ಇಂದಿನ ಇತಿಹಾಸ History Today ಫೆಬ್ರುವರಿ 09
2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅರುಣಾಚಲ ಪ್ರದೇಶ ಭೇಟಿಯು ಭಾರತ ಮತ್ತು ಚೀನಾ ನಡುವೆ ಪರಸ್ಪರ ’ವಾಕ್ ಸಮರ’ವನ್ನು
ಹುಟ್ಟು ಹಾಕಿತು. ಮೋದಿ ಅವರ ಅರುಣಾಚಲ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತ ಪಡಿಸಿದ ಬೆನ್ನಲ್ಲೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ’ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂದು
ಎದಿರೇಟು ನೀಡಿತು. ಪ್ರಧಾನಿ
ಮೋದಿ ಮತ್ತು ಭಾರತೀಯ ನಾಯಕರು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ಮತ್ತು ಈ ಪ್ರದೇಶದಲ್ಲಿ ಚಟುವಟಿಕೆಗಳನ್ನು
ನಡೆಸುವುದಕ್ಕೆ ಚೀನಾದ ವಿದೇಶಾಂಗ ಸಚಿವಾಲಯವು ಆಕ್ಷೇಪ ವ್ಯಕ್ತ ಪಡಿಸಿದೆ. ಇಂತಹ ಚಟುವಟಿಕೆಗಳನ್ನು ತಾನು ಪ್ರಬಲವಾಗಿ ವಿರೋಧಿಸುವುದಾಗಿ
ಚೀನಾ ಹೇಳಿತು. ಚೀನಾ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ’ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ’ ಎಂದು ಖಡಕ್ ಉತ್ತರ ನೀಡಿತು. ಮೋದಿಯವರು ಮೇ ತಿಂಗಳ ಮಹಾಚುನಾವಣೆಗೆ ಮುಂಚಿತವಾಗಿ, ಭಾರತೀಯ ಜನತಾ ಪಕ್ಷಕ್ಕೆ ಜನಬೆಂಬಲ ಕ್ರೋಡೀಕರಣದ ಸಲುವಾಗಿ ಸರಣಿ ಸಭೆಗಳಲ್ಲಿ ಪಾಲ್ಗೊಂಡಿದ್ದರು.
‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಪರಾಭಾರೆ ಮಾಡಲಾಗದಂತಹ ಅಂಗವಾಗಿದೆ. ಭಾರತೀಯ ನಾಯಕರು ಅರುಣಾಚಲ ಪ್ರದೇಶಕ್ಕೆ ಮತ್ತು ಭಾರತದ ಇತರ ಭಾಗಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡುತ್ತಾರೆ. ಭಾರತದ ಈ ದೃಢ ನಿಲುವನ್ನು ಚೀನಾಕ್ಕೆ ಹಲವಾರು ಬಾರಿ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿತು. ದಿಪಕ್ಷೀಯ
ಬಾಂಧವ್ಯ ಸುಧಾರಣೆಗೆ ಇತ್ತೀಚೆಗೆ ನಡೆಸಲಾಗಿರುವ ಯತ್ನಗಳ ಹೊರತಾಗಿಯೂ, ಭಾರತ- ಚೀನಾ ಗಡಿಯಲ್ಲಿನ ಬೆಟ್ಟ ಪ್ರದೇಶಕ್ಕೆ ಸಂಬಂಧಿಸಿದಂತೆ ೧೯೬೨ರ ಭಾರತ ಚೀನಾ ಸಮರದ ಬಳಿಕ ಆಗಾಗ ವಿವಾದಗಳು ಏಳುತ್ತಲೇ ಇವೆ. ದಕ್ಷಿಣ ಟಿಬೆಟ್ ಅತ್ಯಂತ ಸೂಕ್ಷ್ಮ ವಿಚಾರವಾಗಿ ಉಳಿದಿದೆ ಎಂದು ಚೀನಾ ಪ್ರತಿಪಾದಿಸಿತು. ಒಟ್ಟಾರೆ ದ್ವಿಪಕ್ಷೀಯ ಬಾಂಧವ್ಯದ ಒಟ್ಟಾರೆ ಸ್ಥಿತಿಯಿಂದ ಭಾರತವು ಮುಂದಕೆ ಬರಬೇಕಾಗಿದೆ. ಮತ್ತು ಚೀನಾದ ಹಿತಾಸಕ್ತಿ ಮತ್ತು ಕಾಳಜಿಗಳನ್ನು ಗೌರವಿಸಬೇಕಾಗಿದೆ. ಉಭಯ ರಾಷ್ಟ್ರಗಳ ಬಾಂಧವ್ಯ ಸುಧಾರಣೆಗೆ ಯತ್ನಿಸಬೇಕು ಮತ್ತು ವಿವಾದಗಳು ಹಾಗೂ ಗಡಿ ವಿಷಯಗಳನ್ನು ಕ್ಲಿಷ್ಟಗೊಳಿಸುವಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಚೀನೀ ವಿದೇಶಾಂಗ ಕಚೇರಿಯು ಹೇಳಿಕೆ ನೀಡಿತು. ಚೀನಾದ ಹೇಳಿಕೆ ಬಗ್ಗೆ ತತ್ ಕ್ಷಣ ಪ್ರತಿಕ್ರಿಯೆ ನೀಡಲು ಭಾರತದ ವಿದೇಶಾಂಗ ಸಚಿವಾಲಯ ಮೊದಲು ನಿರಾಕರಿಸಿತ್ತು. ೨೦೧೭ರಲ್ಲಿ ಹಿಮಾಲಯ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾದ ಸನ್ನಿವೇಶ ಸೃಷ್ಟಿಯಾದ ಬಳಿಕ, ಭಾರತ ಮತ್ತು ಚೀನಾ ವಿಶ್ವಾಸ ವರ್ಧನೆಯ ಆಶಯ ವ್ಯಕ್ತ ಪಡಿಸಿದ್ದವು. ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಕಳೆದ ವರ್ಷ ಹಲವಾರು ಬಾರಿ ಭೇಟಿ ಮಾಡಿ ವಾಣಿಜ್ಯ ಸಂಬಂಧಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಆದರೆ ವಿವಿಧ ಕಾರಣಗಳಿಗಾಗಿ ಈ ನಿಟ್ಟಿನ ಪ್ರಗತಿ ನಿಧಾನವಾಗಿದೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಗಳು, ಭಾರತೀಯ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ಹೇಳಿದ್ದರು.
2019: ಕೋಲ್ಕತ: ಸುಪ್ರೀಂಕೋರ್ಟಿನ
ನಿರ್ದೇಶನ ಪ್ರಕಾರ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರನ್ನು ಕೇಂದ್ರೀಯ ತನಿಖಾ ದಳವು (ಸಿಬಿಐ) ಮೇಘಾಲಯದ ಶಿಲ್ಲಾಂಗಿನ ಸಿಬಿಐ ಕಚೇರಿಯಲ್ಲಿ ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ೮ ತಾಸು ಕಾಲ ಪ್ರಶ್ನಿಸಿತು. ಪುನಃ ತನಿಖೆಗಾಗಿ ತನ್ನ ಮುಂದೆ ಮ ರುದಿನ ಹಾಜರಾಗುವಂತೆ ಸಿಬಿಐ ರಾಜೀವ ಕುಮಾರ್ ಅವರಿಗೆ ಸೂಚಿಸಿತು. ರಾಜೀವ ಕುಮಾರ್ ಅವರು ತಮ್ಮ ವಕೀಲರಾದ ಬಿಸ್ವಜಿತ್ ದೇಬ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಜಾವೇದ್ ಶಮೀಮ್ ಮತ್ತು ಮುರಳೀಧರ ಶರ್ಮ ಜೊತೆಗೆ ಬೆಳಗ್ಗೆ ೧೧ ಗಂಟೆಗೆ ಶಿಲ್ಲಾಂಗ್ ಸಿಬಿಐ ಕಚೇರಿಗೆ ತನಿಖೆ ಸಲುವಾಗಿ ಆಗಮಿಸಿದ್ದರು.
2019: ನವದೆಹಲಿ: ವಿವಾದಾತ್ಮಕ ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ದಾಳಿಗೆ ವಿರುದ್ಧವಾಗಿ ಬಿಜೆಪಿಯು ಸರಣಿ ಟ್ವೀಟ್ಗಳ ಮೂಲಕ ಪ್ರತಿದಾಳಿ ನಡೆಸಿತು. ೧೦ ಅಂಶಗಳ ಪ್ರತಿದಾಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ’ಸುಳ್ಳುಗಳ ಸಂಚಾರಿ ವ್ಯಾಪಾರ’ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿತು. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿ ಅವರು ೫೯,೦೦೦ ಕೋಟಿ ರೂಪಾಯಿಗಳ ರಫೇಲ್ ವಹಿವಾಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ವಿರುದ್ಧ ತಮ್ಮ ’ಪ್ರಶ್ನಾ’ ಸಮರವನ್ನು ತೀವ್ರಗೊಳಿಸಿದ್ದರು.
ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಂಗ್ಲ ಪತ್ರಿಕೆಯೊಂದರಲ್ಲಿ
ಬಂದ ಸುದ್ದಿ ರಾಹುಲ್ ಬತ್ತಳಿಕೆಗೆ ಹೊಸ ಶಸ್ತ್ರಾಸ್ತ್ರವನ್ನು ಸೇರ್ಪಡೆ ಮಾಡಿದೆ. ರಫೇಲ್ ಯುದ್ಧ ವಿಮಾನ ವಹಿವಾಟಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯವು (ಪಿಎಂಒ) ಫ್ರೆಂಚ್ ಸರ್ಕಾರದ ಜೊತೆಗೆ ಪರ್ಯಾಯ ಮಾತುಕತೆಗಳನ್ನು ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಕ್ಷಣಾ ಸಚಿವಾಲಯವು ಭಾರತದ ಸಂಧಾನ ತಂಡದ ಸ್ಥಿತಿಯನ್ನು ಪಿಎಂಒ ಗೌಣಗೊಳಿಸಿದೆ ಎಂದು ಪ್ರತಿಭಟಿಸಿತ್ತು
ಎಂದು ಪತ್ರಿಕಾ ವರದಿ ಹೇಳಿತ್ತು. ಪತ್ರಿಕಾ ವರದಿಯ ಬಳಿಕ ರಾಹುಲ್ ಗಾಂಧಿ ಅವರು ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆ ನಡೆಯಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದರು.
ರಾಹುಲ್ ದಾಳಿಗೆ ಎದಿರೇಟು ನೀಡಿರುವ ಬಿಜೆಪಿಯು, ’ಸುಳ್ಳು ವರ್ಸಸ್ ವಾಸ್ತವಾಂಶ’ ಶೀರ್ಷಿಕೆಯಲ್ಲಿ ೧೦ ಅಂಶಗಳನ್ನು ಪಟ್ಟಿ ಮಾಡಿ ಸರಣಿ ಟ್ವೀಟ್ ಮಾಡುವ ಮೂಲಕ ರಫೇಲ್ ಒಪ್ಪಂದವನ್ನು ಸಮರ್ಥಿಸಿತು. ’ನೀವು ಪ್ರಾಮಾಣಿಕತೆ ಮತ್ತು ಕಠಿಣ ಶ್ರಮದ ಇನ್ನೊಂದು ಹೊಸ ದಿನಕ್ಕೆ ಕಾಲಿಡುತ್ತಿರುವಾಗ ಸುಳ್ಳುಗಾರ ರಾಹುಲ್ ಗಾಂಧಿ ಇನ್ನಷ್ಟು ಸುಳ್ಳುಗಳನ್ನು ಹರಿಬಿಡಲು ಸಿದ್ಧತೆ ನಡೆಸುತ್ತಿದ್ದಾರೆ. ಅವರ ಎಲ್ಲ ಸುಳ್ಳುಗಳನ್ನು ಪತ್ತೆ ಹಚ್ಚುವುದು ಕಷ್ಟ, ಆದರೆ ನಾವು ಅವರು ರಫೇಲ್ ಬಗ್ಗೆ ಹರಿಯಬಿಟ್ಟಿರುವ ಕೆಲವು ಪ್ರಮುಖ ಸುಳ್ಳುಗಳನ್ನು ಇಲ್ಲಿ ಪತ್ತೆ ಹಚ್ಚಲು ಪ್ರಯತ್ನಿಸಿದ್ದೇವೆ
ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪ್ರಕಟಿಸಿದ ಹೊಸ ಸರಣಿ ಟ್ವೀಟ್ಗಳಲ್ಲಿ ತಿಳಿಸಿತು. ಸುಳ್ಳು ಸಂಖ್ಯೆ .೧: ಸುಳ್ಳುಗಾರ ರಾಹುಲ್ ಅವರು, ಡಸ್ಸಾಲ್ಟ್ ಕಂಪೆನಿಗೆ ಭಾರತದಲ್ಲಿ ವ್ಯವಹಾರ ನಡೆಸಲು ಆಫ್ ಸೆಟ್ ಪಾಲುದಾರನಾಗಿ ರಿಲಯನ್ಸ್ನ್ನು ಆಯ್ಕೆ ಮಾಡಿದೆ ಎಂಬುದಾಗಿ ಹೇಳುವ ಮೂಲಕ ಫ್ರೆಂಚ್ ಮಾಧ್ಯಮ ಸಂಸ್ಥೆಯೊಂದರ ವರದಿಯನ್ನು ತಿರುಚಲು ಯತ್ನಿಸಿದ್ದರು. ವಾಸ್ತವಾಂಶ: ಸುಪ್ರೀಂಕೋರ್ಟ್ ಮತ್ತು ಡಸ್ಸಾಲ್ಟ್ ಸಿಇಒ ಆಫ್ ಸೆಟ್ ಪಾಲುದಾರರ ಆಯ್ಕೆಯಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿವೆ. ಸುಳ್ಳು ಸಂಖ್ಯೆ ೨: ಸುಳ್ಳುಗಾರ ರಾಹುಲ್ ಅವರು ವ್ಯವಹಾರದಲ್ಲಿ ಭಾರೀ ಅಕ್ರಮಗಳನ್ನು ಸುಪ್ರೀಂಕೋರ್ಟ್ ಗುರುತಿಸಿದೆ ಎಂಬುದಾಗಿ ತಪ್ಪಭಿಪ್ರಾಯ ಮೂಡಿಸಲು ಯತ್ನಿಸಿದ್ದರು. ವಾಸ್ತವಾಂಶವೇನೆಂದರೆ,
ಸಬ್ಜ್ಯುಡೀಸ್ ವಿಷಯದಲ್ಲಿ ಮೂರನೇ ಗ್ರೇಡ್ ಮಟ್ಟದ ಪ್ರಚಾರದಲ್ಲಿ ಅವರು ತೊಡಗಿದ್ದರು ಎಂದು ಬಿಜೆಪಿ ಟ್ವೀಟ್ ಹೇಳಿತು. ಆಡಳಿತಾರೂಢ ಪಕ್ಷವು ತನ್ನ ಪ್ರತಿಪಾದನೆಗಳಿಗೆ ಸಮರ್ಥನೆಯಾಗಿ ಮೆಮೋಗಳು, ದಾಖಲೆಗಳ ಫೊಟೋಗ್ರಾಫ್ ಗಳು ಮತ್ತು ವಿಡಿಯೋಗಳನ್ನು ತನ್ನ ಟ್ವೀಟ್ಗಳಿಗೆ ಜೋಡಿಸಿದೆ. ಈ ದಾಖಲೆಗಳು ಭಾರತ ಮತ್ತು ಫ್ರಾನ್ಸ್ ೨೦೧೬ರಲ್ಲಿ ೩೬ ಯುದ್ಧ ವಿಮಾನಗಳನ್ನು ಖರೀದಿಸಲು ಸಹಿ ಹಾಕಿದ ರಫೇಲ್ ವಹಿವಾಟು ಕುರಿತ ರಾಹುಲ್ ಗಾಂಧಿ ಅವರ ದಾಳಿಗಳ ಟೊಳ್ಳುತನವನ್ನು ತೋರಿಸಿವೆ ಬಿಜೆಪಿ ಟ್ವೀಟ್‌ಗಳು ಪ್ರತಿಪಾದಿಸಿದವು. ರಕಣಾ ಸಚಿವಾಲಯದ ೨೪ ನವೆಂಬರ್ ೨೦೧೫g ಟಿಪ್ಪಣಿಯಲ್ಲಿ ತಿಳಿಸಿದಂತೆ ಭಾರತೀಯ ತಂಡದ ಸ್ಥಾನವು ದುರ್ಬಲಗೊಳ್ಳುವಂತೆ ಮಾಡಿದ ಪ್ರಧಾನಮಂತ್ರಿ ಕಚೇರಿಯ ಪರ್ಯಾಯ ಮಾತುಕತೆಗಳ ಲಾಭವನ್ನು ಫ್ರಾನ್ಸ್ ಪಡೆದುಕೊಂಡಿತು ಎಂಬುದಾಗಿ ಪತ್ರಿಕೆಯು ಮಾಡಿದ ವರದಿಯನ್ನೂ ಬಿಜೆಪಿ ತರಾಟೆಗೆ ತೆಗೆದುಕೊಂಡಿತು. ‘ಸುಳ್ಳುಗಾರ
ರಾಹುಲ್ ಮತ್ತು ಅಪರಾಧದಲ್ಲಿನ ಅವರ ಪಾಲುದಾರ ಪತ್ರಿಕೆ ತಮ್ಮ ’ಸಂಶೋಧನೆ’ಯಲ್ಲಿ ವಿಶ್ವಾಸ ಇಟ್ಟುಕೊಂಡಿದ್ದರೆ, ಅವರು ಗೌರವಾನ್ವಿತ ಸುಪ್ರೀಂಕೋರ್ಟಿನ್ನು
ಈ ’ಸಂಶೋಧನೆಗಳ’ ಜೊತೆಗೆ ಸಂಪರ್ಕಿಸಬೇಕಾಗಿತ್ತು. ಆದರೆ ತಮ್ಮ ನಿಲುವು ಭದ್ರವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಈಗ ಕೂಡಾ ತನ್ನ ಹೊಸ ’ಸಾಕ್ಷ್ಯಾಧಾರ’ದೊಂದಿಗೆ ಸುಪ್ರೀಂಕೋರ್ಟನ್ನು ಸಂಪರ್ಕಿಸುವಂತೆ ನಾವು ಸುಳ್ಳುಗಾರನಿಗೆ ಸವಾಲು ಎಸೆಯುತ್ತೇವೆ ಎಂದು ಬಿಜೆಪಿ ಟ್ವೀಟ್ ಹೇಳಿತು. ರಾಹುಲ್
ಗಾಂಧಿ ಅವರ ಬಹುತೇಕ ರಫೇಲ್ ಸುಳ್ಳುಗಳನ್ನು ದಾಖಲಿಸಲು ನಾವು ಯತ್ನಿಸಿದ್ದೇವೆ.
ಆದರೆ ಅವರ ಸುಳ್ಳು ಹೇಳುವ ’ಅತಿಮಾನುಷ’
(ಸೂಪರ್ ಹ್ಯೂಮನ್) ಶಕ್ತಿಯ ಕಾರಣ, ಹುಲು ಮಾನವರಾದ ನಮಗೆ ಅವೆಲ್ಲವನ್ನೂ ದಾಖಲಿಸುವುದು ಕಷ್ಟ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಆದ್ದರಿಂದ ಸುಳ್ಳಿನ ರೋಗಿಯನ್ನು ಇನ್ನಷ್ಟು ಅನಾವರಣಗೊಳಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ
ಎಂದು ಆಡಳಿತಾರೂಢ ಪಕ್ಷದ ಟ್ವೀಟ್ ತಿಳಿಸಿತು.
2019: ಅಮಿಂಗಾಂವ್ (ಅಸ್ಸಾಂ): ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯಿಂದ ಅಸ್ಸಾಂ ಅಥವಾ ಈಶಾನ್ಯ ಭಾರತದ ಜನರಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗುವುದಿಲ್ಲ
ಎಂದು ಅಸ್ಸಾಮಿನ ಸಭೆಗಳಲ್ಲಿ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಅಂಗೀಕಾರ ಪಡೆಯಬೇಕಾಗಿರುವ ಈ ಮಸೂದೆ ಬಗ್ಗೆ ’ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ವಿರೋದ ಪಕ್ಷಗಳ ವಿರುದ್ಧ ಹರಿಹಾಯ್ದರು. ’ಪೌರತ್ವ ಮಸೂದೆ ಬಗ್ಗೆ ಗೊಂದಲ ಸೃಷ್ಟಿಲಾಗುತ್ತಿದೆ.
ಹೀಗೆ ಮಾಡುತ್ತಿರುವವರ ಬಗ್ಗೆ ನೀವು ಎಚ್ಚರದಿಂದಿರಬೇಕು. ಅವರೆಲ್ಲ ’ಮಹಾಮಿಲಾವತಿ’
(ಅತಿಯಾದ ಕಲಬೆರಕೆ) ಪಕ್ಷಗಳು’ ಎಂದು ಪ್ರಧಾನಿ ನುಡಿದರು. ‘ರಾಷ್ಟ್ರದ ಸಂಪನ್ಮೂಲಗಳನ್ನು ದೋಚುವ ಸಲುವಾಗಿ ಭಾರತಕ್ಕೆ ನುಸುಳುವವರು ಮತ್ತು ಧಾರ್ಮಿಕ ನಂಬಿಕೆಗಳ ನೆಲೆಯಲ್ಲಿ ನಡೆಯುವ ಕಿರುಕುಳಗಳನ್ನು ಅನುಸರಿಸಿ ರಾಷ್ಟ್ರದಿಂದ ಓಡುವವರ ನಡುವಣ ವ್ಯತ್ಯಾಸಗಳನ್ನು
ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ವ್ಯಕ್ತಿಗಳನ್ನು ರಕ್ಷಿಸಬೇಕಾದ್ದು
ಭಾರತದ ಬದ್ಧತೆ ಎಂದು ಪ್ರಧಾನಿ ಹೇಳಿದರು. ಪೌರತ್ವ ಮಸೂದೆ ಬಗ್ಗೆ ಪ್ರತಿಭಟನಕಾರರು ವ್ಯಕ್ತ ಪಡಿಸಿದ ಭೀತಿಗಳನ್ನು ನಿವಾರಿಸುವ ಯತ್ನ ಮಾಡಿದ ಮೋದಿ, ’ವಲಸೆಗಾರರಿಗೆ ಪೌರತ್ವವನ್ನು ಸೂಕ್ತ ಪರಿಶೀಲನೆ ಬಳಿಕವೇ ನೀಡಲಾಗುವುದು. ರಾಜ್ಯ ಸರ್ಕಾರದ ಶಿಫಾರಸು ಇಲ್ಲದೆ ಅದನ್ನು ಮಾಡಲಾಗುವುದಿಲ್ಲ’ ಎಂದು ನುಡಿದರು. ’ಪೌರತ್ವ ಮಸೂದೆಯು ಅಸ್ಸಾಂ ಒಂದೇ ರಾಜ್ಯಕ್ಕೆ ಸಂಬಂಧ ಪಟ್ಟದ್ದಲ್ಲ. ಇದು ಇಡೀ ರಾಷ್ಟ್ರಕ್ಕೆ ಸಂಬಂಧ ಪಟ್ಟದ್ದು. ಇದು ಭಾರತ ಮಾತೆಯನ್ನು ಪ್ರೀತಿಸುವವರಿಗೆ
ಸಂಬಂಧಪಟ್ಟದ್ದು- ಅವರು ಪಾಕಿಸ್ತಾನ, ಆಫ್ಘಾನಿಸ್ಥಾನ ಅಥವಾ ಬಾಂಗ್ಲಾದೇಶದಿಂದ
ಬಂದಿರಲಿ ಅವರಿಗೂ ಅನ್ವಯಿಸುತ್ತದೆ’ ಎಂದು ಪ್ರಧಾನಿ ಹೇಳಿದರು. ಹಿಂದಿನ ಕೇಂದ್ರ ಸರ್ಕಾರಗಳ ವಿರುದ್ಧ ಹರಿಹಾಯಲು ದಿವಂಗತ ಭೂಪೇನ್ ಹಜಾರಿಕಾ ಅವರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೋದಿ, ಅಸ್ಸಾಮಿನ ಖ್ಯಾತ ಕವಿ-ಗಾಯಕನನ್ನು ಗೌರವಿಸಲು ಇಷ್ಟು ವರ್ಷ ಬೇಕಾಯಿತು. ’ಅಸ್ಸಾಮಿನ ನಿಜವಾದ ರತ್ನ ಡಾ. ಭೂಪೇನ್ ಹಜಾರಿಕಾ ಅವರನ್ನು ಗೌರವಿಸಲು ದಶಕಗಳಷ್ಟು ವಿಳಂಬವಾಗಲು ಕಾರಣರು ಯಾರು ಎಂಬುದನ್ನು ನಿಮ್ಮ ನಿರ್ಧಾರಕ್ಕೆ ಬಿಡುತ್ತೇನೆ’ ಎಂದು ಮೋದಿ ನುಡಿದರು. ’ನಾನು
ಡಾ. ಭೂಪೇನ್ ಹಜಾರಿಕಾ ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ಅವರು ವಂಚಿತರು ಮತ್ತು ಬಡವರಿಗಾಗಿ ತಮ್ಮ ದನಿ ಎತ್ತಿದ್ದರು’ ಎಂದು
ಪ್ರಧಾನಿ ಮೋದಿ ಅವರು ಗುವಾಹಟಿಯ ಅಮಿಂಗಾವದಲ್ಲಿ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು. ಈಶಾನ್ಯ ಭಾಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಗಳ ಬಗೆಗೂ ಪ್ರಧಾನಿ ಮಾತನಾಡಿದರು. ’ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಶಾನ್ಯ ಭಾಗಕ್ಕೆ ಮಧ್ಯಂತರ ಮುಂಗಡಪತ್ರದಲ್ಲಿ ಶೇಕಡಾ ೨೧ರಷ್ಟು ಹೆಚ್ಚಿನ ಅನುದಾನ ಒದಗಿಸಲಾಗಿದೆ. ಇದು ಈಶಾನ್ಯ ಭಾಗದ ಅಭಿವೃದ್ಧಿ ಕಡೆಗಿನ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡಿರುವುದರಿಂದ
ವಿರೋಧ ಪಕ್ಷಗಳು ತಮ್ಮನ್ನು ದೂಷಿಸುತ್ತಿವೆ.
’ಭ್ರಷ್ಟಾಚಾರ ಎಸಗಿ ವಿದೇಶಗಳಿಗೆ ಪರಾರಿಯಾದವರನ್ನು
ದೇಶಕ್ಕೆ ವಾಪಸ್ ಕರೆತಂದು ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತಿದೆ
ಎಂದು ಮೋದಿ ನುಡಿದರು. ಬೆಳಗ್ಗೆ ಪ್ರಧಾನಿ ಮೋದಿಯವರಿಗೆ ಸತತ ಎರಡನೇ ದಿನ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯ ಕಾರಣಕ್ಕಾಗಿ ಕರಿಪತಾಕೆ ಪ್ರದರ್ಶನ ನಡೆಸಲಾಯಿತು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ ಯು), ಅಸೋಮ್ ಜತಿಯಾಬಾದಿ ಯುವ ಛಾತ್ರ ಪರಿಷದ್ (ಎಜೆವೈಸಿಪಿ) ಮತ್ತು ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್) ಇತ್ಯಾದಿ ಸಂಘಟನೆಗಳು ಪೌರತ್ವ ಮಸೂದೆಯನ್ನು ವಿರೋಧಿಸಿದವು. ಪೌರತ್ವ ಮಸೂದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ
ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬರುವ ಹಿಂದುಗಳು, ಜೈನರು, ಕ್ರೈಸ್ತರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ರಾಷ್ಟ್ರದ ಪೌರತ್ವ ಒದಗಿಸುವ ಉದ್ದೇಶ ಹೊಂದಿದೆ. ಲೋಕಸಭೆಯ ಒಪ್ಪಿಗೆ ಪಡೆದಿರುವ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಬೇಕಾಗಿದೆ. ಹಿಮಾಚಲ ಪ್ರದೇಶದಲ್ಲಿ: ಇದಕ್ಕೆ ಮುನ್ನ ಅರುಣಾಚಲ ಪ್ರದೇಶದದ ರಾಜಧಾನಿ ಇಟಾನಗರಕ್ಕೆ ಭೇಟಿ ನೀಡಿದ್ದ ಪ್ರಧಾನಿ, ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದ್ದಕ್ಕದೆಮ ಹೊಲ್ಲೋಂಗಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಹೊಲ್ಲೋಂಗಿ ವಿಮಾನ ನಿಲ್ದಾಣವು ಪ್ರಪ್ರಥಮ ನಿಯಮಿತ ಪ್ಯಾಸೆಂಜರ್ ವಿಮಾನ ನಿಲ್ದಾಣವಾಗಲಿದೆ.
ಪ್ರಸ್ತುತ ಅಸ್ಸಾಮಿನಿಂದ ೮೦ಕಿಮೀ ದೂರದಲ್ಲಿರುವ ಲೀಲಾಬಾರಿಗೆ ಅತ್ಯಂತ ಸಮಿಪದ ವಿಮಾನ ನಿಲ್ದಾಣವೆಂದರೆ ಇಟಾನಗರ ವಿಮಾನ ನಿಲ್ದಾಣವಾಗಿದೆ.
ಅರುಣಾಚಲ ಪ್ರದೇಶದಲ್ಲಿ ಸೆಲಾ ಸುರಂಗ ಮಾರ್ಗಕ್ಕೆ ಶಿಲಾನ್ಯಾಸವನ್ನೂ
ಪ್ರಧಾನಿ ನೆರವೇರಿಸಿದರು. ಸೆಲಾ ಸುರಂಗ ಮಾರ್ಗವು ತವಾಂಗ್ ಕಣಿವೆಯಲ್ಲಿನ ನಾಗರಿಕರಿಗೆ ಮತ್ತು ಭದ್ರತಾ ಪಡೆಗಳಿಗೆ ಸರ್ವಋತು ಸಂಪರ್ಕವನ್ನು ಒದಗಿಸಲಿದೆ. ಇದು ತವಾಂಗಿಗೆ ಪ್ರಯಾಣದ ಅವಧಿಯನ್ನು ಗಮನಾರ್ಹವಾಗಿ ಇಳಿಸಲಿದ್ದು, ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಸಂಬಂಧಿತ ಆರ್ಥಿಕ ಚಟುವಟಿಕೆಗಳಿಗೆ ಒತ್ತು ಕೊಡಲಿದೆ.
2019: ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ರರಾಖಂಡದಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಸತ್ತವರ ಸಂಖ್ಯೆ ೯೦ಕ್ಕೆ ಏರಿತು.. ಮೀರತ್ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಇನ್ನಷ್ಟು ಸಾವುಗಳು ಸಂಭವಿಸಿರುವ ಬಗ್ಗೆ ವರದಿಗಳು ಬಂದವು. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೩೦ ಜನರನ್ನು ಬಂಧಿಸಲಾಯಿತು. ಈವರೆಗೆ ಅಕ್ರಮ ಸಾರಾಯಿ ಕುಡಿದು ಸಹರಾನಪುರದಲ್ಲಿ ೩೮ಮಂದಿ, ಮೀರತ್ತಿನಲ್ಲಿ ೧೮ ಮಂದಿ, ಕುಶಿನಗರದಲ್ಲಿ ೧೦ ಮಂದಿ ಸಾವನ್ನಪ್ಪಿದ್ದಾರೆ. ಪಕ್ಕದ ಉತ್ರರಾಖಂಡ ರಾಜ್ಯದ ಹರಿದ್ವಾರ ಮತ್ತು ರೂರ್ಕೀ ಪ್ರದೇಶದಲ್ಲಿ ೨೬ ಮಂದಿ ಅಸುನೀಗಿದ್ದಾರೆ ಎಂದು ವರದಿಗಳು ತಿಳಿಸಿದವು. ಕಳ್ಳಭಟ್ಟಿ ದುರಂತಕ್ಕೆ ಸಹರಾನಪುರದಲ್ಲಿ ಅತ್ಯಂತ ಹೆಚ್ಚು ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ ೪೭ಕ್ಕೆ ಏರಿತು. ವಿವಿಧ ಆಸ್ಪತ್ರೆಗಳಲ್ಲಿ ಇರುವ ೨೨ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಏನಿದ್ದರೂ ದುರಂತಕ್ಕೆ ಸಹರಾನಪುರದಲ್ಲಿ ಕೇವಲ ೩೬ ಮಂದಿ ಈವರೆಗೆ ಬಲಿಯಾಗಿದ್ದಾರೆ ಎಂದು ಸಹರಾನಪುರ ಜಿಲ್ಲಾ ಮ್ಯಾಜಿಸ್ಟ್ರೇಟ್
ಅಲೋಕ್ ಪಾಂಡೆ ಹೇಳಿದರು. ಮೀರತ್ತಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ
ಆರೋಗ್ಯ ಹದಗೆಟ್ಟು ೧೧ ಮಂದಿ ಸಾವನ್ನಪ್ಪಿದ್ದಾರೆ.
ಸಹರಾನಪುರ ಆಡಳಿತವು ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಶೋಧ ನಡೆಸಿ ಕಳ್ಳಭಟ್ಟಿ ದಂಧೆಯಲ್ಲಿ ತೊಡಗಿದ್ದ ೩೦ ಮಂದಿಯನ್ನು ಬಂಧಿಸಿದೆ. ಮೂವರು ಇನ್ಸ್ಪೆಕ್ಟರ್ಗಳು ಮತ್ತು ಇಬ್ಬರು ಕಾನ್ಸ್ಟೇಬಲ್ಗಳನ್ನು ಎಸ್ಎಸ್ಪಿ ದಿನೇಶ್ ಕುಮಾರ್ ಅಮಾನತುಗೊಳಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಉತ್ತರಾಧಿಕಾರಿಗಳಿಗೆ ತಲಾ ೨ ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ
೫೦,೦೦೦ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಕುಶಿ ನಗರ ಮತ್ತು ಸಹರಾನಪುರದ ಅಬಕಾರಿ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸವಂತೆಯೂ ಮುಖ್ಯಮಂತ್ರಿ ಆದೇಶಿಸಿದರು.
2018: ಪೆಂಗ್‌ಯಾಂಗ್: ಹದಿನೆಂಟು ದಿನ ಕಾಲ ನಡೆಯುವ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಕ್ಕೆ ಪೆಂಗ್ ಯಾಂಗಿನಲ್ಲಿ ವರ್ಣರಂಜಿತ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭ ವೇಳೆ ಇಡೀ ಕ್ರೀಡಾಂಗಣ ವಿದ್ಯುತ್ ದೀಪಗಳಿಂದ ಜಗಮಗಿಸಿತು. ಬಾಣ–ಬಿರುಸುಗಳು ಆಗಸದಲ್ಲಿ ಚಿತ್ರಾರ ಬಿಡಿಸಿದವು. ನೆರೆದಿದ್ದ ಸಹಸ್ರಾರು ಕ್ರೀಡಾಪಟುಗಳು ಹಾಗೂ ಕ್ರೀಡಾ ಅಭಿಮಾನಿಗಳು ಹರ್ಷೋದ್ಘಾರ ಮೊಳಗಿಸಿದರು. ಒಲಿಂಪಿಕ್ ಜ್ಯೋತಿ ಬೆಳಗಿಸಿ, ಒಲಿಂಪಿಕ್ ಧ್ವಜಾರೋಹಣ ನೆರವೇರಿಸಲಾಯಿತು. ಕ್ರೀಡಾಪಟುಗಳು ತಾವು ಪ್ರತಿನಿಧಿಸುವ ರಾಷ್ಟ್ರಗಳ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಕಲಾವಿದರು, ಕ್ರೀಡಾ ಕೂಟದ ಚಾಲನೆಗೆ ಮೆರುಗು ನೀಡಿದರು.
2018: ಬೆಂಗಳೂರು : ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಇಸ್ಲಾಮ್ ನಲ್ಲಿ ಅವಕಾಶ ಇದೆ ಎಂದು ಅಖೀಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾಗಿರುವ ಮೌಲಾನಾ ಸಯ್ಯದ್ ಸಲ್ಮಾನ್ ಹುಸೇನಿ ನದ್ವಿ ಹೇಳಿದರು. ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರೊಂದಿಗಿನ ಭೇಟಿಯಲ್ಲಿ ಮೌಲಾನಾ ನದ್ವಿ ಅವರು ಈ ಹೇಳಿಕೆ ನೀಡಿದರು. ಬಾಬರಿ ಮಸೀದಿ - ರಾಮ ಜನ್ಮಭೂಮಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಅವರು ಈ ಮಾತನ್ನು ಹೇಳಿದರು. ಬಾಬರಿ ಮಸೀದಿ - ರಾಮ ಜನ್ಮಭೂಮಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಶ್ರೀ ಶ್ರೀ ರವಿಶಂಕರ್ ಅವರು ನಿನ್ನೆ ಗುರುವಾರ ಇಲ್ಲಿ ಆರು ಸದಸ್ಯರ ಮುಸ್ಲಿಂ ನಿಯೋಗವನ್ನು ಭೇಟಿಯಾದರು. ಸುಮಾರು ಮೂರು ತಾಸುಗಳ ಕಾಲ ಚರ್ಚೆ ನಡೆಯಿತು ಎಂದು ವರದಿಗಳು ತಿಳಿಸಿದವು. ಸಭೆಯಲ್ಲಿ ಪಾಲ್ಗೊಂಡ ಆರು ಮಂದಿ ಪ್ರತಿನಿಧಿಗಳೆಂದರೆ : ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯ ಕಾರ್ಯಕಾರಿಣಿ ಸದಸ್ಯ ಮೌಲಾನಾ ಸಯ್ಯದ್ ಸಲ್ಮಾನ್ ಹುಸೇನಿ ನದ್ವಿ, ಯುಪಿ ಸುನ್ನಿ ಸೆಂಟ್ರಲ್ ವಕ್‌ಫ್ ಬೋರ್ಡ್ ಅಧ್ಯಕ್ಷೆ ಝುಫರ್ ಫರೂಕೀ, ಮಾಜಿ ಐಎಎಸ್ ಅಧಿಕಾರಿ ಅನೀಸ್ ಅನ್ಸಾರಿ, ವಕೀಲ ಇಮ್ರಾನ್ ಅಹ್ಮದ್, ತೀಲಿ ವಲೀ ಮಸೀದಿಯ ಮೌಲಾನಾ ವಸೀಫ ಹನ್ ವೈಝೀ, ಮತ್ತು ಆಬ್‌ಜೆಕ್ಟೀವ್ ರಿಸರ್ಚ್ ಆ್ಯಂಡ್ ಡೆವಲೆಪ್‌ಮೆಂಟ್ ಇದರ ನಿರ್ದೇಶಕ ಅತಾರ್ ಹುಸೇನ್.
2018: ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ದೋನಿ ಅವರು ಏಕದಿನ ಕ್ರಿಕೆಟ್‌ನಲ್ಲಿ 401 ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದರು. ದೋನಿ ಅವರು ಪಡೆದಿರುವ 401 ಅಷ್ಟು ವಿಕೆಟ್ಗಳಲ್ಲಿ 106 ಸ್ಟಂಪಿಂಗ್ ಮಾಡಿದರು. 295 ಕ್ಯಾಚ್ಗಳನ್ನು ಪಡೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಏಡನ್ ಮರ್ಕರಮ್ ಅವರನ್ನು ಸ್ಟಂಪಿಂಗ್ ಮಾಡಿದ ಅವರು ಈ ಮೈಲುಗಲ್ಲು ತಲುಪಿದರು. ದೋನಿ 315 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಶ್ರೀಲಂಕಾದ ಹಿರಿಯ ಆಟಗಾರ ಕುಮಾರ ಸಂಗಕ್ಕಾರ 482 ವಿಕೆಟ್ ಪಡೆದಿರುವುದು ದಾಖಲೆಯಾಗಿತ್ತು. ಆ್ಯಡಂ ಗಿಲ್ಕ್ರಿಸ್ಟ್ (472) ಮತ್ತು ಮಾರ್ಕ್ ಬೌಷರ್ (424) ಅವರು ಕೂಡ ಈ ಸಾಧನೆ ಮಾಡಿದ್ದರು.
2018: ಬೆಂಗಳೂರು: ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ(ಎಲ್ಇಟಿ) ಉಗ್ರ ಸಂಘಟನೆಯ ಭಯೋತ್ಪಾದಕನಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ಭಯೋತ್ಪಾದನೆಗೆ ನೆರವಾಗಲು ಹಣ ಅಕ್ರಮ ವರ್ಗಾವಣೆ ಮತ್ತು ಹಣ ಪೂರೈಸಿದ ಪ್ರಕರಣದಲ್ಲಿ ಕರ್ನಾಟಕದಿಂದ ಕಾರ್ಯಾಚರಣೆ ನಡೆಸಿದ್ದ ಭಯೋತ್ಪಾದಕ ಬಿಲಾಲ್ ಅಹ್ಮದ್ ಖುತಾ ಅಲಿಯಾಸ್ ಇಮ್ರಾನ್ ಜಲಾಲ್‌ಗೆ ಸ್ಥಳೀಯ ನ್ಯಾಯಾಲಯ ಶಿಕ್ಷ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು. ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಉಗ್ರನಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಏಳು ವರ್ಷ ಜೈಲು ಶಿಕ್ಷೆಯ ಜತೆಗೆ ₹ 50 ಸಾವಿರ ದಂಡವನ್ನೂ ವಿಧಿಸಿತು. ಪ್ರಕರಣದ ವಿಚಾರಣೆ ನಡೆಸಿದ ಪಿಎಂಎಲ್ಎನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್ ಅಮರಣ್ಣನವರ ಅವರು ಫೆ.8ರ ಗುರುವಾರ ಶಿಕ್ಷೆ ವಿಧಿಸಿದರು. 2007ರ ಜನವರಿಯಲ್ಲಿ ನಡೆದ ಪ್ರಕರಣ ಇದಾಗಿದ್ದು, ಕರ್ನಾಟಕ ಪೊಲೀಸರು ಭಯೋತ್ಪಾದಕನನ್ನು ಬೆಂಗಳೂರಿನಲ್ಲಿ ಬಸ್ ಇಳಿಯುವಾಗ ಬಂಧಿಸಿ, ಉಗ್ರನಿಂದ ಎಕೆ ಸರಣಿಯ ರೈಫಲ್ ಮತ್ತು 200 ಗುಂಡುಗಳು, ಐದು ಗ್ರೆನೇಡ್ ಹಾಗೂ ಸ್ಯಾಟಲೈಟ್ ಪೋನ್ ವಶಕ್ಕೆ ಪಡೆದಿದ್ದರು. ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಹೊಂದಿ ಭಾರತ ಸರ್ಕಾರದ ವಿರುದ್ಧ ‘ಯುದ್ಧ ಮಾಡುವ’ ಗುರಿಯನ್ನು ಭಯೋತ್ಪಾದಕ ಹೊಂದಿದ್ದ ಎಂದು ವಿವಿಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
2018: ನವದೆಹಲಿ: ಪಾಕ್ ಗುಪ್ತಚರ ಸಂಸ್ಥೆ ಐಎಸ್ ಐ ಮತ್ತೆ ತನ್ನ ದುರ್ಬುದ್ಧಿ ತೋರಿದ್ದು, ಯುವತಿಯರನ್ನು ಮುಂದಿಟ್ಟುಕೊಂಡು ಭಾರತೀಯ ಸೇನಾ ಅಧಿಕಾರಿಗಳ ಸೆಳೆಯುವ ಪ್ರಯತ್ನ ಮಾಡಿದೆ ಎನ್ನಲಾಯಿತು. ವರದಿಯೊಂದರ ಅನ್ವಯ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಪರ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ರಾಜಧಾನಿ ದೆಹಲಿಯಲ್ಲಿ ಭಾರತೀಯ ವಾಯು ಸೇನೆಯ ಅಧಿಕಾರಿಯೊಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಅಧಿಕಾರಿಗಳು ತಿಳಿಸಿರುವಂತೆ ಬಂಧಿತ ಸೇನಾಧಿಕಾರಿಯನ್ನು 51 ವರ್ಷದ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾಹ್ ಎಂದು ಗುರುತಿಸಲಾಯಿತು. ಇವರು ಕಳೆದ ಕೆಲವು ದಿನಗಳಿಂದ ಅನಾಮಿಕ ಮಹಿಳೊಂದಿಗೆ ನಿರಂತರವಾಗಿ ವಾಟ್ಸಪ್ ಸಂದೇಶ ರವಾನಿಸುತ್ತಿದ್ದರು ಎನ್ನಲಾಯಿತು. ಭಾರತೀಯ ಗುಪ್ತಚರ ಸಂಸ್ಥೆಗಳು ಶಂಕಿಸಿರುವಂತೆ ಈ ಅನಾಮಿಕ ಮಹಿಳೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐನ ಏಜೆಂಟ್ ಎಂದು ಹೇಳಲಾಯಿತು. ಹೀಗಾಗಿ ವಾಯುಸೇನೆ ಅಧಿಕಾರಿ ಅರುಣ್ ಮರ್ವಾಹ್ ಹನಿ ಟ್ರ್ಯಾಪ್ ಗೆ ಬಲಿಯಾಗಿರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಅವರನ್ನು ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ ಎನ್ನಲಾಯಿತು. ವರದಿಯಲ್ಲಿರುವಂತೆ ಕಳೆದ ಒಂದು ತಿಂಗಳ ಹಿಂದೆಯೇ ಐಎಸ್ ಐ ಮಹಿಳಾ ಏಜೆಂಟ್ ಅರುಣ್ ಮರ್ವಾಹ್ ಅವರನ್ನು ಸಂಪರ್ಕ ಮಾಡಿದ್ದು, ಅಂದಿನಿಂದ ಸತತವಾಗಿ ವಾಟ್ಸಪ್ ಮೂಲಕ ಚಾಟಿಂಗ್ ನಡೆಸುತ್ತಿದ್ದರಂತೆ. ಕೇವಲ ಮಾಹಿತಿ ವಿನಿಮಯ ಮಾತ್ರವಲ್ಲದೇ ತೀರಾ ವೈಯುಕ್ತಿಕ ಲೈಂಗಿಕ ಸಂದೇಶಗಳನ್ನೂ ಕೂಡ ಇಬ್ಬರು ಪರಸ್ಪರ ವಿನಿಮಿಯ ಮಾಡಿಕೊಂಡಿರುವ ಸಂಗತಿ ಕೂಡ ಬಯಲಾಗಿದೆ. ಅರುಣ್ ಮರ್ವಾಹ್ ಅವರ ನಂಬಿಕೆ ಗಳಿಸಿದ ಮಹಿಳಾ ಐಎಸ್ ಐ ಏಜೆಂಟ್ ನಿಧಾನವಾಗಿ ಭಾರತೀಯ ಸೇನೆಯ ಮಾಹಿತಿಗಳನ್ನು ಕಲೆಹಾಕಲು ಆರಂಭಿಸಿದ್ದು, ಪ್ರಮುಖವಾಗಿ ಸೇನೆಯ ಗೌಪ್ಯ ದಾಖಲೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಯಿತು. ಮಹಿಳೆ ಮೋಹಕ್ಕೆ ಒಳಗಾದ ಅರುಣ್ ಮರ್ವಾಹ್ ಸೇನೆಯ ಮಾಹಿತಿ ಗೌಪ್ಯ ಕಾಯ್ದೆಯನ್ನು ಉಲ್ಲಂಘಿಸಿ ಪ್ರಮುಖ ದಾಖಲೆಗಳ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದರು. ಪ್ರಸ್ತುತ ಈ ಬಗ್ಗೆ ಅಧಿಕಾರಿಗಳು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಅರುಣ್ ಮರ್ವಾಹ್ ಅವರನ್ನು ಬಂಧಿಸಿರುವ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಮರ್ವಾಹ್ ಅವರನ್ನು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ವರದಿ ತಿಳಿಸಿತು..
2018: ನವದೆಹಲಿ: ಉತ್ತರ ಪ್ರದೇಶದ ಗೋರಖ್ ಪುರ ಮತ್ತು ಫುಲ್ಪುರ ಹಾಗೂ ಬಿಹಾರಿನ ಅರೇರಿಯಾ ಲೋಕಸಭಾ ಕ್ಷೇತ್ರಗಳಿಗೆ ಮಾರ್ಚ್ ೧೧ರಂದು ಉಪಚುನಾವಣೆಗಳು ನಡೆಯಲಿವೆ. ಇದೇ ವೇಳೆಗೆ ಬಿಹಾರಿನ ಭಬುವಾ ಮತ್ತು ಜೆಹಾನಾಬಾದ್ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆಗಳು ನಡೆಯಲಿವೆ ಎಂದು ಭಾರತದ ಚುನಾವಣಾ ಆಯೋಗ ಪ್ರಕಟಿಸಿತು. ಫೆಬ್ರುವರಿ ೨೦ರವರೆಗೆ ನಾಮಪತ್ರ ಸಲ್ಲಿಕೆ, ಮರುದಿನ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳಿಂದ ನಾಮಪತ್ರ ವಾಪಸಿಗೆ ಫೆಬ್ರುವರಿ ೨೩ ಕಡೆಯ ದಿನವಗಿದ್ದು, ಮಾರ್ಚ್ ೧೪ರಂದು ಮತಗಳ ಎಣಿಕೆ ನಡೆಯಲಿದೆ. ಸ್ಥಳೀಯ ಉತ್ಸವಗಳು, ಹವಾಮಾನ ಪರಿಸ್ಥಿತಿ ಮತ್ತು ಮತದಾರರ ಯಾದಿ ಇತ್ಯಾದಿ ವಿವಿಧ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಉಪಚುನಾವಣಾ ದಿನಾಂಕ ನಿಗದಿ ಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿತು. ಯೋಗಿ
ಆದಿತ್ಯನಾಥ್ ಮತ್ತು ಕೇಶವ ಪ್ರಸಾದ ಮೌರ್ಯ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಾಗುವ
ಸಲುವಾಗಿ ತಮ್ಮ ಸ್ಥಾನಗಳನ್ನು ತೆರವುಗೊಳಿಸಿದ್ದರಿಂದ ಉತ್ತರ ಪ್ರದೇಶದ ಗೋರಖ್ ಪುರ ಮತ್ತು ಫುಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಬೇಕಾಗಿದೆ. ಬಿಹಾರಿನ ಅರಾರಿಯಾ ಕ್ಷೇತ್ರದಲ್ಲಿ ರಾಷ್ಟ್ರೀಯ ಜನತಾದಳದ ಸಂಸದ ಮೊಹಮ್ಮದ್ ತಸ್ಲೀಮುದ್ದೀನ್ ನಿಧನದ ಬಳಿಕ ಸ್ಥಾನ ಖಾಲಿ ಬಿದ್ದಿದ್ದುದರಿಂದ ಉಪಚುನಾವಣೆ ಅನಿವಾರ್ಯವಾಯಿತು. ೨೦೧೫ರಲ್ಲಿ ಬಿಜೆಪಿಯು ಭಬುವಾ ವಿಧಾನಸಭಾ ಸ್ಥಾನವನ್ನು ಗೆದ್ದಿತ್ತು. ಆದರೆ ಅದರ ಶಾಸಕ ಆನಂದ ಭೂಷಣ್ ಪಾಂಡವ್ ಕಳೆದ ನವೆಂಬರಿನಲ್ಲಿ ನಿಧನರಾಗಿದ್ದರು. ಜೆಹಾಬಾಬಾದ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಆರೋಗ್ಯ ಸಚಿವ ಮುಂದ್ರಿಕಾ ಸಿಂಗ್ ಯಾದವ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಡೆಂಗ್ಯೂ ಪರಿಣಾಮವಾಗಿ ಸಾವನ್ನಪ್ಪಿದ್ದರು.
2018:
ಕೋಲ್ಕತ: ಎರಡನೇ ತರಗತಿಯ ವಿದ್ಯಾರ್ಥಿನಿಗೆ ಸುಮಾರು ಒಂದು ವರ್ಷ ಕಾಲ ನೃತ್ಯ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ
ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲಕರು ಕೋಲ್ಕತದ ಕಾನ್ವೆಂಟ್ ಶಾಲೆಯೊಂದರ ಮುಂದೆ ಬೆಳಗ್ಗೆ ಪ್ರತಿಭಟನಾ ಪ್ರದರ್ಶನ ನಡೆಸಿದರು. ಬೆನ್ನಲ್ಲೇ
ಪೊಲೀಸರು ಆರೋಪಿತ ಶಿಕ್ಷಕನನ್ನು ಬಂಧಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕ್ತ ಪಾಲಕರನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಬೇಕಾಯಿತಲ್ಲದೆ,
ಗುಂಪು ಗಲಭೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡರು ಎಂದು ವರದಿ ತಿಳಿಸಿತು. ಆರೋಪಿತ ಶಿಕ್ಷಕನನ್ನು ವಜಾಗೊಳಿಸಬೇಕು ಮತ್ತು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪೊಲೀಸರ ಪ್ರಕಾರ ೨ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಪದೇ ಪದೇ ಲೈಂಗಿಕ ಹಲ್ಲೆ ನಡೆದಿದೆ. ಮನೆಯಲ್ಲಿ ವಿಷಯವನ್ನು ಹೇಳದಂತೆ ಶಿಕ್ಷಕ ಆಕೆಗೆ ಬೆದರಿಕೆ ಹಾಕಿದ್ದ, ಯಾರಿಗಾದರೂ ಹೇಳಿದರೆ ಜೀವಂತ ಹುಗಿದುಹಾಕುವುದಾಗಿ
ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದರು. ಬಾಲಕಿ
ಇತ್ತೀಚೆಗೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ ಬಳಿಕ ಈ ಭೀಕರ ಕೃತ್ಯ ಬೆಳಕಿಗೆ ಬಂದಿತು. ಫೆ.8ರ
ಗುರುವಾರ ಬಾಲಕಿ ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದು, ಬಳಿಕ ಆಕೆಯ ಪಾಲಕರು ಶಾಲೆಗೆ ಹೋಗಿ ಶಿಕ್ಷಕನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು.
ಈದಿನ ಹಲವಾರು ಪಾಲಕರು ಶಾಲೆಯ ಹೊರಗೆ ಜಮಾಯಿಸಿ, ಶಾಲಾ ಪ್ರಿನ್ಸಿಪಾಲ್ ಮತ್ತು ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸತೊಡಗಿದರು.
ಘಟನೆ ಬಗ್ಗೆ ಪ್ರಿನ್ಸಿಪಾಲ್ ಮತ್ತು ಆಡಳಿತವು ನಿರ್ಲಕ್ಷ್ಯ ವಹಿಸಿದೆ ಎಂದು ಆವರು ಆಪಾದಿಸಿದರು. ಶಾಲೆಯು ಆಪಾದನೆಗಳನ್ನು ಗೌಣಗೊಳಿಸಲು ಯತ್ನಿಸಿತು. ಆ ಬಳಿಕ ನಾವು ಶಾಲೆಯ ಹೊರಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆವು ಎಂದು ಪ್ರತಿಭಟಿಸುತ್ತಿದ್ದ ಪಾಲಕರು ಹೇಳಿದರು. ಶಾಲೆಯು ಲೈಂಗಿಕ ಹಲ್ಲೆ ಆಪಾದನೆಯನ್ನು ನಿರಾಕರಿಸಿತು. ಕಳೆದ ವರ್ಷ ಕೋಲ್ಕತದ ಇನ್ನೊಂದು ಖಾಸಗಿ ಶಾಲೆಯಲ್ಲಿ ಇಬ್ಬರು ಶಿಕ್ಷಕರಿಂದ ಲೈಂಗಿಕ ಹಲ್ಲೆ ನಡೆದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆಗಳು ನಡೆದಿದ್ದರೂ, ಶಾಲೆಯಲ್ಲಿ ಸಿಸಿಟಿವಿ ಕ್ಯಾಮರಾವನ್ನು ಶಾಲೆ ಅಳವಡಿಸಿಲ್ಲ ಎಂದೂ ಪಾಲಕರು ಆಪಾದಿಸಿದರು. ‘ನಾವು ಆರೋಪಿತ ಶಿಕ್ಷಕನ್ನು ಪೊಲೀಸ್ ಠಾಣೆಗೆ ಜೊತೆಗೇ ಎಳೆದುಕೊಂಡು ಹೋದೆವು. ಒಯ್ಯುವಾಗ ಕೆಲವು ಪಾಲಕರು ಶಿಕ್ಷಕನ ಮೇಲೆ ಹಲ್ಲೆಯನ್ನೂ ನಡೆಸಿದರು’ ಎಂದೂ
ಒಬ್ಬ ಪ್ರತಿಭಟನಕಾರ ತಿಳಿಸಿದರು. ಕಳೆದ ವರ್ಷ ಡಿಸೆಂಬರ್ ನಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಶಿಕ್ಷಕರು ಲೈಂಗಿಕ ಹಲ್ಲೆ ನಡೆಸಿದ್ದರು. ಬಳಿಕ ಈ ಶಿಕ್ಷಕರನ್ನು ಬಂಧಿಸಲಾಗಿತ್ತು.
.
2018: ವಾಷಿಂಗ್ಟನ್: ಅಮೆರಿಕದ ಹೌಸ್ ಆಪ್ ರೆಪ್ರಸೆಂಟೇಟಿವ್ಸ್ ಫೆಡರಲ್ ಸರ್ಕಾರಕ್ಕೆ ಮಾರ್ಚ್ ೨೩ರವರೆಗೆ ಹಣ ವೆಚ್ಚ ಮಾಡಲು ಮತ್ತು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟಾರೆ ವೆಚ್ಚವನ್ನು ಹೆಚ್ಚಿಸಲು ಅವಕಾಶ ನೀಡುವ ಮಸೂದೆಗೆ ಅಂಗೀಕಾರ ನೀಡಿ, ಅದನ್ನು ಅಧ್ಯಕ್ಷ ರೊನಾಲ್ಟ್ ಟ್ರಂಪ್ ಅವರಿಗೆ ಕಳುಹಿಸಿತು. ಇದರೊಂದಿಗೆ ಡೊನಾಲ್ಟ್ ಟ್ರಂಪ್ ಆಡಳಿತ ಸರ್ಕಾರ ಸ್ಥಗಿತದ ಭಾರಿ ಬಿಕ್ಕಟ್ಟಿನಿಂದ ಪಾರಾಯಿತು. ಮಸೂದೆಯನ್ನು ಸದನ ೨೪೦-೧೮೬ ಮತಗಳಿಂದ ಅನುಮೋದಿಸಿತು. ಫೆ.8ರ ಗುರುವಾರ ನಡುರಾತ್ರಿಯ ವೇಳೆಗೆ ಸರ್ಕಾರದ ಹಣವೆಚ್ಚ ಅನುಮತಿ ಮುಗಿಯಲಿತ್ತು. ಗುರುವಾರ ಮಧ್ಯರಾತ್ರಿಯಿಂದ ಸದನದಲ್ಲಿ ಮಸೂದೆಗೆ ಅನುಮತಿ ಲಭಿಸದ ಪರಿಣಾಮವಾಗಿ ಟ್ರಂಪ್ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿತ್ತು. ಇದಕ್ಕೆ ಮುನ್ನ ಅಮೆರಿಕದ ಸೆನೆಟ್ ಹಲವಾರು ಗಂಟೆಗಳ ಸುದೀರ್ಘ ವಿಳಂಬದ ಬಳಿಕ ನಿರ್ಣಾಯಕ ತಾತ್ಕಾಲಿಕ ವೆಚ್ಚ ಮಸೂದೆಗೆ ಶುಕ್ರವಾರ ನಸುಕಿನ ವೇಳೆಯಲ್ಲಿ ಅನುಮೋದನೆ ನೀಡಿತ್ತು. ಪರಿಣಾಮವಾಗಿ ಕಾಂಗ್ರೆಸ್ಗೆ ಗಡುವಿನ ಒಳಗೆ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಿರಲಿಲ್ಲ.
ಇದರಿಂದಾಗಿ ಸರ್ಕಾರ ತನ್ನ ವೆಚ್ಚವನ್ನು ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಕೆಲವು ಗಂಟೆಗಳ ಅವಧಿಗೆ ಸರ್ಕಾರ ತನ್ನ ವೆಚ್ಚವನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಕೆಲವೇ ವಾರಗಳ ಅಂತರದಲ್ಲಿ ಇದು ಎರಡನೇ ಬಾರಿಗೆ ಬಂದಿತು. ಹಲವಾರು ಮಂದಿ ದಾಖಲೆ ರಹಿತ ವಲಸೆಗಾರರನ್ನು ಗಡೀಪಾರಿನಿಂದ ರಕ್ಷಿಸಲು ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆಪಾದಿಸಿ ಡೆಮಾಕ್ರಾಟಿಕ್ ಪಕ್ಷದ ಸದಸ್ಯರು ಸರ್ಕಾರಕ್ಕೆ ಹಣ ವೆಚ್ಚ ಮಾಡುವ ಮಸೂದೆಗೆ ಅನುಮೋದನೆ ನೀಡಲು ಅಡ್ಡಗಾಲು ಹಾಕಿದ್ದರು ಎಂದು ವರದಿಗಳು ತಿಳಿಸಿದವು.
ಮಧ್ಯರಾತ್ರಿ ಸೆನೆಟ್ ಮಸೂದೆಯನ್ನು ಅನುಮೋದಿಸಲು ನಿರಾಕರಿಸಿದ ಪರಿಣಾಮವಾಗಿ ಸರ್ಕಾರ ಕೆಲ ಗಂಟೆಗಳ ಕಾಲ ಮುಚ್ಚಬೇಕಾಗಿ (ಶಟ್ ಡೌನ್) ಬರಬಹುದು ಎಂದು ಸುದ್ದಿ ಸಂಸ್ಥೆಗಳು ನಡುರಾತ್ರಿಯಲ್ಲಿ ವರದಿ ಮಾಡಿದ್ದವು.
೨೦೧೮ರಲ್ಲಿ ಸರ್ಕಾರ ಇಂತಹ ಬಿಕ್ಕಟ್ಟಿಗೆ ಒಳಗಾದದ್ದು ಇದು ಎರಡನೇ ಬಾರಿ. ಜನವರಿ ತಿಂಗಳಲ್ಲಿ ಸರ್ಕಾರ ಮೂರು ದಿನಗಳ ಅವಧಿಗೆ ವೆಚ್ಚ ಸ್ಥಗಿತಗೊಳಿಸಬೇಕಾಗಿ
ಬಂದಿತ್ತು. ಕೆಂಟುಕಿಯ ಸೆನೆಟರ್ ರಾಂಡ್ ಪೌಲ್ ಅವರು ವೆಚ್ಚಕ್ಕೆ ಮಿತಿ ವಿಧಿಸುವ ಸಂಬಂಧ ತಾವು ಮುಂದಿಟ್ಟ ತಿದ್ದುಪಡಿಗಳ ಬಗ್ಗೆ ಚರ್ಚೆ ನಡೆಯಬೇಕೆಂದು ಒತ್ತಾಯಿಸಿದ ಪರಿಣಾಮವಾಗಿ ಸೆನೆಟ್ ನಲ್ಲಿ ಮಸೂದೆ ಮೇಲಿನ ಮತದಾನ ವಿಳಂಬಗೊಂಡಿತ್ತು. ಭಾರಿ ವೆಚ್ಚ ಹೆಚ್ಚಳವನ್ನು ವಿರೋಧಿಸಿ ಸಿಟ್ಟಿನೊಂದಿಗೆ ಮಾತನಾಡುವ ಮೂಲಕ ಪೌಲ್ ಅವರು ಮಸೂದೆ ಅಂಗೀಕಾರವನ್ನು ಹಲವಾರು ತಾಸುಗಳಷ್ಟು ವಿಳಂಬವಾಗುವಂತೆ ಮಾಡಿದರು. ತಿದ್ದುಪಡಿಯ ಮೇಲೆ ಮತದಾನ ನಡೆಯಬೇಕು ಎಂದೂ ಅವರು ಆಗ್ರಹಿಸಿದ್ದರು. ಹಲವಾರು ತಾಸುಗಳ ವಿಳಂಬದ ಬಳಿಕ ೭೧-೨೮ ಮತಗಳಿಂದ ಮಸೂದೆಯನ್ನು ಸೆನೆಟ್ ಅಂಗೀಕರಿಸಿ, ಹೌಸ್ ಆಫ್ ರೆಪ್ರಸೆಂಟೇಟಿವ್ಸ್
ಗೆ ಕಳುಹಿಸಿತ್ತು.
2018: ನವದೆಹಲಿ: ಶ್ರೀನಗರ ಕೇಂದ್ರೀಯ ಸೆರೆಮನೆಯಲ್ಲಿ ಇಡಲಾಗಿರುವ ಏಳು ಮಂದಿ ಪಾಕಿಸ್ತಾನಿ ಭಯೋತ್ಪಾದಕರನ್ನು
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಜಮ್ಮುವಿಗೆ ಸ್ಥಳಾಂತರ ಮಾಡಿತು. ಲಷ್ಕರ್-ಇ-ತೊಯ್ಬಾ ಭಯೋತ್ಪಾದಕನ ಪರಾರಿಗೆ ಅನುವು ಮಾಡಿಕೊಡಲು ಶ್ರೀನಗರ ಆಸ್ಪತ್ರೆ ಮೇಲೆ ನಡೆದ ದಾಳಿ ಘಟನೆಯ ಎರಡು ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಯಿತು. ಗೃಹ ಸಚಿವಾಲಯವು ಉನ್ನತ ಮಟ್ಟದ ಸಭೆಯೊಂದರ ಬಳಿಕ ಭಯೋತ್ಪಾದಕ ನವೀದ್ ಜುಟ್ ಪರಾರಿ ಸ್ವೀಕಾರಾರ್ಹ ಅಲ್ಲ ಎಂಬುದಾಗಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಪಡಿಸಿ, ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿದವು. ಶ್ರೀನಗರ ಜೈಲಿನಲ್ಲಿ ಒಟ್ಟು ೧೬ ಮಂದಿ ಪಾಕಿಸ್ತಾನಿ ಭಯೋತ್ಪಾದಕರನ್ನು ಇರಿಸಲಾಗಿದೆ. ಅವರೆಲ್ಲರನ್ನೂ ಉಧಂಪುರ, ಲೇಹ್ ಮತ್ತು ಜಮ್ಮು ಸೆರೆಮನೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನಗಳ ಪ್ರಕಾರ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ಹೇಳಿದವು. ಭಯೋತ್ಪಾದಕರನ್ನು ಪ್ರತ್ಯೇಕಿಸುವುದು ಇದರ ಉದ್ದೇಶ. ಒಟ್ಟಾಗಿದ್ದಾಗ ಅವರು ಪರಸ್ಪರ ಮಾತನಾಡಿ ಸಂದರ್ಶನ ವೇಳೆಯಲ್ಲಿ ಸಂಘಟನೆಯ ಕಾರ್ಯಕರ್ತರನ್ನು
ಭೇಟಿ ಮಾಡಲು ವ್ಯವಸ್ಥೆ ಮಾಡಿಕೊಳ್ಳುವುದರ
ಜೊತೆಗೆ ಕೆಲವು ಸೆರೆಮನೆ ಸಿಬ್ಬಂದಿ ಮೇಲೆ ಪ್ರಭಾವ ಬೀರುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ತಿಳಿಸಿದರು. ಭಯೋತ್ಪಾದಕರನ್ನು ಸ್ಥಳಾಂತರಿಸುವ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ. ’ಸೆರೆಮನೆಯಲ್ಲಿ ಇರಿಸಲಾಗಿರುವ ಎಲ್ಲ ಕೈದಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್. ಪಿ. ವೈದ್ ನುಡಿದರು. ಜುಟ್ ಪರಾರಿ ಪ್ರಕರಣದ ಬಳಿಕ ನಡೆಸಿದ ಪ್ರಾಥಮಿಕ ತನಿಖೆಯಿಂದ ಜೈಲಿನಲ್ಲಿ ಹಲವಾರು ಕೈದಿಗಳಿಗೆ ಮೊಬೈಲ್ ಫೋನ್ ಗಳನ್ನು ಬಳಸಲು ಅವಕಾಶವಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ನುಡಿದ ವೈದ್, ’ಸಂಚು ರೂಪಿಸಲು ಮೊಬೈಲ್ ಬಳಸಲಾಗಿದೆ ಎಂಬುದರಲ್ಲಿ ಸಂಶಯವಿಲ್ಲ’ ಎಂದು ದೃಢ ಪಡಿಸಿದರು. ಕೆಳ ಹಂತದ ಸೆರೆಮನೆ ಸಿಬ್ಬಂದಿ ಹಣ ಪಡೆದು, ಈ ಕೈದಿಗಳಿಗಾಗಿ ಸಿಮ್ ಕಾರ್ಡ್ಗಳನ್ನು ಪಡೆದಿದ್ದಾರೆ. ಈ ಹಿಂದಿನ ಯಾದೃಚ್ಛಿಕ ತಪಾಸಣೆಯಿಂದ ಸೆರೆಮನೆಯ ಜಾಮ್ಮರ್ ಗಳನ್ನು ಉದ್ದೇಶಪೂರ್ವಕವಾಗಿ
ತೆಗೆದುಹಾಕಿದ್ದು ಬೆಳಕಿಗೆ ಬಂದಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು. ೨೨ರ ಹರೆಯದ ಜುಟ್ ನನ್ನು ಇತರ ಐವರು ಕೈದಿಗಳೊಂದಿಗೆ ಮಾಮೂಲಿ ಆರೋಗ್ಯ ತಪಾಸಣೆಗಾಗಿ ಒಯ್ಯುತ್ತಿದ್ದಾಗ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆದಿತ್ತು. ಗುಂಡು ಹಾರಾಟದ ಘಟನೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು
ಮತ್ತು ಜುಟ್ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಅತಿ ಭದ್ರತೆಯ ಕೈದಿಗಳನ್ನು ಆಸ್ಪತ್ರೆಯ ಒಪಿಡಿಗೆ ಕಳುಹಿಸಿದ್ದು ಏಕೆ ಎಂಬುದಾಗಿ ಪರಿಶೀಲಿಸಲು ಮತ್ತು ಉನ್ನತ
ಮಟ್ಟದ ತನಿಖೆ ನಡೆಸಿ ಹೊಣೆಗಾರಿಕೆ ನಿಗದಿ ಪಡಿಸಲು ವಿಭಾಗೀಯ ಕಮೀಷನರ್ ಆದೇಶ ನೀಡಿದರು. ಶ್ರೀನಗರ
ಜೈಲಿಗೆ ಸಂಬಂಧಪಟ್ಟ ವೈದ್ಯರು ಹಲವಾರು ಸಂದರ್ಭಗಳಲ್ಲಿ ನವೀದ್ ಜುಟ್ ನನ್ನು ಆಸ್ಪತ್ರೆಗೆ ಒಯ್ಯುವಂತೆ ಶಿಫಾರಸು ಮಾಡಿದ್ದು ಬೆಳಕಿಗೆ ಬಂದಿದ್ದು ಈ ವೈದ್ಯನ ಪಾತ್ರದ ಬಗೆಗೂ ಪರಿಶೀಲನೆ ನಡೆಸಲಾಗುತ್ತಿದೆ
ಎಂದು ಮೂಲಗಳು ತಿಳಿಸಿದವು. ಶ್ರೀನಗರ ಸೆರೆಮನೆಗೆ ಸಿಆರ್ ಪಿ ಎಫ್ ದ್ರತೆಯನ್ನು ಒದಗಿಸಲೂ ನಿರ್ಧರಿಸಲಾಗಿದೆ
ಎಂದೂ ಅಧಿಕಾರಿಗಳು ನುಡಿದರು. ಇದು ರಾಜ್ಯ ಪೊಲೀಸರ ಮೇಲಿನ ಅವಿಶ್ವಾಸವಾಗಲಾರದೇ
ಎಂಬ ಪ್ರಶ್ನೆಗೆ ’ಸಿಆರ್ ಪಿ ಎಫ್ ಇಲ್ಲಿನ ಭದ್ರತಾ ವ್ಯವಸ್ಥೆಯ ಅಂಗವಾಗಿ ಈ ಮೊದಲೂ ಇತ್ತು. ಈಗ ಅವರ ಸಂಖ್ಯೆಯನ್ನು ಹೆಚ್ಚಿಸಲಾಗುವುದು.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ನೈತಿಕತೆ ಬಗ್ಗೆ ಚಿಂತೆ ಬೇಕಿಲ್ಲ. ಚೆನ್ನಾಗಿಯೇ ಇರುತ್ತದೆ’ ಎಂದು
ವೈದ್ ಹೇಳಿದರು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೂಡಾ ಗುರುವಾರ ಉನ್ನತ ಪೊಲೀಸ್ ಅಧಿಕಾರಿಗಳ ಪುನರ್ ವ್ಯವಸ್ಥೆಗೆ ಆದೇಶ ಮಾಡಿದೆ ಎಂದು ಮೂಲಗಳು ಹೇಳಿದವು.
2017:
ಚೆನ್ನೈ: ತಮಿಳುನಾಡು ಸರ್ಕಾರ ರಚನೆಯ ನಾಟಕೀಯ ಬೆಳವಣಿಗೆ ಮುಂದುವರೆಯಿತು.
ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ರಾಜಭವನದಲ್ಲಿ ಉಸ್ತುವಾರಿ ರಾಜ್ಯಪಾಲ ಸಿ.ಎಚ್. ವಿದ್ಯಾಸಾಗರ ರಾವ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಹಕ್ಕು ಮಂಡಿಸಿದರು. ಸಂಜೆ 7 ರ ಸುಮಾರಿಗೆ ಮರೀನಾ ಬೀಚ್ನಲ್ಲಿರುವ ಜೆ. ಜಯಲಲಿತಾ ಅವರ ಸಮಾಧಿಗೆ ವಂದಿಸಿ ಪಕ್ಷದ ಐವರು ಬೆಂಬಲಿಗರೊಂದಿಗೆ ನೇರವಾಗಿ ರಾಜಭವನಕ್ಕೆ ತೆರಳಿದರು. ಇದಕ್ಕೂ ಮೊದಲು ಸಂಜೆ 5 ಗಂಟೆಗೆ ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆ ಕುರಿತು ವಿವರಿಸಿದರು. ತಮಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು ಎಂದು ರಾಜ್ಯಪಾಲರಿಗೆ ತಿಳಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಪಿಎಸ್, ರಾಜ್ಯ ರಾಜಕಾರಣದಲ್ಲಿ ‘ಧರ್ಮಕ್ಕೆ ಜಯ ಸಿಗುತ್ತದೆ’ ಎಂದು ಉದ್ಘರಿಸಿದ್ದರು. ಶಶಿಕಲಾ ಅವರು ಸಂಜೆ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದರು. ತಮ್ಮ ಪಕ್ಷದ 130 ಶಾಸಕರ ಬೆಂಬಲ ಪತ್ರವನ್ನು ಒದಗಿಸಿದ್ದಾರೆ ಎಂದು ಅವರ ಸನಿಹದ ಮೂಲಗಳು ತಿಳಿಸಿದವು. ಮಹಾರಾಷ್ಟ್ರ ರಾಜ್ಯಪಾಲರಾದ ಸಿ.ಎಚ್.ವಿದ್ಯಾಸಾಗರ್ ಅವರು ಕೇಂದ್ರದಿಂದ ಸೂಚನೆ ದೊರಕುವವರೆಗೂ ಯಾವುದೇ ನಿರ್ಧಾರ ಪ್ರಕಟಿಸದಿರಲು ತೀರ್ಮಾನಿಸಿದ್ದಾರೆ ಎನ್ನಲಾಯಿತು. ಸುಪ್ರೀಂ ಕೋರ್ಟಿನಲ್ಲಿ ಶಶಿಕಲಾ ಅವರ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಸದ್ಯಕ್ಕೆ ಸರ್ಕಾರ ರಚನೆಗೆ ಅವಕಾಶ ಮನ್ನಣೆ ಸಾಧ್ಯತೆ ಕಡಿಮೆ ಎನ್ನಲಾಯಿತು.2017: ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದ ಮೂವರು ಹಳೆಯ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆಯ ವಾರ್ಷಿಕ 30 ಜನರ ಪಟ್ಟಿಯಲ್ಲಿ ಸ್ಥಾನ ದೊರಕಿತು. ಫೆಬ್ರುವರಿ ತಿಂಗಳ ನಿಯತಕಾಲಿಕೆಯಲ್ಲಿ ಪ್ರಕಟವಾಗಲಿರುವ ಪಟ್ಟಿಯಲ್ಲಿ 2017 ನೇ ಸಾಲಿನ ವಿಶ್ವದ 30 ಪ್ರಾಯದ ಒಳಗಿನ 30 ಜನ ಸಾಧಕರ ಪಟ್ಟಿಯಲ್ಲಿ ಭಾರತದ ಮೂವರು ಐಐಟಿಗರು ಸ್ಥಾನ ಪಡೆದಿರುವುದು ವಿಶೇಷ. ಲಖನೌದ ಫರಿದ್ ಅಹಸಾನ್ (24), ಗೋರಖ್‌ಪುರದ ಭಾನು ಪ್ರತಾಪ್ ಸಿಂಗ್ (25), ಗಾಜಿಯಾಬಾದಿನ ಅಂಕುಶ್ ಸಚದೇವ್(23) ಅವರು ಸಾಮಾಜಿಕ ಜಾಲತಾಣದಲ್ಲಿ ‘ಶೇರ್‌ಚಾಟ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದರು. ವಿಶೇಷ ಎಂದರೆ ಇಂಗ್ಲೀಷ್ ಭಾಷೆ ಕಷ್ಟ ಎನಿಸಿದವರಿಗಾಗಿ ಸ್ಥಳೀಯ ಭಾಷೆಯಲ್ಲಿ ಮಾಹಿತಿ ವಿನಿಮಯಕ್ಕೆ ಆ್ಯಪ್ ಸಹಕಾರಿಯಾಗಿದೆ. ವಿಶ್ವದ ವಿವಿಧ ಕ್ಷೇತ್ರದ ಯುವ ಸಾಧಕರನ್ನು ಗುರುತಿಸುವ ಫೋರ್ಬ್ಸ್ ನಿಯತಕಾಲಿಕೆ, ಅವರನ್ನು ಜಾಗತಿಕವಾಗಿ ಪರಿಚಯಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಮೊಬೈಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈ ಮೂವರನ್ನು ಆಯ್ಕೆ ಮಾಡಲಾಯಿತು.
2017: ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿರುವ ಬೆನ್ನಲ್ಲೇ ಚೆನ್ನೈನ ಪೋಯೆಸ್ ಗಾರ್ಡನ್ನಲ್ಲಿರುವ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ
ಅವರ ಮನೆಯನ್ನು ‘ಅಮ್ಮಾ ಸ್ಮಾರಕ’ವಾಗಿ ಪರಿವರ್ತಿಸಲು ತಮಿಳುನಾಡಿನ ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಆದೇಶ ಹೊರಡಿಸಿದರು. ಜಯಲಲಿತಾ ಅವರ ನಿಧನದ ನಂತರ ಅವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಲು ಚಿಂತಿಸಲಾಗುತ್ತಿದೆ. ತಮಿಳುನಾಡಿನ ಜನರೂ ಸಹ ಇದನ್ನೇ ಬಯಸುತ್ತಿದ್ದಾರೆ ಎಂದು ಪನ್ನೀರ್ ಸೆಲ್ವಂ ತಿಳಿಸಿದ್ದರು. ಈಗ ಶಶಿಕಲಾ ಅವರೊಂದಿಗಿನ ಸಮರ ತಾರಕಕ್ಕೇರಿರುವ ಸಂದರ್ಭದಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಮೂಲಕ ಹೊಸ ರಾಜಕೀಯ ದಾಳವನ್ನು ಪನ್ನೀರ ಸೆಲ್ವಂ ಉರುಳಿಸಿದರು. ಇದೇ ಸಂದರ್ಭದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸುವ ನಿರ್ಧಾರಕ್ಕೂ ಸಹ ಅವರು ಬಂದಿದ್ದು, ಡಿಜಿಪಿ ರಾಜೇಂದ್ರನ್, ಪೊಲೀಸ್ ಆಯುಕ್ತರಾದ ಜಾರ್ಜ್ ಮತ್ತು ಪಿ. ತಮರೈಕಣ್ಣನ್ ಅವರನ್ನು ವಜಾಗೊಳಿಸುವ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಯಿತು. ಶಶಿಕಲಾ ಸಹ ತಮ್ಮ ರಾಜಕೀಯ ದಾಳವನ್ನು ಹೂಡುತ್ತಿದ್ದು, ಬೆಂಬಲಿಗ ಶಾಸಕರನ್ನು ರೆಸಾರ್ಟ್ಗಳಿಗೆ ರವಾನಿಸಿದ್ದು,
ವಿಧಾನಸಭೆಯಲ್ಲಿ
ವಿಶ್ವಸ ಮತ ಯಾಚನೆ ಸಂದರ್ಭದಲ್ಲಿ
ಬಹುಮತ ಸಾಬೀತು ಪಡಿಸಲು ಸಿದ್ಧತೆ ನಡೆಸಿದರು.
2009: ಭಾರತದ ಸ್ವಾತಂತ್ರ್ಯ ಚಳವಳಿಯ ತೀವ್ರಗಾಮಿ ಬಣದ ನೇತಾರ ಸುಭಾಶ್ ಚಂದ್ರ ಬೋಸ್ ಅವರನ್ನು ಬಂಧನದಲ್ಲಿ ಇರಿಸಿದ್ದ ಮ್ಯಾನ್ಮಾರಿನ (ಹಿಂದಿನ ಬರ್ಮಾ)ಮಾಂಡಲೆಯ ಬಂದೀಖಾನೆಯನ್ನು ನೆಲಸಮ ಮಾಡಲಾಯಿತು. ಶಿಥಿಲಾವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಬಂದೀಖಾನೆಯನ್ನು ನೆಲಸಮ ಮಾಡಲಾಯಿತು. ನೇತಾಜಿ ಅವರನ್ನು 1923ರಲ್ಲಿ ಈ ಜೈಲಿನಲ್ಲಿ ಬ್ರಿಟಿಷ್ ಸರ್ಕಾರ ಬಂಧಿಸಿ ಇಟ್ಟಿತ್ತು. ಆಗ ಅವರು ಇಲ್ಲಿಂದ ತಮ್ಮ ಅತ್ತಿಗೆ ಭೀವಾವತಿ ದೇವಿ (ಶರತ್ ಚಂದ್ರ ಬೋಸ್ ಪತ್ನಿ) ಅವರಿಗೆ ಕೆಲವು ಪತ್ರಗಳನ್ನು ಬರೆದಿದ್ದರು.
2009: ಜಗತ್ತನ್ನು ಪರಿವರ್ತಿಸಬಲ್ಲ 10ಮಂದಿ ಪ್ರಭಾವಿಗಳ ಪೈಕಿ ಭಾರತ ಮೂಲದ ಅಮೆರಿಕದ ಲೂಸಿಯಾನಾದ ಗವರ್ನರ್ ಬಾಬ್ಬಿ ಜಿಂದಾಲ್ (37) ಕೂಡ ಒಬ್ಬರು ಎಂಬುದಾಗಿ ಬ್ರಿಟನ್ನಿನ ಪ್ರಕಾಶಕ ಸಂಸ್ಥೆ 'ದಿ ನ್ಯೂ ಸ್ಟೇಟ್ಸ್‌ಮನ್ ಅಂಡ್ ಸೊಸೈಟಿ' ಹೇಳಿತು. ಈ ಪಟ್ಟಿಯಲ್ಲಿ ಭಾರತದ ರೆಜಿನಾ ಪಾಪಾ ಅವರ ಹೆಸರೂ ಸೇರಿತು.. ತಮಿಳುನಾಡಿನ ಅಲಗಪ್ಪಾ ವಿಶ್ವವಿದ್ಯಾಲಯಲ್ಲಿ 1988ರಲ್ಲಿ ಭಾರತದ ಪ್ರಥಮ ಮಹಿಳಾ ಅಧ್ಯಯನ ವಿಭಾಗವನ್ನು ತೆರೆದ ಖ್ಯಾತಿಯ ರೆಜಿನಾ ಪಾಪಾ ಅವರು ಬಾಂಗ್ಲಾದೇಶ ಮೂಲದ ಮಹಿಳೆಯರಿಗಾಗಿರುವ ಏಷ್ಯಾ ವಿಶ್ವವಿದ್ಯಾಲಯದ (ಎಯುಎಂ) ಸ್ಥಾಪನೆಯಲ್ಲಿ ತೊಡಗಿಸಿಕೊಂಡವರು. ಪಟ್ಟಿಯಲ್ಲಿರುವ ಇತರರೆಂದರೆ, ಬ್ರಿಟಿಷ್ ವಕೀಲರಾದ ಚುಕಾ ಉಮುನ್ನಾ (30), ಚೀನಾದ ಸಂಗೀತ ಸಂಯೋಜಕ ಕ್ಸಿಯಾನ್ ಝಂಗ್ (35), ಲೇಖಕ ಹಾಗೂ ಅಮೆರಿಕದ ಜ್ಞಾಪಕ ಶಕ್ತಿ ಪ್ರವೀಣ ಜೋಶುವಾ ಫೊಯೆರ್ (25), ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಥೇನ್ ಡೊನಾಲ್ಡ್, ಟೆಹರಾನ್‌ನ ಮೇಯರ್ ಮಹಮ್ಮದ್ ಬಖರ್ ಖಲೀಬಾ, ಬ್ರಿಟಿಷ್ ಟೆನಿಸ್‌ಪಟು ಲೌರಾ ರ್ಗ್ಸಾನ್, ದಕ್ಷಿಣ ಆಫ್ರಿಕಾದ ನೂತನ ವಿರೋಧ ಪಕ್ಷವಾದ ಕಾಂಗ್ರೆಸ್ ಆಫ್ ದಿ ಪೀಪಲ್‌ನ ಅಧ್ಯಕ್ಷ ಮೊಸಿಯುವಾ ಲೆಕೋಟಾ ಮತ್ತು ಪರಿಸರ ಸಂರಕ್ಷಣೆಗಾಗಿ ಕಾನೂನು ಸಮರ ಸಾರುತ್ತಿರುವ ಅಮೆರಿಕದ 'ಕೆಟ್ಲ್ ಅರ್ಥ್' ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಥೋರ್ಟನ್.
2009: ಸಹಕಾರ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಇಂತಹ ಸಂಘಗಳು ಹಾಗೂ ಬ್ಯಾಂಕ್‌ಗಳಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಧನಸಹಾಯ ಮಾಡುವುದಿಲ್ಲ ಹಾಗೂ ಸರ್ಕಾರದ ಅಧೀನಕ್ಕೆ ಇವು ಒಳಪಡುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಇವುಗಳು ಸರ್ಕಾರಿ ಸಂಸ್ಥೆಗಳಂತೆ ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುತ್ತದೆ ಎನ್ನುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಎನ್.ಕುಮಾರ್ ತಮ್ಮ ತೀರ್ಪಿನಲ್ಲಿ ಹೇಳಿದರು. ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ತಮ್ಮನ್ನು ಹೊರಗಿಡುವಂತೆ ಕೋರಿ, ಸಹಕಾರ ಸಂಘ ಹಾಗೂ ಬ್ಯಾಂಕುಗಳು ಎರಡು ವರ್ಷಗಳಿಂದ ನಡೆಸಿದ್ದ ಕಾನೂನು ಸಮರಕ್ಕೆ ಈ ಆದೇಶದಿಂದ ಈಗ ತೆರೆ ಬಿದ್ದಂತಾಯಿತು. ಬೆಂಗಳೂರಿನ ಕನ್ನಿಕಾಪರಮೇಶ್ವರಿ, ಪೂರ್ಣಪ್ರಜ್ಞ, ಭಾರತ್ ಅರ್ಥ್ ಮೂವರ್ಸ್ ಸೇರಿದಂತೆ ಅನೇಕ ಸಹಕಾರ ಸಂಘ ಹಾಗೂ ಬ್ಯಾಂಕುಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿ ಬಯಸಿದ್ದ ನಿವೃತ್ತ ಮುಖ್ಯಾಧ್ಯಾಪಕ ಬಿ.ಮುನಿಕೃಷ್ಣಪ್ಪ ಸೇರಿದಂತೆ ಕೆಲವರು, ಮಾಹಿತಿ ಹಕ್ಕು ಕಾಯ್ದೆ ಅಡಿ, ಅದನ್ನು ನೀಡುವಂತೆ ಕೋರಿದ್ದರು. ಆದರೆ ತಾವು ಈ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ, ಅದನ್ನು ನೀಡಲಾಗದು ಎಂದು ಸೊಸೈಟಿ ಹಾಗೂ ಬ್ಯಾಂಕ್ ತಿಳಿಸಿತ್ತು.
2009: ತಮ್ಮ ಅಧಿಕಾರಾವಧಿಯ ಕೊನೆ ಗಳಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿ ಹಿಂದೊಮ್ಮೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ, ಮತ್ತೆ ಕೋರ್ಟ್ ತರಾಟೆಗೆ ಒಳಗಾಯಿತು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತಿಮ್ಮಪ್ಪನಗುಡಿ ವಲಯದಲ್ಲಿ 127.48 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಬಿನಿ ಮಿನರಲ್ಸ್ ಲಿಮಿಟೆಡ್ ಕಂಪೆನಿಗೆ ನೀಡಿದ ಅನುಮತಿಯನ್ನು ರದ್ದು ಮಾಡಿ, ನ್ಯಾಯಮೂರ್ತಿ ಎನ್.ಕುಮಾರ್ ಆದೇಶಿಸಿದರು. 'ಅನರ್ಹ ಕಂಪೆನಿಯೊಂದಕ್ಕೆ ನಿಯಮಬಾಹಿರ ಹಾಗೂ ವಿವೇಚನಾರಹಿತವಾಗಿ ಗಣಿಗಾರಿಕೆಗೆ ಅಂದಿನ ಮುಖ್ಯಮಂತ್ರಿಗಳು ಶಿಫಾರಸು ಮಾಡಿದ್ದರ ಹಿಂದೆ ಬೇರೆಯೇ ಉದ್ದೇಶ ಅಡಗಿದೆ' ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದರು. ನಿಯಮದ ಪ್ರಕಾರ ಸ್ಟೀಲ್ ಉತ್ಪಾದನೆ ಮಾಡುವವರಿಗೆ ಮಾತ್ರ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಹುದು. ಆದರೆ ನಿಯಮವನ್ನು ಗಾಳಿಗೆ ತೂರಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರ, ತನ್ನ ಅಧಿಕಾರದ ಕೊನೆ ಕ್ಷಣದಲ್ಲಿ ಈ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನೀಡಿರುವುದಾಗಿ ದೂರಿ ಸನ್ವಿಕ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. ಈ ವಿವಾದಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಕರೆದಿದ್ದ ಸಂದರ್ಭದಲ್ಲಿ ಸನ್ವಿಕ್ ಕಂಪೆನಿ ಕೂಡ ಅರ್ಜಿ ಸಲ್ಲಿಸಿತ್ತು. 2007ರ ಫೆಬ್ರುವರಿ 2ರಂದು ಅರ್ಜಿದಾರರ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದರು. ಆದರೆ ಏಳು ತಿಂಗಳು ಕಳೆದರೂ ಯಾವುದೇ ಉತ್ತರ ಸರ್ಕಾರದಿಂದ ಬಂದಿರಲಿಲ್ಲ.
2008: ನಾಗಪುರ, ಮಹಾರಾಷ್ಟ್ರ (ಪಿಟಿಐ): ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಗಾಂಧಿವಾದಿ ಬಾಬಾ ಆಮ್ಟೆ ಅವರು ಚಂದ್ರಾಪುರ ಜಿಲ್ಲೆಯ ವರೊರಾದಲ್ಲಿರುವ ತಮ್ಮ `ಆನಂದವನ' ಆಶ್ರಮದಲ್ಲಿ ಈದಿನ ಬೆಳಗಿನ ಜಾವ 4.15ಕ್ಕೆ ನಿಧನರಾದರು. ರಕ್ತದ ಕ್ಯಾನ್ಸರಿನಿಂದ ಬಳಲುತ್ತಿದ್ದ ಬಾಬಾ ಅವರಿಗೆ 94 ವರ್ಷ ವಯಸ್ಸಾಗಿತ್ತು. ಮುರಳೀಧರ ದೇವಿದಾಸ್ ಬಾಬಾ ಆಮ್ಟೆ ಕುಷ್ಠರೋಗಿಗಳ ಪುನರ್ವಸತಿಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದವರು. ಗಾಂಧಿ ಮಾರ್ಗದಲ್ಲಿ ನಡೆದ ಅವರು ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಾಬಾ ಪುತ್ರ ವಿಕಾಸ್ ಆಮ್ಟೆ ವೈದ್ಯರು. ಮತ್ತೊಬ್ಬ ಮಗ ಪ್ರಕಾಶ ಕೂಡ ವೈದ್ಯರಾಗಿದ್ದು ಅವರು ವಿದರ್ಭದ ಗುಡ್ಡಗಾಡಿನ ಬುಡಕಟ್ಟು ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಮತ್ತೊಬ್ಬ ಮಗಳು ಶೀತಲ್. ಕುಷ್ಠರೋಗಿಗಳ ಪಾಲಿಗೆ ಸೂರ್ಯನಂತಿದ್ದ, ಪರಿಸರವಾದಿಗಳ ಪಾಲಿಗೆ ಟಾನಿಕ್ಕಿನಂತಿದ್ದ ಬಾಬಾ ಆಮ್ಟೆ ಭಾರತ ಕಂಡ ಬಹು ದೊಡ್ಡ ಸಮಾಜ ಸುಧಾರಕ, ಪರಿಸರವಾದಿ. 1914ರ ಡಿಸೆಂಬರ್ 26 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಇವರು ಆರಂಭದಲ್ಲಿ ವಕೀಲ ವೃತ್ತಿ ನಡೆಸಿ ನಂತರ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟರು. ಈ ಅವಧಿಯಲ್ಲಿ ಗಾಂಧೀಜಿ ಅವರ ಆಶ್ರಮ ಸೇವಾಗ್ರಾಮದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಬಾಬಾ, ಅಲ್ಲಿ ವಿನೋಭಾ ಭಾವೆ, ರವೀಂದ್ರನಾಥ ಟಾಗೂರ್ ಮೊದಲಾದವರ ಪ್ರಭಾವಕ್ಕೆ ಒಳಗಾದರು. ಮುಂದೆ ಕುಷ್ಠರೋಗಿಗಳತ್ತ ತಮ್ಮ ಗಮನ ಹರಿಸಿದ ಆಮ್ಟೆ ಕುಷ್ಠರೋಗಿಗಳ ಆರೈಕೆಗಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟರು. ಮೊದಲು ವರೋರಾ ಸುತ್ತಮುತ್ತಲಿನ ಕುಷ್ಠರೋಗಿಗಳಿಗಾಗಿ 11 ಚಿಕಿತ್ಸಾಲಯಗಳನ್ನು ತೆರದರು. ನಂತರ `ಆನಂದವನ' ಎಂಬ ಆಶ್ರಮವನ್ನು ಆರಂಭಿಸಿದರು. ಈ ಮಂದಿರದಲ್ಲಿ ಈಗ 5 ಸಾವಿರ ಕುಷ್ಠರೋಗಿಗಳು ಆರೈಕೆ ಪಡೆಯುತ್ತಿದ್ದಾರೆ. ಹಲವು ಪರಿಸರ ಚಳವಳಿಗಳನ್ನು ಹುಟ್ಟು ಹಾಕಿದ ಬಾಬಾ ಜನತೆಯ್ಲಲಿ ಪರಿಸರದ ಬಗೆಗೆ ಅರಿವು ಮೂಡಿಸುವ ಸಲುವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 1985ರಲ್ಲಿ ಬೃಹತ್ ಜಾಥಾ ಕೈಗೊಂಡರು. ನಂತರ ಅಸ್ಸಾಮಿನಿಂದ ಗುಜರಾತ್ ವರೆಗೆ 1988ರಲ್ಲಿ ಇಂತಹುದೇ ಜಾಥಾ ನಡೆಸಿದರು. ನರ್ಮದಾ ನದಿಯ ಸರ್ದಾರ್ ಸರೋವರ ಜಲಾಶಯದಂತಹ ಬೃಹತ್ ಅಣೆಕಟ್ಟೆಗಳ ನಿರ್ಮಾಣಕ್ಕೆ ಕಡು ವಿರೋಧ ವ್ಯಕ್ತಪಡಿಸಿದವರಲ್ಲಿ ಬಾಬಾ ಕೂಡ ಒಬ್ಬರು. ಇಂತಹ ಮಹಾನ್ ಚೇತನಕ್ಕೆ ಸಂದಿರುವ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಪದ್ಮಶ್ರೀ (1971), ಮ್ಯಾಗ್ಸೆಸೆ ಪ್ರಶಸ್ತಿ (1985), ಪದ್ಮವಿಭೂಷಣ (1986) ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ಗಾಂಧಿ ಶಾಂತಿ ಪ್ರಶಸ್ತಿ (2000) ಅವರಿಗೆ ಸಂದ ಕೆಲವು ಪ್ರಮುಖ ಗೌರವಗಳು.
2008: ದೇಶದಾದ್ಯಂತ ಸಂಚಲನವುಂಟು ಮಾಡಿದ ಅಂತಾರಾಷ್ಟ್ರೀಯ ಮಟ್ಟದ ಬಹುಕೋಟಿ ಮೊತ್ತದ ಕಿಡ್ನಿ ಕಸಿ ಹಗರಣದ ಪ್ರಮುಖ ಆರೋಪಿ ಡಾ.ಅಮಿತ್ ಕುಮಾರನನ್ನು ನೇಪಾಳದಿಂದ ಭಾರತಕ್ಕೆ ಭಾರಿ ಭದ್ರತೆಯಲ್ಲಿ ಕರೆತರಲಾಯಿತು. 40ವರ್ಷದ ಈ ಆರೋಪಿಯನ್ನು ಏರ್ ಇಂಡಿಯಾ ವಿಮಾನದಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಸಂಜೆ ಕರೆತಂದು ನಂತರ ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು. ತಲೆ ತಪ್ಪಿಸಿಕೊಂಡಿದ್ದ ಸಂತೋಷ್ ರಾವುತ್ ಯಾನೆ ಡಾ.ಅಮಿತ್ ಕುಮಾರನನ್ನು ನೇಪಾಳದ ಚಿತ್ವಾನ್ ಜಿಲ್ಲೆಯ ವೈಲ್ಡ್ ಲೈಫ್ ಕ್ಯಾಂಪ್ ಎಂಬ ರೆಸಾರ್ಟಿನಲ್ಲಿ ಆತನ ಸಹಚರ ಮನೀಷ್ ಸಿಂಗ್ ಜೊತೆಗೆ ಹಿಂದಿನ ದಿನ ಸಂಜೆ 5 ಗಂಟೆಗೆ ಬಂಧಿಸಲಾಗಿತ್ತು. ಜ.28ರಿಂದ ಈತ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ. ಮೂಲಗಳ ಪ್ರಕಾರ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಇವರ ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿ ಪರಾರಿಯಾದ ಬಂಧಿತರಿಂದ 1.45 ಲಕ್ಷ ಯುರೊಗಳು 18,900 ಅಮೆರಿಕನ್ ಡಾಲರುಗಳು ಹಾಗೂ 9.36 ಲಕ್ಷ ಮೊತ್ತದ ಡಿಮಾಂಡ್ ಡ್ರಾಫ್ಟ್ ವಶಪಡಿಸಿಕೊಳ್ಳಲಾಯಿತು.
2008: ದೃಶ್ಯ, ಶ್ರವ್ಯ, ಜನಪದ ಹಾಗೂ ಪ್ರದರ್ಶಕ ಕಲೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಂಜಯನಗರದ ಕೆ.ಇ.ಬಿ. ಬಡಾವಣೆಯಲ್ಲಿ ಸುಸಜ್ಜಿತ `ಚಂದ್ರಪ್ರಿಯ' ರಂಗಮಂದಿರಕ್ಕೆ ಚಾಲನೆ ನೀಡಲಾಯಿತು. 200 ಆಸನಗಳ ವ್ಯವಸ್ಥೆ ಹೊಂದಿರುವ ಈ ರಂಗಮಂದಿರದ ಕಟ್ಟಡವನ್ನು ಬೆಂಗಳೂರಿನ ಶ್ರೀಭವಾನಿ ಟ್ರಸ್ಟ್ ನೀಡಿದ್ದು ಧ್ವನಿ, ಬೆಳಕಿನ ಉಪಕರಣಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿತು. ಮೈಸೂರಿನ ಅವಧೂತ ದತ್ತಪೀಠದ ದತ್ತ ವಿಜಯಾನಂದ ಸ್ವಾಮೀಜಿ ರಂಗಮಂದಿರ ಉದ್ಘಾಟಿಸಿದರು. ಕಲಾಶಾಲೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಭಾನುವಾರದ ಅಭಿನಯ ತರಗತಿಯನ್ನು ಚಲನಚಿತ್ರ ಕಲಾವಿದ ಹಾಗೂ ಚಿತ್ರನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಉದ್ಘಾಟಿಸಿದರು. ನಂತರ ನಡೆದ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಗೆ `ರಂಗಾಭರಣ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
2007: ಹಿಂದಿನ ದಿನವಷ್ಟೇ ಎಫ್ -16 ವಿಮಾನ ಹಾರಿಸಿ ದಾಖಲೆ ಮೆರೆದಿದ್ದ ಉದ್ಯಮಿ ರತನ್ ಟಾಟಾ ಅವರು ಈದಿನ ಅಮೆರಿಕ ವಾಯುಪಡೆಯ `ಬೋಯಿಂಗ್ ಎಫ್ -18 ಸೂಪರ್ ಹಾರ್ನೆಟ್ ಚಾಲನೆ ಮಾಡಿ, 10,000 ಅಡಿಗಳಿಗೂ ಎತ್ತರದಲ್ಲಿ 1300 ಕಿ.ಮೀ. ವೇಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದರು. ಎರಡು ಎಂಜಿನ್ ಹೊಂದಿರುವ ಎಫ್ 18 ವಿಮಾನ ಬಹುಕಾರ್ಯ ನಿರ್ವಹಿಸಬಲ್ಲ ಜೆಟ್ ಫೈಟರ್. ಅಮೆರಿಕ ವಾಯುಪಡೆ ಯೋಧರಿಗೆ ತರಬೇತಿ ನೀಡಲು ಇದನ್ನು ಬಳಸಲಾಗುತ್ತದೆ.
2007: ವೆಸ್ಟ್ ಇಂಡೀಸ್ ಕ್ರಿಕೆಟಿಗ ಮಾರ್ಲೋನ್ ಸ್ಯಾಮ್ಯುಯೆಲ್ ಅವರು ಬುಕ್ಕಿಯೊಂದಿಗೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಬಗ್ಗೆ ಪೊಲೀಸರು ನೀಡಿರುವ ವರದಿ ಸಂಬಂಧ ತನಿಖೆ ನಡೆಸಲು ನಾಗಪುರಕ್ಕೆ ವಿಶೇಷ ತಂಡವೊಂದನ್ನು ಕಳುಹಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತೀರ್ಮಾನಿಸಿತು.
2007: ದೇಶೀಯ ಕ್ರೀಡಾಪಟುಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ 33ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಗುವಾಹಟಿಯಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು. ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ರಾಷ್ಟ್ರೀಯ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು.
2007: ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಮೈಕೆಲ್ ಲೋಪೆಜ್ ಅಲೆಜ್ರಿಯಾ ಅವರು ಮೂರನೇ ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಮೂರು ಬಾರಿಯ ಬಾಹ್ಯಾಕಾಶ ನಡಿಗೆಗಳಲ್ಲಿ ಕೊನೆಯಾದ ಈ ನಡಿಗೆಯಲ್ಲಿ 6.40 ನಿಮಿಷ ಕಾಲ ಬಾಹ್ಯಾಕಾಶ ಸುತ್ತಾಟದ ಬಳಿಕ ಅವರು ಬಾಹ್ಯಾಕಾಶ ನೌಕೆಗೆ ವಾಪಸಾದರು. ಈ ನಡಿಗೆಯೊಂದಿಗೆ ಅತಿ ಹೆಚ್ಚು ಸಮಯ ಬಾಹ್ಯಾಕಾಶ ನಡೆಗೆ ಮಾಡಿದ ಅಮೆರಿಕ ಗಗನಯಾತ್ರಿ (50 ಗಂಟೆ 32 ನಿಮಿಷ) ಎಂಬ ಹೆಗ್ಗಳಿಕೆಗೆ ಲೋಪೆಜ್ ಪಾತ್ರರಾದರು. ರಷ್ಯದ ಅನಾತೊಲಿ ಸೊಲೊವ್ಯೂವ್ ಅವರ ವಿಶ್ವದಾಖಲೆ ಮುರಿಯಲು ಲೋಪೆಜ್ ಇನ್ನೂ 24 ಗಂಟೆ ಕಾಲ ಬಾಹ್ಯಾಕಾಶದಲ್ಲಿ ನಡೆದಾಡಬೇಕು. ಮಹಿಳಾ ಗಗನಯಾತ್ರಿಗಳ ಪೈಕಿ ಸುನೀತಾ ವಿಲಿಯಮ್ಸ್ ಅವರು ಈಗಾಗಲೇ ಬಾಹ್ಯಾಕಾಶ ನಡಿಗೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
2007: ಮೋಹಕ ನಟಿ ಮರ್ಲಿನ್ ಮನ್ರೋಳಂತೆಯೇ ಆಗಬೇಕೆಂದು ಬಯಸಿದ್ದ ಹಾಲಿವುಡ್ ನಟಿ ಅನ್ನಾ ನಿಕೋಲೆ ಸ್ಮಿತ್ 39ನೆಯ ವಯಸ್ಸಿನಲ್ಲಿ ಫ್ಲೋರಿಡಾದ ಹೋಟೆಲ್ ಒಂದರಲ್ಲಿ ಮೃತರಾದರು. ನಟನೆಯಲ್ಲಿ ಮರ್ಲಿನ್ ಮನ್ರೋಗೆ ಸರಿಗಟ್ಟಲಾಗದಿದ್ದರೂ ಸಾವಿನಲ್ಲಿ ಅಕೆಗೆ ಸರಿಸಮ ಎನಿಸಿಕೊಂಡರು.
2007: ವಿಶ್ವಸಂಸ್ಥೆಯ ಅಧೀನ ಮಹಾ ಕಾರ್ಯದರ್ಶಿ ಶಶಿ ತರೂರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.. ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಏರಲು ವಿಫಲ ಸ್ಪರ್ಧೆ ನಡೆಸಿದ್ದರು.
2007: ಕಾವೇರಿ ನ್ಯಾಯಮಂಡಳಿ ತೀರ್ಪಿಗೆ ಸಂಬಂಧಿಸಿದಂತೆ ಸರ್ವಪಕ್ಷ ಸಭಯಲ್ಲಿ ವ್ಯಕ್ತವಾಗುವ ಅಭಿಪ್ರಾಯಕ್ಕೆ ಬದ್ಧವಾಗಲು ಕರ್ನಾಟಕ ರಾಜ್ಯ ಸಚಿವ ಸಂಪುಟ ನಿರ್ಧರಿಸಿತು.
2006: ಹಿಂದಿ ಚಿತ್ರರಂಗದ ಹಿರಿಯ ನಟಿ ನಾದಿರಾ (74) ಮುಂಬೈಯಲ್ಲಿ ನಿಧನರಾದರು. 1950ರಲ್ಲಿ ಮೆಹಬೂಬ್ ಖಾನ್ ನಿರ್ಮಿಸಿದ ಆನ್ ಚಿತ್ರದೊಂದಿಗೆ ಬಾಲಿವುಡ್ಡಿಗೆ ಕಾಲಿಟ್ಟ ನಾದಿರಾ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಶ್ರೀ 420 ಚಿತ್ರದ ಮುಡ್ ಮುಡ್ ಕೆ ನ ದೇಖ್ ಹಾಡಿನಿಂದ ಅತ್ಯಂತ ಜನಪ್ರಿಯರಾದರು. ಮೂಲತಃ ಬಾಗ್ದಾದಿನ ಯಹೂದಿಯಾದ ನಾದಿರಾ ಅವರ ಮೂಲ ಹೆಸರು ಫ್ಲಾರೆನ್ಸ್ ಸಾಲ್ ಎಜಿಲ್. ಚಿಕ್ಕಂದಿನಲ್ಲಿ ಮುದ್ದಿನಿಂದ ಪರ್ಹಾತ್ ಎಂದು ಕರೆಸಿಕೊಳ್ಳುತ್ತಿದ್ದ ಅವರು ಅವಿವಾಹಿತರು. ಆಕೆಯ ಒಬ್ಬ ಸಹೋದರ ಇಸ್ರೇಲಿನಲ್ಲಿ ಇದ್ದಾರೆ.
2006: ಬ್ಯಾಟರಿ ಚಾಲಿತ ಮೋಟಾರಿನಿಂದ ಕೆಲಸ ಮಾಡುವ, ಪೆಟ್ರೋಲ್ ಬೇಡದ ಯೊಬೈಕ್ಸ್ ಹೆಸರಿನ ಪರಿಸರ ಸ್ನೇಹಿ ಬೈಕಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಬ್ಯಾಟರಿಯಿಂದ ಓಡುವ ಈ ಬೈಕ್ ಮಾದರಿಯಲ್ಲೇ ತ್ರಿಚಕ್ರ ಹಾಗೂ ಹೈಬ್ರಿಡ್ ಬಸ್ಸುಗಳನ್ನೂ ಶೀಘ್ರದಲ್ಲೇ ರಸ್ತೆಗೆ ಬಿಡುವುದಾಗಿ ಗುಜರಾತಿನ ಎಲೆಕ್ಟ್ರೋಥರ್ಮ್ (ಇಂಡಿಯಾ) ಲಿ. ಅಧ್ಯಕ್ಷ ಆಡಳಿತ ನಿರ್ದೇಶಕ ಮುಖೇಶ ಭಂಡಾರಿ ಪ್ರಕಟಿಸಿದರು. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 40ರಿಂದ 70 ಕಿ.ಮೀ. ಓಡಬಲ್ಲ ಈ ಬೈಕ್ ಓಡಿಸಲು ಪೆಟ್ರೋಲ್ ಬೇಕಿಲ್ಲ. ಪರವಾನಗಿ ಅಥವಾ ನೋಂದಣಿ ರಗಳೆ ಇಲ್ಲ.
1999: ಖ್ಯಾತ ಬ್ರಿಟಿಷ್ ಕಾದಂಬರಿಕಾರ, ತತ್ವಜ್ಞಾನಿ ಡೇಮ್ ಜೀನ್ ಐರಿಸ್ ಮುರ್ಡೊಕ್ (1919-1999) ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.
1995: ಅಮೆರಿಕನ್ ಸೆನೆಟರ್ ಜೇಮ್ಸ್ ವಿಲಿಯಂ ಫುಲ್ ಬ್ರೈಟ್ ನಿಧನರಾದರು. ಇವರು `ಫುಲ್ ಬ್ರೈಟ್ ಸ್ಕಾಲರ್ ಶಿಪ್' ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವಾಂಸರ ವಿನಿಮಯ ಕಾರ್ಯಕ್ರಮವನ್ನು ಆರಂಬಿಸಿದ್ದರು.
1969: ಕಲಾವಿದ ರಜನಿ ರಘುನಾಥ ಕುಲಕರ್ಣಿ ಜನನ.
1953: ಕಲಾವಿದ ಗೀತಾ ಸದನಂದ ಜವಡೇಕರ ಜನನ.
1940: ಜೋಸೆಫ್ ಮೈಕೆಲ್ ಕೊಯುಟ್ಟೀ ಹುಟ್ಟಿದರು. ದಕ್ಷಿಣ ಆಫ್ರಿಕಾದ ಬರಹಗಾರರಾದ ಇವರು 1983ರಲ್ಲಿ ಬೂಕರ್ ಪ್ರಶಸ್ತಿ ಗೆದ್ದಿದ್ದರು.
1932: ಕಲಾವಿದ ಶ್ರೀನಿವಾಸರಾವ್ ಜನನ.
1931: ಭಾರತದ ರಾಜಧಾನಿಯಾಗಿ ನವದೆಹಲಿಯನ್ನು ಈದಿನ ಉದ್ಘಾಟಿಸಲಾಯಿತು. ಬ್ರಿಟಿಷರು ನವದೆಹಲಿಯನ್ನು ದೇಶದ ನೂತನ ರಾಜಧಾನಿಯನ್ನಾಗಿ ಮಾಡಿಕೊಂಡರು. 1912ರಲ್ಲಿ ದೇಶದ ರಾಜಧಾನಿಯನ್ನು ದೆಹಲಿಯಿಂದ ಕಲ್ಕತ್ತಾಕ್ಕೆ (ಈಗಿನ ಕೋಲ್ಕತ) ವರ್ಗಾಯಿಸಲಾಗಿತ್ತು.
1925: ಕಲಾವಿದ ನರಸಿಂಹಮೂರ್ತಿ ದಾಸ್ ಸಿ.ವಿ. ಜನನ.
1923: ನಾರ್ಮನ್ ಎಡ್ವರ್ಡ್ ಶಮ್ ವೇ ಹುಟ್ಟಿದ ದಿನ. ಅಮೆರಿಕನ್ ಸರ್ಜನ್ ಆದ ಇವರು 1968ರಲ್ಲಿ ಅಮೆರಿಕದಲ್ಲಿ ಮೊತ್ತ ಮೊದಲ ಬಾರಿಗೆ ವಯಸ್ಕ ವ್ಯಕ್ತಿಗೆ ಹೃದಯ ಕಸಿ ಮಾಡಿದವರು.
1919: ಕಲಾವಿದ ಕೆ.ಎಸ್. ಛಾಯಾಪತಿ ಜನನ.
1914: ವೃತ್ತಿ ರಂಗಭೂಮಿ, ನಾಟಕ ಹಾಗೂ ಸಿನಿಮಾ ರಂಗದಲ್ಲಿ ಸಾಹಿತಿ, ನಟ, ನಿರ್ದೇಶಕರಾಗಿ ದುಡಿದು ಜನಪ್ರಿಯತೆ ಗಳಿಸಿದ ಹುಣಸೂರು ಕೃಷ್ಣಮೂರ್ತಿ (9-2-1914ರಿಂದ 13-1-1989) ರಾಜಾರಾಯರು- ಪದ್ಮಾವತಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ನಾಟಕ ಕಂಪೆನಿಗಳಲ್ಲಿ ನಟನಾಗಿ, ಸಾಹಿತಿಯಾಗಿ ಸೇವೆ ಸಲ್ಲಿಸಿದ ಅವರು ನಂತರ ಚಿತ್ರರಂಗಕ್ಕೆ ಇಳಿದು ಹಲವಾರು ಚಿತ್ರಗಳ ತಯಾರಿಕೆಯಲ್ಲಿ ಎಲ್ಲ ಪ್ರಕಾರಗಳಲ್ಲೂ ದುಡಿದರು. ಈ ಅನುಭವದ ಆಧಾರದಲ್ಲಿ ಹಲವಾರು ಚಿತ್ರಗಳ ನಿರ್ದೇಶನದ ಹೊಣೆಯನ್ನೂ ಹೊತ್ತರು. ಕೃಷ್ಣಗಾರುಡಿ ಇವರ ಪ್ರಥಮ ನಿರ್ದೇಶನದ ಚಿತ್ರ. ನಂತರ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ, 400ಕ್ಕೂ ಹೆಚ್ಚು ಅರ್ಥಗರ್ಭಿತ ಗೀತೆಗಳನ್ನು ರಚಿಸಿದ ಹುಣಸೂರು, ರಾಜ್ಯ ಸರ್ಕಾರ ಸ್ಥಾಪಿಸಿದ `ಪುಟ್ಟಣ್ಣ ಕಣಗಾಲ್' ಪ್ರಶಸ್ತಿ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.
1900: ಅಮೆರಿಕದ ಡ್ವೈಟ್ ಡೇವಿಸ್ ಅವರು ಟೆನಿಸ್ ಆಟಕ್ಕಾಗಿ `ಡೇವಿಸ್ ಕಪ್'ನ್ನು ಸ್ಥಾಪಿಸಿದರು. ಇದು ಅಧಿಕೃತವಾಗಿ `ಇಂಟರ್ ನ್ಯಾಷನಲ್ ಲಾನ್ ಟೆನಿಸ್ ಚಾಲೆಂಜ್ ಟ್ರೋಫಿ' ಎಂದೇ ಖ್ಯಾತಿ ಪಡೆದಿದೆ. ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ತಂಡಗಳ ನಡುವಣ ಸ್ಪರ್ಧೆಗಾಗಿ ಈ ಟ್ರೋಫಿಯನ್ನು ನೀಡಲಾಯಿತು. ಪಂದ್ಯದಲ್ಲಿ ಡೇವಿಸ್ ಸ್ವತಃ ವಿಜೇತ ಅಮೆರಿಕನ್ ತಂಡಗಳ ಪರವಾಗಿ ಆಡಿದ್ದರು. 1912ರಿಂದ ಡೇವಿಸ್ ಕಪ್ ಟೂರ್ನಮೆಂಟ್ ಇಂಟರ್ ನ್ಯಾಷನಲ್ ಲಾನ್ ಟೆನಿಸ್ ಫೆಡರೇಷನ್ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಈಗ ನಿಜವಾದ ಅಂತಾರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ.
1846: ವಿಲ್ಹೆಲ್ಮ್ ಮೇಬ್ಯಾಕ್ (1846-1929) ಹುಟ್ಟಿದ ದಿನ. ಜರ್ಮನ್ ಎಂಜಿನಿಯರ್ ಆದ ಈತ ಮೊತ್ತ ಮೊದಲ ಮರ್ಸಿಡಸ್ ಆಟೋಮೊಬೈಲುಗಳ ವಿನ್ಯಾಸಕಾರನಾಗಿದ್ದ.
1773: ವಿಲಿಯಂ ಹೆನ್ರಿ ಹ್ಯಾರಿಸನ್ (1773-1841) ಹುಟ್ಟಿದ. ಅಮೆರಿಕದ ಒಂಬತ್ತನೇ ಅಧ್ಯಕ್ಷನಾದ ಈತ ಒಂದು ತಿಂಗಳ ಬಳಿಕ ಮೃತನಾಗಿ ಹುದ್ದೆಯಲ್ಲಿದ್ದಾಗಲೇ ಮೃತನಾದ ಮೊದಲ ಅಧ್ಯಕ್ಷ ಎನಿಸಿಕೊಂಡ.
1404: ಬೈಝಾಂಟೈನಿನ ಕೊನೆಯ ಚಕ್ರವರ್ತೆ 11ನೇ ಕಾನ್ ಸ್ಟಾಂಟಿನ್ (1404-1453) ಹುಟ್ಟಿದ. ಕಾನ್ ಸ್ಟಾಂಟಿನೋಪಲ್ ರಕ್ಷಣೆಗಾಗಿ ಒಟ್ಟೋಮಾನ್ ಟರ್ಕರ ವಿರುದ್ಧ ನಡೆದ ಅಂತಿಮ ಹೋರಾಟದಲ್ಲಿ ಈತ ಅಸು ನೀಗಿದ.
No comments:
Post a Comment