Sunday, December 29, 2019

ಇಂದಿನ ಇತಿಹಾಸ History Today ಡಿಸೆಂಬರ್ 29

2019: ಉಡುಪಿ/ ಬೆಂಗಳೂರು: ಮಧ್ವಮತ ಪ್ರತಿಷ್ಠಾಪನಾಚಾರ್ಯ ಆಚಾರ್ಯ ಮಧ್ವರಿಂದ ಸ್ಥಾಪಿಸಲ್ಪಟ್ಟ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ 32ನೇ ಸ್ವಾಮೀಜಿಸಂತಶ್ರೇಷ್ಠ , ಮಾಧ್ವಮತಪ್ರಚಾರಕ, ಹಿಂದೂ ಕುಲ ತಿಲಕ, ಅಪ್ರತಿಮ ಜ್ಞಾನಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೆಲದಿನಗಳ ತೀವ್ರ ಅನಾರೋಗ್ಯದ ಬಳಿಕ 2019 ಡಿಸೆಂಬರ್ 29ರ ಭಾನುವಾರ ಶ್ರೀಕೃಷ್ಣ ಪಾದವನ್ನು  ಸೇರಿದರು.  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೇಜಾವರ ಮಠದ ವಿದ್ಯೇಶ ತೀರ್ಥ ಸ್ವಾಮೀಜಿ ಈದಿನ ಬೆಳಗ್ಗೆ 9.20ಕ್ಕೆ ಕೊನೆಯುಸಿರೆಳೆದರು. ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ ಚಟುವಟಿಕೆಗಳಿಗೂ ಪ್ರತಿಕ್ರಿಯಿಸುತ್ತ, ಎಲ್ಲ ರಂಗದಲ್ಲೂ ಸಕ್ರಿಯರಾಗಿದ್ದ ಪೇಜಾವರ ಶ್ರೀಗಳು ದೇಶಾದ್ಯಂತ ಪರಿಚಿತರಾಗಿದ್ದವರು.  89 ವರ್ಷ ಬದುಕಿದ ಪೇಜಾವರ ಶ್ರೀಗಳು ತಮ್ಮ ಜೀವನದ ಅಂತಿಮ ದಿನಗಳಲ್ಲೂ ಲವಲವಿಕೆಯ ಬದುಕು ನಡೆಸಿದ್ದು ವಿಶೇಷ. ದೈಹಿಕವಾಗಿ ಅವರು ಸಕ್ರಿಯರಾಗಿದ್ದರು. ದಿನನಿತ್ಯ ಪೂಜೆ, ಪ್ರಾರ್ಥನೆ, ಜಪ ತಪಗಳ ಜೊತೆಗೆ ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನೂ ಅವರು ತಪ್ಪದೇ ಮಾಡುತ್ತಿದ್ದರು.  ಮಲೆನಾಡಿನ ನಕ್ಸಲ್ ಪೀಡಿತ ಗ್ರಾಮಗಳು ಹಾಗೂ ಅಭಿವೃದ್ಧಿ ಕಾಣದೇ ಇರುವ ಕುಗ್ರಾಮಗಳ ಅಭಿವೃದ್ಧಿಯ ಕನಸು ಕಂಡಿದ್ದ ಶ್ರೀಗಳು ಮಲೆನಾಡಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಕಟ್ಟಾ ಹಿಂದುತ್ವವಾದಿಯಾಗಿದ್ದ ಶ್ರೀಗಳು ತಮ್ಮ ಕಾರುಚಾಲಕನಾಗಿ ಮುಸ್ಲಿಮ್ ಬಂಧುಗಳನ್ನು ಇಟ್ಟುಕೊಂಡಿದ್ದರು. ಅವರ ಕುಟುಂಬ ಸದಸ್ಯರ ಕ್ಷೇಮವನ್ನು ಅತ್ಯಂತ ಆತ್ಮೀಯತೆಯಿಂದ ನೋಡಿಕೊಂಡಿದ್ದರು. ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕರಲ್ಲಿ ಒಬ್ಬರಾಗಿದ್ದ ಪೇಜಾವರ ಶ್ರೀಗಳಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಜೀವಮಾನದ ಕನಸಾಗಿತ್ತು.  ೧೯೩೧ ಏಪ್ರಿಲ್ ೨೩ರಂದು ಜನಿಸಿದ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯ ಅಜ್ಜರಕಾಡಿನಲ್ಲೂ, ಬಳಿಕ ಬೆಂಗಳೂರಿನಲ್ಲೂ ಸಾರ್ವಜನಿಕರಿಗೆ ಅಂತ್ಯ ದರ್ಶನಕ್ಕಾಗಿ ಇರಿಸಿ, ಬಳಿಕ ಬೆಂಗಳೂರಿನ ಶ್ರೀನಿವಾಸ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಂತ್ಯವಿಧಿಗಳನ್ನು ನೆರವೇರಿಸಿ ಬೃಂದಾವನಸ್ಥರನ್ನಾಗಿ ಮಾಡಲಾಯಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019:  ನವದೆಹಲಿ: ತಿದ್ದುಪಡಿಗೊಂಡ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳುದಲಿತ ವಿರೋಧಿಗಳುಎಂದು 2019 ಡಿಸೆಂಬರ್ 29ರ ಭಾನುವಾರ ಟೀಕಿಸಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರುಪೌರತ್ವ ಕಾಯ್ದೆಯಿಂದ ಅನುಕೂಲ ಪಡೆಯಲಿರುವ ಶೇಕಡಾ ೭೦-೮೦ ಮಂದಿ ದಲಿತ ಸಮುದಾಯದವರು’ ಎಂದು ಹೇಳಿದರು.  ‘ಕಾಯ್ದೆಯನ್ನು ವಿರೋಧಿಸುತ್ತಿರುವ ದಲಿತ ನಾಯಕರನ್ನು ಬಯಲಿಗೆಳೆಯಬೇಕುಎಂದು ನುಡಿದ ನಡ್ಡಾ, ’ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮುದಾಯದ ಅತ್ಯಂತ ದೊಡ್ಡ ಸಂರಕ್ಷಕಎಂದು ಪ್ರತಿಪಾದಿಸಿದರು. ದಲಿತ ಸಮೂಹವೊಂದು ಸಂಘಟಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ ಅವರುಕಾಂಗ್ರೆಸ್ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರನ್ನು ದಾರಿತಪ್ಪಿಸುತ್ತಿರುವ ಅಭಿಯಾನದ ನೇತೃತ್ವವನ್ನು ಕಾಂಗ್ರೆಸ್ ವಹಿಸಿದೆಎಂದು ಆಪಾದಿಸಿದರು. ನೂತನ ಕಾಯ್ದೆಯು ನೆರೆಯ ರಾಷ್ಟ್ರಗಳ ಅಲ್ಪಸಂಖ್ಯತರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ಪೌರತ್ವ ಕಿತ್ತುಕೊಳ್ಳುವುದಕ್ಕೆ ಸಂಬಂಧಿಸಿದ್ದಲ್ಲ ಎಂದು ನಡ್ಡಾ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:ಮಿಲೆನಿಯಲ್ಸ್, ಸೋಶಿಯಲ್ ಮೀಡಿಯಾ ತಲೆಮಾರು ಮತ್ತು  ಝಡ್ ತಲೆಮಾರು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇಂದಿನ ಯುವಕರು ವ್ಯವಸ್ಥೆಯ ಅಸ್ಥಿರತೆ ಮತ್ತು ಸ್ವಜನ ಪಕ್ಷಪಾತವನ್ನು ಸಹಿಸುವುದಿಲ್ಲಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಡಿಸೆಂಬರ್ 29ರ ಭಾನುವಾರ ಹೇಳಿದರು. ೨೦೧೯ರ ಸಾಲಿನ ತಮ್ಮ ಕೊನೆಯಮನ್ ಕಿ ಬಾತ್  ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥೆಯನ್ನು ನಂಬುವ ದೇಶದ ಯುವಕರ ನಿರೀಕ್ಷೆಗಳು ಮತ್ತು ಇತರ ವ್ಯಾಪಕ ವಿಷಯಗಳ ಕುರಿತು ಮಾತನಾಡಿದರು. ‘ಮುಂಬರುವ ದಶಕದಲ್ಲಿ ಯುವ ಭಾರತವು ಮಹತ್ವದ ಪಾತ್ರ ವಹಿಸಲಿದೆ. ಇಂದಿನ ಯುವಜನತೆ ವ್ಯವಸ್ಥೆಯನ್ನು ನಂಬುತ್ತದೆ ಮತ್ತು ವ್ಯಾಪಕ ವಿಷಯಗಳ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ಹೊಂದಿದೆ. ಇದು ಮಹಾನ್ ವಿಷಯ ಎಂದು ನಾನು ಪರಿಗಣಿಸುತ್ತೇನೆಎಂದು ಪ್ರಧಾನಿ ಹೇಳಿದರು. ಇಂದಿನ ಯುವಕರು ಅಸ್ಥಿರತೆ, ಅರಾಜಕತೆ, ಸ್ವಜನಪಕ್ಷಪಾತವನ್ನು ದ್ವೇಷಿಸುತ್ತಾರೆ ಎಂದು ಅವರು ಹೇಳಿದರು. ಬಿಹಾರಿನ ಪಶ್ಚಿಮ ಚಂಪಾರಣ್ ಜಿಲ್ಲೆಯ ಭೈರಗಂಜ್ ಆರೋಗ್ಯ ಕೇಂದ್ರದ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ಶಾಲೆಯೊಂದರ ಹಳೆ ವಿದ್ಯಾರ್ಥಿ ಸಂಘವು ಸಂಘಟಿಸಿದ ಆರೋಗ್ಯ ಶಿಬಿರಕ್ಕೆ ನೆರೆಯ ಗ್ರಾಮಗಳ ಸಹಸ್ರಾರು ಮಂದಿ ಆರೋಗ್ಯ ತಪಾಸಣೆಗಾಗಿ ಹೇಗೆ ಬರುತ್ತಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡರು. ‘ಇದು ಸರ್ಕಾರಿ ಕಾರ್ಯಕ್ರಮವಲ್ಲ, ಇಲ್ಲವೇ ಸರ್ಕಾರಿ ಉಪಕ್ರಮವೂ ಅಲ್ಲ. ಇದು ಸ್ಥಳೀಯ ಕೆಆರ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ  ಸಂಘದ ಸಭೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ. ಅವರು ಇದಕ್ಕೆಸಂಕಲ್ಪ ೯೫ಎಂಬ ಹೆಸರು ಇಟ್ಟಿದ್ದಾರೆಎಂದು ಹೇಳಿದ ಪ್ರಧಾನಿ, ಒಳ್ಳೆಯ ಕೆಲಸಗಳಿಗಾಗಿ ಯುವಕರು ಇಂತಹ ಹಳೆ ವಿದ್ಯಾರ್ಥಿ ಸಂಘಗಳನ್ನು ಬಳಸಬೇಕು ಎಂದು ಸೂಚಿಸಿದರು. (ವಿವರಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿಹಿರಿಯ ಚಿತ್ರನಟ ಅಮಿತಾಭ್ ಬಚ್ಚನ್ ಅವರನ್ನು ಚಲನಚಿತ್ರ ಜಗತ್ತಿಗೆ ನೀಡಿದ ಅಪ್ರತಿಮ ಕೊಡುಗೆಗಾಗಿ 2019 ಡಿಸೆಂಬರ್ 29ರ ಭಾನುವಾರ  ’ದಾದಾಸಾಹೇಬ್ ಫಾಲ್ಕೆಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವವಾದ ಪ್ರಶಸ್ತಿಯನ್ನು ಬಚ್ಚನ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದರುಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಜನಕ ಧುಂಡಿರಾಜ್ ಗೋವಿಂದ ಫಾಲ್ಕೆ ಅವರ ಹೆಸರಿನಲ್ಲಿ ೧೯೬೯ರಿಂದ ನೀಡಲಾಗುತ್ತಿದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸಲ್ಲಿಸಿದ ಅಪ್ರತಿಮ ಸೇವೆಯನ್ನು ಪರಿಗಣಿಸಿ ಸರ್ಕಾರವು  ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯು ಸ್ವರ್ಣ ಕಮಲ ಮತ್ತು ೧೦ ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ. ಅಮಿತಾಭ್ ಬಚ್ಚನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಹೆಸರು ಘೋಷಣೆಯಾದಾಗ ಬಾಲಿವುಡ್ ಗಣ್ಯರು ಮತು ಅಭಿಮಾನಿಗಳಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಹಿರಿಯ ನಟನ ಜೊತೆಗೆ ನಟಿಸಿದ್ದ ಹೇಮಾ ಮಾಲಿನಿ ಅವರುಪ್ರಶಸ್ತಿಗೆ ಇದಕ್ಕಿಂತ ಹೆಚ್ಚಿನ ಸೂಕ್ತ ವ್ಯಕ್ತಿಯನ್ನು ನಾಮಕರಣ ಮಾಡುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲಎಂದು ಹೇಳಿದ್ದರು. ಪುತ್ರ ಅಭಿಷೇಕ್ ಬಚ್ಚನ್, ರಜನೀಕಾಂತ್, ಲತಾ ಮಂಗೇಶ್ಕರ್, ಆಶಾ ಬೋಸ್ಲೆ, ಅನಿಲ್ ಕಪೂರ್, ಕರಣ್ ಜೋಹರ್, ರೀತೀಶ್ ದೇಶಮುಖ್, ವಿವೇಕ ಓಬೆರಾಯ್, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ಹುಮಾ ಖುರೇಶಿ ಮತ್ತು ಕಾರ್ತಿಕ್ ಆರ್ಯನ್ ಸೇರಿದಂತೆ ಚಿತ್ರರಂಗದ ಗಣ್ಯರು ಅಮಿತಾಭ್ ಅವರನ್ನು ಅಭಿನಂದಿಸಿದವರಲ್ಲಿ ಸೇರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೇನ್ ಅವರು ಜಾರ್ಖಂಡ್ ರಾಜ್ಯದ ೧೧ನೇ ಮುಖ್ಯಮಂತ್ರಿಯಾಗಿ 2019 ಡಿಸೆಂಬರ್ 29ರ ಭಾನುವಾರ  ಇಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿರೋಧ ಪಕ್ಷಗಳ ಉನ್ನತ ನಾಯಕರು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ವಿಪಕ್ಷ ಏಕತೆಯನ್ನು ಪ್ರದರ್ಶಿಸಿದರು. ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಹೇಮಂತ್ ಸೊರೇನ್ ಅವರಿಗೆ ಕಚೇರಿ ಮತ್ತು ಗೌಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು. ಸೊರೇನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನ ಸಮುದಾಯಜೈ ಜಾರ್ಖಂಡ್ಘೋಷಣೆಗಳನ್ನು ಮೊಳಗಿಸಿತು. ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಸತ್ಯಾನಂದ ಭೋಗ್ಟಾ ಮತ್ತು ಕಾಂಗ್ರೆಸ್ ಪಕ್ಷದ ಜಾರ್ಖಂಡ್ ಘಟಕದ ಮುಖ್ಯಸ್ಥ ರಾಮೇಶ್ವರ ಓರಾನ್ ಅವರು ಕೂಡಾ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ೪೪ರ ಹರೆಯದ ಜೆಎಂಎಂ ನಾಯಕ ಎರಡನೇ ಅವಧಿಗೆ ತಮ್ಮ ರಾಜ್ಯಭಾರ ಆರಂಭಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿಎಂಕೆಯ ಎಂಕೆ ಸ್ಟಾಲಿನ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸುಪ್ರೀಯಾ ಸುಳೆ, ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ಸಂಜಯ್ ಸಿಂಗ್ ಅವರು ರಾಂಚಿಯ ಮೊರಬಾದಿ ಪ್ರದೇಶದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದ ಗಣ್ಯರಲ್ಲಿ ಸೇರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment