುಡಿದರು
 2018: ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ೧೧೭ ಕೋಟಿ ಡಾಲರ್ (ರೂ.೧೧,೩೬೦ ಕೋಟಿ) ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತು.  ಮುಂಬೈಯ ಶಾಖೆಯೊಂದಲ್ಲಿ ಅವ್ಯವಹಾರ ನಡೆಸಿ ವಿದೇಶದಲ್ಲಿ ಹಣ ಹಿಂಪಡೆಯಲಾಗಿದೆ (ವಿತ್‌ಡ್ರಾ) ಮಾಡಲಾಗಿದೆ ಎಂದು ಹೇಳಲಾಯಿತು. ‘ಕೆಲವು ಆಯ್ದ ಖಾತೆದಾರರಿಗೆ ಅನುಕೂಲವಾಗುವಂತೆ ವ್ಯವಹಾರಗಳು ನಡೆದಿದ್ದು, ಈ ವ್ಯವಹಾರದಲ್ಲಿ ಅವರೂ ಶಾಮೀಲಾಗಿರುವ ಸಾಧ್ಯತೆ ಇದೆ. ಈ ವ್ಯವಹಾರಗಳ ಆಧಾರದ ಮೇಲೆ ಇತರ ಬ್ಯಾಂಕುಗಳು ಈ ಗ್ರಾಹಕರಿಗೆ ವಿದೇಶದಲ್ಲಿ ಹಣ ಪಾವತಿ ಮಾಡಿರುವಂತೆ ಕಾಣುತ್ತಿದೆ ಎಂದು ಬ್ಯಾಂಕ್ ತನ್ನ ಶೇರು ವಹಿವಾಟು ಸಂಬಂಧಿತ ವರದಿಯಲ್ಲಿ ತಿಳಿಸಿತು. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಾಲ್ಕನೇ ಅತಿ ಹೆಚ್ಚು ಸ್ವತ್ತುಗಳನ್ನು ಹೊಂದಿದೆ. ಪ್ರಕರಣದಲ್ಲಿ ಶಾಮೀಲಾಗಿರುವವರ ಹೆಸರುಗಳನ್ನು ಬ್ಯಾಂಕ್ ತಿಳಿಸಿಲ್ಲ, ಆದರೆ ವ್ಯವಹಾರಗಳ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ನೀಡಲಾಗಿದೆ. ವಹಿವಾಟುಗಳ ಪರಿಣಾಮವಾಗಿ ಬ್ಯಾಂಕಿನ ಮೇಲೆ ಏನಾದರೂ ಬಾಧ್ಯತೆ ಬಿದ್ದಿದೆಯೇ ಎಂದು ಬಳಿಕ ಪರಿಶೀಲಿಸಲಾಗುವುದು ಎಂದು ಅದು ತಿಳಿಸಿತು. ವಹಿವಾಟುಗಳು ಅನಿಶ್ಚಿತ ಸ್ವರೂಪದವಾಗಿದ್ದು, ಇವುಗಳ ಪರಿಣಾಮವಾಗಿ ಬ್ಯಾಂಕಿನ ಮೇಲೆ ಉಂಟಾಗುವ ಬಾಧ್ಯತೆಗಳ ಸಾಧ್ಯತೆ ಬಗ್ಗೆ ಕಾನೂನು ಮತ್ತು ವಹಿವಾಟಿನ ನೈಜತ್ವದ ಪರಿಶೀಲನೆ ಬಳಿಕ ನಿರ್ಧರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ವಹಿವಾಟಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಬ್ಯಾಂಕ್ ನೀಡಲಿಲ್ಲ. ಬ್ಯಾಂಕ್ ನೌಕರರ ಸಹಾಯದಿಂದ ವಿವಿಧ ಖಾತೆಗಳ ಮೂಲಕ ವಿದೇಶದಲ್ಲಿ ಹಣ ವಿತ್‌ಡ್ರಾ ಮಾಡಲಾಗಿದೆ ಎಂದು ತನಿಖಾ ದಳದ ಪ್ರಾಥಮಿಕ ವರದಿಗಳು ಹೇಳಿದವು. ಬ್ಯಾಂಕಿನ ದೂರು ಪರಿಗಣಿಸಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದವು. ಹಣ ವರ್ಗಾವಣೆಯಾಗಿರುವ ಖಾತೆಗಳ ವಿವರಗಳು ಇದುವರೆಗೆ ಬಹಿರಂಗವಾಗಿಲ್ಲ. ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿರುವ ವಿಷಯ ಸುದ್ದಿಯಾಗುತ್ತಿದ್ದಂತೆ ಪ್ರಸ್ತುತ ಬ್ಯಾಂಕ್‌ನ ಶೇರು ವಹಿವಾಟಿನಲ್ಲಿ ಕುಸಿತ ಕಂಡು ಬಂದಿತು.. ಶೇ.೬ರಷ್ಟು ಶೇರು ವಹಿವಾಟು ಕುಸಿಯಿತು ಎಂದು ಮೂಲಗಳು ಹೇಳಿದವು. ವಂಚನೆ ವಹಿವಾಟು ಆರೋಪಗಳ ಕುರಿತ ಇತರ ವ್ಯವಹಾರಗಳನ್ನೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗಾಗಲೇ ಪರಿಶೀಲಿಸುತ್ತಿದೆ. ಕಳೆದ ವಾರ ಕೋಟ್ಯಧೀಶ ಚಿನ್ನಾಭರಣ ವ್ಯಾಪಾರಿ, ರಾಷ್ಟ್ರದ ಅತಿ ಶೀಮಂತರಲ್ಲಿ ಒಬ್ಬರಾದ ನೀರವ್ ಮೋದಿ ಮತ್ತು ಇತರರು ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೪೪೦ ಲಕ್ಷ ಡಾಲರ್ ಹಣ ವಂಚಿಸಿದ್ದಾರೆಂದು ಹೇಳಲಾದ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವುದಾಗಿ ಸಿಬಿಐ ತಿಳಿಸಿತ್ತು. ಈ ಪ್ರಕರಣದಲ್ಲಿ ಮೋದಿ, ಅವರ ಪತ್ನಿ, ಸಹೋದರ ಮತ್ತು ಉದ್ಯಮ ಪಾಲುದಾರರು ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೨೮೦ ಕೋಟಿ ರೂಪಾಯಿ ವಂಚಿಸಿದ್ದಾರೆಂದು ಆಪಾದಿಸಲಾಗಿತ್ತು. ಬ್ಯಾಂಕಿನ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲನಾಥ ಶೆಟ್ಟಿ ಮತ್ತು ಬ್ಯಾಂಕ್ ಸಿಬ್ಬಂದಿ ಮನೋಜ್ ಖರತ್ ಅವರನ್ನು ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ಈಗ ಬೆಳಕಿಗೆ ಬಂದಿರುವ ವಂಚನೆ ಪ್ರಕರಣ ಈ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ್ದೇವೆ ಅಥವಾ ಸಂಪೂರ್ಣವಾಗಿ ಬೇರೆ ಪ್ರಕರಣವೇ ಎಂಬುದು ತತ್ ಕ್ಷಣಕ್ಕೆ ಗೊತ್ತಾಗಲಿಲ್ಲ.

2018: ನವದೆಹಲಿ: ಸೈನ್ಯವು ಧರ್ಮಕ್ಕಿಂತ ಮೇಲಿನದು, ಎಲ್ಲ ಸೈನಿಕರನ್ನೂ ಅವರು ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ ಎಂದು ಸೇನೆಯು ರಾಜಕೀಯ ನಾಯಕರಿಗೆ ನೆನಪಿಸಿತು.  ಏಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿಗೆ ಸಂಬಂಧಿಸಿದಂತೆ ’ಮುಸ್ಲಿಮ್ ಹುತಾತ್ಮರ ಬಗ್ಗೆ ಮಾತನಾಡಿದ ಒಂದು ದಿನದ ಬಳಿಕ ಉತ್ತರ ಕಮಾಂಡ್ ಜಿಒಸಿ ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ರಾಜಕಾರಣಿಗಳಿಗೆ ಈ ವಿಚಾರವನ್ನು ನೆನಪಿಸಿದರು.  ‘ಸೇನೆಯು ಸರ್ವಧರ್ಮ ಸ್ಥಳ. ಇಲ್ಲಿಗೆ ಎಲ್ಲ ಧರ್ಮದವರಿಗೂ ಸ್ವಾಗತವಿದೆ. ಯೋಧರಾಗಿ ಅವರ ಗುರುತು ಮಾತ್ರವೇ ಇಲ್ಲಿ ಮುಖ್ಯ. ನಾವು ನಮ್ಮ ಪಡೆಗಳನ್ನು ಕೋಮುವಾದಿಗಳನ್ನಾಗಿ ಮಾಡುವುದಿಲ್ಲ ಎಂದು ಅವರು ನುಡಿದರು. ಸಂಜುವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ೭ ಮಂದಿ ಸೈನಿಕರ ಪೈಕಿ ಐವರು ಮುಸ್ಲಿಮರು ಎಂದು ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಅನುಸರಿಸಿ ಲೆಫ್ಟಿನೆಂಟ್ ಜನರಲ್ ದೇವರಾಜ್ ಈ ಹೇಳಿಕೆ ನೀಡಿದರು. ‘ತಥಾಕಥಿತ ರಾಷ್ಟ್ರೀಯವಾದಿಗಳು ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸುತ್ತಾರೆ. ಈ ದಾಳಿಯಲ್ಲಿ ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ ೭ ಮಂದಿ ಹುತಾತ್ಮರಲ್ಲಿ ಐವರು ಕಾಶ್ಮೀರಿ ಮುಸಲ್ಮಾನರು. ರಾಷ್ಟ್ರದ ಬಗೆಗಿನ ನಮ್ಮ  ಪ್ರೇಮ ಮತ್ತು ಸಮಗ್ರತೆಯನ್ನು ಪ್ರಶ್ನಿಸುವವರಿಗೆ ಇದು ನೆನಪಿರಬೇಕು. ಮುಸ್ಲಿಮರು ರಾಷ್ಟ್ರಕ್ಕಾಗಿ ಸಾಯುತ್ತಿದ್ದಾರೆ, ಆದರೆ ಅವರನ್ನು ಪಾಕಿಸ್ತಾನಿಗಳು ಎಂದು ಕರೆಯಲಾಗುತ್ತಿದೆ. ಭಯೋತ್ಪಾದಕರು ಮುಸ್ಲಿಮರು ಎಂದು ವ್ಯತ್ಯಾಸ ಮಾಡುತ್ತಿಲ್ಲ. ಆದರೂ ತಮ್ಮ ರಾಷ್ಟ್ರ ನಿಷ್ಠೆಯನ್ನು ಸಾಬೀತುಪಡಿಸುವಂತೆ ಮುಸ್ಲಿಮರನ್ನು ಆಗ್ರಹಿಸಲಾಗುತ್ತಿದೆ ಎಂದು ಓವೈಸಿ ಹೇಳಿದ್ದರು. ಸಂಜುವಾನ್ ಸೇನಾ ಶಿಬಿರದ ಮೇಲೆ ನಡೆದಿರುವ ದಾಳಿಯ ಬಗ್ಗೆ ಪ್ರಶ್ನಿಸಿದಾಗ, ’ಆಚೆ ಕಡೆಯ ಭ್ರಮನಿರಸನದ ಪರಿಣಾಮವಾಗಿ ಈ ದಾಳಿ ನಡೆದಿದೆ. ಭ್ರಮನಿರಸನಗೊಂಡಿರುವ ವೈರಿ, ಗಡಿಯಲ್ಲಿ ನಿಮ್ಮನ್ನು ಎದುರಿಸಲು ಸಾಧ್ಯವಿಲ್ಲದೇ ಹೋದಾಗ ಇಂತಹ ದಾಳಿಗಳನ್ನು ನಡೆಸಲು ಜಾಗ ಹುಡುಕುತ್ತಾರೆ ಎಂದು ಅನ್ಬು ನುಡಿದರು.  ‘ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ. ಉರಿ ದಾಳಿಯ ಬಳಿಕ ನಾವು ನಮ್ಮ ಭದ್ರತಾ ಶಿಬಿರಗಳನ್ನು ಮೇಲ್ದರ್ಜೆಗೆ ಏರಿಸಲು ೩೬೪ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ. ದೇಶಾದ್ಯಂತ ನಾವು ಹಲವಾರು ಸಣ್ಣ ಘಟಕಗಳನ್ನು ಹೊಂದಿದ್ದೇವೆ. ಹೀಗಾಗಿ ಎಲ್ಲವನ್ನೂ ತತ್ ಕ್ಷಣಕ್ಕೆ ಸಜ್ಜುಗೊಳಿಸಲು ಸಾಧ್ಯವಿಲ್ಲ. ಆದರೆ ನಾವು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಅತಿಕ್ರಮಣಕಾರರಿಗೆ ಧೈರ್‍ಯ ಕೊಡುವಂತಹ ನಮಗೆ ಪ್ರತಿಕೂಲವಾದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

2018: ನವದೆಹಲಿ: ೨೦೦೮ರ ಬಟ್ಲಾ ಹೌಸ್ ಎನ್ ಕೌಂಟರ್ ಕಾಲದಲ್ಲಿ ತಲೆ ತಪ್ಪಿಸಿಕೊಂಡಿದ್ದ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಅರಿಯಾಜ್ ಖಾನ್ ಯಾನೆ ಜುನೈದನನ್ನು ದೆಹಲಿ ಪೊಲೀಸ್ ವಿಶೇಷ ದಳವು ನೇಪಾಳದಲ್ಲಿ ಬಂಧಿಸಿತು. ಜೈಪುರ, ಅಹಮದಾಬಾದ್ ಮತ್ತು ದೆಹಲಿ ಸ್ಫೋಟ ಪ್ರಕರಣಗಳಲ್ಲೂ ಜುನೈದ್ ಶಾಮೀಲಾಗಿದ್ದಾನೆ ಎಂದು ನಂಬಲಾಗಿದ್ದು, ನಾಲ್ಕು ದಿನಗಳ ಹಿಂದೆ ಆತನನ್ನು ದೆಹಲಿಗೆ ಕರೆತರಲಾಯಿತು. ೨೦೦೮ರ ಸೆಪ್ಟೆಂಬರ್ ೧೯ರಂದು ದೆಹಲಿಯ ಜಾಮಿಯಾ ನಗರದ ಬಟ್ಲಾಹೌಸ್ ಘರ್ಷಣೆ ಕಾಲದಲ್ಲಿ ಇತರ ನಾಲ್ವರ ಜೊತೆಗೆ ಜುನೈದ ಕೂಡಾ ಇದ್ದ. ಆದರೆ ಆತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈ ಘರ್ಷಣೆಯಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಶಹಜಾದ್ ಮತ್ತು ಜುನೈದ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಬಂಧಿತನಾಗಿದ್ದ ಶಹಜಾದನಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಟ್ಲಾ ಹೌಸ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎನ್ ಕೌಂಟರ್ ತಜ್ಞ ಇನ್ ಸ್ಪೆಕ್ಟರ್ ಮೋಹನ್ ಚಂದ್ ಶರ್ಮ ಕೂಡಾ ಕಾರ್‍ಯಾಚರಣೆ ವೇಳೆಯಲ್ಲಿ ಹುತಾತ್ಮರಾಗಿದ್ದರು.

2018: ಹೈದರಾಬಾದ್: ನಂಬಿದರೆ ನಂಬಿ, ಅಥವಾ ಬಿಟ್ಟರೆ ಬಿಡಿ. ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ರೈತನೊಬ್ಬನ ಹೊಲವನ್ನು ಬಾಲಿವುಡ್ ತಾರೆ ಸನ್ನಿ ಲಿಯೋನ್ ಕಾಯುತ್ತಿದ್ದಾಳೆ. ವಿಚಿತ್ರವೆನಿಸಿದರೂ ಇದು ನಿಜ. ಹಕ್ಕಿಗಳು, ಕಳ್ಳಕಾಕರ ಕಾಟದಿಂದ ಪಾರಾಗಲು ಹೊಲಗಳಲ್ಲಿ ಬೆಳೆಗಳ ಮಧ್ಯೆ ಬೆದರು ಬೊಂಬೆ ಇರಿಸುವುದು ಸಹಜ. ಆದರೆ ನೆಲ್ಲೂರು ಜಿಲ್ಲೆಯ ಬಂಡಾಕಿಂಡಿ ಪಲ್ಲೆ ಗ್ರಾಮದ ಬೆಂಚು ರೆಡ್ಡಿ ಎಂಬ ರೈತ ಕಾಲಕ್ಕೆ ತಕ್ಕಂತೆ ಹೊಸ ಕೋಲ ಕಟ್ಟಿದ್ದಾನೆ. ಈತ ತನ್ನ ಬೆಳೆ ರಕ್ಷಿಸಿಕೊಳ್ಳಲು ಚಿತ್ರನಟಿ ಸನ್ನಿ ಲಿಯೋನ್ ಮೊರೆ ಹೊಕ್ಕಿದ್ದಾನೆ. ಈತನ ಹೊಲದಲ್ಲಿ ಬಿಕಿನಿ ಧರಿಸಿದ ನಟಿ ಸನ್ನಿ ಲಿಯೋನಳ ಭಾರಿ ಗಾತ್ರದ ಪೋಸ್ಟರ್ ರಾರಾಜಿಸುತ್ತಿದೆ. ಕಳ್ಳ ಕಾಕರ ದೃಷ್ಟಿ ಬೆಳೆಯ ಮೇಲೆ ಬೀಳದಿರಲಿ ಎಂದು ತಾನು ಇದನ್ನು ಹಾಕಿರುವುದಾಗಿ ಬೆಂಚು ರೆಡ್ಡಿ ಹೇಳಿಕೆ. ರೆಡ್ಡಿ ತನ್ನ ೧೦ ಎಕರೆ ಹೊಲದಲ್ಲಿ ಹೂ ಕೋಸು, ಕ್ಯಾಬೇಜ್(ಎಲೆ ಕೋಸು) ಹಾಗೂ ಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾನೆ. ಈ ಬೆಳೆಯ ಮೇಲೆ ಕಣ್ಣು ಹಾಕುವ ಬದಲು ಜನರು ಸನ್ನಿ ಲಿಯೋನ್ ನ ಫೋಸ್ಟರ್ ಮೇಲೆ ದೃಷ್ಟಿ ನೆಟ್ಟಿರುತ್ತಾರೆ ಎಂಬುದು ರೆಡ್ಡಿ ಅವರ ಉತ್ತರ! ಇದರಿಂದಾಗಿ ಹೊಲದಲ್ಲಿ ಅವರ ಫಸಲು ’ದೃಷ್ಟಿಗೆ ಬಲಿಯಾಗುವುದಿಲ್ಲ ಎಂಬುದು ರೆಡ್ಡಿ ಉವಾಚ.

2018: ವಾಷಿಂಗ್ಟನ್: ಪಾಕಿಸ್ತಾನವು ಅಲ್ಪ-ಗಾಮೀ ಸಮರ ತಂತ್ರದ ಮಾದರಿಯೂ ಸೇರಿದಂತೆ ಹೊಸ ಮಾದರಿಯ ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇವು ಪ್ರದೇಶಕ್ಕೆ ಹೆಚ್ಚಿನ ಅಪಾಯಗಳನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿತು. ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕರು ಜಮ್ಮು ಜಿಲ್ಲೆಯ ಸಂಜುವಾನ್ ಸೇನಾ ಶಿಬಿರದ ಮೇಲೆ ಶನಿವಾರ ದಾಳಿ ನಡೆಸಿ ಆರು ಸೈನಿಕರು ಸೇರಿದಂತೆ ಏಳಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಘಟನೆಯ ಬೆನ್ನಲ್ಲೇ ಅಮೆರಿಕದ ನ್ಯಾಷನಲ್ ಇಂಟಲಿಜೆನ್ಸ್ ನಿರ್ದೇಶಕ ಡಾನ್ ಕೋಟ್ಸ್ ಈ ವಿಚಾರವನ್ನು ಬಹಿರಂಗ ಪಡಿಸಿದರು. ಪ್ರದೇಶಕ್ಕೆ ಅಪಾಯದ ಬೆದರಿಕೆ ಉಂಟು ಮಾಡಬಲ್ಲಂತಹ ಅಲ್ಪ-ಗಾಮೀ ಸಮರ ತಂತ್ರದ ಮಾದರಿಯೂ ಸೇರಿದಂತೆ ಹೊಸ ಮಾದರಿಯ ಅಣ್ವಸ್ತ್ರಗಳನ್ನು ಪಾಕಿಸ್ತಾನ ಅಭಿವೃದ್ಧಿ ಪಡಿಸುತ್ತಿದೆ ಎಂದು ಡಾನ್ ಕೋಟ್ಸ್ ಅವರು ಕಾಂಗ್ರೆಸ್ಸಿನ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ವಿಶ್ವವ್ಯಾಪಿ ಬೆದರಿಕೆಗಳ ಕುರಿತ ಗುಪ್ತಚರ ಮಾಹಿತಿಗಳಿಗೆ ಸಂಬಂಧಿಸಿದಂತೆ ಸೆನೆಟ್ ಆಯ್ಕೆ ಸಮಿತಿಯು ಈ ಸಮಾವೇಶವನ್ನು ಸಂಘಟಿಸಿತ್ತು. ಪಾಕಿಸ್ತಾನವು ಅಣ್ವಸ್ತ್ರ ಉತ್ಪಾದನೆಯನ್ನು ಮುಂದುವರೆಸಿದೆ ಮಾತ್ರವಲ್ಲ, ಹೊಸ ಮಾದರಿಯ ಅಣ್ವಸ್ತ್ರಗಳನ್ನು ನಿರ್ಮಿಸುತ್ತಿದೆ. ಇವುಗಳಲ್ಲಿ ಅಲ್ಪಗಾಮೀ ಸಮರತಂತ್ರದ ಶಸ್ತ್ರಾಸ್ತ್ರಗಳು, ದೂರಗಾಮಿ ಸಮರ ಕ್ಷಿಪಣಿಗಳು ಕೂಡಾ ಸೇರಿವೆ ಎಂದು ಡಾನ್ ಕೋಟ್ಸ್ ಎಚ್ಚರಿಸಿದರು. ಈ ಮಾದರಿಯ ಹೊಸ ಅಣ್ವಸ್ತ್ರಗಳು ಪ್ರದೇಶದ ಭದ್ರತಾ ಲೆಕ್ಕಾಚಾರಗಳನ್ನು ತಪ್ಪಿಸಿ, ಭದ್ರತಾ ಅಸಮತೋಲನಕ್ಕೆ ಕಾರಣವಾಗಿ ಅಪಾಯವನ್ನು ಹೆಚ್ಚಿಸಬಲ್ಲವು ಎಂದು ಅವರು ನುಡಿದರು.  ಜಗತ್ತಿನಲ್ಲಿ ವ್ಯಾಪಕ ಸಮೂಹನಾಶಕ್ಕೆ ಕಾರಣವಾಗಬಲ್ಲಂತಹ ಸಮರ ಶಸ್ತ್ರಗಳನ್ನು ನಿರ್ಮಿಸುತ್ತಿರುವ ರಾಷ್ಟ್ರಗಳಲ್ಲಿ ಉತ್ತರ ಕೊರಿಯಾ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಕೋಟ್ಸ್ ವಿವರಿಸಿದರು. ಸಮರ ಕ್ಷಿಪಣಿ ತಂತ್ರಜ್ಞಾನವನ್ನು ಇರಾನ್ ಮತ್ತು ಸಿರಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಿದ ಇತಿಹಾಸವನ್ನು ಹೊಂದಿರುವ ಉತ್ತರ ಕೊರಿಯಾ ಅಪಾಯಕಾರಿ ತಂತ್ರಜ್ಞಾನ ಪ್ರಸರಣ ಕಾರ್ಯದಲ್ಲಿ ನಿರತವಾಗಿದೆ ಎಂದು ಕೋಟ್ಸ್ ಹೇಳಿದರು.

2018: ನವದೆಹಲಿ: ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳಲ್ಲಿ (ಟ್ರಿಬ್ಯೂನಲ್) ಕ್ಲೋಸ್ಡ್ ಸರ್ಕಿಟ್ ಟಿವಿಗಳನ್ನು (ಸಿಸಿಟಿವಿ) ಅಳವಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ತಾನು ಕೊಟ್ಟಿರುವ ಆದೇಶವು ಸಂಪೂರ್ಣವಾಗಿ ಭದ್ರತಾ ಉದ್ದೇಶಗಳಿಗಾಗಿ ಮಾತ್ರವೇ ಹೊರತು ಕಲಾಪಗಳ ದಾಖಲೀಕರಣಕ್ಕಾಗಿ ಅಲ್ಲ, ಕಲಾಪಗಳು ಹೇಗಿದ್ದರೂ ಸಾರ್ವಜನಿಕರಿಗೆ ಮುಕ್ತವಾಗಿವೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು.  ‘ನಾವು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಆದೇಶ ಹೊರಡಿಸಿದ್ದೇವೆ ಏಕೆಂದರೆ ಸುರಕ್ಷತೆ ಮತ್ತು ನ್ಯಾಯದಾನದ ಆಡಳಿತಕ್ಕೆ ಅನುಕೂಲವಾಗಲಿ ಎಂದು. ಕೋರ್ಟ್ ಕಲಾಪಗಳು ನ್ಯಾಯಾಲಯದಲ್ಲಿ ಹಾಜರಿರುವ ಎಲ್ಲರಿಗೂ ಮುಕ್ತವಾಗಿವೆ. ಆದರೆ ಅವು ನ್ಯಾಯಾಲಯದಲ್ಲಿ ಇಲ್ಲದೇ ಇರುವ ಪ್ರತಿಯೊಬ್ಬರಿಗೂ ಮುಕ್ತವಲ್ಲದಿರಬಹುದು ಎಂದು ನ್ಯಾಯಮೂರ್ತಿಗಳಾದ ಎ.ಕೆ. ಗೋಯೆಲ್ ಮತ್ತು ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠವು ಹೇಳಿತು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಕನಿಷ್ಠ ಎರಡು ಜಿಲ್ಲೆಗಳ ಎರಡು ಕೋರ್ಟ್‌ಗಳಲ್ಲಿ ಮತ್ತು ಕೋರ್ಟ್ ಸಮುಚ್ಚಯಗಳ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ ೨೦೧೭ರ ಮಾರ್ಚ್ ೨೮ರಂದು ನಿರ್ದೇಶಿಸಿತ್ತು. ಈ ಕ್ಯಾಮರಾಗಳ ಮಾನಿಟರನ್ನು ಸಂಬಂಧಪಟ್ಟ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಚೇಂಬರಿನಲ್ಲಿ ಇರಿಸಬೇಕು ಎಂದೂ ಸುಪ್ರೀಂಕೋರ್ಟ್ ಸೂಚಿಸಿತ್ತು. ಕ್ಯಾಮರಾಗಳಲ್ಲಿ ದಾಖಲಾಗುವ ದೃಶ್ಯಾವಳಿಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅಥವಾ ಸಂಬಂಧಪಟ್ಟ ಹೈಕೋರ್ಟಿನ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಒದಗಿಸಲಾಗದು ಎಂದೂ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿತ್ತು. ನ್ಯಾಯಾಲಯಗಳಂತೆಯೇ ಬಹಿರಂಗ ವಿಚಾರಣೆ ನಡೆಯುವ ನ್ಯಾಯಾಧಿಕರಣಗಳಲ್ಲಿಯೂ ಸಿಸಿಟಿವಿ ಸ್ಥಾಪಿಸುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿತ್ತು. ಆಧೀನ ನ್ಯಾಯಾಲಯಗಳಲ್ಲೂ ಹಂತಹಂತವಾಗಿ ಕ್ಯಾಮರಾಗಳನ್ನು ಅಳವಡಿಸುವಂತೆಯೂ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯಗಳಲ್ಲಿ ಕ್ಯಾಮರಾ ಅಳವಡಿಸುವ ವಿಚಾರವಾಗಿ ಕೇಂದ್ರ ಸರ್ಕಾರವು ಸಲ್ಲಿಸಿದ ವಸ್ತುಸ್ಥಿತಿ ವರದಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ಸರ್ಕಾರದಿಂದ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಆಗಿದೆ ಎಂದು ಅಭಿಪ್ರಾಯಪಟ್ಟಿತು.  ರಾಜ್ಯ ನ್ಯಾಯಾಧಿಕರಣಗಳು ಮತ್ತು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮತ್ತು ರೆವೆನ್ಯೂ ಕೋರ್ಟ್‌ಗಳು ಸೇರಿದಂತೆ ಅರೆ ನ್ಯಾಯಾಂಗಗಳಲ್ಲಿಯೂ ಸಿಸಿಟಿವಿ ಅಳವಡಿಸಬೇಕೆ ಎಂದು ವಿಚಾರವಷ್ಟೇ ಇನ್ನು ಬಾಕಿ ಉಳಿದಿದೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ದಾಖಲಿಸಿತು. ಈ ನಿಟ್ಟಿನಲ್ಲಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ಕೇಂದ್ರೀಯ ಅರೆ ನ್ಯಾಯಾಂಗ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆ ಎಂಬ ಬಗ್ಗೆ ನಾಲ್ಕು ವಾರಗಳ ಒಳಗಾಗಿ ತಿಳಿಸುವಂತೆ ನ್ಯಾಯಾಲಯವು ಕೇಂದ್ರ ಕಾನೂನು ಸಚಿವಾಲಯಕ್ಕೆ ನಿರ್ದೇಶನ ನೀಡಿತು. ಏನಿದ್ದರೂ ಕೋರ್ಟ್ ಕೊಠಡಿಗಳಲ್ಲಿ ಸಿಸಿಟಿವಿ ಇದ್ದಾಗ ಲೈಂಗಿಕ ಅಪರಾಧಗಳ ಸಂತ್ರಸ್ಥರು/ ಸಂರಕ್ಷಿತ ಸಾಕ್ಷ್ಯಧಾರರ ಗುರುತು ಬಹಿರಂಗ ಪಡಿಸುವ ವಿಚಾರದಲ್ಲಿ ಕಾಳಜಿ ವಹಿಸುವ ಅಗತ್ಯವಿದೆ ಎಂದು ಕೋರ್ಟ್ ಸಹಾಯಕ ಹಾಗೂ ಹಿರಿಯ ವಕೀಲರಾದ ಸಿದ್ಧಾರ್ಥ ಲೂಥ್ರ ಅವರು ಪೀಠಕ್ಕೆ ಮನವಿ ಮಾಡಿದರು. ಹೈಕೋರ್ಟ್ ಮತ್ತು ಕೇಂದ್ರ ಸರ್ಕಾರವು ಈ ಅಂಶವನ್ನು ಪರಿಗಣಿಸಿ ಕಾಲಕಾಲಕ್ಕೆ ಅಗತ್ಯ ಸೂಚನೆಗಳನ್ನು ನೀಡಬಹುದು ಎಂದು ಪೀಠ ಹೇಳಿತು. ಪ್ರದ್ಯುಮ್ನ ಬಿಶ್ತ್ ಅವರು ೨೦೧೫ರಲ್ಲಿ ದಾಖಲಿಸಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಂದಿನ ವಿಚಾರಣೆಯನ್ನು ಪೀಠವು ಏಪ್ರಿಲ್ ೫ಕ್ಕೆ ನಿಗದಿ ಪಡಿಸಿತು.

2017: ಜಮ್ಮುಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಉಗ್ರರು ನುಸುಳಲು ಪಾಕಿಸ್ತಾನದ ಕಡೆಯಿಂದ ಕೊರೆದಿರುವ ಸುರಂಗವನ್ನು ಭಾರತೀಯ ಗಡಿ ಭದ್ರತಾ ಪಡೆ ಪತ್ತೆ ಮಾಡಿತು. ಭದ್ರತಾ ಪಡೆ ಉಗ್ರರ ನುಸುಳುವಿಕೆ ಮಾರ್ಗಗಳ ಪತ್ತೆ ಶೋಧದಲ್ಲಿ ತೊಡಗಿದ್ದಾಗ ಸೋಮವಾರ, 13 ಫೆಬ್ರುವರಿ 2017ರಂದು ರಾಮಗಢ ವಲಯದ ಗಡಿಯಲ್ಲಿನ ತಂತಿ ಬೇಲಿಯ ಕೆಳಗೆ 20 ಮೀಟರ್ಉದ್ದದ ಸುರಂಗವನ್ನು ಪತ್ತೆ ಮಾಡಲಾಯಿತು ಎಂದು ಬಿಎಸ್ಎಫ್ ಡಿಐಜಿ ಧರ್ಮೇಂದ್ರ ಪರೀಖ್ತಿಳಿಸಿದರು. 2.5 ಅಡಿ ಅಗಲ, 2.5 ಅಡಿ ಎತ್ತರ ವಿರುವ 20 ಅಡಿ ಉದ್ದದ ಸುರಂಗ ಇದಾಗಿದೆ. ಸುರಂಗ ಪತ್ತೆ ಮಾಡುವ ಮೂಲಕ ಗಡಿಯಲ್ಲಿ ಪಾಕಿಸ್ತಾನಿ ಉಗ್ರರು ನುಸುಳುವುದಕ್ಕೆ ತಡೆಯೊಡ್ಡಿದಂತಾಗಿದೆ. ಪಾಕಿಸ್ತಾನದ ಕಡೆಯಿಂದ ಸುರಂಗ ಕೊರೆಯಲಾಗಿದೆ ಎಂದು ಅವರು ಹೇಳಿದರು. ಸುರಂಗ ಇನ್ನೂ ಪೂರ್ಣಗೊಳ್ಳುವ ಮತ್ತು ಗಡಿಯಲ್ಲಿನ ಬೇಲಿಯನ್ನು ತಲುಪುವ ಮೊದಲೇ ಪತ್ತೆಯಾಯಿತು ಎಂದು ಅವರು ತಿಳಿಸಿದರು.
2017:
ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು
ಅನೂರ್ಜಿಗೊಳಿಸಿದ ಸುಪ್ರೀಂಕೋರ್ಟ್ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿತು ಹಾಗೂ ತಕ್ಷಣ ಶರಣಾಗುವಂತೆ ಸೂಚನೆ ನೀಡಿತು. ಮೂಲಕ ತಮಿಳುನಾಡು ಮುಖ್ಯಮಂತ್ರಿಯಾಗುವ ಶಶಿಕಲಾ ಕನಸು ಭಗ್ನಗೊಂಡಿತು.  ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಸಿ.ಘೋಷ್ ಮತ್ತು ನ್ಯಾಯಮೂರ್ತಿ ಅಮಿತವ್ ರಾಯ್ ಅವರ ದ್ವಿಸದಸ್ಯ ಪೀಠ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ, ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ, ಶಶಿಕಲಾ ನಟರಾಜನ್ ಮತ್ತು ಇತರರು ದೋಷಿಗಳು ಎಂದು ವಿಶೇಷ ನ್ಯಾಯಾಲಯ 2014 ಸೆಪ್ಟೆಂಬರ್ 27 ರಂದು ತೀರ್ಪು ನೀಡಿತ್ತು. ಜಯಲಲಿತಾಗೆ 4 ವರ್ಷ ಜೈಲು ಮತ್ತು 100 ಕೋಟಿ ರೂ. ದಂಡ, ಉಳಿದ ಮೂವರಿಗೆ 4 ವರ್ಷ ಜೈಲು ಮತ್ತು ತಲಾ 10 ಕೋಟಿ ರೂ. ದಂಡ ವಿಧಿಸಿತ್ತು. ಜಯಲಲಿತಾ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜಯಲಲಿತಾ, ಶಶಿಕಲಾ ಮತ್ತು ಇತರರನ್ನು ಖುಲಾಸೆಗೊಳಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಶಶಿಕಲಾ ನಟರಾಜನ್ ಈಗಾಗಲೇ ಸುಮಾರು 6 ತಿಂಗಳು ಜೈಲು ಶಿಕ್ಷೆ ಪೂರೈಸಿದ್ದು, ಉಳಿದ 3 ವರ್ಷ 6 ತಿಂಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಬೇಕಾಗಿದೆ.
2017: ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸೋದರ ಸೊಸೆ
ದೀಪಾ ಜಯಕುಮಾರ್ಅವರು ಹಂಗಾಮಿ ಮುಖ್ಯಮಂತ್ರಿ . ಪನ್ನೀರ್ಸೆಲ್ವಂ ಅವರ ಬಣಕ್ಕೆ ಸೇರ್ಪಡೆಗೊಂಡರು. ದೀಪಾ ಅವರು ರಾತ್ರಿ 9.30 ಸುಮಾರಿಗೆ ಪನ್ನೀರ್ಸಲ್ವಂ ಅವರ ಜೊತೆಗೆ ಮರೀನಾ ಬೀಚ್ನಲ್ಲಿರುವ ಅಮ್ಮನವರ ಸಮಾಧಿಗೆ ತೆರಳಿ ನಮಸ್ಕರಿಸಿದರು. ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರು ಅಮ್ಮನವರ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ದೀಪಾ ಆರೋಪಿಸಿದ್ದರುಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ  4 ವರ್ಷ ಸೆರೆವಾಸ ಶಿಕ್ಷೆಗೆ ಗುರಿಯಾಗಿರುವ ವಿಕೆ ಶಶಿಕಲಾ ಅವರು ತಮಿಳುನಾಡು ರಾಜಕಾರಣದಿಂದ ಅನಿವಾರ್ಯವಾಗಿ ದೂರವಿರಬೇಕಾದ ಪರಿಸ್ಥಿತಿಯಲ್ಲಿ ದೀಪಾ ಅವರು ರಾಜಕೀಯ ಪ್ರವೇಶಿಸಲು ವೇದಿಕೆ ಸಿದ್ಧವಾಗಿದೆಯೆ? ಎಂದು ಸ್ಥಳೀಯ ಮಾಧ್ಯಮಗಳು ಪ್ರಶ್ನಿಸಿದವು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ದೀಪಾ ಅವರು ಮೌನಕ್ಕೆ ಶರಣಾದರು. ಮಧ್ಯೆ ಶಿಕ್ಷೆಗೆ ಗುರಿಯಾಗಿರುವ ವಿಕೆ ಶಶಿಕಲಾ ಅವರು ಕುವತೂರಿನಲ್ಲಿರುವ ಗೋಲ್ಡನ್ಬೇ ರೆಸಾರ್ಟ್ನಿಂದ ಹೊರಗೆ ತೆರಳಿದ್ದಾರೆ ಎಂದು ವರದಿ ತಿಳಿಸಿತು.
2017: ಚೆನ್ನೈತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದ್ದು ಮಹತ್ವದ
ಬೆಳವಣಿಗೆಯೊಂದಲ್ಲಿ .ಕೆ.ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ (ಎಐಎಡಿಎಂಕೆ) ನಾಯಕರಾಗಿ ಆಯ್ಕೆ ಮಾಡಲಾಯಿತು. ಹಂಗಾಮಿ ಮುಖ್ಯಮಂತ್ರಿಯಾಗಿರುವ ಪನ್ನೀರ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಪನ್ನೀರ ಸೆಲ್ವಂ ಅವರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ದೊರೆಯಬಾರದು ಎಂದು ಮಾಸ್ಟರ್ ಪ್ಲಾನ್ರೂಪಿಸಿರುವ ಶಶಿಕಲಾ ತಮ್ಮ ಆಪ್ತ .ಕೆ.ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು. ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್  ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಅಪರಾಧಿ ಎಂದು  ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಾಗುವ  ಅವಕಾಶ ಕೈತಪ್ಪಿದೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಬೆಂಬಲಿಗ ಶಾಸಕರೊಂದಿಗೆ ಸಭೆ ನಡೆಸಿ ಪಳನಿ ಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಾರೆ. ಬಳಿಕ ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.  ಶಾಸಕಾಂಗ ಪಕ್ಷದ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿದ ಪಳನಿಸ್ವಾಮಿ 126 ಶಾಸಕರ ಬೆಂಬಲವಿರುವ ಪಟ್ಟಿ ನೀಡಿದರು ಎನ್ನಲಾಯಿತು.. ಪಕ್ಷದ ಶಾಸಕರ ಬೆಂಬಲವಿದ್ದು, ನೂತನ ಸರ್ಕಾರ ರಚನೆಗೆ ಅವಕಾಶ ಕೋರಿ ಪಳನಿಸ್ವಾಮಿ ಹಕ್ಕು ಮಂಡಿಸಿದರು. ಆದರೆ, ಕುರಿತು ರಾಜ್ಯಪಾಲರು ಯಾವುದೇ ಭರವಸೆ ನೀಡಿಲ್ಲ ಎಂದು ವರದಿ ತಿಳಿಸಿತು.

2017: ವಾಷಿಂಗ್ಟನ್‌: ನಾಸಾ 2020ಕ್ಕೆ ಮಂಗಳಯಾನ ನಡೆಸಲಿದ್ದು, ರೋವರ್ಇಳಿಯಬೇಕಾದ ಮೂರು ಸ್ಥಳಗಳನ್ನು ವಿಜ್ಞಾನಿಗಳು ಅಂತಿಮಗೊಳಿಸಿದರು. ಅಟ್ಲಾಸ್ವಿ 541 ರಾಕೆಟ್ಮೂಲಕ ಅಮೆರಿಕದ ವಾಯು ನೆಲೆಯಿಂದ 2020 ಜುಲೈನಲ್ಲಿಮಂಗಳಯಾನ 2020’ ಕಾರ್ಯಾರಂಭಿಸಲಿದೆ. ಮಂಗಳನಲ್ಲಿ ಇರಬಹುದಾದ ಹಾಗೂ ಇದ್ದಿರಬಹುದಾದ ಜೀವ ಸಂಕುಲದ ಮಾಹಿತಿ ಸಂಗ್ರಹಣ ಕಾರ್ಯವನ್ನು ರೋವರ್ನಡೆಸಲಿದೆಸಿರ್ಟಿಸ್‌ (ಕೆಂಪು ಗ್ರಹದ ಹಳೆದ ಭಾಗ), ಜೆಜಿರೋ ಕ್ರಾಟರ್‌ (ಹಿಂದೆ ಮಂಗಳದ ಕೆರೆಗಳ ಭಾಗ) ಹಾಗೂ ಕೊಲಂಬಿಯಾ ಹಿಲ್ಸ್‌ (ಬಿಸಿನೀರು ಬುಗ್ಗೆಗಳ ಪ್ರದೇಶ) ಭೌಗೋಳಿಕ ಪ್ರದೇಶಗಳಲ್ಲಿ ರೋವರ್ಅನ್ವೇಷಣೆ ನಡೆಸಲಿದೆ
2017: ಬೀಜಿಂಗ್: ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತೇಲುವ ಬೃಹತ್ ಪರಮಾಣು ಸ್ಥಾವರಗಳನ್ನು ನಿರ್ವಿುಸಲು ಚೀನಾ ಮುಂದಾಯಿತು. ಆಫ್ಶೋರ್ ಯೋಜನೆಗಳಿಗೆ ಮತ್ತು ಅನಿಲ ಪರಿಶೋಧನೆಗೆ ಅಗತ್ಯ ವಿದ್ಯುತ್ ಉತ್ಪಾದಿಸಲು ಪರಮಾಣು ಸ್ಥಾವರಗಳು ನಿರ್ವಿುಸಲು ಮುಂದಾಗಿರುವುದಾಗಿ ಚೀನಾ ಹೇಳಿಕೊಂಡಿತು. ಪಂಚವಾರ್ಷಿಕ ವಾಣಿಜ್ಯ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ 20 ತೇಲುವ ಪರಮಾಣು ಸ್ಥಾವರಗಳನ್ನು ನಿರ್ವಿುಸಲು ಚೀನಾದ ರಾಷ್ಟ್ರೀಯ ಪರಮಾಣು ನಿಗಮ(ಸಿಎನ್ಎನ್ಸಿ) ಮುಂದಾಯಿತು. ಈಗಾಗಲೇ ಸೂಕ್ತ ಸಂಶೋಧನೆ ಮತ್ತು ಅಗತ್ಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಯಿತು. ತೇಲುವ ಅಣು ಘಟಕಗಳು ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾಗುವ ಪ್ರಮಾಣ ಕಡಿಮೆ. ತುರ್ತು ಪರಿಸ್ಥಿತಿಯಲ್ಲಿ ಸಮುದ್ರದ ನೀರಿನ ಬಳಕೆಯಿಂದ ಅಗ್ನಿ ಅವಘಡದಿಂದ ರಕ್ಷಣೆ ಸಾಧ್ಯ. ಅಗತ್ಯಬಿದ್ದಲ್ಲಿ ಸೂಕ್ತ ಸ್ಥಳಕ್ಕೆ ಎಳೆದೊಯ್ಯಬಹುದು ಎಂದು ಸಿಎನ್ಎನ್ಸಿ ಅಧಿಕಾರಿಗಳು ಮಾಹಿತಿ ನೀಡಿದರು. ದಕ್ಷಿಣ ಚೀನಾ ಸಮುದ್ರ ಪ್ರದೇಶದ ಒಡೆತನದ ವಿಚಾರವಾಗಿ ಚೀನಾ, ವಿಯೆಟ್ನಾಂ, ಫಿಲಿಪ್ಪಿಯನ್ಸ್, ಮಲೇಷ್ಯಾ, ಬ್ರುನೈ ಮತ್ತು ತೈವಾನ್ ರಾಷ್ಟ್ರಗಳು ಹಕ್ಕು ಪ್ರತಿಪಾದಿಸುತ್ತಿವೆ.

2016: ನವದೆಹಲಿ: ಸಿನಿಮಾ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡುವ ಸಂದರ್ಭ ಎದ್ದು ನಿಂತು ಗೌರವ ಸೂಚಿಸುವ ಮತ್ತು ಹಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ಇತ್ತೀಚೆಗಷ್ಟೇ ರಾಷ್ಟ್ರದ ಎಲ್ಲ ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರರ್ಶಿಸುವ ಮೊದಲು ಕಡ್ಡಾಯವಾಗಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕುರಿತು ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆ ಪ್ರಸಾರ ಮಾಡುವ ಸಂದರ್ಭ ಪರದೆಯಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಬೇಕು. ನಡುವೆ ಯಾವುದೇ ಜಾಹೀರಾತು, ವಾಣಿಜ್ಯ ಸಂಬಂಧಿತ ಕ್ಲಿಪ್ಪಿಂಗ್ಗಳನ್ನು ತೋರಿಸಬಾರದು ಎಂದು ಹೇಳಿತು.
ಇಂದು ವ್ಯಾಲಂಟೈನ್ ದಿನ.

2009: ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಬರಾಕ್ ಒಬಾಮ ಆಡಳಿತದ ಬಹು ನಿರೀಕ್ಷೆಯ 'ಆರ್ಥಿಕ ಉತ್ತೇಜಕ' ಕ್ರಮಕ್ಕೆ ದೇಶದ ಸಂಸತ್ತಿನ ಅನುಮತಿ ದೊರೆಕಿತಾದರೂ ಇದು ಭಾರತದ ಪಾಲಿಗೆ ಭಾರಿ ಹೊಡೆತವಾಗಿ ಪರಿಣಮಿಸಿತು. ಈ ಯೋಜನೆಯಂತೆ ಸರ್ಕಾರದ ಸಹಾಯ ಪಡೆಯುವ ಕಂಪೆನಿಗಳು ಇನ್ನು ಮುಂದೆ ಅಮೆರಿಕದ ನುರಿತ ಕೆಲಸಗಾರರನ್ನು ಬದಲಿಸಿ ಅವರ ಸ್ಥಾನಕ್ಕೆ ಭಾರತ ಅಥವಾ ಇತರ ದೇಶಗಳ ಉದ್ಯೋಗಿಗಳನ್ನು ನುರಿತ ನೌಕರರ ವೀಸಾ (ಎಚ್1-ಬಿ) ಅಡಿಯಲ್ಲಿ ನೇಮಕ ಮಾಡಿಕೊಳ್ಳುವಂತಿಲ್ಲ. ಎರಡು ವರ್ಷಗಳ ಹಿಂದೆ ಎಚ್1-ಬಿ ವೀಸಾವನ್ನು ವರ್ಷಕ್ಕೆ 65 ಸಾವಿರಕ್ಕೆ ಮಿತಿಗೊಳಿಸಿದ ಬಳಿಕ ಈ ವೀಸಾ ನೀಡಿಕೆಯನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಭಾರತ ಮತ್ತು ಇತರ ದೇಶಗಳಿಂದ ಕೇಳಿ ಬರುತ್ತಲೇ ಇತ್ತು. ಇದೇ ಸಂದರ್ಭದಲ್ಲಿ ಈ ಆಘಾತಕಾರಿ ಬೆಳವಣಿಗೆ ನಡೆಯಿತು. ಆದರೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳುವವರಿಗೆ ಮಾತ್ರ ಈ ತೊಂದರೆ ಕಾಡುವುದು. ಭಾರತದಿಂದ ಹೊರಗುತ್ತಿಗೆ ಪಡೆಯಲು ನೂತನ ಕ್ರಮದಿಂದ ತೊಡಕಾಗದು ಎಂದು ಪರಿಣಿತರು ಅಂದಾಜಿಸಿದರು.

2009: ಸಂಕಷ್ಟದಲ್ಲಿರುವ ಅಮೆರಿಕದ ಆರ್ಥಿಕ ವ್ಯವಸ್ಥೆ ಸುಧಾರಣೆಗಾಗಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ರೂಪಿಸಿದ 787 ಶತಕೋಟಿ ಡಾಲರ್ (38.56 ಲಕ್ಷ ಕೋಟಿ ರೂಪಾಯಿ) ಮೊತ್ತದ ಉತ್ತೇಜನ ಪ್ಯಾಕೇಜ್‌ಗೆ ಅಲ್ಲಿನ ಸಂಸತ್ತು ಅನುಮೋದನೆ ನೀಡಿತು. ಇದರೊಂದಿಗೆ ಅಧ್ಯಕ್ಷ ಒಬಾಮ ಈ ನಿಟ್ಟಿನ ತಮ್ಮ ಮೊದಲ ಯತ್ನದಲ್ಲಿ ಯಶಸ್ವಿಯಾದರು. 'ಅಮೆರಿಕನ್ ಎಕಾನಮಿ ರಿಕವರಿ ಅಂಡ್ ರಿಇನ್ವೆಸ್ಟ್‌ಮೆಂಟ್ ಆಕ್ಟ್' ಮಸೂದೆಗೆ ಅಮೆರಿಕನ್ ಕಾಂಗ್ರೆಸ್ ಸದನ 60-30 ಮತಗಳಿಂದ ಅನುಮೋದನೆ ನೀಡಿತು. ಇದಕ್ಕೂ ಮುನ್ನ ಜನಪ್ರತಿನಿಧಿಗಳ ಸಭೆ (ಹೌಸ್ ಅಫ್ ರೆಪ್ರೆಸೆಂಟಿಟೀವ್ಸ್) ಇದೇ ಬಗೆಯ ಮಸೂದೆಗೆ 246-183 ಮತಗಳ ಅಂತರದಲ್ಲಿ ಒಪ್ಪಿಗೆ ನೀಡಿತ್ತು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಪಡೆದಿರುವ ಈ ಬೃಹತ್ ಹಣಕಾಸು ನೆರವಿನ ಪ್ಯಾಕೇಜ್ ಮಸೂದೆ ಅಧ್ಯಕ್ಷ ಒಬಾಮ ಅಂಕಿತದೊಂದಿಗೆ ಜಾರಿಗೆ ಬರುವುದು.

2009: ಪಾಕಿಸ್ಥಾನವು ತಾನೊಂದು ರಾಷ್ಟ್ರವಾಗಿ ಉಳಿಯುವ ನಿಟ್ಟಿನಲ್ಲಿ ತನ್ನ ನೆಲದಲ್ಲಿ ವ್ಯಾಪಕವಾಗಿ ಬೇರುಬಿಟ್ಟಿರುವ ತಾಲಿಬಾನ್‌ಗಳ ವಿರುದ್ಧ ಸಮರ ನಿರತವಾಗಿದೆ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದರು. 'ಪಾಕಿಸ್ಥಾನದ ಪ್ರಭುತ್ವವನ್ನು ಆಪೋಷನ ತೆಗೆದುಕೊಳ್ಳುವುದೇ ತಾಲಿಬಾನಿಗಳ ಅಂತಿಮ ಗುರಿ. ನಾವು ಬದುಕುವ ವಿಧಾನವನ್ನೇ ಬದಲಾಯಿಸುವ ಉದ್ದೇಶ ಅವರದ್ದು. ಹೀಗಾಗಿ ಸೇನಾ ಬಲ ಬಳಸಿ ಅವರನ್ನು ಹಿಮ್ಮೆಟ್ಟಿಸುವುದು ಅನಿವಾರ್ಯ' ಎಂದು ಅಮೆರಿಕದ ಟಿ.ವಿ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು. ಆಘ್ಘಾನಿಸ್ಥಾನದ ಗಡಿಯಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಸೇನೆಯು ಸರ್ಕಾರದ ಜೊತೆ ಇದೆ. ಒಂದು ವೇಳೆ ಸೇನೆಯ ಬೆಂಬಲ ಇಲ್ಲದಿದ್ದರೆ ಈ ವೇಳೆಗೆ ಸರ್ಕಾರವನ್ನೇ ಉಗ್ರರು ಕಿತ್ತು ಎಸೆದಾಗಿರುತ್ತಿತ್ತು ಎಂದೂ ಅವರು ಹೇಳಿದರು.

2009: ಬಿಜಿನೆಸ್ ಮ್ಯಾಗಜಿನ್ ಫೋಬ್ಸ್ ಬಿಡುಗಡೆ ಮಾಡಿದ ವಿಶ್ವದ ಪ್ರಭಾವಿ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಅನಿವಾಸಿ ಭಾರತೀಯ ಲಕ್ಮಿ ಮಿತ್ತಲ್ ಹಾಗೂ ಭಾರತದ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಸ್ಥಾನ ಪಡೆದರು. ಪಟ್ಟಿಯಲ್ಲಿ ಲಕ್ಷ್ಮಿ ಮಿತ್ತಲ್ 3ನೇ ಸ್ಥಾನ ಪಡೆದರು. ಇಂಗ್ಲೆಂಡ್ ಚುನಾವಣೆ ವೇಳೆ ಮಿತ್ತಲ್ ಹಿಂಬಾಲಕರ ನಿಲುವು ಪ್ರಭಾವ ಬೀರಲಿದೆ ಎಂದು ಪತ್ರಿಕೆ ವಿಶ್ಲೇಷಿಸಿತು. 7ನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಅವರ ಆರ್‌ಐಎಲ್ ಭಾರತದ ಅತೀ ದೊಡ್ಡ ತೈಲ ಕಂಪೆನಿ. ಮುಖೇಶ್ ಪೆಟ್ರೋಲಿಯಂ, ಎಲ್‌ಪಿಜಿ, ಪೆಟ್ರೋಕೆಮಿಕಲ್ಸ್, ಜವಳಿ ಘಟಕ ಮತ್ತು ಮುಂಬೈಯಲ್ಲಿ 2 ಶತಕೋಟಿ ಡಾಲರ್ ಮೌಲ್ಯದ ಮನೆ ಒಡೆಯ ಎಂದು ವಿವರಿಸಿತು.

2008: 58ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿದ್ಧಾರ್ಥ ಸಿನ್ಹಾ ನಿರ್ದೇಶನದ ಭಾರತೀಯ ಸಾಕ್ಷ್ಯಚಿತ್ರ `ಉಡೆಧ್ ಬನ್'ಗೆ ರಜತ ಪದಕ ಪ್ರಶಸ್ತಿ ಲಭಿಸಿತು. ಚಲನಚಿತ್ರೋತ್ಸವದ ಮುಖ್ಯ ಕಾರ್ಯಕ್ರಮವೆಂದೇ ಬಿಂಬಿತವಾದ `ಸಾಕ್ಷ್ಯಚಿತ್ರಗಳ ವಿಭಾಗದಲ್ಲಿ' ಈ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಈ ವಿಭಾಗದಲ್ಲಿ ಪ್ರದರ್ಶನಗೊಂಡ ಸಾಕ್ಷ್ಯಚಿತ್ರಗಳಲ್ಲಿ ಹನ್ನೊಂದು ಉತ್ತಮ ಸಾಕ್ಷ್ಯ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಅವುಗಳಲ್ಲಿ ಮತ್ತೊಬ್ಬ ಭಾರತೀಯ ನಿರ್ದೇಶಕ ಉಮೇಶ್ ಕುಲಕರ್ಣಿ ನಿರ್ದೇಶನದ `ತ್ರೀ ಆಫ್ ಅಸ್' ಚಿತ್ರ ಕೂಡ ಸೇರಿತು. ರಜತ ಪದಕಕ್ಕೆ ಆಯ್ಕೆಯಾದ 21 ನಿಮಿಷದ, ಮಾತಿಲ್ಲದ `ಉಡೆಧ್ ಬನ್' ಸಾಕ್ಷ್ಯ ಚಿತ್ರದಲ್ಲಿ ಹದಿಹರೆಯದ ಯುವಕನೊಬ್ಬನ ಜೀವನ ಕ್ರಮವನ್ನು ಪ್ರದರ್ಶಿಸುವ ಕಥಾ ಹಂದರವಿದೆ. ಆ ಯುವಕ ತನ್ನ ಕುಟುಂಬ ಹಾಗೂ ಶಾಲೆಯಿಂದ ಎದುರಿಸುವ ಕಷ್ಟಗಳು ಹಾಗೂ ಅವುಗಳನ್ನು ಬಗೆಹರಿಸಿಕೊಳ್ಳುವ ವಿಧಾನಗಳನ್ನು ಈ ಚಿತ್ರ ವಿವರಿಸುತ್ತದೆ. ಈ ಚಿತ್ರದಲ್ಲಿ ಆಧುನಿಕ ನಿರೂಪಣೆ ಮೂಲಕ ಚಿತ್ರ ಮತ್ತು ಶಬ್ದದ ನಡುವೆ ಸಾಮರಸ್ಯ ಕಲ್ಪಿಸಿ, ಪದಗಳಿಗಿಂತ ಇವೆರಡಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ವಿಶೇಷವಾಗಿದೆ. ಈ ವಿಶೇಷಕ್ಕಾಗಿಯೇ ಉಡೆಧ್ ಬನ್ ಚಿತ್ರಕ್ಕೆ ರಜತ ಪದಕ ಲಭಿಸಿತು' ಎಂದು ಅಂತಾರಾಷ್ಟ್ರೀಯ ಚಿತ್ರೋತ್ಸವದ ತ್ರಿಸದಸ್ಯರ ತೀರ್ಪುಗಾರರ ಸಮಿತಿ ಹೇಳಿತು.

2008: ಕಾರ್ಮಿಕ ಮಹಿಳೆಯ ಹೆರಿಗೆ ಭತ್ಯೆಯನ್ನು ಈಗಿರುವ 250 ರೂಪಾಯಿಗಳಿಂದ ಒಂದು ಸಾವಿರ ರೂಪಾಯಿಗಳಿಗೆ ಏರಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. 1961ರ ಹೆರಿಗೆ ಭತ್ಯೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿತು.

2008: ಜಾರ್ಖಂಡಿನ ಜೆಎಂಎಂ ಸಂಸದ ಸುನೀಲ್ ಮಹತೊ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ನಕ್ಸಲನೊಬ್ಬ ಸೇರಿದಂತೆ ಒಟ್ಟು ಏಳು ಮಂದಿ ನಕ್ಸಲೀಯರನ್ನು ಪೊಲೀಸರು ಎನ್ ಕೌಂಟರಿನಲ್ಲಿ ಹತ್ಯೆ ಮಾಡಿದರು. ಒರಿಸ್ಸಾದ ಗಡಿಪ್ರದೇಶ ಫುಲ್ ಜೊರಿನ ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು ಮತ್ತು ಪೊಲೀಸರು ನಡುವೆ ನಡೆದ ಈ ಘರ್ಷಣೆಯಲ್ಲಿ ಹತ್ಯೆಯಾಗಿರುವವರಲ್ಲಿ ಇಬ್ಬರು ಮಹಿಳೆಯರು. 2007ರ ಮಾರ್ಚ್ 4ರಂದು ಬಘುರಿಯಾದಲ್ಲಿ ಸಂಸದ ಸುನೀಲ್ ಮಹತೊ ಅವರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯಲ್ಲಿ ಭಾಗಿಯಾಗಿದ್ದ ವಿಕಾಸ್ ಎಂಬುವವನನ್ನು ಪೊಲೀಸರು ಘರ್ಷಣೆಯಲ್ಲಿ ಹತ್ಯೆ ಮಾಡಿದರು.

2008: ಸಿಪಿಎಂ ಶಾಸಕ ಅಜಿತ್ ಸರ್ಕಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು, ಆರ್ ಜೆ ಡಿಯ ವಿವಾದಾತ್ಮಕ ನಾಯಕ ಪಪ್ಪು ಯಾದವ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಾಲ್ಕನೇ ಅವಧಿಗೆ ಲೋಕಸಭಾ ಸದಸ್ಯರಾದ 40 ವರ್ಷದ ಪಪ್ಪು ಯಾದವ್ ಅವರನ್ನು ದೆಹಲಿಯ ತಿಹಾರ್ ಜೈಲಿನಿಂದ ಕರೆತಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿ. ಎಂ. ಶ್ರೀವಾಸ್ತವ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೂಡಲೇ ಕುಸಿದು ಕಣ್ಣೀರಿಟ್ಟ ಪಪ್ಪು ಯಾದವ್ ತಮ್ಮ ಮೇಲೆ ದಯೆ ತೋರುವಂತೆ ವಿನಂತಿಸಿದರು. ಕೊಲೆ, ಅಪಹರಣ, ಸುಲಿಗೆ ಸೇರಿ 45 ಪ್ರಕರಣಗಳಲ್ಲಿ ಪಪ್ಪು ಯಾದವ್ ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷೇತರ ಶಾಸಕ ರಾಜನ್ ತಿವಾರಿ, ಕುಖ್ಯಾತ ರೌಡಿ ಅನಿಲ್ ಯಾದವ್ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2008: ರಾಜ್ಯಸಭೆಯ ಮಾಜಿ ಸದಸ್ಯೆ ಡಾ.ಪಿ. ಸೆಲ್ವಿದಾಸ್, ಮಾಜಿ ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಾಹಿತಿ ಸಾರಾ ಅಬೂಬಕ್ಕರ್ ಸೇರಿದಂತೆ ಐವರಿಗೆ ಗೌರವ ಡಾಕ್ಟರೇಟ್ ನೀಡಲು ಮಂಗಳೂರು ವಿಶ್ವವಿದ್ಯಾಲಯವು ತೀರ್ಮಾನಿಸಿದೆ ಎಂದು ಕುಲಪತಿ ಪ್ರೊ. ಕೆ.ಎಂ. ಕಾವೇರಿಯಪ್ಪ ಪ್ರಕಟಿಸಿದರು.

2007: ಕಾವೇರಿ ನ್ಯಾಯಮಂಡಳಿಯ ತೀರ್ಪಿನಿಂದ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಪ್ರತಿಭಟಿಸಿ ಕಾವೇರಿ ಅಚ್ಚುಕಟ್ಟು ಪ್ರದೇಶವಾದ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯ, ಕೇಂದ್ರ ವಾರ್ತಾ ಖಾತೆ ರಾಜ್ಯ ಸಚಿವ ಅಂಬರೀಷ್ ಅವರು ಸಚಿವ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ 'ಈ ರಾಜೀನಾಮೆ ಸ್ವೀಕರಿಸುವ ಮಾದರಿಯಲ್ಲಿ ಇಲ್ಲ' ಎಂದು ಸ್ಪೀಕರ್ ಕಚೇರಿ ಹೇಳಿತು.

2007: ಮಡಗಾಂವಿನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10,000 ರನ್ ಗಳಿಸಿದ ಆರನೇ ಆಟಗಾರನ ಗೌರವಕ್ಕೆ ಪಾತ್ರರಾದರು.

2007: ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಾದ ಟಿ.ಬಿ. ಸೊಲಬಕ್ಕನವರ, ಕೆ.ಟಿ. ಶಿವಪ್ರಸಾದ ಹಾಗೂ ಎಚ್. ಎನ್. ಸುರೇಶ್ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ 2006ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿತು.

2006: ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಮೂರು ತಿಂಗಳ ಒಳಗಾಗಿ ಈ ಸಂಬಂಧ ಈಗಿನ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆಯೂ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೂಚಿಸಿತು. ನೋಂದಣಿ ಇಲ್ಲದ ವಿವಾಹಗಳಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಮನ್ನಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2006: ಮಂಗಳೂರಿನ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಸಮಿತಿಯು 2006ನೇ ಸಾಲಿನ ಪ್ರೊ. ಎಸ್. ವಿ.ಪಿ. ಸಂಸ್ಮರಣಾ ಪ್ರಶಸ್ತಿಯನ್ನು ಮೈಸೂರಿನ ಸಿಪಿಕೆ ಎಂದೇ ಪರಿಚಿತರಾದ ಪ್ರೊ. ಸಿ.ಪಿ. ಕೃಷ್ಣ ಕುಮಾರ್ ಅವರಿಗೆ ನೀಡಲು ತೀರ್ಮಾನಿಸಿತು.

2006: ಬೆಂಗಳೂರಿನ ಉದ್ಯೋಗಿ ಅಭಿಲಾಷ್ ಮತ್ತು ಲಕ್ಷ್ಮಿ ಎಂಬ ಯುವಜೋಡಿ, ಪುದುಚೆರಿಯಿಂದ ಸಮುದ್ರದ ಮಧ್ಯಕ್ಕೆ ಹಡಗಿನಲ್ಲಿ ಸಾಗಿ ಅಲ್ಲೇ ಗೆಳೆಯರು, ನೌಕಾ ಸಿಬ್ಬಂದಿ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ಪ್ರೇಮಿಗಳ ದಿನವನ್ನು ವಿನೂತನವಾಗಿ ಆಚರಿಸಿತು. ಹಡಗಿನಲ್ಲೇ ಅರ್ಚಕರು ಸೇರಿದಂತೆ ಮದುವೆಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು.

2006: ಪ್ರಜಾತಾಂತ್ರಿಕ ನಾಯಕರಾದ ನೊಬೆಲ್ ಪ್ರಶಸ್ತಿ ವಿಜೇತ ಅಂಗ್ ಸಾನ್ ಸೂ ಕೀ ಅವರ ಸಹಾಯಕ ಟಿನ್ ಓ ಅವರ ಯಂಗೂನ್ ಗೃಹಬಂಧನದ ಅವಧಿಯನ್ನು ಇನ್ನೂ 12 ತಿಂಗಳುಗಳ ಅವಧಿಗೆ ವಿಸ್ತರಿಸಿ ಮ್ಯಾನ್ಮಾರಿನ ಆಡಳಿತವು ಆದೇಶ ಹೊರಡಿಸಿತು. 2003ರ ಮೇ ತಿಂಗಳಿನಲ್ಲಿ ಅಂಗ್ ಸಾನ್ ಸೂ ಕಿ ಬಂಧನದ ಸಂದರ್ಭದಲ್ಲೇ ಟಿನ್ ಓ ಅವರನ್ನೂ ಬಂಧಿಸಲಾಗಿತ್ತು. ಮೊದಲಿಗೆ ವಾಯುವ್ಯ ಮ್ಯಾನ್ಮಾರಿನ ಕಾಲೇ ಸೆರೆಮನೆಯಲ್ಲಿ ಇರಿಸಿ ನಂತರ 2004ರ ಫೆಬ್ರುವರಿಯಲ್ಲಿ ಅವರನ್ನು ಯಂಗೂನ್ ಗೆ ತಂದು ಗೃಹಬಂಧನದಲ್ಲಿ ಇರಿಸಲಾಗಿತ್ತು.

2000: ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಸೆನ್ಸೆಕ್ಸ್ 6150.69 ಪಾಯಿಂಟಿಗೆ ತಲುಪಿತು. ಇದು ಭಾರತೀಯ ಷೇರು ವಿನಿಮಯ ಕೇಂದ್ರಗಳ ಇತಿಹಾಸದಲ್ಲಿ ಆದ ಗರಿಷ್ಠ ಏರಿಕೆಯಾಗಿತ್ತು.

1989: ಇರಾನಿನ ಖೊಮೇನಿ ಭಾರತೀಯ ಸಂಜಾತ ಬ್ರಿಟಿಷ್ ಸಾಹಿತಿ ಸಲ್ಮಾನ್ ರಷ್ದಿ ಅವರಿಗೆ `ಸಟಾನಿಕ್ ವರ್ಸಸ್' ಪುಸ್ತಕ ಬರೆದುದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿ ಫತ್ವಾ ಹೊರಡಿಸಿದ. ಈ ಫತ್ವಾವನ್ನು 1998ರಲ್ಲಿ ಹಿಂತೆಗೆದುಕೊಳ್ಳಲಾಯಿತು.

1981: ಡಕಾಯಿತ ರಾಣಿ ಫೂಲನ್ ದೇವಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ 20 ಮಂದಿ ಠಾಕೂರರನ್ನು ಗುಂಡಿಟ್ಟು ಕೊಂದಳು. ತನ್ನ ಪ್ರಿಯಕರ ವಿಕ್ರಮ್ ಮಲ್ಹನನ್ನು ಕೊಂದದ್ದಕ್ಕೆ ಸೇಡಿನ ಕ್ರಮವಾಗಿ ವ್ಯಾಲಂಟೈನ್ ದಿನವಾದ ಇದೇ ದಿನ ಫೂಲನ್ ದೇವಿ ಎಸಗಿದ ಈ ಕೃತ್ಯ ಅಮೆರಿಕಾದ `ವ್ಯಾಲಂಟೈನ್ ದಿನದ ಹತ್ಯಾಂಕಾಂಡ'ದಷ್ಟೇ ಖ್ಯಾತಿ ಗಳಿಸಿತು.

1957: ತನ್ನ ಪ್ರಥಮ ಮೆಟಾಟನ್ ಬಾಂಬ್ ತಯಾರಿಕೆಯನ್ನು ಬ್ರಿಟನ್ ಬಹುತೇಕ ಪೂರೈಸಿದೆ ಎಂದು ಬ್ರಿಟನ್ನಿನ ರಕ್ಷಣಾ ಸಚಿವ ಡಂಕನ್ ಸ್ಯಾಂಡಿಸ್ ಪ್ರಕಟಿಸಿದರು. ಈ ಬಾಂಬಿಗೆ 14 ಟನ್ ಆಸ್ಫೋಟಕಗಳ ಶಕ್ತಿ ಇದೆ.

1944: ಸಂಗೀತ ಕಲಾವಿದ ಎಚ್. ಎಂ. ಮಹೇಶ್ (ಸಂಗೀತಾ ಮಹೇಶ್) ಅವರು ಎಚ್. ಎಂ. ನಾರಾಯಣಭಟ್ - ವೆಂಕಟೇಶ್ವರಿ ದಂಪತಿಯ ಮಗನಾಗಿ ಮಂಗಳೂರು ಸಮೀಪದ ಕುಂಬಳೆಯಲ್ಲಿ ಜನಿಸಿದರು. ಡಾ. ರಾಜಕುಮಾರ್ ಅವರೊಂದಿಗೆ ವಾರ ಬಂತಮ್ಮಾ, ಮಂತ್ರಾಲಯಕೆ ಹೋಗೋಣ, ಅಯ್ಯಪ್ಪ ಸ್ವಾಮಿ ಮುಂತಾದ ಭಕ್ತಿಗೀತೆಗಳ ಧ್ವನಿ ಮುದ್ರಣ. ಪಿ.ಬಿ.ಎಸ್. ಜಾನಕಿ ಅವರ ಗಜಮುಖನೆ ಗಣಪತಿಯೇ, ಭಾದ್ರಪದ ಶುಕ್ಲದಾ ಚೌತಿಯಂದು, ಬಿ.ಕೆ. ಸುಮಿತ್ರಾ ಅವರ ಉಡುಪಿಯದು , ಕಂಗಳ ಮುಂದೆ ಮುಂತಾದ ಜನಪ್ರಿಯ ಭಕ್ತಿಗೀತೆಗಳ ತಯಾರಿ. 1980ರಲ್ಲಿ ಸಂಗೀತಾ ಸಂಸ್ಥೆ ಸ್ಥಾಪನೆ. ಭಕ್ತಿಗೀತೆ, ಜನಪದ ಗೀತೆ, ಭಾವಗೀತೆ, ಶಾಸ್ತ್ರೀಯ ಸಂಗೀತ, ಷರೀಫ್ ಸಾಹೇಬರ ಹಾಡು, ಯಕ್ಷಗಾನ, ಹರಿಕಥೆಗಳ ಧ್ವನಿಮುದ್ರಣ ಹಾಗೂ ಸಿಡಿ ಬಿಡುಗಡೆ ಮಾಡಿರುವ ಮಹೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

1929: ಪೊಲೀಸರಂತೆ ವೇಷ ಧರಿಸಿ ಅಲ್ ಕ್ಯಾಪೋನ್ ತಂಡದ ಸದಸ್ಯರು ಜಾರ್ಜ್ `ಬಗ್ಸ್; ಮೋರನ್ ತಂಡದ 7 ಜನರನ್ನು ಷಿಕಾಗೋ ನಗರದ ಗ್ಯಾರೇಜ್ ಒಂದರಲ್ಲಿ ಕೊಂದು ಹಾಕಿದರು. ಈ ಘಟನೆ `ವ್ಯಾಲಂಟೈನ್ ದಿನದ ಹತ್ಯಾಕಾಂಡ' ಎಂದೇ ಖ್ಯಾತಿ ಪಡೆಯಿತು.

1919: ಕಲಾವಿದ ಸಿ.ಆರ್. ಸುಂದರರಾವ್ ಜನನ.

1908: ಕಲಾವಿದ ಕೆ.ಎ. ಚಿಟ್ಟಿ ಜನನ.

1900: ಕಲಾವಿದ ಎಚ್. ಎಸ್. ಇನಾಮತಿ ಜನನ.

1779: ಹದಿನೆಂಟನೇ ಶತಮಾನದ ಖ್ಯಾತ ಸಂಶೋಧಕ ಕ್ಯಾಪ್ಟನ್ ಜೇಮ್ಸ್ ಕುಕ್ ಪಾಲಿನೇಷಿಯಾದ ನಿವಾಸಿಗಳ ಜೊತೆ ಸಂಭವಿಸಿದ ಘರ್ಷಣೆಯಲ್ಲಿ ಮೃತನಾದ. ಶಾಂತ ಸಾಗರದಲ್ಲಿ ಈತ ನಡೆಸಿದ ಯಾನಗಳು ಅಪಾರ ಖ್ಯಾತಿ ಪಡೆದಿವೆ.

1483: ಚಕ್ರವರ್ತಿ ಬಾಬರ್ (1483-1530) ಹುಟ್ಟಿದ. ಈತ ಭಾರತದಲ್ಲಿ ಮೊಘಲ್ ರಾಜವಂಶವನ್ನು ಸ್ಥಾಪಿಸಿದ ವ್ಯಕ್ತಿ.

No comments:

Post a Comment