Tuesday, February 5, 2019

ಇಂದಿನ ಇತಿಹಾಸ History Today ಫೆಬ್ರುವರಿ 05

ಇಂದಿನ ಇತಿಹಾಸ History Today ಫೆಬ್ರುವರಿ 05
2019: ನವದೆಹಲಿ: ಕೇಂದ್ರದಲ್ಲಿ ಲೋಕಪಾಲ ಮತ್ತು  ರಾಜ್ಯದಲ್ಲಿ ಲೋಕಾಯುಕ್ತರ ನೇಮಕಾತಿಗೆ ಆಗ್ರಹಿಸಿ ನಡೆಸುತ್ತಿದ್ದ ತಮ್ಮ ಏಳು ದಿನಗಳ ನಿರಶನವನ್ನು ಭ್ರಷ್ಟಾಚಾರ ವಿರೋಧಿ ಚಳವಳಿಕಾರ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭರವಸೆ ಮೇರೆಗೆ ಅಂತ್ಯಗೊಳಿಸಿದರು. ಫಡ್ನವಿಸ್ ಮತ್ತು ಇತರ ಸಚಿವರ ಜೊತೆಗಿನ ಸಮಾಧಾನಕರ ಮಾತುಕತೆಗಳ ಬಳಿಕ ನನ್ನ ನಿರಶನವನ್ನು ಕೊನೆಗೊಳಿಸಲು ನಾನು ನಿರ್ಧರಿಸಿದ್ದೇನೆ ಎಂದು ಅಣ್ಣಾ ಹಜಾರೆ ವರದಿಗಾರರಿಗೆ ತಿಳಿಸಿದರು.  ಅಣ್ಣಾ ಹಜಾರೆಯವರ ಹುಟ್ಟೂರಾದ ಅಹ್ಮದನಗರ ಜಿಲ್ಲೆಯ ರಾಳೆಗಣ ಸಿದ್ಧಿಗ್ರಾಮಕ್ಕೆ ಮಧ್ಯಾಹ್ನ ಆಗಮಿಸಿದ ಫಡ್ನವಿಸ್ ಅವರು ಅಣ್ಣಾ ಹಜಾರೆ ಅವರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿ ಸರ್ಕಾರವು ಅವರ ಬೇಡಿಕೆಗಳ ಈಡೇರಿಕೆಗೆ ಒಪ್ಪಿಕೊಂಡಿದೆ ಎಂದು ಸ್ಪಷ್ಟ ಪಡಿಸಿದರು. ಲೋಕಪಾಲರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಫಡ್ನವಿಸ್ ಹೇಳಿದರು. ಕೇಂದ್ರ ಸಚಿವರಾದ ರಾಧಾ ಮೋಹನ್ ಸಿಂಗ್ ಮತ್ತು ಸುಭಾಶ್ ಭರ್ಮೆ ಹಾಗೂ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರೂ ಹಜಾರೆ ಜೊತೆಗಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

2019: ಮುಂಬೈ: ಇಬ್ಬರು ಅಪರಿಚಿತ ವ್ಯಕ್ತಿಗಳು ನೆರೆಯ ನವೀ ಮುಂಬೈಯ ಘನ್ಸೋಲಿ ಪ್ರದೇಶದಲ್ಲಿ ಪ್ಯಾರಾಚೂಟಿನಲ್ಲಿ ಬಂದು ಇಳಿದಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸ್ ಮತ್ತು ಮಹಾರಾಷ್ಟ್ರ ಎಟಿಎಸ್ ಸೇರಿದಂತೆ ವಿವಿಧ ಸಂಸ್ಥೆಗಳು ತೀವ್ರ ತನಿಖೆ ಆರಂಭಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು., ಪ್ಯಾರಾಚ್ಯೂಟಿನಲ್ಲಿ ಬಂದಿಳಿದ ಇಬ್ಬರು ಆಗಂತುಕರೂ ತಮಗಾಗಿ ಕಾದು ನಿಂತಿದ್ದ ಕಾರನ್ನು ಏರಿ ಅಲ್ಲಿಂದ ಹೊರಟು ಹೋದರು, ಬಂದಿಳಿದ ಆಗಂತುಕರಲ್ಲಿ ಒಬ್ಬರು ಮಹಿಳೆಯಾಗಿದ್ದು ಆಕೆ ವಿದೇಶೀಯಾಗಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಪ್ಯಾರಾಚ್ಯೂಟಿನಲ್ಲಿ ಆಗಂತುಕರು ಬಂದಿಳಿದ ಬಗ್ಗೆ ಸ್ಥಳೀಯ ನಿವಾಸಿಗಳು ನೀಡಿರುವ ಹೇಳಿಕೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಡಿಸಿಪಿ ಸುಧಾಕರ ಪಥಾರೆ ಹೇಳಿದರು. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ನುಡಿದರು. ಪ್ರದೇಶದ ವಿವಿಧ ಕಡೆಗಳಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಿಶ್ಲೇಷಿಸುತ್ತಿದ್ದಾರೆ ಎಂದು ಡಿಸಿಪಿ ಹೇಳಿದರು. ಮಧ್ಯೆ, ಸ್ಥಳದಲ್ಲಿ ಇಬ್ಬರನ್ನು ತೋರಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಅಸ್ಪಷ್ಟವಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಬ್ಬ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ಪ್ಯಾರಾಚ್ಯೂಟ್ ಮೂಲಕ ಬಂದು ರಸ್ತೆಯ ಮಧ್ಯೆ ಇಳಿದರು ಮತ್ತು  ಅವರಿಗಾಗಿ ಕಾಯುತ್ತಿದ್ದ ಕಾರಿನಲ್ಲಿ ಕುಳಿತು ಹೊರಟುಹೋದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದರು ಎಂದು ಅವರು ನುಡಿದರು. ಸ್ಥಳೀಯ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ದಳ, ಮಹಾರಾಷ್ಟ್ರ ಎಟಿಎಸ್ ಮತ್ತು ಇತರ ಸಂಸ್ಥೆಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಅವರು ಹೇಳಿದರು. ನವೀ ಮುಂಬಯಿಯು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿನ ಪಶ್ಚಿಮ ಕರಾವಳಿಯ ಯೋಜಿತ ನಗರವಾಗಿದೆ. ೨೦೧೬ರ ಸೆಪ್ಟೆಂಬರ್ ತಿಂಗಳಲ್ಲಿ ನವಿ ಮುಂಬಯಿಯ ಉರಾನ್ ಪ್ರದೇಶದಲ್ಲಿ ಪಠಾಣರ ದುಸ್ತಿನಲ್ಲಿದ್ದ ಶಸ್ತ್ರಧಾರಿ ಪುರುಷರ ಅನುಮಾನಾಸ್ಪದ ಗುಂಪನ್ನು ತಾವು ಕಂಡಿರುವುದಾಗಿ ಕೆಲವರು ಪ್ರತಿಪಾದಿಸಿದ ಬಳಿಕ ನವೀ ಮುಂಬೈ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಉಂಟಾಗಿತ್ತುಆಗ ಮುಂಬೈ, ನವೀ ಮುಂಬೈ, ಥಾಣೆ ಮತ್ತು ರಾಯಗಢ ಕರಾವಳಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಏನಿದ್ಧರೂ ಶೋಧ ಕಾರ್ಯಾಚರಣೆಯ ಬಳಿಕ ವರದಿ ಸುಳ್ಳು ಎಂಬುದು ಬೆಳಕಿಗೆ ಬಂದು ಜನರು ನಿರಾಳರಾಗಿದ್ದರು.

2019: ನವದೆಹಲಿ: ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಪಂಡ್ ಹಗರಣಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಸಿಬಿಐ ಜೊತೆ ವಿಧೇಯತೆಯಿಂದ ಸಹಕರಿಸುವಂತೆ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಕೋಲ್ಕತ ಪೊಲೀಸ್ ಕಮೀಷನರ್ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ಆರಂಭಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಧ್ಯೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ  ಸಭೆಗಳಿಗೆ ತಾವು ಅನುಮತಿ ನಿರಾಕರಿಸಿಯೆ ಇಲ್ಲ ಎಂಬುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟ ಪಡಿಸಿದರು. ದೇಶವನ್ನು ಬಂದೂಕು ಮತ್ತು ಗೋರಕ್ಷಕರಿಂದ ನಡೆಸಲು ಸಾಧ್ಯವಿಲ್ಲ ಎಂದು ಅವರು ಗುಡುಗಿದರು.  ಕೇಂದ್ರದ ಪತ್ರ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರವೊಂದರಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಕೋಲ್ಕತ ಪೊಲೀಸ್ ಮುಖ್ಯಸ್ಥರು ಅಶಿಸ್ತಿನ ವರ್ತನೆ ಮತ್ತು ಅಖಿಲ ಭಾರತ ಸೇವಾ ನಿಯಮಗಳ ಉಲ್ಲಂಘನೆಯಾಗಿರುವುದನ್ನು ಉಲ್ಲೇಖಿಸಿತು. ೨೦೧೯ರ ಫೆಬ್ರುವರಿ ೫ನೇ ದಿನಾಂಕವನ್ನು ನಮೂದಿಸಲಾಗಿರುವ ಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ತನಗೆ ಲಭಿಸಿರುವ ಮಾಹಿತಿಗಳ ಪ್ರಕಾರ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರು ಧರಣಿ ಸ್ಥಳದಲ್ಲಿ ಇತರ ಕೆಲವು ಪೊಲೀಸ್ ಅಧಿಕಾರಿಗಳ ಜೊತೆಗೆ ಕೋಲ್ಕತದ ಮೆಟ್ರೋ ಚಾನೆಲ್ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರ ಜೊತೆಗೆ ಕುಳಿತಿದ್ದುದು ಗೊತ್ತಾಗಿದೆ. ಇದು ಅಶಿಸ್ತಿನ ವರ್ತನೆಯಾಗಿದ್ದು, ೧೯೬೮ರ ಅಖಿಲ ಭಾರತ ಸೇವಾ (ನಡವಳಿಕೆ) ನಿಯಮಾವಳಿಗಳು ಮತ್ತು ೧೯೬೯ರ ಅಖಿಲ ಭಾರತ ಸೇವಾ (ಶಿಸ್ತು ಮತ್ತು ಅಪೀಲ್) ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿತು.  ಕೋಲ್ಕತ ಪೊಲೀಸ್ ಕಮೀಷನರ್ ಅವರು ೧೯೬೮ರ ಅಖಿಲ ಭಾರತ ಸೇವಾ (ನಡವಳಿಕೆ) ನಿಯಮಗಳ ()ಮತ್ತು ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಪತ್ರ ಹೇಳಿತು. ಈ ಹಿನ್ನೆಲೆಯಲ್ಲಿ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.  ಅನುಮತಿ ನಿರಾಕರಿಸಿಲ್ಲ- ಮಮತಾ: ’ನಾನು ಯಾವುದೇ ಅನುಮತಿ (ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಶ್ಚಿಮ ಬಂಗಾಳ ರಾಲಿಗೆ) ನಿರಾಕರಿಸಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಹೇಳಿದರು.  ಅವರು  (ಅಮಿತ್ ಶಾ) ಅಸ್ವಸ್ಥರಾಗಿದ್ದರು, ಆದರೂ ಬಂದರು ಮತ್ತು ರಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಮತ್ತೆ ಯಾಕೆ ಅವರು ತಮಗೆ  ರಾಲಿ ನಡೆಸಲು ಬಿಡುತ್ತಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ?’ ಎಂದು ಮಮತಾ ಬ್ಯಾನರ್ಜಿ ಅವರು ಕೋಲ್ಕತದಲ್ಲಿ ತಮ್ಮ ಧರಣಿ ಸ್ಥಳದಲ್ಲಿ ಪ್ರಶ್ನಿಸಿದರುಅರವಿಂದ ಕೇಜ್ರಿವಾಲ್: ’ಪ್ರಧಾನಿ ಮೋದಿಯವರು ಮಮತಾ ಬ್ಯಾನರ್ಜಿ ಅವರಿಗೆ ಮಾತ್ರವೇ ಅಲ್ಲ, ಪ್ರತಿಯೊಬ್ಬರಿಗೂ ತೊಂದರೆ ನೀಡುತ್ತಿದ್ದಾರೆ. ಅವರು ನನ್ನ ಮನೆ ಮೇಲೆ ದಾಳಿ ನಡೆಸಿದರು. ಬಳಿಕ ನನ್ನ ಕಾರ್ಯದರ್ಶಿಯ ಮೇಲೆ, ಮತ್ತು ಈಗ ಮಮತಾ ಬ್ಯಾನರ್ಜಿ ಅವರ ಮೇಲೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಹೇಳಿದರು. ಇದು ಸರಿಯಲ್ಲ, ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಸರಿಯಲ್ಲ ಎಂದು ಅವರು ನುಡಿದರು. ಕೋಲ್ಕತ ಪೊಲೀಸ್ ಮುಖ್ಯಸ್ಥರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರನ್ನು ಕೇಜ್ರಿವಾಲ್ ಅಭಿನಂದಿಸಿದರು. ’ನಮ್ಮ ಹೋರಾಟದ ಯಶಸ್ವಿಗಾಗಿ ಅಭಿನಂದನೆಗಳು ದೀದಿ ಎಂದು ಅವರು ಟ್ವೀಟ್ ಮಾಡಿದರುಸ್ಮೃತಿ ಇರಾನಿ ಲೇವಡಿ: ಮಧ್ಯೆ ಕೋಲ್ಕತ ಪೊಲೀಸ್ ಕಮೀಷನರ್ ಅವರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ತಮ್ಮ ನಿಲುವಿನನೈತಿಕ ವಿಜಯ ಎಂಬುದಾಗಿ ಪ್ರತಿಪಾದಿಸಿಕೊಂಡದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರನ್ನು ಕೇಂದ್ರ ಸಚಿವ ಸ್ಮೃತಿ ಇರಾನಿ ಲೇವಡಿ ಮಾಡಿದರು. ಮುಖದ ಮೇಲಕ್ಕೆ ಎಸೆಯಲಾಗಿರುವ ಮೊಟ್ಟೆಯನ್ನು ಇಟ್ಟುಕೊಂಡು ಮಮತಾ ಅವರು ತಮಗೆ ನೈತಿಕ ವಿಜಯವಾಗಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಇಂತಹ ಇಬ್ಬಗೆತನವನ್ನು ಮಮತಾ ಬ್ಯಾನರ್ಜಿ ಅವರ ರಾಜಕೀಯದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಸ್ಮೃತಿ ಇರಾನಿ ಚುಚ್ಚಿದರು. ಪಶ್ಚಿಮ ಬಂಗಾಳದಲ್ಲಿ ಕಾನೂನುರಾಹಿತ್ಯ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಸ್ಮೃತಿ, ಮಮತಾ ಬ್ಯಾನರ್ಜಿ ಅವರನ್ನುಅರಾಜಕತಾವಾದಿ ಎಂದು  ಬಣ್ಣಿಸಿದರು. ’ಮುಖ್ಯಮಂತ್ರಿಯವರು ಸಿಬಿಐ ಅಧಿಕಾರಿಗಳ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅವರ ನಿರ್ದೇಶನದ ಮೇರೆಗೆ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ದಿಗ್ಬಂಧನಕ್ಕೆ ಒಳಪಡಿಸಲಾಗಿದೆ. ಅವರ ಕುಟುಂಬಗಳಿಗೆ ಕಿರುಕುಳ ನೀಡಲಾಗಿದೆ ಅವರ ಮನೆಗಳಿಗೆ ಮುತ್ತಿಗೆ ಹಾಕಲಾಗಿದೆ ಎಂದು ಕೇಂದ್ರ ಸಚಿವೆ ಹೇಳಿದರು. ಕೋಲ್ಕತಕ್ಕೆ ಬಂದ ನಾಯ್ಡು: ಸಿಬಿಐ ವರ್ಸಸ್ ಕೋಲ್ಕತ ಪೊಲೀಸ್ ಘಟನಾವಳಿಗಳ ಮಧ್ಯೆ ಕೇಂದ್ರ ಸರ್ಕಾರದ ವಿರುದ್ಧ ಘರ್ಷಣೆಗೆ ಇಳಿದಿರುವ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ಘೋಷಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ, ತೆಲುಗುದೇಶಂ ಪಾರ್ಟಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಕೋಲ್ಕತಕ್ಕೆ ಆಗಮಿಸಿದರು. ವಿಪಕ್ಷ ಏಕತೆಯ ಆಧಾರ ಸ್ಥಂಭವಾಗಿರುವ ತೃಣಮೂಲ ಕಾಂಗ್ರೆಸ್ ಲೋಕಸಭೆಯ ಎಲ್ಲ ೪೨ ಸ್ಥಾನಗಳನ್ನೂ ಗೆಲ್ಲಲಿದೆ ಎಂದು ನಾಯ್ಡು ಹೇಳಿದರು. ಬಿಜೆಪಿಯತ್ತ ಬೊಟ್ಟು: ಬೆಳವಣಿಗೆಗಳ ಮಧ್ಯೆ ಮಮತಾ ಬ್ಯಾನರ್ಜಿ ಅವರು ಶಾರದಾ ಚಿಟ್ ಫಂಡ್ ಮುಖ್ಯಸ್ಥ ಸುದಿಪ್ಟೊ ಸೆನ್ ಅವರು ೨೦೧೩ರಲ್ಲಿ ಬರೆದಿದ್ದ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ. ಪತ್ರದಲ್ಲಿ ಸೆನ್ ಅವರು ತೃಣಮೂಲ ಕಾಂಗ್ರೆಸ್ಸಿನ ಮಾಜಿ ನಾಯಕ ಹೇಮಂತ ಬಿಸ್ವಾಸ್ ಸರ್ಮಾ ವಿರುದ್ಧ ಆಪಾದನೆ ಮಾಡಿದ್ದು ನಮೂದಾಗಿದೆ. ಹೇಮಂತ್ ಬಿಸ್ವಾಸ್ ಸರ್ಮಾ ಅವರು ಈಗ ಬಿಜೆಪಿಯಲ್ಲಿದ್ದಾರೆ ಎಂದು ಮಮತಾ ಬೊಟ್ಟು ಮಾಡಿದರು. ಸಿಬಿಐ ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ತನಿಖೆ ಆರಂಭಿಸಿದಾಗ ಹೇಮಂತ್ ಬಿಸ್ವಾಸ್ ಸರ್ಮಾ ಅವರು ಬಿಜೆಪಿಗೆ ಹಾರಿದ್ದರು. ಸರ್ಮಾ ಅವರು ತಮಗೆ ವಂಚನೆ ಎಸಗಿದ್ದು, ತಮ್ಮಿಂದ ಕೋಟಿ ರೂಪಾಯಿಗಳಿಗೆ ಕಡಿಮೆ ಇಲ್ಲದಷ್ಟು ಹಣ ಪಡೆದಿದ್ದಾರೆ ಎಂದು ಸೆನ್ ಪತ್ರ ಉಲ್ಲೇಖಿಸಿತು. ನವೀನ್ ಪಟ್ನಾಯಕ್: ಸಿಬಿಐ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ತಮಗೆ ಯಾವುದೇ ಸಂದೇಶ ಬಂದಿಲ್ಲ  ಎಂಬುದಾಗಿ ಸ್ಪಷ್ಟ ಪಡಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಿಬಿಐ ರಾಜಕೀಯ ರಹಿತವಾಗಿ ವೃತ್ತಿಪರ ಕೆಲಸ ಮಾಡಬೇಕು ಎಂದು ಟ್ವೀಟ್ ಮಾಡಿದರು. ತೇಜಸ್ವಿ ಯಾದವ್: ಕೋಲ್ಕತಕ್ಕೆ ಆಗಮಿಸಿ, ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ಘೋಷಿಸಿದ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರುಬಿಜೆಪಿ ಸುಳ್ಳಿನ ಕಾರ್ಖಾನೆ, ಮೋದಿ ಸುಳ್ಳುಗಳ ಸೃಷ್ಟಿಕರ್ತ ಎಂದು ಆಪಾದಿಸಿದರು. ವಿಜಯ್ ಮಲ್ಯ, ನೀರವ್ ಮೋದಿ ಪರಾರಿಯಾದಾಗ ಸಿಬಿಐ ಎಲ್ಲಿತ್ತು? ಎಂದು ಅವರು ಪ್ರಶ್ನಿಸಿದರು.

2019: ಮುಂಬೈ: ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ, ಅಚ್ಚರಿಯ ಕ್ರಮವೊಂದರಲ್ಲಿ ಶಿವಸೇನೆಯು ಮಂಗಳವಾರ ಚುನಾವಣಾ ವ್ಯೂಹತಜ್ಞ ಪ್ರಶಾಂತ ಕಿಶೋರ್ ಅವರನ್ನು ತನ್ನ ಬಳಗಕ್ಕೆ ಸೇರ್ಪಡೆ ಮಾಡಿಕೊಂಡಿತು. ಪ್ರಶಾಂತ ಕಿಶೋರ್ ಅವರು ೨೦೧೪ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಂಗಳವಾರ ತಮ್ಮ ಮುಂಬೈ ನಿವಾಸದಲ್ಲಿ ಕಿಶೋರ್ ಅವರ ಜೊತೆಗೆ ಸಭೆ ನಡೆಸಿದ್ದು, ಉಭಯರೂ ಒಟ್ಟಾಗಿ ದುಡಿಯಲು ನಿರ್ಧರಿಸಿದರು. ಕಿಶೋರ್ ಅವರು ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಅಂಗ ಪಕ್ಷವಾಗಿರುವ ಜನತಾದಳದ (ಸಂಯುಕ್ತ) ಉಪಾಧ್ಯಕ್ಷರೂ ಆಗಿದ್ದಾರೆ. ಸೇನಾ ಸಂಸತ್ ಸದಸ್ಯ ಸಂಜಯ್ ರೌತ್ ಅವರು ಬೆಳವಣಿಗೆಯನ್ನು ದೃಢ ಪಡಿಸಿದ್ದಾರೆ. ’ಉದ್ಧವ್ ಜಿ ಅವರು ಪ್ರಶಾಂತ್ ಕಿಶೋರ್ ಜೊತೆಗೆ ಚುನಾವಣೆಯಲ್ಲಿ ಶಿವಸೇನೆಗಾಗಿ ವ್ಯೂಹಾತ್ಮಕ ಪಾತ್ರ ವಹಿಸಲಿದ್ದಾರೆ ಎಂದು ಸಂಸತ್ ಸದಸ್ಯ ನುಡಿದರು.  


2019: ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣ ಮತ್ತು ರೋಸ್ ವ್ಯಾಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಲ್ಕತ ಪೊಲೀಸ್ ಕಮೀಷನರ್ ಮುಖ್ಯಸ್ಥ ರಾಜೀವ ಕುಮಾರ್ ಅವರು ವಿಧೇಯರಾಗಿ ತನಿಖಾ ಕಾರ್ಯದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಜೊತೆ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಆದರೆ ಬಂಧನವೂ ಸೇರಿದಂತೆ ಅವರ ವಿರುದ್ಧ ಯಾವುದೇ ಬಲಾತ್ಕಾರದ ಕ್ರಮ ಕೈಗೊಳ್ಳುವಂತಿಲ್ಲ ಎಂದೂ ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. ಫೆಬ್ರುವರಿ ೧೮ರಂದು ಅಥವಾ ಅದಕ್ಕೆ ಮುನ್ನ ತಮ್ಮ ಉತ್ತರಗಳನ್ನು ಸಲ್ಲಿಸಬೇಕು ಎಂದು ನಾವು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ (ಡಿಜಿಪಿ) ನಾವು ನಿರ್ದೇಶಿಸುತ್ತೇವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ಹೇಳಿತು. ರಾಜೀವ ಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐ ನಡೆಸಿದ ಯತ್ನದ ವಿರುದ್ಧ ಮೂರು ದಿನಗಳಿಂದ ಧರಣಿ ಹೂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಪ್ರೀಂಕೋರ್ಟ್ ತೀರ್ಪನ್ನು ತಮ್ಮ ನಿಲುವಿಗೆ ಸಂದಿರುವನೈತಿಕ ವಿಜಯ ಎಂಬುದಾಗಿ ತೀರ್ಪು ಬಂದ ಕೆಲವೇ ಕ್ಷಣಗಳಲ್ಲಿ ಬಣ್ಣಿಸಿ, ಸಂಜೆಯ ವೇಳೆಗೆ ಧರಣಿಯನ್ನು ಅಂತ್ಯಗೊಳಿಸುವುದಾಗಿ ಪ್ರಕಟಿಸಿದರು. ನಾನು ಲಭ್ಯವಿಲ್ಲ ಎಂಬುದಾಗಿ ರಾಜೀವ ಕುಮಾರ್ ಅವರು ಎಂದೂ ಹೇಳಿಲ್ಲ. ಅವರು (ಸಿಬಿಐ) ಬಂಧಿಸಲು ಬಂದರು. ನ್ಯಾಯಾಲಯವು ಬಂಧಿಸುವಂತಿಲ್ಲ ಎಂದು ಹೇಳಿದೆ ಎಂದು ಮಮತಾ ನುಡಿದರು. ನಾನು ರಾಜೀವ ಕುಮಾರ್ ಅವರಿಗಾಗಿ ಹೋರಾಟ ಮಾಡುತ್ತಿಲ್ಲ. ರಾಷ್ಟ್ರದ ಲಕ್ಷಾಂತರ ಜನರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಇದು ಪಶ್ಚಿಮ ಬಂಗಾಳದ ಜನರ ವಿಜಯ. ಇದು ನಮ್ಮ ಭಾರತ ರಕ್ಷಿಸಿ ಪ್ರಚಾರಾಂದೋಲನದ ವಿಜಯ. ಇದು ನಮ್ಮ ಪಡೆಗಳ, ನಮ್ಮ ಪ್ರಜಾಪ್ರಭುತ್ವದ ಮತ್ತು ನಮ್ಮ ಸಂವಿಧಾನದ ವಿಜಯ. ಇದು ವಿರೋಧ ಪಕ್ಷಗಳ ವಿಜಯ ಎಂದು ಅವರು ನುಡಿದರು.  ಸಿಬಿಐ ತಂಡವು ಕೋಲ್ಕತ ಪೋಲೀಸ್ ಮುಖ್ಯಸ್ಥರನ್ನು ಪ್ರಶ್ನಿಸಲು ಅವರ ನಿವಾಸಕ್ಕೆ ಬಂದ ವೇಳೆಯಲ್ಲಿ ನಡೆದ ಕೈಕೈ ಮಿಲಾವಣೆಯ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರವು ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಇಳಿದಿತ್ತು. ರಾಜೀವ ಕುಮಾರ್ ಅವರು ತಟಸ್ಥ ಸ್ಥಳವಾದ ಮೇಘಾಲಯದ ಶಿಲ್ಲಾಂಗಿನಲ್ಲಿ ಸಿಬಿಐ ಮುಂದೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯವರು ಸಲ್ಲಿಸಿದ ಉತ್ತರಗಳ ಪರಿಶೀಲನೆಯ ಬಳಿಕ ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಹಾಜರಾತಿಯನ್ನು ಕೋರ್ಟ್ ಕೋರಬಹುದು. ಹಾಜರಾತಿ ಅಗತ್ಯ ಎಂದಾದರೆ ಫೆಬ್ರುವರಿ ೧೯ರಂದು ತಿಳಿಸಲಾಗುವುದು ಎಂದು ಪೀಠ ಹೇಳಿತು. ರಾಜೀವ ಕುಮಾರ್ ಅವರಿಗೂ ನೋಟಿಸ್ ಜಾರಿ ಮಾಡಿದ ಪೀಠವು ಮುಂದಿನ ವಿಚಾರಣೆ ದಿನಾಂಕವಾದ ಫೆಬ್ರುವರಿ ೨೦ರ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿತು. ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಸಂಜೀವ ಖನ್ನಾ ಅವರನ್ನೂ ಒಳಗೊಂಡ ಪೀಠವು ಫೆಬ್ರುವರಿ ೨೦ರಂದು ಮುಖ್ಯಕಾರ್ಯದರ್ಶಿ, ಡಿಜಿಪಿ ಮತ್ತು ಪೊಲೀಸ್ ಕಮೀಷನರ್ ಮೂವರೂ ಅಧಿಕಾರಿಗಳ ವೈಯಕ್ತಿಕ ಹಾಜರಾತಿಯನ್ನು ಕೋರಕೋಬಹುದು ಎಂದು ಅಭಿಪ್ರಾಯಪಟ್ಟತು. ರಾಜೀವ ಕುಮಾರ್ ಅವರು ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಲ್ಲಿ ಕೈಯಾಡಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟಿನಲ್ಲಿ ಆಪಾದಿಸಿದ ಸಿಬಿಐ, ಕುಮಾರ ನೇತೃತ್ವದ  ವಿಶೇಷ ತನಿಖಾ ತಂಡವು (ಎಸ್ಐಟಿ) ತನಿಖಾ ಸಂಸ್ಥೆಗೆ ಸೃಷ್ಟಿತ ದಾಖಲೆಗಳನ್ನು ನೀಡಿದೆ ಎಂದು ಪ್ರತಿಪಾದಿಸಿತ್ತು. ಶಾರದಾ  ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ರಾಜೀವ ಕುಮಾರ್ ಅವರು ನಾಶ ಪಡಿಸಿದ್ದಾರೆ ಎಂಬ ತನ್ನ ಪ್ರತಿಪಾದನೆಗೆ ಪೂರಕವಾಗಿ ಹೆಚ್ಚುವರಿ ದಾಖಲೆಗಳನ್ನು ಸಿಬಿಐ ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿತು. ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಗಳ ತನಿಖೆಗಾಗಿ ರಚಿಸಲಾಗಿದ್ದ ಕೋಲ್ಕತ ಪೊಲೀಸ್ ಮುಖ್ಯಸ್ಥರ ನೇತೃತ್ವದ ವಿಶೇಷ ತನಿಖಾ ತಂಡವು ಕಂಪೆನಿಗಳನ್ನು ಅವು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಕಾರಣಕ್ಕಾಗಿ ರಕ್ಷಿಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೋಲ್ಕತ ಪೊಲೀಸ್ ಮುಖ್ಯಸ್ಥರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಸಿಬಿಐ ದಾಖಲೆಗಳಲ್ಲಿ ಸುಪ್ರೀಂಕೋರ್ಟಿಗೆ ತಿಳಿಸಿತು. ಸಿಬಿಐ ಪರವಾಗಿ ವಾದಿಸಿದ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ತೃಣಮೂಲ ಕಾಂಗ್ರೆಸ್ಸಿಗೆ (ಟಿಎಂಸಿ) ಚಿಟ್ ಫಂಡ್ ಕಂಪೆನಿಗಳು ಚೆಕ್ ಮೂಲಕ ಕಾಣಿಕೆ ಸಲ್ಲಿಸಿವೆ ಎಂದು ಹೇಳಿದರುಕೋಲ್ಕತ ಪೊಲೀಸ್ ಮುಖ್ಯಸ್ಥನ ವಿರುದ್ಧ ಇರುವ ಸಾಕ್ಷ್ಯಗಳನ್ನು ಮೊಹರಾದ ಲಕೋಟೆಯಲ್ಲಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಅವರು ಕೋರಿದರು. ಪಶ್ಚಿಮ ಬಂಗಾಳದಲ್ಲಿ ಘಟಿಸಿದ ಅಭೂತಪೂರ್ವ ಘಟನಾವಳಿಗಳು ಸಾಂವಿಧಾನಿಕ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿರುವುದನ್ನು ತೋರಿಸಿದೆ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ’ಪೊಲೀಸ್ ಮುಖ್ಯಸ್ಥರಿಗೆ ಕಿರುಕುಳ ನೀಡುವ ಹಾಗೂ ಅಪಮಾನಿಸುವ ಯತ್ನವಾಗಿ ಅವರ ನಿವಾಸ ಶೋಧಿಸುವ ಯತ್ನವನ್ನು ಸಿಬಿಐ ನಡೆಸಿತು ಎಂದು ಹೇಳಿದರು. ’ರಾಜೀವ ಕುಮಾರ್ ಅವರ ವಿರುದ್ಧ ಯಾವುದೇ ಎಫ್ಐಆರ್ ಇಲ್ಲ ಎಂದು ಅವರು ಪ್ರತಿಪಾದಿಸಿದರು.
ಶಾರದಾ ಚಿಟ್ ಫಂಡ್ ಪ್ರಕರಣದ ತನಿಖೆಯಲ್ಲಿ ಸಹಕರಿಸುವಂತೆ ರಾಜೀವ ಕುಮಾರ್ ಅವರಿಗೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತುಕೋಲ್ಕತಾ ಪೊಲೀಸ್ ಕಮೀಷನರ್ ಅವರು ಚಿಟ್ ಫಂಡ್ ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸಬಹುದು ಎಂಬ ಗುಮಾನಿಯನ್ನು ಸಿಬಿಐ ನ್ಯಾಯಾಲಯದಲ್ಲಿ ವ್ಯಕ್ತ ಪಡಿಸಿತ್ತುಅಭೂತಪೂರ್ವ ಸರಣಿ ಘಟನಾವಳಿಗಳ ನಡುವೆ ಸಿಬಿಐ ತಂಡವನ್ನು ಕೋಲ್ಕತ ಪೊಲೀಸರು ದಿಗ್ಬಂಧನಕ್ಕೆ ಒಳಪಡಿಸಿದ್ದರುಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀವ ಕುಮಾರ್ ಅವರ ನಿವಾಸಕ್ಕೆ ದೌಡಾಯಿಸಿದ್ದರು. ಸಿಬಿಐ ಅಧಿಕಾರಿಗಳನ್ನು ಬಲವಂತವಾಗಿ ಶೇಕ್ಸ್ಪಿಯರ್ ಸರನಿ ಪೊಲೀಸ್ ಠಾಣೆಗೆ ಒಯ್ದು ಇಡಲಾಗಿತ್ತು. ಬಳಿಕ ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ಸಿಬಿಐ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿತ್ತು. 
 ನವದೆಹಲಿ:  ದ್ವೀಪ ರಾಷ್ಟ್ರ ಮಾಲ್ಡೀವ್ಸ್ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಮಾಲ್ಡೀವ್ಸ್ಅಧ್ಯಕ್ಷ ಅಬ್ದುಲ್ಲಾ ಯಾಮೀನ್ಅವರು 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದರು. ಈ ನಿರ್ಧಾರವನ್ನು ಅಧ್ಯಕ್ಷ ಆಪ್ತ ಅಜೀಮಾ ಶೌಕುರನ್ಲೈವ್ಟೆಲಿವಿಷನ್ನಲ್ಲಿ ಓದಿದರು. ಈಗ ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಶಂಕಿತರನ್ನು ಬಂಧಿಸಲು ಅವಕಾಶ ನೀಡಲಾಗಿದೆ. 2013ರಿಂದ ಅಬ್ದುಲ್ಲಾ ಯಾಮೀನ್ಅಧಿಕಾರದಲ್ಲಿದ್ದಾರೆ. ಈಗ ಅವರು ದೇಶ, ಅಮೆರಿಕ ಹಾಗೂ ಭಾರತದಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಮಾಜಿ ಅಧ್ಯಕ್ಷ ಮೊಹಮ್ಮದ್ನಶೀದ್ಅವರನ್ನು 13 ವರ್ಷಗಳ ಜೈಲು ಶಿಕ್ಷೆಯಿಂದ ಬಿಡುಗಡೆ ಮಾಡಬೇಕೆಂದು ಒತ್ತಡ ಯಾಮೀನ್ಮೇಲಿತ್ತು. ಅಧ್ಯಕ್ಷ ಅಬ್ದುಲ್ಲಾ ಯಾಮೀನ್ನೇತೃತ್ವದ ಮಾಲ್ಡೀವ್ಸ್ಸರ್ಕಾರ  ಹಾಗೂ ದೇಶದ ಸುಪ್ರೀಂ ಕೋರ್ಟಿನ ವಿರುದ್ಧ ಸಾಗಿರುವ ಸಮರ ಈಗ ಮತ್ತೊಂದು ಹಂತ ತಲುಪಿತು. ದ್ವೀಪ ರಾಷ್ಟ್ರ ಮಿಲಿಟರಿ ಆಡಳಿತದ ಕೈಗೆ ಜಾರುವ ಸಾಧ್ಯತೆ ದಟ್ಟವಾಯಿತು. ಇದೇ ವೇಳೆ ಅಲ್ಲಿನ ಸುಪ್ರೀಂ ಕೋರ್ಟ್ಭಾರತ ಮತ್ತು ಇತರ ಪ್ರಜಾಸತ್ತಾತ್ಮಕ ದೇಶಗಳ ನೆರವು ಕೋರಿತು. ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್ಸೇರಿದಂತೆ ಸುಪ್ರೀಂ ಕೋರ್ಟ್ನ್ಯಾಯಾಧೀಶರ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸುವ ಮೂಲಕ ಅವರನ್ನು ವಜಾಗೊಳಿಸಲು ಅಧ್ಯಕ್ಷ ಯಾಮೀನ್ಹವಣಿಸುತ್ತಿದ್ದಾರೆ ಎಂದು ಮಾಲ್ಡೀವ್ಸ್ಸುಪ್ರೀಂ ಕೋರ್ಟಿನ ಉನ್ನತ ಮೂಲಗಳು ತಿಳಿಸಿದವು. ಮಾಲ್ಡೀವ್ಸ್ ಸುಪ್ರೀಂ ಕೋರ್ಟ್ಇತ್ತೀಚೆಗೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ದೇಶದ ಮೊದಲ ಮಾಜಿ ಅಧ್ಯಕ್ಷ ಮೊಹಮ್ಮದ್ನಶೀದ್ಸೇರಿದಂತೆ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆಗೆ ಆದೇಶಿಸಿತ್ತು. ಮಾಲೆಯಲ್ಲಿರುವ ಭಾರತೀಯ ಹೈಕಮಿಷನ್ಎಲ್ಲ ಬಿಕ್ಕಟ್ಟಿಗೆ ಗುರಿಯಾಗಿರುವ ಪ್ರಮುಖ ಸಂಸ್ಥೆಗಳ ಜತೆ ನಿಕಟ ಸಂಪರ್ಕದಲ್ಲಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೂಲ ತಿಳಿಸಿತು. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ಸುಪ್ರೀಂ ಕೋರ್ಟ್ಆದೇಶ ಕಡೆಗಣಿಸಿ, ಅಟಾರ್ನಿ ಜನರಲ್ಮೊಹಮ್ಮದ್ಅನಿಲ್ಅವರ ಆದೇಶಗಳನ್ನು ಮಾತ್ರ ಪಾಲಿಸುವುದಾಗಿ ಘೋಷಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿದವು.


2018: ನವದೆಹಲಿ: ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೆಲಸವನ್ನು ಶ್ಲಾಘಿಸಿ, ೫೫ ವರ್ಷಗಳ ದುರಾಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ ಪಾಲ್ಗೊಂಡ ಶಾ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಮಾತನಾಡಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆ ಮತ್ತು ನಿರುದ್ಯೋಗ ಸಮಸ್ಯೆಗಾಗಿ ಸರ್ಕಾರವನ್ನು ಟೀಕಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಝಾಡಿಸಿದರು. ’೨೦೧೩ರಲ್ಲಿ ನಾವು ಅಧಿಕಾರಕ್ಕೆ ಬರುವುದಕ್ಕೆ ಮೊದಲಿನ ರಾಷ್ಟ್ರದ ಪರಿಸ್ಥಿತಿಯನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಗ ನೀತಿಗೆ ಪಾರ್ಶ್ವವಾಯು (ಲಕ್ವಾ) ಬಡಿದಿತ್ತು. ಸೇನೆಗೆ ತನ್ನ ನೈಜ ಶೌರ್ಯ ಪ್ರದರ್ಶಿಸಲು ಅವಕಾಶ ನೀಡದೆ ಅದನ್ನು ಹಿಡಿದಿಡಲಾಗಿತ್ತು. ಅದೆಲ್ಲ ಕಳೆದ ಮೂರೂವರೆ ವರ್ಷಗಳಲ್ಲಿ ಬದಲಾಗಿದೆ ಎಂದು ಶಾ ವಿವರಿಸಿದರು.ನರೇಂದ್ರ ಮೋದಿ ಅವರನ್ನು ಸದನದ ನಾಯಕನಾಗಿ ಆಯ್ಕೆ ಮಾಡಿದಾಗ ನರೇಂದ್ರ ಭಾಯಿ ಅವರು ಇದು ಬಡವರು, ರೈತರು ಮತ್ತು ಹಿಂದುಳಿದವರ ಸರ್ಕಾರವಾಗಿರುತ್ತದೆ, ಇದು ಗಾಂಧಿ ಮತ್ತು ದೀನದಯಾಳ್ ಅವರ ಕನಸುಗಳನ್ನು ನನಸಾಗಿಸುವ ಸರ್ಕಾರವಾಗಲಿದೆ ಎಂದು ಹೇಳಿದ್ದರು. ಕಳೆದ ಮೂರೂವರೆ ವರ್ಷಗಳಲ್ಲಿ ನಾವು ಅಂತ್ಯೋದಯದ ಹಾದಿನಲ್ಲಿ ಮುನ್ನಡೆದಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ನುಡಿದರು. ಕೇವಲ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರವು ಇತಿಹಾಸದಲ್ಲಿ ಯಶಸ್ಸಿನ ಕಥೆಗಳು ಎಂದು ಬರೆದಿಡಬಹುದಾದಂತಹ  ಕೆಲಸಗಳನ್ನು ಮಾಡಿದೆ. ಮೊತ್ತ ಮೊದಲ ದೊಡ್ಡ ಸಾಧನೆ ಏನೆಂದರೆ ಜನಧನ್ ಖಾತೆಗಳು. ಮೊದಲ ೫೫ ವರ್ಷಗಳಲ್ಲಿ ರಾಷ್ಟ್ರವು ಒಂದೇ ಪಕ್ಷದ, ವಾಸ್ತವವಾಗಿ ಒಂದು ಕುಟುಂಬದ ಆಡಳಿತವನ್ನು ಹೊಂದಿತ್ತು. ಆದರೂ ಶೇಕಡಾ ೬೦ರಷ್ಟು ಮಂದಿಗೆ ಬ್ಯಾಂಕ್ ಖಾತೆಗಳೇ ಇರಲಿಲ್ಲ. ಆದರೆ ನಮ್ಮ ಸರ್ಕಾರ ೩೧ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಿತು. ಯೋಜನೆಯನ್ನು ನಾವು ಆರಂಭಿಸಿದಾಗ ಶೇಕಡಾ ೭೭ರಷ್ಟು ಖಾತೆಗಳು ಶೂನ್ಯ ಬ್ಯಾಲೆನ್ಸ್ ಖಾತೆಗಳಾಗಿದ್ದವು. ಇಂದು ಹೆಚ್ಚು ಕಡಿಮೆ ಶೇಕಡಾ ೨೦ರಷ್ಟು ಖಾತೆಗಳು ಮಾತ್ರ ಶೂನ್ಯ ಬ್ಯಾಲೆನ್ಸ್ ಖಾತೆಗಳಾಗಿ ಉಳಿದಿವೆ ಎಂದು ಶಾ ಹೇಳಿದರು. ಪ್ರಧಾನಿ ಮೋದಿ ಅವರನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಹೋಲಿಸಿದ ಶಾ, ’೧೯೬೫ರ ಪಾಕಿಸ್ತಾನ್ ಸಮರ ಕಾಲದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರಕ್ಕಾಗಿ ಒಂದು ದಿನದ ಉಪವಾಸ ಮಾಡುವಂತೆ ಕರೆ ಕೊಟ್ಟಿದ್ದರು. ಇಡೀ ರಾಷ್ಟ್ರ ಅದನ್ನು ಆಲಿಸಿ, ಅದರಂತೆ ನಡೆದುಕೊಂಡಿತ್ತು. ಬಳಿಕ, ಇದೇ ಮೊದಲ ಬಾರಿಗೆ ರಾಷ್ಟ್ರವು ಪ್ರಧಾನಿಯ ಮಾತನ್ನು ಆಲಿಸಿ ಪಾಲಿಸಿದೆ. ಪ್ರಧಾನಿ ಮೋದಿ ಅವರು ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸುವಂತೆ ಕೋರಿದಾಗ . ಕೋಟಿ ಜನ ಗ್ಯಾಸ್ ಸಬ್ಸಿಡಿಗಳನ್ನು ಬಿಟ್ಟುಕೊಟ್ಟರು. ಸರ್ಕಾರ ಅವುಗಳನ್ನು ಉಜ್ವಲ ಯೋಜನೆ ಜಾರಿಗೊಳಿಸಲು ಬಳಸಿತು. . ಕೋಟಿ ಜನರಿಗೆ ಈಗಾಗಲೇ ಗ್ಯಾಸ್ ಸಿಲಿಂಡರ್ಗಳನ್ನು ನೀಡಲಾಗಿದೆ ಮತ್ತು ಗ್ಯಾಸ್ ಸಿಲಿಂಡರ್ ನೀಡಿಕೆ ಗುರಿಯನ್ನು ಕೋಟಿ ಜನರಿಂದ ಕೋಟಿಗೆ ಏರಿಸಲಾಗಿದೆ ಎಂದು ಅಮಿತ್ ಶಾ ನುಡಿದರು. ಬಿಜೆಪಿ ಅಧ್ಯಕ್ಷರು ರಾಷ್ಟ್ರದರಾಜಕೀಯ ಗಣ್ಯರನ್ನೂ ಜಾಲಾಡಿದರು. ದೆಹಲಿಯ ಲ್ಯುಟಿಯೆನ್ಸ್ ನಲ್ಲಿ ಬದುಕುತ್ತಿರುವ ರಾಜಕೀಯ ಗಣ್ಯರಿಗೆ ಶೌಚಾಲಯದ ಮಹತ್ವ ಗೊತ್ತಿರುವುದಿಲ್ಲ. ನಮ್ಮ ಸ್ವಚ್ಛ ಭಾರತ ಯೋಜನೆಯು ಬಡವರಿಗಾಗಿ ಶೌಚಾಲಯಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ‘ಪ್ರಧಾನಿಯವರನ್ನು ಅವರಪಕೋಡಾನೋಮಿಕ್ಸ್ಗಾಗಿ ಲೇವಡಿ ಮಾಡುತ್ತಿರುವವರ ಮೇಲೆ ಹರಿಹಾಯ್ದ ಅಮಿತ್ ಶಾ, ’ಪ್ರಧಾನಿ ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಅದೊಂದು ಒಳ್ಳೆಯ ಕೆಲಸ. ಬಡವರಿಗೆ ಬ್ಯಾಂಕುಗಳ ಬಾಗಿಲನ್ನು ಇದು ತೆರೆಯಲಿದೆ ಎಂದು ಇಂಂದಿರಾ ಅವರು ಹೇಳಿದ್ದರು. ಆದರೆ ಬಡವರ ಸಂಕಷ್ಟಗಳು ಅದರಿಂದ ಕೊನೆಯಾಗಲಿಲ್ಲ. ಈಗ ಮುದ್ರಾ ಸಾಲ ಯೋಜನೆಯು ಬಡವರಿಗೆ ಬಂಡವಾಳ ಪಡೆಯಲು ನೆರವಾಗುತ್ತಿದೆ. ನಾನು ಚಿದಂಬರಮ್ ಜಿ ಅವರ ಟ್ವೀಟ್ ನೋಡಿದೆ. ಬಡವರು ಈಗ ಪಕೋಡಾ ಮಾರುವರೇ? ಎಂದು ಅವರು ಪ್ರಶ್ನಿಸಿದ್ದಾರೆ. ಕಷ್ಟಪಟ್ಟು ದುಡಿಯುವುದು ಮತ್ತು ಪಕೋಡಾ ಮಾರುವುದು ನಿರುದ್ಯೋಗಿಗಳಾಗಿ ಇರುವುದಕ್ಕಿಂತ ಒಳ್ಳೆಯದು ಎಂದು ನಾನು ಅವರಿಗೆ ಹೇಳಬಯಸುತ್ತೇನೆ. ಇಂದು ಪಕೋಡಾ ಮಾರುತ್ತಿರುವ ವ್ಯಕ್ತಿಯ ಮುಂದಿನ ತಲೆಮಾರು ದೊಡ್ಡ ಕೈಗಾರಿಕೋದ್ಯಮಿಗಳಾಗಲಿದ್ದಾರೆ. ಹೇಳಿಕೇಳಿ ಚಹಾ ಮಾರುವವನ ಮಗ ಪ್ರಧಾನಿಯಾಗಬಲ್ಲಂತಹ ದೇಶ ಇದು ಎಂದು ಅಮಿತ್ ಶಾ ನುಡಿದರು.
ವಿವಿಧ ರಂಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಪಟ್ಟಿ ಮಾಡಿದ ಶಾ, ’ಪಕೋಡಾ ಮಾರುವುದು ಭಿಕ್ಷೆ ಬೇಡುವುದಕ್ಕಿಂತ ಒಳ್ಳೆಯದು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಪಕೋಡಾ ಮಾರುವ ವ್ಯಕ್ತಿ ಕೂಡಾ ಉದ್ಯೋಗಿಯೇ ಎಂದು ಹೇಳಿದ್ದರು. ’ಪಕೋಡಾ ಮಾರುವವರು ಸ್ವಯಂ ಉದ್ಯೋಗಿಗಳು. ಅವರನ್ನು ನೀವು ಭಿಕ್ಷುಕರ ಜೊತೆಗೆ ಹೋಲಿಸಬಹುದೇ?’ ಎಂದು ಶಾ ಕೇಳಿದರು.  ದೇಶದಲ್ಲಿ ನಿರುದ್ಯೋಗ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಇದು ಸಮಸ್ಯೆಯೇ. ಆದರೆ ನೀವು (ಕಾಂಗ್ರೆಸ್) ರಾಷ್ಟ್ರವನ್ನು ಇಷ್ಟೊಂದು ವರ್ಷ ಕಾಲ ಆಡಳಿತ ಮಾಡಿದ್ದೀರಿ. ನಾವು ಅಧಿಕಾರದಲ್ಲಿ ಇದ್ದದ್ದು ಎಂಟು ವರ್ಷ ಮಾತ್ರ (ವಾಜಪೇಯಿ ಆಡಳಿತವನ್ನೂ ಸೇರಿಸಿ)’ ಎಂದು ಬಿಜೆಪಿ ನಾಯಕ ಹೇಳಿದರು. ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ ಟಿ) ’ಗಬ್ಬಾರ್ ಸಿಂಗ್ ಟ್ಯಾಕ್ಸ್ ಎಂಬುದಾಗಿ ಮೂದಲಿಸಿದ್ದಕ್ಕಾಗಿಯೂ ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದ ಅಮಿತ್ ಶಾ. ’ಶೋಲೆ ಚಲನಚಿತ್ರದಲ್ಲಿ ಬರುವ ದರೋಡೆಕೋರನ ಪಾತ್ರದ (ಗಬ್ಬಾರ್ ಸಿಂಗ್) ಹೆಸರನ್ನು ಇಟ್ಟದ್ದೇಕೆ? ಇದು (ಜಿಎಸ್ ಟಿ) ಡಕಾಯತಿಯೇ? ಇದನ್ನು ಗಬ್ಬಾರ್ ಸಿಂಗ್ ಟ್ಯಾಕ್ಸ್ ಎಂಬುದಾಗಿ ಕರೆದವರು ಇದನ್ನು ಎಷ್ಟು ಅಧ್ಯಯನ ಮಾಡಿದ್ದಾರೆ?  ಇದು ಡಕಾಯತಿ ಅಲ್ಲ, ವಿಧವೆಯರು ಮತ್ತು ಬಡವರಿಗೆ ಒದಗಿಸಲಾಗುವ ವಿವಿಧ ಸೇವೆಗಳಿ ನೀಡುವ  ಸಬ್ಸಿಡಿಗಾಗಿ ಸಂಗ್ರಹವಾಗುವ ಕಂದಾಯ ಇದು ಎಂದು ಶಾ ವಿವರಿಸಿದರು. ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸಬೇಕೆಂಬ ವಿಚಾರವನ್ನು ಶಾ ಬೆಂಬಲಿಸಿದರು.

2018: ನವದೆಹಲಿ: ವಯಸ್ಕರಿಬ್ಬರು ಮದುವೆಯಾಗಲು ಮುಕ್ತರು. ಹೆತ್ತವರಿರಲಿ, ಸಮಾಜವಿರಲಿ ಅಥವಾ ಖಾಪ್ ಪಂಚಾಯತ್ ಇರಲಿ - ರೀತಿ ಮದುವೆಯಾಗುವವರಿಗೆ ಕಿರುಕುಳ ನೀಡುವ ಯಾವುದೇ ಹಕ್ಕನ್ನೂ ಹೊಂದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಹೇಳಿದರು. ಮರ್ಯಾದಾ ಹತ್ಯೆಗಳ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಕಾಲದಲ್ಲಿ, ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ಇಬ್ಬರು ವಯಸ್ಕರು ಮದುವೆಯಾಗುವಾಗ, ಯಾರೇ ಮೂರನೆಯ ವ್ಯಕ್ತಿಗೆ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ಹೇಳಿದ ಪೀಠವು,  ಪರಸ್ಪರ ಮದುವೆಯಾಗಿ ಶಾಂತಿಯುತ ಜೀವನ ನಡೆಸಬಯಸುವ ಇಬ್ಬರು ವ್ಯಕ್ತಿಗಳ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯಿತು. ಅಂಕಿತ್ ಸಕ್ಸೇನಾ ಎಂಬ ಯುವಕನನ್ನು ಆತನ ಪ್ರೇಯಸಿಯ ಹೆತ್ತವರು ಕೊಲೆಗೈದ ಆರೋಪದ ಪ್ರಕರಣವನ್ನು ಸಾಮಾಜಿಕ ಕಾರ್ಯಕರ್ತ ಮಧು ಕಿಶ್ವರ್ ಅವರು ಪೀಠದ ಗಮನಕ್ಕೆ ತಂದಾಗ ನ್ಯಾಯಮೂರ್ತಿ ಮಿಶ್ರ ಅವರುನಾವು ಇದನ್ನು ನೋಡುತ್ತಿಲ್ಲ, ಪ್ರಕರಣ ನಮ್ಮ ಮುಂದೆ ಇಲ್ಲ ಎಂದು ಹೇಳಿದರು. ಮರ್ಯಾದಾ ಹತ್ಯೆ ಎಂಬುದು ಯುವ ಜನರ ಮೇಲೆ ನಡೆಯುವ ಇಂತಹ ಅಪರಾಧಗಳಿಗೆ ಅತ್ಯಂತಮೃದು ಪದ ಎಂದು ಆಕ್ಷೇಪಿಸಿದ ಮಧು ಕಿಶ್ವರ್ ಅವರುಇವುಗಳನ್ನು ದ್ವೇಷ ಅಪರಾಧಗಳು ಎಂದು ಕರೆಯಬೇಕು ಎಂದು ಮನವಿ ಮಾಡಿದರು. ಆದರೆ ಯಾರೇ ವ್ಯಕ್ತಿ, ಸಮೂಹ ಅಥವಾ ಗುಂಪಿಗೆ ದಂಪತಿ ಜೋಡಿಗೆ ಕಿರುಕುಳ ನೀಡುವ ಯಾವುದೇ ಹಕ್ಕೂ ಇಲ್ಲ ಎಂದು ಒತ್ತಿ ಹೇಳಿz ನ್ಯಾಯಮೂರ್ತಿ ಮಿಶ್ರ, ’ಆಸ್ತಿ ವಿವಾದದ ಪ್ರಕರಣದಲ್ಲಿ ಮದುವೆಯು ಕಾನೂನು ಬಾಹಿರವೇ, ಮಕ್ಕಳು ಧರ್ಮಸಂತಾನವೇ ಅಥವಾ ಅಲ್ಲವೇ ಎಂಬುದಾಗಿ ನಿರ್ಧರಿಸುವ ಅಧಿಕಾರ ನ್ಯಾಯಾಲಯಗಳದ್ದು. ಬೇರೆ ಯಾರೇ ವ್ಯಕ್ತಿ ಅಥವಾ ಗುಂಪಿಗೆ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಹಕ್ಕಿಲ್ಲ ಎಂದು ನುಡಿದರು.
ಖಾಪ್ ಪಂಚಾಯತ್ ಪರ ಹಾಜರಾಗಿದ್ದ ಹಿರಿಯ ವಕೀಲರುಪಂಚಾಯತುಗಳು ಮರ್ಯಾದಾ ಹತ್ಯೆಗಳಿಗೆ ಪ್ರೋತ್ಸಾಹ ನೀಡುತಿವೆ ಎಂಬಂತೆ ಬಿಂಬಿಸುವುದನ್ನು ಆಕ್ಷೇಪಿಸಿದರು. ಪಂಚಾಯತುಗಳು ಅತ್ಯಂತ ಹಳೆಯ ಕಾಲದಿಂದ ಬಂದ ವಿಧಿ ವಿಧಾನದವು. ಈಗ ಅಂತರ್  ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುತ್ತಿವೆ ಎಂದು ಹೇಳಿದರು. ಒಂದೇ ಗೋತ್ರದ ಇಬ್ಬರು ವ್ಯಕ್ತಿಗಳ ನಡುವಣ ಮದುವೆಗೆ ಖಾಪ್ ಪಂಚಾಯತ್ ವ್ಯಕ್ತ ಪಡಿಸಿದ ಆಕ್ಷೇಪದ ಪರವಾಗಿ ವಾದಿಸಿದ ಹಿರಿಯ ವಕೀಲರು, ೧೯೫೫ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ ೫ನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸೆಕ್ಷನ್ ಸಪಿಂಡವನ್ನು ತಂದೆಯ ಕಡೆಯಿಂದ  ಡಿಗ್ರಿಯಷ್ಟು ಮತ್ತು ತಾಯಿಯ  ಕಡೆಯಿಂದ ಡಿಗ್ರಿಯಷ್ಟು ತೆಗೆದುಹಾಕಬೇಕು ಹೇಳುತ್ತದೆ ಎಂದು ಅವರು ಪ್ರತಿಪಾದಿಸಿದರು. ಶೇಕಡಾ ಮೂರರಷ್ಟು ಮರ್ಯಾದಾ ಹತ್ಯೆಗಳು ಮಾತ್ರ ಗೋತ್ರಕ್ಕೆ ಸಂಬಂಧಿಸಿದವಾಗಿದ್ದು, ಉಳಿದ ಶೇಕಡಾ ೯೭ರಷ್ಟು ಧರ್ಮ ಮತ್ತು ಇತರ ಕಾರಣಗಳಿಗಾಗಿ ನಡೆಯುತ್ತವೆ ಎಂದು ನುಡಿದರು. ಗೋತ್ರದೊಳಗಿನ ಮದುವೆಯಿಂದ ಮಕ್ಕಳಲ್ಲಿ ಆನುವಂಶಿಕ ಸಮಸ್ಯೆಗಳು ತಲೆದೋರುತ್ತವೆ. ನಾವು ಜಾತಿಗಳನ್ನು ನಿರ್ಲಕ್ಷಿಸುತ್ತೇವೆ. ನಾವು ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸುತ್ತೇವೆ. ಹರಿಯಾಣದಲ್ಲಿ ಮಹಿಳಾ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಮಹಿಳೆಯರನ್ನು ಕರೆತರುತ್ತೇವೆ ಎಂದು ಅವರು ಹೇಳಿದರು. ಆದರೆ ನ್ಯಾಯಾಲಯವು ಖಾಪ್ ಪಂಚಾಯತುಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ನಾವು ಇಲ್ಲಿ ಸಂಪ್ರದಾಯಗಳು, ವಂಶವಾಹಿ ಇತ್ಯಾದಿಗಳ ಬಗ್ಗೆ ಪ್ರಬಂಧ ಬರೆಯುತ್ತಿಲ್ಲ. ನಾವು ವಯಸ್ಕರ  ವೈವಾಹಿಕ ಸ್ವಾತಂತ್ರ್ಯ, ಮತ್ತು ಕಿರುಕುಳ ರಹಿತರಾಗಿ ಬದುಕುವ ಸ್ವಾತಂತ್ರ್ಯದ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ನುಡಿದರು. ಸಂಪ್ರದಾಯಗಳು ಮನುಷ್ಯರ ಜೀವಕ್ಕಿಂತ ಮೇಲೆ ಅಲ್ಲ ಎಂದು ಖಲಪ್ ಪರ ವಕೀಲgರೂ ಒಪ್ಪಿದರು. ಮರ್ಯಾದಾ ಹತ್ಯೆಯನ್ನು ನಿರ್ದಿಷ್ಟ ಅಪರಾಧವನ್ನಾಗಿ ಪರಿಗಣಿಸಬೇಕು ಎಂಬುದಾಗಿ ಕೋರಿ ಶಕ್ತಿವಾಹಿನಿ ಸರ್ಕಾರೇತರ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ಇಂತಹ ಕೊಲೆಗಳನ್ನು ನಿಗ್ರಹಿಸಲು ಮಾರ್ಗದರ್ಶಿ ಸೂತ್ರಗಳನ್ನು ಸಲಹೆ ಮಾಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸಲಹೆ ಮಾಡಿತು. ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಹೆಚ್ಚಿನ ಕಾಲಾವಕಾಶ ಕೋರಿದರು.

2018: ಲಕ್ನೋ: ಲಾಠಿಗಳನ್ನು ಹಿಡಿದುಕೊಂಡು ಯದ್ವಾತದ್ವ ಹಲ್ಲೆ ನಡೆಸುತ್ತಿದ್ದ ಗೂಂಡಾಗಳಿಂದ ತನ್ನ ಪತಿಯನ್ನು ರಕ್ಷಿಸಲು ಮಹಿಳೆಯೊಬ್ಬಳು ಗುಂಡು ಹಾರಿಸಿದ ಸಿನೀಮೀಯ ಘಟನೆ ಇಲ್ಲಿ ಘಟಿಸಿದ್ದು ಘಟನೆಯ ವಿಡಿಯೋ ವೈರಲ್ ಆಯಿತು. ಬಿಳಿ ಬಣ್ಣದ ಗೋಡೆಯ ಬಳಿ ನಿಂತ ಬಿಳಿಯ ಜೀಪಿನಿಂದ ನಾಲ್ಕು ಮಂದಿ ಇಳಿದು ಬರುವುದನ್ನು ಹಸುವೊಂದು ನೋಡುತ್ತಿರುವುದನ್ನು ತೋರಿಸುವ ವಿಡಿಯೋದಲ್ಲಿ ಕಂಡು ಬರುವ ದೃಶ್ಯಗಳು ಮರುಕ್ಷಣದಲ್ಲೇ ರುದ್ರರೂಪ ತಾಳುತ್ತವೆ. ಗುಂಪಿನಲ್ಲಿ ಒಬ್ಬ ವ್ಯಕ್ತಿ ಕರೆಗಂಟೆ ಒತ್ತಿದಾಗ, ಒಳಗಿನಿಂದ ವ್ಯಕ್ತಿ ಬಾಗಿಲು ತೆರೆದು ಹೊರಬರುತ್ತಾನೆ. ತತ್ ಕ್ಷಣವೇ ಆತನ ಮೇಲೆ ಮುಗಿಬೀಳುವ ಗುಂಪು ಆತನ ಮೇಲೆ ಲಾಠಿಗಳಿಂದ ತೀವ್ರ ಹಲ್ಲೆ ನಡೆಸುತ್ತದೆ. ಅಷ್ಟರಲ್ಲಿ ಮನೆಯೊಳಗಿನಿಂದ ಸರ್ವೀಸ್ ರಿವಾಲ್ವರ್ ಹಿಡಿದು ಹೊರಬರುವ ಮಹಿಳೆ ಹಲ್ಲೆ ನಡೆಸುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಲು ಆರಂಭಿಸುತ್ತಾಳೆ. ಹಲ್ಲೆ ನಡೆಸುತ್ತಿದ್ದ ಗುಂಪು ಹಲ್ಲೆಗೀಡಾದ ವ್ಯಕ್ತಿಯನ್ನು ಮನೆಯ ಎದುರಲ್ಲೇ ಬಿಟ್ಟು ಪರಾರಿಯಾಗುತ್ತದೆ.
ರಾಜಧಾನಿ ಲಕ್ನೋದ ಕಾಕೋರಿ ಪ್ರದೇಶದ ಆಮ್ರಪಾಲಿ ವಿಹಾರದಲ್ಲಿ ಘಟಿಸಿದ ಘಟನೆ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ.  ಸ್ಥಳೀಯ ಪತ್ರಕರ್ತ ಅಬಿದ್ ಅಲಿ ಮೇಲೆ ದಾಳಿ ನಡೆದಿದ್ದು, ಪತಿಯನ್ನು ರಕ್ಷಿಸಲು ಪತ್ನಿ ಗುಂಡು ಹಾರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ರಕರ್ತನ ಮೇಲೆ ಐವರ ಗುಂಪು ಲಾಠಿಗಳಿಂದ ಹಲ್ಲೆ ನಡೆಸಿದ್ದು, ಅಲಿ ಅವರ ತಲೆ, ಕತ್ತು, ಬೆನ್ನು, ಕೈಗಳಿಗೆ ತೀವ್ರ ಗಾಯಗಳಾಗಿವೆ. ಆದರೆ ಗುಂಡು ಹಾರಾಟದಿಂದ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಹೇಳಿದರು. ಹಲ್ಲೆಕೋರರು ಓಡುತ್ತಿದ್ದಂತೆಯೇ ಅಬಿದ್ ಅಲಿ ಅವರು ಪತ್ನಿಯಿಂದ ಬಂದೂಕನ್ನು ಕೈಗೆ ತೆಗೆದುಕೊಂಡು ತಾನೂ ಗುಂಡು ಹಾರಿಸಿದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದರು.  ಬಾಡಿಗೆ ಸಂಬಂಧಿತ ವಿವಾದದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಲಕ್ನೋ ಎಸ್ಎಸ್ಪಿ ದೀಪಕ್ ಕುಮಾರ್ ಹೇಳಿದರು. ದಾಳಿಕೋರರು ಮತ್ತು ದಾಳಿಗೆ ಈಡಾದವರು ಸಂಬಂಧ ದೂರು ದಾಖಲಿಸಿದ್ದು ಅದರ ವಿಚಾರಣೆ ನಡೆಯುತ್ತಿದೆ. ಮಧ್ಯೆ ಅಬಿದ್ ಮೇಲೆ ಹಲ್ಲೆ ನಡೆಸಿದರವರ ವಿರುದ್ಧ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಏನಿದ್ದರೂ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ ಎಂದು ಕುಮಾರ್ ನುಡಿದರು.

2018: ದುಬೈ : ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ಸುನಿಲ್ ಮಾಪಟ್ಟಾ ಕೃಷ್ಣನ್ ಕುಟ್ಟಿ ನಾಯರ್ ಅವರು ೧೭. ಕೋಟಿ ರೂ. ಮೌಲ್ಯದ ಲಾಟರಿಯನ್ನು ಗೆದ್ದು ಕೋಟ್ಯಧೀಶರಾಗಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿದವು. ಕೃಷ್ಣನ್ ಕುಟ್ಟಿ ನಾಯರ್ ಅವರು ಎರಡನೇ ಅತೀ ದೊಡ್ಡ ಮೊತ್ತದ ಲಾಟರಿ ಬಹುಮಾನವಾಗಿ ೧೦ ದಶಲಕ್ಷ ಧಿರಮ್ಗಳನ್ನು (ಅಂದಾಜು ೧೭,೬೮,೦೦,೦೦೦ ರೂ.) ಮನೆಗೆ ಒಯ್ಯಲಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿತು. ಅತ್ಯಂತ ದುಬಾರಿ ಎನಿಸುವ ೫೦೦ ಧಿರಮ್ ಬೆಲೆಯ ರಾಫೆಲ್ ಟಿಕೆಟನ್ನು ಸಾಮಾನ್ಯವಾಗಿ ಕೆಲ ವ್ಯಕ್ತಿಗಳು ಜತೆಗೂಡಿ ಖರೀದಿಸಿ ಬಹುಮಾನ ಬಂದಾಗ ಅದನ್ನು ಹಂಚಿಕೊಳ್ಳುವು ರೂಢಿ ವರದಿ ಹೇಳಿತು. ನಾಯರ್ ಅವರು ತಮಗೆ ಸಿಕ್ಕಿರುವ ಬೃಹತ್ ಮೊತ್ತದ ಬಹುಮಾನವನ್ನು ತಮ್ಮ ಮೂವರು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಟಿಕೆಟ್ ದರಕ್ಕೆ ವಂತಿಗೆ ನೀಡಿದ್ದ ಅವರ ಸಹೋದ್ಯೋಗಿ ತಿಳಿಸಿದರು. ವರ್ಷ ಜನವರಿ ೭ರಂದು ನಡೆದಿದ್ದ  ೧೨ ದಶಲಕ್ಷ ಧಿರಮ್ಗಳ ಬಹುಮಾನದ "ಬಿಗ್ ಟಿಕೆಟ್ ಡ್ರಾ ನಲ್ಲಿ ಕೇರಳದ ಹರಿಕೃಷ್ಣನ್ ವಿ ನಾಯರ್ ಬೃಹತ್ ಮೊತ್ತದ ಬಹುಮಾನವನ್ನು ಗೆದ್ದಿದ್ದರು. ಅವರು ಅಜ್ಮಾನ್ ನಿವಾಸಿಯಾಗಿದ್ದರು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ ೧೦ರಿಂದ ಮೂರು ದಿನ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಪ್ಯಾಲೆಸ್ತೈನ್ಗೆ ಐತಿಹಾಸಿಕ ಭೇಟಿ ನೀಡಲಿದ್ದಾರೆ.  ಪ್ರಧಾನಿ ಪ್ಯಾಲೆಸ್ತೈನ್ಗೆ ತೆರಳುತ್ತಿದ್ದು ಫೆ.೧೦ರಂದು ಅಲ್ಲಿನ ರಮಲ್ಲಾಗೆ ಭೇಟಿ ನೀಡುವರು. ಇದೊಂದು ಐತಿಹಾಸಿಕ ಭೇಟಿ ಆಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತು. ಪ್ರಧಾನಿ ಅವರು ಅರಬ್ ಒಕ್ಕೂಟ (ಯುಎಇ) ಮತ್ತು ಒಮನ್ಗೆ ಫೆ. ೧೦ರಿಂದ ೧೨ವರೆಗೆ ಭೇಟಿ ನೀಡುವರು. ೧೦ರಂದು ಪ್ಯಾಲೆಸ್ತೈನ್ನಿಂದ ಸಂಜೆ ಯುಎಇಗೆ ತೆರಳಲಿದ್ದಾರೆ. ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನೀಡಿರುವ ಆಹ್ವಾನ ಮೇರೆಗೆ ಪ್ರಧಾನಿಯವರು ಪ್ರವಾಸ ಕೈಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿತು.  ೨೦೧೭ರಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜತೆಗೆ ಅರಬ್ ಒಕ್ಕೂಟದ (ಯುಎಇ) ೧೭೯  ಸೈನಿಕರು ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗವಹಿಸಿತ್ತು.

2018: ಕಠ್ಮಂಡು: ನೇಪಾಳದ ಖ್ಯಾತ ಚಹಾ ರಫ್ತುದಾರರು ಇನ್ನು ಮುಂದೆಡಾರ್ಜಿಲಿಂಗ್, ಇಂಡಿಯಾ ಲಾಂಛನ ಬಳಸುವುದಿಲ್ಲ, ಬದಲಿಗೆ ನೇಪಾಳದ ಸ್ವಂತ ಲಾಂಛನದೊಂದಿಗೆ ಚಹಾ ರಫ್ತು ಮಾಡಲಿದ್ದಾರೆ.  ಚಹಾ ವ್ಯವಸಾಯ ಆರಂಭಿಸಿದ ೧೫೪ ವರ್ಷಗಳ ಬಳಿಕ ನೇಪಾಳಕ್ಕೆ ತನ್ನ ಸ್ವಂತ ಲಾಂಛನ ಲಭಿಸಿದೆ ಎಂದು ಮಾಧ್ಯಮ ವರದಿ ತಿಳಿಸಿತು.  ನೇಪಾಳ ಚಹಾ ಮತ್ತು ಕಾಫಿ ಅಭಿವೃದ್ಧಿ ಮಂಡಳಿ ಮತ್ತು ಚಹಾ ಉತ್ಪಾದನೆ ಸಂಬಂಧಿತ ಸಂಸ್ಥೆಗಳು ಹಾಗೂ ಕ್ಷೇತ್ರ ತಜ್ಞರ ತೀವ್ರ ಪ್ರಯತ್ನಗಳ ಬಳಿಕ ನೇಪಾಳಕ್ಕೆ ತನ್ನ ಸ್ವಂತ ಲಾಂಛನ ಅಥವಾ ಟ್ರೇಡ್ ಮಾರ್ಕ್ ಲಭಿಸಿದೆ ಎಂದುದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿತು. ಲಾಂಛನವು ಪರ್ವತಗಳ ಚಿತ್ರ ಮತ್ತು ಅದರ ಕೆಳಗೆನೇಪಾಳಿ ಟೀ ಕ್ವಾಲಿಟಿ ಫ್ರಮ್ ಹಿಮಾಲಯ ಎಂಬ ಬರಹವನ್ನು ಹೊಂದಿರುತ್ತದೆ. ಇದಕ್ಕೆ ಮುನ್ನ ನೇಪಾಳದ ಚಹಾವನ್ನು ಡಾರ್ಜಿಲಿಂಗ್, ಇಂಡಿಯಾ ಲಾಂಛನದ ಅಡಿಯಲ್ಲಿ ರಫ್ತು ಮಾಡಲಾಗುತ್ತಿತ್ತು ಎಂದು ವರದಿ ಹೇಳಿತು. ನೇಪಾಳವು ನೋಟ, ಪರಿಮಳ ಮತ್ತು ರುಚಿಯಲ್ಲಿ ಡಾರ್ಜಿಲಿಂಗ್ ಚಹಾವನ್ನೇ ಹೋಲುವ ಕೆಲವು ಚಹಾಗಳನ್ನು ಉತ್ಪಾದನೆ ಮಾಡುತ್ತದೆ. ಹಿಮಾಲಯ ಟೀ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಮತ್ತು ನೇಪಾಳ ಚಹಾ ಮತ್ತು ಕಾಫಿ ಅಭಿವೃದ್ಧಿ ಮಂಡಳಿಯ ಬೆಂಬಲದೊಂದಿಗೆ ಕೃಷಿ ಸಚಿವಾಲಯ ಲಾಂಛನ ಒಂದನ್ನು ಅಭಿವೃದ್ಧಿ ಪಡಿಸಿತು.
ಎವರೆಸ್ಟ್ ಶಿಖರದ ಬೇಸ್ ಕ್ಯಾಂಪಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಲಾಂಛನ ಬಿಡುಗಡೆಯ ಸಮಾರಂಭಕ್ಕೆ ಇದೀಗ ಸಿದ್ಧತೆ ನಡೆದಿದೆ. ದೊಡ್ಡ ದೊಡ್ಡ ಖರೀದಿದಾರರು ಮತ್ತು ವಿಶ್ವಾದ್ಯಂತದ ಪತ್ರಕರ್ತರು ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಏನಿದ್ದರೂ ಲಾಂಛನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸುವುದು ದೊಡ್ಡ ಸವಾಲು. ಲೋಗೋ ಬಳಕೆ ನಿಟ್ಟಿನಲ್ಲಿ ಸಚಿವಾಲಯವು ಸಂಬಂಧ ನಿರ್ದೇಶನವೊಂದನ್ನು ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ. ಲೋಗೋ ಬಳಸಿ ಮಾರಲಾಗುವ ಚಹಾ ಸಂಪೂರ್ಣವಾಗಿ ಸಾವಯವ ಚಹಾ ಆಗಿರಬೇಕು, ರಾಸಾಯನಿಕ ಬಳಕೆ ಮಾಡಿರಬಾರದು ಎಂದು ಸಚಿವಾಲಯ ನಿರ್ದೇಶನ ಸೂಚಿಸಿದೆ. ಲಾಂಛನ ಬಳಕೆದಾರರು ಚಹಾದ ಗುಣಮಟ್ಟ, ಕಾರ್ಮಿಕರ ಭದ್ರತೆಗೆ ಕ್ರಮ, ಪರಿಸರ ಸಂರಕ್ಷಣೆಯ ಕಾಳಜಿ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅದು ಹೇಳಿದೆ. ಕ್ರಮದಿಂದ ನೇಪಾಳಿ ಚಹಾಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ದರ ಲಭಿಸುವುದರ ಜೊತೆಗೆ ರೈತರಿಗೂ ನೇರ ಅನುಕೂಲ ಆಗಲಿದೆ ಎಂದು ಚಹಾರಫ್ತು ತಜ್ಞ ಚಂದ್ರಭೂಷಣ ಸುಬ್ಬ ಹೇಳಿದರು. ರೈತರು ಬೆಳವಣಿಗೆಯಿಂದ ಖುಷಿಯಾಗಿದ್ದಾರೆ. ಸ್ವಂತ ಲಾಂಛನ ಬಳಕೆಯಿಂದ ಉತ್ತಮ ವ್ಯವಹಾರ ಮತ್ತು ಸುಸ್ಧಿರತೆ ಲಭಿಸಬಲ್ಲುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿತು. ನೇಪಾಳದ ರಾಷ್ಟ್ರೀಯ ಚಹಾ ಮತ್ತು ಕಾಫಿ ಅಭಿವೃದ್ಧಿ ಮಂಡಳಿಯ ಪ್ರಕಾರ ನೇಪಾಳದ ೬೬.೭೦೦ ಎಕರೆ ಪ್ರದೇಶದಲ್ಲಿ ಚಹಾ ಬೆಳೆಯಲಾಗುತ್ತಿದೆ. ನೇಪಾಳದ ಚಹಾ ಮುಖ್ಯವಾಗಿ ಭಾರತ, ಕೆನಡಾ, ಜರ್ಮನಿ, ಅಮೆರಿಕ ಮತ್ತು ಚೀನಾ ದೇಶಗಳಿಗೆ ರಫ್ತಾಗುತ್ತದೆ. ನೇಪಾಳದಲ್ಲಿ ೧೯೨೦ರ ಸುಮಾರಿಗೆ ಆರಂಭವಾದ ಚಹಾ ವ್ಯವಸಾಯ ಬಳಿಕ ೪೪ ಜಿಲ್ಲೆಗಳಿಗೆ ವ್ಯಾಪಿಸಿದೆ. ೧೯೩೫ರಲ್ಲಿ ಚಹಾಪುಡಿ ಉತ್ಪಾದನೆಗಾಗಿ ಫ್ಯಾಕ್ಟರಿ ಆರಂಭಿಸಲಾಗಿತ್ತು.

2018: ನವದೆಹಲಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಇಲ್ಲಿ ಹೇಳಿದರು. ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರುಭ್ರಷ್ಟಚಾರದಿಂದ ರಾಜ್ಯ ಅವನತಿಯತ್ತ ಸಾಗುತ್ತಿದೆ ಎಂದು ನುಡಿದರು. ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನಂತ ಕುಮಾರ್ ಆಪಾದಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಜನತೆ ಭ್ರಮ ನಿರಸನಗೊಂಡಿದ್ದಾರೆ ಎಂದು ಅವರು ದೂರಿದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಸಮಾರೋಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಭ್ರಷ್ಟಾಚಾರ ಏರಿಕೆ ಮತ್ತು ಕೋಮು ಸಾಮರಸ್ಯ ಹದಗೆಡುತ್ತಿರುವ ಕುರಿತಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಅವರೂ ಪ್ರತ್ಯುತ್ತರ ನೀಡಿ ಮೋದಿಯವರು ಪ್ರಧಾನಿ ಹುದ್ದೆಗೇ ಅಗೌರವ ತಂದಿದ್ದಾರೆ ಎಂದು ಟೀಕಿಸಿದ್ದರು.

2009: ಒಲಿಂಪಿಕ್ ಪದಕ ವಿಜೇತ ಶ್ರೀಲಂಕಾದ ಮಹಿಳಾ ಆಥ್ಲೀಟ್ ಸುಶಾಂತಿಕಾ ಜಯಸಿಂಘೆ ಅವರು ವಿದಾಯ ಹೇಳಿದರು. ಶ್ರೀಲಂಕಾ ಅಧ್ಯಕ್ಷರಾದ ಮಹಿಂದಾ ರಾಜಪಕ್ಷೆ 33 ವರ್ಷ ವಯಸ್ಸಿನ ಅಥ್ಲೀಟ್ ಅನ್ನು ಸನ್ಮಾನಿಸಿದರು. 50 ಲಕ್ಷ ರೂ. ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು. 2000ರ ಸಿಡ್ನಿ ಒಲಿಂಪಿಕ್ ಕೂಟದಲ್ಲಿ 200 ಮೀ. ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊತ್ತ ಮೊದಲ ಲಂಕಾ ಮಹಿಳೆ ಎನಿಸಿದ್ದರು. ಅದಾದ ನಂತರ ಕೆಲವು ವರ್ಷಗಳಲ್ಲಿ ಸಿಡ್ನಿ ಒಲಿಂಪಿಕ್ ಸ್ವರ್ಣ ವಿಜೇತ ಅಮೆರಿಕಾದ ಮೇರಿಯನ್ ಜೋನ್ಸ್ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದರು. ಆದ್ದರಿಂದ ಅವರ ಪದಕವನ್ನೂ ಕಿತ್ತುಕೊಳ್ಳಲಾಯಿತು.
2009: ಕೊಲಂಬೊ: ಮಾಂತ್ರಿಕ ಸ್ಪಿನ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಪಾಕಿಸ್ಥಾನದ ಮಾಜಿ ವೇಗಿ ವಾಸೀಮ್ ಅಕ್ರಮ್ ಅವರ ವಿಶ್ವದಾಖಲೆಯನ್ನು ಮುರಿಯುವ ಮೂಲಕ ಮತ್ತೊಂದು ಮಹತ್ತರ ಸಾಧನೆ ಮಾಡಿದರು. ಕೊಲಂಬೋದಲ್ಲಿ ನಡೆದ ಭಾರತ ವಿರುದ್ಧದ ಸರಣಿಯ ನಾಲ್ಕನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರು ಚೆಂಡನ್ನು ಕೆಣಕಿ, ವಿಕೆಟ್ ಕೀಪರ್ ಕುಮಾರ ಸಂಗಕ್ಕಾರಗೆ ಕ್ಯಾಚ್ ನೀಡುವಂತೆ ಮಾಡಿದರು. ಈ ಮೂಲಕ ವಿಶ್ವ ಖ್ಯಾತ ಆಫ್‌ಸ್ಪಿನ್ನರ್ ಮುರಳೀಧರನ್ (503 ವಿಕೆಟ್) ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಈ ಮೊದಲು ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು 502 ವಿಕೆಟ್ ಕಬಳಿಸಿದ್ದ ಅಕ್ರಮ್ ಹೊಂದಿದ್ದರು. ಮುರಳಿ ಅದನ್ನು ಮೀರಿ ಬೆಳೆದರು.
2009: 'ಸಿ' ದರ್ಜೆ ನೌಕರರಾಗಿರುವ ದಂಪತಿಯ ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿ ಮಿರಿದ್ದರೂ ಕೂಡ, ಅವರ ಮಕ್ಕಳು '3ಎ' ವರ್ಗದ ಮೀಸಲಾತಿ ಪಡೆದುಕೊಳ್ಳಬಹುದು ಎಂಬ ಸರ್ಕಾರದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿತು. 'ಇಂತಹ ಮಕ್ಕಳು ಕೂಡ ಕೆನೆ ಪದರ ವ್ಯಾಪ್ತಿಗೆ ಒಳಪಡುತ್ತಾರೆ. ಇವರನ್ನು ಕೆನೆ ಪದರದಿಂದ ಹೊರಕ್ಕೆ ಇಡುವುದು ಸರಿಯಲ್ಲ' ಎಂದು ನ್ಯಾಯಮೂರ್ತಿ ಅಜಿತ್ ಗುಂಜಾಳ್ ಮಹತ್ವದ ತೀರ್ಪು ನೀಡಿದರು. ಈ ರೀತಿ ಮೀಸಲಾತಿ ನೀಡುತ್ತಾ ಹೋದರೆ, ಮೀಸಲಾತಿ ಎಂಬ ಶಬ್ಧದ ಅರ್ಥಕ್ಕೇ ಮಾನ್ಯತೆಯೇ ಇಲ್ಲದಂತಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.

2009: ಪಂಡಿತ್ ರಾಜಶೇಖರ ಮನ್ಸೂರ್ (ಹಿಂದುಸ್ಥಾನಿ ಗಾಯನ) ಹಾಗೂ ಬೆಂಗಳೂರಿನ ಎಸ್. ಶಂಕರ್ (ಕರ್ನಾಟಕ ಸಂಗೀತ) ಅವರನ್ನು 2008-09ನೇ ಸಾಲಿನ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ 16 ಮಂದಿಯನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಕರ್ನಾಟಕ ಸಂಗೀತ: ವಸಂತ ಮಾಧವಿ, ಟಿ.ಆರ್. ರಂಗಸ್ವಾಮಿ, ಬೆಂಗಳೂರು (ಹಾಡುಗಾರಿಕೆ), ಎಚ್.ಟಿ.ನಾರಾಯಣಾಚಾರ್, ಚಿಕ್ಕಬಳ್ಳಾಪುರ (ಪಿಟೀಲು), ಉಷಾ ರಾಮಮೂರ್ತಿ, ಬೆಂಗಳೂರು (ಗೋಟುವಾದ್ಯ). ಹಿಂದುಸ್ಥಾನಿ ಸಂಗೀತ: ರಾಮರಾವ್ ಜಗರ್ಕಲ್, ಧಾರವಾಡ (ಗಾಯನ), ಶೋಭಾ ಹುಯಿಲಗೋಳ, ಗದಗ (ಗಾಯನ), ಸಂಜೀವ್ ಪೋತದಾರ್, ಶಿರಸಿ (ತಬಲಾ), ಶ್ರೀರಾಮುಲು ರಾಯಚೂರ್ಕರ್, ರಾಯಚೂರು (ಶಹನಾಯಿ). ಸುಗಮ ಸಂಗೀತ: ಡಾ. ಜಯಶ್ರೀ ಅರವಿಂದ್ (ಬೆಂಗಳೂರು), ಎನ್.ಎಸ್.ಪ್ರಸಾದ್, ಬೆಂಗಳೂರು (ಮ್ಯಾಂಡೋಲಿನ್). ನೃತ್ಯ: ಕೆ. ಹರಿದಾಸ (ಗದಗ), ಸುಂದರಿ ಸಂತಾನಂ ಮತ್ತು ಮಂಜು ಭಾರ್ಗವಿ (ಬೆಂಗಳೂರು). ಕಥಾ ಕೀರ್ತನ: ಭದ್ರಗಿರಿ ಸರ್ವೋತ್ತಮದಾಸ (ಬೆಂಗಳೂರು). ಗಮಕ: ವೆಂಕಟಾದ್ರಿ ಶರ್ಮ (ಬೆಂಗಳೂರು). ಹೊರರಾಜ್ಯದ ಕನ್ನಡ ಕಲಾವಿದರು: ಸರಯೂ ಸ್ವನ್ನಿ, ಬನಾರಸ್ (ಹಿಂದುಸ್ಥಾನಿ ಸಂಗೀತ- ಗಾಯನ)

2009: ಮುಂಬೈ ಮೇಲೆ ನಡೆದ 26/11ರ ದಾಳಿಗೆ ಸಂಬಂಧಿಸಿದಂತೆ ಜೀವಂತವಾಗಿ ಬಂಧಿಸಲಾದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಾಬ್, ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಡಿಎನ್‌ಎ ಅಂಶಗಳು ದೃಢಪಡಿಸಿದವು. ಉಗ್ರರು ದಾಳಿಗೂ ಮುನ್ನ ಬಳಸಿದ್ದ ಕುಬೇರ ದೋಣಿಯಲ್ಲಿ ದೊರೆತ ಮಾದರಿಗಳು ಕಸಾಬ್‌ನ ಡಿಎನ್‌ಎ ಜತೆ ಹೋಲಿಕೆಯಾಗಿವೆ ಎಂದು ಮಹಾರಾಷ್ಟ್ರ ಗೃಹಮಂತ್ರಿ ಜಯಂತ ಪಾಟೀಲ್ ತಿಳಿಸಿದರು.

2009: ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ನೀಡಿದ 'ಸ್ವರ್ಣ ಕಮಲ' ಪ್ರಶಸ್ತಿಯನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ರೇಣುಕಾ ಚೌಧರಿ ಇದ್ದರು.

2008: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಹಿರಿಯ ನಾಗರಿಕರಿಗಾಗಿ ಆರಂಭಿಸಿರುವ ಬಿಸಿಯೂಟ ಯೋಜನೆಗೆ ಪ್ರಕಾಶನಗರದಲ್ಲಿ ಚಾಲನೆ ನೀಡಲಾಯಿತು. ಪಾಲಿಕೆ ಮಾಜಿ ಸದಸ್ಯೆ ಪದ್ಮಾವತಿ ಹಾಗೂ ಪಾಲಿಕೆ ಸಿಬ್ಬಂದಿ ಆಹಾರ ವಿತರಿಸಿದರು.

2008: ಬೆಂಗಳೂರು ನಗರದ ಮಧ್ಯಭಾಗದಲ್ಲಿರುವ ಕಸಾಯಿಖಾನೆಗಳನ್ನು ಹೊರಭಾಗದ ಇಗಳೂರಿಗೆ ಸ್ಥಳಾಂತರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿತು. ಸ್ಥಳಾಂತರ ಮಾಡದಂತೆ ಪಾಲಿಕೆಗೆ ಆದೇಶಿಸಲು ಕೋರಿ `ಆನೇಕಲ್ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. ಇಲ್ಲಿಗೆ ಸ್ಥಳಾಂತರ ಮಾಡಿದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಸಮೀಪದಲ್ಲಿಯೇ ಶಾಲೆ, ಆಸ್ಪತ್ರೆಗಳು ಇದ್ದು ಇದರಿಂದ ತೊಂದರೆ ಉಂಟಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ಪೀಠ ಮಾನ್ಯ ಮಾಡಲಿಲ್ಲ. ಕೋರ್ಟ್ ಆದೇಶದ ಮೇರೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಈ ನಿರ್ಧಾರದ ಮಧ್ಯೆ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತು. ಯಾವ ಜಾಗಕ್ಕೆ ಸ್ಥಳಾಂತರ ಮಾಡಿದರೂ ಸ್ಥಳೀಯರಿಂದ ಪ್ರತಿರೋಧ ಬಂದೇ ಬರುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಆಧುನಿಕ ಮಾದರಿಯ ಕಸಾಯಿ ಖಾನೆ ನಿರ್ಮಾಣ ಆಗಲಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಹೇಳಿ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾ ಮಾಡಿದರು.

2008: ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆಯ ಭಯ ಎದುರಿಸುತ್ತಿರುವ ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಟಾಟಾ ಸಮೂಹದ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್) ತನ್ನ 500 ಮಂದಿ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿತು. `ಎರಡು ವರ್ಷಕ್ಕಿಂತ ಕಡಿಮೆ ಅನುಭವ ಇರುವ ಉದ್ಯೋಗಿಗಳಿಗೆ ಸಾಮರ್ಥ್ಯ ಪರೀಕ್ಷೆಯನ್ನು ಪ್ರತೀ ವರ್ಷ ನಡೆಸಲಾಗುತ್ತದೆ. ಇದರಲ್ಲಿ ಅನುತ್ತೀರ್ಣರಾದವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ' ಎಂದು ಟಿಸಿಎಸ್ ವಕ್ತಾರ ಪ್ರದೀಪ್ತ ಬಗಚಿ ಹೇಳಿದರು.

2008: `ಪ್ರಜಾವಾಣಿ'ಯ ವ್ಯಂಗಚಿತ್ರಕಾರ ಪಿ.ಮಹಮ್ಮದ್ ಅವರಿಗೆ 2007 ನೇ ಸಾಲಿನ ಮಾಧ್ಯಮ ಅಕಾಡೆಮಿಯು ವ್ಯಂಗ್ಯಚಿತ್ರಕ್ಕಾಗಿ ನೀಡುವ `ಶ್ರೀರಂಗ ಸ್ಮಾರಕ ಪ್ರಶಸ್ತಿ' ಲಭಿಸಿತು. `ಪ್ರಜಾವಾಣಿ'ಯಲ್ಲಿ ಪ್ರಕಟವಾದ ರಾಜಕೀಯ ವಿಡಂಬಣೆ ಕುರಿತ ವ್ಯಂಗ್ಯಚಿತ್ರಗಳಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿತು. `ಮೈಸೂರು ದಿಗಂತ' ಪ್ರಶಸ್ತಿ ಮಲ್ಲಿಕಾರ್ಜುನ ಸಿದ್ದಣ್ಣವರ (ಕನ್ನಡಪ್ರಭ), `ಅಭಿಮಾನಿ ಪ್ರಶಸ್ತಿ' ವೈ.ಗ.ಜಗದೀಶ (ಉದಯವಾಣಿ), `ಪ್ರಜಾಪ್ರಗತಿ ಪ್ರಶಸ್ತಿ' ಕುಂಡೇಕಲ್ ಸಂತೋಷ (ಮಡಿಕೇರಿ ಶಕ್ತಿ), `ದಿ.ಬಿ.ಎನ್.ಗುಪ್ತಾ ಸ್ಮಾರಕ ಪ್ರಶಸ್ತಿ' ಜಿ.ಪ್ರಕಾಶ್ (ವಿಜಯ ಕರ್ನಾಟಕ), `ಪುಟ ವಿನ್ಯಾಸ ಪ್ರಶಸ್ತಿ' (ಕನ್ನಡ ಪ್ರಭ), `ಸುದ್ದಿ ಚಿತ್ರ ಪ್ರಶಸ್ತಿ' ಕೆ.ಆರ್.ಪ್ರಕಾಶ್ (ಸಂಯುಕ್ತ ಕರ್ನಾಟಕ), `ಕ್ರೀಡಾ ವರದಿ ಪ್ರಶಸ್ತಿ' ವಿಕ್ರಂ ಕಾಂತಿಕೆರೆ (ಆಂದೋಲನ ಪತ್ರಿಕೆ) ಹಾಗೂ 'ಅತ್ಯುತ್ತಮ ರಾಜಕೀಯ ವಿಶ್ಲೇಷಣೆ ಪ್ರಶಸ್ತಿ' ಪಿ.ತ್ಯಾಗರಾಜ್ (ವಿಜಯ ಕರ್ನಾಟಕ) ಅವರಿಗೆ ನೀಡಲಾಯಿತು. ವಿದ್ಯುನ್ಮಾನ ವಿಭಾಗಕ್ಕೆ ನೀಡಲಾಗುವ ಅತ್ಯುತ್ತಮ ಸುದ್ದಿ ನಿರೂಪಣೆ ಪ್ರಶಸ್ತಿ -ಬಿ.ಸಮೀವುಲ್ಲಾ (ಉದಯ ಟಿವಿ), ಅತ್ಯುತ್ತಮ ಸುದ್ದಿವಾಚಕ-ಗೌರೀಶ್ ಎಸ್.ಅಕ್ಕಿ (ಟಿವಿ 9), ಅತ್ಯುತ್ತಮ ಸಾಮಾಜಿಕ ಕಳಕಳಿ ಸುದ್ದಿ ರೂಪಕ-ಡಾ.ಜೆ.ಎಂ.ಚಂದಣ್ಣನವರ (ಚಂದನ ವಾಹಿನಿ), ಅತ್ಯುತ್ತಮ ಅಪರಾಧ ಆಧಾರಿತ ಸುದ್ದಿರೂಪಕ-ಬಿಡುಗಡೆಯ ಬೇಡಿ (ಕಸ್ತೂರಿ) ಹಾಗೂ ಅತ್ಯುತ್ತಮ ರೂಪಕ ಪ್ರಶಸ್ತಿ- ಲೇಡಿಸ್ ಕ್ಲಬ್ (ಟಿವಿ 9) ಲಭಿಸಿತು.

2008: ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಕನ್ನಡ ಭಾಷೆಯಲ್ಲಿ ಕಂಪ್ಯೂಟರಿಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸುವ `ವಿಲೇಜ್ ಮಲ್ಟಿಮೀಡಿಯಾ' ಸಂಸ್ಥೆ ಸಿದ್ಧಪಡಿಸಿರುವ `ಅಂಗೈ' ಕನ್ನಡದಲ್ಲಿ ಇ ಜಗತ್ತು..! ಸಿ.ಡಿಯನ್ನು ಸಂಶೋಧಕ ಡಾ.ಶ್ರೀನಿವಾಸ ಹಾವನೂರ ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಗೊಳಿಸಿದರು.

2008: ಕೇವಲ ರಾಮಸೇತು ನಾಶಕ್ಕೆ ಮಾತ್ರ ನಮ್ಮ ವಿರೋಧವಿದೆಯೇ ಹೊರತು ಸೇತು ಸಮುದ್ರಂ ನಾಲಾ ಯೋಜನೆಗೆ ನಮ್ಮ ವಿರೋಧವಿಲ್ಲ ಎಂದು ತಮಿಳುನಾಡು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ ಸ್ಪಷ್ಟಪಡಿಸಿತು. ರಾಮಸೇತುವೆ ಉದ್ದಕ್ಕೆ ಹಾಗೂ ಬದುವಿನ ಗ್ರಾಮಗಳಲ್ಲಿನ ಮರಳಿನಲ್ಲಿ ವಿಕಿರಣಪಟು ಲೋಹಧಾತುವೆನಿಸಿದ ಥೋರಿಯಂ ಯಥೇಚ್ಛವಾಗಿದೆ. ಇದು ವಿಶ್ವದಲ್ಲಿನ ಥೋರಿಯಂ ಪ್ರಮಾಣದಲ್ಲಿ ಶೇ 30ರಷ್ಟಿದೆ. ಇದು ನಾಶವಾಗಬಾರದೆಂಬುದೇ ಪಕ್ಷದ ಬಯಕೆ ಎಂದು ಅದು ಹೇಳಿತು.

2008: ಬಿಹಾರದ ಯಾವುದೇ ಭಾಗದಲ್ಲಿ ಪಕ್ಷಿಜ್ವರ ಕಾಣಿಸಿಕೊಳ್ಳದೇ ಇದ್ದರೂ, ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿರುವ ಈ ರಾಜ್ಯದ ಪೂರ್ನಿಯಾ ಜಿಲ್ಲೆಯಲ್ಲಿ ಕೋಳಿಗಳ ಹತ್ಯೆ ಆರಂಭವಾಯಿತು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಪೂರ್ನಿಯಾ, ಕತಿಹಾರ್ ಹಾಗೂ ಕಿಷನ್ ಗಂಜ್ ಜಿಲ್ಲೆಗಳಲ್ಲಿ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಯಿತು.

2008: ಕಂದಹಾರ್ ವಿಮಾನ ಅಪಹರಣದ ಸಂಚಿನಲ್ಲಿ ಪಾಲ್ಗೊಂಡ ಮೂವರು ಅಪರಾಧಿಗಳಿಗೆ ಪಾಟಿಯಾಲದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಇಂದ್ರಜಿತ್ ಸಿಂಗ್ ವಾಲಿಯಾ ಅವರು ಆರೋಪಿಗಳಾದ ಅಬ್ದುಲ್ ಲತೀಫ್, ಯೂಸುಫ್ ನೇಪಾಲಿ ಮತ್ತು ದಿಲೀಪ್ ಕುಮಾರ್ ಅವರನ್ನು ಅಪರಾಧಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಘಟನೆ ನಡೆದು ಒಂಬತ್ತು ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷೆಯಾಯಿತು. 2001ರಲ್ಲಿ ಕಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್ಲೈನ್ಸ್ ಐಸಿ 814 ವಿಮಾನವನ್ನು ಪಾಕಿಸ್ಥಾನ ಮೂಲದ ಐವರು ಉಗ್ರರು ಅಪಹರಿಸಿ ಆಫ್ಘಾನಿಸ್ಥಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಎಂಟು ದಿನಗಳವರೆಗೆ ಉಗ್ರರು ವಿಮಾನವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಈ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ನಕಲಿ ಪಾಸ್ಪೋರ್ಟ್ ಒದಗಿಸಿದ ಆರೋಪ ಈ ಮೂವರು ಅಪರಾಧಿಗಳ ಮೇಲಿತ್ತು. ಆಫ್ಘಾನಿಸ್ಥಾನದಲ್ಲಿ ಆಗ ತಾಲಿಬಾನ್ ಆಡಳಿತವಿದ್ದದ್ದರಿಂದ ವಿಮಾನ ಅಪಹರಿಸಿದ ಉಗ್ರರನ್ನು ಬಂಧಿಸಲಾಗಿರಲಿಲ್ಲ.

2007: ಭಾರತ ಸಂಜಾತೆ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸುವ ಮೂಲಕ ಅತಿ ಹೆಚ್ಚು ಹೊತ್ತು ನಭದಲ್ಲಿ ನಡೆದಾಡಿದ ವಿಶ್ವದ ಪ್ರಥಮ ಮಹಿಳೆ ಎಂಬ ದಾಖಲೆ ಸೃಷ್ಟಿಸಿದರು. ಸುನೀತಾ ಮತ್ತು ಗಗನಯಾತ್ರೆಯ ಕಮಾಂಡರ್ ಮೈಕೆಲ್ ಲೋಪೆಜ್ ಅಲೆಗ್ರಿಯಾ ಅವರು ಏಳು ಗಂಟೆ 11 ನಿಮಿಷಗಳ ನಡಿಗೆಯ ಬಳಿಕ ಗಗನನೌಕೆಗೆ ವಾಪಸಾದರು. ಈ ನಡಿಗೆಯ ಅವಧಿಯಲ್ಲಿ ಇವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಶೀತಲೀಕರಣ ವ್ಯವಸ್ಥೆಯನ್ನು ದುರಸ್ತಿ ಮಾಡಿದರು. ಈದಿನ 7 ಗಂಟೆಗಳ ನಡಿಗೆಯೊಂದಿಗೆ ಸುನೀತಾ ಅವರು ಒಟ್ಟು 22 ಗಂಟೆ 27 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ನಡೆದಾಡಿದ ದಾಖಲೆ ನಿರ್ಮಿಸಿದರು. ಈವರೆಗೆ ಈ ದಾಖಲೆ ಕ್ಯಾಥಿ ಥೋರ್ನ್ ಟನ್ ಅವರ ಹೆಸರಿನಲ್ಲಿತ್ತು.

2007: ತಮಿಳುನಾಡಿಗೆ 205 ಟಿಎಂಸಿ ಗೆ ಬದಲಾಗಿ 192 ಟಿಎಂಸಿ ನೀರನ್ನು ಕರ್ನಾಟಕವು ಬಿಡುಗಡೆ ಮಾಡಬೇಕು ಎಂದು ನ್ಯಾಯಮಂಡಳಿಯು ಅಂತಿಮ ಐತೀರ್ಪು ನೀಡಿತು. ತನ್ನ ಮಧ್ಯಂತರ ತೀರ್ಪಿನಲ್ಲಿ ಅದು 205 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಮಧ್ಯಂತರ ಆದೇಶದಲ್ಲಿ ಮೆಟ್ಟೂರು ಜಲಾಶಯಕ್ಕೆ ನೀರು ಹರಿಸುವಂತೆ ಹೇಳಿದ್ದ ನ್ಯಾಯಮಂಡಳಿ, ಅಂತಿಮ ಐತೀರ್ಪಿನಲ್ಲಿ ಬಿಳಿಗುಂಡ್ಲು ಜಲಮಾಪನ ಕೇಂದ್ರಕ್ಕೆ ನೀರು ಹರಿಸಲು ಆದೇಶ ನೀಡಿತು. ಒಟ್ಟು 740 ಟಿ ಎಂಸಿಯಲ್ಲಿ ಕರ್ನಾಟಕ 465 ಟಿಎಂಸಿ ನೀರು ಕೇಳಿತ್ತು. ಆದರೆ ಅದಕ್ಕೆ ಲಭಿಸಿದ್ದು 270 ಟಿಎಂಸಿ ಮಾತ್ರ. ತಮಿಳುನಾಡಿಗೆ ಕಾವೇರಿ ನೀರಿನಲ್ಲಿ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಹಾಗೂ ಪುದುಚೆರಿಗೆ 7 ಟಿಎಂಸಿಯನ್ನು ನ್ಯಾಯಮಂಡಳಿ ನಿಗದಿ ಪಡಿಸಿತು.

2007: ಭಾರತದ ಇಂದ್ರಾ ಕೆ ನೂಯಿ (51) ಅವರು ಆಹಾರ ಮತ್ತು ತಂಪು ಪಾನೀಯಗಳ ಬೃಹತ್ ಬಹುರಾಷ್ಟ್ರೀಯ ಸಂಸ್ಥೆ ಪೆಪ್ಸಿಕೊದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನೂಯಿ, ಹೊಸ ಹುದ್ದೆಯನ್ನು ಮೇ 2ರಂದು ನಿವೃತ್ತರಾಗುವ ಹಾಲಿ ಅಧ್ಯಕ್ಷ ಸ್ಟೀವನ್ ಎಸ್. ರೈನೆಮಂಡ್ ಅವರಿಂದ ವಹಿಸಿಕೊಳ್ಳುವರು ಎಂದು ಹೂಸ್ಟನ್ನಿನಲ್ಲಿ ಕಂಪೆನಿಯ ಪ್ರಕಟಣೆ ತಿಳಿಸಿತು.

2007: ಬಾಂಗ್ಲಾದೇಶದ ಚುನಾವಣಾ ಆಯೋಗದ ನೂತನ ಮುಖ್ಯ ಚುನಾವಣಾ ಕಮೀಷನರ್ (ಸಿಇಸಿ) ಆಗಿ ನೇಮಕಗೊಂಡಿರುವ ಎ.ಟಿ.ಎಂ. ಶಂಶುಲ್ ಹುದಾ ಮತ್ತು ಉಪ ಚುನಾವಣಾ ಕಮೀಷನರ್ ಸೋಹುಲ್ ಹುಸೇನ್ ಅವರು ಮುಖ್ಯನ್ಯಾಯಾಧೀಶ ಜೆ.ಆರ್. ಮುದಾಸ್ಸಿರ್ ಹುಸೇನ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

2007: ಮಧ್ಯಪ್ರದೇಶದ ಖತ್ನಿಗೆ ಸಮೀಪದ ಘೋರೇಶ್ವರ ಗ್ರಾಮದಲ್ಲಿ ಕೊಳವೆ ಬಾವಿಯ ಒಳಗೆ 56 ಅಡಿ ಆಳಕ್ಕೆ ಬಿದ್ದ 3 ವರ್ಷದ ಪುಟಾಣಿ ಅಮಿತ್ ಖುಷ್ವಾನನ್ನು ಬಾವಿಗೆ ಬಿದ್ದ 12 ಗಂಟೆಗಳ ಬಳಿಕ ಈದಿನ ತುರ್ತು ಕಾರ್ಯಾಚರಣೆ ನಡೆಸಿ ಜೀವಂತವಾಗಿ ಮೇಲೆತ್ತಲಾಯಿತು. ಕಳೆದ ವರ್ಷ ಪ್ರಿನ್ಸ್ ಎಂಬ ಬಾಲಕ ಹರಿಯಾಣದ ಕುರುಕ್ಷೇತ್ರದಲ್ಲಿ ಕೊರೆದು ಹಾಗೆಯೇ ಬಿಟ್ಟಿದ್ದ ಕೊಳವೆ ಬಾವಿಯೊಳಕ್ಕೆ ಬಿದ್ದು, ಇದೇ ರೀತಿ ಪವಾಡಸದೃಶವಾಗಿ ಬದುಕಿದ್ದ. ಕರ್ನಾಟಕದ ಬಾಗಲಕೋಟೆ ಬಳಿ ಇದೇ ರೀತಿ ಮಹಿಳೆಯೊಬ್ಬಳು ಕೊಳವೆ ಬಾವಿ ಪಾಲಾಗಿದ್ದಳು. ನಂತರ ಸುತ್ತಲಿನ ಜನರ ತುರ್ತು ಕಾರ್ಯಾಚರಣೆಯಿಂದಾಗಿ ಆಕೆಯೂ ಸಾವನ್ನು ಗೆದ್ದಿದ್ದಳು. ಘೋರೇಶ್ವರದಲ್ಲೂ ಕೊಳವೆ ಬಾವಿಗೆ ಸಮಾನಾಂತರವಾಗಿ ಬಾವಿ ಕೊರೆದು ಅಮಿತನನ್ನು ಮೇಲಕ್ಕೆ ಎತ್ತಲಾಯಿತು.

2007: ಸೈಪ್ರಸ್ಸಿನ ಮಾರ್ಕೊಸ್ ಬಗ್ಮಾಟಿಸ್ ಅವರು ಕ್ರೊಯೇಷಿಯಾದ ಜಗ್ರೆಬ್ನಲ್ಲಿ ನಡೆದ ಜಗ್ರೆಬ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

2007: ಚಂಡೀಗಢ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ವಿಜಾಪುರ ಜಿಲ್ಲೆ ಬಸವನಬಾಗೇವಾಡಿಯವರಾದ ಕನ್ನಡಿಗ ಡಾ. ಎಸ್.ಕೆ. ಕುಲಕರ್ಣಿ ನೇಮಕಗೊಂಡರು.

2006: ಅಂತರ್ಜಾಲ ತಾಣಗಳ ಹುಡುಕಾಟ ನಡೆಸುವ ಗೂಗಲ್ ವೆಬ್ ಸೈಟಿಗೆ ಪ್ರತಿಯಾಗಿ ಕೊಸಮಿಕ್ಸ್ ವೆಬ್ ಸೈಟನ್ನು ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ಮೂಲದ ತಂತ್ರಜ್ಞರಾದ ಆನಂದ ರಾಜಾರಾಮನ್ ಮತ್ತು ವೆಂಕಿ ಹರಿನಾರಾಯಣ ಪ್ರಕಟಿಸಿದರು. ಇವರಿಬ್ಬರೂ ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಪ್ರಸ್ತುತ ಗೂಗಲ್ಸ್ ವೆಬ್ ಸೈಟ್ ನಿರ್ಮಿಸಿರುವ ಲಾರ್ರೆ ಪೆಜ್ ಮತ್ತು ಸೆರ್ಜ್ ಬಿನ್ ಅವರ ಸಹಪಾಠಿಗಳಾಗಿದ್ದವರು.

2006: ಹೊಸನಗರ ಧರ್ಮಚಕ್ರ್ರ ಟ್ರಸ್ಟ್ ವತಿಯಿಂದ ಕಾಸರಗೋಡು ಜಿಲ್ಲೆಯ ಮುಜುಂಗಾವಿನಲ್ಲಿ ಸ್ಥಾಪನೆಯಾದ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯಕ್ಕೆ ಅಡ್ಯನಡ್ಕ ಸಮೀಪದ ಮುಳಿಯಾಲದ ಈಶ್ವರ ಭಟ್ ಅವರು ಕಣ್ಣು ದಾನ ಮಾಡುವ ಮೂಲಕ ಇಲ್ಲಿನ ಪ್ರಥಮ ನೇತ್ರದಾನಿ ಎನಿಸಿಕೊಂಡರು. 84ನೇ ವಯಸ್ಸಿನಲ್ಲಿ ನಿಧನರಾದ ಅವರು ಈ ಮೂಲಕ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ ನೀಡಿದ ವಾಗ್ದಾನ ಈಡೇರಿತು.

1953: ವಾಲ್ಟ್ ಡಿಸ್ನಿ ಅವರ ಪೀಟರ್ ಪಾನ್ ಚಿತ್ರದ ಪ್ರದರ್ಶನ ನ್ಯೂಯಾರ್ಕಿನ ರೋಕ್ಸಿ ಥಿಯೇಟರಿನಲ್ಲಿ ಆರಂಭವಾಯಿತು.

1943: ರಂಗಕರ್ಮಿ, ಆದರ್ಶ ಶಿಕ್ಷಕ, ನೈತಿಕ ಮೌಲ್ಯಗಳ ಬೋಧಕ ಆರ್. ಎನ್. ಈಶ್ವರಪ್ಪ ಅವರು ಮರುಳಪ್ಪ- ಸಿದ್ದಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆ ರಾಗಿ ಹೊಸಹಳ್ಳಿಯಲ್ಲಿ ಜನಿಸಿದರು.

1937: ಚಾರ್ಲಿ ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ `ಮಾಡರ್ನ್ ಟೈಮ್ಸ್' ಬಿಡುಗಡೆಗೊಂಡಿತು.

1936: ನಿತ್ಯೋತ್ಸವ ಖ್ಯಾತಿಯ ಹಿರಿಯ ಕವಿ ನಿಸಾರ್ ಅಹಮದ್ ಹುಟ್ಟಿದ ದಿನ. ಬೆಂಗಳೂರು ಜಿಲ್ಲೆಯ ದೇವನಹಳಿಯಲ್ಲಿ ಷೇಕ್ ಹೈದರ್- ಹಮೀದಾ ಬೇಗಂ ದಂಪತಿಯ ಪುತ್ರನಾಗಿ ಜನಿಸಿದ ನಿಸಾರ್ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡ ಅವರಿಗೆ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇತ್ತೀಚೆಗಿನ ಗೌರವ.

1930: ಕಲಾವಿದ ಎಚ್. ಎಸ್. ರಂಗನಾಥದಾಸ್ ಜನನ.

1922: ಖಿಲಾಫತ್ ಚಳವಳಿ ಮತ್ತು ಕಾಂಗ್ರೆಸ್ಸಿನ ಸದಸ್ಯರು ಉತ್ತರ ಪ್ರದೇಶದ ಗೋರಖ್ ಪುರದ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಮಂದಿ ಪೊಲೀಸರನ್ನು ಸುಟ್ಟು ಹಾಕಿದರು. ಮಹಾತ್ಮಾ ಗಾಂಧಿಯವರು ಇದೇ ಕಾರಣಕ್ಕಾಗಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು.

1922: ಡೆ ವಿಟ್ ವ್ಯಾಲೇಸ್ ಅವರು ಜನರಿಗೆ ಮನರಂಜನೆ, ಮಾಹಿತಿ ಹಾಗೂ ಸ್ಫೂರ್ತಿ ನೀಡಲು `ರೀಡರ್ಸ್ ಡೈಜೆಸ್ಟ್' ಆರಂಭಿಸಿದರು.

1881: ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ಲಂಡನ್ನಿನಲ್ಲಿ ತನ್ನ 85ನೇ ವಯಸ್ಸಿನಲ್ಲಿ ಮೃತನಾದ. `ಸೇಜ್ ಆಫ್ ಚೆಲ್ಸಿಯಾ' ಎಂದೇ ಈತ ಖ್ಯಾತನಾಗಿದ್ದ.

1765: ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ. ತನ್ನ ಬೆಂಬಲಿಗ ವಂಚಕರನ್ನು ಸೇರಿಸಿಕೊಂಡು ಬ್ರಿಟಿಷರೊಂದಿಗೆ ಷಾಮೀಲಾದ ಈತ 1757ರ ಜೂನಿನಲ್ಲಿ ನಡೆದ ಪ್ಲಾಸಿ ಕದನದಲ್ಲಿ ನಿಷ್ಕ್ರಿಯ ನಿಲುವು ತಾಳಿದ. ಈ ಕದನದಲ್ಲಿ ಸೋತ ಸಿರಾಜುದ್ದೌಲ ಪದಚ್ಯುತನಾದ. ಬ್ರಿಟಿಷರು ಮೀರ್ ಜಾಫರನನ್ನೇ ಬಂಗಾಳದ ಆಡಳಿತಗಾರನನ್ನಾಗಿ ನೇಮಿಸಿದರು. ಸಾಯುವ ಕಾಲಕ್ಕೆ ಈತ ಅಫೀಮು (ಮಾದಕ ದ್ರವ್ಯ) ವ್ಯಸನಿಯೂ ಕುಷ್ಠರೋಗ ಪೀಡಿತನೂ ಆಗಿ ನರಳಿದ್ದ.

1762: ಅಹಮದ್ ಶಹಾ ಅಬ್ದಾಲಿ ಲೂಧಿಯಾನ ಸಮೀಪದ ಕುಪ್ನಲ್ಲಿ ನಡೆದ ಸಮರದಲ್ಲಿ ಸಿಖ್ಖರ ಮಾರಣಹೋಮ ನಡೆಸಿದ. ಸಿಖ್ಖರು ಆತನ ಸಾರ್ವಭೌಮತ್ವ ಅಂಗೀಕರಿಸಲು ನಿರಾಕರಿಸಿದ್ದಕ್ಕಾಗಿ ಸುಮಾರು 10,000ದಿಂದ 30,000ದಷ್ಟು ಸಿಖ್ಖರನ್ನು ಕೊಲೆಗೈಯಲಾಯಿತು. ಅದೇ ವರ್ಷ ಏಪ್ರಿಲಿನಲ್ಲಿ ಅಬ್ದಾಲಿ ಅಮೃತಸರದ ಮೇಲೆ ದಾಳಿ ನಡೆಸಿ ಹರ್ಮಂದಿರವನ್ನು ನೆಲಸಮಗೊಳಿಸಿದ.

No comments:

Post a Comment