ನಾನು ಮೆಚ್ಚಿದ ವಾಟ್ಸಪ್

Tuesday, February 19, 2019

ಇಂದಿನ ಇತಿಹಾಸ History Today ಫೆಬ್ರುವರಿ 19

ಇಂದಿನ ಇತಿಹಾಸ History Today ಫೆಬ್ರುವರಿ 19


2018 : ನವದೆಹಲಿ:  ೩,೬೯೫ ಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ಬ್ಯಾಂಕ್ ಆಫ್ ಬರೋಡ ಸೇರಿದಂತೆ ೫ ಬ್ಯಾಂಕುಗಳು ನೀಡಿದ ದೂರಿನ ಮೇರೆಗೆ ಸಿಬಿಐ ರೋಟೋಮ್ಯಾಕ್ ಮಾಲೀಕ ವಿಕ್ರಮ್ ಕೊಠಾರಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿತು. ಈದಿನ ನಸುಕಿನ ವೇಳೆಯಲ್ಲಿ ಕೊಠಾರಿ ಅವರ ಕಾನ್ಪುರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಸಿಬಿಐ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿತು. ಆದರೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ತಿಳಿಸಿದರು.  ಕೊಠಾರಿ, ಅವರ ಪತ್ನಿ ಮತ್ತು ಪುತ್ರನನ್ನು ಸಿಬಿಐ ಪ್ರಶಿಸಿತು ಎಂದು ದಯಾಳ್ ತಿಳಿಸಿದರು.  ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ  ೧೧,೪೦೦ ಕೋಟಿ ರೂಪಾಯಿ ವಂಚಿಸಿದ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಬಹಿರಂಗಕ್ಕೆ ಬಂದಿರುವ ಎರಡನೇ ಅತೀ ದೊಡ್ಡ ಹಣಕಾಸು ವಂಚನೆ ಹಗರಣ ಇದು ಎನ್ನಲಾಯಿತು. ಕೋಟ್ಯಧಿಪತಿ ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ, ಚಿಕ್ಕಪ್ಪ ಮೆಹುಲ್ ಚೋಕ್ಸಿ (ಗೀತಾಂಜಲಿ ಜೆಮ್ಸ್ ಸಮೂಹ ಕಂಪೆನಿಗಳ ಪ್ರಮೋಟರ್) ಈಗಾಗಲೇ ವಿದೇಶಕ್ಕೆ ಪಲಾಯನ ಗೈದಿದ್ದಾರೆ.  ವಿಕ್ರಮ್ ಕೊಠಾರಿ ಅವರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ೩,೬೯೫ ಕೋಟಿ ರೂಪಾಯಿ ಸಾಲ ಪಡೆದು, ವಂಚಿಸಿರುವ ಆರೋಪ ಕೇಳಿ ಬಂದಿತು.  ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳಿಂದ ಕೊಠಾರಿ ೮೦೦ ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೊಠಾರಿ ೪೮೫ ಕೋಟಿ ರೂಪಾಯಿ ಸಾಲ ಪಡೆದಿದ್ದು, ಅಲಹಾಬಾದ್ ಬ್ಯಾಂಕಿನಿಂದ ೩೫೨ ಕೋಟಿ ರೂಪಾಯಿ ಪಡೆದಿದ್ದಾರೆ. ಇದಲ್ಲದೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಾಗೂ ಇತರ ೨ ಬ್ಯಾಂಕುಗಳಿಂದ ವಿವಿಧ ಮೊತ್ತದ ಸಾಲ ಪಡೆದಿದ್ದಾರೆ ಎಂದು ಹೇಳಲಾಯಿತು. ಕಾನ್ಪುರದಲ್ಲಿ ಕೊಠಾರಿ ಅವರ ಕಚೇರಿ ಇದ್ದು, ಕಳೆದ ಒಂದು ವಾರದಿಂದ ಕಚೇರಿಗೆ ಬೀಗ ಹಾಕಲಾಗಿದೆ ಎಂದು ವರದಿಗಳು ಹೇಳಿದವು. ದಾಳಿಗಳ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಕ್ರಮ್ ಕೊಠಾರಿ ತಮಗೆ ದೇಶದಿಂದ ಪರಾರಿಯಾಗುವ ಯಾವುದೇ ಉದ್ದೇಶವೂ ಇಲ್ಲ ಎಂದು ಹೇಳಿದರು. ಕಳೆದ ವರ್ಷ ಫೆಬ್ರುವರಿಯಲ್ಲಿ ಬ್ಯಾಂಕ್ ಆಫ್ ಬರೋಡವು ರೋಟೋಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂಬುದಾಗಿ ಘೋಷಿಸಿತ್ತು. ಕಂಪೆನಿಯು ಇದರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಿಂದ ತನ್ನ ಹೆಸರನ್ನು ಕಿತ್ತುಹಾಕುವಂತೆ ಕೋರಿತ್ತು.

2018: ಚೆನ್ನೈ: ಚೆನ್ನೈ ಹೊರವಲಯದ ಮುಗಲಿವಕ್ಕಮ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಕಳೆದ ವರ್ಷ ಫೆಬ್ರುವರಿಯಲ್ಲಿ ೭ ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ  ಆರೋಪಿ ದಸ್ವಂತ್ ತಪ್ಪಿತಸ್ಥ ಎಂದು ಚೆಂಗಲ್ ಪೇಟ್ ಮಹಿಳಾ ನ್ಯಾಯಾಲಯ ತೀರ್ಪು ನೀಡಿತು. ಪ್ರಕರಣದಲ್ಲಿ
ಹೊರಿಸಲಾದ ಆರೋಪಗಳೆಲ್ಲ ಸಾಬೀತಾಗಿದ್ದು ನೀನು ತಪ್ಪಿತಸ್ಥನಾಗಿರುವೆ ಎಂದು ಆರೋಪಿಗೆ ತಿಳಿಸಿದ ನ್ಯಾಯಾಧೀಶ ಪಿ. ವೇಲ್ಮುರುಗನ್ ಅವರು ಶಿಕ್ಷೆಯ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಅಪರಾಧಿಯನ್ನು ಪ್ರಶ್ನಿಸಿದರು.  ಅದಕ್ಕೆ ದಸ್ವಂತ್ ತನಗೆ ಕನಿಷ್ಠ ಶಿಕ್ಷೆ ವಿಧಿಸಬೇಕು ಎಂದು ಉತ್ತರಿಸಿದ.
ಪ್ರಾಸೆಕ್ಯೂಷನ್ ಪ್ರಕಾರ, ಫೆಬ್ರುವರಿ ೫ರಂದು ಮಗುವಿನ ಪಾಲಕರು ದೂರ ಇದ್ದಾಗ, ದಸ್ವಂತ್ ಆಕೆಗೆ ಆಮಿಷ ಒಡ್ಡಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ. ಆಕೆ ನೆರವಿಗಾಗಿ ಕೂಗಿಕೊಂಡಾಗ ಆಕೆಯನ್ನು ಕೊಂದು ಹಾಕಿದ. ಬಾಲಕಿಯ ಶವವನ್ನು ತನ್ನ ಮನೆಯಲ್ಲೇ ಒಂದು ದಿನದವರೆಗೆ ಅಡಗಿಸಿ ಇಟ್ಟು ಬಳಿಕ ಟ್ರಾವಲ್ ಬ್ಯಾಗಿನಲ್ಲಿ ತುಂಬಿಸಿ ಅಂಕಪುತ್ತೂರು ಸಮೀಪ ಸೇತುವೆ ಕೆಳಗೆ ಬಿಸಾಕಿದ್ದ. ಮರುದಿನ ಅಲ್ಲಿಗೆ ತೆರಳಿ ಶವವನ್ನು ಸುಟ್ಟುಹಾಕಿದ. ಬಳಿಕ ಸಮೀಪ ಹೋಗಿದ್ದ ವ್ಯಕ್ತಿಯಂತೆ ನಟಿಸಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೋನ್ ಮಾಡಿದ್ದ. ಬಂಧನಕ್ಕೆ ಒಳಗಾಗುವ ಮುನ್ನ ದಸ್ವಂತ್ ಟೆಲಿವಿಷನ್ ಸಿಬ್ಬಂದಿ ಜೊತೆಗೂ ಅಪರಾಧದ ಬಗ್ಗೆ ಮಾತನಾಡಿದ್ದ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸಾಕ್ಷ್ಯಾಧಾರಗಳು ದಸ್ವಂತ್ ಬಗ್ಗೆ ಪೊಲೀಸರಲ್ಲಿ ಗುಮಾನಿ ಹುಟ್ಟಿಸಿದವು. ಬಳಿಕ ಪೊಲೀಸರು ಆತನನ್ನು ಬಂಧಿಸಿದರು. ದಸ್ವಂತ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೨ (ಕೊಲೆ), ೨೦೧ (ಅಪರಾಧದ ಸಾಕ್ಷ್ಯಾನಾಶ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಮತ್ತು ಇತರ ಕಾಯ್ದೆಗಳ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ದೋಷಾರೋಪ ಹೊರಿಸಲಾಯಿತು. ನ್ಯಾಯಾಲಯವು ಪ್ರಕರಣದ ವಿಚಾರಣೆ ಆರಂಭಿಸುವುದಕ್ಕೆ ಸ್ವಲ್ಪ ಮುನ್ನ ಕಳೆದ ಡಿಸೆಂಬರ್ ತಿಂಗಳಲ್ಲಿ ಜಾಮೀನಿನಲ್ಲಿ ಇದ್ದ ದಸ್ವಂತ್ ತನ್ನ ತಾಯಿ ಸರಳಾ ಅವರನ್ನು ಕುಂದ್ರತೂರ್ ನಲ್ಲಿ ಕೊಂದು ಮುಂಬೈಗೆ ಪಲಾಯನಗೈದಿದ್ದ.  ಸುದೀರ್ಘ ಶೋಧದ ಬಳಿಕ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ೩೦ಕ್ಕೂ ಹೆಚ್ಚು ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ೪೦ ದಾಖಲೆಗಳನ್ನು ಗುರುತಿಸಿತ್ತು.

2018: ಮೈಸೂರು: ಕರ್ನಾಟಕಕ್ಕೆ ಪ್ರವಾಸ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೆ.18ರ ಭಾನುವಾರ ಮೈಸೂರಿನ ಹೋಟೆಲ್ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ವಾಸ್ತವ್ಯಕ್ಕೆ ಕೊಠಡಿ ಸಿಗಲಿಲ್ಲ, ಅಲ್ಲಿನ ಎಲ್ಲ ಕೊಠಡಿಗಳೂ ಅದಾಗಲೇ ಮದುವೆಯೊಂದರ ಆರತಕ್ಷತೆ (ರಿಸೆಪ್ಷನ್) ಸಲುವಾಗಿ ಬುಕಿಂಗ್ ಆಗಿ ಹೋಗಿದ್ದವು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಜಿಲ್ಲಾ ಆಡಳಿತವು ಬಳಿಕ ಬೇರೊಂದು ಪ್ರಸಿದ್ಧ ಹೋಟೆಲ್‌ನಲ್ಲಿ ಮೋದಿ ಅವರಿಗೆ ವಸತಿ ವ್ಯವಸ್ಥೆ ಮಾಡಿತು.  ‘ಜಿಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಪ್ರಧಾನಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಅವರ ಸಿಬ್ಬಂದಿಗೆ ಕೊಠಡಿಗಳನ್ನು ಕಾಯ್ದಿರಿಸುವ ಸಲುವಾಗಿ ಹೋಟೆಲ್‌ಗೆ ಭೇಟಿ ನೀಡಿದ್ದರು. ಆದರೆ ಹೋಟೆಲ್‌ನ ಎಲ್ಲ ಕೊಠಡಿಗಳೂ ಮದುವೆ ಆರತಕ್ಷತೆ ಸಲುವಾಗಿ ಮೊದಲೇ ಬುಕ್ ಆಗಿದ್ದುದರಿಂದ ಪ್ರಧಾನಿ ಮತ್ತು ಸಿಬ್ಬಂದಿಗೆ ಕೊಠಡಿ ಒದಗಿಸುವ ಸ್ಥಿತಿಯಲ್ಲಿ ನಾವು ಇರಲಿಲ್ಲ ಎಂದು ಹೋಟೆಲ್ ಜನರಲ್ ಮ್ಯಾನೇಜರ್ ಜೋಸೆಫ್ ಮ್ಯಾಥ್ಯೂಸ್ ಹೇಳಿದರು. ಭಾನುವಾರ ಸಂಜೆ ಮದುವೆಯ ಆರತಕ್ಷತೆ ಇತ್ತು. ಇದೇ ವೇಳೆಗೆ ಪ್ರಧಾನಿಯವರೂ ಮೈಸೂರಿಗೆ ಆಗಮಿಸುವವರಿದ್ದರು. ಮೂರು ಕೊಠಡಿಗಳು ಮಾತ್ರ ಇದ್ದವು. ಅವು ಪ್ರಧಾನಿ ಮತ್ತು ಸಿಬ್ಬಂದಿಗೆ ಸಾಕಾಗುತ್ತಿರಲಿಲ್ಲ. ಭದ್ರತಾ ಹಿನ್ನೆಲೆಯಲ್ಲಿ ಕೇವಲ ಮೂರು ಕೊಠಡಿ ಒದಗಿಸುವುದು ಸೂಕ್ತವೂ ಆಗಿರಲಿಲ್ಲ ಎಂದು ಜೋಸೆಫ್ ನುಡಿದರು.  ಏನಿದ್ದರೂ, ಜಿಲ್ಲಾಡಳಿತ ಪ್ರಧಾನಿಯವರಿಗೆ ಪರ್ಯಾಯ  ವ್ಯವಸ್ಥೆ ಮಾಡಿತು. ಮೋದಿ ಅವರಿಗೆ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ವ್ಯವಸ್ಥೆ ಮಾಡಲಾಯಿತು. ಪ್ರಧಾನಿಯವರು ಅಲ್ಲಿ ಒಂದು ರಾತ್ರಿ ತಂಗಿದ್ದರು. ಅಲ್ಲಿ ಕೂಡಾ, ಭದ್ರತಾ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ವ್ಯಾಪಾರೋದ್ಯಮಿ ಒಬ್ಬರ ಕುಟುಂಬಕ್ಕೆ ತಮ್ಮ ಮದುವೆ ಆರತಕ್ಷತೆಯ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಹೋಟೆಲ್ ಆಡಳಿತ ಸೂಚಿಸಿತು. ಹೀಗಾಗಿ ಪ್ರಧಾನಿ ಆಗಮನಕ್ಕೆ ಮುನ್ನ ಅವರು ತಮ್ಮ ಆರತಕ್ಷತೆ ಕಾರ್ಯಕ್ರಮವನ್ನು ಮುಗಿಸಿದ್ದರು. ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಜ್ಜನದಲ್ಲಿ ಪಾಲ್ಗೊಳ್ಳೂವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು  ರಾತ್ರಿ ಮೈಸೂರಿಗೆ ಆಗಮಿಸಿದ್ದರು. ನೈಋತ್ಯ ರೈಲ್ವೇ ಕಾರ್ಯಕ್ರಮ ಮತ್ತು ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟಿಸಿದ ಬಹಿರಂಗ ಸಭೆಯಲ್ಲೂ ಪ್ರಧಾನಿ ಭಾಗವಹಿಸುವವರಿದ್ದರು.

2018: ನವದೆಹಲಿ: ಸಿಕ್ಕಿಂ ಗಡಿ ಪ್ರದೇಶದ ವಿವಾದಿತ ಡೋಕ್ಲಾಮ್‌ನಲ್ಲಿ ಚೀನಾ ಸೇನೆ ಮತ್ತೆ ಕಾಲು ಕೆದರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಒಟ್ಟಾಗಿ ಈ ತಿಂಗಳ ಆದಿಯಲ್ಲಿ ಭೂತಾನ್‌ಗೆ ರಹಸ್ಯ ಭೇಟಿ ನೀಡಿ ಅಲ್ಲಿನ ಉನ್ನತ ನಾಯಕರ ಜೊತೆ ಮಾತುಕತೆ ನಡೆಸಿದ್ದರು ಎಂದು ವರದಿಗಳು ಹೇಳಿದವು. ಮೂವರೂ ಪ್ರಮುಖರು ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಭೂತಾನ್ ಧುರೀಣರ ಜೊತೆ ಚರ್ಚಿಸಿರುವುದಾಗಿ ಹೇಳಲಾಯಿತು. ರಾಯಲ್ ಭೂತಾನ್ ಆರ್ಮಿ ವಶದಲ್ಲಿರುವ ಪ್ರದೇಶಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅತಿಕ್ರಮಿಸಿ ಗಸ್ತು ತಿರುಗುತ್ತಿರುವ ಬಗ್ಗೆ ಗುಪ್ತಚರ ದಳ ಎಚ್ಚರಿಕೆ ನೀಡಿದ್ದು,  ಈ ಬಗ್ಗೆ ಭಾರತ ಚಿಂತಾಕ್ರಾಂತವಾಗಿದೆ ಎಂದು ಮೂಲಗಳು ಹೇಳಿದವು.  ರಾಯಲ್ ಭೂತಾನ್ ಆರ್ಮಿಯ ವಶದಲ್ಲಿರುವ ಲ್ಹಾರಿಯೋಂಗ್, ಸಾರಿತಾಂಗ್, ಸಿಂಚುಲುಂಪಾ ಮತ್ತು ಪಾಂಗ್‌ಕಾ ಲಾ ಪ್ರದೇಶಗಳಲ್ಲಿ ಚೀನೀ ಸೇನೆಯ ಅತಿಕ್ರಮಣದ ಗಸ್ತು  ತಿರುಗುವಿಕೆ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಭಾರತ ಮತ್ತು ಭೂತಾನ್ ಎರಡೂ ದೇಶಗಳಿಗೆ ಕಳವಳದ ಸಂಗತಿಯಾಗಿದೆ. ರಾಯಲ್ ಭೂತಾನ್ ಆರ್ಮಿಯ ಈ ಪ್ರದೇಶಗಳಲ್ಲಿ ಮಾತ್ರವಲ್ಲದೆ ವಿವಾದಿತ ಉತ್ತರ ಡೋಕ್ಲಾಮ್‌ನಲ್ಲಿ ಚೀನೀ ಸೇನೆ ಸಮರ ವಿಮಾನಗಳು  ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಪ್ರತಿದಿನವೂ ಅತಿಕ್ರಮಣ ಗಸ್ತು ನಡೆಸುತ್ತಿದೆ ಎಂದೂ ಗುಪ್ತಚರ ವರದಿ ಹೇಳಿತು. ಭಾರತ - ಚೀನ ಸೇನೆ ೨೦೧೭ರ ಜೂನ್ ೧೬ರಿಂದ ೭೩ ದಿನಗಳ ಕಾಲ ಮುಖಾಮುಖಿಯಾಗಿದ್ದ್ದ ಡೋಕಾಮ್ ಟ್ರೈ ಜಂಕ್ಷನ್ ಪ್ರದೇಶದಲ್ಲಿ ಚೀನೀ ಸೇನೆ ಮತ್ತೆ ಕಾಲು ಕೆದರುತ್ತಿದೆ. ಅಂದು ಈ ವಿವಾದಿತ ಪ್ರದೇಶದಲ್ಲಿ ಚೀನಾ ಸೇನೆ ನಡೆಸುತ್ತಿದ್ದ ರಸ್ತೆ ಕಾಮಗಾರಿಯನ್ನು ಭಾರತ ಸೇನೆ ಪಟ್ಟು ಹಿಡಿದು ತಡೆದಿತ್ತು.  ಉತ್ತರ ಡೋಕ್ಲಾಮ್ ನಲ್ಲಿ ಮುಕ್ತ ಸಂಪರ್ಕದ ಆಳದ ಕಂದಕದ ಉದ್ದಕ್ಕೂ ಪಿಎಲ್‌ಎ ೨೫ ಸಣ್ಣ - ಮಧ್ಯ ಗಾತ್ರದ ಟೆಂಟ್‌ಗಳನ್ನು ನಿರ್ಮಿಸಿದೆ ಎಂದು ಗುಪ್ತಚರ ಮೂಲಗಳು ಹೇಳಿದವು.

2018: ನವದೆಹಲಿ: ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಮುಸ್ಲಿಮ್ ಕಾರ್ಮಿಕನೊಬ್ಬನನ್ನು
ಕೊಂದದ್ದಕ್ಕಾಗಿ ಸೆರೆವಾಸಕ್ಕೆ ಗುರಿಯಾಗಿದ್ದ ರಾಜಸ್ಥಾನದ ವ್ಯಕ್ತಿ ಶಂಬುಲಾಲ್ ರೇಗರ್ ಇದೀಗ ಜೋಧಪುರದ ಕೇಂದ್ರೀಯ ಸೆರೆಮನೆಯಲ್ಲಿನ ತನ್ನ ಸೆಲ್ ನಿಂದಲೇ ಎರಡು ದ್ವೇಷ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು ಸೆರೆಮನೆಯೊಳಗಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿತು. ೩೬ರ ಹರೆಯದ ಶಂಬುಲಾಲ್ ರೇಗರ್ ಕಳೆದ ವರ್ಷ ಡಿಸೆಂಬರ್ ೬ರಂದು ೫೦ರ ಹರೆಯದ ಮೊಹಮ್ಮದ್ ಅಫ್ರಜುಲ್ ಎಂಬ ಕಾರ್ಮಿಕನನ್ನು ಕೊಂದು ಸುಟ್ಟು ಹಾಕಿದ್ದಲ್ಲದೆ ಈ ಕೃತ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ. ಬಂಧಿತನಾಗುವುದಕ್ಕೆ ಮುನ್ನ ದ್ವೇಷ ಹತ್ಯೆಯ ಈ ವಿಡಿಯೋ ದೃಶ್ಯಾವಳಿಗಳು ವ್ಯಾಪಕವಾಗಿ ಪ್ರಸಾರಗೊಂಡಿದ್ದವು. ಆರೋಪಿ ರೇಗರ್ ಪ್ರೇಮವೈಫಲ್ಯದಿಂದ ಮೊಹಮ್ಮದ್ ಅಫ್ರಜುಲ್ ನನ್ನು ಕೊಂದು ತನ್ನ ಉದ್ದೇಶವನ್ನು ಮುಚ್ಚಿಹಾಕಲು ಅದಕ್ಕೆ ’ಲವ್ ಜಿಹಾದ್ ಹೊದಿಕೆ ಹಾಕಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ತಮ್ಮ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಈಗ ಬಿಡುಗಡೆಯಾಗಿರುವ ನೂತನ ವಿಡಿಯೋಗಳಲ್ಲಿ ರೇಗರ್ ಮುಸ್ಲಿಮರ ವಿರುದ್ಧದ ದೀರ್ಘಕಾಲೀನ ದ್ವೇಷವನ್ನು ಪ್ರಸ್ತಾಪಿಸಿ, ಹಿಂದುಗಳು ’ಜಿಹಾದಿಗಳ ವಿರುದ್ಧ ಒಂದುಗೂಡಬೇಕು ಎಂದು ಒತ್ತಾಯಿಸಿದ.  ಪತ್ರವೊಂದರಲ್ಲಿ ಬರೆದ ಸಂದೇಶವೊಂದನ್ನು ಓದುವ ರೇಗರ್ ಇಸ್ಲಾಮಿಕ್ ಭಯೋತ್ಪಾದನೆ, ಲವ್ ಜಿಹಾದ್ ಮತ್ತು ಖೋಟಾ ನೋಟುಗಳ ಬಗ್ಗೆ ಮತ್ತೆ ಮತ್ತೆ ಉಲ್ಲೇಖಿಸಿದ.  ತಾನು ದೇಶಭಕ್ತಿ ಭಜನೆಯ ರಿಮಿಕ್ಸ್ ಮಾಡಿರುವುದಾಗಿಯೂ ಪ್ರತಿಪಾದಿಸುರವ ರೇಗರ್ ಪ್ರತಿಯೊಬ್ಬರ್‍ನೂ ದೇಶಭಕ್ತಿಯನ್ನು ಬೆಳೆಸಿಕೊಳ್ಳುವುದಕ್ಕಾಗಿ ದಿನಕ್ಕೆ ಎರಡು ಬಾರಿ ಇದನ್ನು ನೋಡಬೇಕು/ ಕೇಳಬೇಕು ಎಂದು ಒತ್ತಾಯಿಸಿದ.  ಜನ ಸಮೂಹವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದೂ ಆತ ವಿಡಿಯೋದಲ್ಲಿ ಕೋರಿದ. ಇನ್ನೊಂದು ವಿಡಿಯೋದಲ್ಲಿ ಆತ, ಪಶ್ಚಿಮ ಬಂಗಾಳದ ಒಬ್ಬ ಕೈದಿಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಆಪಾದಿಸಿದ.  ಆದರೆ ತನ್ನ ಅಪರಾಧಕ್ಕಾಗಿ ತಾನು ವಿಷಾದಿಸುವುದಿಲ್ಲ ಎಂದೂ ರೇಗರ್ ಸ್ಪಷ್ಟ ಪಡಿಸಿದ.  ‘ಹಿಂದೂ ಮಹಿಳೆಯರಿಗೆ ಇರುವ ಬೆದರಿಕೆಗಳನ್ನು ನಾನು ಸಹಿಸಲಾರೆ. ನಾನು ನನ್ನ ಜೀವನವನ್ನು ಹಾಳುಮಾಡಿಕೊಂಡಿದ್ದೇನೆ.  ಅದಕ್ಕಾಗಿ ನನಗೆ ವಿಷಾದವಿಲ್ಲ. ಆದರೆ ಕಾನೂನು ಅಧಿಕಾರಿಗಳೂ ಮತ್ತು ಮಾಧ್ಯಮ ಆಕೆ ಮತ್ತು ನನ್ನ ಮಧ್ಯೆ ಅಕ್ರಮ ಸಂಬಂಧ ಇರುವುದಾಗಿ ತೋರಿಸಿವೆ, ಇದು ಸರಿಯಲ್ಲ, ಇದಕ್ಕಾಗಿ ನನಗೆ ಬೇಸರವಿದೆ ಎಂದು ಆತ ಹೇಳಿದ. ನವದೆಹಲಿಯ ತಿಹಾರ್ ಜೈಲಿನ ಬಳಿಕ ಅತ್ಯಂತ ಹೆಚ್ಚಿನ ಭದ್ರತೆ ಇರುವ ಎರಡನೇ ಸೆರೆಮನೆ ಎಂದು ಪರಿಗಣಿತವಾಗಿರುವ ಜೋಧಪುರ ಕೇಂದ್ರೀಯ ಸೆರೆಮನೆಯ ಒಳಗಿದ್ದುಕೊಂಡೇ ರೇಗರ್ ಈ ಎರಡು ಹೊಸ ವಿಡಿಯೋಗಳನ್ನು ತಯಾರಿಸಿದ್ದು ಹೇಗೆ?  ಎಂಬ ಪ್ರಶ್ನೆ ಉದ್ಭವಿಸಿದ್ದು, ಸೆರೆಮನೆಯ ಭದ್ರತಾ ವ್ಯವಸ್ಥೆ ಬಗ್ಗೆ ಗುಮಾನಿಗಳನ್ನು ಮೂಡಿಸಿತು.  ಅತ್ಯಂತ ಭದ್ರತಾ ವ್ಯವಸ್ಥೆ ಇದ್ದರೂ ಜೋಧಪುರ ಜೈಲಿನಲ್ಲಿ ಸ್ಮಾಟ್ ಫೋನ್ ಗಳನ್ನು ಜೈಲಿನ ಒಳಕ್ಕೆ ಒಯ್ಯದಂತೆ ತಡೆಯುವ ಸಲುವಾಗಿ ೪ಜಿ ಸಂಕೇತಗಳನ್ನು ತಡೆಯುವಂತಹ ಜಾಮರ್ ಗಳು ಇಲ್ಲ ಎಂದು ಹೇಳಲಾಗಿದ್ದು, ರೇಗರ್ ಇದರ ಲಾಭ ಪಡೆದಿದ್ದಾನೆ ಎನ್ನಲಾಯಿತು. ಈ ಹಿಂದೆಯೂ ಜೈಲಿನ ಒಳಗಿರುವ ಕೈದಿಗಳು ಇಂಟರ್ ನೆಟ್ ಸೌಲಭ್ಯ ಉಳ್ಳ ಸೆಲ್ ಫೋನ್ ಗಳನ್ನು ಅತ್ಯಂತ ಸರಾಗವಾಗಿ ಜೈಲಿನ ಒಳಕ್ಕೆ ಒಯ್ಯುತ್ತಿದ್ದ ವರದಿಗಳಿದ್ದವು. ರೇಗರ್ ನನ್ನು ಜೈಲಿನಲ್ಲಿ ಅತಿಭದ್ರತೆ ಇರುವ ಬ್ಯಾರಕ್ಕುಗಳ ಪೈಕಿ ಒಂದರಲ್ಲಿ ಇರಿಸಲಾಗಿದೆ ಎಂದು ವರದಿಗಳು ಹೇಳಿದವು.  ವಿಡಿಯೋದಲ್ಲಿ ರೇಗರ್ ಇಸ್ರೇಲ್ ತನ್ನ ನೆರೆಹೊರೆಯ ದೇಶಗಳ ಬಗ್ಗೆ ಅನುಸರಿಸುತ್ತಿರುವ ನೀತಿಯನ್ನು ಉಲ್ಲೇಖಿಸಿದ್ದಾನೆ. ರೇಗರ್ ಮೆಟ್ರಿಕ್ಯುಲೇಷನ್ ಕೂಡಾ ಪೂರ್ಣ ಗೊಳಿಸಿಲ್ಲ. ಆತನ ನಿಕಟವರ್ತಿಗಳ ಪ್ರಕಾರ ಆತನಿಗೆ ಬರೆಯುವುದಕ್ಕೂ ಸರಿಯಾಗಿ ಬರುವುದಿಲ್ಲ. ಹೀಗಿರುವಾಗ ಆತನಿಗೆ ತನ್ನ ಭಾಷಣವನ್ನು ತಯಾರಿಸಿ ತನ್ನ ಫೋನಿಗಾಗಿ ಓದಿ ಹೇಳಲು ಸಾಧ್ಯವಾದದ್ದು ಹೇಗೆ? ಇಸ್ರೇಲ್ ಬಗ್ಗೆ ಆತ ಮಾತನಾಡಿದ್ದು ಹೇಗೆ? ಭಾರತದ ಭದ್ರತಾ ಪರಿಸ್ಥಿತಿಯನ್ನು ಇಸ್ರೇಲ್ ಜೊತೆಗೆ ಹೋಲಿಸಿ ವಿಶ್ಲೇಷಿಸಿದ್ದು ಹೇಗೆ? ಎಂದು ರಾಜಸಮಂಡ್ ಸ್ಥಳೀಯ ವ್ಯಕ್ತಿ ಫೋನ್‌ನಲ್ಲಿ ಮಾಧ್ಯಮ ಜೊತೆ ಮಾತನಾಡುತ್ತಾ ಪ್ರಶ್ಜಿಸಿದರು.  ರೇಗರ್ ಸುದೀರ್ಘ ಕಾಲದಿಂದ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದು, ಪರಿಣಾಮವಾಗಿ ಈ ವಿಡಿಯೋಗಳು ಬಂದಿರುವಂತೆ ಕಾಣುತ್ತದೆ ಎಂದು ಮೂಲಗಳು ಹೇಳಿದವು.  ರೇಗರ್ ಬಹುಕಾಲದಿಂದ ತನ್ನನ್ನು ಈಗಿನ ಸೆಲ್ ನಿಂದ ಸ್ಥಳಾಂತರಿಸಬೇಕು ಎಂದು ಹೇಳುತ್ತಿದ್ದ. ಏಕೆ, ಸಮಸ್ಯೆ ಏನು ಎಂಬುದಾಗಿ ಪ್ರಶ್ನಿಸಿದಾಗ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿದ. ನಾವು ವಿವರವಾಗಿ ಸೆಲ್ ನ್ನು ಪರಿಶೀಲಿಸಿದೆವು.  ಶಯಾಸ್ಪದವಾದದ್ದು ಏನೂ ಲಭಿಸಲಿಲ್ಲ ಎಂದು ಜೈಲ್ ಸೂಪರಿಂಟೆಂಡೆಂಟ್ ವಿಕ್ರಮ್ ಠಾಕೂರ್ ಹೇಳಿದರು. ಸೆರೆಮನೆ ಅಧಿಕಾರಿಗಳು ವಾಸುದೇವ ಬ್ರಾಹ್ಮಣ ಎಂಬ ವ್ಯಕ್ತಿಯೊಬ್ಬನನ್ನು ಆತನ ಜೊತೆಗೇ ಅದೇ ಸೆಲ್ ನಲ್ಲಿ ಇರಿಸಿದ್ದರು. ಆತ ತನ್ನ ಜೊತೆಗೆ ಮುಸ್ಲಿಮರಿಗೆ ವಿರುದ್ಧವಾಗಿ  ಮಾತನಾಡುತ್ತಿದ್ದ. ಆದರೆ ಬ್ರಾಹ್ಮಣನೆಂದು ಹೇಳಲಾಗಿದ್ದ ಈ ವ್ಯಕ್ತಿ ಬ್ರಾಹ್ಮಣನೇ ಅಲ್ಲ, ಮುಸ್ಲಿಮ್ ಎಂಬುದು ತನಗೆ ಬಳಿಕ ಗೊತ್ತಾಯಿತು ಎಂದು ರೇಗರ್ ವಿಡಿಯೋದಲ್ಲಿ ಹೇಳಿದ್ದ. ಆದರೆ ಆ ವ್ಯಕ್ತಿ ನಿಜವಾಗಿಯೂ ಬ್ರಾಹ್ಮಣನೇ ಆಗಿದ್ದು ಮೇಘನಾದ ಸರ್ಕಾರ್ ಎಂಬ ವ್ಯಕ್ತಿಯ ಪುತ್ರ. ಮಾದಕ ದ್ರವ್ಯ ಪ್ರಕರಣದಲ್ಲಿ ಶಿಕ್ಷಿತನಾದ್ದರಿಂದ ಆತನನ್ನು ಈ ಸೆರೆಮನೆಗೆ ತರಲಾಗಿತ್ತು. ಆತ ಎಂದೂ ರೇಗರ್‌ಗೆ ಬೆದರಿಕೆ ಒಡ್ಡಿಲ್ಲ, ಬಳಿಕ ಆತನನ್ನು ಬೇರೆ ಸೆಲ್ ಗೆ ಕಳಿಸಲಾಯಿತು ಎಂದು ವಿಕ್ರಮ್ ಠಾಕೂರ್ ನುಡಿದರು.  ರೇಗರ್ ಕೈಗೆ ಇಂಟರ್ ನೆಟ್ ಸೌಲಭ್ಯವಿದ್ದ ಸ್ಮಾರ್ಟ್ ಫೋನ್ ಲಭಿಸಿದ್ದು ಹೇಗೆ ಎಂಬ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಸೆರೆಮನೆ ಅಧಿಕಾರಿಗಳು ತಿಳಿಸಿದರು.  ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪೂ ಕೂಡಾ ಇರುವ ಜೋಧಪುರ ಕೇಂದ್ರೀಯ ಸೆರೆಮನೆಯಲ್ಲಿ ೭ ಜಾಮರ್ ಗಳನ್ನು ಅಳವಡಿಸಲಾಗಿದೆ. ಆದರೆ ಅವು ೨ಜಿ ಸಂಕೇತಗಳನ್ನು ಅಡ್ಡಿ ಪಡಿಸಬಲ್ಲಂತಹ ತಂತ್ರಜ್ಞಾನದ ಜಾಮರ್ ಗಳು. ಇಲ್ಲಿನ ಕೈದಿಗಳು ೪ಜಿ ಸಂಕೇತಗಳನ್ನು ಅತ್ಯಂತ ಸುಲಭವಾಗಿ ಬಳಸಬಲ್ಲರು, ವಿಡಿಯೋಗಳನ್ನು ತಯಾರಿಸಬಲ್ಲರು ಮತ್ತು ವಿಡಿಯೋ ಕಾಲ್ ಗಳನ್ನೂ ಮಾಡಬಲ್ಲರು ಎಂದು ಕೇಂದ್ರೀಯ ಸೆರೆಮನೆ ಮೂಲವೊಂದು ಹೇಳಿತು. ಜೋಧಪುರ ಕೇಂದ್ರೀಯ ಸೆರೆಮನೆಯು ಅರಾಜಕತೆಗೆ ಕುಖ್ಯಾತವಾಗಿದೆ. ೨೦೧೦ರಲ್ಲಿ ಆಗಿನ ಜೈಲರ್ ಭರತ್ ಭೂಷಣ್ ಭಟ್ ಅವರನ್ನು ಕೈದಿಗಳೇ ಚಾಕುವಿನಿಂದ ಇರಿದು ಕೊಂದಿದ್ದರು. ೨೦೧೧ರಲ್ಲಿ ಆಗಿನ ಐಜಿ (ಸೆರೆಮನೆ) ಜೈಲಿನೊಳಗೆ ೫೦ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ್ದರು. ೨೦೧೬-೧೭ರಲ್ಲಿ ೧೦ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು ಜೈಲಿನೊಳಗಡೆ ಪತ್ತೆಯಾಗಿದ್ದವು. ಕಳೆದ ವರ್ಷ ಜುಲೈಯಲ್ಲಿ ಪೊಲೀಸ್ ಕಮೀಷನರ್ ಅಶೋಕ ರಾಥೋಡ್ ಅವರು ನ್ಯಾಯಾಲಯಕ್ಕೆ ’ಜೋಧಪುರ ಸೆರೆಮನೆಯು ಕ್ರಿಮಿನಲ್ ಗಳನ್ನು ಬೆಳೆಸುವ ನೆಲವಾಗುತ್ತದೆ. ಇಂಟರ್ ನೆಟ್ ಬಳಸುವ ಮೂಲಕ ಅವರು ತಮ್ಮ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದರು.


2009: ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು 13 ಮಂದಿ ವಕೀಲರನ್ನು ಬಂಧಿಸಲು ಕ್ರಮ ಕೈಗೊಳುತ್ತಿದ್ದಂತೆಯೇ ಚೆನ್ನೈಯ ಮದ್ರಾಸ್ ಹೈಕೋರ್ಟ್ ಆವರಣ ರಣರಂಗವಾಗಿ ಪರಿವರ್ತಿತವಾಯಿತು. ಕೋಪೋದ್ರಿಕ್ತ ವಕೀಲರು ಕೋರ್ಟ್ ಆವರಣದ ಪೊಲೀಸ್ ಠಾಣೆಗೇ ಬೆಂಕಿ ಹಚ್ಚಿದರಲ್ಲದೇ ಒಬ್ಬರು ನ್ಯಾಯಮೂರ್ತಿಗಳ ಮೇಲೂ ಹಲ್ಲೆ ನಡೆಸಿ ಹಲವಾರು ವಾಹನಗಳನ್ನು ಜಖಂಗೊಳಿಸಿದರು. ಹೀಗಾಗಿ ಹೈಕೋರ್ಟ್ ಆವರಣದಲ್ಲಿಯೇ ಅರಾಜಕತೆ ಸೃಷ್ಟಿಯಾಯಿತು.

2009: ಮದುವೆಗೆ ಹೊರಟಿದ್ದ ಕ್ರೂಸರ್ ಟೆಂಪೊ ಟ್ರ್ಯಾಕ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮಗು, 7 ಜನ ಮಹಿಳೆಯರು ಸೇರಿದಂತೆ 16 ಮಂದಿ ಸತ್ತು ಐವರು ಗಾಯಗೊಂಡ ದುರ್ಘಟನೆ ಬಳ್ಳಾರಿ ನಗರ ಹೊರ ವಲಯದ ವೇಣಿ ವೀರಾಪುರ ಬಳಿ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ-63)ಯಲ್ಲಿ ಬೆಳಗಿನ ಜಾವ 4.30ರ ಸುಮಾರು ಸಂಭವಿಸಿತು. ಮೃತಪಟ್ಟವರು ಗದಗ ಜಿಲ್ಲೆ ನಿಡಗುಂದಿ, ಹೊಸಳ್ಳಿ, ನರೇಗಲ್ ಮತ್ತು ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದವರಾಗ್ದಿದು, ಅವರೆಲ್ಲ ನಿಡಗುಂದಿಯಿಂದ ಬಳ್ಳಾರಿಗೆ ಕ್ರೂಸರ್ ಟೆಂಪೊ ಟ್ರ್ಯಾಕ್ಸ್ ವಾಹನದಲ್ಲಿ ಬರುವಾಗ ಈ ದುರ್ಘಟನೆ ನಡೆಯಿತು.

2008: ಮೀನು ಪ್ರಿಯರಿಗೊಂದು ಖುಷಿಯ ಸುದ್ದಿ. ಪಶ್ಚಿಮ ಘಟ್ಟದ ಜಲಸಂಪನ್ಮೂಲಗಳಲ್ಲಿ ಮೂರು ಹೊಸ ಜಾತಿಯ ಮೀನುಗಳು ಪತ್ತೆಯಾದವು. ಮಂಗಳೂರು ನಗರದ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕರ ಕಚೇರಿಯ ಅಲಂಕಾರಿಕ ಮೀನು ಅಭಿವೃದ್ಧಿಯ ರಾಜ್ಯ ಸಹನಿಯೋಜಕ ಡಾ. ಪ್ರಮೋದ್ ಪಿ.ಕೆ. ಅವರು ಈ ಮೀನುಗಳನ್ನು ಪತ್ತೆ ಹಚ್ಚಿದರು. ಡೇನಿಯೋ, ಶಿಸ್ತುರಾ ಮತ್ತು ಮೀಸೋನಿಮಕೈಲಸ್ ಪ್ರಬೇಧಗಳಿಗೆ ಸೇರಿದ ಈ ಮೀನುಗಳು ಆಗುಂಬೆ ಪರಿಸರದ ತೊರೆಗಳಲ್ಲಿ ಮತ್ತು ಅದಕ್ಕೆ ಸೇರಿದ ಶಿವಮೊಗ್ಗದ ಸೀತಾನದಿಯ ಕೊನೆಯವರೆಗೂ ಇರುವುದು ಪತ್ತೆಯಾಗಿದೆ ಎಂದು ಡಾ. ಪ್ರಮೋದ್ ಪಿ.ಕೆ. ತಿಳಿಸಿದರು. ಚೆನ್ನೈಯ ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆಯ ಡಾ. ಕೆ.ರಮಾದೇವಿ ಹಾಗೂ ಡಾ.ಟಿ.ಜೆ.ಇಂದ್ರ ಅವರು ಈಗ ಪತ್ತೆಯಾಗಿರುವ ಮೀನುಗಳನ್ನು ಹೊಸ ಜಾತಿಯ ಮೀನುಗಳೆಂದು ದೃಢೀಕರಿಸಿದರು. ಈ ಮೀನುಗಳು ವೈವಿಧ್ಯಮಯ ಬಣ್ಣಗಳನ್ನು ಹೊಂದಿದ್ದು ಅಲಂಕಾರಿಕ ಮೀನುಗಳಾಗಿ ಅಭಿವೃದ್ಧಿಪಡಿಸಬಹುದು ಎಂದು ಅವರು ಹೇಳಿದರು.

2008: ಪಾಕಿಸ್ಥಾನದ ಸಂಸದೀಯ ಚುನಾವಣೆಗಳಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ವಿರುದ್ಧ ಜನಾದೇಶ ಹೊರಹೊಮ್ಮಿ ಅವರು ಭಾರಿ ಮುಖಭಂಗ ಅನುಭವಿಸಿದರು. ಯಾವುದೇ ಒಂದು ಪಕ್ಷವೂ ಸ್ಪಷ್ಟ ಬಹುಮತ ಪಡೆಯಲಿಲ್ಲ. ಆದರೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಯ ಅನುಕಂಪದಿಂದ ಪಾಕಿಸ್ಥಾನ ಪೀಪಲ್ಸ್ ಪಕ್ಷವು 87 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷ ಪಿಎಂಎಲ್-ಎನ್ 66 ಸ್ಥಾನಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಯಿತು. ಮುಷರಫ್ ಅವರ ಪಕ್ಷ ಪಿಎಂಎಲ್ ಕ್ಯೂ-38 ಸ್ಥಾನ ಗಳಿಸಿದರೆ, ಅವರ ಬೆಂಬಲಿಗ ಪಕ್ಷಗಳು ಒಟ್ಟು 19 ಸ್ಥಾನ ಗಳಿಸಿದವು. ಮುಷರಫ್ ಅವರು 1999ರ ಅಕ್ಟೋಬರಿನಲ್ಲಿ ರಕ್ತರಹಿತ ಕ್ರಾಂತಿ ನಡೆಸಿ ಅಧ್ಯಕ್ಷ ಸ್ಥಾನಕ್ಕೇರಿದ್ದರು.

2008: ಕಳೆದ 50 ವರ್ಷಗಳಿಂದ ಅಮೆರಿಕದ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಪುಟ್ಟ ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಹವಾನಾದಲ್ಲಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು.

2008: ಅಂತರ್ಜಾತೀಯ ವಿವಾಹವಾಗುವ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗಿದ್ದ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತು. ಜಾತಿ ಆಧಾರಿತಮೀಸಲಾತಿ ಸೌಲಭ್ಯ ಆಧರಿಸಿ ವ್ಯಕ್ತಿಯೊಬ್ಬ ತಾನು ಹುಟ್ಟಿನಿಂದ ಪರಿಶಿಷ್ಟ ಜಾತಿ ಅಥವಾ ಪಂಗಡದವನಾಗಲು ಸಾಧ್ಯವಿಲ್ಲ. ಕೇವಲ ಆ ಜಾತಿ ಅಥವ ಪಂಗಡದವರನ್ನು ಮದುವೆಯಾಗಿ ಮೀಸಲಾತಿಗೆ ಅರ್ಜಿ ಸಲ್ಲಿಸಿದರೆ ಅದರಿಂದ ಮೂಲ ಉದ್ಧೇಶ ನಿಷ್ಪಲವಾದಂತಾಗುತ್ತದೆ ಎಂದು ವಿಭಾಗೀಯ ಪೀಠ ತೀರ್ಪು ನೀಡಿತು. ಕಕ್ಷಿದಾರರಾದ ಹೇಮಲತಾ ಬಕ್ಚಾವ್ ಅವರು ನಾಸಿಕ್ ಜಿಲ್ಲಾ ಪರಿಷತ್ತಿನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾದ ಹುದ್ದೆಗೆ ಡಿಸೆಂಬರ್ 2003ರಲ್ಲಿ ನೇಮಕಗೊಂಡರು. ಬಕ್ಚಾವ್ ಅವರು ಮೂಲತಃ ಮರಾಠಿಗರು. ಆದರೆ ಆಕೆಯ ಪತಿ ಮಹಾದೇವ್ ಕೋಲಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಈಕೆ ತಾನು ಕೋಲಿಯವರನ್ನು ಮದುವೆಯಾಗುವ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ಅರ್ಜಿಯಲ್ಲಿ ನಮೂದಿಸಿದ್ದರು. ಪರಿಶಿಷ್ಟ ಪಂಗಡದ ನೇಮಕ ಪಟ್ಟಿಯನ್ನು ಪರಿಷ್ಕರಣೆಗೆ ಒಳಪಡಿಸಿದಾಗ ಬಕ್ಚಾವ್ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ ಎಂದು ತಿಳಿದು, ಅವರ ನೇಮಕವನ್ನು ರದ್ದುಗೊಳಿಸಲಾಗಿತ್ತು. ಆಕೆ ಈ ರದ್ಧತಿಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2008: ಖ್ಯಾತ ಸಂಸ್ಕೃತ ಕವಿ ಸ್ವಾಮಿ ರಾಮಭದ್ರಾಚಾರ್ಯ ಅವರಿಗೆ 2007ನೇ ಸಾಲಿನ 16ನೇ ವಾಚಸ್ಪತಿ ಪುರಸ್ಕಾರ ಘೋಷಿಸಲಾಯಿತು. ರಾಮಭದ್ರಾಚಾರ್ಯರ `ಶ್ರೀ ಭಾರ್ಗವಾರಾಘವೀಯಂ' (ಮಹಾಕಾವ್ಯ) ಕೃತಿಗೆ ಈ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ ಎಂದು ಕೆ.ಕೆ. ಬಿರ್ಲಾ ಪ್ರತಿಷ್ಠಾನ ತಿಳಿಸಿತು. 2ನೇ ವರ್ಷದಲ್ಲೇ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಹಿಂದಿ ಮತ್ತು ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಉತ್ತರ ಪ್ರದೇಶ ಸರ್ಕಾರವು ಅವರನ್ನು ಅಶಕ್ತರ ವಿ.ವಿ.ಯ ಜೀವಮಾನದ ಕುಲಪತಿಯಾಗಿ ನೇಮಿಸಿದೆ.

2008: ಸಿಗರೇಟ್, ಬೀಡಿ ಸೇದುವುದರಿಂದ ಅಥವಾ ಹೆಚ್ಚು ಮದ್ಯಪಾನ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಸಂಶೋಧನೆಗಳು ಹಿಂದಿನಿಂದಲೂ ಹೇಳುತ್ತಿವೆ. ಆದರೆ, ಹೊಸ ಸಂಶೋಧನೆಯೊಂದು, ಈ ಚಟಗಳು ವ್ಯಕ್ತಿಯ ವಂಶದ ತಳಿಗುಣವನ್ನೇ ಬದಲಾಯಿಸಬಹುದು ಎಂದು ಹೇಳಿತು. ಧೂಮಪಾನ, ಮದ್ಯಪಾನದಿಂದ ಗಂಡಸರ ವೀರ್ಯಾಣುವಿನಲ್ಲಿ ರಾಸಾಯನಿಕ ಬದಲಾವಣೆ ಆಗುತ್ತದೆ. ಇದು ವ್ಯಕ್ತಿಗೆ ಹುಟ್ಟಲಿರುವ ಮಗು ಹಾಗೂ ಆಮೇಲಿನ ಪೀಳಿಗೆಗಳಿಗೆ ತಂತಾನೇ ವರ್ಗಾವಣೆ ಆಗುತ್ತದೆ ಎನ್ನುವುದು ಲಂಡನ್ನಿನ ಸಂಶೋಧಕರ ತಂಡದ ಪ್ರತಿಪಾದನೆ. ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಇದು ಖಚಿತವಾಗಿದೆ. ಇಂತಹ ಇಲಿಗಳಿಗೆ ಹುಟ್ಟಿದ ಮರಿಗಳಲ್ಲಿ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಪ್ರೋಸ್ಟೇಟ್ ಗಂಥಿ ಮತ್ತು ವೀರ್ಯ ಉತ್ಪತ್ತಿ ಸಮಸ್ಯೆಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ವಿವರ ನೀಡಿದರು.

2008: ಬೆಂಗಳೂರು ನಗರದ ಮಣಿಪಾಲ ಆಸ್ಪತ್ರೆಯ 50 ಕ್ಕೂ ಹೆಚ್ಚು ವಿಶೇಷ ಸೇವಾ ಕ್ಷೇತ್ರಗಳಿಗೆ ರಾಷ್ಟ್ರೀಯ ಆಸ್ಪತ್ರೆಗಳ ಮಂಡಳಿ (ಎನ್ಎಬಿಎಚ್)ಯ ಮಾನ್ಯತೆ ಲಭಿಸಿತು. ನಾಲ್ಕು ವರ್ಷಗಳ ಹಿಂದೆ ಅಳವಡಿಸಿಕೊಳ್ಳಲಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯಿಂದಾಗಿ ಅಸ್ಪತ್ರೆಗೆ ಈ ಮಾನ್ಯತೆ ದೊರೆತಿದೆ ಎಂದು ಪ್ರಕಟಣೆ ತಿಳಿಸಿತು. ಕ್ಲಿನಿಕಲ್, ನರ್ಸಿಂಗ್, ರೋಗ ಪತ್ತೆ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಐಎಸ್ಒ ಪ್ರಮಾಣ ಪತ್ರದ ಮಾನ್ಯತೆ ಪಡೆದ ಮೊಟ್ಟ ಮೊದಲ ಭಾರತೀಯ ಆಸ್ಪತ್ರೆಯೂ ಇದಾಗಿದೆ.

2008: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ನಾಯಕಿ ಬಸವರಾಜೇಶ್ವರಿ (85) ಅವರು ಬೆಳಿಗ್ಗೆ 11.15ಕ್ಕೆ ಬಳ್ಳಾರಿನಗರದಲ್ಲಿ ನಿಧನರಾದರು. 1957ರಿಂದ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅವರು 1957, 1962 ಮತ್ತು 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರವನ್ನು ಪ್ರತಿನಿಧಿಸಿ 3 ಬಾರಿ ಶಾಸಕಿಯಾಗಿದ್ದರು. ಅದೇ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಮತ್ತು ಸಣ್ಣ ನೀರಾವರಿ ಖಾತೆಯ ಉಪ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು. 1977ರಿಂದ 6 ವರ್ಷಗಳ ಕಾಲ ರಾಜ್ಯ ವಿಧಾನ ಪರಿಷತ್ ಸದಸ್ಯೆಯಾಗಿ, ಸ್ವಲ್ಪ ಕಾಲ ಹಂಗಾಮಿ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಬಳ್ಳಾರಿ ಕ್ಷೇತ್ರದಿಂದ 8, 9 ಮತ್ತು 10ನೇ ಲೋಕಸಭೆಗೆ ಸದಸ್ಯರಾಗಿ ಅವರು ಸತತ 3 ಬಾರಿ ಆಯ್ಕೆಯಾಗಿದ್ದರು. 1993ರಿಂದ 1995ರ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಸಚಿವೆಯಾಗಿದ್ದಾಗಲೇ 1995ರಲ್ಲಿ ಚೀನಾದ ಬೀಜಿಂಗಿನಲ್ಲಿ ನಡೆದ ವಿಶ್ವ ಮಹಿಳಾ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

2007: ದೆಹಲಿ ಮತ್ತು ಅಟ್ಟಾರಿ ನಡುವೆ ಸಂಚರಿಸುವ ಭಾರತ- ಪಾಕಿಸ್ತಾನ ನಡುವಣ ಸ್ನೇಹ ಸೇತುವೆಯಾಗಿರುವ ಸಮ್ ಜೌತಾ (ಗೆಳೆತನ) ಎಕ್ಸ್ಪ್ರೆಸ್ ರೈಲಿನಲ್ಲಿ ನಡುರಾತ್ರಿಯ್ಲಲಿ ಸಂಭವಿಸಿದ ಬಾಂಬ್ ಸ್ಫೋಟ ಮತ್ತು ಅಗ್ನಿ ದುರಂತದ್ಲಲಿ 67 ಪ್ರಯಾಣಿಕರು ಸುಟ್ಟು ಕರಕಲಾಗಿ ಇತರ 60 ಮಂದಿ ಗಾಯಗೊಂಡರು. ಹಳೆ ದೆಹಲಿ ಪ್ಲ್ಯಾಟ್ ಫಾರ್ಮಿನಿಂದ ರಾತ್ರಿ 10.40ಕ್ಕೆ ಹೊರಟ ರೈಲಿನಲ್ಲಿ 11.56ಕ್ಕೆ ಪಾಣಿಪತ್ ಸಮೀಪ ಸೂಟ್ ಕೇಸ್ ಸ್ಫೋಟಗೊಂಡು ಈ ದುರಂತ ಸಂಭವಿಸಿತು. ಪರಿಣಾಮವಾಗಿ ಹಿಂದಿನ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಸತ್ತವರಲ್ಲಿ ಬಹುತೇಕ ಮಂದಿ ಪಾಕಿಸ್ಥಾನೀಯರು.

2007: ಇಡೀ ದೇಶವನ್ನು ತಲ್ಲಣಗೊಳಿಸಿದ್ದ ನೈನಾ ಸಹಾನಿ ಕೊಲೆ ಪ್ರಕರಣದ ಆರೋಪಿ ಸುಶೀಲ ಶರ್ಮಾಗೆ (ತಂದೂರಿ ಶರ್ಮಾ) ವಿಧಿಸಲಾದ ಮರಣದಂಡನೆಯನ್ನು ದೆಹಲಿ ಹೈಕೋರ್ಟ್ ಕಾಯಂಗೊಳಿಸಿತು. ಇದೊಂದು ಪೈಶಾಚಿಕ ಕೃತ್ಯ ಎಂದು ನ್ಯಾಯಾಲಯ ಹೇಳಿತು.

2007: ಬೆಳಗಾವಿ ಜಿಲ್ಲೆಯ ರಂ.ಶಾ. ಲೋಕಾಪುರ ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ `ಜ್ಞಾನೇಶ್ವರಿ' ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು. ಮರಾಠಿ ಸಂತ ಜ್ಞಾನೇಶ್ವರ ಅವರು 1290ರಲ್ಲಿ ರಚಿಸಿದ್ದ ಸಾಹಿತ್ಯವನ್ನು `ಕನ್ನಡ ಜ್ಞಾನೇಶ್ವರಿ' ಎಂಬ ಕೃತಿ ರಚನೆ ಮೂಲಕ ಲೋಕಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಲೋಕಾಪುರ ಅವರು ರಚಿಸಿದ `ತಾಯಿ ಸಾಹೇಬ' ಕಾದಂಬರಿ ಚಲನಚಿತ್ರವಾಗಿದೆ. `ಸಾವಿತ್ರಿ' ಎಂಬ ಇನ್ನೊಂದು ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

2007: ಪಶ್ಚಿಮ ಘಟ್ಟದ ಅರಣ್ಯದಲ್ಲಿ ಚಾರಣಕ್ಕೆ ಹೋದ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಬೆಂಗಳೂರಿನ ಮೂವರು ಸಾಹಸಿಗರ ಪೈಕಿ ಇಬ್ಬರ ಕಳೇಬರಗಳು 9 ತಿಂಗಳ ನಂತರ ಪತ್ತೆಯಾದವು. ಅಡ್ವೆಂಚರ್ಸ್ ಕ್ಲಬ್ಬಿನ ಭಾಸ್ಕರ ಬಾಬು, ಎಂಜಿನಿಯರ್ ತೇಜಮೂರ್ತಿ ಮತ್ತು ವಸಂತ ಕುಮಾರ ಅವರು ಮೇ 28ರಂದು ಪಶ್ಚಿಮ ಘಟ್ಟದ ಗುಂಡ್ಯ ಸಮೀಪದ ಚೌಡೇಶ್ವರಿ ದೇವಸ್ಥಾನದಲ್ಲಿ ಕಾರು ನಿಲ್ಲಿಸಿ ಚಾರಣಕ್ಕೆ ಹೊರಟವರು ಕಣ್ಮರೆಯಾಗಿದ್ದರು. ಅವರ ಶೋಧಕ್ಕಾಗಿ ನಡೆಸಿದ ಎಲ್ಲ ಯತ್ನಗಳೂ ವಿಫಲಗೊಂಡಿದ್ದವು.

2006: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ಥಾನದ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 77 ರನ್ ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಅವರು ಪಾಕಿಸ್ಥಾನ ಪ್ರವಾಸದ ಬಳಿಕ 53.95 ಸರಾಸರಿಗೆ ಬಂದಿದ್ದು, ಆಸ್ಟ್ರೇಲಿಯಾದ ಮೈಕೆಲ್ ಬೆವನ್ ಹೆಸರಿನಲ್ಲಿ ಇದ್ದ 53.58ರ ಸರಾಸರಿಯ ವಿಶ್ವದಾಖಲೆ (ಕನಿಷ್ಠ 1000 ರನ್) ಅಳಿಸಿ ಹಾಕಿದರು.

2006: ಬೇಸಾಯ ಮಾಡುತ್ತಾ ಶಾಲೆಯ ಮುಖವನ್ನೇ ನೋಡಿರದೇ ಇದ್ದ ಜಡೇಗೌಡ ಅವರು ಬಿಳಿಗಿರಿ ರಂಗನ ಬೆಟ್ಟದ ಡಾ. ಸುದರ್ಶನ್ ಅವರ ಪ್ರಯತ್ನದ ಫಲವಾಗಿ ವಿದ್ಯೆ ಕಲಿತು ಎಂ.ಎಸ್.ಸಿವರೆಗೂ ಕಲಿತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಇದರೊಂದಿಗೆ ಈ ರೀತಿ ನೇಮಕಗೊಂಡ ರಾಜ್ಯದ ಪ್ರಥಮ ಸೋಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರವನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದ ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ `ಜಿಲ್ಲಾಂಡ್ಸ್- ಪೋಸ್ಟೆನ್' ಈ ವ್ಯಂಗ್ಯಚಿತ್ರಗಳಿಗೆ ಜಗತ್ತಿನಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಕೇಳಿತು. ಅದನ್ನು ಸೌದಿ ಸ್ವಾಮ್ಯದ ಪಾನ್ ಅರಬ್ ವೃತ್ತಪತ್ರಿಕೆ `ಆಶ್ರಖ್ ಅಲ್-ಅವಾಸತ್' ಪ್ರಕಟಿಸಿತು. ಕ್ಷಮೆಯಾಚನೆಗೆ ಪತ್ರಿಕೆಯ ಮುಖ್ಯ ಸಂಪಾದಕ ಕಾರ್ಸ್ಟೆನ್ ಜಸ್ಟೆ ಸಹಿ ಹಾಕಿದರು. ಇದನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸಿ `ಜಿಲ್ಲಾಂಡ್ಸ್- ಪೋಸ್ಟೆನ್'ನ ವೆಬ್ ಸೈಟಿನಲ್ಲೂ ಪ್ರಕಟಿಸಲಾಯಿತು. ಲಿಬಿಯಾ, ನೈಜೀರಿಯಾ ಮತ್ತು ಪಾಕಿಸ್ಥಾನದಲ್ಲಿ ಭುಗಿಲೆದ್ದ ಹಿಂಸಾಚಾರಗಳಿಗೆ 32 ಮಂದಿ ಬಲಿಯಾದ ಬಳಿಕ ಡ್ಯಾನಿಷ್ ಪತ್ರಿಕೆ ಈ ಕ್ಷಮೆಯಾಚನೆ ಕ್ರಮ ಕೈಗೊಂಡಿತು. `ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚರ್ಚೆ' ಅಂಗವಾಗಿ 2005ರ ಸೆಪ್ಟೆಂಬರ್ 30ರಂದು ಮೊದಲಿಗೆ 12 ವ್ಯಂಗ್ಯಚಿತ್ರಗಳನ್ನು ಡೆನ್ಮಾರ್ಕಿನ ಪತ್ರಿಕೆ ಪ್ರಕಟಿಸಿತ್ತು. ಈ ವ್ಯಂಗ್ಯಚಿತ್ರಗಳು ಹಲವಾರು ಐರೋಪ್ಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಮರು ಮುದ್ರಣಗೊಂಡದ್ದಲ್ಲದೆ, ಇಟಲಿಯ ಸುಧಾರಣಾ ಸಚಿವ ರಾಬರ್ಟೊ ಕಾಲ್ಡೆರೋಲಿ ಅವರ ಟೀಶರ್ಟಿನಲ್ಲೂ ಮುದ್ರಣಗೊಂಡಿತ್ತು. ವಿವಾದದ ಹಿನ್ನೆಲೆಯಲ್ಲಿ ರಾಬರ್ಟೊ ರಾಜೀನಾಮೆ ನೀಡಿದ್ದರು.

2006: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿಗೆ ನಡೆಯುವ ಹನ್ನೆರಡು ದಿನಗಳ ಮಹಾಮಸ್ತಕಾಭಿಷೇಕ ಕೊನೆಗೊಂಡಿತು. ಸಹಸ್ರಮಾನದ ಮೊದಲ ಮಹಾಮಸ್ತಕಾಭಿಷೇಕದ ಧಾರ್ಮಿಕ ಆಚರಣೆ ಪರಂಪರೆಯ ಮಹತ್ವದ ಘಟ್ಟಕ್ಕೆ ತೆರೆಬಿತ್ತು.

1997: ಚೀನಾದ ಖ್ಯಾತ ನಾಯಕ ಡೆಂಗ್ ಷ್ಯಾವೊಪಿಂಗ್ ಬೀಜಿಂಗಿನಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.

1971: ತೈಲವರ್ಣ, ಜಲವರ್ಣ, ಬೆಳಕು- ನೆರಳು ಚಿತ್ರಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಅನು ಪಾವಂಜೆ ಜನನ. ಇವರ ತಂದೆ ಕೃಷ್ಣಮೂರ್ತಿ, ತಾಯಿ ಶಾರದಾ. ಹುಟ್ಟ್ದಿದ್ದು ಮಂಗಳೂರಿನಲ್ಲಿ.

1978: ಸಂಗೀತ ನಿರ್ದೇಶಕ ಪಂಕಜ್ ಮಲ್ಲಿಕ್ ನಿಧನ.

1956: ಭಾರತೀಯ ಸ್ವಾತಂತ್ರ್ಯ ಯೋಧರಲ್ಲಿ ಒಬ್ಬರೂ, ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಧ್ಯಕ್ಷರೂ ಆದ ಆಚಾರ್ಯ ನರೇಂದ್ರ ದೇವ್ ನಿಧನರಾದರು.

1945: ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಅಮೆರಿಕದ 30,000 ನೌಕಾಯೋಧರು ಪಶ್ಚಿಮ ಫೆಸಿಫಿಕ್ ದ್ವೀಪ ಇವಾ ಜಿಮಾಕ್ಕೆ ಲಗ್ಗೆ ಹಾಕಲು ಬಂದಿಳಿದರು. ಅಲ್ಲಿ ಅವರು ಜಪಾನ್ ಪಡೆಗಳಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಒಂದು ತಿಂಗಳ ಸುದೀರ್ಘ ಸಮರದ ಬಳಿಕ ಅಮೆರಿಕನ್ನರು ಪ್ರಮುಖ ಆಯಕಟ್ಟಿನ ಈ ದ್ವೀಪದ ಮೇಲೆ ಹಿಡಿತ ಸಾಧಿಸಿದರು.

1915: ಭಾರತದ ಸಮಾಜ ಸುಧಾರಕ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸ್ಥಾಪಕ ಗೋಪಾಲ ಕೃಷ್ಣ ಗೋಖಲೆ (1866-1915) ಅವರು ಪುಣೆಯಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ನಿಧನರಾದರು.


1906: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿ ಎಂದೇ ಜನಪ್ರಿಯರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ (19/2/1906- 13/5/1973) ಹುಟ್ಟಿದ ದಿನ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಾರತದಲ್ಲಿ ಬಲಶಾಲಿಯಾಗಿ ಕಟ್ಟಿದರು.

1878: ಫೋನೋಗ್ರಾಫ್ ಸಂಶೋಧನೆಗಾಗಿ ಥಾಮಸ್ ಆಲ್ವಾ ಎಡಿಸನ್ ಅವರಿಗೆ ಪೇಟೆಂಟ್ ಲಭಿಸಿತು.

1859: ಸ್ವಾಂಟೆ ಆಗಸ್ಟ್ ಆರ್ಹೆನಿಯಸ್ (1859-1927) ಹುಟ್ಟಿದ ದಿನ. ಸ್ವೀಡಿಷ್ ಭೌತ ರಾಸಾಯನಿಕ ತಜ್ಞನಾದ ಈತ `ಹಸಿರುಮನೆ' ಪರಿಣಾಮವನ್ನು (ಕಾರ್ಬನ್ ಡೈ ಆಕ್ಸೈಡ್ನಿಂದ ವಾತಾವರಣದ ಬಿಸಿ ಹೆಚ್ಚುವುದು) ಮೊತ್ತ ಮೊದಲ ಬಾರಿಗೆ ಗುರುತಿಸಿದ.

1807: ಆರೋನ್ ಬರ್ ಮೆಕ್ಸಿಕೊ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಕ್ಕಾಗಿ ರಾಜದ್ರೋಹದ ಆಪಾದನೆಗೆ ಗುರಿಯಾಗಿ ಬಂಧಿತನಾದ ಅಮೆರಿಕಾದ ಮೊತ್ತ ಮೊದಲ ಉಪಾಧ್ಯಕ್ಷ ಎನಿಸಿದ. ಮುಂದೆ ಆರೋಪಮುಕ್ತನಾದರೂ ಈತನ ಮೇಲಿನ ಸಂಶಯಕ ಕಪ್ಪುಚುಕ್ಕೆ ಹಾಗೆಯೇ ಉಳಿದುಬಿಟ್ಟಿತು.

1670: ಛತ್ರಪತಿ ಶಿವಾಜಿ ಮಹಾರಾಜರ ಜನನ.

1473: ಪೋಲಂಡ್ ಖಗೋಳತಜ್ಞ ನಿಕೋಲಸ್ ಕೊಪರ್ನಿಕಸ್ (1473-1543) ಪೋಲಂಡಿನ ಟೊರುನ್ನಿನಲ್ಲಿ ಜನಿಸಿದ. ಭೂಮಿ ಮತ್ತು ಇತರ ಗ್ರಹಗಳು ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತಿವೆ ಎಂಬುದಾಗಿ ಈತ ಪ್ರತಿಪಾದಿಸಿದ ಸಿದ್ಧಾಂತವನ್ನು 1000 ವರ್ಷಗಳಿಗೂ ಹೆಚ್ಚು ಕಾಲದವರೆಗೆ ಇಡೀ ಜಗತ್ತು ಸಾರ್ವತ್ರಿಕವಾಗಿ ಒಪ್ಪಿಕೊಂಡಿತು. ಆದರೆ ಗ್ರಹಗಳು ವರ್ತುಲಾಕಾರದ ಕಕ್ಷೆಯಲ್ಲಿ ಸುತ್ತುತ್ತಿವೆ ಎಂಬುದಾಗಿ ಈತ ತಪ್ಪು ಲೆಕ್ಕ ಹಾಕಿದ್ದ. (ಗ್ರಹಗಳು ಸುತ್ತುವುದು ಅಂಡಾಕಾರದ ವೃತ್ತದಲ್ಲಿ ಎಂಬುದು ಮುಂದೆ ಖಚಿತಗೊಂಡಿತು.)

No comments:

Post a Comment