ಇಂದಿನ ಇತಿಹಾಸ History Today ಫೆಬ್ರುವರಿ 16
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕೇಂದೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯನ್ನು ಖಂಡಿಸಿ, ಸೇನೆಗೆ ಒಕ್ಕೊರಲಿನ ಅಖಂಡ ಬೆಂಬಲ ವ್ಯಕ್ತ ಪಡಿಸುವ ನಿರ್ಣಯವನ್ನು ಎನ್‌ಡಿಎ ಸರ್ಕಾರವು ಈದಿನ ಕರೆದಿದ್ದ ಸರ್ವ ಪಕ್ಷ ಸಭೆಯು ಅಂಗೀಕರಿಸಿತು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವಲ್ಲಿ ಸಂಪೂರ್ಣ ಒಗ್ಗಟ್ಟು ಪ್ರದರ್ಶಿಸಿ ಒಂದೇ ಧ್ವನಿಯಲ್ಲಿ ಮಾತನಾಡಿದ ಎಲ್ಲ ರಾಜಕೀಯ ಪಕ್ಷಗಳು ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಅನುಸರಿಸಿ ಭಯೋತ್ಪಾದನೆ ವಿರುದ್ಧ ಹೋರಾಡುವ ಭಾರತದ ದೃಢ ನಿರ್ಧಾರವನ್ನು ಬೆಂಬಲಿಸಿದವು. ನಿರ್ಣಯವು ಪಾಕಿಸ್ತಾನವನ್ನು ಹೆಸರಿಸಲಿಲ್ಲ. ಆದರೆ ಭಾರತವು ನಿರಂತರ ಗಡಿಯಾಚೆಯಿಂದ ನಡೆಸಲಾಗುವ ಭಯೋತ್ಪಾದನೆಯ ಹಾವಳಿಯನ್ನು ನಿರಂತರವಾಗಿ ಎದುರಿಸುತ್ತಿದೆ. ಹಾಲಿ ಭಯೋತ್ಪಾದಕ ದಾಳಿಯೂ ಸೇರಿದಂತೆ ಗಡಿಯಾಚೆಯಿಂದ ನಡೆಯುವ ಈ ಭಯೋತ್ಪಾದಕ ಕೃತ್ಯಗಳಿಗೆ ನೆರೆಯ ರಾಷ್ಟ್ರವು ಸಕ್ರಿಯವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ನಿರ್ಣಯ ಹೇಳಿತು. ’ಭಾರತವು ಈ ಸವಾಲುಗಳನ್ನು ಎದುರಿಸುವಲ್ಲಿ ದೃಢತೆ ಮತ್ತು ಪುಟಿದೇಳುವ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಸವಾಲುಗಳ ವಿರುದ್ಧ ಹೋರಾಡುವ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಇಡೀ ರಾಷ್ಟ್ರವು ಒಂದೇ ಧ್ವನಿಯಲ್ಲಿ ಮಾತನಾಡುತ್ತಿದೆ. ನಾವು ಇಂದು ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಮತ್ತು ಭಾರತದ ಏಕತೆ ಮತ್ತು ಸಮಗ್ರತೆಯ ರಕ್ಷಣೆಯಲ್ಲಿ ಭದ್ರತಾ ಪಡೆಗಳ ಜೊತೆಗೆ ದೃಢವಾಗಿ ನಿಲ್ಲುತ್ತಿದ್ದೇವೆ’ ಎಂದು ನಿರ್ಣಯ ತಿಳಿಸಿತು. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಮಾವೇಶಗೊಳಿಸಿದ್ದ ಸಭೆಯಲ್ಲಿ ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್, ಆನಂದ ಶರ್ಮ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ ಮತ್ತು ಡೆರೆಕ್ ಒ’ಬ್ರಿಯನ್, ಶಿವಸೇನೆಯ ಸಂಜಯ ರೌತ್, ಟಿಆರ್‌ಎಸ್‌ನ ಜಿತೇಂದ್ರ ರೆಡ್ಡಿ, ಸಿಪಿಐನ ಡಿ ರಾಜಾ, ನ್ಯಾಷನಲ್ ಕಾನ್ಫರೆನ್ಸಿನ ಫರೂಕ್ ಅಬ್ದುಲ್ಲ, ಎಲ್‌ಜೆಪಿಯ ರಾಮವಿಲಾಸ್ ಪಾಸ್ವಾನ್ ಮತ್ತಿತರರು ಹಾಜರಿದ್ದರು. ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ದಾಳಿ ಮತ್ತು ಸರ್ಕಾರ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಲಾಯಿತು ಎಂದು ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದರು. ಅಕಾಲಿದಳದ ನರೇಶ ಗುಜ್ರಾಲ್, ಆರ್‌ಎಲ್‌ಎಸ್‌ಪಿಯ ಉಪೇಂದ್ರ ಕುಶವಾಹ ಮತ್ತು ಜಯಪ್ರಕಾಶ ನಾರಾಯಣ್ ಯಾದವ್ ಸಭೆಯಲ್ಲಿ ಪಾಲ್ಗೊಂಡ ಇತರರಲ್ಲಿ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಮಾದರಿಯ ಸಭೆ ಕರೆದದ್ದು ಇದೇ ಪ್ರಥಮ. ಈ ಹಿಂದೆ ೨೦೧೬ರ ಸೆಪ್ಟೆಂಬರಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಆಗ ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಡೆಸಲಾದ ಸರ್ಜಿಕಲ್ ದಾಳಿಯ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸರ್ಕಾರವು ವಿವರಿಸಿತ್ತು. ಈ ಬಾರಿ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವುದಕ್ಕೆ ಮುಂಚಿತವಾಗಿಯೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿತ್ತು. ಸಭೆಯ ಬಳಿಕ, ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ’ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಸರ್ಕಾರದ ಜೊತೆಗೆ ನಿಲ್ಲುವುದಾಗಿ ವಿರೋಧ ಪಕ್ಷಗಳು ಗೃಹ ಸಚಿವರಿಗೆ ತಿಳಿಸಿದವು’ ಎಂದು ಹೇಳಿದರು. ವಿಷಯಗಳನ್ನು ವ್ಯಕ್ತಿಗತವಾಗಿ ಚರ್ಚಿಸಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರುವಂತೆಯೂ ವಿರೋಧ ಪಕ್ಷಗಳು ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದವು ಎಂದು ಗುಲಾಂ ನಬಿ ಹೇಳಿದರು. ದಾಳಿ ಮತ್ತು ಅದರಿಂದ ಆಗಿರುವ ಜೀವಹಾನಿಗಾಗಿ ಎಲ್ಲ ಪಕ್ಷಗಳೂ ತಮ್ಮ ದುಃಖ ವ್ಯಕ್ತ ಪಡಿಸಿವೆ ಎಂದು ವಿರೋಧ ಪಕ್ಷಗಳ ನಾಯಕರು ಒಟ್ಟಾಗಿ ಗೃಹ ಸಚಿವರಿಗೆ ತಿಳಿಸಿದರು ಎಂದೂ ಆಜಾದ್ ನುಡಿದರು. ’ನಮ್ಮ ತಿಳಿವಳಿಕೆಯಂತೆ, ೧೯೪೭ರಿಂದ ಯುದ್ಧಗಳನ್ನು ಹೊರತು ಪಡಿಸಿ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿ ಹುತಾತ್ಮರಾಗಿರುವುದು ಇದೇ ಮೊದಲು. ಎಲ್ಲ ಪ್ರದೇಶಗಳ ಎಲ್ಲ ಪಕ್ಷಗಳು ಮತ್ತು ರಾಷ್ಟ್ರದ ಜನತೆ ಶೋಕಾಚರಣೆಯ ಜೊತೆಗೇ ಸಿಟ್ಟನ್ನೂ ವ್ಯಕ್ತ ಪಡಿಸುತ್ತಿದ್ದಾರೆ’ ಎಂದು ಆಜಾದ್ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು. ’ಇಂತಹ ಕಾಲದಲ್ಲಿ, ಭದ್ರತಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಪೊಲೀಸರ ಜೊತೆಗೆ ನಿಲ್ಲಬೇಕು. ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದರೂ ರಾಷ್ಟ್ರ ಹಿತದ ಸಲುವಾಗಿ, ಎಲ್ಲರ ಭದ್ರತೆಗಾಗಿ ಸರ್ಕಾರದ ಜೊತೆಗೆ ನಿಲ್ಲಬೇಕು ಎಂಬುದಾಗಿ ನಮ್ಮ ಕ್ಷವು ನಿರ್ಧರಿಸಿತು’ ಎಂದು ಅವರು ನುಡಿದರು. ಸಭೆಯು ಅಂಗೀಕರಿಸಿದ ನಿರ್ಣಯವು ಎಲ್ಲ ರೂಪದ ಭಯೋತ್ಪಾದನೆಯನ್ನು ಮತ್ತು ಗಡಿಯಾಚೆಯಿಂದ ಅದಕ್ಕೆ ನೀಡಲಾಗುತ್ತಿರುವ ಬೆಂಬಲವನ್ನು ಕೂಡಾ ಖಂಡಿಸಿತು. ಪುಲ್ವಾಮ ಭಯೋತ್ಪಾದಕ ದಾಳಿಯನ್ನು ’ಪೈಶಾಚಿಕ ದಾಳಿ’ ಎಂಬುದಾಗಿ ಬಣ್ಣಿಸಿದ ನಿರ್ಣಯವು ’ಎಲ್ಲ ರೂಪದ ಭಯೋತ್ಪಾದನೆಯನ್ನು ಮತ್ತು ಗಡಿಯಾಚೆಯಿಂದ ಅದಕ್ಕೆ ನೀಡಲಾಗುತ್ತಿರುವ ಬೆಂಬಲವನ್ನು ನಾವು ಖಂಡಿಸುತ್ತೇವೆ’ ಎಂದು ತಿಳಿಸಿತು. ರಾಜನಾಥ್ ಸಿಂಗ್ ಮತ್ತು ಆಜಾದ್ ಅವರು ಸಭೆಗೆ ಬಂದ ಮೊದಲಿಗರರಾಗಿದ್ದರು. ಬಳಿಕ ಕಾಂಗ್ರೆಸ್ ನಾಯಕರಾದ ಆನಂದ ಶರ್ಮ, ಜ್ಯೋತಿರಾದಿತ್ಯ ಸಿಂಧಿಯಾ, ಎಲ್ ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ, ಡೆರೆಕ್ ಒ’ಬ್ರಿಯನ್, ಎನ್ ಸಿಪಿಯ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸಿನ ಫರೂಕ್ ಅಬ್ದುಲ್ಲ, ಶಿವಸೇನೆಯ ಸಂಜಯ ರೌತ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೋಮರ್ ಆಗಮಿಸಿದರು. ಫೆಬ್ರುವರಿ ೧೪ರಂದು ಪುಲ್ವಾಮದಲ್ಲಿ ಜೈಶ್-ಇ-ಮೊಹಮ್ಮದ ಭಯೋತ್ಪಾದಕ ಸಂಘಟನೆ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ೪೦ ಮಂದಿ ಸಿಆರ್‌ಪಿಎಫ್ ಹುತಾತ್ಮರಾಗಿದ್ದರು.
2019: ನವದೆಹಲಿ: ಸರ್ಕಾರವು ಭಯೋತ್ಪಾದನೆಯನ್ನು ಎಳ್ಳಷ್ಟೂ ಸಹಿಸುವುದಿಲ್ಲ ಮತ್ತು ಭಯೋತ್ಪಾದಕ ಗುಂಪುಗಳ ಜೊತೆಗೆ ವ್ಯವಹರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಸರ್ವ ಪಕ್ಷ ಸಭೆಯಲ್ಲಿ ಪ್ರಕಟಿಸಿದರು. ಫೆಬ್ರುವರಿ ೧೪ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ರಾಷ್ಟ್ರವು ತೀವ್ರವಾಗಿ ಘಾಸಿಗೊಂಡಿದೆ. ಜನಾಕ್ರೋಶವೂ ವ್ಯಕ್ತವಾಗಿದೆ ಎಂದು ರಾಜನಾಥ್ ಸಿಂಗ್ ಅವರು ಸರ್ವ ಪಕ್ಷ ಸಭೆಗೆ ತಿಳಿಸಿದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿನಲ್ಲಿ ಸಭೆ ನಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಭದ್ತತಾ ಪಡೆಗಳ ನೈತಿಕತೆ ಅತ್ಯುಚ್ಛವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ದಮನಿಸಲು ನಾವು ಬದ್ಧರಾಗಿದ್ದೇವೆ. ಸರ್ಕಾರವು ಭಯೋತ್ಪಾದಕ ಗುಂಪುಗಳನ್ನು ಮತ್ತು ಅವುಗಳಿಗೆ ಆಶ್ರಯ ನೀಡುತ್ತಿರುವವರನ್ನು ನಿಗ್ರಹಿಸಲು ಭದ್ರತಾ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ತೋಮರ್ ನುಡಿದರು. ’ಸರ್ಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಅನುಸರಿಸುತ್ತಿದೆ. ಈ ಭಯೋತ್ಪಾದಕ ದಾಳಿಯು ಅವರ ಭ್ರಮನಿರಸನವನ್ನು ತೋರಿಸಿದೆ ಎಂದೂ ಗೃಹ ಸಚಿವರು ತಿಳಿಸಿದರು ’ ಎಂದು ತೋಮರ್ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಜನತೆ ಶಾಂತಿಯನ್ನು ಬಯಸುತ್ತಾರೆ ಮತ್ತು ಪ್ರೀತಿಸುತ್ತಾರೆ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ ಎಂದು ರಾಜನಾಥ್ ಸಿಂಗ್ ಸಭೆಗೆ ತಿಳಿಸಿದರು. ’ಆದರೆ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಗಡಿಯಾಚೆಯಿಂದ ಬರುವ ಭಯೋತ್ಪಾದಕ ಗುಂಪುಗಳಿಗೆ ನೆರವು ನೀಡುತ್ತಿದ್ದಾರೆ. ಅವರು ರಾಜ್ಯದ ಯುವಕರ ವೈರಿಗಳು. ಅವರಿಗೆ ರಾಜ್ಯದಲ್ಲಿ ಶಾಂತಿ, ಸೌಹಾರ್ದ ಬೇಕಾಗಿಲ್ಲ’ ಎಂದು ರಾಜನಾಥ್ ಸಿಂಗ್ ನುಡಿದರು. ’ರಾಷ್ಟ್ರವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಮತ್ತು ನಾವು ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತೇವೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ. ಭಯೋತ್ಪಾದನೆ ದಮನಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಗೃಹಸಚಿವರು ದೃಢ ಪಡಿಸಿದರು. ಸರ್ಕಾರವು ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲಿದೆ ಎಂದು ನುಡಿದ ರಾಜನಾಥ್ ಸಿಂಗ್ ಅವರ ಕುಟುಂಬಗಳ ಬಗ್ಗೆ ಕಾಳಜಿ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಕೂಡಾ ಮನವಿ ಮಾಡಿದರು. ಭಯೋತ್ಪಾದನೆಯನ್ನು ಒಗ್ಗಟ್ಟಿನಿಂದ ದಮನಿಸುವಲ್ಲಿ ನಾವು ಸಫಲರಾಗುತ್ತೇವೆ ಮತ್ತು ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸುತ್ತೇವೆ ಎಂದು ಗೃಹ ಸಚಿವರು ಸಭೆಗೆ ಭರವಸೆ ನೀಡಿದರು. ಸಭೆಯು ನಿರ್ಣಯವೊಂದನ್ನುಕೂಡಾ ಅಂಗೀಕರಿಸಿತು ಎಂದು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದರು.
2019: ಕರಾಚಿ: ಸಾಂಸ್ಕೃತಿಕ ಕಾರ್‍ಯಕ್ರಮ ಒಂದರಲ್ಲಿ ಕೆಲವು ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜವನ್ನು ಬೀಸುತ್ತಾ ಭಾರತೀಯ ಹಾಡಿಗೆ ಹೆಜ್ಜೆ ಹಾಕುತ್ತಾ ನೃತ್ಯ ಮಾಡಿದ್ದಕ್ಕಾಗಿ ಪಾಕಿಸ್ತಾನಿ ಅಧಿಕಾರಿಗಳು ಕಾರ್‍ಯಕ್ರಮ ಸಂಘಟಿಸಿದ್ದ ಶಾಲೆಯ ಮಾನ್ಯತೆ ಅಮಾನತುಗೊಳಿಸಿರುವ ಘಟನೆ ಘಟಿಸಿತು.
ವಿದ್ಯಾರ್ಥಿಗಳ ವರ್ತನೆಯು ರಾಷ್ಟ್ರದ ’ರಾಷ್ಟ್ರೀಯ ಘನತೆಗೆ’ ಕುಂದು ಉಂಟು ಮಾಡಿದೆ ಎಂದು ಅಧಿಕಾರಿಗಳು ಆಪಾದಿಸಿದರು.
ಶಾಲೆಯ ಮಾಲೀಕರಿಗೆ ನಿರ್ದೇಶಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ನೋಂದಣಿ ಮತ್ತು ತಪಾಸಣಾ ನಿರ್ದೇಶನಾಲಯದ (ಡಿಐಆರ್‌ಪಿಐಎಸ್) ಮುಂದೆ ಹಾಜರಾಗುವಂತೆ ಸೂಚಿಸಿ ಶೋಕಾಸ್ ನೋಟಿಸ್ ನೀಡಲಾಯಿತು.
ಹಿಂದಿನ ವಾರ ನಡೆದಿದ್ದ ಈ ಸಾಂಸ್ಕೃತಿಕ ಕಾರ್‍ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಿಂದ ತೀವ್ರ ಟೀಕೆಗಳು ಬಂದವು ಎಂದು ಮಾಧ್ಯಮಗಳು ವರದಿ ಮಾಡಿವೆ. ಬೆನ್ನಲ್ಲೇ ಅಧಿಕಾರಿಗಳು ಕಾರ್‍ಯಕ್ರಮ ಸಂಘಟಿಸಿದ್ದ ’ಮಾಮಾ ಬೇಬಿ ಕೇರ್ ಕ್ಯಾಂಬ್ರಿಜ್ ಸ್ಕೂಲ್’ ನ ನೋಂದಣಿಯನ್ನು ’ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ’ ಅಮಾತುಗೊಳಿಸಿದರು ಎಂದು ವರದಿ ಹೇಳಿತು.
ವಿದ್ಯಾರ್ಥಿಗಳು ಭಾರತೀಯ ಹಾಡಿಗೆ ಹೆಜ್ಜೆ ಹಾಕುತ್ತಾ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜ ಬೀಸುತ್ತಾ ನರ್ತಿಸುವ ಕಾರ್‍ಯಕಮ ನಡೆದ ಶಾಲೆಯ ಕಾರ್‍ಯಕ್ರಮ ಬಗ್ಗೆ ತನಿಖೆ ನಡೆಸಲು ನಿರ್ದೆಶನಾಲಯವು ತ್ರಿಸದಸ್ಯ ಸಮಿತಿಯನ್ನು ರಚಿಸಿತು.
ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಪಾಕಿಸ್ತಾನದ ರಾಷ್ಟ್ರೀಯ ಘನತೆಗೆ ವಿರುದ್ಧ ಮತ್ತು ಇದನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ ಎಂದು ನಿರ್ದೇಶನಾಲಯದ ರಿಜಿಸ್ಟ್ರಾರ್ ರಫಿಯಾ ಜಾವೇದ್ ಹೇಳಿದರು.
ಶಾಲೆಯು ಉದ್ದೇಶಪೂರ್ವಕವಾಗಿಯೇ ಈ ಕಾರ್‍ಯಕ್ರಮ ಸಂಘಟಿಸಿದ್ದು ಗೊತ್ತಾದ ಬಳಿಕ ಕ್ರಮ ಕೈಗೊಳ್ಳಲಾಯಿತು ಎಂದು ಜಾವೇದ್ ನುಡಿದರು. ಶಾಲೆಯ ಮಾಲೀಕರಿಗೆ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ವಿವರಿಸಲು ೩ ದಿನಗಳ ಕಾಲಾವಕಾಶ ಕೊಡಲಾಗಿದ್ದು, ಉತ್ತರಿಸದೇ ಇದ್ದಲ್ಲಿ ಶಾಲೆಯ ನೋಂದಣಿ ರದ್ದು ಪಡಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಏನಿದ್ದರೂ ಶಾಲಾ ಮಾಲೀಕ ನಿರ್ದೇಶನಾಲಯದ ಮುಂದೆ ಹಾಜರಾಗಲಿಲ್ಲ, ಅಥವಾ ತನ್ನ ನಿಲುವನ್ನು ತಿಳಿಸಲೂ ಇಲ್ಲ. ಹೀಗಾಗಿ ನೋಂದಣಿಯನ್ನು ಅಮಾನತುಪಡಿಸಲಾಯಿತು ಎಂದು ವರದಿಗಳು ಹೇಳಿದವು.
ಇದು ಸೂಕ್ಷ್ಮ ವಿಚಾರವಾಗಿದ್ದು, ಸಾರ್ವಜನಿಕರನನು ರೊಚ್ಚಿಗೇಳಿಸುವ ಸಾಧ್ಯತೆಗಳಿವೆ ಎಂದು ಜಾವೇದ್ ಹೇಳಿದರು. ’ಆದರೆ, ಶಾಲೆಯು ಹಿಂದಿನ ವಾರ ವಿದ್ಯಾರ್ಥಿಗಳಿಗೆ ವಿವಿಧ ರಾಷ್ಟ್ರಗಳ ಸಂಸ್ಕೃತಿಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್‍ಯಕ್ರಮ ಸಂಘಟಿಸಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೌದಿ ಅರೇಬಿಯಾ, ಅಮೆರಿಕ, ಈಜಿಪ್ಟ್, ಪಾಕಿಸ್ತಾನ, ಭಾರತ ಮತ್ತು ಇತರ ರಾಷ್ಟ್ರಗಳ ಸಂಸ್ಕೃತಿ ಪರಿಚಯಿಸುವ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ ವರದಿಗಾರರು ವಿಷಯವನ್ನು ತಿರುಚಿ ಶಾಲೆಗೆ ತೊಂದರೆಯಾಗುವಂತೆ ಮಾಡಲು ಕಾರ್‍ಯಕ್ರಮದ ನಿರ್ದಿಷ್ಟ ಭಾಗವೊಂದನ್ನು ಮಾತ್ರ ಪ್ರಚಾರ ಮಾಡಿದರು’ ಎಂದು ಶಾಲೆಯ ವೈಸ್ ಪ್ರಿನ್ಸಿಪಾಲ್ ಫಾತೀಮಾ ಹೇಳಿದರು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಯೋಧರು ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎರಡು ದಿನದ ಬಳಿಕ, ರಾಜ್ಯದ ರಾಜೌರಿ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನದ ಸ್ಫೋಟದಿಂದ ಮೇಜರ್ ದರ್ಜೆಯ ಸೇನಾ ಅಧಿಕಾರಿಯೊಬ್ಬರು ಹುತಾತ್ಮರಾಗಿ ಇನ್ನೊಬ್ಬ ಯೋಧ ಗಾಯಗೊಂಡಿರುವ ಘಟನೆ ಈದಿನ ಘಟಿಸಿತು. ರಾಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಿಂದ ಒಂದೂವರೆ ಕಿಮೀ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದರು. ರಾಜೌರಿ ಜಿಲ್ಲೆಯ ನೌಶೇರಾ ರಂಗದ ಲಾಮ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿತು. ಮಧ್ಯಾಹ್ನ ೩ ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿತು ಎಂದು ಲೆಫ್ಟಿನೆಂಟ್ ಕರ್ನಲ್ ಆನಂದ್ ಹೇಳಿದರು. ಅಧಿಕಾರಿ ಮತ್ತು ಯೋಧ ಪಹರೆ ಕಾರ್‍ಯದಲ್ಲಿ ನಿರತಾಗಿದ್ದಾಗ ಮಣ್ಣನ್ನು ಹೊಸದಾಗಿ ಅಗೆದಂತೆ ಕಾಣಿಸಿತು. ಏನಾಗಿದೆ ಎಂಬುದಾಗಿ ತಪಾಸಿಸುತ್ತಿದ್ದಾಗ ಸ್ಫೋಟ ಸಂಭವಿಸಿತು’ ಎಂದು ಮೂಲಗಳು ಹೇಳಿದವು. ಇತ್ತೀಚಿನ ದಿನಗಳಲ್ಲಿ ಗಡಿಯಾಚೆಯ ಶಕ್ತಿಗಳು ಸುಧಾರಿತ ಸ್ಫೋಟಕ ಸಾಧನವನ್ನು ಹುಗಿದು ಇಟ್ಟಿದ್ದಿರಬಹುದು ಎಂದು ಮೂಲಗಳು ಹೇಳಿದವು. ಗಡಿ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲಿನ ದಾಳಿಗೆ ಪಾಕಿಸ್ತಾನಿ ಮೂಲದ ಭಯೋತ್ಪಾದಕರು ಬಳಸುತ್ತಿರುವ ಸಾಮಾನ್ಯ ವಿಧಾನವಿದು ಎಂದು ಮೂಲಗಳು ತಿಳಿಸಿದವು. ಕಳೆದ ಡಿಸೆಂಬರಿನಲ್ಲಿ ಕಣಿವೆಗೆ ನುಸುಳಿರುವ ಆಪ್ಘನ್ ಸಮರ ಸಮರ ತಜ್ಞ ಅಬ್ದುಲ್ ರಶೀದ್ ಘಾಜಿ ಸ್ಫೋಟ ಸಂಚನ್ನು ರೂಪಿಸಿರಬಹುದು ಎಂದು ಮೂಲಗಳು ಹೇಳಿದವು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ರಾಷ್ಟ್ರದ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಭದ್ತತಾ ಪರಿಸ್ಥಿತಿಯ ಸಮಾಲೋಚನೆ ನಡೆಸಿದ ಕೆಲವೇ ಗಂಟೆಗಳ ಬಳಿಕ ಈದಿನದ ಸ್ಫೋಟ ಸಂಭವಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಈ ಸಭೆಯಲ್ಲಿ ಹಾಜರಿದ್ದರು. ಜನವರಿ ೧೧ ರಂದು ಇದೇ ಜಿಲ್ಲೆಯ ಇದೇ ಸೆಕ್ಟರಿನಲ್ಲಿ ಸಂಭವಿಸಿದ ಸುಧಾರಿತ ಸ್ಫೋಟಕ ಸಾಧನದ ಸ್ಫೋಟದಲ್ಲಿ ಒಬ್ಬ ಮೇಜರ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
2019: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ೪೦ ಮಂದಿ ಯೋಧರರನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯನ್ನು ಎಸಗಿದ ಸ್ಥಳೀಯ ನಿವಾಸಿ ಅದಿಲ್ ಅಹ್ಮದ್ ದಾರ್ ಭಯೋತ್ಪಾದಕನಾಗಿ ಬದಲಾದದ್ದು ಏಕೆ? ’ಯೋಧರ ಕುಟುಂಬಗಳು ಅನುಭವಿಸುತ್ತಿರುವಷ್ಟೇ ನೋವನ್ನು ನಾವೂ ಅನುಭವಿಸುತ್ತಿದ್ದೇವೆ’ ಎಂದು ಹೇಳಿರುವ ಅದಿಲ್ ಅಹ್ಮದನ ತಂದೆ ಮತ್ತು ತಾಯಿ ’ಆತನನ್ನು ಉಗ್ರನಾಗಿಸಲಾಯಿತು, ವಿಮುಖಗೊಳಿಸಲು ನಡೆಸಿದ ನಮ್ಮ ಯತ್ನಗಳು ಫಲಕೊಡಲಿಲ್ಲ’ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆಯೊಂದು ಆತನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು. ಈ ಘಟನೆಯೇ ಆತನನ್ನು ಬದಲಾಗುವಂತೆ ಮಾಡಿರಬಹುದು ಎಂಬ ಅನುಮಾನ ತನ್ನದು ಎಂದು ಅದಿಲ್ ತಂದೆ ಗುಲಾಂ ಹಸನ್ ದಾರ್ ಹೇಳಿದರು.
ಗುಲಾಂ ಹಸನ್ ದಾರ್ ಹೇಳುವಂತೆ ಒಮ್ಮೆ ಶಾಲೆಯಿಂದ ವಾಪಸಾಗುವಾಗ ಅದಿಲ್‌ನನ್ನು ತಡೆದಿದ್ದ ಪೊಲೀಸರು ಜೀಪಿಗೆ ಮೂಗು ಉಜ್ಜತ್ತಾ ಸುತ್ತುಹಾಕುವಂತೆ ಮಾಡಿದ್ದರಂತೆ. ತನ್ನನ್ನು ಹಾಗೆ ಮಾಡಿಸಿದ್ದು ಏಕೆ ಎಂದು ಆತ ಆಗಾಗ ಕೇಳುತ್ತಿದ್ದ ಎಂದು ಗುಲಾಂ ಹಸನ್ ಅವರನ್ನು ಉಲ್ಲೇಖಿಸಿದ ವರದಿಗಳು ತಿಳಿಸಿದವು.
ಅದಿಲ್ ಮತ್ತು ಆತನ ಜೊತೆಗಿದ್ದ ವಿದ್ಯಾರ್ಥಿಗಳನ್ನು ಕಲ್ಲೇಟು ಹೊಡೆದಿದ್ದಾರೆ ಎಂದು ಆಪಾದಿಸಿ ಥಳಿಸಲಾಗಿತ್ತು ಮತ್ತು ಕಿರುಕುಳ ಕೊಡಲಾಗಿತ್ತು. ಆ ಬಳಿಕ ಆತ ಉಗ್ರಗಾಮಿಯಾಗಬಯಸಿದ್ದ ಎಂದು ಗುಲಾಂ ಹಸನ್ ಹೇಳಿದರು.
ಗುಲಾಂ ಹಸನ್ ಮಾತಿಗೆ ದನಿಗೂಡಿಸಿದ ಅದಿಲ್ ತಾಯಿ ಫಹಮೀದಾ ’ಕೆಲವು ವರ್ಷಗಳ ಹಿಂದೆ ಆತನನ್ನು ಶಾಲೆಯಿಂದ ವಾಪಸ್ ಬರುವಾಗ ಪಡೆಗಳು ಥಳಿಸಿದ್ದವು. ಇದು ಆತ ಪಡೆಗಳ ವಿರುದ್ಧ ಸಿಟ್ಟಿಗೇಳುವಂತೆ ಮಾಡಿತ್ತು’ ಎಂದು ಹೇಳಿದರು. ಆದರೆ ತಮ್ಮ ಮಗ ಯೋಧರ ಮೇಲೆ ದಾಳಿ ನಡೆಸುವ ಹಂಚಿಕೆ ಹೂಡಿದ್ದ ಎಂಬುದು ತಮಗೆ ಗೊತ್ತೇ ಇರಲಿಲ್ಲ ಎಂದು ಆದಿಲ್ ತಂದೆ ಮತ್ತು ತಾಯಿ ಹೇಳಿದರು. ’ಉಗ್ರಗಾಮಿಯಾಗಬೇಕು ಎಂದು ಹೇಳುತ್ತಿದ್ದ ಆತನ ಮನಸ್ಸನ್ನು ಬದಲಾಯಿಸಲು ನಾನು ತೀವ್ರವಾಗಿ ಬಯಸಿದ್ದೆ. ನಾವು ಈ ನಿಟ್ಟಿನಲ್ಲಿ ಸಾಕಷ್ಟು ಯತ್ನಿಸಿದ್ದೆವು. ಆದರೆ ಅವು ಯಶಸ್ವಿಯಾಗಲಿಲ್ಲ’ ಎಂದು ಅದಿಲ್ ತಾಯಿ ಕಣ್ಣೀರುಗರೆಯುತ್ತಾ ಹೇಳಿದರು. ಅದಿಲ್ ಅಹ್ಮದ್ ಗಾದಿ ಟಕ್ರಾನೆವಾಲ’ ಮತ್ತು ’ವಖಸ್ ಕಮಾಂಡೋ ಆಫ್ ಗುಂಡಿಬಾಗ್’ ಎಂಬುದಾಗಿ ಪರಿಚಿತನಾದ ಅದಿಲ್, ಶಿಕ್ಷಣಕ್ಕೆ ತಿಲಾಂಜಲಿ ಕೊಟ್ಟು ಕಳೆದ ವರ್ಷ ಜೈಶ್-ಇ-ಮೊಹಮ್ಮದ್ ಸಂಘಟನೆ ಸೇರಿದ್ದ. ತನ್ನ ಗ್ರಾಮದಿಂದ ೧೦ ಕಿಮೀ ದೂರದ ಪಾಕಿಸ್ತಾನಿ ಮೂಲದ ಭಯೋತ್ಪಾದಕ ಗುಂಪಿನಲ್ಲಿ ಆತ ತರಬೇತಿ ಪಡೆದಿದ್ದ. ಮನೆ ಬಿಟ್ಟ ಬಳಿಕ ಕುಟುಂಬ ಸದಸ್ಯರಿಗೆ ಆತನ ಸಂಪರ್ಕ ಸಾಧ್ಯವಾಗಿರಲಿಲ್ಲ. ಸಿಆರ್ ಪಿಎಫ್ ಯೋಧರ ಮೇಲೆ ಪೈಶಾಚಿಕ ಆತ್ಮಹತ್ಯಾ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಜೈಶ್-ಇ- ಮೊಹಮ್ಮದ್ ಸಂಘಟನೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಅದಿಲ್ ’ದಕ್ಷಿಣ ಕಾಶ್ಮೀರದ ಜನರು ಭಾರತದ ವಿರುದ್ಧ ಹೋರಾಡುತ್ತಿದ್ದಾರೆ. ಈಗ ಉತ್ತರ, ಕೇಂದ್ರ ಕಾಶ್ಮೀರ ಮತ್ತು ಜಮ್ಮುವಿನ ಜನರೂ ಈ ಹೋರಾಟದಲ್ಲಿ ಜೊತೆಗೂಡಬೇಕು ಎಂದು ಹೇಳಿದ್ದ. ’ಕೆಲವು ಉಗ್ರಗಾಮೀ ಕಮಾಂಡರ್‌ಗಳನ್ನು ಕೊಲ್ಲುವ ಮೂಲಕ ನೀವು ನಮ್ಮನ್ನು ದುರ್ಬಲಗೊಳಿಸಲಾರಿರಿ’ ಎಂದೂ ಅದಿಲ್ ಈ ವಿಡಿಯೋದಲ್ಲಿ ಹೇಳಿದ್ದ. ಕಳೆದ ೧೩ ತಿಂಗಳಲ್ಲಿ ಜೈಶ್-ಇ-ಮೊಹಮ್ಮದ್ ನಡೆಸಿದ ಎರಡನೆ ಫಿಯಾದೀನ್ ದಾಳಿ ಇದಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಮೂವರು ಜೆಇಎಂ ಫಿಯಾದೀನ್ ಉಗ್ರಗಾಮಿಗಳು ಪುಲ್ವಾಮದಲ್ಲಿ ಪೊಲೀಸ್ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿ ಐವರು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು.
2019: ನವದೆಹಲಿ: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವನ್ನು ಸಾಬೀತುಪಡಿಸುವಂತಹ ದಾಖಲೆಗಳ ಕಡತವನ್ನು ಭಾರತ ಸಿದ್ಧ ಪಡಿಸುತ್ತಿದೆ. ಈ ಕಡತವನ್ನು ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ’ಎಫ್‌ಎಟಿಎಫ್’ ಅಂತಾರಾಷ್ಟ್ರೀಯ ಭಯೋತ್ಪಾದನೆ ನೆರವು ಕಣ್ಗಾವಲು ಸಮಿತಿ ನೀಡಲಾಗುವುದು ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದರು. ಈ ಕಡತ ಒದಗಿಸುವುದರ ಜೊತೆಗೆ ಪಾಕಿಸ್ತಾನವನ್ನು ಭಯೋತ್ಪಾದನೆ ಜೊತೆಗೆ ಹೊಂದಿರುವ ಸಂಪರ್ಕಕ್ಕಾಗಿ ಕಪ್ಟು ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೋರಲಾಗುವುದು ಎಂದು ಅವರು ನುಡಿದರು. ಭದ್ರತಾ ಸಂಸ್ಥೆಯು ತಯಾರಿಸುತ್ತಿರುವ ಈ ಕಡತದಲ್ಲಿ ಪಾಕಿಸ್ತಾನದಲ್ಲಿನ ಜೈಶ್ -ಇ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಪಾಕಿಸ್ತಾನ ಯಾವ ರೀತಿ ನೆರವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿರುವ ಸಾಕ್ಷ್ಯಾಧಾರಗಳನ್ನು ಒದಗಿಸಲಾಗುವುದು. ಜೆಇಎಂ ಜೊತೆಗಿನ ಪಾಕಿಸ್ತಾನಿ ಸಂಸ್ಥೆಗಳ ಸಂಪರ್ಕ, ಆ ಸಂಸ್ಥೆಗಳು ಜೆಇಎಂಗೆ ಹೇಗೆ ನೆರವು ನೀಡುತ್ತಿವೆ ಎಂಬ ವಿವರಗಳು, ಈ ಹಿಂದೆ ಜೆಇಎಂ ನಡೆಸಿದ ಭಯೋತ್ಪಾದಕ ದಾಳಿಗಳ ವಿವರಗಳನ್ನೂ ಕಡತದಲ್ಲಿ ನೀಡಲಾಗುವುದು. ಪ್ಯಾರಿಸ್ಸಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ (ಎಫ್‌ಎಟಿಎಫ್) ಮುಂದಿನ ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಭಾರತವು ಆಗ್ರಹಿಸುವುದು ಎಂದು ಅಧಿಕಾರಿಗಳು ಹೇಳಿದರು.
2018: ಬೆಂಗಳೂರು:
ಕರ್ನಾಟಕದ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈದಿನ
ಮುಖ್ಯಮಂತ್ರಿಯಾಗಿ 6ನೇ ಹಾಗೂ ಹಣಕಾಸು ಸಚಿವರಾಗಿ ದಾಖಲೆಯ 13ನೇ ಬಜೆಟ್ ಮಂಡಿಸಿದರು. ಒಟ್ಟು 2ಲಕ್ಷದ 9ಸಾವಿರದ 181 ಕೋಟಿ ರೂಪಾಯಿ
ಗಾತ್ರದ ಬಜೆಟ್ ಮಂಡಿಸಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ಹಿತ ಕಾಯುವ ಕಸರತ್ತು ನಡೆಸಲಾಯಿತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕೊನೆಯ ಬಜೆಟ್ ನಲ್ಲಿ ರೈತರಿಗೆ ಭರ್ಜರಿ ಕೊಡುಗೆ ಘೋಷಿಸಲಾಯಿತು. ಮಹಿಳೆಯರ ಸುರಕ್ಷತೆಗೆ ಆದ್ಯತೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ, ಮಾಸಾಶನ ಹೆಚ್ಚಳ, ಸಾಲದ ಮೇಲಿನ ಬಡ್ಡಿ ಮನ್ನಾ. ಬೆಂಗಳೂರು ಟ್ರಾಫಿಕ್ ಟೆನ್ಶನ್ ಕಡಿಮೆ ಮಾಡಲು ಯೋಜನೆ, 3ನೇ ಹಂತದ ಮೆಟ್ರೋ ತಯಾರಿಗೆ ಸಿದ್ಧತೆ. ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್. 5 ವರ್ಷಗಳಲ್ಲಿ 20 ಲಕ್ಷ ಮನೆ ನಿರ್ಮಾಣ. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಯಡಿ ವಿವಿಧ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲು 30 ಕೋಟಿ ಯೋಜನೆ ಸೇರಿದಂತೆ ಹಲವಾರು ಘೋಷಣೆ ಮಾಡಲಾಯಿತು.
ವಿಧಾನಸಭೆಯಲ್ಲಿ ಬರೋಬ್ಬರಿ 4ಗಂಟೆ 10ನಿಮಿಷಗಳ ಕಾಲ ಸುದೀರ್ಘವಾಗಿ ಬಜೆಟ್ ಮಂಡಿಸುವ ಮೂಲಕ ಮತ್ತೊಂದು ದಾಖಲೆಯನ್ನು
ಸಿದ್ದರಾಮಯ್ಯ ಬರೆದರು. 11.35ಕ್ಕೆ 163ಪುಟಗಳ ಬಜೆಟ್ ಮಂಡನೆ ಆರಂಭವಾಗಿದ್ದು, 3.45ಕ್ಕೆ ಮುಕ್ತಾಯಗೊಳಿಸಿದರು.
ಮಧ್ಯೆ ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆಯೇ ಸುದೀರ್ಘವಾಗಿ ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದು ಹೆಚ್ಚು ಗಮನ ಸೆಳೆಯಿತು.
2018: ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ದಶಕಗಳ ವಿವಾದಕ್ಕೆ ತನ್ನ ಅಂತಿಮ
ತೀರ್ಪಿನ ಮೂಲಕ ತೆರೆ ಎಳೆದಿರುವ ಸುಪ್ರೀಂಕೋರ್ಟ್
ಕರ್ನಾಟಕಕ್ಕೆ ೧೪.೫ಟಿಎಂಸಿ ಹೆಚ್ಚುವರಿ ನೀರು ಹಂಚಿಕೆ ಮಾಡುವ ಮೂಲಕ ಸ್ವಲ್ಪ ಮಟ್ಟಿನ ಪರಿಹಾರ ಒದಗಿಸಿತು.
ಬೆಂಗಳೂರಿನ ನೀರಿನ ದಾಹ ತಣಿಸಲೂ ಒಪ್ಪಿಗೆ ನೀಡಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿದೀಪಕ್
ಮಿಶ್ರ್, ನ್ಯಾಯಮೂರ್ತಿ ಅಮಿತವ್ ರಾಯ್ ಮತ್ತು ನ್ಯಾಯಮೂರ್ತಿ ಎ ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ
ತ್ರಿಸದಸ್ಯ ಪೀಠವು ತನ್ನ ತೀರ್ಪನ್ನು ಪ್ರಕಟಿಸಿತು. ೧೯೨ ಟಿಎಂಸಿ ನೀರು ಬಿಡುವ ಬದಲು ೧೭೭ ಟಿಎಂಸಿ
ನೀರನ್ನು ತಮಿಳುನಾಡಿಗೆ ಬಿಡಲು ಪೀಠ ಕರ್ನಾಟಕಕ್ಕೆ ಆದೇಶ ನೀಡಿತು. ತನ್ಮೂಲಕ ಪೀಠವು ತಮಿಳುನಾಡಿಗೆ ೧೪.೫ ಟಿಎಂಸಿ ನೀರನ್ನು ಕಡಿತಗೊಳಿಸಿತು.
ಈ ಹೆಚ್ಚುವರಿ ನೀರನ್ನು ಇದೀಗ ಕರ್ನಾಟಕ ತನ್ನ ಉಪಯೋಗಕ್ಕೆ ಬಳಸಿಕೊಳ್ಳಬಹುದು. ಇದರಲ್ಲಿ ೪.೫ ಟಿಎಂಸಿ
ನೀರನ್ನು ಬೆಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ಬಳಸಬಹುದು ಎಂದು ಪೀಠ ಹೇಳಿತು. ಕರ್ನಾಟಕದವಾದವನ್ನು ಭಾಗಶಃ ಒಪ್ಪಿದ ಸುಪ್ರಿಂಕೋರ್ಟ್ ೧೮೯೨ ಹಾಗೂ ೧೯೨೪ರ ಎರಡೂ ಒಪ್ಪಂದಗಳೂ ಸಿಂಧುವಾಗಿವೆ ಎಂದು
ಹೇಳಿತು. ಸಂಬಂಧಪಟ್ಟ ರಾಜ್ಯಗಳಿಗೆ ಕಾಲಕಾಲಕ್ಕೆ ನೀರು ಬಿಡುವ ಕೆಲಸವನ್ನು ನಿರ್ವಹಿಸಲು ಕಾವೇರಿ ಜಲಮಂಡಳಿಯನ್ನು
ರಚಿಸಬೇಕು. ಮಂಡಳಿ ರಚನೆ ಕೇಂದ್ರದ ಕೆಲಸ ಎಂದು ಸ್ಪಷ್ಟವಾಗಿ ಹೇಳಿದ ಸುಪ್ರೀಂಕೋರ್ಟ್ ನೀರಿನ ಹಂಚಿಕೆ
ಕಾವೇರಿ ಜಲ ಮಂಡಳಿಯ ಕೆಲಸ, ರಾಜ್ಯಗಳ ಕೆಲಸವಲ್ಲ ಎಂದು
ಸಾರಿತು. ಮುಂದಿನ ೧೫ ವರ್ಷಗಳಿಗೆ ಟ್ರಿಬ್ಯೂನಲ್ ತೀರ್ಪು ಅನ್ವಯ. ೧೫ ವರ್ಷಗಳ ಬಳಿಕ ಈ ತೀರ್ಪನ್ನು
ಸುಪ್ರೀಂಕೋರ್ಟ್ ಮರುಪರಿಶೀಲಿಸಬಹುದು ಎಂದು ಹೇಳಿದ ಪೀಠ, ಕಣಿವೆಯ ನೀರಿನ ಆಚೆಗೂ ಕುಡಿಯುವ ನೀರಿನ
ಉದ್ದೇಶಕ್ಕಾಗಿ ನೀರನ್ನು ಪಡೆಯಬಹುದು ಎಂದು ಆದೇಶಿಸಿತು. ಈ ಮೂಲಕ ಬೆಂಗಳೂರಿಗೆ ಕುಡಿಯುವ ನೀರು ಬಳಕೆಗಾಗಿ
೪.೭೫ ಟಿಎಂಸಿ ನೀರು ಬಳಸಿಕೊಳ್ಳಲು ಕೋರ್ಟ್ ಅವಕಾಶ ನೀಡಿತು. ಈ ಮಹತ್ವದ ಆದೇಶ ಮಹದಾಯಿ ವಿವಾದಕ್ಕೂ
ಅನ್ವಯವಾಗುವ ಸಾಧ್ಯತೆ ಇದ್ದು, ಕರ್ನಾಟಕದ ವಾದಕ್ಕೆ ಬಲ ನೀಡಲಿದೆ. ಕಾವೇರಿ ಕೊಳ್ಳದ ಅಚ್ಚುಕಟ್ಟು
ಪ್ರದೇಶದ ವಿಸ್ತರಣೆಗೆ ಅಸ್ತು ಎಂದಿರುವ ಸುಪ್ರೀಂಕೋರ್ಟ್, ಸಮಾನ ಹಂಚಿಕೆ ತತ್ವ ಪಾಲಿಸುವಂತೆ ಉಭಯ
ರಾಜ್ಯಗಳಿಗೂ ಸೂಚಿಸಿತು. ಕರ್ನಾಟಕ ಮತ್ತು ತಮಿಳುನಾಡು ಹೊರತಾಗಿ ಕಾವೇರಿ ನೀರು ಹರಿಯುವ ಉಳಿದೆರಡು
ರಾಜ್ಯಗಳಾದ ಕೇರಳ ಮತು ಪುದುಚೆರಿಗೆ ಕಾವೇರಿ ನ್ಯಾಯಾಧಿಕರಣ ಹಂಚಿಕೆ ಮಾಡಿರುವ ನೀರಿನ ಪ್ರಮಾಣದಲ್ಲಿ
ಯಾವುದೇ ವ್ಯತ್ಯಾಸವನ್ನೂ ಸುಪ್ರೀಂಕೋರ್ಟ್ ಮಾಡಲಿಲ್ಲ. ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ಒಂದು
ರಾಜ್ಯದ ಹಕ್ಕು ಅಲ್ಲ ಎಂದು ಪೀಠವು ಸ್ಪಷ್ಟ ಪಡಿಸಿತು. ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ ಮತ್ತು
ತಮಿಳುನಾಡು ಸುಪ್ರೀಂ ಕೋರ್ಟಿಗೆ ವಿಶೇಷ ಮೇಲ್ಮನವಿ (ಎಸ್ ಎಲ್ ಪಿ) ಸಲ್ಲಿಸಿದ್ದವು. ಈ ವಿಶೇಷ ಮೇಲ್ಮನವಿಯ ವಿಚಾರಣೆಯನ್ನು ೨೦೧೬ರ ಅಕ್ಟೋಬರ್‌ರಿಂದ
ಆರಂಭಿಸಿದ್ದ ಸುಪ್ರೀಂಕೋರ್ಟ್ ಪೀಠ ೨೦೧೭ರ ಸೆಪ್ಟೆಂಬರ್‌ನಲ್ಲಿ
ವಿಚಾರಣೆ ಪೂರ್ಣಗೊಳಿಸಿತ್ತು. ಕರ್ನಾಟಕ
ಮತ್ತು ತಮಿಳುನಾಡಿನ ರಾಜ್ಯಗಳ ರೈತರಿಗೆ ಕಾವೇರಿ ಜಲವಿವಾದ ಅತ್ಯಂತ ಭಾವನಾತ್ಮಕ ವಿಚಾರವಾಗಿತ್ತು.
೨೦೧೭ರಲ್ಲಿ ತಮಿಳುನಾಡಿನ ರೈತರು ೧೪೦ ವರ್ಷಗಳಲ್ಲಿ ಕಂಡರಿಯದ ಬರಗಾಲ ಉಂಟಾದ ಹಿನ್ನೆಲೆಯಲ್ಲಿ ಹೆಚ್ಚಿನ
ನೀರು ಬಿಡುಗಡೆ ಕೋರಿ ದೆಹಲಿಯವರೆಗೂ ತೆರಳಿ ಚಳವಳಿ ನಡೆಸಿದ್ದರು. ೨೦೧೬ರಲ್ಲಿ ತಮಿಳುನಾಡಿಗೆ ನೀರು
ಬಿಡುವಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದಾಗ ಕರ್ನಾಟಕದ ಹಲವೆಡೆ ಜನರು ಆಕ್ರೋಶಗೊಂಡು ಹಿಂಸಾತ್ಮಕ
ಪ್ರತಿಭಟನೆಗಳಿಗೆ ಇಳಿದಿದ್ದರು. ತೀವ್ರ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲವು ಸುಪ್ರೀಂಕೋರ್ಟ್
ಮಧ್ಯಂತರ ಆದೇಶದ ವಿರುದ್ಧ ನಿರ್ಣಯಗಳನ್ನೂ ಅಂಗೀಕರಿಸಿತ್ತು ವಿವಾದದ ಇತಿಹಾಸ: ವಾಸ್ತವವಾಗಿ ಬ್ರಿಟಿಷರ ಆಳ್ವಿಕೆಯಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ಕಾವೇರಿ
ನೀರಿನ ಹಂಚಿಕೆ ವಿವಾದ ೧೮೯೨ ರಲ್ಲಿ ಆರಂಭವಾಯಿತು. ವರ್ಷ ೧೯೧೦ ರಲ್ಲಿ, ಎರಡೂ ಪ್ರಭುತ್ವಗಳು ಕಾವೇರಿ
ನದಿಯ ಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಿಸಿದವು. ೧೯೨೪ ರಲ್ಲಿ, ಕೃಷ್ಣರಾಜಸಾಗರ (ಕನ್ನಂಬಾಡಿ)
ಅಣೆಕಟ್ಟು ಕಟ್ಟುವ ವೇಳೆಯಲ್ಲಿ ಉಭಯ ಪ್ರಾಂತ್ಯಗಳು ಪಡೆಯುವ ನೀರಿನ ಪಾಲಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ
ಸಹಿ ಮಾಡಲಾಗಿತ್ತು. ಹಿರಿಯ ವಕೀಲ ಎ.ಕೆ. ಗಂಗೂಲಿ ಅವರ ಪ್ರಕಾರ ’ಒಪ್ಪಂದದ ೧೧ ನೇ ಷರತ್ತು ಪ್ರಕಾರ
ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು,’ ಎಂದು
ತಿಳಿಸಲಾಗಿತ್ತು. ಈ ಪರಿಷ್ಕರಣೆ ಷರತ್ತು ಕೃಷ್ಣರಾಜಸಾಗರ (ಕೆಆರ್‌ಎಸ್) ಹೊರತು ಪಡಿಸಿ ಬೇರೆ ಯೋಜನೆಗಳಿಗೆ
ಮಾತ್ರ ಅನ್ವಯವಾಗುತ್ತಿತ್ತು. ಒಪ್ಪಂದದ ಪ್ರಮುಖ ಅಂಶ
(ಕೋರ್) ಕೆಆರ್‌ಎಸ್ ನಿರ್ಮಾಣ ಮತ್ತು ಅದರ ಕಾರ್ಯಾಚರಣೆ ಮತ್ತು ಆಡಳಿತ ಪರಿಸ್ಥಿತಿಗಳು ಯಾವುದೇ ಷರುತ್ತಗಳ
ವ್ಯಾಪ್ತಿಗೆ ಒಳಪಡುವುದಿಲ್ಲ. ಆದರಂತೆ ೧೯೨೪ ಒಪ್ಪಂದದ ಪ್ರಕಾರ ಮದ್ರಾಸ್ ಮತ್ತು ಮೈಸೂರು ಎರಡೂ ರಾಜ್ಯಗಳು
ಕಾವೇರಿ ನದಿಯ ಹೆಚ್ಚುವರಿ ನೀರಿನ್ನು ಬಳಸಲು ಹಕ್ಕುಗಳನ್ನು ಪಡೆದವು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ
ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರು ಅಣೆಕಟ್ಟು ನಿರ್ಮಿಸುವ
ಸ್ವಾತಂತ್ರ್ಯವನ್ನು ನೀಡಿತ್ತು. ಆದರೂ, ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು
ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ನಿರ್ಬಂಧಗಳನ್ನು ಒಪ್ಪಂದವು
ಹಾಕಿತ್ತು. ಕಾವೇರಿ ನದಿಯು ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ೭೬೫ ಕಿಮೀನಷ್ಟು ಉದ್ದದ ಹರಿವು
ಹೊಂದಿದೆ. ಇದು ಕರ್ನಾಟಕದಲ್ಲಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ. ಪ್ರಮುಖವಾಗಿ ಕರ್ನಾಟಕ
ಮತ್ತು ತಮಿಳುನಾಡು ಮೂಲಕ ಹರಿಯುತ್ತದೆ, ಅದರ ಜಲಾನಯನ ಬಹಳಷ್ಟು ಪ್ರದೇಶ ಕೇರಳ ಮತ್ತು ಪುದುಚೆರಿ ಕಾರೈಕಾಲ್
ಪ್ರದೇಶವನ್ನು ಆವರಿಸಿಕೊಂಡಿದೆ. ೧೮೯೨ ಮತ್ತು ೧೯೨೪ ರ ಒಪ್ಪಂದಗಳ ಪ್ರಕಾರ ಲಭ್ಯವಿರುವ ಅಂದಾಜು ೮೬೮
ಟಿಎಂಸಿ ಅಡಿ ನೀರಿನ ಪೈಕಿ ತಮಿಳುನಾಡು ಮತ್ತು ಪುದುಚೆರಿಗೆ ಶೇಕಡಾ ೭೫ರಷ್ಟು ಅಂದರೆ ೬೫೧ ಟಿ.ಎಮ್.ಸಿ
ಅಡಿ, ಕರ್ನಾಟಕಕ್ಕೆ ಶೇಕಡಾ ೨೩ ಅಂದರೆ ೨೦೦ ಟಿ.ಎಮ್.ಸಿ ಅಡಿ ಮತ್ತು ಉಳಿದ ಭಾಗ ಶೇಕಡಾ ೨ರಷ್ಟು ಅಂದರೆ
೧೭.೩೬ ಟಿಎಂಸಿ ಅಡಿ ನೀರನ್ನು ಕೇರಳಕ್ಕೆ ಒದಗಿಸಲು ವ್ಯವಸ್ಥೆಯಾಗಿತ್ತು. ಸ್ವಾತಂತ್ರ್ಯ
ಲಭಿಸಿ ಭಾಷಾವಾರು ರಾಜ್ಯಗಳ ರಚನೆಯಾದ ಬಳಿಕ ಸಹಜವಾಗಿ ಎಲ್ಲ ರಾಜ್ಯಗಳಲ್ಲೂ ಕೃಷಿಭೂಮಿ, ನಗರ ಪ್ರದೇಶಗಳ
ಅಭಿವೃದ್ಧಿಯಾದಾಗ ನೀರಿನ ತಕರಾರು ಶುರುವಾಗಿ ಅದರ ಇತ್ಯರ್ಥಕ್ಕೆ ೧೯೯೦ರ ಜೂನ್ ೨ರಂದು ಕಾವೇರಿ ನ್ಯಾಯಾಧಿಕರಣದ
(ಕಾವೇರಿ ಜಲವಿವಾದ ನ್ಯಾಯಮಂಡಳಿ) ರಚನೆಯಾಗಿತ್ತು. ಸುಮಾರು ೧೬ ವರ್ಷಗಳ ಕಾಲ ಕಲಾಪ ನಡೆಸಿ ೨೦೦೭ರ
ಫೆಬ್ರವರಿ ೫ರಂದು ತನ್ನ ಅಂತಿಮ ತೀರ್ಪು ನೀಡಿದ ನ್ಯಾಯಾಧಿಕರಣ ೧೮೯೨ ಮತ್ತು ೧೯೨೪ರ ತೀರ್ಪನ್ನು ಮಾನ್ಯ
ಮಾಡಿತು. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರನ್ನು ೭೪೦ ಟಿ.ಎಂ.ಸಿ. ಎಂದು ಅಂದಾಜು ಮಾಡಿದ ಅದು
ತಮಿಳುನಾಡಿಗೆ ೪೧೯ ಟಿ.ಎಂ.ಸಿ.ಗಳು, ಕರ್ನಾಟಕಕ್ಕೆ ೨೭೦ ಟಿ.ಎಂ.ಸಿ.ಗಳು, ಕೇರಳಕ್ಕೆ ೩೦ ಮತ್ತು ಪುದುಚೆರಿಗೆ
ಏಳು ಟಿ.ಎಂ.ಸಿ.ಗಳನ್ನು ಹಂಚಿಕೆ ಮಾಡಿತು. ಪರಿಸರ ಸಂರಕ್ಷಣೆಗೆಂದು ಕಾವೇರಿ ಕೊಳ್ಳದಲ್ಲಿ ೧೦ ಟಿ.ಎಂ.ಸಿ.
ನೀರನ್ನು ಉಳಿಸಬೇಕೆಂದು ಸೂಚಿಸಿತ್ತು. ಈ ತೀರ್ಪಿನ
ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಮೇಲ್ಮನವಿಗಳ
ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ೨೦೧೭ರ ಸೆಪ್ಟೆಂಬರ್ ೨೦ರಂದು ಸುಪ್ರೀಂಕೋರ್ಟ್ ಪೀಠವು ತನ್ನ
ತೀರ್ಪನ್ನು ಕಾಯ್ದಿರಿಸಿತ್ತು. ಈ ಮಧ್ಯೆ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿಪಿಎಸಿ) ಸುಪ್ರೀಂಕೋರ್ಟಿಗೆ
ಅರ್ಜಿ ಸಲ್ಲಿಸಿ ಬೆಂಗಳೂರು. ಮೈಸೂರು, ಮಂಡ್ಯ ಮತ್ತಿತರ ನಗರಗಳು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ
ಜಿಲ್ಲೆಗಳಿಗೆ ವರ್ಷಕ್ಕೆ ಅಂದಾಜು ೨೬ ಟಿಎಂಸಿಯಷ್ಟು ಕುಡಿಯುವ ನೀರು ಬೇಕಾಗುತ್ತದೆ ಎಂದು ಸುಪ್ರೀಂಕೋರ್ಟಿನ
ಗಮನ ಸೆಳೆದು ಇಲ್ಲಿನ ಜನರ ಕುಡಿಯುವ ನೀರಿನ ಹಕ್ಕನ್ನು ಸುಪ್ರೀಂಕೋರ್ಟ್ ರಕ್ಷಿಸಬೇಕು ಎಂದು ನ್ಯಾಯಾಲಯಕ್ಕೆ
ಮನವಿ ಮಾಡಿತ್ತು. ತೀರ್ಪಿನ ಮುಖ್ಯಾಂಶಗಳು: *
ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ಒಂದು ರಾಜ್ಯದ ಹಕ್ಕು ಅಲ್ಲ * ಕರ್ನಾಟಕಕ್ಕೆ ೧೪.೭೫ ಟಿಎಂಸಿ
ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ. * ಬೆಂಗಳೂರಿಗೆ
ಹೆಚ್ಚುವರಿಯಾಗಿ ೪.೭೫ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು. *
ತಮಿಳುನಾಡಿಗೆ ೧೯೨ ಟಿಎಂಸಿ ಬದಲಾಗಿ ೧೭೭ ಟಿಎಂಸಿ ನೀರನ್ನು ಕರ್ನಾಟಕ ಬಿಡಬೇಕು. *
ತಮಿಳುನಾಡಿಗೆ ೧೪.೫ ಟಿಎಂಸಿ ನೀರು ಕಡಿತ. * ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು
ಅವಕಾಶ. * ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ. *
ಮುಂದಿನ ೧೫ ವರ್ಷಗಳವರೆಗೆ ನ್ಯಾಯಾಧಿಕರಣ ತೀರ್ಪು ಅನ್ವಯ. * ೧೮೯೨, ೧೯೨೪ರ ಎರಡೂ ಒಪ್ಪಂದಗಳು ಸಿಂಧು.
* ಕೇರಳ, ಪುದುಚೆರಿಗೆ ನೀರು ಹಂಚಿಕೆಯಲ್ಲಿ ವ್ಯತ್ಯಾಸ ಇಲ್ಲ.*
ಕೇರಳಕ್ಕೆ ೩೦ ಟಿಎಂಸಿ, ಪುದುಚೇರಿಗೆ ೭ ಟಿಎಂಸಿ ನೀರು ಹಂಚಿಕೆ. * ನದಿ ನೀರು ಹಂಚುವಾಗ ತಮಿಳುನಾಡಿನ
೨೦ ಟಿಎಂಸಿ ಅಂತರ್ಜಲ ನೀರನ್ನು ಪರಿಗಣಿಸಬೇಕು. * ಎರಡು ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಲಿಸಬೇಕು
* ೫೦ ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ, ನ್ಯಾಯಾಧೀಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ.2018: ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ದಶಕಗಳ ವಿವಾದಕ್ಕೆ ತನ್ನ ಅಂತಿಮ
2018: ನವದೆಹಲಿ: ಚುನಾವಣೆಗಳಲ್ಲಿ ಸ್ಪರ್ಧಿಸುವ
ಅಭ್ಯರ್ಥಿಗಳು ಕುಟುಂಬ ಸದಸ್ಯರು ಮತ್ತು ಆಶ್ರಿತರ ಆದಾಯ ಸೇರಿದಂತೆ ತಮ್ಮ ಸಂಪೂರ್ಣ ಆದಾಯದ ಮೂಲಗಳನ್ನು
ಬಹಿರಂಗ ಪಡಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಈವರೆಗೆ
ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ತಮ್ಮ ಆಸ್ತಿಪಾಸ್ತಿ ಕುರಿತು ಪ್ರಮಾಣಪತ್ರಗಳನ್ನು ಸಲ್ಲಿಸುತಿದ್ದರು,
ಆದರೆ ಆಸ್ತಿ-ಆದಾಯದ ಮೂಲಗಳ ವಿವರ ನೀಡುತ್ತಿರಲಿಲ್ಲ. ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ನೇತೃತ್ವದ
ಪೀಠವು ಸರ್ಕಾರೇತರ ಸಂಘಟನೆ ಲೋಕಪ್ರಹರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ
ಈದಿನ ತೀರ್ಪು ನೀಡಿತು. ಎರಡು ನಿರಂತರ ಚುನಾವಣೆಗಳ ನಡುವಣ ಐದು ವರ್ಷಗಳಲ್ಲಿ ರಾಜಕಾರಣಿಗಳ ಆಸ್ತಿಯಲ್ಲಿ
ಗಣನೀಯ ಹೆಚ್ಚಳವಾಗುತ್ತಿರುವ ಬಗ್ಗೆ ನ್ಯಾಯಾಲಯದ ಗಮನವನ್ನು ಲೋಕಪ್ರಹರಿ ತನ್ನ ಅರ್ಜಿಯಲ್ಲಿ ಸೆಳೆದಿತ್ತು.
ತಮ್ಮ ಘೋಷಿತ ಆದಾಯಮೂಲಗಳಿಗೆ ವ್ಯತಿರಿಕ್ತವಾಗಿ ಸಂಪತ್ತು ಹೊಂದಿರುವುದಕ್ಕಾಗಿ ವಿಚಾರಣೆ ಎದುರಿಸುತ್ತಿರುವ
ಶಾಸಕರು ಮತ್ತು ಸಂಸತ್ ಸದಸ್ಯರು ಯಾವಾಗಲೂ ಮತ್ತೆ ಗೆದ್ದು ಅಧಿಕಾರಕ್ಕೆ ಬರುವುದನ್ನು ನ್ಯಾಯಮೂರ್ತಿ
ಚೆಲಮೇಶ್ವರ್ ಅವರು ಇದಕ್ಕೆ ಮುನ್ನ ಗಮನಿಸಿದ್ದರು. ‘ಶಾಸನಸಭೆಯ ಸದಸ್ಯ ಅಥವಾ ಸಂಸತ್ ಸದಸ್ಯ ೨೦೧೪ರಲ್ಲಿ
ಘೋಷಿಸಿದಾಗ ಇದ್ದ ಆಸ್ತಿ ೨೦೧೯ರಲ್ಲಿ ೧೦ ಎಕ್ಸ್ ಪ್ರಮಾಣದಲ್ಲಿ ಏರಿದರೆ, ಸಾರ್ವಜನಿಕ ಹುದ್ದೆಯನ್ನು
ಹೊಂದಿರುವ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ನೀವೇಕೆ ತನಿಖೆ ನಡೆಸಬಾರದು? ಐದು ವರ್ಷಗಳ ಅವಧಿಯಲ್ಲಿ
ತನ್ನ ಆದಾಯ ಶೇಕಡಾ ೧೦೦೦ದಷ್ಟು ಏರಿದ ಕ್ಷಣವೇ ತನಿಖೆ ನಡೆಸುವಂತಹ ಆಡಳಿತ ವ್ಯವಸ್ಥೆಯನ್ನು ರೂಪಿಸಿ’ ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಸರ್ಕಾರಕ್ಕೆ
ಸೂಚಿಸಿದರು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಂಸತ್ ಸದಸ್ಯರು ಮತ್ತು ಶಾಸನಸಭಾ ಸದಸ್ಯರ ವಿಚಾರಣೆಗಾಗಿ
ವಿಶೇಷ ಫಾಸ್ಟ್ -ಟ್ರ್ಯಾಕ್ ಕ್ರಿಮಿನಲ್ ನ್ಯಾಯಾಲಯಗಳನ್ನು ಸ್ಥಾಪಿಸುವಂತೆಯೂ ಪೀಠ ಸರ್ಕಾರಕ್ಕೆ ಸಲಹೆ
ಮಾಡಿತು. ನ್ಯಾಯಮೂರ್ತಿ
ರಂಜನ್ ಗೊಗೋಯಿ ನೇತೃತ್ವದ ಪೀಠವು ಈಗಾಗಲೇ ಪ್ರತ್ಯೇಕ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್
ಕೃತ್ಯಗಳಲ್ಲಿ ಶಾಮೀಲಾದ ರಾಜಕಾರಣಿಗಳ ವಿಚಾರಣೆಯನ್ನು ಕಾಲಮಿತಿಯೊಳಗೆ ನಡೆಸುವ ಸಲುವಾಗಿ ವಿಶೇಷ ನ್ಯಾಯಾಲಯಗಳನ್ನು
ಸ್ಥಾಪಿಸುವಂತೆ ಈ ಮುನ್ನವೇ ಸರ್ಕಾರಕ್ಕೆ ನಿರ್ದೇಶಿಸಿತ್ತು. ಕಳೆದ ೨೫ರಿಂದ ೩೦ ವರ್ಷಗಳಲ್ಲಿ, ಇಂತಹ
ಶಾಸಕರು, ಸಂಸದರ ವಿರುದ್ಧ ತನಿಖಾ ಸಂಸ್ಥೆಗಳೂ ಯಾವುದೇ ಕ್ರಮ ಕೈಗೊಂಡಿರುವುದನ್ನು ನಾವು ಕಂಡಿಲ್ಲ.
ಅವರು ಮತ್ತು ತಮ್ಮ ಹಳೆ ಹುದ್ದೆಗಳಿಗೇ ಮರಳಿ ಬರುತ್ತಾರೆ. ಹೆಚ್ಚಿನದನ್ನೇನಾದರೂ ಮಾಡಲು ಇದು ಸಮಯವಲ್ಲವೇ?
ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಪ್ರಶ್ನಿಸಿದರು. ರಾಜಕಾರಣವನ್ನು ಅಪರಾಧೀಕರಿಸುವ ಬಗ್ಗೆ ೧೯೯೩ರಲ್ಲಿ
ಎನ್. ಎನ್. ವೋಹ್ರಾ ಸಮಿತಿ ಸಲ್ಲಿಸಿದ ವರದಿಯ ಬಗ್ಗೆ ನ್ಯಾಯಮೂರ್ತಿ ಚೆಲಮೇಶ್ವರ್ ಸರ್ಕಾರದ ಗಮನ ಸೆಳೆದರು. ೨೬ ಲೋಕಸಭಾ ಸದಸ್ಯರು ಮತ್ತು ೨೧೫
ಶಾಸನಸಭಾ ಸದಸ್ಯರು ಮತ್ತು ಇಬ್ಬರು ರಾಜ್ಯಸಭಾ ಸದಸ್ಯರ ಆಸ್ತಿಪಾಸ್ತಿಗಳ ವಿವರಗಳನ್ನು ಕೇಂದ್ರವು ಮೊಹರಾದ
ಲಕೋಟೆಯಲ್ಲಿಟ್ಟು ವಿಚಾರಣೆ ಕಾಲದಲ್ಲಿ ನ್ಯಾಯಾಲಯಕ್ಕೆ ಒದಗಿಸಿತ್ತು. ಆಸ್ತಿ ಮತ್ತು ಘೋಷಿತ ಆದಾಯ
ಆದಾಯ ಮೂಲಗಳಲ್ಲಿ ಸಾಮ್ಯತೆ ಕಂಡು ಬರದ ಕಾರಣಕ್ಕಾಗಿ ೯೮ ಶಾಸಕರು ಮತ್ತು ೭ ಲೋಕಸಭಾ ಸದಸ್ಯರ ವಿರುದ್ಧ
ತನಿಖೆ ನಡೆಸಲಾಗುತ್ತಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತನ್ನ ಪ್ರಮಾಣಪತ್ರದಲ್ಲಿ
ನ್ಯಾಯಾಲಯಕ್ಕೆ ತಿಳಿಸಿತ್ತು. ೪೮ ಶಾಸಕರು ಮತ್ತು ೯ ರಾಜ್ಯಸಭಾ ಸದಸ್ಯರ ಆಸ್ತಿಗಳ ತನಿಖೆ ಇನ್ನೂ ಬಾಕಿ
ಉಳಿದಿದೆ. ಏನಿದ್ದರೂ ೧೧೭ ಶಾಸಕರು, ೧೯ ಲೋಕಸಭಾ ಸದಸ್ಯರು ಮತ್ತು ಇಬ್ಬರು ರಾಜ್ಯಸಭಾ ಸದಸ್ಯರ ಘೋಷಿತ
ಆದಾಯದ ಮೂಲಗಳು ಮತ್ತು ಆಸ್ತಿಪಾಸ್ತಿಯ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಸಿಬಿಟಿಡಿಯು
೨೬ ಲೋಕಸಭಾ ಸದಸ್ಯರು, ೧೧ ರಾಜ್ಯಸಭಾ ಸದಸ್ಯರು ಮತ್ತು ೨೫೭ ಶಾಸಕರ ತನಿಖೆಯನ್ನು ನ್ಯಾಯಾಲಯವು ಲೋಕಪ್ರಹರಿಗೆ
ಒಪ್ಪಿಸಿತ್ತು. ಲೋಕಪ್ರಹರಿಯು ತನ್ನ ಪಟ್ಟಿಯಲ್ಲಿದ್ದ ರಾಜಕಾರಣಿಗಳ ಆಸ್ತಿಪಾಸ್ತಿ ಕಳೆದ ಐದು ವರ್ಷಗಳಲ್ಲಿ
ಆದಾಯ ಮೂಲವನ್ನು ಮೀರಿ ಬೆಳೆದಿದೆ ಎಂದು ಪ್ರತಿಪಾದಿಸಿತ್ತು.
2018: ನವದೆಹಲಿ : ವಿದೇಶ ವ್ಯವಹಾರಗಳ
ಸಚಿವಾಲಯದಲ್ಲಿನ ಪಾಸ್ ಪೋರ್ಟ್ ಪ್ರಾಧಿಕಾರವು ಜಾರಿ ನಿರ್ದೇಶನಾಲಯದ ಸೂಚನೆ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಹುಕೋಟಿ ಹಗರಣದಲ್ಲಿ
ಭಾಗಿಯಾದ ಕೋಟ್ಯಧಿಪತಿ ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ ಮತ್ತು ಪಾಲುದಾರ ಮೆಹುಲ್ ಚೋಕ್ಸಿ
ಅವರ ಪಾಸ್ ಪೋರ್ಟನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ, ನಾಲ್ಕು ವಾರಗಳ ಅವಧಿಗೆ ರದ್ದು ಪಡಿಸಿತು.
ಇದೇ ವೇಳೆ ಇನ್ನೂ ೫೦ ಔದ್ಯಮಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುವ ಸೂಚನೆಯನ್ನು ಅದು ನೀಡಿತು. ಭಾರತೀಯ
ಪಾಸ್ ಪೋರ್ಟ್ ಹೊಂದಿರುವ ನೀರವ್ ಮೋದಿ ಈ ವರ್ಷ ಜನವರಿ ೧ರಂದೇ ವಿದೇಶಕ್ಕೆ ಪಲಾಯನ ಮಾಡಿದ್ದು, ಅವರ ಸಹೋದರ ನಿಶಾಲ್ (ಬೆಲ್ಜಿಯನ್ ಪ್ರಜೆ) ಕೂಡ ಅಂದೇ ದೇಶದಿಂದ
ನಿರ್ಗಮಿಸಿದ್ದರು. ನೀರವ್ ಮೋದಿ ಅವರ ಪತ್ನಿ ಅಮಿ (ಅಮೆರಿಕನ್ ಪ್ರಜೆ) ಜನವರಿ ೬ರಂದು ವಿದೇಶಕ್ಕೆ
ತೆರಳಿದ್ದರು. ಮತ್ತು ತಾಯಿಯ ಸಹೋದರ ಹಾಗೂ ಉದ್ಯಮ ಸಹವರ್ತಿ ಮೆಹುಲ್ ಚೋಕ್ಸಿ ಜನವರಿ ೪ರಂದು ವಿದೇಶಕ್ಕೆ
ಪಲಾಯನ ಮಾಡಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕಿನ
೧೧,೫೦೦ ಕೋಟಿ ರೂಪಾಯಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ
ತಮ್ಮೆದುರು ವಾರದ ಒಳಗಾಗಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸಮನ್ಸ್ ಕೂಡಾ ಜಾರಿಗೊಳಿಸಿ ಸಾಕ್ಷ್ಯ
ನುಡಿಯಬೇಕೆಂದು ಆದೇಶ ನೀಡಿತು. ಇದಕ್ಕೆ ಸಂಬಂಧಿಸಿದ ನೋಟಿಸ್ ಗಳನ್ನು ಅವರ ಸಂಸ್ಥೆಗಳಿಗೆ ತಲುಪಿಸಲಾಯಿತು.
ನೀರವ್ ಮೋದಿ ವಿರುದ್ಧ ಸಿಬಿಐ ಎರಡು ಪ್ರಕರಣಗಳನ್ನು ದಾಖಲಿಸಿದ್ದರೆ, ಜಾರಿ ನಿರ್ದೇಶನಾಲಯವು ವಿವಿಧ
ಕಡೆಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಗಳ ವೇಳೆಯಲ್ಲಿ ಅಂದಾಜು ೫,೧೦೦ ಕೋಟಿ ರೂಪಾಯಿ ಮೌಲ್ಯದ ಚಿನ್ನ
ಹಾಗೂ ವಜ್ರಗಳನ್ನು ವಶಪಡಿಸಿಕೊಂಡಿತು. ಜೊತೆಗೆ ತಾನು ೫೦೦೦ ಕೋಟಿ ರೂಪಾಯಿಗಳನ್ನು ಮರುಪಾವತಿಸಲು ಸಿದ್ಧ
ಎಂಬುದಾಗಿ ನೀರವ್ ಮೋದಿ ಮುಂದಿಟ್ಟಿರುವ ಕೊಡುಗೆಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿರಸ್ಕರಿಸಿತು. ಈ
ಬೆಳವಣಿಗೆಗಳಿಂದಾಗಿ ನೀರವ್ ಮೋದಿ ಸದ್ಯೊಭವಿಷ್ಯದಲ್ಲಿ ಬಚಾವಾಗುವ ಎಲ್ಲ ಲಕ್ಷಣಗಳೂ ಕ್ಷೀಣಿಸಿದವು.
ಮೆಹುಲ್ ಚೋಕ್ಸಿಗೆ ಸೇರಿದ ಗೀತಾಂಜಲಿ ಜೆಮ್ಸ್, ಗಿಲಿ ಇಂಡಿಯಾ ಮತ್ತು ನಕ್ಷತ್ರ ಬ್ರ್ಯಾಂಡ್ ಲಿಮಿಟೆಡ್
ಕಂಪೆನಿಗಳನ್ನು ಸಿಬಿಐ ತನ್ನ ಎಫ್ ಐ ಆರ್ ನಲ್ಲಿ ಹೆಸರಿಸಿತು. ಇದೇ ವೇಳೆಗೆ ಮಾರುಕಟ್ಟೆಗಳ ನಿಯಂತ್ರಕ
ಸೆಬಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಗೀತಾಂಜಲಿ ಜೆಮ್ಸ್ ವ್ಯಾಪಾರ ಚಟುವಟಿಕೆಗಳ ಸಂಬಂಧವಾಗಿ
ತನಿಖೆ ಶುರು ಮಾಡಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಮಾಜಿ ಡೆಪ್ಯುಟಿ ಮ್ಯಾನೇಜರ್ ಗೋಕುಲ್
ನಾಥ ಶೆಟ್ಟಿ ಅವರ ಮಲಾಡ್ ಮನೆ ಮೇಲೂ ಸಿಬಿಐ ಲಗ್ಗೆ ಇಟ್ಟು ಶೋಧ ನಡೆಸಿತು. ಗೋಕುಲ್ ನಾಥ ಶೆಟ್ಟಿ ಕೂಡಾ ಕೆಲ ಸಮಯದಿಂದ ಕಣ್ಮರೆಯಾದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಗೀತಾಂಜಲಿ ಜೆಮ್ಸ್ ಗೆ ಸಂಬಂಧಿಸಿದ ೩೬ ಸಂಸ್ಥೆಗಳ
ವಿರುದ್ಧ ತಾನು ತನಿಖೆ ಆರಂಭಿಸಿಸುವುದಾಗಿ ವಿತ್ತ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಗೀತಾಂಜಲಿ
ಸಮೂಹದ ಕಂಪೆನಿಗಳ ವಿರುದ್ಧ ದೇಶಾದ್ಯಂತ ಆರು ನಗರಗಳ ೨೦ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆಗಳನ್ನೂ
ನಡೆಸಿತು. ಮಹಾರಾಷ್ಟ್ರ (ಮುಂಬೈ ಮತ್ತು ಪುಣೆ), ಗುಜರಾತ್
(ಸೂರತ್), ರಾಜಸ್ಥಾನ (ಜೈಪುರ), ತೆಲಂಗಾಣ (ಹೈದರಾಬಾದ್) ಮತ್ತು ತಮಿಳುನಾಡು (ಕೊಯಮತ್ತೂರು) ರಾಜ್ಯಗಳ
ವಿವಿಧೆಡೆಗಳಲ್ಲು ಶೋಧ ಮುಂದುವರೆಸಲಾಯಿತು. ಇನ್ನೊಂದೆಡೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇನ್ನೂ
೮ ಮಂದಿ ನೌಕರರನ್ನು ಅಮಾನತುಗೊಳಿಸಿದ್ದು, ಶಿಸ್ತುಕ್ರಮಕ್ಕೆ ಒಳಗಾದ ಸಿಬ್ಬಂದಿಯ ಸಂಖ್ಯೆ ೧೮ಕ್ಕೆ
ಏರಿತು. ಅಮಾನತುಗೊಂಡವರಲ್ಲಿ ಜನರಲ್ ಮ್ಯಾನೇಜರ್ ಮಟ್ಟದ ಅಧಿಕಾರಿಗಳೂ ಸೇರಿದ್ದರು. ಹಗರಣದಿಂದ ಬ್ಯಾಂಕಿನ
ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ಹೇಳಿದರು. ನೀರವ್
ಮೋದಿ, ಪತ್ನಿ ಅಮಿ ಮೋದಿ, ಸಹೋದರ ನಿಶಾಲ್ ಮೋದಿ ಮತ್ತು ಪಾಲುದಾರ ಮೆಹುಲ್ ಚೋಕ್ಸಿ ಅವರ ವಿರುದ್ಧ
ಇಂಟರ್ ಪೋಲ್ ನೋಟಿಸುಗಳನ್ನೂ ಜಾರಿ ಮಾಡಲಾಯಿತು.
2018: ನವದೆಹಲಿ: ಕಾರ್ತಿ ಚಿದಂಬರಂ ಅವರ
ಚಾರ್ಟರ್ಡ್ ಅಕೌಂಟೆಂಟ್ ಎಸ್. ಭಾಸ್ಕರರಾಮನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐಎನ್ ಎಕ್ಸ್
ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ನ್ಯಾಯಾಲಯವು ಅವರನ್ನು ವಿಚಾರಣೆ ಸಲುವಾಗಿ ಐದು ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ
ನೀಡಿತು. ನಗರದ ತಾರಾ ಹೋಟೆಲ್ ಒಂದರಲ್ಲಿ ಬಂಧಿಸಲ್ಪಟ್ಟ ಭಾಸ್ಕರರಾಮನ್ ಅವರನ್ನು ವಿಶೇಷ ನ್ಯಾಯಾಧೀಶ
ಸುನಿಲ್ ರಾಣಾ ಅವರ ಮುಂದೆ ಹಾಜರು ಪಡಿಸಲಾಯಿತು. ರಾಣಾ ಅವರು ಜಾರಿ ನಿರ್ದೇಶನಾಲಯದ ಮನವಿಯನ್ನು ಅಂಗೀಕರಿಸಿ
ಜಾರಿ ನಿರ್ದೇಶನಾಲಯ ವಶದಲ್ಲಿ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದರು. ಚಾರ್ಟ್‌ರ್ಡ್ ಅಕೌಂಟೆಂಟ್ ಭಾಸ್ಕರರಾಮನ್
ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿತು. ೨೦೦೭ರಲ್ಲಿ
ಕಾರ್ತಿ ಚಿದಂಬರಂ ತಂದೆ, ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಯುಪಿಎ ಆಡಳಿತಾವಧಿಯಲ್ಲಿ
ಕೇಂದ್ರ ವಿತ್ತ ಸಚಿವರಾಗಿದ್ದಾಗ ಐಎನ್ ಎಕ್ಸ್ ಮೀಡಿಯಾ ಹಣ ಪಡೆದ ಪ್ರಕರಣದಲ್ಲಿ ಆಗಿದೆ ಎನ್ನಲಾಗಿರುವ
ವಿದೇಶೀ ವಿನಿಮಯ ಕಾಯ್ದೆ ಉಲ್ಲಂಘನೆ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಕಾರ್ತಿ ಹೆಸರು ಸೇರಿಕೊಂಡಿತ್ತು.
2018: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ
ಅಧಿಕೃತವಾಗಿ ಹೊಣೆ ಹೊತ್ತುಕೊಂಡ ಎರಡು ತಿಂಗಳುಗಳ ಬಳಿಕ
ರಾಹುಲ್ ಗಾಂಧಿ ಅವರು ಈದಿನ ತನ್ನ ತಂಡಕ್ಕೆ
ಅಂತಿಮ ರೂಪ ಕೊಡುವ ಕಾರ್ಯ ಆರಂಭಿಸಿದರು. ಸೋನಿಯಾ ಗಾಂಧಿ ಅವರು ನೇಮಿಸಿದ್ದ ಪಕ್ಷದ ಉನ್ನತ ನಿರ್ಣಯಾಧಿಕಾರ
ಘಟಕವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯೂಸಿ) ವಿಸರ್ಜಿಸಿದ ಅವರು ಹೊಸ ತಂಡ ರಚನೆಯ
ಕಾರ್ಯಕ್ಕೆ ಚಾಲನೆ ನೀಡಿದರು. ನೂತನ ಕಾರ್ಯಕಾರಿ ಸಮಿತಿ ಸದಸ್ಯರ ನೇಮಕಾತಿಯ ಉಸ್ತುವಾರಿ ನೋಡಿಕೊಳ್ಳಲು
ನೂತನ ಚಾಲನಾ ಸಮಿತಿಯನ್ನು ರಾಹುಲ್ ಗಾಂಧಿ ರಚಿಸಿದರು. ಈ ಚಾಲನಾ ಸಮಿತಿಯು ದೆಹಲಿಯಲ್ಲಿ ಮಾರ್ಚ್ ಎರಡನೇ
ವಾರ ನಡೆಯಲಿರುವ ಪಕ್ಷದ ಮಹಾಧಿವೇಶನದ ರೂಪುರೇಷೆಗಳನ್ನು ನಿರ್ಧರಿಸಲಿದೆ. ಅಧಿವೇಶನವು ಕಾಂಗ್ರೆಸ್
ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕವನ್ನು ಅನುಮೋದಿಸಲಿದ್ದು, ರಾಹುಲ್ ಅವರ ಕಾರ್ಯಕಾರಿ ಸಮಿತಿಯನ್ನು
ಅಂತಿಮಗೊಳಿಸಲಿದೆ. ಚಾಲನಾ ಸಮಿತಿಗೆ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಿ.ಚಿದಂಬರಂ,
ಗುಲಾಂ ನಬಿ ಆಜಾದ್ ಮತ್ತು ಜನಾರ್ದನ ದ್ವಿವೇದಿ ಅವರನ್ನು ಸೇರಿಸಿಕೊಂಡರು. ಅಖಿಲ ಭಾರತ ಕಾಂಗ್ರೆಸ್
ಸಮಿತಿಯ ಅನುಮೋದನೆ ಪಡೆಯಲಿರುವ ರಾಹುಲ್ ಗಾಂಧಿ ಅವರ ನೂತನ ತಂಡವು ಹೊಸ ಮತ್ತು ಹಳೆಯ ನಾಯಕರನ್ನು ಒಳಗೊಂಡ
ಸಮ್ಮಿಶ್ರ ತಂಡವಾಗಲಿದೆ ಎಂದು ಮೂಲಗಳು ಹೇಳಿದವು. ರಾಹುಲ್
ತಂಡದಲ್ಲಿ ಹಿರಿಯ ನಾಯಕರೂ ರಾಜ್ಯಸಭೆಯ ವಿರೋಧಿ ನಾಯಕರೂ ಆದ ಗುಲಾಂ ನಬಿ ಆಜಾದ್, ಮಾಜಿ ರಕ್ಷಣಾ ಸಚಿವ
ಎ.ಕೆ. ಆಂಟನಿ, ಆನಂದ ಶರ್ಮ, ಪಿ. ಚಿದಂಬರಂ ಮತ್ತು ಸೋನಿಯಾ ಗಾಂಧಿ ಅವರ ಮಾಜಿ ರಾಜಕೀಯ ಕಾರ್ಯದರ್ಶಿ
ಅಹಮದ್ ಪಟೇಲ್ ಸ್ಥಾನಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದವು. ಈ ನಾಯಕರು ಅತೀವ ಕುಟುಂಬ ನಿಷ್ಠೆ
ಹೊಂದಿದವರಾಗಿದ್ದಾರೆ. ಅಲ್ಲದೆ ಆಜಾದ್ ರಂತಹ ನಾಯಕರು ಲೋಕಸಭಾ ಚುನಾವಣೆಗೆ ಮುನ್ನ ಮೈತ್ರಿಕೂಟಗಳನ್ನು
ರಚಿಸಲು ಅಗತ್ಯವಾದ ಸಂಘಟನಾ ಚಾತುರ್ಯಗಳನ್ನೂ ಹೊಂದಿದ್ದಾರೆ. ವೃತ್ತಿ ನಿರತರು, ಮಾಹಿತಿ ವಿಶ್ಲೇಷಕರ
ಕೇಂದ್ರ, ರಿಯಲ್ ಟೈಮ್ ಫೀಡ್ ಬ್ಯಾಕ್ ಸಂಶೋಧನಾ ತಂಡಗಳ
ರಚನೆಗಾಗಿ ವ್ಯಕ್ತಿಗಳನ್ನು ಗುರುತಿಸಲು ಪ್ರತ್ಯೇಕ ದಳವೊಂದನ್ನೂ ಕಾಂಗ್ರೆಸ್ ರಚಿಸಿತು. ರಾಹುಲ್ ಅವರ
ಪೂರ್ಣ ಗಮನ ಲೋಕಸಭಾ ಚುನಾವಣೆಯತ್ತ ಇದ್ದರೂ, ಅದಕ್ಕೂ ಮುನ್ನ ಕರ್ನಾಟಕ, ರಾಜಸ್ಥಾನ, ಮಧ್ಯ ಪ್ರದೇಶ
ಮತ್ತು ಛತ್ತೀಸ್ ಗಢ ಮತ್ತಿತರ ಪ್ರಮುಖ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ
ಜಯಗಳಿಸುವ ಸವಾಲೂ ಅವರ ಮುಂದಿದೆ.
2018: ಮುಂಬಯಿ : ಪಂಜಾಬ್ ನ್ಯಾಷನಲ್
ಬ್ಯಾಂಕ್ (ಪಿಎನ್‌ಬಿ) ಬಹುಕೋಟಿ ವಂಚನೆ ಹಗರಣ ಕಳಂಕಿತ ನೀರವ್ ಮೋದಿ ಅವರ ವಜ್ರಾಭರಣ ಉದ್ಯಮದ ಬ್ಯಾಂಡ್
ಅಂಬಾಸಿಡರ್ ಗುತ್ತಿಗೆಯನ್ನು ರದ್ದು ಪಡಿಸುವ ಬಗ್ಗೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಇಂಗಿತ
ವ್ಯಕ್ತ ಪಡಿಸಿದರು. ನೀರವ್ ಮೋದಿ ಅವರು ಕಳೆದ ವರ್ಷ ತಮ್ಮ ವಜ್ರಾಭರಣ ಉದ್ಯಮಕ್ಕೆ ಬ್ರ್ಯಾಂಡ್ ಅಂಬಾಸಿಡರ್
ಆಗಿ ಪ್ರಿಯಾಂಕಾ ಚೋಪ್ರಾ ಅವರನ್ನು ನೇಮಕ ಮಾಡಿದ್ದರು. ಪಂಜಾಬ್
ನ್ಯಾಷನಲ್ ಬ್ಯಾಂಕ್ ಹಗರಣ ಬಯಲಾಗುತ್ತಿದ್ದಂತೆಯೇ, ಪ್ರಿಯಾಂಕಾ ಚೋಪ್ರಾ ಅವರು ನೀರವ್ ಮೋದಿ ವಿರುದ್ಧ
ದಾವೆ ದಾಖಲಿಸಿದ್ದಾರೆ ಎಂಬ ಪುಕಾರು ಹರಡಿತ್ತು. ಆದರೆ ಪ್ರಿಯಾಂಕಾ ಚೋಪ್ರಾ ದಾವೆ ದಾಖಲಿಸಿಲ್ಲ, ಬದಲಿಗೆ
ಮೋದಿ ಜೊತೆಗಿನ ತನ್ನ ಗುತ್ತಿಗೆ ವ್ಯವಹಾರವನ್ನು ರದ್ದು ಪಡಿಸುವ ಬಗ್ಗೆ ಕಾನೂನು ಅಭಿಪ್ರಾಯ ಕೇಳಿದ್ದಾರೆ
ಎಂಬುದು ದೃಢಪಟ್ಟಿತು. ಪ್ರಿಯಾಂಕಾ ಚೋಪ್ರಾ ಅವರ ವಕ್ತಾರರು ಮಾಧ್ಯಮಕ್ಕೆ ಹೇಳಿಕೆಯೊಂದನ್ನು ಬಿಡುಗಡೆ
ಮಾಡಿ "ನೀರವ್ ಮೋದಿ ವಿರುದ್ಧ ಪ್ರಿಯಾಂಕಾ ಚೋಪ್ರಾ ದಾವೆ ಹೂಡಿದ್ದಾರೆ ಎಂಬ ವದಂತಿಗಳು ಹರಡಿವೆ.
ಆದರೆ ಅದು ಸರಿಯಲ್ಲ; ನೀರವ್ ಮೋದಿ ಪಿಎನ್‌ಬಿ ವಂಚನೆ ಹಗರಣದಲ್ಲಿ ಶಾಮೀಲಾಗಿರುವ ಆರೋಪಗಳು ಕೇಳಿ ಬಂದಿರುವ
ಹಿನ್ನೆಲೆಯಲ್ಲಿ ಅವರೊಂದಿಗಿನ ತನ್ನ ಗುತ್ತಿಗೆ ಒಪ್ಪಂದವನ್ನು ಈ ಸಂದರ್ಭದಲ್ಲಿ ರದ್ದುಗೊಳಿಸಬಹುದೇ
ಎಂಬ ಬಗ್ಗೆ ಆಕೆ ಕಾನೂನು ಅಭಿಪ್ರಾಯ ಕೇಳಿದ್ದಾರೆ’ ಎಂದು ಸ್ಪಷ್ಟ ಪಡಿಸಿದರು.
ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಕ್ವಾಂಟಿಕೋ ಹಿಟ್ ಸೀರೀಸ್ ನಿಂದಾಗಿ ಹಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದಾರೆ.
೨೦೧೭ರ ಜನವರಿಯಲ್ಲಿ ನೀರವ್ ಮೋದಿ ಅವರು ಪ್ರಿಯಾಂಕಾ
ಅವರನ್ನು ತನ್ನ ವೈಭವೋಪೇತ ವಜ್ರಾಭರಣಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದ್ದರು.
ಕರಾಚಿ: ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೈ ಹೆಚ್ಚು ಜನ ಸಾವನ್ನಪ್ಪಿ, ಇತರ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿರುವ ಸೆಹವಾನ್ ಪಟ್ಟಣದ ಸೂಫಿ ಶಹಬಾಜ್ ಕಲಂದರ್ ಪ್ರಾರ್ಥನಾ ಮಂದಿರದ ಬಳಿ 16 ಫೆಬ್ರುವರಿ 2017ರ ಗುರುವಾರ ಘಟಿಸಿತು. ಒಂದು ವಾರದ ಅವಧಿಯೊಳಗೆ ಪಾಕಿಸ್ತಾನದಲ್ಲಿ ಸಂಭವಿಸಿದ ಐದನೇ ಆತ್ಮಾಹುತಿ ಬಾಂಬ್ ದಾಳಿ ಇದು. ಧಮಲ್–ಎ–ಸೂಫಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದಿದ್ದ ನೂರಾರು ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಯಿತು. 30 ಮೃತದೇಹಗಳನ್ನು ಮತ್ತು ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮೊಯಿನುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ. ಸೆಹವಾನ್ ಪಟ್ಟಣದ ಸುತ್ತುಮುತ್ತಲಿನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ದಾಳಿಯಲ್ಲಿ ಕನಿಷ್ಠ 100 ಜನ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿದ್ದು, ಇತರ ಕೆಲವು ವರದಿಗಳು ಸಾವಿನ ಸಂಖ್ಯೆ ಅಂದಾಜು 50 ಎಂದು ತಿಳಿಸಿದವು. ಪ್ರತಿ ಗುರುವಾರ ಭಕ್ತಾದಿಗಳು ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಲು ಈ ಸ್ಥಳದಲ್ಲಿ ಜಮಾಯಿಸುತ್ತಿದ್ದರು. ಮಹಿಳೆಯರಿಗಾಗಿ ಮೀಸಲಿರಿಸುತ್ತಿದ್ದ ಸ್ಥಳದಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿತು. ಸ್ಫೋಟ ನಡೆದ ಸ್ಥಳ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಧಾರ್ಮಿಕ ಸೂಫಿ ಸಂತತಿಯ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಲಾಲ್ ಶಹಬಾಜ್ ಖಲಂದರ್ ಅವರಿಗೆ ಸೇರಿದೆ. ಸ್ಫೋಟದ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
2017:
ವಾಷಿಂಗ್ಟನ್: ಭವಿಷ್ಯದಲ್ಲಿ ಪಾಕಿಸ್ತಾನ ವಿಶ್ವದ ಅತಿ ಅಪಾಯಕಾರಿ ರಾಷ್ಟ್ರವಾಗಲಿದೆ
ಎಂದು ಅಮೆರಿಕದ ಸಿಐಎ ಅಧಿಕಾರಿ ಕೆವಿನ್ ಹಲ್ಬರ್ಟ್ ಅಭಿಪ್ರಾಯಪಟ್ಟರು. ಪಾಕ್ ರಾಷ್ಟ್ರದ ಆರ್ಥಿಕ ಅಸ್ಥಿರತೆ, ಹೆಚ್ಚುತ್ತಿರುವ ಭಯೋತ್ಪಾದನಾ ಕೃತ್ಯಗಳು ಹಾಗೂ ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹಣೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಪಾಕ್ ಹೆಚ್ಚು ಅಪಾಯಕಾರಿ ರಾಷ್ಟ್ರವಾಗಲಿದೆ ಎಂದು ಇಸ್ಲಾಮಾಬಾದ್ನ ಸಿಐಎ ಸಂಸ್ಥೆಯ ಮಾಜಿ ಮುಖ್ಯಸ್ಥ ಕೆವಿನ್ ಹಲ್ಬರ್ಟ್ ತಿಳಿಸಿದರು. ಪಾಕ್ ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಹಾಗೂ ಅಭಿವೃದ್ಧಿಯಲ್ಲಿ ದುಷ್ಪರಿಣಾಮ ಎದುರಿಸುತ್ತಿದೆ. ಅಫ್ಘಾನಿಸ್ತಾನದ ಜನಸಂಖ್ಯೆ 3.30 ಕೋಟಿ. ಆದರೆ ಪಾಕ್ ಜನಸಂಖ್ಯೆ 18.20 ಕೋಟಿ. ಅಫ್ಘಾನಿಸ್ತಾನಕ್ಕಿಂತಲೂ 5 ಪಟ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕ್ 6 ನೇ ಸ್ಥಾನ ಹೊಂದಿದ್ದು, ಅತಿ ಹೆಚ್ಚು ಜನನ ಪ್ರಮಾಣ ಹೊಂದಿರುವ ರಾಷ್ಟ್ರವಾಗಿದೆ. ‘ಪಾಕ್ ಪ್ರಸ್ತುತ ಅಪಾಯಕಾರಿ ರಾಷ್ಟ್ರವಲ್ಲದಿದ್ದರೂ, ಭವಿಷ್ಯದಲ್ಲಿ ಹೆಚ್ಚು ಅಪಾಯಕಾರಿ ರಾಷ್ಟ್ರವಾಗಲಿದೆ’ ಎಂದು ಸೈಫರ್ ಬ್ರೀಫ್ ವೆಬ್ಸೈಟ್ ಲೇಖನದಲ್ಲಿ ವಿಶ್ಲೇಷಿಸಿದರು.
2017: ಇಸ್ಲಾಮಾಬಾದ್: ಮುಂಬೈ ದಾಳಿ ರೂವಾರಿ ಉಗ್ರ ಹಫೀಜ್ ಸಯೀದ್ ತನ್ನ ಮೇಲಿನ ವಿದೇಶ
ನಿಷೇಧ ತೆರವುಗೊಳಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಒತ್ತಡ ಹೇರಿದ. ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಜ್ ತನ್ನ ಸಂಘಟನೆ ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಮತ್ತು ತನ್ನಿಂದ ದೇಶದ ಭದ್ರತೆಗೆ ಯಾವುದೇ ಅಪಾಯವಿಲ್ಲ. ಹಾಗಾಗಿ ತನ್ನ ಮೇಲಿನ ದೇಶ ಬಿಟ್ಟು ತೆರದಂತೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ. 2008ರಲ್ಲಿ ನಡೆದ ಮುಂಬೈ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. ಕೃತ್ಯದ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಪಾಕ್ ಆಂತರಿಕ ನಿರ್ವಹಣಾ ಸಚಿವ ಚೌಧರಿ ನಿಸಾರ್ ಅಲಿ ಖಾನ್ಗೆ ಬರೆದಿರುವ ಪತ್ರದಲ್ಲಿ, 2017ರ ಜನವರಿ
30ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ವಿದೇಶ ನಿರ್ಗಮನ ನಿಷೇಧ ಪಟ್ಟಿಗೆ ಸೇರಿಸಲಾಗಿರುವ ತನ್ನ ಸಹಿತ 38 ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಹೇಳಿದ್ದಾನೆ. ಪಾಕ್ ಸರ್ಕಾರ ಕಳೆದ ತಿಂಗಳಷ್ಟೇ ಸಯೀದ್ ಮತ್ತುಆತನ ಜೆಯುಡಿ ಮತ್ತು ಫ್ಲಾಹ್ ಎ ಇನ್ಸಾಯಿಯತ್ ಸಂಘಟನೆಯ ಇತರ 37 ನಾಯಕರ ಮೇಲೆ ದೇಶ ತೊರೆಯದಂತೆ ನಿರ್ಬಂಧ ಹೇರಿತ್ತು.2009: 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಜನಾಂಗೀಯ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ನಟಿ ನಂದಿತಾ ದಾಸ್ ನಿರ್ದೇಶಿಸಿದ 'ಫಿರಾಕ್', ಕರಾಚಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ಕರಾಚಿ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನ ಕಂಡಿತು.
2008: ಒರಿಸ್ಸಾದ ಕಡಲು ತೀರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಟ್ಟಹಾಸ ಗೈದ ನಕ್ಸಲೀಯರು ಜಿಲ್ಲಾ ಶಸ್ತ್ರ ಕೋಠಿಯನ್ನು ಲೂಟಿ ಮಾಡಿ 13 ಮಂದಿ ಪೊಲೀಸರೂ ಸೇರಿದಂತೆ 15 ಮಂದಿಯನ್ನು ಹತ್ಯೆ ಮಾಡಿ, ಇತರ 10 ಮಂದಿಯನ್ನು ಗಾಯಗೊಳಿಸಿದರು. ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿಕೊಂಡ 100ಕ್ಕೂ ಹೆಚ್ಚು ಸಂಖ್ಯೆಯ ನಕ್ಸಲೀಯರು ರಾತ್ರಿ ನಯಾಗರ್ತದ ಪೊಲೀಸ್ ಠಾಣೆ, ಪೊಲೀಸ್ ತರಬೇತಿ ಶಾಲೆ, ಶಸ್ತ್ರಾಗಾರ ಹಾಗೂ ದಸಪಲ್ಲಾ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು. ಪೊಲೀಸರು ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲೀಯರು ತಾವು ಅಪಹರಿಸಿ ತಂದ ಬಸ್ ಮತ್ತು ಲಾರಿಯಲ್ಲಿ ತುಂಬಿಕೊಂಡು ಪರಾರಿಯಾದರು.
2008: ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಗುಂಡು ಹಾರಿಸಿ ಸಹಪಾಠಿಗಳನ್ನು ಹತ್ಯೆ ಮಾಡುವ ಬಂದೂಕು ಸಂಸ್ಕೃತಿ ಮುಂದುವರೆಯಿತು. 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಇಬ್ಬರು ಸಹಪಾಠಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಗಾಜಿಯಾಬಾದಿಗೆ ಸಮೀಪದ ಮೆಟನಾರ ಗ್ರಾಮದ ಇಂಟರ್ ಕಾಲೇಜಿನಲ್ಲಿ ಘಟಿಸಿತು. ಘಟನೆಯಲ್ಲಿ ವಿಪಿನ್ (19) ಎಂಬ ವಿದ್ಯಾರ್ಥಿ ಹತನಾದ. ಗುಂಡು ಹಾರಿಸಿದವರಲ್ಲಿ ಅತಾರ್ ಸಿಂಗ್ ಎಂಬ ಒಬ್ಬನನ್ನು ಬಂಧಿಸಲಾಯಿತು. ಅತಾರ್ ಸಿಂಗನ ತಂಗಿಯನ್ನು ಚುಡಾಯಿಸಿದ್ದು ಈ ಘಟನೆಗೆ ಕಾರಣ ಎನ್ನಲಾಯಿತು.
2008: ಮಾರ್ಗೋವಾ ವಿಭಾಗದ ಅಧಿಕಾರಿಯು ಮಾನ್ಯತಾ ಅವರಿಗೆ ನೀಡಿದ ವಸತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದನ್ನು ಅನುಸರಿಸಿ ಬಾಲಿವುಡ್ ನಟ ಸಂಜಯದತ್ ಮತ್ತು ಮಾನ್ಯತಾ ಅವರ ವಿವಾಹ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರು.
2008: ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆಯನ್ನು (ಎಸ್ ಎಸ್ ಸಿ ಪಿ) ಜಾರಿಗೆ ತಂದಲ್ಲಿ ಕಡಲತಡಿ ಭಯೋತ್ಪಾದನೆ ಮತ್ತು ಕಡಲುಗಳ್ಳತನಗಳು ಪರಸ್ಪರ ಒಂದಾಗಿ ದೇಶದ ಭದ್ರತೆಗೆ ಧಕ್ಕೆ ತರಬಲ್ಲವು ಎಂದು ನೌಕಾದಳದ ನಿವೃತ್ತ ಅಧಿಕಾರಿ ಕ್ಯಾಪ್ಟನ್ ಎಚ್.ಬಾಲಕೃಷ್ಣನ್ ಹೇಳಿದರು. ಚೆನ್ನೈಯಲ್ಲಿ ಕಡಲತೀರ ಕಾರ್ಯಾಚರಣೆ ಜಾಲ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.
2008: ರಾಜ್ಯಸಭಾ ಸದಸ್ಯ ಮತ್ತು ಜ್ಯುಪಿಟರ್ ಕ್ಯಾಪಿಟಲ್ ಸಮೂಹದ ಸಿಇಒ ರಾಜೀವ್ ಚಂದ್ರಶೇಖರ್ ಅವರು ಭಾರತೀಯ ವಾಣಿಜ್ಯ ಮಹಾಸಂಘಗಳ ಒಕ್ಕೂಟ (ಫಿಕ್ಕಿ)ದ ಅಧ್ಯಕ್ಷರಾಗಿ ಆಯ್ಕೆಯಾದರು. ನವದೆಹಲಿಯಲ್ಲಿ ನಡೆದ 80ನೇ ಎಜಿಎಂ ಸಭೆಯಲ್ಲಿ ಜೆ.ಕೆ.ಪೇಪರ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹರ್ಷಪತಿ ಸಿಂಘಾನಿಯಾ ಅವರನ್ನು ಹಿರಿಯ ಅಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಲಾಯಿತು.
2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಅಮರ್ತ್ಯ ಸೆನ್ ಅವರಿಗೆ ಶಾಂತಿನಿಕೇತನದಲ್ಲಿ ಈದಿನ ಆಚಾರ್ಯ ದಿನೇಶ್ ಚಂದ್ರ ಸೆನ್ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಸಾಹಿತ್ಯ ಮತ್ತು ಸಮಾಜಕ್ಕೆ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ಸೆನ್ ಅವರನ್ನು ಆಚಾರ್ಯ ದಿನೇಶ್ ಚಂದ್ರ ಸೆನ್ ಸಂಶೋಧನಾ ಸೊಸೈಟಿ ಆಯ್ಕೆ ಮಾಡಿತು. `ನಾನು ಆಚಾರ್ಯ ದಿನೇಶ್ ಚಂದ್ರ ಸೆನ್ ಅವರ ಬರವಣಿಗೆಗಳಿಂದ ಪ್ರೇರೇಪಿತನಾಗಿದ್ದು, ಈ ಗೌರವ ಸ್ವೀಕರಿಸಲು ಹೆಮ್ಮೆ ಪಡುತ್ತೇನೆ' ಎಂದು ಅಮರ್ತ್ಯ ಸೆನ್ ಪ್ರತಿಕ್ರಿಯಿಸಿದರು.
2007: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ರಾಜ್ಯ ಘಟಕದ ಪ್ರಮುಖರಲ್ಲಿ ಒಬ್ಬರಾದ ಎಚ್. ಕೆ. ಮೋಹನಕುಮಾರ್ (46) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಇಚ್ಛೆಯಂತೆ ಮೋಹನ ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.
2007: ಧರ್ಮಪುರಿಯಲ್ಲಿ ಏಳು ವರ್ಷಗಳ ಹಿಂದೆ ಮೂವರು ವಿದ್ಯಾರ್ಥಿನಿಯರ ಸಾವಿಗೆ ಕಾರಣವಾದ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಡು ಯಾನೆ ನೆಡುಚೆಳಿಯನ್ (41), ಮಧು (44) ಮತ್ತು ಮುನಿಯಪ್ಪನ್ (52) ಅವರಿಗೆ ಸೇಲಂ ನಾಯಾಲಯವು ಮರಣದಂಡನೆ ವಿಧಿಸಿತು. ಹೆಚ್ಚುವರಿ ಪ್ರಥಮ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ. ಕೃಷ್ಣರಾಜ ಅವರು ಈ ತೀರ್ಪು ನೀಡಿದರು.
2007: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಭದ್ರಯ್ಯನ ಹಳ್ಳಿಯ ಶಿವಮ್ಮ (18) ಎಂಬ ಯುವತಿಯ ಮೇಲೆ 2001ರ ಅಕ್ಟೋಬರ್ 15ರಂದು ಅತ್ಯಾಚಾರ ಎಸಗಿದ್ದ ಶಿವು ಮತ್ತು ಜಡೇಸ್ವಾಮಿ ಎಂಬ ಇಬ್ಬರಿಗೆ ಹೈಕೋರ್ಟ್ ವಿಧಿಸಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ದೃಢೀಕರಿಸಿತು.
2007: ಅಬುಧಾಬಿಯಿಂದ ಮಂಗಳೂರಿಗೆ ನೇರ ವಿಮಾನ ಸಂಚಾರ ಆರಂಭದೊಂದಿಗೆ ಮಂಗಳೂರಿನ ವೈಮಾನಿಕ ಇತಿಹಾಸದಲ್ಲಿ ಚಾರಿತ್ರಿಕ ಅಧ್ಯಾಯ ಆರಂಭಗೊಂಡಿತು. ಅಬುಧಾಬಿ-ಮಸ್ಕತ್- ಮಂಗಳೂರು ನಡುವಣ ಈ ವಿಮಾನ ಪಯಣದ ಅವಧಿ ಕೇವಲ 6 ಗಂಟೆ. ಅಬುಧಾಬಿಯಿಂದ ಹೊರಟ ವಿಮಾನ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
2006: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು 2005ನೇ ಸಾಲಿನ ವಿಶೇಷ ಪ್ರಶಸ್ತಿಗಳಾದ ಡಾ. ಬಿ.ಎನ್. ಗದ್ಗೀಮಠ ಪ್ರಶಸ್ತಿಗೆ ಗುಲ್ಬರ್ಗದ ಡಾ. ವೀರಣ್ಣ ದಂಡೆ, ಡಾ. ಜೀಶಂ ಪ್ರಶಸ್ತಿಗೆ ಉಡುಪಿಯ ಡಾ. ರಾಘವ ನಂಬಿಯಾರ್ ಅವರನ್ನು ಆಯ್ಕೆ ಮಾಡಿತು.
2006: ಅಮೆರಿಕನ್ ಸೇನೆಯು ತನ್ನ ಸಂಚಾರಿ ಸೇನಾ ಶಸ್ತ್ರಚಿಕಿತ್ಸಾ ಆಸ್ಪತ್ರೆಯ (ಮೊಬೈಲ್ ಆರ್ಮಿ ಸರ್ಜಿಕಲ್ ಹಾಸ್ಪಿಟಲ್ - ಎಂ ಎ ಎಸ್ ಎಚ್) ಕೊನೆಯ ಘಟಕವನ್ನು ಮುಚ್ಚಿತು. 1945ರ ಆಗಸ್ಟಿನಲ್ಲಿ ಶಸ್ತ್ರಚಿಕಿತ್ಸಕ ಮೈಕೆಲ್ ಡಿ ಬೆಕೆ ಮತ್ತು ಇತರ ಶಸ್ತ್ರಚಿಕಿತ್ಸಾ ತಜ್ಞರು ಈ ಸಂಚಾರಿ ಸೇನಾ ಶಸ್ತ್ರಚಿಕಿತ್ಸಾ ಆಸ್ಪತ್ರೆ ಘಟಕವನ್ನು ಆರಂಭಿಸಿದ್ದರು.
1968: ಅಮೆರಿಕಾದ ಮೊದಲ 911 ತುರ್ತು ದೂರವಾಣಿ ವ್ಯವಸ್ಥೆಯನ್ನು ಅಲಬಾಮಾದ ಹ್ಯಾಲೀವಿಲ್ನಲ್ಲಿ ಉದ್ಘಾಟಿಸಲಾಯಿತು.
1963: ಕಲಾವಿದ ಟಿ.ಕೆ. ರಾಮಸಿಂಗ್ ಜನನ.
1956: ಭಾರತೀಯ ಖಭೌತತಜ್ಞ ಮೇಘನಾದ ಸಹಾ ಅವರು ನವದೆಹಲಿಯಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ನಿಧನರಾದರು.
1954: ಕಲಾವಿದ ಎಚ್. ಎಂ. ಅಂಕಯ್ಯ ಜನನ.
1949: ಇಸ್ರೇಲಿ ಸಂಸತ್ತು `ನೆಸೆಟ್' ಜೆರುಸಲೆಮ್ಮಿನಲ್ಲಿ ಉದ್ಘಾಟನೆಗೊಂಡಿತು. ಚೈಮ್ ವೀಝ್ಮಾನ್ ಇಸ್ರೇಲಿನ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.
1949: ಗಾಯಕ, ಕವಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನಕಾರ ವೈ.ಎಸ್. ಕೃಷ್ಣಮೂರ್ತಿ ಅವರು ಶ್ರೀನಿವಾಸ ಅಯ್ಯಂಗಾರ್- ಸುಬ್ಬ ಲಕ್ಷ್ಮಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು.
1937: ನೈಲಾನ್ ಸಂಶೋಧಿಸಿದ ಡ್ಯೂಪಾಂಟ್ನ ರಾಸಾಯನಿಕ ಸಂಶೋಧನಾ ತಜ್ಞ ವ್ಲಾಲೇಸ್ ಎಚ್. ಕೊರೋಥರ್ಸ್ ಅವರಿಗೆ ಈ ಸಿಂಥೆಟಿಕ್ ಫೈಬರಿಗೆ ಪೇಟೆಂಟ್ ಲಭಿಸಿತು.
1896: ರಿಚರ್ಡ್ ಫೆಲ್ಟನ್ ಔಟ್ ಕಾಲ್ಟ್ ನ `ದಿ ಯೆಲ್ಲೋ ಕಿಡ್' ಮೊತ್ತ ಮೊದಲ ಕಾಮಿಕ್ ಸ್ಟ್ರಿಪ್ `ಹೀಯರ್ಸ್ಟ್ ನ್ಯೂಯಾರ್ಕ್ ಅಮೆರಿಕನ್' ನಲ್ಲಿ ಪ್ರಕಟಗೊಂಡಿತು. ಸ್ಟ್ರಿಪ್ನಲ್ಲಿ ಪಾತ್ರ ಹೇಳುವುದನ್ನು ಬರೆಯಲು `ಬಲೂನ್' ಮಾದರಿಯ ಜಾಗ ಬಳಸಿದ ಮೊತ್ತ ಮೊದಲ ವ್ಯಕ್ತಿ ಔಟ್ ಕಾಲ್ಟ್. `ಕಾಮಿಕ್ ಸ್ಟ್ರಿಪ್' ಎಂಬ ನುಡಿಗಟ್ಟನ್ನು 1900ರ ಸುಮಾರಿನಲ್ಲಿ ಅಮೆರಿಕಾದಲ್ಲಿ ಮೊತ್ತ ಮೊದಲಿಗೆ ಬಳಸಲಾಗಿತ್ತು.
1834: ಜೀವರಕ್ಷಕ ದೋಣಿಯ (ಲೈಫ್ ಬೋಟ್) ಸಂಶೋಧಕ ಬ್ರಿಟನ್ನಿನ ಲಯನೆಲ್ ಲ್ಯೂಕಿನ್ ತನ್ನ 91ನೇ ವಯಸ್ಸಿನಲ್ಲಿ ಮೃತನಾದ.
1659: ಬ್ರಿಟಿಷ್ ಬ್ಯಾಂಕ್ ಒಂದರಿಂದ ಚೆಕ್ ಪಡೆಯಲಾಯಿತು. ಈ ಚೆಕ್ಕಿನ ಮೂಲಪ್ರತಿಯನ್ನು ನ್ಯಾಷನಲ್ ವೆಸ್ಟ್ ಮಿನ್ ಸ್ಟರ್ ಬ್ಯಾಂಕಿನ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
No comments:
Post a Comment