Monday, December 2, 2019

ಇಂದಿನ ಇತಿಹಾಸ History Today ಡಿಸೆಂಬರ್ 02

2019: ಕೋಚಿ:ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಉಪ ಲೆಫ್ಟಿನೆಂಟ್ ಶಿವಾಂಗಿ 2019 ಡಿಸೆಂಬರ್ 02ರ ಸೋಮವಾರ ನೇಮಕಗೊಳ್ಳುವ  ಮೂಲಕ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ‘ನನಗೆ ಇದೊಂದು ತುಂಬಾ ಹೆಮ್ಮೆಯ ವಿಚಾರವಾಗಿದೆ. ನನ್ನ ಪೋಷಕರಿಗೆ ತುಂಬಾ ಖುಷಿಕೊಟ್ಟಿದೆ. ನನ್ನ ದೀರ್ಘಕಾಲದ ಕನಸು ಕೊನೆಗೂ ನನಸಾಗಿದೆ. ನಾನೀಗ ಮೊದಲ ಮಹಿಳಾ ಪೈಲಟ್ ಎಂಬುದು ದೊಡ್ಡ ಹೆಮ್ಮೆಯ ವಿಚಾರವಾಗಿದೆ. ನಾನೀಗ ನನ್ನ ಮೂರನೇ ಹಂತದ ತರಬೇತಿಯನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಕೋಚಿ ನೌಕಾನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ನಂತರ ಶಿವಾಂಗಿ ಈ ಪ್ರತಿಕ್ರಿಯೆ ನೀಡಿದರು. ಬಿಹಾರದ ಮುಝಾಫರ್ ಪುರದಲ್ಲಿ ಜನಿಸಿರುವ ಶಿವಾಂಗಿ. ಪ್ರಾಥಮಿಕ ತರಬೇತಿಯ ನಂತರ ೨೦೧೮ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದರು. ಸೋಮವಾರ ಕೋಚಿಯ ನೌಕಾ ನೆಲೆಗೆ ಶಿವಾಂಗಿ ಪೈಲಟ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ರಾಂಚಿ: ಸರ್ಕಾರವು ಎಲ್ಲ ನುಸುಳುಕೋರರನ್ನೂ ೨೦೨೪ರ ಒಳಗಾಗಿ ದೇಶದಿಂದ ಉಚ್ಛಾಟಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 02ರ ಸೋಮವಾರ ಜಾರ್ಖಂಡಿನಲ್ಲಿ ಪ್ರಕಟಿಸಿದರು. ಮುಸ್ಲಿಂ ಬಾಹುಳ್ಯದ ಆಫ್ಘಾನಿಸ್ಥಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಭಾರತೀಯ ಪೌರತ್ವ  ನೀಡುವಿಕೆಯನ್ನು ತ್ವರಿತಗೊಳಿಸುವ ಮಸೂದೆಯ ಮೇಲೆ ಸಂಸತ್ತಿನಲ್ಲಿ  ಚರ್ಚೆ ಆರಂಭವಾಗುವುದಕ್ಕೆ ಮುನ್ನವೇ ದೇಶದ ಒಳಗಿರುವ ನುಸುಳುಕೋರರನ್ನು ಹೊರಹಾಕುವ ಬಗೆಗಿನ ಪ್ರಕಟಣೆಯನ್ನು ಅಮಿತ್ ಶಾ ಮಾಡಿದರು. ಐದು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಪ್ರಚಾರದ ಸಲುವಾಗಿ ಜಾರ್ಖಂಡಿಗೆ ಪುನಃ ಆಗಮಿಸಿದ ಶಾ, ತಮ್ಮ ಪ್ರಚಾರಸಭೆಯಲ್ಲಿ ನುಸುಳುಕೋರರನ್ನು ದೇಶದಿಂದ ಹೊರಹಾಕುವ ಸಲುವಾಗಿ ರಾಷ್ಟ್ರವ್ಯಾಪಿ ಪೌರತ್ವ ನೊಂದಣಿ ನಡೆಸುವುದನ್ನು ಆಕ್ಷೇಪಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಬಯಸುವ ಎಲ್ಲ ಮಹಿಳೆಯರಿಗೆ ವಯಸ್ಸು ಅಥವಾ ಧರ್ಮವನ್ನು ಪರಿಗಣಿಸದೆ ಸುರಕ್ಷಿತ ಸಂಚಾರ ವ್ಯವಸ್ಥೆಯನ್ನು  ಒದಗಿಸುವಂತೆ ಕೋರಿ, ಕಳೆದ ವರ್ಷ ಶಬರಿಮಲೈ ದೇವಾಲಯವನ್ನು ಸಂದರ್ಶಿಸಿದ್ದ ಇಬ್ಬರು ಮಹಿಳಾ ಕಾರ್ಯಕರ್ತರ ಪೈಕಿ ಒಬ್ಬರಾದ ಬಿಂದು ಅಮ್ಮಿನಿ 2019 ಡಿಸೆಂಬರ್ 02ರ ಸೋಮವಾರ ಸುಪ್ರೀಂಕೋರ್ಟಿನ ಮೆಟ್ಟಿಲೇರಿದರು. ಋತುಮತಿ ವಯೋಮಾನದ ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಿದ ೨೦೧೮ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಕಾಲದಲ್ಲಿ ಪೀಠವು ತನ್ನ ತೀರ್ಪಿಗೆ ಯಾವುದೇ ತಡೆಯಾಜ್ಞೆಯನ್ನೂ ನೀಡಿಲ್ಲ, ಆದ್ದರಿಂದ ಕೇರಳ ಸರ್ಕಾರವು ದೇವಾಲಯಕ್ಕೆ ಬರುವ ಎಲ್ಲ ಮಹಿಳೆಯರಿಗೂ ರಕ್ಷಣೆ ಒದಗಿಸಲೇ ಬೇಕು ಎಂದು ಬಿಂದು ಅಮ್ಮಿನಿ ತಮ್ಮ ಅರ್ಜಿಯಲ್ಲಿ ತಿಳಿಸಿದರು. ಋತುಮತಿ ವಯೋಮಾನದ ಮಹಿಳೆಯರೂ ಸೇರಿದಂತೆ ಎಲ್ಲ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ೨೦೧೮ರ ಸೆಪ್ಟೆಂಬರಿನಲ್ಲಿ ತೀರ್ಪು ನೀಡಿದ ಬಳಿಕ, ಬಿಂದು ಅಮ್ಮಿನಿ ಅವರು ಕನಕದುರ್ಗ ಎಂಬ ಇನ್ನೊಬ್ಬ ಮಹಿಳೆಯ ಜೊತೆಗೆ ವರ್ಷ ಜನವರಿ ೨ರಂದು ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದ್ದರು. ಮಹಿಳೆಯರಿಬ್ಬರಿಗೂ ಪೊಲೀಸರು ಬೆಂಗಾವಲು ರಕ್ಷಣೆ ಒದಗಿಸಿದ್ದರು. ಆದಾಗ್ಯೂ, ವರ್ಷ ನವೆಂಬರ್ ೧೪ರಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳನ್ನು ಸಪ್ತ ಸದಸ್ಯರ ವಿಸ್ತೃತ ಸಂವಿಧಾನ ಪೀಠಕ್ಕೆ ವಹಿಸಲು ತೀರ್ಮಾನಿಸಿದ ಬಳಿಕ ಕೇರಳ ಸರ್ಕಾರವು ತನ್ನ ನಿಲುವನ್ನು ಬದಲಾಯಿಸಿತು. ಮುಸ್ಲಿಮ್ ಮಹಿಳೆಯರಿಗೆ ಮಸೀದಿಗೆ ಪ್ರವೇಶಾವಕಾಶ ಕಲ್ಪಿಸುವುದು ಮತ್ತು ದಾವೂದಿ ಬೋಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪ್ರಕರಣಗಳನ್ನೂ ಶಬರಿಮಲೈ ಪ್ರಕರಣದ ಜೊತೆಗೆ ಸೇರಿಸಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನವೆಂಬರ್ ೧೪ರಂದು ನಿರ್ಧರಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂಮಿಯನ್ನು ರಾಮಲಲ್ಲಾಗೆ ಮಂದಿರ ನಿರ್ಮಾಣಕ್ಕಾಗಿ ನೀಡಿದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪು ಬಾಬರಿ ಮಸೀದಿ ನಾಶಕ್ಕಾಗಿ ಹಿಂದುಗಳಿಗೆ ಬಹುಮಾನ ಕೊಟ್ಟದ್ದಕ್ಕೆ ಸಮವಾಗಿದೆ ಎಂದು ಪೀಠದ ನವೆಂಬರ್ ೯ರ ತೀರ್ಪಿನ ವಿರುದ್ಧ 2019 ಡಿಸೆಂಬರ್ 02ರ ಸೋಮವಾರ ಸಲ್ಲಿಸಲಾದ ಮೊದಲ ಮರುಪರಿಶೀಲನಾ ಅರ್ಜಿಯಲ್ಲಿ ಮುಸ್ಲಿಮ್ ಕಕ್ಷಿದಾರರು ಪ್ರತಿಪಾದಿಸಿದರು. ಅಯೋಧ್ಯಾ ಭೂ ವಿವಾದದ ಮೂಲ ಅರ್ಜಿದಾರ ಎಂ. ಸಿದ್ದಿಖ್ ಅವರ ಶಾಸನಬದ್ಧ ಉತ್ತರಾಧಿಕಾರಿ ಮೌಲಾನಾ ಆಶ್ಶಾದ್ ರಶೀದಿ ಅವರು ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯು ನವೆಂಬರ್ ೯ರ ಸುಪ್ರೀಂಕೋರ್ಟ್ ತೀರ್ಪು ಗಂಭೀರ ತಪ್ಪುಗಳನ್ನು ಎಸಗಿರುವುದರಿಂದ ಅದರ ಪುನರ್ ಪರಿಶೀಲನೆ ಅಗತ್ಯವಾಗಿದೆ ಎಂದು ಹೇಳಿತು. ಪರಿಹಾರ ನೀಡುವಲ್ಲಿ ಗೌರವಾನ್ವಿತ ನ್ಯಾಯಾಲಯವು ತಪ್ಪೆಸಗಿದೆ. ವಾಸ್ತವವಾಗಿ ಪರಿಹಾರವು ಬಾಬರಿ ಮಸೀದಿ ನಾಶಕ್ಕೆ ಕೊಟ್ಟ ಆಜ್ಞಾಪತ್ರಕ್ಕೆ ಸಮವಾಗಿದೆ. ಗೌರವಾನ್ವಿತ ನ್ಯಾಯಾಲಯವು ೧೯೩೪, ೧೯೪೯ ಮತ್ತು ೧೯೯೨ರಲ್ಲಿ ಎಸಗಲಾದ ಕೃತ್ಯಗಳು ಅಕ್ರಮ ಎಂಬುದಾಗಿ ಮೊzಲು ಹೇಳಿ, ಬಳಿಕ ಹಿಂದುಗಳಿಗೆ ವಿವಾದಿತ ಭೂಮಿಯ ಹಕ್ಕು ನೀಡುವ ಮೂಲಕ ಅಪರಾಧಗಳಿಗೆ ಬಹುಮಾನ ನೀಡುವ ತಪ್ಪೆಸಗಿದೆಎಂದು ಅರ್ಜಿ ಪ್ರತಿಪಾದಿಸಿತು. ೨೧೭ ಪುಟಗಳ ಪುನರ್ ಪರಿಶೀಲನಾ ಅರ್ಜಿಯನ್ನು ವಕೀಲ ಎಜಾಜ್ ಮಖ್ಬೂಲ್ ಮೂಲಕ ಸಲ್ಲಿಸಲಾಯಿತು. ೧೯೩೪ರಲ್ಲಿ  ಗುಮ್ಮಟಗಳನ್ನು ನಾಶಪಡಿಸಿದ ಹಿಂದುಗಳ ಅಕ್ರಮ ಕೃತ್ಯಗಳು ೧೯೯೨ರಲ್ಲಿ ಬಾಬರಿ ಮಸೀದಿ ನಾಶಕ್ಕೆ ಕಾರಣವಾಯಿತು ಎಂಬುದಾಗಿ ದಾಖಲಿಸಿದ ಬಳಿಕ ಪಂಚ ಸದಸ್ಯ ಪೀಠವು ಹಿಂದುಗಳ ಪರವಾಗಿ ಆದೇಶ ನೀಡಲು ಸಾಧ್ಯ? ಎಂಬುದಾಗಿ ಅರ್ಜಿಯು ಪ್ರಶ್ನಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ವಿಶೇಷ ಭದ್ರತಾ ಗುಂಪು (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್-ಎಸ್ಪಿಜಿ) ರಕ್ಷಣೆಯನ್ನು ಕಿತ್ತು ಹಾಕಿದ ಕೆಲವೇ ವಾರಗಳ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭದ್ರತೆಯಲ್ಲಿ ಭಾರೀ ಲೋಪವಾಗಿರುವ ವಿಚಾರ ಬೆಳಕಿಗೆ ಬಂದಿದ್ದು ನವೆಂಬರ್ ೨೬ರಂದು ಕಾರೊಂದರಲ್ಲಿ ಬಂದ ಐವರು ನೇರವಾಗಿ ಅವರ ನಿವಾಸಕ್ಕೆ ನುಗ್ಗಿದ್ದರು ಎಂದು ವರದಿಯೊಂದು ತಿಳಿಸಿತು. ಗುಂಪು ನೇರವಾಗಿ ಝಡ್-ಪ್ಲಸ್ ಭದ್ರತೆ ಹೊಂದಿರುವ ಪ್ರಿಯಾಂಕಾ ಗಾಂಧಿ ಅವರ ಬಳಿಗೆ ತೆರಳಿ ಅವರ ಫೊಟೋಗಳನ್ನು ಕ್ಲಿಕ್ ಮಾಡಿಕೊಳ್ಳುವಲ್ಲಿ ಸಮರ್ಥವಾಯಿತು ಎಂದು ಪ್ರಿಯಾಂಕಾ ಗಾಂಧಿ ಅವರು ಕಚೇರಿಯು 2019 ಡಿಸೆಂಬರ್ 02ರ ಸೋಮವಾರ ಬಹಿರಂಗ ಪಡಿಸಿತು.  ಭದ್ರತಾ ಲೋಪದ ಘಟನೆಯು ಪ್ರಿಯಾಂಕಾ ಅವರ ನಿವಾಸದ ಬಳಿಗೆ ಬರಲು ಕಾರಿಗೆ ಅನುಮತಿ ನೀಡಿದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಮತ್ತು ದೆಹಲಿ ಪೊಲೀಸರ ಮಧ್ಯೆ ಪರಸ್ಪರ ದೂಷಣೆಯ ಆಟಕ್ಕೆ ನಾಂದಿ ಹಾಡಿದೆ. ಘಟನೆಗೆ ಸಂಬಂಧಿಸಿದಂತೆ ಸಿಆರ್ಪಿಎಫ್ಗೆ ಔಪಚಾರಿಕ ದೂರನ್ನು ನೀಡಲಾಯಿತು. ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ಜೊತೆಗೆ ನವೆಂಬರ್ ೪ರವರೆಗೆ ಎಸ್ಪಿಜಿ ರಕ್ಷಣೆಯನ್ನು ಹೊಂದಿದ್ದರು. ಮೂರೂ ಮಂದಿ ಕಾಂಗ್ರೆಸ್ ನಾಯಕರ ಎಸ್ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಳ್ಳಲಾಗಿದ್ದು ಅವರು ಪ್ರಸ್ತುತ ಝಡ್ ಪ್ಲಸ್ ರಕ್ಷಣೆಯನ್ನು ಹೊಂದಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment