ನಾನು ಮೆಚ್ಚಿದ ವಾಟ್ಸಪ್

Monday, February 11, 2019

ಇಂದಿನ ಇತಿಹಾಸ History Today ಫೆಬ್ರುವರಿ 11

ಇಂದಿನ ಇತಿಹಾಸ History Today ಫೆಬ್ರುವರಿ 11
2019: ಪಾಟ್ನಾ: ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗಳ ಬಳಿಕ ಪ್ರಧಾನಿಯಾಗಿ ಮರಳಿ ಬರಲಿದ್ದಾರೆ ಎಂದು ಜೆಡಿ(ಯು) ರಾಷ್ಟ್ರೀಯ ಉಪಾಧ್ಯಕ್ಷ, ಚುನಾವಣಾ ವ್ಯೂಹ ಚತುರ ಪ್ರಶಾಂತ ಕಿಶೋರ್ ಅವರು ಭವಿಷ್ಯ ನುಡಿದರು. ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಗದೇ ಹೋದ ಸಂದರ್ಭದಲ್ಲೂ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್ಡಿಎಯಲ್ಲಿ ದೊಡ್ಡ ನಾಯಕನಾಗಿದ್ದರೂ ಅವರನ್ನು ಉನ್ನತ ಹುದ್ದೆಗೆ ಪ್ರತಿಪಾದಕ ಎಂಬುದಾಗಿ ನೋಡುವುದು ನ್ಯಾಯೋಚಿತವಲ್ಲ ಎಂದು ಅವರು ಹೇಳಿದರುಕಳೆದ ಸೆಪ್ಟೆಂಬರಿನಲ್ಲಿ ಜೆಡಿ(ಯು) ಸೇರಿದ ಕಿಶೋರ್ ಅವರು ಇತ್ತೀಚೆಗಿನ ಮುಂಬೈ ಭೇಟಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮುಂಬೈಯಲ್ಲಿ ಅವರು ಇತ್ತೀಚಿನ ದಿನಗಳಲ್ಲಿ ಮೋದಿ ನಾಯಕತ್ವವನ್ನು ಟೀಕಿಸುತ್ತಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವ ಮೂಲಕ ಊಹಾಪೋಹಗಳನ್ನು ಹುಟ್ಟು ಹಾಕಿದ್ದರು. ಬಕ್ಸಾರ್ ಜಿಲ್ಲೆಯ ನಿವಾಸಿಯಾದ ಕಿಶೋರ್ ೨೦೧೪ರಲ್ಲಿ ಆಗಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ನಿರ್ವಹಣೆ ಮಾಡುವ ಮೂಲಕ ಖ್ಯಾತಿ ಪಡೆದಿದ್ದರು. ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆಯನ್ನು ತೋರಿಸಿತ್ತು. ವರ್ಷದ ಬಳಿಕ ಅವರು ನಿತೀಶ್ ಕುಮಾರ್ ಜೊತೆಗೂಡಿದ್ದರು. ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಕುಮಾರ್ ಅವರು ಸತತ ಮೂರನೇ ಅವಧಿಗೆ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದರು. ನಾನು ಶಿವಸೇನಾ ಮುಖ್ಯಸ್ಥರನ್ನು ಅವರ ಆಹ್ವಾನದ ಮೇರೆಗೆ ಭೇಟಿ ಮಾಡಿದ್ದೆ. ಪಕ್ಷವು ಎನ್ಡಿಎ ಅಂಗಪಕ್ಷವಾಗಿದೆ ಮತ್ತು ನಮ್ಮ ನಡುವೆ (ಠಾಕರೆ ಮತ್ತು ಕಿಶೋರ್) ಎನೂ ನಡೆದಿಲ್ಲ. ಚುನಾವಣೆಯಲ್ಲಿ ಅವರಿಗೆ ನಾನು ನೆರವಾಗುತ್ತೇನೆ ಎಂಬುದೆಲ್ಲ ತಲೆಬುಡವಿಲ್ಲದ ಊಹಾಪೋಹಗಳು. ಈಗ ನಾನು ಪಕ್ಷ ಒಂದರ ಸದಸ್ಯನಾಗಿದ್ದು ರೀತಿ ವೃತ್ತಿ ಸಂಬಂಧಿತ ನೆರವು ನೀಡಲು ಸಾಧ್ಯವಿಲ್ಲ ಎಂದು ಕಿಶೋರ್ ಹೇಳಿದರು. ನಿತೀಶ್ ಕುಮಾರ್ ಅವರು ಪ್ರಧಾನಿಯಾಗುವ ಮತ್ತು ಬಿಜೆಪಿಗೆ ಸಾಕಷ್ಟು ಸಂಖ್ಯೆ ಲಭಿಸದೇ ಹೋದರೆ ಉಪಪ್ರಧಾನಿಯಾಗುವ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ, ’ಅಂತಹ ಯಾವ ಮಾತುಕತೆಯೂ ನಡೆದಿಲ್ಲ. ಕುಮಾರ್ ದೊಡ್ಡ ನಾಯಕರು. ಬಿಹಾರದಂತಹ ದೊಡ್ಡ ರಾಜ್ಯವನ್ನು ೧೫ ವರ್ಷ ಕಾಲ ಆಳಿದ ಯಾರೇ ಆದರೂ ಸಾಕಷ್ಟು ವರ್ಚಸ್ಸು ಹೊಂದಿರುತ್ತಾರೆ. ಆದರೆ ಅವರು ಪ್ರಧಾನಿ ಹುದ್ದೆಗೆ ಪ್ರತಿಪಾದಕ ಎಂಬುದಾಗಿ ಹೇಳುವುದು ನ್ಯಾಯೋಚಿತವಲ್ಲ ಎಂದು ಕಿಶೋರ್ ನುಡಿದರು.  ‘ನರೇಂದ್ರ ಮೋದಿ ಅವರು ಎನ್ಡಿಎಯ ಪ್ರಧಾನಿ ಅಭ್ಯರ್ಥಿ ಮತ್ತು ಅವರು ಪ್ರಧಾನಿಯಾಗಿ ಮತ್ತೆ ಬರುತ್ತಾರೆ. ನಿತೀಶ್ ಕುಮಾರ್ ಅವರಿಗೆ ನಿರ್ವಹಿಸಬೇಕಾದ ಪಾತ್ರ ಇರುತ್ತದೆ ಎಂಬುದು ಖಚಿತ. ಎನ್ಡಿಎಯಲ್ಲಿ ಬಿಜೆಪಿ, ಶಿವಸೇನೆಯ ಬಳಿಕದ ಮೂರನೇ ದೊಡ್ಡ ಪಕ್ಷ ಜೆಡಿ(ಯು). ಇದಕ್ಕಿಂತ ಹೆಚ್ಚಿನದೇನನ್ನೂ ಹೇಳಲಾಗದು ಎಂದು ಕಿಶೋರ್ ಹೇಳಿದರು.

2019: ಜೈಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಅವರು ಬಿಕನೀರ್ ಜಿಲ್ಲೆಯ ಕೊಲಾಯತ್ ಉಪವಿಭಾಗದಲ್ಲಿನ ೨೭೫ ಎಕರೆಗೆ ಸಂಬಂಧಿಸಿದ ಭೂ ಹಗರಣಕ್ಕೆ ಸಂಬಂಧಿಸಿದ ತನಿಖೆ ಸಲುವಾಗಿ ಜೈಪುರ ಜಾರಿ ನಿರ್ದೇಶನಾಲಯ ಕಚೇರಿಗೆ ತಮ್ಮತಾಯಿ ಮೌರೀನ್ ಜೊತೆಗೆ ಹಾಜರಾದರು. ವಾದ್ರಾ ಮತ್ತು ಅವರ ತಯಿ ಮೌರೀನ್ ಅವರನ್ನು ಪ್ರಶ್ನಿಸಿದ ಜಾರಿ ನಿರ್ದೇಶನಾಲಯವು ಮಂಗಳವಾರ ಪುನಃ ತನಿಖೆಯನ್ನು ಮುಂದುವರೆಸಲಿದೆ. ವಾದ್ರಾ ಅವರು ಜಾರಿ ನಿರ್ದೇಶನಾಲಯವು ಸಿದ್ಧ ಪಡಿಸಿದ ೫೫ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಮೂಲಗಳು ಹೇಳಿದವು. ಕಳೆದ ವಾರ ದೆಹಲಿಯಲ್ಲಿ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯವು ವಿದೇಶಗಳಲ್ಲಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದರಲ್ಲಿ ವಹಿಸಿದ ಪಾತ್ರಕ್ಕಾಗಿ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತೀವ್ರವಾಗಿ ಪ್ರಶ್ನಿಸಿತ್ತು. ವಾದ್ರಾ ಅವರ ಪತ್ನಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉತ್ತರ ಪ್ರದೇಶ ಪೂರ್ವ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಜೈಪುರಕ್ಕೆ ರಾತ್ರಿ ಆಗಮಿಸಿ, ಜಾರಿ ನಿರ್ದೇಶನಾಲಯಕ್ಕೆ ಹಾಜರಾಗುವಾಗ ಜೊತೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದವು. ರಾಜಸ್ಥಾನ ಹೈಕೋರ್ಟ್ ವಾದ್ರಾ ಮತ್ತು ಅವರ ತಾಯಿಗೆ ಜಾರಿ ನಿರ್ದೇಶನಾಲಯದ ಜೊತೆ ಸಹಕರಿಸುವಂತೆ ನಿರ್ದೇಶನ ನೀಡಿದ ಬಳಿಕ ಜಾರಿ ನಿರ್ದೇಶನಾಲಯವು ಹೊಸದಾಗಿ ಸಮನ್ಸ್ ಕಳುಹಿಸಿತ್ತು. ಇದಕ್ಕೆ ಮುನ್ನ ಭೂ ಹಗಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮೂರು ಬಾರಿ ಸಮನ್ಸ್ ಕಳುಹಿಸಿದ್ದರೂ ವಾದ್ರಾ ಅವರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿರಲಿಲ್ಲಹಣವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ ) ಅಡಿಯಲ್ಲಿ ವಾದ್ರಾ ಮತ್ತು ಅವರ ತಾಯಿಯ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಮೂಲಗಳು ಹೇಳಿವೆಭೂ ಮಂಜೂರಾತಿಯಲ್ಲಿನ ಫೋರ್ಜರಿ ಆಪಾದನೆಗೆ ಸಂಬಂಧಿಸಿದಂತೆ ಬಿಕನೀರ್ ತಹಸಿಲ್ದಾರರು ನೀಡಿದ ದೂರನ್ನು ಅನುಸರಿಸಿ ರಾಜಸ್ಥಾನ ಪೊಲೀಸರು ಸಲ್ಲಿಸಿದ್ದ ಎಫ್ಐಆರ್ ಮತ್ತು ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಅಧ್ಯಯನದ ಬಳಿಕ ಬಿಕನೀರ್ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ೨೦೧೫ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.  ವಾದ್ರಾ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿರುವ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಕುರಿತಂತೆ ಅವರನ್ನು ಪ್ರಶ್ನಿಸಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ಹೇಳಿದ್ದವು. ಸ್ಕೈಲೈಟ್ ಸಂಸ್ಥೆಯು ಪ್ರದೇಶದ ಭೂಮಿಯನ್ನು ಖರೀದಿಸಿತ್ತು.

2019: ನವದೆಹಲಿ: ಪಕ್ಷದ ನಿಧಿಗೆ ತಲಾ ೧೦೦೦ ರೂಪಾಯಿ ದೇಣಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರುಪಕ್ಷವು ಕಾರ್ಯಕರ್ತರ ಹಣವನ್ನೇ ಅವಲಂಬಿಸಬೇಕು ಹೊರತುಹಣದ ಚೀಲವನ್ನಲ್ಲ ಎಂಬ ಸಂದೇಶವನ್ನು ಪಕ್ಷಕ್ಕೆ ರವಾನಿಸಿದರು. ಪಕ್ಷವನ್ನು ನಡೆಸಲುಹಣದ ಚೀಲ ಅವಲಂಬನೆಯನ್ನು ಕಡಿಮೆಗೊಳಿಸಬೇಕು ಎಂಬುದನ್ನು ಪ್ರತಿಪಾದಿಸಿದ ಅಮಿತ್ ಶಾ ಅವರುಚುನಾವಣಾ ನಿಧಿ ಸಂಗ್ರಹದಲ್ಲಿ ಪಾವಿತ್ರ್ಯವನ್ನು ತರುವಲ್ಲಿ ಪಕ್ಷದ ಕಾರ್ಯಕರ್ತರು ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು. ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಿ ದೀನದಯಾಳ್ ಉಪಾಧ್ಯಾಯ ಅವರ ೫೧ನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಮಾತನಾಡಿದ ಶಾ, ’ಪ್ರಾಮಾಣಿಕತೆಯ ಮಾರ್ಗದಲ್ಲಿ ಸಾಗುವ ನಿಟ್ಟಿನಲ್ಲಿ ಇತರರಿಗೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆಯನ್ನು ಬಿಜೆಪಿಯು ತೆಗೆದುಕೊಳ್ಳಬೇಕು ಎಂದು ನುಡಿದರುಪಕ್ಷವು ಅದರ ಕಾರ್ಯಕರ್ತರು ನೀಡುವ ದೇಣಿಗೆಯಿಂದ ನಡೆಯಬೇಕು ಹೊರತು ಹಣದ ಚೀಲಗಳು, ಕಟ್ಟಡ ನಿರ್ಮಾಣಗಾರರು, ಕಾಂಟ್ರಾಕ್ಟರ್ಗಳು ಮತ್ತು ಕಪ್ಪು ಹಣ ಹೊಂದಿದವರಿಂದಲ್ಲ ಎಂದು ಶಾ ಹೇಳಿದರು.  ಸಮಾರಂಭಕ್ಕೆ ಕೆಲವು ತಾಸು ಮುನ್ನ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರು ಪಕ್ಷದ ಫೋನ್ ಆಪ್ ಮೂಲಕ ಪಕ್ಷಕ್ಕೆ ತಲಾ ೧೦೦೦ ರೂಪಾಯಿಗಳನ್ನು ಪಾವತಿ ಮಾಡಿ, ಇತರಿಗೂ ಇದನ್ನು ಅನುಸರಿಸುವಂತೆ ಕೋರಿದ್ದರು. ‘ಪಕ್ಷಕ್ಕೆ ದೇಣಿಗೆ ನೀಡುವಂತೆ ನಿಮ್ಮೆಲ್ಲರನ್ನೂ ಆಗ್ರಹಿಸುತ್ತಿದ್ದೇವೆ. ಹೀಗೆ ಮಾಡಲು ನಮೊ ಆಪ್ ಅತ್ಯಂತ ಸುಲಭವಾದ ಮಾರ್ಗ. ನಾನು ಕೂಡಾ ನನ್ನ ಕಾಣಿಕೆಯನ್ನು ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು.  ‘ನಾವು ಪಕ್ಷವನ್ನು ನಮ್ಮ ಹಣದಿಂದ ನಡೆಸುತ್ತೇವೆ, ಯಾರೇ ಕೈಗಾರಿಕೋದ್ಯಮಿ, ಕಾಂಟ್ರಾಕ್ಟರ್, ಹಣದ ಥೈಲಿ ಅಥವಾ ಕಟ್ಟಡ ನಿರ್ಮಾಣಗಾರರ (ಬಿಲ್ಡರ್) ಹಣದಿಂದ ಅಲ್ಲ ಎಂಬುದಾಗಿ ಬಿಜೆಪಿ ಕಾರ್ಯಕರ್ತರು ಗರ್ವದಿಂದ ಹೇಳಬೇಕು ಅಮಿತ್ ಶಾ ನುಡಿದರು. ತನ್ನ ಎಲ್ಲ ಸಾಂಸ್ಥಿಕ ಮತ್ತು ಚುನಾವಣಾ ವೆಚ್ಚಗಳನ್ನು ಪಕ್ಷ ಕಾರ್ಯಕರ್ತರ ದೇಣಿಗೆಯಿಂದಲೇ ನಿರ್ವಹಿಸಲಾಗುವುದು ಎಂದು ಹೇಳಲಾಗದು. ಆದರೆ, ಇದು ಬದಲಾಗಬೇಕು ಎಂದು ಬಿಜೆಪಿ ಅಧ್ಯಕ್ಷ ಒತ್ತಿ ಹೇಳಿದರುಗಳಿಕೆಯು ಶುದ್ಧವಾಗಿ ಇಲ್ಲದೇ ಇದ್ದಲ್ಲಿ, ನಮ್ಮ ಗುರಿಗಳನ್ನು ನಾವು ಉತ್ತಮ ಮಾರ್ಗದ ಮೂಲಕ ತಲುಪಲು ಸಾಧ್ಯವಿಲ್ಲ. ಪಕ್ಷವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕಾಗಿದ್ದರೆ ಗಳಿಕೆಯು ಶುದ್ಧವಾಗಿರಬೇಕು. ಪಕ್ಷವು ಹಣದ ಚೀಲಗಳು, ಬಿಲ್ಡರುಗಳು, ಕಾಂಟ್ರಾಕ್ಟರುಗಳು, ಕಾಳಧನ ಹೊಂದಿದವರ ಹಣದಿಂದ ನಡೆಯಲು ತೊಡಗಿದರೆ ಆಗ ಅದು ನಮ್ಮ ಗುರಿಸಾಧನೆಯ ಮಾರ್ಗವನ್ನು ಕಳಂಕಿತಗೊಳಿಸುತ್ತದೆ ಎಂದು ಶಾ ನುಡಿದರುಚುನಾವಣಾ ವೆಚ್ಚಗಳನ್ನು ಹೇಗೆ ಕಡಿಮೆಗೊಳಿಸಬಹುದು ಮತ್ತು ಚುನಾವಣಾ ನಿಧಿ ಸಂಗ್ರಹದಲ್ಲಿ ಪ್ರಾಮಾಣಿಕತೆಯನ್ನು ರೂಢಿಸಬಹುದು ಎಂಬ ಬಗ್ಗೆ ಬಹಿರಂಗ ಚರ್ಚೆಯಾಗಬೇಕು ಎಂದೂ ಅವರು ಕರೆ ನೀಡಿದರು.
ನಗದು ದೇಣಿಗೆಗಳ ಮಿತಿಯನ್ನು ,೦೦೦ ರೂಪಾಯಿಗಳಿಗೆ ಸೀಮಿತಗೊಳಿಸುವ ಮೂಲಕ ರಾಜಕೀಯದಲ್ಲಿ ಕಾಳಧನದ ಪ್ರಭಾವವನ್ನು ಕುಗ್ಗಿಸಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ನುಡಿದರುಭ್ರಷ್ಟಾಚಾರ ವಿರುದ್ಧದ ಕಾನೂನುಗಳನ್ನು  ಎಷ್ಟೊಂದು ಬಿಗಿಗೊಳಿಸಲಾಗಿದೆ ಎಂದರೆ ಅವುಗಳನ್ನು ಉಲ್ಲಂಘಿಸುವವರನ್ನು ಹಿಡಿದು ಹಾಕಲಾಗುತ್ತಿದೆ ಮತ್ತು  ಹಗರಣಗಳಲ್ಲಿ ಶಾಮೀಲಾದವರು ದೆಹಲಿಯ ಚಳಿಯಲ್ಲಿ ಕೂಡಾ ಬೆವರುತ್ತಿದ್ದಾರೆ ಎಂದು ಶಾ ಹೇಳಿದರುದೇಶಭ್ರಷ್ಟ ವಿಜಯ ಮಲ್ಯ ಮತ್ತು ನೀರವ್ ಮೋದಿ ರಾಷ್ಟ್ರದಿಂದ ಏಕೆ ಪರಾರಿಯಾಗಿದ್ದಾರೆ ಎಂದರೆ ಅವರಂತಹ ಆರೋಪಿಗಳನ್ನು ಸೆರೆಮನೆಗಳಿಗೆ ತಳ್ಳಲಾಗುತ್ತಿದೆ ಎಂದು ಶಾ ಪ್ರತಿಪಾದಿಸಿದರುಪಂಡಿತ ದೀನದಯಾಳ್ ಉಪಾಧ್ಯಾಯ ಅವರು ೧೯೧೬ರ ಸೆಪ್ಟೆಂಬರ್ ೨೫ರಂದು ಜನಿಸಿ, ೧೯೬೮ರ ಫೆಬ್ರುವರಿ ೧೧ರಂದು ಇಹಲೋಕ ತ್ಯಜಿಸಿದ್ದರು.

2019: ಲಕ್ನೋ:ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ದುರ್ಬಲ ಪಕ್ಷವಾಗಿ ಉಳಿಯಲು ಸಾಧ್ಯವಿಲ್ಲ. ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷವನ್ನು ಉತ್ತರ ಪ್ರದೇಶದಲ್ಲಿ ಪ್ರಬಲಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿ ಹೇಳಿದರುಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ಪ್ರಿಯಂಕಾ ಗಾಂಧಿ ಅವರ ಚೊಚ್ಚಲ ಭೇಟಿ ಮತ್ತು ರೋಡ್ ಶೋ ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಪಕ್ಷದ ಮಹತ್ವಾಕಾಂಕ್ಷೆಯನ್ನು ಪ್ರಕಟಿಸಿದರು. ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಅವರ ಔಪಚಾರಿಕ ಪ್ರವೇಶದ ಸಲುವಾಗಿ ನಡೆದ ರೋಡ್ ಶೋದಲ್ಲಿ ತಮ್ಮ ದೂರದೃಷ್ಟಿಯನ್ನು ಪ್ರಕಟಿಸಿದ ರಾಹುಲ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿನ ಗೆಲುವಷ್ಟೇ ಅಲ್ಲ, ಪಕ್ಷವು ಉತ್ತರ ಪ್ರದೇಶದಲ್ಲಿ ಮರಳಿ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಬೇಕಾಗಿದೆ ಎಂದು ಹೇಳಿದ ಅವರು, ಲೋಕಸಭೆಗೆ ೮೦ ಸದಸ್ಯರನ್ನು ಕಳುಹಿಸುವ ಉತ್ತರ ಪ್ರದೇಶದಲ್ಲಿ ಪಕ್ಷವು ಸ್ವಂತ ಬಲದಿಂದಲೇ ಹೋರಾಡುವುದು ಎಂದು ಪುನರುಚ್ಚರಿಸಿದರುಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಈಗಾಗಲೇ ಮಹಾಮೈತ್ರಿ ರಚಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಅದರಿಂದ ಹೊರಗೆ ಇಟ್ಟಿವೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಕ್ಷೇತ್ರಗಳಾದ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ತಾವು ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಎಂದು ಪ್ರಕಟಿಸಿದ್ದವುಮಾಯಾವತಿ ಮತ್ತು ಅಖಿಲೇಶ್ ಯಾದವ್ ಬಗ್ಗೆ ನನಗೆ ಗೌರವ ಇದೆ. ಆದರೆ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ಪೂರ್ಣ ಬಲದ ಹೋರಾಟ ನಡೆಸುವುದು ಎಂದು ರಾಹುಲ್ ಹೇಳಿದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ರಫೇಲ್ ವಿಷಯವನ್ನೂ ಉಲ್ಲೇಖಿಸಿ ಪ್ರಧಾನಿ ವಿರುದ್ಧ ರಾಹುಲ್ ಹರಿಹಾಯ್ದರು. ಪ್ರಧಾನಿ ರೈತರನ್ನು ನಿರ್ಲಕ್ಷಿಸಿ ಉದ್ಯಮಿಗಳತ್ತ ಒಲವು ತೋರುತ್ತಿದ್ದಾರೆ ಎಂದು ಅವರು ಟೀಕಿಸಿದರು.


2019: ನವದೆಹಲಿ: ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಇಡೀ ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ಅವಕಾಶವನ್ನು ಬಳಸಿಕೊಂಡ ವಿವಿಧ ವಿರೋಧ ಪಕ್ಷಗಳು ಪ್ರತಿಭಟನಾ ತಾಣಕ್ಕೆ ಭೇಟಿ ನೀಡಿ ಅವರನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದವುಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಕ್ ಅಬ್ದುಲ್ಲ, ಎನ್ಸಿಪಿಯ ಮಜೀದ್ ಮೆಮನ್, ತೃಣಮೂಲ ಕಾಂಗೆಸ್ ನಾಯಕ ಡೆರೆಕ್ ಬ್ರಿಯನ್, ಡಿಎಂಕೆಯ ತಿರುಚಿ ಶಿವ ಮತ್ತು ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತಿತರರು ಟಿಡಿಪಿ ಮುಖ್ಯಸ್ಥನನ್ನು ಭೇಟಿ ಮಾಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿದರು. ೨೦೧೪ರಲ್ಲಿ ಆಂಧ್ರ ಪ್ರದೇಶವನ್ನು ವಿಭಜಿಸಿದ ಸಂದರ್ಭದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಟಿಡಿಪಿ ಅಧ್ಯಕ್ಷ ನಾಯ್ಡು ಒತ್ತಾಯಿಸಿದರು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸುವ ಮೂಲಕ ಪ್ರಧಾನಿ ಮೋದಿಯವರುರಾಜಧರ್ಮವನ್ನು ಪಾಲಿಸಲು ನಿರಾಕರಿಸುತ್ತಿದ್ದಾರೆ ಎಂದು ನಾಯ್ಡು ಆಪಾದಿಸಿದರು.  ‘ಪ್ರಧಾನಿಯವರು ಆಂಧ್ರಪ್ರದೇಶದ ಜನರಿಂದ ಕದ್ದು ಅದನ್ನು ತಮ್ಮ ಕೈಗಾರಿಕಾ ಮಿತ್ರರಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಅವರು  ನಾಯ್ಡು ನಿರಶನತಾಣವಾದ ಆಂಧ್ರ ಪ್ರದೇಶ ಭವನದಲ್ಲಿ ಫ್ರಾನ್ಸಿನಿಂದ ರಫೇಲ್ ಯುದ್ಧ ವಿಮಾನ ಖರೀದಿ ವಹಿವಾಟನ್ನು ಉಲ್ಲೇಖಿಸುತ್ತಾ ಹೇಳಿದರು.  ಸರ್ಕಾರ ಮತ್ತು ಅಂಬಾನಿ ಅವರು ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ರಾಹುಲ್ ಗಾಂಧಿ ಮಾಡಿದ ಆಪಾದನೆಯನ್ನು ತಿರಸ್ಕರಿಸಿದರು.  ಒಬ್ರಿಯನ್ ಅವರು ಮೋದಿ ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದರು. ಪ್ರಧಾನಿಯವರು ವಿಶೇಷ ಸ್ಥಾನಮಾನ ಅಥವಾ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ, ಬದಲಿಗೆವೈಯಕ್ತಿಕ ದಾಳಿಯನ್ನು ಆರಂಭಿಸಿದರು. ಗಾಜಿನ ಮನೆಗಳಲ್ಲಿ ವಾಸವಾಗಿರುವವರು ಇತರರ ಮೇಲೆ ಕಲ್ಲೆಸೆಯಬಾರದು ಎಂದು ಬ್ರಿಯನ್ ನುಡಿದರುಪ್ರಧಾನಿಯವರು ತಮ್ಮ ರ್ಯಾಲಿಯಲ್ಲಿನಾಯ್ಡು ಅವರು ಖಂಡಿತವಾಗಿ ಹಿರಿಯ, ಆದರೆ ಚುನಾವಣೆಗಳಲ್ಲಿ ಸೋಲುವುದರಲ್ಲಿ, ಮೈತ್ರಿಗಳನ್ನು ಬದಲಾಯಿಸುವುದರಲ್ಲಿ ಮತ್ತು ತಮ್ಮ ಮಾವ ಎನ್ ಟಿ ರಾಮರಾವ್ ಅವರ ವಿರುದ್ಧ ಕಂದಕ ತೋಡುವುದರಲ್ಲಿ ಮಾತ್ರ ಹಿರಿಯರಾಗಿದ್ದಾರೆ ಎಂದು ಹೇಳಿದ್ದರುಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡ ಫರೂಕ್ ಅಬ್ದುಲ್ಲ ಅವರುಮೋದಿ ಈಗ ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಅವರು ರಾಷ್ಟ್ರಕ್ಕೆ ಮಹಾನ್ ಸೇವೆ ಸಲ್ಲಿಸುತ್ತಿರುವ ನಾಯ್ಡು ಅವರ ವಿರುದ್ಧ ವೈಯಕ್ತಿಕ ದಾಳಿಗಳನ್ನು ನಡೆಸುತ್ತಿದ್ದಾರೆಜಮ್ಮು -ಶ್ರೀನಗರ ಹೆದ್ದಾರಿ ಆರು ದಿನಗಳಿಂದ ಮುಚ್ಚಲ್ಪಟ್ಟಿದೆ. ೩೦ ಕಿಮೀ ರಸ್ತೆಯನ್ನು ಸರಿಪಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ, ಆದರೆ ಅವರು ದೇಶವನ್ನು ಆಳಬಯಸುತ್ತಾರೆ ಎಂದು ಅಬ್ದುಲ್ಲ ನುಡಿದರು. ಮೋದಿ ವಿರೋಧಿ ಟೀಕೆಗೆ ತಮ್ಮ ದನಿ ಸೇರಿಸಿದ ಮೆಮನ್ ಅವರು ಕೇಂದ್ರ ಸಕಾರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಮತ್ತು ನಾಯ್ಡು ಅವರು ಪ್ರತಿಸ್ಪರ್ಧಿ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಮುಂಚೂಣಿಯಲ್ಲಿ ನಿಂತಿರುವುದಕ್ಕಾಗಿ ಬಿಜೆಪಿಯು ಅವರ ವಿರುದ್ಧ ದಾಳಿ ನಡೆಸುತ್ತಿದೆ ಎಂದು ಹೇಳಿದರು. ’ನಾವು ಚುನಾವಣೆಯಲ್ಲಿ ಬಿಜೆಪಿಗೆ ಅದರ ಸ್ಥಾನವನ್ನು ತೋರಿಸುತ್ತೇವೆ. ನಾನು ಶರದ್ ಪವಾರ್ ಪರವಾಗಿ ನಿಮಗೆ ಭರವಸೆ ಕೊಡುತ್ತಿದ್ದೇನೆ ಎಂದು ಮೆಮನ್ ಹೇಳಿದರುಮುಲಾಯಂ ಯಾದವ್ ಅವರುನನಗೆ ಸೌಖ್ಯವಿಲ್ಲ, ಆದರೂ ನಾಯ್ಡು ಅವರಿಗೆ ಬೆಂಬಲ ಸೂಚಿಸಲು ಬಂದಿದ್ದೇನೆ ಎಂದು ನುಡಿದರು. ’ನಾಯ್ಡು ಅವರು ಬಡವರಿಗಾಗಿ, ರೈತರಿಗಾಗಿ ಮತ್ತು  ತುಳಿತಕ್ಕೆ  ಒಳಗಾದವರಿಗಾಗಿ ಹೋರಾಡುತ್ತಿದ್ದಾರೆಎಂದು ಮುಲಾಯಂ ಹೇಳಿದರುನಾಯ್ಡು ಅವರು ನ್ಯಾಯಯುತ ಕಾರಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ನುಡಿದ ಡಿಎಂಕೆ ನಾಯಕ ಶಿವ ಅವರು, ’ಮೋದಿ ಸರ್ಕಾರವನ್ನು ಮೂರು ತಿಂಗಳುಗಳಲ್ಲಿ ಉಚ್ಚಾಟಿಸಲಾಗುವುದು ಎಂದು ಹೇಳಿದರು. ರಾಜ್ಯದ ಜನರ  ಅಧಿಕಾರಗಳಲ್ಲಿ ಹಸ್ತಕ್ಷೇಪ ಮಾಡಲಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಶಿವ ಹೇಳಿದರು. ವಿಭಜನೆಯ ಬಳಿಕ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ ಬಿಜೆಪಿ ನೇತೃತ್ವದ ಎನ್ ಡಿಎಯಿಂದ ತೆಲುಗುದೇಶಂ ಪಕ್ಷವು ಕಳೆದ ವರ್ಷ ಹೊರನಡೆದಿತ್ತು.   ಸಂವಿಧಾನವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ೧೬ ವರ್ಷಗಳ ಹಿಂದೆ ಈಶಾನ್ಯ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಕೊಟ್ಟಿದ್ದ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಟೀಕಿಸಿದರು. ಕಾಂಗ್ರೆಸ್ ನಾಯಕರಾದ ಆನಂದ ಶರ್ಮ, ಅಹ್ಮದ್ ಪಟೇಲ್, ಜೈರಾಮ್ ರಮೇಶ್ ಅವರು ವೇದಿಕೆಗೆ ಬಂದು ತಮ್ಮ ಬೆಂಬಲ ಸೂಚಿಸಿದರು. ನಾಯ್ಡು ಅವರಧರ್ಮ ಪೋರಾಟ ದೀಕ್ಷಾ (ನ್ಯಾಯಕ್ಕಾಗಿ ಇಡೀದಿನ ಪ್ರತಿಭಟನೆ) ಬೆಳಗ್ಗೆ ಗಂಟೆಗೆ ಆರಂಭವಾಗಿತ್ತು. ಫೆಬ್ರುವರಿ ೧೨ರಂದು ಅವರು ಮನವಿ ಪತ್ರವೊಂದನ್ನೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಿದರು. ನಿರಶನ ಆರಂಭಿಸುವ ಮುನ್ನ ನಾಯ್ಡು ಅವರು ರಾಜಘಾಟಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಮತ್ತು ಆಂಧ್ರ ಪ್ರದೇಶ ಭವನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ತಮ್ಮ ಗೌರವಾರ್ಪಣೆ ಮಾಡಿದರು

 2018: ದುಬೈ: ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಬೇಕೆ ಹೊರತು ಅವಸಾನಕ್ಕಾಗಿ ಅಲ್ಲ, ಈ ನಿಟ್ಟಿನಲ್ಲಿ ಸರ್ಕಾರಗಳು ಖಾತರಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಆಗ್ರಹಿಸಿದರು. ಆರನೇ ಜಾಗತಿಕ ಸರ್ಕಾರಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದುಬೈ ಅಭಿವೃದ್ಧಿಗೆ ತಂತ್ರಜ್ಞಾನವೇ ಮುಖ್ಯ ಕಾರಣ ಎಂದು ಹೇಳಿದರು. ಸಮಾನ ಅಭಿವೃದ್ಧಿ ಮತ್ತು ಸರ್ವರಿಗೂ ಸಮೃದ್ಧಿಯನ್ನು ತಂದುಕೊಡುವ ಸಲುವಾಗಿ ಆಡಳಿತದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಅವರು ಭಾರತದ ಪ್ರಗತಿಯಲ್ಲೂ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ನುಡಿದರು.  ಆತ್ಮೀಯ ಸ್ವಾಗತ ನೀಡಿದ್ದಕ್ಕಾಗಿ ಯುಎಇಗೆ ವಂದನೆಗಳನ್ನು ಸಲ್ಲಿಸಿದ ಮೋದಿ, ಇಲ್ಲಿ ವಾಸವಾಗಿರುವ ಎಲ್ಲ ಸಮುದಾಯಗಳ ಜನರಿಗೂ ತಮ್ಮ ಮನೆಯಿಂದ ಹೊರಗೆ ದೂರದಲ್ಲಿ ಇಲ್ಲಿ ಮನೆ ಲಭಿಸಿದೆ. ಇಲ್ಲಿನ ಜನರ ಈ ಸೌಜನ್ಯಕ್ಕಾಗಿ ನಾನು ಧನ್ಯವಾದ ಅರ್ಪಿಸುವೆ ಎಂದು ನುಡಿದರು. ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಮಹತ್ವವನ್ನು ವಿವರಿಸಿದ ಪ್ರಧಾನಿ, ’ತಂತ್ರಜ್ಞಾನವು ಮಾನವ ಬದುಕನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತಂತ್ರಜ್ಞಾನವು ಚಿಂತನೆಯ ವೇಗವನ್ನು ಬದಲಾಯಿಸುತ್ತಿದೆ. ಇದು ವಿಧ್ವಂಸಕ ಬದಲಾವಣೆಯಲ್ಲೂ ಮಾಧ್ಯಮವಾಗಿ  ಕೆಲಸ ಮಾಡುತ್ತಿದೆ. ತಂತ್ರಜ್ಞಾನದಿಂದ ಮರುಭೂಮಿ ಪರಿವರ್ತನೆಯಾಗುತ್ತದೆ. ಇದೊಂದು ಪವಾಡ’ ಎಂದು ಹೇಳಿ ತಮ್ಮ ಮಾತಿಗೆ ದುಬೈ ನಗರವನ್ನೇ ಉದಾಹರಿಸಿದರು. ತಂತ್ರಜ್ಞಾನ ಬಳಕೆಯಲ್ಲಿ ವಿಶ್ವವು ಎಚ್ಚರದಿಂದ ಇರಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಮೋದಿ, ಹಲವರು ಇದನ್ನು ಪ್ರಕೃತಿಗೆ ಮತ್ತು ಮನುಷ್ಯರ ಭವಿಷ್ಯಕ್ಕೆ ಹಾನಿ ಉಂಟು ಮಾಡುವ ಸಲುವಾಗಿ ಬಳಸುತ್ತಿದ್ದಾರೆ ಎಂದು ನುಡಿದರು. ’ತಂತ್ರಜ್ಞಾನವು ಅಭಿವೃದ್ಧಿಯ ಸಾಧನವಾಗಬೇಕು, ನಾಶದ ಸಾಧನವಲ್ಲ. ತಂತ್ರಜ್ಞಾನವು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಮೂಲಕ ಸಾಮಾನ್ಯ ವ್ಯಕ್ತಿಯನ್ನು ಸಬಲನನ್ನಾಗಿ ಮಾಡಿದೆ ಎಂದು ಅವರು ಹೇಳಿದರು.  ’ಇ-ಆಡಳಿತದಲ್ಲಿ. ’ಇ’ ಅಕ್ಷರವು ಎಫೆಕ್ಟಿವ್ (ಪರಿಣಾಮಕಾರಿ), ಎಫೀಸಿಯಂಟ್ (ದಕ್ಷ), ಈಸಿ (ಸುಲಭ), ಎಂಪವರ್ (ಸಬಲ) ಮತ್ತು ಈಕ್ವಿಟಿ (ಸಮಾನತೆ) ಇವುಗಳನ್ನು ಪ್ರತಿನಿಧಿಸುತ್ತವೆ ಎಂದು ಮೋದಿ ಗಮನ ಸೆಳೆದರು. ಮಾನವತೆಯ ಭವಿಷ್ಯವು ಪ್ರಕೃತಿಯ ಜೊತೆಗೆ ಘರ್ಷಣೆಯಾಗಬಾರದು ಎಂದು ನುಡಿದ ಪ್ರಧಾನಿ, ಇದಕ್ಕಾಗಿ ’ರೆಡ್ಯೂಸ್’ (ಕಡಿಮೆಗೊಳಿಸುವುದು), ರಿಸೈಕಲ್ (ಮರುಬಳಕೆ), ರಿಕವರ್ (ಮರಳಿ ಪಡೆಯುವಿಕೆ), ರಿಮೆನ್ಯುಫ್ಯಾಕ್ಚರ್ (ಮರು ನಿರ್ಮಾಣ), ರಿಡಿಸೈನ್ (ಮರುವಿನ್ಯಾಸ) ಈ ಆರು ’ಆರ್’ ಕ್ರಮಗಳ ಬಗ್ಗೆ ಹೇಳಿ, ಇವುಗಳು  ’ರಿಜಾಯ್ಸ್’ (ಸಂತಸ) ತರುತ್ತವೆ ಎಂದು ನುಡಿದರು. ತಮ್ಮ ಆಡಳಿತದಲ್ಲಿ ಆಗಿರುವ ಬದಲಾವಣೆಗಳು ತಂತ್ರಜ್ಞಾನದಿಂದಾಗಿ ಆಗಿವೆ ಎಂದು ಮೋದಿ ಹೇಳಿದರು. ಬಯೋಮೆಟ್ರಿಕ್ ಐಡೆಂಟಿಫಿಕೇಷನ್ ಕಾರ್ಡ್, ಆಧಾರ್ ಮತ್ತು ಜಿಎಸ್ ಟಿಯ ಕಲ್ಪನೆಯ ಮಹತ್ವವನ್ನು ಅವರು ವಿವರಿಸಿದರು. ಇದೇ ವೇಳೆಗೆ ತಂತ್ರಜ್ಞಾನದ ಕಪ್ಪು ಮುಖವನ್ನೂ ಅವರು ಪ್ರಸ್ತಾಪಿಸಿದರು. ’ಕೆಲವು ವ್ಯಕ್ತಿಗಳು ಸೈಬರ್ ಸ್ಪೇಸನ್ನು ತಂತ್ರಜ್ಞಾನ ಬಳಸಿ ಉಗ್ರವಾದವನ್ನು ಹರಡುತ್ತಿದ್ದಾರೆ’ ಎಂದು ಅವರು ಹೇಳಿದರು.  ಭಾರತದ ಮಂಗಳ ಮಿಷನ್ ಹಾಲಿವುಡ್ ಗಿಂತಲೂ ಕಡಿಮೆ ವೆಚ್ಚದ್ದು. ನಾವು ಶ್ರೇಷ್ಠತೆಯತ್ತ ಮಾತ್ರವೇ ಅಲ್ಲ, ತಂತ್ರಜ್ಞಾನವು ಜಾಗತಿಕ ಅಭಿವೃದ್ಧಿಗೆ ನೆರವಾಗುವಂತೆ ಮಾಡುವ ನಿಟ್ಟಿನಲ್ಲಿ ವಿಶ್ವದ ನಾಗರಿಕರು ಚಿಂತಿಸುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮೋದಿ ನುಡಿದರು. ಏಷ್ಯದ ಎಲ್ಲ ರಾಷ್ಟ್ರಗಳೂ ಒಂದಾಗಬೇಕು ಮತ್ತು ಅತ್ಯುತ್ತಮ ಹಾಗೂ ಅಭಿವೃದ್ಧಿಯ ಭವಿಷ್ಯಕ್ಕಾಗಿ ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂಬ ಕರೆಯೊಂದಿಗೆ ಪ್ರಧಾನಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.  


2018: ಹೈದರಾಬಾದ್: ಅಯೋಧ್ಯಾ ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಲು ಯತ್ನಿಸಿದ ಮೌಲ್ವಿ ಸಲ್ಮಾನ್ ನದ್ವಿ ಅವರನ್ನು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಿಂದ (ಎಐಎಂಪಿಎಲ್ ಬಿ) ಉಚ್ಚಾಟಿಸಲಾಯಿತು. ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಲು ಸಾಧ್ಯ ಎಂದು ಎಐಎಂಪಿಎಲ್ ಬಿ ಸದಸ್ಯ ನದ್ವಿ ಹೇಳಿದ್ದರು. ನದ್ವಿ ವಿಚಾರದ ಬಗ್ಗೆ ಪರಿಶೀಲಿಸಲು ಮಂಡಳಿಯು ಶಿಸ್ತು ಸಮಿತಿಯನ್ನು ರಚಿಸಿತ್ತು. ಮಂಡಳಿಯು ನದ್ವಿ ಅವರನ್ನು ಮಂಡಳಿಯಿಂದ ಉಚ್ಚಾಟಿಸಬಹುದು ಎಂದು ಮಂಡಳಿ ಸದಸ್ಯರೊಬ್ಬರು ಇದಕ್ಕೆ ಮುನ್ನವೇ ಸುಳಿವು ನೀಡಿದ್ದರು.  ’ಬಾಬರಿ ಮಸೀದಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ತನ್ನ ನಿಲುವನ್ನು ಮಂಡಳಿ ಪುನರುಚ್ಚರಿಸಿದೆ. ಒಮ್ಮೆ ಮಸೀದಿ ಕಟ್ಟಿದ ಬಳಿಕ, ಅದು ಎಂದೆಂದಿಗೂ ಮಸೀದಿಯಾಗಿಯೇ ಉಳಿಯುತ್ತದೆ. ನದ್ವಿ ಅವರು ಈಗಲೂ ಮಂಡಳಿಯ ನಿಲುವಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಆದ್ದರಿಂದ ಅವರನ್ನು ಮಂಡಳಿಯಿಂದ ಉಚ್ಚಾಟಿಸುವುದರ ಹೊರತು ಬೇರೆ ದಾರಿ ಇರಲಿಲ್ಲ. ಮಂಡಳಿಯು ಅವರನ್ನು ಉಚ್ಚಾಟಿಸಲು ಸರ್ವಾನುಮತದ ನಿರ್ಧಾರ ಕೈಗೊಂಡಿತು ಎಂದು ಮಂಡಳಿ ಸದಸ್ಯ ಸೈಯದ್ ಕಾಸಿಮ್ ರಸೂಲ್ ಇಲ್ಯಾಸ್ ಹೇಳಿದರು.  ನದ್ವಿ ಅವರು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಬಹಿರಂಗವಾಗಿ ತಮ್ಮ ನಿಲುವನ್ನು ಪ್ರಕಟಿಸಿದ್ದರು. ಇದು ಮಂಡಳಿಯನ್ನು ಸಿಟ್ಟಿಗೆಬ್ಬಿಸಿತ್ತು. ವಿವಾದವನ್ನು ಇತ್ಯರ್ಥಗೊಳಿಸಲು ಮಸೀದಿ ನಿವೇಶನವನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಸಲಹೆಯನ್ನು ನದ್ವಿ ಮುಂದಿಟ್ಟಿದ್ದರು. ಈ ಬೆಳವಣಿಗೆಯ ಬಳಿಕ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡರಾತಿಯವರೆಗೂ ಬಿರುಸಿನ ಮಾತುಕತೆ ನಡೆಯಿತು. ಹಲವಾರು ಸದಸ್ಯರು ನಖ್ವಿ ವಿರುದ್ಧ ಕ್ರಮ ಕೈಗೊಳ್ಳುವಂಎ ಆಗ್ರಹಿಸಿದರು.  ನದ್ವಿ ವಿರುದ್ಧ ಮಂಡಳಿ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಶನಿವಾರವೇ ಸುಳಿವು ಸಿಕ್ಕಿತ್ತು. ಶನಿವಾರ ಮಂಡಳಿಯ ಸರ್ವ ಸದಸ್ಯ ಸಭೆಯಲ್ಲಿ ವಿಷಯ ಮತ್ತೆ ಚರ್ಚೆಗೆ ಬಂದಿತ್ತು. ಸುಮಾರು ೫೦೦ ಮಂದಿ ಇದ್ದ ಸಭೆಯಲ್ಲಿ ಹಲವರು ನಖ್ವಿ ಅವರನ್ನು ಮಂಡಳಿಯಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದ್ದರು. ಬೆಳವಣಿಗೆಗಳ ಬಗ್ಗೆ ಹಲವರು ತುಟಿ ಬಿಗಿ ಹಿಡಿದುಕೊಂಡಿದ್ದರೆ, ಕೆಲವರು ಬಹಿರಂಗವಾಗಿ ವಿಷಯದ ಬಗ್ಗೆ ಭ್ರಮನಿರಸನ ವ್ಯಕ್ತ ಪಡಿಸಿದರು.  ಶುಕ್ರವಾರದ ಸಭೆಯಲ್ಲಿ ಬಿರುಸಿನ ಮಾತುಕತೆ ನಡೆದ ಹಿನ್ನೆಲೆಯಲ್ಲಿ ನದ್ವಿ ಸರ್ವಸದಸ್ಯರ ಎರಡನೆ ದಿನದ ಸಭೆಗೆ ಹಾಜರಾಗಿರಲಿಲ್ಲ. ಸುದ್ದಿ ಸಂಸ್ಥೆ ಒಂದರ ಜೊತೆಗೆ ತಮ್ಮ ಸಿಟ್ಟನ್ನು ವ್ಯಕ್ತ ಪಡಿಸಿದ ನದ್ವಿ ನ್ಯಾಯಾಲಯದ ಹೊರಗೆ ವಿಷಯ ಇತ್ಯರ್ಥಗೊಳ್ಳಬೇಕೆಂಬ ತಮ್ಮ ನಿಲುವನ್ನು ಪುನರುಚ್ಚರಿಸಿದರು. ಮಂಡಳಿಯು ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯಬೇಕು ಎಂದು ಹೇಳುತ್ತಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಇತರ ಪರಿಹಾರದ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ. ದ್ವೇಷದೊಂದಿಗೆ ವಿಷಯವನ್ನು ಇತ್ಯರ್ಥಗೊಳಿಸಲು ನಾವು ಹೋರಾಡಬಾರದು. ಏಕತೆ ಮತ್ತು ಸೌಹಾರ್ದದ ಸಲುವಾಗಿ ನಾವು ಶ್ರಮಿಸಬೇಕು ಮತ್ತು ಸಹಮತದ ಪರಿಹಾರಕ್ಕೆ ಯತ್ನಿಸಬೇಕು. ನಾನು ಸಭೆಯಲ್ಲಿ ನನ್ನ ಅಭಿಪ್ರಾಯಗಳನ್ನು ವಿವರಿಸುತ್ತಿದ್ದೆ. ಆದರೆ ಕೆಲವು ಸದಸ್ಯರು ನನ್ನನ್ನು ಗುರಿಯಾಗಿಟ್ಟುಕೊಂಡು ಬಂದಿದ್ದರು’ ಎಂದು ನದ್ವಿ ನುಡಿದರು. ಮಂಡಳಿಯಲ್ಲಿ ಯಾವದೇ ಭಿನ್ನಾಭಿಪ್ರಾಯವಿಲ್ಲ. ಬಾಬರಿ ಮಸೀದಿ ವಿವಾದ ಕುರಿತ ತನ್ನ ನಿಲುವನ್ನು ಮಂಡಳಿ ಸರ್ವಾನುಮತದಿಂದ ಒಪ್ಪಿದೆ ಎಂದು ಎಐಎಂಪಿಎಲ್ ಬಿ ಫೆ.9ರ ಶುಕ್ರವಾರ ಪ್ರತಿಪಾದಿಸಿತ್ತು.
2018: ಸಂಜ್ವಾನ್ (ಜಮ್ಮು): ಜಮ್ಮುವಿನ ಸಂಜ್ವಾನ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದರ ತೆರವು ಕಾರ್ಯಾಚರಣೆ ಕಾಲದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಒಬ್ಬ ನಾಗರಿಕ ಅಸು ನೀಗಿದರು.  ಮೂವರು ಸೈನಿಕರು ಈದಿನ ತೀವ್ರ ಗಾಯಗಳ ಪರಿಣಾಮವಾಗಿ ಸಾವನ್ನಪ್ಪಿದರು. ಸಂಜ್ವಾನ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಬಳಿಕ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರನ್ನು ಫೆ.10 ಶನಿವಾರವೇ ಕೊಂದು ಹಾಕಿದ್ದ ಭದ್ರತಾ ಪಡೆಗಳು ಇನ್ನೊಬ್ಬ ಭಯೋತ್ಪಾದಕನನ್ನು ಈದಿನ ಕೊಂದು ಹಾಕಿವೆ. ಸೇನಾ ಶಿಬಿರದ ಮೇಲೆ ಭಯೋತ್ಪಾದಕರಿಂದ ನಡೆದ ತೀವ್ರ ದಾಳಿಯಲ್ಲಿ ಒಬ್ಬ ಜ್ಯೂನಿಯರ್ ಕಮೀಶನ್ಡ್ ಅಧಿಕಾರಿ (ಜೆಸಿಒ) ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ಶನಿವಾರ ಹುತಾತ್ಮರಾಗಿದ್ದರು. ಒಟ್ಟು ಮೂರು ಭಯೋತ್ಪಾದಕರನ್ನು ಈವರೆಗೆ ಕೊಲ್ಲಲಾಗಿದೆ’ ಎಂದು ಸೇನೆ ತಿಳಿಸಿತು.  ಜೆಇಎಂ ಭಯೋತ್ಪಾದಕರನ್ನು ತೆರವುಗೊಳೀಸುವ ಕಾಯಾಚರಣೆ  ಎರಡನೇ ದಿನ ಮುಂದುವರೆಯಿತು.  ರಾತ್ರಿ ಎಲ್ಲಿಯೂ ಗುಂಡು ಹಾರಾಟದ ಸದ್ದು ಕೇಳಿಬಂದಿಲ್ಲ. ಈ ಹಿನ್ನೆಲೆಯಲ್ಲಿ ಸೇನೆಯು ಕುಟುಂಬ ಕ್ವಾರ್ಟರ್ಸ್‌ಗಳಿಂದ ಜನರನ್ನು ತೆರವುಗೊಳಿಸುವ ಕಡೆಗೆ ಗಮನ ಹರಿಸಿತು. ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಫೆ.10ರ ಶನಿವಾರ ನಸುಕಿನಲ್ಲಿ ಜಮ್ಮುವಿನ ಸಂಜ್ವಾನಿನ ೩೬ ಬ್ರಿಗೇಡ್ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿ ಶಿಬಿರದ ಮೇಲೆ ದಾಳಿ ನಡೆಸಿದ ಜೆಇಎಂ ಭಯೋತ್ಪಾದಕರ ಗುಂಪು ಇಬ್ಬರು ಯೋಧರನ್ನು ಬಲಿತೆಗೆದುಕೊಂಡಿತ್ತು. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ದಾಳಿಕೋರರು ಹತರಾದರು. ಇಡೀ ದಿನ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಮೇಜರ್, ಮೂವರು ಸಿಬ್ಬಂದಿ, ಐವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೯ ಮಂದಿ ಗಾಯಗೊಂಡಿದ್ದರು. ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜನರನ್ನು ತೆರವುಗೊಳಿಸುವ ಕಾರ್‍ಯವೂ ಪ್ರಗತಿಯಲ್ಲಿದೆ ಎಂದು ಜಮ್ಮು ಮೂಲದ ಸೇನಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ ಹೇಳಿದರು. ಇನ್ನೂ ಕೆಲವು ಕುಟುಂಬಗಳು ಅಲ್ಲಿಯೇ ಇದ್ದು, ಅವರ ಸುರಕ್ಷತೆ ಕಡೆಗೆ ಗಮನ ಇಡಲಾಗಿದೆ. ಶನಿವಾರ ರಾತ್ರಿಯ ಬಳಿಕ ಗುಂಡಿನ ಸದ್ದು ಕೇಳಿಲ್ಲ. ಘರ್ಷಣೆ ನಡೆದ ಸ್ಥಳದಲ್ಲಿ ಈವರೆಗೆ ಇಬ್ಬರು ಭಯೋತ್ಪಾದಕರ ಶವಗಳು ಮಾತ್ರ ಪತ್ತೆಯಾಗಿವೆ ಎಂದು ಅಧಿಕಾರಿ ನುಡಿದರು. ಜಮ್ಮು ಪ್ರದೇಶದಲ್ಲಿ ಸುಮಾರು ೧೫ ತಿಂಗಳುಗಳ ಬಳಿಕ ಈ ದಾಳಿ ನಡೆದಿದೆ. ೨೦೧೬ರ ನವೆಂಬರ್ ೨೯ರಂದು ಭಯೋತ್ಪಾದಕರು ಜಮ್ಮು ಹೊರವಲಯದ ಸೇನೆಯ ನಗ್ರೋಟಾ ಶಿಬಿರದ ಮೇಲೆ ಇದೇ ಮಾದರಿ ದಾಳಿ ನಡೆಸಿ ಇಬ್ಬರು ಅಧಿಕಾರಿಗಳು ಸೇರಿದಂತೆ ೭ ಮಂದಿ ಸೇನಾ ಸಿಬ್ಬಂದಿಯನ್ನು ಕೊಂದಿದ್ದರು. ಪ್ರತಿ ಕಾರ್‍ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಕೊಂದು ಹಾಕಲಾಗಿತ್ತು. ೨೦೧೩ರ ಫೆಬ್ರುವರಿ ೯ರಂದು ಗಲ್ಲಿಗೇರಿಸಲಾಗಿದ್ದ ಅಫ್ಜಲ್ ಗುರುವಿನ ಸಾವಿನ ವರ್ಷಾಚರಣೆ ಹಿನ್ನೆಲೆಯಲ್ಲಿ ಸೇನೆ ಅಥವಾ ಭದ್ರತಾ ವ್ಯವಸ್ಥೆ ಮೇಲೆ ಜೈಶ್-ಇ-ಮೊಹಮ್ಮದ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಸುಳಿವು ನೀಡಿತ್ತು. 

2018: ದುಬೈ: ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ದುಬೈಯಲ್ಲಿ ಮೊದಲ ಹಿಂದು ದೇವಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿಪೂಜೆ (ಶಿಲ್ಯಾನ್ಯಾಸ) ನೆರವೇರಿಸಿದರು. ದುಬೈಯ ಓಪೆರಾ ಹಾಲ್‌ನಲ್ಲಿ ಸಹಸ್ರಾರು ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ’ದಶಕಗಳ ನಂತರ ಭಾರತವು ಗಲ್ಫ್ ರಾಷ್ಟ್ರಗಳೊಂದಿಗೆ ಮತ್ತೆ ಬಲವಾದ ಸಂಬಂಧವನ್ನು ಹೊಂದಿಲು ದೇವಾಲಯ ನೆರವಾಗಲಿದೆ’ ಎಂದು ಹೇಳಿದರು. ’ಆಗುತ್ತದೊ ಇಲ್ಲವೋ ಎನ್ನುತ್ತಿದ್ದ ನೀವು ಈಗ ಮೋದಿ ಜಿ.. ಹೇಳಿ ಯಾವಾಗ ಆಗುತ್ತದೆ ಎಂದು ಕೇಳುತ್ತಿದ್ದೀರಿ. ಇದು ನಮ್ಮ ಮೇಲಿಟ್ಟ ನಂಬಿಕೆಯನ್ನು ತೋರಿಸುತ್ತದೆ. ಆಗುವುದಿದ್ದರೆ ಈಗಲೇ ಆಗುತ್ತದೆ’ ಎಂದು ಅವರು ನುಡಿದರು.  ’೨೧ನೇ ಶತಮಾನ ಏಷಿಯಾ ಖಂಡದ್ದು ಅದರಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಇನ್ನಷ್ಟು ಕೆಲಸ ಮಾಡಬೇಕಾಗಿದೆ’ ಎಂದು ಪ್ರಧಾನಿ ಹೇಳಿದರು.  ’ನಾನು ನೋಟು ನಿಷೇಧ ಮಾಡಿದಾಗ ಬಡವರು ಅರ್ಥಮಾಡಿಕೊಂಡು ಬೆಂಬಲ ನೀಡಿದರು. ಆದರೆ ಆಗ ನಿದ್ದೆ ಕಳೆದುಕೊಂಡವರು ೨ ವರ್ಷಗಳಾದ ಮೇಲೂ ಕಣ್ಣೀರಿಡುತ್ತಿದ್ದಾರೆ’ ಎಂದು ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.  ’ಕಳೆದ ೭ ವರ್ಷಗಳಿಂದ ಜಿಎಸ್‌ಟಿ ಕುರಿತು ಚರ್ಚೆ ನಡೆಯುತ್ತಿತ್ತು ಅದನ್ನೂ ಈಗ ಜಾರಿ ಮಾಡಿದೆವು’ ಎಂದು ಅವರು ನುಡಿದರು.  ’ನಾವು ದೂರದೃಷ್ಟಿ ಇರಿಸಿ ಯೋಜನೆಗಳನ್ನು ತರುತ್ತೇವೆ, ತಕ್ಷಣ ಅದರ ಪರಿಣಾಮ ತತ್ ಕ್ಷಣಕ್ಕೆ ಗೊತ್ತಾಗುವುದಿಲ್ಲ. ೭೦ ವರ್ಷಗಳ ಹಿಂದಿನ ನಿಯಮಗಳನ್ನು ಬದಲಾವಣೆ ಮಾಡಿದಾಗ ಸ್ವಲ್ಪ ಸಮಸ್ಯೆಗಳು ಆಗುವುದು ಸಹಜ. ಭಾರತ ದೇಶ ಬದಲಾಗುತ್ತಿದ್ದು ನಿಮ್ಮ ಕನಸುಗಳು ಆಶೋತ್ತರಗಳು ಈಡೇರಿಸವ ನಿಟ್ಟಿನಲ್ಲಿ ನಾನು ಕೆಲಸ ಮುಂದುವರಿಸುತ್ತೇನೆ’ ಎಂದು ಮೋದಿ ಹೇಳಿದರು. ಸಭೆಯಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಾರತೀಯರು ಮೋದಿ ಪರ ಜೈಕಾರ ಹಾಕಿದರು. ಮೋದಿ ಮೋದಿ.. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.  ಅಬುಧಾಬಿ-ದುಬೈ ರಾಷ್ಟ್ರಿಯ ಹೆದ್ದಾರಿಯಲ್ಲಿ ಭವ್ಯವಾದ ಸ್ವಾಮಿನಾರಾಯಣ ದೇವಾಲಯ ನಿರ್ಮಾಣಕ್ಕೆ ದುಬೈ ಸರಕಾರ ಅನುಮತಿ ನೀಡಿದೆ.

2018: ಮಾಸ್ಕೊ:  ೭೧ ಜನರನ್ನು ಒಯ್ಯುತ್ತಿದ್ದ ರಷ್ಯಾದ ಪ್ರಯಾಣಿಕ ವಿಮಾನವೊಂದು ಮಾಸ್ಕೊ ಹೊರಭಾಗದಲ್ಲಿನ ಡೊಮೊಡೆಡೊವೊ ವಿಮಾನ ನಿಲ್ದಾಣದಿಂದ ಗಗನಕ್ಕೆ ಏರಿದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿದ್ದು ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿರುವರೆಂದು ಭೀತಿ ಪಡಲಾಯಿತು. ದೇಶೀಯ ಸರಾಟೊವ್ ಏರ್ ಲೈನ್ಸ್ ಗೆ ಸೇರಿದ ಆಂಟೊನೊವ್ ಎಎನ್-೧೪೮ ವಿಮಾನವು ಉರಾಲ್ಸ್ ನ ಒರಸ್ಕ್ ನಗರದತ್ತ ಪಯಣ ಹೊರಟಿತ್ತು. ಮಾಸ್ಕೋ ಹೊರಗಿನ ರಮೆನ್ಸ್ಕಿ ಜಿಲ್ಲೆಯಲ್ಲಿ ಅದು ನೆಲಕ್ಕೆ ಅಪ್ಪಳಿಸಿತು ಎಂದು ವರದಿಗಳು ಹೇಳಿವೆ. ವಿಮಾನದಲ್ಲಿ ೬೫ ಮಂದಿ ಪ್ರಯಾಣಿಕರು ಮತ್ತು ೬ ಮಂದಿ ಸಿಬ್ಬಂದಿ ಇದ್ದರು ಎಂದು ವರದಿ ತಿಳಿಸಿದೆ. ಅರ್‍ಗುನೊವೊ ಗ್ರಾಮದ ಪ್ರತ್ಯಕ್ಷದರ್ಶಿಗಳು ಆಕಾಶದಿಂದ ಉರಿಯುತ್ತಿರುವ ವಿಮಾನ ಕೆಳಕ್ಕೆ ಬೀಳುತ್ತಿದ್ದುದನ್ನು ಕಂಡುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿತು. ವಿಮಾನದಲ್ಲಿದ್ದ ೭೧ ಮಂದಿಯ ಪೈಕಿ ಯಾರೊಬ್ಬರೂ ಬದುಕಿ ಉಳಿದಿರುವ ಸಾಧ್ಯತೆ ಇಲ್ಲ ಎಂದು ರಷ್ಯಾದ ತುರ್ತುಸೇವಾ ಮೂಲವೊಂದು ತಿಳಿಸಿತು. ವಿಮಾನ ಪತನಗೊಂಡ ಸ್ಥಳದಲ್ಲಿ ವಿಮಾನದ ಅವಶೇಷಗಳು ಚೆಲ್ಲಾಚೆದರಾಗಿ ಬಿದ್ದಿವೆ ಎಂದೂ ಸುದ್ದಿ ಸಂಸ್ಥೆ ವರದಿ ಮಾಡಿತು. ರಷ್ಯಾದ ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ದುರಂತ ಸ್ಥಳದಿಂದ ಬಿತ್ತರಿಸಿದ ವಿಡಿಯೋದಲ್ಲಿ ಹಿಮದ ಮೇಲೆ ವಿಮಾನದ ಅವಶೇಷಗಳು ಬಿದ್ದಿರುವುದನ್ನು ತೋರಿಸಲಾಯಿತು.  ಈ ಸಮಯದಲ್ಲಿ ರಷ್ಯಾದಲ್ಲಿ ಭಾರಿ

ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಎದುರಿನ ದೃಶ್ಯ ಕಾಣುವುದು ಅತ್ಯಂತ ದುಸ್ತರ ಎಂದು ವರದಿಗಳು ಹೇಳಿವೆ.  ಪತನಗೊಂಡಿರುವ ರಷ್ಯ ನಿರ್ಮಿತ ವಿಮಾನ ೭ ವರ್ಷಗಳಷ್ಟು ಹಳೆಯದಾಗಿದ್ದು, ರಾಟೊವ್ ಏರ್ ಲೈನ್ಸ್ ನಿಂದ ರಷ್ಯಾದ ಇನ್ನೊಂದು ವಿಮಾನಯಾನ ಸಂಸ್ಥೆಯು ಅದನ್ನು ಖರೀದಿಸಿತ್ತು.  ರಸ್ತೆ ಮೂಲಕ ತಲುಪುವುದು ದುಸ್ತರವಾದ್ದರಿಂದ ತುರ್ತುಸೇವಾ ಸಿಬ್ಬಂದಿಗೆ ದುರಂತ ಸ್ಥಳಕ್ಕೆ ತಲುಪಲಾಗಿಲ್ಲ, ರಕ್ಷಣಾ ಸಿಬ್ಬಂದಿ ಪಾದಯಾತ್ರೆ ಮೂಲಕ ಸ್ಥಳಕ್ಕೆ ಧಾವಿಸುತ್ತಿದ್ದಾರೆ ಎಂದು ರಷ್ಯಾದ ಮಾಧ್ಯಮ ವರದಿ ತಿಳಿಸಿದೆ. ೧೫೦ ಮಂದಿ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ವರದಿಗಳು ಹೇಳಿದವು. ಪತನಗೊಂಡ ವಿಮಾನ ಅತ್ಯಂತ ದೊಡ್ಡ ವಿಮಾನವಾಗಿದ್ದು ಗಗನಕ್ಕೆ ಏರಿದ ಕೆಲವೇ ನಿಮಿಷಳಲ್ಲಿ ಪತನಗೊಂಡಿತು ಎಂದು ಡೊಮೊಡೆಡೊವ್ ವಿಮಾನ ನಿಲ್ದಾಣದ ಸುದ್ದಿಮೂಲವೊಂದು ತಿಳಿಸಿತು.  ಈ ವಿಮಾನ ನಿಲ್ದಾಣ ಮಾಸ್ಕೋದ ಎರಡನೇ ದೊಡ್ಡ ವಿಮಾನ ನಿಲ್ದಾಣವಾಗಿದೆ.  ೨೦೧೬ರ ಡಿಸೆಂಬರಿನಲ್ಲಿ ರಷ್ಯಾದ ರೆಡ್ ಆರ್ಮಿ ಸಿಬ್ಬಂದಿಯನ್ನು ಒಯ್ಯತ್ತಿದ್ದ ವಿಮಾನವೊಂದು ಕಪ್ಪು ಸಮುದ್ರ ರಿಸಾರ್ಟ್ ಸೋಚಿಯಿಂದ ಗಗನಕ್ಕೆ ಏರಿದ ಬೆನ್ನಲ್ಲೇ ಪತನಗೊಂಡು ಅದರಲ್ಲಿದ್ದ ೯೨ ಮಂದಿ ಸಾವನ್ನಪ್ಪಿದ್ದರು. ೨೦೧೬ರ ಮಾರ್ಚ್ ತಿಂಗಳಲ್ಲಿ ಫ್ಲೈ ದುಬಿಯಾ ವಿಮಾನ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ರೊಸ್ಟೊವ್ ನ ಡೋನ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ದುರಂತಕ್ಕೆ ಈಡಾಗಿ ೬೨ ಪ್ರಯಾಣಿಕರು ಅಸು ನೀಗಿದ್ದರು.


2018: ಕರಾಚಿ: ಭಾರತದ ಜೊತೆಗೆ ಶಾಂತಿಯಿಂದ ಇರುವಂತೆ ಸದಾಕಾಲವೂ ಪ್ರತಿಪಾದಿಸುತ್ತಿದ್ದ ಪಾಕಿಸ್ತಾನದ ಉಕ್ಕಿನ ಮಹಿಳೆ, ಉನ್ನತ ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್‍ಯಕರ್ತೆ ಅಸ್ಮಾ ಜೆಹಾಂಗೀರ್ ಅವರು ಲಾಹೋರಿನಲ್ಲಿ ಹೃತ್ಕ್ರಿಯೆ ನಿಂತ ಪರಿಣಾಮವಾಗಿ ನಿಧನರಾದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ತನ್ನ ದಿಟ್ಟ ನಿಲುವುಗಳಿಗಾಗಿ ಖ್ಯಾತರಾಗಿದ್ದ ಅಸ್ಮಾ, ರಾಷ್ಟ್ರದ ಪ್ರತಿರೋಧದ ಸಂಕೇತವಾಗಿದ್ದರು. ಮಾನವ ಹಕ್ಕುಗಳ ಕಾರ್‍ಯಕರ್ತೆಯಾಗಿ ಅವರು ಐದು ದಶಕಗಳ ಸೇನಾ ಸರ್ವಾಧಿಕಾರಿಗಳ ಕಾನೂನು ವಿರೋಧಿ ಕೃತ್ಯಗಳ ವಿರುದ್ಧ ಮಾತನಾಡಿದ್ದರು. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿದ್ದ ಅಸ್ಮಾ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ೧೯೯೦ರಲ್ಲಿ ಅವರು ವಿಶ್ವಸಂಸ್ಥೆ ರ್‍ಯಾಪ್ಪೋರ್ಟರ್ ಆಗಿ ನೇಮಕಗೊಂಡಿದ್ದರು.  ಜನರಲ್ ಜಿಯಾ ಉಲ್ ಹಕ್ ಸರ್ವಾಧಿಕಾರದ ಕಾಲದಲ್ಲಿ ಪ್ರಜಾಪ್ರಭುತ್ವಕ್ಕಾಗಿ ದನಿ ಎತ್ತಿದ್ದಕ್ಕಾಗಿ ಅವರು ಸೆರೆಮನೆಗೆ ತಳ್ಳಲಾಗಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ವಶಕ್ಕೆ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಗಳು ನಿಗೂಢವಾಗಿ ನಾಪತ್ತೆಯಾಗುತ್ತಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಜನರಲ್ ಮುಷರಫ್ ಬಹಿರಂಗವಾಗಿ ಅಸ್ಮಾ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಗುಪ್ತಚರ ಸಂಸ್ಥೆಗಳು ವಶಕ್ಕೆ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಗಳನ್ನು ನ್ಯಾಯಾಲಯಗಳಿಗೆ ಹಾಜರು ಪಡಿಸದೆ ಇದ್ದುದನ್ನೂ ಅಸ್ಮಾ ಪ್ರಶ್ನಿಸಿದ್ದರು.
ಕಣ್ಮರೆಯಾಗುತ್ತಿದ್ದ ಹಲವಾರು ಮಂದಿಯ ಪರವಾಗಿ ಉಚಿತ ವಕಾಲತ್ತನ್ನು ಅವರು ವಹಿಸಿದ್ದರು. ದಮನಕ್ಕೆ ಒಳಗಾದವರ ಸಲುವಾಗಿ ನಡೆಸುತ್ತಿದ್ದ ಹೋರಾಟಗಳಿಗಾಗಿ ಅಸ್ಮಾ ಅವರಿಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು.


2017: ಕೋಲ್ಕತ: ನಿರಂತರವಾಗಿ 5 ದಶಕಗಳ ಕಾಲ ದೇಶದ ಪ್ರಧಾನಿಯಿಂದ ಸಾಮಾನ್ಯ ಜನರ ವಾಹನವಾಗಿ ಜನಮನ ಗೆದ್ದಿದ್ದ ಹಿಂದೂಸ್ತಾನ್ ಮೋಟಾರ್ಸ್ ಪ್ರಸಿದ್ಧ ಅಂಬಾಸಿಡರ್ ಕಾರಿನ ಬ್ರಾಂಡ್ ಅನ್ನು ಫ್ರಾನ್ಸ್ ಪಿಯುಗಿಯೋ ಕಂಪನಿ ಖರೀದಿಸಿತು.  ಸಿ.ಕೆ.ಬಿರ್ಲಾ ಗ್ರೂಪ್ ಹಿಂದೂಸ್ತಾನ್ ಮೋಟಾರ್ಸ್ 80 ಕೋಟಿ ರೂ.ಗಳಿಗೆ ಅಂಬಾಸಿಡರ್ ಬ್ರಾಂಡ್ ಮತ್ತು ಟ್ರೇಡ್ ಮಾರ್ಕ್ಗಳನ್ನು ಮಾರಾಟ ಮಾಡಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಕಳೆದ ತಿಂಗಳಷ್ಟೆ ಪಿಯುಗಿಯೋ ಕಂಪನಿ ಹಿಂದೂಸ್ತಾನ್ ಮೋಟಾರ್ಸ್ ಜತೆಗೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಮೂಲಕ ಭಾರತದ ಮಾರುಕಟ್ಟೆಗೆ ಮರು ಪ್ರವೇಶ ಮಾಡಲು ಪಿಯುಗಿಯೋ ಸಿದ್ಧತೆ ನಡೆಸಿತ್ತು. ಪಿಯುಗಿಯೋ ಭಾರತದಲ್ಲಿ 700 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೂ ಮುನ್ನ 1999ರಲ್ಲಿ ಪಿಯುಗಿಯೋ ಪ್ರೀಮಿಯರ್ ಕಂಪನಿಯೊಂದಿಗೆ ಪಾಲುದಾರಿಕೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿತ್ತು. ಕಾರಣಾಂತರಗಳಿಂದಾಗಿ 2001ರಲ್ಲಿ ಪಿಯುಗಿಯೋ ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿದಿತ್ತು. ಸಾಕಷ್ಟು ವರ್ಷಗಳ ಕಾಲ ಭಾರತದ ರಸ್ತೆಯನ್ನು ಆಳಿದ್ದ ಅಂಬಾಸಿಡರ್ ಹೊಸ ಕಾರುಗಳ ಆಗಮನದೊಂದಿಗೆ ನಿಧಾನವಾಗಿ ನೇಪಥ್ಯಕ್ಕೆ ಸರಿಯಲು ಆರಂಭಿಸಿತ್ತು. ಕಾರುಗಳ ಮಾರಾಟ ತೀವ್ರವಾಗಿ ಕುಸಿದಿದ್ದರಿಂದಾಗಿ ಹಿಂದುಸ್ತಾನ್ ಮೋಟಾರ್ಸ್ 2014 ಮೇ 24 ರಂದು ಅಂಬಾಸಿಡರ್ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

2017: ಭುವನೇಶ್ವರ: ವೈರಿ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಆತ್ಯಾಧುನಿಕ ತಂತ್ರಜ್ಞಾನದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಈದಿನ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿದವು.  ಒಡಿಶಾದ ಬಾಲಸೋರ್ ಬಳಿ ಇರುವ ಅಬ್ದುಲ್ ಕಲಾಂ ದ್ವೀಪದಲ್ಲಿ ವಾಯು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. 7.5 ಮೀಟರ್ ಉದ್ದ ಇರುವ ಕ್ಷಿಪಣಿ 30 ಕಿ.ಮೀ. ಎತ್ತರದಲ್ಲೇ ವೈರಿ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ನವೆಂಬರ್ 16 ರಂದು ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ಕ್ಷಿಪಣಿಯ ಪರೀಕ್ಷೆ ನಡೆದಿರಲಿಲ್ಲ. ಬದಲಾಗಿ ಡಿಆರ್ಡಿಒ ವಿಜ್ಞಾನಿಗಳು ಪೃಥ್ವಿ – 2 ಕ್ಷಿಪಣಿಯ ಪರೀಕ್ಷೆ ನಡೆಸಿದ್ದರು.  ಭಾರತದ ಬಳಿ ಖಂಡಾಂತರ ಕ್ಷಿಪಣಿಯ ದಾಳಿಯನ್ನು ಗುರುತಿಸಲು 2 ಹಂತದ ರಕ್ಷಣಾ ವ್ಯವಸ್ಥೆ ಇದೆ. ಇದು ಭೂಮಿಯ ವಾತಾವರಣದ ಹೊರಭಾಗ ಮತ್ತು ಭೂಮಿಯ ವಾತಾವರಣದ ಒಳಭಾಗದಲ್ಲಿ ಆಗಮಿಸುವ ಕ್ಷಿಪಣಿಯನ್ನು ಗುರುತಿಸುತ್ತದೆ. ಸುಧಾರಿತ ವಾಯು ಗಡಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷೆಯ ನಂತರ ವ್ಯವಸ್ಥೆ ಹೊಂದಿದ ಅಮೆರಿಕ, ರಷ್ಯಾ ಮತ್ತು ಇಸ್ರೇಲ್ ರಾಷ್ಟ್ರಗಳೊಂದಿಗೆ ಭಾರತ ಗುರುತಿಸಲಿಕೊಳ್ಳಲಿದೆ ಎಂದು ಡಿಆರ್ಡಿಒ ಅಧಿಕಾರಿಗಳು ತಿಳಿಸಿದರು.
2017: ನವದೆಹಲಿಉತ್ತರ ಪ್ರದೇಶ ವಿಧಾನ ಸಭೆಯ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಶೇ.63ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿತು. ರಾಜ್ಯದ ಪಶ್ಚಿಮ ಭಾಗದ 73 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಗೆ ಇಂದು ದಿನಾಂಕ ನಿಗದಿಪಡಿಸಲಾಗಿತ್ತು. ‘ರಾಜ್ಯದ 15 ಜಿಲ್ಲೆಗಳಲ್ಲಿ ನಡೆದ ಮತ ಚಲಾವಣೆ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಶೇ.63ರಷ್ಟು ಮಂದಿ ಹಕ್ಕು ಚಲಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆಎಂದು ಉತ್ತರ ಪ್ರದೇಶ ಚುನಾವಣಾ ಆಯುಕ್ತ ವಿಜಯ್ದೇವ್ತಿಳಿಸಿದರು.
2017: ಚೆನ್ನೈ: ತಮಿಳುನಾಡು ರಾಜಕೀಯ ಬೆಳವಣಿಗೆಯಲ್ಲಿ ಶಾಲಾ ಶಿಕ್ಷಣ ಸಚಿವ ಕೆ. ಪಾಂಡಿರಾಜನ್ಹಾಗೂ ಇಬ್ಬರು ಸಂಸದರು ಉಸ್ತುವಾರಿ ಮುಖ್ಯಮಂತ್ರಿ . ಪನ್ನೀರ್ಸೆಲ್ವಂ ಅವರ ಗುಂಪು ಸೇರಿದರು. ಮುಖ್ಯಮಂತ್ರಿ ಗದ್ದುಗೆಗೇರಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಕಸರತ್ತು ನಡೆಸಿದ್ದು, ಶಾಸಕರ ಬೆಂಬಲದ ಪರೇಡ್ನಡೆಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ
ಪನ್ನೀರ್ಸೆಲ್ವಂ ಅವರು ಸಂಸದರು ಹಾಗೂ ಹಾಲಿ ಸಚಿವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಗುಂಪು ರಾಜಕೀಯದ ಮೇಲಾಟದಲ್ಲಿ ತೊಡಗಿದರು. ಇಂದಿನ ಬೆಳವಣಿಗೆಯಲ್ಲಿ ಪಾಂಡಿರಾಜನ್ಅವರು, ಗ್ರೀನ್ವೇಸ್ರೋಡ್ನಲ್ಲಿರವು ಸೆಲ್ವಂ ಅವರ ಅಧಿಕೃತ ನಿವಾಸಕ್ಕೆ ಮಾಜಿ ಸಚಿವ ಕೆ.ಪಿ. ಮುನ್ಸ್ವಾಮಿ ಮತ್ತು ರಾಜ್ಯಸಭಾ ಸದಸ್ಯ ವಿ. ಮೈತ್ರೆಯನ್ಅವರೊಂದಿಗೆ ಭೇಟಿ ನೀಡಿ ಸೆಲ್ವಂ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಎಐಎಡಿಎಂಕೆಯ ನಾಮ್ಕಲ್ಮತ್ತು ಕೃಷ್ಣಗಿರಿ ಕ್ಷೇತ್ರದ ಸಂಸದರಾದ ಪಿ.ಆರ್‌. ಸುಂದರಮ್ಮತ್ತು ಕೆ. ಅಶೋಕ್ಕುಮಾರ್ಅವರು ಪನ್ನೀರ್ಸೆಲ್ವಂ ಅವರು ಗುಂಪು ಸೇರಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ಮೂಲಕ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ವಿರುದ್ಧ ತಿರುಗಿಬಿದ್ದರು. ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಕ್ಷಣದಿಂದ ಕ್ಷಣಕ್ಕೆ ಹೊಸ ತಿರುವು ಪಡೆದು ಒ. ಪನ್ನೀರಸೆಲ್ವಂ ಅವರ ಬಲ ಮತ್ತಷ್ಟು ಹೆಚ್ಚಿತು. ಎಐಎಡಿಎಂಕೆ ಹಿರಿಯ ನಾಯಕ ಸಿ. ಪೊನ್ನಯ್ಯನ್  ಅವರು ಪನ್ನೀರಸೆಲ್ವಂ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸುವುದರೊಂದಿಗೆ ವಿ.ಕೆ. ಶಶಿಕಲಾ ಅವರಿಗೆ ಇನ್ನೊಂದು ಹೊಡೆತ ಬಿದ್ದಿತು. ಬೆನ್ನಲ್ಲೇ ಮಾಜಿ ಸಚಿವ ರಾಜೇಂದ್ರ ಪ್ರಸಾದ್, ರಾಜಕಾರಣಿಯಾಗಿ ಪರಿವರ್ತನೆಗೊಂಡ ನಟ ಸಮಥುವಾ ಮಕ್ಕಳ್ ಕಚ್ಚಿ ಪಕ್ಷದ ಅಧ್ಯಕ್ಷ ಶರತ್ ಕುಮಾರ್ ಅವರೂ ಪನ್ನೀರಸೆಲ್ವಂ ಅವರಿಗೆ ಬೆಂಬಲ ಘೋಷಿಸಿದರು. ಇದಕ್ಕೆ ಮುನ್ನ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ತಮಿಳುನಾಡಿನ ಮಹಾಬಲಿಪುರಂನ ಗೋಲ್ಡನ್ ಬೇ ರಿಸಾರ್ಟ್ಗೆ ತೆರಳಿದಿಗ್ಬಂಧನದಲ್ಲಿ ಇರಿಸಲಾದ ಶಾಸಕರ ಜೊತೆಗೆ ಸಮಾಲೋಚನೆ ನಡೆಸಿ, ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ಮನೆಯ ಮುಂದೆ ಶಾಸಕರ ಪರೇಡ್ ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದರು. ಅದಕ್ಕೂ ಮುನ್ನ ರಾಜ್ಯಪಾಲರಿಗೆ ಪತ್ರ ಬರೆದ ಶಶಿಕಲಾ ಅವರು ತಮಗೆ ನಿಷ್ಠರಾದ ಶಾಸಕರೊಂದಿಗೆ ಪರೇಡ್ ನಡೆಸುವ ಮೂಲಕ ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವಂತೆ ಕೋರಿದ್ದರು. ಪನ್ನೀರಸೆಲ್ವಂ ಅವರಿಗೆ ಬೆಂಬಲ ಪ್ರಕಟಿಸಿದ ಪೊನ್ನಯ್ಯನ್ ಅವರುಒಪಿಎಸ್ ಅವರ ನಮ್ಮ ಹಿರಿಯಣ್ಣ ಮತ್ತು ಮುಖ್ಯಮಂತ್ರಿ ಹುದ್ದೆಗೆ ನಮ್ಮ ಆಯ್ಕೆ. ಪ್ರಧಾನ ಕಾರ್ಯದರ್ಶಿ ಚುನಾಯಿತರ ಪೈಕಿ ಆಯ್ಕೆಯಾಗಬೇಕು. ಮುಖ್ಯಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿ ಪನ್ನೀರಸೆಲ್ವಂ. ಅವರಿಗೆ ಅನುಭವ ಇದೆ, ಅಮ್ಮ ಅವರಿಂದ ಹಿಂದೆ ಆಯ್ಕೆ ಆದವರು ಕೂಡಾಎಂದು ಹೇಳಿದರು.

2016: ನವದೆಹಲಿ: ಭಾರತೀಯ ರೈಲ್ವೆ 18 ಸಾವಿರ ಖಾಲಿ ಹುದ್ದೆಗಳಿಗೆ ಆನ್ಲೈನ್ಪರೀಕ್ಷೆ ಆಯೋಜಿಸಿತ್ತು. ಇದು ಜಗತ್ತಿನ ಪ್ರಥಮ ಅತಿದೊಡ್ಡ ಆನ್ಲೈನ್ಪರೀಕ್ಷೆಯಾಗಿತ್ತು. ಪರೀಕ್ಷಾ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಳೆದ ತಿಂಗಳ 17ರಿಂದ 19 ರವರೆಗೆ ಆನ್ಲೈನ್ಪರೀಕ್ಷೆ ನಡೆಸಿತ್ತು. ಪ್ರಥಮ ಹಂತದಲ್ಲಿ ಉತ್ತೀರ್ಣರಾಗಿದ್ದ 2.73 ಲಕ್ಷ ಅಭ್ಯರ್ಥಿಗಳಿಗೆ ಆನ್ಲೈನ್ಪ್ರವೇಶ ಪರೀಕ್ಷೆ ನಡೆಸಿದ್ದೆವು ಎಂದು ರೈಲ್ವೆ ಸಚಿವಾಲಯ ತಿಳಿಸಿತು. ರೈಲ್ವೆ ನೇಮಕಾತಿ ಪ್ರಾಧಿಕಾರವು ಗ್ರೂಪ್‌–ಸಿ ಹುದ್ದೆಗಳಿಗಾಗಿ ಪರೀಕ್ಷೆ ನಡೆಸಿತ್ತು. ಈವರೆಗೂ ರೈಲ್ವೆ ಪರೀಕ್ಷೆಗಳನ್ನು ಕೈಬರಹದಲ್ಲಿ ನಡೆಸುತ್ತಿದ್ದ ಇಲಾಖೆ ಇದೀಗ ಡಿಜಿಟಲ್ಮಯವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆ, ಪಾರದರ್ಶಕತೆ ಕಾಪಾಡುವುದು ಮತ್ತು ಇನ್ನಿತರ ಅವ್ಯವಹಾರಗಳಿಗೆ ಕಡಿವಾಣ ಹಾಕಲು ನಿರ್ಧಾರ ತೆಗೆದು ಕೊಂಡಿರುವುದಾಗಿ ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದರು. ಆನ್ಲೈನ್ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮೇ ನಲ್ಲಿ ಮಾನಸಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಉತ್ತೀರ್ಣರಾದವರಿಗೆ ನೇಮಕಾತಿ ಆದೇಶ ರವಾನಿಸಲಾಗುವುದು. 13 ಲಕ್ಷ ಸಿಬ್ಬಂದಿ ಹೊಂದಿರುವ ರೈಲ್ವೆ ಇಲಾಖೆಯಲ್ಲಿ ಇನ್ನೂ 2 ಲಕ್ಷ ಹುದ್ದೆ ಖಾಲಿ ಇವೆ. ಅವುಗಳಲ್ಲಿ ಮುಂದಿನ ಹಂತದಲ್ಲಿ 20 ಸಾವಿರ ಹುದ್ದೆ ಭರ್ತಿಗಾಗಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿದವು.
2009: ಉತ್ತರಪ್ರದೇಶ ವಿಧಾನಸಭೆಯಲ್ಲಿ ಸೃಷ್ಟಿಯಾದ ತೀವ್ರ ಕೋಲಾಹಲ ಮರೆಯುವ ಮುನ್ನವೇ ಆಂಧ್ರಪ್ರದೇಶ ವಿಧಾನಸಭೆ ಸಹ ಈದಿನ ಅಂತಹುದೇ ಪ್ರಕ್ಷುಬ್ದ ದೃಶ್ಯಕ್ಕೆ ಸಾಕ್ಷಿಯಾಯಿತು. ಉತ್ತರಪ್ರದೇಶದ ಎಸ್.ಪಿ ಶಾಸಕರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಆಂಧ್ರದ ತೆಲುಗು ದೇಶಂ (ಟಿಡಿಪಿ) ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ತಮ್ಮನ್ನು ಎತ್ತಿ ಹೊರಹಾಕಲು ಯತ್ನಿಸಿದ ಮಾರ್ಷಲ್‌ಗಳ ಜೊತೆಯೇ ಕೈ ಕೈ ಮಿಲಾಯಿಸಿದರು. ಈ ಸಂದರ್ಭದಲ್ಲಿ ಟಿಡಿಪಿಯ ಇಬ್ಬರು ಶಾಸಕರು ಗಾಯಗೊಂಡರು. ದುರ್ನಡತೆಗಾಗಿ ಟಿಡಿಪಿ ನಾಯಕ ಚಂದ್ರಬಾಯಿ ನಾಯ್ಡು ಸೇರಿದಂತೆ ವಿವಿಧ ಪಕ್ಷಗಳ 46 ಶಾಸಕರನ್ನು ಅಮಾನತು ಮಾಡಿದ ಸಂದರ್ಭದಲ್ಲಿ ಈ ಘಟನೆ ನಡೆಯಿತು.

2009: ರಾಂಗಿಂಗ್ ಪಿಡುಗನ್ನು ತಡೆಗಟ್ಟಲು ತಾನು ರಚಿಸಿರುವ ಸಮಿತಿಯ ಮಾರ್ಗದರ್ಶನಗಳನ್ನು ಪಾಲಿಸುವಂತೆ ದೇಶದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ತಿಳಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿತು.. ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ನ್ಯಾಯಪೀಠ, ಈ ಸಮಿತಿ ನೀಡಿರುವ ಮಾರ್ಗದರ್ಶನಗಳಿಗೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಹೇಳಿದರು. ಎಲ್ಲ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ಸೇರ್ಪಡೆ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಪರಿಚಯ ಪ್ರಕಟಣೆಯಲ್ಲಿ ರಾಂಗಿಂಗ್ ಬಗೆಗಿನ ಸೂಚನೆಗಳನ್ನು ಪ್ರಕಟಿಸಬೇಕೆಂದು ಪೀಠ ತಿಳಿಸಿತು.

2009: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಮೂರು ಸರ್ಕಾರಿ ಕಟ್ಟಡಗಳ ಮೇಲೆ ತಾಲಿಬಾನ್ ಬಂಡುಕೋರರು ಏಕಕಾಲದಲ್ಲಿ ನಡೆಸಿದ ಆತ್ಮಹತ್ಯಾ ದಾಳಿ ಹಾಗೂ ಗುಂಡಿನ ಸುರಿಮಳೆಗೆ ಕನಿಷ್ಠ 26 ಜನ ಬಲಿಯಾದರು. ಕಾರಾಗೃಹ ನಿರ್ದೇಶನಾಲಯ, ಕಾನೂನು ಮತ್ತು ಶಿಕ್ಷಣ ಸಚಿವಾಲಯಗಳ ಮೇಲೆ ಏಕಕಾಲದಲ್ಲಿ ನಡೆದ ಈ ದಾಳಿಯಲ್ಲಿ 55 ಜನ ಗಾಯಗೊಂಡರು. ಘಟನೆಯಲ್ಲಿ ಕನಿಷ್ಠ ಏಳು ಉಗ್ರರು ಅಸು ನೀಗಿದರು.

2009: ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಏಕೈಕ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಹಸ್ತಾಕ್ಷರದ ಅಪರೂಪದ ಪತ್ರವೊಂದು ಬಾಂಗಾದ್ಲೇಶದ ಹಳ್ಳಿಯೊಂದರಲ್ಲಿ ಪತ್ತೆಯಾಯಿತು. ಉತ್ತರ ಬಾಂಗ್ಲಾದ ನವಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಒಬ್ಬ ವ್ಯಕ್ತಿ ಸಂಗ್ರಹಿಸಿದ ಪತ್ರಗಳಲ್ಲಿ ಇದು ಪತ್ತೆಯಾಯಿತು. ಆರು ಪುಟಗಳ ಪತ್ರದಲ್ಲಿ ಟ್ಯಾಗೋರ್ ಅವರಿಗೆ ಸಂಬಂಧಿಸಿದ ಕೆಲ ಖಾಸಗಿ ವಿಷಯಗಳೂ ಸೇರಿದಂತೆ ಖಚಿತ ಜನ್ಮದಿನದ ವಿವರ ಇತ್ತು. ಈ ಪತ್ರದ ನಿಖರತೆಯನ್ನು ವಸ್ತುಸಂಗ್ರಹಾಲಯದ ಮೇಲ್ವಿಚಾರಕರೊಬ್ಬರು ದೃಢಪಡಿಸಿದರು. ಈ ಪತ್ರ ಟ್ಯಾಗೋರ್‌ ಅವರ ಜನ್ಮ ದಿನದ ಬಗ್ಗೆ ಬೆಳಕು ಚೆಲ್ಲುವ ಕಾರಣಕ್ಕೆ ಹೆಚ್ಚು ಮಹತ್ವ ಪಡೆಯಿತು. ಅದರಲ್ಲಿ 6 ಮೇ 1861 ತಮ್ಮ ಜನ್ಮದಿನ ಎಂದು ಬರೆಯಲಾಗಿತ್ತು.

2009: ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯು.ಖಾನ್ ಅವರನ್ನು ಬಂಧ ಮುಕ್ತಗೊಳಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆ - ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸರ್ಕಾರವು ಇವರ ಮೇಲೆ ಮತ್ತೆ ನಿರ್ಬಂಧ ಹೇರಿತು. ಇರಾನ್, ಉತ್ತರ ಕೊರಿಯಾ ಹಾಗೂ ಲಿಬಿಯಾಗೆ ಪರಮಾಣು ರಹಸ್ಯಗಳನ್ನು ಬಯಲು ಮಾಡಿದುದಾಗಿ ಖಾನ್ ಒಪ್ಪಿಕೊಂಡ ನಂತರ ಅವರನ್ನು 2004 ರಿಂದ 5 ವರ್ಷಗಳ ಕಾಲ ಗೃಹ ಬಂಧನದಲ್ಲಿ ಇಡಲಾಗಿತ್ತು. ಇವರನ್ನು ಬಂಧ ಮುಕ್ತಗೊಳಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಖಾನ್ ಮತ್ತೆ ಇಂಥ ಕೆಲಸಕ್ಕೆ ಕೈಹಾಕುವುದನ್ನು ತಡೆಯುವ ಉದ್ದೇಶದಿಂದ ತಾನು ಅವರ ಮೇಲೆ ನಿರ್ಬಂಧ ವಿಧಿಸುತ್ತಿರುವುದಾಗಿ ಪಾಕಿಸ್ಥಾನ ತಿಳಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದರು.

2008: ಬ್ರಿಟನ್ನಿನ ಧನ ಸಹಾಯದಿಂದ ಪಶ್ಚಿಮ ಬಂಗಾಳದ ಸುಂದರಬನ ಸಂರಕ್ಷಿತ ಅರಣ್ಯ ವಲಯವನ್ನು ಕಾಪಾಡುವುಕ್ಕಾಗಿ 40ಲಕ್ಷ ಮ್ಯಾಂಗ್ರೋವ್ (ಕಾಂಡ್ಲಾಕಾಡು) ಸಸಿಗಳನ್ನು ನೆಡುವ ಯೋಜನೆ ಮಥುರಾಕಾಂಡ ದ್ವೀಪದಲ್ಲಿ ಆರಂಭವಾಯಿತು. ಕಾಂಡ್ಲಾ ಸಸಿಯನ್ನು ನೆಡುವುದರ ಮೂಲಕ ಈ ಯೋಜನೆಗೆ ಚಾಲನೆ ನೀಡಿದ ಬ್ರಿಟಿಷ್ ಹೈಕಮೀಷನರ್ ಸರ್ ರಿಚರ್ಡ್ ಸ್ಟಾಗ್, `ಪ್ರಕೃತಿ ನಿರ್ಮಿತ ಅರಣ್ಯ ವಲಯವನ್ನು ಕಾಪಾಡುವುದಕ್ಕಾಗಿಯೇ ತಯಾರಾದ ಒಂದು ಮಾದರಿ ಯೋಜನೆ ಇದಾಗಿದೆ. ಇದನ್ನು ಬೇರೆಯವರೂ ಅನುಕರಿಸಬಹುದು ' ಎಂದು ಹೇಳಿದರು. ಕಾಂಡ್ಲಾಕಾಡುಗಳು ಅಣೆಕಟ್ಟುಗಳ ಏರಿ ಒಡೆಯದಂತೆ ಕಾಪಾಡುವುದಲ್ಲದೆ, ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ವೇಗವನ್ನೂ ನಿಯಂತ್ರಿಸುತ್ತವೆ. ಕೋಲ್ಕತ ಮೂಲದ ನೈಸರ್ಗಿಕ ಪರಿಸರ ಮತ್ತು ವನ್ಯಜೀವಿ ಸಂಘ (ನ್ಯೂಸ್) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಬ್ರಿಟನ್ ಸರ್ಕಾರ ಈ ಯೋಜನೆಗೆ 60,000 ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಕೋಲ್ಕತ ವಿವಿಯ ವಿಜ್ಞಾನಿ ಪ್ರೊ. ಅವಜಿತ್ ಮಿತ್ರಾ, ಬ್ರಿಟಿಷ್ ಡೆಪ್ಯುಟಿ ಹೈಕಮೀಷನರ್ ಸಿಮೊನ್ ವಿಲ್ಸನ್ ಉಪಸ್ಥಿತರಿದ್ದರು.

2008: ಫೆಬ್ರುವರಿ ತಿಂಗಳ 18ಕ್ಕೆ ನಿಗದಿಯಾಗಿದ್ದ `ಮುಂಗಾರು ಮಳೆ' ಖ್ಯಾತಿಯ ಚಲನಚಿತ್ರ ನಟ ಗಣೇಶ್ ಅವರ ವಿವಾಹ ಈದಿನ ತಡರಾತ್ರಿ 9ರಿಂದ 11.30ರ ಅವಧಿಯಲ್ಲಿ ಮಂಗಳೂರಿನ ಶಿಲ್ಪಾ ಅವರೊಂದಿಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ವಧುವಿನ ನಿವಾಸದಲ್ಲಿ ದಿಢೀರನೆ ನಡೆಯಿತು. ಗಣೇಶ್ ಅವರ ವಿವಾಹವನ್ನು ಉಡುಪಿ ಜಿಲ್ಲೆಯ ಬಾರಕೂರಿಗೆ ಸಮೀಪದ ಹನೇಹಳ್ಳಿ ಸಂಕಮ್ಮ ತಾಯಿ ರೆಸಾರ್ಟಿನಲ್ಲಿ ನಡೆಸಲು ಈ ಹಿಂದೆ ನಿಶ್ಚಯಿಸಲಾಗಿತ್ತು. ಈ ವಿವಾಹದಲ್ಲಿ ಗಣೇಶ್ ಮತ್ತು ಶಿಲ್ಪಾ ಕುಟುಂಬ ವರ್ಗದವರು, ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕೆ. ಮಂಜು ಹಾಗೂ ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್ ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು ಭಾಗವಹಿಸಿದ್ದರು. ಶಿವರಾಮ ಮತ್ತು ಶಕುಂತಳಾ ಶೆಟ್ಟಿಗಾರ್ ದಂಪತಿಯ ಪುತ್ರಿ ಶಿಲ್ಪಾ ಬೆಂಗಳೂರಿನಲ್ಲಿ ಒಳಾಂಗಣ ವಿನ್ಯಾಸಗಾರ್ತಿ. ಶಿವರಾಮ ಶೆಟ್ಟಿಗಾರರು ಬಹಳ ಹಿಂದೆಯೇ ತಮ್ಮ ಸ್ವಂತ ಊರಾದ ಬಾರಕೂರನ್ನು ತೊರೆದು ಮುಂಬೈಗೆ ಹೋಗಿ ವ್ಯಾಪಾರದಲ್ಲಿ ತೊಡಗಿದ್ದು, ನಂತರ ಬೆಂಗಳೂರಿಗೆ ಬಂದು ನೆಲೆಸಿದವರು. ಶಿಲ್ಪಾ ಅವರ ಕಿರಿಯ ಸೋದರ ಶರಣ್ ಆಸ್ಟ್ರೇಲಿಯಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ಬಾರಕೂರಿನಲ್ಲಿ ಶಿಲ್ಪಾ ಅವರ ದೊಡ್ಡಪ್ಪನ ಮನೆ ಇದೆ.

2008: ಚಿತ್ರನಟ ಸಂಜಯ್ ದತ್ ಹಾಗೂ ಅವರ ಪ್ರೇಯಸಿ ಮಾನ್ಯತಾ ಮುಂಬೈಯಲ್ಲಿ ಹಿಂದೂ ವಿಧಿಗಳ ಅನ್ವಯ ವಿವಾಹ ಬಂಧನಕ್ಕೆ ಒಳಗಾದರು. ಮುಂಬೈ ಹೊರವಲಯದ ವರ್ಸೋವಾದಲ್ಲಿ ಮಾನ್ಯತಾ ಅವರ ನಿವಾಸದಲ್ಲಿ ವಿವಾಹ ನೆರವೇರಿತು. ಇದಕ್ಕೆ ಮೊದಲೇ ದತ್ ಮತ್ತು ಮಾನ್ಯತಾ ಗೋವಾದ ಪಂಚತಾರಾ ಹೋಟೆಲಿನಲ್ಲಿ ವಿಶೇಷ ಮದುವೆ ಕಾಯ್ದೆ ಅಡಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಫೆಬ್ರುವರಿ 7ರಂದು ಈ ಮದುವೆ ನಡೆದಿತ್ತು ಎನ್ನಲಾಗಿದೆ. ದತ್ ಹಾಗೂ ಮಾನ್ಯತಾ ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಮಧ್ಯೆ ಸಂಜಯದತ್ ಹಾಗೂ ಮಾನ್ಯತಾ ಅಲಿಯಾಸ್ ದಿಲ್ನಾಶೀನ್ ಅಮೀರ್ ಅಹ್ಮದ್ ಶೇಖ್ ನಡುವಿನ ವಿವಾಹ ಈ ಇಬ್ಬರೂ ಪ್ರಮಾಣಪತ್ರಕ್ಕೆ ಸಹಿ ಹಾಕಿದ ನಂತರವೇ ಅಧಿಕೃತವಾಗಲಿದೆ ಎಂದು ಗೋವಾದ ನೋಂದಣಿ ಅಧಿಕಾರಿಗಳು ತಿಳಿಸಿದರು. ಫೆಬ್ರುವರಿ 7ರಂದು ಪ್ರಮಾಣಪತ್ರ ಸಲ್ಲಿಸಿದ್ದರೂ ಅದಕ್ಕೆ ಉಭಯರ ಸಹಿ ಬಿದ್ದಿಲ್ಲ ಎಂದು ಅಧಿಕಾರಿಗಳು ಹೇಳಿದರು.

2008: ಮಾರ್ಚ್ 28ರಂದು ಮೊದಲ ವಿಮಾನ ಹಾರಾಟ ನಡೆಸಲು ಸಜ್ಜಾಗಿ ನಿಂತ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಎಚ್ ಎ ಎಲ್ ವಿಮಾನನಿಲ್ದಾಣದ ಬದಲಿಗೆ ಎಲ್ಲ ವಿಮಾನಗಳು ಹೊಸ ವಿಮಾನನಿಲ್ದಾಣದ ಮೂಲಕವೇ ಹಾರಾಟ ನಡೆಸಲಿರುವುದನ್ನು ವಕೀಲ ಜಿ.ಆರ್.ಮೋಹನ್ ಪ್ರಶ್ನಿಸಿದರು.

2008: ಕಿಡ್ನಿ ಕಸಿ ಹಗರಣದ ಸೂತ್ರಧಾರ ಅಮಿತ್ ಕುಮಾರನ ಪ್ರಮುಖ ಸಹಚರ ಡಾ. ಸರಾಜ್ ಗುಡಗಾಂವಿನ ನ್ಯಾಯಾಲಯದಲ್ಲಿ ಶರಣಾಗತನಾದ. ದೆಹಲಿಯ ಶಾಹದಾರಾ ನಿವಾಸಿ ಡಾ. ಸರಾಜ್ ಜನವರಿ 24ರಂದು ಅಮಿತ್ ಕುಮಾರನ ಗುಡಗಾಂವ್ ಆಸ್ಪತ್ರೆ ಮೇಲೆ ದಾಳಿ ನಡೆದಾಗಿನಿಂದ ನಾಪತ್ತೆಯಾಗಿದ್ದ. ಗುಡಗಾಂವಿನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ರಂಜನಾ ಅಗರವಾಲ್ ಅವರ ಮುಂದೆ ಆತ ಶರಣಾಗತನಾದ.

2008: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ ಐ ಐ) ಹಾಗೂ ದೇಸಿ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುವುದನ್ನು ತೀವ್ರಗೊಳಿಸಿದ್ದರ ಪರಿಣಾಮವಾಗಿ, ಕರಡಿ ಮೇಲುಗೈಯಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ದಿನದಂತ್ಯದ ವಹಿವಾಟಿನಲ್ಲಿ 833 ಅಂಶಗಳಷ್ಟು ಇಳಿಕೆಯನ್ನು ದಾಖಲಿಸಿತು. ಈ ಮೂಲಕ ಷೇರುಪೇಟೆ ಸೂಚ್ಯಂಕವು 17 ಸಾವಿರ ಗಡಿಯಿಂದ ಜಾರಿತು.

2008: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸಂಗ್ರಹದ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದ್ದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಪವರ್ ಕಂಪೆನಿಯು, ಷೇರುಪೇಟೆ ವ್ಯವಹಾರವನ್ನು ನಿರಾಶೆಯೊಂದಿಗೆ ಆರಂಭಿಸಿತು. ರೂ 450ಕ್ಕೆ ದರಪಟ್ಟಿಯನ್ನು ನಿಗದಿ ಪಡಿಸಿದ್ದ ರಿಲಯನ್ಸ್ ಪವರ್, ಷೇರು ವಹಿವಾಟು ಆರಂಭದ ದಿನವೇ ಶೇ 32 ರಷ್ಟು ಕುಸಿತವನ್ನು ದಾಖಲಿಸಿತು. ಇದರಿಂದ ಷೇರು ಹೂಡಿಕೆದಾರರು ಹೊಂದಿದ್ದ ಆಶಾಗೋಪುರದ ಕನಸು ನೆಲಕ್ಕೆ ಅಪ್ಪಿಳಿಸಿದಂತಾಯಿತು. ದಿನದ ಷೇರುಪೇಟೆ ವಹಿವಾಟು ಅಂತ್ಯಗೊಂಡಾಗ ರೂ 372.50ಕ್ಕೆ ರಿಲಯನ್ಸ್ ಪವರ್ ಷೇರು ದರ ಇಳಿಕೆಯನ್ನು ದಾಖಲಿಸಿತು. ಇದೇ ವೇಳೆ, ಶತಕೋಟಿ ಡಾಲರ್ ಬಂಡವಾಳದ ಕಂಪೆನಿಗಳ ಒಟ್ಟಾರೆ ಶೇ 40 ಷೇರುಗಳು ಕುಸಿತ ಕಂಡವು.

2008: ದೊಡ್ಡ ಗಾತ್ರದ ಮೂಗು ಹೊಂದಿರುವವರು ಹೆಚ್ಚು ದುಡ್ಡು ಗಳಿಸುತ್ತಾರೆ ಮತ್ತು ಅಗಲ ಮೂಗಿನವರು ಪ್ರಬಲ ಲೈಂಗಿಕ ಆಸಕ್ತಿ ಹೊಂದಿರುತ್ತಾರಂತೆ! ಮೂಗು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸಬಲ್ಲುದು. ಅದು, ಆತನ ಅಥವಾ ಆಕೆಯ ಮನೋಭಾವ, ನಡವಳಿಕೆ, ಲೈಂಗಿಕ ಆಸಕ್ತಿ ಹೀಗೆ ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ ಎಂದು ಅಮೆರಿಕದ ಮಾನವ ಶಾಸ್ತ್ರಜ್ಞರಾದ ಜೇಮ್ಸ್ ಕ್ಯಾರಿ ಮತ್ತು ಎ.ಟಿ.ಸ್ಟೆಗ್ಮನ್ ಬಹಿರಂಗಪಡಿಸಿದರು. ಇವರ ಪ್ರಕಾರ ಉದ್ದ ಮತ್ತು ಕಿರಿದಾದ ಮೂಗುಳ್ಳವರು ಹಾಸ್ಯ ಪ್ರವೃತ್ತಿಯವರು ಮತ್ತು ಬುದ್ಧಿವಂತರಾಗಿರುತ್ತಾರೆ. ಸಣ್ಣ ಮೂಗುಳ್ಳವರು ಹಣಕ್ಕೆ ಪ್ರಾಧಾನ್ಯ ನೀಡುವವರಲ್ಲ. ಅಗಲ ಮೂಗಿನ ಹೊಳ್ಳೆ ಇರುವವರು ಹೆಚ್ಚು ಖರ್ಚು ಮಾಡುವವರು. ಮೂಗಿನ ಹೊಳ್ಳೆಗಳ ಅಗಲ ಕಣ್ಣುಗಳ ಮಧ್ಯದ ಅಳತೆಗಿಂತ ಹೆಚ್ಚಿರಬಾರದು. ಇವರು ಪ್ರಾಮಾಣಿಕರು, ಸತ್ಯವಂತರಾಗಿರುತ್ತಾರೆ, ಅಲ್ಲದೆ ನಮ್ಮ ಪೂರ್ವಜರು ಎಲ್ಲಿಂದ ಬಂದವರು ಎಂಬುದನ್ನೂ ಮೂಗು ಹೇಳಬಲ್ಲುದು ಎನ್ನುತ್ತಾರೆ ಈ ವಿಜ್ಞಾನಿಗಳು.

2008: ಅತೀಂದ್ರಿಯ ಧ್ಯಾನವನ್ನು ಜನಸಮೂಹಕ್ಕೆ ಪರಿಚಯಿಸಿದ ಮಹರ್ಷಿ ಮಹೇಶ ಯೋಗಿ ಅವರ ಪಾರ್ಥಿವ ಶರೀರ ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಪಂಚಭೂತಗಳಲ್ಲಿ ಲೀನವಾಯಿತು. ಫೆಬ್ರುವರಿ 6ರಂದು ಹಾಲೆಂಡಿನಲ್ಲಿ ಮಹರ್ಷಿ ದೈವಾಧೀನರಾಗಿದ್ದರು. ಮೂರು ದಿನಗಳ ನಂತರ ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲಾಗಿತ್ತು.

2008: ಮರಳಿನಲ್ಲಿ ಕಪ್ಪೆಗೂಡು, ಗುಬ್ಬಚ್ಚಿಮನೆ, ನಾಯಿ ಮನೆ ಕಟ್ಟುವುದು ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಸಮುದ್ರ ತೀರ, ನದಿ ದಂಡೆಯಲ್ಲೇಕೆ ಮಕ್ಕಳು ಮನೆಕಟ್ಟುವ ಆಟವಾಡುತ್ತಾರೆ? ಏಕೆಂದರೆ ಮರಳಿನ ಜೊತೆ ಹದವಾಗಿ ನೀರು ಬೆರೆತಿರುತ್ತದೆ. ಹಾಗಿರುವುದರಿಂದಲೇ ಮಕ್ಕಳು ಕಟ್ಟಿದ ಗೂಡುಗಳು ಗಟ್ಟಿಯಾಗಿ ನಿಲ್ಲುತ್ತವೆ! ಎಂದು ಆಸ್ಟ್ರೇಲಿಯಾ ಮತ್ತು ಜರ್ಮನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯೊಂದು ಬಹಿರಂಗಪಡಿಸಿತು. ಮರಳಿನ ಕಣಗಳನ್ನು ನೀರು ಜೋಡಿಸುತ್ತದೆ. ಈ ಸಂಬಂಧವನ್ನು ಕಣ-ದ್ರವ-ಗಾಳಿಯ ಅಂತರ್ ಸಂಪರ್ಕ ಎಂದು ಸಂಶೋಧನೆ ಹೇಳಿತು.

2008: ದಕ್ಷಿಣ ಕೊರಿಯಾದ ಮಹತ್ವದ ಐತಿಹಾಸಿಕ ಕುರುಹಾಗಿದ್ದ 600 ವರ್ಷಗಳಷ್ಟು ಹಳೆಯ ವುಡನ್ ಬಿಲ್ಡಿಂಗ್(`ಮರದ ಕಟ್ಟಡ') ಬೆಂಕಿಗೆ ಆಹುತಿಯಾಯಿತು.

2008: ಹಾಲಿವುಡ್ಡಿನ ಪ್ರಸಿದ್ಧ ಚಿತ್ರ `ಜಾಜ್'ನಲ್ಲಿನ ನಟನೆಯಿಂದ ಮನೆಮಾತಾಗಿದ್ದ, ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಸೂಚಿತರಾಗಿದ್ದ ಹಾಲಿವುಡ್ ನಟ ರಾಯ್ ಶೀಡರ್ (75) ಅವರು ಲಿಟಲ್ ರಾಕಿನಲ್ಲಿರುವ ಅರ್ಕನಾಸಾಸ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಕಾಲೇಜಿನ ಆಸ್ಪತ್ರೆಯಲ್ಲಿ ನಿಧನರಾದರು. 1971ರಲ್ಲಿ `ದಿ ಫ್ರೆಂಚ್ ಕನೆಕ್ಷನ್' ಚಿತ್ರದಲ್ಲಿ ಪೋಷಕ ನಟ ಪಾತ್ರಕ್ಕಾಗಿ ಹಾಗೂ 1979ರಲ್ಲಿ `ಆಲ್ ದಟ್ ಜಾಜ್' ಚಿತ್ರದಲ್ಲಿನ ನಟನೆಗಾಗಿ ಶೀಡರ್ ಹೆಸರು ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಸೂಚಿತವಾಗಿತ್ತು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮವಾಗಿ ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಮತ್ತು ಇತರರು ಸುಮಾರು 31 ತಾಸುಗಳ ಕಾಲ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಈ ಅವಧಿಯಲ್ಲಿ ಅವರ ಭೂಮಿ ಜೊತೆಗಿನ ಸಂಪರ್ಕ ಕಡಿದುಹೋಗಿತ್ತು.

2007: ಅರಬ್ಬರ ವಿರೋಧವನ್ನು ಲೆಕ್ಕಿಸದೆ ಜೆರುಸಲೇಂನ ಹೊರಭಾಗದ ಅತ್ಯಂತ ವಿವಾದಾತ್ಮಕ ಧಾರ್ಮಿಕ ತಾಣದಲ್ಲಿಉತ್ಖನನ ಮುಂದುವರೆಸಲು ಇಸ್ರೇಲ್ ಸಚಿವ ಸಂಪುಟ ನಿರ್ಧರಿಸಿತು. ಉದ್ದೇಶಿತ ಚೌಕಟ್ಟಿನ ಮಿತಿಯಲ್ಲೇ ಒಳಗೆ ಮುಘ್ರಾಬಿ ಗೇಟಿಗೆ ಸಂಪರ್ಕ ಮಾರ್ಗ ನಿರ್ಮಾಣದ ಕಾರ್ಯದ ಮುಂದುವರಿಕೆಗೂ ಸರ್ಕಾರ ಮಂಜೂರಾತಿ ನೀಡಿತು. ಮುಸ್ಲಿಮರು `ಅಲ್-ಹರಮ್-ಅಲ್-ಷರೀಫ್' ಎಂಬದಾಗಿ ನಂಬುವ ಈ ಕಟ್ಟಡವನ್ನು ಯಹೂದಿಗಳು ತಮ್ಮ `ಮೌಂಟ್ ಮಂದಿರ' ಎಂಬುದಾಗಿ ನಂಬುತ್ತಾರೆ.

2007: ಭಾರತದ ಪ್ರಮುಖ ಮೊಬೈಲ್ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ಹಚ್- ಎಸ್ಸಾರ್ ಕಂಪೆನಿಯನ್ನು ಬ್ರಿಟನ್ನಿನ ಪ್ರಮುಖ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ವಡಾಫೋನ್ 19.3 ಬಿಲಿಯನ್ ಡಾಲರುಗಳಿಗೆ (1930ಕೋಟಿ ಡಾಲರ್) ಖರೀದಿಸಿತು.

2007: ಬೆಂಗಳೂರಿನ ಯಲಹಂಕದಲ್ಲಿ ಐದು ದಿನಗಳಿಂದ ವಿಮಾನಾಸಕ್ತರ ಕುತೂಹಲ ಕೆರಳಿಸಿ, ಜಗತ್ತಿನ ಗಮನ ಸೆಳೆದಿದ್ದ ಆರನೇ ಏರ್ ಇಂಡಿಯಾ -2007 ವೈಮಾನಿಕ ಪ್ರದರ್ಶನಕ್ಕೆ ತೆರೆಬಿತ್ತು. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಪ್ರದರ್ಶನ ವೀಕ್ಷಿಸಿದರು.

2007: ವಾರ್ಷಿಕ ಪ್ರೇಮಿಗಳ ದಿನಾಚರಣೆ ಅಂಗವಾಗಿ ಫಿಲಿಪ್ಪೀನ್ಸಿನ ಮನಿಲಾದಲ್ಲಿ ಏರ್ಪಡಿಸಲಾಗಿದ್ದ `ಮುತ್ತಿನ ಹಬ್ಬ'ದಲ್ಲಿ 6214 ಜೋಡಿಗಳು ಪಾಲ್ಗೊಂಡು `ಮುತ್ತಿನ ದಾಖಲೆ' ನಿರ್ಮಿಸಿದವು. 2005ರಲ್ಲಿ ಬುಡಾಪೆಸ್ಟಿನಲ್ಲಿ 5875 ಜೋಡಿಗಳು ನಿರ್ಮಿಸಿದ್ದ ಮುತ್ತಿನ ದಾಖಲೆಯನ್ನು ಈ ಜೋಡಿಗಳು ಅಳಿಸಿ ಹಾಕಿದವು.

2007: ಉತ್ತರ ಪ್ರದೇಶದ ಬುಲಂದಶಹರಿನ ರಾಜಘಾಟಿನಲ್ಲಿ ಖಾಸಗಿ ಬಸ್ಸೊಂದು ಗಂಗಾನದಿ ಕಾಲುವೆಗೆ ಉರುಳಿ ಬಿದ್ದು 45 ಜನ ಮೃತರಾದರು.

2007: ನದಿಯ ನೀರಿನ ಮೇಲೆ ರಸ್ತೆಯಲ್ಲಿ ಚಲಿಸುವಂತೆಯೇ ತೇಲುತ್ತಾ ಚಲಿಸಬಲ್ಲ ತನ್ನ ಹೊಸ ಸಂಶೋಧಿತ ಕಾರನ್ನು ಕೇರಳದ ತಿರುವನಂತಪುರದ 28ರ ಹರೆಯದ ತರುಣ ಮೆಕ್ಯಾನಿಕ್ ಪಿ.ಎಸ್. ವಿನೋದ್ ತಿರುವಲ್ಲಂ ಸರೋವರದಲ್ಲಿ ಎರಡನೇ ಬಾರಿಗೆ ಯಶಸ್ವಿಯಾಗಿ ಪ್ರದರ್ಶಿಸಿದರು. ಈ ಕಾರು ಪ್ರೊಫೆಲ್ಲರ್ ಹೊಂದಿದ್ದು, ನೀರನ್ನು ಪ್ರವೇಶಿಸಿದ ಬಳಿಕ ಇದು ಚಾಲೂ ಆಗುತ್ತದೆ. ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಬಳಸಿ ಈ ಪ್ರೊಫೆಲ್ಲರನ್ನು ಚಲಾಯಿಸಬಹುದು. ಈ ಕಾರು 1985ರ ಮಾಡೆಲ್ಲಿನ ಮಾರುತಿ ಕಾರಿನ ಚಾಸಿಸ್ ಮತ್ತು ಎಂಜಿನ್ ಹಾಗೂ ಪಾಲೆಯೋದ ಹೆಡ್ ಲೈಟ್, ಸ್ಕಾರ್ಪಿಯೋದ ಹಿಂಭಾಗವನ್ನು ಹೊಂದಿದೆ. ಇದನ್ನು ನಿರ್ಮಿಸಲು ವಿನೋದ್ ಗೆ 8.5 ಲಕ್ಷ ರೂಪಾಯಿ ವೆಚ್ಚ ತಗುಲಿದೆ.

2006: ಔಷಧಗಳ ಮೇಲೆ ಎಲ್ಲ ತೆರಿಗೆಗಳೂ ಸೇರಿದಂತೆ ಗರಿಷ್ಠ ಮಾರಾಟ ದರ (ಎಂ ಆರ್ ಪಿ) ನಮೂದಿಸುವುದನ್ನು ಏಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ರಾಮ್ ವಿಲಾಸ ಪಾಸ್ವಾನ್ ಪ್ರಕಟಿಸಿದರು.

1993: ಭಾರತದ ಖ್ಯಾತ ಚಿತ್ರ ನಿರ್ದೇಶಕ ಕಮಲ್ ಅಮ್ರೋಹಿ (1918-1993) ಈ ದಿನ ನಿಧನರಾದರು. ಇವರು ನಟಿ ಮೀನಾಕುಮಾರಿ ಅವರ ಪತಿ.

1990: ದಕ್ಷಿಣ ಆಫ್ರಿಕಾದ ಕರಿಯ ರಾಷ್ಟ್ರೀಯ ನಾಯಕ ನೆಲ್ಸನ್ ಮಂಡೇಲಾ ಅವರನ್ನು 27 ವರ್ಷಗಳ ಸುದೀರ್ಘ ಸೆರೆವಾಸದಿಂದ ಬಿಡುಗಡೆ ಮಾಡಲಾಯಿತು.

1980: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888- 1980) ನಿಧನರಾದರು.

1977: ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ (1905-1977) ಅವರು ನಿಧನರಾದರು. ರಾಷ್ಟ್ರಪತಿಯಾಗಿದ್ದಾಗಲೇ ನಿಧನರಾದ ಭಾರತದ ಎರಡನೇ ರಾಷ್ಟ್ರಪತಿ ಇವರು.

1975: ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ರಾಜಕೀಯ ಪಕ್ಷವೊಂದರ ಮೊತ್ತ ಮೊದಲ ಮಹಿಳಾ ನಾಯಕಿಯಾದರು.

1963: ಶಿಲ್ಪ ಕಲೆಗೆ ಹೊಸ ಆಯಾಮ ನೀಡಿ ಹೊಸ ಹೊಸ ಸಂಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದ ಗಣೇಶ ಎಲ್. ಭಟ್ ಅವರು ಲಕ್ಷ್ಮೀನಾರಾಯಣ ಭಟ್ಟ - ಮಂಗಳಾ ಭಟ್ ದಂಪತಿಯ ಮಗನಾಗಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೇಲಿನ ಇಡಗುಂಜಿಯಲ್ಲಿ ಜನಿಸಿದರು. 600ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ರಚಿಸಿ ಭಾರತ ಮತ್ತು ಇಂಗ್ಲೆಂಡಿನಲ್ಲಿ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ಸಂಘಟಿಸಿರುವ ಗಣೇಶ ಭಟ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರಗಳು ಲಭಿಸಿವೆ. ಮರಳು, ಮರಳುಮಿಶ್ರಿತ ಕೆಂಪುಕಲ್ಲು, ಶೆಲ್ ಸ್ಟೋನ್, ಫ್ರೆಂಚ್ ಸ್ಟೋನ್, ಶಿಂಪ್ಲಿ ಸ್ಟೋನ್, ಬಾತ್ ಸ್ಟೋನ್ ಇತ್ಯಾದಿಗಳನ್ನು ಬಳಸಿ ಶಿಲ್ಪಕಲಾಕೃತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಗಣೇಶ ಭಟ್ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಾಕೃತಿ ರಚನೆ ಬಗ್ಗೆ ತರಬೇತಿ ನೀಡಿದ್ದಾರೆ.

1945: ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಧುರೀಣ ಜೋಸೆಫ್ ಸ್ಟಾಲಿನ್ ಅವರು ಎರಡನೇ ಜಾಗತಿಕ ಸಮರ ಕಾಲದ ಯಾಲ್ಟಾ ಒಪ್ಪಂದಕ್ಕೆ ಸಹಿ ಹಾಕಿದರು. ನಾಝಿ ಜರ್ಮನಿಯನನ್ನು ಅಂತಿಮವಾಗಿ ಪರಾಭವಗೊಳಿಸುವ ಬಗೆ ಹಾಗೂ ಪರಾಜಿತ ಪೂರ್ವ ಯುರೋಪ್ ರಾಷ್ಟ್ರಗಳ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಈ ಮೂವರು ಚರ್ಚಿಸಿದರು.

1942: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ಜಮ್ನಾಲಾಲ್ ಬಜಾಜ್ (1889-1942) ನಿಧನರಾದರು.

1847: ಥಾಮಸ್ ಆಲ್ವಾ ಎಡಿಸನ್ (1847-1931) ಹುಟ್ಟಿದ. ಖ್ಯಾತ ಸಂಶೋಧಕನಾದ ಈತ 1000ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿದ್ದ ವ್ಯಕ್ತಿ. 1973ರಲ್ಲಿ ಈತನ 126ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್ ನ್ನು ಸ್ಥಾಪಿಸಲಾಯಿತು.

No comments:

Post a Comment