ಇಂದಿನ ಇತಿಹಾಸ History Today ಫೆಬ್ರುವರಿ 07
2019: ನವದೆಹಲಿ: ರಾಷ್ಟ್ರದ ಮೂಲಸವಲತ್ತು ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಡುತ್ತಿರುವ ’ಅದ್ಭುತ ಕೆಲಸವನ್ನು’ ಲೋಕಸಭೆಯಲ್ಲಿ
ಮೆಚ್ಚಿದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೇಜು ಕುಟ್ಟುವ ಮೂಲಕ ಸಚಿವರನ್ನು ಅಭಿನಂದಿಸಿದರು. ನಾಯಕಿಯನ್ನು ಅನುಸರಿಸಿದ ಕಾಂಗ್ರೆಸ್ ಸದಸ್ಯರೂ ಮೇಜು ಕುಟ್ಟುವ ಮೂಲಕ ಸಚಿವರನ್ನು ಅಭಿನಂದಿಸುವಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಇತರ ಪಕ್ಷಗಳ ಜೊತೆಗೂಡಿದರು. ಪ್ರಶ್ನೋತ್ತರ ವೇಳೆಯಲ್ಲಿ, ಗಡ್ಕರಿ ಅವರು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ರಾಷ್ಟ್ರದ ರಸ್ತೆ ಜಾಲ ವಿಸ್ತರಣೆ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ವಿಸ್ತೃತ ವಿವರಣೆ ನೀಡಿದರು. ’ಪಕ್ಷ ಭೇದವಿಲ್ಲದೆ ಎಲ್ಲ ಸಂಸತ್ ಸದಸ್ಯರೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ನನ್ನ ಸಚಿವಾಲಯದಿಂದ ನಡೆಯುತ್ತಿರುವ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂಬುದನ್ನು ನಾನಿಲ್ಲಿ ಹೇಳಲೇಬೇಕು’ ಎಂದು
ಗಡ್ಕರಿ ನುಡಿದರು. ಆಡಳಿತಾರೂಢ ಬಿಜೆಪಿ ಸದಸ್ಯರು ಮೆಜು ಕುಟ್ಟಿ ಅಭಿನಂದಿಸುತ್ತಿದ್ದುದರ ನಡುವೆ ಗಡ್ಕರಿ ಅವರು ತಮ್ಮ ಉತ್ತರಗಳನ್ನು ಮುಕ್ತಾಯ ಗೊಳಿಸುತ್ತಿದ್ದಂತೆಯೇ,
ಮಧ್ಯಪ್ರದೇಶದ ಕೇಸರಿ ಪಕ್ಷದ ಸದಸ್ಯ ಗಣೇಶ್ ಸಿಂಗ್ ಅವರು ಎದ್ದು ನಿಂತು ’ಕೇಂದ್ರ ರಸ್ತೆ ಸಾರಿಗೆ ಸಚಿವರು ನಡೆಸುತ್ತಿರುವ
’ಅದ್ಭುತ’ ಕಾಮಗಾರಿಗಳಿಗೆ ಸದನವು
ಮೆಚ್ಚುಗೆ ವ್ಯಕ್ತ ಪಡಿಸಬೇಕು’ ಎಂದು
ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ಹೇಳಿದರು. ಅಲ್ಲಿಯವರೆಗೂ ಶಾಂತವಾಗಿ ಗಡ್ಕರಿ ಅವರ ಮಾತುಗಳನ್ನು ಆಲಿಸುತ್ತಾ ಅವರ ಉತ್ತರಗಳಿಗೆ ತಲೆಯಾಡಿಸುತ್ತಿದ್ದ ಸೋನಿಯಾ ಗಾಂಧಿಯವರು ಈ ಹಂತದಲ್ಲಿ ನಸುನಕ್ಕರು
ಮತ್ತು ತಮ್ಮ ಮೆಚ್ಚುಗೆ ಸೂಚಕವಾಗಿ ಮೇಜು ಗುದ್ದಿದರು. ಇದನ್ನು ನೋಡಿದ ಕಾಂಗ್ರೆಸ್ ಸಂಸದರು, ಪಕ್ಷದ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ತಾವೂ ಗಡ್ಕರಿ ಕಾರ್ಯವನ್ನು ಮೆಚ್ಚಿ ಮೇಜುಗಳನ್ನು ಕುಟ್ಟಲು ಆರಂಭಿಸಿದರು. ಆಗಸ್ಟ್ ತಿಂಗಳಲ್ಲಿ ಸೋನಿಯಾ ಗಾಂಧಿಯವರು ತಮ್ಮ ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ತಾವು ಪ್ರಸ್ತಾಪಿಸಿದ ರಸ್ತೆ ಸಂಬಂಧಿತ ವಿಷಯಗಳಿಗೆ ’ಧನಾತ್ಮಕ ಸ್ಪಂದನೆ’ ನೀಡಿದ್ದಕ್ಕಾಗಿ
ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸಿ ಪತ್ರ ಬರೆದ ವರದಿಗಳು ಬಂದಿದ್ದವು. ಸೋನಿಯಾ ಗಾಂಧಿ ಅವರ ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಗಡ್ಕರಿ ಅವರನ್ನು ಅವರು ನೀಡಿದ್ದ ’ಮನೆಯ ಕಾಳಜಿ ತೆಗೆದುಕೊಳ್ಳಲಾಗದ ವ್ಯಕ್ತಿ ರಾಷ್ಟ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ’ ಎಂಬ ಹೇಳಿಕೆಗಾಗಿ
ಅಭಿನಂದಿಸಿದ್ದರು ಮತ್ತು ’ಅವರಿಗೆ ಧೈರ್ಯವಿದೆ, ಅವರು ರಫೇಲ್ ವಹಿವಾಟು, ಸಂಕಷ್ಟದಲ್ಲಿರುವ ರೈತರು ಮತ್ತು ರಾಷ್ಟ್ರದ ಸಂಸ್ಥೆಗಳ ನಾಶದ ಬಗೆಗೂ ಪ್ರತಿಕ್ರಿಯೆ ನೀಡಬೇಕು’ ಎಂದು
ಹೇಳಿದ್ದರು. ’ಗಡ್ಕರಿ
ಜಿ ಅಭಿನಂದನೆಗಳು. ಬಿಜೆಪಿಯಲ್ಲಿ ಒಂದಷ್ಟು ಧೈರ್ಯ ಇರುವ ವ್ಯಕ್ತಿ ನೀವು ಒಬ್ಬರೇ. ದಯವಿಟ್ಟು ರಫೇಲ್ ಹಗರಣ ಮತ್ತ ಅನಿಲ್ ಅಂಬಾನಿ, ರೈತರ ಸಂಕಷ್ಟ ಮತ್ತು ಸಂಸ್ಥೆಗಳ ನಾಶ ಬಗೆಗೂ ಪ್ರತಿಕ್ರಿಯೆ ನೀಡಿ’ ಎಂದು
ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ತಮ್ಮ ಟ್ವೀಟಿಗೆ ಗಡ್ಕರಿ ಟೀಕೆಗಳ ಕುರಿತ ವರದಿಯನ್ನು ಜೋಡಿಸಿದ್ದರು. ಕಳೆದ
ವಾರ, ಬಿಜೆಪಿಯ ವಿದ್ಯಾರ್ಥಿ ವಿಭಾಗದಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಮಾಜಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ನಾಗಪುರದಲ್ಲಿ ಮಾತನಾಡುತ್ತಾ ಕೇಂದ್ರ ಸಚಿವರು ಮೇಲಿನ ಹೇಳಿಕೆ ನೀಡಿದ್ದರು. ಕಾಕತಾಳೀಯವಾಗಿ ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಗಡ್ಕರಿ ಅವರ ಪಕ್ಕದಲ್ಲೇ ಕುಳಿತಿದ್ದ ರಾಹುಲ್ ಗಾಂಧಿಯವರು ಟಿಪ್ಪಣಿಗಳ ವಿನಿಮಯ ಮಾಡಿಕೊಳ್ಳುತ್ತಿದ್ದುದೂ ಕಂಡು ಬಂದಿತ್ತು.
2019: ನವದೆಹಲಿ: ರಾಷ್ಟ್ರವು ಲೋಕಸಭಾ ಚುನಾವಣೆಯ ಸನಿಹಕ್ಕೆ ಸರಿಯುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ರಾಷ್ಟ್ರೀಯ ಭದ್ರತೆ ಮತ್ತು ರಫೇಲ್ ಕುರಿತು ರಾಷ್ಟ್ರೀಯ ಚರ್ಚೆಗೆ ಬರುವಂತೆ’ ಸವಾಲು
ಎಸೆದರು. ’ಪ್ರಧಾನಿ ಮೋದಿಯವರು ಚರ್ಚೆಯಿಂದ ದೂರ ಓಡುತ್ತಾರೆ’ ಎಂದು
ರಾಹುಲ್ ಟೀಕಿಸಿದರು. ‘ನರೇಂದ್ರ
ಮೋದಿ ಅವರು ಒಬ್ಬ ಹೇಡಿ. ಅವರು ಚರ್ಚೆಯಿಂದ ದೂರ ಓಡುತ್ತಾರೆ’ ಎಂದು
ರಾಹುಲ್ ಗಾಂಧಿ ಅವರು ರಾಜಧಾನಿಯಲ್ಲಿ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.
‘ನರೇಂದ್ರ ಮೋದಿ ಒಬ್ಬ ’ದಾರ್‍ಪೋಕ್’
(ಹೇಡಿ) ವ್ಯಕ್ತಿ. ರಾಷ್ಟ್ರೀಯ ಭದ್ರತೆ ಮೇಲಿನ ಚರ್ಚೆಯಿಂದ ಅವರು ಓಡಿ ಹೋಗುತ್ತಾರೆ. ಯಾರಾದರೂ ಎದ್ದು ನಿಂತರೆ ಸಾಕು, ಮೋದಿ ಓಡುತ್ತಾರೆ’ ಎಂದು
ಅವರು ನುಡಿದರು. ಪ್ರಮುಖ ಸಂಸ್ಥೆಗಳ ಅಧಿಕಾರವನ್ನು ಮಸುಕುಗೊಳಿಸಲಾಗುತ್ತಿದೆ ಎಂದೂ ಕಾಂಗ್ರೆಸ್ ಅಧ್ಯಕ್ಷರು ಸರ್ಕಾರದ ವಿರುದ್ಧ ಆಪಾದಿಸಿದರು. ರಾಹುಲ್ ಗಾಂಧಿಯವರು ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪಕ್ಷದ ಅಲ್ಪ ಸಂಖ್ಯಾತ ವಿಭಾಗವು ಸಂಘಟಿಸಿದ್ದ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ‘ಭಾರತದ
ಸಂಸ್ಥೆಗಳು ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಅವು ರಾಷ್ಟ್ರಕ್ಕೆ ಸೇರಿದವು. ಕಾಂಗ್ರೆಸ್ ಇರಲಿ ಅಥವಾ ಬೇರೆ ಯಾವುದೇ ಪಕ್ಷವಿರಲಿ, ಸಂಸ್ಥೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ಅವರು (ಬಿಜೆಪಿ) ತಾವು ರಾಷ್ಟ್ರಕ್ಕಿಂತ ಮೇಲಿನವರು ಎಂದು ಯೋಚಿಸುತ್ತಾರೆ. ಇನ್ನು ಮೂರೇ ತಿಂಗಳಲ್ಲಿ ರಾಷ್ಟ್ರವು ಅವರಿಂತ ಮೇಲಿನದು ಎಂಬುದು ಅವರಿಗೆ ಅರ್ಥವಾಗಲಿದೆ’ ಎಂದು ಕಾಂಗ್ರೆಸ್
ಅಧ್ಯಕ್ಷರು ಹೇಳಿದರು. ‘ನರೇಂದ್ರ
ಮೋದಿ ಅವರ ಜೊತೆಗೆ ಐದು ವರ್ಷಗಳಿಂದ ಹೋರಾಡುತ್ತಿದ್ದೇನೆ. ಆದ್ದರಿಂದ ಪ್ರಧಾನಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ’ ಎಂದ ನುಡಿದ ರಾಹುಲ್,
ರಫೇಲ್ ವ್ಯವಹಾರದ ಮೇಲೆ ೧೦ನಿಮಿಷದ ಚರ್ಚೆಗೆ ಬನ್ನಿ ಎಂದು ಪ್ರಧಾನಿಗೆ ಸವಾಲೆಸೆದು ’ಮೋದಿ ಅವರು ಇದರಿಂದ ದೂರ ಓಡಿ ಹೋಗುತ್ತಾರೆ’ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ರಾಷ್ಟ್ರದ ಪ್ರತಿಯೊಬ್ಬ ಬಡವನಿಗೂ ಕನಿಷ್ಠ ಆದಾಯ ಖಾತರಿ ಒದಗಿಸುವ ಪಕ್ಷದ ಭರವಸೆಯನ್ನು ಕಾಂಗ್ರೆಸ್ ಅಧ್ಯಕ್ಷರು ಪುನರುಚ್ಚರಿಸಿದರು. ಪಕ್ಷವು ಕಳೆದ ಆರು ತಿಂಗಳುಗಳಿಂದ ಈ ಯೋಜನೆಯ ಬಗ್ಗೆ
ಚರ್ಚಿಸಿದೆ ಮತ್ತು ’ನರೇಂದ್ರ ಮೋದಿಯವರು ೧೫ ಮಂದಿ ಕೈಗಾರಿಕೋದ್ಯಮಿ
ಗೆಳೆಯರಿಗೆ ೩.೫ ಲಕ್ಷ
ಕೋಟಿ ರೂಪಾಯಿ ನೀಡಬಹುದಾಗಿದ್ದರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರದ ಬಡವರಿಗೆ ಕನಿಷ್ಠ ಆದಾಯ ಖಾತರಿ ನೀಡಬಹುದು ಎಂದು ತೀರ್ಮಾನಿಸಿತು’ ಎಂದು ಅವರು
ನುಡಿದರು. ಕನಿಷ್ಠ
ಖಾತರಿ ಆದಾಯ ಯೋಜನೆಯ ಅಡಿಯಲ್ಲಿ ನಾವು ಹಣವನ್ನು ಬಡವರ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿ ಮಾಡಲಿದ್ದೇವೆ’ ಎಂದು ಅವರು
ಹೇಳಿದರು. ಡೊಕ್ಲಾಮ್
ಬಿಕ್ಕಟ್ಟಿನ ವೇಳೆಯಲ್ಲಿ ಭಾರತದ ಪಡೆಗಳು ಮತ್ತು ಚೀನಾದ ಪಡೆಗಳು ಭೂತಾನಿನ ಪಶ್ಚಿಮ ಗಡಿಯಲ್ಲಿ ಮುಖಾಮುಖಿಯಾಗಿದ್ದವು. ಪ್ರಧಾನಿ ಮೋದಿ ಅವರು ಚೀನೀ ನಾಯಕತ್ವದ ಜೊತೆಗೆ ಮಾತುಕತೆ ನಡೆಸಲು ಯಾವುದೇ ಕಾರ್‍ಯಸೂಚಿಯೂ ಇಲ್ಲದೆ ’ಬೀಜಿಂಗಿಗೆ ಹಾರಿದರು’ ಮತ್ತು
ಅವರ ಮುಂದೆ ಕೈ ಮುಗಿದುಕೊಂಡು ನಿಂತರು
ಎಂದು ರಾಹುಲ್ ಟೀಕಿಸಿದರು. ಮಿಸ್ಟರ್
೫೬ ಅಂಗುಲಕ್ಕೆ ೪ ಅಂಗುಲ ಕೂಡಾ
ಇಲ್ಲ ಎಂಬುದು ಚೀನೀ ಸರ್ಕಾರಕ್ಕೆ ಅರ್ಥವಾಯಿತು. ಇದು ಮೋದಿಯ ಸ್ವಭಾವ. ಡೊಕ್ಲಾಮ್ ವಿಷಯದಲ್ಲಿ ಅವರು ಚೀನಾಕ್ಕೆ ತಲೆಬಾಗಿದರು’ ಎಂದು ಕಾಂಗ್ರೆಸ್
ಅಧ್ಯಕ್ಷ ಹೇಳಿದರು. ೨೦೧೪ರಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ಹೇಗಿತ್ತು ಎಂದರೆ ಅವರು ೧೫ ವರ್ಷಗಳ ಕಾಲ
ಆಡಳಿತ ನಡೆಸುವುದಾಗಿ ಹೇಳಿದರು. ಐದು ವರ್ಷಗಳಲ್ಲಿ ರೈತರ ವಿಷಯವಿರಲಿ, ಭ್ರಷ್ಟಾಚರವಿರಲಿ ಅಥವಾ ರಾಷ್ಟ್ರದ
ಭದ್ರತೆ ಇರಲಿ ಬಿಜೆಪಿ ಸರ್ಕಾರ ಏನು ಎಂಬುದನ್ನು ಪ್ರತಿಯೊಂದು ರಂಗದಲ್ಲೂ ಕಾಂಗ್ರೆಸ್ ಪಕ್ಷವು ಅನಾವರಣಗೊಳಿಸಿದೆ. ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ನ್ನು ೨೦೧೯ರಲ್ಲಿ
ಪರಾಭವಗೊಳಿಸಲಿದೆ ಎಂದು ರಾಹುಲ್ ನುಡಿದರು. ‘ಈದಿನ ನೀವು ಮೋದಿಯ ಮುಖ ನೋಡಿದರೆ, ಭೀತಿಯನ್ನು ಕಾಣುತ್ತೀರಿ. ರಾಷ್ಟ್ರವನ್ನು ವಿಭಜಿಸುವ ಮೂಲಕ ಆಡಳಿತ ನಡೆಸಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡಿದರೆ ಜನರು ಅವರನ್ನು ಕಿತ್ತು ಹಾಕುತ್ತಾರೆ ಎಂಬುದನ್ನು ಅವರೀಗ ಅರ್ಥ ಮಾಡಿಕೊಂಡಿದ್ದಾರೆ’ ಎಂದು ಗಾಂಧಿ
ಹೇಳಿದರು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಆರ್ಎಸ್ಎಸ್ ದೂರದಿಂದಲೇ
ನಿಯಂತ್ರಿಸುತ್ತದೆ. ಆರ್ಎಸ್ಎಸ್ ನಾಗಪುರದಿಂದ ರಾಷ್ಟ್ರವನ್ನು ಆಳಬಯಸುತ್ತಿದೆ
ಎಂದು ರಾಹುಲ್ ನುಡಿದರು. ನರೇಂದ್ರ ಮೋದಿ ಅವರು ಮುಂಭಾಗ ಕಾಣುವ ಮುಖ, ಮೋಹನ ಭಾಗ್ವತ್ (ಆರ್ಎಸ್ಎಸ್ ಮುಖ್ಯಸ್ಥ) ರಿಮೋಟ್ ಕಂಟ್ರೋಲ್’ ಎಂದು
ರಾಹುಲ್ ನುಡಿದರು.
2019: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಹಣಕಾಸು ನೀತಿ ಸಮಿತಿಯು ಬಡ್ಡಿ ದರಗಳನ್ನು ೨೫ ಮೂಲ ಪಾಯಿಂಟಿನಷ್ಟು
ಇಳಿಸುವ ಅಚ್ಚರಿದಾಯಕ ಕ್ರಮ ಕೈಗೊಂಡಿತು. ಇದರಿಂದಾಗಿ ರೆಪೋ ದರವು ಶೇಕಡಾ ೬.೫೦ಯಿಂದ ಶೇಕಡಾ
೬.೨೫ಕ್ಕೆ ಇಳಿಯಿತು. ಭಾರತೀಯ ರಿಸರ್ವ್ ಬ್ಯಾಂಕಿನ ಈ ಕ್ರಮದ ಪರಿಣಾಮವಾಗಿ
ವಸತಿ, ವಾಹನ ಸಾಲಗಳು ಸೇರಿದಂತೆ ಗ್ರಾಹಕರಿಗೆ ನೀಡಲಾಗುವ ಸಾಲಗಳ ಬಡ್ಡಿ ದರಗಳನ್ನು ಬ್ಯಾಂಕುಗಳು ಇಳಿಸುವ ಸಾಧ್ಯತೆಗಳಿವೆ.
ಆರ್
ಬಿಐ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಭೆ ಸೇರಿದ್ದ ಆರ್ಬಿಐ ಹಣಕಾಸು ನೀತಿ ಸಮಿತಿಯು ’ಲೆಕ್ಕಾಚಾರದ ಬಿಗಿತನ’ದ ನಿಲುವಿನ ಬದಲು
’ತಟಸ್ಥ’ ನಿಲುವು ಅನುಸರಿಸಲೂ
ನಿರ್ಧರಿಸಿತು. ಆರ್ಬಿಐ ನೀತಿಯು ಗುರಿಸಾಧನೆಗೆ ಅನುಕೂಲಕರವಾದುದಾಗಿದ್ದು, ಅದು ಇನ್ನಷ್ಟ ದರ ಕಡಿತಗಳ ಸೂಚನೆ
ನೀಡಿತು. ಕೇಂದ್ರೀಯ ಬ್ಯಾಂಕ್ ಹಣದುಬ್ಬರ ಅಂದಾಜನ್ನು ಕೂಡಾ ಪರಿಷ್ಕರಿಸಿದೆ ಎಂದು ವರದಿಗಳು ಹೇಳಿದವು. ಆರು ಸದಸ್ಯರ ಸಮಿತಿಯ ದರ ಕಡಿತದ ಪರವಾಗಿ
೪:೨ ಮತಗಳ ನಿರ್ಧಾರ
ಕೈಗೊಂಡಿದ್ದು, ನಿಲುವು ನೀತಿಯ ಬದಲಾವಣೆಯ
ನಿರ್ಧಾರ ಸರ್ವಾನುಮತದ್ದಾಗಿತ್ತು ಎಂದು ವರದಿ ಹೇಳಿದೆ. ಉಪ ಗವರ್ನರ್ ವಿರಲ್
ಆಚಾರ್‍ಯ ಮತ್ತು ಸಮಿತಿಯ
ಇನ್ನೊಬ್ಬ ಸದಸ್ಯ ಚೇತನ್ ಘಾಟೆ ಅವರು ಸಭೆಯಲ್ಲಿ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಒಲವು ವ್ಯಕ್ತ ಪಡಿಸಿದರು. ಶಕ್ತಿಕಾಂತ ದಾಸ್ ಮತು ಇತರ ಮೂವರು ಸದಸ್ಯರು ಬಡ್ಡಿದರ ಕಡಿತದ ಪರ ಮತ ನೀಡಿದರು.
ಬೆಳವಣಿಗೆಗೆ ಒತ್ತು ನೀಡುವುದರ ಜೊತೆಗೆ ಹಣದುಬ್ಬರವನ್ನು ಶೇಕಡಾ ೪ರ ದರದಲ್ಲಿ ಉಳಿಸಿಕೊಳ್ಳುವ
ಗುರಿ ಸಾಧನೆಗೆ ಅನುಕೂಲವಾಗುವಂತೆ ದರ ಕಡಿತ ಮಾಡಬೇಕು
ಎಂದು ಹಣಕಾಸು ನೀತಿ ಸಮಿತಿ ಅಭಿಪ್ರಾಯಪಟ್ಟಿತು. ‘ಹೂಡಿಕೆ
ಚಟುವಟಿಕೆ ಚೇತರಿಸುತ್ತಿದೆ. ಆದರೆ ಮುಖ್ಯವಾಗಿ ಮೂಲ ಸವಲತ್ತಿನ ಮೇಲಿನ ಸಾರ್ವಜನಿಕ ಹೂಡಿಕೆಯ ಬೆಂಬಲ ಪಡೆದಿದೆ’ ಎಂದು
ಸಮಿತಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ’ಖಾಸಗಿ ಹೂಡಿಕೆ ಚಟುವಟಿಕೆಯನ್ನು ಬಲಪಡಿಸುವ ಅಗತ್ಯವಿದೆ. ಹಾಗೆಯೇ ಖಾಸಗಿ ಬಳಕೆಯನ್ನೂ ಉತ್ತೇಜಿಸುವ ಅಗತ್ಯವಿದೆ ಎಂದು ಸಮಿತಿ ಹೇಳಿತು. ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಅಚ್ಚರಿದಾಯಕವಾಗಿ ಇಳಿಸುತ್ತಿದ್ದಂತೆಯೇ ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಿಸಿತು. ಪ್ರಕಟಣೆಯ ಬೆನ್ನಲ್ಲೇ ರೂಪಾಯಿಯು ಡಾಲರ್ ಎದುರು ೭೧.೬೯ ರೂಪಾಯಿಗೆ ಇಳಿದು ದುರ್ಬಲಗೊಂಡಿತು, ಆದರೆ ಶೀಘ್ರದಲ್ಲೇ ೭೧.೪೨ ರೂಪಾಯಿಗಳಿಗೆ
ಏರಿ ಸ್ವಲ್ಪ ಬಲಗಳಿಸಿಕೊಂಡಿತು. ಈ
ಹಿಂದೆ ೨೦೧೭ರ ಆಗಸ್ಟ್ ತಿಂಗಳಲ್ಲಿ ಆರ್ಬಿಐ ರೆಪೋದರವನ್ನು ಶೇಕಡಾ ೬.೦೦ಗೆ ಇಳಿಸಿತ್ತು.
ಬಿಜೆಪಿಗೆ ಅನುಕೂಲಕರ: ಚುನಾವಣಾ ವರ್ಷದಲ್ಲಿ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಡಲು ಬಯಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಶಯಕ್ಕೆ ಕೇಂದ್ರೀಯ ಬ್ಯಾಂಕಿನ ಅಚ್ಚರಿದಾಯಕ ಬಡ್ಡಿದರ ಇಳಿಕೆಯ ಕ್ರಮವು ಇಂಬು ಕೊಡುವ ನಿರೀಕ್ಷೆ ಇದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ಈಗಾಗಲೇ ಚುನಾವಣಾ ರಣೋತ್ಸಾಹದಲ್ಲಿದೆ ಮತ್ತು ಫೆಬ್ರುವರಿ ೧ರಂದು ಮಂಡಿಸಲಾದ ತನ್ನ ಮಧ್ಯಂತರ ಮುಂಗಡಪತ್ರದಲ್ಲಿ ಜನತೆಗೆ ಹಲವಾರು ಕೊಡುಗೆಗಳನ್ನು ಘೋಷಿಸಿದೆ. ವಿತ್ತ ಸಚಿವ ಪೀಯೂಶ್ ಗೋಯೆಲ್ ಅವರು ರಾಷ್ಟ್ರೀಯ ಚುನಾವಣೆಗಳಿಗಿಂತ ಮುಂಚಿನ ಈ ಸರ್ಕಾರದ ಕೊನೆಯ
ಮುಂಗಡಪತ್ರದಲ್ಲಿ ೫ ಲಕ್ಷ ರೂಪಾಯಿಗಳವರೆಗಿನ
ಆದಾಯಕ್ಕೆ ತೆರಿಗೆ ವಿನಾಯ್ತಿ, ಸಣ್ಣ ಹಾಗೂ ಮಧ್ಯಮ ದರ್ಜೆಯ ರೈತರಿಗೆ ೭೫,೦೦೦ ಕೋಟಿ
ರೂಪಾಯಿಗಳ ಖಚಿತ ಆದಾಯ ಯೋಜನೆ, ಅಸಂಘಟಿತ ರಂಗದ ಕಾರ್ಮಿಕರಿಗೆ ಮಹಾ ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಕೊಡುಗೆಗಳನ್ನು ಪ್ರಕಟಿಸಿದ್ದರು. ಸಾಮಾನ್ಯವಾಗಿ
ಹಣದುಬ್ಬರವನ್ನು ನಿಯಂತ್ರಿಸಲು ಆರ್ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ. ದರ ಕಡಿತವಾದರೆ ಅದು
ಆರ್ಥಿಕತೆಯಲ್ಲಿ ಉತ್ಪನ್ನಗಳ ಒಟ್ಟಾರೆ ಬೆಲೆಗಳು ನಿಯಂತ್ರಣದಲ್ಲಿವೆ ಎಂಬುದರ ಸೂಚನೆ. ಆರ್ಬಿಐ ದರ ಕಡಿತವು ಗ್ರಾಹಕರಿಗೆ
ಇನ್ನಷ್ಟು ಶುಭ ಸಮಾಚಾರಗಳನ್ನು ತರುವ ನಿರೀಕ್ಷೆಯಿದೆ. ದರ ಇಳಿಕೆಯ ಕಾರಣ
ಕಂಪೆನಿಗಳು ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುತ್ತವೆ. ಇದಷ್ಟೆ ಅಲ್ಲ ನಿಮ್ಮ ಗೃಹಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲ ಬಡ್ಡಿದರಗಳು ಕೂಡಾ ಇಳಿಯಬಹುದು. ಹೀಗಾಗಿ ನಿಮ್ಮ ಇಎಂಐಗಳು ಅಗ್ಗವಾಗಬಹುದು. ರಿಸರ್ವ್
ಬ್ಯಾಂಕ್ ಗ್ರಾಹಕ ದರ ಸೂಚ್ಯಂಕ (ಸಿಪಿಐ)
ಅಥವಾ ರಾಷ್ಟ್ರದ ಚಿಲ್ಲರೆ ಹಣದುಬ್ಬರವನ್ನುಆಧರಿಸಿ ತನ್ನ ನೀತಿಗಳನ್ನು ನಿರ್ಧರಿಸುತ್ತದೆ. ಕೊಳ್ಳುವ ಹಾಗೂ ಮಾರಾಟದ ಶಕ್ತಿಯ ಮೇಲೆ ಪ್ರಮುಖ ಪರಿಣಾಮ ಬೀರುವ ಗ್ರಾಹಕ ದರ ಸೂಚ್ಯಂಕವು ಹೇಗಿರುತ್ತದೆ
ಎಂಬುದನ್ನು ಆಧರಿಸಿಯೇ ಆರ್ಬಿಐ ರೆಪೋ ದರವನ್ನು ನಿರ್ಧರಿಸುತ್ತದೆ. 2018ರ
ಡಿಸೆಂಬರಿನಿಂದ ಇಲ್ಲಿಯವರೆಗಿನ ೧೮ ತಿಂಗಳುಗಳ ಅವಧಿಯಲ್ಲೇ
ಗ್ರಾಹಕ ದರ ಸೂಚ್ಯಂಕವು ಪ್ರಸ್ತುತ
ಅತ್ಯಂತ ಕಡಿಮೆ ಅಂದರೆ ಶೇಕಡಾ ೨.೧೯ರಷ್ಟು ಇದೆ.
ಇದಕ್ಕೆ ದ್ವಿದಳ ಧಾನ್ಯಗಳು, ಉತ್ಪನ್ನಗಳು ಮತ್ತು ತರಕಾರಿಗಳು, ಸಕ್ಕರೆ ಮಿಠಾಯಿಗಳು ಇತ್ಯಾದಿ ಸಿಹಿ ವಸ್ತುಗಳು ಹಾಗೂ ಮೊಟ್ಟೆ ದರಗಳ ಕುಸಿತದ ಕಾರಣ ಗ್ರಾಹಕ ದರ ಸೂಚ್ಯಂಕವು ಈ
ಮಟ್ಟಕ್ಕೆ ಕುಸಿದಿದೆ. ಹೀಗಾಗಿ ಕಡಿಮೆ ದರದಲ್ಲಿ ಸ್ಥಿರ ಹಣದುಬ್ಬರ ಇದ್ದಾಗ ಮತ್ತು ರೆಪೋ ದರ ಕಡಿತವಾದಾಗ ಸಾಮಾನ್ಯ
ಜನರಿಗೆ ಯಾವಾಗಲೂ ಅನುಕೂಲವಾಗುತ್ತದೆ. ಈ ಹಿಂದೆ ಊರ್ಜಿತ್
ಪಟೇಲ್ ಅವರು ಆರ್ ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಾಗ ರೆಪೋ ದರ ಕಡಿತದ ಮೂಲಕ
ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇದೀಗ ಶಕ್ತಿಕಾಂತ ದಾಸ್ ಅವರೂ ಮಹಾ ಚುನಾವಣೆಗೆ ಮುನ್ನ ಇದೇ ಮಾರ್ಗ ಅನುಸರಿಸಿದ್ದು, ಎನ್ ಡಿಎ ಸರ್ಕಾರಕ್ಕೆ ಶುಭ ಸಮಾಚಾರ ನೀಡಿದರು.
2019: ನವದೆಹಲಿ: ಬಿಹಾರ ಮಕ್ಕಳ ಆಶ್ರಯಧಾಮ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಎ ಕೆ ಶರ್ಮ
ಅವರನ್ನು ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹಿರಿಯ ಸಿಬಿಐ ಅಧಿಕಾರಿ ಎಂ. ನಾಗೇಶ್ವರ ರಾವ್ ಅವರನ್ನು ನ್ಯಾಯಾಲಯಕ್ಕೆ
ಕರೆಸಿಕೊಂಡ ಸುಪ್ರಿಂಕೋರ್ಟ್, ಶರ್ಮ ವರ್ಗಾವಣೆಯನ್ನು ’ನ್ಯಾಯಾಲಯ ನಿಂದನೆ’ ಎಂಬುದಾಗಿ
ಹೇಳಿತು. ಸಿಬಿಐಯ ಹಿಂದಿನ ಹಂಗಾಮೀ ನಿರ್ದೇಶಕ ರಾವ್ ಮತ್ತು ಇತರ ಅಧಿಕಾರಿಗಳಿಗೆ ಫೆಬ್ರುವರಿ ೧೨ರಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶಿಸಿದ ಸುಪ್ರೀಂಕೋರ್ಟ್, ಶರ್ಮ ವರ್ಗಾವಣೆ ಪ್ರಕರಣದಲ್ಲಿ ಶಾಮೀಲಾದ ಅಧಿಕಾರಿಗಳನ್ನು ಗುರುತಿಸುವಂತೆ ನಿರ್ದೇಶನ ನೀಡಿತು. ‘ನಾವು ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ನೀವು ಭಾರತದ ಸುಪ್ರೀಂಕೋರ್ಟ್ ಆದೇಶದಲ್ಲಿ ಆಟವಾಡಿದ್ದೀರಿ. ನಿಮಗೆ ದೇವರೇ ಸಹಕರಿಸಬೇಕು. ಸುಪ್ರೀಂಕೋರ್ಟ್ ಆದೇಶದ ಮೇಲೆ ಎಂದೂ ಆಟವಾಡಬೇಡಿ’ ಎಂದು
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಹೇಳಿದರು. ಎಂ. ನಾಗೇಶ್ವರ ರಾವ್ ಸೇರಿದಂತೆ ಇಬ್ಬರು ಅಧಿಕಾರಿಗಳು ಶರ್ಮ ವರ್ಗಾವಣೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಿಬಿಐ ವಕೀಲರು ಪೀಠಕ್ಕೆ ತಿಳಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಮೇಲಿನ ಮಾತು ಹೇಳಿದರು ಎಂದು ವರದಿ ತಿಳಿಸಿತು. ಸಿಬಿಐಯ ಜಂಟಿ ನಿರ್ದೇಶಕ ಶರ್ಮ ಅವರು ಬಿಹಾರ ಆಶ್ರಯಧಾಮ ಪ್ರಕರಣಗಳ ತನಿಖೆ ನಡೆಸುತ್ತಿರುವ ಅತ್ಯಂತ ಹಿರಿಂi ಅಧಿಕಾರಿಯಾಗಿದ್ದು, ಅವರನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶಗಳಲ್ಲಿ ನಿರ್ದೇಶನ ನೀಡಿತ್ತು., ಆದರೆ, ೨೦೧೯ರ ಜನವರಿ ೧೭ರಂದು ಸಿಬಿಐಯಲ್ಲಿನ ಆಂತರಿಕ ಘರ್ಷಣೆಗಳ ಹಿನ್ನೆಲೆಯಲ್ಲಿ ಶರ್ಮ ಅವರ ಸಿಬಿಐ ಸೇವೆಯನ್ನು ಮೊಟಕುಗೊಳಿಸಿ ಸಿಆರ್‌ಪಿಎಫ್‌ನ ಎಜಿಡಿಪಿ ಆಗಿ
ವರ್ಗಾವಣೆ ಮಾಡಲಾಗಿತ್ತು. ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು, ಲೈಂಗಿಕ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಪ್ರಕರಣವು ತನ್ನ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿತು. ಇದಕ್ಕೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸಿ ಎಂದು ಪೀಠವು ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿತು. ’ಬೇಕಾದಷ್ಟಾಯಿತು.
ಮಕ್ಕಳನ್ನು ಈ ರೀತಿ ನೋಡಿಕೊಳ್ಳಬಾರದು.
ಮಕ್ಕಳನ್ನು ಈ ರೀತಿಯಾಗಿ ನೋಡಿಕೊಳ್ಳಲು
ನಿಮ್ಮ ಅಧಿಕಾರಿಗಳನ್ನು ನೀವು ಬಿಡುವಂತಿಲ್ಲ. ಮಕ್ಕಳನ್ನು ರಕ್ಷಿಸಿ’ ಎಂದು
ಸುಪ್ರೀಂಕೋರ್ಟ್ ಬಿಹಾರ ಸರ್ಕಾರಕ್ಕೆ ಸೂಚಿಸಿತು.
ಶರ್ಮ
ಅವರ ವರ್ಗಾವಣೆಯನ್ನು ಪೀಠವು ನಿರ್ಬಂಧಿಸಿರುವ ಬಗ್ಗೆ ಸಂಪುಟದ ನೇಮಕಾತಿ ಸಮಿತಿಗೆ ಸರ್ಕಾರ ತಿಳಿಸಿತ್ತೇ ಎಂದೂ ಸುಪ್ರೀಂಕೋರ್ಟ್ ಪ್ರಶ್ನಿಸಿತು. ಬಿಹಾರ
ಆಶ್ರಯಧಾಮಗಳಲ್ಲಿನ ಮಕ್ಕಳನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸಿದ್ದ ವಿಚಾರ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ (ಟಿಐಎಸ್ಎಸ್) ನೀಡಿದ್ದ ವರದಿಯಿಂದ ಬಹಿರಂಗಕ್ಕೆ ಬಂದಿತ್ತು. ಬಿಹಾರದಲ್ಲಿನ ೧೭ ಆಶ್ರಯಧಾಮಗಳಲ್ಲಿನ ಮಕ್ಕಳ ಸ್ಥಿತಿ
ಅತ್ಯಂತ ಗಂಭೀರವಾಗಿದೆ ಎಂದು ಟಿಐಎಸ್ ಎಸ್ ವರದಿ ಹೇಳಿರುವುದಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಎಫ್ ಐಆರ್ ಹೇಳಿತ್ತು. ಈ ಮೊದಲೇ ಸಿಬಿಐಗೆ
ವರ್ಗಾವಣೆಗೊಂಡಿದ್ದ ಮುಜಾಫ್ಫರಪುರ ಆಶ್ರಯ ಧಾಮ ಪ್ರಕರಣದ ಜೊತೆಗೆ ಉಳಿದ ೧೬ ಪ್ರಕರಣಗನ್ನು ಸಿಬಿಐ
ತನಿಖೆಗೆ ವರ್ಗಾಯಿಸಬೇಕು ಎಂದು ಪೀಠ ನಿರ್ದೇಶನ ನೀಡಿತ್ತು.
2018:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಕಲಾಪದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿ, 'ಸಂವಿಧಾನದಲ್ಲಿ ಗೊಂದಲ ಮೂಡಿಸಿ ದೇಶವನ್ನು ವಿಭಜನೆ ಮಾಡಿದ್ದೀರಿ' ಎಂದು ಕಿಡಿ ಕಾರಿದರು. ರಾಷ್ಟ್ರಪತಿ ಭಾಷಣದ ಬಗ್ಗೆ ವಂದನಾರ್ಪಣೆ ಚರ್ಚೆಯ ವೇಳೆ ಹಲವು ಆರೋಪಗಳಿಗೆ ಉತ್ತರಿಸಿದ ಪ್ರಧಾನಿ ಮೋದಿ ಅವರು ಗಾಂಧಿ ಕುಟುಂಬದ ವಿರುದ್ದ ಕಿಡಿ ಕಾರಿದರು .'ಕಾಂಗ್ರೆಸ್ಗೆ ಪ್ರಜಾಪ್ರಭುತ್ವದ
ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ' ಎಂದು ಹೇಳಿದರು. ಇವತ್ತು ದೇಶವೇನಾದರೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ಹಿಂದೆ ಮಾಡಿರುವ ಪಾಪಗಳೇ ಕಾರಣ' ಎಂದು ದೂರಿದರು. 'ಕಾಂಗ್ರೆಸ್ ಸರ್ಕಾರಗಳು ಹಿಂದೆ ಜವಾಬ್ಧಾರಿಯಿಂದ ಕೆಲಸ ಮಾಡಿದ್ದರೆ ದೇಶ ಈಗ ಹೊಸ ಎತ್ತರಕ್ಕೆ ಏರಿರುತ್ತಿತ್ತು,
ಅವರಿಗೆ ಟೀಕೆ ಮಾಡುವ ಯಾವುದೇ ಹಕ್ಕು ಇಲ್ಲ' ಎಂದು ಕಿಡಿ ಕಾರಿದರು. 'ನಿನ್ನೆ ಬಶೀರ್
ಭದ್ರ ಜೀ
ಅವರ ಶಾಯರಿ ಹೇಳಿ ವಾಗ್ದಾಳಿ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಕಿಡಿ ಕಾರಿದ ಮೋದಿ ನಾವು ವಿಭಜನೆ ನೀತಿ ಅನುಸರಿಸುತ್ತಿಲ್ಲ. ಯಾರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದನ್ನು ನಿಮ್ಮ ಮುಖ್ಯಮಂತ್ರಿ (ಸಿದ್ದರಾಮಯ್ಯ) ಬಳಿ ಕೇಳಿ' ಎಂದರು. 'ಪ್ರಜಾಪ್ರಭುತ್ವಕ್ಕೆ ನೆಹರು ಕೊಡುಗೆ ಏನು' ಎಂದು ಪ್ರಶ್ನಿಸಿದ ಮೋದಿ 'ಸರ್ದಾರ್ ಪಟೇಲ್ ಅವರು ಬಹುಮತ ಪಡೆದಿದ್ದರೂ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ' ಎಂದು ಆರೋಪಿಸಿದರು. 'ಸರ್ದಾರ್ ಪಟೇಲ್ ಅವರು ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು.
ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿರುತ್ತಿತ್ತು' ಎಂದರು. 'ಕಾಂಗ್ರೆಸ್ ಯಾವ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ. ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಸ್ವಾಗತಕ್ಕೆ ಬಂದಿದ್ದ ದಲಿತ ನಾಯಕನನ್ನು ರಾಜೀವ್ ಗಾಂಧಿ ಸಾರ್ವಜನಿಕವಾಗಿ
ಕಡೆಗಣಿಸಿದ್ದರಲ್ಲ ಅದೆಯಾ ಕಾಂಗ್ರೆಸ್ ಪ್ರಜಾಪ್ರಭುತ್ವ'
ಎಂದು ಪ್ರಶ್ನಿಸಿದರು. 'ದೇಶಕ್ಕೆ ಜವಾಹರ ಲಾಲ್ ನೆಹರು ಪ್ರಜಾಪ್ರಭುತ್ವ ತಂದರು ಎಂದು ಕಾಂಗ್ರೆಸ್ ಪಕ್ಷ ಸೊಕ್ಕಿನಿಂದಲೊ ಇಲ್ಲ ಜ್ಞಾನದ ಕೊರತೆಯಿಂದ ಹೇಳುತ್ತಿದೆಯೋ ನನಗೆ ಗೊತ್ತಿಲ್ಲ , ಆದರೆ ಭಾರತದಲ್ಲಿ ಲಿಚ್ವಿ ರಾಜ್ಯಭಾರ ಮತ್ತು ಗೌತಮ ಬುದ್ಧನ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು' ಎಂದು ಅವರು
ನುಡಿದರು.
2009: ಕರ್ನಾಟಕವನ್ನು ತಲ್ಲಣಗೊಳಿಸಿದ್ದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದದಲ್ಲಿ ಕೇರಳ ಮೂಲದ 'ಶಹಾಬುದ್ದೀನ್ ಘೋರಿ ಬ್ರಿಗೇಡ್' ಎಂಬ ಭಯೋತ್ಪಾದನಾ ಸಂಘಟನೆಯ ಒಂಬತ್ತು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
2018: ನವದೆಹಲಿ: ಗೋವಾ ಸರ್ಕಾರ ಎರಡನೇ ಬಾರಿಗೆ ನವೀಕರಿಸಿದ ಗಣಿ ಕಂಪೆನಿಗಳ ಪರವಾನಗಿಗಳನ್ನೂ ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಗೋವಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಎಲ್ಲ ಗಣಿ ಕಂಪೆನಿಗಳೂ ಎರಡನೇ ಬಾರಿ ನವೀಕರಿಸಿದ ಪರವಾನಗಿಯಡಿ ವ್ಯವಹಾರ ನಡೆಸುತಿವೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶ ರಾಜ್ಯದ ಗಣಿಗಾರಿಕೆಗೆ ಬಲವಾದ ಹೊಡೆತ ನೀಡಿತು. ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ತ ನೇತೃತ್ವದ ಪೀಠ ಈ ತೀರ್ಪು ನೀಡಿತು. ರಾಜ್ಯ ಸರ್ಕಾರವು ಕಾನೂನು ಹಾಗೂ ಸುಪ್ರೀಂ ಕೋರ್ಟಿನ ಹಿಂದಿನ ತೀರ್ಪನ್ನು ಉಲ್ಲಂಘಿಸಿ ಗಣಿ ಕಂಪೆನಿಗಳ ಪರವಾನಗಿ ನವೀಕರಿಸಿದೆ ಎಂದು ನ್ಯಾಯಪೀಠ ಆಕ್ಷೇಪಿಸಿತು. ಕಾನೂನು ಉಲ್ಲಂಘಿಸಿ ಗಣಿ ಕಂಪೆನಿಗಳಿಗೆ ಎಷ್ಟು ಪ್ರಮಾಣದ ಅದಿರು ತೆಗೆಯಲು ಅನುಮತಿ ನೀಡಲಾಗಿದೆ ಎಂಬುದನ್ನು ಲೆಕ್ಕ ಹಾಕಲು ಚಾರ್ಟರ್ಡ್ ಅಕೌಂಟೆಂಟ್ಗಳ ಸಹಿತ ವಿಶೇಷ ತನಿಖಾ ತಂಡ ರಚಿಸುವಂತೆಯೂ ಸುಪ್ರೀಂ ಕೋರ್ಟ್ ನಿರ್ದೆಶನ ನೀಡಿತು. ಗಣಿಗರಿಕೆ ಮುಂದುವರಿಸಲು ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಹೊಸದಾಗಿ ಅನುಮತಿ ನೀಡಿದೆಯೇ ಎಂದೂ ಕೋರ್ಟ್ ಪ್ರಶ್ನಿಸಿತು.
2018: ವಾಷಿಂಗ್ಟನ್ : ಪಾಕಿಸ್ಥಾನಕ್ಕೆ ಎಲ್ಲ ರೀತಿಯ ಹಣಕಾಸು ನೆರವನ್ನು ಸ್ಥಗಿತಗೊಳಿಸುವ ಮಸೂದೆಯೊಂದನ್ನು ಅಮೆರಿಕದ ಸಂಸತ್ತಿನಲ್ಲಿ ಫೆಬ್ರುವರಿ ೬ರ ಮಂಗಳವಾರ ಮಂಡಿಸಲಾಗಿದ್ದು, ಇದು ಪಾಕಿಸ್ತಾನಕ್ಕೆ ಒದಗಿರುವ ಬಲು ದೊಡ್ಡ ಹಿನ್ನಡೆ ಎಂದು ಹೇಳಲಾಯಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಕಳೆದ ತಿಂಗಳಲ್ಲಿ ಪಾಕಿಸ್ಥಾನಕ್ಕೆ ಸಿಗಲಿದ್ದ ೨೫೫ ಬಿಲಿಯ (೨೫೫ ಶತಕೋಟಿ) ಡಾಲರ್ ಮಿಲಿಟರಿ ನೆರವನ್ನು ಅಮಾನತು ಮಾಡಿದ ಬಳಿಕ ನಡೆದಿರುವ ಗಂಭೀರ ಬೆಳವಣಿಗೆ ಇದು. ತನ್ನ ನೆಲದಿಂದ ಕಾರ್ಯಾಚರಿಸುವ ತಾಲಿಬಾನ್, ಹಕ್ಕಾನಿ ಮತ್ತಿತರ ಉಗ್ರ ಸಂಘಟನೆಗಳಿಗೆ ಎಲ್ಲ ರೀತಿಯ ನೆರವು, ಪೋಷಣೆ ನೀಡುತ್ತಿರುವುದನ್ನು
ನಿಲ್ಲಿಸುವಂತೆ ಎಷ್ಟು ಬಾರಿ ಕೇಳಿಕೊಂಡರೂ ಪಾಕಿಸ್ಥಾನ ಅದನ್ನು ನಿಲ್ಲಿಸದೇ ಮುಂದುವರೆಸುತ್ತಿರುವುದು ಅಮೆರಿಕಕ್ಕೆ ಸಿಟ್ಟಿನ ಜೊತೆಗೆ ಭಾರೀ ಹರಾಶೆ, ಅಸಂತೃಪ್ತಿಯನ್ನು
ಉಂಟು ಮಾಡಿದೆ. ಪಾಕಿಸ್ಥಾನಕ್ಕೆ ನೀಡಲಾಗುತ್ತಿರುವ ಎಲ್ಲ ಬಗೆಯ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವ ಪ್ರಸ್ತಾಪವಿರುವ ಮಸೂದೆಗೆ ಅಮೆರಿಕದ ಪ್ರತಿನಿಧಿ ಸಭೆಯು ಸೆನೆಟನ್ನು ಸೇರಿಸಿಕೊಂಡಿರುವುದು ಮಂಗಳವಾರದ ಮಹತ್ತರ ವಿದ್ಯಮಾನ ಎಂದು ಪಾಕಿಸ್ಥಾನದ ರಾಷ್ಟ್ರೀಯ ದಿನಪತ್ರಿಕೆ ’ಡಾನ್’ ವರದಿ ಮಾಡಿತು. ಪಾಕಿಸ್ಥಾನಕ್ಕೆ ಎಲ್ಲ ಆರ್ಥಿಕ ನೆರವನ್ನು ನಿಲ್ಲಿಸುವ ಮಸೂದೆಯನ್ನು ದಕ್ಷಿಣ ಕ್ಯಾಲಿಪೋರ್ನಿಯದ
ಸಂಸದ ಮಾರ್ಕ್ ಸ್ಯಾನ್ಫರ್ಡ್ ಮತ್ತು ಕೆಂಟುಕಿ ಸಂಸದ ಥಾಮಸ್ ಮ್ಯಾಸ್ಸೀ ಅವರು ಸದನದಲ್ಲಿ ಮಂಡಿಸಿದರು ಎಂದು ವರದಿಗಳು ತಿಳಿಸಿದವು.
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ಅವರು ಬೆಳಗ್ಗೆ ರಾಜಸ್ಥಾನದಲ್ಲಿ ಕಾರು ಅಪಘತದಲ್ಲಿ ಗಾಯಗೊಂಡಿದ್ದು ಅವರನ್ನು ಚಿತ್ತೋರ್ಗಢ ಆಸ್ಪತ್ರೆಗೆ ದಾಖಲಿಸಲಾಗಿದ್ದು,
ಪ್ರಾಣಾಪಾಯವಿಲ್ಲದೆ ಪಾರಾದರು. ಅಪಘಾತದಲ್ಲಿ ಕಾರುಚಲಾಯಿಸುತ್ತಿದ್ದ ವಸಂತಭಾಯಿ ಮೋದಿ ಎಂಬ ನಿಕಟ ಸಂಬಂಧಿಯೊಬ್ಬರು ಮೃತರಾಗಿದ್ದಾರೆ ಎಂದು ವರದಿ ತಿಳಿಸಿತು. ಮೋದಿ ಪತ್ನಿ ಜಶೋದಾಬೆನ್ ಅವರು ಕೋಟ ಸಮೀಪದ ಬಾರಾನ್ ಜಿಲ್ಲೆಯಲ್ಲಿನ ತಮ್ಮ ಬಂಧುಗಳನ್ನು ಭೇಟಿಯಾಗಿ ಗುಜರಾತ್ಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಜಶೋದಾಬೆನ್ ಅವರು ಉದಯಪುರದತ್ತ ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಟ್ರೈಲರ್ ಟ್ರಕ್ಗೆ ಕಾರು ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಜಶೋದಾಬೆನ್ ಅವರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಅವರು ತಮ್ಮ ಬಂಧುಗಳೊಂದಿಗೆ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೋಟಾ-ಚಿತ್ತೋರ್ಗಢ ಚತುಷ್ಪಥ ಹೆದ್ದಾರಿಯಲ್ಲಿ ಬೇಗು ಎಂಬಲ್ಲಿಗೆ ಸಮೀಪದ ಕತುಂಡಾ ಬಳಿ ಕಾರು ಅಪಘಾತಕ್ಕೀಡಾಯಿತು ಎಂದು ಪಾರ್ಸೋಲಿ ಪೊಲೀಸ್ ಠಾಣೆಯ ಎಸ್‌ಎಚ್‌ಓ ಶ್ಯಾಮ್‌ಸಿಂಗ್ ಹೇಳಿದರು. ಜಶೋದಾಬೆನ್ ಅವರು ತಮ್ಮ ಸಹೋದರ ಅಶೋಕ್ ಮೋದಿ ಅವರೊಂದಿಗೆ ಮೆಹಸಾನಾ ಜಿಲ್ಲೆಯ ಉಂಜಾ ಪಟ್ಟಣದಲ್ಲಿ ವಾಸವಾಗಿದ್ದಾರೆ.
ಆಕೆಗೆ ಮೆಹಸಾನಾ ಪೊಲೀಸ್ ಪಡೆ ಅವರಿಗೆ ರಕ್ಷಣೆ ಒದಗಿಸುತ್ತಿದೆ.
2018: ಸಹರಣ್ಪುರ: ’ಗೋ ಸಂರಕ್ಷಣೆಯ ಹೆಸರಿನಲ್ಲಿ ಆಗುತ್ತಿರುವ ಹತ್ಯೆಗಳು ಮತ್ತು ದಾಳಿಗಳನ್ನು ನಿಲ್ಲಿಸುವ ಸಲುವಾಗಿ ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೊಷಣೆ ಮಾಡಬೇಕು’ ಎಂದು
ಜಮಾತ್ ಉಲೆಮಾ ಇ ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಇಲ್ಲಿ ಮನವಿ ಮಾಡಿದರು. ವರದಿಗಾರರ ಜೊತೆ ಮಾತನಾಡುತ್ತಿದ್ದ ಜಮಾತ್ ಅಧ್ಯಕ್ಷರು ’ಮನುಷ್ಯನ ಜೀವ ಮತ್ತು ಗೋವುಗಳನ್ನು ರಕ್ಷಿಸುವ ಸಲುವಾಗಿ ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಬೇಕು. ಇದರಿಂದ ದೇಶದಲ್ಲಿ ಶಾಂತಿ ನೆಲೆಸಲೂ ಅನುಕೂಲವಾಗುತ್ತದೆ’ ಎಂದು ಹೇಳಿದರು. ದೇಶಾದ್ಯಂತ ಗೋ ಹತ್ಯೆಯ ಕುರಿತಾಗಿ ಪರ ವಿರೋಧದ ವ್ಯಾಪಕ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಮದನಿ ಅವರು ನೀಡಿರುವ ಹೇಳಿಕೆಯನ್ನು ಕೆಲವರು ವಿರೋಧಿಸಿದರು.
2018: ನವದೆಹಲಿ/ ಮುಂಬೈ: ಜಾಗತಿಕ ಶೇರು ತಲ್ಲಣದ ನಡುವೆ ದೇಶದಲ್ಲಿ ಹಣದುಬ್ಬರವು ದೃಢತೆಯನ್ನು ತೋರಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಬಡ್ಡಿ ದರಗಳನ್ನು ಮೂರನೇ ಬಾರಿಗೆ ಯಥಾವತ್ತಾಗಿ ಉಳಿಸಿಕೊಂಡಿತು. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ ಆರು ಸದಸ್ಯರನ್ನು ಒಳಗೊಂಡ ಆರ್ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿಯು (ಎಂಪಿಸಿ) ರೆಪೋ ದರವನ್ನು ಈಗಿನ ಶೇ.೬ರಲ್ಲಿ ಹಾಗೂ ರಿವರ್ಸ್ ರಿಪೋ ದರವನ್ನು ಈಗಿನ ಶೇ.೫.೭೫ರಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿತು. ಪ್ರಸಕ್ತ ಹಣಕಾಸು ವರ್ಷದ ಕೊನೆಯ ದ್ವೈ ಮಾಸಿಕ ನೀತಿ ಪರಿಶೀಲನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಆರ್ಬಿಐನ ಆರ್ಥಿಕ ನೀತಿ ಪರಾಮರ್ಶೆ ಸಮಿತಿ (ಎಂಪಿಸಿ) ನಡೆಸಿದ ಎರಡು ದಿನಗಳ ಸುದೀರ್ಘ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಯಿತು.
ಈ ದರಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವುದಕ್ಕೆ ರಿಸರ್ವ್ ಬ್ಯಾಂಕಿನ ಆರ್ಥಿಕ ನೀತಿ ಪರಾಮರ್ಶೆ ಸಮಿತಿಯ ೬ ಸದಸ್ಯರ ಪೈಕಿ ೫ ಸದಸ್ಯರು ಬಲವಾದ ಒಲವು ತೋರಿದರು. ಐವರು ಸದಸ್ಯರು ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ
ಮತ ಹಾಕಿದರು. ಒಬ್ಬ ಸದಸ್ಯ ಮೈಕೆಲ್ ಪಟ್ರಾ ಎನ್ನುವವರು ಮಾತ್ರ ೨೫ ಅಂಕಗಳಷ್ಟು ಏರಿಕೆ ಮಾಡುವಂತೆ ಸೂಚಿಸಿದರು. ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಬೆಂಬಲಿಸುವ ಉದ್ದೇಶದೊಂದಿಗೆ ಆರ್ಬಿಐ ತಟಸ್ಥ ನಿಲುವನ್ನು ತಳೆಯಬೇಕಾಯಿತು; ಕಳೆದ ವರ್ಷ ಆಗಸ್ಟ್ನಲ್ಲಿ ಶೇ.೦.೨೫ರ ಕಡಿತ ಕಂಡ ರೆಪೋ ದರವನ್ನು ಶೇ.೬ರಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿತ್ತು. ೨೦೧೫ರಲ್ಲಿನ ಅಸಾಮಾನ್ಯ ಕೆಳ ಮಟ್ಟ ಹಣದುಬ್ಬರದ ಲಾಭ ತೆಗೆದುಕೊಂಡು ಶೇ.೨ರಷ್ಟು ಕಡಿತ
ಮಾಡಲ್ಪಟ್ಟಿದ್ದ ಈ ದರವನ್ನು ಅಂತೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಸರಾಸರಿ ಹಣದುಬ್ಬರ ಗುರಿಯ ಶೇ.೪ನ್ನು ತಲುಪಲು ತಟಸ್ಥ ನಿಲುವು ತಾಳುವುದು ಮುಖ್ಯ ಎಂದು ಆರ್ಬಿಐ ಹೇಳಿಕೆ ತಿಳಿಸಿತು. ಕಳೆದ ವರ್ಷ ಡಿಸೆಂಬರ್ನಲ್ಲಿ ಆಹಾರ ಮತ್ತು ಇಂಧನ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದರಿಂದ ಚಿಲ್ಲರೆ ಹಣದುಬ್ಬರ ಶೇ.೫.೨೧ಕ್ಕೆ ಏರುವ ಮೂಲಕ ಅದು ಆರ್ಬಿಐನ ಹಿತಕಾರಿ ಮಟ್ಟವನ್ನು ದಾಟಿತ್ತು. ಬಳಕೆದಾರರ ಬೆಲೆ ಸೂಚ್ಯಂಕ - ಸಿಪಿಐ - ಆಧಾರಿತ ಚಿಲ್ಲರೆ ಹಣದುಬ್ಬರವು ಕಳೆದ ವರ್ಷ ನವೆಂಬರ್ನಲ್ಲಿ ಶೇ.೪.೮೮ ಇತ್ತು. ಡಿಸೆಂಬರ್ನಲ್ಲಿ ಅದು ಶೇ.೩.೪ಕ್ಕೆ ಇಳಿದಿತ್ತು. ಬಾಂಡ್
ಹೂಡಿಕೆದಾರರು ಈಗಾಗಲೇ ಸಂಭವನೀಯ ಬಡ್ಡಿ ದರ ಏರಿಕೆಯನ್ನು ಅರಗಿಸಿಕೊಂಡಿದ್ದು ೧೦ ವರ್ಷಗಳ ಬಾಂಡ್ ಇಳುವರಿ ಕಳೆದ ಜುಲೈನಿಂದ ೮೦ ಮೂಲಾಂಕಗಳ ವೃದ್ಧಿಯನ್ನು ಕಂಡಿತ್ತು. ಇದು ೨೦೧೩ರ ರೂಪಾಯಿ ಬಿಕ್ಕಟ್ಟಿನ ಬಳಿಕ ಅತೀ ದೊಡ್ಡ ನಡೆ ಎಂದು ಹೇಳಲಾಯಿತು. ರಾಯ್ಟರ್ಸ್
ಸಂಸ್ಥೆಯ ಸಮೀಕ್ಷೆಯಲ್ಲಿ ೬೦ರಲ್ಲಿ ಇಬ್ಬರು ಹೊರತುಪಡಿಸಿ ಮತ್ತೆಲ್ಲಾ ಆರ್ಥಿಕ ತಜ್ಞರು ನವೆಂಬರ್ ೨೦೧೦ರಿಂದ ರೆಪೊ ದರವನ್ನು ಕನಿಷ್ಟ ಮಟ್ಟದಲ್ಲಿ ಇಡಲಾಗಿದೆ ಎಂದು ಹೇಳಿದ್ದರು.
2018: ಸಾಸರಮ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ೮೦ ಅಡಿ ಎತ್ತರದ ಭಗವಾನ್ ಬುದ್ಧನ ಬೃಹತ್ ಪ್ರತಿಮೆಯನ್ನು ಆಧ್ಯಾತ್ಮ ಗುರು ಪೈಲಟ್ ಬಾಬಾ ಆಶ್ರಮದ ಆವರಣದಲ್ಲಿ ಅನಾವರಣಗೊಳಿಸಿದರು.
ಪಾಟ್ನಾದಿಂದ ಅಭಿವೃದ್ಧಿ ಕಾರ್ಯಗಳ ಪರಾಮರ್ಶೆ ಸಲುವಾಗಿ ಆಗಮಿಸಿದ ಮುಖ್ಯಮಂತ್ರಿಯನ್ನು ಪೈಲಟ್ ಬಾಬಾ ಅವರು ’ಅಂಗವಸ್ತ್ರ’ ಮತ್ತು ಬುದ್ಧನ ಪುಟ್ಟ ವಿಗ್ರವನ್ನು ನೀಡಿ ಸನ್ಮಾನಿಸಿದರು. ಆ ಬಳಿಕ ನಿತೀಶ್ ಕುಮಾರ್ ಅವರು ಬೃಹತ್ ವಿಗ್ರಹದ ಬುಡದಲ್ಲಿ ಇರಿಸಲಾದ ಕಲ್ಲಿನ ಫಲಕವನ್ನು ಅನಾವರಣ ಗೊಳಿಸುವ ಮೂಲಕ ಬುದ್ಧನ ವಿಗ್ರಹವನ್ನು ಜನತೆಗೆ ಅರ್ಪಿಸಿದರು. ರಾಜ್ಯಸಭಾ ಸದಸ್ಯ ಮತ್ತು ಆಡಳಿತಾರೂಢ ಜನತಾದಳ (ಸಂಯುಕ್ತ) ರಾಜ್ಯ ಅಧ್ಯಕ್ಷ ವಶಿಷ್ಠ ನಾರಾಯಣ ಸಿಂಗ್, ಮುಖ್ಯ ಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್, ಪೊಲೀಸ್ ಮಹಾ ನಿರ್ದೇಶಕ ಪಿ.ಕೆ. ಥಾಕೂರ್ ಸೇರಿದಂತೆ ಹಲವಾರು ಗಣ್ಯರು ನಿತೀಶ್ ಕುಮಾರ್ ಜೊತೆಗಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಆಶ್ರಮದ ಒಳಗಿನ ದೇವಾಲಯದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸಿದರು ಎಂದು ಪ್ರಕಟಣೆ ತಿಳಿಸಿತು.
2018: ಮುಂಬೈ: ಹಿರಿಯ ಬಾಲಿವುಡ್ ನಟ ಜಿತೇಂದ್ರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿ ಹಿಮಾಚಲ ಪ್ರದೇಶದಲ್ಲಿ ದೂರು ದಾಖಲಿಸಿದ್ದಾರೆ. ತಾನು ಜಿತೇಂದ್ರ ಅವರ ಸೋದರ ಸಂಬಂಧಿ ಎಂದು ದೂರಿನಲ್ಲಿ ತಿಳಿಸಿರುವ ಮಹಿಳೆ ತಾನು ೧೮ ವಯಸ್ಸಿನ ತರುಣಿಯಾಗಿದ್ದಾಗ, ೨೮ರ ಯುವಕನಾಗಿದ್ದ ಜಿತೇಂದ್ರ ತನಗೆ ಲೈಂಗಿಕ ಕಿರುಕುಳ ನೀಡಿದ್ದುದಾಗಿ ಆಪಾದಿಸಿದರು. ಆ ವೇಳೆಯಲ್ಲಿ ಜಿತೇಂದ್ರ ಚಿತ್ರರಂಗಕ್ಕೆ ಅದಾಗಷ್ಟೇ ಪ್ರವೇಶಿಸಿದ್ದರು
ಎಂದು ಮಹಿಳೆ ತಿಳಿಸಿದರು. ೨೮ರ ಯುವಕನಾಗಿದ್ದ ಜಿತೇಂದ್ರ ಅವರು ತನ್ನ ತಂದೆಯ ಅನುಮತಿ ಪಡೆದು ತನ್ನನ್ನು ಸಿನಿಮಾ ಸೆಟ್ ತೋರಿಸಲೆಂದು ಇಬ್ಬರು ಪುರುಷ ಸಹೋದ್ಯೋಗಿಗಳ ಜೊತೆಗೆ ಬಂದು ಶಿಮ್ಲಾಕ್ಕೆ ಕರೆದೊಯದ್ದರು. ಅಲ್ಲಿ ಹೊಟೇಲಿನಲ್ಲಿ ರಾತ್ರಿ ಕುಡಿದ ಅಮಲಿನಲ್ಲಿ ಲೈಂಗಿಕ ಕಿರುಕುಳ ನೀಡಿದುದಾಗಿ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದರು. ತಮಗಾದ ಕೆಟ್ಟ ಅನುಭವದ ಬಗ್ಗೆ ದೂರು ನೀಡಲು ಹಲವಾರು ವರ್ಷಗಳನ್ನು ತೆಗೆದುಕೊಂಡ ಮಹಿಳೆ, ತನ್ನ ಹೆತ್ತವರು ಮೃತರಾದ ಬಳಿಕ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಿದರು ಎಂದು ವರದಿ ತಿಳಿಸಿತು. ಚಿತ್ರನಟ ಜಿತೇಂದ್ರ
ಅವರು ಆರೋಪ ಬುಡವಿಲ್ಲದ್ದು ಎಂದು ತಳ್ಳಿ ಹಾಕಿದರು.
2018: ನವದೆಹಲಿ: ಒಂದು ರಾಷ್ಟ್ರಕ್ಕೆ ಒಂದು ಗುರುತು ಇದ್ದರೆ ತಪ್ಪೇನು? ಹೇಗಿದ್ದರೂ ನಾವೆಲ್ಲರೂ ಭಾರತೀಯರು’ ಎಂದು
ಆಧಾರ್ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಸಂವಿಧಾನ ಪೀಠದ ನ್ಯಾಯಮೂರ್ತಿಗಳಲ್ಲಿ
ಒಬ್ಬರಾದ ನ್ಯಾಯಮೂರ್ತಿ ಅಶೋಕ ಭೂಷಣ್ ಅವರು ಆಧಾರ್ ಕಾಯ್ದೆಯನ್ನು ಪ್ರಶ್ನಿಸಿದ ಅರ್ಜಿದಾರರನ್ನು ಪ್ರಶ್ನಿಸಿದರು. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ’ಆಧಾರ್ ಇಲ್ಲದ ಪುರುಷ/ ಮಹಿಳೆಯನ್ನು ’ರಾಷ್ಟ್ರ ವಿರೋಧಿ’ ಎಂಬುದಾಗಿ ಬಿಂಬಿಸುವ ಅಪಾಯವನ್ನು ನಾಗರಿಕ ಎದುರಿಸಬೇಕಾಗಿ ಬರುತ್ತದೆ’ ಎಂಬುದಾಗಿ ಮಂಡಿಸಿದ ವಾದಕ್ಕೆ ಪ್ರತಿಕ್ರಿಯಿಸಿದ
ನ್ಯಾಯಮೂರ್ತಿ ಈ ಪ್ರಶ್ನೆ ಕೇಳಿದರು. ಆಧಾರ್ ಯೋಜನೆಯ ಮೂಲಕ ಆರಂಭಿಸಲಾಗಿರುವ
’ಒಂದು ರಾಷ್ಟ್ರ- ಒಂದು ಗುರುತು’ ಸಿದ್ಧಾಂತವು ವ್ಯಕ್ತಿಯ ಗುರುತನ್ನು ಸಾಬೀತುಪಡಿಸಲು ಪರ್ಯಾಯ ಸರ್ಕಾರಿ ದಾಖಲೆಗೆ ಅವಕಾಶವೇ ಇಲ್ಲದಂತೆ ಮಾಡುತ್ತದೆ. ತನ್ನ ಗುರುತನ್ನು ಸಾಬೀತು ಪಡಿಸಲು ವ್ಯಕ್ತಿ ಆಧಾರ್ ಕಾರ್ಡನ್ನು ಮಾತ್ರವೇ ಏಕೈಕ ದಾಖಲೆಯಾಗಿ ನೆಚ್ಚಿಕೊಳ್ಳಬೇಕಾಗಿ
ಬಂದಾಗ, ಆತ ’ನಾಗರಿಕ ಸಾವು’ ಎದುರಿಸಬೇಕಾದ ಅಪಾಯ ಬರುತ್ತದೆ ಎಂದು ಸಿಬಲ್ ವಾದಿಸಿದರು. ‘ಒಂದು ರಾಷ್ಟ್ರಕ್ಕೆ ಒಂದೇ ಗುರುತು ಇದ್ದರೇನು ತಪ್ಪು? ಎಷ್ಟಾದರೂ ನಾವೆಲ್ಲರೂ ಭಾರತೀಯರು’ ಎಂದು ನ್ಯಾಯಮೂರ್ತಿ ಭೂಷಣ್ ನುಡಿದರು. ‘ಹೌದು, ನಾವೆಲ್ಲರೂ ಭಾರತೀಯರೆಂಬ ಉತ್ಕಟ ಭಾವ ಹೊಂದಿದವರೇ. ಆದರೆ ನಾವು ಆಧಾರ್ ಗಿಂತ ಹೆಚ್ಚಿನವರು. ನೀವು (ಸರ್ಕಾರ) ನನ್ನನ್ನು ಕೇವಲ ಒಂದು ಗುರುತಿಗೆ (ಆಧಾರ್) ಇಳಿಸಲಾಗದು’ ಎಂದು ಸಿಬಲ್ ಹೇಳಿದರು. ನ್ಯಾಯಮೂರ್ತಿ ಭೂಷಣ್ ಅವರು ಈ ವಿಷಯದಲ್ಲಿ ಹೆಚ್ಚಿನ ಚರ್ಚೆಯನ್ನು ತಾವು ಬಯಸುವುದಿಲ್ಲ ಎಂದು ಹೇಳಿದರು. ಆದರೆ ಸಿಬಲ್ ಅವರು ತಾವು ಈ ವಿಷಯದಲ್ಲಿ ವಾದ ಮಾಡ ಬಯಸಿರುವುದಾಗಿ ಹೇಳಿದರು. ’ನಾನು ರಾಜಕೀಯ ವಾದ ಮಾಡುವುದಿಲ್ಲ. ’ಒಂದು ರಾಷ್ಟ್ರ-ಒಂದು ಗುರುತು’ ವಿರುದ್ಧ ಕಾನೂನುಬದ್ಧ ವಾದವನ್ನು ಮಾಡಬಯಸಿದ್ದೇನೆ’ ಎಂದು ಸಿಬಲ್ ನುಡಿದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ಮಧ್ಯಪ್ರವೇಶ ಮಾಡಿ ಚರ್ಚೆಯನ್ನು ಸರಿದಾರಿಗೆ ತರಲು ಯತ್ನಿಸಿದರು. ಭಾರತೀಯನಾಗಿ ವ್ಯಕ್ತಿಯ ಗುರುತು ಆತ ಆಧಾರ್ ಹೊಂದಿರುವನೇ ಅಥವಾ ಇಲ್ಲವೇ ಎಂಬುದನ್ನು ಅವಲಂಬಿಸಿರಬಾರದು ಎಂಬುದು ಸಿಬಲ್ ಅವರ ಮಾತಿನ ಅರ್ಥ ಎಂದು ಅವರು ಹೇಳಿದರು. ಆಗ ನ್ಯಾಯಮೂರ್ತಿ ಭೂಷಣ್ ಅವರು ಆಧಾರ್ ಕಾಯ್ದೆಯ ಸೆಕ್ಷನ್ ೫೭ನ್ನು ಉಲ್ಲೇಖಿಸಿ ಆಧಾರ್ ಸಂಖ್ಯೆಯನ್ನು ಕಲ್ಯಾಣ ಸೇವೆಗಳ ಸಬ್ಸಿಡಿಗಳನ್ನು ಪಡೆಯುವುದರ ಹೊರತಾಗಿ ಇತರ ಉದ್ದೇಶಗಳಿಗೂ ಬಳಸಲು ಅವಕಾಶವಿದೆ ಎಂದು ಹೇಳಿದರು. ಆಧಾರ್ ಸಂಖ್ಯೆಯನ್ನು ಮೊಬೈಲ್ ಫೋನ್ ಗಳು ಮತ್ತು ಬ್ಯಾಂಕ್ ಖಾತೆಗಳಿಗೂ ಜೋಡಿಸುವ ಸರ್ಕಾರದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಆಧಾರ್
ಸಂಖ್ಯೆಯನ್ನು ಇತರ ಉದ್ದೇಶಗಳಿಗೂ ಬಳಸಬಹುದು. ಆಧಾರ್ ಕಾಯ್ದೆಯು ಅದರ ಬಳಕೆಯನ್ನು ಒಂದೇ ಉದ್ದೇಶಕ್ಕೆ ಮಿತಿಗೊಳಿಸಿಲ್ಲ. ಬೇರೆ ಯಾವುದೇ ಕಾಯ್ದೆಯ ಅಡಿಯಲ್ಲಿ ವ್ಯಕ್ತಿಗೆ ತನ್ನ ಗುರುತನ್ನು ಸಾಬೀತು ಪಡಿಸಲೂ ಆತ ಅದನ್ನು (ಆಧಾರ್) ಬಳಸಬಹುದು ಎಂಬುದಾಗಿ ನ್ಯಾಯಮೂರ್ತಿ ಭೂಷಣ್ ವಿವರಿಸಿದರು. ಸೆಕ್ಷನ್ ೫೭ನ್ನು ಈ ರೀತಿಯಾಗಿ ಅರ್ಥ ಮಾಡಿಕೊಳ್ಳುವುದರಿಂದ
ಆಧಾರ್ ಬಳಕೆಗೆ ಅಪರಿಮಿತ ಅಧಿಕಾರವನ್ನು ಸರ್ಕಾರಕ್ಕೆ ನೀಡಿದಂತಾಗುತ್ತದೆ
ಎಂದು ಸಿಬಲ್ ಪ್ರತಿಕ್ರಿಯಿಸಿದರು. ’ನನ್ನ ಪ್ರಕಾರ ಈ ಸೆಕ್ಷನ್ ನ ಅರ್ಥ ಏನೆಂದರೆ ಆಧಾರ್ ತೋರಿಸುವುದು ನನ್ನ ಆಯ್ಕೆಗೆ ಬಿಟ್ಟದ್ದು ಎಂದು. ಸರ್ಕಾರ, ಖಾಸಗಿ ಕಾರ್ಪೋರೇಷನ್ ಗಳು ಸೇರಿದಂತೆ ಯಾರು ಕೂಡಾ ಹೀಗೆ ಮಾಡದಂತೆ ನನ್ನನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಇದಕ್ಕೆ ಬದಲಾಗಿ, ಯಾವುದೇ ಕಾನೂನಿನ ಅಡಿಯಲ್ಲಿ ಆಧಾರ್ ಸಂಖ್ಯೆಯ ಅಪರಿಮಿತ ಬಳಕೆಯು ಭಯಾನಕ ಪರಿಣಾಮಗಳನ್ನು ಉಂಟು ಮಾಡಬಹುದು’ ಎಂದು
ಸಿಬಲ್ ನುಡಿದರು. ಸಂವಿಧಾನದ ೧೯ನೇ ಪರಿಚ್ಛೇದ ಅಡಿಯಲ್ಲಿ ಒದಗಿಸಲಾಗಿರುವ ಸ್ವಾತಂತ್ರ್ಯ ಮತ್ತು ಆಯ್ಕೆಯ ಹಕ್ಕಿಗೆ ಅನುಗುಣವಾಗಿ ತಾವು ಈ ಅರ್ಥವನ್ನು ಕಲ್ಪಿಸಿರುವುದಾಗಿ
ಸಿಬಲ್ ಹೇಳಿದರು.
2018: ನವದೆಹಲಿ: ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿತು. ವಿಮಾನ ಖರೀದಿ ಒಪ್ಪಂದ ಅಂತಿಮಗೊಳಿಸುವ ಮುನ್ನ ಅಗತ್ಯವಿರುವ ಎಲ್ಲಾ ಕಾನೂನು ವಿಧಾನಗಳನ್ನು ಅನುಸರಿಸಲಾಗಿದೆ ಎಂದು ಅದು ತಿರುಗೇಟು ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ರಫೆಲ್ ಪ್ರಸ್ತಾವ ಇಲ್ಲ, ಎಷ್ಟು ಮೊತ್ತಕ್ಕೆ ಇದನ್ನು ಖರೀದಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದರು. ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟನೆ ನೀಡಿದ ರಕ್ಷಣಾ ಸಚಿವಾಲಯ, ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಸಂಪೂರ್ಣ ನಿರಾಧಾರ, ಕಪೋಲ ಕಲ್ಪಿತ. ಇದು ಜನರನ್ನು ದಿಕ್ಕು ತಪ್ಪಿಸುವ ಆರೋಪವಷ್ಟೇ ಎಂದು ಪ್ರಕಟಣೆಯಲ್ಲಿ ತಿಳಿಸಿತು. ಯುಪಿಎ ಅಧಿಕಾರಾವಧಿಯಲ್ಲಿ ರಫೆಲ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2016ರಲ್ಲಿ ಮಾಡಿಕೊಂಡಿರುವ ಒಪ್ಪಂದ ಈ ಹಿಂದಿಗಿಂತಲೂ ಸಾಕಷ್ಟು ಲಾಭದಾಯಕವಾಗಿದೆ. ಯುದ್ಧ ವಿಮಾನದ ಸಾಮರ್ಥ್ಯ, ಮೊತ್ತ, ಪೂರೈಕೆ, ನಿರ್ವಹಣೆ ಹಾಗೂ ತರಬೇತಿ ವಿಷಯದಲ್ಲೂ ಹೊಸ ಒಪ್ಪಂದ ಪಕ್ಕಾ ಆಗಿದೆ ಎಂದು ಸಚಿವಾಲಯ ಹೇಳಿತು. ಕಾಂಗ್ರೆಸ್ ಒಪ್ಪಂದದಲ್ಲಿ ಇರದ ಅಂಶಗಳನ್ನು ಜನರಿಗೆ ತಿಳಿಸುವ ಮೂಲಕ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ ಕೇವಲ ಉತ್ಪಾದನಾ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿತು.
2009: ಬ್ಯಾಂಕ್ ಖಾತೆಯಲ್ಲಿ ಅಗತ್ಯದಷ್ಟು ಹಣವಿಲ್ಲ ಎಂಬುದು ಗೊತ್ತಿದ್ದೂ ಬೇರೆಯವರಿಗೆ ಚೆಕ್ ನೀಡಿದ್ದರೆ ಅದು 'ವಂಚನೆ'ಯಾಗುತ್ತದೆ ಎಂದು ದೆಹಲಿಯ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಈ ತೀರ್ಪು ನೀಡಿತು. 'ಇಂಡೊ ಅಮೆರಿಕನ್ ಕಂ. ಲಿ.' (ಐಎಸಿಎಲ್) ವಿರುದ್ಧ ನ್ಯೂ ಇಂಡಿಯ ಅಶ್ಯೂರೆನ್ಸ್ ಕಂಪೆನಿ ಲಿ.(ಎನ್‌ಐಎಸಿ)ಯ ವಿಮಾ ಪರಿಹಾರ ಪ್ರಕರಣವೊಂದರಲ್ಲಿ ನ್ಯಾಯಾಲಯ ಈ ತೀರ್ಪು ಕೊಟ್ಟಿತು. ಹಣ ವಿನಿಮಯ ಚಟುವಟಿಕೆ ಕಂಪೆನಿ ಐಎಸಿಎಲ್, ನಿತ್ಯದ ವಹಿವಾಟಿನಲ್ಲಿ ವಂಚನೆ ಮೊದಲಾದ ತೊಡಕುಗಳಿಂದ ಸುರಕ್ಷಿತವಾಗಿರಲು ಎನ್‌ಐಎಸಿನಿಂದ ವಿಮಾ ರಕ್ಷೆ ಪಡೆದಿತ್ತು. ಕೆಲ ಗ್ರಾಹಕರು ನೀಡಿದ್ದ ಚೆಕ್ ನಗದು ಆಗದೆ ಐಎಸಿಎಲ್ ನಷ್ಟ ಅನುಭವಿಸಿತು. ಪರಿಹಾರ ಕೋರಿದ್ದಕ್ಕೆ ವಿಮಾ ಕಂಪೆನಿ, ಇದೊಂದು ಚೆಕ್ ಬೌನ್ಸ್ ಪ್ರಕರಣ. ಇಲ್ಲಿ ಬಿಸಿನೆಸ್ಸಿನಲ್ಲಿ ವಂಚನೆ ಆಗಿಲ್ಲ. ಹಾಗಾಗಿ ಪರಿಹಾರ ಸಿಗದು ಎಂದು ಮನವಿ ತಿರಸ್ಕರಿಸಿತ್ತು. ಆದರೆ ನ್ಯಾಯಮೂರ್ತಿ ಜೆ.ಡಿ.ಕಪೂರ್, 'ಹಣವಿಲ್ಲದೆ ನೀಡಿದ ಚೆಕ್ ಪ್ರಕರಣ ವಂಚನೆ ವ್ಯಾಪ್ತಿಗೆ ಬರುತ್ತದೆ. ವಂಚನೆಯಿಂದಾದ ವಹಿವಾಟು ನಷ್ಟಕ್ಕೆ ವಿಮೆ ಪರಿಹಾರ ನೀಡಲೇಬೇಕು' ಎಂದು ತೀರ್ಪಿತ್ತರು.
2009: ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರನ್ನು 2007-08ರ ಸಾಲಿನ 'ಸಿ.ಕೆ. ನಾಯ್ಡು ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು. ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಇದೇ ಸಾಲಿನ 'ಪಾಲಿ ಉಮ್ರಿಗರ್' ಪ್ರಶಸ್ತಿಗೆ ಆಯ್ಕೆಯಾದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯ ಪ್ರಕಟಿಸಿತು.
2008: ಕರ್ನಾಟಕದಲ್ಲಿ ಉಗ್ರರ ಡಾನ್ ಎನ್ನಲಾದ ಅದ್ನಾನ್, ಮಹಮ್ಮದ್ ಗೌಸ್ ಹಾಗೂ ಆತನ ಸಹಚರ ಮಹಮ್ಮದ್ ಆಸೀಫ್ ಕಾಡಿನಲ್ಲಿ ಬಚ್ಚಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಿಓಡಿ ಪೊಲೀಸರು ವಶಪಡಿಸಿಕೊಂಡರು. ಧಾರವಾಡ- ಹಳಿಯಾಳ ರಸ್ತೆಯಲ್ಲಿ ಸುಮಾರು 20 ಕಿಲೋಮೀಟರ್ ದೂರದ ಹಳ್ಳಿಗೇರಿ ಕ್ರಾಸ್ ಬಳಿ ಗುಡ್ಡದಲ್ಲಿ ಗೊಬ್ಬರ ಚೀಲವೊಂದರಲ್ಲಿ ಇವುಗಳನ್ನು ಬಚ್ಚಿಡಲಾಗಿತ್ತು. ಶಂಕಿತ ಉಗ್ರಗಾಮಿಗಳ ವಿಚಾರಣೆ ನಡೆಸಿದ ಸಿಓಡಿ ತಂಡ ದಿಢೀರ್ ಕಾರ್ಯಾಚರಣೆ ನಡೆಸಿದಾಗ ಸುಮಾರು 100 ಜಿಲೆಟಿನ್ ಕಡ್ಡಿಗಳು, 100 ವೈರ್ ಕೇಪ್ (ಸಿಡಿಮದ್ದು) ಮತ್ತು ಒಂದು ಕೈಬಾಂಬ್ ಪತ್ತೆಯಾದವು. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮಹಮ್ಮದ್ ಆಸೀಫ್ ವಿಚಾರಣೆ ವೇಳೆ ಈಬಗ್ಗೆ ಮಾಹಿತಿ ನೀಡಿದ್ದ.
2008: ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರವನ್ನು ಸಲ್ಲಿಸಿತು. ಈ ಮೂಲಕ ಎರಡು ವರ್ಷಗಳ ಹಿಂದೆ ಕನ್ನಡದ ನಟಿ ಜಯಮಾಲಾ ಅವರು ಮುಂದಿಟ್ಟ ಬಿಕ್ಕಟ್ಟೊಂದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಂತಾಯಿತು. ಲಿಂಗ ಆಧಾರದಲ್ಲಿ ಶಬರಿಮಲೆ ಪ್ರವೇಶದಲ್ಲಿ ತಾರತಮ್ಯ ಎಸಗುವ ಸಂಪ್ರದಾಯವನ್ನು ತಡೆಗಟ್ಟಲು ಸರ್ಕಾರ ಸಿದ್ಧವಿದೆ. ಆದರೆ ಶಬರಿಮಲೆ ದೇವಸ್ಥಾನದ ಸುತ್ತಮುತ್ತಲಿನ ಇಕ್ಕಟ್ಟಾದ ಸ್ಥಳದ ಹಿನ್ನೆಲೆಯಲ್ಲಿ ಈಗಿನ ವ್ಯವಸ್ಥೆಯನ್ನೇ ಮುಂದುವರೆಬಹುದು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಯಾತ್ರಾ ಸಮಯವನ್ನು ನಿಗದಿಪಡಿಸಬಹುದು ಎಂದು ಸರ್ಕಾರದ ಪ್ರಮಾಣಪತ್ರದಲ್ಲಿ ತಿಳಿಸಲಾಯಿತು.
2008: ಕನ್ನಡ ಸಂಘಟನೆಗಳ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶಾಸಕಿ ಡಾ. ರಾಜ್ಯಲಕ್ಷ್ಮಿ ಅವರನ್ನು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ್ದ ಆದೇಶವನ್ನು ಕರ್ನಾಟಕ ರಾಜ್ಯಪಾಲರು ಹಿಂದಕ್ಕೆ ಪಡೆದರು.
2008: ದೇಶದಲ್ಲೇ ಮೊದಲ ಬಾರಿಗೆ ಅಂತರ್ಜಾಲದ ಮೂಲಕವೇ ವೈದ್ಯಕೀಯ ಸಲಹೆ, ತಜ್ಞ ವೈದ್ಯರ ಶಿಫಾರಸು, ವಾಸಸ್ಥಳದ ಆಸುಪಾಸಿನಲ್ಲಿ ಇರುವ ಪರಿಣತ ವೈದ್ಯರ ವಿವರಗಳನ್ನೆಲ್ಲ ಒದಗಿಸುವ `ಹೆಲ್ತ್ ಕೇರ್ ಮ್ಯಾಜಿಕ್' ಹೆಸರಿನ ಅಂತರ್ಜಾಲ ತಾಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ವೈದ್ಯರ ಜೊತೆ ಇಲ್ಲಿ ಲಿ ರೋಗಿಗಳು ಉಚಿತವಾಗಿ ಮಾಹಿತಿ ವಿನಿಮಯ (ಚಾಟ್) ಮಾಡಿಕೊಳ್ಳಬಹುದು. ಬೆಳಗಿನ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಲಭ್ಯ ಇರುವ ಅರ್ಹ ವೈದ್ಯರು ರೋಗಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ. ಅಗತ್ಯ ಇರುವ ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗಳಿಗೆ ತೆರಳಲು ಸಲಹೆ ನೀಡುವರು. ವೈದ್ಯರೊಂದಿಗೆ ಸಮಯ ನಿಗದಿ, ವೈದ್ಯಕೀಯ ಸೇವಾ ಶುಲ್ಕದಲ್ಲಿ ಶೇ 5ರಿಂದ 10ರಷ್ಟು ರಿಯಾಯ್ತಿ ಮತ್ತಿತರ ಸೌಲಭ್ಯಗಳನ್ನೂ ಈ ತಾಣದ ಮೂಲಕ ಪಡೆದುಕೊಳ್ಳಬಹುದು. ವಿವರಕ್ಕೆ healthcaremagic.com ತಾಣಕ್ಕೆ ಭೇಟಿ ನೀಡಬಹುದು.
2008: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಶಂತನು ಭಟ್ಟಾಚಾರ್ಯ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ರಸಾಯನ ಜೀವಶಾಸ್ತ್ರ ಮತ್ತು ಅತಿಸಣ್ಣ ಕಣಗಳ ವಿನ್ಯಾಸ ಕ್ಷೇತ್ರದಲ್ಲಿ ಕೈಗೊಂಡ ವೈಜ್ಞಾನಿಕ ಸಂಶೋಧನೆಗಾಗಿ 49 ವರ್ಷದ ಶಂತನು ಭಟ್ಟಾಚಾರ್ಯ ಅವರನ್ನು ಆರಿಸಲಾಯಿತು. ಶಂತನು ಈ ಪ್ರಶಸ್ತಿಗೆ ಪಾತ್ರರಾದ 17ನೇ ವ್ಯಕ್ತಿ.
2008: ತಪಾಸಣೆ ನಡೆಸುವ ನೆಪದಲ್ಲಿ ಮಹಿಳಾ ರೋಗಿಗಳ ಬೆತ್ತಲೆ ಚಿತ್ರಗಳನ್ನು ಗುಪ್ತವಾಗಿ ಚಿತ್ರೀಕರಿಸಿಕೊಂಡು ಅವುಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದ ಚೆನ್ನೈಯ ಹೆಸರಾಂತ ಕೀಲುಮೂಳೆ ತಜ್ಞ ಡಾ.ಎಲ್. ಪ್ರಕಾಶ್ ಎಂಬಾತನಿಗೆ ತ್ವರಿತ ವಿಲೇವಾರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು.
2008: ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ರಾವಲ್ಪಿಂಡಿಯಲ್ಲಿ ಬಂಧಿಸಿದರು. ವಿಶೇಷ ತನಿಖಾ ತಂಡದಿಂದ ಬಂಧಿತರಾದ ಇವರನ್ನು ಹಸನೈನ್ ಮತ್ತು ರಫಾಖತ್ ಎಂದು ಗುರುತಿಸಲಾಯಿತು.
2007: ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಭಾರತೀಯರು ಮತ್ತು ಅನಿವಾಸಿ ಭಾರತೀಯರಿಗೆ ನವದೆಹಲಿಯ ಸಿ ಎನ್ ಎನ್ - ಐಬಿಎನ್ ವರ್ಷದ ಭಾರತೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಉದ್ಯಮಿ ರತನ್ ಟಾಟಾ, ಗಾಲ್ಫಿನಲ್ಲಿ ಗಮನಾರ್ಹ ಸಾಧನೆ ಮಾಡಿದ ಜೀವ್ ಮಿಲ್ಕಾ ಸಿಂಗ್, ಪೆಪ್ಸಿ ಸಮೂಹದ ಸಿಇಓ ಇಂದ್ರಾ ನೂಯಿ, ಲಗೇ ರಹೋ ಮುನ್ನಾಭಾಯಿ ಚಿತ್ರದಲ್ಲಿ ಗಾಂಧಿವಾದವನ್ನು ಪ್ರಸ್ತುತಗೊಳಿಸಿದ ನಿರ್ಮಾಪಕ ರಾಜಕುಮಾರ್ ಹಿರಾನಿ, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಹೋರಾಡಿದ ಅರವಿಂದ ಕ್ರೇಜಿವಾಲ್, ಅನಿವಾಸಿ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೂ ಪ್ರಶಸ್ತಿಗಳನ್ನು ನೀಡಲಾಯಿತು.
2007: ವೆಸ್ಟ್ ಇಂಡೀಸಿನ ಮರ್ಲಾನ್ ಸ್ಯಾಮ್ಯುಯಲ್ಸ್ ಅವರು ನಾಗಪುರದಲ್ಲಿ ನಡೆದ ಪಂದ್ಯಕ್ಕೆ ಎರಡು ದಿನ ಮುಂಚೆ ಬುಕ್ಕಿ ಮುಖೇಶ್ ಕೊಚಾರ್ ಎಂಬಾತನಿಗೆ ಪಿಚ್, ತಂಡದ ಬೌಲಿಂಗ್- ಬ್ಯಾಟಿಂಗ್ ಶಕ್ತಿ ಇತ್ಯಾದಿ ಮಾಹಿತಿ ರವಾನಿಸಿ `ಕಳ್ಳಾಟ' (ಮ್ಯಾಚ್ ಫಿಕ್ಸಿಂಗ್) ನಡೆಸಿದ ಬಗ್ಗೆ ನಾಗಪುರ ಪೊಲೀಸರು ಪ್ರಕರಣ ದಾಖಲಿಸಿದರು. ಇದರೊಂದಿಗೆ ಭಾರತೀಯ ಪೊಲೀಸರಿಂದ ಮತ್ತೊಮ್ಮೆ `ಕಳ್ಳಾಟ' ಪ್ರಕರಣ ಬಹಿರಂಗಕ್ಕೆ ಬಂದಿತು.
2007: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದಲ್ಲಿದ್ದ 310 ಎಕರೆ ಭೂಮಿಯನ್ನು ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳ ಬಡವರಿಗೆ ಹಂಚುವ ಮೂಲಕ ವಿನೂತನ ಜನಪರ ದಾಖಲೆ ಸೃಷ್ಟಿಸಿದರು. ಕಡಪಾ ಜಿಲ್ಲೆಯ ಚಿನ್ನರಾಯ ಸಮುದ್ರಂ ರೆಡ್ಡಿವಾರ ಪಲ್ಲಿ ಮತ್ತು ತಿರನಂಪಲ್ಲಿ ಎಂಬ ಪುಟ್ಟ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ತಮ್ಮ ಸ್ವಂತ ಜಮೀನನ್ನು 108 ಕುಟುಂಬಗಳಿಗೆ ಹಂಚಿದರು.
1999: ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಟೆಸ್ಟಿನಲ್ಲಿ 10 ವಿಕೆಟುಗಳನ್ನು ಗಳಿಸಿದರು. (74 ರನ್ನುಗಳಿಗೆ 10 ವಿಕೆಟ್) ಇದರೊಂದಿಗೆ ಒಂದೇ ಇನ್ನಿಂಗ್ಸಿನಲ್ಲಿ ಎಲ್ಲ 10 ವಿಕೆಟುಗಳನ್ನು ಉರುಳಿಸಿದ್ದ ಜಿಮ್ ಲೇಕರ್ ಅವರನ್ನು ಕುಂಬ್ಳೆ ಸರಿಗಟ್ಟಿದರು.
1999: ಜೋರ್ಡಾನ್ ದೊರೆ ಹುಸೇನ್ ತಮ್ಮ 63ನೇ ವಯಸ್ಸಿನಲ್ಲಿ ಕ್ಯಾನ್ಸರಿಗೆ ತುತ್ತಾಗಿ ಅಸು ನೀಗಿದರು. ಹಿರಿಯ ಪುತ್ರ ರಾಜಕುಮಾರ ಅಬ್ದುಲ್ಲ ಹುಸೇನ್ ಉತ್ತರಾಧಿಕಾರಿಯಾದರು.
1992: ಭಾರತದ ಮೊತ್ತ ಮೊದಲ ಜಲಾಂತರ್ಗಾಮಿ `ಐ ಎನ್ ಎಸ್ ಶಲ್ಕಿ' ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು.
1991: ಹೈಟಿಯ ಮೊತ್ತ ಮೊದಲ ಚುನಾಯಿತ ಅಧ್ಯಕ್ಷರಾಗಿ ಜೀನ್ ಬರ್ಟ್ರಾಂಟ್ ಅರಿಸ್ಟೈಡ್ ಅಧಿಕಾರ ಸ್ವೀಕರಿಸಿದರು.
1986: ಹೈಟಿಯ ಅಧ್ಯಕ್ಷ ಜೀನ್ ಕ್ಲಾಡ್ ಡ್ಯುವಲಿಯರ್ ಹೈಟಿ ತ್ಯಜಿಸಿದರು. ಇದರೊಂದಿಗೆ 28 ವರ್ಷಗಳ ಕುಟುಂಬದ ಆಳ್ವಿಕೆ ಅಂತ್ಯಗೊಂಡಿತು.
1984: ಕ್ಯಾಪ್ಟನ್ ಎರಡನೇ ಬ್ರೂಸ್ ಮೆಕ್ ಕ್ಯಾಂಡಲ್ಸ್ ಬಾಹ್ಯಾಕಾಶದಲ್ಲಿ ತೇಲಾಡಿದ ಮೊತ್ತ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಾಹ್ಯಾಕಾಶ ಷಟಲ್ ನೌಕೆ ಚಾಲೆಂಜರಿನ ಹೊರಭಾಗದಲ್ಲಿ, ಭೂಮಿಯಿಂದ 170 ಕಿ.ಮೀ. ಎತ್ತರದಲ್ಲಿ ಅವರು `ಮಾನವ ಚಂದ್ರ'ನಂತೆ ಮುಕ್ತವಾಗಿ ತೇಲಾಡಿದರು.
1856: ಆಡಳಿತಗಾರ ವಾಜಿದ್ ಅಲಿ ಶಹ ಆಳಲು ಅಸಮರ್ಥ ಎಂಬ ನೆಲೆಯಲ್ಲಿ ಲಾರ್ಡ್ ಡಾಲ್ ಹೌಸಿಯು ಅವಧ್ ರಾಜ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರ್ಪಡೆ ಮಾಡಿದ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಲಖನೌದಲ್ಲಿ ಈ ಕ್ರಮದ ವಿರುದ್ಧ ವ್ಯಾಪಕ ಅತೃಪ್ತಿ ವ್ಯಕ್ತಗೊಂಡಿತು. (ಈ ಘಟನೆಯ ಹಿನ್ನೆಲೆಯನ್ನು ಆಧರಿಸಿ ಸತ್ಯಜಿತ್ ರೇ ಅವರು `ಶತ್ ರಂಜ್ ಕಿ ಖಿಲಾಡಿ' ಚಿತ್ರವನ್ನು ನಿರ್ಮಿಸಿದರು.)
1477: ಮಾನವತಾವಾದಿ, ರಾಜಕಾರಣಿ, ಇಂಗ್ಲೆಂಡಿನ ಚಾನ್ಸಲರ್ ಸೇಂಟ್ ಥಾಮಸ್ ಮೋರೆ (1477-1535) ಹುಟ್ಟಿದ. ದೊರೆ ಎಂಟನೆಯ ಹೆನ್ರಿಯನ್ನು ಇಂಗ್ಲೆಂಡಿನ ಚರ್ಚ್ ಮುಖ್ಯಸ್ಥ ಎಂಬುದಾಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಈತನ ತಲೆ ಕಡಿಯಲಾಯಿತು.
No comments:
Post a Comment