ಇಂದಿನ ಇತಿಹಾಸ History Today ಫೆಬ್ರುವರಿ 10
2018:
ರಮಲ್ಲಾ (ಪ್ಯಾಲೆಸ್ತೈನ್): ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಭಾರತ ಮತ್ತು ಪ್ಯಾಲೆಸ್ತೈನ್ ಬಾಂಧವ್ಯ
ವೃದ್ಧಿಗೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ, ಪ್ಯಾಲೆಸ್ತೈನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್
ಅವರು ರಾಷ್ಟ್ರದ ಅತ್ಯುನ್ನತ ಗೌರವವಾದ ’ಗ್ರ್ಯಾಂಡ್ ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ತೈನ್’ ಪ್ರದಾನ ಮಾಡಿ ಗೌರವಿಸಿದರು. ಉಭಯ ನಾಯಕರ
ನಡುವಣ ದ್ವಿಪಕ್ಷೀಯ ಸಭೆ ಮುಕ್ತಾಯ ಗೊಳ್ಳುತ್ತಿದ್ದಂತೆಯೇ ಅಬ್ಬಾಸ್ ಅವರು ಮೋದಿ ಅವರಿಗೆ ’ಗ್ರ್ಯಾಂಡ್
ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ತೈನ್’ ಗೌರವ ಪ್ರದಾನ ಮಾಡಿದರು.
ಮೋದಿ ಅವರು ಪ್ಯಾಲೆಸ್ತೈನಿಗೆ ಅಧಿಕೃತ ಭೇಟಿ ನೀಡಿದ
ಭಾರತದ ಮೊತ್ತ ಮೊದಲ ಪ್ರಧಾನಿಯಾಗಿದ್ದು, ದೊರೆಗಳು, ರಾಜ್ಯ/ ಸರ್ಕಾರಿ ಪ್ರಮುಖರು ಮತ್ತು ಅದಕ್ಕೆ
ಸಮಾನವಾದ ಹುದ್ದೆಗಳನ್ನು ಹೊಂದಿರುವ ವಿದೇಶೀ ಗಣ್ಯರಿಗೆ ಪ್ಯಾಲೆಸ್ತೈನ್ ಅತ್ಯುನ್ನತ ಗೌರವವಾಗಿ ’ಗ್ರ್ಯಾಂಡ್
ಕಾಲರ್’ ಪ್ರದಾನ ಮಾಡುತ್ತದೆ. ಈ
ಹಿಂದೆ ಸೌದಿ ಅರೇಬಿಯಾದ ದೊರೆ ಸಲ್ಮಾನ್, ಬಹರೈನಿನ ದೊರೆ ಹಮದ್, ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್
ಮತ್ತಿತರರಿಗೆ ಪ್ಯಾಲೆಸ್ತೈನ್ ’ಗ್ರ್ಯಾಂಡ್ ಕಾಲರ್’ ಗೌರವ ಪ್ರದಾನ ಮಾಡಿತ್ತು. ‘ವಿವೇಚನಾಶೀಲ ನಾಯಕತ್ವ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ
ಸ್ಥಾನಮಾನಕ್ಕೆ ಮಾನ್ಯತೆಯಾಗಿ, ಪ್ಯಾಲೆಸ್ತೈನ್ ರಾಷ್ಟ್ರ ಮತ್ತು ಭಾರತ ಗಣರಾಜ್ಯದ ನಡುವಣ ಚಾರಿತ್ರಿಕ
ಬಾಂಧವ್ಯಗಳ ವೃದ್ಧಿಗೆ ಮಾಡಿದ ಪ್ರಯತ್ನಗಳಿಗೆ ಮೆಚ್ಚುಗೆಯಾಗಿ, ನಮ್ಮ ಜನರ ಸ್ವಾತಂತ್ರ್ಯದ ಹಕ್ಕುಗಳಿಗೆ
ಬೆಂಬಲ ನೀಡಿದ್ದಕ್ಕೆ ಮತ್ತು ಪ್ರದೇಶದಲ್ಲಿ ಶಾಂತಿ ನೆಲೆಸಲು ನೀಡುತ್ತಿರುವ ಬೆಂಬಲವನ್ನು ಗುರುತಿಸಿ
ಗ್ರಾಂಡ್ ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ತೈನ್ ಪ್ರದಾನ ಮಾಡಲಾಗಿದೆ ಎಂದು ಮೋದಿ ಅವರಿಗೆ ನೀಡಲಾದ
ಗೌರವ ಪತ್ರವು ಶ್ಲಾಘಿಸಿತು. ಪ್ಯಾಲೆಸ್ತೈನಿಗೆ
ಉನ್ನತ ಸ್ಥಾನ: ’ಭಾರತದ ವಿದೇಶಾಂಗ ನೀತಿಯಲ್ಲಿ ಪ್ಯಾಲೆಸ್ತೈನ್ ಯಾವಾಗಲೂ ಉನ್ನತ ಸ್ಥಾನವನ್ನು ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ
ಹೇಳಿದರು. ‘ಭಾರತವು ಪ್ಯಾಲೆಸ್ತೈನ್ ಜನರ ಹಿತಾಸಕ್ತಿಗಳಿಗೆ
ಬದ್ಧವಾಗಿದೆ ಎಂದು ನಾನು ಅಧ್ಯಕ್ಷ ಅಬ್ಬಾಸ್ ಅವರಿಗೆ ಭರವಸೆ ನೀಡಿದ್ದೇನೆ’ ಎಂದು ಸಾರ್ವಭೌಮ ಮತ್ತು ಸ್ವತಂತ್ರ ಪಾಲೆಸ್ತೈನ್‌ಗೆ
ಬೆಂಬಲ ನೀಡುತ್ತಾ ಪ್ರಧಾನಿ ನುಡಿದರು.
2018: ರಮಲ್ಲಾ (ಪ್ಯಾಲೆಸ್ತೈನ್): ಪ್ರಧಾನಿ ನರೇಂದ್ರ
ಮೋದಿ ಅವರು ಚಾರಿತ್ರಿಕ ಪ್ಯಾಲೆಸ್ತೈನ್ ಭೇಟಿಯ ಸಲುವಾಗಿ ರಮಲ್ಲಾಕ್ಕೆ ಆಗಮಿಸಿದರು. ೬೭ರ ಹರೆಯದ ನಾಯಕ ಪ್ಯಾಲೆಸ್ತೈನ್ ಅಧ್ಯಕ್ಷ ಮೆಹಮೂದ್ ಅಬ್ಬಾಸ್
ಅವರನ್ನು ಭೇಟಿ ಮಾಡಿದರು. ಬಳಿಕ ಉಭಯರೂ ಪ್ಯಾಲೆಸ್ತೈನಿನ ದಿವಂಗತ ನಾಯಕ ಯಾಸೆರ್ ಅರಾಫತ್ ಸ್ಮಾರಕಕ್ಕೆ
ಭೇಟಿ ನೀಡಿ ಪ್ಯಾಲೆಸ್ತೈನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸಲ್ಲಿಸಿದರು. ಬಳಿಕ ಮೋದಿ ಅವರಿಗೆ
ಔಪಚಾರಿಕ ಗೌರವ ರಕ್ಷೆ ನೀಡಲಾಯಿತು. ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಪ್ಯಾಲೆಸ್ತೈನಿಗೆ ಭೇಟಿ
ನೀಡುವ ಮೂಲಕ ಈ ರಾಷ್ಟ್ರಕ್ಕೆ ಭೇಟಿ ನೀಡಿದ ಮೊತ್ತ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ
ಪಾತ್ರರಾದರು. ಪ್ಯಾಲೆಸ್ತೈನ್ ತಲುಪಿದ ಬಳಿಕ ’ಪ್ಯಾಲೆಸ್ತೈನ್
ತಲುಪಿದ್ದೇನೆ. ಈ ಚಾರಿತ್ರಿಕ ಭೇಟಿಯು ಉಭಯ ಬಲವಾದ ದ್ವಿಪಕ್ಷೀಯ ಸಹಕಾರಕ್ಕೆ ನಾಂದಿಯಾಗಲಿದೆ’ ಎಂದು ಮೋದಿ ಟ್ವೀಟ್ ಮಾಡಿದರು. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಬ್ಬಾಸ್ ಅವರು ದ್ವಿಪಕ್ಷೀಯ
ಬಾಂಧವ್ಯ ವೃದ್ಧಿಯ ಮಾರ್ಗಗಳ ಬಗ್ಗೆ ಮತ್ತು ಉಭಯರಿಗೂ ಸಂಬಂಧಿಸಿದ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ
ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಶಾಂತಿ ಪ್ರಕ್ರಿಯೆ, ದ್ವಿಪಕ್ಷೀಯ ಬಾಂಧವ್ಯ, ಪ್ರಾದೇಶಿಕ ಪರಿಸ್ಥಿತಿಗಳು
ಇತ್ಯಾದಿ ವಿಚಾರಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಾವು ಚರ್ಚಿಸಲಿದ್ದೇವೆ. ಪ್ರದೇಶದಲ್ಲಿ ಶಾಂತಿ
ವಿಸ್ತರಣೆ ನಿಟ್ಟಿನಲ್ಲಿ ಭಾರತ ವಹಿಸಬಹುದಾದ ಪಾತ್ರದ ಬಗ್ಗೆ, ಆರ್ಥಿಕ ಅಂಶಗಳ ಬಗ್ಗೆ ಕೂಡಾ ನಾವು
ಚರ್ಚಿಸಲಿದ್ದೇವೆ ಎಂದು ಅಬ್ಬಾಸ್ ನುಡಿದರು. ಅಂತಾರಾಷ್ಟ್ರೀಯ
ಮಟ್ಟದಲ್ಲಿ ಭಾರತವು ಅತ್ಯಂತ ಗೌರವಾನ್ವಿತ ರಾಷ್ಟ್ರ ಎಂಬುದಾಗಿ ಬಣ್ಣಿಸಿದ ೮೨ರ ಹರೆಯದ ಪ್ಯಾಲೆಸ್ತೈನಿ
ಅಧ್ಯಕ್ಷ, ಪ್ಯಾಲೆಸ್ತೈನ್ ಮತ್ತು ಇಸ್ರೇಲ್ ಮಧ್ಯೆ ಅಂತಿಮ ಒಪ್ಪಂದ ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ
ಬಹುಪಕ್ಷೀಯ ವೇದಿಕೆ ರಚಿಸುವಲ್ಲಿ ಭಾರತದ ಮಹತ್ವದ ಪಾತ್ರ ವಹಿಸಬಲ್ಲುದು ಎಂದು ಹೇಳಿದರು. ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತಾ
ಬಂದ ಭಾರತದ ದೀರ್ಘಕಾಲೀನ ನಿಲುವನ್ನು ಮೋದಿ ಅವರ ಭೇಟಿ ಪ್ರತಿಫಲಿಸಿದೆ ಎಂದು ಅಬ್ಬಾಸ್ ಬಣ್ಣಿಸಿದರು. ಪ್ಯಾಲೆಸ್ತೈನಿ ನಾಯಕ ಯಾಸೆರ್ ಅರಾಫತ್ ಸ್ಮಾರಕಕ್ಕೆ ಮಾಲಾರ್ಪಣೆಯೊಂದಿಗೆ
ಮೋದಿ ತಮ್ಮ ಕಾರ್ಯಕ್ರಮ ಆರಂಭಿಸಿದರು. ಪ್ಯಾಲೆಸ್ತೈನಿ
ಪ್ರಧಾನಿ ರಮಿ ಹಮೀದುಲ್ಲಾ ಅವರು ಮೋದಿ ಅವರಿಗೆ ಸಾಥ್ ನೀಡಿದರು. ದ್ವಿಪಕ್ಷೀಯ ಮಾತುಕತೆಗಳ ಬಳಿಕ ದ್ವಿಪಕ್ಷೀಯ
ಒಪ್ಪಂದಗಳಿಗೆ ಸಹಿ ಹಾಕಿ, ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಮೋದಿ ವಿಮಾನದ ಮೂಲಕ ಅಮ್ಮಾನ್ ಗೆ
ತೆರಳುವರು. ಕಳೆದ
ವರ್ಷ ಇಸ್ರೇಲ್ ಗೆ ತಮ್ಮ ಚೊಚ್ಚಲ ಭೇಟಿ ನೀಡಿದ್ದ ವೇಳೆಯಲ್ಲಿ ಮೋದಿ ಅವರು ಪ್ಯಾಲೆಸ್ತೈನಿ ಕೇಂದ್ರವಾದ
ರಮಲ್ಲಾಕ್ಕೆ ಭೇಟಿ ನೀಡಿರಲಿಲ್ಲ. ಕೇವಲ ಇಸ್ರೇಲಿಗೆ ನೀಡಿದ್ದ ಅವರ ಭೇಟಿಯು ರಾಜಕೀಯ ವಲಯದಲ್ಲಿ ಭಾರಿ
ಚರ್ಚೆಯನ್ನೇ ಹುಟ್ಟುಹಾಕಿ ಭಾರತ-ಪ್ಯಾಲೆಸ್ತೈನಿ ಬಾಂಧವ್ಯದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದ್ದವು.
ಈ ಬಾರಿ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡುತ್ತಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು
ಜೆರುಸಲೇಮ್ ನಗರವನ್ನು ಇಸ್ರೇಲ್ ರಾಜಧಾನಿ ಎಂಬುದಾಗಿ ಮಾನ್ಯತೆ ನೀಡಿದ್ದರಿಂದ ಪ್ರದೇಶದಲ್ಲಿ ಉದ್ಭವಿಸಿದ
ಪ್ರಕ್ಷುಬ್ಧತೆ ಇನ್ನೂ ತಾರಕ ಸ್ಥಿತಿಯಲ್ಲಿ ಇರುವಾಗಲೇ, ಮೋದಿ ಅವರು ಪ್ಯಾಲೆಸ್ತೈನಿಗೆ ಭೇಟಿ ನೀಡಿದ್ದಾರೆ.
ಜೆರುಸಲೇಮ್ ನಗರವನ್ನು ಇಸ್ರೇಲ್ ರಾಜಧಾನಿ ಎಂಬುದಾಗಿ ಘೋಷಿಸುವ ಅಮೆರಿಕದ ಏಕಪಕ್ಷೀಯ ನಿರ್ಧಾರವನ್ನು
ವಿಶ್ವ ಸಂಸ್ಥೆ ಜನರಲ್ ಅಸೆಂಬ್ಲಿಯಲ್ಲಿ ಭಾರತ ಸೇರಿದಂತೆ ೧೨೮ ರಾಷ್ಟ್ರಗಳು ಪ್ರಶ್ನಿಸಿ ಈ ಕ್ರಮದ
ವಿರುದ್ಧ ಮತದಾನ ಮಾಡಿದ್ದವು. ಜೆರುಸಲೇಮ್ ನಗರವನ್ನು
ಇಸ್ರೇಲ್ ರಾಜಧಾನಿ ಎಂಬುದಾಗಿ ಘೋಷಿಸಿದ ಟ್ರಂಪ್ ನಿರ್ಧಾರಕ್ಕೆ ಪ್ಯಾಲೆಸ್ತೈನ್ ಸಿಟ್ಟಿಗೇಳುವುದುರ
ಜೊತೆಗೆ ಮಧ್ಯಪ್ರಾಚ್ಯದಲ್ಲಿ ಇದರ ವಿರುದ್ಧ ಪ್ರತಿಭಟನೆಗಳೂ ಭುಗಿಲೆದ್ದಿದ್ವವು. ಇಸ್ರೇಲ್ - ಪ್ಯಾಲೆಸ್ತೈನಿ
ಬಿಕ್ಕಟ್ಟಿನಲ್ಲಿ ಪಾಲುದಾರನಾಗುವುದರಿಂದ ದೂರವೇ ಉಳಿದಿದ್ದರೂ, ನವದೆಹಲಿಯು ಮಧ್ಯ ಪ್ರಾಚ್ಯ ಶಾಂತಿ
ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲುದು ಎಂದು ಪ್ಯಾಲೆಸ್ತೈನಿ ನಾಯಕ ಒತ್ತಿ ಹೇ:ಳಿದ್ದರು.
ಭಾರತವು ಉಭಯ ರಾಷ್ಟ್ರಗಳೂ ಶಾಂತಿ ಸೌಹಾರ್ದದಿಂದ ಬಾಳಬಹುದಾದ ದ್ವಿರಾಷ್ಟ್ರ ಪರಿಹಾರದಲ್ಲಿ ವಿಶ್ವಾಸ
ಇಟ್ಟುಕೊಂಡಿದೆ.
2018: ಜಮ್ಮು
: ಜಮ್ಮು ನಗರದಲ್ಲಿನ ಸಂಜ್ವಾನ್ ಸೇನಾ ಶಿಬಿರಕ್ಕೆ ನಸುಕಿನ ವೇಳೆ ಉಗ್ರರ ಗುಂಪೊಂದು ನುಗ್ಗಿ ನಡೆಸಿದ ದಾಳಿಯಲ್ಲಿ ಇಬ್ಬರು ಜೂನಿಯರ್ ಕಮಿಷನ್‌ಡ್ ಆಫೀಸರ್ (ಜೆಸಿಓ) ಹುತಾತ್ಮರಾದರು. ಬಳಿಕ ನಡೆದ
ಪ್ರತಿದಾಳಿಯಲ್ಲಿ ದಾಳಿಕೋರ ಭಯೋತ್ಪಾದಕರಿಬ್ಬರನ್ನೂ ಗುಂಡಿಟ್ಟು ಕೊಲ್ಲಲಾಯಿತು . ಸೇನಾ ಶಿಬಿರದ
ಮೇಲೆ ಉಗ್ರರು ನಡೆಸಿದ ದಾಳಿಗೆ ಸುಬೇದಾರ್ ಮಗನ್‌ಲಾಲ್ ಮತ್ತು ಸುಬೇದಾರ್ ಮೊಹಮ್ಮದ್ ಆಶ್ರಫ್ ಬಲಿಯಾದರು ಉಗ್ರರ ಗುಂಡಿಗೆ ಆರು ಮಂದಿ ಯೋಧರು ಗಾಯಗೊಂಡರು. ಈ ದಾಳಿಯ ಹಿಂದೆ ಜೈಶ್ ಇ ಮೊಹಮ್ಮದ್ (ಜೆಇಎಂ)
ಉಗ್ರ ಸಂಘಟನೆ ಇದೆ ಎಂದು ಶಂಕಿಸಲಾಯಿತು. ಡಿಜಿಪಿ ಎಸ್
ಪಿ ವೈದ್ ಅವರು ಹೇಳಿರುವ ಪ್ರಕಾರ ಉಗ್ರರು ಸಂಜ್ವಾನ್ ಸೇನಾ ಶಿಬಿರವನ್ನು ಹಿಂಭಾಗದಿಂದ ಪ್ರವೇಶಿಸಿದರು.. ಆ ಭಾಗದಲ್ಲಿ ಯೋಧರ
ಕುಟುಂಬಗಳು ನೆಲೆಸಿರುವ ಕ್ವಾರ್ಟರ್ಸ್ಗಳಿವೆ. ಉಗ್ರರು ದಾಳಿಗೆ ಮುನ್ನ ಪರಸ್ಪರ ಪ್ರತ್ಯೇಕಗೊಂಡು ಶಿಬಿರದೊಳಗೆ ನುಗ್ಗಿ ಬಂದರು ಎನ್ನಲಾಯಿತು. ಐಜಿಪಿ ಎಸ್ ಡಿ ಸಿಂಗ್ ಅವರು
ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಉಗ್ರರು ನಸುಕಿನ 4.55ರ ಹೊತ್ತಿಗೆ ಶಿಬಿರವನ್ನು
ಹೊಕ್ಕಿದ್ದಾರೆ. ಆ ಸಂದರ್ಭದಲ್ಲಿ ಶಂಕಾಸ್ಪದ
ಚಲನವಲನಗಳನ್ನು ಸೆಂಟ್ರಿ ಗುರುತಿಸಿದ್ದಾರೆ. ಆಗಲೇ ಅವರ ಬಂಕರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ನಿರ್ದಿಷ್ಟ ಸಂಖ್ಯೆ ಗೊತ್ತಾಗಿಲ್ಲ ಎಂದು ಹೇಳಿದರು.
2018: ಗುರುಗ್ರಾಮ
(ಹರಿಯಾಣ):
ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ನಗರದ ಸರ್ಕಾರಿ
ಆಸ್ಪತ್ರೆಯ ತುರ್ತು ಹೆರಿಗೆ ವಾರ್ಡಿಗೆ ಪ್ರವೇಶ ನಿರಾಕರಿಸಲ್ಪಟ್ಟ ತುಂಬಗರ್ಭಿಣಿ ಮಹಿಳೆಯೊಬ್ಬಳು
ಆಸ್ಪತ್ರೆಯ ಹೊರಗೆ ಮಗುವಿನ ಜನ್ಮ ನೀಡಿದ ಘಟನೆ ಘಟಿಸಿತು. ಘಟನೆ
ಬೆಳಕಿಗೆ ಬರುತ್ತಿದ್ದಂತೆಯೇ ಗುರುಗ್ರಾಮ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಬಿ ಕೆ
ರಾಜೋರಾ ಅವರು ಪ್ರಕರಣಕ್ಕೆ ಸಂಬಂಧಿಸಿದ ವೈದ್ಯ ಮತ್ತು ದಾದಿಯರನ್ನು ಅಮಾನತು ಮಾಡಿದರು ಎಂದು ವರದಿ
ತಿಳಿಸಿತು. ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ಹೆರಿಗೆ ವಾರ್ಡಿಗೆ ಪ್ರವೇಶ ಸಿಗದೆ, ಅನಿವಾರ್ಯವಾಗಿ
ಆಸ್ಪತ್ರೆಯ ಹೊರಗೆ ಇರಬೇಕಾಗಿ ಬಂದ ಮಹಿಳೆಯನ್ನು ಮುನ್ನಿ ಕೇವಾತ್ (೨೫) ಎಂದು ಗುರುತಿಸಲಾಯಿತು. ಆಸ್ಪತ್ರೆಯ ಹೊರಗಿದ್ದಾಗಲೇ ಈಕೆಗೆ ಹೆರಿಗೆ ನೋವು ತೀವ್ರಗೊಂಡು
ಅಲ್ಲೇ ಮಗುವಿಗೆ ಜನ್ಮನೀಡಿದಳು ಎಂದು ವರದಿ ಹೇಳಿತು. ಮಹಿಳೆಯನ್ನು ಆಕೆಯ ಪತಿ ಶನಿವಾರ ಬೆಳಗ್ಗೆ ೯
ಗಂಟೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಒಯ್ದಿದ್ದರು.
ಮಹಿಳೆಗೆ ತೀವ್ರ ಹೆರಿಗೆ ನೋವು ಬಂದಿತ್ತು. "ನಾವು
ಸಾಂದರ್ಭಿಕ ವಾರ್ಡ್‌ಗೆ ಹೋದೆವು. ಅಲ್ಲಿನ ಸಿಬ್ಬಂದಿ ಹೆರಿಗೆ ವಾರ್ಡ್‌ಗೆ ಹೋಗುವಂತೆ ಸೂಚಿಸಿದರು. ನಾವು
ಹೆರಿಗೆ ವಾರ್ಡಿಗೆ ಬಂದಾಗ, ಅಲ್ಲಿನ ಸಿಬ್ಬಂದಿ ಪತ್ನಿಯ ಬಳಿ ಆಧಾರ್ ಕಾರ್ಡ್ ಕೇಳಿದರು. ಅದಕ್ಕೆ ನನ್ನ
ಪತ್ನಿ ಆಧಾರ್ ಕಾರ್ಡ್ ಇಲ್ಲವೆಂದಳು. ಹಾಗಾದರೆ ವಾರ್ಡಿನಲ್ಲಿ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ
ಎಂದು ಅವರು ಸಿಬ್ಬಂದಿ ಮುರಿದಂತೆ ಹೇಳಿದರು’ ಎಂದು ಮುನ್ನಿ ಕೇವಾತ್
ಅವರ ಪತಿ ಅರುಣ್ ಕೇವಾತ್ ತಿಳಿಸಿದರು. ಆಧಾರ್ ಕಾರ್ಡ್
ಫೋಟೋ ಪ್ರತಿ ಸಾಲದು; ಒರಿಜಿನಲ್ ಕಾರ್ಡ್ ಬೇಕು ಎಂದು
ಹೆರಿಗೆ ವಾರ್ಡ್ ಸಿಬ್ಬಂದಿ ಹೇಳಿದಾಗ ಮುನ್ನಿಯ ಪತಿ,
ಆಕೆಯ ಜವಾಬ್ದಾರಿಯನ್ನು ಅಲ್ಲೇ ಇದ್ದ ತನ್ನ ಮನೆಯವರಿಗೆ ಒಪ್ಪಿಸಿ, ತಾನು ಒರಿಜಿನಲ್ ಕಾರ್ಡ್ ತರಲು
ಮನೆಗೆ ಧಾವಿಸಿದರು. ಈ ಇಡಿಯ ಪ್ರಹಸನವನ್ನು ಮನೆಯವರು ತಮ್ಮ ಮೊಬೈಲ್‌ನಲ್ಲಿ ದಾಖಲು ಮಾಡುತ್ತಿದ್ದರೂ
ಆಸ್ಪತ್ರೆ ಸಿಬಂದಿ ನಿರ್ಲಕ್ಷ್ಯ ವಹಿಸಿದರು. ಇಷ್ಟೆಲ್ಲ ಆಗುವಾಗ ಮಹಿಳೆಗೆ ಹೆರಿಗೆ ನೋವು ಇನ್ನಷ್ಟು
ತೀವ್ರಗೊಂಡಿತು. ಆಸ್ಪತ್ರೆಯ ಹೊರಗೆ ಜಗುಲಿಯಲ್ಲೇ ಮಗುವಿಗೆ ಜನ್ಮ ನೀಡಿದಳು. ಈ ಪ್ರಸವ ಪ್ರಕ್ರಿಯೆಯಲ್ಲಿ
ಜಗುಲಿಯಲ್ಲಿ ರಕ್ತ ಹರಡಿಕೊಂಡಾಗ ಆಸ್ಪತ್ರೆ ಸಿಬಂದಿ ಆಕೆಯ ನೆರವಿಗೆ ಬಂದರು. ಹೀಗಾಗಿ ತಾಯಿ, ಮಗು
ಬದುಕಿಕೊಂಡರು. ಮುನ್ನಿ ಕುಟುಂಬದವರು ಸಿಬ್ಬಂದಿಯ
ಉದಾಸೀನ ವರ್ತನೆಯನ್ನು ಪ್ರತಿಭಟಿಸಿ ಆಸ್ಪತ್ರೆಯ ವೈದ್ಯಾಧಿಕಾರಿ ಮುಂದೆ ಧರಣಿ ಕುಳಿತರು. ಒತ್ತಡಕ್ಕೆ
ಮಣಿದ ಅವರು ಪ್ರಕರಣಕ್ಕೆ ಸಂಬಂಧಿಸಿದ ವೈದ್ಯ ಮತ್ತು ದಾದಿಯನ್ನು ಅಮಾನತು ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ
ಎಂದು ವರದಿ ತಿಳಿಸಿತು.
2018: ನವದೆಹಲಿ: ಶಿಕ್ಷೆಗೆ ಒಳಗಾದ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳನ್ನು
ಕಟ್ಟದಂತೆ ಕಟ್ಟಿಹಾಕಬೇಕು ಎಂಬುದಾಗಿ ಕೋರಿ ಸಲ್ಲಿಸಲಾದ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಬೆಂಬಲಿಸಿದ ಚುನಾವಣಾ ಆಯೋಗವು ರಾಜಕೀಯ ಪಕ್ಷದ ನೋಂದಣಿ ರದ್ದು
ಪಡಿಸುವ ಅಧಿಕಾರವನ್ನು ತನಗೆ ನೀಡುವಂತೆ ಸುಪ್ರೀಂ ಕೋರ್ಟನ್ನು ಕೋರಿತು. ಪ್ರಸ್ತುತ ಚುನಾವಣಾ ಆಯೋಗಕ್ಕೆ
ಪಕ್ಷವನ್ನು ನೋಂದಾಯಿಸುವ ಅಧಿಕಾರ ಮಾತ್ರ ಇದೆ, ಆದರೆ ನೋಂದಣಿ ರದ್ದು ಪಡಿಸುವ ಅಧಿಕಾರ ಇಲ್ಲ. ೧೯೫೧ರ
ಜನತಾ ಪ್ರಾತಿನಿಧ್ಯ ಕಾಯ್ದೆ ಕೂಡಾ ರಾಜಕೀಯ ಪಕ್ಷದ ನೋಂದಣಿ ರದ್ದು ಸಂಬಂಧ ನಿರ್ದಿಷ್ಟ ನಿಯಮಾವಳಿಯನ್ನು
ಹೊಂದಿಲ್ಲ. ನಮ್ಮ ರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಅತ್ಯಗತ್ಯ ಎಂಬುದಾಗಿ
ಪ್ರತಿಪಾದಿಸಿದ ಚುನಾವಣಾ ಆಯೋಗ, ಚುನಾವಣಾ ಆಯೋಗವನ್ನು ಬಲಪಡಿಸಲು ಸಂಬಂಧಪಟ್ಟ ಕಾನೂನುಗಳಿಗೆ ಶಾಸನಸಭೆ
ತಿದ್ದುಪಡಿ ಮಾಡಿದ ಬಳಿಕ ಈ ಸಂಬಂಧವಾಗಿ ನಿರ್ದಿಷ್ಟ ಚೌಕಟ್ಟು ರೂಪಿಸಲು ತನಗೆ ಸಾಧ್ಯವಾಗಬಹುದು ಎಂದು ಆಯೋಗ ಸುಪ್ರೀಂಕೋರ್ಟಿಗೆ ತಿಳಿಸಿತು.
ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಂಡ ಶಿಕ್ಷಿತ ವ್ಯಕ್ತಿಗಳು ಹಾಲಿ ಕಾನೂನಿನ ಲಾಭ ಪಡೆದು ರಾಜಕೀಯ
ಪಕ್ಷ ಕಟ್ಟಲು ಅವಕಾಶ ಇರುವುದನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ತನ್ನ ಪ್ರತಿಕ್ರಿಯೆ
ನೀಡಿ ವಕೀಲ ಅಮಿತ್ ಶರ್ಮಾ ಮೂಲಕ ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಪ್ರಮಾಣಪತ್ರದಲ್ಲಿ ಚುನಾವಣಾ
ಆಯೋಗ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ತಿಳಿಸಿತು. ವಕೀಲರೂ,
ಸಾಮಾಜಿಕ ಕಾರ್ಯಕರ್ತರೂ ಆಗಿರುವ ಆಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯು ಆಂತರಿಕ ಪಕ್ಷ
ಪ್ರಜಾಪ್ರಭುತ್ವ ಖಾತರಿ ಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕು ಎಂದು ಆಗ್ರಹಿಸಿತ್ತು. ಅರ್ಜಿಗೆ ಪ್ರತಿಕ್ರಿಯೆಯಾಗಿ ಪ್ರಮಾಣ ಪತ್ರ ಸಲ್ಲಿಸಿದ ಆಯೋಗವು,
ಕಾಯ್ದೆಗೆ ತಿದ್ದುಪಡಿ ಮಾಡಿ ಪಕ್ಷಗಳ ನೋಂದಣಿ ರದ್ದು ಪಡಿಸುವ ಅಧಿಕಾರವನ್ನು ತನಗೆ ನೀಡುವಂತೆ ಕಳೆದ
೨೦ ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ತಾನು ಪತ್ರ ಬರೆಯುತ್ತಿದ್ದರೂ, ಈವರೆಗೂ ಏನೂ ಪ್ರಯೋಜನವಾಗಿಲ್ಲ
ಎಂದು ಆಯೋಗ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿತು.
‘ಭಾರತದ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷದ ನೋಂದಣಿ ರದ್ದು ಪಡಿಸುವ ಅಧಿಕಾರಗಳನ್ನು ನೀಡಬೇಕು
ಎಂದು ನಿಸ್ಸಂದಿಗ್ದ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ರಾಜಕೀಯ ಪಕ್ಷಗಳ ನೋಂದಾವಣೆ, ನೋಂದಣಿ ರದ್ದು
ವಿಚಾರದಲ್ಲಿ ಅಗತ್ಯ ಆದೇಶಗಳನ್ನು ನೀಡುವ ಅಧಿಕಾರವನ್ನು ಆಯೋಗಕ್ಕೆ ನೀಡಬೇಕು’ ಎಂದು ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ
ನೀಡಿದ ಉತ್ತರದ ಪ್ರಮಾಣಪತ್ರದಲ್ಲಿ ಆಗ್ರಹಿಸಿತು. ಕಾಯ್ದೆಯ ಸೆಕ್ಷನ್ ೨೯ಎ ಪಕ್ಷಗಳ ನೊಂದಣಿ ಪ್ರಕ್ರಿಯೆಯ
ನಿಯಮಾವಳಿಯನ್ನು ಒದಗಿಸಿದೆ, ಆದರೆ ಅದು ರಾಜಕೀಯ ಪಕ್ಷಗಳ ನೋಂದಣಿ ರದ್ದು ಪಡಿಸುವ ಅಧಿಕಾರಗಳನ್ನು
ಚುನಾವಣಾ ಆಯೋಗಕ್ಕೆ ನೀಡಿಲ್ಲ ಎಂದು ಚುನಾವಣಾ ಆಯೋಗ ನ್ಯಾಯಾಲಯದ ಗಮನ ಸೆಳೆಯಿತು. ೨೦೦೨ರ ತನ್ನ ತೀರ್ಪೊಂದರಲ್ಲಿ
ಸುಪ್ರೀಂಕೋರ್ಟ್ ’ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷದ ನೋಂದಣಿಯನ್ನು ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಕ್ಕಾಗಿ
ಅಥವಾ ನೋಂದಣಿ ಕಾಲದಲ್ಲಿ ಚುನಾವಣಾ ಆಯೋಗಕ್ಕೆ ನೀಡಿದ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದಕ್ಕಾಗಿ ರದ್ದು
ಪಡಿಸುವ ಅಧಿಕಾರ ಇಲ್ಲ ಎಂಬುದಾಗಿ ಹೇಳಿದ ಬಗ್ಗೆ ಚುನಾವಣಾ ಆಯೋಗ ಗಮನ ಸೆಳೆಯಿತು. ವಂಚನೆ ಮೂಲಕ ನೋಂದಣಿ
ಮಾಡಿಕೊಂಡ ಅಥವಾ ಚುನಾವಣಾ ಆಯೋಗ ವಿಚಾರಿಸಲಾಗದಂತಹ ಕೆಲವೊಂದು ಇತರ ಕಾರಣಗಳ ಸಂದರ್ಭಗಳಲ್ಲಿ ಮಾತ್ರ
ಪಕ್ಷವೊಂದರ ನೋಂದಣಿ ರದ್ದು ಪಡಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ೧೯೯೮ರಲ್ಲಿ
ಕೇಂದ್ರ ಕಾನೂನು ಸಚಿವಾಲಯಕ್ಕೆ ಮೊದಲ ಬಾರಿ ಬರೆದ ಪತ್ರದಲ್ಲಿ ತಾನು ಹಲವಾರು ಪಕ್ಷಗಳು ನೋಂದಣಿ ಮಾಡಿಕೊಳ್ಳುತ್ತವೆ,
ಆದರೆ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ತಿಳಿಸಿದ್ದುದಾಗಿ ಆಯೋಗ ತಿಳಿಸಿತು. ಇಂತಹ ಪಕ್ಷಗಳು ಕಾಗದಪತ್ರಗಳಲ್ಲಿ ಮಾತ್ರ ಅಸ್ತಿತ್ವದಲ್ಲಿ
ಇರುತ್ತವೆ. ಆದಾಯ ತೆರಿಗೆ ವಿನಾಯ್ತಿ ಲಾಭ ಪಡೆಯುವುದನ್ನೇ ಗಮನದಲ್ಲಿ ಇಟ್ಟುಕೊಂಡು ರಾಜಕೀಯ ಪಕ್ಷಗಳನ್ನು
ರಚಿಸುವ ಸಂಭಾವ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ’ ಎಂದು ಚುನಾವಣಾ ಆಯೋಗ
ಪ್ರತಿಪಾದಿಸಿತು. ೨೦೧೬ರ
ಫೆಬ್ರುವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ೨೫೫ ರಾಜಕೀಯ ಪಕ್ಷಗಳ ಹೆಸರುಗಳನ್ನು ತನ್ನ ಮಾನ್ಯತೆರಹಿತ
ರಾಜಕೀಯ ಪಕ್ಷಗಳ ಪಟ್ಟಿಯಿಂದ ಚುನಾವಣಾ ಆಯೋಗವು ಕಿತ್ತು ಹಾಕಿದೆ ಎಂದೂ ಪ್ರಮಾಣ ಪತ್ರ ತಿಳಿಸಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸೋಮವಾರ ವಿಚಾರಣೆಗೆ
ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಈವರೆಗೂ ತನ್ನ ಉತ್ತರವನ್ನು ಸಲ್ಲಿಸಿಲ್ಲ.
2018: ಲೂಧಿಯಾನ: ಜಮ್ಮುವಿನಲ್ಲಿ ಸೇನಾ
ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಅನುಸರಿಸಿ ಪಾಕಿಸ್ತಾನವನ್ನು ಅತ್ಯುಗ್ರವಾಗಿ ಖಂಡಿಸಿದ
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಕ್ ಅಬ್ದುಲ್ಲ ಅವರು ಭಾರತದ ಜೊತೆಗಿನ ಬಾಂಧವ್ಯ ಸುಧಾರಿಸಬಯಸುವುದಾದರೆ
ಭಯೋತ್ಪಾದಕರನ್ನು ಕಳುಹಿಸುವುದನ್ನು ನಿಲ್ಲಿಸಿ ಎಂದು ನೆರೆಯ ರಾಷ್ಟ್ರವನ್ನು ಆಗ್ರಹಿಸಿದರು. ‘ಯುದ್ಧವು ಯಾವುದೇ ಸಮಸ್ಯೆಯನ್ನೂ ಬಗೆಹರಿಸುವುದಿಲ್ಲ, ಜೊತೆಗೆ
ಕೆಟ್ಟ ಪರಿಣಾಮಗಳನ್ನೂ ಉಂಟು ಮಾಡುತ್ತದೆ’ ಎಂದು ಅವರು ನುಡಿದರು. ‘ಯುದ್ಧವನ್ನು ತಪ್ಪಿಸಲು ಮತ್ತು ಭಾರತದ ಜೊತೆಗಿನ ಬಾಂಧವ್ಯ
ಸುಧಾರಣೆಗಾಗಿ ಪಾಕಿಸ್ತಾನವು ತರಬೇತಿ ಪಡೆದ ಉಗ್ರಗಾಮಿಗಳನ್ನು ಭಾರತಕ್ಕೆ ಕಳುಹಿಸುವ ದೈನಂದಿನ ಕೆಲಸವನ್ನು
ಪಾಕಿಸ್ತಾನ ನಿಲ್ಲಿಸಬೇಕು’ ಎಂದು ಅಬ್ದುಲ್ಲ ಅವರು
ಇಲ್ಲಿಗೆ ೨೫ ಕಿಮೀ ದೂರದ ಮುಲನಪುರ ಡಾಖಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು. ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಒಟ್ಟಿಗೆ ಕುಳಿತು ಚರ್ಚಿಸಿ
ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು ಎಂದು ಎನ್ ಸಿ ನಾಯಕ ನುಡಿದರು. ಯುದ್ಧದ ಬಳಿಕವೂ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಯಾವಾಗಲೂ
ಮಾತುಕತೆಗಳ ಮೂಲಕವೇ ಬಗೆಹರಿಸಿ ಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಇದಕ್ಕೆ ಮುನ್ನ ಜೈಶ್ -ಇ- ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು
ಜಮ್ಮು ನಗರದ ಹೊರವಲಯದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಇಬ್ಬರು ಜ್ಯೂನಿಯರ್ ಕಮಿಶನ್ಡ್ ಅಧಿಕಾರಿಗಳನ್ನು
(ಜೆಸಿಒ) ಹತ್ಯೆಗೈದು, ಒಬ್ಬ ಮೇಜರ್ ಮತ್ತು ಸೇನಾ ಸಿಬ್ಬಂದಿಯೊಬ್ಬರ ಪುತ್ರಿ ಸಹಿತವಾಗಿ ೬ ಮಂದಿಯನ್ನು
ಗಾಯಗೊಳಿಸಿದ್ದರು.
2017: ಬೆಂಗಳೂರು: ಕಂಬಳ ಹಾಗೂ ಎತ್ತುಗಳ ಗಾಡಿ ಓಟದ ಸ್ಪರ್ಧೆಗಳನ್ನು ಕಾನೂನುಬದ್ಧಗೊಳಿಸುವ ಮಹತ್ವದ ವಿಧೇಯಕವನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿತು. ಪಶುಸಂಗೋಪನಾ ಸಚಿವ ಎ.ಮಂಜು ಅವರು ಪ್ರಾಣಿಗಳ ಹಿಂಸಾಚಾರವನ್ನು ತಡೆಗಟ್ಟುವ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಕಂಬಳ, ಹೋರಿಗಳ ಓಟ ಅಥವಾ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸಾಂಪ್ರದಾಯಿಕ ಕ್ರೀಡೆ ಎಂದು ಪರಿಗಣಿಸಲು ಉದ್ದೇಶಿತ ಕಾಯ್ದೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ತಿದ್ದುಪಡಿ ಕಾಯ್ದೆಯಿಂದ ಹೋರಿಗಳ ಓಟದ ಸ್ಪರ್ಧೆ, ಎತ್ತಿನಗಾಡಿ ಓಟದ ಸ್ಪರ್ಧೆ ಹಾಗೂ ಕಂಬಳ ಕ್ರೀಡೆಗಳಿಗೆ ಸಾಂಪ್ರದಾಯಿಕ ರೂಪ ಸಿಗುವುದರ ಜತೆಗೆ, ಇದು ಕಾನೂನು ಬಾಹಿರ ಚಟುವಟಿಕೆ ಎಂಬ ಪಟ್ಟಿಯಿಂದ ಹೊರಬರಲಿದೆ. ಹೈಕೋರ್ಟ್ ಆದೇಶದ ಬಳಿಕ ಇವೆರಡು ಕ್ರೀಡೆಗಳು ಅಪರಾಧದ ವ್ಯಾಪ್ತಿಗೆ ಬರುತ್ತಿದ್ದವು. ಆದರೆ ಈ ಹಿಂದೆ ಕಂಬಳ ಆಯೋಜನೆಗೆ ನೀಡಿದ್ದ ಷರತ್ತನ್ನು ವಿಧೇಯಕದಲ್ಲಿಯೂ ಸೇರಿಸಲಾಗಿದೆ. ಪ್ರಾಣಿಗಳಿಗೆ ಅನಗತ್ಯ ನೋವು ಮಾಡಬಾರದು. ಈ ಸ್ಪರ್ಧೆಯು ಸಂಪ್ರದಾಯ ಹಾಗೂ ಸಂಸ್ಕೃತಿ ಉತ್ತೇಜಿಸುವುದಕ್ಕೆ ಮಾತ್ರ ಸೀಮಿತವಾಗಿರಬೇಕು. ಪ್ರಾಣಿಗಳ ಯೋಗಕ್ಷೇಮದ ಬಗ್ಗೆ ಆಯೋಜಕರು ಹೆಚ್ಚಿನ ಜಾಗೃತಿ ತೋರಿಸಬೇಕು ಎಂದು ವಿಧೇಯಕದಲ್ಲಿ ಹೇಳಲಾಯಿತು. ಈ ಹಿಂದೆ ಕಂಬಳ ಆಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿದಾಗಲೂ 6 ಷರತ್ತುಗಳನ್ನು ವಿಧಿಸಲಾಗಿತ್ತು. ಕಂಬಳಕ್ಕೆ ಅನುಮತಿ ನೀಡಬೇಕು ಎಂದು ಜಲ್ಲಿಕಟ್ಟು ಮಾದರಿಯಲ್ಲಿ ಹೋರಾಟ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವು ವಿಧೇಯಕ ತರುವುದಾಗಿ ಭರವಸೆ ನೀಡಿತ್ತು. ಇದರಂತೆ ವಿಧೇಯಕ ಮಂಡಿಸಲಾಗಿದ್ದು, ವಿಧಾನ ಪರಿಷತ್ನಲ್ಲಿ ಸೋಮವಾರ ಮಂಡನೆಯಾಗುವ ಸಾಧ್ಯತೆಯಿದೆ. ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತ ಬಳಿಕ ಸಹಿಗಾಗಿ ರಾಜ್ಯಪಾಲರಿಗೆ ಹೋಗಲಿದೆ. ಸಹಿಯಾದ ಬಳಿಕ ಸರ್ಕಾರವು ಅಧಿಸೂಚನೆ ಹೊರಡಿಸಿ ನಿಯಮ ರೂಪಿಸಬೇಕಾಗುತ್ತದೆ.
2009: ದೇಶದ ಎಲ್ಲ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕ್ರೀಡೆ ಮತ್ತು ಯೋಗ ಕಲಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಲು ತೀರ್ಮಾನಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ಎಂ.ಎ.ಎ. ಫಾತ್ಮಿ ನವದೆಹಲಿಯಲ್ಲಿ ನಡೆದ ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಪ್ರಕಟಿಸಿದರು. ಶಾಲೆಗಳಲ್ಲಿ ಯೋಗ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಮುಖ ಮುಸ್ಲಿಂ ಶಿಕ್ಷಣ ಕಲಿಕಾ ಕೇಂದ್ರದ ದೇವ ಬಂದ್ ಸ್ವಾಗತಿಸಿತು. ಮುಸ್ಲಿಂ ವಿದ್ಯಾರ್ಥಿಗಳು ಯೋಗ ಕಲಿಯುವಾಗ 'ಓಂ' ಬದಲಿಗೆ 'ಅಲ್ಲಾ ಎಂಬ ಉದ್ಗಾರ ತೆಗೆಯಬಹುದಾಗಿದೆ ಎಂದು ಈ ಸಂಸ್ಥೆ ಸಲಹೆ ನೀಡಿತು. ಈ ಸಲಹೆಯನ್ನು ಪ್ರಖ್ಯಾತ ಯೋಗ ಗುರು ಬಾಬಾ ರಾಮದೇವ್ ನೀಡಿದ್ದರು ಎನ್ನಲಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಶಾಲೆಗಳಲ್ಲಿ ಯೋಗ ಕಲಿಸುವ ನಿರ್ಧಾರಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಇದು ಶಾಲೆಗಳನ್ನು ಕೇಸರೀಕರಣಗೊಳಿಸುವ ಕ್ರಮ ಎಂದು ಎಡಪಕ್ಷಗಳು ಆರೋಪಿಸಿದ್ದವು.
2009: ಸಮರಗ್ರಸ್ತ ವನ್ನಿ ಪ್ರಾಂತ್ಯದಲ್ಲಿ ತೀರಾ ಹತಾಶ ಸ್ಥಿತಿಗೆ ತಲುಪಿದ ಎಲ್‌ಟಿಟಿಇ, ತಮಿಳು ನಾಗರಿಕರನ್ನೇ ಮಾನವ ಗುರಾಣಿಗಳನ್ನಾಗಿ ಮಾಡಿಕೊಂಡು, ತನ್ನ ವಶದಿಂದ ನುಸುಳಿ ಹೋಗುವ ನಾಗರಿಕರನ್ನು ಗುಂಡಿಟ್ಟು ಕೊಲ್ಲಲು ಮುಂದಾದುದು ಬೆಳಕಿಗೆ ಬಂತು. ಇಂತಹ ಬರ್ಬರ ಘಟನೆಯಲ್ಲಿ ಈದಿನ 19 ಮಂದಿ ನಾಗರಿಕರು ಮೃತರಾಗಿ, 69 ಮಂದಿ ಗಾಯಗೊಂಡಿದ್ದಾರೆ ಎಂದು ಬದುಕಿ ಉಳಿದ ಮಂದಿ ಸೇನಾ ಅಧಿಕಾರಿಗಳಿಗೆ ತಿಳಿಸಿದರು. ಸಾಕ್ಷಿ ರೂಪದಲ್ಲಿ ಗುಂಡೇಟಿಗೆ ಸಿಕ್ಕಿ ಬಲಿಯಾದವರ ಮೃತದೇಹಗಳನ್ನು ಜತೆಗೆ ತಂದು ತೋರಿಸಿದರು.
2009: ಕನ್ನಡ ಪುಸ್ತಕ ಪ್ರಾಧಿಕಾರವು 2007 ಮತ್ತು 2008ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಪ್ರಕಟಿಸಿತು. ಧಾರವಾಡದ 'ಮನೋಹರ ಗ್ರಂಥಮಾಲಾ' ಮತ್ತು ಮೈಸೂರಿನ 'ಕಾವ್ಯಾಲಯ' ಪ್ರಕಾಶನ ಸಂಸ್ಥೆಯನ್ನು ಕ್ರಮವಾಗಿ ಪ್ರಶಸ್ತಿಗೆ ತಜ್ಞರ ಸಮಿತಿಯು ಈ ಎರಡೂ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.
2009: ಹತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತೆರಿಗೆ ಸಂಗ್ರಹಕ್ಕೆ ಈದಿನ ಚಾಲನೆ ದೊಕಿತು. ನೂತನ 'ಘಟಕ ಪ್ರದೇಶ ಮೌಲ್ಯ' (ಯುಎವಿ) ತೆರಿಗೆ ಪದ್ಧತಿ ಜಾರಿಗೆ ಬಂದ ಮೊದಲ ದಿನವೇ ಪಾಲಿಕೆಗೆ 78 ಲಕ್ಷ ರೂಪಾಯಿ ತೆರಿಗೆ ಪಾವತಿಯಾಯಿತು. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪಾಲಿಕೆ ತೆರೆದ 271 ಸಹಾಯ ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನತೆ ನೂತನ ತೆರಿಗೆ ಪದ್ಧತಿಯ ಕೈಪಿಡಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.
2008: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಉತ್ತರ ಪ್ರದೇಶದ ರಾಮಪುರದ ಸಿಆರ್ಪಿಎಫ್ ಕೇಂದ್ರದ ಮೇಲೆ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿದ ಆರು ಮಂದಿ ಶಂಕಿತ ಉಗ್ರರನ್ನು ಲಖನೌ ಪೊಲೀಸರು ಬಂಧಿಸಿದರು. ಬಂಧಿತರಲ್ಲಿ ಸುಹೇಲ್ ಮತ್ತು ಅಶ್ರಫ್ ಅಲಿ ಮೂಲತಃ ಉತ್ತರ ಪ್ರದೇಶದ ನಿವಾಸಿಗಳೇ ಆಗಿದ್ದು, ಫಾಹೀಮ್ ಎಂಬಾತ ಪಾಕಿಸ್ಥಾನದ ಪ್ರಜೆ. ಈ ಮೂವರು ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಮುಂಬೈಗೆ ತೆರಳುವ ಪ್ರಯತ್ನದಲ್ಲಿದ್ದಾಗ ರಾಮಪುರದಲ್ಲಿ ಬಂಧನಕ್ಕೆ ಒಳಗಾದರು. ಬಿಹಾರದ ಮಧುಬನಿಯ ಸಲಾವುದ್ದೀನ್ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಇಮ್ರಾನ್ ಮತ್ತು ಫಾರೂಕ್ ಎಂಬ ಮೂವರು ಉಗ್ರರನ್ನು ಲಖನೌ ನಗರದಲ್ಲಿ ಬಂಧಿಸಲಾಯಿತು.
2008: ಉತ್ತರ ಕರ್ನಾಟಕದಲ್ಲಿ ಉಗ್ರರ ಜಾಲ ಜಾಲಾಡಿದ ಸಿಓಡಿ ಪೊಲೀಸರು ಮೊಹಮ್ಮದ್ ಆಸೀಫನ `ಗುರು' ಡಾ.ಮಿರ್ಜಾ ಅಹ್ಮದ್ ಬೇಗ್ ಎಂಬಾತನ್ನು ಗುಲ್ಬರ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
2008: ಗಾಂಧಿವಾದಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಸೇವಕ ಮುರಳೀಧರ ದೇವಿದಾಸ್ ಅಲಿಯಾಸ್ ಬಾಬಾ ಆಮ್ಟೆ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆಯನ್ನು ಮಹಾರಾಷ್ಟ್ರದ ವರೋರದಲ್ಲಿರುವ ಆನಂದವನ ಆಶ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಹಾಗೂ ಅನುಯಾಯಿಗಳ ಸಮ್ಮುಖದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
2008: ಕರ್ನಾಟಕದ ಕ್ರೀಡಾ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಒಲಿಂಪಿಕ್ ಕ್ರೀಡಾಕೂಟವು ಈದಿನ ವರ್ಣರಂಜಿತ ತೆರೆಕಂಡಿತು. `ಇನ್ನೂ ಎತ್ತರ... ಗಗನದೆತ್ತರಕ್ಕೆ....' ಎಂಬ ಘೋಷವಾಕ್ಯದೊಂದಿಗೆ ಮಂಡ್ಯದಲ್ಲಿ ಫೆಬ್ರುವರಿ 5 ರಂದು ಆರಂಭಗೊಂಡ ಕ್ರೀಡಾ ಉತ್ಸವ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಕರ್ನಾಟಕ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರು `ಕ್ರೀಡಾಕೂಟ ಮುಕ್ತಾಯವಾಯಿತು' ಎಂದು ಘೋಷಿಸಿದರು.
2008: ಭಾರತ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸಂಪರ್ಕ ಪುನರಾರಂಭಗೊಂಡಿತು. ರಿಲಯನ್ಸ್ ಕಮ್ಯುನಿಕೇಷನ್ಸಿನ ಅಂಗಸಂಸ್ಥೆಯಾಗಿರುವ ಫ್ಲ್ಯಾಗ್ ಟೆಲಿಕಾಂ ತನ್ನ ಯುರೋಪ್- ಏಷ್ಯಾ ಕೇಬಲ್ ಹಾಗೂ ಫಾಲ್ಕನ್ ಕೇಬಲ್ ದುರಸ್ತಿಗೊಳಿಸಿರುವುದರಿಂದ ಇಂಟರ್ನೆಟ್ ಸಂಪರ್ಕ ಏರ್ಪಟ್ಟಿತು.
2008: ಕ್ವಾಲಾಲಂಪುರದ ಅಧಿಕಾರಿಗಳು ಇಲಿಗಳ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳೆಲ್ಲ ವಿಫಲವಾದ ಹಿನ್ನೆಲೆಯಲ್ಲಿ ಇಲಿಗಳನ್ನು ಹಿಡಿದರೆ ಅಥವಾ ಕೊಂದರೆ 0.62 ಅಮೆರಿಕ ಡಾಲರ್ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಸಾಯಿಸಿದ ಅಥವಾ ಜೀವಂತವಾಗಿ ಹಿಡಿದ ಇಲಿಗಳನ್ನು ನಾಗರಿಕರು ತಮ್ಮ ಮನೆಯ ಬಾಗಿಲಿನಲ್ಲಿ ಸಂಗ್ರಹಿಸಿಟ್ಟರೆ ನಗರಪಾಲಿಕೆ ಅವುಗಳನ್ನು ನಾಶಪಡಿಸುತ್ತದೆ ಹಾಗೂ ನಾಗರಿಕರಿಗೆ ಬಹುಮಾನದ ಮೊತ್ತವನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
2008: ಶ್ರೀನಗರ ಜಿಲ್ಲೆಯ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸರು ಹಿಜ್ ಬುಲ್ ಮುಜಾಹಿದ್ದೀನಿನ ಸ್ವಯಂಘೋಷಿತ ಉನ್ನತ ಕಮಾಂಡರ್ ಮತ್ತು ಆತನ ಸಹಚರನನ್ನು ಗುಂಡಿಟ್ಟು ಕೊಂದರು. ಇದರಿಂದ ಮುಜಾಹಿದ್ದೀನ್ ಸಂಘಟನೆಗೆ ಹಿನ್ನಡೆಯಾದಂತಾಯಿತು.
2007: ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ಜಸ್ಟೀಸ್ ಜಗದೀಶ್ ಭಲ್ಲಾ ಅವರಿಗೆ ಕೇರಳ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಕೈಗೊಂಡ ನಿರ್ಣಯವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಇದಕ್ಕೆ ಸಂಬಂಧಪಟ್ಟ ಕಡತವನ್ನು ಪ್ರಧಾನಿ ಕಚೇರಿಗೆ ಹಿಂದಕ್ಕೆ ಕಳುಹಿಸಿದರು. ಕೆಲವು ತಿಂಗಳುಗಳ ಹಿಂದೆ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕಡತವನ್ನೂ ರಾಷ್ಟ್ರಪತಿ ಹಿಂದಕ್ಕೆ ಕಳುಹಿಸಿದ್ದರು. ನೋಯ್ಡಾದಲ್ಲಿ ಅತ್ಯಂತ ಕಡಿಮೆ ಹಣಕ್ಕೆ ಆಸ್ತಿಯೊಂದನ್ನು ಭಲ್ಲಾ ಅವರ ಪತ್ನಿ ರೇಣು ಭಲ್ಲಾ ಹೆಸರಿನಲ್ಲಿ ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾದ ಹಿನ್ನೆಲಯಲ್ಲಿ ರಾಷ್ಟ್ರಪತಿ ಈ ಕ್ರಮ ಕೈಗೊಂಡರು.
2007: ವಿವಾದಾತ್ಮಕ ಟೆಲಿವಿಷನ್ ಚಾನೆಲ್ ಫೊರ್ ನ `ಸಿಲೆಬ್ರಿಟಿ ಬಿಗ್ ಬ್ರದರ್' ಪ್ರದರ್ಶನದಲ್ಲಿ ವಿಜೇತರಾದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸಾದರು. ಮುಂಬೈಗೆ ಬಂದಿಳಿದ ಶಿಲ್ಪಾಶೆಟ್ಟಿ ಅವರು ಸಿಲೆಬ್ರಿಟಿ ಬಿಗ್ ಬ್ರದರ್ ಪ್ರದರ್ಶನ ಕಾಲದಲ್ಲಿ ಸಹನಟಿ ಜೇಡ್ ಗೂಡಿ ಮತ್ತು ಇತರರಿಂದ ವರ್ಣ ತಾರತಮ್ಮಯ ದೂಷಣೆಗೆ ಗುರಿಯಾಗಿದ್ದರೆಂಬ ಆಪಾದನೆಗಳು ಕೇಳಿಬಂದು, ಇಡೀ ಪ್ರದರ್ಶನ ಕುತೂಹಲಿಗಳು ಹಾಗೂ ಟೀಕಾಕಾರರ ಕೇಂದ್ರವಾಗಿತ್ತು.
2007: ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾನ್ ಕಿ ಮೂನ್ ಅವರು ಇದೇ ಮೊದಲ ಬಾರಿಗೆ ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳ ನೇಮಕ ಬಗ್ಗೆ ಗಮನ ಹರಿಸಿ, ಜಪಾನಿನ ಕಿಯೋತಕ್ ಅಕಾಸಾಕಾ ಅವರನ್ನು ಆಧೀನ ಮಹಾಕಾರ್ಯದರ್ಶಿಯನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಶಿ ತರೂರ್ ಸ್ಥಾನಕ್ಕೆ ನೇಮಿಸಿದರು.
2007: ಹೆಸರಾಂತ ಪರಿಸರ ತಜ್ಞ ಕೃಷ್ಣ ನಾರಾಯಣ್ (48) ಅವರು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದರು. ಕೆಎನ್ ಎಂದೇ ಪರಿಚಿತರಾಗಿದ್ದ ಅವರು ಬೆಂಗಳೂರು ಮೂಲದ `ವೈಲ್ಡ್ ಲೈಫ್ ಪ್ರಿಸರ್ವೇಶನ್ ಗ್ರೂಪ್' (ಡಬ್ಲ್ಯೂ ಎಲ್ ಪಿಇಜಿ) ಸಹ ಸಂಸ್ಥಾಪಕರಾಗಿದ್ದರು. ಪರಿಸರ ತಜ್ಞ ಉಲ್ಲಾಸ ಕಾರಂತ ಮತ್ತಿತರರ ಜೊತೆಗೆ ವನ್ಯಜೀವಿ ಸಂರಕ್ಷಣೆಯ ಕಾರ್ಯ ನಿರ್ವಹಿಸುತ್ತಿದ್ದರು.
2006: ಬೆಂಗಳೂರು ಆನಂದರಾವ್ ವೃತ್ತದ ಸಂಚಾರ ದಟ್ಟಣೆ ಕುಗ್ಗಿಸುವ ಯತ್ನವಾಗಿ ಆನಂದರಾವ್ ವೃತ್ತ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಚಾರಕ್ಕೆ ಮುಕ್ತಗೊಳಿಸಿದರು. 647 ಮೀಟರ್ ಉದ್ದ, 17.60 ಮೀಟರ್ ಅಗಲದ ಈ ಮೇಲ್ಸೇತುವೆಗೆ ಆದ ವೆಚ್ಚ 27 ಖೋಟಿ ರೂಪಾಯಿ.
2006: ದೇಶದ ಯಾವುದೇ ಭಾಗಕ್ಕೆ ಮಾಡುವ ಸ್ಥಿರ ದೂರವಾಣಿಯ ಮತ್ತು ಮೊಬೈಲ್ ಕರೆಗಳ ದರಗಳು ಮಾರ್ಚ್ 1ರಿಂದ ಕೇವಲ 1 ರೂಪಾಯಿ ಆಗುವುದು. ಹೊಸ ಒನ್ ಇಂಡಿಯಾ ಯೋಜನೆಯ ಅಡಿ ದೇಶಾದ್ಯಂತ ಎಸ್ ಟಿ ಡಿ ಕರೆ ದರ 1 ರೂಪಾಯಿ ಎಂದು ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ನಿಯಮಿತ (ಎಂ ಟಿ ಎನ್ ಎಲ್) ಜಂಟಿಯಾಗಿ ಪ್ರಕಟಿಸಿದವು.
2006: ವಿಜಾಪುರದಲ್ಲಿರುವ ರಾಷ್ಟ್ರದ ಎರಡನೇ ಅತಿ ಎತ್ತರದ ಶಿವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಈ ದಿನ ಡಾ. ಚಂದ್ರಶೇಖರ ಶಿವಾಚಾರ್ಯರು ನೆರವೇರಿಸಿದರು. ಈ ಮೂರ್ತಿ 2007 ಫೆಬ್ರವರಿ 26ರ ಶಿವರಾತ್ರಿಯಂದು ಅನಾವರಣಗೊಂಡಿತು. ಉದ್ಯಮಿ ಬಸಂತಕುಮಾರ ಪಾಟೀಲ ಮತ್ತು ಸಹೋದರರು ವಿಜಾಪುರ ಹೊರವಲಯದ ಉಕ್ಕಲಿ ರಸ್ತೆಯ ಬಸಂತವನದಲ್ಲಿ 85 ಅಡಿ ಎತ್ತರದ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ. ಮುರ್ಡೇಶ್ವರಲ್ಲಿ ಇರುವ 120 ಅಡಿಯ ಮೂರ್ತಿ ಭಾರತದ ಅತೀ ಎತ್ತರದ ಶಿವಮೂರ್ತಿ ಎಂಬ ಕೀರ್ತಿ ಹೊಂದಿದೆ.
2006: ಲಖನೌನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಕನ್ನಡಿಗ ಇಸ್ರೊ ಮಾಜಿ ಅಧ್ಯಕ್ಷ ಪ್ರೊ. ಯು.ಆರ್. ರಾವ್ ನೇಮಕಗೊಂಡರು.
1963: ಕಲಾವಿದ ಮಂಜುನಾಥ ಬಿ.ಟಿ. ಜನನ.
1952: ಮದ್ರಾಸಿನಲ್ಲಿ (ಈಗಿನ ಚೆನ್ನೈ) ಇಂಗ್ಲೆಂಡನ್ನು ಸೋಲಿಸುವ ಮೂಲಕ ಭಾರತವು ತನ್ನ ಮೊತ್ತ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿತು. ವಿಜಯ ಹಜಾರೆ ನೇತೃತ್ವದಲ್ಲಿ ಭಾರತ ತಂಡವು ಒಂದು ಇನ್ನಿಂಗ್ಸ್ ಮತ್ತು 8 ರನ್ನುಗಳ ಜಯ ಸಾಧಿಸಿತು. 55 ರನ್ನುಗಳಿಗೆ 8 ವಿಕೆಟ್ ಪಡೆದ ವಿನೂ ಮಂಕಡ್ ಅತ್ಯುತ್ತಮ ಬೌಲಿಂಗ್ ಸಾಧನೆ ಮಾಡಿದರು.
1950: ಅಮೆರಿಕಾದ ಈಜುಗಾರ ಮಾರ್ಕ್ ಸ್ಪಿಟ್ಜ್ ಹುಟ್ಟಿದರು. ಇವರು ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 7 ಸ್ವರ್ಣಪದಕಗಳನ್ನು ಗಿದ್ದುಕೊಂಡ ಮೊದಲ ಅಥ್ಲೆಟಿಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1950: ಕಲಾವಿದ ನಂಜುಂಡಸ್ವಾಮಿ ತೊಟ್ಟವಾಡಿ ಜನನ.
1932: ಬ್ರಿಟಿಷ್ ಥ್ರಿಲ್ಲರ್ ಬರಹಗಾರ ಎಡ್ಗರ್ ವಾಲೇಸ್ (1875-1932) ತಮ್ಮ 56ನೇ ವಯಸ್ಸಿನಲ್ಲಿ ನಿಧನರಾದರು.
1931: ನವದೆಹಲಿಯು ಭಾರತದ ರಾಜಧಾನಿಯಾಗಿ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. 1912ರಲ್ಲಿ ರಾಜಧಾನಿಯು ಕಲ್ಕತ್ತಾದಿಂದ (ಈಗಿನ ಕೋಲ್ಕತ) ದೆಹಲಿಗೆ ಸ್ಥಳಾಂತರಗೊಂಡಿತ್ತು.
1929: ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಜೆ. ಆರ್. ಡಿ. ಟಾಟಾ ಅವರಿಗೆ `ಪೈಲೆಟ್ಸ್ ನಂಬರ್ ಒನ್' ನೀಡಲಾಯಿತು. ಭಾರತ ಮತ್ತು ಬರ್ಮಾದ ಏರೋಕ್ಲಬ್ ಪರವಾಗಿ ಸರ್ ವಿಕ್ಟರ್ ಸಸೂನ್ ಸಹಿ ಮಾಡಿದ ಈ ದಾಖಲೆಯನ್ನು ಫೆಡರೇಷನ್ ಏರೋನಾಟಿಕ್ ಇಂಟರ್ ನ್ಯಾಷನಲ್ ನೀಡಿತು. ಜೆ. ಆರ್. ಡಿ. ಟಾಟಾ ಅವರ ಸಹೋದರಿ ಸ್ಲಿಲಾ (ಮುಂದೆ ಲೇಡಿ ದಿನ್ಶಾ ಪೆಟಿಟ್) ಭಾರತದಲ್ಲಿ ವಿಮಾನಯಾನದ ಲೈಸೆನ್ಸ್ ಪಡೆದ ಮೊತ್ತ ಮೊದಲ ಮಹಿಳೆಯಾಗಿದ್ದಾರೆ. ಅವರ ಕಿರಿಯ ಸಹೋದರಿ ರೋಡಾಬೆಹ್ ಸಾಹನಿ ಭಾರತದಲ್ಲಿ ವಿಮಾನಯಾನ ಲೈಸೆನ್ಸ್ ಪಡೆದ ಎರಡನೇ ಮಹಿಳೆ.
1925: ರಂಗಭೂಮಿ ನಾಟಕನಟರಷ್ಟೇ ಖಳನಾಯಕರಿಗೂ ಪ್ರಾಮುಖ್ಯತೆ ತಂದುಕೊಟ್ಟ ವೃತ್ತಿ ರಂಗಭೂಮಿ ಕಲಾವಿದ ಎಚ್.ಟಿ. ಅರಸ್ ಅವರು ಯಮನಯ್ಯ- ನಾಗಮ್ಮ ದಂಪತಿಯ ಮಗನಾಗಿ ರಾಯಚೂರು ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಬಡ ನೇಕಾರರ ಕುಟುಂಬದಲ್ಲಿ ಜನಿಸಿದರು. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ, ಗೋಕಾಕ್ ಕಂಪೆನಿ, ಶಾರದಾ ನಾಟಕ ಮಂಡಳಿ, ಹಲಗೇರಿ ಜಟ್ಟಪ್ಪ ಕಂಪೆನಿ, ತಾವೇ ಸ್ಥಾಪಿಸಿದ್ದ ನಾಟಕ ಕಂಪೆನಿಗಳಲ್ಲಿ ದುಡಿದ ಅರಸ್ ಮುಂದೆ ಚಿನ್ನದ ಗೊಂಬೆ, ಶ್ರೀಕೃಷ್ಣ ದೇವರಾಯ, ಮಾರ್ಗದರ್ಶಿ, ಮೇಯರ್ ಮುತ್ತಣ್ಣ, ಮಯೂರ ಸೇರಿದಂತೆ 55 ಚಲನಚಿತ್ರಗಳಲ್ಲಿ ನಟಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಪಾತ್ರರಾದರು.
1921: ಕನ್ನಾಟ್ನ ಡ್ಯೂಕ್ ನವದೆಹಲಿಯಲ್ಲಿ `ಇಂಡಿಯಾಗೇಟ್' ಗೆ ಅಡಿಗಲ್ಲು ಹಾಕಿದರು.
1840: ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್ ಆಲ್ಬರ್ಟ್ ಅವರ ಮದುವೆ ಸೇಂಟ್ ಜೇಮ್ಸ್ ಪ್ಯಾಲೇಸಿನಲ್ಲಿ ನಡೆಯಿತು.
1775: ಇಂಗ್ಲಿಷ್ ಪ್ರಬಂಧಕಾರ ಮತ್ತು ವಿಮರ್ಶಕ ಚಾರ್ಲ್ಸ್ ಲ್ಯಾಂಬ್ (1775-1834) ಹುಟ್ಟಿದ ದಿನ.
No comments:
Post a Comment