ನಾನು ಮೆಚ್ಚಿದ ವಾಟ್ಸಪ್

Wednesday, February 6, 2019

ಇಂದಿನ ಇತಿಹಾಸ History Today ಫೆಬ್ರುವರಿ 06

ಇಂದಿನ ಇತಿಹಾಸ History Today ಫೆಬ್ರುವರಿ 06
2019: ಇಸ್ಲಾಮಾಬಾದ್: ಪಾಕಿಸ್ತಾನದ ಬಲಾಢ್ಯ ಸೇನೆಗೆ ಅಪರೂಪದ ಛೀಮಾರಿ ಹಾಕಿದ ಪಾಕ್ ಸುಪ್ರೀಂಕೋರ್ಟ್ ರಾಜಕೀಯ ಚಟುವಟಿಕೆಗಳಲ್ಲಿ ತೊಡಗದಂತೆ ಪಾಕ್ ಸೇನೆ ಮೇಲೆ ನಿಷೇಧ ವಿಧಿಸಿತು. ಕಾನೂನಿನ ಮಿತಿಯೊಳಗೆ  ಕಾರ್ಯಾಚರಿಸುವಂತೆ  ಐಎಸ್ ಇತ್ಯಾದಿ ಗುಪ್ತಚರ ಸಂಸ್ಥೆಗಳಿಗೂ ಸುಪ್ರೀಂಕೋರ್ಟ್ ಅಂಕುಶ ಹಾಕಿತು. ತೀವ್ರಗಾಮಿ ತೆಹ್ರೀಕ್ -- ಲಬ್ಬೈಕ್ ಪಾಕಿಸ್ತಾನ್ (ಟಿಎಲ್ ಪಿ) ಮತ್ತು ಇತರ ಸಣ್ಣ ಗುಂಪುಗಳ ೨೦೧೭ರ ಫೈಜಾಬಾದ್ ಸಮಾವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು, ’ದ್ವೇಷ, ಉಗ್ರವಾದ ಮತ್ತು ಭಯೋತ್ಪಾದನೆ ಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೂ ಆಜ್ಞಾಪಿಸಿತು.  ‘ದ್ವೇಷ, ಉಗ್ರವಾದ ಮತ್ತು ಭಯೋತ್ಪಾದನೆ ಬೋಧಿಸುವವರ ಮೇಲೆ ಕಣ್ಣಿಡುವಂತೆ ಮತ್ತು ಅಂತಹವರನ್ನು ಸೂಕ್ತವಾಗಿ ಕಾನೂನು ಕ್ರಮಕ್ಕೆ ಗುರಿಪಡಿಸುವಂತೆ ನಾವು ಫೆಡರಲ್ ಮತ್ತು ಪ್ರಾಂತೀಯ ಸರ್ಕಾರಗಳಿಗೆ ನಿರ್ದೇಶನ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಖಾಜಿ ಇಸಾ ಮತ್ತು ನ್ಯಾಯಮೂರ್ತಿ ಮುಶೀರ್ ಆಲಂ ಅವರನ್ನು ಒಳಗೊಂಡ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿತು. ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್ ) ಸೇರಿದಂತೆ ಸೇನೆಯ ಆಧೀನದಲ್ಲಿರುವ ಗುಪ್ತಚರ ಸಂಸ್ಥೆಗಳು ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು ಕಾನೂನು ವಿವರಿಸಿದ ಮಿತಿಗಳ ವ್ಯಾಪ್ತಿಯಲ್ಲೇ ಕಾರ್ಯಾಚರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿತು. ಸಶಸ್ತ್ರ ಪಡೆಗಳ ಸದಸ್ಯರು ರಾಜಕೀಯ ಪಕ್ಷ, ವ್ಯಕ್ತಿ, ಬಣಗಳನ್ನು ಬೆಂಬಲಿಸುವುದು, ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಆದೇಶ ತಿಳಿಸಿತು. ತಮ್ಮ ಆಧೀನದಲ್ಲಿರುವ ಸಿಬ್ಬಂದಿ ತಾವು ಸ್ವೀಕರಿಸುವ ಪ್ರತಿಜ್ಞೆಯನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಸಚಿವಾಲಯದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳಿತುಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಳೆದ ವರ್ಷ ನಡೆದ ಮಹಾಚುನಾವಣೆಯಲ್ಲಿ ರಾಷ್ಟ್ರದ ಬಲಾಢ್ಯ ಸೇನೆ ಬೆಂಬಲಿಸಿತ್ತು ಎಂಬುದಾಗಿ ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದರು. ೧೯೪೭ರಲ್ಲಿ ಸ್ವಾತಂತ್ರ್ಯ ಲಭಿಸಿದಂದಿನಿಂದ ರಾಷ್ಟ್ರದ ಇತಿಹಾಸದಲ್ಲಿ ಸಂಭವಿಸಿದ ಹಲವಾರು ದಂಗೆಗಳಲ್ಲಿ ಶಾಮೀಲಾಗುವ ಮೂಲಕ ಪಾಕಿಸ್ತಾನದ ಸೇನೆಯು ರಾಷ್ಟ್ರದಲ್ಲಿ ಆಡಳಿತ ನಡೆಸಿದೆ. ರಾಷ್ಟ್ರದಲ್ಲಿನ ಯಾವುದೇ ನಿರ್ಣಯಗಳಲ್ಲಿ ಸೇನೆ ಮಹತ್ವದ ಪಾತ್ರ ವಹಿಸುತ್ತದೆ. ಇತರರಿಗೆ ಹಾನಿ ಉಂಟು ಮಾಡುವ ಉದ್ದೇಶದ ಧಾರ್ಮಿಕ ಫತ್ವಾಗಳನ್ನು ಕೂಡಾ ಸುಪ್ರೀಂಕೋರ್ಟ್ ಕಾನೂನುಬಾಹಿರ ಎಂಬುದಾಗಿ ಘೋಷಿಸಿದೆ.  ಇತರ ವ್ಯಕ್ತಿಗಳಿಗೆ ಹಾನಿ ಉಂಟು ಮಾಡುವ ಅಥವಾ ಇತರರ ದಾರಿಗೆ ತೊಂದರೆ ನೀಡುವ ಫತ್ವಾಗಳನ್ನು ಹೊರಡಿಸುವ ವ್ಯಕ್ತಿಗಳನ್ನು ಪಾಕಿಸ್ತಾನ ದಂಡ ಸಂಹಿತೆ, ಭಯೋತ್ಪಾದನೆ ನಿಗ್ರಹ ಕಾಯ್ದೆ ೧೯೯೭ ಮತ್ತು ಎಲೆಕ್ಟ್ರಾನಿಕ್ ಅಪರಾಧಗಳ ತಡೆ ಕಾಯ್ದೆ ೨೦೧೬ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಎಂದು ಕೋರ್ಟ್ ಆಜ್ಞಾಪಿಸಿತು. ಕಾನೂನಿನ ಅಡಿಯಲ್ಲಿ ನ್ಯಾಯೋಚಿತ ನಿರ್ಬಂಧಗಳನ್ನು ಎತ್ತಿ ಹಿಡಿದ ಕೋರ್ಟ್, ನಾಗರಿಕರಿಗೆ ರಾಜಕೀಯ ಪಕ್ಷಗಳನ್ನು ರಚಿಸುವ ಮತ್ತು ಅವುಗಳ ಸದಸ್ಯರಾಗುವ ಹಕ್ಕು ಇದೆ. ಶಾಂತಿಯುತ ಪ್ರತಿಭಟನೆಗಳಿಗಾಗಿ ಅವರು ಒಟ್ಟು ಸೇರಬಹುದು ಎಂದು ಹೇಳಿತು. ಟಿಎಲ್ ಪಿಯು ಇಸ್ಲಾಮಾಬಾದಿಗೆ ಹೋಗುವ ಪ್ರಮುಖ ಹೆದ್ದಾರಿಯನ್ನು ತಡೆದ ಘಟನೆಯ ಬಳಿಕ ೨೦೧೭ರ ನವೆಂಬರ್ ೨೧ರಂದು ಸುಪ್ರೀಂಕೋರ್ಟ್ ಸ್ವ ಇಚ್ಛೆಯ ಪ್ರಕರಣ ದಾಖಲಿಸಿತ್ತು೨೦೧೭ರಲ್ಲಿ ನಡೆದ ೨೦ ದಿನಗಳ ಪ್ರತಿಭಟನೆಯಲ್ಲಿ, ಟಿ ಎಲ್ ಪಿಗೆ (ತೆಹ್ರೀಕ್ --ಲಬ್ಬೈಕ್ ಯಾ ರಸೂಲ್ ಅಲ್ಲಾ, ತೆಹ್ರೀಕ್ --ಖತಮ್ - ನಬುವಾತ್ ಮತ್ತು ಪಾಕಿಸ್ತಾನ್ ಸುನ್ನಿ ತೆಹ್ರೀಕ್ಗೆ ಸೇರಿದ ಪ್ರತಿಭಟನಕಾರರು  ರಾವಲ್ಪಿಂಡಿ ಮತ್ತು ಇಸ್ಲಾಮಾಬಾದನ್ನು ಸಂಪರ್ಕಿಸುವ ಹೆದ್ದಾರಿಯನ್ನು ದಿಗ್ಬಂಧನಕ್ಕೆ ಒಳಪಡಿಸಿ ಇಸ್ಲಾಮಾಬಾದಿನ ದೈನಂದಿನ ಬದುಕನ್ನು ಅಸಹನೀಯವನ್ನಾಗಿ ಮಾಡಿದ್ದರು. ಇಂತಹ ಕೃತ್ಯಗಳನ್ನು ಯಾರೂ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಕಟ್ಟಾಜ್ಞೆ  ಮಾಡಿತು..

2019: ನವದೆಹಲಿ: ಅಕ್ರಮ ವಿದೇಶೀ ಆಸ್ತಿಗಳನ್ನು ಹೊಂದಿರುವ  ಆರೋಪಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಸಲುವಾಗಿ ರಾಬರ್ಟ್ ವಾದ್ರಾ ಅವರು ಪತ್ನಿ ಹಾಗೂ ಪ್ರಸ್ತುತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಅವರ ಜೊತೆಗೆ ನಗರದ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾದರು.
ವಾದ್ರಾ ಅವರನ್ನು ಕೇಳಲು ಜಾರಿ ನಿರ್ದೇಶನಾಲಯವು ಸುಮಾರು ೪೦ಕೂ ಹೆಚ್ಚು ಪ್ರಶ್ನೆಗಳನ್ನು ಸಿದ್ದಪಡಿಸಿದ್ದು, ಪ್ರತಿಯೊಂದಕ್ಕೂ ವಾದ್ರಾ ಅವರು ಲಿಖಿತ ಉತ್ತರ ನೀಡಬೇಕಾಗಿದೆ ಎಂದು ಮೂಲಗಳು ಹೇಳಿವೆ. ಏನಿದ್ದರೂ ಪಕ್ಕದ ಕೊಠಡಿಯಲ್ಲಿ ವಾದ್ರಾ ಅವರ ವಕೀಲರು ಹಾಜರು ಇರುತ್ತಾರೆ. ರಾಬರ್ಟ್ ವಾದ್ರಾ ಅವರು ಮಧ್ಯಾಹ್ನ .೪೫ರ ವೇಳೆಗೆ ಬಿಳಿ ಟಯೋಟಾ ಲ್ಯಾಂಡ್ ಕ್ರೂಸರ್ ವಾಹನದಲ್ಲಿ ತಮ್ಮ ಎಸ್ ಪಿಜಿ ಸಿಬ್ಬಂದಿಯ ಜೊತೆಗೆ ಕೇಂದ್ರ ದೆಹಲಿಯ ಜಾಮ್ ನಗರ ಹೌಸ್ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದರುಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಾದ್ರಾ ಅವರನ್ನು ಬಿಟ್ಟ ಬಳಿಕ ಪ್ರಿಯಾಂಕಾ ಅವರು ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯತ್ತ ಪಯಣ ಮುಂದುವರೆಸಿದರುಏನಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸುತ್ತಿರುವುದಕ್ಕೆ ಪ್ರಿಯಾಂಕಾ ಪ್ರತಿಕ್ರಿಯಿಸಿದರು. ದೆಹಲಿಯ ನ್ಯಾಯಾಲಯವೊಂದು ವಾದ್ರಾ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆಯು ನಡೆಸುತ್ತಿರುವ ವಿಚಾರಣೆಯಲ್ಲಿ ಸಹಕರಿಸುವಂತೆ ನಿರ್ದೇಶನ ನೀಡಿತ್ತು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವ ಸಲುವಾಗಿ ವಾದ್ರಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ದೆಹಲಿ ನ್ಯಾಯಾಲಯವು ಫೆಬ್ರುವರಿ ೧೬ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ, ಫೆಬ್ರುವರಿ ೬ರಂದು ಪ್ರಕರಣದಲ್ಲಿ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗುವಂತೆ ವಾದ್ರಾ ಅವರಿಗೆ ನಿರ್ದೇಶಿಸಿತ್ತು. ನಂ. ೧೨, ಬ್ರಯಾನ್ಸ್ಟನ್ ಚೌಕದಲ್ಲಿನ . ಮಿಲಿಯನ್ (೧೯ ಲಕ್ಷ) ಪೌಂಡ್ ಮೌಲ್ಯದ ಲಂಡನ್ ಮೂಲದ ಆಸ್ತಿ ಖರೀದಿಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧ ಪಟ್ಟ ಪ್ರಕರಣ ಇದಾಗಿದೆ. ಆಸ್ತಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಅವರು ಮಾಲೀಕರಾಗಿದ್ದಾರೆವಾದ್ರಾ ಅವರಿಗೆ ಸೇರಿದ ಲಂಡನ್ನಿನಲ್ಲಿನ ಒಟ್ಟು ಒಂಬತ್ತು ಹೊಸ ಆಸ್ತಿಗಳಿಗೆ ಸಂಬಂಧಿಸಿದಂತೆ ತಮಗೆ ಮಾಹಿತಿ ಲಭಿಸಿದೆ. ಇವುಗಳಲ್ಲಿ ತಲಾ ಐದು ಮತ್ತು ನಾಲ್ಕು ದಶಲಕ್ಷ ಪೌಂಡ್ ಮೌಲ್ಯದ ಎರಡು ಮನೆಗಳು ಮತ್ತು ಇತರ ಆರು ಫ್ಲಾಟ್ಗಳಲ್ಲದೆ ಇನ್ನಷ್ಟು ಆಸ್ತಿಗಳು ಸೇರಿವೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು. ಅವರು ನಮ್ಮ ಮುಂದೆ ಹಾಜರಾಗಿ ತಮ್ಮ ಆಸ್ತಿಗಳ ಬಗ್ಗೆ ತಿಳಿಸಬೇಕು ಎಂದಷ್ಟೇ ನಾವು ಬಯಸುತ್ತಿದ್ದೇವೆ ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ತಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯಲ್ಲಿ ಕಾನೂನಿನಲ್ಲಿ ವಿವರಿಸಲಾದ ಕಾರಣಗಳಿಗೆ ಹೊರತಾದ ಬೇರೆಯೇ ಕಾರಣಗಳಿಗಾಗಿ ತಮ್ಮನ್ನು ಅನಗತ್ಯವಾದ, ಅಸಮರ್ಥನೀಯವಾದ, ದುರುದ್ದೇಶಪೂರಿತ ಕ್ರಿಮಿನಲ್ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುತ್ತಿದೆ ಎಂದು ವಾದ್ರಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದರು. ಜಾರಿ ನಿರ್ದೇಶನಾಲಯವು ಕಳೆದ ಡಿಸೆಂಬರ್ ತಿಂಗಳಲ್ಲಿ ವಾದ್ರಾ ಅವರಿಗೆ ಸೇರಿದ ದೆಹಲಿಯಲ್ಲಿನ ಸಂಸ್ಥೆಯ ಆವರಣದಲ್ಲಿ ದಾಳಿ ನಡೆಸಿತ್ತು. ವಾದ್ರಾ ಅವರ ನಿಕಟವರ್ತಿ ಮನೋಜ್ ಅರೋರಾ ಅವರನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪ್ರಶ್ನಿಸಿತ್ತು. ಮನೋಜ್ ಅರೋರಾ ಅವರು ಸ್ಕೈಲೈಟ್  ಹಾಸ್ಪಿಟಾಲಿಟಿ ಎಲ್ಎಲ್ಪಿಗೆ ಸಂಬಂಧಿಸಿದ ಸಂಸ್ಥೆಯೊಂದರ ನೌಕರನಾಗಿದ್ದಾರೆಇನ್ನೊಂದು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ  ೧೨ರಂದು ಜಾರಿನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ರಾಜಸ್ಥಾನ ಹೈಕೋರ್ಟ್ ಕೂಡಾ ವಾದ್ರಾ ಅವರಿಗೆ ನಿರ್ದೇಶಿಸಿದೆ. ರಹಸ್ಯ ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಎಡೆ ಬಿಡದೆ ಕಾಡಲಾಗುತ್ತಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ವಾದ್ರಾ ಆಪಾದಿಸಿದ್ದರು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ತನ್ನ ವೈಫಲ್ಯಗಳನ್ನು ಮರೆಮಾಚಿ, ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಇಂತಹ ಯತ್ನಗಳನ್ನು ನಡೆಸುತ್ತಿದೆ ಎಂದು ಅವರು ಆಪಾದಿಸಿದ್ದರುಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿದ ಬಳಿಕ, ರಾಬರ್ಟ್ ವಾದ್ರಾ ಅವರು ಅನುಮಾನಾಸ್ಪದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಆಪಾದನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕೇಂದ್ರೀಯ ತನಿಖಾ ಸಂಸ್ಥೆಯ ಎದುರು ಹಾಜರಾಗುತ್ತಿರುವುದು ಇದೇ ಮೊದಲು. ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಬಿಟ್ಟು ಕಾಂಗ್ರೆಸ್ ಕೇಂದ್ರ ಕಚೇರಿಗೆ ತೆರಳಿದ ಪ್ರಿಯಾಂಕಾ ಅವರು, ನಾನು ನನ್ನ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಸುದ್ದಿ ಸಂಸ್ಥೆಗಳ ಜೊತೆ ಮಾತನಾಡುತ್ತಾ ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ಪರ ಘೋಷಣೆಗಳನ್ನು ಕೂಗಿದರು. ’ಪ್ರಿಯಾಂಕಾ ಹೋರಾಟ ಮುಂದುವರೆಸಿ, ನಾವು ನಿಮ್ಮ ಜೊತೆಗಿದ್ದೇವೆ ಎಂದು ಅವರು ಕೂಗಿದರು ಎಂದು ವರದಿಗಳು ಹೇಳಿದವು. ರಾಬರ್ಟ್ ವಾದ್ರಾ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಿಯಾಂಕಾ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಯು ನಿರಂತರವಾಗಿ ದಾಳಿ ನಡೆಸುತ್ತಿದೆವಾದ್ರಾ ಅವರು ಯುಪಿಎ ಅಧಿಕಾರದಲ್ಲಿದ್ದಾಗ ೨೦೦೮-೦೯ರಲ್ಲಿ ಕುದುರಿಸಲಾಗಿದ್ದ ಪೆಟ್ರೋಲಿಯಂ ಮತ್ತು ರಕ್ಷಣಾ ವ್ಯವಹಾರದಲ್ಲಿ ಲಾಭ ಪಡೆದಿದ್ದಾರೆ ಎಂದು ಬಿಜೆಪಿ ಆಪಾದಿಸಿತ್ತು. ವ್ಯವಹಾರದ ಲಾಭದ ಹಣವನ್ನು ವಾದ್ರಾ ಅವರು ಲಂಡನ್ನಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮೀ ಆಸ್ತಿಗಳ ಖರೀದಿಗೆ ಬಳಸಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಬುಧವಾರ ಆಪಾದಿಸಿದರು. ೨೦೧೯ರ ಲೋಕಸಭಾ ಚುನಾವಣೆಯು ಭ್ರಷ್ಟರ ಗ್ಯಾಂಗ್ ಮತ್ತು ನರೇಂದ್ರ ಮೋದಿ ಸರ್ಕಾರದ ಪಾರದರ್ಶಕತೆ ನಡುವಣ ಸಮರವಾಗಲಿದೆ ಎಂದು ಅವರು ನುಡಿದರು.

2019: ಲಕ್ನೋ: ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ಕಳೆದ ಕಾರ ಅಲಿಗಢದಲ್ಲಿಗಾಂಧಿ ಹತ್ಯೆ ಅಣಕು ದೃಶ್ಯವನ್ನು ಸೃಷ್ಟಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲದಲ್ಲಿ ಅದನ್ನು ಪ್ರಸಾರ ಮಾಡಿದ ಆಪಾದನೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್ಎಂ) ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಆಕೆಯ ಪತಿ ಅಶೋಕ್ ಪಾಂಡೆ ಅವರನ್ನು ಬಂಧಿಸಲಾಯಿತು.. ಅಲಿಗಢ ಸಮೀಪದ ಯಮುನಾ ಎಕ್ಸ್ಪ್ರೆಸ್ವೇಯಲ್ಲಿನ ಟಪ್ಪಾಲಿನಲ್ಲಿ ಅವರನ್ನು ಬಂಧಿಲಾಯಿತು ಎಂದು ಅಲಿಗಢದ ಎಎಸ್ಪಿ ನೀರಜ್ ಜದೌನ್ ಹೇಳಿದರು. ಇಬ್ಬರೂ ನ್ಯಾಯಾಲಯಕ್ಕೆ ಶರಣಾಗತಿ ಪತ್ರ ಸಲ್ಲಿಸಿದ್ದರು. ಪೂಜಾ ಶಕುನ್ ಪಾಂಡೆ ಮತ್ತು ಹಿಂದೂಮಹಾ ಸಭಾ ವಕ್ತಾರ ಅಶೋಕ್ ಪಾಂಡೆ ಹಾಗೂ ಬಲಪಂಥಿಯ ಸಂಘಟನೆಯ  ಒಂದು ಡಜನ್ ಸದಸ್ಯರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಗುಂಪುಗಳ ಮಧ್ಯೆ ವೈರತ್ವ ಸೃಷ್ಟಿ ಮತ್ತಿತರ ವಿವಿಧ ಆಪಾದನೆಗಳಿಗಾಗಿ ಭಾರತೀಯ ದಂಡ ಸಂಹಿತೆ ಅಡಿಯಲಿ ಎಫ್ಐಆರ್ ದಾಖಲಿಸಲಾಯಿತು. ಪಾಂಡೆ ದಂಪತಿಯ ಬಂದನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ಗುರುತಿಸಲಾದ ೧೧ ಜನರ ಪೈಕಿ ಮಂದಿಯನ್ನು ಬಂಧಿಸಿದಂತಾಗಿದೆ ಎಂದು ಜದೌನ್ ನುಡಿದರು. ನ್ಯಾಯಾಲಯಕ್ಕೆ ಒಯ್ಯುವ ಮಾರ್ಗದಲ್ಲಿ ತನ್ನ ನಿಲುವನ್ನು ಪುನರುಚ್ಚರಿಸಿದ ಪೂಜಾ ಶಕುನ್ ಪಾಂಡೆ ತನ್ನ ಕ್ಯತ್ಯಕ್ಕಾಗಿ ವಿಷಾದವಿಲ್ಲ ಎಂದು ಹೇಳಿದರು. ’ಅಭಿವ್ಯಕ್ತಿ ಸ್ವಾತಂತ್ರ್ಯವು ಧರ್ಮದ ನೆಲೆಯಲ್ಲಿ ಬೇರೆ ಬೇರೆಯವರಿಗೆ ಬೇರೆ ಬೇರೆಯಾಗಿರುವುದು ದುರದೃಷ್ಟಕರ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಆಕೆ ನುಡಿದರು. ’ಗಾಂಧಿ ಹತ್ಯೆಗಾಗಿ ಇದು ಎರಡನೇ ಶಿಕ್ಷೆ ಎಂದು ಅಶೋಕ್ ಪಾಂಡೆ ನುಡಿದರು. ಹಿಂದೂಮಹಾಸಭೆಯ ಆವರಣದ ಒಳಗೆ ಖಾಸಗಿ ಸ್ಥಳದಲ್ಲಿ ಘಟನೆ ನಡೆದಿತ್ತಾದರೂ, ಅಂತರ್ಜಾಲದಲ್ಲಿ ಹಂಚಿಕೊಂಡದ್ದರಿಂದ ಅದು ಬೆಳಕಿಗೆ ಬಂದಿತ್ತು. ವಿಡಿಯೋ ದೃಶ್ಯಾವಳಿಯಲ್ಲಿ ಕೇಸರಿ ಸೀರೆ ಧರಿಸಿದ್ದ ಪೂಜಾ ಶಕುನ್ ಪಾಂಡೆ ಅವರು ಗಾಂಧಿ ಪ್ರತಿಮೆಯತ್ತ ಕೃತಕ ಪಿಸ್ತೂಲಿನಿಂದ ಮೂರು ಬಾರಿ ಗುಂಡು ಹಾರಿಸುವ ದೃಶ್ಯವಿದೆ. ತತ್ ಕ್ಷಣವೇ ಪ್ರತಿಮೆಯಿಂದ ಕೃತಕ ರಕ್ತ ಒಸರುತ್ತದೆ. ಪಾಲ್ಗೊಂಡಿದ್ದ ಕೆಲವರು ಅದನ್ನುಕೊಳಕು ಎಂದು ಬಣ್ಣಿಸುತ್ತಾರೆ. ಪಾಲ್ಗೊಂಡಿದ್ದವರು ಗಾಂಧಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಹೊಗಳುತ್ತಾರೆ. ’ಮಹಾತ್ಮ ನಾಥೂರಾಮ್ ಗೋಡ್ಸೆ ಅಮರ್ ರಹೆ ಇತ್ಯಾದಿ ಘೋಷಣೆಗಳನ್ನು ಕೂಗಲಾಗುತ್ತದೆ. ಬಳಿಕ ಗಾಂಧಿ ಪ್ರತಿಮೆಗೆ ಬೆಂಕಿ ಹಚ್ಚಿ ಗೋಡ್ಸೆ ಚಿತ್ರಕ್ಕೆ ಹಾರ ಹಾಕಲಾಗುತ್ತದೆಕೃತ್ಯವನ್ನು ಸಮರ್ಥಿಸಿದ ಪೂಜಾ ಶಕುನ್ ಪಾಂಡೆ ಬಳಿಕ ವರದಿಗಾರರ ಜೊತೆ ಮಾತನಾಡಿಗಾಂಧಿ ಹತ್ಯೆಯು ಹಿಂದೂ ಮಹಾಸಭಾ ಪಾಲಿಗೆಶೌರ್ಯ ದಿವಸವಾಗಿದೆ. ಹೀಗಾಗಿ ಪ್ರತಿವರ್ಷ ದಸರಾ ಸಮಯದಲ್ಲಿ ರಾವಣ ಪ್ರತಿಕೃತಿ ದಹಿಸುವ ರೀತಿಯಲ್ಲಿಹೊಸ ಸಂಪ್ರದಾಯ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರದ್ದು ಸಣ್ಣ ಪಾತ್ರವಾಗಿತ್ತು. ಭಾರತ ಮಾತೆಯ ಕೊಲೆಗೆ ಅವರೇ ಕಾರಣರಾಗಿದ್ದರು ಎಂದು ರಾಷ್ಟ್ರ ವಿಭಜನೆಯನ್ನು ಉಲ್ಲೇಖಿಸುತ್ತಾ ಪೂಜಾ ಪಾಂಡೆ ಹೇಳಿದ್ದರು. ಹರ ಹರ ಗೋಡ್ಸೆ, ಘರ್ ಘರ್ ಗೋಡ್ಸೆ ಘೋಷಣೆಗಳ ಮೂಲಕ ಹಿಂದೂ ಮಹಾಸಭೆಯು ಗೋಡ್ಸೆ ಪರ ಪ್ರಚಾರ ಮಾಡುವುದು ಎಂದು ಅವರು ತಿಳಿಸಿದ್ದರು. ಹಿಂದಿನ ವಿವಾದಗಳು: ಪೂಜಾ ಶಕುನ್ ಪಾಂಡೆ ಅವರು ಇಂತಹ ವಿವಾದಗಳನ್ನು ಹುಟ್ಟು ಹಾಕಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಹಿಂದೂ ಮಹಾಸಭೆಯು ಮೀರತ್ತಿನಲ್ಲಿ ಮೊತ್ತ ಮೊದಲ ಸ್ವಯಂ ಘೋಷಿತಹಿಂದೂ ಎಣಿಕೆಯನ್ನು ಸಂಘಟಿಸಿತ್ತು. ಇದಕ್ಕೆ ಪೂಜಾ ಪಾಂಡೆ ಅವರನ್ನೇತೀರ್ಪುಗಾರ್ತಿ ಆಗಿ ನೇಮಿಸಲಾಗಿತ್ತು. ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಬಳಿಕ ಅಲಹಾಬಾದ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ೨೦೧೮ರ ಡಿಸೆಂಬರಿನಲ್ಲಿ ಪೂಜಾ ಪಾಂಡೆ ನಿರ್ಗತಿಕ ದನಗಳನ್ನು ದತ್ತು ತೆಗೆದುಕೊಳ್ಳುವ ಪ್ರಚಾರ ಅಭಿಯಾನ ನಡೆಸಿದ್ದಕ್ಕಾಗಿ ಅಲಿಗಢ ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಯ್ ಸಾಹನಿ ಅವರನ್ನು ಸನ್ಮಾನಿಸಿದ್ದರು. ೨೦೧೭ರ ಆಗಸ್ಟ್ ತಿಂಗಳಲ್ಲಿ ಮುಸ್ಲಿಮರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಅವರು ಪ್ರಚಾರ ಅಭಿಯಾನ ನಡೆಸಿದ್ದರು. 
2018: ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯ ಹೊರವಲಯದಲ್ಲಿ ಲಷ್ಕರ್ -ಇ-ತೊಯ್ಬಾ ಭಯೋತ್ಪಾದಕರು ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿ, ಅಬು ಯಾನೆ ನವೀದ್ ಜಟ್ಜ್ ಎಂಬ ಭಯೋತ್ಪಾದಕನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿದವು. ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮನಾಗಿದ್ದು, ಇನ್ನಿಬ್ಬರು ಪೊಲೀಸರು ಗಾಯಗೊಂಡರು. ಒಬ್ಬ ಗಾಯಾಳು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ವರದಿಗಳು ಹೇಳಿದವು. ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾದ ಭಯೋತ್ಪಾದಕ ಅಬು ಹನ್ ಝುಲ್ಲಾ ಹಾಗೂ ಇತರ ಐದು ಮಂದಿ ಬಂಧಿತರನ್ನು ಈದಿನ  ಬೆಳಗ್ಗೆ ಶ್ರೀನಗರದಲ್ಲಿರುವ ಶ್ರೀ ಮಹಾರಾಜ್ ಹರಿ ಸಿಂಗ್ ಸರ್ಕಾರಿ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು ಎಂದು ಶ್ರೀನಗರ ಎಸ್ ಎಸ್ ಪಿ ಇಮ್ತಿಯಾಜ್ ಇಸ್ಮಾಯಿಲ್ ಪಾರೈ ತಿಳಿಸಿದರು. ಗುಂಡಿನ ಚಕಮಕಿ ವೇಳೆಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಅಬು ಯಾನೆ ನವೀದನನ್ನು ದಕ್ಷಿಣ ಕಾಶ್ಮೀರದ ಉದಂಪುರ ಸಮೀಪ ಕುಲಗಮ್ ನಲ್ಲಿ  ಭಾರತೀಯ ಗಡಿ ಭದ್ರತಾ ಪಡೆ ೨೦೧೪ರಲ್ಲಿ ಬಂಧಿಸಿತ್ತು. ಈತನನ್ನು ಶ್ರೀನಗರ ಕೇಂದ್ರೀಯ ಸೆರೆಮನೆಯಲ್ಲಿ ಇರಿಸಲಾಗಿತ್ತು.  ಶೋಪಿಯಾನ್ ಸೇನಾ ಕಾರ್ಯಾಚರಣೆ ವೇಳೆ ಬಂಧಿಸಲ್ಪಟ್ಟಿದ್ದ ಈತನನ್ನು ವೈದ್ಯಕೀಯ ತಪಾಸಣೆ ಸಲುವಾಗಿ ಇತರ ಬಂಧಿತರ ಜೊತೆಗೆ ಆಸ್ಪತ್ರೆಗೆ ಕರೆತರಲಾಗಿತ್ತು. ದಾಳಿ ಬಳಿಕ ಪರಾರಿಯಾದ ಉಗ್ರರರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ದಾಳಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯ ಕಾರ್ಬೈನ್ ರೈಫಲ್ ಕೂಡ ನಾಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದರು.  ಉಗ್ರರ ಬೇಟೆಗೆ ವ್ಯಾಪಕ ಬಲೆ ಬೀಸಲಾಗಿದ್ದು, ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದವು. ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ  ನಾಕಾ ಬಂದಿ ಹಾಕಲಾಗಿದೆ. ಅಂತೆಯೇ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಯಿತು. ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಕಾಶ್ಮೀರ ಕಣಿವೆಯ ಈ ಮುಂಚೂಣಿ ಆಸ್ಪತ್ರೆ ಪ್ರದೇಶದಲ್ಲಿ ಜನರು ಭಯಗ್ರಸ್ತರಾದರು.


2018: ನವದೆಹಲಿ: ರಾಷ್ಟ್ರಾದ್ಯಂತದ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ೮೪೫ ಪುಟಗಳ ಪ್ರಮಾಣಪತ್ರವನ್ನು (ಅಫಿಡವಿಟ್) ಸಲ್ಲಿಸಿದ್ದರೂ ಅದರಲ್ಲಿದ್ದ ಮಾಹಿತಿ ಅಪೂರ್ಣವಾಗಿದ್ದುದನ್ನು ಕಂಡು ಕೆಂಡಾಮಂಡಲವಾದ ಸುಪ್ರೀಂಕೋರ್ಟ್ ಪೀಠ ’ಸರ್ವೋಚ್ಚ ನ್ಯಾಯಾಲಯವು ಕಸದ ತೊಟ್ಟಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಕಟುವಾಗಿ ಹೇಳಿತು. ಪ್ರಮಾಣಪತ್ರವನ್ನು ದಾಖಲೆಗೆ ಪರಿಗಣಿಸಲು ನಿರಾಕರಿಸಿದ ಕೋರ್ಟ್, ಸರ್ಕಾರವು ’ಕಚಡಾ (ಜಂಕ್) ತಂದು ತನ್ನ ಮುಂದೆ ಸುರಿಯವಂತಿಲ್ಲ ಎಂದು ಝಾಡಿಸಿತು. ‘ನೀವು ಏನು ಮಾಡುತ್ತಿದ್ದೀರಿ? ನಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದೀರಾ? ನಾವು ಪ್ರಸನ್ನರಾಗಿಲ್ಲ. ನೀವು ಎಲ್ಲವನ್ನೂ ತಂದು ನಮ್ಮ ಮುಂದೆ ಸುರಿಯಲು ಯತ್ನಿಸುತ್ತಿದ್ದೀರಿ ಎಂದು ಕೋರ್ಟ್ ಹೇಳಿತು. ’ನಾವು ಇದನ್ನು ಅಂಗೀರಕರಿಸುವುದಿಲ್ಲ ಎಂದೂ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತ ಅವರನ್ನು ಒಳಗೊಂಡ ಪೀಠ ಹೇಳಿತು.  ‘ನೀವು ಹೀಗೆಲ್ಲ ಮಾಡುವಂತಿಲ್ಲ. ನಿಮ್ಮ ಬಳಿ ಇರುವ ಕಚಡಾವನ್ನೆಲ್ಲ ತಂದು ನಮ್ಮ ಮುಂದೆ ಸುರಿಯುತ್ತಿದ್ದೀರಿ. ನಾವು ಕಸ ಸಂಗ್ರಹಿಸುವವರಲ್ಲ. ಈ ವಿಚಾರವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ ಎಂದು ಪೀಠ ತಿಳಿಸಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ೨೦೧೬ರ ಘನ ತ್ಯಾಜ್ಯ ನಿರ್ವಹಣಾ ನಿಯಮಗಳ ವಿಧಿಗಳಿಗೆ ಅನುಗುಣವಾಗಿ ರಾಜ್ಯ ಮಟ್ಟದ ಸಲಹಾ ಮಂಡಳಿಗಳನ್ನು ರಚಿಸಿವೆಯೇ ಎಂಬುದನ್ನು ಸೂಚಿಸುವ ಚಾರ್ಟ್‌ನ್ನು ಮೂರು ವಾರಗಳ ಒಳಗಾಗಿ ಸಲ್ಲಿಸಿ ಎಂದು ಪೀಠವು ಕೇಂದ್ರಕ್ಕೆ ನಿರ್ದೇಶನ ನೀಡಿತು. ಸಲಹಾ ಮಂಡಳಿಗಳು ರಚನೆಯಾದ ದಿನಾಂಕ, ಮಂಡಳಿ ಸದಸ್ಯರ ಹೆಸರುಗಳು ಮತ್ತು ಅವು ನಡೆಸಿದ ಸಭೆಗಳ ವಿವರಗಳನ್ನೂ ಈ ಚಾರ್ಟ್‌ನಲ್ಲಿ ನಮೂದಿಸುವಂತೆಯೂ ಪೀಠ ಕೇಂದ್ರಕ್ಕೆ ಸೂಚಿಸಿತು. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲರು ವಿಷಯಕ್ಕೆ ಸಂಬಂಧಿಸಿದಂತೆ ತಾವು ಈದಿನ ೮೪೫ ಪುಟಗಳ ಪ್ರಮಾಣಪತ್ರವನ್ನು ಸಲ್ಲಿಸುವುದಾಗಿ ಇದಕ್ಕೆ ಮುನ್ನ ತಿಳಿಸಿದರು. ಆಗ ಪೀಠವು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿತು. ಆದರೆ ಅವುಗಳಿಗೆ ಸೂಕ್ತ ಉತ್ತರ ನೀಡಲು ವಕೀಲರು ಅಸಮರ್ಥರಾದರು.  ೨೨ ರಾಜ್ಯಗಳಿಂದ ರಾಜ್ಯ ಮಟ್ಟದ ಸಲಹಾ ಮಂಡಳಿಗಳನ್ನು ರಚಿಸಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಸಂಬಂಧಪಟ್ಟ ರಾಜ್ಯಗಳಿಂದ ಬಂದ ಮಾಹಿತಿಯನ್ನು ಜೋಡಿಸಿ ಇಡಲಾಗಿದೆ ಎಂದು ವಕೀಲರು ಕೋರ್ಟಿಗೆ ತಿಳಿಸಿದರು. ‘ಪ್ರಮಾಣಪತ್ರದ ಜೊತೆಗೆ ಏನನ್ನೂ ಜೋಡಿಸಿ ಇಟ್ಟಿಲ್ಲವಾದರೆ ಪ್ರಮಾಣಪತ್ರ ಸಲ್ಲಿಸುವುದಕ್ಕೆ ಅರ್ಥವಿಲ್ಲ. ನಾವು ಈ ಪ್ರಮಾಣಪತ್ರವನ್ನು ದಾಖಲೆಗೆ ತೆಗೆದುಕೊಳ್ಳುವುದಿಲ್ಲ. ನೀವು ಅದನ್ನು ನೋಡಿಯೇ ಇಲ್ಲ ಮತ್ತು ನಾವು ಈ ಪ್ರಮಾಣಪತ್ರವನ್ನು ನೋಡಬೇಕು ಎಂದು ನೀವು ಬಯಸುತ್ತಿದ್ದೀರಿ ಎಂದು ಪೀಠ ಅಸಹನೆ ವ್ಯಕ್ತ ಪಡಿಸಿತು. ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿವರಗಳನ್ನು ಸಂಗ್ರಹಿಸುವಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ಡಿಸೆಂಬರ್ ೧೨ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಅಸಮರ್ಪಕ ಘನತ್ಯಾಜ್ಯ ನಿರ್ವಹಣೆಯ ಪರಿಣಾಮವಾಗಿ ಡೆಂಗ್ಯು ಮತ್ತು ಚಿಕುನ್‌ಗುನ್ಯದಂತಹ ರೋಗಗಳು ಉಲ್ಬಣಿಸಿ ಹಲವಾರು ಸಾವುಗಳು ಸಂಭವಿಸಿದ ಬಗ್ಗೆ ನ್ಯಾಯಾಲಯ ಇದಕ್ಕೆ ಮುನ್ನ ತೀವ್ರ ಕಳವಳ ವ್ಯಕ್ತ ಪಡಿಸಿತ್ತು. ತ್ಯಾಜ್ಯ ನಿರ್ವಹಣೆಯ ಅಭಾವದ ಕಾರಣ ರಾಷ್ಟ್ರಾದ್ಯಂತ ಹಲವಾರು ಸಾವುಗಳು ಸಂಭವಿಸಿದೆ ಎಂದು ಹೇಳಿತ್ತು.  ೨೦೧೬ರ ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಉಲ್ಲೇಖಿಸಿದ್ದ ನ್ಯಾಯಾಲಯ, ಈ ನಿಯಮಾವಳಿಯು ಪರಿಸರ, ಅರಣ್ಯ, ನಗರಾಭಿವೃದ್ಧಿ  ಸಚಿವಾಲಯಗಳಂತಹ ವಿವಿಧ ಸಚಿವಾಲಯಗಳ ಕರ್ತವ್ಯಗಳನ್ನು ನಿರ್ದಿಷ್ಟ ಪಡಿಸಿದೆ ಎಂದು ನ್ಯಾಯಾಲಯ ಹೇಳಿತ್ತು. ೨೦೧೫ರಲ್ಲಿ ೭ ವರ್ಷದ ಬಾಲಕನೊಬ್ಬ ಡೆಂಗ್ಯು ಜ್ವರಕ್ಕೆ ಬಲಿಯಾದ ಪ್ರಕರಣವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತ್ತು. ಐದು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ಪರಿಣಾಮವಾಗಿ ಭ್ರಮನಿರಸನಗೊಂಡ ಪಾಲಕರು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.

2018: ಮುಂಬೈ/ ನವದೆಹಲಿ: ಜಾಗತಿಕ ಮಾರುಕಟ್ಟೆಯ ಕುಸಿತದೊಂದಿಗೆ ಭಾರತೀಯ ಷೇರು ಮಾರುಕಟ್ಟೆಯಲ್ಲೂ ಸತತ ಆರನೇ ದಿನವೂ ಕುಸಿತ ಮುಂದುವರೆಯಿತು. ಸೂಚ್ಯಂತ ಮತ್ತು ನಿಫ್ಟಿ ಎರಡರಲ್ಲೂ ದಿನದ ವಹಿವಾಟು ಮುಗಿಯುವ ಹೊತ್ತಿಗೆ ದರಗಳು ಈದಿನದ ಆರಂಭಿಕ ದರಗಳಿಗಿಂತ ಸ್ವಲ್ಪ ಸುಧಾರಿಸಿದ್ದರೂ, ಕಳೆದ ಐದು ದಿನಗಳಲ್ಲಿ ಕಂಡು ಬಂದ ಕುಸಿತದ ಓಟ ಮುಂದುವರೆಯಿತು. ಬಿಎಸ್ ಇ ಸೆನ್ಸೆಕ್ಸ್ ೫೬೧ ಪಾಯಿಂಟ್ ಕುಸಿದು ೩೪,೧೯೫ಕ್ಕೆ ಇಳಿದು ನಿಂತಿತು. ನಿಫ್ಟಿ ೨೦೦ ಪಾಯಿಂಟ್ ಕುಸಿತದೊಂದಿಗೆ ೧೦,೪೯೮ಕ್ಕೆ ಬಂದು ನಿಂತಿತು. ಮಾರುಕಟ್ಟೆ ಕುಸಿತದ ಪರಿಣಾಮವಾಗಿ ಕಳೆದ ಮೂರು ದಿನಗಳಲ್ಲಿ ಹೂಡಿಕೆದಾರರ ೯.೬ ಲಕ್ಷ ಕೋಟಿ ರೂಪಾಯಿಗಳ ಸಂಪತ್ತು ಕರಗಿದೆ. ಜಾಗತಿಕ ಮಾರುಕಟ್ಟೆಗಳಲ್ಲೂ ಇದೇ ಸ್ಥಿತಿ ಕಂಡು ಬಂದಿತ್ತು. ಷೇರು ದರ ಕುಸಿತದ ಪರಿಣಾಮವಾಗಿ ಸುಮಾರು ೨೦೦ ವಸ್ತುಗಳ ಷೇರು ದರ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಒಂದು ವರ್ಷದ ಅವಧಿಯಲ್ಲೇ ಅತ್ಯಂತ ಕೆಳಕ್ಕೆ ಇಳಿದಿದೆ. ಆದಿತ್ಯ ಬಿರ್ಲಾ, ಕ್ಯಾಪಿಟಲ್, ಆಂಧ್ರ ಬ್ಯಾಂಕ್, ಬಜಾಜ್ ಹಿಂದುಸ್ತರಾನ್ ಶುಗರ್, ಬಿಜಿಆರ್ ಎನರ್ಜಿ ಸಿಸ್ಟಮ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕುಮ್ಮಿನ್ಸ್ ಇಂಡಿಯಾ ಮತ್ತು ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ೫೨ ವಾರಗಳಷ್ಟು ಹಿಂದಿನ ದರಕ್ಕೆ ಇಳಿದವು. ಆದರೆ ಕೆಲವು ಕಂಪೆನಿಗಳು ಲಾಃಭಗಳನ್ನೂ ಮಾಡಿಕೊಂಡವು. ಮೂವತ್ತಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಂಡವು. ಭಾರ್ತಿ ಏರ್ ಟೆಲ್, ಟಾಟಾ ಸ್ಟ್ರೀಲ್ ಕುಸಿತದ ಆಘಾತದಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಂಡವು. ಈ ಮಧ್ಯೆ ಯುರೋಪಿನ ಷೇರು ಮಾರುಕಟ್ಟೆಗಳು ಶೇಕಡಾ ೩ಕ್ಕಿಂತಲೂ ಹೆಚ್ಚು ಕುಸಿದಿವೆ. ಅಮೆರಿಕ ಮಾರುಕಟ್ಟೆಗಳ ಕುಸಿತದ ಬಳಿಕ ಏಷ್ಯಾದ್ಯಂತ ಹಲವು ಮಾರುಕಟ್ಟೆಗಳಲ್ಲು ಷೇರು ದರಗಳು ಕುಸಿದವು.  ಬಿಎಸ್ ಇ ಸೂಚ್ಯಂಕ ಬೆಳಗ್ಗೆ ಆರಂಭದಲ್ಲಿ ವೇಳೆಯಲ್ಲಿ ೧೦೦೦ ಪಾಯಿಂಟಿಗೂ ಹೆಚ್ಚಿನ ಕುಸಿತದೊಂದಿಗೆ ವಹಿವಾಟು ಆರಂಭಿಸಿತ್ತು. ಫೆ.5ರ ಸೋಮವಾರ ವಹಿವಾಟು ಕೊನೆಗೊಂಡಾಗ ೩೪,೭೫೭.೧೬ರಷ್ಟಿದ್ದ ಸೂಚ್ಯಂಕ ಈದಿನ ಬೆಳಗ್ಗೆ ೩೩,೪೮೨.೮೧ಕ್ಕೆ ಇಳಿದಿತ್ತು. ಸಂಜೆ ವೇಳೆಗೆ ಸುಧಾರಿಸಿದರೂ, ಸೋಮವಾರದ ಮಟ್ಟದವರೆಗೂ ಅದು ಏರಲಿಲ್ಲ.  ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ನಿಫ್ಟಿಯು ಬೆಳಗ್ಗೆ ೧೦೨೪.೬೮ ಪಾಯಿಂಟ್ ಕುಸಿತದೊಂದಿಗೆ ವಹಿವಾಟು ಆರಂಭಿಸಿತ್ತು.

2018: ಮುಂಬೈ: ಪಶ್ಚಿಮ ಆಫ್ರಿಕಾದ ಬೆನಿನ್ ಕರಾವಳಿ ಸಮೀಪ ಸಮುದ್ರದಲ್ಲಿ ಫೆಬ್ರುವರಿ ೧ರಂದು ಕಣ್ಮರೆಯಾಗಿದ್ದ ತೈಲ ನೌಕೆಯಲ್ಲಿದ್ದ ೨೨ ಮಂದಿ ಭಾರತೀಯರು ಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ಇಲ್ಲಿ ಹೇಳಿದರು. ಕಣ್ಮರೆಯಾದ ನಾಲ್ಕು ದಿನಗಳ ಬಳಿಕ ಕಡಲ್ಗಳ್ಳರಿಂದ ಬಿಡುಗಡೆಯಾಗಿರುವ ಎಲ್ಲ ನೌಕಾ ಸಿಬ್ಬಂದಿಯೂ ಸುರಕ್ಷಿತರಾಗಿದ್ದು, ನೌಕೆಯು ಮರುಪಯಣ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ‘೨೨ ಮಂದಿ ಭಾರತೀಯರೊಂದಿಗೆ ಅಪಹರಣಗೊಂಡಿದ್ದ ವಾಣಿಜ್ಯ ನೌಕೆ ಮರೈನ್ ಎಕ್ಸ್ ಪ್ರೆಸ್ ಬಿಡುಗಡೆ ಗೊಂಡಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದರು. ಭಾರತೀಯರ ಬಿಡುಗಡೆ ವಿಚಾರದಲ್ಲಿ ಬೆಂಬಲ ಹಾಗೂ ನೆರವು ನೀಡಿದ ನೈಜೀರಿಯಾ ಮತ್ತು ಬೆನಿನ್ ಸರ್ಕಾರಗಳಿಗೆ ಸಚಿವೆ ಸ್ವರಾಜ್ ಧನ್ಯವಾದ ಅರ್ಪಿಸಿದರು.  ಸ್ವರಾಜ್ ಅವರು ಫೆ.5ರ ಸೋಮವಾರ ನೈಜೀರಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಜೊತೆಗೆ ಮಾತನಾಡಿ ಕಣ್ಮರೆಯಾಗಿರುವ ತೈಲ ನೌಕೆ ಪತ್ತೆ ಕಾರ್‍ಯದಲ್ಲಿ ನೆರವಾಗುವಂತೆ ಮನವಿ ಮಾಡಿದ್ದರು. ಅಬುಜಾದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿ ಕೂಡಾ ನೈಜೀರಿಯಾ ಮತ್ತು ಬೆನಿನ್ ಸರ್ಕಾರಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ನೌಕೆ ಪತ್ತೆಗೆ ನೆರವು ಪಡೆದಿತ್ತು. ‘ಮರೈನ್ ಎಕ್ಸ್ ಪ್ರೆಸ್ ನೌಕೆಯನ್ನು ಬಿಡುಗಡೆ ಮಾಡಲಾಗಿದ್ದು ಅದೀಗ ಕ್ಯಾಪ್ಟನ್ ನಿಯಂತ್ರಣದಲ್ಲಿದೆ ಎಂದು ನೌಕಾಯಾನ ಮಹಾ ನಿದೇರ್ಶಕಿ ಮಾಲಿನಿ ಶಂಕರ್ ಮುಂಬೈಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಇಂಧನವಿದ್ದ ನೌಕೆಯ ಬಿಡುಗಡೆಗೆ ಏನಾದರೂ ಹಣ ಪಾವತಿ ಮಾಡಬೇಕಾಯಿತೇ ಎಂಬುದು ತತ್ ಕ್ಷಣಕ್ಕೆ ಗೊತ್ತಾಗಗಲಿಲ್ಲ. ಫೆಬ್ರುವರಿ ೧ರಂದು ಕಡಲ್ಗಳ್ಳರು ನೌಕೆಯನ್ನು ಅಪಹರಿಸುವ ವೇಳೆಯಲ್ಲಿ ಮರೈನ್ ಎಕ್ಸ್ ಪ್ರೆಸ್ ಬೆನಿನ್ ನ ಕೊಟೊನೊವುನಲ್ಲಿ ಲಂಗರು ಹಾಕಿತ್ತು. ನೌಕೆಯನ್ನು ಅಪಹರಿಸಿಕೊಂಡು ಹೋಗುವ ಮುನ್ನ ಅದರ ಎಲ್ಲ ಸಂಪರ್ಕ ವ್ಯವಸ್ಥೆಯನ್ನು ಸ್ವಿಚ್ ಆಫ್ ಮಾಡಲಾಗಿತ್ತು.

2018: ಕರಾಚಿ: ’ಗೂಢಚರ್ಯೆ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ವಿರುದ್ಧ ಪಾಕಿಸ್ತಾನಿ ಅಧಿಕಾರಿಗಳು ಇದೀಗ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಆರೋಪ ಹೊರಿಸಿ ವಿಚಾರಣೆಗೆ ಗುರಿಪಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವು.  ಪಾಕಿಸ್ತಾನದ ’ಡಾನ್ ಪತ್ರಿಕೆ ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ಕುರಿತು ವರದಿ ಪ್ರಕಟಿಸಿತು.  ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ೧೩ ಭಾರತೀಯ ಅಧಿಕಾರಿಗಳ ಸಂಪರ್ಕ ಒದಗಿಸಲು ಪಾಕಿಸ್ತಾನ ಪದೇ ಪದೇ ಕೋರಿದೆ, ಆದರೆ ಭಾರತ ಸಹಕರಿಸುತ್ತಿಲ್ಲ ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಪಾಕಿಸ್ತಾನಿ ಅಧಿಕಾರಿ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿತು. ಜಾಧವ್ ವಿರುದ್ಧ ಹಲವಾರು ಪ್ರಕರಣಗಳಿವೆ. ಅವುಗಳ ಪೈಕಿ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದ ಆಪಾದನೆಗಳೂ ಸೇರಿವೆ. ಈ ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಿಲಿಟರಿ ಟ್ರಿಬ್ಯೂನಲ್ ನಿಂದ ಅಥವಾ ನಾಗರಿಕ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಿಂದ ಹೊಸದಾಗಿ ವಿಚಾರಣೆ ನಡೆಯಲಿದೆಯೇ ಎಂದು ಅವರು ಸ್ಪಷ್ಟ ಪಡಿಸಲಿಲ್ಲ ಎಂದು ವರದಿ ತಿಳಿಸಿತು. ಪಾಕಿಸ್ತಾನದ ಪ್ರಕಾರ ಜಾಧವ್ ಅವರನ್ನು ೨೦೧೬ರಲ್ಲಿ ಗಲಭೆಗ್ರಸ್ತ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ. ಮಿಲಿಟರಿ ಟ್ರಿಬ್ಯೂನಲ್ ಗೂಢಚರ್ಯೆ ಆಪಾದನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕಳೆದ ವರ್ಷ ಮರಣದಂಡನೆ ವಿಧಿಸಿತ್ತು. ಈ ಶಿಕ್ಷೆಯ ವಿರುದ್ಧ ಮಿಲಿಟರಿ ಮುಖ್ಯಸ್ಥ ಜನರಲ್ ಜಾವೇದ್ ಖಮರ್ ಬಜ್ವಾ ಮುಂದೆ ಸಲ್ಲಿಸಲಾಗಿರುವ ಜಾಧವ್ ಮೇಲ್ಮನವಿ ಇನ್ನೂ ವಿಚಾರಣೆಗೆ ಬಾಕಿ ಉಳಿದಿದೆ. ಜಾಧವ್ ಅವರು ಭಾರತೀಯ ನೌಕಾಪಡೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬಲೂಚಿಸ್ಥಾನ ಮತ್ತು ಕರಾಚಿಯಲ್ಲಿ ಭಯೋತ್ಪಾದಕ ಕೃತ್ಯಗಳ ಉಸ್ತುವಾರಿ ನೋಡಿಕೊಳ್ಳಲು ’ರಾ ಮೂಲಕ ನೇಮಿಸಲ್ಪಟ್ಟಿದ್ದರು ಎಂದು ಪಾಕಿಸ್ತಾನ ಆಪಾದಿಸಿತ್ತು. ಆದರೆ ಜಾಧವ್ ಅವರು ನಿವೃತ್ತ ನೌಕಾ ಅಧಿಕಾರಿಯಾಗಿದ್ದು, ಇರಾನಿನ ಚಬಹಾರ್ ಬಂದರಿಗೆ ತಮ್ಮ ವ್ಯವಹಾರ ನಿಮಿತ್ತ ಹೋಗಿದಾಗ ಅವರನ್ನು ಅಪಹರಿಸಲಾಗಿದೆ ಎಂದು ಭಾರತ ಪ್ರತಿಪಾದಿಸಿತ್ತು.  ಪಾಕಿಸ್ತಾನವು ಜಾಧವ್ ಅವರನ್ನು ಸಂಪರ್ಕಿಸಲು ರಾಜತಾಂತ್ರಿಕ ಅವಕಾಶ ನಿರಾಕರಿಸುವ ಮೂಲಕ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂಬುದಾಗಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ನೀಡಿದ ಬಳಿಕ, ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿತ್ತು. ೨೦೧೬ರ ಮಾರ್ಚ್ ೩ರಂದು ಜಾಧವ್ ಅವರನ್ನು ಬಲೂಚಿಸ್ಥಾನದಲ್ಲಿ ಸೆರೆಹಿಡಿಯಲಾಗಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಅವರಿಗೆ ೧೯೫೨ರ ಪಾಕಿಸ್ತಾನ ಸೇನಾ ಕಾಯ್ದೆಯ ೫೯ನೇ ವಿಧಿ ಮತ್ತು ೧೯೨೩ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ ೩ರ ಅಡಿಯಲ್ಲಿ ಗೂಢಚರ್ಯೆ ಅಪರಾಧಕ್ಕಾಗಿ ಫೀಲ್ಡ್ ಮಾರ್ಷಲ್ ಮರಣದಂಡನೆ ವಿಧಿಸಿದ್ದರು.  ೨೦೧೭ರ ಡಿಸೆಂಬರ್ ೨೫ರಂದು ಜಾಧವ್ ಜೊತೆಗೆ ಅವರ ತಾಯಿ ಮತ್ತು ಪತ್ನಿಯ ಭೇಟಿಗೆ ಪಾಕಿಸ್ತಾನ ವ್ಯವಸ್ಥೆ ಮಾಡಿತ್ತು. ಆದರೆ ಪತ್ನಿ ಮತ್ತು ತಾಯಿಯನ್ನು ಬಿಗಿ ತಪಾಸಣೆಗಳಿಗೆ ಒಳಪಡಿಸಿದ್ದು ಹಾಗೂ ಅವರನ್ನು ನಡೆಸಿಕೊಂಡ ರೀತಿ ಉಭಯ ರಾಷ್ಟ್ರಗಳ ಮಧ್ಯೆ ತೀವ್ರ ರಾಜತಾಂತ್ರಿಕ ಚಕಮಕಿಗೆ ಕಾರಣವಾಗಿತ್ತು.

2018: ನವದೆಹಲಿ: ರಫೇಲ್ ಅವಳಿ ಎಂಜಿನ್ ಸಮರ ವಿಮಾನದ ಘಟಕದ ಬೆಲೆ ಎಷ್ಟು ಎಂಬುದನ್ನು ಸಂಸತ್ತಿಗೆ ತಿಳಿಸಲು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದ ಒಂದು ದಿನದ ಬಳಿಕ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ, ಆದರೆ ಪ್ರಶ್ನಿಸಿದವರನ್ನು ’ರಾಷ್ಟ್ರ ವಿರೋಧಿ ಎಂಬುದಾಗಿ ಬಿಂಬಿಸಲಾಗುತ್ತದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಟ್ವಿಟ್ಟರ್ ಪೋಸ್ಟ್ ಗಳ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ ಅವರು ’ಪ್ರತಿಯೊಂದು ರಫೇಲ್ ವಿಮಾನದ ದರದ ಬಗ್ಗೆ ಪ್ರಧಾನಿ ಮತ್ತು ಅವರ ’ನಂಬಿಕಸ್ಥ ವ್ಯಕ್ತಿ ಮಾತುಕತೆ ನಡೆಸಿರುವದು ’ರಾಷ್ಟ್ರದ ರಹಸ್ಯ ಎಂದು ಲೇವಡಿ ಮಾಡಿದರು. ಸಂಸತ್ತಿಗೆ ನೀಡಿದ ತಮ್ಮ ಉತ್ತರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವಣ ರಹಸ್ಯ ಒಪ್ಪಂದವು ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗ ಪಡಿಸದಂತೆ ನಿರ್ಬಂಧಿಸುತ್ತದೆ ಎಂದು ಪ್ರತಿಪಾದಿಸಿದ್ದರು. ‘ಭಾರತ ಸರ್ಕಾರ ಮತ್ತು ಫ್ರಾನ್ಸ್ ಸರ್ಕಾರದ ನಡುವಣ ರಫೇಲ್ ವಿಮಾನ ಖರೀದಿ ಸಂಬಂಧಿತ ವಿವರಗಳು ವಗೀಕೃತವಾಗಿದ್ದು, ಅವುಗಳಿಗೆ  ಅಂತರ್ ಸರ್ಕಾರ ಒಪ್ಪಂದದ (ಐಜಿಎ) ೧೦ನೇ ಪರಿಚ್ಛೇದದ ರಕ್ಷಣೆ ಇದೆ. ೨೦೦೮ರಲ್ಲಿ ಉಭಯ ರಾಷ್ಟ್ರಗಳ ನಡುವೆ ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಸೀತಾರಾಮನ್ ಹೇಳಿದ್ದರು.
ಈ ಉತ್ತರದ ಬಗ್ಗೆ ವ್ಯಂಗ್ಯವಾಡಿದ ರಾಹುಲ್ ’ಮೇಲಿನ ಮಾಹಿತಿಯು ಅತ್ಯಂತ ರಹಸ್ಯ ವಿಚಾರವಾಗಿದ್ದು, ಸಾರ್ವಜನಿಕರಿಗೆ ಬಹಿರಂಗ ಪಡಿಸಲಾಗದಂತಹುದು ಎಂದರು. ‘ರಫೇಲ್ ವ್ಯವಹಾರದ ಬಗ್ಗೆ ಪ್ರಶ್ನಿಸಿ ಎಂದು ಮಾಧ್ಯಮ ಮಂದಿಯನ್ನು ಆಗ್ರಹಿಸಿದ ರಾಹುಲ್, ’ನೀವು ರಫೇಲ್ ವ್ಯವಹಾರದ ಬಗ್ಗೆ ಪ್ರಶ್ನಿಸಲು ಇಚ್ಛಿಸುವುದಿಲ್ಲ ಎಂಬುದು ನನಗೆ ಗೊತ್ತಿದೆ. ನಿಮ್ಮ ಮೇಲಿನ ಒತ್ತಡವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಸ್ವಲ್ಪ ಧೈರ್ಯ ವಹಿಸಿ. ರಫೇಲ್ ಬಗ್ಗೆ ಪ್ರಶ್ನೆಗಳನ್ನು ಕೇಳಿ ಎಂದು ರಾಹುಲ್ ಆಗ್ರಹಿಸಿದರು. ಯಾವ ದರದಲ್ಲಿ ವ್ಯವಹಾರ ಕುದುರಿಲಾಗಿದೆ ಎಂಬ ವಿವರ ನೀಡಲು  ನಿರಾಕರಿಸಿರುವುದು ’ಭ್ರಷ್ಟಾಚಾರದ ಸಂಕೇತ ಎಂದು ರಾಹುಲ್ ಬಣ್ಣಿಸಿದರು.  ಸರ್ಕಾರವು ಸಂಸತ್ತಿಗೆ ಉತ್ತರ ನೀಡಲು ನಿರಾಕರಿಸಿದ ಸಂಪ್ರದಾಯ ಹಿಂದೆಂದೂ ಇರಲೇ ಇಲ್ಲ ಎಂದು ರಾಹುಲ್ ಹೇಳಿದರು.

2018: ಹೈದರಾಬಾದ್: ಮಾದರಿ ನಿಖಾನಾಮ ಅಥವಾ ಮದುವೆ ಒಪ್ಪಂದಕ್ಕೆ ಹೊಸ ಉಪವಿಧಿಯೊಂದನ್ನು ಸೇರಿಸುವ ಮಹತ್ವದ ಕ್ರಮಕ್ಕೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಮುಂದಾಗಿದ್ದು, ಈ ವಿಧಿಯ ಪ್ರಕಾರ ವರನು ಪತ್ನಿಗೆ ಒಂದೇ ಉಸಿರಿನಲ್ಲಿ ಅವಸರದ ತ್ರಿವಳಿ ತಲಾಖ್ ಕೊಡುವುದಿಲ್ಲ ಎಂಬುದಾಗಿ ಲಿಖಿತ ಪ್ರಮಾಣ ಮಾಡಬೇಕಾಗುತ್ತದೆ. ಹೈದರಾಬಾದಿನಲ್ಲಿ ಫೆಬ್ರುವರಿ ೯ರಿಂದ ೧೧ರವರೆಗೆ ನಡೆಯಲಿರುವ ತನ್ನ ಮಹಾಅಧಿವೇಶನದಲ್ಲಿ ಮಂಡಳಿಯು ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಸಲು ತೀರ್ಮಾನಿಸಿತು. ಅಧಿವೇಶನದಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನುಗಳ ರಕ್ಷಣೆಗಾಗಿ ಮಾರ್ಗನಕ್ಷೆಯೊಂದನ್ನು ಮಂಡಳಿಯು ಅಂತಿಮಗೊಳಿಸುವ ನಿರೀಕ್ಷೆ ಇದೆ. ’ಮಂಡಳಿಯು ಈಗಾಗಲೇ ಒಂದೇ ಉಸಿರಿನ ತ್ರಿವಳಿ ತಲಾಖ್ ನೀಡುವ ಯಾರೇ ಆದರೂ ಸಾಮಾಜಿಕ ಬಹಿಷ್ಕಾರ ಎದುರಿಸಬೇಕಾಗುತ್ತದೆ ಎಂದು ಈಗಾಗಲೇ ಹೇಳಿದೆ. ಅಲ್ಲದೆ, ಈ ಸಂಪ್ರದಾಯಕ್ಕೆ ಕೊನೆ ಹಾಡುವ ಸಲುವಾಗಿ ನಾವು ಮಾದರಿ ನಿಖಾನಾಮಕ್ಕೆ ಇನ್ನೊಂದು ಉಪವಿಧಿಯನ್ನು ಸೇರಿಸಲು ಉದ್ದೇಶಿಸಿದ್ದೇವೆ. ಈ ಉಪವಿಧಿಯ ಪ್ರಕಾರ ಪುರುಷನು ತಾನು ಒಂದೇ ಉಸಿರಿನ ತ್ರಿವಳಿ ತಲಾಖ್ ನೀಡುವುದಿಲ್ಲ ಎಂದು ಪ್ರಮಾಣ ಮಾಡಬೇಕಾಗುತ್ತದೆ. ಈ ತಿದ್ದುಪಡಿಯು ತ್ರಿವಳಿ ತಲಾಖ್ ಪ್ರಕರಣಗಳ ಸಂಖ್ಯೆಯನ್ನು ಕುಗ್ಗಿಸುತ್ತದೆ ಎಂದು ಮಂಡಳಿಯ ಸಂಚಾಲಕ ಹಾಗೂ ಪ್ರಧಾನ ಕಾರ್ಯದರ್ಶಿ ರಹಿಮುದ್ದೀನ್ ಅನ್ಸಾರಿ ನುಡಿದರು. ‘ಇದರಿಂದ ಸಮುದಾಯವು ವಿಷಯದ ಬಗೆಗೆ ಹೆಚ್ಚಿನ ಅರಿವನ್ನು ಹೊಂದುತ್ತದೆ. ಮತ್ತು ಅವಸರದ ತ್ರಿವಳಿ ತಲಾಖ್ ಇಸ್ಲಾಮ್ ಮತ್ತು ರಾಷ್ಟ್ರದ ಕಾನೂನಿಗೆ ವಿರುದ್ಧ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಏನಿದ್ದರೂ, ಈ ಕುರಿತ ಅಂತಿಮ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಅನ್ಸಾರಿ ಹೇಳಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ ಪಡೆಯಲು ಸರ್ವಯತ್ನಗಳನ್ನು ನಡೆಸುತ್ತಿರುವ ನಿರ್ಣಾಯಕ ಹೊತ್ತಿನಲ್ಲೇ ಮಂಡಳಿ ಈಗ ಅಕ್ರಮ  ಎಂಬುದಾಗಿ ಸುಪ್ರೀಂಕೋರ್ಟಿನಿಂದ ಘೋಷಿಸಲ್ಪಟ್ಟಿರುವ ಅವಸರದ ತ್ರಿವಳಿ ತಲಾಖ್ ಪದ್ಧತಿಯನ್ನು ದಮನಿಸುವ ಉದ್ದೇಶದ ಕ್ರಮ ಕೈಗೊಳ್ಳಲು ಹೊರಟಿದೆ. ಪ್ರಸ್ತಾಪಿತ ಮಸೂದೆಯು ಒಂದೇ ಉಸಿರಿನ ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿ ಮಾಡುವುದಲ್ಲದೆ, ಈ ಅಪರಾಧ ಎಸಗುವವರಿಗೆ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿದೆ. ಮಂಡಳಿಯ ಕಾರ್ಯಕಾರಿಣಿ ಸದಸ್ಯರು ಫೆಬ್ರುವರಿ ೯ರಂದು ಮಹಾಅಧಿವೇಶನದ ಕಾರ್ಯಸೂಚಿ ನಿರ್ಧರಿಸುವ ಸಭೆ ನಡೆಸುವರು ಮತ್ತು ಫೆಬ್ರುವರಿ ೧೦ ಹಾಗೂ ೧೧ರಂದು ಇಡೀ ದಿನದ ಅಧಿವೇಶನ ಕಲಾಪಗಳು ನಡೆಯಲಿವೆ. ಅಧಿವೇಶನದಲ್ಲಿ ದೇಶಾದ್ಯಂತದ ೬೦೦ ಮಂದಿ ಮುಸ್ಲಿಂ ಧಾರ್ಮಿಕ ಪ್ರಮುಖರು ಪಾಲ್ಗೊಳ್ಳುವರು.  ತ್ರಿವಳಿ ತಲಾಖ್ ಮಸೂದೆ ಮತ್ತು ಬಾಬರಿ ಮಸೀದಿ ಪ್ರಕರಣ ಇವೆರಡು ಚರ್ಚೆಯಾಗಲಿರುವ ಎರಡು ಪ್ರಮುಖ ಕಾರ್ಯಸೂಚಿಗಳು ಎಂದು ಅನ್ಸಾರಿ ನುಡಿದರು. ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಫೆಬ್ರುವರಿ ೮ರಂದು ಆರಂಭವಾಗಲಿದೆ. ಇವೆರಡೂ ವಿಷಯಗಳು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿದ ಅತ್ಯಂತ ಮಹತ್ವದ ವಿಚಾರಗಳಾಗಿವೆ ಎಂದು ಅನ್ಸಾರಿ ಹೇಳಿದರು.
ಮೂರು ದಿನಗಳ ಅಧಿವೇಶನದಲ್ಲಿ ಮಂಡಳಿಯು ತ್ರಿವಳಿ ತಲಾಖ್ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತು ಕೈಗೊಂಡಿರುವ ಕ್ರಮದ ಪರಿಶೀಲನೆ ಮಾಡಲಿದೆ. ಮತ್ತು ವಿವಿಧ ನ್ಯಾಯಾಲಯಗಳು ಮುಸ್ಪಿಮ್ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ನೀಡಿದ ತೀರ್ಪುಗಳು, ಇತ್ಯರ್ಥಕ್ಕಾಗಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಕೂಡಾ ಪರಿಶೀಲಿಸಲಿದೆ. ಬಾಬರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದೆ.
ಫೆಬ್ರುವರಿ ೧೧ರಂದು ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಮೂರು ದಿನಗಳ ಅಧಿವೇಶನ ಕಲಾಪ ಮುಕ್ತಾಯಗೊಳ್ಳಲಿದೆ ಎಂದು ಅವರು ನುಡಿದರು.

2017: ನವದೆಹಲಿ:  ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸೋಮವಾರ 06 ಫೆಬ್ರುವರಿ 2017ರ
ರಾತ್ರಿ 10.30 ಗಂಟೆಗೆ ಪ್ರಬಲ ಭೂಕಂಪ ಸಂಭವಿಸಿತು.
ರಿಕ್ಟರ್ ಮಾಪಕದ ಪ್ರಕಾರ ಭೂಕಂಪದ ತೀವ್ರತೆ 5.8ರಷ್ಟು ಇತ್ತು ಎಂದು ವರದಿಗಳು ತಿಳಿಸಿದವು.
ಹರಿಯಾಣ, ಪಂಜಾಬ್, ಉತ್ತರಾಖಂಡ ಮತ್ತು ದೆಹಲಿಯಲ್ಲಿ 30 ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಯಿತು.
ಯಾವುದೇ ಹಾನಿ ಕುರಿತು ತತ್ ಕ್ಷಣಕ್ಕೆ ವರದಿಗಳು ಬರಲಿಲ್ಲ.
ಉತ್ತರಾ ಖಂಡದ ಪಥೌರಗಢದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿತು.
2017: ನವದೆಹಲಿ: ಸಹಾರಾ ಸಮೂಹದ ಪುಣೆಯಲ್ಲಿನ ಆಂಬಿ ವ್ಯಾಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸುಪ್ರೀಂಕೋರ್ಟ್  ಆದೇಶ ನೀಡಿತು. ಸಹಾರಾ ಮತ್ತು ಸುಬ್ರತೊ ರಾಯ್ ಅವರು ಪಾವತಿ ಮಾಡಬೇಕಾಗಿರುವ 14,779 ಕೋಟಿ ರೂಪಾಯಿಗಳ ಪಾವತಿಯನ್ನು ತ್ವರಿತಗೊಳಿಸುವ ಸಲುವಾಗಿ ಈ ಕ್ರಮ ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆಂಬಿ ವ್ಯಾಲಿ ಸಿಟಿಯು ಸಹಾರಾ ಸಮೂಹವು ಮಹಾರಾಷ್ಟ್ರದ ಪುಣೆಯಲ್ಲಿ ಅಭಿವೃದ್ಧಿ ಪಡಿಸಿರುವ ಟೌನ್​ಶಿಪ್. ಖಟ್ಲೆ ರಹಿತವಾದ ತನ್ನ ಆಸ್ತಿಯ ವಿವರಗಳನ್ನು ಫೆಬ್ರುವರಿ 20 ಒಳಗಾಗಿ ಒದಗಿಸುವಂತೆಯೂ ಸುಪ್ರೀಂ ಕೋರ್ಟ್ ಸಹಾರಾ ಸಂಸ್ಥೆಗೆ ಆದೇಶ ನೀಡಿತು. ಉಳಿದ ಹಣವನ್ನು ಭರಿಸುವ ಸಲುವಾಗಿ ಆಸ್ತಿಗಳನ್ನು ಬಹಿರಂಗ ಹರಾಜಿಗೆ ಇಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿತು. ಸೆಬಿಗೆ ತಾನು 14,779 ಕೋಟಿ ರೂಪಾಯಿಗಳನ್ನು ಪಾವತಿ ಮಾಡಬೇಕಾಗಿರುವುದು ನಿಜ ಎಂಬುದಾಗಿ ಸುಪ್ರೀಂಕೋರ್ಟಿನಲ್ಲಿ ಒಪ್ಪಿಕೊಂಡ ಸಹಾರಾ ಈವರೆಗೆ ತಾನು 11,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ಪಾವತಿ ಮಾಡಿರುವುದಾಗಿ ಹೇಳಿತು.14,779 ಕೋಟಿ ರೂ. ಪಾವತಿಗೆ 2019ರ ಜುಲೈವರೆಗೆ ಕಾಲಾವಕಾಶ ನೀಡುವಂತೆಯೂ ಸಹಾರಾ ಕೋರಿತು. ಈದಿನ 600 ಕೋಟಿ ರೂ.ಗಳಿಗಿಂತ ಸ್ವಲ್ಪ ಹೆಚ್ಚಿನ ಹಣವನ್ನು ಸಹಾರಾ ಪಾವತಿ ಮಾಡಿತು.

2017: ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಇದ್ದಾಗ ಅವರ ಯಾವುದೇ ಅಂಗಕ್ಕೂ ಸರ್ಜರಿ ಮಾಡಲಾಗಿಲ್ಲ ಅಥವಾ ಅವರಿಗೆ ಯಾವುದೇ ಕಸಿಯನ್ನೂ ಮಾಡಲಾಗಿಲ್ಲ ಅವರ ಸಾವಿಗೆ ಕಾರಣವಾದದ್ದು ಅಂಗಾಂಗ ವೈಫಲ್ಯ ಮತ್ತು ಹೃದಯ ಸ್ಥಂಭನ ಎಂಬುದಾಗಿ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದ ಲಂಡನ್ ಮೂಲದ ವೈದ್ಯ ಡಾ. ರಿಚರ್ಡ್ ಬೀಲೆ ಅವರು ಚೆನ್ನೈಯಲ್ಲಿ ಹೇಳಿದರು. ತಮಿಳುನಾಡು ಸರ್ಕಾರದ ವತಿಯಿಂದ ಸಂಘಟಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಲಾಗಿದ್ದ ಅಪೋಲೋ ಆಸ್ಪತ್ರೆಯ ಡಾ. ಪಿ. ಬಾಲಾಜಿ ಅವರ ಜೊತೆಗೆ ಡಾ. ರಿಚರ್ಡ್ ಬೀಲೆ ಅವರು ಇದೇ ಮೊದಲ ಬಾರಿಗೆ ಜಯಲಲಿತಾ ಅವರ ಅಸ್ವಸ್ಥತೆ ಬಗೆಗಿನ ಮಾಹಿತಿಗಳನ್ನು ವಿವರಿಸಿ ಮಾತನಾಡಿದರು. ತಾವು ಯಾವುದೇ ಒತ್ತಡಕ್ಕೆ ಒಳಗಾಗಿ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿಲ್ಲ. ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಹರಡಿರುವ ಪುಕಾರುಗಳ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಜನರಿಗೆ ತಿಳಿಸುವಂತೆ ಸರ್ಕಾರ ಮಾಡಿದ ಮನವಿಯ ಮೇರೆಗೆ ತಾವು ಇಲ್ಲಿಗೆ ಆಗಮಿಸಿರುವುದಾಗಿ ಬೀಲೆ ಸ್ಪಷ್ಟ ಪಡಿಸಿದರು. ಜಯಲಲಿತಾ ಅವರ ಹೆಬ್ಬರಳ ಗುರುತನ್ನು ನಾನೇ ಪ್ರಮಾಣೀಕರಿಸಿದ್ದೇನೆ. ಅವರು ಎಚ್ಚರದಲ್ಲಿ ಇದ್ದರು. ಆಗ ಚುನಾವಣಾ ಆಯೋಗದ ಪತ್ರವನ್ನು ನಾನು ಅವರಿಗೆ ಓದಿ ಹೇಳಿದ್ದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಡಾ. ಬಾಬು ಕೆ ಅಬ್ರಹಾಂ ಹೇಳಿದರು. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಫೋಟೋ ತೆಗೆದುಕೊಳ್ಳುವುದು, ಖಾಸಗಿ ವಿವರಗಳನ್ನು ಬಹಿರಂಗ ಪಡಿಸುವುದು ಸರಿಯಲ್ಲ, ಅದು ಅವರ ಖಾಸಗಿತನದ ಮೇಲಿನ ಅತಿಕ್ರಮಣವಾಗುತ್ತದೆ ಎಂದು ಡಾ. ಬೀಲೆ ನುಡಿದರು. ಜಯಲಲಿತಾ ಅವರು ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಇದ್ದಾಗ ಮಂಪರಿನಲ್ಲಿ ಇದ್ದರು. ಒಂದು ವಾರದವರೆಗೆ ಅವರು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು, ಆಹಾರ ತೆಗೆದುಕೊಳ್ಳುತ್ತಿದ್ದರು ಎಂದು ಡಾ. ಬಾಬು ವಿವರಿಸಿದರು. ಆಸ್ಪತ್ರೆಗೆ ಮೊದಲು ಬಂದಾಗ ನಮ್ಮ ಮೊದಲ ಕೆಲಸ ಅವರ ಆರೋಗ್ಯವನ್ನು ಸ್ಥಿರಗೊಳಿಸುವುದಾಗಿತ್ತು. ಅವರ ಮುಖ, ದೇಹದಲ್ಲಿ ಇದ್ದಿರಬಹುದಾದ ಗುರುತುಗಳು ಮೆಡಿಕಲ್ ಟೇಪ್ಗಳದ್ದಾಗಿರಬಹುದು ಎಂದು ಡಾ. ಬೀಲೆ ಹೇಳಿದರು. ಸೆಪ್ಸಿಸ್ ಸಮಸ್ಯೆಯ ಜೊತೆಗೆ ಆಸ್ಪತ್ರೆಗೆ ಬಂದಾಗ ಅವರು ಪ್ರಜ್ಞೆಯಲ್ಲಿ ಇದ್ದರು. ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಸೆಪ್ಟೈಸ್ವಿುಯಾ, ಅನಿಯಂತ್ರಿತ ಮಧುಮೇಹ, ಮೂತ್ರನಾಳದ ಸೊಂಕು, ರಕ್ತದ ಒತ್ತಡ, ನಿರ್ಜಲೀಕರಣದಿಂದ ಅವರು ಬಳಲಿದ್ದರು. ಅವರಿಗೆ ಗಂಭೀರವಾದ ಮಧುಮೇಹ ಇತ್ತು, ಹೀಗಾಗಿಯೇ ಅವರು ದೇಹಸ್ಥಿತಿ ಬಳಿಕ ವಿಷಮಿಸಿತು ಎಂದು ಡಾ.ಬೀಲೆ ನುಡಿದರು. ಅವರ ರಕ್ತದಲ್ಲಿ ಸೋಂಕು ಇತ್ತು. ಅವರ ರಕ್ತದಲ್ಲಿ ನಾವು ಸೆಪ್ಸಿಸ್ ಬ್ಯಾಕ್ಟೀರಿಯಾ ಪತ್ತೆ ಹಚ್ಚಿದ್ದೆವು. ಜೊತೆಗೆ ಉಸಿರಾಟದ ಸಮಸ್ಯೆಗಳೂ ಅವರನ್ನು ಕಾಡಿದವು. ಇದರಿಂದಾಗಿ ಅವರ ಅಂಗಾಂಗಗಳಿಗೆ ಹಾನಿಯಾಯಿತು ಎಂದು ಡಾ. ಬೀಲೆ ವಿವರಿಸಿದರು. ಪ್ರಾರಂಭದಲ್ಲಿ ಅವರು ಸಂಪೂರ್ಣ ಅಸ್ವಸ್ಥರಾಗಿದ್ದರು. ಮಾತನಾಡಲು ಆಗುತ್ತಿರಲಿಲ್ಲ. ಬಳಿಕ ಪರಿಸ್ಥಿತಿ ಸುಧಾರಿತು. ಅವರು ಎಚ್ಚರದಲ್ಲಿದ್ದರು. ಹೆಚ್ಚು ಸಂವಹನ ಸಾಧ್ಯವಾಯಿತು. ಹೃದಯ ಸ್ಥಂಭನಕ್ಕೆ ಮುನ್ನ ಹಲವಾರು ದಿನಗಳ ಕಾಲ ಸಂಜ್ಞಾ ಭಾಷೆಯ ಮೂಲಕ ಅವರು ಸಂವಹನ ನಡೆಸುತ್ತಿದ್ದರು. ಆದರೆ ಹೃದಯ ಸ್ಥಂಭನ ಮತ್ತು ವಿವಿಧ ಅಂಗಾಂಗಗಳಿಗೆ ಆದ ಹಾನಿಯಿಂದಾಗಿ ಅವರು ಕೊನೆಯುಸಿರು ಎಳೆಯುವಂತಾಯಿತು ಎಂದು ಡಾ. ಬೀಲೆ ನುಡಿದರು. ರೋಗಿಗಳ ಕೊಠಡಿಯಲ್ಲಿ ನಾವು ಸಿಸಿಟಿವಿ ಅಳವಡಿಸಿಲ್ಲ. ಒಂದೊಮ್ಮೆ ಇದ್ದರೂ ನಾವು ಅದನ್ನು ಎಂದಿಗೂ ಬಿಡುಗಡೆ ಮಾಡುವುದಿಲ್ಲ ಎಂದು ಅವರು ಹೇಳಿದರು.
2017: ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಡಳಿತಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಿಯೋಜಿಸಿರುವ ಆಡಳಿತಾಧಿಕಾರಿಗಳು ಬೆಳಗ್ಗೆ ಕೆಲ ಅಧಿಕಾರಿಗಳನ್ನು ವಜಾಗೊಳಿಸಿದರು. ಮಾಜಿ ಅಧ್ಯಕ್ಷರಾದ ಅನುರಾಗ್ ಠಾಕೂರ್ ಮತ್ತು ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ನೇಮಕ ಮಾಡಿಕೊಂಡಿದ್ದ ಅಧಿಕಾರಿಗಳನ್ನು ವಜಾಗೊಳಿಸಿ ನಿರೀಕ್ಷಿತ ಕ್ರಮ ತೆಗೆದುಕೊಂಡಿತು. ವಿನೋದ್ ರೈ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ಕೆಲವೇ ದಿನಗಳಲ್ಲಿ ಆದೇಶ ಹೊರಡಿಸಿತು. ಠಾಕೂರ್ ಮತು ಶಿರ್ಕೆ ಅವರನ್ನು ಜನವರಿ 2ರಂದು ವಜಾಗೊಳಿಸಿ ಆದೇಶಿಸಿದ್ದ ಸುಪ್ರೀಂ ಕೋರ್ಟ್, ವಿಶ್ವದ ಅತಿದೊಡ್ಡ ಕ್ರಿಕೆಟ್ ಸಂಸ್ಥೆಯ ಆಡಳಿತಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚಿಸಿತ್ತು. ಭಾರತ ತಂಡದ ಮಾಧ್ಯಮ ವ್ಯವಸ್ಥಾಪಕ ನಿಶಾಂತ್ ಅರೋರ ಕೂಡ ವಜಾಗೊಂಡಿರುವವರಲ್ಲಿ ಒಬ್ಬರಾಗಿದ್ದು, ಡ್ರೆಸಿಂಗ್ ರೂಂನಲ್ಲಿ ನಡೆದಿರುವ ಎಲ್ಲಾ ಮಾಹಿತಿ ಹಾಗೂ ಕೆಲ ದಾಖಲೆಗಳನ್ನು ಠಾಕೂರ್ಗೆ ತಲುಪಿಸುತ್ತಿದ್ದರು ಎನ್ನುವ ಆರೋಪ ಅವರ ಮೇಲಿದೆ. ‘ಆಟಗಾರರ ನಡುವಿನ ಸಂಬಂಧ ಹಳಸುವಂತೆ ಮಾಡುತ್ತಿದ್ದ ಅರೋರ, ಆಟಗಾರರ ನಡುವಿನ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ತಂಡದಿಂದ ಆಚೆ ಹಂಚಿಕೊಳ್ಳುತ್ತಿದ್ದರು. ಮಾಧ್ಯಮ ವ್ಯವಸ್ಥಾಪಕರಾಗಿ ಮಾಡಬೇಕಿದ್ದ ಜವಾಬ್ದಾರಿ ಬಿಟ್ಟು, ಇಂಥ ಕೆಲಸಗಳನ್ನು ಮಾಡುತ್ತಿದ್ದರು ಎಂದು ಕೆಲ ಹಿರಿಯ ಆಟಗಾರರು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಹಠಾತ್ತಾಗಿ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಯಿತು. ಅಚ್ಚರಿ ಏನೆಂದರೆ ಅರೋರ ಅವರೇ ಅನುರಾಗ್ ಠಾಕೂರ್ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ವಹಿಸುತ್ತಿದ್ದರು ಎಂದೂ ಹೇಳಲಾಯಿತು. ಒಟ್ಟಾರೆ ಸುಪ್ರೀಂಕೋರ್ಟ್ ನಿಯೋಜಿತ ಸಮಿತಿ ಈಗ ಬಿಸಿಸಿಐಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತು.
2017: ನವದೆಹಲಿ: ಸೈನಿಕರಿಗೆ ಸರ್ಕಾರ ನೀಡುತ್ತಿರುವ ಆಹಾರದ ಬಗ್ಗೆ ಸೈನಿಕರು ದೂರಿದ್ದನ್ನುಸೇನಾದಂಗೆ’ (ಮ್ಯುಟಿನಿ) ಎಂದು ಲೇವಡಿ ಮಾಡಿದ್ದ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಗಗನ್ದೀಪ್ ಭಕ್ಷಿ ವಿರುದ್ಧ ಸೈನಿಕರೊಬ್ಬರು ಟೀಕಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಯಿತು.  ಭಕ್ಷಿಯನ್ನು ನೇರವಾಗಿಕಪ್ಪು ಬ್ರಿಟೀಷರುಎಂದು ಟೀಕಿಸಿರುವ ಈ ಸೈನಿಕ, ಕಾರಣಕ್ಕಾಗಿಯೇ ಸೈನಿಕರು ಮತ್ತು ನಿಮ್ಮ ನಡುವಿನ ಸಂಬಂಧ ಇನ್ನೂ ಬೆಸೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಪ್ರತಿಪಾದಿಸಿದರು. ಕೆಲ ವಾರಗಳ ಹಿಂದಷ್ಟೇ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ತಮಗೆ ನೀಡಲಾಗುತ್ತಿರುವ ಆಹಾರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೆಟ್ಟಿರುವ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಸೈನಿಕನ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ನಿವೃತ್ತ ಸೇನಾಧಿಕಾರಿ ಭಕ್ಷಿ ಅವರು ಸೈನಿಕನ ಹೇಳಿಕೆ ಉದ್ದೇಶಿಸಿ ಇಸು ಸೇನಾದಂಗೆ ಎಂದು ಲೇವಡಿ ಮಾಡಿದ್ದರು. ಈಗ ಇದಕ್ಕೆ ಇನ್ನೊಬ್ಬ ಸೈನಿಕ ವಿಡಿಯೋ ಮೂಲಕ ಕಟುವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸೇನೆಯಲ್ಲಿ ಭ್ರಷ್ಟಾಚಾರ ಇದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಪ್ರತಿಭಟಿಸಿದ್ದಕ್ಕಾಗಿ ದಂಗೆ ಎನ್ನುವ ಪದ ಬಳಕೆ ಮಾಡಿರುವುದು ಸರಿಯಲ್ಲ ಎನ್ನುವುದು ಸೈನಿಕರ ಆಕ್ಷೇಪ.. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಜೋರಾಗಿ ಹರಿದಾಡಿತು..
2017: ನವದೆಹಲಿ: ಒಂದು ವರ್ಷದ ಒಳಗಾಗಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರನನ್ನು ಆಧಾರ್ ನಂಬರ್ ಜೊತೆಗೆ ನೋಂದಾಯಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಪೂರ್ವ ಪಾವತಿ (ಪ್ರಿ ಪೇಯ್ಡ್ ಸಂಪರ್ಕಗಳು ಸೇರಿದಂತೆ ಪ್ರತಿಯೊಬ್ಬ ಬಳಕೆದಾರನ ಮೊಬೈಲ್ ವಿವರಗಳನ್ನು ದಾಖಲಿಸಲು ಕೇಂದ್ರಕ್ಕೆ ಒಂದು ವರ್ಷದ ಗಡುವನ್ನು ಸುಪ್ರಿಂಕೋರ್ಟ್ ನೀಡಿತು. ದೇಶದಲ್ಲಿ ಸುಮಾರು 100 ಕೋಟಿಗೂ ಹೆಚ್ಚಿನ ಮೊಬೈಲ್ ಬಳಕೆದಾರರಿದ್ದಾರೆ. ಎಲ್ಲ ಮೊಬೈಲ್ ಗ್ರಾಹಕರ ಆಧಾರ್ ನಂಬರ್ಗಳನ್ನು ಮೊಬೈಲ್ ನಂಬರ್ಗಳ ಜೊತೆಗೆ ಒಂದು ವರ್ಷದ ಒಳಗಾಗಿ ನೋಂದಣಿ ಮಾಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಹೇಳಿತು. ಪ್ರಿಪೇಯ್ಡ್ ಮೊಬೈಲ್ ಗ್ರಾಹಕರು ರಿಚಾರ್ಜ್ ಮಾಡಿಸಿಕೊಂಡಾಗಲೆಲ್ಲ ಫಾರಂ ಒಂದನ್ನು ಭರ್ತಿ ಮಾಡಿ ಅದನ್ನು ಒಪ್ಪಿಸುವಂತಹ ವಿಧಾನವೊಂದನ್ನು ರೂಪಿಸಬೇಕು. ಸಿಮ್ ಕಾರ್ಡ್ಗಳ ದುರುಪಯೋಗವಾಗದಂತೆ ನೋಡಿಕೊಳ್ಳಲು ನೀತಿ ನಿಯಮಾವಳಿಗಳ ಕುರಿತ ನೀತಿಯನ್ನು ಒಂದು ವರ್ಷದ ಒಳಗಾಗಿ ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಆಜ್ಞಾಪಿಸಿತು. ಮೊಬೈಲ್ ಫೋನ್ಗಳನ್ನು ಬ್ಯಾಂಕಿಂಗ್ ಉದ್ದೇಶಗಳಿಗೆ ಬಳಸುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ಅತಿ ಮಹತ್ವ ಹಾಗೂ ಅಗತ್ಯವಾಗಿದೆ ಎಂದು ಕೋರ್ಟ್ ಹೇಳಿತು.
2017: ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಸಜ್ಜಾದ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್, ದಿವಂಗತ ಮುಖ್ಯಮಂತ್ರಿ ಜಯಲಲಿತಾ ಮತ್ತು ಇತರರಿಗೆ ಸಂಬಂಧಿಸಿದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಮುಂದಿನ ವಾರ ನೀಡುವ ಸಾಧ್ಯತೆ ಇದೆಯ ಸುಳಿವನ್ನು ನ್ಯಾಯಾಲಯ ಈದಿನ ನೀಡಿತು.. ಇದರೊಂದಿಗೆ ಶಶಿಕಲಾ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.  ಎಐಎಡಿಎಂಕೆ ಪಕ್ಷವು ಶಶಿಕಲಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ಯತ್ನಿಸುತ್ತಿರುವ ಹಂತದಲ್ಲೇ, ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪನ್ನು ಮುಂದಿನವಾರ ನೀಡುವ ಸುಳಿವನ್ನು ಸುಪ್ರೀಂಕೋರ್ಟ್ ಈದಿನ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ವಿಳಂಬವಾಗುತ್ತದೆ ಎಂಬುದಾಗಿ ಸೋಮವಾರ ಮೇಲ್ಮನವಿದಾರ ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್ ಪೀಠದ ಗಮನಕ್ಕೆ ತಂದಾಗ, ಪೀಠವು ಒಂದು ವಾರ ಕಾಯುವಂತೆ ಸೂಚಿಸಿತು. 2016 ಜೂನ್ 7ರಂದು ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ ಮತ್ತು ಇತರರರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಖುಲಾಸೆಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಫೆಬ್ರುವರಿ 23ರಿಂದ ನಡೆದ ಪ್ರತಿದಿನದ ವಿಚಾರಣೆಯನ್ನು ವಾದ ಪ್ರತಿವಾದಗಳ ಬಳಿಕ ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೊಷ್ ಮತ್ತು ಅಮಿತವ ರಾಯ್ ಜೂನ್ 7ರಂದು ಮುಕ್ತಾಯಗೊಳಿಸಿದ್ದರು. ಜಯಲಲಿತಾ ಅವರಲ್ಲದೆ, ಶಶಿಕಲಾ ನಟರಾಜನ್, ಜೆ. ಇಳವರಸಿ ಮತ್ತು ಸುಧಾಕರನ್ ಅವರು ಪ್ರಕರಣದಲ್ಲಿ ಸಹ ಆರೋಪಿಗಳು.

2017: ನವದೆಹಲಿ: ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ರೈಲು ಮಾರ್ಗ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಸಂಬಂಧ ಪ್ರಾಥಮಿಕ ಸಮೀಕ್ಷೆಯನ್ನು ರೈಲ್ವೆ ಸಚಿವಾಲಯ ಪೂರ್ಣಗೊಳಿಸಿದೆ ಎಂದು ಮೂಲಗಳು ತಿಳಿಸಿದವು. ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ನಿಂದ ಉತ್ತರ ತುದಿಯಲ್ಲಿರುವ ದೊಡ್ಡ ನಗರ ದಿಗ್ಲಿಪುರಕ್ಕೆ 240 ಕಿ.ಮೀ. ದೂರದ ಬ್ರಾಡ್ ಗೇಜ್ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದ್ದು, ರೈಲ್ವೆ ಸಚಿವಾಲಯ ಅಂತಿಮ ಒಪ್ಪಿಗೆ ನೀಡುವುದೊಂದೇ ಬಾಕಿ ಇದೆ. ಯೋಜನೆಗೆ ಅಂದಾಜು 2,413.68 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಎಂದು ಸಚಿವಾಲಯದ ಮೂಲಗಳು ತಿಳಿಸಿದವು. ಅಂಡಮಾನ್ನಲ್ಲಿ ರೈಲ್ವೆ ಮಾರ್ಗ ನಿರ್ಮಿಸುವುದರಿಂದ ರಕ್ಷಣಾ ತಂತ್ರಗಾರಿಕೆಗೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಪ್ರಸ್ತುತ ಅಂಡಮಾನ್ ದ್ವೀಪಕ್ಕೆ ವಾರ್ಷಿಕ 4.5 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ರೈಲ್ವೆ ಮಾರ್ಗ ನಿರ್ಮಾಣದ ನಂತರ ಪ್ರವಾಸಿಗರ ಪ್ರಮಾಣ ವಾರ್ಷಿಕ 6 ಲಕ್ಷಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವಾಲಯ ತನ್ನ ವರದಿಯಲ್ಲಿ ನಮೂದಿಸಿತು. ಪ್ರಸ್ತುತ ಪೋರ್ಟ್ಬ್ಲೇರ್ನಿಂದ ದಿಗ್ಲಿಪುರಕ್ಕೆ ಬಸ್ನಲ್ಲಿ ಸಾಗಲು 14 ತಾಸು ಬೇಕಾಗುತ್ತದೆ, ಹಡಗಿನಲ್ಲಿ 24 ಗಂಟೆ ಅವಧಿ ಬೇಕಾಗುತ್ತದೆ. ರೈಲ್ವೆ ಮಾರ್ಗ ನಿರ್ಮಾಣದಿಂದ ಪ್ರಯಾಣದ ಅವಧಿಯಲ್ಲಿ ಗಣನೀಯ ಇಳಿಕೆ ಕಂಡು ಬರಲಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಅಂಡಮಾನ್ ಆಡಳಿತ ಸಹ ಯೋಜನೆಗೆ ತನ್ನ ಸಹಮತವನ್ನು ವ್ಯಕ್ತಪಡಿಸಿತು. 2014ರಲ್ಲಿ ಮೊದಲ ಬಾರಿಗೆ ಅಂಡಮಾನ್ನಲ್ಲಿ ರೈಲು ಮಾರ್ಗ ನಿರ್ಮಿಸುವ ಕುರಿತು ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗಿತ್ತು. ಕಾರಣಾಂತರಗಳಿಂದ ಸಮೀಕ್ಷೆ ಸ್ಥಗಿತಗೊಂಡಿತ್ತು. 2016ರಲ್ಲಿ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿತ್ತು.

2015: ನವದೆಹಲಿ: 25 ವರ್ಷದ ಯುವಕ ನಿತೀಶ್ ಕಟಾರ ಅವರನ್ನು ಜೀವಂತ ದಹಿಸಿ ಕೊಂದ ಅಪರಾಧಕ್ಕಾಗಿ ವಿಕಾಸ ಯಾದವ್ ಮತ್ತು ಸಹೋದರ ಸಂಬಂಧಿ ವಿಶಾಲ್ ಅವರಿಗೆ ದೆಹಲಿ ಹೈಕೋರ್ಟ್ ಈದಿನ 25 ವರ್ಷಗಳ ಕಠಿಣ ಸಜೆ ವಿಧಿಸಿತು. ಮೂರನೇ ಅಪರಾಧಿ ಸುಖದೇವ್ ಪಹೆಲ್ವಾನ್​ಗೆ 20 ವರ್ಷಗಳ ಸೆರೆವಾಸವನ್ನು ನ್ಯಾಯಾಲಯ ವಿಧಿಸಿತು.  ಪ್ರಕರಣದ ಸಾಕ್ಷ್ಯಾಧಾರ ನಾಶ ಮಾಡಿದ್ದಕ್ಕಾಗಿ ಈ ಶಿಕ್ಷೆಯ ಜೊತೆಗೆ ಇನ್ನೂ ಐದು ವರ್ಷಗಳ ಹೆಚ್ಚುವರಿ ಸೆರೆವಾಸವನ್ನೂ ನ್ಯಾಯಾಲಯ ಮೂರೂ ಮಂದಿ ಅಪರಾಧಿಗಳಿಗೆ ವಿಧಿಸಿತು. ದೆಹಲಿಯ ಯುವ ಎಕ್ಸಿಕ್ಯೂಟಿವ್ ನಿತೀಶ್ ಕಟಾರ ಅವರನ್ನು ಕೊಂದ ಅಪರಾಧಕ್ಕಾಗಿ ಸಹೋದರ ಸಂಬಂಧಿಗಳನ್ನು ಗಲ್ಲಿಗೆ ಏರಿಸಬಾರದು, ಬದಲಿಗೆ ಇಬ್ಬರಿಗೂ ತಲಾ 25 ವರ್ಷಗಳ ಕಠಿಣ ಸೆರೆವಾಸವನ್ನು ಅವರು ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿತು. ರಾಜಕಾರಣಿ ಡಿ.ಪಿ. ಯಾದವ್ ಅವರ ಪುತ್ರಿ ಭಾರತಿ ಯಾದವ್ ಜೊತೆಗೆ ಸ್ನೇಹ ಬೆಳೆಸಿ, ಆಕೆಯೊಂದಿಗೆ ಓಡಾಡಿದ್ದಕ್ಕೆ ಶಿಕ್ಷೆಯಾಗಿ ದೆಹಲಿ ಸಮೀಪದ ಗಾಜಿಯಾಬಾದಿನಲ್ಲಿ 25ರ ಹರೆಯದ ನಿತೀಶ್ ಕಟಾರ ಅವನ್ನು ಸಜೀವವಾಗಿ ಸುಟ್ಟು ಕೊಲೆ ಮಾಡಲಾಗಿತ್ತು. 2002ರಲ್ಲಿ ಕಟಾರ ಅವರು ಭಾರತಿ ಯಾದವ್ ಜೊತೆಗೆ ಗೆಳೆಯನ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದಾಗ, ಕಟಾರ ಅವರಬ್ಬಯ ವಿಕಾಸ್ ಮತ್ತು ವಿಶಾಲ್ ಅಪಹರಿಸಿದ್ದರು. ಬಳಿಕ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಟಾ ಅವರ ದೇಹ ಪತ್ತೆಯಾಗಿತ್ತು. ಡಿಎನ್​ಎ ಪರೀಕ್ಷೆ ಮೂಲಕ ಮೃತ ಶವ ಕಟಾರ ಅವರದ್ದು ಎಂದು ದೃಢಪಡಿಸಿಕೊಳ್ಳಲಾಗಿತ್ತು. ವಿಚಾರಣೆ ಕಾಲದಲ್ಲಿ ಭಾರತಿ ಯಾದವ್ ಅವರು ತಾನು ಕಟಾರ ಜೊತೆಗೆ ರೊಮ್ಯಾಂಟಿಕ್ ಆಗಿ ಇರಲಿಲ್ಲ. ಬಿಸಿನೆಸ್ ಸ್ಕೂಲ್​ನಲ್ಲಿ ಭೇಟಿ ಆಗಿ, ಬಳಿಕ ಕಟಾರ ಅವರ ತಾಯಿ ಮತ್ತು ಸಹೋದರಿಗೆ ಹೋರಾಟವೊಂದರಲ್ಲಿ ನೆರವಾಗಿದ್ದೆ ಅಷ್ಟೆ ಎಂದು ತಿಳಿಸಿದ್ದರು. 2008ರಲ್ಲಿ ವಿಕಾಸ್ ಮತ್ತು ವಿಶಾಲ್ ಯಾದವ್ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ದೆಹಲಿ ಪೊಲೀಸರು ಬಳಿಕ ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಮನವಿ ಮಾಡಿ, ಹೈಕೋರ್ಟ್ ಮೆಟ್ಟಿಲೇರಿದ್ದರು
2009: ಪಣಜಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿ ಎಲ್) ಆಟಗಾರರ ಹರಾಜಿನಲ್ಲಿ ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಹಾಗೂ ಆಂಡ್ರ್ಯೂ ಫ್ಲಿಂಟಾಫ್ ಅವರು ಹಿಂದಿನ ದಾಖಲೆಯನ್ನೆಲ್ಲ ಮುರಿದು ಭಾರಿ ಮೊತ್ತಕ್ಕೆ ಮಾರಾಟವಾದರು. ಬ್ಯಾಟ್ಸ್‌ಮನ್ ಕೆವಿನ್ ಹಾಗೂ ಆಲ್‌ರೌಂಡರ್ ಫ್ಲಿಂಟಾಫ್ ಅವರನ್ನು ತಲಾ 1.55 ದಶಲಕ್ಷ ಡಾಲರ್ ಅಂದರೆ 7 ಕೋಟಿ 35 ಲಕ್ಷ ರೂಪಾಯಿಗೆ ಕ್ರಮವಾಗಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಡೆಯರು ಖರೀದಿ ಮಾಡಿದರು. ಮೊದಲ ಐಪಿಎಲ್ ಋತುವಿಗಾಗಿ 2008ರಲ್ಲಿ ನಡೆದಿದ್ದ ಹರಾಜಿನಲ್ಲಿ ಮಹೇಂದ್ರ ಸಿಂಗ್ ದೋನಿ ಅವರನ್ನು ಆರು ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಡೆದಿತ್ತು. ಅದು ದಾಖಲೆಯ ಬೆಲೆಯೂ ಆಗಿತ್ತು. ಆದರೆ ಕೆವಿನ್ ಮತ್ತು ಫ್ಲಿಂಟಾಫ್ ಆ ದಾಖಲೆಯನ್ನು ಮುರಿದರು. ಇಂಗ್ಲೆಂಡ್‌ನ ಈ ಇಬ್ಬರೂ ಆಟಗಾರರು 'ಮಹಿ'ಗಿಂತ 1 ಕೋಟಿ 35 ಲಕ್ಷ ರೂ. ಹೆಚ್ಚಿಗೆ ಮೊತ್ತಕ್ಕೆ ಮಾರಾಟವಾದರು.

2009: ಸತ್ಯಂ ಕಂಪ್ಯೂಟರ್ ನೂತನ ಅಧ್ಯಕ್ಷರಾಗಿ ಕಂಪೆನಿಯ ಹಾಲಿ ನಿರ್ದೇಶಕ ಕಿರಣ್ ಕಾರ್ಣಿಕ್ ನೇಮಕಗೊಂಡರು. ಕಾರ್ಣಿಕ್ ಈ ಮೊದಲು ನ್ಯಾಸ್ಕಾಂ ಅಧ್ಯಕ್ಷರಾಗಿದ್ದರು.

2009: ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಈದಿನ ತಮ್ಮ ನಿವಾಸದಿಂದಲೇ ಕಚೇರಿಯ ಕೆಲಸ ಆರಂಭಿಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಕೆಲವು ಅಧಿಕಾರಿಗಳೊಂದಿಗೆ ಪ್ರಧಾನಿ ಬೆಳಗ್ಗೆ ಚರ್ಚೆ ನಡೆಸಿದರು.

2008: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲ ಅವರ ಹೆಸರನ್ನು ಆಯ್ಕೆ ಮಾಡಲಾಯಿತು. `ಶಿಕಾರಿ', `ಮೂರು ದಾರಿಗಳು', `ಕಥೆಯಾದಳು ಹುಡುಗಿ' ಸೇರಿದಂತೆ ಒಟ್ಟು ಆರು ಕಾದಂಬರಿಗಳು ಹಾಗೂ ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಅವರಿಗೆ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಮುಂಬೈ ನಗರವಾಸಿ ಚಿತ್ತಾಲರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಹಿರಿಯ ಸಾಹಿತಿ ಜಿ.ಎಸ್. ಆಮೂರ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಚಿತ್ತಾಲರ ಹೆಸರನ್ನು ಶಿಫಾರಸು ಮಾಡಿತು.

2008: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಉಡುಪಿ ಮೂಲದ ಸುಧಾಕರ ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು. ಇದುವರೆಗೂ ಆ ಹುದ್ದೆಯಲ್ಲಿದ್ದ ಪಿ.ಬಿ.ಮಹಿಷಿ ಅವರನ್ನು ಸ್ಥಾನ ಪಲ್ಲಟ ಮಾಡಿ, ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

2008: ಹೊನ್ನಾಳಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರ ಪೈಕಿ ರಿಯಾಜ್ದುದೀನ್ ಅಲಿಯಾಸ್ ಮೊಹಮ್ಮದ್ ಗೌಸನನ್ನು ಬೆಂಗಳೂರಿನ ಮಡಿವಾಳದಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಯಿತು. ಜನವರಿ ತಿಂಗಳ ಅಂತ್ಯದ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ಸೇರಿದಂತೆ ಎರಡು ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಅಂತಿಮ ಸಿದ್ಧತೆ ನಡೆಸಿದ್ದ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ರಿಯಾಜುದ್ದೀನ್ ಒಪ್ಪಿಕೊಂಡ.

2008: ಪಾಶ್ಚಾತ್ಯ ದೇಶಗಳಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದ ಆಧ್ಯಾತ್ಮಿಕ ಗುರು ಮಹರ್ಷಿ ಮಹೇಶ ಯೋಗಿ (91) ಅವರು ಹಾಲೆಂಡಿನ ಲೊಡ್ರೊಪ್ ಪಟ್ಟಣದಲ್ಲಿ ನಿಧನರಾದರು. ಮೂಲತಃ ಮಧ್ಯಪ್ರದೇಶದವರಾದ ಮಹೇಶ ಪ್ರಸಾದ್ ವರ್ಮಾ ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದು ನಂತರ ಆಧ್ಯಾತ್ಮಿಕ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡವರು. 1959ರಷ್ಟು ಹಿಂದೆಯೇ ಇವರು ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಧ್ಯಾನದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದರು. ಚಲನಚಿತ್ರ ರಂಗದ ಕ್ಲಿಂಟ್ ಈಸ್ಟ್ ವುಡ್ ಸೇರಿದಂತೆ ಜಗತ್ತಿನ ಅನೇಕ ಗಣ್ಯರು ಇವರ ಶಿಷ್ಯವರ್ಗಕ್ಕೆ ಸೇರಿದವರು. `ಕತ್ತಲೆಯ ವಿರುದ್ಧ ಹೋರಾಡಬೇಕೆಂದೇನಿಲ್ಲ. ಆದರೆ ಬೆಳಕನ್ನು ತನ್ನಿ. ತನ್ನಷ್ಟಕ್ಕೆ ತಾನೇ ಕತ್ತಲು ಸರಿಯುತ್ತದೆ' ಎಂದೂ ಅವರು ಹೇಳುತ್ತಿದ್ದರು.

2008: ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖಂಡ ರಾಜ್ ಠಾಕ್ರೆ ನಿಲುವಿಗೆ ಬೇಸತ್ತ ಸುಮಾರು 200 ಕಾರ್ಯಕರ್ತರು ಮುಂಬೈಯಲ್ಲಿ ಎಂ ಎನ್ ಎಸ್ ತೊರೆದು ಶಿವಸೇನೆಗೆ ಸೇರ್ಪಡೆಯಾದರು. ಬಾಳಾ ಠಾಕ್ರೆಯವರ ನಿವಾಸ `ಮಾತೋಶ್ರಿ'ಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭ ಒಂದರಲ್ಲಿ ಈ ಕಾರ್ಯಕರ್ತರು ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಶಿವಸೇನೆ ಸೇರಿದರು.

2008: ಪಶ್ಚಿಮಬಂಗಾಳದ ದಿನ್ಹಾಟದಲ್ಲಿ ನಡೆದ ಪೊಲೀಸ್ ಗೋಲಿಬಾರ್ ಖಂಡಿಸಿ ರಾಜ್ಯದ ಆಡಳಿತಾರೂಢ ಎಡರಂಗದ ಅಂಗಪಕ್ಷವಾದ ಫಾರ್ವರ್ಡ್ ಬ್ಲಾಕ್ ಪಕ್ಷವು ನೀಡಿದ 24 ಗಂಟೆಗಳ `ಬಾಂಗ್ಲಾ ಬಂದ್' ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ, ಹಲವೆಡೆ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.

2008: ಲೋಕಸಭೆಯಲ್ಲಿ ಮೊತ್ತಮೊದಲ ಬಾರಿಗೆ ಕನ್ನಡದ ಕಹಳೆಯನ್ನು ಮೊಳಗಿಸಿ, ಆ ಮೂಲಕ ಸಂಸತ್ ಕಲಾಪದಲ್ಲಿ ಭಾಷಾಂತರ ವ್ಯವಸ್ಥೆಯ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಅಪರೂಪದ ರಾಜಕೀಯ ಮುತ್ಸದ್ಧಿ ದಿವಂಗತ ಜೆ.ಎಚ್. ಪಟೇಲ್ ಅವರ ಕಂಚಿನ ಪ್ರತಿಮೆಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ಆವರಣದಲ್ಲಿ ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವ ಎಂ.ವಿ. ರಾಜಶೇಖರನ್ ಅನಾವರಣಗೊಳಿಸಿದರು.

2008: ವಿವಿಧ ಕಾರಣಗಳಿಗೆ ತಲೆಗೂದಲು ಉದುರಿ ಉಂಟಾಗುವ ಬೋಳು ತಲೆ ಸಮಸ್ಯೆಗೆ `ತದ್ರೂಪಿ ಕೇಶ' ತಂತ್ರಜ್ಞಾನದ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಲು ಡಾ. ಬಾತ್ರಾಸ್ ಕ್ಲಿನಿಕ್, ಜರ್ಮನಿಯ ಕೇಶ ಸಂಶೋಧನಾ ಸಂಸ್ಥೆಯ (ಇ ಎಚ್ ಆರ್ ಎಸ್) ಜೊತೆ ಕೈಜೋಡಿಸಿದೆ ಎಂದು ಕೇಶ ತಜ್ಞ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಲ್ಫ್ ಹಾಫ್ಮನ್ ಪ್ರಕಟಿಸಿದರು. ವಿಶ್ವದಾದ್ಯಂತ ಬೋಳು ತಲೆ ಸಮಸ್ಯೆಯಿಂದ ಬಳಲುವ ಲಕ್ಷಾಂತರ ಜನರ ಸಮಸ್ಯೆಗೆ `ತದ್ರೂಪಿ ಕೇಶ'ದಿಂದ ಪರಿಹಾರ ನೀಡಲು ಸಾಧ್ಯ. ಅದರಲ್ಲೂ ಮಹಿಳೆಯರಿಗೆ ಇದು ಗಮನಾರ್ಹವಾಗಿ ನೆರವಾಗಲಿದೆ ಎಂದು ಹಾಫ್ಮನ್ ಹೇಳಿದರು. ವ್ಯಕ್ತಿಯ ನೆತ್ತಿಯ ಭಾಗದಿಂದ ಅಲ್ಪ ಪ್ರಮಾಣದಲ್ಲಿ ಕೇಶ ತೆಗೆದುಕೊಂಡು ಅದನ್ನು 2 ಗಂಟೆಗಳ ಕಾಲ ಪ್ರಯೋಗಾಲಯದಲ್ಲಿ ಇರಿಸಲಾಗುವುದು. ಅನಂತರ ಅದನ್ನು ಯೂರೋಪಿನ ಸಂಶೋಧನಾ ಕೇಂದ್ರಗಳಿಗೆ ಸಾಗಿಸಿ ಅವುಗಳ ಸಂಖ್ಯೆ ದ್ವಿಗುಣಗೊಳಿಸಲಾಗುವುದು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಎರಡು ವರ್ಷಗಳಲ್ಲಿ ತಲೆಗೂದಲು ಗಮನಾರ್ಹ ಪ್ರಮಾಣದಲ್ಲಿ ಬೆಳೆಯುತ್ತವೆ. `ತದ್ರೂಪಿ ಕೇಶ' ತಂತ್ರಜ್ಞಾನವನ್ನು ಡಾ. ಬಾತ್ರಾಸ್ ಕ್ಲಿನಿಕ್ಕುಗಳ ಮೂಲಕ ಭಾರತದಲ್ಲಿ ಜನಪ್ರಿಯಗೊಳಿಸಲಾಗುವುದು ಎಂದು ಅವರು ಹೇಳಿದರು.

2007: ಅನಾರೋಗ್ಯದಿಂದ ಬಳಲುತ್ತಿದ್ದ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಫರೀದ್ (69) ಈದಿನ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು. ವಕೀಲರಾಗಿದ್ದ ಫರೀದ್ ಅವರು 1972, 1978, 1999 ಮತ್ತು 2004 ಸೇರಿದಂತೆ ಒಟ್ಟು ನಾಲ್ಕು ಬಾರಿ ವಿಧಾನಸಭೆಯನ್ನು ಉಳ್ಳಾಲ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. 1972ರಲ್ಲಿ ಮೊದಲ ಬಾರಿಗೆ ಶಾಸನ ಸಭೆ ಪ್ರವೇಶಿದ ಸಂದರ್ಭದಲ್ಲಿ ಅವರು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಲಿಡ್ಕರ್ ಅಧ್ಯಕ್ಷರಾಗಿ, ರಾಜ್ಯ ಎಂಜಿನಿಯರ್ಸ್ ಆಯ್ಕೆ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2007: ಬೊಫೋರ್ಸ್ ಲಂಚ ಹಗರಣದ ಪ್ರಮುಖ ಆರೋಪಿ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಅಜೆಂಟೀನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

2007: ಅಯೋಡಿನ್ ರಹಿತ ಉಪ್ಪಿನ ಉತ್ಪಾದನೆ, ಮಾರಾಟ ಹಾಗೂ ನೇರ ಬಳಕೆಯ ಮೇಲೆ ವ್ಯಾಪಕ ನಿಷೇಧ ಹೇರಿ ಸರ್ಕಾರ 7 ನವೆಂಬರ್ 2005ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತು. ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಪೌಷ್ಟಿಕಾಂಶ ಅಭಿವೃದ್ಧಿ ಅಕಾಡೆಮಿ ಮತ್ತು ಇತರ ಸ್ವಯಂ ಸೇವಾಸಂಘಗಳ ವಕೀಲರು ಮಂಡಿಸಿದ ವಾದವನ್ನು ಅಲಿಸಿದ ನ್ಯಾಯಮೂರ್ತಿ ಬಿ.ಎನ್. ಅಗರ್ ವಾಲ, ಪಿ.ಪಿ. ನಾವ್ಲೇಕರ್ ಮತ್ತು ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ಈ ಕ್ರಮ ಕೈಗೊಂಡಿತು. ಅಯೋಡಿನ್ ಹೊಂದಿರುವ ಉಪ್ಪಿನ ಬಳಕೆಯನ್ನು ಕಡ್ಡಾಯ ಮಾಡುವ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಅಮೆರಿಕ, ಸ್ವಿಟ್ಜರ್ ಲ್ಯಾಂಡ್, ಇಂಗ್ಲೆಂಡ್, ಜಪಾನ್ ಮತ್ತು ಇಟಲಿ ರಾಷ್ಟ್ರಗಳಲ್ಲಿಯೂ ಈ ಮೊದಲು ಅಯೋಡಿನ್ ಹೊಂದಿದ ಉಪ್ಪನ್ನೇ ಬಳಸಬೇಕೆಂದು ಆದೇಶ ಹೊರಡಿಸಿದ್ದವು. ಆದರೆ, ಈ ಉಪ್ಪಿನ ಬಳಕೆಯಿಂದ ಗಂಟಲಿಗೆ ಸಂಬಂಧಿಸಿದ ರೋಗ, ಅತಿಸಾರ, ಕಾಲರಾ ಹಾಗೂ ಕರುಳುಬೇನೆ ರೋಗಗಳಿಗೆ ಹೆಚ್ಚು ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳಲ್ಲಿ ಆದೇಶವನ್ನು ರದ್ದುಪಡಿಸಿದವು ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು.

2007: ಭಾರತದ ಜವಳಿ ಉದ್ಯಮಗಳಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸುವಂತೆ ಪ್ರೋತ್ಸಾಹಿಸಿದ ದಿ ಇಂಡಿಯಾ - ಕೆನಡಾ ಎನ್ವಿರಾನ್ಮೆಂಟ್ ಫೆಸಿಲಿಟಿ (ಐಸಿಇಎಫ್) ಸಂಸ್ಥೆಗೆ ಪ್ರತಿಷ್ಠಿತ ವಿಶ್ವಸಂಸ್ಥೆಯ `ಸೀಡ್' ಪ್ರಶಸ್ತಿ ಲಭಿಸಿತು.

2006: ವಿಶ್ವ ವಿಖ್ಯಾತ ಬಾಹುಬಲಿಯ ಕ್ಷೇತ್ರವಾದ ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ರೈಲು ಸಂಚಾರದ ಕನಸು ನನಸಾಯಿತು. ಸಹಸ್ರಮಾನದ ಮೊದಲ ಮಹಾಮಸ್ತಕಾಭಿಷೇಕದ ಮುನ್ನಾದಿನ ಕೇಂದ್ರ ರೈಲ್ವೆ ಸಚಿವ ಆರ್. ವೇಲು ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುವ ಮೂಲಕ ಈ ಹೊಸ ರೈಲು ಸೇವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

2006: ಕಂಪ್ಯೂಟರ್ ಬಳಸುವ ಕೋಟ್ಯಂತರ ಜನರನ್ನು ಕಾಡುತ್ತಿರುವ ಕಾಮಸೂತ್ರ ಹೆಸರಿನ ವೈರಸ್ ತಡೆಗಟ್ಟುವ ರುದ್ರ ಹೆಸರಿನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ತಮಿಳುನಾಡಿನ ಚೆನ್ನೈ ಮೂಲದ ಸನ್ರಾಸಾಫ್ಟ್ ಕಂಪೆನಿ ಪ್ರಕಟಿಸಿತು.

2006: ಭಾರತೀಯ ಹಾಕಿ ತಂಡದ ನಾಯಕ ದಿಲೀಪ್ ಟರ್ಕೆ ಹಮೀರಪುರದ ಕ್ಯಾಥೋಲಿಕ್ ಚರ್ಚ್ ಒಂದರಲ್ಲಿ ಮೀರಾ ಎಂಬ ಯುವತಿಯನ್ನು ಮದುವೆಯಾದರು.

2006: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲಾ ತೆಲಗಿ ಪುಣೆಯ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ರಹಸ್ಯವಾಗಿ 1995ರ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ.

2006: ಏಷ್ಯದ ಅತ್ಯಂತ ಹಳೆಯ ಷೇರು ವಿನಿಮಯ ಕೇಂದ್ರವಾದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 10,000ದ ಗಡಿ ದಾಟಿತು.

1993: ಕರಿಯ ಅಮೆರಿಕನ್ ಟೆನಿಸ್ ಆಟಗಾರ ಆರ್ಥರ್ ಆಷ್ ಸರ್ಜರಿ ಕಾಲದಲ್ಲಿ ರಕ್ತದ ಮೂಲಕ ತಗುಲಿದ ಏಡ್ಸ್ ಗೆ ಬಲಿಯಾಗಿ ಅಸು ನೀಗಿದರು.

1964: ಸ್ವಾತಂತ್ರ್ಯಯೋಧೆ ರಾಜಕುಮಾರಿ ಅಮೃತಾ ಕೌರ್ ತಮ್ಮ 75ನೇ ವಯಸ್ಸಿನಲ್ಲಿ ಮೃತರಾದರು. ಇವರು ಕೇಂದ್ರ ಸಂಪುಟವನ್ನು ಸೇರಿದ ಮೊದಲ ಮಹಿಳೆ.

1958: ಬೆಲ್ ಗ್ರೇಡ್ನಿಂದ ತಾಯ್ನಾಡಿಗೆ ಹೊರಟಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ 8 ಜನ ಆಟಗಾರರು ಮ್ಯೂನಿಚ್ ವಿಮಾನನಿಲ್ದಾಣದ ಬಳಿ ವಿಮಾನ ಅಪಘಾತದಲ್ಲಿ ಮೃತರಾದರು. ಮೂವರು ಕ್ಲಬ್ ಅಧಿಕಾರಿಗಳು, 8 ಮಂದಿ ಕ್ರೀಡಾ ಪತ್ರಕರ್ತರೂ ಮೃತರಾದರು. ಅಪಘಾತದಲ್ಲಿ ಬದುಕಿ ಉಳಿದ ಬಾಬ್ಬಿ ಚಾರ್ಲ್ಟನ್ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಅತ್ಯಂತ ಹೆಚ್ಚು ಗೋಲುಗಳನ್ನು ತಂದುಕೊಟ್ಟ ಇಂಗ್ಲೆಂಡಿನ ಖ್ಯಾತ ಆಟಗಾರರಾದರು.

1952: ದೊರೆ 6ನೇ ಜಾರ್ಜ್ ನಿಧನರಾದರು. ಅವರ ಪುತ್ರಿ 2ನೇ ಎಲಿಜಬೆತ್ ಅವರ ಉತ್ತರಾಧಿಕಾರಿಯಾದರು.

1951: ರಂಗಭೂಮಿಯ ಪ್ರಯೋಗಶೀಲ ನಾಟಕಗಳಿಗೆ ಹೊಸ ಆಯಾಮ ನೀಡಿದ ಅಶೋಕ ಬಾದರದಿನ್ನಿ ಅವರು ರುದ್ರಗೌಡ ಬಾದರದಿನ್ನಿ- ಗೌರಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಅಚನೂರಿನಲ್ಲಿ ಜನಿಸಿದರು.

1950: ಕಲಾವಿದ ಕೃಷ್ಣಮೂರ್ತಿ ಎಸ್. ಜನನ.

1923: ಹ.ವೇ. ಲಕ್ಷ್ಮೀನಾರಾಯಣ ಜನನ.

1912: ಹಿಟ್ಲರನ ಪತ್ನಿ ಇವಾ ಬ್ರೌನ್ (1912-45) ಹುಟ್ಟಿದ ದಿನ.

1911: ರೊನಾಲ್ಡ್ ಡಬ್ಲ್ಯೂ ರೇಗನ್ ಹುಟ್ಟಿದ ದಿನ. ನಟನಾದ ಇವರು 1981-89ರ ಅವಧಿಯಲ್ಲಿ ಅಮೆರಿಕಾದ 40ನೇ ಅಧ್ಯಕ್ಷರಾದರು.

1879: ಎಡ್ವಿನ್ ಸ್ಯಾಮ್ಯುಯೆಲ್ ಮಾಂಟೆಗು (1879-1924) ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಈತ 1919ರಲ್ಲಿ `ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್ಟ್' ಜಾರಿಗೆ ನೆರವು ನೀಡಿದ ವ್ಯಕ್ತಿ.

1756: ಅಮೆರಿಕಾದ ಮೂರನೇ ಉಪಾಧ್ಯಕ್ಷ ಅರೋನ್ ಬರ್ (156-1836) ಹುಟ್ಟಿದ ದಿನ. ಈತ ತನ್ನ ರಾಜಕೀಯ ಪ್ರತಿಸ್ಪರ್ಧಿ ಅಲೆಗ್ಸಾಂಡರ್ ಹ್ಯಾಮಿಲ್ಟನನ್ನು ಚಕಮಕಿಯಲ್ಲಿ ಕೊಂದುಹಾಕಿ ತನ್ನ ರಾಜಕೀಯ ಜೀವನವನ್ನು ಹಾಳು ಮಾಡಿಕೊಂಡ. 1807ರಲ್ಲಿ ಈತನನ್ನು ರಾಜದ್ರೋಹದ ಆಪಾದನೆಯಲ್ಲಿ ಬಂಧಿಸಲಾಯಿತು.

1685: `ಮೆರ್ರಿ ಮೊನಾರ್ಕ್' ಎಂದೇ ಖ್ಯಾತರಾಗಿದ್ದ ಎರಡನೇ ಚಾರ್ಲ್ಸ್ ತನ್ನ 54ನೇ ವಯಸ್ಸಿನಲ್ಲಿ ಮೃತನಾದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment