ನಾನು ಮೆಚ್ಚಿದ ವಾಟ್ಸಪ್

Sunday, February 17, 2019

ಇಂದಿನ ಇತಿಹಾಸ History Today ಫೆಬ್ರುವರಿ 17

ಇಂದಿನ ಇತಿಹಾಸ History Today ಫೆಬ್ರುವರಿ 17
2019: ಶ್ರೀನಗರ: ಪಾಕಿಸ್ತಾನಿ ಮೂಲದ ಜೈಶ್--ಮೊಹಮ್ಮದ್ ಸಂಘಟನೆ ನಡೆಸಿದ ಪುಲ್ವಾಮ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹುರಿಯತ್ ಕಾನ್ಫರೆನ್ಸ್ ನಾಯಕ ಮೀರ್ವಾಯಿಜ್ ಉಮರ್ ಫರೂಕ್ ಸೇರಿದಂತೆ ಆರು ಮಂದಿ ಪ್ರತ್ಯೇಕತಾವಾದಿ ನಾಯಕಗೆ ಒದಗಿಸಲಾಗಿದ್ದ ಭದ್ರತೆಯನ್ನು ಸರ್ಕಾರ ಹಿಂತೆಗೆದುಕೊಂಡಿತು.  ಮೀರ್ವಾಯಿಜ್ ಹೊರತಾಗಿ ಅಬ್ದುಲ್ ಗನಿ ಭಟ್, ಬಿಲಾಲ್ ಲೋನ್, ಹಾಶಿಮ್ ಖುರೇಶಿ, ಫಜಲ್ ಹಖ್ ಖುರೇಶಿ ಮತ್ತು ಶಬೀರ್ ಶಾ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು. ಆತ್ಮಹತ್ಯಾ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಯೋಧರು ಹುತಾತ್ಮರಾದುದನ್ನು ಅನುಸರಿಸಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಕ್ರಮಕೈಗೊಂಡಿತು. ಈ ನಾಯಕರಿಗೆ ಭದ್ರತೆ ಒದಗಿಸುವ ಸಲುವಾಗಿ ಅವರನ್ನು ಯಾವುದೇ ವರ್ಗಕ್ಕೆ ಸೇರಿಸಿರಲಿಲ್ಲ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಕೆಲವು ಉಗ್ರಗಾಮಿ ಗುಂಪುಗಳಿಂದ ಅವರ ಜೀವಕ್ಕೆ ಅಪಾಯ ಇರುವುದನ್ನು ಗಮನದಲ್ಲಿ ಇಟ್ಟುಕೊಂಡು ತಾತ್ಕಾಲಿಕ ಭದ್ರತೆ ಒದಗಿಸಿತ್ತುಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳು ಉಮರ್ ತಂದೆ ಮೀರ್ವಾಯಿಜ್ ಫರೂಖ್ ಅವರನ್ನು ೧೯೯೦ರಲ್ಲಿ ಮತ್ತು ಅಬ್ದುಲ್ ಗನಿ ಲೋನ್ ಅವರನ್ನು ೨೦೦೨ರಲ್ಲಿ ಕೊಲೆಗೈದಿದ್ದರು. ಪಾಕ್ ಪರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಮತ್ತು ಜೆಕೆಎಲ್ಎಫ್ ಮುಖ್ಯಸ್ಥ ಯಾಸೀನ್ ಮಲಿಕ್ ಅವರಿಗೆ ಯಾವುದೇ ಭದ್ರತೆಯನ್ನೂ ಒದಗಿಸಿರಲಿಲ್ಲ.  ಆದೇಶದ ಪ್ರಕಾರ ಪ್ರತ್ಯೇಕತಾವಾದಿಗಳಿಗೆ ಒದಗಿಸಲಾಗಿದ್ದ ಎಲ್ಲ ಭದ್ರತೆ ಮತ್ತು ವಾಹನಗಳನ್ನು ಭಾನುವಾರ ಸಂಜೆಯಿಂದ ಹಿಂತೆಗೆದುಕೊಳ್ಳಲಾಗುವುದು. ಸರ್ಕಾರದಿಂದ ಯಾವುದೇ ಭದ್ರತಾ ಪಡೆಗಳ ರಕ್ಷಣೆಯನ್ನಾಗಲೀ ಅಥವಾ ಬೇರಾವುದೇ ರೀತಿಯ ಭದ್ರತೆಯನ್ನಾಗಲೀ ನೀಡಲಾಗುವುದಿಲ್ಲ. ಸರ್ಕಾರದಿಂದ ಒದಗಿಸಲಾಗಿದ್ದ ಇತರ ಯಾವುದೇ ಸವಲತುಗಳನ್ನು ತತ್ ಕ್ಷಣದಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಆದೇಶ ತಿಳಿಸಿತು.  ಪ್ರತ್ಯೇಕತಾವಾದಿ ನಾಯಕರಿಗೆ ಅಥವಾ ಇಂತಹ ಬೇರಾವುದೇ ನಾಯಕರಿಗೆ ಇನ್ನು ಮುಂದೆ ಭದ್ರತೆ ಒದಗಿಸಲಾಗುವುದಿಲ್ಲ ಎಂದು ಆದೇಶ ಸ್ಪಷ್ಟ ಪಡಿಸಿತು. ಬೇರೆ ಯಾರಾದರೂ ಪ್ರತ್ಯೇಕತಾವಾದಿಗಳಿಗೆ ಸರ್ಕಾರದಿಂದ ಯಾವುದಾದರೂ ಸವಲತ್ತನ್ನು ಒದಗಿಸಲಾಗಿದೆಯೇ ಎಂಬುದಾಗಿ ಪೊಲೀಸ್ ಕೇಂದ್ರ ಕಚೇರಿಯು ಪರಿಶೀಲಿಸಲಿದೆ. ಒದಗಿಸಿದ್ದರೆ ಅವುಗಳನ್ನೂ ತತ್ ಕ್ಷಣವೇ ಹಿಂತೆಗೆದುಕೊಳ್ಳಲಾಗುವುದು ಎಂದೂ ಆದೇಶ ಹೇಳಿತು. ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡ ಕ್ರಮಕ್ಕೆ ಪ್ರತಿಕ್ರಿಯಿಸಿದ ಮೀರ್ ವಾಯಿಜ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ವಕ್ತಾರಪ್ರತ್ಯೆಕತಾವಾದಿ ನಾಯಕರು ಎಂದೂ ಭದ್ರತೆಯನ್ನು ಕೋರಿರಲಿಲ್ಲ. ಸರ್ಕಾರವು ಭದ್ರತೆಯನ್ನು ಹಿಂಪಡೆಯಬಹುದು ಎಂದು ಅವರು ಪದೇ ಪದೇ ಹೇಳಿದ್ದರು ಎಂದು ನುಡಿದರುಪುಲ್ವಾಮ ದಾಳಿಯ ಬಳಿಕ ಭದ್ತತಾ ಪರಿಸ್ಥಿತಿಯ ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ ಎರಡು ದಿನಗಳ ಬಳಿಕ ಸರ್ಕಾರದ ಆದೇಶ ಹೊರಬಿದ್ದಿತು.  ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ರಾಜನಾಥ್ ಸಿಂಗ್ ಅವರು ಪಾಕಿಸ್ತಾನ ಅಥವಾ ಐಎಸ್ಐಯಿಂದ ಹಣಕಾಸಿನ ನೆರವು ಪಡೆಯುವ ವ್ಯಕ್ತಿಗಳಿಗೆ ನೀಡಲಾದ ಭದ್ರತೆಯನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದ ಕೆಲವು ಶಕ್ತಿಗಳು ಐಎಸ್ ಮತ್ತು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿವೆ. ಅವರಿಗೆ ಒದಗಿಸಲಾದ ಭದ್ರತೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಅವರು ತಿಳಿಸಿದ್ದರು. ಅವರು ಭಯೋತ್ಪಾದಕ ಸಂಚುಗಳಲ್ಲಿ ಕೂಡಾ ಶಾಮೀಲಾಗಿದ್ದಾರೆ. ಅವರು ಜನರ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದರುಮೀರ್ವಾಯಿಜ್ ಉಮರ್ ಫರೂಕ್ ನೇತೃತ್ವದ ಸರ್ವ ಪಕ್ಷ ಹುರಿಯತ್ ಕಾನ್ಫರೆನ್ಸ್ (ಎಪಿಎಚ್ಸಿ) ಹೇಳಿಕೆಯೊಂದರಲ್ಲಿಭದ್ರತೆ ಇರಲಿ, ಇಲ್ಲದೇ ಇರಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಎಲ್ಲವೂ ಮೊದಲಿನ ಹಾಗೆಯೇ ಇರುತ್ತದೆ ಎಂದು ತಿಳಿಸಿತು. ಈ ವಿಷಯ ಪ್ರಸ್ತಾಪವಾದಾಗಲೆಲ್ಲ, ಸರ್ಕಾರ ಅದನ್ನು ಹಿಂಪಡೆಯಬಹುದು ಎಂದು ಮಿರ್ ವಾಯಿಜ್ ಅವರು ಪದೇ ಪದೇ ತಿಳಿಸಿದ್ದರು ಎಂದು ವಕ್ತಾರರು ಹೇಳಿದರು.  ‘ಹುರಿಯತ್ ನಾಯಕರು ಭದ್ರತೆ ನೀಡುವಂತೆ ಎಂದೂ ಕೇಳಿರಲಿಲ್ಲ. ವಾಸ್ತವವಾಗಿ ಬೆದರಿಕೆ ಉಂಟು ಎಂದು ಹೇಳುತ್ತಾ ಸರ್ಕಾರವೇ ತನ್ನ ಸಿಬ್ಬಂದಿಯನ್ನು ನಿಯೋಜಿಸಿತ್ತು ಎಂದು ವಕ್ತಾರ ನುಡಿದರು. ‘ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ನಿರ್ಧಾರವನ್ನು ಮಾಡಿದ್ದೂ ಸರ್ಕಾರವೇ. ಈದಿನ ಅದೇ ಸರ್ಕಾರ ಅದನ್ನು ಕಿತ್ತು ಹಾಕಲು ನಿರ್ಧರಿಸಿದೆ. ಇದು ನಮಗೆ ಒಂದು ವಿಷಯವೇ ಅಲ್ಲ ಎಂದೂ ಎಪಿಎಚ್ಸಿ ಹೇಳಿತು. ಪ್ರತ್ಯೇಕತಾವಾದಿ ನಾಯಕ ಅಬ್ದುಲ್ ಘನಿ ಭಟ್ ಕೂಡಾಭದ್ರತೆ ಒದಗಿಸಿದ್ದು ರಾಜ್ಯ ಸರ್ಕಾರ, ನನಗೆ ಅದರ ಅಗತ್ಯ ಇಲ್ಲ. ಕಾಶ್ಮೀರ ಜನರೇ ನನ್ನ ಭದ್ರತೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಸಾಧ್ಯತೆಗಳಿವೆ.   ಅವರು ಯುದ್ಧ ಸಂಭಾವ್ಯತೆ ಬಗ್ಗೆ ಮೊದಲು ಗಮನ ಹರಿಸಲಿ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ೨೦ ವರ್ಷಗಳಲ್ಲಿ ಇದೇ ಮೊದಲ ಬಾರಿ ನಡೆದ ಅತಿ ಭೀಕರ ಭಯೋತ್ಪಾದಕ ದಾಳಿಯಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಜೈಶ್ --ಮೊಹಮ್ಮದ್ ಉಗ್ರ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಆತ್ಮಹತ್ಯಾ ದಾಳಿಕೋರನನ್ನು ಅದಿಲ್ ದಾರ್ ಎಂಬುದಾಗಿ ಗುರುತಿಸಲಾಗಿತ್ತು. ಜಮ್ಮು - ಶ್ರೀನಗರ ಹೆದ್ದಾರಿಯಲ್ಲಿ ನಡೆಸಲಾದ ದಾಳಿಗೆ ಕೇಂದ್ರ ಸರ್ಕಾರವು ಪ್ರಬಲ ಪ್ರತಿಕ್ರಿಯೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ತತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆಯು ಪಾಕಿಸ್ತಾನಕ್ಕೆ ೧೯೯೬ರಿಂದ ನೀಡಲಾಗಿದ್ದಪರಮ ಆಪ್ತ ರಾಷ್ಟ್ರ ಸ್ಥಾನಮಾನವನ್ನು ರದ್ದು ಪಡಿಸಲು ನಿರ್ಧರಿಸಿತು. ಆದರೆ ಪಾಕಿಸ್ತಾನವು ದಾಳಿಗಾಗಿ ನಮ್ಮನ್ನು ದೂಷಿಸಬೇಡಿ ಎಂಬುದಾಗಿ ಹೇಳುವ ಮೂಲಕ ದಾಳಿಯಲ್ಲಿನ ತನ್ನ ಪಾತ್ರವನ್ನು ನಿರಾಕರಿಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಯೋತ್ಪಾದನೆ ನಿರಂತರ ಬೆಂಬಲ ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಜಾಗತಿಕವಾಗಿಒಂಟಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಆರಂಭಿಸಿತು.

2019: ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೪೦ ಯೋಧರನ್ನು ಹುತಾತ್ಮರನ್ನಾಗಿಸಿದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಯೋಧರ ದೇಹಗಳ ಭಾಗಗಳ ನಕಲಿ ಚಿತ್ರಗಳು ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಸಿಆರ್ಪಿಎಫ್ ಎಚ್ಚರಿಕೆ ನೀಡಿತು. ಕೆಲವು ದುಷ್ಕರ್ಮಿಗಳು ನಾವು ಒಗ್ಗಟ್ಟಿನಿಂದ ಇರುವಾಗ ಅದನ್ನು ಮುರಿಯುವ ಸಲುವಾಗಿ, ನಮ್ಮ ಹುತಾತ್ಮ ಯೋಧರ ದೇಹದ ಭಾಗಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ದಯವಿಟ್ಟು ಇಂತಹ ಫೊಟೋಗಳನ್ನು ಅಥವಾ ಪೋಸ್ಟ್ಗಳನ್ನು  ಪ್ರಸಾರಮಾಡುವ (ಸರ್ಕ್ಯುಲೇಟ್)/ ಹಂಚಿಕೊಳ್ಳು (ಶೇರ್) ಅಥವಾ ಲೈಕ್ ಮಾಡುವ ಕೃತ್ಯಗಳಿಂದ ದೂರವಿರಿ ಎಂದು ಸಿಆರ್ಪಿಎಫ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲಿನಲ್ಲಿ ಟ್ವೀಟ್ ಮಾಡಿತು. ಇಂತಹ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಕಂಡುಬಂದಲ್ಲಿ ಇದಕ್ಕೆ ಮಿಂಚಂಚೆ (-ಮೇಲ್) ಮೂಲಕ ವರದಿ ಮಾಡಿ ಎಂದೂ ಸಿಆರ್ಪಿಎಫ್ ಜನರನ್ನು ಕೋರಿತು. ಯೋಧರ ಶವಗಳು ಅತ್ಯಂತ ಘೋರವಾಗಿ ಛಿದ್ರಗೊಂಡಿರುವಂತೆ ತೋರಿಸುವ ಇಂತಹ ಫೊಟೋಗಳು ಪ್ರಸಾರವಾಗುತ್ತಿರುವುದು ಗಮನಕ್ಕೆ ಬಂದಿದ್ದು, ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದ ಬಳಿಕ ಜನರಿಗೆ ಸಲಹಾರೂಪದ ತಿಳುವಳಿಕೆ ಪತ್ರವನ್ನು ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ನುಡಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ರಾಷ್ಟ್ರದ ವಿವಿಧ ಕಡೆಗಳಲ್ಲಿ ಇರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಇಂತಹ ನಕಲಿ (ಬೋಗಸ್) ಸಂದೇಶಗಳನ್ನು ಕಳುಹಿಸಲಾಗುತ್ತಿರುವ ಬಗ್ಗೆ ಕೂಡಾ ಜಮ್ಮು ಮತ್ತು ಕಾಶ್ಮೀರದ ೬೧ ಬೆಟಾಲಿಯನ್ಗಳಲ್ಲಿ ಅಂದಾಜು ೬೫,೦೦೦ ಸಿಬ್ಬಂದಿಯನ್ನು ನಿಯೋಜಿಸಿರುವ ಅರೆ ಸೇನಾ ಪಡೆಯು, ತಿಳುವಳಿಕೆ ಪತ್ರವೊಂದನ್ನು ಬಿಡುಗಡೆ ಮಾಡಿತು. ಕಾಶ್ಮೀರದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ನಕಲಿ ಸುದ್ದಿಗಳನ್ನೂ ದುಷ್ಕರ್ಮಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುತ್ತಿದ್ದಾರೆ. ಸಿಆರ್ಪಿಎಫ್ ಸಹಾಯವಾಣಿಯು ಇಂತಹ ದೂರುಗಳ ಬಗ್ಗೆ ತನಿಖೆ ನಡೆಸಿದೆ ಮತ್ತು ಕಿರುಕುಳದ ಆರೋಪಗಳು ಸರಿಯಲ್ಲ ಎಂಬುದನ್ನು ತಿಳಿದುಕೊಂಡಿದೆ ಎಂದೂ ಸಿಆರ್ಪಿಎಫ್ ಹೇಳಿತು.  ಇವು ದ್ವೇಷ ಹರಡುವ ಯತ್ನಗಳು. ಇಂತಹ ಪೋಸ್ಟ್ಗಳನ್ನು ಪ್ರಸಾರ ಮಾಡಬೇಡಿ ಎಂದು ಸಿಆರ್ಪಿಎಫ್ ಇನ್ನೊಂದು ಟ್ವೀಟಿನಲ್ಲಿ ತಿಳಿಸಿತು.  ಜೈಶ್--ಮೊಹಮ್ಮದ್ ಸಂಘಟನೆಗೆ ಸೇರಿದ ಭಯೋತ್ಪಾದಕ ಸಂಘಟನೆ ಫೆಬ್ರುವರಿ ೧೪ರಂದು ನಡೆಸಿದಒಂಟಿ ತೋಳ ದಾಳಿಗೆ ೪೦ ಮಂದಿ ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದರು.  ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ, ಯೋಧರ ದೇಹಗಳು ಛಿದ್ರಗೊಂಡು ಸ್ಫೋಟಗೊಂಡ ಸ್ಥಳಕ್ಕಿಂತ ದೂರಕ್ಕೆ ಸಿಡಿದು ಬಿದ್ದಿದ್ದವು.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ನಡೆದ ಪೈಶಾಚಿಕ ದಾಳಿಯ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಬರುತ್ತಿರುವ ಟೀಕಾಸ್ತಗಳನ್ನು ಎದುರಿಸಲು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ವಿಚಾರಣೆಗೆ ಬರಲಿರುವ ಕುಲಭೂಷಣ್ ಜಾಧವ್ ಪ್ರಕರಣವನ್ನು ಪಾಕಿಸ್ತಾನ ಗುರಾಣಿಯಾಗಿ ಬಳಸಿಕೊಂಡಿತು.  ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ್ದ ಪಾಕಿಸ್ತಾನವು, ಅವರಿಗೆ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪಗಳಿಗಾಗಿ ೨೦೧೭ರ ಏಪ್ರಿಲ್ನಲ್ಲಿ ಮರಣದಂಡನೆ ವಿಧಿಸಿದ್ದುಇದೀಗ, ಪುಲ್ವಾಮ ಭಯೋತ್ಪಾದಕ ದಾಳಿಗಾಗಿ ತನ್ನ ವಿರುದ್ಧ ಬರುತ್ತಿರುವ ಖಂಡನೆಗಳನ್ನು ಎದುರಿಸಲು ಜಾಧವ್ ಪ್ರಕರಣವನ್ನು ಬಳಸಿಕೊಂಡು, ಪುಲ್ವಾಮದಾಳಿಯಲ್ಲಿ ತನ್ನ ಕೈವಾಡದ ಬಗೆಗಿನ ಆರೋಪಗಳನ್ನು ತಳ್ಳಿಹಾಕಿತು. ಜಾಧವ್ ಅವರಿಗೆ ಮರಣದಂಡನೆ ವಿಧಿಸಲಾದ ಪ್ರಕರಣವು ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬಹಿರಂಗ ವಿಚಾರಣೆಗೆ ಬರಲಿದೆ. ಭಾರತವು ದೂರು ನೀಡಿದ ಬಳಿಕ ೧೦ ಸದಸ್ಯರ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ಪ್ರಕರಣವನ್ನು ತಾನು ಇತ್ಯರ್ಥ ಪಡಿಸುವವರೆಗೆ ಮರಣದಂಡನೆ ಜಾರಿಗೊಳಿಸದಂತೆ ಪಾಕಿಸ್ತಾನಕ್ಕೆ ತಡೆಯಾಜ್ಞೆ ನೀಡಿತ್ತು. ಜಾಧವ್ ಅವರನ್ನು ಬಲೂಚಿಸ್ಥಾನ ಪ್ರಾಂತ್ಯದಲ್ಲಿ ೨೦೧೬ರ ಮಾರ್ಚ್ ೩ರಂದು ಇರಾನಿನಿಂದ ದೇಶ ಪ್ರವೇಶಿಸಿದ ಬಳಿಕ ಬಂಧಿಸಲಾಗಿದ್ದು ಅವರು ಗೂಢಚರ್ಯೆ ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಲುವಾಗಿ ತಾನು ಬಂದಿದ್ದುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಆಪಾದಿಸಿತ್ತು. ಆದರೆ ಭಾರತ ಆಪಾದನೆಗಳನ್ನು ನಿರಾಕರಿಸಿತ್ತು. ಈದಿನ ಹೇಳಿಕೆಯೊಂದನ್ನು ನೀಡಿದ ಪಾಕಿಸ್ತಾನದ ವಿದೇಶಾಂಗ ಕಚೇರಿಯು  ’ಪಾಕಿಸ್ತಾನದಲ್ಲಿ ಹಿಂಸಾಚಾರ ಪ್ರಚೋದನೆ ಸಲುವಾಗಿ ತಾನು ಬಂದಿದ್ದುದಾಗಿ ಜಾಧವ್ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಭಾರತವು ನಿರಂತರವಾಗಿ ತಿರಸ್ಕರಿಸುತ್ತಲೇ ಬಂದಿದೆ ಎಂದು ದೂರಿತು.  ಜಾಧವ್ ಅವರನ್ನು ೨೦೧೬ರ ಮಾರ್ಚ್ ೩ರಂದು ಇರಾನಿನಿಂದ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪಾಕ್ ಅಧಿಕಾರಿಗಳು ಪ್ರತಿಪಾದಿಸಿದರೆ, ಭಾರತವು ಅವರನ್ನು ಇರಾನಿನಿಂದ ಅವರನ್ನು ಅಪಹರಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಪಾಕಿಸ್ತಾನಕ್ಕೆ ಒಯ್ದಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದರು. ಸ್ಥಳೀಯ ಯುವಕ ಅದಿಲ್ ಅಹ್ಮದ್ ದಾರ್ ಸ್ಪೋಟಕ ತುಂಬಿದ್ದ ಕಾರನ್ನು ಸಿಆರ್ ಪಿಎಫ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಸುವ ಮೂಲಕ ೪೦ ಮಂದಿ ಯೋಧರನ್ನು ಬಲಿಪಡೆದ ಕೃತ್ಯದ ಹೊಣೆಗಾರಿಕೆ ತನ್ನದೇ ಎಂದು ಪಾಕಿಸ್ತಾನ ಮೂಲದ ಜೈಶ್ --ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಸ್ವತಃ ಪ್ರತಿಪಾದಿಸಿದ್ದರೂ, ಭಾರತವು ಯಾವುದೇ ವಿಚಾರಣೆಯನ್ನೂ ನಡೆಸದೆ ಪಾಕಿಸ್ತಾನದ ವಿರುದ್ಧ ಬೊಟ್ಟು ಮಾಡುತ್ತಿದೆ ಎಂದು ಪಾಕಿಸ್ತಾನ ದೂರಿತು.  ಜೈಶ್--ಮೊಹಮ್ಮದ್ ಪುಲ್ವಾಮ ದಾಳಿಕೋರನಿಗೆ ಸಂಬಂಧಿಸಿಂತೆ ಬಿಡುಗಡೆ ಮಾಡಿದ್ದೆನ್ನಲಾದ ವಿಡಿಯೋದ ಸಾಚಾತನವನ್ನು ಪರೀಕ್ಷಿಸದೆಯೇ ಭಾರತ ತನ್ನ ವಿರುದ್ಧ ಆಪಾದನೆ ಮಾಡುತ್ತಿದೆ ಎಂದು ಪಾಕಿಸ್ತಾನ ಹೇಳಿತು. ಈ ಹಿಂದೆ ಕೂಡಾ ಇಂತಹ ಘಟನೆಗಳು ನಡೆದಾಗ ತನಿಖೆಗಳನ್ನು ನಡೆಸದೇ ಭಾರತ ತನ್ನ ವಿರುದ್ಧ ಆಪಾದನೆಗಳನ್ನು ಮಾಡಿದೆ. ಈಗ ಮತ್ತೆ ಭಾರತ ತನ್ನ ಹಳೆ ತಂತ್ರವನ್ನೇ ಅನುಸರಿಸುತ್ತಿದೆ ಎಂದು ಪಾಕ್ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿತು. ಭಾರತವು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ೨೦೧೭ರಿಂದ ಅದಿಲ್ ಅಹ್ಮದ್ ದಾರ್ನನ್ನು ಬಂಧಿಸಿದ ಹಾಗೂ ವಶದಲ್ಲಿ ಇಟ್ಟುಕೊಂಡ ಬಗೆಗಿನ ವರದಿಗಳ ಬಗ್ಗೆ ವಿವರಣೆ ಕೊಡಬೇಕು ಎಂದೂ ಹೇಳಿಕೆ ಆಗ್ರಹಿಸಿತು. ಆತ್ಮಹತ್ಯಾ ದಾಳಿ ನಡೆಸಿದ ಅದಿಲ್ ಅಹ್ಮದ್ ದಾರ್ ಮೂರು ವರ್ಷಗಳ ಹಿಂದೆ ಸೇನಾ ಪಡೆಗಳು ಥಳಿಸಿದ ಬಳಿಕ ಉಗ್ರಗಾಮಿ ಗುಂಪನ್ನು ಸೇರಿದ ಎಂಬುದಾಗಿ ಆತನ ಹೆತ್ತವರು ಸುದ್ದಿ ಸಂಸ್ಥೆಯೊಂದಕ್ಕೆ  ಹೇಳಿದ್ದುದನ್ನು ಪಾಕಿಸ್ತಾನ ಉಲ್ಲೇಖಿಸಿತು.

2019: ನವದೆಹಲಿ: ದೇಶದ ಮೊದಲ ಅತಿ ವೇಗದ ಇಂಜಿನ್ ರಹಿತ "ವಂದೇ ಭಾರತ ಎಕ್ಸಪ್ರೆಸ್" ರೈಲು ನವದೆಹಲಿ-ವಾರಾಣಸಿ ನಡುವೆ ತನ್ನ ಮೊದಲ ವಾಣಿಜ್ಯ ಪ್ರಯಾಣ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಅತಿ ವೇಗದ ೧೮ "ವಂದೆ ಭಾರತ ಎಕ್ಸಪ್ರೆಸ್" ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಯೋಗಾತ್ಮಕ ಪ್ರಯಾಣಕ್ಕೆ ಚಾಲನೆ ನೀಡಿದ್ದರು.  "ಮುಂದಿನ ಎರಡು ವಾರಗಳ ವರೆಗಿನ ಎಲ್ಲಾ ಟಿಕೆಟ್ ಗಳು ಈಗಾಗಲೇ ಮಾರಲ್ಪಟ್ಟಿವೆ. ವಂದೇ ಭಾರತ ಎಕ್ಸ್ಪ್ರೆಸ್ ರೈಲು ಭಾನುವಾರ ಬೆಳಗ್ಗೆ ದೆಹಲಿಯಿಂದ ವಾರಾಣಸಿಗೆ ತನ್ನ ಮೊದಲ ವಾಣಿಜ್ಯ ಪ್ರಯಾಣ ಬೆಳೆಸಿದೆ. ನಿಮ್ಮ ಟಿಕೆಟನ್ನು ಇಂದೇ ಖರೀದಿಸಿ" ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದರು.ವಾರಾಣಸಿಯಿಂದ ದೆಹಲಿಗೆ ತೆರಳುವಾಗ ಜಾನುವಾರುಗೆ ಡಿಕ್ಕಿ ಹೊಡೆದ ಪರಿಣಾಮ ರೈಲನ್ನು ಚಾಮರೋಲಾ ಬಳಿ ಕೆಲಹೊತ್ತು ತಡೆಯಲಾಗಿತ್ತು. ಅಡೆತಡೆಗಳನ್ನು ನಿವಾರಿಸಿದ ನಂತರ ರೈಲು ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿತ್ತು. ರೈಲು ರಾಜಧಾನಿಗೆ ತಲಪುತ್ತಿದ್ದಂತೆ ದುರಸ್ತಿ ಘಟಕದಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

2019: ನವದೆಹಲಿ: ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ರಾಜ್ಯದ ಹೊರಗೆ ಕಾಶ್ಮೀರಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂತಹ ಕಿರುಕುಳಗಳನ್ನು ಪ್ರತಿಭಟಿಸಲು ಶ್ರೀನಗರ ಮತ್ತು ಆಸುಪಾಸಿನ ಪ್ರದೇಶದಲ್ಲಿ ಹರತಾಳ ಆಚರಿಸಲಾಯಿತು. ಜಮ್ಮು ಮತ್ತು ಇತರ ರಾಜ್ಯಗಳಲ್ಲಿ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ಗುಂಪು ದಾಳಿಗಳನ್ನು ಪ್ರತಿಭಟಿಸಲು ಸಂಪೂರ್ಣ ಕಣಿವೆ ಬಂದ್ ಆಚರಿಸುವಂತೆ ವರ್ತಕ ಸಂಘಟನೆಗಳು ಕರೆ ಕೊಟ್ಟಿದ್ದವು. ಸಾಗಣೆದಾರರು ಬಂದ್ ಕರೆಗೆ ಬೆಂಬಲ ನೀಡಿದ್ದರು. ಬಂದ್ ಕರೆಯನ್ನು ಅನುಸರಿಸಿ ಅಧಿಕಾರಿಗಳು ಹಳೆ ನಗರದ ಹಲವೆಡೆಗಳನ್ನು ನಿರ್ಬಂಧಗಳನ್ನು ವಿಧಿಸಿದ್ದರು ಮತ್ತು ಹೈ ಸ್ಪೀಡ್ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಕಡಿತಗೊಳಿಸಿದ್ದರು.

2019: ಹೈದರಾಬಾದ್: ಹೈದರಾಬಾದ್ ನಗರದ ಸಿದ್ದಿಪೇಟದ ಶಾಪಿಂಗ್ ಮಾಲ್ ಒಂದರಲ್ಲಿ ತೀವ್ರ ನೂಕು ನುಗ್ಗಲು ಸಂಭವಿಸಿತು. ಮಾಲ್ನಲ್ಲಿ ೧೦ ರೂಪಾಯಿಗೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಹರಡಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಮಾಲ್ಗೆ ನುಗ್ಗಿದ್ದು ಇದಕ್ಕೆ ಕಾರಣ. ನಗರದ ಸಿಎಂಆರ್ ಶಾಪಿಂಗ್ ಮಾಲ್ ೧೦ ರೂಪಾಯಿಗೆ ಒಂದು ಸೀರೆ ಮಾರಾಟ ಮಾಡುತ್ತಿದೆ ಎಂಬ ಸುದ್ದಿ ಬಾಯಿಯಿಂದ ಬಾಯಿಗೆ ಹರಡಿ, ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಸೀರೆ ಖರೀದಿಸಲು ಮಾಲ್ ಕಡೆಗೆ ಧಾವಿಸಿಬಂದರು ಎಂದು ಪೊಲೀಸರು ತಿಳಿಸಿದರು. ಮಾಲ್ನಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಜನ ಸೇರಿದಾಗ, ನೂಕು ನುಗ್ಗಲು ಉಂಟಾಯಿತು. ನೂಕು ನುಗ್ಗಲಿನಲ್ಲಿ ಹಲವರು ಗಾಯಗೊಂಡರುಮಹಿಳೆಯೊಬ್ಬರು ನೂಕು ನುಗ್ಗಲಿನಲ್ಲಿ ತೊಲ ಚಿನ್ನದ ಸರ, ೬೦೦೦ ರೂಪಾಯಿ ನಗದು ಹಣ ಮತ್ತು ಡೆಬಿಟ್ ಕಾರ್ಡ್ ಕಳೆದುಕೊಂಡರು ಎಂದು ಮೂಲಗಳು ಹೇಳಿದವು. ಕಳ್ಳತನದ ಘಟನೆಯ ಬಳಿಕ ಸ್ಥಳೀಯ ಪೊಲೀಸರು ಸಿಎಂಆರ್ ಶಾಪಿಂಗ್ ಮಾಲ್ ಗೆ ಧಾವಿಸಿಬಂದರು. ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದರು ಎಂದು ವರದಿಗಳು ಹೇಳಿದವು


 2018: ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿರುವ ಭಗವಾನ್ಬಾಹುಬಲಿಗೆ  88 ನೇ ಮಹಾಮಸ್ತಕಾಭಿಷೇಕ  ಈದಿನ ಮಧ್ಯಾಹ್ನ ಜಲಾಭಿಷೇಕದೊಂದಿಗೆ ಆರಂಭವಾಯಿತು.  ಜೈನ ಮಹಾಮುನಿಗಳು, ಆಚಾರ್ಯರು ಮತ್ತು ಗಣ್ಯರು ಜಲಾಭಿಷೇಕ ಮಾಡುವ ಮೂಲಕ ವಿಧಿ ವಿಧಾನಗಳನ್ನು ಆರಂಭಿಸಿದರು. ದೇಶದ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತರು  ಭಗವಾನ್ಬಾಹುಬಲಿ ಕೀ ಜೈ ಎಂಬ ಘೋಷಗಳನ್ನು ಕೂಗಿದರುವರ್ಧಮಾನ ಸಾಗರ್ಮುನಿ ಅವರು ಮೊದಲ ಜಲಾಭಿಷೇಕವನ್ನು ಮಾಡಿದರುಜಲಾಭಿಷೇಕದ ತೀರ್ಥ ಪ್ರೋಕ್ಷಣೆಯಿಂದ ಭಕ್ತರು ಪುನೀತರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಾಭಿಷೇಕ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಲಿಯನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ  ಬಾಹುಬಲಿ  ಮೂರ್ತಿಗೆ  ಜಲಾಭಿಷೇಕ ನಡೆಸಿದರು.ಅವರೊಂದಿಗೆ ಸಚಿವ .ಮಂಜು, ಸಚಿವೆ ಉಮಾಶ್ರೀ ಅವರು ಪಾಲ್ಗೊಂಡಿದ್ದರು. ಸಿಎಂ ಜಲಾಭಿಷೇಕ ನಡೆಸುವ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ , ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಜೊತೆಗಿದ್ದರು.

2018: ಮುಂಬಯಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ಬಹುಕೋಟಿ ರೂಪಾಯಿ ವಂಚನೆ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಬ್ಯಾಂಕಿನ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲನಾಥ ಶೆಟ್ಟಿ ಸೇರಿದಂತೆ ಮೂವರನ್ನು ಬಂಧಿಸಿದರು. ಗೋಕುಲನಾಥ ಶೆಟ್ಟಿ ಅವರೊಂದಿಗೆ ಸಿಂಗಲ್ ವಿಂಡೋ ಆಪರೇಟರ್ ಆಗಿದ್ದ ಮನೋಜ್ ಖಾರತ್ ಮತ್ತು ಹೇಮಂತ್ ಭಟ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಮೂವರನ್ನು ಮುಂಬೈ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು. ಹಗರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ, ಅಮಿ ಮೋದಿ, ನಿಶಾಲ್ ಮೋದಿ ಸಂಬಂಧಿ ಮೆಹುಲ್ ಚೊಕ್ಸಿ ಮತು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಸಿಬ್ಬಂದಿ ವಿರುದ್ಧ್ಧ ೨೮೦ ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ೩೧ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ವಿದೇಶಕ್ಕೆ ಪರಾರಿಯಾಗಿರುವ ಹಿನ್ನಲೆಯಲ್ಲಿ ನೀರವ್ ಮೋದಿ, ಮೆಹುಲ್ ಚೊಕ್ಸಿ ಮತ್ತಿತರರ ಪಾಸ್ಪೋರ್ಟ್ಗಳನ್ನು ಫೆ.16ರ ಶುಕ್ರವಾರ ನಾಲ್ಕು ವಾರಗಳ ಅವಧಿಗೆ ಅಮಾನತು ಪಡಿಸಲಾಗಿತ್ತು. ಮೋದಿ ಹಾಗೂ ಚೋಕ್ಸಿ ಅವರು ಒಂದು ವಾರದೊಳಗೆ ಹಾಜರಾಗಿ ನೋಟಿಸಿಗೆ ಉತ್ತರಿಸುವಂತೆ ವಿದೇಶಾಂಗ ವ್ಯವಹಾರಗಳ ಇಲಾಖೆ ಆದೇಶಿಸಿತ್ತು. ಸುಮಾರು ೧೧,೪೦೦ ಕೋಟಿ ರೂಪಾಯಿ ವಂಚನೆ ಹಗರಣದ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಈಗಾಗಲೇ ದೇಶ ತೊರೆದಿರುವುದರಿಂದ ಅವರ ಪಾಸ್ಪೋರ್ಟ್ಗಳನ್ನು ಅಮಾನತು ಪಡಿಸುವಂತೆ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ  ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಕೇಂದ್ರ ಸರ್ಕಾರವನ್ನು ಕೋರಿದ್ದವು. ಹಗರಣ ಯುಪಿಎ ಅವಧಿಯದ್ದಲ್ಲ, ೨೦೧೭-೧೮ರ ಸಾಲಿನದ್ದು: ಮಧ್ಯೆ, ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ೧೧,೪೦೦ ಕೋಟಿ ರೂಪಾಯಿ ವಂಚನೆ ಮಾಡಿದ್ದು ೨೦೧೭-೧೮ರ ಅವಧಿಯಲ್ಲಿ ಎಂದು ಸಿಬಿಐ ಪ್ರಾಥಮಿಕ ತನಿಖಾ ವರದಿ ತಿಳಿಸಿತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಕೆಲವು ಕೇಂದ್ರ ಸಚಿವರು ಮತ್ತು ಕೆಲವು ಬಿಜೆಪಿ ಮುಖಂಡರು ಯುಪಿಎ ಅವಧಿಯಲ್ಲಿ ವಂಚನೆ ನಡೆದಿತ್ತು ಎಂದು ವಾದಿಸಿದ್ದರು. ೨೦೧೧ರಿಂದಲೇ ಅವ್ಯವಹಾರ ನಡೆದು ಬಂದಿತ್ತು ಎಂದು ಬಿಜೆಪಿ ಆರೋಪಿಸಿತ್ತು. ಒಂದು ವೇಳೆ ೨೦೧೧ರಿಂದಲೇ ಅವ್ಯವಹಾರ ನಡೆದಿದ್ದರೆ ಬ್ಯಾಂಕಿಗೆ ನಷ್ಟವಾದ ಮೊತ್ತ ೧೧,೪೦೦ ಕೋಟಿ ರೂಪಾಯಿಗಿಂತರಲೂ ಜಾಸ್ತಿಯಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೊಳಪಡಿಸಿದ  ಪಂಜಾಬ್ ನ್ಯಾಷನಲ್ ಬ್ಯಾಂಕಿನ ನಾಲ್ವರು ಉದ್ಯೋಗಿಗಳು ಕೂಡಾ ಅವಧಿಯಲ್ಲಿ ಅಲ್ಲಿ ಕೆಲಸ ಮಾಡಿದ್ದರು ಎಂದು ವರದಿ ತಿಳಿಸಿತು. ಬೆಚು. ಬಿ. ತಿವಾರಿ, ಸಂಜಯ್ ಕುಮಾರ್ ಪ್ರಸಾದ್, ಮೊಹಿಂದರ್ ಕುಮಾರ್ ಶರ್ಮಾ, ಮನೋಜ್ ಖರಾಟ್  ಮೊದಲಾದವರನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತು. ನಾರಿಮನ್ ಪಾಯಿಂಟ್ ಶಾಖೆಯ ಚೀಫ್ ಮ್ಯಾನೇಜರ್ ಆಗಿದ್ದ ಬೆಚು ತಿವಾರಿ ಫೆಬ್ರುವರಿ ೨೦೧೫ ರಿಂದ ಅಕ್ಟೋಬರ್ ೨೦೧೭ರ ವರೆಗೆ ಅಲ್ಲಿ ಕಾರ್ಯ ನಿರತರಾಗಿದ್ದರು.  ಮೇ  ೨೦೧೬ ರಿಂದ ಅಕ್ಟೋಬರ್  ೨೦೧೭ರ ವರೆಗೆ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಸಂಜಯ್  ಕುಮಾರ್ ಪ್ರಸಾದ್,  ನವಂಬರ್   ೨೦೧೫-೨೦೧೭ ರವರೆಗೆ ಕನ್ಕರೆಂಟ್  ಆಡಿಟರ್ ಆಗಿದ್ದ ಮೊಹಿಂದರ್ ಇಲ್ಲಿ ಕೆಲಸದಲ್ಲಿದ್ದರು. ಸಿಂಗಲ್ ವಿಂಡೊ ಆಪರೇಟರ್ ಆಗಿದ್ದ ಮನೋಜ್ ಖರಾತ್ ನವಂಬರ್ ೨೦೧೪ -ಡಿಸೆಂಬರ್ ೨೦೧೭ರ ವರೆಗೆ ಇಲ್ಲಿ ಕಾರ್ಯ ನಿರ್ವಹಿಸಿದ್ದರು. ವಂಚನೆ ನಡೆಸಲು ನೀರವ್ ಮೋದಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಗೋಕುಲನಾಥ ಶೆಟ್ಟಿ, ಮನೋಜ್ ಖರಾತ್ ಮೊದಲಾದವರ ಹೆಸರು ಸಿಬಿಐ ಎಫ್ ಆರ್ ನಲ್ಲಿ ಸೇರಿಸಲಾಗಿತ್ತು.  ನೀರವ್ ಮೋದಿಗೆ ದ್ವಿಪೌರತ್ವ: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ವಂಚನೆ ಹಗರಣದ ಕೇಂದ್ರ ವ್ಯಕ್ತಿಯಾಗಿರುವ ನೀರವ್ ಮೋದಿ ಅವರ ಪಾಸ್ ಪೋರ್ಟನ್ನು ಭಾರತ ಸರ್ಕಾರ ಅಮಾನತುಗೊಳಿಸಿದೆ, ಆದರೆ ಅವರು ದ್ವಿಪೌರತ್ವ ಹೊಂದಿರುವ ಸಾಧ್ಯತೆಗಳಿವೆ ಎಂದು ಇದೀಗ ಗುಮಾನಿ ಉಂಟಾಯಿತು. ನೀರವ್ ಮೋದಿ ಅವರು ದ್ವಿಪೌರತ್ವ ಹೊಂದಿದ್ದಾರೆ ಎಂಬುದು ಪಾಲನ್ ಪುರಿ ಜೈನ ಸಮುದಾಯದ ಹಲವರಿಗೆ ಗೊತ್ತಿದೆ ಎಂದು ಕೆಲವು ಮೂಲಗಳನ್ನು ಉಲ್ಲೇಖಿಸಿ ದಿ ಟ್ರಿಬ್ಯೂನ್ ವರದಿ ಮಾಡಿತು. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರ ಪಾಸ್ ಪೋರ್ಟ್ಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರದ್ದು ಪಡಿಸಿದೆ. ಜಾರಿ ನಿರ್ದೇಶನಾಲಯದ ಸಲಹೆ ಮೇರೆಗೆ ವಿದೇಶಾಂಗ ವ್ಯವಹಾರಗಳ ಪಾಸ್ ಪೋರ್ಟ್ ವಿತರಣಾ ಪ್ರಾಧಿಕಾರವು ನೀರವ್ ದೀಪಕ್ ಮೋದಿ ಮತ್ತು ಮೆಹುಲ್ ಚಿನುಭಾಯಿ ಚೋಕ್ಸಿ ಅವರ ಪಾಸ್ ಪೋರ್ಟ್ಗಳನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಾಲ್ಕು ವಾರಗಳ ಅವಧಿಗೆ ಅಮಾನತುಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು.
ನೀರವ್ ಮೋದಿ ಮತ್ತು ಸಹೋದರ ನಿಶಾಲ್ ಬೆಳೆದದ್ದು ಅಂತಾರಾಷ್ಟ್ರೀಯ ವಜ್ರ ವ್ಯವಹಾರ ಕೇಂದ್ರವಾದ ಬೆಲ್ಜಿಯಂನಲ್ಲಿ. ಗುಪ್ತಚರ ಇಲಾಖೆ ಮೂಲಗಳ ಪ್ರಕಾರ ನಿಶಾಲ್ ತನ್ನ ಭಾರತೀಯ ಪಾಸ್ ಪೋರ್ಟನ್ನು ಬಿಟ್ಟುಕೊಟ್ಟು ಬೆಲ್ಜಿಯಂ ಪೌರತ್ವವನ್ನು ಪಡೆದಿದ್ದಾರೆ. ನೀರವ್ ತಾವು ಭಾರತೀಯ ಪೌರ ಎಂದು ಘೋಷಿಸಿಕೊಂಡಿದ್ದರು. ಗುಜರಾತಿನವರಾದ ನೀರವ್ ಮೋದಿ ಫೈರ್ ಸ್ಟಾರ್ ಡೈಮಂಡ್ ಸಂಸ್ಥೆಯನ್ನು ಗ್ಲಿಟ್ಜಿ ಚಿಲ್ಲರೆ ವ್ಯವಹಾರ ಸಹಿತವಾಗಿ ದೆಹಲಿ, ಮುಂಬೈ, ನ್ಯೂಯಾರ್ಕ್, ಲಂಡನ್, ಹಾಂಕಾಂಗ್ ಮತ್ತು ಮಕಾವು ಸೇರಿದಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಸ್ಥಾಪಿಸಿದ್ದರು. ೨೦೧೫ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕಿನ ಮೆಡಿಸನ್ ಅವೆನ್ಯೂನಲ್ಲಿ ಮೋದಿ ಅವರ ಮೊದಲ ಮಳಿಗೆಯನ್ನು ಉದ್ಘಾಟಿಸಿದ್ದರು. ಚಿಲ್ಲರೆ ಮಾರುಕಟ್ಟೆ ವಿಸ್ತರಣೆ ಮೂಲಕ ನೀರವ್ ಮೋದಿ ೨೦೧೭ರ ಫೋರ್ಬ್ ಕೋಟ್ಯಧೀಶರ ಪಟ್ಟಿಯಲ್ಲಿನ ಯುವ ಭಾರತೀಯರಲ್ಲಿ ಒಬ್ಬ ಎಂಬುದಾಗಿ ಪರಿಗಣಿತರಾಗಿದ್ದರು. ನೀರವ್ ಮೋದಿ ತಲೆಗೆ ಶಿಕ್ಷಣ ಎಂದೂ ಹತ್ತಿರಲಿಲ್ಲ. ವಾರ್ಟನ್ ಬಿಸಿನೆಸ್ ಸ್ಕೂಲ್ ಸೇರಿದ್ದ ಅವರು ಅದನ್ನು ಅರ್ಧದಲ್ಲೇ ಬಿಟ್ಟು ತನ್ನ ಚಿಕ್ಕಪ್ಪನ ಕೈಕೆಳಗೆ ವಜ್ರದ ವ್ಯಾಪಾರದಲ್ಲಿ ತರಬೇತಿ ಪಡೆಯುವ ಸಲುವಾಗಿ ಭಾರತಕ್ಕೆ ಬಂದು ನೆಲೆಸಿದ್ದರು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇರಾನಿನ ಅಧ್ಯಕ್ಷ ಹಸನ್ ರೌಹಾನಿ ಅವರ ಜೊತೆಗೆ ಭದ್ರತೆ, ವ್ಯಾಪಾರ, ಇಂಧನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವಿಸ್ತರಣೆ ಬಗ್ಗೆ ವಿಸ್ತೃತ ಮಾತುಕತೆ ನಡೆಸಿದ್ದು, ಬಳಿಕ ಭಾರತ ಮತ್ತು ಇರಾನ್ ದುಪ್ಪಟ್ಟು ತೆರಿಗೆ ನಿವಾರಣೆ ಸೇರಿದಂತೆ ಒಪ್ಪಂದಗಳಿಗೆ ಸಹಿ ಮಾಡಿದವು. ಉಭಯ ನಾಯಕರು ಪ್ರಾದೇಶಿಕ ಪರಿಸ್ಥಿತಿ ಬಗೆಗೂ ತಮ್ಮ ವ್ಯಾಪಕ ಮಾತುಕತೆ ಸಂದರ್ಭದಲ್ಲಿ ಚರ್ಚಿಸಿದರು. ‘ಉಭಯ ನಾಯಕರು ವ್ಯಾಪಾರ, ಹೂಡಿಕೆ, ಇಂಧನ, ಸಂಪರ್ಕ, ರಕ್ಷಣೆ, ಭದ್ರತೆ ಮತ್ತು ಪ್ರಾದೇಶಿಕ ವಿಷಯಗಳಲ್ಲಿ ಪರಸ್ಪರ ಸಹಕರಿಸುವ ಬಗ್ಗೆ  ವ್ಯಾಪಕ ಹಾಗೂ ಫಲಪ್ರದ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಅವರು ಟ್ವೀಟ್ ಮಾಡಿದರು. ರೌಹಾನಿ ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ  ಮೋದಿ, ಇರಾನ್ ಅಧ್ಯಕ್ಷರ ಭೇಟಿಯು ಉಭಯ ರಾಷ್ಟ್ರಗಳು ಸಂಪರ್ಕ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸಲು ಬಯಸಿರುವುದನ್ನು ತೋರಿಸುತ್ತದೆ ಎಂದು ಹೇಳಿದರು. ಸಮಗ್ರ ಮಾತುಕತೆಗಳ ವಿವರ ನೀಡಿದ ಮೋದಿ, ತಾವು ಭಯೋತ್ಪಾದನೆ, ಮಾದಕ ದ್ರವ್ಯ ಕಳ್ಳಸಾಗಣೆ ಒಡ್ಡಿರುವ ಬೆದರಿಕೆ ಹಾಗೂ ಇತರ ಸವಾಲುಗಳ ಬಗ್ಗೆ ಮಾತುಕತೆ ನಡೆಸಿದುದಾಗಿ ಹೇಳಿದರು. ‘ಭಯೋತ್ಪಾದನೆ ಮತ್ತು ಉಗ್ರವಾದವನ್ನು ನಿಗ್ರಹಿಸಲು ನಾವು ದೃಢ ನಿರ್ಧಾರ ಮಾಡಿದ್ದೇವೆ ಎಂದು ರೌಹಾನಿ ಹೇಳಿದರು. ಪ್ರಾದೇಶಿಕ ಘರ್ಷಣೆಗಳನ್ನು ರಾಜತಾಂತಿಕತೆ ಮತ್ತು ರಾಜಕೀಯ ಉಪಕ್ರಮಗಳ ಮೂಲಕ ಇತ್ಯರ್ಥಗೊಳಿಸಬೇಕು ಎಂದೂ ಇರಾನ್ ನಾಯಕ ನುಡಿದರು. ವ್ಯೂಹಾತ್ಮಕವಾಗಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಛಬಹಾರ್ ಬಂದರು ಅಭಿವೃದ್ಧಿ ನಿಟ್ಟಿನಲ್ಲಿ ಇರಾನ್ ನಾಯಕ ಒದಗಿಸಿರುವ ನಾಯಕತ್ವದ ಮಾರ್ಗ ಪ್ರಶಂಸನೀಯ ಎಂದು ಹೇಳುವ ಮೂಲಕ ಮೋದಿ ಅವರು ರೌಹಾನಿ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದರು. ತೆರಿಗೆ ಒಪ್ಪಂದದ ಹೊರತಾಗಿ ಉಭಯ ರಾಷ್ಟ್ರಗಳು ಗಡೀಪಾರು ಒಪ್ಪಂದ ಮತ್ತು ವೀಸಾ ಪ್ರಕ್ರಿಯೆ ಸರಳೀಕರಣಕ್ಕೆ ಅನುಮೋದನೆ ನೀಡುವ ದಾಖಲೆಗಳನ್ನು ವಿನಿಮಯ ಮಾಡಿಕೊಂಡವು. ಇದಕ್ಕೆ ಮುನ್ನ ರೌಹಾನಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಂಭ್ರಮದ ಸ್ವಾಗತ ನೀಡಲಾಗಿತ್ತು. ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ರೌಹಾನಿ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಅವರ ಜೊತೆ ಚರ್ಚಿಸಿದ್ದರು.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ವಂಚನೆ ಹಗರಣಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಯುಪಿಎ ಸರ್ಕಾರವನ್ನು ದೂಷಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರ ಕುಟುಂಬವು ಹಗರಣದ ಮುಖ್ಯ ಆರೋಪಿ ನೀರವ್ ಮೋದಿ ಜೊತೆಗೆ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ೨೦೧೩ರಲ್ಲಿ ನೀರವ್ ಮೋದಿಯವರ ಕಂಪೆನಿ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂಬ ಪಕ್ಷದ ಆರೋಪವನ್ನು ಪುನರುಚ್ಚರಿಸಿದ ಸೀತಾರಾಮನ್, ಆರು ತಿಂಗಳ ಅವಧಿಗೆ ವ್ಯವಹಾರ ನಡೆಸದಂತೆ ಷೇರು ವಿನಿಮಯ ಕೇಂದ್ರವು ನಿಷೇಧಿಸಿದ್ದರ ಹೊರತಾಗಿಯೂ ನೀರವ್ ಮೋದಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು ಎಂದು ಹೇಳಿದರು.  ಫೈರ್ ಸ್ಟಾರ್ ಡೈಮಂಡ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನೀರವ್ ಮೋದಿ ಅವರ ಕಂಪೆನಿಗಳಲ್ಲಿ ಒಂದು. ಅವರು ಇದನ್ನು ಅದ್ವೈತ್ ಹೋಲ್ಡಿಂಗ್ಸ್ ನಿಂದ ಸ್ವಾಧೀನಕ್ಕೆ ತೆಗೆದು ಕೊಂಡಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರ ಪತ್ನಿ ಅನಿತಾ ಸಿಂಘ್ವಿ ಅವರು ೨೦೦೨ರಿಂದಲೇ ಅದ್ವೈತ್ ಹೋಲ್ಡಿಂಗ್ಸ್ ಶೇರುದಾರರಲ್ಲಿ ಒಬ್ಬರಾಗಿದ್ದರು ಎಂದು ನಿರ್ಮಲಾ ನುಡಿದರು. ‘ಅನಿತಾ ಸಿಂಘ್ವಿ ಮತ್ತು ಅವಿಷ್ಜರ್ ಸಿಂಘ್ವಿ ನಿರ್ದೇಶಕರಾಗಿದ್ದ ಅದ್ವೈತ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಆಸ್ತಿಯನ್ನು ಮುಂಬೈಯಲ್ಲಿನ ನೀರವ್ ಮೋದಿ ಅವರ ವಜ್ರಾಭರಣ ಕಂಪೆನಿಗೆ ಬಾಡಿಗೆಗೆ ನೀಡಲಾಗಿತ್ತು. ಉಭಯ ಕಂಪೆನಿಗಳೂ ಸಾಲ ವಹಿವಾಟು ಹೊಂದಿದ್ದವು. ಇವುಗಳ ನಡುವಣ ಸಂಪರ್ಕದ ಸ್ಪಷ್ಟ ಮಾಹಿತಿಯ ಹೊರತಾಗಿಯೂ ಕಾಂಗ್ರೆಸ್ ಪಕ್ಷವು ಬಿಜೆಪಿಯತ್ತ ಬೆರಳು ತೋರುವ ಧೈರ್ಯವನ್ನು ತೋರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಹಗರಣವು ೨೦೧೧ರಿಂದಲೇ ಶುರುವಾಗಿದ್ದು ಕಾಂಗ್ರೆಸ್ ಪಕ್ಷವೇ ಮೂಲ ತಪ್ಪನ್ನು ಮಾಡಿದೆ ಎಂದು ರಕ್ಷಣಾ ಸಚಿವೆ ದೂರಿದರು. ತಾವು ಭ್ರಷ್ಟಾಚಾರ ಎಸಗುವುದಿಲ್ಲ ಅಥವಾ ಅಥವಾ ಅದಕ್ಕೆ ಅನುಮತಿ ನೀಡುವುದಿಲ್ಲ ಎಂಬುದಾಗಿ ಪ್ರಧಾನಿ ಹೇಳಿದ್ದನ್ನು ನೆನಪಿಸಿದ ಸೀತಾರಾಮನ್, ಮೋದಿ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು. ಯುಪಿಎ ದಿನಗಳಲ್ಲೇ ನೀರವ್ ಮೋದಿ ಅವರಿಗೆ ೯೦ ದಿನಗಳ ಅವಧಿಯ ವ್ಯವಹಾರ ಸಂಬಂಧಿತ ಪತ್ರಗಳನ್ನು ನೀಡಲಾಗಿತ್ತು. ಬಳಿಕ ಅದು ಕಾಲಕಾಲಕ್ಕೆ ಅದು ನವೀಕರಣಗೊಳ್ಳುತ್ತಾ ಮುಂದುವರೆಯಿತು. ಹೀಗಾಗಿ ವಂಚನೆ ಮಾಮೂಲಿ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಬೆಳಕಿಗೆ ಬರಲಿಲ್ಲ ಎಂದು ಅವರು ವಿವರಿಸಿದರು.
2018: ಥೇಣಿ(ಚೆನ್ನೈ): ತಮಿಳುನಾಡು ಉಪಮುಖ್ಯಮಂತ್ರಿ .ಪನ್ನೀರ ಸೆಲ್ವಂ ಅವರು ತಾವು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಬಣದ ಜತೆ ಕೈಜೋಡಿಸಿದೆ ಎಂದು ಹೇಳಿದರು.  ಚೆನ್ನೈ ಥೇಣಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಸೆಲ್ವಂ, ‘ಪಕ್ಷದ ಉಳಿವಿಗಾಗಿ ನೀವು (ಪನ್ನೀರಸೆಲ್ವಂ) ಒಂದಾಗಬೇಕು ಎಂದು ಅವರು (ನರೇಂದ್ರ ಮೋದಿ) ನನಗೆ ಸಲಹೆ ನೀಡಿದ್ದರುಎಂದು ನುಡಿದರು. ಆದರೆ ತಾವು ಮೋದಿ ಅವರೊಂದಿಗೆ ಯಾವಾಗ ಮಾತುಕತೆ ನಡೆಸಿದ್ದರು ಎಂಬುದನ್ನು ಅವರು ಹೇಳಲಿಲ್ಲ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಮರಣದ ಬಳಿಕ ಎಐಡಿಎಂಕೆ ಪಕ್ಷದಲ್ಲಿ ಒಡಕು ಉಂಟಾಗಿತ್ತು. ಜಯಲಲಿತಾ ಸಾವಿನ ಬಳಿಕಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕಾಗಿ ದುಡಿಯಲು ತೀರ್ಮಾನಿಸಿರುವುದಾಗಿ ಮೋದಿ ಅವರಿಗೆ ತಿಳಿಸಿದ್ದೆ. ಪ್ರತಿಯಾಗಿ ಅವರು ಪಳನಿಸ್ವಾಮಿ ಕ್ಯಾಬಿನೆಟ್ನಲ್ಲಿ ಮಂತ್ರಿ ಪದವಿಯಲ್ಲಿ ಮುಂದುವರಿಯುವಂತೆ ಬಯಸಿ ಸಲಹೆ ನೀಡಿದ್ದರುಎಂದು ನೆನಪಿಸಿಕೊಂಡರು. ಅದರಂತೆ ಪಳನಿಸ್ವಾಮಿ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಬಳಿಕ ವಿಚಾರವನ್ನು ಪಳನಿಸ್ವಾಮಿ ಸರ್ಕಾರದಲ್ಲಿದ್ದ ಇಬ್ಬರು ಸಚಿವರಿಗೆ ತಿಳಿಸಿದೆ. ಅದರಿಂದಲೇ ನಾನು ಇಂದು ಮಂತ್ರಿ ಸ್ಥಾನದಲ್ಲಿರುವುದು. ಮಂತ್ರಿಯಾಗಿರಬೇಕು ಎನ್ನುವ ಯಾವ ಬಯಕೆಯೂ ನನ್ನಲ್ಲಿಲ್ಲ. ಅಮ್ಮ(ಜಯಲಲಿತಾ) ನನ್ನನ್ನು ನಾಲ್ಕು ಬಾರಿ ಶಾಸಕ, ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಗೌರವವೇ ನನಗೆ ಸಾಕುಎಂದು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪನ್ನೀರ ಸೆಲ್ವ ನುಡಿದರು.


2017: ನವದೆಹಲಿ: ಭಾರತ ಕ್ರಿಕೆಟ್ತಂಡದ ನಾಯಕ ವಿರಾಟ್ಕೊಹ್ಲಿ, ಅತಿಹೆಚ್ಚು ಬ್ರಾಂಡ್
ಮೌಲ್ಯ ಹೊಂದಿರುವ ಭಾರತೀಯ ಸೆಲೆಬ್ರಿಟಿ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. ಸದ್ಯ ಬಾಲಿವುಡ್ನಟ ಶಾರುಖ್ಖಾನ್ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಅವರ ನಂತರದ ಸ್ಥಾನದಲ್ಲಿರುವ ವಿರಾಟ್ಬ್ರಾಂಡ್ಮೌಲ್ಯ ಭಾರತ ಕ್ರಿಕೆಟ್ ಮೂರೂ ಮಾದರಿಯ ತಂಡಕ್ಕೆ ನಾಯಕರಾದ ಬಳಿಕ ಏರಿಕೆ ಕಂಡಿದೆ.  ‘2016 ಸೆಲೆಬ್ರಿಟಿ ಬ್ರಾಂಡ್‌’ ವರದಿಯ ಪ್ರಕಾರ ಕೊಹ್ಲಿ ರೂ. 9.2 ಕೋಟಿ ಬ್ರಾಂಡ್ಮೌಲ್ಯ ಹೊಂದಿದ್ದು, ಮೊದಲ ಸ್ಥಾನದಲ್ಲಿರುವ ಶಾರುಖ್ರೂ.13ಕೋಟಿ ಬ್ರಾಂಡ್ಮೌಲ್ಯ ಹೊಂದಿದ್ದಾರೆ. ವಿರಾಟ್ಕೊಹ್ಲಿ ಈಗಿರುವ ತಮ್ಮ ಫಾರ್ಮ್ನಲ್ಲಿಯೇ ಮುಂದುವರಿದರೆ ಶೀಘ್ರದಲ್ಲಿಯೇ ಶಾರುಖ್ಖಾನ್ರವರನ್ನು ಹಿಂದಿಕ್ಕಲಿದ್ದಾರೆ ಎಂದು ಮಾರುಕಟ್ಟೆ ಪಂಡಿತರು ಲೆಕ್ಕಾಚಾರ ಮಾಡಿದರು. ದೋನಿ ಟೆಸ್ಟ್ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ವಿರಾಟ್ಭಾರತೀಯ ಕ್ರಿಕೆಟ್ರಂಗದಲ್ಲಿ ತಮ್ಮ ಛಾಪನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಜೊತೆಗೆ 2016ರಲ್ಲಿ 13 ವಿವಿಧ ಕಂಪೆನಿಗಳೊಡನೆ ಒಪ್ಪಂದ ಮಾಡಿಕೊಂಡು ಬ್ರಾಂಡ್ಮೊತ್ತವನ್ನು ರೂ.100ಕೋಟಿಗೆ ಹಿಗ್ಗಿಸಿಕೊಂಡಿದ್ದರು. ಕೊಹ್ಲಿ ಬಳಿಯಿರುವ ಬ್ರಾಂಡ್ಗಳುಪೆಪ್ಸಿ, ಆಡಿ, ವಿಕ್ಸ್‌, ಬೂಸ್ಟ್‌, ಟಿಸ್ಸೂಟ್‌, ಹರ್ಬಲ್ಲೈಫ್‌, ಕೋಲ್ಗೇಟ್‌, ಯುಎಸ್ಎಲ್‌, ಟಿವಿಎಸ್‌, ಸ್ಮಾಷ್‌, ನಿತೇಶ್ಎಸ್ಟೇಟ್ಸ್‌.
2017: ಕೊಲಂಬೊ: ಸೂಪರ್ ಸಿಕ್ಸ್ಹಂತದ ಏಕದಿನ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು 9
ವಿಕೆಟ್ಗಳ ಅಂತರದಲ್ಲಿ ಮಣಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವುವಿಶ್ವಕಪ್-2017’ಕ್ಕೆ ಅರ್ಹತೆ ಪಡೆಯಿತು. ಕೊಲಂಬೊದಲ್ಲಿ ನಡೆದ  ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್ಸಿಕ್ಸ್ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ಆಯ್ಕೆ ಮಾಡಿಕೊಂಡಿತು. ಉತ್ತಮ ಫೀಲ್ಡಿಂಗ್ನಡೆಸಿದ ಭಾರತ ತಂಡವು ಬಾಂಗ್ಲಾ ಆಟಗಾರ್ತಿಯರಿಗೆ ಹೆಚ್ಚು ರನ್ಗಳಿಸಲು ಅವಕಾಶ ನೀಡಲಿಲ್ಲ. ಬಾಂಗ್ಲಾ 50 ಓವರ್ಗಳಲ್ಲಿ 155 ರನ್ಗಳಿಸಲಷ್ಟೇ ಶಕ್ತವಾಯಿತು. 155 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ 33. 3 ಓವರ್ ಗಳಲ್ಲಿ 1 ವಿಕೆಟ್ಕಳೆದುಕೊಂಡು 158 ರನ್ ಗಳಿಸಿತು. ಮೋನಾ ಮತ್ತು ಮಿಥಾಲಿ ರಾಜ್ಜೋಡಿ 22 ಬೌಂಡರಿ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2017 ಐಸಿಸಿ ವಿಶ್ವಕಪ್ಟೂರ್ನಿಗೆ ಅರ್ಹತೆ ಪಡೆದಿವೆ.
2017: ನವದೆಹಲಿ: ನೋಟು ಮುದ್ರಣ ಘಟಕಗಳಿಂದ ನಿತ್ಯ ರೂ.500 ಮುಖಬೆಲೆಯ 2.2 ಕೋಟಿ
ನೋಟುಗಳು ಮುದ್ರಣಗೊಂಡು ರವಾನೆಯಾಗುತ್ತಿವೆ. ರೂ. 500 ಮುಖಬೆಲೆಯ ರೂ.1 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳನ್ನು ಈಗಾಗಲೇ ಮುದ್ರಿಸಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿತು. 9 ಮುದ್ರಣಾ ಘಟಕಗಳನ್ನು ಹೊಂದಿರುವ ಎಸ್ಪಿಎಂಸಿಐಎಲ್ 11ನೇ ಸಂಸ್ಥಾಪನನಾ ದಿನದ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳ ಇಲಖೆಯ ಜಂಟಿ ಕಾರ್ಯದರ್ಶಿ ಪ್ರವೀಣ್ಗರ್ಗ್ಮಾತನಾಡಿದರು. ನವೆಂಬರ್‌ 8 ರಂದು ನೋಟು ರದ್ಧತಿಯ ಸಮಯದಲ್ಲಿ ಆರ್ಬಿಐ ಬಳಿ ರೂ.2000 ಮುಖಬೆಲೆಯ ರೂ.4.95 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳ ಸಂಗ್ರಹವಿತ್ತು ಎಂಬುದು ಆರ್ಟಿಐ  ಪ್ರಶ್ನೆ ಮೂಲಕ ಬಹಿರಂಗ ಗೊಂಡಿತ್ತು. ಆದರೆ, ರೂ.500 ಹೊಸ ನೋಟುಗಳ ಸಂಗ್ರಹವಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ಪ್ರಕ್ರಿಯೆ ಘೋಷಿಸುವ ದಿನ ದೇಶದಲ್ಲಿ ರೂ.500 ಮುಖಬೆಲೆಯ 1716.5 ಕೋಟಿ ಹಾಗೂ ರೂ.1000 ಮುಖಬೆಲೆಯ 685.8 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ನೋಟುಗಳ ಒಟ್ಟು ಮೊತ್ತ ರೂ.15.44 ಲಕ್ಷ ಕೋಟಿ (ರೂ.500 ರೂ.8.58 ಲಕ್ಷ ಕೋಟಿ ಹಾಗೂ 1000 ರೂಪಾಯಿಯ ರೂ.6.86 ಲಕ್ಷ ).
2017: ಮೆಲ್ಬೋರ್ನ್‌: ಪೆಸಿಫಿಕ್ಮಹಾಸಾಗರದ ಅಡಿಯಲ್ಲಿ ಭಾರತ ಉಪ ಖಂಡದಷ್ಟು ದೊಡ್ಡದಾದ ನಾಡು ಹುದಗಿರುವುದು ಬೆಳಕಿಗೆ ಬಂದಿತು. ‘ಜೀಲ್ಯಾಂಡಿಯಾಎಂದು ಹೆಸರಿಸಿರುವ ನಾಡನ್ನು ಹೊಸ ಖಂಡವೆಂದು ಪರಿಗಣಿಸುವಂತೆ ಬಿಡುಗಡೆಯಾಗಿರುವ ಹೊಸ ಅಧ್ಯಯನದಲ್ಲಿ ಪ್ರಸ್ತಾಪಿಸಲಾಯಿತು. ಪೆಸಿಫಿಕ್ಸಾಗರದ ನೈಋತ್ಯ ಭಾಗದಲ್ಲಿ 49 ಲಕ್ಷ ಕಿ.ಮೀ. ವರೆಗೂ ಭೂಖಂಡ ವ್ಯಾಪಿಸಿದೆ. ಆಸ್ಟ್ರೇಲಿಯಾದಿಂದ ಪ್ರತ್ಯೇಕಗೊಂಡಿರುವ ಭೂಭಾಗ ಸಾಗರದಲ್ಲಿ ಹುದುಗಿದ್ದು, ಅಧಿಕ ಸಿಲಿಕಾಯುಕ್ತ ಬಂಡೆಕಲ್ಲುಗಳಿಂದ ಕೂಡಿದೆ. ಸಂಶೋಧಕರು ಇದನ್ನು ಜೀಲ್ಯಾಂಡಿಯಾ ಎಂದು ಕರೆದಿದ್ದಾರೆ. ಭೂಖಂಡದ ಸರಿತ, ಭೂಭಾಗ ತೆಳುವಾಗುವುದು ಹಾಗೂ ಬೇರ್ಪಡುವ ಪ್ರಕ್ರಿಯೆಯಿಂದಾಗಿ ಸಾಗರದಲ್ಲಿ ಹುದುಗಿರುವ ಭೂಭಾಗದ ಕುರಿತು ಆಸ್ಟ್ರೇಲಿಯಾದ ಸಿಡ್ನಿ ವಿವಿ, ನ್ಯೂಜಿಲ್ಯಾಂಡ್ ವಿಕ್ಟೋರಿಯಾ ವಿವಿಯ ಸಂಶೋಧಕರು ಅಧ್ಯಯನ ನಡೆಸಿದರು. ಪ್ರಸ್ತುತ ಜೀಲ್ಯಾಂಡಿಯಾದ ಶೇ.94ರಷ್ಟು ಭಾಗ ಸಾಗರದೊಳಗಿದೆ.
2017: ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಮುಂದುವರಿದವು.  ಪನ್ನೀರ್ಸೆಲ್ವಂ ಬಣವು ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿತು ಎಐಎಡಿಎಂಕೆ ಪಕ್ಷದ ಅಧ್ಯಕ್ಷ . ಮಧುಸೂದನನ್ಅವರು ಶಶಿಕಲಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದರು. ಶಶಿಕಲಾ ಅವರ ಜತೆಗೆ ಅವರ ಸಂಬಂಧಿಗಳಾದ ಟಿ.ಟಿ.ವಿ. ದಿನಕರನ್ಮತ್ತು ಎಸ್‌. ವೆಂಕಟೇಶ್ಅವರನ್ನೂ ಪಕ್ಷದಿಂದ ಉಚ್ಛಾಟಿಸಲಾಯಿತು.
2017: ನವದೆಹಲಿ : ಐವರು  ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ
ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಸುಪ್ರೀಂಕೋರ್ಟಿನ ಲ್ಲಿರುವ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿತುನ್ಯಾಯಮೂರ್ತಿಗಳಾದ ಸುಸಂಜಯ್ಕಿಷನ್ಕೌಲ್‌, ನವೀನ್ಸಿನ್ಹಾ, ಮೋಹನ್ಎಂ ಶಾಂತನಗೌಡರ್‌, ದೀಪಕ್ಗುಪ್ತಾ ಮತ್ತು ಎಸ್ಅಬ್ದುಲ್ನಝೀರ್‌  ಅವರಿಗೆ ಮುಖ್ಯ ನ್ಯಾಯಮೂರ್ತಿ ಜೆ ಎಸ್ಖೇಹರ್‌  ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ನಲ್ಲಿ  ಪ್ರಸ್ತುತ ಗರಿಷ್ಠ ನ್ಯಾಯಮೂರ್ತಿಗಳ ಸಂಖ್ಯೆ 31 ಇದೆ. ಇನ್ನು ಮೂರು ನ್ಯಾಯಮೂರ್ತಿ ಸ್ಥಾನಗಳು ಖಾಲಿ ಉಳಿದಿವೆ. ಸುಪ್ರೀಂ ಕೋರ್ಟ್ನಲ್ಲಿನ ನ್ಯಾಯಮೂರ್ತಿಗಳ ಭರ್ತಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೆಲ ದಿನಗಳ ಹಿಂದಷ್ಟೆ ಅಂಕಿತ ಹಾಕಿದ್ದರು.
2017: ಕರಾಚಿ : ಸಿಂಧ್ಪ್ರಾಂತ್ಯದ ಸೆಹ್ವಾನ್ಪಟ್ಟಣದಲ್ಲಿನ ಸೂಫಿ ದರ್ಗಾದ ಲಾಲ್ಷಹಬಾಜ್ಖಲಂದರ್ದೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 140ಕ್ಕೆ ಏರಿಕೆಯಾಗಿ, 200ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿತು. ಧಮಾಲ್‌’ ನೃತ್ಯ ಮತ್ತು ಪ್ರಾರ್ಥನೆ ಸಲುವಾಗಿ ನೂರಾರು ಭಕ್ತರು ಮಂದಿರದ ಆವರಣದಲ್ಲಿ ನೆರೆದಿದ್ದ ಸಂದರ್ಭದಲ್ಲಿ  ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಮಂದಿರದಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟ ಸ್ಥಳದಲ್ಲಿ ಆತ್ಮಾಹುತಿ ದಾಳಿ ನಡೆಯಿತು. ಮುಖ್ಯದ್ವಾರದಿಂದ ಒಳ ಬಂದ ದಾಳಿಕೋರ ಮೊದಲು ನೃತ್ಯ ನಡೆಯುತ್ತಿದ್ದ ಸ್ಥಳದತ್ತ ಗ್ರೆನೇಡ್ಎಸೆದ. ಆದರೆ ಅದು ಸ್ಫೋಟಗೊಳ್ಳದ ಬಳಿಕ ತನ್ನನ್ನು ತಾನೇ ಸ್ಫೋಟಿಸಿಕೊಂಡ ಎಂದು  ಸ್ಥಳೀಯರು ಹೇಳಿದರು.
2009: ಬಾಗಲಕೋಟೆ- ಯಶವಂತಪುರ ಬಸವ ಎಕ್ಸ್‌ಪ್ರೆಸ್ ರೈಲನ್ನು ಗುಲ್ಬರ್ಗ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ನಾಗಣಸೂರ ಬಳಿ ತಡೆದು ದರೋಡೆ ಮಾಡಿದ ಘಟನೆ ಸಂಭವಿಸಿತು. ನಾಗಣಸೂರು ಬಳಿ ರೈಲು 'ಕ್ರಾಸಿಂಗ್' ಮಾಡುತ್ತಿದ್ದಾಗ ಸಾವಕಾಶವಾಗಿ ಚಲಿಸುತಿತ್ತು. ಆಗ ಎಂಟು ಜನರಿದ್ದ ಗುಂಪೊಂದು ಹಠಾತ್ತನೇ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿತು. ಹೀಗಾಗಿ ರೈಲನ್ನು ನಿಲ್ಲಿಸಲಾಯಿತು. ದರೋಡೆಕೋರರ ತಂಡ 4 ಬೋಗಿಯೊಳಗೆ ನುಗ್ಗಿ ಕೆಲವರಿಂದ ಚಿನ್ನದ ಸರ, ಸೂಟ್‌ ಕೇಸ್ ಮತ್ತಿತರ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಯಿತು.

2009: ಬೆಂಗಳೂರು, ಅಹ್ಮದಾಬಾದ್ ಮತ್ತು ದೆಹಲಿಗಳಲ್ಲಿ (ಬ್ಯಾಡ್ ಕಾರ್ಯಾಚರಣೆ) ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಸಹಿತ ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ದುಷ್ಕೃತ್ಯಗಳಲ್ಲಿ ಶಾಮೀಲಾಗಿದ್ದ ಆರೋಪದ ಮೇಲೆ ಬಂಧಿತರಾದ 21 ಉಗ್ರರ ವಿರುದ್ಧ ಮುಂಬೈ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು. 1,800 ಪುಟಗಳ ಈ ಆರೋಪಪಟ್ಟಿಯನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆಯ (ಮೊಕಾ) ವಿಶೇಷ ನ್ಯಾಯಾಧೀಶ ವೈ. ಡಿ. ಶಿಂಧೆ ಅವರ ಮುಂದೆ ಸಲ್ಲಿಸಲಾಯಿತು.

2009: ನವದೆಹಲಿಯ ಅಖಿಲ ಭಾರತ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಎದೆನೋವಿಗೆ ಚಿಕಿತ್ಸೆ ಪಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಣಮುಖವಾಗಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು. ವಾಜಪೇಯಿ ಅವರು ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ವ್ಯವಸ್ಥೆ ನಿಲ್ಲಿಸಲಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಸಂಪತ್ ಕುಮಾರ್ ತಿಳಿಸಿದರು. ಎಂಬತ್ನಾಲ್ಕು ವರ್ಷದ ವಾಜಪೇಯಿ ಅವರು ಫೆಬ್ರುವರಿ 3ರಂದು ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.

2009: ಕೇಂದ್ರ ಸಾಹಿತ್ಯ ಅಕಾಡೆಮಿಯ 2008ರ ಸಾಲಿನ ಅನುವಾದ ಬಹುಮಾನಕ್ಕಾಗಿ ಆಯ್ಕೆಯಾದ ವಿವಿಧ ಭಾಷೆಗಳ 16 ಪುಸ್ತಕಗಳ ಪೈಕಿ ಕನ್ನಡಕ್ಕೆ ಸಂಬಂಧಿಸಿದ ಎರಡು ಕೃತಿಗಳು ಗೌರವಕ್ಕೆ ಪಾತ್ರವಾದವು. ಮಣಿಪುರಿ ಭಾಷೆಗೆ ಅನುವಾದಗೊಂಡ ಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ' ಹಾಗೂ ಕನ್ನಡಕ್ಕೆ ಅನುವಾದಗೊಂಡಿರುವ ಅಮೃತಾ ಪ್ರೀತಮ್ ಅವರ ಆತ್ಮಕಥೆ 'ರಸೀದಿ ಟಿಕೆಟು' ಎಂಬ ಕೃತಿಗಳಿಗೆ ಬಹುಮಾನ ಬಂದಿತು. 'ರಸೀದಿ ಟಿಕೆಟ್' ಅನ್ನು ಪಂಜಾಬಿಯಿಂದ ಕನ್ನಡಕ್ಕೆ ಹಸನ್ ನಯೀಮ್ ಸುರಕೊಡ ಹಾಗೂ 'ಸಂಸ್ಕಾರ'ವನ್ನು ಕನ್ನಡದಿಂದ ಮಣಿಪುರಿಗೆ ವೈ.ಇಬೊಂಚ ಸಿಂಗ್ ಅನುವಾದಿಸಿದ್ದರು. ಡಾ.ಸರಜೂ ಕಾಟ್ಕರ್, ಡಾ.ದಾಮೋದರ ಶೆಟ್ಟಿ, ಸ್ನೇಹಲತಾ ರೋಹಿಡೆಕರ್ ಅವರು ಕನ್ನಡ ತೀರ್ಪುಗಾರರ ಸಮಿತಿ ಸದಸ್ಯರಾಗಿದ್ದರು..

2008: ಆದಿಚುಂಚನಗಿರಿ ಕ್ಷೇತ್ರದಲ್ಲಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ದ್ರಾವಿಡ ಶೈಲಿಯ ಅಪೂರ್ವ ಕಾಲಭೈರವೇಶ್ವರ ಸ್ವಾಮಿಯ ಬೃಹತ್ ದೇವಾಲಯ ಲೋಕಾರ್ಪಣೆಗೊಂಡಿತು. ಕಾಲಭೈರವ ಸ್ವಾಮಿಯೊಂದಿಗೆ ಸ್ಥಂಭಾಂಬಿಕೆ, ವಿನಾಯಕ, ಸುಬ್ರಹ್ಮಣ್ಯ, ನಾಗಲಿಂಗೇಶ್ವರ ಸ್ವಾಮಿಯ ಪರಿವಾರ ಸಮೇತ ನೂತನ ವಿಮಾನ ಗೋಪುರ ಅಷ್ಟಬಂಧನ ಮಹಾ ಕುಂಭಾಭಿಷೇಕ ಮಾಡಲಾಯಿತು. ದೇವಾಲಯ ನಿರ್ಮಾಣದ ಮೂಲಕ ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಹು ವರ್ಷಗಳ ಕನಸು ನನಸಾಯಿತು. ಹದಿನಾಲ್ಕು ವರ್ಷಗಳ ಹಿಂದೆ ಆರಂಭವಾದ ದೇವಾಲಯ ನಿರ್ಮಾಣ ಕಾರ್ಯ ರೂ. 85 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿತು. ಆಧುನಿಕ ಕಾಲದಲ್ಲಿ ಐತಿಹಾಸಿಕ ದ್ರಾವಿಡ ಶೈಲಿಯಲ್ಲಿ ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ದೇವಾಲಯ ನಿರ್ಮಾಣದ ಸಾಧ್ಯತೆಗೆ ಈ ಭವ್ಯ ದೇಗುಲ ನಿದರ್ಶನ. ದಕ್ಷಿಣ ಭಾರತದಲ್ಲಿಯೇ ಭೈರವ ಪ್ರಧಾನವಾದ ಬೃಹತ್ ದೇವಾಲಯವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಪುರಾಣ ಪ್ರಸಿದ್ಧವೂ, ಅವೈದಿಕ ಪಂಥವಾದ ನಾಥ ಪರಂಪರೆಯ ಕೇಂದ್ರವೂ ಆದ ಆದಿಚುಂಚನಗಿರಿ ಕ್ಷೇತ್ರ ಇದರೊಂದಿಗೆ ಇನ್ನು ಮುಂದೆ ಶೈವ ಕ್ಷೇತ್ರವೂ ಆಗಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಮುತ್ತಯ್ಯ ಸ್ಥಪತಿ ಅವರ ವಿನ್ಯಾಸ, ನಿರ್ದೇಶನದಲ್ಲಿ ದೇಗುಲವನ್ನು ನಿರ್ಮಿಸಲಾಗಿದೆ.

2008: ಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಶ್ರೀಪತಿ ಪಾಡಿಗಾರ (78) ಅವರು ಹುಬ್ಬಳ್ಳಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವಿವಾಹಿತರಾಗಿದ್ದ ಇವರು ತಮ್ಮ ಜೀವನನ್ನೇ ಸಂಗೀತಕ್ಕಾಗಿ ಮುಡುಪಾಗಿಟ್ಟಿದ್ದರು. ಹುಬ್ಬಳ್ಳಿಯಲ್ಲಿ ಜನಿಸಿದ್ದ ಶ್ರೀಪತಿ ಅವರು ದಿ.ವೆಂಕಟರಾವ್ ರಾಮದುರ್ಗ ಅವರಿಂದ ಆರಂಭಿಕ ಸಂಗೀತ ಶಿಕ್ಷಣ ಪಡೆದು, ಪಂ.ಭೀಮಸೇನ ಜೋಶಿ ಅವರ ಶಿಷ್ಯರಾಗಿ ಉನ್ನತ ಶಿಕ್ಷಣ ಪಡೆದರು. ಶಾಸ್ತ್ರೀಯ ಸಂಗೀತದೊಂದಿಗೆ ದಾಸವಾಣಿ, ಸಂತವಾಣಿಯನ್ನೂ ಕರಗತ ಮಾಡಿಕೊಂಡಿದ್ದರು. 1980ರಲ್ಲಿ ಮಣಿಪಾಲದ ಎಂ.ಜಿ.ಎಂ. ಕಾಲೇಜಿನಲ್ಲಿ ನಡೆದ ವಾದಿರಾಜ ಕನಕದಾಸ ಮಹೋತ್ಸವದಲ್ಲಿ ಇವರಿಗೆ `ರಾಗರಾಗಿಣೀ ರಸಲೋಲ' ಎಂಬ ಬಿರುದು ನೀಡಿ ಸನ್ಮಾನಿಸಲಾಗಿತ್ತು. ಶ್ರೀಪತಿಯವರು ಹುಬ್ಬಳ್ಳಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕಿರಾನಾ ಘರಾಣಾದ ಮೂಲಪುರುಷ ಅಬ್ದುಲ್ ಕರೀಮಖಾನರ ಪುಣ್ಯ ತಿಥಿಯನ್ನು ಸ್ವಂತ ಖರ್ಚಿನಿಂದಲೇ ಪ್ರತಿ ವರ್ಷ ನಡೆಸಿ ಸಂಗೀತ ದಿಗ್ಗಜರನ್ನು ಆಹ್ವಾನಿಸಿ ತಾವೂ ಅಹೋರಾತ್ರಿ ಸಂಗೀತ ಕಛೇರಿಯಲ್ಲಿ ಭಾಗವಹಿಸುತ್ತಿದ್ದರು. ಆಸಕ್ತರಿಗೆ ಉಚಿತ ಸಂಗೀತ ಶಿಕ್ಷಣ ನೀಡಿ ಹಿಂದೂಸ್ಥಾನಿ ಸಂಗೀತದ ಬೇರುಗಳು ಈ ಭಾಗದಲ್ಲಿ ಮತ್ತಷ್ಟು ಹಬ್ಬುವಂತೆ ಮಾಡಿದ್ದರು. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಇವರಿಗೆ `ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಹಾಗೂ ಉಡುಪಿ ಶ್ರೀಕೃಷ್ಣಮಠದವರು `ಆಸ್ಥಾನ ವಿದ್ವಾನ್' ಎಂದು ಘೋಷಿಸಿ `ಗಾನ ಗಂಧರ್ವ' ಬಿರುದು ನೀಡಿ ಗೌರವಿಸಿದ್ದರು.

2008: ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಅವರು ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿದರು. ಒಂದೇ ದೇಶದ ಎದುರು 73 `ಬಲಿ' ಪಡೆಯುವ ಮೂಲಕ `ಗಿಲಿ' ಈ ವಿಶೇಷ ದಾಖಲೆಗೆ ಪಾತ್ರರಾದರು. ಭಾರತದ ಎದುರು ಅಡಿಲೇಡ್ ಓವಲ್ ಅಂಗಳದಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಅವರು ಐದು ಮಂದಿ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದರು. ಆ ಮೂಲಕ ಗಿಲಿ ಭಾರತದ ಎದುರು ಒಟ್ಟು 73 `ಬಲಿ' ಪಡೆದಂತಾಯಿತು. ಅವರು ಪಾಕಿಸ್ಥಾನದ ಮಾಜಿ ವಿಕೆಟ್ ಕೀಪರ್ ಮೋಯಿನ್ ಖಾನ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಮೋಯಿನ್ ಖಾನ್ ಅವರು ಭಾರತದ ಎದುರು 71 `ಬಲಿ' ಪಡೆದಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾ ಎದುರು ಸ್ಥಾಪಿಸಿದ್ದ ತಮ್ಮ ಹಳೆಯ ದಾಖಲೆಯನ್ನು ಗಿಲ್ ಕ್ರಿಸ್ಟ್ (69) ಅಳಿಸಿ ಹಾಕಿದರು. ಒಂದೇ ದೇಶದ ಎದುರು 70ಕ್ಕೂ ಅಧಿಕ ಬಾರಿ `ಬಲಿ' ಪಡೆದ ಗೌರವವನ್ನು ಮೋಯಿನ್ ಹಾಗೂ ಗಿಲ್ ಕ್ರಿಸ್ಟ್ ಹೊಂದಿದ್ದಾರೆ.

2008: ಒಲಿಂಪಿಕ್ ಚಾಂಪಿಯನ್ ರಷ್ಯಾದ ಎಲೆನಾ ಇಸಿನ್ ಬಯೇವಾ ಅವರು ಉಕ್ರೇನಿನ ಡಾನೆಸ್ಕ್ ಒಳಾಂಗಣ ಅಥ್ಲೆಟಿಕ್ ಕೂಟದ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ನೂತನ ವಿಶ್ವ ದಾಖಲೆ ಸ್ಥಾಪಿಸಿದರು. ಈದಿನ ನಡೆದ ಸ್ಪರ್ಧೆಯಲ್ಲಿ ಇಸಿನ್ ಬಯೇವಾ 4.95 ಮೀ. ಎತ್ತರ ಜಿಗಿದು ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. 2007ರಲ್ಲಿ ಡಾನೆಸ್ಕಿನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಅವರು 4.93 ಮೀ. ಎತ್ತರ ಹಾರಿದ್ದರು.

2008: ಪಾಕಿಸ್ಥಾನ ಪಂಜಾಬ್ ಪ್ರಾಂತ್ಯದ ಪಟ್ಟೋಕಿ ಎಂಬಲ್ಲಿ ಬಸ್ಸೊಂದು ಸೇತುವೆ ಮೇಲಿನಿಂದ ಉರುಳಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 40 ಮಂದಿ ಸತ್ತು, ಇತರ 20 ಮಂದಿ ಗಾಯಗೊಂಡರು. 60 ಪ್ರಯಾಣಿಕರನ್ನು ಹೊತ್ತಿದ್ದ ಬಸ್ಸು ಲಾಹೋರಿನಿಂದ ಮುಲ್ತಾನಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿತು.

2008: ಒರಿಸ್ಸಾದ ನಯಾಗಡದಲ್ಲಿ ಪೊಲೀಸರಿಗೆ ಸೇರಿದ ಎರಡು ಶಸ್ತ್ರಕೋಠಿಗಳನ್ನು ದೋಚಿ, 14 ಮಂದಿ ಪೊಲೀಸರೂ ಸೇರಿದಂತೆ 15 ಮಂದಿಯನ್ನು ಕೊಂದು ಓಡಿಹೋಗಿದ್ದ ಮಾವೋವಾದಿ ನಕ್ಸಲೀಯರು ಗಂಜಾಮ್ ಮತ್ತು ಕಂದಮಾಳ್ ಗಡಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡರು. ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ಗುಂಡಿನ ಘರ್ಷಣೆ ನಡೆದು 20ಕ್ಕೂ ಹೆಚ್ಚು ನಕ್ಸಲೀಯರು ಹತರಾದರು ಎಂದು ಪೊಲೀಸ್ ಮೂಲಗಳು ತಿಳಿಸಿದವು.

2008: ಬಹು ವರ್ಷಗಳ ಬಳಿಕ ವಿಲೀನಗೊಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಬಣ ಮತ್ತು ಕೆ.ಎಸ್. ಪುಟ್ಟಣ್ಣಯ್ಯ ಬಣ ರೈತ ಸಂಘಕ್ಕೆ ಸೈದ್ಧಾಂತಿಕ ನೆಲೆಗಟ್ಟಿನೊಂದಿಗೆ ಸಾಂಸ್ಕೃತಿಕ ಆಯಾಮ ಒದಗಿಸಲು ಮುಂದಾದವು. ಕೇವಲ ರೈತಪರ ಹೋರಾಟಗಳಿಗೆ ಸೀಮಿತವಾಗದೇ ಈ ಮಣ್ಣಿನ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸತ್ವ ಒದಗಿಸುವ ಉದ್ದೇಶದಿಂದ ಪುಸ್ತಕ ಪ್ರಕಾಶನಕ್ಕೆ ಚಿಂತಿಸಿರುವುದಾಗಿ ರೈತ ಸಂಘದ ಸ್ಥಾಪಕರಲ್ಲೊಬ್ಬರಾದ ಕಡಿದಾಳು ಶಾಮಣ್ಣ ಮಂಗಳೂರಿನಲ್ಲಿ ಹೇಳಿದರು. ರೈತ ಚಳವಳಿ ಬೆಳೆದುಬಂದ ಹಾದಿ, ರೈತಪರ ಹೋರಾಟಗಳು, ರೈತರ ಆತ್ಮಹತ್ಯೆ, ಗೋಲಿಬಾರ್, ಹುತಾತ್ಮ ರೈತ ನಾಯಕರ ಪರಿಚಯ, ರೈತ ಸಂಘ ನಡೆಸಿದ ಅಂದೋಲನ, ಪಾದಯಾತ್ರೆ, ನೈಸರ್ಗಿಕ ಕೃಷಿ ಇನ್ನಿತರೆ ರೈತ ಸಾಹಿತ್ಯವನ್ನು ಚಿತ್ರ ಸಮೇತ ಮುದ್ರಿಸಿ 'ಪುಸ್ತಕ ಪ್ರಕಾಶನ' ಆರಂಭಿಸುವುದಾಗಿ ಅವರು ಪ್ರಕಟಿಸಿದರು.

2008: `ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು' ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಬೆಂಗಳೂರಿನಲ್ಲಿ ಆಗ್ರಹಿಸಿದರು. ಬೆಂಗಳೂರು ದಿಣ್ಣೆಪಾಳ್ಯ ಕಗ್ಗಲಿಪುರ ಗೋಲೋಕದ ವಾತ್ಸಲ್ಯ ವೇದಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠ ಹಾಗೂ ಗೋಲೋಕ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರೈತಸಮಾವೇಶ ಮತ್ತು ಸಮರ್ಪಣ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತರು ಗೋ ಆಧಾರಿತ ಕೃಷಿ ಪದ್ಧತಿಯನ್ನು ಬಿಟ್ಟು ರಾಸಾಯನಿಕ ಗೊಬ್ಬರವನ್ನು ಆಧರಿಸಿದ ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿದ್ದೇ ಈಗಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಭಾರತೀಯ ನಾಟಿ ಹಸುವಿನ ಕರುಳು ಸೂಕ್ಷ್ಮ ಜೀವಿಗಳ ಸಾಗರ. ಅದರ ಒಂದು ಗ್ರಾಂ ಸೆಗಣಿಯಲ್ಲಿ 300ರಿಂದ 500 ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಒಂದು ಗ್ರಾಂನಷ್ಟು ಮಣ್ಣಿನಲ್ಲಿ ನೂರು ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಸುಭಾಶ್ ಪಾಳೇಕರ್ ಅವರ ಕೃಷಿ ಪದ್ಧತಿಯಲ್ಲಿ ಇವೆರಡು ಮಿಶ್ರಗೊಳ್ಳುವುದರಿಂದ ಭೂಮಿಯಲ್ಲಿ ಸೂಕ್ಷ್ಮ ಜೀವಿಗಳು ಕೋಟಿಗಟ್ಟಲೆ ಸಂಖ್ಯೆಯಲ್ಲಿ ವೃದ್ಧಿಯಾಗಿ ಭೂಮಿ ಹೆಚ್ಚು ಫಲವತ್ತಾಗುತ್ತದೆ ಎಂದು ರಮೇಶರಾಜು ವಿವರಿಸಿದರು. ಗೋ ಆಧಾರಿತ ಕೃಷಿ, ಗೊಬ್ಬರ, ಬೀಜತಯಾರಿಯನ್ನು ಕೈಬಿಟ್ಟ ರೈತರು, ಆಧುನಿಕ ಕೃಷಿ ಪದ್ಧತಿಯಲ್ಲಿ ಉಳುಮೆಗೆ ದುಬಾರಿ ಟ್ರ್ಯಾಕ್ಟರ್, ಹೈಬ್ರಿಡ್ ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸಿದ್ದರಿಂದ ಸಾಲಕೂಪದಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದರು ಎಂದು ಅವರು ವಿಶ್ಲೇಷಿಸಿದರು. ಮಾಜಿ ಸಚಿವ ಆರ್. ಅಶೋಕ 'ಹಿಂದೆ ಗೋವುಗಳ ಸಂಖ್ಯೆ ಆಧಾರದಲ್ಲಿ ಸಂಪತ್ತು ಮತ್ತು ಪ್ರತಿಷ್ಠೆಯನ್ನು ಲೆಕ್ಕ ಹಾಕಲಾಗುತ್ತಿತ್ತು. ಆದರೆ ಇಂದು ಗೋವು ಇದ್ದರೆ ಹುಡುಗಿ ಕೊಡುವುದಿಲ್ಲ ಎಂಬ ಮಟ್ಟಕ್ಕೆ ಬಂದಿದ್ದೇವೆ ಎಂದು ವಿಷಾದಿಸಿದರು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಗೋಲೋಕ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುತ್ತಾ ಬಂದ ಕೋಲ್ಕತ್ತಾದ ಉದ್ಯಮಿಗಳಾದ ಉಷಾ ಅಗರ್ ವಾಲ್, ನಾಥೂರ ಖೇತಾನಿ, ಅಜಿತ್ ಖೇತಾನಿ, ಪವನ್ ಅಗರ್ ವಾಲ್, ಗೋಯೆಂಕಾ, ಮಹಾವೀರ ಪ್ರಸಾದ ಸೋನಿಕಾ, ಸ್ಥಳೀಯ ಮುಖಂಡ ಶಿವಕುಮಾರ, ವೆಂಕಟೇಶ ಚೀನಿಯ, ಕಿಸಾನ್ ಸಂಘದ ಪುಟ್ಟಸ್ವಾಮಿ, ಗೋಲೋಕದ ಸ್ಥಳದಾನಿ ಬಿ.ಜೆ.ಶರ್ಮಾ ಮತ್ತಿತರರು ಹಾಜರಿದ್ದರು.

2008: ಕೇವಲ 195 ದಿನಗಳಲ್ಲಿ ಸೈಕಲ್ ಮೂಲಕ ವಿಶ್ವಪರ್ಯಟನೆ ಮಾಡಿದ ಸ್ಕಾಟ್ ಲ್ಯಾಂಡ್ ಯುವಕ ಮಾರ್ಕ್ ಬಿಮೌಂಟ್ (25) ಅವರ ಸಾಹಸ ಯಾತ್ರೆ ಪ್ಯಾರಿಸ್ಸಿನಲ್ಲಿ ಕೊನೆಗೊಂಡಿತು. ಮಾರ್ಕ್ ಬಿಮೌಂಟ್ ಅವರು ಸರಿಸುಮಾರು 7 ತಿಂಗಳ ಕಾಲ ಪಾಕಿಸ್ಥಾನ, ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳಿಗೆ ಸೈಕಲ್ಲಿನಲ್ಲಿ ಪ್ರವಾಸ ಮಾಡಿ ಹಳೆಯ ದಾಖಲೆ (276 ದಿನಗಳು) ಮುರಿದರು.

2008: ನವದೆಹಲಿಯ ಪ್ರಗತಿ ಮೈದಾನದ ಸಮೀಪದಲ್ಲಿದ್ದ `ಅಪ್ಪು ಘರ್' ಮನರಂಜನಾ ಪಾರ್ಕನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಶಾಶ್ವತವಾಗಿ ಮುಚ್ಚಲಾಯಿತು. 1984ರಲ್ಲಿ ಆರಂಭವಾದ ದೇಶದ ಮೊದಲ ಈ ಮನರಂಜನಾ ಪಾರ್ಕಿನ ಭೋಗ್ಯದ ಅವಧಿ ಮುಗಿದಿದ್ದು ಈ ಪ್ರದೇಶದಲ್ಲಿ ಸುಪ್ರೀಂ ಕೋರ್ಟಿನ ಕೋಣೆಗಳು ಮತ್ತು ಗ್ರಂಥಾಲಯ ಬರುವುದು.

2007: ಚಲನಚಿತ್ರ ನಿರ್ಮಾಪಕ, ಕಲಾವಿದ, ನಿರ್ದೇಶಕ, ಬರಹಗಾರ ಮತ್ತು ಕವಿಯಾಗಿ ಖ್ಯಾತರಾದ ಎಂ.ಎಸ್. ರೆಡ್ಡಿ ಅವರು 2007ರ ಸಾಲಿನ ವೆಂಕಯ್ಯ ಪ್ರಶಸ್ತಿಗೆ ಆಯ್ಕೆಯಾದರು. 2005ರಲ್ಲಿ ತೆಲುಗು ಸಿನೆಮಾ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕಾಣಿಕೆಗಾಗಿ ಅವರನ್ನು ವೆಂಕಯ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ನೀರನ್ನು ಡೀಸೆಲ್ ಜೊತೆಗೆ ಇಂಧನವಾಗಿ ಬಳಸುವ ಕ್ರಾಂತಿಕಾರಿ ಪ್ರಯೋಗದಲ್ಲಿ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಯಶಸ್ವಿಯಾಗಿದ್ದು, ಹತ್ತು ಬಸ್ಸುಗಳು ಈ `ವಿನೂತನ ಪ್ರಯೋಗ' ಸೂತ್ರ ಅಳವಡಿಸಿಕೊಂಡು ಯಶಸ್ವೀ ಸಂಚಾರ ನಡೆಸುತ್ತಿವೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಚಿವ ಚಲುವರಾಯಸ್ವಾಮಿ ಪ್ರಕಟಿಸಿದರು. ಜಲಶಕ್ತಿ ಹೆಸರಿನ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಯೋಗ ನಡೆಸಲಾಗಿತ್ತು.

2007: ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿಯನ್ನು ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.

2007: ಭಾರತ- ಪಾಕಿಸ್ಥಾನ ವಿಭಜನೆಯ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಪಾಕಿಸ್ಥಾನದ ಕೇಂದ್ರ ಪಂಜಾಬ್ ಪ್ರಾಂತ್ಯದ ಚಕ್ವಾಲ್ ಬಳಿಯ ಚಾರಿತ್ರಿಕ ಕಟಾಸ್ ರಾಜ್ ದೇವಸ್ಥಾನಗಳ ಸಂಕೀರ್ಣದಲ್ಲಿ ಇರುವ ಶಿವಮಂದಿರದಲ್ಲಿ ಭಾರತದ ವಿವಿಧ ಕಡೆಗಳಿಂದ ಬಂದಿದ್ದ 176 ಮಂದಿ ಹಿಂದೂ ಯಾತ್ರಿಗಳು ಶಿವಪೂಜೆ ನೆರವೇರಿಸಿದರು. ಸಂಸ್ಕೃತ ಶಬ್ಧ ಕಟಾಸ್ನ ಅರ್ಥ ಕಣ್ಣೀರು ಎಂದು. ಶಿವರಾತ್ರಿ ಅಂಗವಾಗಿ ಫೆಬ್ರುವರಿ 16ರಿಂದಲೇ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

2007: ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಹಿರಿಯ ನ್ಯಾಯಾಧೀಶರು ಸೇರಿ 13 ಜನ ಮೃತರಾದರು.

2007: ಇರಾಕಿಗೆ 20ಸಾವಿರ ಸೈನಿಕರನ್ನು ಕಳುಹಿಸುವ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರ ನಿರ್ಧಾರವನ್ನು ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿ ಇರುವ ಜನಪ್ರತಿನಿಧಿಗಳ ಸಭೆ ತಿರಸ್ಕರಿಸಿತು.

2007: ವಿಶಾಖಪಟ್ಟಣದಲ್ಲಿ ನಡೆದ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ಟುಗಳಿಂದ ಮಣಿಸಿದ ಭಾರತ, ನಾಲ್ಕು ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದು `ಹೀರೋ ಹೊಂಡಾ ಕಪ್' ಗೆದ್ದುಕೊಂಡಿತು.

2007: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಉಸ್ತಾದ್ ಬಿಸ್ಮಿಲ್ಲಾ ಖಾನ್ ಸ್ಮರಣಾರ್ಥವಾಗಿ ಪ್ರಸ್ತುತ ವರ್ಷದಿಂದಲೇ ಪ್ರಾರಂಭಿಸಿದ `ಉಸ್ತಾದ್ ಬಿಸ್ಮಿಲ್ಲಾ ಖಾನ್ ಅಖಿಲ ಭಾರತ ಪುರಸ್ಕಾರ-2006' ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಕರ್ನಾಟಕದ ಯುವ ರಂಗನಿರ್ದೇಶಕ ಮಾಲತೇಶ ಬಡಿಗೇರ ಆಯ್ಕೆಯಾದರು.

2006: ಫಿಲಿಪ್ಪೀನ್ಸಿನಲ್ಲಿ ಬಿರುಗಾಳಿ ಮಳೆಯ ಪರಿಣಾಮವಾಗಿ ಸಂಭವಿಸಿದ ಭೂಕುಸಿತದಿಂದ ಕನಿಷ್ಠ 1800ಕ್ಕೂ ಹೆಚ್ಚು ಜನರು ಮೃತರಾಗಿ ಹಲವರು ಕಾಣೆಯಾದರು. ಭೂಕುಸಿತದಿಂದ ಲೀಟೆ ದ್ವೀಪದ ಸೇಂಟ್ ಬರ್ನಾರ್ಡ್ ಪಟ್ಟಣದ ಗುಯಿನ್ಸಾಂಗೊ ಹಳ್ಳಿಯು ಸಂಪೂರ್ಣ ಸಮಾಧಿಯಾಯಿತು. ಫಿಲಿಪ್ಪೀನ್ಸ್ ವರ್ಷವೊಂದಕ್ಕೆ ಸರಾಸರಿ 20 ಬಾರಿ ಬಿರುಗಾಳಿ, ಮಳೆಯನ್ನು ಎದುರಿಸುತ್ತದೆ. 1999ರಲ್ಲಿ ಚಂಡಮಾರುತದಿಂದ ಉಂಟಾದ ಭಾರಿ ಮಳೆ, ಪ್ರವಾಹಕ್ಕೆ ಸಿಕ್ಕು 5000ಕ್ಕೂ ಹೆಚ್ಚು ಜನರು ಮೃತರಾದರೆ, 2001ರಲ್ಲಿ ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು.

2006: ಅಳಿವಿನ ಅಂಚಿನಲ್ಲಿರುವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ನಟ ಸಲ್ಮಾನ್ ಖಾನ್ ಗೆ ರಾಜಸ್ಥಾನದ ಜೋಧಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಒಂದು ವರ್ಷದ ಸೆರೆಮನೆವಾಸ ಮತ್ತು 5 ಸಾವಿರ ರೂಪಾಯಿಗಳ ದಂಡ ವಿಧಿಸಿತು. ಹಾಸ್ಯನಟ ಸತೀಶ ಶಾ ಸೇರಿದಂತೆ 7 ಮಂದಿ ಇತರ ಆರೋಪಿಗಳನ್ನು ಖುಲಾಸೆಗೊಳಿಸಿತು.

2006: ಶಕೀರಾ ಕೊಲೆ ಪ್ರಕರಣದ ಮುಖ್ಯ ಆರೋಪಿ ಸ್ವಾಮಿ ಶ್ರದ್ಧಾನಂದನ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಬೆಂಗಳೂರಿನ ವಿಚಾರಣಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿತ್ತು.

2006: ಭಾರತದ ಪಶ್ಚಿಮ ರಾಜಸ್ಥಾನದ ಮುನಬಾವೋಗೆ ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಖೊಖ್ರಪಾರದಿಂದ 40 ವರ್ಷಗಳ ಬಳಿಕ ರೈಲು ಪಯಣ ಪುನರಾರಂಭಗೊಂಡಿತು.

1986: ಭಾರತೀಯ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ತಮ್ಮ 90ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಓಜೈನಲ್ಲಿ ನಿಧನರಾದರು.

1968: ಸಾರಂಗಿವಾಹನ, ತಬಲಾ ಮತ್ತು ಗಾಯನ ಕಲೆ ಈ ಮೂರೂ ಪ್ರಕಾರಗಳಲ್ಲಿಪ್ರಭುತ್ವ ಹೊಂದಿದ ಫಯಾಜ್ ಖಾನ್ ಅವರು ಉಸ್ತಾದ್ ಅಬ್ದುಲ್ ಖಾದರ್ ಖಾನ್- ಜೈತುನ್ ಬಿ ದಂಪತಿಯ ಮಗನಾಗಿ ಧಾರವಾಡದದಲ್ಲಿ ಜನಿಸಿದರು.

1947: ಕಲಾವಿದ ಸುಬ್ರಾಯ ಜೆ.ಸಿ. ಜನನ.

1936: ವೃತ್ತಪತ್ರಿಕೆಯ ಕಾಮಿಕ್ ಪುಟದಲ್ಲಿ ಲೀಫಾಕ್ ಅವರ `ಫ್ಯಾಂಟಮ್' ಮೊದಲ ಬಾರಿಗೆ ಪ್ರಕಟಗೊಂಡಿತು. (ಮಾಂಡ್ರೇಕ್ ಪ್ರಕಟಗೊಂಡದ್ದು 1934ರಲ್ಲಿ).

1933: ಮೊತ್ತ ಮೊದಲ ಬಾರಿಗೆ `ನ್ಯೂಸ್ ವೀಕ್' ಪ್ರಕಟಗೊಂಡಿತು.

1874: ಥಾಮಸ್ ಜೆ. ವಾಟ್ಸನ್ ಸೀನಿಯರ್ (1874-1956) ಹುಟ್ಟಿದ ದಿನ. ಅಮೆರಿಕನ್ ಕೈಗಾರಿಕೋದ್ಯಮಿಯಾದ ಈತ ಇಂಟರ್ ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾರ್ಪೊರೇಷನ್(ಐಬಿಎಂ) ಸಂಸ್ಥೆಯನ್ನು ಜಗತ್ತಿನಲ್ಲೇ ಎಲೆಕ್ಟ್ರಿಕ್ ಟೈಪ್ ರೈಟರ್ ಮತ್ತು ಮಾಹಿತಿ ತಂತ್ರಾಂಶ ಉಪಕರಣ ತಯಾರಿಸುವ ಅತಿದೊಡ್ಡ ಸಂಸ್ಥೆಯನ್ನಾಗಿ ಕಟ್ಟಿ ಬೆಳೆಸಿದರು.

1673: ಮೊಲೀರ್ ಎಂದೇ ಖ್ಯಾತನಾಗಿದ್ದ ಹಾಸ್ಯನಟ ಜೀನ್ ಬಾಪ್ಟಿಸ್ಟ್ ಪೊಖ್ವಿಲಿನ್ ತನ್ನ 51ನೇ ವಯಸ್ಸಿನಲ್ಲಿ ಮೃತನಾದ. ತನ್ನ ಕೊನೆಯ ನಾಟಕ `ದಿ ಇಮಾಜಿನರಿ ಇನ್ ವ್ಯಾಲಿಡ್'ನ ನಾಲ್ಕನೇ ಪ್ರದರ್ಶನಕಾಲದಲ್ಲಿ ಆತ ವೇದಿಕೆಯಲ್ಲೇ ಕುಸಿದು ಬಿದ್ದು ನಂತರ ಮನೆಯಲ್ಲಿ ಮೃತನಾದ. ತನ್ನ ನಟನಾ ವೃತ್ತಿಗೆ ವಿದಾಯ ಹೇಳಲು ಅವಕಾಶವೇ ಸಿಗದೇ ಹೋದುದರಿಂದ ಆತನ ಅಂತ್ಯಕ್ರಿಯೆಯನ್ನು ಫೆಬ್ರುವರಿ 21ರಂದು ಸೂರ್ಯಾಸ್ತದ ಬಳಿಕ ಸರಳವಾಗಿ ನೆರವೇರಿಸಲಾಯಿತು.

No comments:

Post a Comment