2019: ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ
ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕ ಹಕ್ಕು ನೀಡುವ ಪರಿಷ್ಕೃತ ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟವು 2019 ಡಿಸೆಂಬರ್ 4ರ ಬುಧವಾರ ಅನುಮೋದನೆ ನೀಡಿತು. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಂಗಳನ್ನು ತಿದ್ದುಪಡಿ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಯಿತು. ಈಶಾನ್ಯ
ಭಾಗದಲ್ಲಿನ ಆರನೇ ಶೆಡ್ಯೂಲಿನ ಅಡಿಯಲ್ಲಿ ಬರುವ ಪ್ರದೇಶಗಳನ್ನು ಕೂಡಾ ಕರಡು ಮಸೂದೆಯು ರಕ್ಷಿಸಿತು. ಕಳೆದ ಲೋಕಸಭೆಯಲ್ಲಿ
ಈ ವಿವಾದಿತ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ಅದಕ್ಕೆ ಸದನ ಅನುಮೋದನೆ ಲಭಿಸಿರಲಿಲ್ಲ. ಹೀಗಾಗಿ ಮುಂದಿನ ಸೋಮವಾರ ಸಂಸತ್ತಿನಲ್ಲಿ ಪರಿಷ್ಕೃತ
ಕರಡು ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ. ಮಂಗಳವಾರ
ಬಿಜೆಪಿ ಸಂಸದರಿಗೆ ಈ ಬಗ್ಗೆ ಸೂಚನೆ
ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಮಸೂದೆಗೆ ಹೆಚ್ಚಿನ
ಆದ್ಯತೆ ನೀಡಬೇಕಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ ಎಂದು ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠವು ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಜೂರು ಮಾಡಿದ ಜಾಮೀನಿನ ಅನ್ವಯ 2019ರ ಬುಧವಾರ ರಾತ್ರಿ ತಿಹಾರ್ ಸೆರೆಮನೆಯಿಂದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಬಿಡುಗಡೆ ಮಾಡಲಾಗಿದ್ದು,೭೪ರ ಹರೆಯದ ನಾಯಕ ಗುರುವಾರ ಸಂಸತ್ ಅಧಿವೇಶನಕ್ಕೆ ಹಾಜರಾಗಲಿದ್ದಾರೆ.ರಾತ್ರಿಯ
ವೇಳೆಗೆ ತಿಹಾರ್ ಸೆರೆಮನೆಯಿಂದ ಹೊರಬರುತ್ತಿದ್ದಂತೆಯೇ ಚಿದಂಬರಂ ಅವರು ‘೧೦೬ ದಿನಗಳ ಸೆರೆವಾಸದ
ಬಳಿಕ ಸೆರೆಮನೆಯ ಹೊರಗೆ ಸ್ವಾತಂತ್ರ್ಯ ಗಾಳಿಯನ್ನು ಸೇವಿಸಲು ನನಗೆ ಖುಷಿಯಾಗುತ್ತಿದೆ. ಇಷ್ಟು ದಿನದಲ್ಲಿ ನನ್ನ ವಿರುದ್ಧ ಒಂದೇ ಒಂದು ದೋಷಾರೋಪವನ್ನೂ ಹೊರಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು. ತಮ್ಮ
ತಂದೆ ಗುರುವಾರ ಸಂಸತ್ ಅಧಿವೇಶನಕ್ಕೆ ಹಾಜರಾಗುವರು ಎಂದು ಚಿದಂಬರಂ ಬಿಡುಗಡೆ ವೇಳೆಯಲ್ಲಿ ಹಾಜರಿದ್ದ ಪುತ್ರ
ಕಾರ್ತಿ ಚಿದಂಬರಂ ಅವರು ಮಾಧ್ಯಮ ಒಂದಕ್ಕೆ ತಿಳಿಸಿದರು. ಪಿ.
ಚಿದಂಬರಂ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಚಿದಂಬರಂ ಅವರಿಗೆ ಜಾಮೀನು ಮಂಜೂರಾತಿಯೊಂದಿಗೆ ನಿರಾಳತೆ ಲಭಿಸುತ್ತಿದ್ದಂತೆಯೇ ಕಾರ್ತಿ ಚಿದಂಬರಂ ಅವರು ’ಫ್ಯೂ, ಕಡೆಗೂ ೧೦೬ ದಿನಗಳ ಬಳಿಕ’ ಎಂದು ಟ್ವೀಟ್ ಮಾಡಿದರು. ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್ ಪೀಠವು 2019 ಡಿಸೆಂಬರ್ 04ರ ಬುಧವಾರ ಬೆಳಗ್ಗೆ ಪಿ. ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿತು. ಆದರೆ ಪೂರ್ವಾನುಮತಿ ಇಲ್ಲದೆ ದೇಶದಿಂದ ಹೊರ ಹೋಗದಂತೆ ಅವರಿಗೆ ನಿರ್ದೇಶನ ನೀಡಿತು. ಎರಡು ಲಕ್ಷ ರೂಪಾಯಿಗಳ ವೈಯಕ್ತಿಕ ಮುಚ್ಚಳಿಕೆ (ಬಾಂಡ್) ಮತ್ತು ಅಷ್ಟೇ ಮೊತ್ತದ ಇನ್ನೆರಡು ಭದ್ರತಾ ಖಾತರಿಗಳನ್ನು ನೀಡುವಂತೆಯೂ ಸುಪ್ರೀಂಕೋರ್ಟ್ ಅವರಿಗೆ ಸೂಚಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರಿಗೆ
ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠದಿಂದ ಜಾಮೀನು ಮಂಜೂರಾಗುತ್ತಿದ್ದಂತೆಯೇ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಚಿದಂಬರಂ ಸೆರೆವಾಸಕ್ಕೆ ಸಂಬಂಧಿಸಿದಂತೆ 2019 ಡಿಸೆಂಬರ್ 04ರ ಬುಧವಾರ ಪರಸ್ಪರ
ವಾಕ್ ಸಮರ ನಡೆಸಿದವು. ಪಿ.ಚಿದಂಬರಂ ಅವರ
೧೦೬ ದಿನಗಳ ಸೆರೆವಾಸವು ’ಸೇಡಿನ ಕ್ರಮವಾಗಿತ್ತು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ’ಸೇಡಿನ ರಾಜಕಾರಣ’ದ ಆರೋಪವನ್ನು ತಳ್ಳಿಹಾಕಿ,
ಚಿದಂಬರಂ ವಿರುದ್ಧ ಸಾಕ್ಷ್ಯಾಧಾರಗಳಿವೆ ಎಂದು ಪ್ರತಿಪಾದಿಸಿದರು. ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರು ’ಕಡೆಗೂ ಚಿದಂಬರಂ ಅವರು ’ಸುದೀರ್ಘವಾದ ಒಬಿಸಿಸಿ (ಔಟ್ ಆನ್ ಬೇಲ್ ಕ್ಲಬ್- ಜಾಮೀನಿನಲ್ಲಿ ಹೊರಗಿರುವವರ ಕ್ಲಬ್) ಪಟ್ಟಿಗೆ ಸೇರಿದರು’ ಎಂದು ಟ್ವೀಟ್ ಮಾಡಿ ಚುಚ್ಚಿದರು. ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರ ಟ್ವೀಟ್ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕಾಂಗ್ರೆಸ್ ಮತ್ತು ಅದರ ನಾಯಕತ್ವದ ವಿರುದ್ಧ ಭ್ರಷ್ಟಾಚಾರ ಮತ್ತು ಇತರ ತಪ್ಪುಗಳಿಗಾಗಿ ದಾಖಲಾದ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಾಡಿದ್ದ ನಿರಂತರ ದಾಳಿಯನ್ನು ಪ್ರತಿಧ್ವನಿಸಿತು. ‘ಪ್ರಸ್ತುತ, ಅವರ ಉನ್ನತ ನಾಯಕತ್ವವು ಪ್ರಮುಖ ಹಗರಣಗಳಿಗೆ ಸಂಬಂಧಿಸಿದಂತೆ ಜಾಮೀನಿನ ಅಡಿಯಲ್ಲಿದೆ’ ಎಂದು
ಪ್ರಧಾನಿ ಮೋದಿ ರಾಷ್ಟ್ರೀಯ ಚುನಾವಣೆಗೆ ಮುನ್ನ ತಮ್ಮ ಬ್ಲಾಗ್ ಬರಹದಲ್ಲಿ ಬರೆದಿದ್ದರು. ಕಳೆದ ವರ್ಷ ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ’ಕೆಲವು ವ್ಯಕ್ತಿಗಳು ಕಾಂಗ್ರೆಸ್ ಪಕ್ಷವನ್ನು ’ಎತ್ತಿನ ಗಾಡಿಯಲ್ಲ, ಬೇಲ್ ಗಾಡಿ’ ಎಂಬುದಾಗಿ ಕರೆಯುತ್ತಿದ್ದಾರೆ. ಏಕೆಂದರೆ ಅದರ ಕೆಲವು ಉನ್ನತ ನಾಯಕರು ಮತ್ತು ಮಾಜಿ ಸಚಿವರು ಜಾಮೀನು (ಬೇಲ್) ಅಡಿಯಲ್ಲಿ ಇದ್ದಾರೆ’ ಎಂದು ಟೀಕಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಖಾರ್ಟೂಮ್: ಸುಡಾನಿನ ಸೆರಾಮಿಕ್ ಕಾರ್ಖಾನೆ ಒಂದರಲ್ಲಿ ಸಂಭವಿಸಿದ ಭಯಾನಕ ಅಡುಗೆ ಅನಿಲ (ಎಲ್ಪಿಜಿ) ಟ್ಯಾಂಕರ್ ಸ್ಫೋಟದೊಂದಿಗೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕನಿಷ್ಠ ೧೮ ಮಂದಿ ಭಾರತೀಯರು
ಸಾವನ್ನಪ್ಪಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ 2019 ಡಿಸೆಂಬರ್ 04ರ ಬುಧವಾರ ತಿಳಿಸಿತು. 2019 ಡಿಸೆಂಬರ್ 03ರ ಮಂಗಳವಾರ ಸಂಭವಿಸಿದ
ದುರಂತದಲ್ಲಿ ಒಟ್ಟು
೨೩ ಮಂದಿ ಸಾವನ್ನಪ್ಪಿದ್ದು, ೧೩೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸುಡಾನ್ ಸರ್ಕಾರ ತಿಳಿಸಿದೆ. ಖಾರ್ಟೂಮ್‌ನ ಬಹ್ರಿ ಪ್ರದೇಶದಲ್ಲಿನ
ಸೀಲಾ ಸೆರಾಮಿಕ್ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ ಬಳಿಕ ೧೬ ಮಂದಿ ಭಾರತೀಯರು
ಕಣ್ಮರೆಯಾಗಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿತು. ‘ಇತ್ತೀಚಿನವರೆಗಿನ ವರದಿಗಳ ಪ್ರಕಾರ ಕನಿಷ್ಠ ೧೮ ಮಂದಿ ಭಾರತೀಯರು
ಸಾವನ್ನಪ್ಪಿದ್ದಾರೆ, ಆದರೆ ವರದಿ ಇನ್ನೂ ದೃಢಪಟ್ಟಿಲ್ಲ’ ಎಂದು
ಕಚೇರಿಯ ಪ್ರಕಟಣೆ ತಿಳಿಸಿತು. ‘ನಾಪತ್ತೆಯಾಗಿರುವ ಕೆಲವರು ಮೃತರ ಪಟ್ಟಿಯಲ್ಲಿ ಇರಬಹುದು. ಸಂಪೂರ್ಣ ಸುಟ್ಟು ಕರಲಾಗಿರುವುದರಿಂದ ಮೃತರ ಗುರುತು ಪತ್ತೆ ಸಾಧ್ಯವಾಗಿಲ್ಲ’ ಎಂದು
ಪ್ರಕಟಣೆ ಹೇಳಿತು. ಆಸ್ಪತ್ರೆಗೆ ದಾಖಲಾದವರು, ಕಣ್ಮರೆಯಾದವರು ಮತ್ತು ದುರಂತದಲ್ಲಿ ಬದುಕಿ ಉಳಿದವರ ವಿಸ್ತೃತ ಪಟ್ಟಿಯನ್ನು ರಾಯಭಾರ ಕಚೇರಿಯು ಬುಧವಾರ ಬಿಡುಗಡೆ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಮ್ ಕಕ್ಷಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಮುಸ್ಲಿಮ್ ಕಕ್ಷಿದಾರರು ‘ಅಸ್ವಾಸ್ಥ್ಯ’ಎಂಬ ’ಬುದ್ಧಿಗೇಡಿ’ ನೆಲೆಯಲ್ಲಿ ವಕಾಲತ್ತಿನಿಂದ ಕಿತ್ತು ಹಾಕಿದರು. ಹಿರಿಯ ವಕೀಲ ರಾಜೀವ್ ಧವನ್ ಅವರು ಸ್ವತಃ ಫೇಸ್ ಬುಕ್ನಲ್ಲಿ 2019 ಡಿಸೆಂಬರ್ 04ರ ಬುಧವಾರ ಈ ವಿಷಯವನ್ನು ಬಹಿರಂಗ
ಪಡಿಸಿದ್ದು, ತಾವು ಈಗ ಅಯೋಧ್ಯಾ ಪ್ರಕರಣದಲ್ಲಾಗಲೀ,,
ಪುನರ್ ಪರಿಶೀಲನಾ ಕೋರಿಕೆ ಪ್ರಕರಣದಲ್ಲಾಗಲೀ ಇಲ್ಲ
ಎಂದು ಸ್ಪಷ್ಟ ಪಡಿಸಿದರು. ಜಮೀಯತ್ನ್ನು ಪ್ರತಿನಿಧಿಸುತ್ತಿರುವ ಬಾಬರಿ ಪ್ರಕರಣದ ಎಒಆರ್ (ಅಡ್ವೋಕೇಟ್ ಆನ್ ರೆಕಾರ್ಡ್) ಎಜಾಜ್ ಮಖ್ಬೂಲ್ ಅವರಿಂದ ಈಗಷ್ಟೇ ವಜಾಗೊಂಡಿದ್ದೇನೆ. ಯಾವುದೇ ಅಡ್ಡಿ ಇಲ್ಲದೆ ವಜಾಗೊಳಿಸಿದ್ದನ್ನು ಅಂಗೀಕರಿಸಿದ ಔಪಚಾರಿಕ ಪತ್ರವನ್ನು ಕಳುಹಿಸಿದ್ದೇನೆ. ಪುನರ್ ಪರಿಶೀಲನೆ ಅಥವಾ ಪ್ರಕರಣದಲ್ಲಿ ಇನ್ನು ನಾನು ಇಲ್ಲ’ ಎಂದು ರಾಜೀವ್ ಧವನ್ ಅವರು ಬರೆದರು. ‘ನಾನು ಅಸ್ವಸ್ಥನಾಗಿದ್ದೇನೆ ಎಂಬ ಕಾರಣಕ್ಕಾಗಿ ನನ್ನನ್ನು ಕಿತ್ತು ಹಾಕಲಾಗಿದೆ ಎಂಬುದಾಗಿ ಮದನಿ ತಿಳಿಸಿದ್ದಾಗಿ ನನಗೆ ತಿಳಿಸಲಾಗಿದೆ. ಇದು ಸಂಪೂರ್ಣ ಅಸಂಬದ್ಧ. ಅವರ ವಕೀಲ ಎಒಆರ್ ಎಜಾಜ್ ಮಖ್ಬೂಲ್ ಅವರಿಗೆ ನನ್ನನ್ನು ವಜಾಗೊಳಿಸಲು ಸೂಚಿಸುವ ಹಕ್ಕು ಅವರಿಗೆ ಇದೆ. ಸೂಚನೆ ಪ್ರಕಾರ ಅವರು ಅದನ್ನು ಮಾಡಿದ್ದಾರೆ. ಆದರೆ ಇದಕ್ಕಾಗಿ ಕೊಟ್ಟ ಕಾರಣ ದುರುದ್ದೇಶದ್ದು ಮತ್ತು ಸುಳ್ಳು’ ಎಂದು ಧವನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದರು. ಸುಪ್ರಿಂಕೋರ್ಟಿನ ಅಯೋಧ್ಯಾ ತೀರ್ಪನ್ನು ಪ್ರಶ್ನಿಸಿ ಮೌಲಾನಾ ಅರ್ಶದ್ ಮದನಿ ನೇತೃತ್ವದ ಜಮೀಯತ್ ಉಲೇಮಾ-ಇ-ಹಿಂದ್ 2019 ಡಿಸೆಂಬರ್
2ರ ಸೋಮವಾರ ಪುನರ್
ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment