ನಾನು ಮೆಚ್ಚಿದ ವಾಟ್ಸಪ್

Sunday, December 1, 2019

ಇಂದಿನ ಇತಿಹಾಸ History Today ಡಿಸೆಂಬರ್ 01

2019: ಹೈದರಾಬಾದ್: ದೇಶದ ಜನರನ್ನೇ ದಿಗ್ಮೂಢಗೊಳಿಸಿತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಘಟನೆಯ ಕ್ಷಿಪ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯವನ್ನು (ಫಾಸ್ಟ್ ಟ್ರ್ಯಾಕ್ ಕೋರ್ಟ್) ರಚಿಸುವಂತೆ ಅಪರಾಧ ಘಟಿಸಿದ ಎರಡುದಿನಗಳ ಬಳಿಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 2019 ಡಿಸೆಂಬರ್ 01ರ ಭಾನುವಾರ ಆಜ್ಞಾಪಿಸಿದರು. ಮೃತ ವೈದ್ಯೆಯ ಕುಟುಂಬಕ್ಕೆ ಸಕಲ ನೆರವಿನ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದರು. ಘಟನೆಯ ಬಗ್ಗೆ ತಮ್ಮ ಮೊತ್ತ ಮೊದಲ ಬಹಿರಂಗ ಹೇಳಿಕೆ ನೀಡಿದ ರಾವ್, ’೨೫ರ ಹರೆಯದ ಮಹಿಳೆಯ ಮೇಲೆ ನಾಲ್ವರು ನಡೆಸಿದ  ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣವುಭಯಾನಕಎಂದು ಹೇಳಿ, ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ತ್ವರಿತ ನ್ಯಾಯಾಲಯ ರಚನೆಗೆ ತತ್ ಕ್ಷಣ ಉಪಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಜ್ಞಾಪಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿತು. ಪಶುವೈದ್ಯೆಯ ಕುಟುಂಬಕ್ಕೆ ಎಲ್ಲ ನೆರವು ನೀಡಲೂ ಸರ್ಕಾರ ಸಿದ್ಧವಿದೆ ಎಂದೂ ಹೇಳಿಕೆ ತಿಳಿಸಿತು. ಯುವ ವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಘಟನೆಗೆ ಸಂಬಂಧಿಸಿದಂತೆ ಈವರೆಗೆ ನಾಲ್ವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಶಾದ್ನಗರ ಪಟ್ಟಣದ ಬಳಿ  2019 ನವೆಂಬರ್ 29ರ ಶುಕ್ರವಾರ ಸಾಮೂಹಕ ಅತ್ಯಾಚಾರಕ್ಕೆ ಗುರಿಯಾಗಿ ಸಾವನ್ನಪಿದ ಮಹಿಳೆಯ ಸುಟ್ಟು ಕರಕಲಾದ ದೇಹ ಪತ್ತೆಯಾಗಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ: ಸರ್ಕಾರದ ಆರ್ಥಿಕ ನೆರವಿನ ಕ್ರಮಗಳ ಪರಿಣಾಮವಾಗಿ ನವೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ನವೆಂಬರ್ ತಿಂಗಳಲ್ಲಿ ,೦೩,೪೯೨ ಕೋಟಿ ರೂಪಾಯಿಗಳಿಗೆ ಜಿಗಿಯಿತು. ಒಟ್ಟಾರೆ ಆರ್ಥಿಕ ಬೆಳವಣಿಗೆ ಕುಸಿತದ ಮಧ್ಯೆ ಕಳೆದ ಮೂರು ತಿಂಗಳುಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಸತತವಾಗಿ ಕುಸಿದಿತ್ತು. ಆರ್ಥಿಕ ಹಿನ್ನಡೆ ಮತ್ತು ದೇಶದ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತದ ಮಧ್ಯೆ, ಕೇಂದ್ರ ಸರ್ಕಾರಕ್ಕೆ ಜಿಎಸ್ಟಿ ಸಂಗ್ರಹದ ಹೆಚ್ಚಳವು ಸ್ವಲ್ಪ ಮಟ್ಟಿನ ಆಸರೆಯನ್ನು ಒದಗಿಸಿತು. ೨೦೧೯ರ ನವೆಂಬರ್ ತಿಂಗಳ ಜಿಎಸ್ಟಿ ಸಂಗ್ರಹವು ಜಿಎಸ್ಟಿ ಅನುಷ್ಠಾನದ ಬಳಿಕದ ಮೂರನೇ ಅತ್ಯಧಿಕ ಮಾಸಿಕ ತೆರಿಗೆ ಸಂಗ್ರಹವಾಗಿದೆ. ಇದಕ್ಕೆ ಮುನ್ನ ೨೦೧೯ರ ಏಪ್ರಿಲ್ ಮತ್ತು ೨೦೧೯ರ ಮಾರ್ಚ್ ತಿಂಗಳುಗಳಲ್ಲಿ ಅತ್ಯಧಿಕ ಜಿಎಸ್ಟಿ ಸಂಗ್ರಹವಾಗಿತ್ತು ಎಂದು ವಿತ್ತ ಸಚಿವಾಲಯವು 2019 ಡಿಸೆಂಬರ್ 01ರ ಭಾನುವಾರ ತಿಳಿಸಿತು. ಅಕ್ಟೋಬರ್ ತಿಂಗಳಲ್ಲಿ ಆಗಿದ್ದ ಒಟ್ಟು ಜಿಎಸ್ಟಿ ಸಂಗ್ರಹ ಮೊತ್ತ ೯೫,೩೮೦ ಕೋಟಿ ರೂಪಾಯಿಗಳಾಗಿದ್ದವು. ಇದು ವರ್ಷದಲ್ಲಿ ಶೇಕಡಾ .೩ರಷ್ಟು ಕುಸಿತವಾಗಿತ್ತು.  ಹಿಂದಿನ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಶೇಕಡಾ .೮ರಷ್ಟು ಸುಧಾರಣೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ೯೧,೦೧೬ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದ್ದು, ಇದು ೨೦೧೮ರ ಫೆಬ್ರುವರಿಯಿಂದೀಚೆಗೆ ಅತ್ಯಂತ ಕನಿಷ್ಠ ಸಂಗ್ರಹವಾಗಿತ್ತು. ಆಗಸ್ಟ್ ತಿಂಗಳಲ್ಲಿ ಆಗಿದ್ದ ಜಿಎಸ್ಟಿ ಸಂಗ್ರಹ ೯೮,೨೦೨ ಕೋಟಿ ರೂಪಾಯಿಗಳು. ಆರ್ಥಿಕ ಹಿನ್ನಡೆಯ ಪರಿಣಾಮವಾಗಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಲಕ್ಷ ಕೋಟಿ ರೂಪಾಯಿಗಳಿಗಿಂತ ಕೆಳಕ್ಕೆ ಇಳಿದಿತ್ತು. ಆರ್ಥಿಕ ಹಿನ್ನಡೆಯ ಪರಿಣಾಮವಾಗಿ ಗ್ರಾಹಕರು ತಮ್ಮ ವೆಚ್ಚ ಹಾಗೂ ಖಾಸಗಿ ಹೂಡಿಕೆಗಳನ್ನು ತಡೆ ಹಿಡಿದಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಮುಕ್ತಾಯವಾದ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆಯು (ಒಟ್ಟು ಆಂತರಿಕ ಉತ್ಪಾದನೆ- ಜಿಡಿಪಿ) ಶೇಕಡಾ .೫ಕ್ಕೆ ಕುಸಿದಿತ್ತು. ಶುಕ್ರವಾರ ಬಿಡುಗಡೆ ಮಾಡಲಾದ ಅಂಕಿ ಅಂಶಗಳ ಪ್ರಕಾರ ಇದು ಸತತ್ ೬ನೇ ತ್ರೈಮಾಸಿಕ ಜಿಡಿಪಿ ಕುಸಿತವಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಚಂಡೀಗಢ:ಕರ್ತಾರಪುರ ಕಾರಿಡಾರ್ಯೋಜನೆಯು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮೆದುಳಿನ ಕೂಸುಎಂಬ ಮಾಹಿತಿಯನ್ನು ಪಾಕಿಸ್ತಾನಿ ರೈಲ್ವೇ ಸಚಿವ ಶೇಖ್ ರಶೀದ್ ಬಹಿರಂಗ ಪಡಿಸುವುದರೊಂದಿಗೆ ಪಾಕಿಸ್ತಾನದ ಉಪಕ್ರಮದ ಹಿಂದಿನಕ್ರೂರ ಉದ್ದೇಶ ಇದೀಗ ಅನಾವರಣಗೊಂಡಿತು. ಉಭಯ ದೇಶಗಳ ಮಧ್ಯೆ ಶಾಂತಿಯ ಸೇತುವೆಯಾಗಬಲ್ಲುದು ಎಂಬುದಾಗಿ ಭಾವಿಸಲಾಗಿದ್ದ ಕರ್ತಾರಪುರ ಕಾರಿಡಾರ್ ಯೋಜನೆಯು ಭಾರತವು ತನ್ನ ಮೇಲಾದ ಗಾಯವನ್ನು ಎಂದಿಗೂ ಮರೆಯಂದಂತಹ ಘಾಸಿಯನ್ನು ಮಾಡಲಿದೆ. ಇದು ಜನರಲ್ ಬಜ್ವಾ ರೂಪಿಸಿರುವ ಯೋಜನೆಎಂಬುದಾಗಿ ಪಾಕ್ ಸಚಿವ ಹೇಳಿರುವುದು ಮಾಧ್ಯಮಗಳಲ್ಲಿ  2019 ಡಿಸೆಂಬರ್ 01ರ ಭಾನುವಾರ ವರದಿಯಾಗಿದೆ. ‘ಕರ್ತಾರಪುರ ಕಾರಿಡಾರ್ ಯೋಜನೆಯು ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮೆದುಳಿನ ಕೂಸು ಎಂಬುದಾಗಿ ಪಾಕಿಸ್ತಾನಿ ಸಚಿವರು ಹೇಳಿರುವ ಹಿನ್ನೆಲೆಯಲ್ಲಿ ಪಾಕ್ ದುರುದ್ದೇಶದ ಬಗ್ಗೆ ಪಂಜಾಬಿನ ಮುಖ್ಯಮಂತ್ರಿ  ಕ್ಯಾಪ್ಟನ್ ಅಮರೀಂದರ್ ಸಿಂಗ್ ಭಾನುವಾರ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದರು. ಪಾಕಿಸ್ತಾನದ ದುಷ್ಟ ಯೋಜನೆಸ್ವತಃ ಪಾಕಿಸ್ತಾನದ ಸಚಿವನಿಂದಲೇ ಅನಾವರಣಗೊಂಡಿರುವುದು ಅತ್ಯಂತ ಕಳವಳದ ವಿಷಯ. ಪಾಕ್ ರೈಲ್ವೇ ಸಚಿವನ ಹೇಳಿಕೆಯು ವಿಷಯಕ್ಕೆ ಸಂಬಂಧಿಸಿದಂತೆ ನಾನು ಪ್ರಾರಂಭದಿಂದಲೇ ನೀಡುತ್ತಾ ಬಂದಿರುವ ಅಭಿಪ್ರಾಯವನ್ನು ಸಮರ್ಥಿಸಿದೆಎಂದು ಕ್ಯಾಪ್ಟನ್ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ಮುಂಬೈ: ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಮಹಾರಾಷ್ಟ್ರ ವಿಧಾನಸಭೆಯ ಸಭಾಧ್ಯಕ್ಷರಾಗಿ 2019 ಡಿಸೆಂಬರ್ 01ರ ಭಾನುವಾರ ಅವಿರೋಧವಾಗಿ ಆಯ್ಕೆಯಾದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕಿಸನ್ ಕಥೋರೆ ಅವರು ತಮ್ಮ ನಾಮಪತ್ರವನ್ನು ಕೊನೆಯ ಕ್ಷಣದಲ್ಲಿ ಹಿಂತೆಗೆದುಕೊಂಡರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಟೋಲೆ ಅವರನ್ನು ಸಭಾಧ್ಯಕ್ಷರ ಪೀಠಕ್ಕೆ ಕರೆದೊಯ್ದರು. ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಆಡಳಿತಾರೂಢ ಶಿವಸೇನಾ-ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಪಕ್ಷದ ಶಾಸಕ ಪಟೋಲೆ ಅವರ ಹೆಸರನ್ನು ಪ್ರಕಟಿಸಿತ್ತು. ಬಿಜೆಪಿಯು ಕಿಸನ್ ಕಥೋರೆ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ನಾಮಪತ್ರ ವಾಪಸಿಗೆ ಭಾನುವಾರ ಬೆಳಗ್ಗೆ ೧೦ ಗಂಟೆಯ ಗಡುವನ್ನು ನೀಡಲಾಗಿತ್ತು. ನಾನಾ ಪಟೋಲೆ ಅವರು ವಿದರ್ಭದ ಸಕೋಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಕಥೋರೆ ಅವರು ಥಾಣೆ ಜಿಲ್ಲೆಯ ಮುರ್ಬದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಉಭಯರೂ ಇದು ನಾಲ್ಕನೇ ಬಾರಿಗೆ ಶಾಸಕರಾಗಿ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರವು ಶನಿವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಪಡಿಸಿತ್ತು೨೮೮ ಸದಸ್ಯಬಲದ ಸದನದಲ್ಲಿ ತಲೆ ಎಣಿಕೆ ಆರಂಭಕ್ಕೆ ಮುನ್ನ ೧೦೫ ಶಾಸಕರನ್ನು ಹೊಂದಿರುವ ಬಿಜೆಪಿ ಸಭಾತ್ಯಾಗ ಮಾಡಿದ ಬಳಿಕ ಒಟ್ಟು ೧೬೯ ಶಾಸಕರು ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಡಿಸಿದ ವಿಶ್ವಾಸ ಮತದ ಪರವಾಗಿ ಮತದಾನ ಮಾಡಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯು ಐದು ಜೀವಗಳನ್ನು ಬಲಿ ಪಡೆದುಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಇನ್ನಷ್ಟು ಮಳೆ ಸುರಿಯಲಿದೆ ಎಂದು ಚೆನ್ನೈಯ ಪ್ರಾದೇಶಿಕ ಹವಾಮಾನ ಕಚೇರಿ  2019 ಡಿಸೆಂಬರ್ 01ರ ಭಾನುವಾರ ಮುನ್ನೆಚ್ಚರಿಕೆ ನೀಡಿತು. ತಮಿಳುನಾಡಿದ ತಿರುವಳ್ಳೂರು, ವೆಲ್ಲೂರು, ತಿರುವಣ್ಣಾಮಲೈ, ತೂತುಕುಡಿ, ರಾಮನಾಥ ಪುರಂ, ತಿರುನಲ್ವೇಲಿ ಜಿಲ್ಲೆಗಳಲ್ಲಿ ಮುಂದಿನ ೨೪ ಗಂಟೆಗಳಲ್ಲಿ ೨೦ ಸೆಂಮೀಗೂ ಹೆಚ್ಚಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಚೆನ್ನೈ ಪ್ರಾದೇಶಿಕ ಕೇಂದ್ರ ಎಚ್ಚರಿಕೆ ನೀಡಿತು. ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಪುವಿಯರಸನ್ ಪ್ರಕಾರ ತಮಿಳುನಾಡಿನಾದ್ಯಂತ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಳೆದ ೨೪ ಗಂಟೆಗಳಲ್ಲಿ ತೂತುಕುಡಿಯ ಸಾತಂಕುಲಂ ಪಟ್ಟಣದಲ್ಲಿ ೧೯ ಸೆಂಮೀ ಮಳೆ ಸುರಿದಿದೆ. ಕಡಲೂರಿನಲ್ಲಿ ೧೭ ಸೆಂಮೀ ಮಳೆಯಾಗಿದೆ ಮತ್ತು ತಿರುನಲ್ವೇಲಿ ಜಿಲ್ಲೆಯಲ್ಲಿ ೧೬ ಸೆಂಮೀ ಮಳೆ ಬಿದ್ದಿದೆ. ಲಕ್ಷದ್ವೀಪ ಮತ್ತು ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದ ಕಾರಣ ಭಾರೀ ಬಿರುಗಾಳಿ ಏಳುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಮುಂದಿನ ಕೆಲವು ದಿನಗಳ ಕಾಲ ಸಮುದ್ರಕ್ಕೆ ಇಳಿಯುವುದು ಬೇಡ ಎಂದು ಕೇಂದ್ರದ ನಿರ್ದೇಶಕರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment