2019: ನವದೆಹಲಿ/ ಲಕ್ನೋ:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಪ್ರತಿಭಟನೆಯ ಉತ್ತರ ಪ್ರದೇಶದಲ್ಲಿ 2019 ಡಿಸೆಂಬರ್ 20ರ ಶುಕ್ರವಾರ ಇನ್ನಷ್ಟು
ನಗರಗಳಿಗೆ ವ್ಯಾಪಿಸಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಹಿಂಸಾಚಾರಕ್ಕೆ ೬
ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ೭ಕ್ಕೆ ಏರಿದೆ ಎಂದು ವರದಿಗಳು ತಿಳಿಸಿದವು. ಉತ್ತರ ಪ್ರದೇಶದ ಬುಲಂದ ಶಹರ್, ಗೋರಖ್ ಪುರ, ಫಿರೋಜಾಬಾದ್ ಮತ್ತು ಹಾಪುರ್ ನಿಂದ ಕಿಚ್ಚಿಡುವಿಕೆ ಮತ್ತು ಕಲ್ಲೆಸೆತದ ವರದಿಗಳು ಬಂದಿದ್ದು ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ವರದಿಗಳು ಹೇಳಿದವು. ಉತ್ತರ
ಪ್ರದೇಶದ ಫಿರೋಜಾಬಾದ್, ಕಾನ್ಪುರ, ಮೀರತ್ ಮತ್ತು ಸಂಭಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮತ್ತು ಬಿಜ್ನೂರಿನಲ್ಲಿ
ಇಬ್ಬರು 2019 ಡಿಸೆಂಬರ್ 20ರ ಶುಕ್ರವಾರ ಪೌರತ್ವ
ಕಾಯ್ದೆ ವಿರೋಧಿ ಪ್ರತಿಭಟನಕಾರರು ಪೊಲೀಸರ ಜೊತೆಗೆ ಘರ್ಷಿಸಿದಾಗ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿದವು. ಫಿರೋಜಾಬಾದ್ ಮತ್ತು ಭದೋಹಿ ಸೇರಿದಂತೆ ಈ ಹಿಂದೆ ಚಳವಳಿ
ನಡೆಯದೇ ಇದ್ದ ಹಲವಾರು ನಗರಗಳಿಗೂ ಶುಕ್ರವಾರ ಹಿಂಸಾಚಾರ ಹರಡಿದ್ದು, ಜನರು ಕಲ್ಲೆಸೆತದಲ್ಲಿ ತೊಡಗುವುದರ ಜೊತೆಗೆ ಕೆಲವು ಪ್ರದೇಶಗಳಲ್ಲಿ ರ್ಯಾಲಿ ತಡೆದಾಗ
ವಾಹನಗಳಿಗೆ ಕಲ್ಲು ತೂರಿದ ಹಾಗೂ ಬೆಂಕಿ ಹಚ್ಚಿನ ಘಟನೆಗಳು ಘಟಿಸಿವೆ ಎಂದು ವರದಿಗಳು ಹೇಳಿದವು. ಹಿಂಸಾಚಾರ ವ್ಯಾಪಿಸಿದ ಹೊಸ ಪ್ರದೇಶಗಳಲ್ಲಿ ಭದೋಹಿ, ಬಹರಾಯಿಚ್, ಫರೂಖಾಬಾದ್ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಗೋರಖ್ ಪುರ ಮತ್ತು ಸಂಭಾಲ್ನಲ್ಲಿ ಮಾತ್ರ ಹಿಂಸಾತ್ಮಕ ಪ್ರತಿಭಟನೆಗಳು ಕಂಡು ಬಂದಿದ್ದವು. ಫಿರೋಜಾಬಾದಿನಲ್ಲಿ
ಸಂಭವಿಸಿದ ಸಾವು ಕಳೆದ ೨೪ ಗಂಟೆಗಳಲ್ಲಿ ಸಂಭವಿಸಿದ
ಎರಡನೇ ಸಾವಿನ ಘಟನೆಯಾಗಿದೆ. ಗುರುವಾರ ಪ್ರತಿಭಟನೆ ಕಾಲದಲ್ಲಿ ಪ್ರತಿಭಟನಕಾರನೊಬ್ಬ ಅಸು ನೀಗಿದ್ದ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಜೈಪುರ: ೨೦೦೮ರಲ್ಲಿ ಜೈಪುರದಲ್ಲಿ ೮೦ರ ಸಾವಿಗೆ ಕಾರಣವಾಗಿದ್ದ ಸರಣಿ ಬಾಂಬ್ ಸ್ಫೋಟಗಳಲ್ಲಿ ಶಾಮೀಲಾಗಿದ್ದುದು ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕು ಮಂದಿಗೆ ರಾಜಸ್ಥಾನದ ರಾಜಧಾನಿಯ ನ್ಯಾಯಾಲಯವು 2019 ಡಿಸೆಂಬರ್ 20ರ ಶುಕ್ರವಾರ ಮರಣದಂಡನೆಯನ್ನು ವಿಧಿಸಿತು. ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಖುಲಾಸೆ ಮಾಡಲಾಯಿತು. ೧೧ ವರ್ಷಗಳ ಹಿಂದೆ
ಸಂಭವಿಸಿದ್ದ ಈ ಭೀಕರ ದಾಳಿಗಳಿಗೆ
೮೦ ಮಂದಿ ಬಲಿಯಾಗಿದ್ದುದರ ಹೊರತಾಗಿ ಇತರ ೧೭೦ ಮಂದಿ ಗಾಯಗೊಂಡಿದ್ದರು. ಮೊಹಮ್ಮದ್ ಸೈಫ್, ಸರ್ವಾರ್ ಆಜ್ಮಿ, ಸಲ್ಮಾನ್ ಮತ್ತು ಸೈಫುರ್ ರಹಮಾನ್ ಅವರು ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳಾಗಿದ್ದು, ಶಾಬಾಜ್ ಹುಸೈನ್ ಹೆಸರಿನ ಐದನೇ ಆರೋಪಿಯನ್ನು ಖುಲಾಸೆ ಮಾಡಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಮೂವರು ಆರೋಪಿಗಳು ದೆಹಲಿಯ ತಿಹಾರ್ ಸೆರೆಮನೆಯಲ್ಲಿ ಇದ್ದಾರೆ. ಜೈಪುರ ಸ್ಫೋಟಗಳ ಸಂಪೂರ್ಣ ಸಂಚನ್ನು ಉತ್ತರಪ್ರದೇಶದ ಮೊಹಮ್ಮದ್ ಅತಿನ್ ಎಂಬಾತ ಯೋಜಿಸಿದ್ದ ಎಂದು ನಂಬಲಾಗಿದೆ. ಈತ ದೆಹಲಿಯಲ್ಲಿ ನಡೆದ
ಬಾಟ್ಲ ಹೌಸ್ ಎನ್ ಕೌಂಟರಿನಲ್ಲಿ ಸಾವನ್ನಪ್ಪಿದ್ದ. ಗಲ್ಲು
ಶಿಕ್ಷೆಗೆ ಗುರಿಯಾಗಿರುವ ಎಲ್ಲ ನಾಲ್ವರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದು ಅತಿನ್ ಸೂಚನೆ ಮೇರೆಗೆ ಸ್ಫೋಟ ಕಾರ್ಯಾಚರಣೆಗಳನ್ನು ನಡೆಸಿದ್ದರು. ಅವರು ಸ್ಫೋಟಕಗಳಾದ ಅಮೋನಿಯಯಂ ನೈಟ್ರೇಟ್ನ್ನು ತಂದು ಅದನ್ನು ಸಿಡಿದ ಬಾಂಬ್ ಚೂರುಗಳ ಜೊತೆ ಸೇರಿಸಿ ನಗರದ ಒಂಬತ್ತು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಸೈಕಲ್ಗಳಲ್ಲಿ ಇರಿಸಿದ್ದರು. ಎಲ್ಲ ಬಾಂಬ್ಗಳೂ ರಾತ್ರಿ ೭.೨೦ರಿಂದ ೭.೪೫ರ ನಡುವಣ ಅವಧಿಯಲ್ಲಿ ಸ್ಫೋಟಗೊಂಡಿದ್ದವು. ಈ
ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ದೆಹಲಿಯ ಬಾಟ್ಲಾ ಹೌಸ್ನಲ್ಲಿ ನಡೆದ ಘರ್ಷಣೆಯಲ್ಲಿ ಸತ್ತಿದ್ದಾರೆ ಎಂಬ ಪ್ರಾಸೆಕ್ಯೂಷನ್ ವಾದವನ್ನು ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



2019:
ದೋಹಾ (ಕತಾರ್): ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ೬ನೇ “ಕತಾರ್
ಇಂಟರ್ನ್ಯಾಶನಲ್
ಕಪ್ ವೇಟ್ಲಿಫ್ಟಿಂಗ್’ ಟೂರ್ನಿಯಲ್ಲಿ
2019 ಡಿಸೆಂಬರ್ 20ರ ಶುಕ್ರವಾರ ಚಿನ್ನದ ಪದಕ ಗೆದ್ದು ಭಾರತದ
ಖಾತೆ ತೆರೆದರು. ವನಿತೆಯರ ೪೯ ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಒಟ್ಟು ೧೯೪ ಕೆಜಿ ಭಾರವನ್ನೆತ್ತಿದ
೨೫ರ ಹರೆಯದ ಮೀರಾಬಾಯಿ ಚಾನು ಬಂಗಾರಕ್ಕೆ ಕೊರಳೊಡ್ಡಿದರು. ಅವರು ಸ್ನ್ಯಾಚ್ನಲ್ಲಿ ೮೩ ಕೆಜಿ, ಕ್ಲೀನ್
ಮತ್ತು ಜರ್ಕ್ನಲ್ಲಿ ೧೧೧ ಕೆಜಿ ಭಾರ ಎತ್ತಿದರು. ಫ್ರಾನ್ಸಿನ ಅನೈಸ್
ಮೈಕೆಲ್ ಬೆಳ್ಳಿ (೧೭೨ ಕೆಜಿ) ಮತ್ತು ಮಾನನ್ ಲೊರೆಂಜ್ ಕಂಚು ಗೆದ್ದರು (೧೬೫ ಕೆಜಿ). ಆದರೆ ಇದು ಚಾನು
ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ ಕಡಿಮೆ ಮಟ್ಟದ್ದಾಗಿತ್ತು. ಇದೇ ವರ್ಷ ಥಾಯ್ಲೆಂಡಿನಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಅವರು ೨೦೧ ಕೆಜಿ ಭಾರವೆತ್ತಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019:
ಬೆಂಗಳೂರು: ಹಿರಿಯ ಸಾಹಿತಿ
ಎಲ್.ಎಸ್. ಶೇಷಗಿರಿರಾವ್ ಅವರು 2019 ಡಿಸೆಂಬರ್
20ರ
ಶುಕ್ರವಾರ ನಿಧನರಾದರು. ಅವರಿಗೆ ೯೫ ವರ್ಷ
ವಯಸ್ಸಾಗಿತ್ತು. ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ್ದ ವಾಮನರೂಪಿ ತ್ರಿವಿಕ್ರಮ
ಸಾಹಿತಿ ಎಲ್.ಎಸ್.ಶೇಷಗಿರಿ ರಾವ್ ಎಲ್ಲೆಸೆಸ್ ಎಂದೇ ಖ್ಯಾತರಾಗಿದ್ದರು. ತಂದೆ ಲಕ್ಷ್ಮೇಶ್ವರ ಸ್ವಾಮಿರಾವ್- ತಾಯಿ ಕಮಲಾಬಾಯಿ. ೧೯೨೫ರ
ಫೆಬ್ರುವರಿ ೧೬ರಂದು ಜನಿಸಿದ ಎಲ್ಲೆಸೆಸ್ ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ನಾಗಪುರ
ವಿ.ವಿಯ ಇಂಗ್ಲಿಷ್ ಎಂ.ಎ. ಪದವೀಧರರಾಗಿದ್ದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ,
ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಬೆಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ ಎಲ್ಲೆಸ್ಸೆಸ್ ೧೯೪೭-೫೦ರಲ್ಲಿ ಕನ್ನಡ
ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ,
ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಸೇರಿದಂತೆ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು.
೨೦೦೭ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ
ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿಎಂಶ್ರೀ
ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು
ಪಡೆದಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment