ನಾನು ಮೆಚ್ಚಿದ ವಾಟ್ಸಪ್

Monday, February 4, 2019

ಇಂದಿನ ಇತಿಹಾಸ History Today ಫೆಬ್ರುವರಿ 04

ಇಂದಿನ ಇತಿಹಾಸ History Today ಫೆಬ್ರುವರಿ 04
2019: ನವದೆಹಲಿ: ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕೇಂದ್ರದ ನಡುವಣ ಘರ್ಷಣೆಯು ವಿರೋಧ ಪಕ್ಷ ವರ್ಸಸ್ ಬಿಜೆಪಿ ಸಮರವಾಗಿ ಪರಿವರ್ತನೆಗೊಂಡಿತು. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೋಲ್ಕತ ಘಟನೆಯು ರಾಷ್ಟ್ರದ ಒಕ್ಟೂಟ ರಚನೆಗೆ ಬೆದರಿಕೆಯಾಗಿದೆ ಎಂದು ಲೋಕಸಭೆಯಲ್ಲಿ ಎಚ್ಚರಿಸಿದರು.  ‘ಕೋಲ್ಕತ ಪೊಲೀಸ್ - ಸಿಬಿಐ ಘರ್ಷಣೆ ದುರದೃಷ್ಟಕರ. ಕೋಲ್ಕತದ ಘಟನೆಯು ರಾಷ್ಟ್ರದ ಒಕ್ಕೂಟ ರಾಜಕೀಯ ವ್ಯವಸ್ಥೆಗೆ ಬೆದರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಬಹುದು ಎಂದು ಗೃಹ ಸಚಿವರು ನುಡಿದರು. ಸಿಬಿಐ ತಂಡವು ಭಾನುವಾರ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರ ನಿವಾಸಕ್ಕೆ ಶಾರದಾ ಚಿಟ್ ಫಂಡ್ ಹಗರಣದ ವಿಚಾರದಲ್ಲಿ ಪ್ರಶ್ನಿಸುವ ಸಲುವಾಗಿ ಆಗಮಿಸಿದ ಬಳಿಕ ಸಿಬಿಐ-ಕೋಲ್ಕತ ಪೊಲೀಸ್ ಘರ್ಷಣೆ ಶುರುವಾಗಿತ್ತುಸಿಬಿಐ ವಿರುದ್ಧ ತಿರುಗಿಬಿದ್ದ ಕೋಲ್ಕತ ಪೊಲೀಸರು ಸೇಡಿನ ಕ್ರಮವಾಗಿ ಸಿಬಿಐ ಅಧಿಕಾರಿಗಳನ್ನು ತಡೆದುದಲ್ಲದೆ ನಗರದಲ್ಲಿನ ಸಿಬಿಐ ಅಧಿಕಾರಿಗಳು ಮತ್ತು ಸಿಬಿಐಯ ಪಶ್ಚಿಮ ಬಂಗಾಳ ಘಟಕದ ಮುಖ್ಯಸ್ಥ ಪಂಕಜ್ ಶ್ರೀವಾಸ್ತವ ಅವರ ನಿವಾಸಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಿದ್ದರು. ಸದನದಲ್ಲಿ ವಿರೋಧೀ ಸದಸ್ಯರ ಘೋಷಣೆಗಳ ಮಧ್ಯೆ ಮಾತನಾಡಿದ ರಾಜನಾಥ್ ಸಿಂಗ್ರಾಷ್ಟ್ರದ ಯಾವುದೇ ಭಾಗದಲ್ಲಿ ಸಹಜ ಸ್ಥಿತಿಯನ್ನು ಕಾಪಾಡಿಕೊಂಡು ಬರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ಸಂಸತ್ತಿನಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ಗೃಹ ಸಚಿವರು ಸದನಕ್ಕೆ ಉತ್ತರ ನೀಡಿದರು. ಶಾರದಾ ಚಿಟ್ ಫಂಡ್ ಪ್ರಕರಣದ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೋಲ್ಕತ ಪೊಲೀಸ್ ಕಮೀಷನರ್ ಅವರು ಚಿಟ್ ಫಂಡ್ ಹಗರಣದ ಪ್ರಕರಣಗಳ ಸಿಬಿಐ ತನಿಖೆಯಲ್ಲಿ ಸಹಕರಿಸುತ್ತಿರಲಿಲ್ಲ. ಹಲವಾರು ಸಮನ್ಸ್ಗಳನ್ನು ಅವರಿಗೆ ಜಾರಿ ಮಾಡಲಾಗಿತ್ತು, ಒಮ್ಮೆಯೂ ಅವರು ಹಾಜರಾಗಿರಲಿಲ್ಲ ಎಂದು ಗೃಹಸಚಿವರು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ರಾಜ್ಯ ಪೊಲೀಸರು ಸಿಬಿಐ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರಿಂದ ಪರಿಸ್ಥಿತಿ ಅಪಾಯಕಾರಿ ಹಂತ ತಲುಪಿದೆ. ಕೇಂದ್ರದ ತನಿಖಾ ಸಂಸ್ಥೆಗಳಿಗೆ ಕಾರ್ ನಿರ್ವಹಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅವಕಾಶ ಮಾಡಿಕೊಡಬೇಕು ಎಂದು ರಾಜನಾಥ್ ನುಡಿದರು. ಶಾರದಾ ಚಿಟ್ ಫಂಡ್ ಹಗರಣದ ತನಿಖೆಗಾಗಿ ಸಿಬಿಐ ಅಧಿಕಾರಿಗಳು ಕೋಲ್ಕತದ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರ ನಿವಾಸಕ್ಕೆ ತೆರಳಿದಾಗ ಸ್ಥಳೀಯ ಪೊಲೀಸರು ಸಿಬಿಐ ತನಿಖಾ ಅಧಿಕಾರಿಗಳನ್ನು ಶೇಕ್ಸ್ ಪಿಯರ್ ಸರಾನಿ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದರು. ಮಮತಾ ಬ್ಯಾನರ್ಜಿ ಅವರು ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರುವಿಶ್ವದಲ್ಲೇ ಅತ್ಯುತ್ತಮ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಅವರ ನಿವಾಸದಲ್ಲೇ ಹೊಗಳಿದ್ದರು.  ಈದಿನ ಶೂನ್ಯ ವೇಳೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಸುಗತಾ ರಾಯ್ ಅವರು ಸಿಬಿಐ ದುರುಪಯೋಗದ ವಿಷಯ ಪ್ರಸ್ತಾಪಿಸಿದರು. ಬಿಜೆಪಿ, ಕಾಂಗ್ರೆಸ್ ಸದಸ್ಯರೂ ಅವರೊಡನೆ ದನಿಗೂಡಿಸಿದರುಸದಸ್ಯರ ಪ್ರತಿಭಟನೆಗಳ ಮಧ್ಯೆ ಮಾತನಾಡಿದ ರಾಜನಾಥ್ ಸಿಂಗ್ ಅವರುಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯವರೇ ಧರಣಿ ನಡೆಸಿರುವುದರಿಂದ ಪರಿಸ್ಥಿತಿ ವಿಷಮಗೊಂಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಹಕ್ಕನ್ನು ಕೇಂದ್ರವು ಗೌರವಿಸುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಸಾಂವಿಧಾನಿಕ ಕಾರ್ಯ ವ್ಯವಸ್ಥೆಯೇ ಕುಸಿದುಬೀಳುವಂತೆ ಮಾಡಿದೆ ಎಂದು ನುಡಿದರು. ಇದು ಅಪಾಯಕಾರಿ ಸ್ಥಿತಿಯಾಗಿದ್ದು ಗಂಭೀರ ಪರಿಣಾಮಗಳನ್ನು ಉಂಟು ಮಾಡಬಲ್ಲುದು. ರಾಜ್ಯದ ಪರಿಸ್ಥಿತಿ ಬಗ್ಗೆ ರಾಜ್ಯಪಾಲರಿಂದ ವರದಿ ಕೇಳಲಾಗಿದೆ. ತನಿಖಾ ಸಂಸ್ಥೆಗಳು ಮತ್ತು ಪೊಲೀಸರ ನಡುವಿನ ಸಂಘರ್ಷವು ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ. ಸಿಬಿಐ ಕರ್ತವ್ಯ ನಿರ್ವಹಣೆಗೆ ರಾಜ್ಯಗಳು ಅವಕಾಶ ಮಾಡಿಕೊಡಬೇಕು ಎಂದೂ ಗೃಹ ಸಚಿವರು ಮನವಿ ಮಾಡಿದರುಇದಕ್ಕೆ ಪ್ರತಿಯಾಗಿ ಟಿಎಂಸಿ ಸದಸ್ಯರು ಕೇಂದ್ರ ಸರ್ಕಾರವು ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೂರಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಸುಪ್ರೀಂಕೋರ್ಟ್ ಮೆಟ್ಟೆಲೇರಿದ್ದು ಶಾರದ ಚಿಟ್ ಫಂಡ್ ಪ್ರಕರಣದ ತನಿಖೆಯಲ್ಲಿ ಸಹಕರಿಸುವಂತೆ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದೆ. ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಮಂಗಳವಾರ ನಡೆಸಲಿದೆ.

2019: ಕೋಲ್ಕತ: ಸಿಬಿಐಯ ಭ್ರಷ್ಟಾಚಾರ ನಿಗ್ರಹ ದಳದ ಮೇಲೆ ನಡೆಸಿರುವ ಪ್ರತಿದಾಳಿಯೊಂದರಲ್ಲಿ ಸಿಬಿಐಯ ಕೋಲ್ಕತ ವಲಯದ ಮುಖ್ಯಸ್ಥರಾಗಿರುವ ಜಂಟಿ ನಿರ್ದೇಶಕ ಪಂಕಜ್ ಕುಮಾರ್ ಶ್ರೀವಾಸ್ತವ ಅವರಿಗೇ ೨೦೧೮ರ ಆಗಸ್ಟ್ ತಿಂಗಳಲ್ಲಿ ಇಬ್ಬರು ಉದ್ಯಮಿಗಳನ್ನು ಅಕ್ರಮವಾಗಿ ಬಂಧಿಸಿದ್ದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿತು. ಬ್ಯಾಂಕ್ ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ನೇತೃತ್ವವನ್ಜು ಶ್ರೀವಾಸ್ತವ ವಹಿಸಿದ್ದರು. ಉದ್ಯಮಿಗಳು ಸಿಬಿಐ ಅಧಿಕಾರಿ ವಿರುದ್ಧ ಆಗ ಪ್ರತಿದೂರು ದಾಖಲಿಸಿದ್ದರು. ತನಿಖಾಧಿಕಾರಿಗಳ ಹೆಸರು, ವಿವರ, ಹಾಗೂ ತನಿಖೆಯ ವಿಡಿಯೋ ದೃಶ್ಯಾವಳಿ ನೀಡುವಂತೆ ನೋಟಿಸಿನಲ್ಲಿ ಸೂಚಿಸಲಾಯಿತು. ಕಾನೂನು ಸಲಹೆಗಾರರ ಜೊತೆ ಚರ್ಚಿಸಿದ ಬಳಿಕ ನೋಟಿಸಿಗೆ ಉತ್ತರಿಸುವುದಾಗಿ ಶ್ರೀವಾಸ್ತವ ಅವರು ಸುಪ್ರೀಕೋರ್ಟಿಗೆ ನೆರವಾಗುವ ಸಲುವಾಗಿ ದೆಹಲಿಗೆ ಹೋಗುವ ಮಾರ್ಗದಲ್ಲಿ ಪತ್ರಕರ್ತರಿಗೆ ತಿಳಿಸಿದರು.

2019: ನವದೆಹಲಿ: ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ನಿವೇಶನ ಸಮೀಪದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ೧೯೯೩ರ ಕೇಂದ್ರ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಯೊಂದನ್ನು ಸುಪ್ರೀಂಕೋರ್ಟಿನಲ್ಲಿ ದಾಖಲಿಸಲಾಯಿತು. ರಾಜ್ಯಕ್ಕೆ ಸೇರಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸಂಸತ್ತಿಗೆ ಯಾವುದೇ ಶಾಸನಬದ್ಧ ಅರ್ಹತೆ ಇಲ್ಲ ಎಂದು ಅರ್ಜಿಯು ವಾದಿಸಿತು. ರಾಮಲಲ್ಲಾ ಭಕ್ತರೆಂದು ಪ್ರತಿಪಾದಿಸಿರುವ ವಕೀಲರ ಸಮೂಹವೊಂದು ಸಲ್ಲಿಸಿರುವ ಅರ್ಜಿಯು ತನ್ನ ಭೂಪ್ರದೇಶದಲ್ಲಿ ಧಾರ್ಮಿಕ ಸಂಸ್ಥೆಗಳ ವ್ಯವಹಾರಗಳ ನಿರ್ವಹಣೆಗೆ ಸಂಬಂಧಿಸಿದಂತೆ ವ್ಯವಸ್ಥೆಗಳನ್ನು ಮಾಡುವ ವಿಶೇಷ ಅಧಿಕಾರ ಇರುವುದು ರಾಜ್ಯ ಶಾಸನಸಭೆಗೆ ಎಂದು ಪ್ರತಿಪಾದಿಸಿತು.

2019: ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ೪೩ರ ಹರೆಯದ ವ್ಯಕ್ತಿಯೊಬ್ಬನನ್ನು ಆತ ಸ್ಮಶಾನದಲ್ಲಿ ಮಾನವ ಮಾಂಸ ತಿನ್ನುತ್ತಿದ್ದುದು ಬೆಳಕಿಗೆ ಬಂದ ಬಳಿಕ ವಶಕ್ಕೆ ತೆಗೆದುಕೊಂಡು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಜಿಲ್ಲೆಯ ವಾಸುದೇವನಲ್ಲೂರು ಪಟ್ಟಣದ ಪೊಲೀಸರ ಪ್ರಕಾರ ಸದರಿ ವ್ಯಕ್ತಿಯು ಸ್ಮಶಾನದಲ್ಲಿ ಮಾನವ ಮಾಂಸ ತಿನ್ನುತ್ತಿದ್ದುದಾಗಿ ಟಿ. ರಾಮನಾಥಪುರಂ ಗ್ರಾಮಸ್ಥರು ಹೇಳಿದರು. ಮುರುಗೇಶನ್ ಎಸ್. ಎಂಬುದಾಗಿ ಗುರುತಿಸಲಾಗಿರುವ ವ್ಯಕ್ತಿ ನಸುಕಿನ ವೇಳೆಯಲ್ಲಿ ಕೊಡಲಿ ಹಿಡಿದುಕೊಂಡು ಹಿಂದಿನ ರಾತ್ರಿ ದಹಿಸಲಾಗಿದ್ದ ಮಹಿಳೆಯೊಬ್ಬರ ಮಾಂಸವನ್ನು ಕತ್ತರಿಸಿ ತಿನ್ನುತ್ತಿದ್ದ ಎನ್ನಲಾಯಿತು. ವ್ಯಕ್ತಿ ಮಾದಕ ವ್ಯಸನಿಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಆತನನ್ನು ತ್ಯಜಿಸಿದ್ದರು. ಸ್ಮಶಾನದಲ್ಲಿ ಹಿಂದೆಯೂ ಅಲ್ಲಲ್ಲಿ ಮಾಂಸದ ತುಂಡುಗಳು ಬಿದ್ದಿದ್ದುದು ಕಂಡು ಬಂದಿದ್ದವು. ಆಗ ಅದು ನಾಯಿಗಳ ಕೃತ್ಯ ಇರಬಹುದು ಎಂದು ಭಾವಿಸಲಾಗಿತ್ತು. ಈಗ ಅದು ಈತನದ್ದೇ ಕೃತ್ಯ ಇರಬಹುದು ಎಂದು ಗ್ರಾಮಸ್ಥರು ಈಗ ಶಂಕಿಸಿದ್ದಾರೆ ಎಂದು ಪೊಲೀಸರು ಹೇಳಿದರು. 
2018: ಬೆಂಗಳೂರು: ಶೀಘ್ರವೇ ಕರ್ನಾಟಕವೂಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಿದರು.  ಆದರೆ ಮಹದಾಯಿ ಜಲ ವಿವಾದದ ಬಗ್ಗೆ ಅವರು ಯಾವುದೇ ಪ್ರಸ್ತಾಪವನ್ನೂ ಮಾಡಲಿಲ್ಲ. ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂಬುದಾಗಿ ಪ್ರತಿಭಟನಕಾರು ತಮ್ಮ ಪ್ರತಿಭಟನೆಯನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಮ್ ಪಾರ್ಕ್) ಮುಂದುವರೆಸಿ ಪ್ರಧಾನಿಯ ಪ್ರತಿಕೃತಿಯನ್ನು ದಹಿಸಿದರು. ಬೆಂಗಳೂರು ಅರಮನೆ ಮೈದಾನದಲ್ಲಿ, ೯೦ ದಿನಗಳ ಕಾಲ ನಡೆದ ರಾಜ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯ ಮುಕ್ತಾಯ ಸಮಾರಂಭದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮೋದಿ  ಮಾತನಾಡಿದರು. ‘ಕಾಂಗ್ರೆಸ್ ಮುಕ್ತ ಭಾರತ ಎಂಬ ತಮ್ಮ ಘೋಷಣೆಯನ್ನು ಮುಂದುವರೆಸಿದ ಪ್ರಧಾನಿ, ಶೀಘ್ರವೇ ಕರ್ನಾಟಕದ ಜನತೆಯೂ ಕಾಂಗ್ರೆಸ್ಸಿಗೆ ನಿರ್ಗಮನದ ದಾರಿ ತೋರಿಸಲಿದ್ದಾರೆ. ಮೂಲಕ ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತರಾಗಲಿದ್ದಾರೆ ಎಂದು ನುಡಿದರು. ಕೇಂದ್ರ ಸರ್ಕಾರದ ವಿವಿಧ ಜನೋಪಯೋಗಕ ಕಾರ್ಯಗಳನ್ನು ಅವರು ವಿವರಿಸಿದರು.

.

2018: ವಿಜಯವಾಡ: ಆಂಧ್ರಪ್ರದೇಶದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಂಸತ್ತಿನ ಮುಂದಿನ ನಾಲ್ಕು ದಿನಗಳಲ್ಲಿ ಧನಾತ್ಮಕವಾಗಿ ಸ್ಪಂದಿಸುವುದು ಎಂದು ತೆಲುಗುದೇಶಂ ಪಕ್ಷವು (ಟಿಡಿಪಿ) ಹಾರೈಸಿರುವುದಾಗಿ ಟಿಡಿಪಿ ಸಂಸದೀಯ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ ವೈ.ಎಸ್. ಚೌಧರಿ ಅವರು ವಿಜಯವಾಡದಲ್ಲಿ ಹೇಳಿದರು. ಪಕ್ಷದ ಸಂಸತ್ ಸದಸ್ಯರು ಅಮರಾವತಿಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಜೊತೆಗೆ ಸಭೆ ನಡೆಸಿದ ಬಳಿಕ ಚೌಧರಿ ಪತ್ರಕರ್ತರ ಜೊತೆಗೆ ಮಾತನಾಡಿದರು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ರಾಜ್ಯ ವಿಭಜನೆ ಕುರಿತ ಎಲ್ಲ ಇತ್ಯರ್ಥವಾಗದ ವಿಷಯಗಳನ್ನು  ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಪಕ್ಷದ ಸಂಸದರಿಗೆ ನಾಯ್ಡು ಅವರು ಸೂಚಿಸಿದರು ಎಂದು ಚೌಧರಿ ಹೇಳಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಾಯ್ಡು ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳನ್ನು ಚೌಧರಿ ನಿರಾಕರಿಸಿದರು. ಪಕ್ಷವು ಎನ್ಡಿಎ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳುವುದಿಲ್ಲ ಎಂದು ಚೌಧರಿ ಅವರನ್ನು ಉಲ್ಲೇಖಿಸಿದ ವರದಿ ಹೇಳಿದೆ. ’ಟಿಡಿಪಿಯು ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಕೇಂದ್ರದ ಜೊತೆಗಿನ ವಿಷಯಗಳನ್ನು ಪ್ರಸ್ತಾಪಿಸಲಿದೆ. ಬೇಡಿಕೆಗಳು ಈಡೇರದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಚೌಧರಿ ನುಡಿದರು.
2018: ಜಮ್ಮು/ಅಗರ್ತಲಾ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿತು.  ಪಾಕ್ಸೇನೆ ನಡೆಸಿದ ಶೆಲ್ದಾಳಿಯಿಂದಾಗಿ ನಾಲ್ವರು ಯೋಧರು ಹುತಾತ್ಮರಾಗಿ, 13 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಗಾಯಗೊಂಡರು. ಪೂಂಛ್ ಮತ್ತು ರಜೌರಿ ಜಿಲ್ಲೆಯ ಗಡಿ ನಿಯತ್ರಣ ರೇಖೆಯಲ್ಲಿ ಘಟನೆ ಘಟಿಸಿತು. ಶಾಹಪುರ ವಲಯದಲ್ಲಿ ಗಡಿಗ್ರಾಮಗಳು ಹಾಗೂ ಸೇನೆಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿದವು. ಜನವರಿ 18ರಿಂದ 22ರವರೆಗೆ ಪಾಕ್ಪಡೆಯ ನಿರಂತರ ದಾಳಿಯಿಂದಾಗಿ 8 ಮಂದಿ ನಾಗರಿಕರು ಸೇರಿ 14 ಮಂದಿ ಮೃತರಾಗಿ,  ಸುಮಾರು 70 ಮಂದಿ ಗಾಯಗೊಂಡಿದ್ದರು. ಇದೀಗ ಮತ್ತೆ ಪಾಕ್ಕ್ಯಾತೆ ಶುರುವಿಟ್ಟುಕೊಂಡಿತು.
2018: ನವದೆಹಲಿ: ಮೈತ್ರಿಕೂಟದ ಪಾಲುದಾರ ಪಕ್ಷವಾದ ತೆಲುಗು ದೇಶಂ ಪಕ್ಷದ (ಟಿಡಿಪಿ) ಜೊತೆಗಿನ ಭಿನ್ನಾಭಿಪ್ರಾಯಗಳು ಸೌಹಾರ್ದಯುತವಾಗಿ ಬಗೆ ಹರಿಯುವುವು ಮತ್ತು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ಅಖಂಡವಾಗಿ ಉಳಿದು ೨೦೧೯ರ ಮಹಾಚುನಾವಣೆಯನ್ನು ಎದುರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನವದೆಹಲಿಯಲ್ಲಿ ವಿಶ್ವಾಸ ವ್ಯಕ್ತ ಪಡಿಸಿದರು. ಮಾಧ್ಯಮ ಒಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರುಆಂಧ್ರಪ್ರದೇಶ ಪುನರ್ರಚನಾ ಪ್ಯಾಕೇಜನ್ನು ನಾವು ಪ್ರತ್ಯೇಕವಾಗಿಯೇ ಜಾರಿಗೊಳಿಸುತ್ತಿದ್ದೇವೆ. ಅದಕ್ಕೂ ಮುಂಗಡಪತ್ರಕ್ಕೂ (ಬಜೆಟ್) ಸಂಬಂಧವಿಲ್ಲ. ಆಂಧ್ರಪ್ರದೇಶದ ಜನತೆಗೆ ಕೊಟ್ಟ ಎಲ್ಲ ಭರವಸೆಗಳನ್ನೂ ನಾವು ಈಡೇರಿಸುತ್ತೇವೆ ಎಂದು ನುಡಿದರು. ೨೦೧೮ರ ಮುಂಗಡಪತ್ರದಲ್ಲಿರಾಜ್ಯವನ್ನು ನಿರ್ಲಕ್ಷಿಸಿದ್ದಕ್ಕಾಗಿ ಮತ್ತು ಐದು ವರ್ಷಗಳ ಹಿಂದೆ ರಾಜ್ಯ ವಿಭಜನೆ ಕಾಲದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸದೇ ಇದ್ದುದಕ್ಕಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕರಾದ ಚಂದ್ರಬಾಬು ನಾಯ್ಡು ಸಿಡಿಮಿಡಿಗೊಂಡಿದ್ದರು.
ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಗಳು ೨೦೧೯ರಲ್ಲಿ ಲೋಕಸಭಾ ಚುನಾವಣೆ ಜೊತೆಗೇ ನಡೆಯಲಿವೆ.  ಬಿಜೆಪಿ ಮತ್ತು ಅದರ ದಕ್ಷಿಣ ರಾಜ್ಯದ ಮಿತ್ರ ಪಕ್ಷ ತೆಲುಗುದೇಶಂ ನಡುವೆ ಕುದಿಯುತ್ತಿದ್ದ ಪ್ರಕ್ಷುಬ್ಧತೆಯ ಕಿಚ್ಚಿಗೆ ವೈಎಸ್ ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ ರೆಡ್ಡಿ ಅವರ ಇತ್ತೀಚಿನ ಸಂದರ್ಶನವೊಂದು ತುಪ್ಪ ಎರೆದಿತ್ತು. ರೆಡ್ಡಿ ಅವರು ಸಂದರ್ಶನದಲ್ಲಿ ಕೇಂದ್ರ ಸರ್ಕಾರವು ಆಂಧ್ರ ಪ್ರದೇಶಕ್ಕೆ ವಿಶೇಷ ಅನುದಾನ ಮಂಜೂರು ಮಾಡಿದರೆ ಭವಿಷ್ಯದಲ್ಲಿ ತಾವು ಬಿಜೆಪಿ ಜೊತೆಗೆ ಕೆಲಸ ಮಾಡಲು ಆಸಕ್ತರಾಗಿರುವುದಾಗಿ ಹೇಳಿದ್ದರು.  ಕೇಂದ್ರ ಮುಂಗಡಪತ್ರದ ಹಿನ್ನೆಲೆಯಲ್ಲಿ ಮುಂದಿನ ಕ್ರಮವನ್ನು ನಿರ್ಧರಿಸುವುದಕ್ಕಾಗಿ ಈದಿನ ವಿಜಯವಾಡದಲ್ಲಿ ಪಕ್ಷದ ಸಂಸತ್ ಸದಸ್ಯರ ಸಭೆ ಕರೆದಿದ್ದ ನಾಯ್ಡು, ತಾವು ಎನ್ಡಿಎ ಇನ್ನೊಂದು ಪ್ರಮುಖ ಮಿತ್ರ ಪಕ್ಷವಾದ ಮಹಾರಾಷ್ಟ್ರದ ಶಿವ ಸೇನೆ ಜೊತೆಗೆ ತಾನು ಸಂಪರ್ಕದಲ್ಲಿ ಇರುವುದಾಗಿಯೂ ನಾಯ್ಡು ತಿಳಿಸಿದ್ದರು.  ಏನಿದ್ದರೂ ಮಾಧ್ಯಮವೊಂದರ ಜೊತೆ ಮಾತನಾಡಿದ ಜೇಟ್ಲಿ, ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷ ಶಿವಸೇನೆ ಜೊತೆಗಿನ ಭಿನ್ನಾಭಿಪ್ರಾಯಗಳು ಬೇರೆ ರೀತಿಯವು ಎಂದು ಹೇಳಿದರು. ‘ವಾಸ್ತವವಾಗಿ ಮಹಾರಾಷ್ಟ್ರದಲ್ಲಿ ನಾವು ಶಿವಸೇನೆಯನ್ನು ಹಿರಿಯ ಪಾಲುದಾರನಾಗಿ ಪರಿಗಣಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ನೀಡಿದ್ದೆವು ಎಂದು ಜೇಟ್ಲಿ ನುಡಿದರು. ಸೇನೆಯು ಹಠಮಾರಿತನ ಮುಂದುವರೆಸಿದ್ದರಿಂದ ಉಭಯ ಪಕ್ಷಗಳು ವಿಧಾನಸಭಾ ಚುನಾವಣೆಗೂ ಮೊದಲೇ ಪ್ರತ್ಯೇಕ ಹಾದಿ ಹಿಡಿದು ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದಲೇ ಸ್ಪರ್ಧಿಸಿದವು ಎಂದು ಜೇಟ್ಲಿ ವಿವರಿಸಿದರು. ಚುನಾವಣೆಯಲ್ಲಿ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಳಿ, ಎರಡೂ ಮಿತ್ರ ಪಕ್ಷಗಳು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕೈಜೋಡಿಸಿದವು. ಬಳಿಕ ಬಿಜೆಪಿ ವಿರುದ್ಧ ದಾಳಿ ನಡೆಸಲು ಶಿವಸೇನೆ ಪ್ರತಿಯೊಂದು ರಾಜಕೀಯ ವಿಷಯವನ್ನೂ ಬಿಡದ ಟೀಕೆ ಮುಂದುವರೆಸುತ್ತಿರುವುದರಿಂದ ಅದರ ಜೊತೆಗಿನ ಬಾಂಧವ್ಯ ಸೂಕ್ಷ್ಮವಾಗಿಯೇ ಮುಂದುವರೆದಿದೆ ಎಂದು ಜೇಟ್ಲಿ ನುಡಿದರು. ‘ಎನ್ಡಿಎ ಅಖಂಡವಾಗಿರಬೇಕು ಮತ್ತು ನಮ್ಮ ಎಲ್ಲ ಮಿತ್ರ ಪಕ್ಷಗಳೂ ನಮ್ಮ ಜೊತೆಗಿರಬೇಕು ಎಂದು ನಾನು ಬಯಸುತ್ತೇನೆ ಎಂದು ಜೇಟ್ಲಿ ಅವರುಉಭಯ ಪಕ್ಷಗಳು ಲೋಕಸಭಾ ಚುನಾವಣೆಗೆ ಒಟ್ಟಾಗಿ ಹೋಗಲಿವೆಯೇ?’ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದರು.  ಮುಂದಿನ ಮಹಾಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇರಲು ಶಿವಸೇನೆಯು ಕಳೆದು ತಿಂಗಳು ಮುಂಬೈಯಲ್ಲಿ ನಡೆದ ತನ್ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು.

2018: ಲಕ್ನೋ: ಮುಸ್ಲಿಮರು ರಾಷ್ಟ್ರಧ್ವಜವನ್ನು ಗೌರವಿಸುತ್ತಿಲ್ಲ ಎಂಬ ಆಪಾದನೆಗಳಿಂದ ಭ್ರಮನಿರಸನಗೊಂಡ ಆಗ್ರಾದ ಮುಸ್ಲಿಮ್ ಸಮುದಾಯದ ಸದಸ್ಯರು ತಿರಂಗಾ ಯಾತ್ರೆ ನಡೆಸಲು ನಿರ್ಧರಿಸಿದ್ದು, ಸುಮಾರು ೫೦೦ ಮಂದಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸಾಮಾಜಿಕ ಕಾರ್ಯಕರ್ತ ಶಬಾನಾ ಖಂಡೇಲ್ವಾಲ್ ಅವರು ಇತೀಚೆಗಿನ ಕಸ್ ಗಂಜ್ ಕೋಮು ಘರ್ಷಣೆಗಳಿಂದ ಬೇಸತ್ತು, ಇಂತಹ ಘಟನೆಗಳು ಸಮಾಜ ತಲೆತಗ್ಗಿಸುವಂತಹ ಘಟನೆಗಳು ಎಂದು ಹೇಳಿ, ಭಾರತೀಯ ಮುಸ್ಲಿಮರು ರಾಷ್ಟ್ರಭಕ್ತಿಯಲ್ಲಿ ಮತ್ತು ರಾಷ್ಟ್ರಕ್ಕೆ ಬದ್ಧತೆ ವ್ಯಕ್ತ ಪಡಿಸುವಲ್ಲಿ ಯಾರಿಗೂ ಕಮ್ಮಿ ಇಲ್ಲ ಎಂದು ದೃಢ ಪಡಿಸಲು ತಿರಂಗಾ ಯಾತ್ರೆ ಹಮ್ಮಿಕೊಂಡಿರುವುದಾಗಿ ಇಲ್ಲಿ ಪ್ರಕಟಿಸಿದರು. ಭಾರತದಲ್ಲಿನ ಮುಸ್ಲಿಮರ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ಸಮಾಜಕ್ಕೆ ತಪ್ಪು ಸಂದೇಶವನ್ನು ಹರಡುತ್ತಿವೆ. ’ಮುಸ್ಲಿಮರು ಭಾರತದ ರಾಷ್ಟ್ರಧ್ವಜವನ್ನು ಗೌರವಿಸುತ್ತಿಲ್ಲ ಎಂಬ ಮಿಥ್ಯೆಗೆ ಕೊನೆ ಹಾಡಲು ನಾವು ಬಯಸಿದ್ದೇವೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ೫೦೦ಕ್ಕೂ ಹೆಚ್ಚು ಮುಸ್ಲಿಮರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ತ್ರಿವರ್ಣ ಧ್ವಜ ಹಿಡಿದು ಶಾಂತಿಯ ಸಂದೇಶ ನೀಡಲು ಮೆರವಣಿಗೆ ನಡೆಸಲಿದ್ದಾರೆ ಎಂದು ಶಬಾನಾ ಖಂಡೇಲ್ವಾಲ್ ನುಡಿದರು. ತಿರಂಗಾ ಯಾತ್ರೆ ನಡೆಸಲು ಆಡಳಿತದ ಅನುಮತಿಗಾಗಿ ಈಗಾಗಲೇ ಕೋರಿಕೆ ಸಲ್ಲಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ತಿರಂಗಾ ಯಾತ್ರೆಗೆ ಅನುಮತಿ ಕೋರಿ ಶನಿವಾರ ಪತ್ರ ಸಲ್ಲಿಸಲಾಗಿದೆ. ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು ನಾವು ಶಹೀದ್ ಸ್ಮಾರಕದಿಂದ ಎಂಜಿ ರಸ್ತೆಗೆ ಮೆರವಣಿಗೆ ನಡೆಸಲಿದ್ದೇವೆ. ಎಂಜಿ ರಸ್ತೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ನಮ್ಮ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಏನಿದ್ದರೂ ಬಗ್ಗೆ ತಮಗೆ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಆಗ್ರಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ’ಇಂತಹ ಕಾರ್ಯಕ್ರಮದ ಬಗ್ಗೆ ಈವರೆಗೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ನಿಯಮ ಪ್ರಕಾರ ಆಡಳಿತವು ಪೊಲೀಸರಿಂದ ವರದಿ ಕೋರಲಿದೆ ಮತ್ತು ಪರಿಸ್ಥಿತಿಯ ವಿಶ್ಲೇಷಣೆಯ ಬಳಿಕ ಮಾತ್ರವೇ ಅನುಮತಿ ನೀಡಲಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಹೇಳಿದರು. ಕೆಲವು ದಿನಗಳ ಹಿಂದೆ ಆಡಳಿತವು ತಿರಂಗಾಯಾತ್ರೆ ನಡೆಸಲು ವಿಶ್ವ ಹಿಂದೂ ಪರಿಷತ್ತಿಗೆ ಜಿಲ್ಲಾ ಆಡಳಿತ ಅನುಮತಿ ನೀಡಿರಲಿಲ್ಲ. ಹೀಗಾಗಿ ಶಹೀದ್ ಸ್ಮಾರಕದಲ್ಲೇ ಮೆರವಣಿಗೆಯನ್ನು ತಡೆ ಹಿಡಿದು ಅಲ್ಲಿಯೇ ವಿಎಚ್ಪಿ ಸದಸ್ಯರಿಂದ ಮನವಿ ಪತ್ರ ಸ್ವೀಕರಿಸಲಾಗಿತ್ತು. ಮಧ್ಯೆ ಕಸ್ಗಂಜ್ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ, ಯೋಗಿ ಆದಿತ್ಯನಾಥ್ ಸರ್ಕಾರವು ಮುಸ್ಲಿಮರ ವಿರುದ್ಧ ಪೂರ್ವಾಗ್ರಹ ಹೊಂದಿದ್ದು, ಕಸ್ ಗಂಜ್ ಹಿಂಸಾಚಾರದ ಬಳಿಕ ಹಲವಾರು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ ಎಂದು ಜಮಾತ್--ಇಸ್ಲಾಮಿ ಹಿಂದ್ (ಜೆಐಎಚ್) ಆಪಾದಿಸಿದೆ. ಗಲಭೆಯಲ್ಲಿ ೨೨ರ ಹರೆಯದ ಯುವಕನೊಬ್ಬ ಸಾವನ್ನಪ್ಪಿದ್ದ. ಕಸ್ ಗಂಜ್ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಜೆಐಎಚ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಲೀಮ್ ಆಗ್ರಹಿಸಿದರು.

2018: ಮಾಲೆ: ಸಂಸದೀಯ ಮಹಾ ಕಾರ್ಯದರ್ಶಿ (ಸೆಕ್ರೆಟರಿ ಜನರಲ್) ರಾಜೀನಾಮೆಯನ್ನು ಅನುಸರಿಸಿ ವಿರೋಧೀ ಶಾಸನಕರ್ತರು ಸಂಸತ್ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಸೇನೆಯು ಸಂಸತ್ತಿಗೆ ಮುತ್ತಿಗೆ ಹಾಕಿದೆ ಎಂದು ವರದಿಗಳು ತಿಳಿಸಿದವು. ಭಾರಿ ಸೇನಾ ಮುತ್ತಿಗೆಯ ನಡುವೆಯೂ ವಿರೋಧಿ ಶಾಸನಕರ್ತರಲ್ಲಿ ಕೆಲವರಿಗೆ ಒಳಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಈದಿನ ಬೆಳಗ್ಗೆ ಸಂಸದೀಯ ಕಾರ್ಯದರ್ಶಿ ಅಹ್ಮದ್ ಮೊಹಮ್ಮದ್ ಅವರು ಯಾವುದೇ ಕಾರಣವನ್ನೂ ನೀಡದೆ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದರು. ಫೆಬ್ರುವರಿ 5ರ  ಸೋಮವಾರ ನಡೆಯಬೇಕಾಗಿದ್ದ ೨೦೧೮ರ ಮೊದಲ ಸಂಸದೀಯ ಅಧಿವೇಶವನ್ನು ಭದ್ರತಾ ಕಾರಣಗಳಿಗಾಗಿ ಅನಿರ್ದಿಷ್ಟ ಅವಧಿಗೆ ರದ್ದು ಪಡಿಸಿದ ಬಳಿಕ ರಾಜೀನಾಮೆ ಪ್ರಹಸನ ಘಟಿಸಿತು. ಹೊಸ ಬಿಕ್ಕಟ್ಟು: ಸ್ವಯಂ ಗಡೀಪಾರು ಘೋಷಿಸಿಕೊಂಡಿರುವ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಸೇರಿದಂತೆ ಸೆgಮನೆಗಳಲ್ಲಿ ಇರುವ ಎಲ್ಲ ರಾಜಕೀಯ ನಾಯಕರನ್ನೂ ತತ್ ಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಫೆ.1ರ ಗುರುವಾರ ಆದೇಶ ನೀಡಿದ ಬಳಿಕ ಮಾಲ್ದೀವ್ಸ್ ನಲ್ಲಿ ರಾಜಕೀಯ ಬಿಕ್ಕಟ್ಟಿನ ಹೊಸ ಸುಳಿ ಎದ್ದಿತು. ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವು ಅಧ್ಯಕ್ಷ ಅಬ್ದುಲ್ಲ ಯಾಮೀನ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡುವ ಸಾಧ್ಯತೆ ಇದ್ದು, ಇಂತಹ ಆದೇಶವನ್ನು ಜಾರಿಗೊಳಿಸಬಾರದು ಎಂದು ಪೊಲೀಸ್ ಮತ್ತು ಸೇನೆ ಒತ್ತಾಯಿಸುತ್ತಿರವುದಾಗಿ ಮಾಲ್ದೀವ್ ಸರ್ಕಾರ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿತು. ಯಾಮೀನ್ ಬಂಧನಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡುವುದು ಖಚಿತ ಎಂಬ ವರ್ತಮಾನ ತಮಗೆ ಬಂದಿದೆ ಎಂದು ಪೊಲೀಸ್ ಮುಖ್ಯಸ್ಥರು ಮತ್ತು ಪೊಲೀಸ್ ಮುಖ್ಯಸ್ಥರ ಹಿಂಭಾಗದಲ್ಲಿ ಕುಳಿತಿದ್ದ ಅಟಾರ್ನಿ ಜನರಲ್ ಮೊಹಮ್ಮದ್ ಅನಿಲ್ ಹೇಳಿದರು. ಏನಿದ್ದರೂ, ಸುಪ್ರೀಂಕೋರ್ಟಿನ ಇಂತಹ ಕ್ರಮವು ಸಂವಿಧಾನ ಬಾಹಿರ ಎಂದು ಬಣ್ಣಿಸಿರುವ ಅಟಾರ್ನಿ ಜನರಲ್ ಪೊಲೀಸ್ ಮತ್ತು ಸೇನೆ ಅಧ್ಯಕ್ಷರನ್ನು ಬಂಧಿಸುವಂತೆ ಸುಪ್ರೀಂಕೋರ್ಟ್ ಮಾಡಬಹುದಾದ ಯಾವುದೇ ಆದೇಶವನ್ನು ತಿರಸ್ಕರಿಸಲಿವೆ ಎಂದು ಹೇಳಿದರು.

2018: ನವದೆಹಲಿ:  ನೋಟು ಅಮಾನ್ಯೀಕರಣದ ಅವಧಿಯಲ್ಲಿ ೧೫ ಲಕ್ಷ ರೂ. ಗಳಿಗಿಂತ ಹೆಚ್ಚು ಮೊತ್ತವನ್ನು ಖಾತೆಯಲ್ಲಿ ಠೇವಣಿ ಇಟ್ಟವರಿಗೆ ಸಂಕಷ್ಟ ಎದುರಾಗಿದೆ. ಅಷ್ಟೊಂದು ಮೊತ್ತ ಹೇಗೆ ಬಂತು ಎಂಬ ವಿವರವನ್ನೂ ನೀಡದೇ ರಿಟರ್ನ್ಸ್ ಅನ್ನೂ ಸಲ್ಲಿಸದೇ ಇದ್ದ ಸುಮಾರು .೯೮ ಲಕ್ಷ ಖಾತೆದಾರರು ಕಾನೂನಿನ ಅನ್ವಯ ಕಠಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಸಂಶಯಾಸ್ಪದ ಖಾತೆಗಳನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆಯು ಕಳೆದ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಖಾತೆದಾರರಿಗೆ ಲಕ್ಷ ನೋಟಿಸ್ಗಳನ್ನು ಜಾರಿ ಮಾಡಿತ್ತು.  ಆದರೆ, ಅದಕ್ಕೆ ಯಾರೂ ಉತ್ತರ ನೀಡಿಲ್ಲ. ಹೀಗಾಗಿ, ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಅಥವಾ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ಹೇಳಿದರು. ದೇಶಾದ್ಯಂತ ಕಳೆದ ತಿಂಗಳಲ್ಲಿ ಸುಮಾರು ಸಾವಿರ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕೈಕ ಪರ್ಯಾಯ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜಿವಾಲ ಹೇಳಿದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಏಕತೆಯು ಭಾರಿ ಬದಲಾವಣೆಯ ಅಲೆಯನ್ನೇ ತರಲಿದೆ ಎಂದು ಅವರು ಒತ್ತಿ ಹೇಳಿದರು. ಈಗ ದೇಶದಲ್ಲಿ ಎರಡು ಮಾದರಿಗಳಿವೆ- ಒಂದು ಮೋದಿ ಅವರು ಪ್ರತಿನಿಧಿಸುವ ಮಾದರಿಯಾಗಿದ್ದರೆ ಇನ್ನೊಂದು ಕಾಂಗ್ರೆಸ್ ಅಧ್ಯಕ್ಷರು ಪ್ರತಿನಿಧಿಸುವ ಮಾದರಿ ಎಂದು ಸುರ್ಜಿವಾಲ ನುಡಿದರು. ‘ಇಂದು ಎರಡು ಮಾದರಿಗಳಿವೆ. .. ದಿನಕ್ಕೆ ಆರು ಬಾರಿ ಬಟ್ಟೆ ಬದಲಾಯಿಸುವ ಮೂಲಕ ದೇಶದ ವ್ಯವಹಾರಗಳಿಗಿಂತ ತಮ್ಮ ಬಟ್ಟೆ ಮೇಲೆ ಹೆಚ್ಚು ವಿಶ್ವಾಸ ಇಟ್ಟಿರುವಮೋದಿ ಮಾದರಿ ಒಂದು. ಇನ್ನೊಂದು ಸರಳತೆ ಮತ್ತು ಸ್ಪಷ್ಟತೆ ಬಗ್ಗೆ ಬೆಳಕು ಚೆಲ್ಲುವ  ರಾಹುಲ್ ಮಾದರಿ ಎಂದು ಪಕ್ಷದ ಮಾಧ್ಯಮ ಮುಖ್ಯಸ್ಥ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ತಮ್ಮ ಸಂದರ್ಶನದಲ್ಲಿ ಹೇಳಿದರು.  ರಾಹುಲ್ ಗಾಂಧಿ ಅವರು ಮೋದಿ ಅವರಿಗೆ ಏಕೈಕ ಪರ್ಯಾಯ. ರಾಷ್ಟ್ರವು ಅವರನ್ನು ಮುಂದಿನ ಪ್ರಧಾನಿಯನ್ನಾಗಿ ನೋಡಬಯಸಿದೆ ಎಂದು ಅವರು ನುಡಿದರು.  ವಿರೋಧ ಪಕ್ಷಗಳ ಏಕತೆ ಪ್ರಯತ್ನ ಬಗ್ಗೆ ಕೇಳಿದಾಗ, ಸುರ್ಜಿವಾಲ ಅವರು, ’ಎನ್ಡಿಎ ಅಂಗಪಕ್ಷಗಳಾದ ಶಿವಸೇನೆ ಮತ್ತು  ತೆಲುಗುದೇಶಂ ಪಕ್ಷಗಳು (ಟಿಡಿಪಿ) ಬಿಜೆಪಿ ಜೊತೆಗೆ ಅಸಹನೆ ಪ್ರಕಟಿಸುತ್ತಿದ್ದರೆ, ಕಾಂಗ್ರೆಸ್ ವಿರೋಧ ಪಕ್ಷಗಳನ್ನು ಒಗ್ಗೂಡಿಸುತ್ತಿದೆ, ೨೦೧೯ರ ಲೋಕಸಭಾ ಚುನಾವಣೆ ಬದಲಾವಣೆಯ ಭಾರಿ ಅಲೆಯನ್ನೇ ತರಲಿದೆ ಎಂದು ಹೇಳಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ ಪ್ರಕಟಿಸಿತು. ತೆಲುಗುದೇಶಂ ಪಕ್ಷವು ೨೦೧೮-೧೯ರ ಕೇಂದ್ರ ಮುಂಗಡಪತ್ರವನ್ನು ಕಟುವಾಗಿ ಟೀಕಿಸಿತ್ತು. ಎಂಟು ರಾಜ್ಯಗಳಲ್ಲಿ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ವಕ್ತಾರ, ’ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿರುವ ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬರುವ ಬಗ್ಗೆ ನಮಗೆ ವಿಶ್ವಾಸವಿದೆ. ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಪಕ್ಷವು ಗಳಿಸಿದ ವಿಜಯ ಕೇವಲ ಟ್ರೇಲರ್. ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ಚುನಾವಣೆ ನಡೆಯಲಿರುವ ಇತರ ರಾಜ್ಯಗಳಲ್ಲಿ ಪಕ್ಷವು ಭಾರಿ ಅಂತರದೊಂದಿಗೆ ವಿಜಯ ಸಾಧಿಸಲಿದೆ ಎಂದು ಹೇಳಿದರು.

2018: ನವದೆಹಲಿ: ಭಾರತದ  ೨೨ ಮಂದಿ ಹಾಗೂ ಗ್ಯಾಸೊಲಿನ್ ಇಂಧನ ಸೇರಿ ಸುಮಾರು ೫೨ ಕೋಟಿ ರೂಪಾಯಿ ಮೌಲ್ಯದ ಸರಕನ್ನು ಹೊತ್ತು ಮುಂಬಯಿಯಿಂದ ಹೊರಟು ಪಾಶ್ಚಾತ್ಯ ದೇಶಗಳ ಕಡೆಗೆ ಪಯಣಿಸಿದ್ದ ತೈಲ ನೌಕೆ ಆಫ್ರಿಕಾದ ಪಶ್ಚಿಮ ರಾಷ್ಟ್ರವಾದ ಬೆನಿನ್ ಬಳಿ ನಾಪತ್ತೆಯಾಗಿದ್ದು, ಅಪಹರಣದ ಶಂಕೆ ತಲೆದೋರಿತು. ಜನವರಿ ೩೧ ಬಳಿಕ ಹಡಗು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿದವು.  ಹಡಗಿನ ಸಿಬ್ಬಂದಿಯ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಹಡಗು ಪತ್ತೆಹಚ್ಚಲು ನೆರವಾಗಲು ಸರ್ಕಾರಕ್ಕೆ ಮೊರೆ ಇಟ್ಟರು. ಹೆಚ್ಚು ಕಡಿಮೆ ತಿಂಗಳ ಅಂತರದಲ್ಲಿ ಸಾಪತ್ತೆಯಾದ ಎರಡನೆಯ ಹಡಗು ಇದಾಗಿದೆ. ಬೆನಿನ್ ಕರಾವಳಿಯಲ್ಲಿ ಎಂ.ಟಿ.. ಮರೈನ್ ಎಕ್ಸ್ಪ್ರೆಸ್ ಎಂಬ ನೌಕೆಯನ್ನು ಕಳೆದ ಜನವರಿ ತಿಂಗಳಲ್ಲಿ ಅಪಹರಿಸಿದ್ದ ಅಪಹರಣಕಾರರು ದಿನಗಳ ಬಳಿಕ ಬಿಡುಗಡೆ ಮಾಡಿದ್ದರು. ಹಡಗಿನಲ್ಲೂ ಇದ್ದ ೨೨ ಸಿಬ್ಬಂದಿಯಲ್ಲಿ ಬಹುತೇಕ ಮಂದಿ ಭಾರತೀಯರಾಗಿದ್ದರು. ಅಪಹರಣಕಾರರ ಬೇಡಿಕೆಯಂತೆ ಹಣ ಕೊಟ್ಟ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈಗ ಕಣ್ಮರೆಯಾಗಿರುವ ಹಡಗು ಪನಾಮ ನೋಂದಣಿ ಹೊಂದಿರುವ ವ್ಯಾಪಾರಿ ಹಡಗಾಗಿದೆ. ಹಡಗಿನ ಶೋಧಕಾರ್ಯಕ್ಕೆ ಸಹಾಯ ಮಾಡುವಂತೆ ಹಡಗಿನ ಮಾಲೀಕರು ಮುಂಬೈಯ ಹಡಗು ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದರು.  ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಸಂಪರ್ಕಿಸಲಾಗಿದ್ದು, ತಕ್ಷಣ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಫೆಬ್ರುವರಿ ೧ರ ಗುರುವಾರದಂದು ಹಡಗಿನ ಸಿಬ್ಬಂದಿಯನ್ನು ಕೊನೆಯ ಬಾರಿಗೆ ಸಂಪರ್ಕಿಸಲಾಗಿದೆ ಎಂದು ಹಡಗಿನ ಮಾಲಿಕರು ಮಾಹಿತಿ ನೀಡಿದರು. ‘ನೈಜಿರೀಯಾ ಮತ್ತು ಬೆನಿನ್ ತೀರ ರಕ್ಷಣಾ ಪಡೆಯ ನಂತರ ಸಂಪರ್ಕ ಸಾಧಿಸಿದ್ದೇವೆ. ಮಾಹಿತಿ ಪಡೆಯುತ್ತಿದ್ದೇವೆ ಎಂದು ಶಿಪ್ಪಿಂಗ್ ಇಲಾಖೆಯ ಪ್ರಧಾನ ನಿರ್ದೇಶಕರರು ತಿಳಿಸಿದರು. ಹಡಗಿನ ಸಿಬ್ಬಂದಿಯನ್ನು ಸಂಪರ್ಕಿಸಲಾಗುತ್ತಿಲ್ಲ, ಹಣಕ್ಕಾಗಿ ಯಾವುದೇ ಕರೆಯೂ ಬಂದಿಲ್ಲ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಹಡಗು ಅಪಹರಣದ ಇತಿಹಾಸ ಇದೆ. ಆದರೆ ನೌಕೆಯ ಜೊತೆಗಿನ ಎಲ್ಲ ಸಂಪರ್ಕಗಳೂ ತಪ್ಪಿವೆ. ಈವರೆಗೆ ನಮಗೆ ಯಾವುದೇ ಹಣಕ್ಕಾಗಿ ಬೇಡಿಕೆಯೂ ಬಂದಿಲ್ಲ ಎಂದು ಅವರು ತಿಳಿಸಿದರು.  ನೈಜೀರಿಯಾದಲ್ಲಿನ ಅಬುಜಾದ (ನೈಜೀರಿಯಾ) ಭಾರತೀಯ ಮಿಷನ್ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕದಲ್ಲಿದ್ದು ಪರಿಸ್ಥಿತಿ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತು. ೨೪ ಗಂಟೆಗಳ ಹೆಲ್ಪ್ ಲೈನ್ ನಂಬರ್ ೨೩೪-೯೦೭೦೩೪೩೮೬೦ ಅನ್ನು ರಾಯಭಾರ ಕಚೇರಿಯು ಕಣ್ಮರೆಯಾದವರ ಬಗೆಗಿನ ಮಾಹಿತಿಗಾಗಿ ವ್ಯವಸ್ಥೆ ಮಾಡಿತು.


2017: ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇರುವ ಅಡ್ಡಿ ನಿವಾರಣೆಯಾಗುತ್ತಾ ಬರುತ್ತಿದ್ದು, ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹೇಳಿದರು. ಛತ್ತೀಸ್ಗಢ್ ರಾಮ ದೇವರ ಅಜ್ಜಿ ಮನೆ (ಅಮ್ಮ ಕೌಸಲ್ಯೆಯ ತವರುಮನೆ)ಯಾಗಿತ್ತು. ಜ್ಯೋತಿಷಿ ಮನ್ಯತಾ ಪ್ರಕಾರ ರಾಮ ಆತನ ಅಜ್ಜಿಮನೆಯಲ್ಲಿ ವಾಸಿಸಿದ್ದನು. ಇದೆಲ್ಲವೂ ರಾಮ ಮಂದಿರ ನಿರ್ಮಾಣದ ಹಾದಿಯನ್ನು ಸುಗಮ ಮಾಡಲಿದೆ ಎಂದು ಅವರು ನುಡಿದರು. ಗೋರಖ್‍‌ಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಆದಿತ್ಯನಾಥ್, ರಾಮನ ಜೀವನದಿಂದ ಪಾಠಗಳನ್ನು ಕಲಿಯಬೇಕಿದೆ. ದೇಶದ ನಿರ್ಮಾಣಕ್ಕಾಗಿ ಸಮಾಜದ ಪ್ರತೀ ವಿಭಾಗದ ಜನರೂ ಜತೆಯಾಗಿ ಸಾಗಬೇಕಿದೆ ಎಂದು ಹೇಳಿದರು. ಮರ್ಯಾದಾ ಪುರುಷೋತ್ತಮನಾದ ರಾಮ ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವನು. ಹಾಗೆಯೇ ದೇಶದ ನಿರ್ಮಾಣಕ್ಕಾಗಿ ದೇಶದಲ್ಲಿರುವ ದಲಿತರು, ಬುಡಕಟ್ಟು ಜನರು, ಹಿಂದುಳಿದ ವರ್ಗದವರು ಎಲ್ಲರೂ ಜತೆಯಾಗಿ ಸಾಗಬೇಕಿದೆ ಎಂದರು.
2017: ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್ ಫೆಬ್ರವರಿ 8 ಅಥವಾ 9ಕ್ಕೆ ಅಧಿಕಾರ ಸ್ವೀಕರಿಸಲಿದ್ದು, ನಿಟ್ಟಿನಲ್ಲಿ ವೇದಿಕೆ ಸಜ್ಜಾಗುತ್ತಿದೆ ಎಂದು ವರದಿಗಳು ತಿಳಿಸಿದವು. ಈ ನಡುವೆ ಸಿಎಂ ಪನ್ನೀರಸೆಲ್ವಂ ರಾಜ್ಯದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಸ್ಪರ್ಧೆಗೆ ಸುಗ್ರೀವಾಜ್ಞೆ ತರುವ ಮೂಲಕ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದು, ಅಷ್ಟು ಸುಲಭವಾಗಿ ಅಧಿಕಾರವನ್ನು ಬಿಟ್ಟುಕೊಡುವರೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಎಐಎಡಿಎಂಕೆ ಡಿಸೆಂಬರ್ 29ರಂದು ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ ಮಾಡಿತ್ತು. ಮಾಜಿ ಸಿಎಂ ಜಯಲಲಿತಾರ ಮುಖ್ಯಸಲಹಾಗಾರ್ತಿಯಾಗಿದ್ದ ಶೀಲಾ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ಹಿಂದಿನ ದಿನ ರಾಜೀನಾಮೆ ನೀಡಿದರು.  ಸಿಎಂ ಕಚೇರಿಯ ಮತ್ತಿಬ್ಬರು ಕಾರ್ಯದರ್ಶಿಗಳಾದ ಕೆಎಂ ವೆಂಕಟರಮಣನ್ ಮತ್ತು .ರಾಮಲಿಂಗಮ್ ಅವರಿಗೆ ರಾಜೀನಾಮೆ ನೀಡುವಂತೆ ತಿಳಿಸಲಾಗಿದೆ. ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿದ್ದ ಸಂದರ್ಭ ಸರ್ಕಾರವನ್ನು ಮುನ್ನಡೆಸುವಲ್ಲಿ ಬಾಲಕೃಷ್ಣನ್ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ವರದಿಗಳು ಹೇಳಿದವು.  ಪ್ರಸ್ತುತ ಬೆಳವಣಿಗೆ ಹಿನ್ನೆಲೆ ಸಿಎಂ ಕಚೇರಿಯನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುವತ್ತ ಶಶಿಕಲಾ ಕಾರ್ಯೋನ್ಮುಖರಾಗಿದ್ದು ಶೀಘ್ರದಲ್ಲೇ ಸಿಎಂ ಹುದ್ದೆಗೆ ಏರಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

2017: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವ್ಯಕ್ತಿಯೊಬ್ಬ ಭಾರತಕ್ಕೆ ಕರೆತಂದಿದ್ದ ಪಾಕಿಸ್ತಾನದ ತನ್ನ ವಿಚ್ಛೇದಿತ ಪತ್ನಿಯ 5 ವರ್ಷದ ಮಗುವನ್ನು ಒಂದು ವರ್ಷದ ನಂತರ ಮತ್ತೆ ತಾಯಿಯ ಮಡಿಲಿಗೆ ಸೇರಿಸಲಾಯಿತು.. ಭಾವುಕ ಕ್ಷಣಕ್ಕೆ ವಾಘಾ ಗಡಿ ಈದಿನ  ಸಂಜೆ 6.30ಕ್ಕೆ ಸಾಕ್ಷಿಯಾಯಿತು. ಇಫ್ತಿಕರ್ ಅಹಮದ್ ಎಂಬ ಬಾಲಕನನ್ನು ಬಿಎಸ್ಎಫ್ ಯೋಧರು ವಾಘಾ ಗಡಿಯಲ್ಲಿ ಪಾಕ್ ರೇಂಜರ್ಸ್ಗೆ ಸಂಜೆ ಹಸ್ತಾಂತರಿಸಿದರು. ಪಾಕ್ ಗಡಿಯಲ್ಲಿ ಇಫ್ತೀಕರ್ ಬರುವಿಕೆಗಾಗಿ ಕಾಯುತ್ತಿದ್ದ ಆಕೆಯ ತಾಯಿ ರೋಹಿನಾ ಕಿಯಾನಿ ಸಂತಸದಿಂದ ತನ್ನ ಮಗುವನ್ನು ಬರಮಾಡಿಕೊಂಡರು. 2016 ಮಾರ್ಚ್ನಲ್ಲಿ ರೋಹಿನಾ ಅವರ ಪತಿ ಇಫ್ತೀಕರ್ನನ್ನು ಮದುವೆ ಸಮಾರಂಭಕ್ಕೆ ಕರೆದುಕೊಂಡು ಹೋಗುವುದಾಗಿ ಸುಳ್ಳು ಹೇಳಿ ಭಾರತಕ್ಕೆ ಕರೆತಂದಿದ್ದರು. ದುಬೈ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕರೆತರಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೋಹಿನಾ ತನ್ನ ಮಗುವನ್ನು ವಾಪಸ್ಸು ಕಳುಹಿಸುವಂತೆ ಕೋರಿ ನವದೆಹಲಿಯ ಪಾಕ್ ರಾಯಭಾರ ಕಚೇರಿ ಮೂಲಕ ಭಾರತೀಯ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇಫೀಕರ್ ಪಾಕ್ ನಾಗರಿಕನಾಗಿರುವುದರಿಂದ ಆತನನ್ನು ತಾಯಿಯ ಬಳಿಗೆ ವಾಪಸ್ಸು ಕಳುಹಿಸಬೇಕು ಎಂದು ತೀರ್ಪು ನೀಡಿತ್ತು. ಆದರೆ ಭಾರತ-ಪಾಕಿಸ್ತಾನದ ನಡುವೆ ಘರ್ಷಣೆ ಹೆಚ್ಚಾದ ಕಾರಣ ಕಳೆದ 8 ತಿಂಗಳಿಂದ ಬಾಲಕನ್ನು ವಾಪಸ್ಸು ಕಳುಹಿಸಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಈದಿನ  ಬಾಲಕನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲಾಯಿತು..
2017: ಉದಯಪುರ: ಆರೋಗ್ಯವಂತ ವ್ಯಕ್ತಿಗೆ ಹಲವು ವರ್ಷಗಳ ಕಾಲ ಎಚ್ಐವಿ ಚಿಕಿತ್ಸೆ ನೀಡಿದ
ವೈದ್ಯನಿಗೆ ರಾಜಸ್ಥಾನ ಗ್ರಾಹಕ ವ್ಯಾಜ್ಯ ಇತ್ಯರ್ಥ ಆಯೋಗ ಎಚ್ಚರಿಕೆ ನೀಡಿದ್ದು, ಚಿಕಿತ್ಸೆ ಪಡೆದ ವ್ಯಕ್ತಿಗೆ ಪರಿಹಾರ ನೀಡುವಂತೆ ಸೂಚಿಸಿತು.  2004ರಲ್ಲಿ ರಾಜಸ್ಥಾನದ ಧನರಾಜ್ ಪಟೇಲ್ ಎಂಬುವವರು ಜ್ವರ, ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರು. ಧನರಾಜ್ ಎಂ.ಬಿ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಡಿ.ಸಿ. ಕುಮಾವತ್ ಅವರ ಬಳಿ ಚಿಕಿತ್ಸೆಗಾಗಿ ತೆರಳಿದ್ದರು. ಧನರಾಜ್ ಅವರನ್ನು ಪರೀಕ್ಷಿಸಿದ ವೈದ್ಯ ಎಚ್ಐವಿ ರೋಗ ಇರುವ ಶಂಕೆ ವ್ಯಕ್ತಪಡಿಸಿ ಚಿಕಿತ್ಸೆ ಆರಂಭಿಸಿದ್ದರು. ಆದರೆ ರೋಗ ಇರುವ ಕುರಿತು ದೃಢಪಡಿಸಿಕೊಳ್ಳಲು ಯಾವುದೇ ವೈಜ್ಞಾನಿಕ ಪರೀಕ್ಷೆ ನಡೆಸಿರಲಿಲ್ಲ. ಸತತ ಮೂರು ವರ್ಷಗಳ ಕಾಲ ಧನರಾಜ್ ಎಚ್ಐವಿ ಚಿಕಿತ್ಸೆ ಪಡೆದಿದ್ದರು. ನಂತರ ಧನರಾಜ್ ಮುಂಬೈನ ಆಸ್ಪತ್ರೆಯೊಂದರಲ್ಲಿ ಎಚ್ಐವಿ ಪರೀಕ್ಷೆ ಮಾಡಿಕೊಂಡಿದ್ದರು. ಸಂದರ್ಭದಲ್ಲಿ ಧನರಾಜ್ ಅವರಿಗೆ ಎಚ್ಐವಿ ಸೋಂಕು ತಗಲಿಲ್ಲ ಎಂಬುದು ತಿಳಿದು ಬಂದಿತ್ತು. ವರದಿಯನ್ನು ಕುಮಾವತ್ ಅವರಿಗೆ ತೋರಿಸಿದರೂ ಸಹ ಎಚ್ಐವಿ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದ್ದರು. ಸತತ 7 ವರ್ಷ ಎಚ್ಐವಿ ಚಿಕಿತ್ಸೆ ಪಡೆದ ಕಾರಣ ಔಷಧದ ಅಡ್ಡಪರಿಣಾಮದಿಂದಾಗಿ ಧನರಾಜ್ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂದರ್ಭದಲ್ಲಿ ಧನರಾಜ್ ಅವರಿಗೆ ಆರೋಗ್ಯ ವಿಮೆ ನೀಡಲು ವಿಮಾ ಕಂಪನಿ ಸಹ ನಿರಾಕರಿಸಿತ್ತು. ಧನರಾಜ್ 2013ರಲ್ಲಿ ಗ್ರಾಹಕ ಆಯೋಗಕ್ಕೆ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಇರುವುದು ಸಾಬೀತಾದ ಹಿನ್ನೆಲೆಯಲ್ಲಿ ಧನರಾಜ್ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ವೈದ್ಯ ಮತ್ತು ವಿಮಾ ಕಂಪನಿಗೆ ಆಯೋಗ ಸೂಚಿಸಿತು.
2017: ಇಸ್ಲಾಮಾಬಾದ್: ಅಮೆರಿಕದ ಒತ್ತಡಕ್ಕೆ ಮಣಿದು ಪಾಕಿಸ್ತಾನ ಸರ್ಕಾರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಬಂಧಿಸಿ ಗೃಹ ಬಂಧನದಲ್ಲಿ ಇರಿಸಿದ ಬೆನ್ನಲ್ಲೇ ಹಫೀಜ್ ಸಯೀದ್ ಜಮಾತ್ ಉದ್ ದುವಾ ಉಗ್ರ ಸಂಘಟನೆ ಹೆಸರು ಬದಲಿಸಿಕೊಂಡು ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಿರುವುದು ಬೆಳಕಿಗೆ ಬಂದಿತು. ಜಮಾತ್ ಉದ್ ದುವಾ ಈಗ ತೆಹ್ರಿಕ್ ಅಜಾದಿ ಜಮ್ಮು ಮತ್ತು ಕಾಶ್ಮೀರ (ಟಿಎಜೆಕೆ) ಎಂದು ತನ್ನ ಹೆಸರನ್ನು ಬದಲಿಸಿಕೊಂಡಿದೆ. ಮೂಲಕ ತನ್ನ ಸಂಘಟನೆಯ ಕೆಲಸ ಕಾರ್ಯಗಳು ನಿಲ್ಲದಂತೆ ಹಫೀಜ್ ಎಚ್ಚರಿಕೆ ವಹಿಸಿದ್ದಾನೆ. ಜಮಾತ್ ಉದ್ ದುವಾ ಮತ್ತು ಫಲಾಹ್ ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್) ಸಂಘಟನೆಗಳು ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿವೆ ಎಂದು ವರದಿಗಳು ಹೇಳಿದವು. ಹೊಸ ಸಂಘಟನೆ ಫೆಬ್ರವರಿ 5 ರಂದು ಪಾಕಿಸ್ತಾನದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಮೂಲಕ ಹೊಸ ಹೆಸರನ್ನು ಪ್ರಚುರ ಪಡಿಸಲು ಯೋಜನೆ ರೂಪಿಸಿದೆ. ಹೊಸ ಹೆಸರಿನ ಆಧಾರದ ಮೇಲೆ ಉಗ್ರರು ಈಗಾಗಲೇ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳ ಮೂಲಗಳು ತಿಳಿಸಿದವು. ಪಾಕಿಸ್ತಾನ ಸರ್ಕಾರ ಹಫೀಜ್ ಸಯೀದ್ ಸಂಘಟನೆಯ ಮೇಲೆ ಮತ್ತು ಅದರ ಕಾರ್ಯಕರ್ತರ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆದರೂ ಸಹ ಜೆಯುಡಿ ಕಾರ್ಯಕರ್ತರು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿದವು.
2017: ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಜಾಹೀರಾತಿನಲ್ಲಿ ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಪೇಟಿಎಂ ಮತ್ತು ರಿಲಯನ್ಸ್ ಜಿಯೋ ಕಂಪನಿಗಳಿಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ನೋಟಿಸ್ ನೀಡಿತು. ಪ್ರಧಾನಿ ಮೋದಿ ಅವರ ಫೋಟೋ ಬಳಕೆ ಮಾಡಿಕೊಳ್ಳಲು ಅನುಮತಿ ಪಡೆಯಲಾಗಿತ್ತೇ ಎಂದು ಕೇಂದ್ರ ಸಚಿವಾಲಯ ತನ್ನ ನೋಟಿಸ್ನಲ್ಲಿ ಪ್ರಶ್ನಿಸಿತು.. ಜತೆಗೆ ಸಂಬಂಧ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದೆ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಲಾಂಛನಗಳು ಮತ್ತು ಫೋಟೋಗಳನ್ನು ಬಳಕೆ ಮಾಡುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯ ಎಂದು ಪ್ರಚಾರ ಮಾಡುವಂತೆ ತನ್ನ ಪತ್ರದಲ್ಲಿ ಕೋರಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಮೂಲಗಳು ತಿಳಿಸಿದವು. ನಂ. 8 ರಂದು ಅನಾಣ್ಯೀಕರಣ ಆದೇಶ ಹೊರಬಿದ್ದ ನಂತರ ಪೇಟಿಎಂ ತನ್ನ ಜಾಹೀರಾತುಗಳನ್ನು ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಬಳಕೆ ಮಾಡಿಕೊಂಡು ಡಿಜಿಟಲ್ ಪಾವತಿ ಮಾಧ್ಯಮ ಬಳಸಿ ಎಂದು ಕರೆ ನೀಡಿತ್ತು. ರಿಲಯನ್ಸ್ ಜಿಯೋ ಸಹ ತನ್ನ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಭಾಗವೆಂದು ತನ್ನ ಜಾಹೀರಾತಿನಲ್ಲಿ ಬಿಂಬಿಸಿತ್ತು. ಮೋದಿ ಅವರ ಫೋಟೋಗಳನ್ನು ತಮ್ಮ ಜಾಹೀರಾತಿನಲ್ಲಿ ಬಳಕೆ ಮಾಡಿಕೊಂಡ ಕಾರಣಕ್ಕಾಗಿ ಎರಡು ಕಂಪನಿಗಳ ವಿರುದ್ಧ ರಾಜಕೀಯ ನಾಯಕರು ಮತ್ತು ಹಲವರು ಟೀಕೆ ಮಾಡಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರು ಕಂಪನಿಗಳಿಂದ ಲಾಭ ಪಡೆಯುತ್ತಿದ್ದಾರೆ ಮತ್ತು ಕಂಪನಿಗಳ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ ಇಬ್ಬರು ಉಗ್ರರನ್ನು ಕೊಂದುಹಾಕಿದರು. ಪುಲ್ಗಾಮ ಪ್ರದೇಶದ ಅವೂರ ಎಂಬಲ್ಲಿ ಉಗ್ರರು ನುಸುಳಿರುವ ನಿಖರ ಮಾಹಿತಿ ಪಡೆದ ಬಿಎಸ್ಎಫ್ ಯೋಧರು ಈದಿನ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದರು. ಘಟನಾ ಸ್ಥಳದಲ್ಲಿ ಒಂದು ಎಕೆ-47 ರೈಫಲ್ ಮತ್ತು ಒಂದು ಪಿಸ್ತೂಲ್ಅನ್ನು ವಶಪಡಿಸಿಕೊಳ್ಳಲಾಯಿತು.
2009: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ 'ಸಿದ್ಧಗಂಗಾಶ್ರೀ' ಪ್ರಶಸ್ತಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಕೊಡುಗೆಯಾದ ಪ್ರಶಸ್ತಿಯನ್ನು ಮಠದ ಹಳೆಯ ವಿದ್ಯಾರ್ಥಿಯೂ ಆದ ಕವಿ ಶಿವರುದ್ರಪ್ಪ ಅವರಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರದಾನ ಮಾಡಿ, ಆಶೀರ್ವದಿಸಿದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಶಿವರುದ್ರಪ್ಪ ಅವರು ತೆಗೆದುಕೊಳ್ಳದೆ ಮಠದ ದಾಸೋಹ ನಿಧಿಗೆ ಅರ್ಪಿಸಿದರು.

2009: ಹಲವು ಔಷಧೀಯ ಗುಣಗಳ ಆಗರವಾಗಿರುವ 'ತುಳಸಿ' ಸಸ್ಯವನ್ನು ಅದ್ಭುತ ಪ್ರೇಮಸೌಧ 'ತಾಜ್ ಮಹಲ್' ರಕ್ಷಣೆಗಾಗಿ ಈಗ ಬಳಸಿಕೊಳ್ಳಲಾಗುತ್ತಿದೆ ಎಂದು 'ಆರ್ಗ್ಯಾನಿಕ್ ಇಂಡಿಯಾ'ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣನ್ ಗುಪ್ತಾ ಲಖನೌದಲ್ಲಿ ಪ್ರಕಟಿಸಿದರು. 'ತಾಜ್ ಮಹಲ್' ಅನ್ನು ವಾಯು ಮಾಲಿನ್ಯದಿಂದ ರಕ್ಷಿಸಲು ಉತ್ತರಪ್ರದೇಶದ ಅರಣ್ಯ ಇಲಾಖೆ ಹಾಗೂ ಲಖನೌ ಮೂಲದ ಆರ್ಗ್ಯಾನಿಕ್ ಇಂಡಿಯಾ ಕಂಪೆನಿ ಜಂಟಿಯಾಗಿ ಹತ್ತು ಲಕ್ಷ ತುಳಸಿ ಗಿಡಗಳನ್ನು ನೆಡಲು ನಿರ್ಧರಿಸಿವೆ ಎಂದು ಅವರು ಹೇಳಿದರು. ಈಗಾಗಲೇ 20 ಸಾವಿರ ತುಳಸಿ ಗಿಡಗಳನ್ನು ನೆಡಲಾಗಿದೆ. ತಾಜಮಹಲ್ ಸುತ್ತಲಿನ ಪಾರ್ಕ್‌ಗಳು ಹಾಗೂ ಆಗ್ರಾದಾದ್ಯಂತ ಇನ್ನಷ್ಟು ಸಸಿಗಳನ್ನು ನೆಡಲಾಗುವುದು ಎಂದು ಕೃಷ್ಣನ್ ಗುಪ್ತಾ ತಿಳಿಸಿದರು. ತುಳಸಿ ಪರಿಸರವನ್ನು ಶುದ್ಧೀಕರಿಸಲು ಅತ್ಯಂತ ಸೂಕ್ತ ಸಸ್ಯ. ಈ ಸಸ್ಯ ಅತಿ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಕೈಗಾರಿಕೆಗಳು ಹಾಗೂ ಸಂಸ್ಕರಣಾ ಘಟಕಗಳಿಂದ ಹೊರಸೂಸುವ ಮಲಿನ ವಾಯುವನ್ನು ಶುದ್ಧೀಕರಿಸುತ್ತದೆ ಎಂದು ನುಡಿದರು. ಆಗ್ರಾದ ಸುತ್ತಲೂ ಬೃಹತ್ ಪ್ರಮಾಣದಲ್ಲಿ ತುಳಸಿ ಗಿಡ ನೆಡುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕೆಲಸದಲ್ಲಿ ಕೈಜೋಡಿಸುವಂತೆ ಗ್ರಾಮ ಪಂಚಾಯಿತಿಗಳು ಹಾಗೂ ಶಾಲೆಗಳನ್ನು ಕೇಳಿಕೊಳ್ಳಲಾಗಿದೆ ಎಂದು ಆಗ್ರಾದ ವಲಯ ಅರಣ್ಯಾಧಿಕಾರಿ ಆರ್.ಪಿ. ಭಾರ್ತಿ ಹೇಳಿದರು.

2009: ಶ್ರೀಲಂಕಾದ ಕದನ ನಿರತ ಉತ್ತರ ವನ್ನೀ ಪ್ರಾಂತ್ಯದಲ್ಲಿ ಶೆಲ್ ದಾಳಿಯಿಂದ ಕನಿಷ್ಠ 52 ನಾಗರಿಕರು ಮೃತರಾದರು. ಆಸ್ಪತ್ರೆಯೊಂದಕ್ಕೆ ಬಾಂಬ್ ಬಿದ್ದಿತು. ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯ ಪೂರೈಸುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಆಸ್ಪತ್ರೆಯ ಮೇಲೆ ಸರಣಿ ಬಾಂಬ್‌ಗಳನ್ನು ಹಾಕಲಾಯಿತು.

2009: ದೇವನಹಳ್ಳಿ ತಾಲ್ಲೂಕಿನ ಎಂಟು ಮರಳು ಫಿಲ್ಟರ್ ಘಟಕಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಅಕ್ರಮದಲ್ಲಿ ತೊಡಗಿದ್ದ ಮೂರು ಮಂದಿಯನ್ನು ಬಂಧಿಸಿ, 18 ಲಾರಿ, ಐದು ಟ್ರಾಕ್ಟರ್, ಐದು ಜೆಸಿಬಿ ಮತ್ತು 34 ಬೃಹತ್ ಪಂಪ್‌ಗಳನ್ನು ವಶಪಡಿಸಿಕೊಂಡರು. ತಾಲ್ಲೂಕಿನ ಚಿಕ್ಕಗೊಲ್ಲಹಳ್ಳಿ, ಗೊಲ್ಲಹಳ್ಳಿ, ಕಾರಹಳ್ಳಿ, ಮಾಯಸಂದ್ರ, ತೈಲಗಿರಿ, ಮಿಸ್ಕನಹಳ್ಳಿ, ಬ್ಯಾಡರಹಳ್ಳಿ, ಗುಡ್‌ರಿಚ್ ಗ್ರಾಮಗಳಲ್ಲಿ ಮರಳು ದಂಧೆ ನಡೆಯುತ್ತಿತ್ತು. ಸರ್ಕಾರ ಭೂ ರಹಿತರಿಗೆ ಮಂಜೂರು ಮಾಡುವ ಜಮೀನಿನಲ್ಲಿ ಮರಳು ಫಿಲ್ಟರ್ ಮಾಡಲಾಗುತ್ತಿತ್ತು. ನಿಯಮ ಪ್ರಕಾರ ಈ ಭೂಮಿಯನ್ನು ಕೃಷಿಗೆ ಬಿಟ್ಟು ಬೇರೆ ಯಾವುದೇ ಉದ್ಧೇಶಕ್ಕೂ ಬಳಸುವಂತಿಲ್ಲ. ಆದರೆ ಈ ಜಮೀನನ್ನು ಮರಳು ಫಿಲ್ಟರ್ ದಂಧೆಗೆ ಗುತ್ತಿಗೆ ನೀಡಲಾಗಿತ್ತು.

2008: ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗಿದ್ದ ಪುತ್ತಿಗೆ ಪರ್ಯಾಯ ವಿವಾದ ಬಗೆಹರಿಯಿತು. ಈದಿನ ಜರುಗಿದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪುತ್ತಿಗೆ ಪರ್ಯಾಯ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದು, ಭಯೋತ್ಪಾದಕರ ಬೆದರಿಕೆಯ ಮಧ್ಯೆಯೂ ಕೃಷ್ಣಮಠದ ಪರಿಸರದಲ್ಲಿ ಹೊಸ ಸಂಚಲನ ಆರಂಭಗೊಂಡಿತು. ಪುತ್ತಿಗೆ ಪರ್ಯಾಯ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಹೇಳಿಕೆ ನೀಡಿದರು. ಅದನ್ನು `ತಾತ್ವಿಕ'ವಾಗಿ ಬೆಂಬಲಿಸಿರುವ ವಿರೋಧಿ ಯತಿಗಳು ಕೃಷ್ಣ ಪೂಜೆ ವಿಚಾರದಲ್ಲಿ `ಷರತ್ತುಬದ್ಧ' ಒಪ್ಪಿಗೆ ಸೂಚಿಸಿದರು. ಇದರ ಬೆನ್ನಲ್ಲೇ ಪುತ್ತಿಗೆ ಶ್ರೀಗಳೂ `ಸುಖಾಂತ್ಯಕ್ಕೆ ಸಮ್ಮತಿ ಇದೆ' ಎಂದು ತಿಳಿಸಿದರು. ಇದರೊಂದಿಗೆ ವಿವಾದ ಬಗೆಹರಿದದ್ದು ಖಚಿತವಾಯಿತು. ಅಷ್ಟಮಠದ ಆರು ಯತಿಗಳು ವಿಧಿಸಿದ್ದ ಷರತ್ತಿನಲ್ಲಿ 'ಕೃಷ್ಣಪೂಜೆ' ಪ್ರಮುಖವಾಗಿತ್ತು. ಪುತ್ತಿಗೆ ಶ್ರೀಗಳು ಕೃಷ್ಣಪೂಜೆಯನ್ನು ಸ್ವತಃ ಮಾಡುವ ಬದಲು ಶೀರೂರು ಮಠಾಧೀಶರಿಗೆ ವಹಿಸಿದ್ದರು. ಶೀರೂರು ಮಠಾಧೀಶರು ಅಸ್ವಸ್ಥತೆ ಕಾರಣ ಈದಿನ ಕೃಷ್ಣಪೂಜೆ ಮಾಡಲಾಗದೇ ಹೋದಾಗ ಪೇಜಾವರ ಶ್ರೀಗಳ ಜೊತೆ ನಡೆದ ಮಾತುಕತೆಯಿಂದ ವಿವಾದ ಬಗೆಹರಿಯಿತು. ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಈವರೆಗೆ ಗರ್ಭಗುಡಿಯಲ್ಲಿರುವ ಕಡೆಗೋಲು ಕೃಷ್ಣನ ಮೂಲ ಬಿಂಬವನ್ನು ಸ್ಪರ್ಶಿಸಿಲ್ಲ. ಅವರು ಮುಂದಿನ ದಿನಗಳಲ್ಲೂ ಅದನ್ನು ಸ್ಪರ್ಶಿಸಬಾರದು. ಅವರು ಎಲ್ಲಿಯವರೆಗೆ ಸ್ಪರ್ಶಿಸುವುದಿಲ್ಲವೋ, ಅಲ್ಲಿಯವರೆಗೆ ಕೃಷ್ಣಪೂಜಾ ವಿಷಯದಲ್ಲಿ ಷರತ್ತುಬದ್ಧ ಬೆಂಬಲ ನೀಡುತ್ತೇವೆ ಎಂದು ಇತರ ಯತಿಗಳು ಸ್ಪಷ್ಟ ಪಡಿಸಿದರು.

2008: ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಎನ್. ಆರ್. ನಾರಾಯಣ ಮೂರ್ತಿ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಮ್ಮುಖದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸಿ. ಕೆ. ಠಕ್ಕರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿ, `ಇದೊಂದು ಪ್ರಚಾರ ತಂತ್ರ. ಘಟನೆಯ ಬಗ್ಗೆ ನಾರಾಯಣಮೂರ್ತಿ ಅವರು ಈಗಾಗಲೇ ಕ್ಷಮೆ ಕೋರಿದ್ದಾರೆ, ಈ ಅರ್ಜಿಯನ್ನು ಪುರಸ್ಕರಿಸಲಾಗದು' ಎಂದು ಹೇಳಿತು. ಕನ್ನಡ ರಕ್ಷಣಾ ವಕೀಲರ ವೇದಿಕೆ ಈ ಸಂಬಂಧ ಅರ್ಜಿ ಸಲ್ಲಿಸಿ, ರಾಷ್ಟ್ರಪತಿ ಡಾ. ಕಲಾಂ ಪಾಲ್ಗೊಂಡ್ದಿದ ಕಾರ್ಯಕ್ರಮದಲ್ಲಿ ಅಧಿಕೃತ ಶಿಷ್ಟಾಚಾರದ ಹಾಡಿನ ರೂಪದ ರಾಷ್ಟ್ರಗೀತೆ ಹಾಡಿಸದೆ ನಾರಾಯಣಮೂರ್ತಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ' ಎಂದು ಆಪಾದಿಸಿತ್ತು.

2008: ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಿಂದ (ಸಿಎಂಎಚ್) 100 ಅಡಿ ರಸ್ತೆಯವರೆಗಿನ ಮರಗಳನ್ನು ಕಡಿಯುವುದಕ್ಕೆ ತಡೆ ನೀಡಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿ ಎಂ ಆರ್ ಸಿ) ಹೈಕೋರ್ಟ್ ಆದೇಶಿಸಿತು. ಮರ ಕಡಿಯುತ್ತಿರುವುದನ್ನು ಪ್ರಶ್ನಿಸಿ `ಸಿಎಂಎಚ್ ರಸ್ತೆ ವ್ಯಾಪಾರಸ್ಥರು ಮತ್ತು ನಾಗರಿಕರ ಕ್ಷೇಮಾಭಿವೃದ್ಧಿ ಸಂಘ' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿ, ವಿಚಾರಣೆ ಮುಂದೂಡಿದರು.

2008: ಚಲಿಸುವ ರೈಲಿಗೆ ಸಿಕ್ಕಿ ಹಾಕಿಕೊಂಡು ಗರ್ಭಣಿ ಆನೆ ಸೇರಿದಂತೆ ಮೂರು ಆನೆಗಳು ಸ್ಥಳದಲ್ಲೇ ಸತ್ತುಹೋದ ಕರುಳು ಹಿಂಡುವ ದುರ್ಘಟನೆ ಈದಿನ ಬೆಳಗಿನ ಜಾವ ಕೊಯಮತ್ತೂರು ಸಮೀಪ ಘಟಿಸಿತು. ವರ್ಕ್ ಶಾಪಿನಲ್ಲಿ `ಸರ್ವೀಸಿಂಗ್' ಮುಗಿದ ಮೇಲೆ ಮೂರು ಬೋಗಿಗಳ ಖಾಲಿ ರೈಲು ನಿಲ್ದಾಣಕ್ಕೆ ವಾಪಸ್ಸು ಹೋಗುತ್ತಿದ್ದಾಗ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತು.

2008: ಬೆಂಗಳೂರಿನ ರಾಜರಾಜೇಶ್ವರಿ ನಗರದ ಆಂಧ್ರ ಬ್ಯಾಂಕಿಗೆ ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ದರೋಡೆಕೋರರು ವ್ಯವಸ್ಥಾಪಕರನ್ನು ಥಳಿಸಿ, ಸುಮಾರು 2.50 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾದರು. ಮಧ್ಯಾಹ್ನ 1.50ರ ಸುಮಾರಿಗೆ ಐವರು ಮುಸುಕುಧಾರಿಗಳು ಬಿಇಎಂಎಲ್ ಮೂರನೇ ಹಂತದ ಎ ಎನ್ ಎಸ್ ರಸ್ತೆಯಲ್ಲಿನ ಬ್ಯಾಂಕಿಗೆ ನುಗ್ಗಿ ಈ ದುಷ್ಕೃತ್ಯ ಎಸಗಿದರು.

2008: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹರಿಯುವ ಕೃಷ್ಣಾ- ಗೋದಾವರಿ ಸೇರಿದಂತೆ ಮೂರು ಅಂತಾರಾಜ್ಯ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

2008: ಕಥಕ್ಕಳಿ ನೃತ್ಯ ಪ್ರಕಾರದ ಹೆಸರಾಂತ ಕಲಾವಿದ ಗಿರಿಸನ್ (46) ತಿರುವನಂತಪುರದಲ್ಲಿ ಹೃದಯಾಘಾತದಿಂದ ನಿಧನರಾದರು. ರೆಸಾರ್ಟ್ ಒಂದರಲ್ಲಿ ಈದಿನ ರಾತ್ರಿ ನೃತ್ಯ ಪ್ರದರ್ಶನ ನೀಡಿದ ನಂತರ ಗಿರಿಸನ್ ನೆರೆದ ವಿದೇಶಿ ಪ್ರವಾಸಿಗರ ಜತೆ ಛಾಯಾಚಿತ್ರಕ್ಕೆ ಪೋಜು ನೀಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಮುಖದ ಮೇಲಿನ ಮೇಕಪ್, ಆಭರಣಗಳು ಮತ್ತು ಕಾಸ್ಟ್ಯೂಮ್ ಹಾಗೇ ಇದ್ದವು.

2008: ಪೂರ್ವ ನೇಪಾಳದ ಬಿರಾಟ್ ನಗರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ರೇಡಿಯೋ ಕೇಂದ್ರವೊಂದು ಅಸ್ತಿತ್ವಕ್ಕೆ ಬಂದಿತು. ಈ `ಪೂರ್ವಾಂಚಲ' ಎಫ್ ಎಂ ಕೇಂದ್ರ ನೇಪಾಳದಲ್ಲಿ ಸಮುದಾಯದಿಂದಲೇ ನಿರ್ವಹಿಸಲ್ಪಡುವ ಮೊದಲ ಎಫ್ ಎಂ ಕೇಂದ್ರವಾಗಿದ್ದು, ದಿನಕ್ಕೆ ಎಂಟು ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರ ಮಾಡುವುದು. ಅಂಗರಕ್ಷಕ ಸಿಬ್ಬಂದಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯವರೆಗೆ 24 ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2007: ವಿಶ್ವದ ಮಾಜಿ ಅಗ್ರ ರಾಂಕಿಂಗ್ ಆಟಗಾರ್ತಿ ಸ್ವಿಟ್ಜಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಅವರು ಟೋಕಿಯೋದಲ್ಲಿ ನಡೆದ ಪಾನ್ ಫೆಸಿಫಿಕ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿಯ ಕಿರೀಟವನ್ನು ಮುಡಿಗೆ ಏರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಹಿಂಗಿಸ್ ರಷ್ಯಾದ ಅನಾ ಇವಾನೋವಿಕ್ ಅವರನ್ನು ಮಣಿಸಿದರು. 1997, 1999, 2000 ಮತ್ತು 2002ರಲ್ಲಿಯೂ ಹಿಂಗಿಸ್ ಅವರು ಪಾನ್ ಫೆಸಿಫಿಕ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕಳೆದ ವರ್ಷ ಮಾತ್ರ ಎಲೆನಾ ಡೆಮೆಂಟೀವಾ ಎದರು ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು.

2007: ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ `ಬ್ರಹ್ಮೋಸ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ಚಂಡಿಪುರದ ಆಂತರಿಕ ಪರೀಕ್ಷಾ ವಲಯದಲ್ಲಿ ಮಧ್ಯಾಹ್ನ 12.15ರ ವೇಳೆಗೆ ಯಶಸ್ವಿಯಾಗಿ ನಡೆಸಲಾಯಿತು. 9.2 ಮೀಟರ್ ಉದ್ದದ ಈ ಕ್ಷಿಪಣಿ 290 ಕಿ.ಮೀ. ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದ್ದಿದು 200 ಕಿಲೋ ತೂಕದ ಸಿಡಿತಲೆಗಳನ್ನು ಒಯ್ಯಬಲ್ಲುದು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಮೈಕೆಲ್ ಲೋಪೆಜ್ ಅವರ ಜೊತೆಗೆ ತಮ್ಮ ಎರಡನೇ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡರು. ಅಂದಾಜು ಆರೂವರೆ ಗಂಟೆಗಳ ಕಾಲದ ಈ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತಂಪುಗೊಳಿಸುವ ವ್ಯವಸ್ಥೆಯ ದುರಸ್ತಿ ಕಾರ್ಯ ಕೈಗೊಂಡರು.

2007: ಕನ್ನಡ ಸಿನೆಮಾ ಮತ್ತು ರಂಗಭೂಮಿಯ ಹಿರಿಯ ನಟ ಶಿವಮೊಗ್ಗ ವೆಂಕಟೇಶ್ (60) ಶಿವಮೊಗ್ಗದಲ್ಲಿ ನಿಧನರಾದರು. 70ರ ದಶಕದಲ್ಲಿ ಅಭಿನಯ ತಂಡ ಕಟ್ಟುವ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಪ್ರಭುತ್ವ ಲೊಳಲೊಟ್ಟೆ, ನಮ್ಮೊಳಗೊಬ್ಬ ನಾಜೂಕಯ್ಯ, ಹಯವದನ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು ರಾಜ್ಯಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದರು. ಕನ್ನೇಶ್ವರ ರಾಮ, ಸಂತ ಶಿಶುನಾಳ ಶರೀಫ, ಆಸ್ಫೋಟ, ಚೋಮನ ದುಡಿ, ಆಕ್ಸಿಡೆಂಟ್ ಸೇರಿದಂತೆ ಇತ್ತೀಚಿನ ಮುನ್ನುಡಿ ಚಿತ್ರದವರೆಗೂ ವಿವಿಧ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

2006: ಫಿಲಿಪ್ಪೀನ್ಸಿನ ಮನಿಲಾಕ್ಕೆ 15 ಕಿ.ಮೀ. ದೂರದ ಪಾಸಿಗ್ ಎಂಬಲ್ಲಿನ ಕ್ರೀಡಾಂಗಣ ಒಂದರಲ್ಲಿ ಆಯೋಜಿಸಲಾಗಿದ್ದ ಕೌನ್ ಬನೇಗಾ ಕರೋಡಪತಿ ಮಾದರಿಯ ವೊವೊವಿ ಹೆಸರಿನ ಟೆಲಿವಿಷನ್ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಗುಂಪಿನಲ್ಲಿ ಉಂಟಾದ ನೂಕುನುಗ್ಗಲಿಗೆ 88 ಜನ ಬಲಿಯಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ನಡುವೆಯೂ ಪರಮಾಣು ಕಾರ್ಯಕ್ರಮ ಮುಂದುವರೆಸಿದ ಇರಾನ್ ಪ್ರಕರಣವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಿಫಾರಸು ಮಾಡಲಾಯಿತು. ಇರಾನ್ ಹಣೆಬರಹ ನಿರ್ಧರಿಸುವ ನಿಟ್ಟಿನಲ್ಲಿ ಈ ದಿನ ನಡೆದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ನಡೆಸಿದ ಚುನಾವಣೆಯಲ್ಲಿ ಭಾರತ ಸೇರಿದಂತೆ 27 ರಾಷ್ಟ್ರಗಳು ಇರಾನ್ ವಿರುದ್ಧ ಮತ ಚಲಾಯಿಸಿದವು. ಪರವಾಗಿ 3 ಮತಗಳು ಚಲಾವಣೆಗೊಂಡವು.

1990: ಕೇರಳದ ಎರ್ನಾಕುಲಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲಾಯಿತು.

1983: ಅಮೆರಿಕನ್ ಗಾಯಕಿ ಕರೇನ್ ಕಾರ್ಪೆಂಟರ್ ಮೃತರಾದರು. ಇವರ ಸಹೋದರ ಕೂಡಾ ಗಾಯಕನಾಗಿದ್ದು ಇವರಿಬ್ಬರ ಜೋಡಿ `ಕಾರ್ಪೆಂಟರ್ ದ್ವಯರ ಜೋಡಿ' ಎಂದೇ ಖ್ಯಾತಿ ಪಡೆದಿತ್ತು.

1977: ಕಲಾವಿದ ಮನು ಚಕ್ರವರ್ತಿ ಜನನ.

1974: ಕಲಾವಿದ ಗಣೇಶ ರಾಮಣ್ಣ ಮರೂರ ಜನನ.

1974: ಭಾರತದ ಗಣಿತ ತಜ್ಞ ಹಾಗೂ ಭೌತ ತಜ್ಞ ಸತ್ಯೇಂದ್ರನಾಥ ಬೋಸ್ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

1958: ಕಲಾವಿದೆ ಮೀರಾ ಎಚ್. ಎನ್. ಜನನ.

1945: ಮಿತ್ರ ಪಡೆಗಳ ಧುರೀಣರಾದ ರೂಸ್ ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್ ಕ್ರೀಮಿಯಾದ ಯಾಲ್ಟಾದಲ್ಲಿ ಸಭೆ ಸೇರಿದರು. ಪೋಲಿಶ್ ಸಮಸ್ಯೆ ಕುರಿತು ಚರ್ಚಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.

1942: ಕಲಾವಿದ ಸದಾಶಿವಗೌಡ ಸಿದ್ದಗೌಡ ಜನನ.

1938: ಬಿರ್ಜು ಮಹಾರಾಜ್ ಹುಟ್ಟಿದ ದಿನ. ಕಥಕ್ ನೃತ್ಯ ಪಟು ಹಾಗೂ ನೃತ್ಯ ಸಂಯೋಜಕರಾದ ಇವರು ಕಥಕ್ ಕಲೆಯನ್ನು ನೃತ್ಯರೂಪದಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

1938: ರಂಗಭೂಮಿಯ ಹಿರಿಯ ಕಲಾವಿದೆ, ದೂರದರ್ಸನ ಧಾರಾವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದೇ ಖ್ಯಾತರಾದ ಭಾರ್ಗವಿ ನಾರಾಯಣ್ ಅವರು ಡಾ. ಎಂ. ರಾಮಸ್ವಾಮಿ- ನಾಮಗಿರಿಯಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ಸಾಹಿತಿ, ಸಮಾಜ ಸೇವಕ ಮಾ.ಭ. ಪೆರ್ಲ ಹುಟ್ಟಿದ ದಿನ. ಕಾಸರಗೋಡು ಜಿಲ್ಲೆಯ ಸೆಟ್ಟಬೈಲು ಗ್ರಾಮ ಇವರ ಹುಟ್ಟೂರು. ತಂದೆ ಗುರು ವೆಂಕಟೇಶ ಭಟ್ಟರು, ತಾಯಿ ಲಕ್ಷ್ಮಿ. ಕಥೆ, ಲೇಖನ, ಕಾದಂಬರಿ, ಸಂದರ್ಶನ ಸೇರಿದಂತೆ 25ಕ್ಕೂ ಹೆಚ್ಚು ಕೃತಿ ರಚಿಸಿದ ಇವರು ರಾಯಚೂರಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಸೇವಾ ಭಾರತಿ ಟ್ರಸ್ಟ್ ಮೂಲಕ ಪ್ರೇರಣಾ ಬುದ್ದಿಮಾಂದ್ಯ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಪೆರ್ಲಕ್ಕೆ ವಾಪಸಾದ ಬಳಿಕವೂ ಬಾಲಮಂದಿರ, ಬಾಲಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ಆರಂಭಿಸಿದವರು. ಸಮುದಾಯ ಪತ್ರಿಕೆ ಕರಾಡ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು.

1926: ಕಲಾವಿದ ವೆಂ.ಮು. ಜೋಶಿ ಜನನ.

1924: ಮಾಜಿ ರಾಷ್ಟ್ರಪತಿ ದಿವಂಗತ ಕೆ.ಆರ್. ನಾರಾಯಣನ್ ಅವರು ಈದಿನ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಅವರು 1997ರ ಜುಲೈ 25ರಿಂದ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ದಲಿತ ಹಾಗೂ ಮಲಯಾಳಿ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದು.

1922: ಪಂಡಿತ್ ಭೀಮಸೇನ್ ಜೋಶಿ ಹುಟ್ಟಿದ ದಿನ. ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರು.

1920: ಕಲಾವಿದ ಕೆ.ಬಿ. ಕುಲಕರ್ಣಿ ಜನನ.

1920: ಕಲಾವಿದ ಕೆ.ಬಿ. ಕಾಳೆ ಜನನ.

1917: ಪಾಕಿಸ್ಥಾನಿ ಸೇನಾಪಡೆಗಳ ಮುಖ್ಯ ಸೇನಾಧಿಕಾರಿ ಆಗಾ ಮಹಮ್ಮದ್ ಯಾಹ್ಯಾ ಖಾನ್ (1917-1980) ಹುಟ್ಟಿದರು.

1969-71ರ ಅವಧಿಯಲ್ಲಿ ಇವರು ಪಾಕಿಸ್ಥಾನದಲ್ಲಿ ಅಧ್ಯಕ್ಷರಾಗಿದ್ದರು.

1913: ಅಮೆರಿಕಾದ ಕರಿಯ ಮಹಿಳೆ ರೋಸಾ ಪಾರ್ಕ್ಸ್ (1913-2005) ಹುಟ್ಟಿದರು. ಬಸ್ಸಿನಲ್ಲಿ ಬಿಳಿಯ ವ್ಯಕ್ತಿಯೊಬ್ಬನಿಗೆ ಆಸನ ಬಿಟ್ಟುಕೊಡಲು ಈಕೆ ನಿರಾಕರಿಸಿದ ಘಟನೆ 1955ರಲ್ಲಿ ಅಲಬಾಮಾದ ಮಾಂಟ್ಗೊಮೆರಿಯಲ್ಲಿ ಬಸ್ಸು ಬಹಿಷ್ಕಾರ ಚಳವಳಿಯೊಂದಿಗೆ ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ನಾಂದಿಯಾಯಿತು.

1902: ಲಿಂಡ್ ಬರ್ಗ್ (1902-1974) ಹುಟ್ಟಿದ ದಿನ. ಇವರು 1927ರ ಮೇ ತಿಂಗಳಲ್ಲಿ ನ್ಯೂಯಾರ್ಕಿನಿಂದ ಪ್ಯಾರಿಸ್ಸಿಗೆ ಮೊತ್ತ ಮೊದಲ ಬಾರಿಗೆ ಅಟ್ಲಾಂಟಿಕ್ ಸಾಗರದ ಮೇಲಿನಿಂದ ಎಲ್ಲೂ ನಿಲ್ಲದೆ ಸತತವಾಗಿ ಏಕವ್ಯಕ್ತಿ ವಿಮಾನ ಹಾರಾಟ ನಡೆಸಿ ದಾಖಲೆ ನಿರ್ಮಿಸಿದರು.

1861: ಅಲಬಾಮಾದ ಮಾಂಟ್ಗೊಮೆರಿಯಲ್ಲಿ ದಕ್ಷಿಣ ಅಮೆರಿಕಾದ ಏಳು ಪ್ರತ್ಯೇಕತಾವಾದಿ ರಾಜ್ಯಗಳು ಒಟ್ಟುಗೂಡಿ `ಕನ್ಫೆಡರೇಟ್ ಸ್ಟೇಟ್ ಆಫ್ ಅಮೆರಿಕಾ' ಸ್ಥಾಪನೆ ಮಾಡಿದವು.

No comments:

Post a Comment