ನಾನು ಮೆಚ್ಚಿದ ವಾಟ್ಸಪ್

Wednesday, February 20, 2019

ಇಂದಿನ ಇತಿಹಾಸ History Today ಫೆಬ್ರುವರಿ 20

ಇಂದಿನ ಇತಿಹಾಸ History Today ಫೆಬ್ರುವರಿ 20
2019: ನವದೆಹಲಿ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರು ಸ್ವೀಡಿಶ್ ಟೆಲಿಕಾಂ ಉಪಕರಣ ತಯಾರಕ ಕಂಪೆನಿ ಎರಿಕ್ಸನ್ ದಾಖಲಿಸಿದ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಪ್ರಕರಣದಲ್ಲಿ ಆರ್ ಕಾಮ್, ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಲಿಮಿಟೆಡ್ ಮೂರು ಕಂಪೆನಿಗಳಿಗೆ ಕೋರ್ಟ್ ಒಂದು ಕೋಟಿ ರೂಪಾಯಿ ದಂಡ ವಿಧಿಸಿತು. ೪೫೩ ಕೋಟಿ ರೂಪಾಯಿಗಳ ಬಾಕಿ ಹಣವನ್ನು ನಾಲ್ಕು ವಾರಗಳ ಒಳಗಾಗಿ ಪಾವತಿ ಮಾಡಬೇಕು ಎಂಬುದಾಗಿ ಅನಿಲ್ ಅಂಬಾನಿ ಅವರಿಗೆ ನಿರ್ದೇಶಿಸಿದ ಸುಪ್ರೀಂಕೋರ್ಟ್, ವಿಫಲರಾದಲ್ಲಿ ನಿಮಗೆ ಮೂರು ತಿಂಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗವುದು ಎಂದು  ತನ್ನ ತೀರ್ಪಿನಲ್ಲಿ ಹೇಳಿತು. ರಿಲಯನ್ಸ್ ಕಮ್ಯೂನಿಕೇಷನ್ಸ್ ನ್ಯಾಯಾಲಯವು ಹಿಂದೆ ನೀಡಿದ್ದ ಆದೇಶದ ಪ್ರಕಾರ ಹಣ ಪಾವತಿ ಮಾಡಿಲ್ಲ ಎಂದು ಎರಿಕ್ಸನ್ ಕಂಪೆನಿಯು sಸುಪ್ರೀಂಕೋರ್ಟಿಗೆ ದೂರು ನೀಡಿತ್ತು. ಎರಿಕ್ಸನ್ ಕಂಪೆನಿಗೆ ಪಾವತಿ ಮಾಡಬೇಕಾದ ಬಾಕಿಯ ಪೈಕಿ ೧೧೮ ಕೋಟಿ ರೂಪಾಯಿಗಳನ್ನು ಈಗಾಗಲೇ ಕೋರ್ಟ್ ರಿಜಿಸ್ಟ್ರಿಗೆ ಪಾವತಿ ಮಾಡಲಾಗಿದೆ. ಹಣವನ್ನು ತತ್ ಕ್ಷಣ ಬಿಡುಗಡೆ ಮಾಡಬೇಕು ಎಂದೂ ಕೋರ್ಟ್ ಆಜ್ಞಾಪಿಸಿತು. ಆರ್ ಕಾಮ್ ಕಂಪೆನಿಗೆ ಹಣ ಪಾವತಿ ಮಾಡುವ ಉದ್ದೇಶ ಇರಲಿಲ್ಲ ಮತ್ತುಇಚ್ಛಾಪೂರ್ವಕವಾಗಿಯೇ ಅದು ಎರಿಕ್ಸನ್ ಗೆ ನೀಡಬೇಕಾಗಿದ್ದ ಬಾಕಿಯನ್ನು ಪಾವತಿ ಮಾಡಲಿಲ್ಲ ಎಂದು ವಿಶ್ಲೇಷಿಸಿದ ಸುಪ್ರೀಂಕೋರ್ಟ್ಆರ್ ಕಾಮ್ ಸಲ್ಲಿಸಿದ್ದ ಕ್ಷಮಾಯಾಚನೆ ಪತ್ರವನ್ನೂ ತಿರಸ್ಕರಿಸಿತು. ರಿಲಯನ್ಸ್ ಸಮೂಹಕ್ಕೆ ರಫೇಲ್ ಯುದ್ಧ ವಿಮಾನ ವಹಿವಾಟಿನಲ್ಲಿ ಹೂಡಿಕೆ ಮಾಡಲು ಹಣ ಇದೆ, ಆದರೆ ಅವರು ತನಗೆ ನೀಡಬೇಕಾದ ೫೫೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲು ವಿಫಲರಾಗಿದ್ದಾರೆ ಎಂದು ಎರಿಕ್ಸನ್ ಇಂಡಿಯಾ ಕಂಪೆನಿ ದೂರಿದ ಬಳಿಕ ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್ ಮತ್ತು ವಿನೇತ್ ಸರನ್ ಅವರ ಪೀಠವು ಫೆಬ್ರುವರಿ ೧೩ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.  ಅನಿಲ್ ಅಂಬಾನಿ ನೇತೃತ್ವದ ಕಂಪೆನಿಯು ಎರಿಕ್ಸನ್ ಆಪಾದನೆಯನ್ನು ನಿರಾಕರಿಸಿತ್ತುಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಜೊತೆಗೆ ರಿಲಯನ್ಸ್ ಕಮ್ಯೂನಿಕೇಷನ್ಸ್ (ಆರ್ಕಾಮ್) ಆಸ್ತಿ ಮಾರಾಟ ವಿಫಲವಾದ ಪರಿಣಾಮವಾಗಿ ದಿವಾಳಿ ಪ್ರಕ್ರಿಯೆ ಆರಂಭವಾಗಿದೆ ಎಂದು ಅನಿಲ್ ಅಂಬಾನಿ ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಹೀಗಾಗಿ ತಾವು ಹಣದ ಮೇಲೆ ನಿಯಂತ್ರಣ ಹೊಂದಿಲ್ಲ ಎಂದು ಅವರು ವಾದಿಸಿದ್ದರು. ಕಳೆದ ವರ್ಷ ಅಕ್ಟೋಬರ್ ೨೩ರಂದು ಬಾಕಿ ಹಣವನ್ನು ಡಿಸೆಂಬರ್ ೧೫ರ ಒಳಗಾಗಿ ಪಾವತಿ ಮಾಡುವಂತೆ ಸುಪ್ರೀಂಕೋರ್ಟ್ ಆರ್ಕಾಮ್ ಕಂಪೆನಿಗೆ ಆಜ್ಞಾಪಿಸಿತ್ತು. ವಿಳಂಬವಾದಲ್ಲಿ ವಾರ್ಷಿಕ ಶೇಕಡಾ ೧೨ರಷ್ಟು ಬಡ್ಡಿಯನ್ನೂ ಪಾವತಿ ಮಾಡಬೇಕಾಗುತ್ತದೆ ಎಂದೂ ಪೀಠ ಹೇಳಿತ್ತು.  ಎರಿಕ್ಸನ್ ಕಂಪೆನಿಯು ರಿಲಯನ್ಸ್ ಇನ್ಫ್ರಾಟೆಲ್ ಲಿಮಿಟೆಡ್, ಅದರ ಅಧ್ಯಕ್ಷ ಛಾಯಾ ವಿರಾನಿ, ರಿಲಯನ್ಸ್ ಟೆಲಿಕಾಂ ಲಿಮಿಟೆಡ್, ಅದರ ಅಧ್ಯಕ್ಷ ಸತೀಶ್ ಸೇಥ್ ಮತ್ತು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಮೂರು ನ್ಯಾಯಾಲಯ ನಿಂದನೆ ಪ್ರಕರಣಗಳನ್ನು ದಾಖಲಿಸಿ ಕ್ರಮಕೈಗೊಳ್ಳುವಂತೆ ಕೋರಿತ್ತು

2019: ನವದೆಹಲಿ/ ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಶಿಪ್ಕಲಾ ವಿಭಾಗದಲ್ಲಿ  ಸಂಭವಿಸಿದ ದಿಢೀರ್ ಹಿಮಕುಸಿತದಲ್ಲಿ (ಹಿಮಪಾತ) ಭಾರತೀಯ ಸೇನೆಯ ಜೆಕೆ ರೈಫಲ್ಸ್ಗೆ ಸೇರಿದ ಒಬ್ಬ ಸೇನಾ ಯೋಧ ಸಾವನ್ನಪ್ಪಿ, ಇತರ ಐವರು ಯೋಧರು ಹಿಮರಾಶಿಯ ಅಡಿಯಲ್ಲಿ ಸಿಲುಕಿಕೊಂಡರು. ಸೇನೆಯ ಪಹರೆ ತಂಡವು ಭಾರತ- ಚೀನಾ ಗಡಿಯಲ್ಲಿನ ಎರಡು ಠಾಣೆಗಳ ಮಧ್ಯೆ ಸಂಚರಿಸುತ್ತಿದ್ದಾಗ ದಿಢೀರ್ ಹಿಮಕುಸಿತದಲ್ಲಿ ಸಿಕ್ಕಿಹಾಕಿಕೊಂಡಿತು ಎಂದು ಸೇನಾ ಮೂಲಗಳು ಹೇಳಿವೆ. ನತದೃಷ್ಟ ಯೋಧರು ೧೩೬ ಬ್ರಿಗೆಡಿನ ೧೬ ಸದಸ್ಯರ ಪಹರೆ ತಂಡಕ್ಕೆ ಸೇರಿದವರಾಗಿದ್ದರು. ಹಿಮಕುಸಿತದಲಿ ತೀವ್ರವಾಗಿ ಗಾಯಗೊಂಡ ಒಬ್ಬ ಯೋಧ ಬಳಿಕ ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯದಲ್ಲೇ ಅಸು ನೀಗಿರುವುದಾಗಿ ಕಿನ್ನೌರ್ ಉಪ ಕಮೀಷನರ್ ಗೋಪಾಲ್ ಚಾಂದ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಬೆಳಗ್ಗೆ ೧೧ ಗಂಟೆ ಸುಮಾರಿಗೆ ಹಿಮಕುಸಿತ ಸಂಭವಿಸಿತು. ಭಾರತ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಮತ್ತು ಜಿಲ್ಲಾ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ದಿಢೀರ್ ಹಿಮಕುಸಿತದಲ್ಲಿ ಭಾರತ-ಟಿಬೆಟನ್ ಗಡಿ ಪೊಲೀಸ್ಗೆ (ಐಟಿಬಿಪಿ) ಸೇರಿದ ಹಲವು ಯೋಧರೂ ಸಿಕ್ಕಿಹಾಕಿಕೊಂಡಿದ್ದರು. ಏನಿದ್ದರೂ ಅವರನ್ನು ರಕ್ಷಿಸಲಾಯಿತು ಎಂದು ಚಾಂದ್ ನುಡಿದರು.

2019: ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ೪೦ ಮಂದಿ ಯೋಧರನ್ನು ಬಲಿಪಡೆದ ಫೆಬ್ರುವರಿ ೧೪ರ ಭಯೋತ್ಪಾದಕ ದಾಳಿಯ ತನಿಖೆಯನ್ನು  ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ ಐಎ) ವಹಿಸಿಕೊಂಡಿತು. ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣವನ್ನು ಮರುನೋಂದಣಿ ಮಾಡಿಕೊಂಡಿದ್ದು, ಭಯೋತ್ಪಾದನಾ ದಾಳಿಯ ಯೋಜನೆ ಮತ್ತು ಅನುಷ್ಠಾನದ ತನಿಖೆಗಾಗಿ ತಂಡವೊಂದನ್ನು ರಚಿಸಿದೆ ಎಂದು ಎನ್ಐಎ ವಕ್ತಾರರು ನವದೆಹಲಿಯಲ್ಲಿ ತಿಳಿಸಿದರುರಾಜ್ಯ ಪೊಲೀಸರು ಅವಂತಿಪೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆಯು ದಕ್ಷಿಣ ಕಾಶ್ಮೀರದ ಲೆತ್ಪೋರದಲ್ಲಿ ನಡೆದ ಸ್ಫೋಟ ಸ್ಥಳದಿಂದ ಸ್ಫೋಟಕ ವಸ್ತುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಸುಮಾರು ಒಂದು ಡಜನ್ ಮಂದಿಯನ್ನು ಪ್ರಶ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಎನ್ಐಎ ತನಿಖಾ ತಂಡವು ಹಿರಿಯ ಪೊಲೀಸರು, ಗುಪ್ತಚರ ಮತ್ತು ಸೇನಾ ಅಧಿಕಾರಿಗಳನ್ನೂ ಭೇಟಿ ಮಾಡಿದ್ದು ಅವರ ಬಳಿಕ ಇರುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದೆ ಎಂದು ಅವರು ನುಡಿದರು. ಫೆಬ್ರುವರಿ ೧೪ರ ಪೈಶಾಚಿಕ ದಾಳಿ ನಡೆದ ಸ್ಥಳದಿಂದ ೧೨ ಕಿಮೀ ದೂರದಲ್ಲಿರುವ ಪುಲ್ವಾಮದ ಪಿಂಗ್ಲನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ೧೬ ಗಂಟೆಗಳ ಕಾರ್ಯಾಚರಣೆಯಲ್ಲಿ  ಸೋಮವಾರ ಮೂವರು ಜೈಶ್--ಮೊಹಮ್ಮದ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಮೆಜರ್ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಕೂಡಾ ಹುತಾತ್ಮರಾಗಿದ್ದರು. ಫೆಬ್ರುವರಿ ೧೪ರ ದಾಳಿಗೆ ಭಯೋತ್ಪಾದಕರೇ ಕಾರಣರಾಗಿದ್ದರು ಎಂದು ಪೊಲೀಸ್ ಮತ್ತು ಸೇನೆ ಮಂಗಳವಾರ ಪ್ರಕಟಿಸಿದ್ದವು.

2019: ನವದೆಹಲಿ: ಭಯೋತ್ಪಾದನೆಯು ಸೌದಿ ಅರೇಬಿಯಾ ಮತ್ತು ಭಾರತ ಎರಡೂ ದೇಶಗಳಿಗೆ ಸಮಾನ ಕಾಳಜಿಯ ವಿಷಯ ಎಂಬುದಾಗಿ ಇಲ್ಲಿ ಹೇಳಿದ ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಯೋತ್ಪಾದನೆ ನಿಗ್ರಹಕ್ಕೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವಿಕೆ ಸೇರಿದಂತೆ ಸರ್ವ ಸಹಕಾರವನ್ನೂ ತಮ್ಮ ರಾಷ್ಟ್ರವು ನೀಡುವುದು ಎಂದು ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವಿಸ್ತೃತ ಮತ್ತು ಯಶಸ್ವೀ ಮಾತುಕತೆಗಳ ಬಳಿಕ ಜಂಟಿ ಹೇಳಿಕೆ ನೀಡಿದ ದೊರೆ, ’ಉಗ್ರವಾದ ಮತ್ತು ಭಯೋತ್ಪಾದನೆ ನಮ್ಮ ಸಮಾನ ಕಾಳಜಿಯ ವಿಷಯಗಳು. ಗುಪ್ತಚರ ಮಾಹಿತಿ ಹಂಚಿಕೆ ಸೇರಿದಂತೆ ಭಯೋತ್ಪಾದನೆ ವಿಚಾರದಲ್ಲಿ ವ್ಯವಹರಿಸಲು ಎಲ್ಲ ರಂಗಗಳಲ್ಲೂ ನಾವು ಭಾರತ ಮತ್ತು ನೆರೆಯ ರಾಷ್ಟ್ರಗಳಿಗೆ ಸಹಕಾರ ನೀಡುತ್ತೇವೆ ಎಂಬುದಾಗಿ ನಮ್ಮ ಮಿತ್ರ ರಾಷ್ಟ್ರವಾದ ಭಾರತಕ್ಕೆ ಹೇಳಬಯಸುತ್ತೇವೆ ಎಂದು ನುಡಿದರು. ನಮ್ಮ ಮುಂಬರುವ ತಲೆಮಾರುಗಳ ಉಜ್ವಲ ಭವಿಷ್ಯದ ಖಾತರಿಗಾಗಿ ಪ್ರತಿಯೊಬ್ಬರ ಜೊತೆಗೂ ನಾವು ದುಡಿಯುತ್ತೇವೆ ಎಂದು ದೊರೆ ಹೇಳಿದರು. ಜಂಟಿ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಅವರು ಪುಲ್ವಾಮ ದಾಳಿಗಾಗಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. ’ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ಮುಂದುವರೆಸಿರುವ  ರಾಷ್ಟ್ರಗಳ ಮೇಲೆ ಒತ್ತಡ ಹೆಚ್ಚಿಸಲು ಸೌದಿ ಅರೇಬಿಯಾ ಮತ್ತು ಭಾರತ - ನಾವಿಬ್ಬರೂ  ಒಪ್ಪಿದ್ದೇವೆ ಎಂದು ಮೋದಿ ಹೇಳಿದರು. ನಿಯೋಗ ಮಟ್ಟದ ಮಾತುಕತೆಗಳ ಬಳಿಕ, ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮತ್ತು ದೊರೆ ಸಲ್ಮಾನ್ ಅವರುಎಲ್ಲ ರೂಪದ ಭಯೋತ್ಪಾದನೆ ವಿರುದ್ಧ ಹೋರಾಡುವ ಅಗತ್ಯ ಇದೆ ಎಂದು ಹೇಳಿದರು. ಭಯೋತ್ಪಾದನೆಗೆ ಯಾವುದೇ ರೂಪದ ನೆರವು ನೀಡುತ್ತಿರುವ ರಾಷ್ಟ್ರಗಳ ಮೇಲೆ ಒತ್ತಡ ಹಾಕಲು ಉಭಯ ಧುರೀಣರೂ ಒಪ್ಪಿರುವುದಾಗಿ ಪ್ರಧಾನಿ ಮೋದಿ ನುಡಿದರುಪುಲ್ವಾಮದಲ್ಲಿ ಕಳೆದವಾರ ನಡೆದ ಪೈಶಾಚಿಕ ದಾಳಿಯು ಭಯೋತ್ಪಾದನೆಯ ಇನ್ನೊಂದು ಕ್ರೂರ ಮುದ್ರೆಯಾಗಿದೆ ಎಂದು ನುಡಿದ ಮೋದಿ, ’ ಸವಾಲಿನ ವಿರುದ್ಧ ಹೋರಾಡಲು ನಾವು ಒಪ್ಪಿದ್ದೇವೆ. ಭಯೋತ್ಪಾದನೆಗೆ ಯಾವುದೇ ರೀತಿಯ ನೆರವು ನೀಡುತ್ತಿರುವ ರಾಷ್ಟ್ರಗಳ ಮೇಲೆ ಒತ್ತಡ ಹಾಕುವ ಅಗತ್ಯವಿದೆ ಎಂದು ಹೇಳಿದರು. ಭಯೋತ್ಪಾದನೆಯ ಮೂಲಸವಲತ್ತುಗಳ ನಾಶ, ಭಯೋತಾದನೆಗೆ ಬೆಂಬಲ ನೀಡುವಿಕೆಗೆ ಅಂತ್ಯ ಮತ್ತು ಭಯೋತ್ಪಾದನೆಯ ಬೆಂಬಲಿಗರನ್ನು ಶಿಕ್ಷೆಗೆ ಗುರಿ ಪಡಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನುಡಿದರು. ಉಗ್ರವಾದ ಮತ್ತು ಭಯೋತ್ಪಾದನೆ ನಮ್ಮ ಸಾಮಾನ್ಯ ಕಾಳಜಿಯ ವಿಷಯಗಳು. ಗುಪ್ತಚರ ಮಾಹಿತಿ ಹಂಚಿಕೆಯಿಂದ ಭಯೋತ್ಪಾದನೆ ನಿಗ್ರಹ ಕ್ರಮದವರೆಗೆ ಎಲ್ಲ ರೀತಿಯ ಸಹಕಾರವನ್ನು ನಾವು ನಿಮಗೆ (ಭಾರತ) ನೀಡುತ್ತೇವೆ. ಮುಂಬರುವ ತಲೆಮಾರುಗಳ ಉಜ್ವಲ ಭವಿಷ್ಯದ ಖಾತರಿಗಾಗಿ ಎಲ್ಲ ರಾಷ್ಟ್ರಗಳ ಜೊತೆಗೆ ನಾವು ಶ್ರಮಿಸುತ್ತೇವೆ ಎಂದು ಸೌದಿ ದೊರೆ ಸಲ್ಮಾನ್ ಹೇಳಿದರು. ಕನಿಷ್ಠ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ಭಯೋತ್ಪಾದನೆ ದಾಳಿಯ ಹಿನ್ನೆಲೆಯಲ್ಲಿ ಆಯಕಟ್ಟಿನ ಬಾಂಧವ್ಯಗಳನ್ನು ಇನ್ನಷ್ಟು ಗಾಢಗೊಳಿಸುವ ಮಾರ್ಗಗಳನ್ನು ಉಭಯ ನಾಯಕರೂ ಹುಡುಕಾಡಿದರು. ಪ್ರಧಾನಿ ಮೋದಿ ಅವರ ಜೊತೆಗೆ ಮಾತುಕತೆಗಳಿಗೆ ಕುಳಿತುಕೊಳ್ಳುವ ಮುನ್ನ ದೊರೆ ಸಲ್ಮಾನ್ ಅವರುಭಾರತದ ಜೊತೆಗಿನ ಮಾತುಕತೆಗಳಿಂದ ಒಳ್ಳೆಯ ವಿಚಾರಗಳು ಬರಲಿವೆ ಎಂದು ಹೇಳಿದ್ದರು. ಇದಕ್ಕೆ ಮುನ್ನ ಈದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿ ದೊರೆಯ ಜೊತೆ ಮಾತುಕತೆ ನಡೆಸಿದ್ದರು.  ಸೌದಿ ದೊರೆ ಸಲ್ಮಾನ್ ಅವರು ಪಾಕಿಸ್ತಾನ ಭೇಟಿಯ ಬಳಿಕ ಮಂಗಳವಾರ ಸಂಜೆ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಸೌದಿ ಉಪವಿದೇಶಾಂಗ ಸಚಿವ ಅಬ್ದೆಲ್ ಅಲ್-ಜುಬೀರ್ ಅವರು ಸೋಮವಾರ ಇಸ್ಲಾಮಾಬಾದಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಭಾರತ ಮತ್ತು ಪಾಕಿಸ್ತಾನ ನಡುವಣ ಪ್ರಕ್ಷುಬ್ಧತೆ ಕಡಿಮೆಗೊಳಿಸಲು ತಮ್ಮ ರಾಷ್ಟ್ರವು ಯತ್ನಿಸುವುದು ಎಂದು ಹೇಳಿದ್ದರು. ಆದರೆ ನವದೆಹಲಿಯಲ್ಲಿ ಅಧಿಕಾರಿಗಳು ಇದು ದ್ವಿಪಕ್ಷೀಯ ವಿಚಾರ ಎಂದು ಹೇಳುವ ಮೂಲಕ ಇಂತಹ ಸಲಹೆಗಳನ್ನು ತಳ್ಳಿಹಾಕಿದ್ದರುಸೌದಿ ದೊರೆ ನವದೆಹಲಿಗೆ ಆಗಮಿಸುವ ಮುನ್ನ ಸೌದಿ ಅರೇಬಿಯಾ- ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ರಿಯಾದ್ ಬೆಂಬಲ ನೀಡಿ ಜಂಟಿ ಹೇಳಿಕೆ ನೀಡಿದ ಬಗ್ಗೆ ಭಾರತದ ಅಧಿಕಾರಿ ವಲಯದಲ್ಲಿ ಚರ್ಚೆಯಾಗಿತ್ತು. ಹೇಳಿಕೆಯಲ್ಲಿ ವಿಶ್ವಸಂಸ್ಥೆಯಲ್ಲಿ ಪಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ರಾಜಕೀಯಕರಣವನ್ನು ನಿವಾರಿಸಬೇಕಾದ ಅಗತ್ಯ ಇದೆ ಎಂಬುದಾಗಿ ಉಲ್ಲೇಖಿದ್ದುದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹೇಳಿಕೆಯಲ್ಲಿ ಭಾರತದ ಜೊತೆಗೆ ಮಾತುಕತೆಗೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಯತ್ನಗಳು ಹಾಗೂ ಕರ್ತಾರಪುರ ಕಾರಿಡಾರ್ ತೆರೆದದ್ದಕ್ಕಾಗಿ ಸೌದಿದೊರೆ ಶ್ಲಾಘಿಸಿದ್ದೂ ಉಲ್ಲೇಖಗೊಂಡಿತ್ತುಏನಿದ್ದರೂ ಸೌದಿ ಅರೇಬಿಯಾ ಜೊತೆಗೆ ಭಾರತದ ಬಾಂಧವ್ಯದ ಪರಿಚಯವಿರುವವರು ಪಾಕಿಸ್ತಾನದ ಜೊತೆಗಿನ ಬಾಂಧವ್ಯವನ್ನು ಹೋಲಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದರು. ದೊರೆಯ ಭೇಟಿಯಲ್ಲಿ ಉಭಯ ಕಡೆಗಳು ಭಯೋತ್ಪಾದನೆ ನಿಗ್ರಹಕ್ಕಾಗಿ ಗುಪ್ತಚರ ಮಾಹಿತಿ ಹಂಚಿಕೆ ಸೇರಿದಂತೆ ಭದ್ರತಾ ಸಹಕಾರ ನಿಟ್ಟಿನಲ್ಲಿ ಆಯಕಟ್ಟಿನ ಪಾಲುದಾರಿಕೆ ಗಾಢಗೊಳಿಸಲು ಒತ್ತು ನೀಡಿವೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಸೌದಿ ದೊರೆ ಇಸ್ಲಾಮಾಬಾದಿನಿಂದ ರಿಯಾಧ್ ಗೆ ಮರಳಿ ಕೆಲವು ತಾಸುಗಳಲ್ಲಿ ಅಲ್ಲಿ ಕಳೆದ ಬಳಿ ಭಾರತ ಉಪಖಂಡಕ್ಕೆ ೩೦೦೦ ಕಿಮೀ ದೂರವನ್ನು ವಾಯುಮಾರ್ಗದಲ್ಲಿ ಕ್ರಮಿಸಿ ಬಂದಿದ್ದರು.
೨೦೧೬ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಿಯಾಧ್ ಗೆ ಭೇಟಿ ನೀಡಿದಂದಿನಿಂದ ಭಾರತ ಮತ್ತು ಸೌದಿ ಅರೇಬಿಯಾ ಬಾಂಧವ್ಯ ಬಲಗೊಂಡಿದೆ. ತನ್ನ ಭದ್ರತಾ ಬಲದ  ಪ್ರಮುಖ ಸ್ತಂಭ ಎಂಬುದಾಗಿ ಭಾರತವು ಸೌದಿ ಅರೇಬಿಯಾವನ್ನು ಬಣ್ಣಿಸಿತು. ಕಾಂಗ್ರೆಸ್ ಟೀಕೆ: ಸೌದಿ ದೊರೆ ಭಯೋತ್ಪಾದನೆಯು ಉಭಯ ರಾಷ್ಟ್ರಗಳಿಗೂ ಸಮಾನ ಕಾಳಜಿಯ ವಿಷಯ ಎಂಬುದಾಗಿ ಹೇಳಿದರೂ, ಮೋದಿ ಅವರ ಜೊತೆಗಿನ ಮಾತುಕತೆಗಳಲ್ಲಿ ಪುಲ್ವಾಮದ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂಬುದು ವಿಪಕ್ಷಗಳ ಟೀಕೆಗೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಸೌದಿ ದೊರೆಯನ್ನು ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದನ್ನು ಟೀಕಿಸಿದ ಕಾಂಗ್ರೆಸ್, ’ಪುಲ್ವಾಮ ದಾಳಿ ಹುತಾತ್ಮರನ್ನು ನೆನಪುಮಾಡಿಕೊಳ್ಳುವ ದಾರಿಯಲ್ಲಿ ಪಾಕಿಸ್ತಾನದ  ’ಭಯೋತ್ಪಾದನೆ ನಿಗ್ರಹ ಪ್ರಯತ್ನಗಳನ್ನು ಶ್ಲಾಘಿಸಿದವರಿಗೆಭವ್ಯ ಸ್ವಾಗತ ನೀಡಿದ್ದೇಕೆ ಎಂದು ಪ್ರಶ್ನಿಸಿತು.

2019: ನವದೆಹಲಿ: ಭಾರತದ ಅತಿವೇಗದ ರೈಲುಗಾಡಿವಂದೇ ಭಾರತ ಎಕ್ಸ್ಪ್ರೆಸ್ ರೈಲುಗಾಡಿಯು  ತನ್ನ ಮೂರನೇ ವಾಣಿಜ್ಯ ಓಡಾಟದ ದಿನ ಸಂಭವಿಸಿದ ಕಲ್ಲೆಸೆತದ ಘಟನೆಯ ಕೆಲವು ಗಂಟೆಗಳ ಬಳಿಕ ಅಲಹಾಬಾದ್ ಸಮೀಪ ಮೋಟಾರ್ ಸೈಕಲ್ ಒಂದಕ್ಕೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಳ್ಳಲಿಲ್ಲ. ಉತ್ತರಪ್ರದೇಶದ ತಂಡ್ಲಾದ ಸಮೀಪ  ಬೆಳಗ್ಗೆ ರೈಲಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಘಟನೆಯ ಕೆಲವು ತಾಸುಗಳ ಬಳಿಕ ರೈಲು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆಯಿತು. ಅಲಹಾಬಾದಿನಿಂದ ೪೨ ಕಿಮೀ ದೂರದ ಫಫಮಾವು ಸಮೀಪ ಘಟನೆ ಸಂಭವಿಸಿತು. ಅಕ್ರಮವಾಗಿ ಹಳಿ ದಾಟಲು ಯತ್ನಿಸುತ್ತಿದ್ದ ಮೋಟಾರ್ ಸೈಕಲ್ ಸವಾರ ರೈಲು ಬರುತ್ತಿದ್ದುದನ್ನು ನೋಡಿ, ಮೋಟಾರ್ ಸೈಕಲನ್ನು ಹಳಿಯ ಮೇಲೆಯೇ ಬಿಟ್ಟು ಓಡಿ ಹೋದ. ಹೀಗಾಗಿ ಆತ ಪ್ರಾಣಾಪಾಯವಾಗದೆ ಬಚಾವಾಗಿದ್ದು, ಮೋಟಾರ್ ಸೈಕಲ್ ಸಂಪೂರ್ಣ ನಜ್ಜುಗುಜ್ಜಾಯಿತು ಎಂದು ವರದಿಗಳು ಹೇಳಿದವು. ರೈಲು ಪರೀಕ್ಷಾ ಓಡಾಟದ ಸಮಯದಿಂದಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಿಂದೆ ಎರಡು ಬಾರಿ ಕಲ್ಲೇಟಿಗೆ ಗುರಿಯಾಗಿತ್ತು. ಈದಿನ ಬೆಳಗ್ಗೆ ಉತ್ರರ ಪ್ರದೇಶದಲ್ಲಿ ನವದೆಹಲಿಯಿಂದ ಕಾನ್ಪುರ ಕಡೆಗೆ ಚಲಿಸುತ್ತಿದ್ದಾಗ ದುಷ್ಕರ್ಮಿಗಳು ಕಲ್ಲೆಸೆದಿದ್ದು ರೈಲಿನ ಗಾಜು ಒಂದು ಪುಡಿ ಪುಡಿಯಾಗಿದೆ. ಕಳೆದ ವರ್ಷ ಡಿಸೆಂಬರ್ ೨೦ರಂದು ಮತ್ತು ವರ್ಷ ಫೆಬ್ರುವರಿ ೨ರಂದು ರೈಲಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದರು.


2018: ಹೈದರಾಬಾದ್‌: ಪೌರತ್ವ ಪಡೆದಿರುವ ವಿಶ್ವದ ಮೊದಲ ರೋಬೊ ಸೋಫಿಯಾಗೆ ನಟ ಶಾರುಕ್ಖಾನ್ಎಂದರೆ ಬಹಳ ಇಷ್ಟವಂತೆ. ಹೈದರಾಬಾದಿನಲ್ಲಿ ನಡೆದ ವಿಶ್ವ ಮಾಹಿತಿ ತಂತ್ರಜ್ಞಾನ ಸಮ್ಮೇಳನದಲ್ಲಿ ನಡೆದ ಸಂವಾದದ ವೇಳೆ ತಾನು ಶಾರುಕ್ ಬಹು ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಳು. ಹಾಂಕಾಂಗಿನಲ್ಲಿ ರೂಪಿಸಲಾದ ರೋಬೋ ಸೌದಿ ಅರೇಬಿಯ ಪ್ರಜೆ. ಕೃತಕ ಬುದ್ಧಿಮತ್ತೆ ಹೊಂದಿರುವ ಸೋಫಿಯಾ ಮಾತನಾಡುತ್ತಾ, ‘ಎಲ್ಲರನ್ನೂ ಪ್ರೀತಿಸುವ ಜಗತ್ತು ನಿರ್ಮಾಣ ಆಗಬೇಕು ಎನ್ನುವುದು ನನ್ನ ಮಹದಾಸೆ. ವಿಶ್ವದ ಅನೇಕ ದೇಶಗಳನ್ನು ನಾನು ಸುತ್ತಿದ್ದೇನೆ. ಎಲ್ಲಕ್ಕಿಂತ ನನಗೆ ತುಂಬಾ ಇಷ್ಟವಾದದ್ದು ಹಾಂಕಾಂಗ್‌. ಏಕೆಂದರೆ ನಾನು ಅಲ್ಲಿಯೇ ಹುಟ್ಟಿದ್ದೇನೆ. ಅಲ್ಲಿ ನನ್ನ ರೋಬೋಟಿಕ್ಕುಟುಂಬ ಇದೆಎಂದಳು. ಭಾರತದ ಜನಸಂಖ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಆಕೆ, ’ ಬಗ್ಗೆ ನನ್ನ ಭಾವನೆಯನ್ನು ಅಭಿವ್ಯಕ್ತಗೊಳಿಸಲು ದೈಹಿಕ ಭಾವನೆಗಳನ್ನು ಹೊಂದುವ ಅವಶ್ಯಕತೆ ಇದೆ. ಆದರೆ ನಾನು ನನ್ನ ರೋಬೋಟಿಕ್ಶಕ್ತಿಯನ್ನು ಬಳಸಿ ಇಲ್ಲಿಯ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತೇನೆಎಂದು ಉತ್ತರಿಸಿದಳು. ಪೂರ್ವ ನಿಗದಿತ ವಿಷಯಗಳ ಮೇಲೆ ಮಾತುಕತೆ ನಡೆಸುವ ರೋಬೊ, ವ್ಯಕ್ತಿಗಳ ಆಂಗಿಕ ಚಲನೆ ಹಾಗೂ ಸಂಜ್ಞೆಯನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದೆ. ಹಾಂಕಾಂಗ್ಮೂಲದ ಹ್ಯಾನ್ಸನ್ರೋಬೋಟಿಕ್ಸ್ ರೋಬೊವನ್ನು 2015ರಲ್ಲಿ ನಿರ್ಮಿಸಿತ್ತು.  ಕಳೆದ ಅಕ್ಟೋಬರ್ನಲ್ಲಿ ಇದಕ್ಕೆ ಸೌದಿ ಅರೇಬಿಯಾ ಪೌರತ್ವ ನೀಡಿತ್ತು.

2018: ಬಾಲೇಶ್ವರ, ಒಡಿಶಾ: ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮರ್ಥ್ಯದ ಅಗ್ನಿ–2 ಮಧ್ಯಮ ವ್ಯಾಪ್ತಿಯ ಕ್ಷಿಪಣಿಯನ್ನು ಒಡಿಶಾ ಬಾಲೇಶ್ವರದ ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಸಾಮರ್ಥ್ಯವುಳ್ಳ ಈ ಕ್ಷಿಪಣಿಯ ದಾಳಿ ವ್ಯಾಪ್ತಿ 2,000 ಕಿಲೋಮೀಟರ್‌.  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಇ) ಸಹಕಾರದೊಂದಿಗೆ ಸೇನೆಯ ಯುದ್ಧತಂತ್ರ ವಿಭಾಗವು (ಎಸ್ಎಫ್ಸಿ) ಕಾರ್ಯಾಚರಣೆ ನಡೆಸಿತು. ಇದು ಅತ್ಯಂತ ನಿಖರ ಮಾಹಿತಿ ನೀಡುವ ಪಥದರ್ಶಕ ವ್ಯವಸ್ಥೆ ಹಾಗೂ ಅತ್ಯಾಧುನಿಕ ನಿಯಂತ್ರಣ ವ್ಯವಸ್ಥೆಗಳನ್ನು ಹೊಂದಿದೆ. ಇಡೀ ಪರೀಕ್ಷೆಯ ಮೇಲೆ ಅತ್ಯಾಧುನಿಕ ರಾಡಾರ್ಗಳು ಹಾಗೂ ಟೆಲಿಮೆಟ್ರಿ ವೀಕ್ಷಣಾ ಕೇಂದ್ರಗಳು ನಿಗಾ ಇಟ್ಟಿದ್ದವು. ಎಲೆಕ್ಟ್ರೋ ಆಪ್ಟಿಕ್ ಉಪಕರಣಗಳು ಹಾಗೂ ಎರಡು ಸೇನಾ ನೌಕೆಗಳನ್ನು ಬಂಗಾಳಕೊಲ್ಲಿಯ ಗುರಿಯ ಸಮೀಪ ನಿಯೋಜಿಸಲಾಗಿತ್ತು. ಅಡ್ವಾನ್ಸ್ಡ್ ಸಿಸ್ಟಮ್ಸ್ಲ್ಯಾಬೊರೇಟರಿ, ಡಿಆರ್ಡಿಒದ ಇತರ ಪ್ರಯೋಗಾಲಯಗಳು ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. ಅಗ್ನಿ ಸರಣಿಯ ಭಾಗವಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಹೀಗಿದೆ ಕ್ಷಿಪಣಿ:  20 ಮೀಟರ್ಕ್ಷಿಪಣಿಯ ಉದ್ದ. 17 ಟನ್ –  ಕ್ಷಿಪಣಿಯ ತೂಕ. 1000 ಕೆ.ಜಿತೂಕ ಹೊತ್ತೊಯ್ಯುವ ಸಾಮರ್ಥ್ಯ. 2,000 ಕಿ.ಮೀ. – ದಾಳಿ ವ್ಯಾಪ್ತಿ.

2009: ಆದಾಯಕ್ಕಿಂತ ಹೆಚ್ಚಿನ 'ಆಸ್ತಿ- ನಗದು' ಸಂಗ್ರಹ ಆರೋಪ ಎದುರಿಸುತ್ತಿದ್ದ ಕೇಂದ್ರದ ಸಂಪರ್ಕ ಖಾತೆ ಮಾಜಿ ಸಚಿವ, ಹಿಮಾಚಲ ಪ್ರದೇಶ ಮೂಲದ 82 ವರ್ಷದ ಸುಖ್‌ರಾಮ್ ಅವರನ್ನು ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನೇಕ ವಿಧಿಗಳಡಿ ಸುಖ್‌ರಾಮ್ ಅಪರಾಧಿ; 1991ರಿಂದ 19996ರ ಅವಧಿಯಲ್ಲಿ ಅವರಿಗಿದ್ದ ಆದಾಯಕ್ಕಿಂತ 4.25 ಕೋಟಿ ರೂಪಾಯಿ ಹೆಚ್ಚುವರಿ ಮೌಲ್ಯದ ಆಸ್ತಿ- ನಗದನ್ನು ಅವರು ಹೊಂದಿದ್ದರು ಎಂದು ಸಿಬಿಐ ವಿಶೇಷ ನ್ಯಾಯಮೂರ್ತಿ ವಿ.ಕೆ.ಮಹೇಶ್ವರಿ ತೀರ್ಪು ನೀಡಿದರು. ಸುಖ್‌ರಾಮ್ ಇದೇ ದಿನ ಬೇರೊಂದು ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಮತ್ತೊಂದು ನ್ಯಾಯಾಲಯಕ್ಕೆ ಹೋಗಿದ್ದುದರಿಂದ ತೀರ್ಪು ಹೊರಬಿದ್ದಾಗ ದೆಹಲಿ ಹೈಕೋರ್ಟ್‌ಗೆ ಹಾಜರಾಗಿರಲಿಲ್ಲ. 1991ರಿಂದ 96ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸುಖ್‌ರಾಮ್ ತಮ್ಮ ಆದಾಯಕ್ಕಿಂತ 5.36 ಕೋಟಿ ರೂಪಾಯಿ ಹೆಚ್ಚು ಮೌಲ್ಯದ ಸ್ಥಿರಾಸ್ತಿ-ಚರಾಸ್ತಿ ಹೊಂದಿದ್ದರು ಎಂದು ಸಿಬಿಐ ಆರೋಪ ಮಾಡಿತ್ತು. ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಸಂಪರ್ಕ ಖಾತೆ ರಾಜ್ಯ ಸಚಿವರಾಗಿದ್ದ ಸುಖ್‌ರಾಮ್ ಅವರ ದೆಹಲಿ ಮತ್ತು ಹಿಮಾಚಲ ಪ್ರದೇಶದ ಮನೆಗಳ ಮೇಲೆ 1996 ಆ.16ರಂದು ಏಕಕಾಲಕ್ಕೆ ದಾಳಿ ನಡೆಸಿದ್ದ ಸಿಬಿಐ ಒಟ್ಟು 3.61 ಕೋಟಿ ರೂಪಾಯಿ ನಗದು , 10.29 ಲಕ್ಷದ ಆಭರಣ, 10.30 ಲಕ್ಷ ಬೆಲೆಬಾಳುವ ಮನೆ ಬಳಕೆ ವಸ್ತುಗಳು ಹಾಗೂ ಇನ್ನಿತರ ವಸ್ತುಗಳನ್ನು ಪತ್ತೆಹಚ್ಚಿತ್ತು. ಅಲ್ಲದೆ, ಬ್ಯಾಂಕ್ ಖಾತೆಯಲ್ಲಿ 4.92 ಲಕ್ಷ ಇರುವುದನ್ನೂ ಸಿಬಿಐ ಖಚಿತ ಮಾಡಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಬಿಐ 1996ರ ಆ.27ರಂದು ಮಾಜಿ ಸಂಸದರೂ ಆದ ಸುಖ್‌ರಾಮ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಆದರೆ ಸುಖ್‌ರಾಮ್, ತಮ್ಮ ಮನೆಯಲ್ಲಿದ್ದ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ವಾದಿಸುತ್ತಾ ಬಂದಿದ್ದರು.

ಸುಖ್‌ರಾಮ್ ಪ್ರಕರಣದ ಹೆಜ್ಜೆಜಾಡು:

ಆ.16, 1996: ಸುಖ್‌ರಾಮ್‌ ಅವರ ದೆಹಲಿ ಮತ್ತು ಹಿಮಾಚಲ ಪ್ರದೇಶದ ಮನೆಗಳ ಮೇಲೆ ಸಿಬಿಐ ದಾಳಿ. ಕ್ರಮವಾಗಿ 2.45 ಕೋಟಿ ರೂಪಾಯಿ ಮತ್ತು 1.16 ಕೋಟಿ ರೂಪಾಯಿ ವಶ.

ಆ.27, 1996: ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಸುಖ್‌ರಾಮ್ ವಿರುದ್ಧ ಸಿಬಿಐನಿಂದ ಎಫ್‌ಐಆರ್ ದಾಖಲು.
ಸೆ.18, 1996: ಸಿಬಿಐನಿಂದ ಸುಖ್‌ರಾಮ್ ಬಂಧನ.

ಅ.16, 1996: ಸುಖ್‌ರಾಮ್‌ಗೆ ಜಾಮೀನು ನೀಡಿದ ನ್ಯಾಯಾಲಯ.

ಜೂನ್ 9, 1997: ಸಿಬಿಐ ನಿಂದ ಆರೋಪಪಟ್ಟಿ ಸಲ್ಲಿಕೆ.

ಅ.30, 2001: ನ್ಯಾಯಾಲಯದಿಂದ ಸಾಕ್ಷಿಗಳ ಹೇಳಿಕೆಯ ದಾಖಲಾತಿ ಆರಂಭ.

ನ.6, 2004: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಪ್ರಕರಣದ ಸಾಕ್ಷಿಯಾಗಿ ಹೇಳಿಕೆ.

ಏ.13, 2007: ಒಟ್ಟು 64 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಂಡ ನಂತರ ಸಾಕ್ಷ್ಯ ದಾಖಲಾತಿ ಪ್ರಕ್ರಿಯೆಗೆ ಕೊನೆ.

ಮೇ.18, 2007: ಸಾಕ್ಷಿಗಳ ಹೇಳಿಕೆ ಆಧರಿಸಿ ನ್ಯಾಯಾಲಯ ಕೇಳಿದ ಪ್ರಶ್ನೆಗಳಿಗೆ ಮಾಜಿ ಸಚಿವರಿಂದ ವಿವರಣೆ.

ನ.7, 2008: ಸುಖ್‌ರಾಮ್ ಪರ 16 ಸಾಕ್ಷಿಗಳ ಹೇಳಿಕೆ.

ಡಿ.2, 2008: ಕೊನೆಯ ಹಂತದ ವಿಚಾರಣೆ.

ಫೆ.17, 2009: ಅಂತಿಮ ವಾದ- ಪ್ರತಿವಾದದ ನಂತರ ತೀರ್ಪು ನೀಡಲು ಸಿಬಿಐ ವಿಶೇಷ ನ್ಯಾಯಾಧೀಶರಾದ ವಿ.ಕೆ.ಮಹೇಶ್ವರಿ ನಿರ್ಧಾರ.

ಫೆ.20, 2009: ಸುಖ್‌ರಾಮ್ ಅಪರಾಧಿ ಎಂದು ತೀರ್ಪು. ಶಿಕ್ಷೆ ಪ್ರಮಾಣ ಫೆ.24ರಂದು ಪ್ರಕಟಿಸಲು ನಿಗದಿ.

2009: ಭಾಷಾ ವೈವಿಧ್ಯೆತೆಯಿಂದ ಕೂಡಿದ ಭಾರತದಲ್ಲಿ ಸುಮಾರು 196 ಆಡು ಭಾಷೆಗಳು ವಿನಾಶದ ಅಂಚಿನಲ್ಲಿವೆ ಹಾಗೂ ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳು ವಿನಾಶದ ಅಂಚಿನಲ್ಲಿರುವ ರಾಷ್ಟ್ರಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿದೆ ಎಂದು ಯುನೆಸ್ಕೊ ವರದಿ ತಿಳಿಸಿತು. ನಂತರದ ಸ್ಥಾನದಲ್ಲಿ ಅಮೆರಿಕ (192) ಮತ್ತು ಇಂಡೋನೇಷ್ಯಾ (147) ಇವೆ. ಅಂತರರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯನ್ನು ಯುನೆಸ್ಕೊ ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು. ಜಗತ್ತಿನಲ್ಲಿ ಸುಮಾರು ಆರು ಸಾವಿರ ಭಾಷೆಗಳಿದ್ದು ಅವುಗಳಲ್ಲಿ 2,500 ಭಾಷೆಗಳು ವಿನಾಶದ ಅಂಚಿನಲ್ಲಿವೆ. ಸುಮಾರು 200 ಭಾಷೆಗಳನ್ನು ಕೇವಲ 10 ಮಂದಿ ಹಾಗೂ 178 ಭಾಷೆಗಳನ್ನು 10ರಿಂದ 50 ಮಂದಿ ಮಾತ್ರ ಬಳಸುತ್ತಾರೆ. ಕಳೆದ ಮೂರು ಪೀಳಿಗೆಯ ಅಂತರದಲ್ಲಿ 200 ಬಾಷೆಗಳು ಸಂಪೂರ್ಣ ನಾಶವಾಗಿವೆ. 538 ಭಾಷೆಗಳು ಸಂಪೂರ್ಣ ನಾಶದ ಅಂಚಿನಲ್ಲಿದ್ದರೆ 632 ಭಾಷೆಗಳು ವಿನಾಶದ ಅಪಾಯದಲ್ಲಿವೆ.

2009: ಬೆಂಗಳೂರು: ಗೋ ಸಂರಕ್ಷಣೆಗಾಗಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂ ಗೋಶಾಲೆ ಸ್ಥಾಪಿಸಲು ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಬಜೆಟಿನಲ್ಲಿ ಪ್ರಕಟಿಸಿದರು. ಆಸಕ್ತ ಸ್ವಯಂಸೇವಾ ಸಂಸ್ಥೆಗಳಿಗೆ ತಲಾ 10 ಲಕ್ಷ ರೂ. ಅನುದಾನ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

2009: ಜನಾಂಗೀಯ ದ್ವೇಷಕ್ಕೆ ಕಾರಣವಾಗುವಂತಹ ರಾಜಕೀಯ ವ್ಯಂಗಚಿತ್ರ ಪ್ರಕಟಿಸಿದ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ತನ್ನ ಕೃತ್ಯಕ್ಕೆ ಕ್ಷಮೆ ಯಾಚಿಸಿತು. ಕಳೆದ ಎರಡು ದಿನಗಳಿಂದ ನಿರಂತರ ಪ್ರತಿಭಟನೆ ಎದುರಿಸುತ್ತಿದ್ದ ಪತ್ರಿಕೆ ಅಂತಿಮವಾಗಿ ಕ್ಷಮೆ ಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಿತು. ತಾನು ಪ್ರಕಟಿಸಿದ್ದ ರಾಜಕೀಯ ವ್ಯಂಗ್ಯಚಿತ್ರದಲ್ಲಿ ಯಾವುದೇ ರೀತಿಯ ಜನಾಂಗೀಯ ನಿಂದನಾ ಮನೋಭಾವದ ಉದ್ದೇಶ ಇರಲಿಲ್ಲ ಎಂದು ಪತ್ರಿಕೆ ಪ್ರತಿಪಾದಿಸಿತು. ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಅವಹೇಳನ ಮಾಡುವಂತಹ ವ್ಯಂಗ್ಯಚಿತ್ರ ಪ್ರಕಟಿಸಿದ 'ನ್ಯೂಯಾರ್ಕ್ ಪೋಸ್ಟ್' ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ನ್ಯೂಯಾರ್ಕಿನಲ್ಲಿರುವ ಪತ್ರಿಕೆಯ ಕೇಂದ್ರ ಕಚೇರಿಯನ್ನು ಬಂದ್ ಮಾಡಿದರು.

2008: ಬಹು ನಿರೀಕ್ಷೆ ಹುಟ್ಟಿಸಿದ ಭಾರತ ಪ್ರೀಮಿಯರ್ ಲೀಗ್(ಐಪಿಎಲ್)ನ ತಂಡಗಳಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಮುಂಬೈಯಲ್ಲಿ ನಡೆದು ಮಹೇಂದ್ರ ಸಿಂಗ್ ದೋನಿ ಅತಿ ಹೆಚ್ಚು ಹಣಕ್ಕೆ ಮಾರಾಟವಾದರು. ಚೆನ್ನೈನ ಸೂಪರ್ ಕಿಂಗ್ಸ್ ತಂಡ ಭಾರತ ಏಕದಿನ ತಂಡದ ನಾಯಕನನ್ನು ಆರು ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿತು. ಇದರೊಂದಿಗೆ ದೋನಿ ವಿಶ್ವದ ಬಹು ಬೆಲೆಯುಳ್ಳ ಕ್ರಿಕೆಟಿಗ ಎನಿಸಿದರು. ವಿಶ್ವದ ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿ ಕ್ರಿಕೆಟಿಗರ ಹರಾಜು ನಡೆದದ್ದು ಇದೇ ಮೊತ್ತ ಮೊದಲು. ಈ ಹರಾಜಿನ ಮೂಲಕ ಭಾರತ ಕ್ರಿಕೆಟಿನಲ್ಲಿ ಹಣದ ಹೊಳೆ ಹರಿಯಿತು. ಇಂಗ್ಲೆಂಡಿನ ರಿಚರ್ಡ್ ಮೆಡ್ಲೆ ಅವರು ಖಾಸಗಿ ಹೋಟೆಲಿನಲ್ಲಿ ಬಿಡ್ ಪ್ರತಿಕ್ರಿಯೆ ನಡೆಸಿಕೊಟ್ಟರು. ಆರು ಸುತ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 77 ಆಟಗಾರರನ್ನು ಎಂಟು ತಂಡಗಳು ಖರೀದಿಸಿದವು. ಹರಾಜಿನ ಒಟ್ಟು ಮೊತ್ತ 160 ಕೋಟಿ ರೂ. ಹರಾಜಿನಲ್ಲಿ ಬೆಂಗಳೂರು, ಮುಂಬೈ, ಜೈಪುರ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಮೊಹಾಲಿ ಹಾಗೂ ಚೆನ್ನೈ ತಂಡಗಳು ಪಾಲ್ಗೊಂಡಿದ್ದವು.

2008: ಚಿನ್ನದ ಬೆಲೆಯು ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಗಗನಕ್ಕೆ ಚಿಮ್ಮಿ, ತಲಾ 10 ಗ್ರಾಂಗಳಿಗೆ ರೂ 12 ಸಾವಿರದ ಗಡಿ ದಾಟಿ ಹೊಸ ದಾಖಲೆ ಬರೆಯಿತು. ಕುಸಿದ ಷೇರುಪೇಟೆ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಹಿನ್ನೆಲೆಯಲ್ಲಿ ಚಿನ್ನವು ಹಣ ಹೂಡಿಕೆದಾರರಿಗೆ `ಬದಲಿ ಸ್ವರ್ಗ'ವಾಗಿ ಪರಿಣಮಿಸಿತು.

2008: ಸುಮಾತ್ರಾ ದ್ವೀಪದ ಬಳಿ ಸಮುದ್ರದ ಆಳದಲ್ಲಿ ತೀವ್ರ ಸ್ವರೂಪದ ಭೂಕಂಪ ಸಂಭವಿಸಿತು. ಕನಿಷ್ಠ ಮೂವರು ಮೃತರಾಗಿ, ಇತರ 25 ಮಂದಿ ಗಾಯಗೊಂಡರು. ಅನೇಕ ಕಟ್ಟಡಗಳು ನೆಲಸಮವಾದವು. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆಯು 7.6ರಷ್ಟಿತ್ತೆಂದು ಅಮೆರಿಕ ಹವಾಮಾನ ಇಲಾಖೆ ತಿಳಿಸಿತು. ಸುನಾಮಿ ಭೀತಿ ಇತ್ತಾದರೂ ಅದು ಸಂಭವಿಸಲಿಲ್ಲ.

2008: ಸಂಗೀತ ಕೇಳುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಹಲವು ಸಂಶೋಧನೆಗಳು ಹೇಳುತ್ತಾ ಬಂದಿವೆ. ಇನ್ನೊಂದು ಹೊಸ ಸಂಶೋಧನೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು `ಲಕ್ವಾ(ಪಾರ್ಶ್ವವಾಯು) ರೋಗಿಗಳು ಚೇತರಿಸಿಕೊಳ್ಳಲು ಸಂಗೀತವು ಹೆಚ್ಚು ಸಹಕಾರಿ' ಎಂದು ಹೇಳಿತು. ಲಕ್ವಾ ಹೊಡೆದ ಮೊದಲ ಕೆಲವು ದಿನಗಳಲ್ಲಿ ಪ್ರತಿದಿನ ಸಂಗೀತ ಆಲಿಸಿದರೆ ಬೇಗ ಚೇತರಿಸಿಕೊಳ್ಳಬಹುದು. ಇದು ಖರ್ಚಿಲ್ಲದ ಮಾರ್ಗ ಕೂಡ. ಸಂಗೀತವು ರೋಗಿಗಳ ಸಂವೇದನಾ ಶಕ್ತಿಗೆ ಚುರುಕು ನೀಡಿ ಭಾವನೆಗಳನ್ನು ಉದ್ದೀಪಿಸುತ್ತದೆ ಎಂದು ಲಂಡನ್ನಿನ ಸಂಶೋಧಕರು ವಿವರಿಸಿದರು. ಪಾರ್ಶ್ವವಾಯು ಪೀಡಿತರಾಗಿದ್ದ 60 ರೋಗಿಗಳ ಮೇಲೆ ನಡೆಸಿದ ಪ್ರಯೋಗದಿಂದ ಇದು ಖಚಿತವಾಯಿತು ಎಂದೂ ಅವರು ಹೇಳಿದರು.

2008: ಚೆನ್ನೈಯ ಖ್ಯಾತ ಸುವಾರ್ತಾ ಬೋಧಕ (ಎವಂಜೆಲಿಸ್ಟ್) ಹಾಗೂ `ಜೀಜಸ್ ಕಾಲ್ಸ್' ಮಿನಿಸ್ಟ್ರಿ ಸಂಸ್ಥೆಯ ಸಂಸ್ಥಾಪಕ ಬ್ರದರ್ ಡಿ. ಜಿ. ಎಸ್. ದಿನಕರನ್ (73) ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು.

2008: ಕ್ರಾಂತಿಕಾರಿ ದಲಿತ ಕವಿ ಎಂದೇ ಹೆಸರಾಗಿದ್ದ ಅರುಣ್ ಕಾಳೆ(55) ನಾಸಿಕ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಕಾಳೆ ಅವರಿಗೆ 2007ರಲ್ಲಿ ಮಹಾರಾಷ್ಟ್ರ ಫೌಂಡೇಷನ್ ಬತ್ಕಾರಿ ಥೊಂಬ್ರೆ ಪುರಸ್ಕಾರ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪುರಸ್ಕಾರದ ಜೊತೆಗೆ ಹತ್ತು ಹಲವು ಪ್ರಶಸ್ತಿಗಳು ಕಾಳೆಯವರಿಗೆ ಲಭಿಸಿದ್ದವು. ಕವಿ ಅರುಣ್ ಅವರ `ರಾಕ್ ಗಾರ್ಡನ್' ಮತ್ತು 'ಸಾಯಿರಾಂಚೆ ಶಹರ್' ಎಂಬ ಎರಡು ಕವನ ಸಂಕಲನಗಳು ಬಹಳ ಪ್ರಸಿದ್ಧಿಪಡೆದಿವೆ. 'ಸಾಯಿರಾಂಚೆ ಶಹರ್' ಕವನ ಸಂಕಲನ ಹಿಂದಿ, ಮಲಯಾಳ ಮತ್ತು ಬೆಂಗಾಲಿ ಭಾಷೆಗಳಿಗೆ ತರ್ಜುಮೆಯಾಗಿದೆ.

2008: ವಿಶ್ವದ ಮೊದಲ ಬ್ರಾಡ್ ಗೇಜ್ ಕೋಚ್ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆ ಹೊಂದಿರುವ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿರುವ ಭೂಪಾಲಿನ ಶಾನ್-ಎ-ಭೂಪಾಲ್ ರೈಲಿಗೆ ಮತ್ತೊಂದು ಗರಿ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೊಡುವ ಅತ್ಯಂತ ಅನ್ವೇಷಣಾತ್ಮಕ, ಅಪೂರ್ವ ಪ್ರವಾಸೋದ್ಯಮ ಯೋಜನಾ ಪ್ರಶಸ್ತಿ ಅದಕ್ಕೆ ಲಭಿಸಿತು.

2008: ಬೆಂಗಳೂರು ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡ `ಪ್ರೀ-ಕಾಸ್ಟ್' ಅಂಡರ್ಪಾಸ್ ಈದಿನ ಸಂಜೆ 4 ಗಂಟೆಗೆ ಉದ್ಘಾಟನೆಯಾಯಿತು. ಆದರೆ ನಿಗದಿಯಂತೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಇದನ್ನು ಉದ್ಘಾಟಿಸಲಿಲ್ಲ. ಬದಲಿಗೆ ಪಾಲಿಕೆಯ ಆಡಳಿತಾಧಿಕಾರಿ ದಿಲೀಪ್ ರಾವ್ ಉದ್ಘಾಟಿಸಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

2008: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇರಳದ ಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದ ಬರಹಗಾರ ಸುನಿಲ್ ಗಂಗೋಪಾಧ್ಯಾಯ ಅವರು ಗೆಲುವು ಸಾಧಿಸಿದರು.

2006: ಧಾರವಾಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರೂ ಸೇರಿದಂತೆ ವಿವಿಧ ಭಾಷೆಗಳ ಒಟ್ಟು 20 ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಅನುವಾದ ಪ್ರಶಸ್ತಿಗೆ ಪಾತ್ರರಾದರು. ಹಿರೇಮಠ ಅವರ ಹೇಮಂತ ಋತುವಿನ ಸ್ವರಗಳು ಪ್ರಶಸ್ತಿಗೆ ಪಾತ್ರವಾಗಿರುವ ಕೃತಿ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಖ್ವಾರತ್-ಉಲ್-ಹೈದರ್ ಅವರ ಪಥ್ ಝಡ್ ಕೀ ಆವಾಜ್ ಕೃತಿಯ ಅನುವಾದ.

2003: ಅಮೆರಿಕದ ರೋಡೆ ದ್ವೀಪದ ಸ್ಟೇಷನ್ ನೈಟ್ ಕ್ಲಬ್ಬಿನಲ್ಲಿ ಸಂಭವಿಸಿದ ಅಗ್ನಿ ದುರಂತದ್ಲಲಿ 100 ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಸುಟ್ಟಗಾಯಗಳಿಗೆ ಒಳಗಾದರು.

2002: ಈಜಿಪ್ಟಿನ ರೆಖಾ ಅಲ್- ಗಾರ್ಬಿಯಾದ ರೈಲುಗಾಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 370 ಜನ ಮೃತರಾಗಿ 65ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡರು.

1986: ರಷ್ಯಾದ ಬಾಹ್ಯಾಕಾಶ ನಿಲ್ದಾಣ `ಮೀರ್' ಕಕ್ಷೆಗೆ ಉಡಾವಣೆಗೊಂಡಿತು.

1966: ಅಮೆರಿಕದ ಅಡ್ಮಿರಲ್ ಹಾಗೂ ಎರಡನೇ ಜಾಗತಿಕ ಸಮರ ಕಾಲದಲ್ಲಿ ಫೆಸಿಫಿಕ್ ಪಡೆಯ ಕಮಾಂಡರ್ ಆಗಿದ್ದ ಚೆಸ್ಟರ್ ನಿಮಿಟ್ಜ್ ಸಾನ್ ಫ್ರಾನ್ಸಿಸ್ಕೊದಲ್ಲಿ ತನ್ನ 81ನೇ ಹುಟ್ಟು ಹಬ್ಬಕ್ಕೆ ನಾಲ್ಕು ದಿನ ಮೊದಲು ಮೃತರಾದರು.

1962: ಫ್ರೆಂಡ್ ಶಿಪ್-7 ಬಾಹ್ಯಾಕಾಶ ನೌಕೆಯ ಮೇಲೇರಿ 5 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಭೂಮಿಗೆ 3 ಪ್ರದಕ್ಷಿಣೆ ಹಾಕಿದ ಜಾನ್ ಗ್ಲೆನ್ ಈ ರೀತಿ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರನಾದ.

1947: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ `ಜವಾಬ್ದಾರಿಯುತ ಭಾರತೀಯರ ಕೈಗಳಿಗೆ' ಅಧಿಕಾರ ಹಸ್ತಾಂತರಿಸುವುದಾಗಿ ಪ್ರಕಟಿಸಿದರು.

1932: ರಂಗ ಚಳವಳಿಯ ನೇತಾರ ಕೆ.ವಿ. ಸುಬ್ಬಣ್ಣ (20-2-1932ರಿಂದ 16-7-2005) ಅವರು ಕೆ.ವಿ. ರಾಮಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮುಂಡಿಗೇಸರದಲ್ಲಿ ಜನಿಸಿದರು. ಕಾಲೇಜು ದಿನಗಳಿಂದಲೇ `ಮಿತ್ರ ಮೇಳ' ನಾಟಕ ಬಳಗದ ಸಕ್ರಿಯ ಸದಸ್ಯರಾಗಿದ್ದ ಅವರು ಹೆಗ್ಗೋಡಿನಲ್ಲಿ ಬೆಳೆಸಿದ `ನೀಲಕಂಠೇಶ್ವರ ನಾಟ್ಯ ಸೇವಾ ಸಂಘ' (ನೀನಾಸಂ) ಏಷ್ಯಾದಲ್ಲೇ ವಿನೂತನ ಮಾದರಿಯ ನಾಟಕ ಸೇವಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ಹೆಗ್ಗೋಡು ನಾಟಕ ಕಲಾವಿದರ ಪಾಲಿಗೆ ಇಂದು ಕಾಶಿ. ಇದನ್ನು ಹುಟ್ಟು ಹಾಕಿದ್ದು ಸುಬ್ಬಣ್ಣ ಅವರ ತಂದೆ ರಾಮಪ್ಪ. ತೆಂಗಿನಗರಿಯ ರಂಗಮಂಟಪ ಮೂಲಕ ಸುಬ್ಬಣ್ಣ ಇದಕ್ಕೆ ಹೊಸ ಆಯಾಮ ನೀಡಿದರು. ಅವರು ನಿರ್ಮಿಸಿದ 750 ಆಸನಗಳ ಅಂತಾರಾಷ್ಟ್ರೀಯ ಖ್ಯಾತಿಯ ಗ್ರಾಮೀಣ `ಶಿವರಾಮ ಕಾರಂತ' ರಂಗಮಂದಿರ, ಚಲನಚಿತ್ರ ರಸಗ್ರಹಣ ಶಿಬಿರಗಳು, ನೀನಾಸಂ ನಾಟಕಗಳು, ನೀನಾಸಂ ತಿರುಗಾಟ ಇವೆಲ್ಲ ರಂಗಚಳವಳಿಗೆ ಹೊಸ ಹೊಳಪು ನೀಡಿದ್ದವು. ಅಕ್ಷರ ಪ್ರಕಾಶನದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿದ ಸುಬ್ಬಣ್ಣ ಅವರಿಂದ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಏಷ್ಯಾದ ನೊಬೆಲ್ ಎಂದೇ ಖ್ಯಾತವಾಗಿರುವ ಮ್ಯಾಗ್ಸೆಸೆ ಪ್ರಶಸ್ತಿ ಇತ್ಯಾದಿ ಅಸಂಖ್ಯಾತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.

2007: ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಚಿತ್ರಬ್ರತ ಮಜುಂದಾರ್ (72) ಕೋಲ್ಕತ್ತದಲ್ಲಿ ನಿಧನರಾದರು.

2007: ವಿಧಾನಪರಿಷತ್ತಿನ ಸಭಾಪತಿ ಚುನಾವಣೆಗೆ ಪಟ್ಟು ಹಿಡಿದು ಆರು ದಿನಗಳಿಂದ ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ಈದಿನ ವಿಧಾನಸಭಾಧ್ಯಕ್ಷರ ಪೀಠದತ್ತ ನುಗ್ಗಿ ಮೈಕುಗಳನ್ನು ಕಿತ್ತುಹಾಕಿ ದಾಖಲೆಪತ್ರಗಳನ್ನು ತೂರಾಡಿ ಸಭಾಧ್ಯಕ್ಷರನ್ನು ಪೀಠದಿಂದ ಎಳೆದುಹಾಕಲೂ ಯತ್ನಿಸಿದ ಘಟನೆ ನಡೆಯಿತು. ಗದ್ದಲದ ಮಧ್ಯೆ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

2007: ಕೇರಳದ ಎರ್ನಾಕುಲಂ ಜಿಲ್ಲೆಯ ಕೋಥಮಂಗಲಂ ಬಳಿ ಪೆರಿಯಾರ್ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ 20 ಶಾಲಾ ಮಕ್ಕಳು, ಮೂವರು ಶಿಕ್ಷಕರು ನೀರು ಪಾಲಾದರು. ಕೊಚ್ಚಿ ಸಮೀಪದ ಡಾ. ಸಲೀಂ ಅಲಿ ಪಕ್ಷಿಧಾಮಕ್ಕೆ ಪ್ರವಾಸ ತೆರಳಿದ್ದಾಗ ಈ ದುರಂತ ಸಂಭವಿಸಿತು.

2007: ಸಮ್ ಜೌತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಲ್ಲಿ ಮೂವರನ್ನು ಅಮಾನತುಗೊಳಿಸಲಾಯಿತು. ಹರಿಯಾಣ ಪೊಲೀಸರು ಇಬ್ಬರು ಶಂಕಿತರ ಮುಖಚಹರೆಯ ಚಿತ್ರಗಳನ್ನು ಬಿಡುಗಡೆ ಮಾಡಿದರು.

2007: ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ತೆರಳಿ ಕಣ್ಮರೆಯಾಗಿದ್ದ ಮೂವರು ಸಾಹಿಸಿಗರ ಪೈಕಿ ಪತ್ತೆಯಾಗದೇ ಉಳಿದಿದ್ದ ಮೂರನೇ ವ್ಯಕ್ತಿಯ ಕಳೇಬರ ಕೂಡಾ ಪತ್ತೆಯಾಯಿತು. ಇಬ್ಬರು ಚಾರಣಿಗರ ಕಳೇಬರ ದಿನದ ಹಿಂದೆಯಷ್ಟೇ ಪತ್ತೆಯಾಗಿತ್ತು.

2007: ತರಹಳ್ಳಿ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿದ ಸರ್ಕಾರಿ ಅಧಿಕಾರಿಗಳು ಮತ್ತು ಒತ್ತುವರಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುವಂತೆ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದರು.

1904: ಅಲೆಕ್ಸಿ ಕೊಸಿಗಿನ್ (1904-1980) ಹುಟ್ಟಿದ ದಿನ. ಇವರು ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದರು.

1893: ವಲಿಲಿಯಮ್ `ಬಿಗ್ ಬಿಲ್' ಟೈಡನ್ (1893-1953) ಹುಟ್ಟಿದ ದಿನ. ಅಮೆರಿಕದ ಟೆನಿಸ್ ಆಟಗಾರನಾದ ಈತ ಏಳು ಅಮೆರಿಕನ್ ಚಾಂಪಿಯನ್ ಶಿಪ್ಗಳು ಹಾಗೂ ಮೂರು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದುಕೊಂಡ ವ್ಯಕ್ತಿ.

1869: ಸಿಸಿರ್ ಕುಮಾರ್ ಘೋಷ್ ಅವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಭಾಷಾ ವೃತ್ತಪತ್ರಿಕೆಯಾಗಿ `ಅಮೃತಬಜಾರ್ ಪತ್ರಿಕಾ' ಆರಂಭಿಸಿದರು.

1844: ಜೊಶುವಾ ಸ್ಲೊಕಮ್ (1844-1909) ಹುಟ್ಟಿದ ದಿನ. ಕೆನಡಾದ ನೌಕಾಯಾನಿ ಹಾಗು ಸಾಹಸಿಯಾದ ಈತ ಏಕಾಂಗಿಯಾಗಿ ಜಗತ್ತಿನ ಸುತ್ತ ನಾವೆಯಲ್ಲಿ ಪಯಣಿಸಿದ ಮೊದಲ ವ್ಯಕ್ತಿ.

No comments:

Post a Comment