ನವದೆಹಲಿ: (ಇಪಿಸಿಎ) ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿ ’ವಿಷಮ ಸ್ಥಿತಿ’ಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತು. ವಾಯುಗುಣಮಟ್ಟ
ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು. ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು. ‘ವಾಯುಮಾಲಿನ್ಯವು
ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕು’ ಎಂದು
ಭುರೇಲಾಲ್ ಪತ್ರದಲ್ಲಿ ಬರೆದರು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು. ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು
(ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ೨೫,೦೦೦ ರೂಪಾಯಿಗಳ
ಜುಜುಬಿ ದಂಡದ ಹಣವನ್ನು ಉಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಖಟ್ಲೆಗಾಗಿ ವೆಚ್ಚ ಮಾಡಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು. ಕೇರಳ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ’ಇಂತಹ ಕ್ಷುಲ್ಲಕ ಮತ್ತು ಅನಗತ್ಯ ಪ್ರಕರಣ’ ದಾಖಲಿಸಿದ್ದಕ್ಕಾಗಿ ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು. ಇಂತಹ ದುಸ್ಸಾಹಸಗಳನ್ನು ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿತು. ‘ಭವಿಷ್ಯದಲ್ಲಿ ಕೇರಳ ಸರ್ಕಾರದಿಂದ ಇಂತಹ ಅರ್ಜಿ ಸಲ್ಲಿಕೆಯಾದರೆ ನಾವು ಭಾರೀ ದಂಡ ವಿಧಿಸಬೇಕಾಗುತ್ತದೆ ಎಂಬದಾಗಿ ನಾವು ಸ್ಪಷ್ಟ ಪಡಿಸಬಯಸುತ್ತೇವೆ’ ಎಂದು
ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತನ್ನ ಆದೇಶದಲ್ಲಿ ಎಚ್ಚರಿಸಿತು. ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಕೇರಳ ಸರ್ಕಾರವನ್ನು ಈ ರೀತಿ ಕಟುವಾಗಿ
ತರಾಟೆಗೆ ತೆಗೆದುಕೊಂಡಿತು. ಎರಡು ದಿನಾಂಕಗಳಲ್ಲಿ ಆರೋಪಿಯನ್ನು ಹಾಜರು ಪಡಿಸಲು ರಾಜ್ಯ ಸರ್ಕಾರ ವಿಫಲವಾದ ಬಳಿಕ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ದುಬೈಯಿಂದ ಸಾಕ್ಷ ನೀಡುವ ಸಲುವಾಗಿ ಬಂದಿದ್ದ ಸಾಕ್ಷಿದಾರನಿಗೆ ೨೫,೦೦೦ ರೂಪಾಯಿಗಳನ್ನು
ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಜ್ಞಾಪಿಸಿದ್ದರು. ಆರೋಪಿ ಹಾಜರಿಲ್ಲದ ಕಾರಣ ಸಾಕ್ಷ್ಯ ನೀಡಿಕೆಯನ್ನು ಮುಂದೂಡಬೇಕಾಗಿ ಬಂದಿತ್ತು. ವಿಚಾರಣಾ ನ್ಯಾಯಾಧೀಶರ ಈ ಆದೇಶದ ವಿರುದ್ಧ
ಕೇರಳ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರ ಆದೇಶವು ಸರಿಯಾಗಿಯೇ ಇದೆ ಎಂದು ಹೇಳಿ ಹೈಕೋರ್ಟ್ ಅದನ್ನು ಎತ್ತಿ ಹಿಡಿಯಿತು. ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ಮತ್ತು ತನ್ಮೂಲಕ, ೨೫,೦೦೦ ರೂಪಾಯಿಗಳನ್ನು
ಉಳಿಸಲು ಖಟ್ಲೆಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮಾರ್ಗವನ್ನು ಆರಿಸಿಕೊಂಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಔರಂಗಾಬಾದ್: ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಮತ್ತು ಮುಂದಿನ ಸರ್ಕಾರ ರಚನೆಯ ಬಗೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವವರೆಗೆ ‘ನಾನೇ
ಮುಖ್ಯಮಂತ್ರಿಯಾಗುತ್ತೇನೆ,
ಅವಕಾಶ ಕೊಡಿ’ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತರೊಬ್ಬರು ಆಡಳಿತಾರೂಢ ಮೈತ್ರಿಕೂಟದ ‘ಜಗಳ’ಕ್ಕೆ ವಿಶಿಷ್ಟ ಪರಿಹಾರ ಸೂಚಿಸಿದರು. ಕೇಜ್ತಾಲ್ಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ ಗುರುವಾರ ಬೀಡ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಈ ಪರಿಹಾರವನ್ನು ಸಲಹೆ
ಮಾಡಿದರು. ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭುಗಿಲೆದ್ದಿರುವ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಶಿವಸೇನೆ ಮತ್ತು ಬಿಜೆಪಿ ಇನ್ನೂ ಬಗೆಹರಿಸಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು. "ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲು ಮಾಡಲು ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ಈ ವಿಪತ್ತುಗಳ ಬಗ್ಗೆ
ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಈ ಸಮಯದಲ್ಲಿ, ಶಿವಸೇನೆ
ಮತ್ತು ಬಿಜೆಪಿ ಮುಖ್ಯಸ್ಥರಿಗೆ ತಮ್ಮ ‘ಅಧಿಕಾರದ ಸಮಸ್ಯೆಯನ್ನು’ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು. "ಆದ್ದರಿಂದ, ಇವರ ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು" ಎಂದು ಗಡಾಲೆ ಹೇಳಿದ್ದಾರೆ. ‘ನಾನು ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆ’ ಎಂದು
ಗಡಾಲೆ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು 2019 ನವೆಂಬರ್ 1ರ ಶುಕ್ರವಾರ ಚುನಾವಣಾ ಆಯೋಗ ಘೋಷಣೆ ಮಾಡಿತು. ನವೆಂಬರ್ 30ರಿಂದ5 ಹಂತಗಳಲ್ಲಿ
ಮತದಾನ ನಡೆಯಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ. ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನವೆಂಬರ್ 30ರಿಂದ 5 ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 23ಕ್ಕೆ ಫಲಿತಾಂಶ ಬರಲಿದೆ ಎಂದು ಅವರು ಪ್ರಕಟಿಸಿದರು. ನ.30ಕ್ಕೆ ಮೊದಲ ಹಂತದ ಮತದಾನ, ಡಿ.7ರಂದು 2ನೇ ಹಂತದ ಮತದಾನ, ಡಿ.12ರಂದು 3ನೇ ಹಂತದ ಮತದಾನ, ಡಿ.16ರಂದು 4ನೇ ಹಂತದ ಮತದಾನ, ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ. ರಾಜ್ಯದಲ್ಲಿ ಈದಿನದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಅರೋರಾ ಹೇಳಿದರು. ಜಾರ್ಖಂಡ್ನ 81 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 81 ಸ್ಥಾನಗಳ ಶಾಸಕರ ಅಧಿಕಾರಾವಧಿ ಜನವರಿ 5ರಂದು ಅಂತ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ 3ನೇ ರಾಜ್ಯದ ಚುನಾವಣೆ ಇದಾಗಿದೆ. ಈ ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಜಾರ್ಖಂಡ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ
ತಿಹಾರ್ ಸೆರೆಮನೆ ಸೇರಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅನಾರೋಗ್ಯ ನೆಲೆಯಲ್ಲಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು 2019 ನವೆಂಬರ್ 01ರ ಶುಕ್ರವಾರ ಇತ್ಯರ್ಥ ಪಡಿಸಿದ ದೆಹಲಿ ಹೈಕೋರ್ಟ್ ಮಾಜಿ ಸಚಿವರಿಗೆ ಸ್ವಚ್ಛ ಪರಿಸರ, ಮಾಲಿನ್ಯ ಮುಖವಾಡ ಮತ್ತು
ಪರಿಶುದ್ಧ ನೀರು (ಮಿನರಲ್
ವಾಟರ್) ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿರುವ ಚಿದಂಬರಂ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಏಮ್ಸ್ ವೈದ್ಯಕೀಯ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು.
ಚಿದಂಬರಂ
ಅವರ ಆರೋಗ್ಯದ ಬಗ್ಗೆ ಅಭಿಪ್ರಾಯ ನೀಡಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಏಮ್ಸ್ ನಿರ್ದೇಶಕರಿಗೆ ಪೀಠವು 2019 ಅಕ್ಟೋಬರ್ 31ರ ಗುರುವಾರ ಆಜ್ಞಾಪಿಸಿತ್ತು. ಕ್ರೋನ್ಸ್
ಕಾಯಿಲೆಯು ಜೀರ್ಣಾಂಗದಲ್ಲಿ ಉರಿಯೂತ ಉಂಟುಮಾಡುವ ಕಾಯಿಲೆಯಾಗಿದ್ದು ಕಿಬ್ಬೊಟ್ಟೆಯಲ್ಲಿ ನೋವು, ಅತಿಸಾರ ಅಥವಾ ಭೇದಿ ಮತ್ತು ತೂಕನಷ್ಟಕ್ಕೆ ಕಾರಣವಾಗುತ್ತದೆ. ಹೈದರಾಬಾದ್
ಮೂಲದ ಜಠರತಜ್ಞ ನಾಗೇಶ್ವರ ರೆಡ್ಡಿ ಅವರನ್ನೂ ತಪಾಸಣೆ ನಡೆಸುವ ಏಮ್ಸ್ ವೈದ್ಯಕೀಯ
ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಹೈಕೋರ್ಟ್ ಹೇಳಿತ್ತು. ಚಿದಂಬರಂ ಅವರು ವೈದ್ಯಕೀಯ ನೆಲೆಯಲ್ಲಿ ತಮಗೆ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ತಮ್ಮ ದೇಹಸ್ಥಿತಿ ಹದಗೆಡುತ್ತಿರುವುದರಿಂದ ಸ್ವಚ್ಛ ಪರಿಸರದ ಅಗತ್ಯ ತಮಗಿದೆ. ಆದ್ದರಿಂದ ತಮ್ಮ ಕುಟುಂಬ ವೈದ್ಯರಾದ ನಾಗೇಶ್ವರ ರೆಡ್ಡಿ ಅವರಿಂದ ತಪಾಸಣೆ ಮಾಡಿಸಿಕೊಳ್ಳುವ ಸಲುವಾಗಿ ಮತ್ತು ಅವರ ಜೊತೆ ಸಮಾಲೋಚನೆಗಾಗಿ ತಮಗೆ ಆರು ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ಚಿದಂಬರಂ ಅರ್ಜಿ ಸಲ್ಲಿಸಿದ್ದರು. ರೆಡ್ಡಿಯವರು ಹೈದರಾಬಾದಿನ ಏಷ್ಯನ್ ಇನ್ ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟೆರಾಲಜಿಯ ಖ್ಯಾತ ಜಠರತಜ್ಞರಾಗಿದ್ದಾರೆ. ೨೦೧೭ರಲ್ಲಿ ತಮಗೆ ಕಂಡು ಬಂದಿದ್ದ ಕ್ರೋನ್ಸ್ ಕಾಯಿಲೆಯ ಪರಿಣಾಮವಾಗಿ ಅಕ್ಟೋಬರ್ ೫ರಿಂದ ತಮಗೆ ತೀವ್ರ ಸ್ವರೂಪದ ಸತತ ನೋವು ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕೆ ತುರ್ತಾಗಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಚಿದಂಬರಂ ಪ್ರತಿಪಾದಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ನವೆಂಬರ್ 01 (2018+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment