ಇಂದಿನ ಇತಿಹಾಸ History Today ಫೆಬ್ರುವರಿ 03
2019: ಇಂಫಾಲ್: ಪೌರತ್ವ (ತಿದ್ದುಪಡಿ) ಮಸೂದೆ ೨೦೧೬ ವಿರುದ್ಧ ನಡೆಯುತ್ತಿರುವ ಸಾರ್ವಜನಿಕ ಪ್ರತಿಭಟನೆಗಳಿಗೆ
ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿ, ಅಂತಾರಾಷ್ಟ್ರೀಯ ಖ್ಯಾತಿಯ ಮಣಿಪುರದ ಚಿತ್ರ ನಿರ್ಮಾಪಕ ಅರಿಭಮ್ ಸಿಯಮ್ ಶರ್ಮ ಅವರು ತಾವು ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿರುವುದಾಗಿ ಇಲ್ಲಿ ಪ್ರಕಟಿಸಿದರು. ತಮ್ಮ ಇಂಫಾಲ್ ನಿವಾಸದಲ್ಲಿ ಮಧ್ಯಾಹ್ನ ವರದಿಗಾರರ ಜೊತೆ ಮಾತನಾಡಿದ ಖ್ಯಾತ ಚಿತ್ರನಿರ್ಮಾಪಕ ಹಾಗೂ ಸಂಕಲನಕಾರ ಅರಿಭಮ್ ಸಿಯಮ್ ಶರ್ಮ ಅವರು ’ಮಣಿಪುರದ ಜನರಿಗೆ ರಕ್ಷಣೆಯ ಅಗತ್ಯ ಇದೆ’ ಎಂದು
ಹೇಳಿದರು. ೫೦೦ಕ್ಕೂ ಹೆಚ್ಚಿನ ಸದಸ್ಯ ಬಲದ ಲೋಕಸಭೆಯಲ್ಲಿ ರಾಜ್ಯವು ಕೇವಲ ಒಬ್ಬರು ಅಥವಾ ಇಬ್ಬರು ಸಂಸತ್ ಸದಸ್ಯರನ್ನು ಹೊಂದಿದೆ. ಹೀಗಿರುವಾಗ ಈಶಾನ್ಯ ಭಾಗವು ಸಂಸತ್ತಿನಲ್ಲಿ ಎಂತಹ ಧ್ವನಿ ಹೊಂದಿರಲು ಸಾಧ್ಯ? ಎಂದು ಅವರು ಪ್ರಶ್ನಿಸಿದರು. ‘ದೊಡ್ಡದಾಗಲಿ ಅಥವಾ ಸಣ್ಣದಾಗಲಿ ನಮ್ಮನ್ನು ಒಂದು ರಾಜ್ಯ ಎಂಬುದಾಗಿ ಅವರು ನಮ್ಮನ್ನು ಗೌರವಿಸಬೇಕು. ಜನಸಂಖ್ಯೆಯ ಆಧಾರದಲ್ಲಿ ಇದನ್ನು ಲೆಕ್ಕಹಾಕಬಾರದು. ಭಾರತವು ರಾಜ್ಯಗಳನ್ನು ಒಳಗೊಂಡಿರುವ ಒಕ್ಕೂಟವಾಗಿರುವುದರಿಂದ ನಾನು ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ’ ಎಂದು ಶರ್ಮ ನುಡಿದರು. ಈಶಾನ್ಯ ರಾಜ್ಯಗಳು ಜಂಟಿಯಾಗಿ ಸರ್ಕಾರದ ಮುಂದೆ ಏನನ್ನಾದರೂ ಇರಿಸಿದಾಗ ಅವರು ಅದನ್ನು ಪರಿಗಣಿಸಬೇಕು. ಅವರು ಅದನ್ನು ಪರಿಗಣಿಸದೇ ಇದ್ದಲ್ಲಿ ಸಹಜವಾಗಿಯೇ ನಾವು ವಿರೋಧಿಸಬೇಕಾಗುತ್ತದೆ’ ಎಂದು ಅವರು ಹೇಳಿದರು. ‘ಆದ್ದರಿಂದ ಸಮಗ್ರತೆಯ ಪ್ರದರ್ಶನಕ್ಕಾಗಿ,
ನಾನು ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ’ ಎಂದು ೮೩ರ ಹರೆಯದ ಖ್ಯಾತ ಚಿತ್ರ ನಿರ್ಮಾಪಕ ಹೇಳಿದರು. ಶರ್ಮ ಅವರು ೧೯೭೨ರಲ್ಲಿ ’ಮಾತಂಗಿ ಮಣಿಪುರ’ ಚೊಚ್ಚಲ ಮಣಿಪುರಿ ಚಿತ್ರದ ಮೂಲಕ ಮಣಿಪುರಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ದಿವಂಗತ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಮಣಿಪುರಿ ಚಿತ್ರರಂಗಕ್ಕೆ ಮತ್ತು ಚಿತ್ರ ಜಗತ್ತಿಗೆ ನೀಡಿದ ಕಾಣಿಕೆಗಾಗಿ ಶರ್ಮ ಅವರಿಗೆ ೨೦೦೬ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು. ಲೋಕಸಭೆಯಲ್ಲಿ ಜನವರಿ ೮ರಂದು ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ಬಳಿಕ ಅದರ ವಿರುದ್ಧ ಮಣಿಪುರದಲ್ಲಿ ನಿರಂತರ ಚಳವಳಿ ನಡೆದಿತ್ತು. ಜನರು ಹಗಲಿನ ವೇಳೆಯಲ್ಲಿ ಧರಣಿಗಳನ್ನೂ, ರಾತ್ರಿಯ ವೇಳೆಯಲ್ಲಿ ’ಟಾರ್ಚ್ ರ್‍ಯಾಲಿ’ಗಳನ್ನೂ ನಡೆಸುತ್ತಾ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದರು. ಮಣಿಪುರದ ರಾಜಕೀಯ ಪಕ್ಷಗಳ ನಿಯೋಗವೊಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ’ಈಶಾನ್ಯ ಪ್ರದೇಶದ ದೇಶೀ ಜನರಿಗೆ ಅದರಲ್ಲೂ ವಿಶೇಷವಾಗಿ ಮಣಿಪುರ ರಾಜ್ಯದ ಜನರಿಗೆ ರಕ್ಷಣೆಯ ವಿಧಿಯನ್ನು ಪೌರತ್ವ (ತಿದ್ದುಪಡಿ) ಮಸೂದೆಗೆ, ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಗುವ ಮುನ್ನ ಸೇರ್ಪಡೆ ಮಾಡಬೇಕು’ ಎಂದೂ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ಮನವಿಯೊಂದನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಯಿತು. ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಮತ್ತು ಮಣಿಪುರ ಬಿಜೆಪಿ ಅಧ್ಯಕ್ಷ ಕೆ. ಭಾಬಾನಂದ ಅವರು ರಾಜಕೀಯ ಪಕ್ಷಗಳ ನಿಯೋಗದ ನೇತೃತ್ವ ವಹಿಸಿದ್ದರು. ಕಳೆದ ತಿಂಗಳು ಮಣಿಪುರ ಸಚಿವ ಸಂಪುಟವು ರಾಜ್ಯದ ಜನಸಂಖ್ಯೆಯು ಬಹುತೇಕ ಜನಾಂಗೀಯ ಸಮೂಹಗಳನ್ನು ಒಳಗೊಂಡಿದ್ದು, ಅವು ವಿಶಿಷ್ಟವಾದ ಆಚಾರ, ವಿಚಾರ, ಜೀವನ ಪದ್ಧತಿ, ಕಾನೂನು ಕಟ್ಟಳೆಗಳನ್ನು ಒಳಗೊಂಡಿದ್ದು ಇವರ ಪ್ರಮಾಣ ರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇಕಡಾ ೦.೨ರಷ್ಟು ಮಾತ್ರ ಇದೆ ಎಂದು ವಿಶ್ಲೇಷಿಸಿತ್ತು.
ಈ ಹಿನ್ನೆಲೆಯಲ್ಲಿ ಈ ಸಣ್ಣ ದೇಶೀ ಜನಸಮುದಾಯಕ್ಕೆ ಸಾಂವಿಧಾನಿಕ ರಕ್ಷಣೆ ನೀಡಬೇಕಾದ ಅಗತ್ಯವಿದೆ’ ಎಂದು
ಇಂಫಾಲದಲ್ಲಿನ ಮುಖ್ಯಮಂತ್ರಿಗಳ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು.
2019: ನವದೆಹಲಿ: ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರನ್ನು ಬಂಧಿಸುವ ಸಲುವಾಗಿ ಆಗಮಿಸಿದ ವೇಳೆಯಲ್ಲಿ ಹೈಡ್ರಾಮ ನಡೆದು, ಸಿಬಿಐ ಅಧಿಕಾರಿಗಳ ತಂಡ ಮತ್ತು ಪೊಲೀಸ್ ಅಧಿಕಾರಿಗಳು ಕೈ ಕೈ ಮಿಲಾಯಿಸಿದ ಘಟನೆ ಸಂಜೆ ಪೊಲೀಸ್ ಕಮೀಷನರ್ ನಿವಾಸದ ಹೊರಗೆ ಘಟಿಸಿತು. ಘಟನೆಯ ಸುದ್ದಿ ಬರುತ್ತಿದ್ದಂತೆಯೇ
ಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರ ನಿವಾಸದತ್ತ ದೌಡಾಯಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಮತಾ ಅವರು ’ಭಾರತದ ಸಂವಿಧಾನದ ರಕ್ಷಣೆಗಾಗಿ ನಾನು ಮೋದಿ ಸರ್ಕಾರದ ವಿರುದ್ಧ ಧರಣಿ ಆರಂಭಿಸುತ್ತೇನೆ’ ಎಂದು ಘೋಷಿಸಿದರು. ಈ ಮಧ್ಯೆ ಸಿಬಿಐ ಕೂಡಾ ತನ್ನ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಬಲವಂತವಾಗಿ ರಾಜೀವ ಕುಮಾರ್ ಅವರ ನಿವಾಸದಿಂದ ಅಧಿಕಾರಿಗಳನ್ನು ಹೊರತಳ್ಳಲಾಗಿದೆ ಎಂದು ಆಪಾದಿಸಿದೆ. ಘಟನೆಯ ಬಗ್ಗೆ ಗೃಹ ಸಚಿವಾಲಯಕ್ಕೆ ಪತ್ರ ಬರೆಯುವುದಾಗಿ ಸಿಬಿಐ ತಿಳಿಸಿರುವುದಾಗಿ ಮೂಲಗಳು ದೃಢ ಪಡಿಸಿದವು. ಪ್ರಾಥಮಿಕ ವರದಿಗಳ ಪ್ರಕಾರ, ರೋಸ್ ವ್ಯಾಲಿ ಮತ್ತು ಶಾರದಾ ಚಿಟ್ ಫಂಡ್ ಹಗರಣದ ತನಿಖೆಯ ಅಂಗವಾಗಿ ಸಿಬಿಐ ಅಧಿಕಾರಿಗಳ ತನಿಖಾ ತಂಡವೊಂದು ಈದಿನ ಸಂಜೆ ಕೋಲ್ಕತದಲ್ಲಿ ರಾಜೀವ ಕುಮಾರ್ ಅವರ ನಿವಾಸಕ್ಕೆ ಆಗಮಿಸಿತ್ತು. ಆದರೆ ಐಪಿಎಸ್ ಅಧಿಕಾರಿಯ ನಿವಾಸದಲ್ಲಿ ಸಿಬಿಐ ಅಧಿಕಾರಿಗಳ ತಂಡವನ್ನು ತಡೆಯಲಾಯಿತು. ಈ ಹೊತ್ತಿನಲ್ಲಿ ತಳ್ಳಾಟ ನಡೆದು, ಕೆಲವುಸಿಬಿಐ ಅಧಿಕಾರಿಗಳನ್ನು ಬಲವಂತವಾಗಿ ಪೊಲೀಸ್ ಠಾಣೆಯೊಂದಕ್ಕೆ ಒಯ್ಯಲಾಯಿತು ಎಂದು ವರದಿಗಳು ಹೇಳಿದವು. ಕೇಂದ್ರೀಯ ತನಿಖಾ ದಳವು (ಸಿಬಿಐ) ಐಪಿಎಸ್ ಅಧಿಕಾರಿ ’ತಲೆತಪ್ಪಿಸಿಕೊಂಡಿದ್ದಾರೆ’ ಮತ್ತು ಅವರ ಪತ್ತೆಗಾಗಿ ’ಹುಡುಕಾಟ ನಡೆಸಲಾಗುತ್ತಿದೆ’ ಎಂಬುದಾಗಿ ಪ್ರತಿಪಾದಿಸಿದ ಒಂದುದಿನದ ಬಳಿಕ ೪೦ಕ್ಕೂ ಹೆಚ್ಚು ಜನರಿದ್ದ ಸಿಬಿಐ ಅಧಿಕಾರಿಗಳ ತಂಡವು ಕೋಲ್ಕತದಲ್ಲಿನ ರಾಜೀವ ಕುಮಾರ್ ನಿವಾಸಕ್ಕೆ ಭಾನುವಾರ ಆಗಮಿಸಿತ್ತು. ನಗರ ಪೊಲೀಸ್ ಮುಖ್ಯಸ್ಥರಿಗೆ ಬೆಂಬಲ ಘೋಷಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಬಿಐ ತಂಡ ಆಗಮನದ ಸುದ್ದಿ ಬಂದ ಬೆನ್ನಲ್ಲೇ ಕೇಂದ್ರ ಕೋಲ್ಕತದಲ್ಲಿರುವ
ರಾಜೀವ ಕುಮಾರ್ ಅವರ ಲಂಡನ್ ಸ್ಟ್ರೀಟ್ ನಿವಾಸಕ್ಕೆ ದೌಡಾಯಿಸಿದರು. ಹಿನ್ನೆಲೆ: ರೋಸ್ ವ್ಯಾಲಿ ಹಗರಣವು ಸುಮಾರು ೧೫,೦೦೦ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಹಗರಣವಾಗಿದ್ದರೆ,
ಶಾರದಾ ಚಿಟ್ ಫಂಡ್ ಹಗರಣವು ಸುಮಾರು ೨೫೦೦ ಕೋಟಿ ರೂಪಾಯಿ ಮೊತ್ತದ ಹಗರಣವಾಗಿದೆ. ಎರಡೂ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸದಸ್ಯರ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆಪಾದಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಈ ಮಧ್ಯೆ ಪೊಲೀಸ್ ಕಮೀಷನರ್ ಅವರ ನಿವಾಸಕ್ಕೆ ೪೦ ಮಂದಿ ಸಿಬಿಐ ಅಧಿಕಾರಿಗಳತಂಡವನ್ನು
ಕಳುಹಿಸುವ ಮೂಲಕ ದಂಗೆ ನಡೆಸಲು ಬಿಜೆಪಿಯ ಯೋಜಿಸಿದೆಯೇ ಎಂದು ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯನ್ ಟ್ವೀಟ್ ಮೂಲಕ ಪ್ರಶ್ನಿಸಿದರು. ಇದಕ್ಕೆ ಮುನ್ನ ಭಾನುವಾರ ಬೆಳಗ್ಗೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀವ ಕುಮಾರ್ ಅವರನ್ನು ರಾಷ್ಟ್ರದಲ್ಲಿಯೇ ಅತ್ಯುತ್ತಮ ಪೊಲೀಸ್ ಅಧಿಕಾರಿ ಎಂಬುದಾಗಿ ಬಣ್ಣಿಸಿದ್ದರು. ಬಿಜೆಪಿಯ ಅತ್ಯಂತ ಕೆಟ್ಟ ಸ್ವರೂಪದ ಮಾದರಿಯಲ್ಲಿ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಟೀಕಿಸಿದ ಬ್ಯಾನರ್ಜಿ, ಸಿಬಿಐಯು ತಲೆ ತಪ್ಪಿಸಿಕೊಂಡಿದ್ದಾರೆ ಎಂಬುದಾಗಿ ಪ್ರತಿಪಾದಿಸಿರುವ ಕೋಲ್ಕತ ಪೊಲೀಸ್ ಮುಖ್ಯಸ್ಥರು ಜಗತ್ತಿನಲ್ಲಿಯೇ ಅತ್ಯುತ್ತಮ ಅಧಿಕಾರಿಗಳಲ್ಲಿ ಒಬ್ಬರು. ಸಿಬಿಐ ಹೇಳಿದ ಪ್ರಕಾರ ಅವರೇನೂ ತಲೆ ತಪ್ಪಿಸಿಕೊಂಡಿಲ್ಲ
ಎಂಬುದಾಗಿ ಪ್ರತಿಪಾದಿಸಿದ್ದರು. ರಾಜೀವ
ಕುಮಾರ್ ಅವರು ವಾರದ
ಏಳುದಿನವೂ ೨೪ ತಾಸು ಕಾಲ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಒಂದೇ ಒಂದು ದಿನ ಅವರು ರಜೆ ಪಡೆದಿದ್ದರು. ನೀವು ಸುಳ್ಳುಗಳನ್ನು ಹರಡುತ್ತಿದ್ದೀರಿ.
ಸುಳ್ಳುಗಳು ಯಾವಾಗಲೂ ಸುಳ್ಳುಗಳೇ’ ಎಂದು ಅವರು ಟ್ವೀಟ್ ಮಾಡಿದ್ದರು. ಮಧ್ಯಪ್ರದೇಶದಲ್ಲಿ
ಹಿಂದೆ ಪೊಲೀಸ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ರಿಷಿ ಕುಮಾರ್ ಶುಕ್ಲಾ ಅವರು ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕದ ಮೊದಲ ಸವಾಲಿನಲ್ಲೇ ಪ್ರಕ್ಷುಬ್ಧತೆಯ ಸನ್ನಿವೇಶ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳ ಸರ್ಕಾರವು ಆಂಧ್ರಪ್ರದೇಶವನ್ನು
ಅನುಸರಿಸಿ ರಾಜ್ಯದಲ್ಲಿ ತನಿಖೆ ನಡೆಸದಂತೆ ಸಿಬಿಐಯನ್ನು ನಿಷೇಧಿಸಿ, ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂತೆಗೆದುಕೊಂಡ ಬಳಿಕ ಕೇಂದ್ರದ ಜೊತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಮೊತ್ತ ಮೊದಲ ಬೃಹತ್ ಘರ್ಷಣೆಯಾಗಿಯೂ ಈ ಘಟನೆ ಮಾರ್ಪಟ್ಟಿತು,. ೧೯೮೯ರಲ್ಲಿ ಎಡರಂಗ ಸರ್ಕಾರ ಸಿಬಿಐಗೆ ರಾಜ್ಯದಲ್ಲಿ ತನಿಖೆ ನಡೆಸಲು ನೀಡಿದ್ದ ಸಾಮಾನ್ಯ ಒಪ್ಪಿಗೆಯ ಪರಿಣಾಮವಾಗಿ ಕೇಂದ್ರೀಯ ತನಿಖಾ ಸಂಸ್ಥೆಗೆ ರಾಜ್ಯ ಸರ್ಕಾರದ ಪ್ರತ್ಯೇಕ ಒಪ್ಪಿಗೆಯನ್ನು ಪಡೆಯದೆಯೇ ತನಿಖೆ ನಡೆಸುವ ಅಧಿಕಾರ ಪ್ರಾಪ್ತವಾಗಿತ್ತು. ನವೆಂಬರಿನಲ್ಲಿ ಸಾಮಾನ್ಯ ಒಪ್ಪಿಗೆಯನ್ನು ರಾಜ್ಯ ಸರ್ಕಾರ ಹಿಂತೆಗೆದ ಪರಿಣಾಮವಾಗಿ ಸಿಬಿಐಯು, ನ್ಯಾಯಾಲಯಗಳು ಆದೇಶ ನೀಡಿದ ಪ್ರಕರಣಗಳನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ತನಿಖೆಗಳನ್ನು ನಡೆಸಬೇಕಿದ್ದರೂ ಪಶ್ಚಿಮ ಬಂಗಾಳ ಸರ್ಕಾರದ ಅನುಮತಿ ಪಡೆಯುವುದು ಅನಿವಾರ್ಯವಾಗಿತ್ತು. ಸಿಬಿಐ ಪ್ರಸ್ತುತ ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಶ್ ಮೆಂಟ್ ಕಾಯ್ದೆಯ ಅಡಿಯಲ್ಲಿ ಕಾರ್‍ಯ ನಿರ್ವಹಿಸುತ್ತಿದೆ. ಮಮತಾ
ಬ್ಯಾನರ್ಜಿ ಅವರು ಕಳೆದ ತಿಂಗಳ ಕೊನೆಯಲ್ಲಿ ಸಿಬಿಐಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ’ಮಿತ್ರ ಪಕ್ಷ’ ಎಂಬುದಾಗಿ ಬಣ್ಣಿಸಿದ್ದರು. ಕೇಂದ್ರ ಸರ್ಕಾರವು ದೇಶಾದ್ಯಂತ ವಿರೋಧ ಪಕ್ಷಗಳಿಗೆ ಕಿರುಕುಳ ನೀಡಲು ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ
ಎಂದು ಅವರು ಆಪಾದಿಸಿದ್ದರು. ಸಂಜೆ ಸಿಬಿಐ ತಂಡ ರಾಜೀವ ಕುಮಾರ ನಿವಾಸಕ್ಕೆ ಆಗಮಿಸಿದ ಸುದ್ದಿ ತಿಳಿದ ತತ್ ಕ್ಷಣವೇ ಅಲ್ಲಿಗೆ ದೌಡಾಯಿಸಿ ಬಂದ ಮಮತಾ ಬ್ಯಾನರ್ಜಿ ಅವರು ’ರಾಷ್ಟ್ರದಲ್ಲಿನ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತಲೂ
ಹೀನವಾಗಿದೆ’ ಎಂದು ಹೇಳಿದರು. ‘ನಾನು ನನ್ನ ಪಡೆಯ ಜೊತೆಗೆ ನಿಲ್ಲುತ್ತೇನೆ. ನಾನು ಅವರನ್ನು ಗೌರವಿಸುತ್ತೇನೆ.
ನನಗೆ ಇಂದು ಅತ್ಯಂತ ಬೇಸರವಾಗಿದೆ. ಇದು ಒಕ್ಕೂಟರಚನೆಯ ನಾಶದ ಕೃತ್ಯ’ ಎಂದು
ಮಮತಾ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು. ‘ನನ್ನ ಪಡೆಗೆ ರಕ್ಷಣೆ ಒದಗಿಸುವುದು ನನ್ನ ಹೊಣೆಗಾರಿಕೆ ಎಂಬುದಾಗಿ ಹೇಳಲು ನಾನು ಹೆಮ್ಮೆ ಪಡುತ್ತೇನೆ. ಯಾವುದೇ ನೋಟಿಸ್ ಇಲ್ಲದೆ ನೀವು ಕೋಲ್ಕತ ಪೊಲೀಸ್ ಕಮೀಷನರ್ ಅವರ ನಿವಾಸಕ್ಕೆ ಬಂದಿದ್ದೀರಿ. ನಾವು ಸಿಬಿಐಯನ್ನೇ ಬಂಧಿಸಬಹುದಾಗಿತ್ತು.
ಆದರೆ ಬಿಟ್ಟಿದ್ದೇವೆ’ ಎಂದು ಮಮತಾ ನುಡಿದರು. ‘ನಾನು ಭಾರತದ ಸಂವಿಧಾನದ ರಕ್ಷಣೆಗಾಗಿ ಮೋದಿ ಸರ್ಕಾರದ ವಿರುದ್ಧ ಧರಣಿ ಆರಂಭಿಸುತ್ತೇನೆ’ ಎಂದು ಮಮತಾ ಪ್ರಕಟಿಸಿದರು. ರಾಜೀವ
ಕುಮಾರ್ ಅವರ ಪಕ್ಕದಲ್ಲೇ ನಿಂತುಕೊಂಡು ’ಅವರು ಜಗತ್ತಿನಲ್ಲೇ ಅತ್ಯುತ್ತಮ ಎಂದು ಈಗಲೂ ಹೇಳುತ್ತೇನೆ’ ಎಂದು
ಮಮತಾ ಹೇಳಿದರು. ತನಿಖಾ
ಸಂಸ್ಥೆಯು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಅಜಿತ್ ದೋವಲ್ ಅವರ ನಿರ್ದೇಶನಗಳ ಪ್ರಕಾರ ಕಾರ್ಯಾಚರಣೆ ನಡೆಸುತ್ತಿದೆ ಎಂದೂ ಮಮತಾ ಆಪಾದಿಸಿದರು. ಕ್ರಿಮಿನಲ್ ಗಳನ್ನು ಬಂಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಜೆನ್ಸಿಗಳನ್ನು ಹೊಂದಿವೆ. ಶಾರದಾ ಹಗರಣದ ತನಿಖೆಗಾಗಿ ಸರ್ಕಾರವು ಶ್ಯಾಮಲಾಲ್ ಬ್ಯಾನರ್ಜಿ ಆಯೋಗವನ್ನು ರಚಿಸಿದೆ ಎಂದು ಮಮತಾ ನುಡಿದರು. ‘ಬಿಜೆಪಿಯ ಕಳ್ಳರ ಪಕ್ಷ. ಚಿಟ್ ಫಂಡ್ ಗಳು ೧೯೮೦ರಿಂದಲೇ ಇವೆ. ನಾವು ಬಿಜೆಪಿಯಲ್ಲ ಅಥವಾ ಸಿಪಿಐ(ಎಂ) ಕೂಡಾ ಅಲ್ಲ ಎಂದು ಹೇಳುವ ಮೂಲಕ ಮೋದಿ ಸರ್ಕಾರದ ಪ್ರಬಲ ಸಂದೇಶವನ್ನು ಅವರು ರವಾನಿಸಿದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಜನವರಿ ೧೯ರ ವಿರೋಧಿ ಮಹಾರ್ಯಾಲಿಗೆ ಮುಂಚಿತವಾಗಿಯೇ ಇಂತಹ ಸನ್ನಿವೇಶ ಸೃಷ್ಟಿಗೆ ಯತ್ನಿಸಿದ್ದರು. ರ್ಯಾಲಿಗೆ ಮುನ್ನವೇ ಸಿಬಿಐಯನ್ನು ಕರೆಸಿಕೊಂಡಿದ್ದ ಮೋದಿ, ಏನಾದರೂ ಮಾಡಿ ಎಂದು ಸೂಚನೆ ನೀಡಿದ್ದರು ಎಂದು ಮಮತಾ ಆಪಾದಿಸಿದರು. ರಿಷಿ
ಕುಮಾರ್ ಶುಕ್ಲಾ ಅವರು ಸಿಬಿಐಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ ಮರುದಿನವೇ ಈಹೈಡ್ರಾಮ ನಡೆಯಿತು.
2019: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಒಡಿಶಾದ ಪುರಿಯಲ್ಲಿ ತರಾಟೆಗೆ ತೆಗೆದುಕೊಂಡು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ’ಉಭಯ ನಾಯಕರೂ ಒಡಿಶಾ ಜನತೆಗೆ ಬೇಕಾದಷ್ಟು ಮಾಡಿದ್ದಾರೆ’ ಎಂದು
ಕುಟುಕಿದರು. ’ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವಾಗಲೀ, ರಾಜ್ಯದಲ್ಲಿನ ಬಿಜೆಡಿ ಸರ್ಕಾರವಾಗಲೀ ರಾಜ್ಯದ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ’ ಎಂದು
ಪುರಿ ರ್ಯಾಲಿಯಲ್ಲಿ ಪ್ರತಿಪಾದಿಸಿದ ಶಾ, ’ಯುಪಿಎ ಸರ್ಕಾರವು ೭೯,೦೦೦ ಕೋಟಿ ರೂಪಾಯಿ ಕೊಟ್ಟಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ೨.೧೧ ಲಕ್ಷ ಕೋಟಿ ರೂಪಾಯಿಗಳನ್ನು ನೀಡಿದೆ’ ಎಂದು ಹೇಳಿದರು.
೨೦೧೯ರ ಮಧ್ಯಂತರ ಮುಂಗಡಪತ್ರದಲ್ಲಿ ಪ್ರಕಟಿಸಲಾದ ಪಿಎಂ -ಕಿಸಾನ್ ಯೋಜನೆಯನ್ನು ಉಲ್ಲೇಖಿಸಿದ ಬಿಜೆಪಿ ಅಧ್ಯಕ್ಷರು ’ಯೋಜನೆಯನ್ನು ಪ್ರಕಟಿಸಿದಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮುಖ ಬಿಳಚಿತು’ ಎಂದು ಹೇಳಿದರು. ’ನಾವು ಈ ಯೋಜನೆಯ ಅಡಿಯಲ್ಲಿ ಪ್ರತಿವರ್ಷ ರೈತರಿಗೆ ೭೫,೦೦೦ ಕೋಟಿ ರೂಪಾಯಿಗಳನ್ನು ನೀಡಲಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರಿಗೆ ’ಹಿಂಗಾರು’ ಮತ್ತು ’ಮುಂಗಾರು’ ಬೆಳೆ (ರಬಿ ಕ್ರಾಪ್ ಅಂಡ್ ಖಾರಿಫ್) ಅಂದರೆ ಏನು ಎಂಬುದೇ ಗೊತ್ತಿಲ್ಲ’ ಎಂದು
ಅಮಿತ್ ಶಾ ನುಡಿದರು. ಬಿಜೆಪಿಯ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಆರಂಭಿಸಿದೆ ಎಂದು ನುಡಿದ ಶಾ, ’ಕಾಂಗ್ರೆಸ್ ಕೂಡಾ ಡಿಬಿಟಿ ಯೋಜನೆಯನ್ನು ಹೊಂದಿತ್ತು ಎಂದು ಹೇಳಿದರು. ‘ನಮ್ಮ ಅವಧಿಯಲ್ಲಿ ಹಣವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುವುದನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯು ಖಾತರಿ ಪಡಿಸುತ್ತದೆ. ಕಾಂಗ್ರೆಸ್ ಕೂಡಾ ಡಿಬಿಟಿ ಅಂದರೆ ಡೀಲರ್ ಬ್ರೋಕರ್ ಟ್ರಾನ್ಸಫರ್- ಯೋಜನೆಯನ್ನು ಹೊಂದಿತ್ತು. ಈ ಯೋಜನೆಯ ಅಡಿಯಲ್ಲಿ ಹಣವನ್ನು ಮಧ್ಯವರ್ತಿಗಳ ಖಾತೆಗಳಿಗೆ ಜಮೆ ಮಾಡಲಾಗುತ್ತಿತ್ತು
ಎಂದು ಶಾ ನುಡಿದರು. ‘ರಾಜ್ಯವು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ’ ಯೋಜನೆಯನ್ನು ಜಾರಿಗೊಳಿಸಿಲ್ಲ. ಏಕೆಂದರೆ ಪಟ್ನಾಯಕ್ ಸರ್ಕಾರಕ್ಕೆ ನರೇಂದ್ರ ಮೋದಿಯವರು ರಾಜ್ಯದಲ್ಲಿ ಜನಪ್ರಿಯರಾಗಿ ಬಿಡುತ್ತಾರೆ ಎಂಬ ಹೆದರಿಕೆಯಿದೆ’ ಎಂದು ಬಿಜೆಪಿ ಅಧ್ಯಕ್ಷ ಚುಚ್ಚಿದರು. ‘ದಯವಿಟ್ಟು ನಮ್ಮ ಹೆಸರನ್ನು ಕಿತ್ತು ಹಾಕಿ, ಆದರೆ ಯೋಜನೆಯನ್ನು ಒಡಿಶಾದಲ್ಲಿ ಅನುಷ್ಠಾನಗೊಳಿಸಿ. ಒಡಿಶಾದ ಆರೋಗ್ಯ ಯೋಜನೆಯು ಸೂರತ್ ಅಥವಾ ದೇಶದ ಬೇರಾವುದೇ ಭಾಗಕ್ಕೆ ವಲಸೆ ಹೋದ ಒಡಿಯಾ ಯುವಕರಿಗೆ ಅನ್ವಯಿಸುತ್ತದೆಯೇ?
ಇಲ್ಲ. ಅದು ಅನ್ವಯಿಸದು. ಆದರೆ ಆಯುಷ್ಮಾನ್ ಭಾರತ ಯೋಜನೆಯು ಅಲ್ಲಿ ಕೆಲಸ ಮಾಡುತ್ತದೆ. ಚುನಾವಣೆಗಳು ಕನಿಷ್ಠ ೩ ತಿಂಗಳು ದೂರ ಇವೆ, ದಯವಿಟ್ಟು ಆಯುಷ್ಮಾನ್ ಭಾರತ ಯೋಜನೆಯನ್ನು ಅಂಗೀಕರಿಸಿ ಜಾರಿಮಾಡಿ’ ಎಂದು ಅಮಿತ್ ಶಾ ಹೇಳಿದರು. ರಾಜ್ಯದ ಭಾಷೆಯಾಗಿರುವ ಒಡಿಯಾ ಭಾಷೆಯನ್ನು ಮಾತನಾಡಲು ಬಾರದೇ ಇರುವ ಅಥವಾ ಅರ್ಥ ಮಾಡಿಕೊಳ್ಳಲಾಗದ ಮುಖ್ಯಮಂತ್ರಿಯು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ
ಎಂಬುದು ನಾಚಿಕೆಗೇಡಿನ ವಿಷಯ ಎಂದು ಬಿಜೆಪಿ ನಾಯಕ ನುಡಿದರು. ಕಾಂಗ್ರೆಸ್ ಮತ್ತು ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ ಅಮಿತ್ ಶಾ, ಬಿಜೆಡಿಯು ಕಾಂಗ್ರೆಸ್ ಪಕ್ಷದ ಬಿ-ಟೀಮ್ ಎಂದು ಹೇಳಿದರು. ‘ನವೀನ್ ಬಾಬು ಅವರ ಪಕ್ಷವು ಕಾಂಗ್ರೆಸ್ಸಿನ ಬಿ-ಟೀಮ್ ಆಗಿದೆ. ಅವರು ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ಅಷ್ಟೊಂದು ಕಾಲ ಆಡಳಿತ ನಡೆಸಿದೆ. ಒಡಿಶಾ ಅಭಿವೃದ್ಧಿ ಹೊಂದಿದೆಯೇ? ನವೀನ್ ಪಟ್ನಾಯಕ್ ಅವರು ಇಷ್ಟೊಂದು ದೀರ್ಘ ಕಾಲ ಆಡಳಿತ ನಡೆಸಿದ್ದಾರೆ. ಒಡಿಶಾ ಅಭಿವೃದ್ಧಿ ಹೊಂದಿದೆಯೇ?’ ಎಂದು ಶಾ ಪ್ರಶ್ನಿಸಿದರು. ರಾಜ್ಯದಲ್ಲಿನ ಬಿಜೆಡಿ ಸರ್ಕಾರವನ್ನು ’ಭಸ್ಮವಾದ ಟಾನ್ಸ್‌ಫಾರ್ಮರ್’ ಗೆ
ಹೋಲಿಸಿದ ಶಾ, ’ಟ್ರಾನ್ಸ್ಫಾರ್ಮರ್ ಭಸ್ಮವಾಗಿದ್ದರೆ ಜನರ ಮನೆಗಳಿಗೆ ಬೆಳಕು ಬರುತ್ತದೆಯೇ? ಎಂದು ಕೇಳಿದರು. ‘ಟ್ರಾನ್ಸ್ಫಾರ್ಮರ್ ಇಲ್ಲದೇ ನಿಮ್ಮ ಮನೆಗೆ ವಿದ್ಯುತ್ ಬರುತ್ತದೆಯೇ? ಬಿಜೆಡಿ ಟ್ರಾನ್ಸ್ಫಾರ್ಮರ್ ಹೊತ್ತಿ ಉರಿದು ಭಸ್ಮವಾಗಿದೆ. ಟ್ರಾನ್ಸ್ ಫಾರ್ಮರ್ ಭಸ್ಮವಾದಾಗ, ಅದನ್ನು ಬದಲಾಯಿಸಬೇಕು. ಈ ಬಿಜೆಡಿ ಸರ್ಕಾರವನ್ನು ಕಿತ್ತು ಎಸೆಯಬೇಕಾಗಿದೆ’ ಎಂದು ಶಾ ನುಡಿದರು.
2019: ಜಮ್ಮು: ತಮ್ಮ ಸರ್ಕಾರವು ಘೋಷಿಸಿರುವ ರೈತರ ಆದಾಯ ಯೋಜನೆಯನ್ನು ಟೀಕಿಸುತ್ತಿರುವುದಕ್ಕಾಗಿ ವಿಪಕ್ಷಗಳನ್ನು ಇಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ’ಹವಾ ನಿಯಂತ್ರಿತ ಕೊಠಡಿಗಳಲ್ಲಿ (ಎಸಿ ರೂಮ್ಸ್) ಕುಳಿತುಕೊಂಡಿರುವ
ಜನರಿಗೆ ದೂರದ ಪುಟ್ಟ ಗ್ರಾಮಗಳಲ್ಲಿ ಇರುವ ಬಡ ರೈತರ ೬೦೦೦ ರೂಪಾಯಿಯ ಬೆಲೆ ಏನೆಂಬುದು ಗೊತ್ತಿಲ್ಲ’ ಎಂದು
ಚುಚ್ಚಿದರು. ಕಾಂಗ್ರೆಸ್ ಪಕ್ಷದ ರೈತಸಾಲಮನ್ನಾ ಭರವಸೆ ಮೇಲೆ ದಾಳಿ ನಡೆಸಿದ ಪ್ರಧಾನಿ, ’ಪಕ್ಷವು (ಕಾಂಗ್ರೆಸ್) ಚುನಾವಣೆ ಗೆಲಲ್ಲಲು ಮಾತ್ರ ಈ ಕ್ರಮವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಪಕ್ಷವು ೨೦೦೮-೦೯ರಲ್ಲಿ ರೈತರ ೬ ಲಕ್ಷ ರೂಪಾಯಿ ಮೌಲ್ಯದ ಸಾಲ ಮನ್ನಾ ಮಾಡುವ ಭರವಸೆ ಕೊಟ್ಟಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಅದು ಕೇವಲ ೫೨,೦೦೦ ಕೋಟಿ ರೂಪಾಯಿಗಳ ಸಾಲಪರಿಹಾರವನ್ನು
ನೀಡಿತು ಎಂದು ಮೋದಿ ಪ್ರತಿಪಾದಿಸಿದರು.
’ಸಾಲಮನ್ನಾ ಸವಲತ್ತು ಪಡೆದ ೨೫-೩೦ ಲಕ್ಷ ಜನರು ಅದಕ್ಕೆ ಅರ್ಹರೇ ಆಗಿರಲಿಲ್ಲ ಎಂದು ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ)
ವರದಿಯಲ್ಲಿ ಬೆಳಕಿಗೆ ಬಂದಿದೆ’ ಎಂದು ಪ್ರಧಾನಿ ಜಮ್ಮು ವಲಯದ ವಿಜಯಪುರದ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಮಾಡಿದ ಸಾಲಮನ್ನಾವನ್ನು ಪ್ರಸ್ತಾಪಿಸಿದ ಮೋದಿ, ’ಕೆಲವು ಫಲಾನುಭವಿಗಳಿಗೆ ಕೇವಲ ೧೩ ರೂಪಾಯಿಗಳ ಚೆಕ್ ನೀಡಲಾಗಿದೆ’ ಎಂದು ದೂರಿದರು.
ತಮ್ಮ ನೇರ ಲಾಭ ವರ್ಗಾವಣೆಯ ಪ್ರಧಾನ ಮಂತ್ರಿ -ಕಿಸಾನ್ ಯೋಜನೆಯಡಿಯಲ್ಲಿ,
೭೫,೦೦೦ ಕೋಟಿ ರೂಪಾಯಿಗಳನ್ನು ಪ್ರತಿವರ್ಷವೂ ಮಂಜೂರು ಮಾಡಲಾಗುತ್ತದೆ. ಅದರ ಅರ್ಥ ೭.೫ ಲಕ್ಷ ಕೋಟಿ ರೂಪಾಯಿಗಳನ್ನು ಮುಂದಿನ ೧೦ ವರ್ಷಗಳ ಅವಧಿಯಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಪ್ರಧಾನಿ ವಿವರಿಸಿದರು. ಜನರಿಗೆ ರಾಷ್ಟ್ರದ ’ನಾಮ್‌ದಾರ್’ ಜನರ
ಹಿನ್ನೆಲೆ ಗೊತ್ತಿದೆ. ಅವರಿಗೆ ಚುನಾವಣೆಗಳಿಗೆ ಕೆಲವೇ ದಿನಗಳ ಮುನ್ನ ಸಾಲಮನ್ನಾದ ’ಜ್ವರ’ ಹಿಡಿಯಿತು. ೧೦ ವರ್ಷದಲ್ಲಿ ಒಮ್ಮೆ ರೈತಸಾಲ ಮನ್ನಾ ಘೋಷಣೆ ಮೂಲಕ ರೈತರ ’ಪ್ರವಾದಿ’ಯಂತೆ
ನಟಿಸಲು ಅವರು ಯತ್ನಿಸಿದರು ಎಂದು ಯುಪಿಎ ಆಡಳಿತವನ್ನು ಉಲ್ಲೇಖಿಸುತ್ತಾ ಪ್ರಧಾನಿ ಟೀಕಿಸಿದರು. ವಿಪರ್ಯಾಸವೆಂದರೆ
೨೦೧೭ರ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ಕೂಡಾ ಉತ್ತರ ಪ್ರದೇಶದಲ್ಲಿ ರೈತ ಸಾಲ ಮನ್ನಾ ಭರವಸೆಯನ್ನು ನೀಡಿತ್ತು. ಮಹಾಚುನಾವಣೆಗೆ ಮುನ್ನ ಸಂಕಷ್ಟದಲ್ಲಿರುವ ರೈತರನ್ನು ಸೆಳೆಯುವ ಸಲುವಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈಗ ತನ್ನ ಮಧ್ಯಂತರ ಮುಂಗಡಪತ್ರದಲ್ಲಿ ರೈತರಿಗೆ ವರ್ಷಕ್ಕೆ ೬೦೦೦ ರೂಪಾಯಿಗಳ ಖಚಿತ ಆದಾಯ ಖಾತರಿಯ ಯೋಜನೆಯನ್ನು ಪ್ರಕಟಿಸಿದೆ. ಎರಡು ಹೆಕ್ಟೇರ್ವರೆಗಿನ ಕೃಷಿಯೋಗ್ಯ ಭೂಮಿ ಹೊಂದಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಈ ಯೋಜನೆಯ ಲಾಭ ಲಭಿಸುವುದು.
ಇದಕ್ಕೆ ಮುನ್ನ ವಿವಿಧ ಯೋಜನೆಗಳ ಶಿಲಾನ್ಯಾಸ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಲೇಹ್
ಮತ್ತು ಲಡಾಖ್ ಈ ಯೋಜನೆಗಳ ಲಾಭ ಪಡೆಯಲಿದೆ ಎಂದು ಹೇಳಿದರು. ’ಇಲ್ಲಿನ ಬಹುತೇಕ ರೈತರು ಈ ಮಾನದಂಡಕ್ಕೆ ಅರ್ಹರಾಗುವರು ಮತ್ತು ವಾರ್ಷಿಕ ೬೦೦೦ ರೂಪಾಯಿಗಳ ಖಚಿತ ವರಮಾನ ಪಡೆಯುವರು. ಅದನ್ನು ಮೂರು ಕಂತುಗಳಲ್ಲಿ ಪಾವತಿ ಮಾಡಲಾಗುವುದು. ಶೀಘ್ರದಲ್ಲೇ ಮೊದಲ ಕಂತು ಪಾವತಿಯಾಗಿ ರೈತರಿಗೆ ತಲುಪಲಿದೆ. ನಾನು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸುವೆ ಎಂದು ಪ್ರಧಾನಿ ನುಡಿದರು. ಬಿಜೆಪಿ ಕಾರ್ಯಕರ್ತನಾಗಿದ್ದ ದಿನಗಳಲ್ಲಿ ದೆಹಲಿಯ ಜನರು ಲೇಹ್‌ನ ತರಕಾರಿಗಳಿಗಾಗಿ ಬೇಡಿಕೆ ಮಂಡಿಸುತ್ತಿದ್ದುದನ್ನು ತಾವು ಕಂಡಿದ್ದುದಾಗಿ ನುಡಿದ ಮೋದಿ ’ಇಲ್ಲಿನ ತರಕಾರಿಗಳ ಗುಣಮಟ್ಟ ಅದಕ್ಕೆ ಕಾರಣ’ ಎಂದು
ವಿವರಿಸಿದರು. ’ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ರೈತರ ಪಾಲಿನ ಮಹತ್ವದ ಯೋಜನೆ. ರಾಷ್ಟ್ರದಲ್ಲಿನ ಅತಿ ದೂರದ ಸಂಕಷ್ಟಮಯ ಪ್ರದೇಶಗಳ ರೈತರ ೬೦೦೦ರೂಪಾಯಿಗಳ ಬೆಲೆ ಏನೆಂಬುದು ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತವರಿಗೆ ಗೊತ್ತಿರುವುದಿಲ್ಲ’ ಎಂದು ಮೋದಿ ನುಡಿದರು. ಲಡಾಖ್ ಪ್ರದೇಶದ ಪ್ರಪ್ರಥಮ ವಿಶ್ವವಿದ್ಯಾಲಯವನ್ಜು ಆರಂಭಿಸುವ ಸಲುವಾಗಿ ಪ್ರಧಾನಿ ಲೇಹ್ಗೆ ಆಗಮಿಸಿದ್ದು, ಇದು ಲೇಹ್, ಕಾರ್ಗಿಲ್, ನುಬ್ರಾ, ಝನ್ಸಕರ್, ಡ್ರಾಸ್ ಮತ್ತು ಖಾಲ್ಟಸಿಗಳ ಪದವಿ ಮಹಾವಿದ್ಯಾಲಯಗಳನ್ನು ಒಳಗೊಂಡ ಸಮೂಹ ವಿಶ್ವವಿದ್ಯಾಲಯವಾಗಲಿದೆ. ಲೇಹ್ ಮತ್ತು ಕಾರ್ಗಿಲ್ನಲ್ಲಿ ವಿಶ್ವ ವಿದ್ಯಾಲಯವು ಆಡಳಿತಾತ್ಮಕ ಕಚೇರಿಗಳನ್ನು ಹೊಂದಿರುತ್ತದೆ.
ಪ್ರಧಾನಿಯವರು ಲೇಹ್ನಲ್ಲಿ ಕುಶೋಕ್ ಬಕುಲ ರಿಂಪೋಚೀ (ಕೆಬಿಆರ್) ವಿಮಾನ ನಿಲ್ದಾಣದ ನೂತನ ಟರ್ಮಿನಲ್ಗಾಗಿ ಫಲಕ
ಅನಾವರಣಗೊಳಿಸುವ ಮೂಲಕ ಶಂಕುಸ್ಥಾಪನೆ ಮಾಡಿದರು. ಹೊಸ ಟರ್ಮಿನಲ್ ವಿದ್ಯನ್ಮಾನ ಕೋಶ, ಇಂಧನ ದಕ್ಷತೆಯ ಮತ್ತು ಸ್ವಯಂ ಸುಸ್ಥಿರತೆಯ ೧೮,೯೮೫ ಚದರಮೀಟರುಗಳ ಕಟ್ಟಡವನ್ನು ಹೊಂದಿರುತ್ತದೆ. ಮೋದಿಯವರು ಲಡಾಖದಲ್ಲಿ ನೂತನ ಪ್ರವಾಸೀ ಚಾರಣ ಮಾರ್ಗಗಳನ್ನೂ ಉದ್ಘಾಟಿಸಿದರು. ’ಈ ಹಿಂದೆ ನಾನೇ ಶಿಲಾನ್ಯಾಸ ನೆರವೇರಿಸಿದ್ದ ಯೋಜನೆಗಳನ್ನು ನಾನು ಉದ್ಘಾಟಿಸಿದ್ದೇನೆ. ಇಂದು ಶಿಲಾನ್ಯಾಸ ನೆರವೇರಿಸಿದ ಯೋಜನೆಗಳ ಉದ್ಘಾಟನೆಗೂ ನಾನು ಶೀಘ್ರವೇ ಇಲ್ಲಿಗೆ ಪುನಃ ಬರುವೆ’ ಎಂದು ಮೋದಿ ನುಡಿದರು. ೨೦೦೦
ಕೋಟಿ ರೂಪಾಯಿಗಳ ಲೇಹ್- ಕಾರ್ಗಿಲ್ ಟ್ರಾನ್ಸ್ ಮಿಷನ್ ಲೈನಿಗಾಗಿ ನಾನು ಶಿಲಾನ್ಯಾಸ ನೆರವೇರಿಸಿದ್ದೇನೆ.
ಇದು ಪ್ರದೇಶದ ವಿದ್ಯುತ್ ಸಮಸ್ಯೆಗಳನ್ನು ಕಡಿಮೆ ಮಾಡಲಿದೆ ಎಂದು ಅವರು ನುಡಿದರು. ’ನಮ್ಮ ಕಾರ್ಯಶೈಲಿ ಭಿನ್ನವಾದದ್ದು. ’ಲಟ್ಕಾನೆ ಔಟ್ ಭಟ್ಕಾನೆ’ ಅಥವಾ
ವಿಳಂಬ ಮತ್ತು ದಾರಿತಪ್ಪಿಸುವ ಕೆಲಸದ ಸಂಸ್ಕೃತಿಯ ಪರಿಣಾಮವಾಗಿ ದೇಶ ಹಿಂದುಳಿದಿದೆ. ಮುಂದಿನ ಐದು ವರ್ಷಗಳಲ್ಲಿ ನಾನು ಈ ಸಂಸ್ಕೃತಿಯನ್ನು ದೇಶದಿಂದ ಒದ್ದೋಡಿಸಬೇಕಾಗಿದೆ.
ಇಂದು ಆರಂಭಿಸಲಾಗುತ್ತಿರುವ
ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಪ್ರಧಾನಿ ಭರವಸೆ ನೀಡಿದರು. ಹವಾಮಾನವು ನಿಮಗೆ ಹಲವಾರು ಕಷ್ಟಗಳನ್ನು ತಂದೊಡ್ಡುತ್ತದೆ ಮತ್ತು ಕೇಂದ್ರ ಸರ್ಕಾರವು ಪ್ರದೇಶದ ಈ ಸಮಸ್ಯೆಗಳನ್ನು ನಿವಾರಿಸಲು ಬದ್ಧವಾಗಿದೆ ಎಂದು ನುಡಿದ ಪ್ರಧಾನಿ ೩೦೦೦ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ನಾನು ಶಂಕುಸ್ಥಾಪನೆ ಮಾಡಿದ್ದು, ಹಲವಾರು ಯೋಜನೆಗಳನ್ನು ಉದ್ಘಾಟಿಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಕರ್ತಾರಪುರದಿಂದ ಹಿಡಿದು ರೈತರ ಸಾಲಮನ್ನಾದವರೆಗೆ
ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು. ಕರ್ತಾರಪುರ ಗುರುದ್ವಾರದ ವಿಷಯದೊಂದಿಗೆ ಕಾಂಗ್ರೆಸ್ ಮೇಲಿನ ದಾಳಿಯನ್ನು ಜಮ್ಮವಿನಲ್ಲಿ ಆರಂಭಿಸಿದ ಪ್ರಧಾನಿ ಅಗತ್ಯಗಳು ಮತ್ತು ರಾಷ್ಟ್ರದ ಭಾವನೆಗಳನ್ನು ನಿರ್ಲಕ್ಷಿಸುವ ಅಭ್ಯಾಸವನ್ನು ಹಿಂದಿನ ಸರ್ಕಾರಗಳು ಬೆಳೆಸಿಕೊಂಡಿದ್ದವು.
ಉದಾಹರಣೆಗೆ ಕರ್ತಾರಪುರ ಕಾರಿಡಾರ್ ವಿಷಯವನ್ನೇ ತೆಗೆದುಕೊಳ್ಳಿ. ಅವರು ಇದಕ್ಕೆ ಗಮನ ಹರಿಸಿದರೇನು? ಅವರು ಗಮನಹರಿಸಿದ್ದರೆ ಗುರುನಾನಕ್ ದೇವ್ ಅವರ ಈ ಭೂಮಿಯು ಭಾರತದ ಭಾಗವಾಗಿಯೇ ಇರುತ್ತಿತ್ತು’ ಎಂದು
ಹೇಳಿದರು. ‘ರೈತರ ಖಾತೆಗೆ ೬೦೦೦ ರೂಪಾಯಿಗಳ ಖಚಿತ ಆದಾಯ ಪಾವತಿ ಯೋಜನೆಯನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳು ಕೇಂದ್ರವು ಜನಧನ್ ಖಾತೆಗಳನ್ನು ಪ್ರತಿಯೊಬ್ಬರ ಹೆಸರಿನಲ್ಲಿ ಆರಂಭಿಸಿದಾಗ ಅದನ್ನು ಲೇವಡಿ ಮಾಡಿದ್ದವು. ಈಗ ಜನ ಧನ್ ಖಾತೆಗಳು ಬಳಕೆಯಾಗಲಿವೆ ಎಂಬುದು ಅವರಿಗೆ ಗೊತ್ತಾಗಿದೆ. ಸದ್ಯೋಭವಿಷ್ಯದಲ್ಲಿ ೬೦೦೦ ರೂಪಾಯಿಗಳು ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ವರ್ಗಾವಣೆಯಾಗಲಿವೆ
ಎಂದು ಪ್ರಧಾನಿ ನುಡಿದರು.
ಮೌಂಟ್ ಮಾಂಗನಿ (ನ್ಯೂಜಿಲೆಂಡ್): ನ್ಯೂಜಿಲೆಂಡ್ ನ ಬೇಓವಲ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಭಾರತದ ಯುವ ತಂಡ ಆಸ್ಟ್ರೇಲಿಯಾವನ್ನು 8 ವಿಕೆಟ್ ಜಯದ ಮೂಲಕ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡು ಸಂಭ್ರಮಿಸಿತು. ಇದರೊಂದಿಗೆ, ಭಾರತ ತಂಡ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್ ಆದಂತಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಪ್ರಥ್ವಿ ಶಾ ಪಡೆ ಬೌಲಿಂಗ್ ದಾಳಿಗೆ ಸಿಲುಕಿ 216 ರನ್ ಗಳಿಗೆ ಸರ್ವ ಪತನ ಕಂಡು ಗೆಲುವಿಗೆ 217 ರನ್ಗಳ ಸಾಧಾರಣ ಗುರಿ ಮುಂದಿಟ್ಟಿತ್ತು. ಗುರಿ ಬೆನ್ನಟ್ಟಿದ ಯುವ ಪಡೆ 38.5 ಓವರ್‌ಗಳಲ್ಲಿ 220 ರನ್ ಗಳಿಸಿ 8 ವಿಕೆಟ್‌ಗಳಿಸಿ ಭರ್ಜರಿ ಜಯ ಗಳಿಸಿತು. ಭಾರತ ತಂಡಕ್ಕೆ ಆಧಾರವಾದ ಆರಂಭಿಕ ಆಟಗಾರ ಮನ್‌ಜೋತ್ ಕಾಲ್ರಾ ನೆಲಕಚ್ಚಿ ಆಟವಾಡಿ ಭರ್ಜರಿ ಶತಕ ಸಿಡಿದರು. 102 ಎಸೆತಗಳಿಂದ 101 ರನ್ಗಳಿಸಿದ ಅವರು ಅಜೇಯರಾಗಿ ಉಳಿದರು. ಕಾಲ್ರಾಗೆ ಸಾಥ್ ನೀಡಿದ ನಾಯಕ ಪ್ರಥ್ವಿ ಶಾ 29 ರನ್ ಗಳಿಸಿ ಔಟಾದರೆ, ಶುಭಂ ಗಿಲ್ 31 ರನ್ಗಳಿಸಿ ಔಟಾದರು. ವಿಕೆಟ್ ಕೀಪರ್ ಹಾರ್ವಿಕ್ ದೇಸಾಯಿ 47 ರನ್‌ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ಬೌಲಿಂಗ್ ನಲ್ಲಿ ಪೊರೆಲ್, ಶಿವಸಿಂಗ್, ನಾಗರ್ಕೋಟಿ ಮತ್ತು ರಾಯ್ ತಲಾ 2 ವಿಕೆಟ್ ಪಡೆದರೆ ಶಿವಂ ಮವಿ 1 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಎಡ್ವರ್ಡ್ 28, ಜೋನಾಥನ್ ಮೆರ್ಲೋ 76, ಉಪ್ಪಲ್ 34, ಮೆಕ್ಸ್ವೀನಿ 23 ರನ್ ಗಳಿಸಿದರು. ದ್ರಾವಿಡ್ ಶಿಷ್ಯರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು.
2018: ನವದೆಹಲಿ: ವಿದ್ಯಾರ್ಥಿಗಳಿಗಾಗಿ
ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ’ಎಕ್ಸಾಮ್ ವಾರಿಯರ್ಸ್’ (ಪರೀಕ್ಷಾ ಯೋಧರು)
ಪುಸ್ತಕ ಬಿಡುಗಡೆಯಾಯಿತು. ವಿದ್ಯಾರ್ಥಿಗಳು, ಶಿಕ್ಷಕರು
ಮತ್ತು ಹೆತ್ತವರನ್ನು ಉದ್ದೇಶಿಸಿ ಬರೆಯಲಾಗಿರುವ ಈ ಪುಸ್ತಕ ಪರೀಕ್ಷೆಗೆ ಹಾಜರಾಗುವ ಸಮಯದ ಒತ್ತಡಗಳನ್ನು
ಎದುರಿಸುವುದು ಹೇಗೆ ಎಂದು ಮಾರ್ಗದರ್ಶನ ಮಾಡಿದೆ. ಪ್ರಧಾನಿಯವರು ಈ ವಿಷಯದ ಬಗ್ಗೆ ತಮ್ಮ ’ಮನ್ ಕಿ
ಬಾತ್’ ಬಾನುಲಿ (ರೇಡಿಯೋ) ಕಾರ್‍ಯಕ್ರಮದಲ್ಲೂ ಮಾತನಾಡಿದ್ದರು.
ಪರೀಕ್ಷಾ ಒತ್ತಡವನ್ನು ನಿವಾರಿಸಿಕೊಳ್ಳಲು ತಾವು ಸ್ವತಃ ಏನು ಮಾಡಿದ್ದೆ ಎಂಬ ನೆನಪನ್ನೂ ಪುಸ್ತಕದಲ್ಲಿ
ಮೋದಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ: ಮೋದಿ ಶಾಲಾ ನಾಟಕದಲ್ಲಿ ಪಾಲ್ಗೊಂಡಾಗ: ಶಾಲಾ ನಾಟಕವೊಂದರಲ್ಲಿ ಪಾಲ್ಗೊಂಡಿದ್ದ ಮೋದಿ
ಅವರಿಗೆ ನಿರ್ದಿಷ್ಟವಾದ ಸಂಭಾಷಣೆಯೊಂದನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ತಾನು ಅದನ್ನು ಅರಿತುಕೊಂಡದ್ದು
ಹೇಗೆ ಎಂಬುದನ್ನು ಪ್ರಧಾನಿ ಒಂದು ಅಧ್ಯಾಯದಲ್ಲಿ ಬರೆದಿದ್ದಾರೆ. ’ನಾನು ನಾಟಕದಲ್ಲಿ ನಿರ್ದಿಷ್ಟ ಸಂಭಾಷಣೆಯೊಂದನ್ನು
ಹೇಳಲು ಪರದಾಡುತ್ತಿದ್ದೆ. ಅದನ್ನು ಕಂಡ ನಿರ್ದೇಶಕ ಸಹನೆ ಕಳೆದುಕೊಂಡು ’ಸಂಭಾಷಣೆಯನ್ನು ಹೀಗೆಯೇ ಹೇಳುತ್ತಿದ್ದರೆ
ನಿನಗೆ ನಿರ್ದೇಶನ ಕೊಡಲು ಸಾಧ್ಯವಿಲ್ಲ’ ಎಂದುಬಿಟ್ಟರು. ನನಗೆ
ಸಹಜವಾಗಿಯೇ ನಾನು ಹೇಳುತ್ತಿರುವುದು ಸರಿಯಾಗಿಯೇ ಇದೆ ಎಂಬ ಭಾವನೆ ಇತ್ತು. ನಿರ್ದೇಶಕರು ಹೀಗೆ ಏಕೆ
ಹೇಳುತ್ತಾರೆ ಎಂದು ಗೊಂದಲವಾಯಿತು. ಮರುದಿನ ನಾನು ನಿರ್ದೇಶಕರ ಬಳಿ ನಾನು ಏನು ತಪ್ಪು ಮಾಡುತ್ತಿದ್ದೇನೆ
ಎಂದು ನಟಿಸಿ ತೋರಿಸಿ ಎಂದು ಹೇಳಿದೆ. ನಿಮಿಷಾರ್ಧದಲ್ಲೇ ನನಗೆ ನಾನೇನು ತಪ್ಪು ಮಾಡುತ್ತಿದ್ದೆ ಎಂದು
ಗೊತ್ತಾಯಿತು ಮತ್ತು ನನ್ನನ್ನು ಸುಧಾರಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಮೋದಿ ಪುಸ್ತಕದಲ್ಲಿ
ಬರೆದಿದ್ದಾರೆ. ಬಿಜೆಪಿ ಪ್ರಧಾನಕಾರ್ಯದರ್ಶಿಯಾಗಿ
ಕಲಿತುಕೊಂಡದ್ದು: ಪರೀಕ್ಷಾ ಸಿದ್ಧತೆ ನಡೆಸುವುದರ
ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಮೋದಿ ಅವರು ’ನಿರ್ದಿಷ್ಟ ವಿಷಯದ ಕುರಿತ ಭಾಷಣ ಮತ್ತು
ಚರ್ಚೆಯು ಪುನರ್‌ಮನನಕ್ಕೆ ಅತ್ಯಂತ ಉಪಯುಕ್ತವಾಗಬಲ್ಲುದು ಎಂದು ಹೇಳಿ ಅದಕ್ಕೆ ತಾವು ಬಿಜೆಪಿ ಕಾರ್ಯದರ್ಶಿಯಾಗಿ
ಕಲಿತುಕೊಂಡಿದ್ದ ಪಾಠವನ್ನು ವಿವರಿಸಿದ್ದಾರೆ. ’ನನ್ನ ರಾಜಕೀಯ ಪಕ್ಷದ ಸಂಘಟನಾ ಕಾರ್‍ಯದರ್ಶಿ ಹೊಣೆಗಾರಿಕೆ
ಹೊತ್ತಿದ್ದಾಗ, ನಾವು ನಮ್ಮಲ್ಲೇ ಹಲವು ತಂಡಗಳನ್ನು ರಚಿಸಿ (ಕೆಲವರು ವಿರೋಧಿ ಭಾಷಣಕಾರರಾಗಿ ನಟಿಸುತ್ತಿದ್ದರು)
ವಿಷಯವನ್ನು ವಿವಿಧ ಆಯಾಮಗಳಿಂದ ಚರ್ಚಿಸುತ್ತಿದ್ದೆವು. ಹೀಗೆ ವಿಷಯಕ್ಕೆ ಸಂಬಂಧಪಟ್ಟಂತೆ ವಿಸ್ತಾರವಾಗಿ
ಅರ್ಥ ಮಾಡಿಕೊಳ್ಳಲು ಮತ್ತು ಅಗತ್ಯ ಸುಧಾರಣೆಗಳನ್ನು ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿತ್ತು’ ಎಂದು ಮೋದಿ ತಿಳಿಸಿದ್ದಾರೆ. ೨೦೧೨ರ ಗುಜರಾತ್ ಚುನಾವಣೆಗಳು ಕಲಿಸಿದ ಪಾಠ: ಒಮ್ಮೆ
ಪರೀಕ್ಷೆಯಲ್ಲಿ ಮುಗಿದ ಬಳಿಕ ಉತ್ತರ ಪತ್ರಿಕೆಯ ಬಗ್ಗೆ ಚಿಂತಿಸುವ ಗೀಳನ್ನು ಬಿಟ್ಟು ಬಿಡಿ ಎಂದು ಮೋದಿ
ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಅವರು ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನ
ಉದಾಹರಣೆಯನ್ನು ನೀಡಿದ್ದಾರೆ. ’ನಿಮಗೆ ಪರೀಕ್ಷೆಗಳು ಇದ್ದಂತೆ ನಾನು ಒಂದು ಪರೀಕ್ಷೆ ಎದುರಿಸಿದ್ದೆ-
ಅದು ೨೦೧೨ರಲ್ಲಿ ನಡೆದ ಗುಜರಾತ್ ಚುನಾವಣೆ. ಮತದಾನದ ದಿನ ಮತದಾನ ಮಾಡಿ ಬಂದ ಬೆನ್ನಲ್ಲೇ ನಾನು ಮಾಡಬೇಕಾಗಿದ್ದ
ಇತರ ಕೆಲಸಗಳ ಚಿತ್ತ ಹರಿಸಿದೆ. ನನಗೆ ಈಗಲೂ ನೆನಪಿದೆ, ನಾನು ’ಸ್ಪಂದನಶೀಲ ಗುಜರಾತ್’ (ವೈಬ್ರೆಂಟ್ ಗುಜರಾತ್) ಜಾಗತಿಕ ಶೃಂಗಸಭೆಯ ಸಿದ್ಧತೆಗಳನ್ನು
ಪರಿಶೀಲಿಸಬೇಕಾಗಿತ್ತು. ಜೊತೆಗೇ ನೀರಾವರಿ ಯೋಜನೆಯ ಬಗೆಗೂ ಪರಿಶೀಲಿಸಬೇಕಾಗಿತ್ತು. ನನಗೆ, ಮತದಾನವು
ನಿಮ್ಮ ಉತ್ತರಪತ್ರಿಕೆಯಂತೆ ಒನ್ ವೇ ಟಿಕೆಟ್ ಆಗಿತ್ತು’ ಎಂದು ಮೋದಿ ಬರೆದಿದ್ದಾರೆ.
ಮೋದಿ ಅವರ ಆರೋಗ್ಯಕರ ನಿದ್ದೆ: ಆರೋಗ್ಯಕರವಾದ
ನಿದ್ದೆ ಯಶಸ್ಸಿಗೆ ಅತ್ಯಂತ ಮುಖ್ಯ ಎಂದು ಮೋದಿ ಪುಸ್ತಕದಲಿ ಬರೆದಿದ್ದಾರೆ. ಆದರೆ ಪ್ರಧಾನಿಯವರು ಹೇಗೆ
ಸಾಕಷ್ಟು ನಿದ್ದೆ ಮಾಡಲು ಸಾಧ್ಯವಾಗುತ್ತಿದೆ? ’ಹಲವಾರು ಸಂದರ್ಭಗಳಲ್ಲಿ ಜನರು ನನ್ನನ್ನು ಪ್ರಶ್ನಿಸಿದ್ದಾರೆ.
ಮೋದೀಜಿ, ಇಷ್ಟೊಂದು ಕೆಲಸದ ಹೊರೆಯ ಮಧ್ಯೆ, ಬಹುಶಃ ಅತ್ಯಂತ ಕಡಿಮೆ ನಿದ್ದೆಯೊಂದಿಗೆ ನೀವು ಇಷ್ಟೊಂದು
ಪ್ರಮಾಣದ ಶಕ್ತಿಯನ್ನು ಹೇಗೆ ಪಡೆದುಕೊಂಡು ನಿರ್ವಹಿಸುತ್ತೀರಿ? ನನಗೆ ಲಭಿಸುತ್ತಿರುವ ಆರೋಗ್ಯಕರವಾದ
ನಿದ್ದೆಯ ಕಾರಣದಿಂದ ನಾನು ಇಷ್ಟೊಂದು ಪ್ರಫುಲ್ಲನಾಗಿ ಇರುತ್ತೇನೆ ಎಂಬುದು ಅದಕ್ಕೆ ನನ್ನ ಉತ್ತರ.
ನಿದ್ದೆಯ ಗುಣಮಟ್ಟ ಬಹುಮುಖ್ಯ. ಆರೋಗ್ಯಕರವಾದ ನಿದ್ದೆ ಇಲ್ಲದೆ ಗಂಟೆಗಟ್ಟಲೆ ಕಾಲ ಮಲಗುವುದು ’ಹುಸಿ ನಿದ್ದೆ’ಯಷ್ಟೆ. ನನ್ನ ನಿದ್ದೆ
ಕೆಲಸದ ಹೊರೆಗೆ ಅನುಗುಣವಾಗಿ ನಾಲ್ಕರಿಂದ ಆರು ಗಂಟೆಯಷ್ಟು ಇರುತ್ತದೆ. ಆದರೆ ನಾನು ಅತ್ಯಂತ ಆರೋಗ್ಯಕರವಾದ
ನಿದ್ದೆಯನ್ನು ಪಡೆಯುತ್ತೇನೆ. ಅದು ಮರುದಿನಕ್ಕೆ ನನ್ನನ್ನು ಪ್ರಫುಲ್ಲಿತನನ್ನಾಗಿ ಮಾಡುತ್ತದೆ. ಹಾಸಿಗೆ
ಸೇರಿದ ಕ್ಷಣಗಳಲ್ಲೇ ನಿದ್ದೆ ನನ್ನನ್ನು ಆವರಿಸಿಕೊಂಡು ಬಿಡುತ್ತದೆ ಮತ್ತು ಎಚ್ಚರವಾದ ಕ್ಷಣಗಳಲ್ಲೇ ನಾನು ಎದ್ದು ಬಿಡುತ್ತೇನೆ.
ನಿದ್ದೆ ಮಾಡುವ ಹೊತ್ತಿನಲ್ಲಿ ಯಾವುದೇ ಚಿಂತೆಗಳನ್ನೂ ನಾನು ಮಾಡುವುದಿಲ್ಲ. ಎದ್ದಾಗ ಹೊಸ ದಿನಕ್ಕಾಗಿ
ಸಂಪೂರ್ಣ ಪ್ರಫುಲ್ಲತೆಯೊಂದಿಗೆ ನಾನು ಸಿದ್ಧನಾಗಿರುತ್ತೇನೆ’ ಎಂದು ಮೋದಿ ವಿವರಿಸಿದ್ದಾರೆ.
ಪ್ರಕೃತಿಯೊಂದಿಗೆ ಒಂದಾಗಿ: ಅಧ್ಯಯನದ ಮಧ್ಯೆ ವಿರಾಮ ಪಡೆಯುವ ಬಗೆಯನ್ನು ವಿವರಿಸಿದ
ಅಧ್ಯಾಯದಲ್ಲಿ ಮೋದಿ ಅವರು ತಮ್ಮ ಪ್ರಕೃತಿ ಪ್ರೇಮದ ಬಗ್ಗೆ ವಿವರಿಸಿದ್ದಾರೆ. ’ನನ್ನ ಎಳೆಯ ದಿನಗಳಲ್ಲಿ
ನಾನು ನನ್ನ ಹಳ್ಳಿಯ ಕೆರೆಯಲಿ ಈಜಾಡುತ್ತಾ ಕಾಲ ಕಳೆಯುವ ಹವ್ಯಾಸ ಇಟ್ಟುಕೊಂಡಿದ್ದೆ. ಶುಭ್ರಾಕಾಶ,
ನೀರಿನ ವೀಕ್ಷಣೆ, ತಂಗಾಳಿಯ ಸೇವನೆ ನನ್ನ ಮೆಚ್ಚಿನ ಹವ್ಯಾಸಗಳಾಗಿದ್ದವು. ಪ್ರಕೃತಿಯೊಂದಿಗೆ ಒಂದಾಗುವುದರಿಂದ
ಅತ್ಯಂತ ಹೆಚ್ಚಿನ ಚೈತನ್ಯ ಲಭಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ. ಸಭೆಯ ಮಧ್ಯೆ ಫೋನ್ ಬೇಡ:
ಕೈಗೆತ್ತಿಕೊಂಡಿರುವ
ಯಾವುದೇ ಕೆಲಸದ ಬಗ್ಗೆ ಪೂರ್ತಿ ಗಮನ ಇಡುವುದು ಅತ್ಯಂತ ಮಹತ್ವದ ವಿಚಾರ ಎಂದು ಪ್ರಧಾನಿ ಹೇಳಿದ್ದಾರೆ.
’ನನ್ನ ಸಭೆಗಳಲ್ಲಿ, ನಾನು ಎಂದಿಗೂ ಮೊಬೈಲ್ ಫೋನ್ ಅಥವಾ ಬೇರಾವುದೇ ಯಂತ್ರ ಸಲಕರಣೆಯನ್ನು ಕೈಗೆ ತೆಗೆದುಕೊಳ್ಳುವುದಿಲ್ಲ.
ಮುಖಾಮುಖಿ ಭೇಟಿ ಸಂದರ್ಭದಲ್ಲೂ ನಾನು ನನ್ನ ಸಂಪೂರ್ಣ ಸಮಯವನ್ನು ಸಂವಹನಕ್ಕೆ ಅರ್ಪಿಸುತ್ತೇನೆ. ಇತರ
ಕೆಲಸಗಳೇನಿದ್ದರೂ ಆಮೇಲೆ’ ಎಂದು ಮೋದಿ ಬರೆದಿದ್ದಾರೆ.
ಅಂಧ ಕ್ರಿಕೆಟ್ ತಂಡವನ್ನು ಪ್ರಧಾನಿ ಭೇಟಿ ಮಾಡಿದಾಗ:
ವಿದ್ಯಾರ್ಥಿಗಳು ’ವಾರಿಯರ್ಸ್’ ಆಗಬೇಕು ’ವರಿಯರ್ಸ್’ ಅಲ್ಲ ಎಂದು ಹೇಳಿರುವ ಮೋದಿ ಪುಸ್ತಕದಲಿ ತಾವು
ಅಂಧ ಕ್ರಿಕೆಟ್ ಪಂದ್ಯಾಟದಲ್ಲಿ ವಿಜಯಗಳಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಉದಾಹರಿಸಿದ್ದಾರೆ. ’ನನ್ನ
ಅತ್ಯಂತ ಸ್ಮರಣಾರ್ಹ ಭೇಟಿಗಳಲ್ಲಿ ಒಂದು ಯಾವುದೆಂದರೆ ೨೦೧೭ರಲ್ಲಿ ಬ್ಲೈಂಡ್ ಟಿ೨೦ ವಿಶ್ವ ಕಪ್ ಗೆದ್ದ
ಭಾರತೀಯ ಕ್ರಿಕೆಟ್ ತಂಡದ ಜೊತೆಗಿನ ಭೇಟಿ. ಈ ತಂಡದ
ಪ್ರತಿಯೊಬ್ಬ ಆಟಗಾರನೂ ಸ್ಫೂರ್ತಿ ನೀಡುವ ಯೋಧನಾಗಿದ್ದ. ಹೌದು, ಅವರು ಬದುಕಿನಲ್ಲಿ ಹಲವಾರು ಅಡೆತಡೆಗಳನ್ನು
ಎದುರಿಸಿದ್ದಾರೆ. ಆದರೆ ಅವರು ಸೈರಣೆಯಿಂದ ಸಂದರ್ಭಗಳ ವಿರುದ್ಧ ಮತ್ತು ಕ್ರೀಡಾಂಗಣದಲ್ಲಿ ವಿರೋಧಿಗಳ
ವಿರುದ್ಧ ಹೋರಾಡಿದ್ದಾರೆ. ಅವರು ರಾಷ್ಟ್ರವು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅದೇ ರೀತಿ, ಪರೀಕ್ಷೆಗಳ
ವಿಚಾರಕ್ಕೆ ಬಂದಾಗ ’ವಾರಿಯರ್’ ಆಗಿ ’ವರಿಯರ್’ ಅಲ್ಲ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ
ಮಾಡಿದ್ದಾರೆ.
2018: ಜೈಪುರ : ಬಾಲಿವುಡ್ ಚಿತ್ರ ನಿರ್ದೇಶಕ
ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಾತ್ಮಕ ಐತಿಹಾಸಿಕ ಕಥಾ ಚಿತ್ರ ಪದ್ಮಾವತ್ ವಿರುದ್ಧದ ತನ್ನ ಬಹಿಷ್ಕಾರ,
ಪ್ರತಿಭಟನೆಯನ್ನು ಶ್ರೀ ರಾಷ್ಟ್ರೀಯ ರಾಜಪೂತ ಕರ್ಣಿ
ಸೇನಾ ಹಿಂದೆಗೆದುಕೊಂಡು,, ಇದು ರಜಪೂತರು ಹೆಮ್ಮೆ ಪಡುವಂತೆ ಮಾಡಿರುವ ಚಿತ್ರ ಎಂದು ಹೊಗಳಿತು. ಪದ್ಮಾವತ್
ಚಿತ್ರದಲ್ಲಿ ರಜಪೂತರ ಶೌರ್ಯ, ಸಾಹಸ ಮತ್ತು ಬಲಿದಾನವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸಲಾಗಿದೆ.
ಈ ಚಿತ್ರ ಪ್ರತಿಯೊಬ್ಬ ರಜಪೂತನೂ ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ಕರ್ಣಿ ಸೇನೆ ಚಿತ್ರದ ವಿರುದ್ಧದ
ತನ್ನ ಪ್ರತಿಭಟನೆ ಮತ್ತು ಬಹಿಷ್ಕಾರವನ್ನು ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸುತ್ತಾ ಬಣ್ಣಿಸಿತು.
ಶ್ರೀ ರಜಪೂತ ಕರ್ಣಿ ಸೇನೆಯ ಮುಂಬಯಿ ನಾಯಕ ಯೋಗೇಂದ್ರ ಸಿಂಗ್ ಕಟಾರ್ ಅವರು ಸಂಘಟನೆಯ ರಾಷ್ಟ್ರಾಧ್ಯಕ್ಷ
ಸುಖದೇವ್ ಸಿಂಗ್ ಗೋಗಮಡಿ ಅವರ ನಿರ್ದೇಶದ ಪ್ರಕಾರ, ಈ ನಿರ್ಧಾರವನ್ನು ಪ್ರಕಟಿಸಿದರು. "ನಮ್ಮ
ಸಂಘಟನೆಯ ಕೆಲ ಸದಸ್ಯರು ಪದ್ಮಾವತ್ ಚಿತ್ರವನ್ನು ಮುಂಬಯಿಯಲ್ಲಿ ವೀಕ್ಷಿಸಿದರು. ಚಿತ್ರದಲ್ಲಿ ರಜಪೂತರ
ಧೈರ್ಯ, ಶೌರ್ಯ, ಸಾಹಸ ಮತ್ತು ಬಲಿದಾನಗಳನ್ನು ವೈಭವೀಕರಿಸಲಾಗಿರುವುದನ್ನು ಕಂಡುಕೊಂಡರು. ಈ ಚಿತ್ರವು
ಪ್ರತಿಯೋರ್ವ ರಜಪೂತ ವ್ಯಕ್ತಿಯು ತನ್ನ ಸಮುದಾಯದ ಬಗ್ಗೆ, ರಜಪೂತ ಇತಿಹಾಸದ ಬಗ್ಗೆ ಹೆಮ್ಮೆ ಪಡುವಂತೆ
ಮಾಡಿದೆ’ ಎಂದು ಅವರು ಹೇಳಿದರು. "ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಲ್ಜಿ ಮತ್ತು
ರಾಣಿ ಪದ್ಮಾವತಿ ನಡುವಿನ ಯಾವುದೇ ದೃಶ್ಯಾವಳಿಗಳು ಆಕ್ಷೇಪಾರ್ಹವಾಗಿಲ. ಈ ಹಿನ್ನೆಲೆಯಲ್ಲಿ ಕರ್ಣಿ
ಸೇನೆ ತನ್ನ ಪ್ರತಿಭಟನೆ ಮತ್ತು ಚಿತ್ರದ ಮೇಲಿನ ತನ್ನ ಬಹಿಷ್ಕಾರವನ್ನು ಹಿಂದೆಗೆದುಕೊಳ್ಳುತ್ತಿದೆ.
ಚಿತ್ರವನ್ನು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಮಾತ್ರವಲ್ಲದೆ ದೇಶಾದ್ಯಂತ ಯಾವುದೇ ಭಾಗದಲ್ಲಾದರೂ
ತೆರೆಕಾಣುವುದಕ್ಕೆ ನಮ್ಮ ಸಂಘಟನೆ ಪೂರ್ತಿ ನೆರವು ನೀಡುತ್ತದೆ’ ಎಂದು ತನ್ನ ಪತ್ರದಲ್ಲಿ ಸೇನೆ ಸ್ಪಷ್ಟಪಡಿಸಿದೆ. ಚಿತ್ರವು
ಇತಿಹಾಸವನ್ನು ತಿರುಚಿದ್ದು, ರಾಣಿ ಪದ್ಮಾವತಿಯ ವರ್ಚಸ್ಸಿಗೆ ಮಸಿ ಬಳಿಯುವಂತಿದೆ ಎಂದು ಆರೋಪಿಸಿ,
ಕರ್ಣಿ ಸೇನೆ ಮತ್ತು ಇತರ ರಜಪೂತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಚಿತ್ರ ಬಿಡುಗಡೆ
ವಿಳಂಬವಾದುದಲ್ಲದೆ, ಹಲವಾರು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿತ್ತು. ಚಿತ್ರದ ಹೆಸರನ್ನೂ ’ಪದ್ಮಾವತ್’ ಎಂಬುದಾಗಿ ಬದಲಾಯಿಸಲಾಗಿತ್ತು. ಕಳೆದ ಜನವರಿ
೨೫ರಂದು ತೆರೆಕಂಡ ಬಳಿಕ ಪದ್ಮಾವತ್ ಚಿತ್ರವು ದೇಶ, ವಿದೇಶಗಳಲ್ಲಿ ಭಾರೀ ಜನಪ್ರಿಯವಾಗಿ ಉತ್ತಮ ಬಾಕ್ಸ್
ಆಫೀಸ್ ಗಳಿಕೆಯನ್ನು ದಾಖಲಿಸುತ್ತಿದೆ. ಚಿತ್ರದ ಪ್ರಧಾನ ಭೂಮಿಕೆಯಲ್ಲಿ ದೀಪಿಕಾ ಪಡುಕೋಣೆ, ಶಾಹೀದ್
ಕಪೂರ್, ರಣವೀರ್ ಸಿಂಗ್ ಇದ್ದಾರೆ.
2018: ನವದೆಹಲಿ: ಪ್ರಧಾನಿ ನರೇಂದ್ರ
ಮೋದಿ ಅವರು ತಮ್ಮ ’ಎಕ್ಸಾಮ್ ವಾರಿಯರ್’ (ಪರೀಕ್ಷಾ ಯೋಧ) ಪುಸ್ತಕದಲ್ಲಿ
ಪರೀಕ್ಷೆಯ ಒತ್ತಡಗಳಿಂದ ಹೊರಬರುವುದು ಹೇಗೆ ಎಂಬುದಾಗಿ ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ. ಪ್ರಾಥಮಿಕವಾಗಿ
ಅವರು ಮಾತುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿಯೇ ಇವೆಯಾದರೂ, ಹೆತ್ತವರಿಗೂ ಅವರು ಒಂದಷ್ಟು ಸಲಹೆಗಳನ್ನು
ಮಾಡಿದರು. ಹಾಗಿದ್ದರೆ ಪ್ರಧಾನಿ ಮೋದಿ ಹೆತ್ತವರಿಗೆ ಏನು ಹಿತವಚನ ನೀಡಿದ್ದಾರೆ? ಪ್ರಧಾನಿ ತಮ್ಮ ಪುಸ್ತಕದಲ್ಲಿ ಹೆತ್ತವರಿಗೆ ನೀಡಿದ ಹಿತವಚನ
ಇಲ್ಲಿದೆ:
ಪ್ರಿಯ
ಪಾಲಕ/ಪೋಷಕರೇ, ಯಾವುದೇ ಮಗುವಿಗೆ ಕುಟುಂಬವು ಅತ್ಯಂತ ಪ್ರಬಲವಾದ ಬೆಂಬಲವಾಗಿದೆ. ಹಾಗೆಯೇ ಆಕೆ/ ಆತ
ಪರೀಕ್ಷೆಗೆ ಸಿದ್ಧರಾಗುವಾಗಲೂ. ಪರೀಕ್ಷಾ ಸಮಯ ವಿದ್ಯಾರ್ಥಿ ಮತ್ತು ಆತನ/ ಆಕೆಯ ಕುಟುಂಬದ ಮಟ್ಟಿಗೂ
ಅತ್ಯಂತ ನಿರ್ಣಾಯಕ ಸಮಯ ಎಂಬುದು ನನಗೆ ಗೊತ್ತಿದೆ. ಈ ಸಮಯದಲ್ಲಿ ಯಾರಾದರೂ ಒಬ್ಬರು ಮಗುವಿಗೆ ಪ್ರೋತ್ಸಾಹ
ನೀಡಿ ಖುಷಿ ಪಡುವಂತೆ ಮಾಡುತ್ತಿದ್ದಲ್ಲಿ ಅದು ನೀವೇ. ನಿಮ್ಮ ಮಗುವಿಗೆ ಬೆಂಬಲ ನೀಡುವಂತಹ ಎಲ್ಲವನ್ನೂ
ಮಾಡುತ್ತಿರಿ. ಇದರಲ್ಲಿ ಮಗುವಿನ ಮನಸ್ಥಿತಿಯನ್ನು ಆಹ್ಲಾದಕರವಾಗಿರುವಂತೆ ಮಾಡುವುದು, ಆಕೆ/ಆತ ಪರೀಕ್ಷೆಯ
ಒತ್ತಡಕ್ಕೆ ಒಳಗಾಗದೆ ಬಗ್ಗೆ ಖುಷಿಯಾಗಿ ಹಾಜರಾಗುವಂತಹ ಖಾತರಿಯನ್ನು ನೀವು ನೀಡಬಲ್ಲಿರಿ. ಮಗುವನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಬಲ್ಲವರು ನೀವೇ.
ಆ ಮಗು ನಿಮ್ಮ ಕಣ್ಣಮುಂದೆಯೇ ಬೆಳೆದಿರುವುದರಿಂದ ನಿಮ್ಮ ಮಗುವಿನ ಬಗ್ಗೆ ಇತರೆಲ್ಲರಿಗಂತ ಹೆಚ್ಚು ಬಲ್ಲವರು
ನೀವೇ. ಆದ್ದರಿಂದ ಯಾವಾಗಲೂ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಮಗುವನ್ನು ಅಂಗೀಕರಿಸಿ. ನಿರೀಕ್ಷೆಗಳ ಹೊರೆ
ಶಾಲಾ ಚೀಲಕ್ಕಿಂತಲೂ ಹೆಚ್ಚು ತೂಕದ್ದಾಗಿರುತ್ತದೆ. ನಿಮ್ಮ ಮಕ್ಕಳನ್ನು ಈ ಹೊರೆಯ ಮೂಲಕ ಕುಗ್ಗುವಂತೆ
ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನ್ಯಾಯೋಚಿತವಲ್ಲದ ನಿರೀಕ್ಷೆಗಳನ್ನು ಹೊರಿಸುವ ಮೂಲಕ ನಿಮ್ಮ
ಮಗು ಇನ್ನಷ್ಟು ಹೊರೆ ಹೊತ್ತುಕೊಳ್ಳುವಂತೆ ಮಾಡುತ್ತಿದ್ದೀರಾ ಎಂಬುದಾಗಿ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.
ಕೆಲವೊಮ್ಮೆ ಹೆತ್ತವರು ತಾವು ಈಡೇರಿಸಿಕೊಳ್ಳಲಾಗದ ಇಚ್ಛೆಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಲು ಯತ್ನಿಸುತ್ತಾರೆ.
ಈ ಪ್ರಕ್ರಿಯೆಯಲ್ಲಿ ಮಗು ತನ್ನ ಸಂತಸಕರವಾದ ಬಾಲ್ಯವನ್ನು ಕಳೆದುಕೊಳ್ಳುತ್ತದೆ. ತಮ್ಮ ಮಗು ತಮ್ಮ ಕಣ್ಣುಗಳ
ಮುಂದೆಯೇ ಬೆಳೆದು ಅರಳುವುದನ್ನು ಕಾಣುವ ಖುಷಿಯನ್ನು ಹೆತ್ತವರು ಕಳೆದುಕೊಳ್ಳುತ್ತಾರೆ. ಮಕ್ಕಳ ಕನಸುಗಳು,
ಆಶಯಗಳು, ಮಹತ್ವಾಕಾಂಕ್ಷೆಗಳು ಹೆತ್ತವರ ಕನಸು, ಆಶಯ, ಮಹತ್ವಾಕಾಂಕ್ಷೆಗಳಿಗಿಂತ ಭಿನ್ನವಾಗಿರಬಹುದು.
ಇದನ್ನು ಅಂಗೀಕರಿಸಿ ಮತ್ತು ಮಕ್ಕಳಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಅವಕಾಶ ಕಲ್ಪಿಸಿಕೊಡಿ. ಪಾಲಕರಾಗಿ,
ನೀವು ಯಾವಾಗಲೂ ನಿಮ್ಮ ಮಗುವಿಗೆ ಉತ್ತಮ ಶಿಕ್ಷಣ ಮತ್ತು ಹಿತಕರ ಬದುಕು ಸೇರಿದಂತೆ ಅತ್ಯುತ್ತಮ ಭವಿಷ್ಯವನ್ನು
ಬಯಸುತ್ತೀರಿ. ಅದರೆ ನೀವು ನಿಮ್ಮ ಮಗುವಿಗೆ ನೀಡಬಹುದಾದ
ಅತ್ಯುತ್ತಮ ಕೊಡುಗೆ ಏನೆಂದರೆ ಸಾಹಸದ ಸ್ಫೂರ್ತಿ. ಇದು ಮಗುವಿನಲ್ಲಿ ಏನಾದರೂ ಒಂದು ಹೊಸತನ್ನು ಮತ್ತು
ಭಿನ್ನವಾದುದನ್ನು ಮಾಡಲು ಪ್ರೇರೇಪಿಸುತ್ತದೆ.
ಈ
ಪುಸ್ತಕದಲ್ಲಿ ಕೂಡಾ, ನಾನು ನನ್ನ ಎಳೆಯ ಗೆಳೆಯರಿಗೆ ಆರಾಮದಾಯಕ ವಲಯದಿಂದ ಹೊರಗೆ ಬರುವಂತೆ ಹೇಳಿದ್ದೇನೆ.
ಅರಾಮದಾಯಕತೆಯು ಮನಸ್ಸು ಮತ್ತು ದೇಹವನ್ನು ದುರ್ಬಲಗೊಳಿಸುತ್ತದೆ. ಸಾಹಸವು ಬದುಕಿನ ಸವಾಲುಗಳನ್ನು
ಸಮತೋಲನ ಮತ್ತು ನಿರ್ಧಾರದೊಂದಿಗೆ ಎದುರಿಸಲು ವ್ಯಕ್ತಿಯನ್ನು ಸಿದ್ಧ ಪಡಿಸುತ್ತದೆ. ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ. ಪರೀಕ್ಷಾ ಕಾಲವು ಸಮಯವನ್ನು
ಸಹಜವಾಗಿ ಅಸ್ತವ್ಯಸ್ತಗೊಳಿಸುತ್ತದೆ. ನಿಮ್ಮ ಮಗುವಿನೊಂದಿಗೆ ನೀವು ಕಳೆಯುವ ಪ್ರತಿಕ್ಷಣವನ್ನೂ ಸದುಪಯೋಗ
ಪಡಿಸಿಕೊಳ್ಳಿ. ಮಗುವಿನೊಂದಿಗೆ ಧನಾತ್ಮಕವಾಗಿರಿ ಮತ್ತು ನಗುನಗುತ್ತಾ ಇರಿ. ಯಾವಾಗಲೂ ನಿಮ್ಮ ಮಗು
ಏನು ಹೇಳುತ್ತದೆಯೋ ಅದನ್ನು ಆಲಿಸಿ. ಆಲಿಕೆ ಸಿಗದ ಮಗು ಎಂದಿಗೂ ಉತ್ತಮ ಶ್ರೋತೃವಾಗಲು ಸಾಧ್ಯವಿಲ್ಲ
ಮತ್ತು ಸ್ವತಃ ಕಲಿತುಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಮಂಡಳಿಯ ಪರೀಕ್ಷೆಗಳು ಮುಗಿದ ಬಳಿಕ, ಮಕ್ಕಳು
ತಮ್ಮ ವಿಷಯಗಳನ್ನು, ಕಾಲೇಜುಗಳನ್ನು ಮತ್ತು ವಿಶ್ವ ವಿದ್ಯಾಲಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಆತನ/ ಆಕೆಯ ಆಸಕ್ತಿ ಮತ್ತು ಶಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಲ್ಲಿ ನಿಮ್ಮ ಮಗುವಿಗೆ ಮಾರ್ಗದರ್ಶನ
ಮಾಡಿ. ನಾನು ಪುಸ್ತಕದಲ್ಲಿ ಹೇಳಿರುವಂತೆ, ಸೃಷ್ಟಿಸಿ, ಸಜ್ಜುಗೊಳಿಸಬೇಕಾದಂತಹ ಹಲವಾರು ಅವಕಾಶಗಳು
ಕಾಯುತ್ತಿವೆ. ಇಂತಹ ಅವಕಾಶಗಳಿಗೆ ಯಾವುದೇ ಮಿತಿ ಇಲ್ಲದಿರಲಿ ಅಥವಾ ಮಕ್ಕಳ ಮೇಲೆ ಯಾವುದೇ ಒತ್ತಡ ಉಂಟಾಗದಿರಲಿ.
ನಮ್ಮ ಯುವ ಮತ್ತು ಶೂರ ಪರೀಕ್ಷಾ ಯೋಧರಿಗೆ ಅಮೂಲ್ಯವಾದ ಬೆಂಬಲ ನೀಡುತ್ತಿರುವ ನಿಮಗೆಲ್ಲರಿಗೂ ನನ್ನ
ಅತ್ಯುತ್ತಮ ಶುಭಹಾರೈಕೆಗಳು. ನಿಮ್ಮವ, ನರೇಂದ್ರ ಮೋದಿ.
2018: ಗುವಾಹಟಿ: ತಮ್ಮ ಸರ್ಕಾರ ನವನವೀನ
ಆರ್ಥಿಕ ಸುಧಾರಣಾ ಕ್ರಮಗಳ ಪರಿಣಾಮವಾಗಿ ದೇಶಕ್ಕೆ ವಿದೇಶೀ ನೇರ ಬಂಡವಾಳದ (ಎಫ್ ಡಿಐ) ಹೊಳೆ ಹರಿದಿದ್ದು,
ಕಳೆದ ಆರ್ಥಿಕ ವರ್ಷದಲ್ಲಿ ಅತ್ಯಂತ ಅಧಿಕ ೬೦ ಸಹಸ್ರಕೋಟಿ ಡಾಲರ್ ವಿದೇಶೀ ಬಂಡವಾಳ ದೇಶಕ್ಕೆ ಬಂದಿದೆ,
ವಿದೇಶೀ ನೇರ ಬಂಡವಾಳ ಹೂಡಿಕೆಗೆ ಪ್ರಶಸ್ತ ದೇಶ ಭಾರತ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ
ಮೋದಿ ಅವರು ಗುವಾಹಟಿಯಲ್ಲಿ ಹೇಳಿದರು. ಎರಡು ದಿನಗಳ ಜಾಗತಿಕ ಹೂಡಿಕೆದಾರರ ಶೃಂಗ ಸಭೆಯನ್ನು ಉದ್ದೇಶಿಸಿ
ಅವರು ಮಾತನಾಡುತ್ತಿದ್ದರು.
2018: ನವದೆಹಲಿ: ಕೇಂದ್ರ ಸರ್ಕಾರ ನೂತನವಾಗಿ ದೇಶದಲ್ಲಿ ಜಾರಿಗೊಳಿಸಿರುವ ಸರಕು ಮತ್ತು ಸೇವಾ
ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯೊಳಕ್ಕೂ ಲಂಚಾವತಾರ ನುಸುಳಿದ್ದು ಬೆಳಕಿಗೆ ಬಂತು. ಜಿಎಸ್ ಟಿ ಕಮಿಷನರ್(ಕಾನ್ಪುರ) ಸನ್ಸಾರ್ ಚಾಂದ್, ಮೂವರು
ಸೂಪರಿಟೆಂಡೆಂಟ್(ಕಾನ್ಪುರ) ಸೇರಿದಂತೆ ಒಟ್ಟು ಒಂಬತ್ತು ಮಂದಿ ಆರೋಪಿಗಳನ್ನು ಸಿಬಿಐ ಲಂಚ ಪ್ರಕರಣಕ್ಕೆ
ಸಂಬಂಧಿಸಿದಂತೆ ಬಂಧಿಸಿತು. ಪ್ರಕರಣದಲ್ಲಿ ಸನ್ಸಾರ್
ಪತ್ನಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಯಿತು. ಸಿಬಿಐ
ಮೂಲಗಳ ಪ್ರಕಾರ, ಈ ಜಿಎಎಸ್ ಟಿ ಅಧಿಕಾರಿಗಳು ಕಂಪೆನಿಗಳಿಂದ ಲಂಚ ಪಡೆದಿರುವುದಾಗಿ ಹೇಳಲಾಯಿತು. ಇಲಾಖೆಗೆ ತುಂಬದ ಹಣದ ರಕ್ಷಣೆಗಾಗಿ ಈ ಜಿಎಸ್ ಟಿ ಅಧಿಕಾರಿಗಳು
ಲಂಚ ಪಡೆದಿದ್ದರು ಎಂದು ಮೂಲಗಳು ಹೇಳಿದವು. ಈ ಹಣವನ್ನು ಅಧಿಕಾರಿಗಳಿಗೆ ವ್ಯವಸ್ಥಿತವಾಗಿ ಹವಾಲಾದ
ಮೂಲಕ (ತಿಂಗಳಿಗೊಮ್ಮೆ ಅಥವಾ ತ್ರೈಮಾಸಿಕ) ವರ್ಗಾಯಿಸಲಾಗಿದೆ ಎಂದು ವರದಿ ವಿವರಿಸಿತು. ಸಿಬಿಐ
ದಾಖಲಿಸಿರುವ ಎಫ್‌ಐಆರ್ ಪ್ರತಿ ತನಗೆ ಲಭ್ಯವಾಗಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದ್ದು, ತಮ್ಮ
ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಮಂದಿ ಅಧಿಕಾರಿಗಳು
ಅಕ್ರಮ ಗಳಿಕೆ ಮಾಡಿರುವುದಾಗಿ ಕಾನ್ಪುರದಲ್ಲಿ ಹಾಲಿ ಜಿಎಸ್ ಟಿ ಕಮಿಷನರ್ ಆಗಿರುವ ಸನ್ಸಾರ್ ಚಾಂದ್
ಬಹಿರಂಗ ಪಡಿಸಿದರು. ಶಿಶು ಸೋಪ್ ಅಂಡ್ ಕೆಮಿಕಲ್ಸ್ ಪ್ರೈ ಲಿ., ಎಸ್ ಐಆರ್ ಪಾನ್ ಮಸಾಲಾ ಮತ್ತು ರಿಮ್ಜಿಹಿಮ್
ಇಸ್ಪಾಟ್ ಲಿಮಿಟೆಡ್ ಕಂಪೆನಿಗಳಿಂದ ಅಧಿಕಾರಿಗಳು ಲಂಚ ಪಡೆದಿರುವುದಾಗಿ ತನಿಖಾಧಿಕಾರಿಗಳು ಎಫ್‌ಐಆರ್
ನಲ್ಲಿ ಉಲ್ಲೇಖಿಸಿದರು. ವರದಿಗಳ ಪ್ರಕಾರ ಕಾನ್ಪುರ ಜಿಎಸ್ ಟಿ ಕಮೀಷನರ್ ಆಗಿ ನೇಮಿಸಲಾಗಿದ್ದ ೧೯೮೬ರ
ತಂಡದ ಭಾರತೀಯ ಕಂದಾಯ ಸೇವಾ ಅಧಿಕಾರಿ ಸನ್ಸಾರ್ ಚಾಂದ್ ಮತ್ತು ಇತರ ೮ ಮಂದಿಯನ್ನು ಕಾನ್ಪುರ ಮತ್ತು
ದೆಹಲಿಯಲ್ಲಿ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿಬಿಐ ಬಂಧಿಸಿತು. ಕಮೀಷನರ್ ಅವರು ಅಪರಾಧದ ಹವ್ಯಾಸ ಹೊಂದಿದವರಾಗಿದ್ದು, ಕಳೆದ
ರಾತ್ರಿ ೧.೫ ಲಕ್ಷ ರೂಪಾಯಿಗಳ ಲಂಚ ಪಡೆಯುತ್ತಿದ್ದಾಗ ಸಿಬಿಐ ಬಲೆಗೆ ಸಿಕ್ಕಿ ಬಿದ್ದರು ಎಂದು ವರದಿ
ತಿಳಿಸಿತು. ಲಂಚ ಕೊಟ್ಟ ವ್ಯಕ್ತಿಯನ್ನೂ ಬಂಧಿಸಲಾಗಿದೆ
ಎಂದು ಸುದ್ದಿ ಮೂಲವೊಂದು ತಿಳಿಸಿತು.
2018: ಜೋಧಪುರ: ಅಮೆರಿಕ ವಾಯುಪಡೆ ಮುಖ್ಯಸ್ಥ
ಜನರಲ್ ಡೇವಿಡ್ ಎಲ್. ಗೋಲ್ಡ್ಫೀನ್ ಅವರು ಶನಿವಾರ ಭಾರತದ ದೇಶೀ ನಿರ್ಮಿತ ’ತೇಜಸ್’ ಹಗುರ ಸಮರ ವಿಮಾನವನ್ನು ಜೋಧಪುರದ ವಾಯುಪಡೆ ನಿಲ್ದಾಣದಲ್ಲಿ ಚಲಾಯಿಸಿದರು. ಫೆಬ್ರುವರಿ
2ರಂದು ಶುಕ್ರವಾರ ಜೋಧಪುರಕ್ಕೆ ಬಂದಿದ್ದ ಗೋಲ್ಡ್ಫೀನ್ ಅವರು ಭಾರತದ ಏರ್ ವೈಸ್ ಮಾರ್ಶಲ್ ಎ.ಪಿ. ಸಿಂಗ್
ಅವರ ಜೊತೆಗೆ ’ತೇಜಸ್’ಹಾರಾಟ ನಡೆಸಿದರು ಎಂದು
ರಕ್ಷಣಾ ಅಧಿಕಾರಿಗಳು ತಿಳಿಸಿದರು. ‘ಜನರಲ್ ಡೇವಿಡ್
ಗೋಲ್ಡ್ಫೀನ್ ಅವರು ಭಾರತಕ್ಕೆ ಅಧಿಕೃತ ಭೇಟಿಯ ಮೇಲೆ ಬಂದಿದ್ದು ಅವರು ಮೇಡ್ ಇನ್ ಇಂಡಿಯಾ ಎಲ್ ಸಿಎ
ತೇಜಸ್ ವಿಮಾನದಲ್ಲಿ ಜೋಧಪುರ ವಾಯುಪಡೆ ನಿಲ್ದಾಣದಲ್ಲಿ ಹಾರಾಟ ನಡೆಸಿದರು ಎಂದು ಭಾರತೀಯ ವಾಯುಪಡೆ
ಟ್ವೀಟ್ಟರ್ ಸಂದೇಶದಲ್ಲಿ ತಿಳಿಸಿತು. ಜನರಲ್ ಡೇವಿಡ್ ಅವರು ಭಾರತ ಮತ್ತು ಅಮೆರಿಕ ವಾಯುಪಡೆಗಳ ನಡುವಣ
ಪರಸ್ಪರ ಸಹಕಾರದ ದ್ಯೋತಕವಾಗಿ ಈ ಭೇಟಿ ನೀಡಿದ್ದಾರೆ. ಈ ಸಹಕಾರ ವಿಶ್ವದಲ್ಲೇ ಅತ್ಯುತ್ತಮ ಸಹಕಾರ’ ಎಂದು ಅಧಿಕಾರಿ ನುಡಿದರು. ಇದಕ್ಕೆ ಮುನ್ನ
ಜನರಲ್ ಗೋಲ್ಡ್ಫೀನ್ ಅವರು ಉಭಯ ರಾಷ್ಟ್ರಗಳ ವಾಯುಪಡೆಗಳ ನಡುವಣ ಪ್ರಬಲ ಬಾಂಧವ್ಯಕ್ಕೆ ಒತ್ತು ನೀಡಿದ್ದರು.
’ಉಭಯ ವಾಯುಪಡೆಗಳ ನಡುವಣ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ನಾವು ಚಿಂತಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದರು. ತೇಜಸ್ ಸಮರ ವಿಮಾನದ
ಮೊದಲ ತಂಡವು ೨೦೧೬ರ ಜುಲೈ ತಿಂಗಳಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿತ್ತು.
2018: ಥಾಣೆ: ಮೊಟ್ಟೆಗೆ ನಡೆದ ಒಂದು
ರೂಪಾಯಿಯ ಜಗಳ ಹಿರಿಯ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಪರ್ಯವಸಾನಗೊಂಡ ದಾರುಣ ಘಟನೆ ಥಾಣೆಯಲ್ಲಿ ಫೆಬ್ರುವರಿ
3ರ ಶುಕ್ರವಾರ ತಡರಾತ್ರಿಯಲ್ಲಿ ಘಟಿಸಿತು. ಮನೋಹರ ಗಮ್ಮೆ ಎಂಬ (೫೪) ವ್ಯಕ್ತಿ ಕಳೆದ ರಾತ್ರಿ ರಾಮಬಾಗ್‌ನಲ್ಲಿ
ಸಮೀಪದ ಅಂಗಡಿಯೊಂದಕ್ಕೆ ಮೊಟ್ಟೆಗಳನ್ನು ಖರೀದಿಸಲು ತೆರಳಿದ್ದಾಗ ಈ ಘಟನೆ ಘಟಿಸಿತು ಎಂದು ಪೊಲೀಸರು
ತಿಳಿಸಿದರು. ಮನೋಹರ ಗಮ್ಮೆ ಅವರು ಮೊಟ್ಟೆಗೆ ಅಂಗಡಿಯಾತ ಹೇಳಿದ್ದಕ್ಕಿಂತ ಒಂದು ರೂಪಾಯಿ ಕಡಿಮೆ ನೀಡಿದರು.
ಇದು ಉಭಯರ ಮಧ್ಯೆ ಮಾತಿನ ಘರ್ಷಣೆಗೆ ಕಾರಣವಾಯಿತು. ಅಂಗಡಿಯಾತ ಗಮ್ಮೆ ಅವರನ್ನು ನಿಂದಿಸಿದ ಎಂದು ಪೊಲೀಸರು
ಹೇಳಿದರು. ಸ್ವಲ್ಪ ಹೊತ್ತಿನ ಬಳಿಕ ಗಮ್ಮೆ ಮತ್ತು ಅವರ ಮಗ ಅಂಗಡಿಯಾತನ ಬಳಿಗೆ ಬಂದು ನಿಂದಿಸಿದ್ದು
ಏಕೆ ಎಂದು ಪ್ರಶ್ನಿಸಿದರು. ಇದು ಇನ್ನೊಂದು ಸುತ್ತಿನ ಜಗಳಕ್ಕೆ ಕಾರಣವಾಯಿತು. ಜಗಳದ ನಡುವೆ ಸಿಟ್ಟಿಗೆದ್ದ
ಅಂಗಡಿಯಾತನ ಮಗ ಚೂರಿ ತೆಗೆದುಕೊಂಡು ಗಮ್ಮೆ ಅವರಿಗೆ ಪದೇ ಪದೇ ಇರಿದ, ಪರಿಣಾಮವಾಗಿ ಗಮ್ಮೆ ಅವರು ಸ್ಥಳದಲ್ಲೇ
ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಆರೋಪಿ
ಸುಧಾಕರ ಪ್ರಭುವನ್ನು (೪೫) ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
2009: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ (70) ಈದಿನ ಬೆಳಗಿನ ಜಾವ 4.30ರ ಸುಮಾರಿಗೆ ಇಡುಗುಂಜಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇಡಗುಂಜಿಯಲ್ಲಿ ಜಾತ್ರೆಯ ನಿಮಿತ್ತ ಹಿಂದಿನ ದಿನ ರಾತ್ರಿ ದೇವಸ್ಥಾನ ಆವರಣದಲ್ಲಿ ನಡೆದ 'ಲವ-ಕುಶರ ಕಾಳಗ' ಯಕ್ಷಗಾನ ಪ್ರಸಂಗದಲ್ಲಿ ಶಂಭು ಹೆಗಡೆ ಅವರು ರಾಮನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಸನ್ನಿವೇಶ ಬಾಕಿ ಇದ್ದಾಗ ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ರಂಗದಿಂದ ಚೌಕಿ ಮನೆಗೆ ಬಂದ ಅವರು ಕುಸಿದು ಬಿದ್ದರು. ಅಲ್ಲಿದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ದರು. ಆದರೆ ಮಾರ್ಗಮಧ್ಯೆ ಹೆಗಡೆ ಕೊನೆಯುಸಿರೆಳೆದರು. ಕಲಾವಿದ ಕೆರೆಮನೆ ಶಂಭು ಹೆಗಡೆಯವರು ಬಡಗುತಿಟ್ಟು ಯಕ್ಷಗಾನವನ್ನು ಸಾಗರದಾಚೆಗೂ ಪ್ರಚುರಪಡಿಸಿ ಸಾಂಸ್ಕೃತಿಕ ಭೂಪಟದಲ್ಲಿ ಯಕ್ಷಗಾನಕ್ಕೊಂದು ನೆಲೆ ತಂದುಕೊಟ್ಟ ಈ ಅಪ್ರತಿಮ ಕಲಾವಿದ. 50 ವರ್ಷಗಳಿಗೂ ಹೆಚ್ಚು ಕಾಲ ಗೆಜ್ಜೆ ಕಟ್ಟಿ ರಂಗದಲ್ಲಿ ಮಿಂಚಿದ್ದರು. ಯಕ್ಷಗಾನದ ಮೇರುನಟ ಕೆರೆಮನೆ ಶಿವರಾಮ ಹೆಗಡೆ ಅವರ ಮಗನಾದ ಶಂಭು ಹೆಗಡೆ 'ಶ್ರೀ ಇಡಗುಂಜಿ ಮಹಾಗಣಪತಿ' ಯಕ್ಷಗಾನ ಮೇಳ ಸಂಘಟಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ, ಐದು ಸಾವಿರಕ್ಕಿಂತಲೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದರು. ಸಂಪ್ರದಾಯದ ಚೌಕಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ನವೀನ ಸಾಧ್ಯತೆಗಳ ಬಗ್ಗೆ ಸದಾ ಹುಡುಕಾಟದಲ್ಲಿದ್ದ ಚಿಂತಕ, ಕಲಾವಿದ ಶಂಭು ಹೆಗಡೆ ಅವರು, ಅರ್ಧ ಚಂದ್ರಾಕೃತಿಯ ರಂಗಸ್ಥಳವನ್ನು ಯಕ್ಷಗಾನಕ್ಕೆ ಪರಿಚಯಿಸಿದ್ದರು. ಶಂಭು ಹೆಗಡೆ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಸಾಧನೆ ಗಮನಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಒಲಿದಿದ್ದವು. ಹೊನ್ನಾವರ ತಾಲ್ಲೂಕಿನ ಇಡಗುಂಜಿಯಲ್ಲಿ ನಡೆದ 'ಲವ-ಕುಶ ಕಾಳಗ' ಯಕ್ಷಗಾನ ಪ್ರಸಂಗದ ರಾಮ ಪಾತ್ರದಲ್ಲಿ ಕಾಣಿಸಿಕೊಂಡ ಶಂಭು ಹೆಗಡೆ. ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುವ ಮುನ್ನ ರಂಗದ ಮೇಲೆ ಅವರು ಈ ಪಾತ್ರವನ್ನು ನಿರ್ವಹಿಸುತ್ತಿದ್ದರು.
2009: ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುವ ವನಸ್ಪತಿ ಬ್ರಾಂಡ್ ಸೇರಿದಂತೆ ಎಲ್ಲ ಬಗೆಯ ಅಡುಗೆಗೆ ಬಳಸಲಾಗುವ ತೈಲಗಳು ಮಿತಿಮೀರಿದ ಕೊಬ್ಬು ಮತ್ತು ಆಮ್ಲದ ಅಂಶಗಳನ್ನು ಹೊಂದಿವೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿರುವ ಅಧ್ಯಯನ ಎಚ್ಚರಿಸಿತು. ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬ್ರಾಂಡ್‌ಗಳ ಸುಮಾರು 30ಕ್ಕೂ ಹೆಚ್ಚು ಬಗೆಯ ಅಡುಗೆಯ ತೈಲ, ದೇಸಿ ತುಪ್ಪ ಹಾಗೂ ಬೆಣ್ಣೆಗಳಲ್ಲಿ ಈ ಅಂಶ ಇರುವುದನ್ನು ಅಧ್ಯಯನ ಪತ್ತೆ ಮಾಡಿತು. ಉನ್ನತ ತಂತ್ರಜ್ಞಾನದ ಮೂಲಕ ಅಧ್ಯಯನ ನಡೆಸಿದ ನಂತರವಷ್ಟೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಭೂಷಣ ಹೇಳಿದರು. ಈ ತೈಲಗಳಲ್ಲಿನ ಕೊಬ್ಬಿನ ಅಂಶವು ಮಾನವರ ಉಪಯೋಗಕ್ಕೆ ಎಷ್ಟರಮಟ್ಟಿಗೆ ಅಪಾಯಕಾರಿ ಎಂಬ ಬಗ್ಗೆ ನಾವು ಅಧ್ಯಯನ ನಡೆಸಿದೆವು. ಇವುಗಳು ನೀಡುವ ಜಾಹೀರಾತಿನ ಅನುಸಾರ ಯಾವುವೂ ಕೂಡಾ ಮಾನವರ ಆರೋಗ್ಯಕ್ಕೆ ಆ ಮಟ್ಟದಲ್ಲಿ ಪ್ರಯೋಜನಕಾರಿಯಾಗಿಲ್ಲ. ಕೊಬ್ಬಿನಾಂಶಗಳು ಹೃದಯ ರೋಗದ ಅಪಾಯಗಳನ್ನು ಉಲ್ಬಣಿಸಬಲ್ಲವು, ಮಹಿಳೆಯರಲ್ಲಿ ಗರ್ಭಧಾರಣೆಯ ಫಲವತ್ತತೆ ಕುಂದಿಸಬಲ್ಲವು, ಸ್ತನ ಕ್ಯಾನ್ಸರ್, ಮಧುಮೇಹ, ಅಲ್ಜೆಮೈರ್ (ವೃದ್ಧಾಪ್ಯದಲ್ಲಿನ ಮರೆಗುಳಿ ರೋಗ) ನಂತಹ ಕಾಯಿಲೆಗಳಿಗೆ ಆಹ್ವಾನ ನೀಡಬಲ್ಲವು ಎಂದು ಚಂದ್ರಭೂಷಣ ಅವರು ಎಚ್ಚರಿಸಿದರು. ಅತ್ಯಂತ ಕಡಿಮೆ ಪ್ರಮಾಣದ ಕೊಬ್ಬಿನಂಶ, ಆಮ್ಲಗಳು ದೇಸಿ ತುಪ್ಪ ಮತ್ತು ಅಮುಲ್ ಬೆಣ್ಣೆಯಲ್ಲಿ ಕಂಡು ಬಂದಿದೆ. ಇವುಗಳಲ್ಲಿ ಕ್ರಮವಾಗಿ 5.3 ಹಾಗೂ 3.7ರಷ್ಟು ಕೊಬ್ಬಿನಂಶ ಇದೆ ಸಾಸಿವೆ ಎಣ್ಣೆಯಲ್ಲಿ ಈ ಅಂಶಗಳು ಶೇಕಡಾ 1 ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಅನುಸಾರ ಅಡುಗೆ ತೈಲಗಳಲ್ಲಿ ಶೇಕಡಾ ಒಂದು ಹಾಗೂ ಅದಕ್ಕಿಂತಲೂ ಕಡಿಮೆ ಕೊಬ್ಬಿನಂಶ ಇರಬೇಕೆಂದು ಹೇಳಲಾಗಿದೆ.
2009: ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಜಾರ್ಜ್ ಬುಶ್ ಅವರತ್ತ ಬೂಟು ಎಸೆದು ವಿಶ್ವಾದ್ಯಂತ ಸುದ್ದಿ ಮಾಡಿದ್ದ ಇರಾಕ್ ಪತ್ರಕರ್ತ ಅಲ್ ಜೈದಿ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಬ್ರಿಟನ್‌ನಲ್ಲಿ ಅಂತಹುದೇ ಘಟನೆ ಮರುಕಳಿಸಿತು. ಟಿಬೆಟ್ ಪರ ಯುವಕನ ಬೂಟೇಟಿನಿಂದ ಚೀನಾದ ಪ್ರಧಾನಿ ವೆನ್ ಜಿಯಬಾವೊ ಸ್ವಲ್ಪದರಲ್ಲಿ ಪಾರಾದರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಿಯಬಾವೊ ಜಾಗತಿಕ ಆರ್ಥಿಕತೆಯ ಬಗ್ಗೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಭಾಷಣ ಅಂತಿಮ ಹಂತಕ್ಕೆ ಬರುತ್ತಿದ್ದಂತೆಯೇ ಸುಮಾರು 27 ವರ್ಷದ ಯುವಕನೊಬ್ಬ ಶಿಳ್ಳು ಹಾಕುತ್ತಾ ಎದ್ದುನಿಂತು ತನ್ನ ಬೂಟನ್ನು ಕಳಚಿ ಜಿಯೊಬಾವೊ ಅವರಿದ್ದ ವೇದಿಕೆಯತ್ತ ಎಸೆದ. ಆದರೆ ಅದು ಗುರಿ ತಪ್ಪಿ ಅವರಿಂದ ಕೆಲವೇ ಅಡಿಗಳ ದೂರದಲ್ಲಿ ಬಿತ್ತು.
2008: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನವು ಮಾರ್ಚ್ 30ರ ಮಧ್ಯರಾತ್ರಿ 12 ಗಂಟೆಗೆ ಪ್ರಯಾಣ ಬೆಳೆಸುವುದು, ಇದಕ್ಕೂ ಮುನ್ನ ಮಾರ್ಚ್ 29ರ ರಾತ್ರಿ ಎಂಟು ಗಂಟೆ ನಂತರ ಖಾಸಗಿ ಸಂಸ್ಥೆಯ ವಿಮಾನವೊಂದು ನಿಲ್ದಾಣಕ್ಕೆ ಆಗಮಿಸುವುದು. ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ವಿಮಾನದ ಆಗಮನಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಅವಕಾಶ ಇರುವುದಿಲ್ಲ ಎಂದು ಎಚ್ ಎ ಎಲ್ ಅಧಿಕಾರಿಗಳು ಪ್ರಕಟಿಸಿದರು.
2008: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನಿನಲ್ಲಿ ನಡೆದ ಪಂದ್ಯದಲ್ಲಿ `ಹಿಟ್ ವಿಕೆಟ್' ರೂಪದಲ್ಲಿ ವಿಕೆಟ್ ಒಪ್ಪಿಸಿದ ಸಚಿನ್ ತೆಂಡೂಲ್ಕರ್ ಅವರು ಈ ರೀತಿಯಲ್ಲಿ ಔಟಾದ ಭಾರತದ ಮೂರನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಮಾಸ್ಟರ್ ಬ್ಲಾಸ್ಟರ್ ಅವರು ಬ್ರೆಟ್ ಲೀ ಎಸೆತದಲ್ಲಿ ಔಟಾದರು. ಚೆಂಡನ್ನು ರಕ್ಷಣಾತ್ಮಕವಾಗಿ ಆಡಿ ರನ್ ಗಳಿಸುವ ಪ್ರಯತ್ನದ ವೇಳೆ ಸಚಿನ್ ಅವರ ಬಲಗಾಲು ಸ್ಟಂಪ್ ಗೆ ತಾಗಿ ಬೇಲ್ಸ್ ಕೆಳಕ್ಕುರುಳಿತು. ತಮ್ಮ ವೃತ್ತಿಜೀವನದಲ್ಲಿ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿ ನಯನ್ ಮೋಂಗಿಯ ಹಾಗೂ ಅನಿಲ್ ಕುಂಬ್ಳೆ ಅವರ ಸಾಲಿಗೆ ಸೇರಿಕೊಂಡರು. 1995ರಲ್ಲಿ ಶಾರ್ಜಾದಲ್ಲಿ ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಮೋಂಗಿಯಾ ಅವರು ವಾಸೀಂ ಅಕ್ರಂ ಎಸೆತದಲ್ಲಿ ಇದೇ ರೀತಿ ಔಟಾಗಿದ್ದರು. 2003ರಲ್ಲಿ ವೆಲ್ಲಿಂಗ್ಟನ್ನಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರು ಹಿಟ್ ವಿಕೆಟ್ ರೂಪದಲ್ಲಿ ಆಂಡ್ರೆ ಆಡಮ್ಸ್ ಗೆ ವಿಕೆಟ್ ಒಪ್ಪಿಸಿದ್ದರು. ತೆಂಡೂಲ್ಕರ್ ಅಲ್ಲದೆ ಏಕದಿನ ಕ್ರಿಕೆಟಿನಲ್ಲಿ 10,000 ರನ್ ಪೂರೈಸಿರುವ ಇನ್ನಿಬ್ಬರು ಆಟಗಾರರಾದ ಪಾಕಿಸ್ಥಾನದ ಇಂಜಮಾಮ್ ಉಲ್ ಹಕ್ ಹಾಗೂ ವೆಸ್ಟ್ ಇಂಡೀಸಿನ ಬ್ರಯನ್ ಲಾರಾ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿದ್ದರು.
2008: ಮೈಸೂರಿನ ಸ್ವರ ಮಾಧುರ್ಯ ಟ್ರಸ್ಟ್ ನೀಡುವ ಸುಗಮ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಖ್ಯಾತ ಕಲಾವಿದ ಪುತ್ತೂರು ನರಸಿಂಹ ನಾಯಕ್ ಅವರಿಗೆ ಕೈಗಾರಿಕೋದ್ಯಮಿ ಕೆ.ವಿ. ಮೂರ್ತಿ ಪ್ರದಾನ ಮಾಡಿದರು.
2008: ಆಫ್ರಿಕಾದ ರುವಾಂಡಾ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 31 ಮಂದಿ ಮೃತರಾಗಿ 380ಕ್ಕೂ ಅಧಿಕ ಮಂದಿ ಗಾಯಗೊಂಡರು. ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5ರಷ್ಟಿತ್ತು.
2008: ಛತ್ತೀಸ್ ಗಢ ಮೂಲದ 14 ವರ್ಷದ ಬಾಲಕಿ ಆರತಿಕುಮಾರಿ ದೇಹದ ಬಲಭಾಗದಲ್ಲಿರುವ ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆಯಿಂದ ಮುಚ್ಚುವ ಮೂಲಕ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ವಿಶೇಷ ಸಾಧನೆ ಮೆರೆದರು. ಹತ್ತು ಸಾವಿರ ಮಕ್ಕಳಿಗೆ ಒಬ್ಬರಲ್ಲಿ ಮಾತ್ರ ಕಂಡು ಬರುವ ಡೆಕ್ಸಟ್ರೊಕಾರ್ಡಿಯ (ಬಲಭಾಗದಲ್ಲಿರುವ ಅಂಗಗಳು ಎಡಭಾಗದಲ್ಲಿ ಮತ್ತು ಎಡಭಾಗದಲ್ಲಿರುವ ಅಂಗಗಳು ಬಲಭಾಗದಲ್ಲಿ ಇರುವುದು) ಎಂಬ ಅಪರೂಪದ ಅಂಗ ರಚನೆಯನ್ನು ಆರತಿ ಹೊಂದಿದ್ದಳು. ಉಸಿರಾಟಕ್ಕೆ ತೊಂದರೆ ನೀಡುತ್ತಿದ್ದ ಆಕೆಯ ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆಯಿಂದ ಮುಚ್ಚುವ ಮೂಲಕ ಹೃದಯ ಕವಾಟದಲ್ಲಿ ರಕ್ತ ಹರಿಯುವಿಕೆಯನ್ನು ವೈದ್ಯರು ಸುಗಮಗೊಳಿಸಿದರು.
2008: ಜನಪ್ರಿಯ ರಂಗಪ್ರಕಾರ `ನೌಟಂಕಿ'ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ (92) ಜೈಪುರದಲ್ಲಿ ನಿಧನರಾದರು. ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ರಂಗ ಪ್ರಕಾರವಾಗಿರುವ `ನೌಟಂಕಿ' ಬೆಳವಣಿಗೆ ಮತ್ತು ಅದರ ಜನಪ್ರಿಯತೆಗೆ ಅತ್ಯಂತ ಸೃಜನಶೀಲವಾಗಿ ತೊಡಗಿಸಿಕೊಂಡವರಲ್ಲಿ ಗಿರಿಜ ಮುಂಚೂಣಿ ನಾಯಕರು. ಅವರು ರಾಜಸ್ಥಾನ, ಉತ್ತರ ಪ್ರದೇಶ ಮಾತ್ರವಲ್ಲ ದೇಶದ ಎಲ್ಲಡೆ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಈ ರಂಗಪ್ರಕಾರಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ಹಲವಾರು ಪ್ರಶಸ್ತಿ, ಸನ್ಮಾನಗಳೂ ಸಂದಿವೆ.
2008: ಪಕ್ಷಿಜ್ವರ (ಕೋಳಿಜ್ವರ) ಹರಡುವುದನ್ನು ತಡೆಯುವ ಉದ್ದೇಶದಿಂದ ಪಶ್ಚಿಮಬಂಗಾಳ ಗಡಿಯಲ್ಲಿ ಕೋಳಿಗಳ ಹತ್ಯೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಮೇರೆಗೆ ಅಸ್ಸಾಂ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಕೋಳಿಗಳನ್ನು ಕೊಲ್ಲಲು ಆರಂಭಿಸಿತು.
2008: ಸುನಾಮಿ ಚಂಡಮಾರುತಗಳ ಬಗ್ಗೆ ಅರಿಯುವ ಮುನ್ನೆಚ್ಚರಿಕೆ ಸಂಶೋಧನೆಗಳಲ್ಲಿ ಅಮೆರಿಕದ ನಾಸಾ ಮಹತ್ವದ ಸಾಧನೆ ಮಾಡಿತು. ಸದ್ಯ ಜಾರಿಯಲ್ಲಿರುವ ವಿಧಾನಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹ ಪದ್ಧತಿ ಮೂಲಕ ಸುನಾಮಿ ಕಂಪನಗಳ ಖಚಿತತೆಯನ್ನು ಅರಿಯುವಲ್ಲಿ ನಾಸಾ ವಿಜ್ಞಾನಿಗಳು ಯಶಸ್ವಿಯಾದರು. ಇದರಿಂದ ಸುನಾಮಿ ಸಂಭವಿಸಬಹುದಾದ ಪ್ರದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗಳ ನಕಾರಾತ್ಮಕ ಬೆಳವಣಿಗೆ ಹಾಗೂ ಜೀವ ಹಾನಿ ತಡೆಗಟ್ಟಬಹುದಾಗಿದೆ ಎಂದು ಕ್ಯಾಲಿಫೋರ್ನಿಯಾದ ನಾಸಾ ಪ್ರಯೋಗಾಲಯದ ವಿಜ್ಞಾನಿ ವೈ.ಟೋನಿ ಸಾಂಗ್ ಹೇಳಿದರು. ಸುನಾಮಿ ಅಲೆಗಳು ಕಡಲತೀರಕ್ಕೆ ತಲುಪುವ ಮುನ್ಸೂಚನೆಯ ಸಮಯವನ್ನು ಇನ್ನು ಮುಂದೆ ನಾಸಾದ ಜಾಗತಿಕ ಸ್ಥಿತಿ ಪದ್ಧತಿ ಕೇಂದ್ರಗಳು ಖಚಿತವಾಗಿ ಅರಿಯಲಿವೆ ಎಂಬುದನ್ನು ಟೋನಿ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು. ಈ ವರೆವಿಗೂ ಸುನಾಮಿ ಗಾತ್ರಗಳ ಮುನ್ಸೂಚನೆಯನ್ನು ಭೂಕಂಪನದ ವಿಸ್ತಾರದ ಆಧಾರದ ಮೇಲೆ ನಿರ್ಧರಿಸುವ ಪದ್ಧತಿಯಿತ್ತು. ಆದರೆ ಈ ಪದ್ಧತಿಯಿಂದ ಬಲವಾದ ಸುನಾಮಿ ಅಲೆಗಳ ಖಚಿತ ಸೂಚನೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಇತ್ತೀಚಿನ ಅಧ್ಯಯನಗಳಿಂದ ವ್ಯಕ್ತವಾಗಿತ್ತು.
2007: ಅಂಧರಿಗೂ ಭಗವದ್ಗೀತೆ ಓದುವ ಸೌಭಾಗ್ಯವನ್ನು ಕಲ್ಪಿಸಿಕೊಡುವ ಪ್ರಯತ್ನವನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನ ರೋಟರಿ ಸಂಸ್ಥೆ ಕಬ್ಬನ್ ಪಾರ್ಕ್ ಶಾಖೆ ಮಾಡಿತು. ಸ್ವಾಮಿ ಚಿನ್ಮಯಾನಂದರು 29 ಆವೃತ್ತಿಗಳಲ್ಲಿ ವಿಶ್ಲೇಷಿಸಿದ ಭಗವದ್ಗೀತೆಯ ಬ್ರೈಲ್ ಲಿಪಿ ಆವೃತ್ತಿಯನ್ನು ಚಿನ್ಮಯ ಮಿಷನ್ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
2007: ಇರಾಕಿನ ಬಾಗ್ದಾದ್ ನಗರದ ಜನ ನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಆತ್ಮಾಹುತಿ ದಳದ ಉಗ್ರಗಾಮಿಯೊಬ್ಬ ಲಾರಿಯನ್ನು ಸ್ಫೋಟಗೊಳಿಸಿದ ಪರಿಣಾಮವಾಗಿ ಕನಿಷ್ಠ 121 ಜನ ಮೃತರಾಗಿ, 226ಕ್ಕೂ ಹೆಚ್ಚು ಜನ ಗಾಯಗೊಂಡರು. ಟೈಗ್ರಿಸ್ ನದಿ ದಡದಲ್ಲಿ ಸುನ್ನಿ ಅರಬ್ಬರು, ಶಿಯಾಗಳು ಮತ್ತು ಕುರ್ದರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಾಗ್ದಾದ್ ಸಮೀಪದ ಅಲ್ ಸದ್ರಿಯಾ ಪ್ರದೇಶದಲ್ಲಿ ಈ ಭೀಕರ ಸ್ಫೋಟ ಸಂಭವಿಸಿತು. ಸ್ಫೋಟಕ್ಕೆ ತುತ್ತಾದ ಬಹುತೇಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ನವೆಂಬರ್ 23ರಿಂದೀಚೆಗೆ ಇರಾಕಿನಲ್ಲಿ ಸಂಭವಿಸಿರುವ ದಾಳಿಗಳಲ್ಲಿ ಇದು ಅತ್ಯಂತ ಭೀಕರ ದಾಳಿ. ನವೆಂಬರ್ 23ರಂದು ನಡೆದ ಕಾರು ಬಾಂಬ್ ದಾಳಿಯಲ್ಲಿ 200ಕ್ಕೂ ಜನ ಮೃತರಾಗಿದ್ದರು.
2007: ಬಿಹಾರಿನ ಪಟ್ನಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾಬೋಧಿ ಸಂಸ್ಥೆಯ ಜಯಶ್ರೀ ಮಹಾಬೋಧಿ ವಿಹಾರ ದೇವಸ್ಥಾನದಲ್ಲಿ ಬುದ್ಧನ ಪವಿತ್ರ ಅವಶೇಷಗಳನ್ನು ಇರಿಸಲಾಯಿತು. ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಅವರ ನೇತೃತ್ವದಲ್ಲಿ ವೇದಘೋಷಗಳ ಮಧ್ಯೆ ಈ ಅವಶೇಷಗಳನ್ನು ಶುದ್ಧಗೊಳಿಸಲಾಯಿತು. ಶ್ರೀಲಂಕಾದ ಐವರು ಬೌದ್ಧ ಭಿಕ್ಷುಗಳು ಈ ಅವಶೇಷಗಳನ್ನು ತೆಗೆದುಕೊಂಡು ಬಂದಿದ್ದರು. ಬುದ್ಧನ ಇಬ್ಬರು ಪ್ರಮುಖ ಶಿಷ್ಯರಾದ ಸರಿಪುತ್ತ ಮತ್ತು ಮೊದ್ಗಲ್ಯಾಯನ ಅವರ ಅವಶೇಷಗಳನ್ನೂ ಇದೇ ಮಂದಿರದಲ್ಲಿ ಇರಿಸಲಾಯಿತು.
2007: ಚಿತ್ರನಟಿ ನಂದಿತಾದಾಸ್, ಫ್ಯಾಷನ್ ವಿನ್ಯಾಸಗಾರ್ತಿ ರೀತು ಬೆರಿ ಮತ್ತು ಕೈಗಾರಿಕೋದ್ಯಮಿ ಕಿರಣ್ ಮಜುಂದಾರ್ ಅವರಿಗೆ ನವದೆಹಲಿಯಲ್ಲಿ ಕಲ್ಪನಾ ಚಾವ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2007: ಕ್ರಿಕೆಟ್ ಒಳಗೊಂಡಂತೆ ಪ್ರಮುಖ ಕ್ರೀಡೆಗಳ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಚಾನೆಲ್ ಗಳು ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಒಪ್ಪಿಗೆ ನೀಡಿದ್ದು, ಅದು ಈ ದಿನ ನಡುರಾತ್ರಿಯಿಂದಲೇ ಜಾರಿಗೆ ಬಂದಿತು.
2007: ಯಕ್ಷಗಾನ ಕಲಾವಿದ, ಅರ್ಥದಾರಿ ದೇರಾಜೆ ಸೀತಾರಾಮಯ್ಯ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಸಾಹಿತಿ ಎಸ್. ಎಲ್, ಭೈರಪ್ಪ ಆಯ್ಕೆಯಾದರು.
2007: ವಿಶ್ವ ವಿಖ್ಯಾತ ವಿಜ್ಞಾನಿ `ಜೀನ್ ಥೆರೆಪಿ'ಯ ಜನಕ ಎಂದೇ ಪರಿಗಣಿತರಾದ ಅಮೆರಿಕದ ವಿಲಿಯಂ ಫ್ರೆಂಚ್ ಆಂಡರ್ಸನ್ (70) ಅವರಿಗೆ ಲಾಸ್ ಏಂಜೆಲಿಸ್ನ ನ್ಯಾಯಾಲಯವೊಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 14 ವರ್ಷಗಳ ಸೆರೆವಾಸ ವಿಧಿಸಿತು.
2007: ಕೋಚಿಯ ಶಸ್ತ್ರಚಿಕಿತ್ಸಕರಾದ ಪಾವುಲ್ ವಿ ಜೋಸೆಫ್ ಮತ್ತು ವಿನೋದ ಬಿ. ನಾಯರ್ ಅವರು 44 ವರ್ಷದ ಸುರೇಶ ಬಾಬು ಎಂಬ ವ್ಯಕ್ತಿಯ ಮೇಲೆ ಐದೂವರೆ ಗಂಟೆಗಳ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಆತನ ನಾಲಿಗೆಯನ್ನು ಮಾಮೂಲಿ ಗಾತ್ರಕ್ಕೆ ಇಳಿಸಿದರು. ಆತನ ನಾಲಿಗೆ ಮಾಮೂಲಿ ಗಾತ್ರಕ್ಕಿಂತ ಮೂರುಪಟ್ಟು ದೊಡ್ಡದಾಗಿತ್ತು. ಅಂದರೆ 13.5 ಸೆಂ.ಮೀ. ಉದ್ದ ಹಾಗೂ 12 ಸೆಂ.ಮೀ. ಅಗಲವಾಗಿತ್ತು! ಈ ಶಸ್ತ್ರಚಿಕತ್ಸೆಗೆ ವೈದ್ಯರು ಅತ್ಯಾಧುನಿಕ `ಹಾರ್ಮೋನಿಕ್ ಸ್ಕಾಲ್ಪೆಲ್' ಎಂಬ ಉಪಕರಣ ಬಳಸಿದರು.
2006: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು 5ನೇ ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಜನತಾದಳ (ಎಸ್)- ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭವಾಯಿತು.
2006: ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಗಾಗಿದ್ದ ಭಾರತೀಯ ವಾಯುಪಡೆಯ ಪ್ರಪ್ರಥಮ ಮಹಿಳಾ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರನ್ನು ಸೇನೆಯಿಂದ ವಜಾ ಮಾಡಲಾಯಿತು. ಈ ಸಂಬಂಧ ಸೇನಾ ನ್ಯಾಯಾಲಯ ನೀಡಿದ್ದ ಆದೇಶವನ್ನು ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ ಎತ್ತಿ ಹಿಡಿದರು. ಇದರೊಂದಿಗೆ ಅಂಜಲಿ ಅವರು ತಮ್ಮ ಕೆಲವು ಸಹೋದ್ಯೋಗಿಗಳ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಸೇರಿದಂತೆ ಇತರ ಆರೋಪಗಳೆಲ್ಲ ಬಿದ್ದು ಹೋದವು.
1982: ಧರ್ಮಸ್ಥಳದ `ರತ್ನಗಿರಿ' ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿರುವ ಭಗವಾನ್ ಬಾಹುಬಲಿಯ ಮೊದಲ ಮಹಾಮಸ್ತಕಾಭಿಷೇಕ ಈದಿನ ಸಂಭ್ರಮೋತ್ಸಾಹದೊಂದಿಗೆ ನಡೆಯಿತು.
1968: ಬಾಂಬೆಯ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಂನಲ್ಲಿ ಮೊತ್ತ ಮೊದಲ `ಫ್ರಾಂಕೀ' ಮಾರಾಟಗೊಂಡಿತು. ಅಮರಜಿತ್ ಟಿಬ್ ಅವರ ಮಿದುಳಿನ ಕೂಸಾದ ಇದರ ಹೆಸರನ್ನು ಸರ್ ಫ್ರಾಂಕ್ ವೊರೆಲ್ ಅವರಿಂದ ಪಡೆಯಲಾಯಿತು.
1966: ಸೋವಿಯತ್ ಬಾಹ್ಯಾಕಾಶ ನೌಕೆ `ಲ್ಯೂನಾ 9' ಮೊತ್ತ ಮೊದಲ ರಾಕೆಟ್ ನಿಯಂತ್ರಣದ ನೆರವಿನೊಂದಿಗೆ ಚಂದ್ರನಲ್ಲಿ ಇಳಿಯಿತು.
1959: ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ ಬುಡ್ಡಿ ಹಾಲ್ಲಿ ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ರಿಚ್ಚೀ ವ್ಯಾಲೆನ್ಸ್ ಮತ್ತು ಜೆ.ಪಿ. ರಿಚಡರ್್ಸನ್ ಜೊತೆಗೆ ಅಸು ನೀಗಿದರು. ಆಗ ಹಾಲ್ಲಿಯ ಪ್ರಾಯ ಕೇವಲ 22 ವರ್ಷ.
1959: ಅಪರೂಪದ ಸಂಗೀತ ರಚನೆಗಾರ, ಧ್ವನಿ ಅನ್ವೇಷಕ, ರಂಗಭೂಮಿ ನಟ ಅನಂತರಾಮ್ (ಜೆರ್ರಿ) ಅವರು ಆರ್. ಜಿ. ಕೃಷ್ಣನ್- ಸೀತಾಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಬಿರುಗಾಳಿ, ಮಳೆ ಶಬ್ದ, ಹರಿವ ನದಿ ನೀರಿನ ಜುಳು ಜುಳು ನಾದ ಮುಂತಾದ ಹಿನ್ನೆಲೆ ಸಂಗೀತ ಶಬ್ದವನ್ನು ಅನುಪಯೋಗಿ ವಸ್ತುಗಳಾದ ಕರಟ, ಕಲ್ಲು, ಗೋಲಿ, ಬಿದಿರು, ಪರಂಗಿ ಕೊಂಬು, ಪ್ಲಾಸ್ಟಿಕ್ ಬಕೆಟಿನಿಂದ ಹೊರಹೊಮ್ಮಿಸುವ ನಾದ ವಿಶೇಷತೆಯನ್ನು ಕರಗತ ಮಾಡಿಕೊಂಡಿದ್ದ ಅನಂತರಾಮ್ ತಮ್ಮದೇ `ರಂಗಸ್ವರ' ಸಂಸ್ಥೆಯ ಮೂಲಕ ರಂಗಗೀತೆಗಳ ಪ್ರಚಾರದಲ್ಲಿ ನಿರತರಾದ ವ್ಯಕ್ತಿ.
1938: ಭಾರತದ ಚಿತ್ರ ನಟಿ ವಹೀದಾ ರೆಹಮಾನ್ ಹುಟ್ಟಿದ ದಿನ.
1928: ಖ್ಯಾತ ಸಾಹಿತಿ ಪ್ರೊ. ಎಚ್. ತಿಪ್ಪೇರುದ್ರ ಸ್ವಾಮಿ (1928-1994) ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡ ಕುಟುಂಬದಲ್ಲಿ ಜನಿಸಿದರು.
1925: ವಿಕ್ಟೋರಿಯಾ ಟರ್ಮಿನಸ್ನಿಂದ ಕುರ್ಲಾವರೆಗೆ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೆಯ ಬಂದರು ಶಾಖೆಯ ಆರಂಭದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ರೈಲುಸೇವೆ ಆರಂಭಗೊಂಡಿತು.
1928: ಖ್ಯಾತ ಸಾಹಿತಿ ಪ್ರೊ. ಎಚ್. ತಿಪ್ಪೇರುದ್ರ ಸ್ವಾಮಿ (1928-1994) ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡ ಕುಟುಂಬದಲ್ಲಿ ಜನಿಸಿದರು.
1924: ಅಮೆರಿಕದ 28ನೇ ಅಧ್ಯಕ್ಷ ವುಡ್ರೋ ವಿಲ್ಸನ್ ವಾಷಿಂಗ್ಟನ್ನಿನಲ್ಲಿ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾದರು. ಹೊಸದಾಗಿ ನಿರ್ಮಿಸಲಾದ ನ್ಯಾಷನಲ್ ಕೆಥೆಡ್ರಲ್ನಲ್ಲಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ರಾಜಧಾನಿಯಲ್ಲಿ ಸಮಾಧಿ ಮಾಡಲಾದ ಮೊತ್ತ ಮೊದಲ ಅಧ್ಯಕ್ಷ ಈತ.
1916: ಮಹಾತ್ಮಾ ಗಾಂಧಿಯವರು ಬನಾರಸ್ ಹಿಂದು ವಿಶ್ವ ವಿದ್ಯಾಲಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ವಾರಣಾಸಿಯಲ್ಲಿ ಇರುವ ಈ ವಿಶ್ವವಿದ್ಯಾಲಯ ವಿಶ್ವದ ಮೂರು ಅತಿದೊಡ್ಡ ವಸತಿ ವ್ಯವಸ್ಥೆ ಉಳ್ಳ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, 1300 ಎಕರೆ ಪ್ರದೇಶದಲ್ಲಿ ಹರಡಿದೆ. 124 ಸಂಯೋಜಿತ ಕಾಲೇಜುಗಳು ಸೇರಿ ಆರು ಉನ್ನತ ಅಧ್ಯಯನ ಕೇಂದ್ರಗಳನ್ನು ಒಳಗೊಂಡಿದೆ.
1867: ರಾಜಕುಮಾರ ಮುತ್ಸುಹಿತೊ ಜಪಾನಿನ ಚಕ್ರವರ್ತಿ ಮೀಜಿ ಆದರು. ಮತ್ತು 1912ರವರೆಗೆ ಆಳ್ವಿಕೆ ನಡೆಸಿದರು.
1821: ಎಲಿಜಬೆತ್ ಬ್ಲಾಕ್ವೆಲ್ (1821-1910) ಹುಟ್ಟಿದ ದಿನ. ಆಂಗ್ಲೊ ಇಂಡಿಯನ್ ವೈದ್ಯಳಾದ ಈಕೆ ಆಧುನಿಕ ಕಾಲದ ಮೊತ್ತ ಮೊದಲ ಮಹಿಳಾ ವೈದ್ಯಳೆಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment