ನಾನು ಮೆಚ್ಚಿದ ವಾಟ್ಸಪ್

Sunday, December 8, 2019

ಇಂದಿನ ಇತಿಹಾಸ History Today ಡಿಸೆಂಬರ್ 08


 2019: ನವದೆಹಲಿ: ದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿ 2019 ಡಿಸೆಂಬರ್ 08ರ ಭಾನುವಾರ ಅಗ್ನಿ ದುರಂತ ಸಂಭವಿಸಿದಾಗ ಉರಿಯುತ್ತಿದ್ದ ಕಟ್ಟಡದೊಳಗೆ ನುಗ್ಗಿ ೧೧ ಮಂದಿಯ ಪ್ರಾಣ ಉಳಿಸಿದ್ದ ವ್ಯಕ್ತಿ ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಶುಕ್ಲ. ಕಾರ್ಯಾಚರಣೆಯ ವೇಳೆಯಲ್ಲಿ ಅವರ ಕಾಲಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಧಗಧಗಿಸುತ್ತಿದ್ದ ಬೆಂಕಿಯ ಮಧ್ಯೆ ಸಿಕ್ಕಿಹಾಕಿಕೊಂಡು ಹಲವಾರು  ಮಂದಿ ಕಟ್ಟಡದೊಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದಾಗ ಜೀವದ ಹಂಗು ತೊರೆದು ಶುಕ್ಲ ಕಟ್ಟಡದೊಳಕ್ಕೆ ಪ್ರವೇಶಿಸಿದ್ದರು ಮತ್ತು ಒಬ್ಬರ ಬಳಿಕ ಇನ್ನೊಬ್ಬರಂತೆ ೧೧ ಮಂದಿಯನ್ನು ಹೊರಕ್ಕೆ ಕರೆತಂದಿದ್ದರು. ರಾಜೇಶ್ ಶುಕ್ಲ ಅವರ ಕಾರ್ಯವನ್ನು ಶ್ಲಾಘಿಸಿದ ದೆಹಲಿಯ ಸಚಿವ ಸತ್ಯೇಂದ್ರ ಜೈನ್ ಅವರುಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಶುಕ್ಲ ನಿಜವಾದ ಹೀರೊ. ಉರಿಯುತ್ತಿರುವ ಕಟ್ಟಡದೊಳಗೆ ಮೊದಲು ಪ್ರವೇಶಿಸಿದ ಅವರು ೧೧ ಮಂದಿಯ ಪ್ರಾಣ ಉಳಿಸಿದ್ದಾರೆ. ರಕ್ಷಣಾ ಕಾರ್ಯದ ನಡುವೆ ಅವರಿಗೆ ಗಾಯವಾದರೂ ಅದನ್ನು ಲೆಕ್ಕಿಸಿದೆ  ಜನರ ರಕ್ಷಣೆ ಮಾಡಿದ್ದಾರೆ. ಧೀರನಿಗೆ ನಮನಗಳುಎಂದು ಟ್ವೀಟ್ ಮಾಡಿದರು. ರಕ್ಷಣಾ ಕಾರ್ಯಾಚರಣೆ ವೇಳೆ ಕಾಲಿಗೆ ಏಟು ತಗುಲಿದ ರಾಜೇಶ್ ಶುಕ್ಲ ಅವರು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಚಿವರು ಅಲ್ಲಿಗೆ ಭೇಟಿ ನೀಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ರಾಜಧಾನಿ ದೆಹಲಿಯ ರಾಣಿ ಝಾನ್ಸಿ ರಸ್ತೆಯ ಅನಾಜ್ ಮಂಡಿಯಲ್ಲಿ ಅಕ್ರಮ ಕಾರ್ಖಾನೆಗಳು ಇದ್ದ  ನಾಲ್ಕಂತಸ್ತಿನ ಕಟ್ಟಡದಲ್ಲಿ 2019 ಡಿಸೆಂಬರ್ 08ರ ಭಾನುವಾರ ನಸುಕಿನಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕನಿಷ್ಠ ೪೩ ಮಂದಿ ಸಾವನ್ನಪ್ಪಿ, ಇತರ ಹಲವರು ಗಾಯಗೊಂಡರು. ೧೯೯೭ರಲ್ಲಿ ದೆಹಲಿಯ ಉಪಾಹಾರ ಥಿಯೇಟರಿನಲ್ಲಿ ಬಾಲಿವುಡ್ ಚಿತ್ರ ಪದರ್ಶನ ಕಾಲದಲ್ಲಿ ೫೯ ಮಂದಿಯನ್ನು ಬಲಿತೆಗೆದುಕೊಂಡು ೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಭೀಕರ ಅಗ್ನಿ ದುರಂತದ ಬಳಿಕ ದೆಹಲಿಯಲ್ಲಿ ಸಂಭವಿಸಿದ ಎರಡನೇ ಭಾರೀ ಅಗ್ನಿ ದುರಂತ ಇದಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಾಷ್ಟ್ರೀಯ ದುರಂತ ಸ್ಪಂದನಾ ಪಡೆ ಕೂಡಾ ಸ್ಥಳಕ್ಕೆ ನೆರವಿಗಾಗಿ ಧಾವಿಸಿತು. ಉತ್ತರ ದೆಹಲಿಯಲ್ಲಿ ದುರಂತ ಸಂಭವಿಸಿದ ಕೆಲವು ಗಂಟೆಗಳ ಬಳಿಕ ದೆಹಲಿ ಸರ್ಕಾರವು ಅಗ್ನಿ ದುರಂತದ ಬಗ್ಗೆ ತನಿಖೆಗೆ ಆಜ್ಞಾಪಿಸಿದ್ದು ಏಳು ದಿನಗಳ ಒಳಗಾಗಿ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದೆ. ಶಾರ್ಟ್ ಸರ್ಕಿಟ್ ನಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿದವು. ಇದು ಅತ್ಯಂತ ದುಃಖದ ಘಟನೆ. ನಾನು ಮ್ಯಾಜಿಸ್ಟ್ರೇಟ್ ತನಿಖೆಗೆ ಆಜ್ಞಾಪಿಸಿದ್ದೇನೆ. ಮೃತರ ಕುಟುಂಬಗಳಿಗೆ ತಲಾ ೧೦ ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳು ತಲಾ ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು. ಗಾಯಾಳುಗಳ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೇಳಿದರು. ಪ್ರಧಾನಿ ಮೋದಿ ಸಂತಾಪ: ಅಗ್ನಿ ದುರಂತವನ್ನು ಪ್ರಧಾನಿ ನರೇಂದ್ರ ಮೋದಿಭಯಾನಕಎಂಬುದಾಗಿ ಬಣ್ಣಿಸಿದ್ದಾರೆ. ’ದೆಹಲಿಯ ರಾಣಿ ಝಾನ್ಸಿ ರಸ್ತೆಯ ಅನಾಜ್ ಮಂಡಿಯಲ್ಲಿ ಸಂಭವಿಸಿದ ಅಗ್ನಿ ದುರಂತ ಅತ್ಯಂತ ಭಯಾನಕ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಜೊತೆಗೆ ನಾನು ಇದ್ದೇನೆ. ಗಾಯಾಳುಗಳು ಶೀಘ್ರ ಚೇತರಿಸಲಿ ಎಂದು ಹಾರೈಸುವೆ. ಅಧಿಕಾರಿಗಳು ಸಾಧ್ಯವಿರುವ ಎಲ್ಲ ನೆರವುಗಳನ್ನೂ ನೀಡುತ್ತಿದ್ದಾರೆಎಂದು ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೆಹಲಿಯ ಕಾರ್ಖಾನೆಯಲ್ಲಿ ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರಿಗೆ ತಪ್ಪಿಸಿಕೊಳ್ಳಲು  
ಅವಕಾಶವನ್ನೇ  ನೀಡದ,  2019 ಡಿಸೆಂಬರ್ 08ರ ಭಾನುವಾರ ನಸುಕಿನ ಭಾರೀ ಅಗ್ನಿ ದುರಂತದಲ್ಲಿ ಸಿಕ್ಕಿಹಾಕಿಕೊಂಡ ೩೦ರ ಹರೆಯದ ಉತ್ತರ ಪ್ರದೇಶದ ಕಾರ್ಮಿಕನೊಬ್ಬ ತನ್ನ ಸಹೋದರನಿಗೆ ಕೊನೆಯ ದೂರವಾಣಿ ಕರೆ ಮಾಡಿಮನೆಯ ಬಗ್ಗೆ ಕಾಳಜಿ ವಹಿಸುಎಂಬುದಾಗಿ ಮನವಿ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿತು. ಮನ ಕಲಕುವ ಆಡಿಯೋದಲ್ಲಿ ಉತ್ತರ ಪ್ರದೇಶದ ಬಿಜ್ನೋರಿನ ಮುಷರಫ್ ಅಲಿ ಎಂಬುದಾಗಿ ಗುರುತಿಸಲಾಗಿರುವ ವ್ಯಕ್ತಿ ತನ್ನ ಸಹೋದರನಿಗೆ ತನ್ನ ಸಾವಿನ ಬಳಿಕ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾನೆ. ದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ೪೩ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ‘ಅಣ್ಣ, ನಾನು ಸಾಯುತ್ತಾ ಇದ್ದೇನೆ. ಸುತ್ತ ಮುತ್ತ ಬೆಂಕಿ ಹಬ್ಬಿಕೊಂಡಿದೆ. ಅಣ್ಣ, ದಯಮಾಡಿ ನಾಳೆ ದೆಹಲಿಗೆ ಬಂದು ನನ್ನನ್ನು ತೆಗೆದುಕೊಂಡು ಹೋಗು. ಇಲ್ಲಿ ಎಲ್ಲೆಲ್ಲೂ ಬೆಂಕಿ ತುಂಬಿಕೊಂಡಿದೆ. ತಪ್ಪಿಸಿಕೊಳ್ಳಲು ದಾರಿಯೇ ಇಲ್ಲಎಂದು ಅಲಿ ತನ್ನ ಸಹೋದರಿಗೆ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ‘ನಾನು ಇನ್ನು ಬದುಕುವುದಿಲ್ಲ. ದಯಮಾಡಿ ನನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸು ಅಣ್ಣ... ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ.. ನಾಳೆ ಬಾ ಮತ್ತು ನನ್ನನ್ನು ನಿನ್ನ ಜೊತೆಗೆ ತೆಗೆದುಕೊಂಡು ಹೋಗು, ಕುಟುಂಬದ ಬಗ್ಗೆ ಕಾಳಜಿ ವಹಿಸುಎಂದು ಆತ ಮತ್ತೆ ಮತ್ತೆ ಹೇಳಿದ್ದಾನೆ. ಸುದ್ದಿಯನ್ನು ಮೊದಲು ಮನೆಯಲ್ಲಿನ ಹಿರಿಯರಿಗೆ ತಿಳಿಸು ಎಂದೂ ಅಲಿ ತನ್ನ ಸಹೋದರನಿಗೆ ಹೇಳಿದ್ದಾನೆ. ಆತನ ಸಹೋದರಹೇಗಾದರೂ ಮಾಡಿ ಪಾರಾಗುಎಂದು ಆತನಿಗೆ ಸೂಚಿಸಿದಾಗಅಬ್ ಕೋಯಿ ರಾಸ್ತಾ ನಹೀ ಬಚಾ (ಈಗ ಯಾವ ದಾರಿಯೂ ಉಳಿದಿಲ್ಲ)’ ಎಂದು ಅಲಿ ಹೇಳಿದ್ದೂ ಆಡಿಯೋದಲ್ಲಿ ದಾಖಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಯ ಹಿನ್ನೆಲೆಯಲ್ಲಿಸೋಮವಾರದಿಂದ 
ಬುಧವಾರದವರೆಗೆಲೋಕಸಭೆ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕುಎಂದು ತನ್ನ ಎಲ್ಲ ಸಂಸದರಿಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) 2019 ಡಿಸೆಂಬರ್ 08ರ ಭಾನುವಾರ ಕಟ್ಟುನಿಟ್ಟಿನ ವಿಪ್ ಜಾರಿಗೊಳಿಸಿತು. ‘ಬಹಳ ಮುಖ್ಯವಾದ ಕೆಲ ಶಾಸನಗಳ ಪ್ರಕ್ರಿಯೆ ಇರುವುದರಿಂದ ಡಿ. ೯ರಿಂದ ಮೂರು ದಿನಗಳವರೆಗೆ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಉಪಸ್ಥಿತರಿರಬೇಕುಎಂದು ವಿಪ್ ಸೂಚನೆ ನೀಡಿತು. ಡಿಸೆಂಬರ್ ೯ರ ಸೋಮವಾರದಿಂದ ಡಿಸೆಂಬರ್ ೧೧ರ ಮಂಗಳವಾರದವರೆಗೆ ಲೋಕಸಭೆಯಲ್ಲಿ ಬಹಳ ಮಹತ್ವದ ಕೆಲವು ಶಾಸನಗಳ ಚರ್ಚೆ ನಡೆಯಲಿದೆ. ಅವುಗಳ ಮಂಡನೆ ಹಾಗೂ ಅನುಮೋದನೆಯ ಅಗತ್ಯವಿದೆ. ಪಕ್ಷದ ಎಲ್ಲ ಸದಸ್ಯರೂ ಸಕಾರಾತ್ಮಕವಾಗಿ ಸದನದಲ್ಲಿ ಹಾಜರಿದ್ದು ಸರ್ಕಾರವನ್ನು ಬೆಂಬಲಿಸಬೇಕು ಎಂದು ಸೂಚಿಸಲಾಗಿದೆ ಎಂದು ವಿಪ್ ಹೇಳಿತು. 2019 ಡಿಸೆಂಬರ್ 09ರ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಿದ್ಧಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆ ರೂಪಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಲಕ್ನೋ:  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಗಾಗಿ ಪಟ್ಟು 
ಹಿಡಿದಿದ್ದಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಕುಟುಂಬ ಸದಸ್ಯರು, ಸಚಿವರು ಹಾಗೂ ಉನ್ನತ ಅಧಿಕಾರಿಗಳ ಭೇಟಿಯ ಬಳಿಕ, ದೆಹಲಿ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ 2019 ಡಿಸೆಂಬರ್ 06ರ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದ ಅತ್ಯಾಚಾರ ಸಂತ್ರಸ್ಥ ಮಹಿಳೆಯ ಅಂತ್ಯಕ್ರಿಯೆಯನ್ನು 2019 ಡಿಸೆಂಬರ್ 08ರ ಭಾನುವಾರ ನೆರವೇರಿಸಿದರು. ಹಿರಿಯ ಅಧಿಕಾರಿಗಳು ಮತ್ತು ಸಚಿವರು ಕುಟುಂಬ ಸದಸ್ಯರ ಮನವೊಲಿಸಿದ ಬಳಿಕ ಪೊಲೀಸರ ಸಮ್ಮುಖದಲ್ಲಿ, ೨೪ರ ಹರೆಯದ ಮಹಿಳೆಯ ಶವವನ್ನು ಆಕೆಯ ಗ್ರಾಮದ ಹೊರಭಾಗದಲ್ಲಿ ಆಕೆಯ ಕುಟುಂಬದ ಮಾಲೀಕತ್ವಕ್ಕೆ ಒಳಪಟ್ಟ ಹೊಲ ಒಂದರಲ್ಲಿ ಸಮಾಧಿ ಮಾಡಲಾಯಿತು. ಲಕ್ನೋದ ಡಿವಿಷನಲ್ ಕಮಿಷನರ್ ಮುಖೇಶ್ ಮೆಶ್ರಮ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಸ್ ಕೆ ಭಗತ್ ಅವರು ಮಹಿಳೆಯ ತಂದೆ ಮತ್ತು ಸಹೋದರನ ಬಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಬಳಿಕ ಅವರು ಮಹಿಳೆಯ ಸಮಾಧಿಗೆ ಒಪ್ಪಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮನ್ನು ಭೇಟಿ ಮಾಡಬೇಕು ಮತ್ತು ಕಿರಿಯ ಪುತ್ರಿಗೆ ಉದ್ಯೋಗ ನೀಡಬೇಕು ಎಂದು ಕುಟುಂಬ ಬಯಸಿತ್ತು. ತನ್ನ ಸಹೋದರಿಗೆ ಬ್ಯಾಂಕಿನಲ್ಲಿ ನೌಕರಿ ಲಭಿಸಿತ್ತು. ಅತ್ಯಾಚಾರಿಗಳು ಸೇರಿದಂತೆ ಐವರು ವ್ಯಕ್ತಿಗಳು ಬೆಂಕು ಹಚ್ಚುವುದಕ್ಕೆ ಒಂದೆರಡು ದಿನ ಅಂತರದಲ್ಲಿ ಆಕೆ ಕೆಲಸಕ್ಕೆ ಸೇರಲಿದ್ದಳು ಎಂದು ಕಿರಿಯ ಸಹೋದರಿ ಮಂಗಳವಾರ ಹೇಳಿದ್ದಳು. ರಾಜ್ಯ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಉನ್ನಾವೋ ಉಸ್ತುವಾರಿ ಸಚಿವ ಕಮಲ್ ರಾಣಿ ವರುಣ್ ಅವರೂ ಕುಟುಂಬದ ಜೊತೆಗೆ ಮಾತನಾಡಿದರು ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಮೃತ ಮಹಿಳೆಯ ೬೫ರ ಹರೆಯದ ತಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಜೊತೆಗೆ ದೂರವಾಣಿ ಮೂಲಕ ಸಚಿವರ ಸಮ್ಮುಖದಲ್ಲೇ ಮಾತನಾಡಿದರು. ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡಬೇಕೆಂಬ ಅವರ ಬೇಡಿಕೆಯನ್ನು ಸರ್ಕಾರ ಪರಿಗಣಿಸುವುದು ಎಂಬುದಾಗಿ ಅವಸ್ಥಿ ಭರವಸೆ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment