ನಾನು ಮೆಚ್ಚಿದ ವಾಟ್ಸಪ್

Tuesday, February 12, 2019

ಇಂದಿನ ಇತಿಹಾಸ History Today ಫೆಬ್ರುವರಿ 12

ಇಂದಿನ ಇತಿಹಾಸ History Today ಫೆಬ್ರುವರಿ 12
2019: ನವದೆಹಲಿ: ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಆರೋಪಗಳ ವಿರುದ್ಧ ಕೆಂಡಾಮಂಡಲ ಕೋಪ ಪ್ರದರ್ಶಿಸಿದ  ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ’ಮುಳುಗುತ್ತಿರುವ ವಂಶ ಸಾಮ್ರಾಜ್ಯ ಸಂರಕ್ಷಣೆಗೆ ಇನ್ನಷ್ಟು ಸುಳ್ಳುಗಳು?’ ಎಂಬುದಾಗಿ ಪ್ರಶ್ನಿಸಿದರು. ಇದಕ್ಕೆ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಅವರು ಮೋದಿ ಅವರು ರಫೇಲ್ ವ್ಯವಹಾರದಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ’ಮಧ್ಯವರ್ತಿ’ಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು. ಫ್ರಾನ್ಸಿನಿಂದ ೩೬ ರಫೇಲ್ ಯುದ್ಧ ವಿಮಾನ ಖರೀದಿಯನ್ನು ಪ್ರಧಾನಿಯವರು ಪ್ರಕಟಿಸುವ ಮುನ್ನ ಅಂಬಾನಿಯವರು ಫ್ರೆಂಚ್ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದ ಬಳಿಕ ರಾಹುಲ್ ಈ ಆಪಾದನೆ ಮಾಡಿದ್ದರು.  ’ಮೋದಿಯವರು ಮಾತ್ರವೇ ಅಂಬಾನಿ ಅವರಿಗೆ ವ್ಯವಹಾರದ ಬಗ್ಗೆ ಮುಂಚಿತವಾಗಿ ತಿಳಿಸಿರಬಹುದು. ಅವರು ಪ್ರಮಾಣ ಸ್ವೀಕರಿಸಿದ್ದಾರೆ. ಅವರು ರಾಷ್ಟ್ರೀಯ ಭದ್ರತೆ ಜೊತೆ ರಾಜಿ ಮಾಡಿದ್ದಾರೆ. ಗೂಢಚಾರಿ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರು ರಕ್ಷಣಾ ಮಾಹಿತಿಯನ್ನು ಬೇರೆಯವರಿಗೆ ನೀಡಿದ್ದಾರೆ’ ಎಂದು ರಾಹುಲ್ ದೂರಿದ್ದರು.  ೨೦೧೫ರಲ್ಲಿ ಮೋದಿಯವರ ಫ್ರಾನ್ಸ್ ಭೇಟಿ ಕಾಲದಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಕೆಲವು ದಿನ ಮುನ್ನ ಅಂಬಾನಿಯವರು ಫೆಂಚ್ ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದರು ಎಂದು ಏರ್ ಬಸ್ ಎಕ್ಸಿಕ್ಯೂಟಿವ್ ಒಬ್ಬರು ಫ್ರೆಂಚ್ ಅಧಿಕಾರಿಯೊಬ್ಬರಿಗೆ ಬರೆದ ಮಿಂಚಂಚೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಹೇಳಿದ್ದರು. ಭಾರತ ಮತ್ತು ಫ್ರಾನ್ಸ್  ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕುವುದಕ್ಕೆ ಮೊದಲೇ ಅಂಬಾನಿಯವರಿಗೆ ಈ ವಿಚಾರ ಗೊತ್ತಿತ್ತು ಎಂದು ಪ್ರತಿಪಾದಿಸಲು ಮಿಂಚಂಚೆಯನ್ನು ಉಲ್ಲೇಖಿಸಿದ ರಾಹುಲ್, ’ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಇದು ರಾಷ್ಟ್ರದ್ರೋಹವಾಗುವ ಕಾರಣ ಮೋದಿಯವರನ್ನು ಜೈಲಿಗೆ ಹಾಕಬೇಕು’ ಎಂದು ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷರು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಸಿಎಜಿ (ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್) ವರದಿಯನ್ನೂ ತಿರಸ್ಕರಿಸಿ ಅದನ್ನು ’ಚೌಕೀದಾರ್ ಆಡಿಟರ್ ಜನರಲ್’ ವರದಿ ಎಂಬುದಾಗಿ ಹೀಗಳೆದಿದ್ದರು.  ೨೦೧೪-೧೫ರ ಸಾಲಿನ ಎರಡು ವರ್ಷಗಳ ತಮ್ಮ ಹಣಕಾಸು ಸಚಿವಾಲಯz ಅವಧಿಯಲ್ಲಿ ಸಿಎಜಿ ರಾಜೀವ್ ಮೆಹರ್ಷಿ ಅವರು ಎಂದೂ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಕಡತ ಅಥವಾ ದಾಖಲೆಯನ್ನು ನೋಡಿಲ್ಲ ಎಂದು ಹೇಳುವ ಮೂಲಕ ಜೇಟ್ಲಿ ಅವರು ತಮ್ಮ ಫೇಸ್ ಬುಕ್ ಪೋಸ್ಟಿನಲ್ಲಿ ಸಿಎಜಿಯವರು ಹಿತಾಸಕ್ತಿಗಳ ಘರ್ಷಣೆ ನಡೆಸಿದ್ದಾರೆ ಎಂಬ ಆಪಾದನೆಗಳನ್ನು ತಿರಸ್ಕರಿಸಿದರು. ’ಮುಳುಗುತ್ತಿರುವ ವಂಶ ಸಾಮ್ರಾಜ್ಯದ ಸಂರಕ್ಷಣೆಗಾಗಿ ಇನ್ನೆಷ್ಟು ಸುಳ್ಳುಗಳನ್ನು ಹೊರಬಿಡಲಾಗುತ್ತದೆ? ಭಾರತ, ನಿಶ್ಚಿತವಾಗಿ ಉತ್ತಮ ವಿಚಾರಗಳಿಗೆ ಅರ್ಹವಾಗಿದೆ’ ಎಂದು ಜೇಟ್ಲಿ ’ಮುಳುಗುತ್ತಿರುವ ವಂಶ ಸಾಮ್ರಾಜ್ಯದ ಸಂರಕ್ಷಣೆಗೆ ಇನ್ನೆಷ್ಟು ಸುಳ್ಳುಗಳ ಅಗತ್ಯವಿದೆ?’ ಶೀರ್ಷಿಕೆಯ ಫೇಸ್ ಬುಕ್ ಪೋಸ್ಟಿನಲ್ಲಿ  ಪ್ರಶ್ನಿಸಿದರು.  ’ಸುಳ್ಳಿನಿಂದ ಹರಡುವ ಸೋಂಕಿನ ಪರಿಣಾಮ ಸಾಮಾನ್ಯವಾಗಿ ವ್ಯಾಪಕವಾಗಿರುತ್ತದೆ. ಕಾಂಗ್ರೆಸ್ ಹರಡುವ ಈ ಸುಳ್ಳುಗಳನ್ನು ’ಮಹಾಜೂಟ್ ಬಂಧನ್’ ನ (ಮಹಾಸುಳ್ಳು ಮೈತ್ರಿ) ಸಹೋದ್ಯೋಗಿಗಳು ಇನ್ನಷ್ಟು ವ್ಯಾಪಕವಾಗಿ ಹರಡುತ್ತಾರೆ’ ಎಂದು ಜೇಟ್ಲಿ ಹೇಳಿದರು. ರಫೇಲ್ ವ್ಯವಹಾರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ರಕ್ಷಿಸಲಾಗಿದೆ. ಆದರೆ ಪ್ರತಿದಿನವೂ ಹೊಸ ಹೊಸ ಸುಳ್ಳುಗಳನ್ನು ಸೃಷ್ಟಿಸಲಾಗುತ್ತದೆ. ಈ ಸುಳ್ಳುಗಳಲ್ಲಿ ಇತ್ತೀಚಿನದು ಹಾಲಿ ಸಿಎಜಿ ಮತ್ತು ಅವರ ರಫೇಲ್ ಪ್ರಕ್ರಿಯೆ ರೂಪಿಸುವ ನಿರ್ಧಾರದಲ್ಲಿ ಅವರ ಪಾಲ್ಗೊಳ್ಳುವಿಕೆ’ ಎಂದು ಜೇಟ್ಲಿ ನುಡಿದರು. ೨೦೧೪-೧೫ರಲ್ಲಿ, ಹಾಲಿ ಸಿಎಜಿ ಮೆಹರ್ಷಿ ಅವರು ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಕಾರ್‍ಯದರ್ಶಿಯಾಗಿದ್ದರು ಮತ್ತು ಹಿರಿಯ ಅಧಿಕಾರಿಯಾದ ನೆಲೆಯಲ್ಲಿ ಅವರನ್ನು ಹಣಕಾಸು ಕಾರ್‍ಯದರ್ಶಿಯಾಗಿ ನಿಯೋಜಿಸಲಾಗಿತ್ತು. ’ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ, ರಕ್ಷಣಾ ಖರೀದಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಕುರಿತ ಯಾವುದೇ ಕಡತ ಅಥವಾ ಪತ್ರ ಎಂದೂ, ಯಾವುದೇ ರೀತಿಯಲ್ಲೂ, ನೇರವಾಗಿ ಅಥವಾ ಪರೋಕ್ಷವಾಗಿ ಅವರಿಗೆ ತಲುಪಿರಲೇ ಇಲ್ಲ ಎಂಬುದನ್ನು ಯಾವುದೇ ದ್ವಂದ್ವದ ಅಂಜಿಕೆಯೂ ಇಲ್ಲದೆ ನಾನು ಹೇಳಬಲ್ಲೆ. ವಿವಿಧ ಸರ್ಕಾರದ ವಿವಿಧ ಇಲಾಖೆಗಳ ಖರೀದಿ ವೆಚ್ಚಗಳನ್ನು ಕಾರ್‍ಯದಶಿ (ವೆಚ್ಚ) ಅನುಮೋದಿಸುವ ಅಗತ್ಯವಿರುತ್ತದೆ’ ಎಂದು ಜೇಟ್ಲಿ ನುಡಿದರು. ಇಲ್ಲದೇ ಇದ್ದ ಹಿತಾಸಕ್ತಿ ಘರ್ಷಣೆಯನ್ನು ಸಿಎಜಿ ಅವರಿಗೆ ಸಂಬಂಧಿಸಿದಂತೆ ಏಕೆ ಹುಟ್ಟು ಹಾಕಲಾಗುತ್ತಿದೆ ಎಂಬುದಾಗಿ ಜೇಟ್ಲಿ ಪ್ರಶ್ನಿಸಿದರು. ’ತನ್ನ ೫೦೦ ಕೋಟಿ ವರ್ಸಸ್ ೧೬೦೦ ಕೋಟಿ ಕಿಂಡರ್‌ಗಾರ್ಟನ್ ವಾದವು ಒಂದು ಕಟ್ಟುಕಥೆ ಎಂಬುದು ವಂಶ ಸಾಮ್ರಾಜ್ಯಕ್ಕೆ ಗೊತ್ತಿದೆ. ವಾಸ್ತವಾಂಶವು ಇದನ್ನು ಸಮರ್ಥಿಸುವುದಿಲ್ಲವಾದ್ದರಿಂದ ಯಾರೊಬ್ಬರೂ ಇದನ್ನು ನಂಬುವುದಿಲ್ಲ. ಸಿಎಜಿ ವರದಿಯಲ್ಲಿ ಏನಿದೆ ಎಂಬುದು ಬಹಿರಂಗಗೊಳ್ಳುವುದಕ್ಕೂ ಮೊದಲೇ ಸಿಎಜಿ ಸಂಸ್ಥೆಯ ವಿರುದ್ಧ ’ಪೇಶ್‌ಬಂದಿ ದಾಳಿ’ ನಡೆಸಲಾಗಿದೆ’ ಎಂದು ಜೇಟ್ಲಿ ಹೇಳಿದರು. ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸದೆಯೇ ’ವಂಶ ಸಾಮ್ರಾಜ್ಯ’ ಪದವನ್ನು ಬಳಸಿದ ಜೇಟ್ಲಿ, ’ಅವರ ಗೆಳೆಯರು ಈ ಹಿಂದೆ ರಫೇಲ್ ಕುರಿತ ಅವರ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದಾಗ ಸುಪ್ರೀಂಕೋರ್ಟಿನ ಮೇಲೆ ಕೂಡಾ ದಾಳಿ ನಡೆಸಿದ್ದರು ಎಂದು ಹೇಳಿದರು. ದರಕ್ಕೆ ಸಂಬಂಧಿಸಿದ ಕಾಂಗ್ರೆಸ್ ಪಕ್ಷದ ವಾದ ವಸ್ತುಶಃ ತಪ್ಪು ಮತ್ತು ರಕ್ಷಣಾ ಸ್ವಾಧೀನ ಮಂಡಳಿ ಇಲ್ಲ, ಸಿಸಿಎಸ್ ಇಲ್ಲ, ಕಾಂಟ್ರಾಕ್ಟ್ ಸಂಧಾನ ಸಮಿತಿ ಇಲ್ಲ ಇತ್ಯಾದಿ ವಿಧಿವಿಧಾನ ಕುರಿತ ವಾದ ಅಪ್ಪಟ ಸುಳ್ಳು ಎಂದು ಜೇಟ್ಲಿ ಪ್ರತಿಪಾದಿಸಿದರು.  ಖಾಸಗಿ ಕಂಪೆನಿಯೊಂದರ ಪರವಾಗಿ ೩೦,೦೦೦ ಕೋಟಿ ರೂಪಾಯಿ ನೀಡಿದ ವಿಷಯವಂತೂ ಅಸ್ತಿತ್ವದಲ್ಲೇ ಇಲ್ಲದ್ದು. ಪತ್ರಿಕೆಯೊಂದು ಕತ್ತರಿಸಿದ ದಾಖಲೆ ಬಳಸಿ ವರದಿ ಮಾಡಿರುವುದಂತೂ ಇತಿಹಾಸದಲ್ಲೇ ಅಭೂತಪೂರ್ವ. ಅಪೂರ್ಣ ದಾಖಲೆಯ ಬಳಕೆ ನಿಶ್ಚಿತವಾಗಿ ವಾಕ್ ಸ್ವಾತಂತ್ರ್ಯದ ಸ್ಫೂರ್ತಿಗೆ ಅನುಗುಣವಾದದ್ದಲ್ಲ ಎಂದು ಕೇಂದ್ರ ಸಚಿವರು ಹೇಳಿದರು. ರಶ್ಯಾ ಮತ್ತು ಅಮೆರಿಕದ ಜೊತೆಗಿನ ಅಂತರ್ ಸರ್ಕಾರಿ ಒಪ್ಪಂದಗಳ ಮೂಲಕ ಮಾಡಿಕೊಳ್ಳಲಾದ ಖರೀದಿಗಳಲ್ಲಿ ಕೂಡಾ ಸಮಗ್ರತಾ ಒಪ್ಪಂದ ಇರಲಿಲ್ಲವಾದ್ದರಿಂದ ’ಸಮಗ್ರತಾ ಒಪ್ಪಂದ ಇಲ್ಲ’ ಎಂಬ ವಾದ ಬಿದ್ದುಹೋಗಿದೆ. ಈಗ ಕಿಂಚಿತ್ತೂ ಸಾಕ್ಷ್ಯಾಧಾರವೇ ಇಲ್ಲದೆ, ಸಿಎಜಿ ಹಿತಾಸಕ್ತಿ ಘರ್ಷಣೆಯ ಹೊಸ ಕಟ್ಟುಕಥೆಯನ್ನು ಸೃಷ್ಟಿಸಲಾಗಿದೆ ಎಂದು ಜೇಟ್ಲಿ ಹರಿಹಾಯ್ದರು.  ಪ್ರಬುದ್ಧ ಪ್ರಜಾಪ್ರಭುತ್ವಗಳಲ್ಲಿ ಸತ್ಯವು ಅತ್ಯಂತ ಅಮೂಲ್ಯ ಮತ್ತು ಪವಿತ್ರವಾದದ್ದು. ಉದ್ದೇಶಪೂರ್ವಕವಾಗಿ ಸುಳ್ಳನ್ನೇ ನೆಚ್ಚಿಕೊಳ್ಳುವವರು ಸಾರ್ವಜನಿಕ ಜೀವನದಿಂದಲೇ ನಿಷೇಧಿಸಲ್ಪಡುತ್ತಾರೆ ಎಂದು ಜೇಟ್ಲಿ ನುಡಿದರು. ಆಧುನಿಕ ವಿಶ್ವ ಸಾಮ್ರಾಜ್ಯಗಳಿಗೆ ಅಂತರ್ಗತವಾದ ಮಿತಿಗಳಿವೆ. ಆಕಾಂಕ್ಷಾ ಸಮಾಜಗಳು ಸಾಮ್ರಾಜ್ಯಗಳು ಎಂದರೆ ಅಸಹ್ಯ ಪಡುತ್ತವೆ. ಸಮಾಜಗಳು ಉತ್ತರದಾಯಿತ್ವ ಮತ್ತು ನಿರ್ವಹಣೆಗೆ ಒತ್ತು ನೀಡುತ್ತವೆ. ಆದರೆ ಭಾರತೀಯ ರಾಜಕಾರಣದ ಹಳೆಯ ಮಹಾನ್ ಪಕ್ಷವು ವಿಷಾದನೀಯವಾಗಿ ವಂಶಾಡಳಿತದ ಬಂಧಿಯಾಗಿದೆ. ಅದರ ಹಲವಾರು ನಾಯಕರು ಸಾಮ್ರಾಜ್ಯಕ್ಕೆ ಮಾರ್ಗ ಬದಲಿಸುವಂತೆ ಹೇಳುವ ದೈರ್‍ಯ ಮತ್ತು ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ   ಎಂದು ಜೇಟ್ಲಿ ಝಾಡಿಸಿದರು. ೧೯೭೦ರಲ್ಲಿ ಈ ಪ್ರವೃತ್ತಿ ಶುರುವಾಯಿತು. ತುರ್ತು ಪರಿಸ್ಥಿತಿಯಲ್ಲಿ ಉತ್ತುಂಗಕ್ಕೆ ಏರಿತು ಮತ್ತು ಅಂದಿನಿಂದ ಇಂದಿನವರೆಗೂ ಮುಂದುವರೆಯುತ್ತಲೇ ಇದೆ. ಹಿರಿಯ ನಾಯಕರ ’ಗುಲಾಮೀ’ ಮಾನಸಿಕತೆಯು, ಸಾಮ್ರಾಜ್ಯವು ಬರೆದ ಹಾಡುಗಳನ್ನು ಮಾತ್ರವೇ ತಾವು ಹಾಡಬೇಕು ಎಂದು ಅವರನ್ನು ನಂಬಿಸಿಬಿಟ್ಟಿದೆ. ಇದಕ್ಕೆ ವಿರುದ್ಧವಾದ ಅಭಿಪ್ರಾಯ ಅವರ ರಾಜಕೀಯ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ. ಸಾಮ್ರಾಜ್ಯವು ಸುಳ್ಳುಗಳನ್ನು ಹೇಳುವಾಗ ಅವರು ಅದಕ್ಕೆ ಅವರೆಲ್ಲರೂ ದನಿಗೂಡಿಸುತ್ತಾರೆ ಎಂದು ಜೇಟ್ಲಿ ಹೇಳಿದರು.

2019: ನವದೆಹಲಿ: ಚಲನಚಿತ್ರ ಕೃತಿ ಚೌರ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ಕಠಿಣ ದಂಡ ವಿಧಿಸಲು ಸಾಧ್ಯವಾಗುವಂತೆ ಸಿನೆಮಾಟೋಗಾಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸರ್ಕಾರವು ಈದಿನ  ರಾಜ್ಯಸಭೆಯಲ್ಲಿ ಮಂಡಿಸಿತು. ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ ೨೦೧೯ನ್ನು ಮೇಲ್ಮನೆಯಲ್ಲಿ ಮಂಡಿಸಿದರು. ಚಲನಚಿತ್ರಗಳನ್ನು ಅನಧಿಕೃತವಾಗಿ ಕ್ಯಾಮ್ ಕಾರ್ಡಿಂಗ್ ಮತ್ತು ಡ್ಯುಪ್ಲಿಕೇಶನ್ ಮಾಡುವುದಕ್ಕೆ ಕಠಿಣ ದಂಡ ವಿಧಿಸಲು ಅವಕಾಶ ನೀಡುವ ಮೂಲಕ ಚಲನಚಿತ್ರ ಕೃತಿ ಚೌರ್‍ಯವನ್ನು ಮಟ್ಟಹಾಕಲು ಸಾಧ್ಯವಾಗುವಂತೆ ೧೯೫೨ರ ಸಿನೆಮಾಟೋಗ್ರಾಫ್ ಕಾಯ್ದೆಯ ವಿಧಿಗಳಿಗೆ ತಿದ್ದುಪಡಿಗಳನ್ನು ತರಲು ಕಾಯ್ದೆ ಕೋರಿತು. ಕೃತಿ ಚೌರ್ಯ ಮಾಡಲಾದ ಚಲನಚಿತ್ರಗಳನ್ನು ಅಂತರ್ಜಾಲಗಳಲ್ಲಿ ಬಿಡುಗಡೆ ಮಾಡುವ ಮೂಲಕ ಚಲನಚಿತ್ರೋದ್ಯಮಕ್ಕೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕೃತಿ ಚೌರ್‍ಯವನ್ನು ತಡೆಯುವ ಸಲುವಾಗಿ ಈ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ೧೦ ಲಕ್ಷ ರೂಪಾಯಿಗಳವರೆಗಿನ ದಂಡ, ಇಲ್ಲವೇ ಇವೆರಡನ್ನೂ ವಿಧಿಸುವ ಪ್ರಸ್ತಾಪವನ್ನು ಮಸೂದೆಯು ಮುಂದಿಟ್ಟಿತು. ಕೃತಿ ಸ್ವಾಮ್ಯ ಹೊಂದಿರುವ ಮಾಲೀಕನ ಲಿಖಿತ ಅನುಮತಿ ಇಲ್ಲದೆ ಯಾರೇ ವ್ಯಕ್ತಿ ರೆಕಾರ್ಡಿಂಗ್ ಸಾಧನ ಬಳಸಿದರೆ ಅಥವಾ ಚಿತ್ರದ ಪ್ರತಿಯನ್ನು ಟ್ರಾನ್ಸಮಿಟ್ ಮಾಡಿದರೆ ಅಥವಾ ಹಾಗೆ ಮಾಡಲು ಯತ್ನಿಸಿದರೆ, ಅಥವಾ ಪ್ರಚೋದಿಸಿದರೆ ಆತನ ವಿರುದ್ಧ ಈ ಶಿಕ್ಷೆಯನ್ನು ವಿಧಿಸಬೇಕು ಎಂದು ಮಸೂದೆ ಹೇಳಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಡಿಸಿದ ಮಸೂದೆಯ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟವು ಕಳೆದ ವಾರ ಒಪ್ಪಿಗೆ ನೀಡಿತ್ತು.  ಪ್ರಸ್ತಾಪಿತ ತಿದ್ದುಪಡಿಗಳಿಂದ ಉದ್ಯಮದ ಆದಾಯ ವೃದ್ಧಿ, ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಭಾರತದ ರಾಷ್ಟ್ರೀಯ ಬೌದ್ಧಿಕ ಆಸ್ತಿ ನೀತಿಯ ಮಹತ್ವದ ಉದ್ದೇಶದ ಈಡೇರಿಕೆಯಾಗುತ್ತದೆ ಮತ್ತು ಅಂತರ್ಜಾಲದಲ್ಲಿ ಕೃತಿ ಚೌರ್‍ಯಕ್ಕೆ ತಡೆ ಬೀಳುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿತು. ಕ್ಯಾಮ್ ಕಾರ್ಡಿಂಗ್ ಮತ್ತು ಕೃತಿಚೌರ್‍ಯಕ್ಕೆ ತಡೆ ಹಾಕಲು ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಚಿತ್ರೋದ್ಯಮವು ದೀರ್ಘಕಾಲದಿಂದ ಒತ್ತಾಯಿಸುತ್ತಾ ಬಂದಿತ್ತು.  ೨೦೧೯ರ ಜನವರಿ ೧೯ರಂದು ಮುಂಬೈಯಲ್ಲಿ ಭಾರತೀಯ ಸಿನಿಮಾದ ನ್ಯಾಷನಲ್ ಮ್ಯೂಸಿಯಂ ಉದ್ಘಾಟನಾ ಸಮಾರಂಭದಲ್ಲಿ ಕ್ಯಾಮ್ ಕಾರ್ಡಿಂಗ್ ಮತ್ತು ಕೃತಿಚೌರ್ಯ  ಹಾವಳಿ ಮಟ್ಟ ಹಾಕುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು.

2019: ನವದೆಹಲಿ: ಅಂದಾಜು ೭೦೦ ಕೋಟಿ ರೂಪಾಯಿ ವೆಚ್ಚದಲ್ಲಿ ೭೨,೪೦೦ ಅಸಾಲ್ಟ್ ರೈಫಲ್ ಖರೀದಿಗಾಗಿ ಅಮೆರಿಕದ ಸಂಸ್ಥೆಯೊಂದರ ಜೊತೆಗೆ ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪ್ರಕಟಿಸಿದರು. ಅಮೆರಿಕದ ಪಡೆಗಳು ಮತ್ತು ಇತರ ಐರೋಪ್ಯ ರಾಷ್ಟ್ರಗಳ ಪಡೆಗಳು ಬಳಸುತ್ತಿರುವ ಈ ರೈಫಲ್‌ಗಳನ್ನು ತ್ವರಿತ ಸಂಗ್ರಹಣಾ ವಿಧಾನದಲ್ಲಿ (ಫಾಸ್ಟ್ರ್ ಟ್ರ್ಯಾಕ್ ಪ್ರೊಕ್ಯೂರ್ ಮೆಂಟ್ ಪ್ರೊಸೀಜರ್) ಖರೀದಿಸಲಾಗುತ್ತಿದೆ. ತ್ವರಿತ ಸಂಗ್ರಹಣಾ ವಿಧಾನದಲ್ಲಿ (ಎಫ್ ಟಿಪಿ) ಭಾರತವು ಸಿಗ್ ಸಾವುರ್ ರೈಫಲ್ ಒಪ್ಪಂದಕ್ಕೆ ಅಮೆರಿಕದ ಜೊತೆ ಸಾಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ಭಾರತವು ೭೨,೪೦೦ದಷ್ಟು ೭.೬೨ ಎಂಎಂ ರೈಫಲ್ ಗಳನ್ನು ಅಮೆರಿಕದ ಸಿಗ್ ಸಾವುರ್ ಸಂಸ್ಥೆಯಿಂದ ಪಡೆಯಲಿದೆ. ಈದಿನದಿಂದ ಒಂದು ವರ್ಷದ ಒಳಗಾಗಿ ರೈಫಲ್‌ಗಳು ಭಾರತಕ್ಕೆ ರವಾನೆಯಾಗಲಿವೆ ಎಂದು ಅಧಿಕಾರಿಗಳು ಹೇಳಿದರು.  ಈ ನೂತನ ಅಸಾಲ್ಟ್ ರೈಫಲ್‌ಗಳಿಗೆ ಅಂದಾಜು ೭೦೦ ಕೋಟಿ ರೂಪಾಯಿ ವೆಚ್ಚ ತಗಲುವುದು ಎಂದು ಅವರು ನುಡಿದರು. ಭಾರತದ ಸಶಸ್ತ್ರ ಪಡೆಗಳು ಪ್ರಸ್ತುತ ೫.೫೬ ಎಂಎಂನ ಇನ್ಸಾಸ್ ರೈಫಲ್ ಗಳನ್ನು ಹೊಂದಿವೆ. ರಣರಂಗದ ಪರಿಸ್ಥಿತಿಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನದ ಹಗುರವಾದ ೭.೬೨x೫೧ ಎಂಎಂನ ಅಸಾಲ್ಟ್ ರೈಫಲ್ ಗಳನ್ನು ೫.೫೬x೫೧ ಎಂಎಂ ಇನ್ಸಾಸ್ ರೈಫಲ್‌ಗಳ ಸ್ಥಾನಕ್ಕೆ ತುರ್ತಾಗಿ ಅಳವಡಿಸಬೇಕಾಗಿದೆ ಎಂದು ಅವರು ಹೇಳಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ತಿಂಗಳ ಆದಿಯಲ್ಲಿ ಸಿಗ್ ಸಾವುರ್ ರೈಫಲ್ ಖರೀದಿಗೆ ಒಪ್ಪಿಗೆ ನೀಡಿದ್ದರು. ಈ ರೈಫಲ್‌ಗಳನ್ನು ಚೀನಾ ಜೊತೆಗಿನ ೩೬೦೦ ಕಿಮೀ ಗಡಿಯಲ್ಲಿ ನಿಯೋಜಿಸಲಾಗಿರುವ ಪಡೆಗಳಿಗೆ ಒದಗಿಸಲಾಗುವುದು.  ೨೦೧೭ರ ಅಕ್ಟೋಬರಿನಲ್ಲಿ ಸೇನೆಯು ೭ ಲಕ್ಷ ರೈಫಲ್ ಗಳು, ೪೪,೦೦೦ ಹಗುರ ಮೆಷಿನ್ ಗನ್‌ಗಳು (ಎಲ್ ಎಂಜಿ) ಮತ್ತು ೪೪,೬೦೦ ಕಾರ್ಬೈನ್ ಗಳ ದಾಸ್ತಾನು ಪ್ರಕ್ರಿಯೆ ಆರಂಭಿಸಿತ್ತು. ೧೮ ತಿಂಗಳ ಹಿಂದೆ, ಇಶಾಪೋರದ ಸರ್ಕಾರಿ ಸ್ವಾಮ್ಯದ ರೈಫಲ್ ಫ್ಯಾಕ್ಟರಿಯು ನಿರ್ಮಿಸಿದ ಅಸಾಲ್ಟ್ ರೈಫಲ್‌ಗಳು ಗುಂಡು ಹಾರಿಸುವ ಪರೀಕ್ಷೆಯಲ್ಲಿ ದಯನೀಯವಾಗಿ ವಿಫಲವಾದ ಬಳಿಕ ಸೇನೆಯ ಅಲ್ಲಿನ ಅಸಾಲ್ಟ್ ರೈಫಲುಗಳನ್ನು ತಿರಸ್ಕರಿಸಿತ್ತು. ಆ ಬಳಿಕ ಜಾಗತಿಕ ಮಾರುಕಟ್ಟೆಯಿಂದ ರೈಫಲ್ ಖರೀದಿಸಲು ಸೇನೆ ಆರಂಭಿಸಿತ್ತು.


2019: ಜೈಪುರ: ಭಾರತೀಯ ವಾಯುಪಡೆಯ ಮಿಗ್ -೨೭ ಯುದ್ಧವಿಮಾನವು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೊಖ್ರಾನ್ ತಾಲೂಕಿನ ಎಟಾ ಗ್ರಾಮದಲ್ಲಿ  ಈದಿನ  ಸಂಜೆ ೬.೧೦ರ ಸುಮಾರಿಗೆ ಪತನಗೊಂಡಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದರು. ತರಬೇತಿ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ಪೈಲಟ್ ಯಶಸ್ವಿಯಾಗಿ ಹೊರಕ್ಕೆ ನೆಗೆದು ಪಾರಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ಸಂಬಿತ್ ಘೋಷ್ ಹೇಳಿದರು. ಮಿಗ್ -೨೭ ಯುದ್ಧ ವಿಮಾನವು ಈದಿನ ಸಂಜೆ ತನ್ನ ದೈನಂದಿನ ಮಾರ್ಗದಲ್ಲಿ ಹಾರುತ್ತಿದ್ದಾಗ ನೆಲಕ್ಕೆ ಅಪ್ಪಳಿಸಿತು. ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಕೋರ್ಟ್ ಆಫ್ ಎನ್‌ಕ್ವಯರಿ ನಡೆಸಲಾಗುವುದು ಎಂದು ಅವರು ನುಡಿದರು. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಈವರೆಗೆ ವರದಿಯಾಗಿಲ್ಲ. ಪೊಲೀಸ್ ತಂಡವು ವಾಯುಪಡೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.  ವಾರದ ಹಿಂದಷ್ಟೇ ಬೆಂಗಳೂರಿನ ಎಚ್ ಎಎಲ್ ವಿಮಾನನಿಲ್ದಾಣದಲ್ಲಿ ಮಿರಾಜ್ ತರಬೇತಿ ವಿಮಾನ ಅಪಘಾತಕ್ಕೆ ಈಡಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ ಘಟನೆಯ ನೆನಪು ಮಾಸುವ ಮುನ್ನವೇ ಈ ದುರಂತ ಸಂಭವಿಸಿತು.


2018: ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತಿ ಚಂದ್ರಶೇಖರ ಕಂಬಾರ ಅವರು ಆಯ್ಕೆಯಾದರು. ನವದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚಲಾವಣೆಯಾದ ಒಟ್ಟು 89 ಮತಗಳಲ್ಲಿ ಕಂಬಾರರು 56 ಮತ ಗಳಿಸಿದರು. ಅಧ್ಯಕ್ಷ ಗಾದಿಯ ಸ್ಪರ್ಧೆಯಲ್ಲಿದ್ದ ಒರಿಯಾ ಸಾಹಿತಿ ಪ್ರತಿಭಾ ರಾಯ್ಅವರಿಗೆ 29 ಮತ ಹಾಗೂ ಮಹಾರಾಷ್ಟ್ರದ ಸಾಹಿತಿ ಬಾಲಚಂದ್ರ ನೆಮಾಡೆ ಅವರಿಗೆ 4 ಮತಗಳು ಬಿದ್ದವು. ಉಪಾಧ್ಯಕ್ಷರಾಗಿ ಮಾಧವ ಕೌಶಿಕ್ಆಯ್ಕೆಯಾದರು. ಚುನಾಯಿತರ ಆಡಳಿತ ಅವಧಿ ಐದು ವರ್ಷಗಳಾಗಿರುತ್ತದೆ.
2018: ಬೆಂಗಳೂರು: ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ದಿನೇಶ್ ಮಹೇಶ್ವರಿ ಅವರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್ ವಾಲಾ ಅವರು ನೂತನ ಸಿಜೆಗೆ ಪ್ರತಿಜ್ಞಾವಿಧಿ ಬೋಧಿಸಿದರು. ನ್ಯಾ.ದಿನೇಶ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿದ್ದ ಸುಬ್ರೊ ಕಮಲ್ ಮುಖರ್ಜಿ 2017 ಅಕ್ಟೋಬರ್ 9ರಂದು ನಿವೃತ್ತರಾಗಿದ್ದರು. ಅಂದಿನಿಂದ ಈವರೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಾಗಿರಲಿಲ್ಲವಾಗಿತ್ತು. ಹಾಲಿ ಎಚ್ ಜಿ ರಮೇಶ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿನ್ನೆಲೆಯಲ್ಲಿ ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್ ನೂತನ ಸಿಜೆಯನ್ನಾಗಿ ನೇಮಕ ಮಾಡಲಾಗಿದೆ.  ದಿನೇಶ್ ಮಹೇಶ್ವರಿ ಹುಟ್ಟಿದ್ದು 1958 ಮೇ 15ರಂದು. ಇವರ ತಂದೆ ರಮೇಶ್ಚಂದ್ರ ಮಹೇಶ್ವರಿ. ತಾಯಿ ರುಕ್ಮಿಣಿ ಮಹೇಶ್ವರಿ. ತಂದೆ ರಮೇಶ್ಚಂದ್ರ ಅವರು, ರಾಜಸ್ಥಾನ ಹೈಕೋರ್ಟ್ ಖ್ಯಾತ ವಕೀಲರಾಗಿದ್ದವರು.
2018: ನವದೆಹಲಿ: ಕರ್ನಾಟಕದ ಕರಾವಳಿ ಜಿಲ್ಲೆಗಳ ಜಾನಪದ ಕ್ರೀಡೆ ’ಕಂಬಳಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ರಾಜ್ಯದಲ್ಲಿ ಪ್ರತಿವರ್ಷ ನಡೆಯುವ ಕೋಣಗಳ ವಾರ್ಷಿಕ ಓಟದ ಸ್ಪರ್ಧೆಗೆ ತಡೆ ನೀಡುವಂತೆ ಸ್ವಯಂ ಸೇವಾ ಸಂಸ್ಥೆಯಾದ ‘ಪೆಟಾ ಇಂಡಿಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ನ್ಯಾಯಾಲಯ ಈದಿನ ನಡೆಸಿತು.  ಕಂಬಳಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಈ ಕುರಿತ ಅಂತಿಮ ವಿಚಾರಣೆಯನ್ನು ಮಾರ್ಚ್ ೧೨ರಂದು ನಡೆಸಲು ನಿಗದಿ ಪಡಿಸಿತು. ಪೆಟಾ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ದಾರ್ಥ ಲೂಥ್ರ ಅವರು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯ ಅವಧಿ ಮುಗಿದಿದೆ. ಆದ್ದರಿಂದ ಈಗ ಕೋಣಗಳ ಓಟವನ್ನು ನಡೆಸುವಂತಿಲ್ಲ ಎಂದು ವಾದಿಸಿದರು.  ಕಂಬಳ ನಡೆಯಲು ಅನುಕೂಲವಾಗುವಂತೆ ರಾಜ್ಯ ಸಚಿವ ಸಂಪುಟವು ಕಳೆದ ವರ್ಷ ಜನವರಿ ೨೮ರಂದು ಪ್ರಾಣಿಗಳಿಗೆ ಹಿಂಸೆ ತಡೆ ಕಾಯ್ದೆಗೆ (೧೯೬೦ರ ಕೇಂದ್ರೀಯ ಕಾಯ್ದೆ ೫೯) ತಿದ್ದುಪಡಿ ಮಾಡಲು ನಿರ್ಧರಿಸಿತ್ತು. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಎತ್ತಿನ ಬಂಡಿ ಓಟ ಮತ್ತು ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋಣಗಳ ಓಟ ಜನಪ್ರಿಯ ಜಾನಪದ ಕ್ರೀಡೆಯಾಗಿದೆ. ಕಂಬಳ ಸಾಮಾನ್ಯವಾಗಿ ನವೆಂಬರ್ ನಿಂದ ಮಾರ್ಚ್‌ವರೆಗೆ ನಡೆಯುತ್ತದೆ. ಕೆಸರ ಗದ್ದೆಯಲ್ಲಿ ನೊಗಕ್ಕೆ ಕಟ್ಟಲಾಗುವ ಎರಡು ಕೋಣಗಳನ್ನು ಓಟದಲ್ಲಿ ಸ್ಪರ್ಧಿಸುವ ವ್ಯಕ್ತಿ ಓಡಿಸುತ್ತಾನೆ. ಹೀಗೆ ಓಡುವ ಕೋಣಗಳಲ್ಲಿ ವೇಗವಾಗಿ ಓಡಿ ಗೆಲ್ಲುವ ಕೋಣಗಳಿಗೆ ಬಹುಮಾನ ಲಭಿಸುತ್ತದೆ. ಕಂಬಳದಲ್ಲಿ ಹಿಂಸೆ ಇಲ್ಲ. ನೀರು ಮತ್ತು ಕೆಸರಿನ ಗದ್ದೆಗಳಲ್ಲಿ ನಡೆಯುವ ಕಂಬಳವು ಕೋಣಗಳ ಪಚನ ಕ್ರಿಯೆ ಮತ್ತು ದೇಹದ ಉಷ್ಣತೆ ನಿರ್ವಹಣೆಗೆ ನೆರವಾಗುತ್ತದೆ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು. ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದು ವಾದಿಸಿರುವ ಪೆಟಾ ಮುಂಬರುವ ಕಂಬಳ ಉತ್ಸವಗಳಿಗೆ ಅವಕಾಶ ನೀಡಬಾರದು ಮತ್ತು ಅದನ್ನು ನಿಷೇಧಿಸಬೇಕು ಎಂದು ಪ್ರತಿಪಾದಿಸಿತ್ತು.

2018: ನವದೆಹಲಿ: ಕಾಶ್ಮೀರ ಕಣಿವೆಯ ಶೋಪಿಯಾನ್ ಜಿಲ್ಲೆಯಲ್ಲಿ ಪ್ರತಿಭಟನಕಾರರತ್ತ ಗುಂಡು ಹಾರಿಸಿದ
ಸೇನಾ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದು ಏಕೆ ಎಂಬುದಾಗಿ ವಿವರಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ಗುಂಡು ಹಾರಾಟದಲ್ಲಿ ಮೂವರು ಸಾವನ್ನಪ್ಪಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ಎಫ್ ಐ ಆರ್ ನಲ್ಲಿ ಆರೋಪಿಯಾಗಿ ಹೆಸರಿಸಲಾಗಿರುವ ಮೇಜರ್ ಆದಿತ್ಯ ಕುಮಾರ್ ಅವರ ವಿರುದ್ದ ಎಫ್ ಐ ಆರ್ ಆಧರಿಸಿ ಯಾವುದೆ ದಬ್ಬಾಳಿಕೆಯ ಕ್ರಮಗಳನ್ನು ಕೈಗೊಳ್ಲಬಾರದು ಎಮದು ರಾಜ್ಯ ಪೊಲೀಸರಿಗೆ ಆಜ್ಞಾಪಿಸಿತು. ಮೇಜರ್ ಕುಮಾರ್ ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಕರಮ್ ವೀರ ಸಿಂಗ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಘನತೆ ರಕ್ಷಣೆ ಸಲುವಾಗಿ ಎಫ್ ಐ ಆರ್ ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಕಾಲದಲ್ಲಿ ಪೀಠ ಈ ಆದೇಶ ನೀಡಿತು. ಕಾರ್ಗಿಲ್ ಸಮರದ ಯೋಧ ಲೆಫ್ಟಿನೆಂಟ್ ಕರ್ನಲ್ ಕರಮವೀರ್ ಸಿಂಗ್ ಅವರು ’ಸೇವಾ ನಿರತ ಸೇನಾಸಿಬ್ಬಂದಿ ವಿರುದ್ಧ ದಾಖಲಿಸಲಾಗಿರುವ ಎಫ್ ಐ ಆರ್, ಭಾರತದ ಧ್ವಜದ ಗೌರವವನ್ನು ಎತ್ತಿ ಹಿಡಿಯಲು ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಲೆಕ್ಕಿಸದೆ ಕಾರ್‍ಯಾಚರಣೆಗಳನ್ನು ನಡೆಸುವ ಯೋಧರ ನೈತಿಕ ಸ್ಥೈರ್ಯವನ್ನೇ ನಿಶ್ಚೇತನಗೊಳಿಸುವಂತಹ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದರು. ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದ್ದಲ್ಲದೆ ಸರ್ಕಾರವನ್ನು ಪ್ರತಿನಿಧಿಸಿ, ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ  ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸೂಚಿಸಿತು.  ‘ಇದು ಅತ್ಯಂತ ಗಂಭೀರ ವಿಷಯ. ಈಗಲೂ ಒಂದು ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ಮತ್ತು ವಕೀಲರಾದ ಐಶ್ವರ್‍ಯ ಭಟಿ ಅವರು ಲೆಫ್ಟಿನೆಂಟ್ ಕರ್ನಲ್ ಕರಮವೀರ ಸಿಂಗ್ ಅವರ ಪರವಾಗಿ ಹಾಜರಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಭಟಿ ಅವರ ಮೂಲಕ ಸಲ್ಲಿಸಲಾದ ಎಂದು ಕರಮ್ ವೀರ್ ಸಿಂಗ್ ಅರ್ಜಿಯು ’ಜನವರಿ ೨೭ರಂದು ಜನರ ಗುಂಪೊಂದು ಸೇನಾ ತುಕಡಿಯೊಂದನ್ನು ಪ್ರತ್ಯೇಕಿಸಿ ಅದರ ಮೇಲೆ ದಾಳಿ ನಡೆಸಿತು. ಅವರು ಸೇನಾ ವಾಹನಗಳತ್ತ ಕಲ್ಲುಗಳನ್ನು ತೋರಿ ಜ್ಯೂನಿಯರ್ ಕಮೀಶನ್ಡ್ ಅಧಿಕಾರಿಯನ್ನು ಕೊಲ್ಲಲು  ಯತ್ನಿಸಿದರು. ಆ ಬಳಿಕ ಎಚ್ಚರಿಕೆ ನೀಡಿ  ಗುಂಡು  ಹಾರಿಸಲಾಯಿತು ಎಂದು ಘಟನಾವಳಿಯನ್ನು ವಿವರಿಸಿತ್ತು. ಅಕ್ರಮ ಗುಂಪು ಜ್ಯೂನಿಯರ್ ಕಮೀಷನ್ಡ್ ಅಧಿಕಾರಿಯ ಜೀವ ಉಳಿಸಲು ನಿರಾಕರಿಸಿತು. ಹೀಗಾಗಿ ಹಿಂಸಾನಿರತವಾಗಿದ್ದ ಅಕ್ರಮ ಗುಂಪನ್ನು ಚದರಿಸಲು ಮತ್ತು ಸರ್ಕಾರಿ ಸೇವಕರು ಮತ್ತು ಆಸ್ತಿಯ ರಕ್ಷಣೆಗಾಗಿ ಕಾನೂನುಬದ್ಧವಾಗಿಯೇ  ಗುಂಡು ಹಾರಿಸಲಾಯಿತು ಎಂದು ಅರ್ಜಿ ತಿಳಿಸಿತ್ತು. ತನ್ನ ಪುತ್ರ ಈ ವೇಳೆಯಲ್ಲಿ ಸ್ಥಳದಲ್ಲಿ ಹಾಜರಿರಲಿಲ್ಲ  ಎಂದೂ ನ್ಯಾಯಾಲಯಕ್ಕೆ ತಿಳಿಸಿದ ಅರ್ಜಿದಾರ ಕರಮ್ ವೀರ್ ಸಿಂಗ್ ಅವರು, ಯೋಧರಿಗೆ ಪರಿಹಾರ ಒದಗಿಸುವಂತೆ ಮತ್ತು ಹಿಂಸಾ ನಿರತ ಗುಂಪಿನ ವಿರುದ್ಧ ಎಫ್ ಐ ಆರ್ ದಾಖಲಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಕ್ರಮವಾಗಿ ಸೇರಿದ್ದ ಮತ್ತು ಮೂಲಭೂತ ಮಾನವ ನೈತಿಕತೆಯನ್ನೇ ಹೊಂದಿರದ ಗುಂಪಿನ ಆಕ್ರೋಶಕ್ಕೆ ಯೋಧರನ್ನು  ಗುರಿಪಡಿಸಲಾಗಿದೆ. ಈ ಗುಂಪಿನ ವರ್ತನೆ  ’ಭಯೋತ್ಪಾದಕ ಚಟುವಟಿಕೆ ಹೊರತು ಬೇರೇನಲ್ಲ ಎಂದು ಹೇಳಿರುವ ಅರ್ಜಿ, ರಾಜ್ಯದ ರಾಜಕೀಯ ನಾಯಕತ್ವ ಮತ್ತು ಆಡಳಿತಾತ್ಮಕ ಅಧಿಕಾರಿಗಳು ಸೇನಾ ಸಿಬ್ಬಂದಿಯ ವಿರುದ್ಧ ದಾಖಲಿಸಿರುವ ಎಫ್ ಐ ಆರ್ ರಾಜ್ಯದಲ್ಲಿನ ತೀವ್ರ ತ್ವೇಷಮಯ ಪರಿಸ್ಥಿತಿಯನ್ನು ಬಿಂಬಿಸಿದೆ ಎಂದು ವಿವರಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಜನರ ಈ ವರ್ತನೆಯು ಕಾನೂನು ಶೂನ್ಯತೆ ಮತ್ತು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳ ಸುರಕ್ಷತೆ ಬಗೆಗಿನ ನಿರ್ಲಕ್ಷ್ಯಕ್ಕೆ ಅನುಗುಣವಾಗಿದೆ ಎಂದೂ ಅರ್ಜಿ ಹೇಳಿತ್ತು. ಜೆಕೆಪಿ ಡಿಎಸ್ ಪಿ ಶಹೀದ್ ಮೊಹಮ್ಮದ ಅಯೋಬ್ ಪಂಡಿತ್ ಅವರನ್ನು ೨೦೧೭ರ ಜೂನ್ ೨೩ರಂದು ವಿವೇಚನೆ ರಹಿತವಾದ ಕ್ರೂರ ಗುಂಪೊಂದು ಶ್ರೀನಗರದಲ್ಲಿ ಕೊಂದು ಹಾಕಿದ ಘಟನೆಯನ್ನು ನೆನಪಿಸಿದ ಅರ್ಜಿ ಈ ಪ್ರದೇಶಗಳಲ್ಲಿನ ಅನಿಯಂತ್ರಿತ ಗುಂಪಿನ ವರ್ತನೆಯನ್ನು ಇದು ತೋರಿಸಿದೆ ಎಂದು ತಿಳಿಸಿತ್ತು. ರಾಷ್ಟ್ರದ ಸೇವೆ ಸಲ್ಲಿಸುತ್ತಿರುವ ಸೇನಾ ಸಿಬ್ಬಂದಿಗೆ ಈ ಸೇವೆಯ ದ್ಯೋತಕವಾಗಿ ಸಂಪೂರ್ಣ ವಿನಾಯ್ತಿ ನೀಡಬೇಕು ಎಂದು ಕೋರಿದ ಅರ್ಜಿ ’ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೇನೆಯ ಸರ್ಕಾರದ ಒಂದು ಅಸ್ತ್ರವಾಗಿದೆ. ನಿಯೋಜಿಸಿದ ಕೆಲಸವನ್ನು ಪೂರ್ಣಗೊಳಿಸಲು ಯಾವುದೇ ಅಡಚಣೆಯನ್ನು ನಿವಾರಿಸುವ ಕಾನೂನುಬದ್ಧ ವಿಧಾನವನ್ನು ಕರ್ತವ್ಯದ ಸನ್ನದಿನ ಭಾಗವಾಗಿ ವಿವರಿಸಬೇಕು ಎಂದೂ ಅರ್ಜಿ ಮನವಿ ಮಾಡಿತ್ತು.

2018: ನವದೆಹಲಿ: ಕ್ರಿಮಿನಲ್ ಮತ್ತು ಭ್ರಷ್ಟ ವ್ಯಕ್ತಿಯು ರಾಜಕೀಯ ಪಕ್ಷವೊಂದರ ಮುಖ್ಯಸ್ಥನಾಗುವುದರ ಹಿಂದಿನ ತರ್ಕವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಪ್ರಶ್ನಿಸಿದರು. ಇಂತಹ ಲೋಪವು ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಗೇ ದೊಡ್ಡ ಹೊಡೆತ ಎಂದು ಅವರು ಹೇಳಿದರು. ಇಂತಹ ಕ್ರಿಮಿನಲ್ ಒಬ್ಬನಿಗೆ ರಾಜಕೀಯ ಪಕ್ಷವೊಂದರ ಮುಖ್ಯಸ್ಥನಾಗಿ ತನ್ನ ಪಕ್ಷದ ಬ್ಯಾನರ್ ಅಡಿಯಲಿ ಸ್ಪಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಇದ್ದರೆ ಪ್ರಜಾಪ್ರಭುತ್ವದ ಭವಿಷ್ಯ ಇನ್ನಷ್ಟು ಹೀನಾಯವಾಗುತ್ತದೆ ಎಂದು ತ್ರಿಸದಸ್ಯ ಪೀಠದ ಮುಖ್ಯಸ್ಥರಾದ ನ್ಯಾಯಮೂರ್ತಿ ಮಿಶ್ರ ಹೇಳಿದರು.  ಜನರು ಯಾರಿಗೆ ವೋಟು ಹಾಕಬೇಕು ಎಂಬುದಾಗಿ ಕ್ರಿಮಿನಲ್ ಒಬ್ಬ ನಿರ್ಧರಿಸುವುದು ಪ್ರಜಾಪ್ರಭುತ್ವದ ಮೂಲತತ್ವಗಳಿಗೇ ವಿರುದ್ಧವಾಗುತ್ತದೆ ಎಂದೂ ಕೋರ್ಟ್ ಹೇಳಿತು.  ‘ಶಿಕ್ಷಿತನಾದ ವ್ಯಕ್ತಿಯೊಬ್ಬ ರಾಜಕೀಯ ಪಕ್ಷವೊಂದರ ಪದಾಧಿಕಾರಿಯಾಗಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೇಗೆ ಸಾಧ್ಯ? ಇದು ಚುನಾವಣೆಯ ಪಾವಿತ್ರ್ಯದ ಸಲುವಾಗಿ ರಾಜಕೀಯದಲ್ಲಿನ ಭ್ರಷ್ಟಾಚಾರಗಳನ್ನು ಬಹಿಷ್ಕರಿಸಬೇಕು ಎಂಬ ನಮ್ಮ ತೀರ್ಪುಗಳಿಗೇ ವಿರುದ್ಧವಾಗುತ್ತದೆ ಎಂದು ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗವನ್ನು (ಇಸಿಐ) ಉದ್ದೇಶಿಸಿ ಸಿಜೆಐ ಮಿಶ್ರ ನುಡಿದರು. ‘ನೀವು ವೈಯಕ್ತಿಕವಾಗಿ ಮಾಡಲಾಗದ್ದನ್ನು (ಚುನಾವಣೆಯಲ್ಲಿ ಸ್ಪರ್ಧಿಸುವುದು) ನಿಮ್ಮ ಏಜೆಂಟರ ಮೂಲಕ ಸಾಮೂಹಿಕವಾಗಿ ಮಾಡಬಹುದು ಎಂಬುದು ಇದರ ಅರ್ಥವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.  ‘ವ್ಯಕ್ತಿಯೊಬ್ಬ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಾರ, ಅದಕ್ಕಾಗಿ ಆತ ಕೆಲವು ವ್ಯಕ್ತಿಗಳ ಗುಂಪು ರಚಿಸುತ್ತಾನೆ ಮತ್ತು ಅವರನ್ನು ಚುನಾವಣೆಗೆ ಇಳಿಸಲು ರಾಜಕೀಯ ಪಕ್ಷ ಕಟ್ಟುತ್ತಾನೆ. ಜನರು ಆಸ್ಪತ್ರೆ, ಶಾಲೆ
ನಿರ್ಮಾಣದಂತಹ ಜನಹಿತ ಕಾರ್ಯಗಳಿಗಾಗಿ ಸಂಘಟನೆ ಕಟ್ಟಬಹುದು. ಆದರೆ ಆಡಳಿತದ ಕ್ಷೇತ್ರಕ್ಕೆ ಬಂದಾಗ ಅದು ಬೇರೆಯೇ ಆಗುತ್ತದೆ ಎಂದು ನ್ಯಾಯಮೂರ್ತಿ ಮಿಶ್ರ ಹೇಳಿದರು.  ಪ್ರತಿಕ್ರಿಯೆ ಸಲ್ಲಿಸಲು ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಹೇಳಿದರು.  ಶಿಕ್ಷಿತ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳ ಪದಾಧಿಕಾರಿಗಳಾಗದಂತೆ ನಿಷೇಧಿಸುವ ನಿಟ್ಟಿನ ಸುಧಾರಣೆಯು ಭ್ರಷ್ಟ ರಾಜಕೀಯದ ವಿರುದ್ಧ ನೀಡಲಾದ ತನ್ನ ಹಿಂದಿನ ತೀರ್ಪುಗಳಿಗೆ ಅನುಗುಣವಾಗಿಯೇ ಇದೆ ಎಂದು ಕೋರ್ಟ್ ಹೇಳಿತು. ಬಳಿಕ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಎರಡು ವಾರಗಳ ಅವಧಿಗೆ ಮುಂದೂಡಿತು.  ಶಿಕ್ಷಿತ ವ್ಯಕ್ತಿಯು ಕಟ್ಟಿದ ಅಥವಾ ಆತ ನಿರ್ಣಾಯಕ ಪದಾಧಿಕಾರಿ ಯಾಗಿದ್ದಾನೆಂಬ ನೆಲೆಯಲ್ಲಿ ರಾಜಕೀಯ ಪಕ್ಷದ ನೋಂದಣಿ ರದ್ದು ಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕೆ ಎಂಬುದನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಕಳೆದ ಡಿಸೆಂಬರ್ ತಿಂಗಳಲ್ಲಿ ಒಪ್ಪಿತ್ತು. ಶಿಕ್ಷಿತ ವ್ಯಕ್ತಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದಾದರೆ, ಆತ ಅಥವಾ ಆಕೆಯನ್ನು ರಾಜಕೀಯ ಪಕ್ಷದ ಮುಖ್ಯಸ್ಥರಾಗದಂತೆ ಮತ್ತು ತನ್ನ ಪಕ್ಷದ ಇತರ ಚುನಾಯಿತ ಸದಸ್ತರನ್ನು ನಿಯಂತ್ರಿಸದಂತೆಯೂ ಅವರನ್ನು ಡಿಬಾರ್ ಮಾಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ವಾದಿಸಿದ್ದರು. ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ಮೇವು ಹಗರಣದಲ್ಲಿ ಶಿಕ್ಷಿತರಾದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಕಿರಿಯ ಶಿಕ್ಷಕರ ನೇಮಕಾತಿ ಹಗರಣದಲಿ ತಪ್ಪಿತಸ್ಥರೆಂದು ಸಾಬೀತಾದ ಐಎನ್ ಎಲ್ ಡಿ ನಾಯಕ ಒ.ಪಿ. ಚೌಟಾಲ ಅವರ ಹೆಸರುಗಳನ್ನು ನಮೂದಿಸಿದ್ದರು. ಪ್ರಸ್ತುತ ಕೊಲೆ, ಅತ್ಯಾಚಾರ, ಕಳ್ಳಸಾಗಣೆ, ಹಣ ವರ್ಗಾವಣೆ, ರಾಷ್ಟ್ರದ್ರೋಹ, ಲೂಟಿ, ಡಕಾಯತಿ ಇತ್ಯಾದಿ ಅಪರಾಧಗಳಿಗಾಗಿ ಶಿಕ್ಷಿತರಾದ ವ್ಯಕ್ತಿ ಕೂಡಾ ಪಕ್ಷದ ಅಧ್ಯಕ್ಷನಾಗಬಹುದು ಎಂದು ಅರ್ಜಿ ಪ್ರತಿಪಾದಿಸಿತ್ತು.


2018: ಶ್ರೀನಗರ: ಭಾರತೀಯ ಯೋಧರು ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿ ಜಮ್ಮುವಿನ ಸುಂಜ್ವಾನ್ ಸೇನಾ ಶಿಬಿರದ ಮೇಲೆ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಗಡಿದಾಟಿ ಯಾವುದೇ ದಾಳಿಗಳನ್ನು ನಡೆಸದಂತೆ ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿತು.  ಫೆ.10ರ ಶನಿವಾರ ಜಮ್ಮುವಿನಲ್ಲಿ ನಡೆದ ಭಯೋತ್ಪಾದಕ ದಾಳಿ ಕಳೆದ ಹಲವಾರು ತಿಂಗಳುಗಳಲ್ಲೇ ಅತ್ಯಂತ ಭೀಕರ ದಾಳಿಯಾಗಿದ್ದು ಐವರು ಸೈನಿಕರು ಮತ್ತು ಒಬ್ಬ ಸೈನಿಕನ ತಂದೆ ಹತರಾಗಿದ್ದರು.  ಮಹಿಳೆ ಮತ್ತು ಮಕ್ಕಳು ಸೇರಿದಂತೆ ೧೦ ಮಂದಿ ಗಾಯಗೊಂಡಿದ್ದರು. ಭಾರಿ ಶಸ್ತ್ರ ಸಜ್ಜಿತರಾಗಿದ್ದ ದಾಳಿಕೋರರು ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದವರು. ಏನಿದ್ದರೂ ಪಾಕಿಸ್ತಾನವು ತನ್ನ ಹೊಣೆಗಾರಿಕೆಯನ್ನು ನಿರಾಕರಿಸಿದ್ದು, ಪೂರ್ಣ ಪ್ರಮಾಣದ ತನಿಖೆಗೆ ಮುನ್ನ ಭಾರತ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಹೇಳಿತು. ‘ಯಾವುದೇ ಸಮರ್ಪಕ ತನಿಖೆ ನಡೆಸುವುದಕ್ಕೂ ಮೊದಲೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಭಾರತೀಯ ಅಧಿಕಾರಿಗಳ ರೂಢಿ ಎಂಬುದು ಸಾಬೀತಾಗಿರುವ ವಿಚಾರ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿತು.  ಕಾಶ್ಮೀರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಲುವಾಗಿ ನಡೆಸುತ್ತಿರುವ ಕ್ರೂರ ಕೃತ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಭಾರತ ಈ ಆರೋಪಗಳನ್ನು ಮಾಡುತ್ತಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಇಂತಹ ದೌರ್ಜನ್ಯಗಳನ್ನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಸಮುದಾಯವು ಒತ್ತಾಯಿಸುತ್ತದೆ ಎಂದು ನಾವು ಹಾರೈಸುತ್ತೇವೆ ಮತ್ತು ಗಡಿದಾಟಿ ದಾಳಿ ನಡೆಸುವ ಯಾವುದೇ ದುಸ್ಸಾಹಸದಿಂದ ದೂರವಿರುವಂತೆ ಭಾರತವನ್ನು ಎಚ್ಚರಿಸುತ್ತಿದೇವೆ ಎಂದು ಹೇಳಿಕೆ ತಿಳಿಸಿತು.  ದಾಳಿ ಘಟನೆಗೆ ಸಂಬಂಧಿಸಿದಂತೆ ಜೆಇಎಂನತ್ತ ಬೆರಳು ತೋರುವಂತಹ ಸಂಪರ್ಕ- ಸಂವಹನ ಸಾಕ್ಷ್ಯಗಳು ನಮಗೆ ಲಭಿಸಿವೆ. ದಾಳಿಕೋರರ ಬಳಿ ಅಸಾಲ್ಟ್ ರೈಫಲ್ ಗಳು, ಒಂದು ಗ್ರೆನೇಡ್ ಲಾಂಚರ್ ಮತ್ತು ಗ್ರೆನೇಡುಗಳು ಇದ್ದುದು ಪತ್ತೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್ ಪಿ ವೈದ್ ವರದಿಗಾರರಿಗೆ ತಿಳಿಸಿದರು.  ೨೦೧೬ರಲ್ಲಿ ಕಾಶ್ಮೀರದ ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ ೧೮ ಯೋಧರನ್ನು ಬಲಿತೆಗೆದುಕೊಂಡದ್ದಕ್ಕೆ ಪ್ರತಿಯಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ್ದುದಾಗಿ ಭಾರತ ಪ್ರಕಟಿಸಿತ್ತು.  ಕಾಶ್ಮೀರದಲ್ಲಿನ ಭಯೋತ್ಪಾದಕರಿಗೆ ಭೌತಿಕ ನೆರವು ನೀಡಲಾಗುತ್ತಿದೆ ಎಂಬುದನ್ನು ನಿರಾಕರಿಸಿರುವ ಪಾಕಿಸ್ತಾನ, ತಾನು ಕಾಶ್ಮೀರಿ ಜನರಿಗೆ ಸ್ವಯಂ ನಿರ್ಣಯಾಧಿಕಾರದ ಹೋರಾಟದಲ್ಲಿ ನೈತಿಕ ಹಾಗೂ ರಾಜತಾಂತ್ರಿಕ ಬೆಂಬಲವನ್ನು ಮಾತ್ರ ನೀಡುತ್ತಿರುವುದಾಗಿ ಹೇಳಿಕೊಂಡಿತು.  ಜಮ್ಮುವಿನಲ್ಲಿ ದಾಳಿ ನಡೆದ ಬೆನ್ನಲ್ಲೇ ಈದಿನ ಶ್ರೀನಗರದ ಇನ್ನೊಂದು ಭಾರತೀಯ ಸೇನಾ ಶಿಬಿರದ ಮೇಲೆ ಈದಿನ ದಾಳಿ ಯತ್ನ ನಡೆದಿದ್ದು, ಭಾರತೀಯ ಯೋಧರು ಅದನ್ನು ವಿಫಲಗೊಳಿಸಿದರು.

2018: ಗುವಾಹಟಿ: ನಾಗಾಲ್ಯಾಂಡಿನ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮೈತ್ರಿಕೂಟದ ಸಿಎಂ ಅಭ್ಯರ್ಥಿ ನೀಫಿಯು ರಿಯೋ ಅವರು ಉತ್ತರ ಅಂಗಮಿ ೨ ವಿಧಾನಸಭಾ ಕ್ಷೇತ್ರದಲ್ಲಿ ಏಕೈಕ ಪ್ರತಿಸ್ಪರ್ಧಿ ನಾಮಪತ್ರ ಹಿಂತೆಗೆದುಕೊಂಡ ಕಾರಣ ಅವಿರೋಧವಾಗಿ ಆಯ್ಕೆಯಾದರು. ಪ್ರಸ್ತುತ ನಾಗಾಲ್ಯಾಂಡಿನ ಏಕೈಕ ಲೋಕಸಭಾ ಸದಸ್ಯರಾಗಿರುವ ರಿಯೋ ಅವರಿಗೆ ೨೦ ವರ್ಷಗಳ ಬಳಿಕ ಲಬಿಸಿರುವ ಈ ಮಾದರಿಯ ಎರಡನೇ ವಿಜಯ ಇದು. ೧೯೯೮ರಲ್ಲಿ ಇತರ ಪಕ್ಷಗಳ ನೇತೃತ್ವದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಾದ ಪರಿಣಾಮವಾಗಿ ಕಾಂಗ್ರೆಸ್ ಸದಸ್ಯರಾಗಿ ಸ್ಪರ್ಧಿಸಿದ್ದ ರಿಯೋ ಅವಿರೋಧವಾಗಿ ಜಯಗಳಿಸಿದ್ದರು. ಈ ಬಾರಿ ರಿಯೋ ಅವರು ನೂತನ ಪ್ರಾದೇಶಿಕ ಪಕ್ಷ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿಯ (ಎನ್ ಡಿಪಿಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಎನ್ ಡಿಪಿಪಿಯು ಬಿಜೆಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಎನ್ ಪಿಎಫ್ (ನಾಗಾ ಪೀಪಲ್ಸ್ ಫ್ರಂಟ್) ಅಭ್ಯರ್ಥಿ ನಾಮಪತ್ರ ವಾಪಸಾತಿಗೆ ಕೊನೆಯ ದಿನವಾಗಿದ್ದ ಈದಿನ ತಮ್ಮ ನಾಮಪತ್ರ ಹಿಂತೆಗೆದುಕೊಂಡರು. ಹೀಗಾಗಿ ಕಣದಲ್ಲಿ ಉಳಿದಿದ್ದ ಏಕೈಕ ಎನ್ ಡಿಪಿಪಿ ಅಭ್ಯರ್ಥಿಯನ್ನು ವಿಜಯಿ ಎಂಬುದಾಗಿ ಘೋಷಿಸಲಾಗಿದೆ ಎಂದು ನಾಗಾಲ್ಯಾಂಡಿನ ಮುಖ್ಯ ಚುನಾವಣಾ ಅಧಿಕಾರಿ ಅಭಿಜಿತ್ ಸಿನ್ಹ ಹೇಳಿದರು.  ತಮ್ಮ ಪಕ್ಷದ ಅಭ್ಯರ್ಥಿ ಚುಫುವೊ ಅಂಗಮಿ ಅವರ ದಿಢೀರ್ ನಿರ್ಧಾರ ಪಕ್ಷಕ್ಕೆ ಅಚ್ಚರಿ ಉಂಟು ಮಾಡಿದೆ ಎಂದು ಎನ್ ಪಿಎಫ್ ವಕ್ತಾರ ಸೆಬಾಸ್ಟಿಯನ್ ಝುಮ್ವು ಹೇಳಿದರು. ತಾನು ಗೆಲ್ಲುವ ಅವಕಾಶಗಳು ಅತ್ಯಂತ ಕಡಿಮೆ ಎಂಬುದು ಅವರ ಗಮನಕ್ಕೆ ಬಂದಿರಬಹುದು ಎಂದು ಸೆಬಾಸ್ಟಿಯನ್ ನುಡಿದರು. ಎನ್ ಡಿಪಿಪಿ ಮತ್ತು ಬಿಜೆಪಿ ನಾಯಕರು ರಿಯೋ ಅವರ ಜಯವನ್ನು ಮೈತ್ರಿಕೂಟದ ಪಾಲಿಗೆ ಶುಭ ಲಕ್ಷಣ ಎಂದು ಬಣ್ಣಿಸಿದರು.  ‘ಇಷ್ಟೊಂದು ಬೇಗನೆ ವಿಜಯ ಪ್ರಾಪ್ತಿಯಾಗುವುದೆಂದು ನಾನು ನಿರೀಕ್ಷಿಸಿರಲಿಲ್ಲ. ಚುನಾವಣಾ ದಿನದಂದು (ಫೆ.೨೭) ಉತ್ತಮ ಪ್ರದರ್ಶನವನ್ನು ನಾವು ತೋರಿಸಲಿದ್ದೇವೆ ಎಂಬ ವಿಶ್ವಾಸವನ್ನು ಈ ವಿಜಯವು ನಮ್ಮಲ್ಲಿ ಮೂಡಿಸಿದೆ ಎಂದು ರಿಯೋ ಹೇಳಿದರು. ೨೦೦೩ರಿಂದ ೧೧ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ ರಿಯೋ ೨೦೧೪ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ ರಾಜ್ಯ ರಾಜಕಾರಣಕ್ಕೆ ಹಿಂತಿರುಗಲು ಬಳಿಕ ಹಲವಾರು ಪ್ರಯತ್ನಗಳನ್ನು ನಡೆಸಿದ್ದರು.

2018: ಲಂಡನ್/ ಸಿಂಗಾಪುರ: ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಇನ್ನೊಂದು ಆಘಾತ ಎದುರಾಯಿತು. ಇಂಗ್ಲೆಂಡಿನ ನ್ಯಾಯಾಲಯವೊಂದು ಪ್ರಸುತ ಸುಸ್ತಿದಾರನಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ವಿರುದ್ಧ ತೀರ್ಪು ನೀಡಿ, ಬಿಒಸಿ ಏವಿಯೇಶನ್‌ಗೆ  ೯೦ ದಶಲಕ್ಷ (೯ ಕೋಟಿ) ಡಾಲರ್ ಗಳನ್ನು ನೀಡುವಂತೆ ಕಿಂಗ್ ಫಿಶರ್ ಏರ್ ಲೈನ್ಸ್ ಮತ್ತು ಯುನೈಟೆಡ್ ಬ್ರೀವರೀಸ್ ಗೆ ಆಜ್ಞಾಪಿಸಿತು. ೯೦೦೦ ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಗಡೀಪಾರು ಮಾಡುವಂತೆ ೬೨ರ ಹರೆಯದ ಮಲ್ಯ ವಿರುದ್ಧದ ಪ್ರಕರಣ ವೆಸ್ ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಮಾರ್ಚ್ ೧೬ರಂದು ವಿಚಾರಣೆಗೆ ಬರಲಿದ್ದು, ಅದಕ್ಕೆ ಮುನ್ನ ಲಂಡನ್ನಿನ ಬಿಸಿನೆಸ್ ಅಂಡ್ ಪ್ರಾಪರ್ಟಿ ಕೋರ್ಟ್ ಫೆಬ್ರುವರಿ ೫ರಂದು ಕಿಂಗ್ ಫಿಶರ್ ವಿರುದ್ದ ತೀರ್ಪು ನೀಡಿತು. ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಮತ್ತು ಯುನೈಟೆಡ್ ಬ್ರೀವರೀಸ್ ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಕೋರ್ಟ್ ಹೇಳಿತು. ಬಿಒಸಿ ಏವಿಯೇಶನ್ ಕಂಪೆನಿಯಿಂದ ನಾಲ್ಕು ವಿಮಾನಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕಿಂಗ್ ಫಿಶರ್ ಮತ್ತು ಬಿಒಸಿ ಏವಿಯೇಶನ್ ನಡುವೆ ಆಗಿದ್ದ ಒಪ್ಪಂದದ ಪ್ರಕರಣ ಇದು. ಕಿಂಗ್ ಫಿಶರ್ ನಿಂದ ಭದ್ರತಾ ಠೇವಣಿಯ ಪಾವತಿ ಸಮರ್ಪಕವಾಗಿ ಆಗಿಲ್ಲ ಎಂಬುದು ಬಿಒಸಿ ಏವಿಯೇಶನ್ ದೂರು. ಒಪ್ಪಂದದ ಪ್ರಕಾರ ಕಿಂಗ್ ಫಿಶರ್ ಮತ್ತು ಯುನೈಟೆಡ್ ಬ್ರೀವರೀಸ್ ವೆಚ್ಚ ಸಹಿತವಾಗಿ ಹಣ ಪಾವತಿ ಮಾಡಲೇಬೇಕು ಎಂದು ಲಂಡನ್ ಹೈಕೋರ್ಟ್ ತೀರ್ಪು ನೀಡಿತು.

2017: ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 9 ವಿಕೆಟ್ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ಅಂಧರ ಟಿ20 ವಿಶ್ವಕಪ್ ಕಿರೀಟವನ್ನು ಸತತ 2ನೇ ಬಾರಿಗೆ ಮುಡಿಗೇರಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 9 ವಿಕೆಟ್ ಕಳೆದುಕೊಂಡು 191 ರನ್ ಕಲೆ ಹಾಕಿತು. ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ 18 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತದ ಪರ ಆರಂಭಿಕ ಆಟಗಾರ ಪ್ರಕಾಶ್ ಜಯರಾಮಯ್ಯ ಅಜೇಯ 99 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಅಜಯ್ ಕುಮಾರ್ ರೆಡ್ಡಿ 43 ರನ್ ಗಳಿಸಿದರು. ಪ್ರಕಾಶ್ ಜಯರಾಮಯ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಪಾಕಿಸ್ತಾನ ಬದರ್ ಮುನೀರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 2012 ವಿಶ್ವಕಪ್ನಲ್ಲೂ ಸಹ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿತ್ತು.
2017: ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಮೊಸಳೆ ಕಣ್ಣೀರು ಸುರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ . ಪನ್ನೀರಸೆಲ್ವಂ ಕಿಡಿಕಾರಿದರು. ಇದಕ್ಕೂ ಮೊದಲು ಶಶಿಕಲಾ ಅವರು ಪತ್ರಿಕಾಗೋಷ್ಠಿ ನಡೆಸಿ, ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಶಿರ್ವಾದ ನಮ್ಮ ಮೇಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿ ನಂತರ ಅಮ್ಮನವರ ಸಮಾಧಿಗೆ ತೆರಳಿ ಅಲ್ಲಿ ಭಾವಚಿತ್ರ ತೆಗೆಸಿಕೊಂಡು ವಿಶ್ವದ ಮುಂದೆ ನಮ್ಮ ಜಯ ಪ್ರಸ್ತುತಪಡಿಸುತ್ತೇವೆ ಎಂದು ಹೇಳುತ್ತ ಭಾವುಕರಾಗಿ ಕಣ್ಣೀರು ಹರಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಮಾಧ್ಯಮದ ಮುಂದೆ ಕಾಣಿಸಿಕೊಂಡ ಪನ್ನೀರಸೆಲ್ವಂ ಅವರು ‘ ಜನತೆಯ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಶಶಿಕಲಾ ಅವರು ಮುಂದಾಗಿದ್ದಾರೆ. ಗೋಲ್ಡನ್ರೆಸಾರ್ಟ್ನಲ್ಲಿ ಬಂಧಿಯಾಗಿರುವ ಶಾಸಕರಿಗೆ ದಿಗ್ಭಂಧನ ವಿಧಿಸಿದ್ದಾರೆ. ಪ್ರತಿ ಶಾಸಕರ ಮೇಲೆ ನಿಗಾ ಇರಿಸಲು ತಲಾ ನಾಲ್ಕು ರೌಡಿಗಳನ್ನು ನೇಮಿಸಿದ್ದಾರೆ’ ಎಂದು ಹೇಳಿದರು. ಈದಿನವೂ ಹಲವಾರು ಮಂದಿ ಸಂಸತ್ ಸದಸ್ಯರು ಪನ್ನೀರಸೆಲ್ವಂ ಅವರಿಗೆ ತಮ್ಮ ಬೆಂಬಲ ಘೋಷಿಸಿದರು.
2017: ಚೆನ್ನೈ: ಮಹಿಳೆ ರಾಜಕೀಯದಲ್ಲಿ ಇರುವುದು ಬಲು ಕಷ್ಟ. ಜಯಲಲಿತಾ ಅವರು
ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹದ್ದೇ ಪರಿಸ್ಥಿತಿ ಇತ್ತುಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಅಸಮಾಧಾನ ಹೊರಹಾಕಿದರು. ತಮಿಳುನಾಡು ರಾಜ್ಯಪಾಲ ಸಿ. ವಿದ್ಯಾಸಾಗರ್ರಾವ್ಅವರು ಸರ್ಕಾರ ರಚಿಸಲು ಆಹ್ವಾನ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನಗೊಂಡಿರುವ ಶಶಿಕಲಾ ಅವರು, ತಮ್ಮ ಪೋಯಸ್ಗಾರ್ಡನ್ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಐಎಡಿಎಂಕೆ ಸರ್ಕಾರ ಮುಂದಿನ ನಾಲ್ಕೂವರೆ ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ. ಅಧಿಕಾರದಲ್ಲಿದ್ದು ಜನ ಸೇವೆ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಪಾಲರಿಗೆ ತಮ್ಮ ವಿಳಾಸದ ಅಡಿ ಬೆರೆದಿರುವ ನಕಲಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆ ರಾಜಕೀಯದಲ್ಲಿ ಇರುವುದು ತುಂಬಾ ಕಷ್ಟ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಇವೆಲ್ಲವುಗಳನ್ನು ನಾನು ಕಂಡಿದ್ದೇನೆ. ಆದರೆ, ಜಯಲಲಿತಾ ಅವರು ಅವುಗಳನ್ನೆಲ್ಲ ಮೀರಿ ಬೆಳೆದರು ಎಂದು ಹೇಳಿದರು.  ಹೊರಗಿನ ಶಕ್ತಿಗಳು ಪಕ್ಷವನ್ನು ಒಡೆಯಲು ಹವಣಿಸುತ್ತಿವೆ. ಇದಕ್ಕೆಲ್ಲ ಆಸ್ಪದ ಕೊಡುವುದಿಲ್ಲ. ಪಕ್ಷದ ಶಾಸಕರು ನನ್ನೊಟ್ಟಿಗಿದ್ದಾರೆ. ಶಾಸಕರೊಟ್ಟಿಗೆ ನಿನ್ನೆಯೇ ಚರ್ಚೆ ನಡೆಸಿದ್ದೇನೆ. ಇಂದು ಅವರನ್ನು ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದರು. ಬಳಿಕ ಪಕ್ಷ ಶಾಸಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
2017: ಕಾಶ್ಮೀರ: ಕುಲಗಂ ಜಿಲ್ಲೆಯ ಯಾರಿಪೋರದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾದರು. ಇಬ್ಬರು ಯೋಧರು ಗಾಯಗೊಂಡರು. ಗುಂಡಿನ ಘರ್ಷಣೆ ಮುಂದುವರೆಯಿತು.  ನಾಲ್ಕು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ದಕ್ಷಿಣ ಕಾಶ್ಮೀರದ ಕುಲಗಂ ಜಿಲ್ಲೆಯಲ್ಲಿ ಈದಿನ  ನಸುಕಿನ ವೇಳೆಯಲ್ಲಿ ಗುಂಡಿನ ಘರ್ಷಣೆ ಆರಂಭವಾಯಿತು. ಶ್ರೀನಗರದಿಂದ 60 ಕಿಮೀ ದೂರದ ಕುಲಗಂ ಗ್ರಾಮದಲ್ಲಿ ಭಯೋತ್ಪಾದಕರು ಅವಿತಿರುವ ಖಚಿತ ಪೊಲೀಸ್ ಮಾಹಿತಿಯನ್ನು ಆಧರಿಸಿ ಸೇನೆ ಗ್ರಾಮವನ್ನು ಸುತ್ತುವರೆಯಿತು. ಮನೆಯೊಂದರಲ್ಲಿ ಅವಿತಿದ್ದ ಭಯೋತ್ಪಾದಕರು ಶರಣಾಗುವಂತೆ ಸೂಚಿಸಿದಾಗ ಗುಂಡಿನ ದಾಳಿ ಆರಂಭಿಸಿದರು. ಯೋಧರೂ ಸೂಕ್ತ ಉತ್ತರ ನೀಡಿದಾಗ ಭೀಕರ ಗುಂಡಿನ ಘರ್ಷಣೆ ಆರಂಭಗೊಂಡಿತು. ಹಲವಾರು ತಾಸುಗಳ ಕಾಲ ನಡೆದ ಘರ್ಷಣೆಯಲ್ಲಿ 4 ಮಂದಿ ಭಯೋತ್ಪಾದಕರು ಹತರಾದರು ಎಂದು ಪೊಲೀಸ್ ಮೂಲಗಳು ತಿಳಿಸಿದವು. ಗಾಯಗೊಂಡಿದ್ದ ಇಬ್ಬರು ಯೋಧರು ಚಿಕಿತ್ಸೆಗಾಗಿ ಒಯ್ಯುವ ಮುನ್ನವೇ ಅಸು ನೀಗಿದರು. ಮೂವರು ಯೋಧರನ್ನು ವಿಮಾನ ಮೂಲಕ ಇಲ್ಲಿ ಸೇನಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಯಿತು. ಕೆಲವು ಭಯೋತ್ಪಾದಕರು ತಲೆ ತಪ್ಪಿಸಿಕೊಂಡಿರುವ ಶಂಕೆ ಇರುವುದರಿಂದ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
2017: ತೆಸ್ಸಾಲೊನಿಕಿ (ಗ್ರೀಸ್): ಎರಡನೇ ವಿಶ್ವ ಸಮರ ಕಾಲದಸಜೀವ ಬಾಂಬ್ಒಂದು ಗ್ಯಾಸ್ ಸ್ಟೇಷನ್ ಅಡಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅಂದಾಜು 75,000 ಮಂದಿಯನ್ನು ತೆರವುಗೊಳಿಸಿದ ಘಟನೆ ಗ್ರೀಸ್ ದೇಶದಲ್ಲಿ  ಘಟಿಸಿತು. 227 ಕಿಲೋಗ್ರಾಂ ತೂಕದ ಸಜೀವ ಬಾಂಬನ್ನು ನಿಷ್ಕ್ರಿಯಗೊಳಿಸಲು ಸೇನಾ ತಜ್ಞರಿಗೆ ಅನುವು ಮಾಡಿಕೊಡುವ ಸಲುವಾಗಿ ಉತ್ತರ ಗ್ರೀಕ್ ನಗರ ತೆಸ್ಸಾಲೋನಿಕಿಯ ಸುಮಾರು 75,000 ಮಂದಿಯನ್ನು ತೆರವುಗೊಳಿಸಲಾಯಿತು. ಬಸ್ಸು ಸೇರಿದಂತೆ ಹಲವಾರು ವಾಹನಗಳ ಸಂಚಾರವೂ ಸ್ಥಗಿತಗೊಂಡಿತು. ಸ್ಥಳೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಜನರನ್ನು ತೆರವುಗೊಳಿಸುವ ಕಾರ್ಯ ಆರಂಭವಾಯಿತು. ಪೊಲೀಸರು ಮನೆ ಮನೆಗೂ ತೆರಳಿ ಗಂಟೆ ಭಾರಿಸುವುದರ ಜೊತೆಗೆ ಬಾಗಿಲುಗಳನ್ನೂ ಬಡಿದು ಮನೆ ಬಿಟ್ಟು ತೆರಳುವಂತೆ ಎಚ್ಚರಿಸಿದರು. ಕೊರ್ಡೇಲಿಯೋ ಪಶ್ಚಿಮ ಹೊರವಲಯದ ಸುಮಾರು 1.9 ಕಿಮೀ ಆಸುಪಾಸಿನ ಜನರನ್ನು ಮನೆಗಳಿಂದ ತೆರವುಗೊಳಿಸಲಾಯಿತು. ಬಾಂಬ್ ನಿಷ್ಕ್ರಿಯ ತಜ್ಞರು ಸುಮಾರು 90 ನಿಮಿಷ ತಡವಾಗಿ ಬೆಳಗ್ಗೆ 11.30ಕ್ಕೆ ಬಾಂಬ್ ನಿಷ್ಕ್ರಿಯಗೊಳಿಸುವ ಕೆಲಸ ಆರಂಭಿಸಿದರು. ಆದರೆ ಕೇವಲ 30 ನಿಮಿಷಗಳಲ್ಲಿ ತಮ್ಮ ಕಾರ್ಯ ಪೂರೈಸಿದರು ಎಂದು ಸೆಂಟ್ರಲ್ ಮೆಕಡೋನಿಯಾ ಗವರ್ನರ್ ಅಪೊಸ್ಟೊಲೋಸ್ ತಜಿಕೊಸ್ಟಾಸ್ ಪ್ರಕಟಿಸಿದರು. ಬಾಂಬನ್ನು ಸೇನಾ ಫೈರಿಂಗ್ ವಲಯಕ್ಕೆ ಒಯ್ಯಲಾಗುತ್ತಿದೆ. ಬಾಂಬ್ ನಿಷ್ಕ್ರಿಯಗೊಳಿಸುವ ಮೊದಲ ಹಂತ ಯಶಸ್ವಿಯಾಗಿದೆ, ಆದರೆ ಸಾಗಣೆ ಹಂತದಲ್ಲೂ ಕೆಲ ಅಪಾಯಗಳಿರುವುದರಿಂದ ನಿವಾಸಿಗಳಿಗೆ ತತ್ ಕ್ಷಣ ಆಗಮಿಸಲು ಅನುಮತಿ ನೀಡಲಾಗದು ಎಂದು ಅವರು ನುಡಿದರು. ಸಜೀವ ಬಾಂಬ್ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಜನ ತಮ್ಮ ಕಾರುಗಳು, ಬಸ್ಸುಗಳಲ್ಲಿ ಹೊರವಲಯದ ಶಾಲೆಗಳು, ಕ್ರೀಡಾ ಸಭಾಂಗಣಗಳತ್ತ ಧಾವಿಸಿದರು. ಸ್ಪೋಟಗೊಂಡರೆ ಭೂಕಂಪದ ಅನುಭವವಾಗುತ್ತದೆ ಎಂದು ಟಿವಿಯಲ್ಲಿ ಹೇಳುತ್ತಿದ್ದುದನ್ನು ನಾವು ಕೇಳಿಸಿಕೊಂಡೆವು ಎಂದು ಚಿಂತಾಕ್ರಾಂತರಾಗಿದ್ದ 71 ಹರೆಯದ ಮಿಚಲಿಸ್ ಪಪನೋಸ್ ನುಡಿದರು.

2017: ಗೋವಾ: ಕನ್ನಡ ನಟಿ ನಿವೇದಿತಾ ಕೆಲ ದಿನಗಳ ಹಿಂದೆ ಗೋವಾಕ್ಕೆ ತೆರೆಳಿದ್ದ ವೇಳೆ ಕಿಡಿಗೇಡಿಗಳ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡಿತ್ತು ಎಂದು ಪ್ರತಿಪಾದಿಸಿದರು.  'ಅವ್ವ', 'ಡಿಸೆಂಬರ್ 1', 'ಕಿಲಾಡಿ ಕಿಟ್ಟಿ', ‘ಸಿಕ್ಸರ್‌’ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಬಿಡುಗಡೆಗೆ ಸಿದ್ದವಿರುವ ತಮ್ಮ ಮುಂದಿನ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿ, ‘ತಾವು ಇತ್ತೀಚೆಗೆ ಬಿಡುವಿಲ್ಲದ ಚಿತ್ರೀಕರಣದ ನಡುವೆ ವಿಶ್ರಾಂತಿಗಾಗಿ ಗೋವಾಕ್ಕೆ ತೆರಳಿದ್ದ ವೇಳೆ  ಕೆಟ್ಟ ಅನುಭವ ಎದುರಾಗಿತ್ತುಎಂದು ಹೇಳಿಕೊಂಡಿದ್ದರು. ಘಟನೆ ವಿವರಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ತಮ್ಮ ಪ್ರಿಯತಮನ ಜೊತೆ  ಕೆಲ ಸಮಯ ವಿಶ್ರಾಂತಿ ಪಡೆಯಲು ನಟಿ ನಿವೇದಿತಾ ಬಯಸಿದ್ದರು. ಅದರಂತೆ ಕೆಲ ದಿನಗಳ ಹಿಂದೆ ಗೋವಾಕ್ಕೆ ತೆರಳಿದ್ದ ಅವರು ಒಂದೆರಡು ದಿನ ಒಂಟಿಯಾಗಿರಲು ಬಯಸಿ, ತಮ್ಮ ಪ್ರಿಯತಮನಿಗೆ ಎರಡು ದಿನ ತಡವಾಗಿ ಬರಲು ತಿಳಿಸಿ ಹೊಟೆಲ್ವೊಂದರಲ್ಲಿ ಉಳಿದುಕೊಂಡಿದ್ದರು. ರಾತ್ರಿ 9 ಸುಮಾರಿಗೆ ಸಮುದ್ರತೀರದಲ್ಲಿ ವಿರಮಿಸುತ್ತಿರುವ ವೇಳೆ ಪುಂಡರ ಗುಂಪೊಂದು ಎದುರಾಗಿ ಅವಾಚ್ಯ ಪದ ಬಳಸಿ ನಿಂದಿಸಿತ್ತು. ಅಲ್ಲಿಂದ ವಾಪಸ್ಸಾದ ನಟಿ ಹೊಟೆಲ್ಗೆ ತೆರಳಿದ್ದರು. ಮತ್ತೆ ಅವರ ಪಕ್ಕದ ಟೇಬಲ್ಗೆ ಬಂದು ಕುಳಿತ ಯುವಕರು, ಅವರೊಂದಿಗೆ ಕುಳಿತುಕೊಳ್ಳುವಂತೆ ಪ್ರಚೋದಿಸಿದರು. ಭಯಗೊಂಡ ನಟಿ ಹೊಟೆಲ್ಸಿಬ್ಬಂದಿಯನ್ನು ಕರೆದು ತಮ್ಮ ಕೊಠಡಿಗೆ ತೆರಳಿದ್ದರು. ಬಗ್ಗೆ ಹೇಳಿಕೊಂಡಿರುವ ಅವರುಮಹಿಳೆಯೊಬ್ಬಳು ಒಂಟಿಯಾಗಿದ್ದರೆ ಏನೆಲ್ಲ ನಡೆಯಬಹುದು ಎಂಬುದಕ್ಕೆ ಘಟನೆ ಸೂಕ್ತ ನಿದರ್ಶನವಾಗಿದೆ. ಘಟನೆ ನಂತರ ಪುರುಷನೊಂದಿಗೆ ಇದ್ದರೆ ಮಾತ್ರ ಮಹಿಳೆ ಸುರಕ್ಷಿತ ಎನಿಸಲು ಶುರುವಾಗಿದೆ ಎಂದಿದ್ದರು. ಘಟನೆ ಕುರಿತು ಇತ್ತೀಚೆಗೆ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ನಿವೇದಿತಾ ಅವರಿಗೆಅವ್ವಚಿತ್ರದ ಪಾತ್ರಕ್ಕೆ ಉತ್ತಮ ಪೋಷಕ ನಟಿರಾಜ್ಯ ಪ್ರಶಸ್ತಿಲಭಿಸಿತ್ತು.
2009: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಮುಂಬೈ ಮೇಲೆ ನಡೆದ ಉಗ್ರರ ದಾಳಿಗೂ (26/11) ತನಗೂ ಸಂಬಂಧ ಇರುವುದನ್ನು ಪಾಕಿಸ್ಥಾನವು ಕೊನೆಗೂ ಒಪ್ಪಿಕೊಂಡಿತು. ದಾಳಿಯ ಕೆಲವು ಸಂಚು ರೂಪುಗೊಂಡದ್ದು ತನ್ನ ನೆಲದಲ್ಲೇ ಎಂದು ಒಪ್ಪಿಕೊಂಡಿತು. ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಜಕೀರ್ ರೆಹಮಾನ್ ಲಖ್ವಿಯೇ ಈ ದಾಳಿ ರೂಪಿಸಿದ್ದು, ಆತನ ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 9 ಮಂದಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಪಾಕಿಸ್ಥಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಇಸ್ಲಾಮಾಬಾದಿನಲ್ಲಿ ಪ್ರಕಟಿಸಿದರು. ಹಮದ್ ಅಮೀನ್ ಸಾದಿಕ್ ಎಂಬಾತ ದಾಳಿಯ ಮುಖ್ಯ ಸಂಘಟಕನಾಗಿದ್ದ. ಇನ್ನಿಬ್ಬರು ಆರೋಪಿಗಳನ್ನು ಖಾನ್ ಮತ್ತು ರಿಯಾಜ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

2009: ನ್ಯೂಜೆರ್ಸಿಯಿಂದ ಬಫೆಲೋಗೆ ಹೊರಟಿದ್ದ ವಿಮಾನವೊಂದು ಇಲ್ಲಿಗೆ ಸಮೀಪದ ಗ್ರಾಮವೊಂದರ ಮನೆಯ ಮೇಲೆ ಬಿದ್ದು ಹೊತ್ತಿ ಉರಿದ ಘಟನೆಯಲ್ಲಿ ಒಟ್ಟು 49 ಜನ ಮೃತರಾದರು. ವಿಮಾನ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ಕ್ಲಾರೆನ್ಸ್ ಸೆಂಟರ್ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 48 ಜನ ಹಾಗೂ ಕೆಳಗೆ ನಿಂತಿದ್ದ ಒಬ್ಬರು ಮೃತರಾದರು.

2009: ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಎರಡು ಬೃಹತ್ ಉಪಗ್ರಹಗಳು ಪರಸ್ಪರ ಡಿಕ್ಕಿ ಹೊಡೆದು, ವಿಜ್ಞಾನಿಗಳಲ್ಲಿ ಭಾರಿ ಅಚ್ಚರಿಗೆ ಕಾರಣವಾದವು. ಈ ಘಟನೆಯಿಂದ ಸದ್ಯ ನಿರ್ಮಾಣ ಹಂತದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾವುದೇ ಆತಂಕ ಇಲ್ಲ ಎಂದು 'ನಾಸಾ' ಮತ್ತು ರಷ್ಯದ ವಿಜ್ಞಾನಿಗಳು ಭರವಸೆ ನೀಡಿದರು. ಅಮೆರಿಕದ ಖಾಸಗಿ ಒಡೆತನದ ಸಂಪರ್ಕ ಉಪಗ್ರಹ ಇರಿಡಿಯಂ 33 (1,235 ಪೌಂಡ್) ರಷ್ಯದ ಸೇನಾ ಉದ್ದೇಶದ ಕಾಸ್‌ಮಾಸ್ 2,251 ಉಪಗ್ರಹಕ್ಕೆ ಅಪ್ಪಳಿಸಿತು. ಈ ಸಂದರ್ಭದಲ್ಲಿ ಉಂಟಾದ ಮಿಂಚಿನಿಂತಹ ಬೆಳಕನ್ನು ಅಮೆರಿಕದ ರಕ್ಷಣಾ ಇಲಾಖೆಯ ಬಾಹ್ಯಾಕಾಶ ಸರ್ವೇಕ್ಷಣಾ ಜಾಲ ಗಮನಿಸಿತು. ಡಿಕ್ಕಿಯಿಂದ ದಟ್ಟ ಮೋಡದಂತಹ ವಾತಾವರಣ ನಿರ್ಮಾಣವಾಯಿತು. ರಷ್ಯದ ಉಪಗ್ರಹವನ್ನು 1993ರಲ್ಲಿ ಹಾರಿಬಿಡಲಾಗಿತ್ತು. ಸದ್ಯ ಅದು ಭೂಮಿಯ ನಿಯಂತ್ರಣ ಕಳೆದುಕೊಂಡು ಬಳಕೆಯಲ್ಲಿ ಇರಲಿಲ್ಲ. ಅಮೆರಿಕದ ಉಪಗ್ರಹವನ್ನು 1997 ರಲ್ಲಿ ಉಡಾಯಿಸಲಾಗಿತ್ತು. ಸೈಬೀರಿಯಾದಿಂದ 790 ಕಿ.ಮೀ. ಎತ್ತರದಲ್ಲಿ ಈ ಡಿಕ್ಕಿ ಸಂಭವಿಸಿತು. ಭೂಮಿಗೆ ಕಡಿಮೆ ದೂರದ ಕಕ್ಷೆಯಲ್ಲಿ ಸುತ್ತುತ್ತಿರುವ 66 ಉಪಗ್ರಹಗಳಲ್ಲಿ ಇರಿಡಿಯಂ ಕೂಡ ಒಂದಾಗಿತ್ತು. ಜಾಗತಿಕವಾಗಿ ಇದು ಮೊಬೈಲ್ ಧ್ವನಿ, ದತ್ತಾಂಶ ಸಂಪರ್ಕ ನೀಡುವ ಸೇವೆ ಸಲ್ಲಿಸುತ್ತಿತ್ತು.

2009: ಎರಡು ವರ್ಷಗಳ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ನಿಥಾರಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಕೊನೆಗೂ ತಪ್ಪಿತಸ್ಥರೆಂದು ಸಾಬೀತಾಯಿತು. ಇದರಿಂದಾಗಿ ಪಂಧೇರ್ ನಿರ್ದೋಷಿ ಎಂದು ಘೋಷಿಸಿದ್ದ ಸಿಬಿಐ, ಭಾರಿ ಮುಜಗರ ಎದುರಿಸುವಂತಾಯಿತು. ಆರೋಪಿ ಮೊಣಿಂದರ್ ಸಿಂಗ್ ಪಂಧೇರ್ ಮತ್ತು ಆತನ ಸೇವಕ ಸುರೇಂದ್ರ ಕೋಲಿ ವಿರುದ್ಧದ 19 ಪ್ರಕರಣಗಳಲ್ಲಿ ಒಂದು ಪ್ರಕರಣ ಇತ್ಯರ್ಥಗೊಂಡಿತು.

2008: ದುಬಾರಿ ಬಟ್ಟೆಗಳನ್ನು ಆತಂಕದಲ್ಲಿಯೇ ಅಗಸನಿಗೆ ನೀಡುವ ದಿನಗಳಿಗೆ ಕೊನೆ ಬರಲಿದೆ. ಸಂಶೋಧಕರು ಈಗ ತಾನೇತಾನಾಗಿ ಸ್ವಚ್ಛಗೊಳ್ಳುವ ವಸ್ತ್ರವನ್ನು ವಿಜ್ಞಾನಿಗಳು ಕಂಡುಹಿಡಿದರು. ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಆಸ್ಟ್ರಿಯಾದ ಮೋನಾಷ್ ವಿಶ್ವವಿದ್ಯಾಲಯ ಮತ್ತು ಹಾಂಕಾಂಗಿನ ಪಾಲಿಟೆಕ್ನಿಕ್ ವಿವಿಯ ಸಂಶೋಧಕರು ಈ ವಸ್ತ್ರವನ್ನು ಅಭಿವೃದ್ಧಿಪಡಿಸಿದವರು. ಕೊಳೆಯಾದ ಬಟ್ಟೆಯನ್ನು ಬಿಸಿಲಿಗೆ ಸ್ವಲ್ಪ ಹೊತ್ತು ಹಿಡಿದರೆ ಸಾಕು ಬಟ್ಟೆಯೇ ಕೊಳೆ ಕೊಡವಿಕೊಂಡು ಶುಭ್ರವಾಗಿ ಕಾಣಿಸುತ್ತದೆ.

2008: 2008ರ ಜುಲೈ 1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲ ಅಧಿಸೂಚಿತ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕವನ್ನು ಕಡ್ಡಾಯ ಮಾಡಿ ಹೈಕೋರ್ಟ್ ಆದೇಶ ನೀಡಿತು. ವೇಗ ನಿಯಂತ್ರಕ ಅಳವಡಿಸಿಕೊಳ್ಳದ ಯಾವುದೇ ಸಾರಿಗೆ ವಾಹನಗಳು ಜೂನ್ 30ರ ನಂತರ ರಸ್ತೆಗೆ ಇಳಿಯುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಎಚ್ಚರಿಕೆ ನೀಡಿತು. 2007ರ ಜುಲೈ 1ರ ನಂತರ ಸಾಮರ್ಥ್ಯ ಪ್ರಮಾಣ ಪತ್ರ (ಫಿಟ್ ನೆಸ್ ಸರ್ಟಿಫಿಕೇಟ್) ಪಡೆದಿರುವ ವಾಹನಗಳ ಚಾಲಕರಿಗೆ ಇದರ ಅಳವಡಿಕೆಗೆ ಫೆಬ್ರುವರಿ 12ರಿಂದ ಒಂದು ತಿಂಗಳ ಕಾಲಾವಕಾಶವನ್ನು ಪೀಠ ನೀಡಿತು. ಹೊಸ ವಾಹನಗಳು ವೇಗ ನಿಯಂತ್ರಕ ಅಳವಡಿಸಿಕೊಂಡ ನಂತರವಷ್ಟೇ ಅವುಗಳನ್ನು ನೋಂದಣಿ ಮಾಡುವಂತೆ ಮತ್ತು ಇದನ್ನು ಅಳವಡಿಕೆ ಮಾಡಿಕೊಳ್ಳದ ವಾಹನಗಳಿಗೆ ಸಾಮರ್ಥ್ಯ ಪ್ರಮಾಣ ಪತ್ರ ನೀಡದಂತೆ ಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿತು. ವೇಗ ನಿಯಂತ್ರಕದ ಅಳವಡಿಕೆಯನ್ನು ಕಡ್ಡಾಯ ಮಾಡಿ 2005ರ ಮಾರ್ಚ್ 28ರಂದು ಸರ್ಕಾರವೇ ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಮೋಟಾರು ವಾಹನ ಕಾಯ್ದೆಯ 118ನೇ ನಿಯಮದ ಪ್ರಕಾರ ಇದರ ಅಳವಡಿಕೆ ಕಡ್ಡಾಯ ಆಗಿತ್ತು. ಆದರೂ ಮೇಲಿಂದ ಮೇಲೆ ಅಳವಡಿಕೆಯ ದಿನಾಂಕವನ್ನು ವಿಸ್ತರಣೆ ಮಾಡುತ್ತ ಬಂದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿತು.

2008: ಉತ್ತರಪ್ರದೇಶದ ಲಖನೌನಲ್ಲಿ ಸೆರೆ ಸಿಕ್ಕಿದ ಐಐಎಸ್ಸಿ (ಭಾರತೀಯ ವಿಜ್ಞಾನ ಸಂಸ್ಥೆ) ದಾಳಿಯ ಪ್ರಮುಖ ಆರೋಪಿ ಸಲಾವುದ್ದೀನ್ ತನ್ನ ಸಹಚರರೊಡನೆ ಸೇರಿಕೊಂಡು ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಿಸುವ ಮತ್ತು ಆತಂಕ ಸೃಷ್ಟಿಸುವ ಸಂಚು ನಡೆಸಿದ್ದ ಎಂಬುದು ಬೆಳಕಿಗೆ ಬಂತು. ತಮ್ಮ ವಶಕ್ಕೆ ತೆಗೆದುಕೊಳ್ಳಲು ಲಖನೌಗೆ ತೆರಳಿದ ಕರ್ನಾಟಕ ರಾಜ್ಯದ ಪೊಲೀಸರ ವಿಶೇಷ ತಂಡಕ್ಕೆ ಸಲಾವ್ದುದೀನ್ ದಾಳಿ ಸಂಚು, ರೂಪುರೇಷೆ ಮತ್ತು ಇತರ ಬೆಚ್ಚಿಬೀಳುವ ಮಾಹಿತಿ ನೀಡಿದ.

2008: ಭೂಮಿಗಿಂತ 350 ಕಿ.ಮೀ. ಎತ್ತರದಲ್ಲಿ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಯುರೋಪಿನ ಬಾಹ್ಯಾಕಾಶ ಪ್ರಯೋಗಾಲಯ `ಕೊಲಂಬಸ್' ನ್ನು ಜೋಡಿಸುವಲ್ಲಿ ಖಗೋಳ ವಿಜ್ಞಾನಿಗಳು ಸಫಲರಾದರು. ಹಾಗೂ ಈ ಮೂಲಕ ಬಾಹ್ಯಾಕಾಶದ ಬಗ್ಗೆ ಆಳವಾದ ಅಧ್ಯಯನ ನಡೆಸಲು ಯೂರೋಪ್ ರಾಷ್ಟ್ರಗಳಿಗೆ ಭಾರಿ ಅವಕಾಶ ಲಭಿಸಿತು. `ಯುರೋಪಿಯನ್ ಕೊಲಂಬಸ್ ಪ್ರಯೋಗಾಲಯ ಈಗ ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಭಾಗವಾಗಿಬಿಟ್ಟಿದೆ' ಎಂದು ಫ್ರಾನ್ಸಿನ ಬಾಹ್ಯಾಕಾಶ ಎಂಜಿನಿಯರ್ ಲಿಯೊಪೋಲ್ಡ್ ಐಹಾರ್ಟ್ಸ್ ಹೇಳಿದ್ದನ್ನು ಹಾಗೂ ಉಪಗ್ರಹದ ಕಾರ್ಯಚಟುವಟಿಕೆಗಳನ್ನು ನೇರವಾಗಿ ಬಿತ್ತರಿಸಿದ ನಾಸಾ ಬ್ರಾಡ್ ಕಾಸ್ಟಿಂಗ್ ತಿಳಿಸಿತ್ತು. ಅಮೆರಿಕದ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ಸಿನ ಇಬ್ಬರು ವ್ಯೋಮಯಾನಿಗಳು ಇದಕ್ಕೆ ಮೊದಲು 7 ಗಂಟೆಗಳ ಬಾಹ್ಯಾಕಾಶ ನಡಿಗೆ ಮಾಡಿ ನಿಲ್ದಾಣದಲ್ಲಿ ಕೊಲಂಬಸ್ ನಿಲುಗಡೆಗೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದರು. ಇದುವರೆಗೆ ರಷ್ಯ ಮತ್ತು ಅಮೆರಿಕ ಮಾತ್ರ ಈ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಮುಖ್ಯವಾಗಿ ಮಂಗಳನತ್ತ ತೆರಳುವುದಕ್ಕೆ ಸಿದ್ಧತೆ ಮಾಡುವುದೇ ಈ ಯೋಜನೆಯ ಉದ್ದೇಶ.

2008: ಪಾಕಿಸ್ಥಾನದ ಪರಮಾಣು ಇಂಧನ ಆಯೋಗದ ಇಬ್ಬರು ಸಿಬ್ಬಂದಿಯೂ ಸೇರಿದಂತೆ ಎಂಟು ಮಂದಿಯನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ಥಾನದ ಗಲಭೆಪೀಡಿತ ಅಫ್ಘಾನಿಸ್ಥಾನದ ಗಡಿ ಭಾಗದಿಂದ ಅಪಹರಿಸಿದರು.

2008: ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತನ್ನ ಹಳೆ ವಿದ್ಯಾರ್ಥಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಜೂನ್ 18ರಂದು ಗೌರವ ಡಾಕ್ಟರೇಟ್ (ಡಾಕ್ಟರ್ ಆಫ್ ಸಿವಿಲ್ ಲಾ) ಪ್ರದಾನ ಮಾಡಲು ನಿರ್ಧರಿಸಿತು. ಇದೇ ವಿವಿಯಿಂದ ಪ್ರಧಾನಿ ಮನಮೋಹನ್ ಸಿಂಗ್ ಈ ಗೌರವಕ್ಕೆ ಪಾತ್ರರಾಗಿದ್ದರು.

2008: ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಪ್ರಥಮ ಪಂಚಮಸಾಲಿ ಮಹಾಪೀಠ ಸ್ಥಾಪನೆಗೊಂಡಿತು. ಬಸವ ಜಯಮೃತ್ಯುಂಜಯ ಸ್ವಾಮಿ ಪೀಠಾರೋಹಣ ಮಾಡಿ ಲಿಂಗಾಯತ, ಪಂಚಮ ಸಾಲಿ ಮಹಾಪೀಠದ ಪ್ರಥಮ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದರು.

2008: ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಡಾ. ಸುಖದೇವ್ ಥೋರಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ, ಗುಲ್ಬರ್ಗದ ಕೈಗಾರಿಕೋದ್ಯಮಿ ಗಳಂಗಳಪ್ಪ ಪಾಟೀಲ, ಖಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾ ನಶೀನ್ ಹಾಗೂ ಖಾಜಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸೈಯದ್ ಶಾ ಖುಸ್ರೋ ಹುಸೇನಿ ಹಾಗೂ ಬೀದರಿನ ಚೆನ್ನಬಸಪ್ಪ ಹಾಲಹಳ್ಳಿ ಈ ಐವರನ್ನು ಗುಲ್ಬರ್ಗ ವಿಶ್ವ ವಿದ್ಯಾಲಯವು 2008ರ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿತು.

2007: ಬೋಸ್ಟನ್ನಿನಲ್ಲಿ 1636ರಲ್ಲಿ ಸ್ಥಾಪನೆಗೊಂಡಿದ್ದ ಹಾರ್ವರ್ಡ್ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಕ್ಷ ಸ್ಥಾನವನ್ನು ನಾಲ್ಕೂವರೆ ಶತಮಾನಗಳ ನಂತರ ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಲಂಕರಿಸಿದರು. ದಕ್ಷಿಣ ಅಮೆರಿಕದ ಖ್ಯಾತ ಇತಿಹಾಸ ತಜ್ಞೆ ಡ್ರ್ಯೂ ಗಿಲ್ ಪಿನ್ ಫೌಸ್ಟ್ (59) ಅವರು ಈ ಸ್ಥಾನಕ್ಕೆ ಏರಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ರಾಜ್ಯವ್ಯಾಪಿ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜನ ಜೀವನ, ಸಾರಿಗೆ ಸಂಚಾರ ಬಹುತೇಕ ಸ್ಥಗಿತಗೊಂಡಿತು.

2007: ಸಂಸತ್ ಸದಸ್ಯರ ಮತ್ತು ಶಾಸಕರ ಕ್ಷೇತ್ರ ಅಭಿವೃದ್ಧಿ ಯೋಜನೆಗಳ ರದ್ದು, ರಾಷ್ಟ್ರೀಯ ನ್ಯಾಯ ಮಂಡಳಿ ಸ್ಥಾಪನೆ, ಗಂಭೀರ ವಂಚನೆಗಳ ತನಿಖಾ ಸಂಸ್ಥೆ ರಚನೆ, ರಾಷ್ಟ್ರೀಯ ಲೋಕಾಯುಕ್ತಕ್ಕೆ ಅಂಬುಡ್ಸ್ ಮನ್ ನೇಮಕ ಸೇರಿದಂತೆ ಮಹತ್ವದ ಹಲವಾರು ಶಿಫಾರಸುಗಳನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ನೇತೃತ್ವದ ಎರಡನೇ ಆಡಳಿತ ಸುಧಾರಣಾ ಆಯೋಗವು ನಾಲ್ಕನೇ ವರದಿಯಲ್ಲಿ ಮಾಡಿತು. ವರದಿಯನ್ನು ಮೊಯಿಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿದರು.

2007: ಬೆಂಗಳೂರಿನ 80 ವರ್ಷಗಳಷ್ಟು ಹಳೆಯದಾದ ಎಂಟಿಆರ್ ಫುಡ್ಸ್ ಕಂಪೆನಿಯನ್ನು ನಾರ್ವೆಯ ಓರ್ ಕ್ಲಾ ಕಂಪೆನಿಯು 443 ಕೋಟಿ ರೂಪಾಯಿಗಳಿಗೆ (100 ದಶಲಕ್ಷ ಡಾಲರ್) ಖರೀದಿಸಿದೆ ಎಂಬ ಸುದ್ದಿಯನ್ನು ಹಾಂಕಾಂಗಿನ ಫೈನಾನ್ಸ್ ಏಷ್ಯಾ ಡಾಟ್ ಕಾಂ ವೆಬ್ ಸೈಟ್ ಪ್ರಕಟಿಸಿತು.

2007: ಸಂಗೀತ ಲೋಕದ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿಯು ಈ ಬಾರಿ ಸಂಗೀತ ತಂಡ ಡಿಕ್ಸಿ ಚಿಕ್ಸ್ ನ `ನಾಟ್ ರೆಡಿ ಟು ಮೇಕ್ ನೈಸ್' ಚಿತ್ರದ ಪಾಲಾಯಿತು. ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರ ಧೋರಣೆ ಟೀಕಿಸಿದ್ದಕ್ಕೆ ವ್ಯಕ್ತವಾದ ಟೀಕೆಗೆ ಪ್ರತಿಯಾಗಿ ಈ ಹಾಡು ರಚಿಸಲಾಗಿದೆ.

2007: ಆಂಧ್ರ ಪ್ರದೇಶದ ವಿಜಯವಾಡ ಸಮೀಪದ ಕೊಂಡಪಲ್ಲಿ ಗ್ರಾಮದಲ್ಲಿ ತಯಾರಾಗುವ ಸಾಂಪ್ರದಾಯಿಕ ಶೈಲಿಯ ಅತ್ಯಾಕರ್ಷಕ ಮರದ ಬೊಂಬೆಗಳಿಗೆ ಜಿಐ (ಜಿಯಾಗ್ರಾಫಿಕಲ್ ಇಂಡಿಕೇಟರ್) ಮಾನ್ಯತಾ ಪ್ರಮಾಣ ಪತ್ರವನ್ನು ಚೆನ್ನೈನ ಪೇಟೆಂಟ್ ಕಚೇರಿಯು ನೀಡಿತು. ಇದರಿಂದಾಗಿ ಕೊಂಡಪಲ್ಲಿಯ ಬೊಂಬೆಗಳಿಗೆ ವಿಶ್ವಮಾನ್ಯತೆ ಲಭಿಸುವುದರ ಜೊತೆಗೆ ಈ ವಿನ್ಯಾಸಕ್ಕೆ ಈ ಗ್ರಾಮದ ಕುಶಲಕರ್ಮಿಗಳಿಗೆ ಪೇಟೆಂಟ್ ಕೂಡಾ ಲಭಿಸಿತು.

2007: ಮುಲ್ ಬೆರ್ರಿ ರೇಷ್ಮೆ ಕೃಷಿಯ ಅನುಕೂಲಕ್ಕಾಗಿ ಕರ್ನಾಟಕದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹೂಗಾರೆಯ ದಿವಂಗತ ಅಣ್ಣೇಗೌಡ ಅವರು ನಿರ್ಮಿಸಿದ `ಚಂದ್ರಿಕೆ' ರೇಷ್ಮೆಗೂಡು ಸ್ಟ್ಯಾಂಡ್ ಮತ್ತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಣ್ಣಾ ಸಾಹೇಬ ಭಾವು ಉದ್ಗವಿ ಅವರು ನಿರ್ಮಿಸಿದ ಬಹೂಪಯೋಗಿ ಕಬ್ಬು ಅರೆಯುವ ಯಂತ್ರಗಳು ರಾಷ್ಟ್ರೀಯ ಗ್ರಾಮಮಟ್ಟದ ತಂತ್ರಜ್ಞಾನ ಆವಿಷ್ಕಾರ ಪ್ರಶಸ್ತಿ ಗಳಿಸಿದವು.

2007: ಕರ್ನಾಟಕದ ರೇಹಾನ್ ಪೂಂಚಾ ಅವರು ಗುವಾಹಟಿಯಲ್ಲಿ ನಡೆದ 33ನೇ ರಾಷ್ಟ್ರೀಯ ಕ್ರೀಡೆಗಳ ಪುರುಷರ 400 ಮೀಟರ್ ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಯಲ್ಲಿ 10 ವರ್ಷಗಳ ಹಿಂದಿನ ದಾಖಲೆ ಮುರಿದು ಚಿನ್ನ ಗಳಿಸಿದರು. ಪೂಂಚಾ ಅವರು ಈ ದೂರವನ್ನು 4:44:32 ಸೆಕೆಂಡುಗಳಲ್ಲಿ ಕ್ರಮಿಸಿ, 1997ರಲ್ಲಿ ಜೆ. ಅಭಿಜೀತ್ ಸ್ಥಾಪಿಸಿದ್ದ 4:47:94 ಸೆಕೆಂಡುಗಳ ದಾಖಲೆಯನ್ನು ಮುರಿದರು.

2007: ಭಾರತದ ಮುಂಚೂಣಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ಬಿರ್ಲಾ ಸಮೂಹವು ಅಮೆರಿಕ ಮೂಲದ ನೊವೆಲಸ್ ಕಂಪೆನಿಯನ್ನು ಸುಮಾರು 27000 ಕೋಟಿ ರೂಪಾಯಿಗಳಿಗೆ (600 ಕೋಟಿ ಡಾಲರ್) ಖರೀದಿಸಲು ಸಜ್ಜಾಯಿತು. ಕೋರಸ್ ಉಕ್ಕು ಕಂಪೆನಿಯನ್ನು ಟಾಟಾ ಸ್ಟೀಲ್ ಕಂಪೆನಿ ವಶಕ್ಕೆ ತೆಗೆದುಕೊಂಡ ಬೆನ್ನಲೇ ಈ ಬೆಳವಣಿಗೆ ನಡೆಯಿತು.

2007: ಬಾಗ್ದಾದ್ ನಗರದ ಹೃದಯಭಾಗದಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಾರುಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 68 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ತಮಿಳುನಾಡಿನ ಚೆನ್ನೈ ಲೈಫ್ ಲೈನ್ ಆಸ್ಪತ್ರೆಯ ಡಾ. ಜೆ.ಎಸ್. ರಾಜಕುಮಾರ್ ಅವರು 13 ಗಂಟೆ 41 ನಿಮಿಷ, 19 ಸೆಕೆಂಡುಗಳಲ್ಲಿ 41 ಶಸ್ತ್ರಚಿಕಿತ್ಸೆ ನಡೆಸಿ ಹೊಸ ದಾಖಲೆ ಸ್ಥಾಪಿಸಿದರು. 24 ಗಂಟೆಯಲ್ಲಿ 41 ಶಸ್ತ್ರಚಿಕಿತ್ಸೆ ನಡೆಸಿದ ದಾಖಲೆ ಇತ್ತು. ರಾಜ ಕುಮಾರ್ ಅವರು ಈ ದಾಖಲೆಯನ್ನು ಮುರಿದರು.

2006: ಮುಂಬೈನ ಸಂಕಲ್ಪ ಹೋಟೆಲ್ ಸಮೂಹ 30 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡಿತು. ಈ ಹಿಂದೆ 25 ಅಡಿ ಉದ್ದದ ದೋಸೆಯನ್ನು ಸಹಾ ಇದೇ ಸಮೂಹ ಮಾಡಿತ್ತು.

2006: ಕಕ್ಷಿದಾರ ದೆಹಲಿಯ ಸುಭಾಶ್ ಚಂದ್ರ ಅಗರ್ವಾಲ್ ಅವರಿಗೆ ಅಗತ್ಯ ಮಾಹಿತಿ ನೀಡದೆ ಸತಾಯಿಸಿದ್ದಕ್ಕಾಗಿ ಸುಪ್ರೀಂಕೋರ್ಟಿನ ಆಡಳಿತ ವಿಭಾಗಕ್ಕೆ ಕೇಂದ್ರ ಮಾಹಿತಿ ಆಯೋಗ ತೀವ್ರ ಎಚ್ಚರಿಕೆ ನೀಡಿತು. ಎಂಟು ತಿಂಗಳ ಹಿಂದೆ ಮಾಹಿತಿ ಹಕ್ಕು ಜಾರಿಗೆ ಬಂದ ಬಳಿಕ ಆಯೋಗದ ಎದುರು ನ್ಯಾಯಾಲಯಕ್ಕೆ ಸಂಬಂಧಿಸಿದ ಇಂತಹ ಪ್ರಕರಣ ಬಂದದ್ದು ಮತ್ತು ತೀರ್ಮಾನ ಕೈಗೊಂಡಿರುವ ಪ್ರಕರಣಗಳು ಎರಡೂ ಪ್ರಪ್ರಥಮ.

2000: `ಪೀನಟ್ಸ್' ಕಾಮಿಕ್ ಸ್ಟ್ರಿಪ್ ಸೃಷ್ಟಿಕರ್ತ ಚಾರ್ಲ್ಸ್ ಶುಲ್ಜ್ ತಮ್ಮ 77ನೇ ವಯಸ್ಸಿನಲ್ಲಿ ಮೃತರಾದರು. ತಮ್ಮ ಕೊನೆಯ ಕಾಮಿಕ್ ಸ್ಟ್ರಿಪ್ಪನ್ನು ಅವರು 2000ದ ಜನವರಿ 3ರಂದು ಪ್ರಕಟಿಸಿದ್ದರು. `ಪೀನಟ್ಸ್' ಕಾಮಿಕ್ ಸ್ಟ್ರಿಪ್ 75 ರಾಷ್ಟ್ರಗಳ 2620 ವೃತ್ತ ಪತ್ರಿಕೆಗಳಲ್ಲಿಪ್ರಕಟವಾಗುತ್ತದೆ.

1999: ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ವಿರುದ್ಧ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಾಡಿದ್ದ ದೋಷಾರೋಪವನ್ನು ಅಮೆರಿಕಾದ ಸೆನೆಟ್ ತಿರಸ್ಕರಿಸಿತು. ಈ ಚಾರಿತ್ರಿಕ ನಿರ್ಣಯವು ಕ್ಲಿಂಟನ್ ಅವರನ್ನು ದೋಷಾರೋಪ ಪ್ರಕ್ರಿಯೆಯಿಂದಲೇ ಮುಕ್ತರನ್ನಾಗಿ ಮಾಡಿತು.

1949: ಭಾರತೀಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಹುಟ್ಟಿದ ದಿನ. ಇವರು ತಮ್ಮ ಚೊಚ್ಚಲ ಪ್ರಥಮ ದರ್ಜೆ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಸೆಂಚುರಿ ಸಿಡಿಸಿದರು. ಇವರು ಸುನಿಲ್ ಗಾವಸ್ಕರ್ ಅವರ ಸಹೋದರಿಯನ್ನು ವಿವಾಹವಾದರು.

1948: ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಅಲಹಾಬಾದ್ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಸಲುವಾಗಿ ತೃತೀಯ ದರ್ಜೆಯ ಬೋಗಿ ಸಂಖ್ಯೆ 2949ರಲ್ಲಿ ತರಲಾಯಿತು. ಚಿತಾಭಸ್ಮದಲ್ಲಿ ಸ್ವಲ್ಪ ಭಾಗವನ್ನು ಪರಮಹಂಸ ಯೋಗಾನಂದ ಅವರಿಗೆ ನೀಡಲಾಯಿತು. ಅವರು ಅದನ್ನು ಕ್ಯಾಲಿಫೋರ್ನಿಯಾದ ಗಾಂಧಿ ಶಾಂತಿ ಪ್ರತಿಷ್ಠಾನ ಸ್ಮಾರಕದಲ್ಲಿ ಇರಿಸಿದರು.

1945: ಕಲಾವಿದ ಇ.ಕೆ. ಜನಾರ್ದನ್ ಜನನ.

1940: ಕಲಾವಿದ ಕೆ. ದೇವರಾಜ ಜನನ.

1934: ಚಿತ್ರ ಕಲಾವಿದ ವಿ.ಟಿ. ಕಾಳೆ ಅವರು ತುಳಜಾರಾಮ- ಭರಮವ್ವ ದಂಪತಿಯ ಮಗನಾಗಿ ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು.

1925: ಕಲಾವಿದ ಹುಸೇನ್ ಸಾಬ್ ನದಾಫ್ ಜನನ.

1922: ಭಾರತದಲ್ಲಿ ಅಸಹಕಾರ ಚಳವಳಿ ಕೊನೆಗೊಂಡಿತು. ಚಳವಳಿ ಹಿಂತೆಗೆದುಕೊಳ್ಳುವ ತಮ್ಮ ನಿರ್ಧಾರವನ್ನು ಅನುಮೋದಿಸುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಮನವೊಲಿಸುವಲ್ಲಿ ಮಹಾತ್ಮ ಗಾಂಧೀಜಿಯವರು ಯಶಸ್ವಿಯಾದರು. ಫೆಬ್ರುವರಿ 5ರಂದು ಚೌರಿಚೌರಾದಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಯಲ್ಲಿ 22 ಪೊಲೀಸರು ಮೃತರಾದುದೇ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂತೆದುಕೊಳ್ಳಲು ಕಾರಣ.

1824: ಸ್ವಾಮಿ ದಯಾನಂದ ಸರಸ್ವತಿ (1824-83) ಜನ್ಮದಿನ. ಭಾರತದ ಧಾರ್ಮಿಕ ನಾಯಕರಾದ ಇವರು ಆರ್ಯ ಸಮಾಜದ ಸ್ಥಾಪಕರು.

1809: ಅಮೆರಿಕಾದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ (1809-1865) ಹುಟ್ಟಿದರು.

1809: ವಿಕಾಸ ವಾದದ ಮೂಲಕ ಜನಪ್ರಿಯರಾದ ಚಾರ್ಲ್ಸ್ ಡಾರ್ವಿನ್ ಈದಿನ ಇಂಗ್ಲೆಂಡಿನಲ್ಲಿ ಜನಿಸಿದರು.

No comments:

Post a Comment