Thursday, February 21, 2019

ಮುಂಬೈ ದಾಳಿಯ ಸೂತ್ರಧಾರಿ ಸಂಘಟನೆಗೆ ಕಡೆಗೂ ಪಾಕ್ ನಿಷೇಧ

ಮುಂಬೈ ದಾಳಿಯ ಸೂತ್ರಧಾರಿ ಸಂಘಟನೆಗೆ
 ಕಡೆಗೂ ಪಾಕ್ ನಿಷೇಧ
 ಇಸ್ಲಾಮಾಬಾದ್​:  166ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ 2008ರ ಮುಂಬೈ ದಾಳಿಯ ಸೂತ್ರಧಾರಿ​ ಹಫೀಜ್​ ಸಯೀದ್​ ನೇತೃತ್ವದ ಜಮಾತ್​-ಉದ್​-ದವಾ  (ಜೆಯುಡಿ) ಮತ್ತು ಅದರ ಅಂಗಸಂಸ್ಥೆಯಾದ ಫಲ್ಹಾ-ಇ-ಇನ್​ಸಯಾತ್​ ಫೌಂಡೇಶನ್​ ಸಂಸ್ಥೆಯನ್ನು  2019 ಫೆಬ್ರುವರಿ 21ರ ಗುರುವಾರ ಪಾಕಿಸ್ತಾನ ನಿಷೇಧಿಸಿತು.

2019ರ ಫೆಬ್ರುವರಿ 14ರಂದು ಜೈಶ್ –ಇ-ಮೊಹಮ್ಮದ್  ಉಗ್ರಗಾಮೀ ಸಂಘಟನೆಗೆ ಸೇರಿದ ಭಯೋತ್ಪಾದಕರು  ದಕ್ಷಿಣ ಕಾಶ್ಮೀರದ ಪುಲ್ವಾಮ ಬಳಿ  ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ 40 ​ ಯೋಧರನ್ನು ಕೊಂದ ಬಳಿಕ ಉಗ್ರ ಸಂಘಟನೆಗಳನ್ನು ದಮನಿಸುವಂತೆ ಜಾಗತಿಕ ಒತ್ತಡ ಹೆಚ್ಚಾಗುತ್ತಿದ್ದಂತೆಯೇ  ಪಾಕ್  ಸರ್ಕಾರ ಕ್ರಮ ಕೈಗೊಂಡಿತು.

ಈ ವಿಷಯವನ್ನು ತಿಳಿಸಿದ ಆಂತರಿಕ ಸಚಿವಾಲಯದ ವಕ್ತಾರ ರು,  ‘ಪ್ರಧಾನಿ ಇಮ್ರಾನ್​ ಖಾನ್​ ಅಧ್ಯಕ್ಷತೆಯಲ್ಲಿ ಈದಿನ ರಾತ್ರಿ  ನಡೆದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್​ಎಸ್​ಸಿ) ಸಭೆಯಲ್ಲಿ ಈ ಸಂಘಟನೆಗಳನ್ನು ನಿಷೇಧ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು’  ಎಂದು ತಿಳಿಸಿದರು.

ಜಮಾತ್​-ಉದ್​-ದವಾ ಹಾಗೂ ಫಲ್ಹಾ-ಇ-ಇನ್​ಸಯಾತ್ ಸಂಘಟನೆಗಳನ್ನು ನಿಷೇಧ ಮಾಡುವಂತೆ ಆಂತರಿಕ ಸಚಿವಾಲಯ ನಿರ್ಧಾರ ತೆಗೆದುಕೊಂಡಿದೆ  ಎಂದೂ ಸಚಿವಾಲಯದ ವಕ್ತಾರರು  ಸ್ಪಷ್ಟಪಡಿಸಿದರು.


 ಜಮಾತ್​-ಉದ್​-ದವಾ ಸಂಘಟನೆಯು 300 ಪಾಠಶಾಲೆ ಸೇರಿದಂತೆ ಶಾಲೆಗಳು, ಆಸ್ಪತ್ರೆಗಳು, ಪಬ್ಲಿಷಿಂಗ್​ ಹೌಸ್​ ಮತ್ತು ಆ್ಯಂಬುಲೆನ್ಸ್​ ಸೇವೆಯನ್ನು ಹೊಂದಿದೆ. ಈ ಎರಡು ಗುಂಪುಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಹಾಗು ನೂರಕ್ಕೂ ಹೆಚ್ಚು ವೇತನ ಕೆಲಸಗಾರರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮಾತ್-ಉದ್​-ದವಾ ಸಂಘಟನೆಯು 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಜವಾಬ್ದಾರಿ ಹೊತ್ತ ಲಷ್ಕರ್​-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಮುಂಚೂಣಿ ಸಂಘಟನೆ ಎಂದು ನಂಬಲಾಗಿದೆ.  2014ರಲ್ಲಿ ಈ ಸಂಘಟನೆಯನ್ನು ಅಮೆರಿಕ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು.


2012
ರಲ್ಲಿ ಸಯೀದ್​ ಬಗ್ಗೆ ಮಾಹಿತಿ ನೀಡಿದವರಿಗೆ 100 ಲಕ್ಷ  (1 ಕೋಟಿ) ಅಮೆರಿಕನ್ ​ ಡಾಲರ್​ ಬಹುಮಾನವನ್ನು ಅಮೆರಿಕ ಹಣಕಾಸು ವಿಭಾಗ ಘೋಷಣೆ ಮಾಡಿತ್ತು.

ವಿಶ್ವಸಂಸ್ಥೆ ಭದ್ರತಾ ಸಮಿತಿ ಕೂಡ 2008ರ ಡಿಸೆಂಬರಿನಲ್ಲಿ ಸಯೀದ​ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಿತ್ತು. 2017ರ ನವೆಂಬರ್​ನಲ್ಲಿ ಈತನನ್ನು  ಪಾಕಿಸ್ತಾನದ ಗೃಹ ಬಂಧನದಿಂದ ಬಿಡುಗಡೆ ಮಾಡಿತ್ತು.

ಉಗ್ರಗಾಮಿತ್ವ ಮತ್ತು ತೀವ್ರಗಾಮಿತ್ವ ಸಮಾಜದಲ್ಲಿ ಬೇರೂರಿದೆ. ಇದನ್ನು ಕಿತ್ತೊಗೆಯಬೇಕಾಗಿದೆ.  ಹಾಗೂ ತೀವ್ರವಾದಿಗಳಿಗೆ ರಾಜ್ಯವು ಆಶ್ರಯ ಒದಗಿಸುವುದಿಲ್ಲ ಎಂದು ಇಮ್ರಾನ್​ ಖಾನ್​ ಹೇಳಿದ್ದು, ಆಂತರಿಕ ಸಚಿವಾಲಯ ಮತ್ತು ಭದ್ರತಾ ಸಂಸ್ಥೆಗಳಿಗೆ ತಕ್ಷಣದಿಂದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

No comments:

Post a Comment