ನಾನು ಮೆಚ್ಚಿದ ವಾಟ್ಸಪ್

Monday, April 30, 2018

ಇಂದಿನ ಇತಿಹಾಸ History Today ಏಪ್ರಿಲ್ 29

ಇಂದಿನ ಇತಿಹಾಸ History Today ಏಪ್ರಿಲ್ 29
 2018: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಗಡುವಿಗಿಂತ ೧೨ ದಿನ ಮೊದಲೇ ಮುಂಬೈ ಇಂಡಿಯಾವು ತನ್ನ ಎಲ್ಲ ಗ್ರಾಮಗಳ ವಿದ್ಯುದೀಕರಣವನ್ನು ಮಾಡಿದೆ ಎಂದು ಸರ್ಕಾರ ತಿಳಿಸಿತು.  ಇದು ೨೦೧೮ರ ಮಹಾಚುನಾವಣೆಗೆ ಮುಂಚಿತವಾಗಿಯೇ ಪಕ್ಷಕ್ಕೆ ಭಾರಿ ಒತ್ತು ನೀಡುವ ಸಾಧ್ಯತೆಗಳಿವೆ.  ‘ಈಶಾನ್ಯ ಭಾರತದ ಅತಿದೂರದ ಸಣ್ಣ ಗ್ರಾಮವು ಏಪ್ರಿಲ್ ೨೮ರಂದು ಸಂಜೆ ವಿದ್ಯುತ್ ಜಾಲಕ್ಕೆ ಸೇರ್ಪಡೆಯಾದ ಕೊನೆಯ ಗ್ರಾಮವಾಯಿತು. ಈದಿನವು ಭಾರತದ ವಿಕಾಸ ಯಾತ್ರೆಯಲ್ಲಿ ಚಾರಿತ್ರಿಕ ದಿನವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.  ‘ನಿನ್ನೆ, ಹಲವಾರು ಭಾರತೀಯರ ಬದುಕನ್ನು ಶಾಶ್ವತವಾಗಿ ಬದಲಾಯಿಸುವಂತಹ ನಮ್ಮ ಬದ್ಧತೆಯನ್ನು ಈಡೇರಿಸಿದೆವು!’ ಎಂದು ಮೋದಿ ಟ್ವೀಟ್ ಮಾಡಿದರು. ಈ ಟ್ವೀಟಿಗೆ ಸರ್ಕಾರದ ವಿವಿಧ ಸಚಿವರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿಯಿತು.  ಸರ್ಕಾರದ ಅಂಕಿಸಂಖ್ಯೆಗಳ ಪ್ರಕಾರ ಭಾರತದ ಎಲ್ಲ ೫೯೭,೪೬೪ ಗ್ರಾಮಗಳಿಗೆ ವಿದ್ಯುದೀಕರಣವಾಗಿವೆ. ಮೋದಿಯವರು ೨೦೧೪ರಲ್ಲಿ ಅಧಿಕಾರ ವಹಿಸಿಕೊಂಡಾಗ ಸುಮಾರು ೧೮,೪೫೨ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ.

ಆದರೆ ಎಲ್ಲ ಗ್ರಾಮಗಳು ವಿದ್ಯುತ್ ಜಾಲಕ್ಕೆ ಜೋಡಣೆಗೊಂಡಿವೆ ಎಂದರೆ ಪ್ರತಿಯೊಬ್ಬರಿಗೂ ವಿದ್ಯುತ್ ಲಭಿಸಿದೆ ಎಂಬ ಅರ್ಥವಲ್ಲ.  ಗ್ರಾಮವೊಂದಕ್ಕೆ ಮೂಲಭೂತ ವಿದ್ಯುತ್ ಮೂಲಸವಲತ್ತು ಇದ್ದು, ಶೇಕಡಾ ೧೦ರಷ್ಟು ಮನೆಗಳು ಮತ್ತು ಶಾಲೆಗಳು, ಸ್ಥಳೀಯ ಆಡಳಿತಾತ್ಮಕ ಕಚೇರಿ ಮತ್ತು ಆರೋಗ್ಯಕೇಂದ್ರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ವಿದ್ಯುತ್ ಸಂಪರ್ಕವನ್ನು ಹೊಂದಿದ್ದರೆ ಸರ್ಕಾರ ಆ ಗ್ರಾಮವನ್ನು ವಿದ್ಯುದೀಕರಣಗೊಂಡಿರುವ ಗ್ರಾಮ ಎಂಬುದಾಗಿ ಪರಿಗಣಿಸುತ್ತದೆ.  ಸರ್ಕಾರದ ಪ್ರತಿಪಾದನೆಯ ಹೊರತಾಗಿಯೂ ತಮ್ಮ ಗ್ರಾಮಗಳು ಇನ್ನೂ ವಿದ್ಯುದೀಕರಣ ಗೊಳ್ಳಬೇಕಾಗಿದೆ ಎಂದು ಕೆಲವರು ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.  ‘ಇಲ್ಲ, ಪ್ರತಿಯೊಂದು ಗ್ರಾಮವೂ ಅಲ್ಲ ಎಂದು ಟ್ವಟ್ಟರ್ ಬಳಕೆದಾರ ದಿಲೀಪ್ ಗುಪ್ತ ಅವರು ಉತ್ತರ ಪ್ರದೇಶದಲ್ಲಿನ ತಮ್ಮ ಗ್ರಾಮವನ್ನು ಉಲ್ಲೇಖಿಸಿ ಬರೆದರು.  ‘ಕಳೆದ ಹಲವಾರು ವರ್ಷಗಳಿಂದ ನನ್ನ ಹುಟ್ಟೂರು ಪ್ರತಿವರ್ಷವೂ ವಿದ್ಯುತ್ ಬರುವುದು ಎಂದು ನಿರೀಕ್ಷಿಸುತ್ತಾ ಇದೆ, ಆದರೆ ಅದು ಇನ್ನೂ ಬಂದಿಲ್ಲ ಎಂದು ಗುಪ್ತ ಟ್ವೀಟಿಸಿದರು. ಏಷ್ಯಾದ ಮೂರನೇ ಬೃಹತ್ ಆರ್ಥಿಕತೆಯನ್ನು ಹೊಂದಿರುವ ಭಾರತವು ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಕೈಗಾರಿಕೆಗಳು ಮತ್ತು ಆಸ್ಪತ್ರೆಗಳು ವಿದ್ಯುತ್ ಕಡಿತಗಳ ಪರಿಣಾಮವಾಗಿ ಜನರೇಟರ್‌ಗಳನ್ನು ಅವಲಂಬಿಸಬೇಕಾಗಿದೆ.  ‘ಜಗತ್ತಿನಲ್ಲಿ ೧.೦೬ ಬಿಲಿಯನ್ (೧೦೬ ಕೋಟಿ) ಜನರು ವಿದ್ಯುತ್ತನ್ನು ಹೊಂದಿಲ್ಲ. ವಿದ್ಯುತ್ ಕೊರತೆಯ ದೇಶಗಳ ಪಟ್ಟಿಯಲ್ಲಿ ಭಾರತ ಮತ್ತು ನೈಜೀರಿಯಾ ಮೊದಲ ಸ್ಥಾನಗಳನ್ನು ಪಡೆದಿವೆ ಎಂದು ವಿಶ್ವ ಬ್ಯಾಂಕ್ ಕಳೆದ ವರ್ಷ ಪ್ರಕಟಿಸಿದ್ದ ವರದಿಯೊಂದು ಹೇಳಿತ್ತು.

2018: ನವದೆಹಲಿ: ಮೋದಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ನಿರಂತರವಾಗಿ ಕಡೆಗಣಿಸುತ್ತಿರುವುದರಿಂದ ದೇಶದಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಜನತೆಗೆ ಮನವಿ ಮಾಡಿದರು.  ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಟೀಕಾಪ್ರಹಾರ ಮಾಡಿದ ಅವರು ’ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ತಾನು ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸುವಲ್ಲಿ ವಿಫಲಗೊಂಡಿದೆ. ಈಗ ಅದು ತಾನು ಮಾಡಿದ ಕೆಲಸಗಳ ಲೆಕ್ಕಪತ್ರವನ್ನು ರಾಷ್ಟ್ರದ ಜನತೆಗೆ ನೀಡಬೇಕಾದ ಕಾಲ ಬಂದಿದೆ ಎಂದು ಹೇಳಿದರು.  ಸುರಕ್ಷತೆ ಮತ್ತು ಭದ್ರತೆಗೆ  ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ವರ್ಗಗಳ ಜನರೂ ಸಿಟ್ಟಿಗೆದ್ದಿದ್ದಾರೆ. ಉದ್ಯೋಗಾವಕಾಶಗಳು ಕಣ್ಮರೆಯಾಗುತ್ತಿವೆ ಎಂದು ಯುವಕರು ಚಿಂತಿತರಾಗಿದ್ದಾರೆ ಎಂದು ಮಾಜಿ ಪ್ರಧಾನಿ ನುಡಿದರು.  ದೇಶಾದ್ಯಂತ ನಿರಾಶಾವಾದ ಹೆಚ್ಚುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಪಸಂಖ್ಯಾತರು, ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ, ಆದರೆ ಮೋದಿ ಸರ್ಕಾರಕ್ಕೆ ಒಂದಿನಿತೂ ಚಿಂತೆ ಇದ್ದಂತಿಲ್ಲ ಎಂದು ಡಾ. ಸಿಂಗ್ ಹೇಳಿದರು.  ಮೋದಿ ಸರ್ಕಾರದ ಕಾರ್ಯಶೈಲಿಯು ಕೂಡಾ ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯನ್ನು ಉಂಟು ಮಾಡಬಲ್ಲುದು. ಕಳೆದ ಕೆಲವು ದಿನಗಳಲ್ಲಿ ಭಾರತದ ಸಂಸತ್ತಿನಲ್ಲಿ ನಡೆದುದು ರಾಷ್ಟ್ರದ ಜನತೆಯ ಕಣ್ಣ ಮುಂದಿದೆ ಎಂದು ರಾಮಲೀಲಾ ಮೈದಾನದಲ್ಲಿ ಭಾನುವಾರ ’ಜನ ಆಕ್ರೋಶ ರ್‍ಯಾಲಿಯಲ್ಲಿ ಮಾತನಾಡುತ್ತಾ ಮಾಜಿ ಪ್ರಧಾನಿ ನುಡಿದರು. ಸಂಸತ್ತಿನಲ್ಲಿ ವಿರೋಧ ಪಕ್ಷದ ’ಅವಿಶ್ವಾಸ ನಿರ್ಣಯಕ್ಕೆ ಮೋದಿ ಸರ್ಕಾರ ತಡೆ ಒಡ್ಡಿತು ಎಂದು ಆಪಾದಿಸಿದ ಮನ ಮೋಹನ್ ಸಿಂಗ್, ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಚರ್ಚೆಗೇ ಬಾರದಂತೆ ತಡೆಯಲು ಅದು ಸಾಧ್ಯವಿರುವ ಎಲ್ಲ ಸಂಚನ್ನೂ ಹೂಡಿತು ಎಂದು ಮನಮೋಹನ್ ಸಿಂಗ್ ಆಪಾದಿಸಿದರು.  ‘ಸಂಸತ್ತು ಕಾರ್ಯ ನಿರ್ವಹಿಸದೇ ಇದ್ದಲ್ಲಿ, ಅದು ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತದೆ ಎಂಬುದು ಸ್ಪಷ್ಟ. ಪ್ರಜಾತಂತ್ರವು ಸಂವಿಧಾನದ ಕೊಡುಗೆ ಮತ್ತು ನಾವೆಲ್ಲರೂ ಅದನ್ನು ಬಲಪಡಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.  ‘ಇಂದು ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸುವ ಪರಿಸರವನ್ನು ಸೃಷ್ಟಿಸಲಾಗುತ್ತಿದೆ. ನಾನು ಸಂಸತ್ತು ಕಾರ್ಯ ನಿರ್ವಹಿಸದಂತೆ ಮಾಡಿದ ರೀತಿ ಮತ್ತು ಮುಂಗಡಪತ್ರವನ್ನು ಹೇಗೆ ಅಂಗೀಕರಿಸಲಾಯಿತು ಎಂಬ ಬಗ್ಗೆ ನಾನು ಮಾತನಾಡಿದೆ. ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಎತ್ತಿಕೊಳ್ಳದಂತೆ ಮಾಡಿದ ವಿಧಾನ ॒ಇವೆಲ್ಲವೂ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯವನ್ನು ತಂದೊಡ್ಡಿವೆ ಎಂದು ಅವರು ನುಡಿದರು.  ಬ್ಯಾಂಕಿಂಗ್ ರಂಗದಲ್ಲಿ ಏನಾಯಿತು ಎಂಬುದು, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರು ಸಹಸ್ರಾರು ಕೋಟಿ ರೂಪಾಯಿ ಸಾಲ ಪಡೆದು ದೇಶದಿಂದ ಪರಾರಿಯಾದುದು ಎಲ್ಲ ಕಣ್ಣ ಮುಂದಿದೆ. ಇದು ನಮ್ಮ ಬ್ಯಾಂಕುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.  ವಿಶ್ವಾದ್ಯಂತ ಕಚ್ಚಾ ತೈಲದ ಬೆಲೆ ಕುಸಿಯುತ್ತಿದೆ. ಆದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಸಾಮಾನ್ಯ ಜನರನ್ನು ಭಾರಿ ಸಂಕಷ್ಟಕ್ಕೆ ತಳ್ಳಿರುವ ತೈಲ ಬೆಲೆಗಳನ್ನು ಇಳಿಸಲು ಈ ಸರ್ಕಾರ ಯಾಕೆ ಶ್ರಮಿಸುತ್ತಿಲ್ಲ? ಎಂದು ಮಾಜಿ ಪ್ರಧಾನಿ ಪ್ರಶ್ನಿಸಿದರು.  ರಾಷ್ಟ್ರದ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ನಾವೆಲ್ಲರೂ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಬೇಕಾದ ಕಾಲ ಬಂದಿದೆ ಎಂದು ಅವರು ಹೇಳಿದರು. ನಿರುದ್ಯೋಗದ ಬಗ್ಗೆ ಮಾತನಾಡಿದ ಮನಮೋಹನ್ ಸಿಂಗ್ ಅವರು ’ಎರಡು ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಭರವಸೆ ಕೊಟ್ಟಿದ್ದ ಮೋದಿ ಸರ್ಕಾರ ಅದನ್ನು ಈಡೇರಿಸಿಲ್ಲ, ಬದಲಿಗೆ ನಿರುದ್ಯೋಗ ಹೆಚ್ಚುತ್ತಿದೆ. ಸಾಲ ಪಡೆದ ವಿದ್ಯಾರ್ಥಿಗಳು, ಯುವಕರು ಕೆಲಸ ಇಲ್ಲದ ಪರಿಣಾಮವಾಗಿ ಚಿಂತಿತರಾಗಿದ್ದಾರೆ ಎಂದು ಹೇಳಿದರು.

2018: ವಿಶ್ವಸಂಸ್ಥೆ: ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಕಳೆದ ವರ್ಷ ವಿಧಿಸಿದ್ದ ನಿರ್ಬಂಧಗಳನ್ನು ಭಾರತವು ಉಲ್ಲಂಘಿಸಿದ್ದು, ೨.೨ ಮಿಲಿಯನ್ (೨೨ ಲಕ್ಷ) ಡಾಲರ್ ಮೌಲ್ಯದ ಲೋಹಗಳ ಆಮದು ಮತ್ತು ೫೭೮,೦೦೦ ಡಾಲರ್ ಮೌಲ್ಯದ ಚಿನ್ನಾಭರಣಗಳನ್ನು ರಫ್ತು ಮಾಡುವ ಮೂಲಕ ಕೆಲವೊಮ್ಮೆ ತನ್ನದೇ ಸರ್ಕಾರದ ಆದೇಶಗಳನ್ನೂ ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಯ ನಿರ್ಬಂಧಗಳ ಮೇಲಿನ ಕಣ್ಗಾವಲು ಸಮಿತಿ ವರದಿ ತಿಳಿಸಿತು. ಉತ್ತರ ಕೊರಿಯಾ ಜೊತೆಗಿನ ಆಮದು-ರಫ್ತನ್ನು ನಿಷೇಧಿಸಿ ಭಾರತ ಸರ್ಕಾರವು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಕಟಣೆ ಹೊರಡಿಸಿದ ಬಳಿಕವೂ ಕೆಲವು ವಸ್ತುಗಳ ಆಮದು ಮತ್ತು ರಫ್ತು ಮುಂದುವರೆದಿತ್ತು ಎಂದು ವರದಿ ಹೇಳಿತ್ತು.
ನಿರ್ಬಂಧಗಳ ಪಾಲನೆ ಮೇಲೆ ನಿಗಾ ಇರಿಸುವ ಸಲುವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಈ ತಜ್ಞರ ಸಮಿತಿಯನ್ನು ರಚಿಸಿತ್ತು. ಳೆದ ವರ್ಷ ಜನವರಿಯಿಂದ ಸೆಪ್ಟೆಂಬರದವರೆಗಿನ ಅವಧಿಯಲ್ಲಿ ಭಾರತವು ೧.೪ ಮಿಲಿಯನ್ (೧೪ ಲಕ್ಷ ) ಡಾಲರ್ ಮೌಲ್ಯದ ಕಬ್ಬಿಣ ಮತ್ತು ಉಕ್ಕು, ೨೩೪,೦೦೦ ಡಾಲರ್ ಮೌಲ್ಯದ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ೨೩೩,೦೦೦ ಡಾಲರ್ ಮೌಲ್ಯದ ತಾಮ್ರ, ಮತ್ತು ೫೨೬,೦೦೦ ಡಾಲರ್ ಮೌಲ್ಯದ ಸತುವು ಗಳನ್ನು ನಿರ್ಬಂಧಗಳನ್ನು ನಿರ್ಲಕ್ಷಿಸಿ ಆಮದು ಮಾಡಿಕೊಂಡಿದೆ ಎಂದು ಸಮಿತಿ ಹೇಳಿದೆ.
ಭಾರತವು ೫೭೮,೯೯೪ ಡಾಲರ್ ಮೌಲ್ಯದ ಚಿನ್ನಾಭರಣಗಳನ್ನು ಕೂಡಾ ಜನವರಿ ಮತ್ತು ಜೂನ್ ನಡುವಣ ಅವಧಿಯಲ್ಲಿ ರಫ್ತು ಮಾಡಿದೆ. ಇದರಲ್ಲಿ ೫೧೪,೮೨೩ ಡಾಲರ್ ಮೌಲ್ಯದ ವಜ್ರಗಳೂ ಸೇರಿವೆ ಎಂದು ವರದಿ ತಿಳಿಸಿತು. ೨೦೧೭ರ ಸೆಪ್ಟೆಂಬರ್ ೪ರ ಬಳಿಕದ ಎಲ್ಲ ರಫ್ತುಗಳು (ಉತ್ತರ ಕೊರಿಯಾದಿಂದ) ೨೩೭೧(೨೦೧೭) ನಿರ್ಣಯದ ೮ನೇ ಪ್ಯಾರಾದ ಉಲ್ಲಂಘನೆಯಾಗುತ್ತವೆ. ೨೦೧೭ರ ಸೆಪ್ಟೆಂಬರ್ ೪ಕ್ಕೆ ಮೊದಲಿನ ವ್ಯವಹಾರ ೨೩೨೧(೨೦೧೬)ರ ಪ್ಯಾರಾ ೨೬ರ ಉಲ್ಲಂಘನೆಯಾಗುತ್ತದೆ ಎಂದು ವರದಿ ತಿಳಿಸಿತು. ಉತ್ತರ ಕೊರಿಯಾದಿಂದ ರಾಷ್ಟ್ರಗಳು ಕಬ್ಬಿಣ ಮತ್ತು ಕಬ್ಬಿಣದ ಅದಿರು  ಆಮದು ಮಾಡಿಕೊಳ್ಳುವುದನ್ನು ಈ ನಿರ್ಣಯಗಳು ನಿಷೇಧಿಸಿದ್ದವು.  ೨೦೧೩ರ ನಿರ್ಣಯವು ಅತ್ಯಮೂಲ್ಯ ಮತ್ತು ಅರೆ ಅತ್ಯಮೂಲ್ಯ ಕಲ್ಲುಗಳನ್ನು ಉತ್ತರ ಕೊರಿಯಾಕ್ಕೆ ರಫ್ತು ಮಾಡುವುದನ್ನು ಬಹಿರಂಗವಾಗಿ ನಿಷೇಧಿಸಿತು.  ಉತ್ತರ ಕೊರಿಯಾ ಜೊತೆಗಿನ ಈ ವ್ಯವಹಾರಗಳಿಗೆ ವ್ಯತಿರಿಕ್ತವಾಗಿ ಭಾರತವು ಭದ್ರತಾ ಮಂಡಳಿಯ ನಿರ್ಬಂಧಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಎಂದು ಪ್ರಬಲವಾಗಿ ಬೆಂಬಲಿಸಿತ್ತು. ಕೆಲವು ಸಂದರ್ಭಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಅತ್ಯಂತ ಬಿಗಿ ಕ್ರಮಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿತ್ತು ಮತ್ತು ನಿಯಂತ್ರಣಗಳನ್ನು ವಿರೋಧಿಸುತ್ತಿದ್ದವರನ್ನು ಟೀಕಿಸಿತ್ತು.  ಭಾರತದ ವಿದೇಶ ವ್ಯವಹಾರದ ಮಹಾ ನಿರ್ದೇಶನಾಲಯವು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉತ್ತರ ಕೊರಿಯಾದಿಂದ ಕಬ್ಬಿಣ ಮತ್ತು ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುವುದರ ವಿರುದ್ಧ ನಿರ್ಬಂಧಗಳನ್ನು ವಿಧಿಸಿದ ಬಳಿಕವೂ ಕಬ್ಬಿಣದ ಆಮದು ಮುಂದುವರೆದಿತ್ತು. ನಿರ್ಬಂಧಗಳು ಸ್ಪಷ್ಟತೆ ಹೊಂದಿರದೇ ಇದ್ದುದೇ ಇದಕ್ಕೆ ಕಾರಣ ಎಂದು ಭಾರತದ ವಿಶ್ವಸಂಸ್ಥೆ ಮಿಷನ್ ನಿರ್ಬಂಧಗಳ ಸಮಿತಿಗೆ ಕಳೆದ ಜುಲೈ ತಿಂಗಳಲ್ಲಿ ಕಳುಹಿಸಿದ್ದ ಟಿಪ್ಪಣಿಯೊಂದು ತಿಳಿಸಿತು.

2018: ಇಸ್ಲಾಮಾಬಾದ್:  ಭಾರತದ ಮೇಲೆ ನಿಗಾ ಇಡುವ ಸಲುವಾಗಿ ಹಾಗೂ ವಿದೇಶಿ ಉಪಗ್ರಹಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ, ಸೇನೆ ಮತ್ತು ನಾಗರಿಕ ಉದ್ದೇಶದ  ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳನ್ನು ಆರಂಭಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದವು. ಬಾಹ್ಯಾಕಾಶ ಯೋಜನೆಗಳನ್ನು ಪಾಕಿಸ್ತಾನವು ಮುಂದಿನ ಹಣಕಾಸು ವರ್ಷದಲ್ಲಿ ಪ್ರಕಟಿಸಲಿದೆ ಎಂದು ವರದಿ ಹೇಳಿತು.  ಸೇನೆ ಹಾಗೂ ನಾಗರಿಕ ಸಂಪರ್ಕಗಳಿಗೆ ಪಾಕಿಸ್ತಾನವು ಪ್ರಸ್ತುತ ಅಮೆರಿಕ ಹಾಗೂ ಫ್ರೆಂಚ್ ಉಪಗ್ರಹಗಳನ್ನೇ ಮುಖ್ಯವಾಗಿ ಅವಲಂಬಿಸಿದ್ದು, ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಉಪಗ್ರಹ ಯೋಜನೆಗಳಿಗೆ ಚಾಲನೆ ನೀಡಲಿದೆ.   ೨೦೧೮-೧೯ನೇ ಸಾಲಿನ ಮುಂಗಡಪತ್ರದಲ್ಲಿ ಪಾಕ್ ಸರಕಾರ ಬಾಹ್ಯಾಕಾಶ ಮತ್ತು ಬಾಹ್ಯಾಂತರಿಕ್ಷ ಸಂಶೋಧನಾ ಸಂಸ್ಥೆಗೆ (Space and Upper Atmosphere Research Organisation- Suparco) ೪೭೦ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದರಲ್ಲಿ ೨೫೫ ಕೋಟಿ ಮೌಲ್ಯದ ಮೂರು ಹೊಸ ಯೋಜನೆಗಳೂ ಸೇರಿವೆ ಎಂದು ವರದಿ ತಿಳಿಸಿತು.  ‘ಸುಪಾರ್ಕೊ ೨೦೦೫ರಿಂದೀಚೆಗೆ ಪಾಕಿಸ್ತಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ವಿದ್ಯಾರ್ಥಿಗಳ ಮಧ್ಯೆ ಶಾಂತಿಯುತ ಬಳಕೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ.   ಪಾಕಿಸ್ತಾನವು ವಿವಿಧೋದ್ದೇಶ ಉಪಗ್ರಹಕ್ಕಾಗಿ (ಪಾಕ್ಸ್ಯಾಟ್-ಎಂಎಂ೧) ೧೩೫ ಕೋಟಿ ರೂ ಒದಗಿಸಿದೆ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದಿನಲ್ಲಿ ಬಾಹ್ಯಾಕಾಶ ಕೇಂದ್ರಗಳನ್ನು ಸ್ಥಾಪಿಸಲು ೧೦೦ ಕೋಟಿ ರೂ ಒದಗಿಸಲಾಗಿದೆ.   ೨೦ ಕೋಟಿ ರೂ.ಗಳ ವೆಚ್ಚದಲ್ಲಿ ಕರಾಚಿಯಲ್ಲಿ ಬಾಹ್ಯಾಕಾಶ ಅನ್ವಯಿಕ ಸಂಶೋಧನಾ ಕೇಂದ್ರ ಸ್ಥಾಪಿಸುವುದು ಮೂರನೆಯ ಮುಖ್ಯ ಯೋಜನೆ ಎಂದು ವರದಿ ತಿಳಿಸಿದೆ.  ಪಾಕ್ಸ್ಯಾಟ್-ಎಂಎಂ೧ ಒಟ್ಟು ೨೭೫.೭ ಕೋಟಿ ರೂ ವೆಚ್ಚದ್ದಾಗಿದ್ದು, ೨೬೯.೧ ಕೋಟಿ ರೂ ಬಾಹ್ಯಾಕಾಶ ಕೇಂದ್ರಗಳ ಸ್ಥಾಪನೆಗೆ ವೆಚ್ಚವಾಗಲಿದೆ ಎಂದು ವರದಿ ಹೇಳಿದೆ.

2018: ಗ್ಯಾಂಗ್ಟಕ್:  ಪಶ್ಚಿಮ ಬಂಗಾಳದ ದಿವಂಗತ ಮುಖ್ಯಮಂತ್ರಿ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿದು ಅತ್ಯಂತ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ ಚಾಮ್ಲಿಂಗ್ ಅವರು ೨೦೧೮ರ ಏಪ್ರಿಲ್ ೨೯ರ ಭಾನುವಾರ ಪಾತ್ರರಾದರು. ತನ್ಮೂಲಕ ಅವರು ಇತಿಹಾಸವನ್ನೂ ಸೃಷ್ಟಿಸಿದರು.  ಚಾಮ್ಲಿಂಗ್ ಅವರು ೨೦೧೪ರ ಮೇ ೨೧ರಂದು ಸತತದ ಐದನೇ ಬಾರಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ೨೦೧೮ರ ಏಪ್ರಿಲ್ ೨೯ರಂದು ಅವರು ಸಿಕ್ಕಿಂನ ಮುಖ್ಯಮಂತ್ರಿಯಾಗಿ ತಮ್ಮ ೮,೫೩೯ನೇ ದಿನವನ್ನು ಪೂರೈಸಿದರು. ಹಿಮಾಲಯದ ಈ ರಾಜ್ಯ ೧೯೭೫ರಲ್ಲಿ ಭಾರತದಲ್ಲಿ ವಿಲೀನಗೊಂಡಿತ್ತು.  ಜ್ಯೋತಿ ಬಸು ಅವರು ೧೯೭೭ರ ಜೂನ್ ತಿಂಗಳಿನೀಂದ ೨೦೦೦ದ ನವೆಂಬರ್‌ವರೆಗೆ ೨೩ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿ, ಸುದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ೨೦೦೦ರ ನವೆಂಬರ್ ತಿಂಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಬುದ್ದದೇವ ಭಟ್ಟಾಚಾರ್ಜಿ ಅವರಿಗೆ ವಹಿಸಿದ್ದರು.  ೧೯೯೪ರ ಡಿಸೆಂಬರ್ ೧೨ರಿಂದ ಅಧಿಕಾರದಲ್ಲಿ ಇರುವ ೬೭ರ ಹರೆಯದ ಚಾಮ್ಲಿಂಗ್ ತಮ್ಮ ಪಕ್ಷವಾದ  ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ಗೆ ೨೦೧೪ರಲ್ಲಿ ಮೂರನೇ ಎರಡರಷ್ಟು ಬಹುಮತ ತಂದು ಕೊಟ್ಟಿದ್ದರು.  ಚಾಮ್ಲಿಂಗ್ ಅವರು ತಮ್ಮ ೩೨ರ ಹರೆಯದಲ್ಲಿ ರಾಜಕೀಯ ಜೀವನ ಆರಂಭಿಸಿದ್ದರು. ೧೯೮೯ರಿಂದ ೧೯೯೨ರವರೆಗೆ ಅವರು ನರಬಹಾದುರ್ ಭಂಡಾರಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ೧೯೯೩ರಲ್ಲಿ ಅವರು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ್ನು ಸ್ಥಾಪಿಸಿದ್ದರು. ಚಾಮ್ಲಿಂಗ್ ಅವರು ನೇಪಾಳಿ ಭಾಷೆಯಲ್ಲಿ ಕವನಗಳನ್ನು ರಚಿಸಿದ್ದು ಗೀತಕಾರರೂ ಆಗಿದ್ದಾರೆ.   ‘ಮುಖ್ಯಮಂತ್ರಿಯಾಗಿ ೨೩ ವರ್ಷ ೪ ತಿಂಗಳು ೧೭ ದಿನಗಳನ್ನು ೨೦೧೮ರ ಏಪ್ರಿಲ್ ೨೯ರಂದು ಪೂರೈಸುವ ಮೂಲಕ ನಾನು ನನ್ನ ಬದ್ಧತೆಗಳನ್ನು ಪೂರೈಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ರಾಜ್ಯ ಮತ್ತು ಜನರ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಿದ್ದೇನೆ ಎಂದು ಚಾಮ್ಲಿಂಗ್ ಅವರು ಮೈಲುಗಲ್ಲು ಸ್ಥಾಪಿಸಿದ ಈ ಸಂದರ್ಭದಲ್ಲಿ ಫೇಸ್ ಬುಕ್ ಪೋಸ್ಟಿನಲ್ಲಿ ಬರೆದರು.  ‘ನಾನು ನನ್ನ ಕರ್ತವ್ಯದಿಂದ ಒಂದು ದಿನವೂ ವಿಮುಖನಾಗಲಿಲ್ಲ, ಹಲವಾರು ಬಾರಿ ನನ್ನ ವೈಯಕ್ತಿಕ ಬದ್ಧತೆಗಳನ್ನು ಬದಿಗೊತ್ತಿದ್ದೇನೆ ಎಂದೂ ಚಾಮ್ಲಿಂಗ್ ಬರೆದರು.  ಪೋಸ್ಟ್ ಜೊತೆಗೆ ಐದು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಫೋಟೋಗಳನ್ನೂ ಅವರು ಪ್ರಕಟಿಸಿದರು.


2017: ನವದೆಹಲಿ: ನವದೆಹಲಿಯಲ್ಲಿ ಬಸವ ಜಯಂತಿ ಸಮಾರಂಭ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಸವ ಸಮಿತಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದರು. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪ್ರಧಾನಿ, ಬಸವಣ್ಣನ ವಚನದ ಮೂಲಕ ತಮ್ಮ ಭಾಷಣ ಆರಂಭಿಸಿದರು. ಬಸವಣ್ಣನವರು ಸಮಾನತೆಯ ಹರಿಕಾರ ಎಂದು ಹೇಳಿದ ಮೋದಿ ಅವರು ಇಂಥಾ ಮಹಾನುಭಾವರು ಜನ್ಮ ತಾಳಿದ ದೇಶ ನಮ್ಮದು. ಇಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಮನೆ, 24 ಗಂಟೆಗಳ ಕಾಲ ವಿದ್ಯುತ್, ಯಾವುದೇ ಭೇದಭಾವವಿಲ್ಲದೆ  ಗ್ರಾಮಗಳಿಗೆ ರಸ್ತೆ ನಿರ್ಮಾಣ ಮಾಡಲಾಗಿದೆ. ಎಲ್ಲರ ಜತೆ ಎಲ್ಲರ ಅಭಿವೃದ್ಧಿ ಅಂದರೆ ಇದೇ. ಬಸವಣ್ಣನವರ ವಚನಗಳು ಕೇವಲ ಜೀವನದ ಸತ್ಯಗಳು ಮಾತ್ರ ಅಲ್ಲ, ಉತ್ತಮ ಆಡಳಿತಕ್ಕಿರುವ ಪ್ರೇರಣೆಯಾಗಿದೆ. ಲಂಡನ್ನಲ್ಲಿಯೂ ಬಸವಣ್ಣನವರ ಪ್ರತಿಮೆ ಅನಾವರಣ ಮಾಡಲು ನನಗೆ ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ ಎಂದರು.  ಭಾರತದ ಇತಿಹಾಸ ಎಂದರೆ  ಸೋಲು, ಗುಲಾಮಗಿರಿ ಮತ್ತು ಬಡತನ ಮಾತ್ರ ಇರುವ ಇತಿಹಾಸ ಅಲ್ಲ.ಭಾರತ ಇಡೀ ವಿಶ್ವಕ್ಕೆ ಮಾನವೀಯತೆ ಮತ್ತು ಅಹಿಂಸೆಯ ಸಂದೇಶ ಸಾರಿದ ದೇಶ.  ಜಗತ್ತಿನ ಮೂಲೆ ಮೂಲೆಗೂ ಬಸವಣ್ಣನವರ ವಚನಗಳನ್ನು ಪಸರಿಸಬೇಕಾಗಿದೆ.   ಅನುಭವ ಮಂಟಪದಲ್ಲಿ ವಿಚಾರ ಕ್ರಾಂತಿಯ ಹೊಸ ಕಲ್ಪನೆ ಹುಟ್ಟುಹಾಕಿದ ಮಹಾನ್ ದಾರ್ಶನಿಕ ಬಸವಣ್ಣ ಎಂದು ಮೋದಿ ಹೇಳಿದರು. ತ್ರಿವಳಿ ತಲಾಖ್ ಬಗ್ಗೆ ಪ್ರಸ್ತಾಪಿಸಿದ ಮೋದಿ, ಈಗ ಮುಸ್ಲಿಂ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನೋವುಗಳ ವಿರುದ್ಧ ಹೋರಾಡಲು ಮುಸ್ಲಿಂ ಸಮುದಾಯದಿಂದಲೇ ಜನರು ಮುಂದೆ ಬರುತ್ತಾರೆ. ಅವರ ಸಮಸ್ಯೆಗಳಿಗೆ ಅವರೇ ಪರಿಹಾರ ಕಂಡುಕೊಳ್ಳುತ್ತಾರೆ. ಇಂಥಾ ವಿಷಯಗಳನ್ನು ನೀವು ರಾಜಕೀಯದ ದೃಷ್ಟಿಯಲ್ಲಿ ನೋಡಬೇಡಿ ಎಂದರು.
2017: ಕೋಲ್ಕತ:  ರೂಪದರ್ಶಿ ಹಾಗೂ ನಟಿ ಸೋನಿಕಾ ಚೌಹಾಣ್ ಅವರು ರಾಶ್ಬೆಹಾರಿ ಬಳಿ ಮುಂಜಾನೆ 4.30 ವೇಳೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತರಾಗಿ, ನಟ ವಿಕ್ರಮ್ ಚಟರ್ಜಿ ಗಾಯಗೊಂಡರು. ನಟಿ ಸೋನಿಕಾ ಅವರು ಸ್ನೇಹಿತ ವಿಕ್ರಮ್ ಚಟರ್ಜಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವೇಳೆ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಕಾರು ಸಂಪೂರ್ಣ ಹಾನಿಗೊಳಗಾಯಿತು. ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ನಟಿ ಸೋನಿಕಾ ಹಾಗೂ ವಿಕ್ರಮ್ ಚಟರ್ಜಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ  ಸೋನಿಕಾ ಅವರು ಬೆಳಿಗ್ಗೆ 5 ಗಂಟೆ ವೇಳೆಗೆ ಸಾವನ್ನಪ್ಪಿದರು. ಗಾಯಗೊಂಡಿದ್ದ ನಟ ವಿಕ್ರಮ್ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಕೋಲ್ಕತ ಮೂಲದವರಾದ ಸೋನಿಕಾ ಅವರು ಕೆಲವು ಚಾನೆಲ್ಗಳಲ್ಲಿ ಪ್ರೈಮ್ ಟೈಮ್ ಶೋ ನಡೆಸಿಕೊಡುತ್ತಿದ್ದರುನಟ ವಿಕ್ರಮ್ ಅವರಖೋಜ್ಸಿನಿಮಾ ಹಲವು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.ಎಲರ್ ಛಾರ್ ಅಧ್ಯಾಯ್ಹಾಗೂಅಮಿ ಅರ್ ಅಮರ್ ಗರ್ಲ್ಫ್ರೆಂಡ್ಸ್ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

2017: ಸೇಲಂತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕೊಡನಾಡ್
ಎಸ್ಟೇಟ್ಬಂಗಲೆಯ ಕಾವಲುಗಾರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳು ಪ್ರತ್ಯೇಕ ರಸ್ತೆ ಅಪಘಾತಕ್ಕೆ ಈಡಾದರು. ಪೈಕಿ ಒಬ್ಬ ಶುಕ್ರವಾರ, ಏಪ್ರಿಲ್ 28ರಂದು ಮೃತನಾದ. ಮತ್ತೊಬ್ಬ ಆರೋಪಿ ಗಂಭೀರವಾಗಿ ಗಾಯಗೊಂಡ. ಪ್ರಕರಣದ ಮೊದಲ ಆರೋಪಿ ಸಿ. ಕನಕರಾಜು (36) ಶುಕ್ರವಾರ ರಾತ್ರಿ ಸೇಲಂ ಜಿಲ್ಲೆಯ ಅತ್ತೂರ್ಬಳಿ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತನಾದ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಪ್ರಕರಣದ ಎರಡನೇ ಆರೋಪಿ ಕೆ.ವಿ. ಸಾಯನ್‌ (35) ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಈದಿನ ಕನ್ನಾಡಿ ಜಂಕ್ಷನ್ಸಮೀಪ ಅಪಘಾತಕ್ಕೀಡಾಯಿತು. ಸಾಯನ್ಕುಟುಂಬ ಸಮೇತ ತ್ರಿಶೂರ್ಕಡೆಗೆ ಹೊರಟಿದ್ದ. ಕಾರಿಗೆ ಲಾರಿ ಡಿಕ್ಕಿ ಹೊಡೆದು ಸಾಯನ್ಪತ್ನಿ ಮತ್ತು ಐದು ವರ್ಷದ ಮಗಳು ಸ್ಥಳದಲ್ಲೇ ಮೃತರಾದರು. ಸಾಯನ್ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಇಬ್ಬರು ಆರೋಪಿಗಳು ರಸ್ತೆ ಅಪಘಾತಕ್ಕೆ ಈಡಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ತಮಿಳುನಾಡಿನ ಹಿರಿಯ ಪೊಲೀಸ್ಅಧಿಕಾರಿಗಳು ತಿಳಿಸಿದರು. ಏಪ್ರಿಲ್ 24ರಂದು ಆರೋಪಿಗಳು ಜಯಲಲಿತಾ ಅವರ ಕೊಡನಾಡ್ಎಸ್ಟೇಟ್ಬಂಗಲೆಗೆ ನುಗ್ಗಿ ಕಾವಲುಗಾರರಾದ ಓಂ ಬಹದ್ದೂರ್‌ (51) ಮತ್ತು ಕೃಷ್ಣ ಬಹದ್ದೂರ್‌ (37) ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ನಿವಾಸದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಓಂ ಬಹದ್ದೂರ್ಮೃತರಾಗಿದ್ದರು. ಕೃಷ್ಣ ಬಹದ್ದೂರ್ ಗಂಭೀರವಾಗಿ ಗಾಯಗೊಂಡಿದ್ದರು. ನಸುಕಿನ ವೇಳೆ ಎರಡು ವಾಹನಗಳಲ್ಲಿ ಸುಮಾರು 10 ಜನರ ಗುಂಪು ಪ್ರದೇಶ ಪ್ರವೇಶಿಸಿದ್ದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದರು.

2016: ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈದಿನ ಚಾಲನೆ ನೀಡಿದರು. “ಒಂದನೇ ಹಂತದ ನಮ್ಮ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 3ನೇ ಹಂತದ ಮೆಟ್ರೋ ಕಾಮಗಾರಿ ಯೋಜನೆ ರೂಪಿಸಲಾಗುತ್ತಿದ್ದು, ಇದಕ್ಕೆ ಕೇಂದ್ರದಿಂದ ಅನುದಾನವನ್ನು ತರಲು ಪ್ರಯತ್ನ ಮಾಡಲಾಗುತ್ತಿದೆ’ ಈ ಸಂದರ್ಭದಲ್ಲಿ ಅವರು ತಿಳಿಸಿದರು. ಮೆಟ್ರೋಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ಇದೊಂದು ಉತ್ತಮ ಯೋಜನೆಯಾಗಿದ್ದು ಬೆಂಗಳೂರಿಗರಿಗೆ ಅತ್ಯಂತ ಉಪಯುಕ್ತವಾಗಿದೆ. ಮೊಟ್ರೊದಿಂದ ಟ್ರಾಫಿಕ್, ವಾಯು ಮಾಲಿನ್ಯ ಇಂತಹ ಅನೇಕ ತಾಪತ್ರಯಗಳಿಂದ ಮುಕ್ತವಾಗಿ ಜನತೆಗೆ ಸಂಚರಿಸಲು ಸಹಕಾರಿಯಾಗಿದೆ. ಇದರ ಮುಂದುವರಿದ ಕಾಮಗಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ತಿಳಿಸಿದರು. ಬೆಂಗಳೂರಿನ ಪೂರ್ವ, ಪಶ್ಚಿಮ ಭಾಗದ ನಡುವೆ ನಮ್ಮ ಮೆಟ್ರೋ ರೈಲಿನ ಸುರಂಗ ಮಾರ್ಗಕ್ಕೆ ಈದಿನ  ಚಾಲನೆ ನೀಡಲಾಯಿತುಬೈಯಪ್ಪನ ಹಳ್ಳಿ-ಮೈಸೂರು ರಸ್ತೆ ನಡುವಿನ 18 ಕಿ.ಮೀ. ಉದ್ದ ಮೆಟ್ರೋ ಮಾರ್ಗ ಇದಾಗಿದ್ದು, ಕಬ್ಬನ್ಪಾರ್ಕ್ನಿಂದ ಸಿಟಿ ರೈಲ್ವೆ ನಿಲ್ದಾಣದವರೆಗಿನ 4.8 ಕಿ.ಮೀ. ಉದ್ದದ ಸುರಂಗ ಮಾರ್ಗ ಸೇರಿ ಮಾರ್ಗದ ಒಟ್ಟು 18 ಕಿ.ಮೀ. ದೂರವನ್ನು ಕೇವಲ ಅರ್ಧಗಂಟೆಯಲ್ಲಿ ತಲುಪಬಹುದು. ಟಿಕೆಟ್ ದರ 40 ರೂಪಾಯಿ. ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿಗೆ ಬಸ್ನಲ್ಲಿ ಪ್ರಯಾಣಿಸಲು 2 ಗಂಟೆ ಬೇಕು.

2016: ನವದೆಹಲಿ: ಪಾಕಿಸ್ತಾನದ ಲಾಹೋರ್ನಲ್ಲಿ ನಿಂತು ನೋಡಿದರೆ ವಾಘಾ ಗಡಿಯಲ್ಲಿ ಹಾರಾಡುವ ತ್ರಿವರ್ಣ ಧ್ವಜ ಕಾಣಿಸುತ್ತದೆ! ಪಂಜಾಬ್ ಅಮೃತಸರದಿಂದ ನೋಡಿದರೂ ಅಷ್ಟೇ ಸ್ಪಷ್ಟವಾಗಿ ಕಾಣಿಸುತ್ತದೆ! ಅಷ್ಟು ಎತ್ತರದ ಧ್ವಜವನ್ನು ಜನವರಿ 2017ರಲ್ಲಿ ಅಟ್ಟಾರಿ-ವಾಘಾ ಜಂಟಿ ಚೆಕ್ ಪೋಸ್ಟ್ ಸಮೀಪ ಹಾರಿಸಲು ಗಡಿ ಭದ್ರತಾ ಪಡೆ(ಬಿಎಸ್ಎಫ್) ಮುಂದಾಗಿದೆ. ಧ್ವಜ 350 ಅಡಿ ಎತ್ತರವಿರಲಿದ್ದು, ಇದು ಭಾರತದ ಅತೀ ಎತ್ತರದ ಬಾವುಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತದ ಅತೀ ಎತ್ತರದ ತ್ರಿವರ್ಣವನ್ನು ವಾಘ ಗಡಿಯಲ್ಲಿ ಹಾರಿಸಲಿದ್ದೇವೆ. ಎತ್ತರಕ್ಕೆ ತಕ್ಕಂತೆ ದೊಡ್ಡ ಧ್ವಜವನ್ನು ಹಾರಿಸುವುದರಿಂದ ಭಾರತದ ಅತ್ಯಂತ ದೊಡ್ಡ ಧ್ವಜ ಎಂಬ ಗೌರವಕ್ಕೂ ಪಾತ್ರಗೊಳ್ಳಲಿದೆ. ಮಳೆ ಮತ್ತು ರಭಸದ ಗಾಳಿಗೆ ಧೃಡವಾಗಿ ನಿಲ್ಲುವ ದಾರವನ್ನು ಬಳಸಿ ವಿಶೇಷವಾಗಿ ಧ್ವಜವನ್ನು ರೂಪಿಸಲಾಗಿವುದು. ಜತೆಗೆ ರಿಟ್ರೀಟ್ ಸೆರಮನಿಯ ಗ್ಯಾಲರಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಸಧ್ಯದ 7000 ಸೀಟುಗಳನ್ನು 20,000ಕ್ಕೆ ಏರಿಸಲಾಗುವುದು ಎಂದು ಬಿಎಸ್ಎಫ್ ಪಂಜಾಬ್ ಪ್ರಾಂತ್ಯದ ಐಜಿ ಅಶೋಕ್ ಕುಮಾರ್ ಯಾದವ್ ತಿಳಿಸಿದರು. ಸಧ್ಯ ಭಾರತದ ಅತ್ಯಂತ ಎತ್ತರದ ಬಾವುಟ ಜಾರ್ಖಂಡ್ ರಾಂಚಿಯಲ್ಲಿದೆ. ಧ್ವಜವು 66 ಅಡಿ ಎತ್ತರ, 99 ಅಡಿ ಅಗಲವಿದ್ದು, 293 ಅಡಿ ಎತ್ತರದಲ್ಲಿ ಹಾರಾಡುತ್ತದೆ.

2016: ನವದೆಹಲಿ: ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ತಮ್ಮ ಖಾತರಿಯಾದ ರೈಲು ಟಿಕೆಟ್ಗಳನ್ನು ರದ್ದು ಮಾಡಲು ತುಂಬಾ ತಲೆ ಕೆಡಿಸಿಕೊಳ್ಳಬೇಕಿಲ್ಲ. 139 ನಂಬರ್ಗೆ ಡಯಲ್ ಮಾಡಿದರೆ ಸಾಕು.
ಟಿಕೆಟ್ ರದ್ದು ಮಾಡಲು ಪ್ರಯಾಣಿಕರು 139 ನಂಬರ್ಗೆ ಡಯಲ್ ಮಾಡಿ, ಖಚಿತಗೊಂಡಿರುವ ಟಿಕೆಟ್ ವಿವರಗಳನ್ನು ರದ್ದು ಪಡಿಸಲು ನೀಡಬೇಕು. ಹೀಗೆ ವಿವರಗಳನ್ನು ನೀಡುವ ವ್ಯಕ್ತಿಗೆ ಒಂದು ಬಾರಿಯ ಪಾಸ್ವರ್ಡ್ (ಒನ್ ಟೈಮ್ ಪಾಸ್ವರ್ಡ್- ಒಟಿಪಿ) ಲಭಿಸುತ್ತದೆ. ಪ್ಯಾಸೆಂಜರ್ ರಿಸರ್ವೆಷನ್ ಕೌಂಟರ್ಗೆ ಹೋಗಿ ಅಲ್ಲಿ ಒಟಿಪಿಯನ್ನು ತಿಳಿಸಿ, ಟಿಕೆಟ್ ಕಾಯ್ದಿರಿಸಲು ಪಾವತಿ ಮಾಡಿದ ಹಣವನ್ನು ಹಿಂದಕ್ಕೆ ಪಡೆಯಬಹುದು. ಇದಲ್ಲದೆ 139 ನಂಬರನ್ನು ಐಆರ್ಸಿಟಿಸಿ ವೆಬ್ ಸೈಟ್ ಮೂಲಕವೂ ಬಳಸಿಕೊಂಡು ಖಾತರಿಯಾದ ಟಿಕೆಟ್ನ್ನು ರದ್ದು ಪಡಿಸಿಕೊಳ್ಳಬಹುದು. ಎರಡೂ ಸವಲತ್ತುಗಳು ಈದಿನದಿಂದ  ಜಾರಿಗೆ ಬಂದವು.ರೈಲ್ವೆ ಟಿಕೆಟ್ ರದ್ದು ಪಡಿಸುವಲ್ಲಿನ ತಲೆನೋವು ಕಡಿಮೆ ಮಾಡಿ ಪ್ರಯಾಣಿಕರಲ್ಲಿ ನಿರಾಳತೆ ಉಂಟು ಮಾಡುವ ದೃಷ್ಟಿಯಿಂದ ಪ್ರಯತ್ನ ಮಾಡಲಾಗಿದೆ ಎಂದು ಸೇವೆಯನ್ನು ಇಲ್ಲಿ ಉದ್ಘಾಟಿಸಿದ ಬಳಿಕ ರೈಲ್ವೆ ಸಚಿವ ಸುರೇಶ ಪ್ರಭು ಹೇಳಿದರು. 2016-17ನೇ ಸಾಲಿನ ರೈಲ್ವೆ ಮುಂಗಡಪತ್ರದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು. ಹಣ ಮರುಪಾವತಿ ನಿಯಮಗಳನ್ನು ಬದಲಾಯಿಸಿದ ಬಳಿಕ ಪ್ರಯಾಣಿಕರಿಗೆ ನಿರ್ದಿಷ್ಟ ಸಮಯದ ಒಳಗಾಗಿ ಮರುಪಾವತಿ ಕೌಂಟರ್ ತಲುಪಿ ಹಣ ಹಿಂಪಡೆದುಕೊಳ್ಳುವುದು ಕಷ್ಟವಾಗಿತ್ತು. ಕೆಲವೊಮ್ಮ ಪ್ರಯಾಣಿಕರು ಹಣ ಮರುಪಾವತಿ ಪಡೆಯಲಾಗದೆ ವಾಪಸ್ ಕೂಡಾ ಹೋಗ ಬೇಕಾಗಿ ಬರುತ್ತಿತ್ತು.
2016: ನವದೆಹಲಿ: ಕಾರ್ಮಿಕ ಸಂಘಟನೆಗಳ ಆಗ್ರಹಕ್ಕೆ ಮಣಿದಿರುವ ಕೇಂದ್ರ ಸರ್ಕಾರವು 2015-16 ಸಾಲಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.7ರಿಂದ ಶೇಕಡಾ 8.8ಕ್ಕೆ ಏರಿಸಿತು. ಸಾಮೂಹಿಕ ಉಳಿತಾಯ ಯೋಜನೆಗಳ ಮೇಲಿನ ನಿಗಾ ಸಮಿತಿಯು ಮಾಡಿದ್ದ ಶಿಫಾರಸುಗಳಿಗೆ ವ್ಯತಿರಿಕ್ತವಾಗಿ ಇಪಿಎಫ್ಗೆ ಶೇಕಡಾ 8.7 ಬಡ್ಡಿದರವನ್ನು ನೀಡಲು ವಿತ್ತ ಸಚಿವಾಲಯವು ಕೆಲದಿನಗಳ ಹಿಂದೆ ಕೈಗೊಂಡಿದ್ದ ತೀರ್ಮಾನಕ್ಕೆ ನೌಕರರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಮೊದಲು ಇಪಿಎಫ್ ಠೇವಣಿ ಹಿಂತೆಗೆದುಕೊಳ್ಳುವಾಗ ತೆರಿಗೆ ವಿಧಿಸುವ ವಿವಾದಾತ್ಮಕ ಪ್ರಸ್ತಾವ, ಇಪಿಎಫ್ಗೆ ಮಾಲೀಕರಿಂದ ಪಾವತಿಯಾಗುವ ವಂತಿಗೆ ಹಣವನ್ನು ಹಿಂತೆಗೆದುಕೊಳ್ಳುವ ವಯೋಮಿತಿಯನ್ನು 58 ವರ್ಷಗಳಿಗೆ ಏರಿಸುವ ಪ್ರಸ್ತಾವಗಳನ್ನೂ ಸರ್ಕಾರ ನೌಕರ ಸಂಘಟನೆಗಳ ವ್ಯಾಪಕ ವಿರೋಧದ ಪರಿಣಾಮವಾಗಿ ಹಿಂತೆಗೆದುಕೊಳ್ಳಬೇಕಾಗಿ ಬಂದಿತ್ತು. ಮಧ್ಯಮ ವರ್ಗ ಹಾಗೂ ನೌಕರ ವರ್ಗದ ಮೇಲಿನ ಪ್ರಹಾರ ಎಂದು ಕ್ರಮಗಳನ್ನು ಬಣ್ಣಿಸಲಾಗಿತ್ತು.
2016:ಮುಂಬೈ: ರಾಜಕೀಯ ಭ್ರಷ್ಟಾಚಾರದ ಲಾಂಛನವಾಗಿರುವ ಆದರ್ಶ ಹೌಸಿಂಗ್ ಸೊಸೈಟಿಯು ನಿರ್ಮಿಸಿದ ಮುಂಬಯಿಯ ಅಕ್ರಮ ಬಹುಮಹಡಿ ಕಟ್ಟಡವನ್ನು ಕೆಡವಬೇಕುಎಂದು ಮುಂಬೈ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿತು.  ಯೋಧರು ಮತ್ತು ಹುತಾತ್ಮ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ಮುಂಬೈಯ ಹೃದಯಭಾಗದಲ್ಲಿ ನಿರ್ಮಿಸಲಾಗಿದ್ದ 31 ಮಹಡಿಗಳ ಕಟ್ಟಡ, ಕಾಂಗ್ರೆಸ್ ಸರ್ಕಾರದ ಅವಧಿಯ ಬಹುದೊಡ್ಡ ಹಗರಣವಾಗಿದ್ದು, ಯೋಧರು, ಹುತಾತ್ಮ ಯೋಧರ ಪತ್ನಿಯರ ಬದಲಿಗೆ ಸಚಿವರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಡಿಮೆ ದರಗಳಲ್ಲಿ ಕಟ್ಟಡದ ಫ್ಲಾಟ್ಗಳನ್ನು ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಹಗರಣದ ಪರಿಣಾಮವಾಗಿ ಅಶೋಕ ಚವಾಣ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಲೆದಂಡ ತೆರಬೇಕಾಗಿ ಬಂದಿತ್ತು. 31 ಮಹಡಿಗಳ ಕಟ್ಟಡದಲ್ಲಿ ಚವಾಣ್ ಅವರ ಕನಿಷ್ಠ 3 ಮಂದಿ ಬಂಧುಗಳೂ ಫ್ಲಾಟ್ಗಳನ್ನು ಪಡೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ಕೆಲವು ತಿಂಗಳುಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರವು ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿತ್ತು. ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇತ್ತೀಚೆಗೆ ಆದರ್ಶ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ವಿರುದ್ಧ ಖಟ್ಲೆ ದಾಖಲಿಸಲು ಅನುಮತಿ ನೀಡಿದ್ದರು.

2016: ನವದೆಹಲಿ: ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಕಿರಿಯ ಮಗಳು ಕರ್ನೀಕಾ ಕುಮಾರಿ ಈದಿನ ಬೆಳಗ್ಗೆ ನಿಧನರಾದರು.
ಕರ್ನೀಕಾ ಕುಮಾರಿ ಕಳೆದ ಅನೇಕ ದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈದಿನ ಮುಂಜಾನೆ 5.15 ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ಸ್ಪಷ್ಟಪಡಿಸಿದವು.  ಕರ್ನೀಕಾ ಪಾರ್ಥಿವ ಶರೀರವನ್ನು 10.30 ವೇಳೆಗೆ ವಿಮಾನದಲ್ಲಿ ಅಹಮದಾಬಾದ್ಗೆ ತರಲಾಯಿತು. ಕರ್ನೀಕಾ ದೆಹಲಿಗೆ ವಾಪಸ್ ಆಗುವುದಕ್ಕೂ ಮೊದಲು ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿಗ್ವಿಜಯ್ ಸಿಂಗ್ ಅವರ ಮೊದಲ ಪತ್ನಿ ಆಶಾ ಅವರಿಗೆ ಓರ್ವ ಗಂಡು, ನಾಲ್ಕು ಮಂದಿ ಹೆಣ್ಣು ಮಕ್ಕಳಾಗಿದ್ದರು. ಅವರಲ್ಲಿ ಕಿರಿಯವಳು ಕರ್ನೀಕಾ ಆಗಿದ್ದರು. ಆಶಾ ಅವರು 2013ರಲ್ಲಿಯೇ ವಿಧಿವಶರಾಗಿದ್ದರು. ದಿಗ್ವಿಜಯ್ ಸಿಂಗ್ ಇತ್ತೀಚೆಗಷ್ಟೇ ಟಿವಿ ನಿರೂಪಕಿ ಅಮೃತಾ ರಾಯ್ ಜತೆ ವಿವಾಹವಾಗಿದ್ದರು.
2016: ನವದೆಹಲಿ: ಎಂಬಿಬಿಎಸ್, ಮತ್ತು ಬಿಡಿಎಸ್ ಇತ್ಯಾದಿ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಎರಡು ಹಂತಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆನೀಟ್ನಡೆಸಲು ಹಿಂದಿನ ದಿನ ಮಾಡಿದ ತನ್ನ ಆಜ್ಞೆಯನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್  ಈದಿನ ನಿರಾಕರಿಸಿ, ನಿಗದಿಯಾದ ದಿನಗಳಲ್ಲೇ ಪರೀಕ್ಷೆ ನಡೆಸುವಂತೆ ಆಜ್ಞಾಪಿಸಿತು. ‘ವಿಷಯವನ್ನು ಈದಿನವೇ ಆಲಿಸಲು ಯಾವುದೇ ಪೀಠಕ್ಕೆ ನಾವು ವಹಿಸುವುದಿಲ್ಲ. ಸಂಬಂಧಪಟ್ಟ ಕಕ್ಷಿದಾರರು ಆದೇಶ ಮರುಪರಿಶೀಲನೆ ಕೋರಿ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಸೂಕ್ತ ಕಾಲದಲ್ಲಿ ಅರ್ಜಿಯನ್ನು ಆಲಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮನವಿಗೆ ಉತ್ತರವಾಗಿ ನ್ಯಾಯಾಲಯ ತಿಳಿಸಿತು. ಎರಡು ಹಂತಗಳಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸುವ ಬಗ್ಗೆ ನೀಡಲಾದ ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಅಹವಾಲುಗಳನ್ನೂ ಆಲಿಸಬೇಕು ಎಂದೂ ಕೇಂದ್ರವು ಸುಪ್ರೀಂಕೋರ್ಟನ್ನು ಕೋರಿತ್ತು. ಎರಡು ಹಂತಗಳಲ್ಲಿನೀಟ್ನಡೆಸುವ ಸಂಬಂಧ ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳ ವಿರೋಧವನ್ನು ಗುರುವಾರ ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಮೇ 1 ರಂದು ಮೊದಲ ಹಂತ ಮತ್ತು ಜುಲೈ 24ರಂದು ಎರಡನೇ ಹಂತದ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಶುಕ್ರವಾರ ಎರಡು ಹಂತಗಳನೀಟ್ಬದಲಿಗೆ ಜುಲೈ 24ರಂದು ಒಂದೇ ದಿನನೀಟ್ನಡೆಸುವಂತೆ ಸಲಹೆ ಮಾಡಿದ್ದರುಸಿಬಿಎಸ್ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವುದಾಗಿ ಜಂಟಿ ಪ್ರಮಾಣಪತ್ರ ಸಲ್ಲಿಸಿದ ಬಳಿ ಸುಪ್ರೀಂಕೋರ್ಟ್ ಹಿಂದಿನ ದಿನ ಏಕರೂಪ ಪ್ರವೇಶ ಪರೀಕ್ಷೆಗೆ ತನ್ನ ಅಂಗೀಕಾರ ಮುದ್ರೆ ಒತ್ತಿ ಆದೇಶ ಹೊರಡಿಸಿತ್ತು. ಮೇ 1ರಂದು ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆ (ಏಐಪಿಎಂಟಿ) ನಡೆಸಲು ಸಿಬಿಎಸ್ ನಿರ್ಧರಿಸಿದ್ದು, ಅದನ್ನು ಮೊದಲ ಹಂತದ ನೀಟ್ ಆಗಿ ಮರುನಿಗದಿ ಮಾಡಲಾಗುವುದು ಎಂದು ಸಿಬಿಎಸ್ ವಕೀಲ, ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಹೇಳಿದ್ದರು. ಈಗಾಗಲೇ ಪರೀಕ್ಷೆಗಾಗಿ 6,70,000 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಬಾಕಿ ಉಳಿದಿರುವ 2,50,000 ವಿದ್ಯಾರ್ಥಿಗಳಿಗೆ ಅಗತ್ಯ ಶುಲ್ಕ ಪಾವತಿಸಿದ ಬಳಿಕ ಎರಡನೇ ಹಂತದ ನೀಟ್ಗೆ ಹಾಜರಾಗಲು ಅವಕಾಶ ಒದಗಿಸಿಕೊಡಲಾಗುವುದು ಎಂದು ಆನಂದ್ ಹೇಳಿದ್ದರು.
 2009: ವ್ಯಂಗ್ಯಚಿತ್ರಕಾರ ವಸಂತ ಹೊಸಬೆಟ್ಟು ಅವರು ಕನ್ನಡದ ದಿನ ಪತ್ರಿಕೆಯೊಂದರಲ್ಲಿ ಪ್ರತಿ ಬುಧವಾರ ಬರೆಯುವ 'ವಾರೆವ್ವಾ...' ಅಂಕಣ ಲಿಮ್ಕಾ ದಾಖಲೆ ಸೇರಿತು. ವ್ಯಂಗ್ಯ ಚಿತ್ರಗಳ ಇತಿಹಾಸ ಮತ್ತು ವ್ಯಂಗ್ಯ ಚಿತ್ರಕಾರರ ಮಾಹಿತಿ ನೀಡುವ ಈ ಅಂಕಣ 2004 ಡಿ. 1ರಿಂದ ಪ್ರತಿ ಬುಧವಾರ ನಿರಂತರವಾಗಿ ಪ್ರಕಟವಾಗುತ್ತಿದೆ. ಈ ಮಾದರಿಯ ಸುದೀರ್ಘ ಅಂಕಣ ಇನ್ನೆಲ್ಲೂ ದಾಖಲಾಗಿಲ್ಲ ಎಂದು ಲಿಮ್ಕಾ ಬುಕ್ ಮಂಡಳಿ ಶ್ಲಾಘಿಸಿತು.

2009: 'ರಾಖಿ ಕಾ ಸ್ವಯಂವರ್' ಎಂಬ ರಿಯಾಲಿಟಿ ಷೋ ಮೂಲಕ ತನ್ನ ಪ್ರಿಯಕರನನ್ನು ಆಯ್ಕೆ ಮಾಡಲು ಹೊರಟ ನಟಿ ರಾಖಿ ಸಾವಂತ್‌ಗೆ 20 ದಿನಗಳಲ್ಲಿ 12,515 ಮಂದಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಅರ್ಜಿ ರವಾನಿಸಿದ್ದನ್ನು ಈದಿನ ನವದೆಹಲಿಯಲ್ಲಿ ಬಹಿರಂಗ ಪಡಿಸಲಾಯಿತು.

2009: ದೇಶದ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ ಬುಧವಾರ 43.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತು. ಕಳೆದ 50 ವರ್ಷಗಳ ಅವಧಿಯ ಏಪ್ರಿಲ್ ತಿಂಗಳಲ್ಲಿಯೇ ಅತಿ ಹೆಚ್ಚಿನ ತಾಪಮಾನ ಇದು. ಇದಕ್ಕೂ ಮೊದಲು ಅಂದರೆ 1958ರ ಏಪ್ರಿಲ್‌ನಲ್ಲಿ ನಗರದ ಉಷ್ಣಾಂಶ 43.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಅದುವೇ ಆವರೆಗಿನ ಗರಿಷ್ಠ ಉಷ್ಣಾಂಶದ ದಾಖಲೆಯಾಗಿತ್ತು.

2009: ಮಹತ್ವದ ನಿರ್ಧಾರವೊಂದರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಟಗಾರರ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರವುಗೊಳಿಸಿತು. ಆದರೆ ಮೇ 31ರೊಳಗೆ ಐಸಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅದು ಆಟಗಾರರಿಗೆ ಸೂಚಿಸಿತು.

2009: ಭಾರತದ ಐಟಿ ಉದ್ಯಮದ ಚಟುವಟಿಕೆಗಳ ಕೇಂದ್ರ ಎಂದು ಖ್ಯಾತಿ ಗಳಿಸಿದ ಬೆಂಗಳೂರು, ಪ್ರಸ್ತುತ ದೇಶದಲ್ಲಿರುವ ಉತ್ತಮ ಜೀವನ ಮಟ್ಟದ ಮೊದಲನೇ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬದುಕಲು ಯೋಗ್ಯವಾದ ಉತ್ತಮ ಜೀವನ ಮಟ್ಟದ ನಗರಗಳ ಈ ವರ್ಷದ ವಿಶ್ವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 142ನೇ ಸ್ಥಾನ ಪಡೆಯಿತು. ನವದೆಹಲಿ 145ನೇ ಸ್ಥಾನ ಪಡೆದರೆ, ಕಳೆದ ವರ್ಷ 142ನೇ ಸ್ಥಾನದಲ್ಲಿದ್ದ ಮುಂಬೈ 148ನೇ ಸ್ಥಾನಕ್ಕಿಳಿಯಿತು. ವಿಶ್ವದ ವಿವಿಧ ನಗರಗಳ ಜೀವನ ಮಟ್ಟವನ್ನು ದಾಖಲಿಸುವ 2009ರ 'ದಿ ಕ್ವಾಲಿಟಿ ಆಫ್ ಲಿವಿಂಗ್ ರಿಪೋರ್ಟ್' ಪ್ರಕಾರ, ಮುಂಬೈ ಮೇಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಮುಂಬೈ ನಗರದ ಶ್ರೇಯಾಂಕದಲ್ಲಿ ಇಳಿಕೆಯಾಯಿತು. ಆದರೂ ದೇಶದ ಆರ್ಥಿಕ ರಾಜಧಾನಿ ಎಂಬ ಖ್ಯಾತಿಯ ಮುಂಬೈ ನಗರ, ಈ ನಗರಗಳ ಪಟ್ಟಿಯಲ್ಲಿ 152ನೇ ಸ್ಥಾನದಲ್ಲಿರುವ ಚೆನ್ನೈ ನಗರಕ್ಕಿಂತ ಮುಂದಿತ್ತು.

2009: ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹಾಗೂ ಆತನ ಸಹಚರರು ಜಲಾಂತರ್ಗಾಮಿ ನೌಕೆಗಳ ಮೂಲಕ ತಪ್ಪಿಸಿಕೊಳ್ಳುವ ಮಾಹಿತಿಯ ಬೆನ್ನುಹತ್ತಿ ತಮಿಳು ಉಗ್ರರ ಪ್ರದೇಶಗಳ ಮೇಲೆ ದಾಳಿ ನಡೆಸಿದ ಲಂಕಾ ನೌಕಾ ಪಡೆಗಳು ಎಲ್‌ಟಿಟಿಇಯ ಆರು ಹಡಗುಗಳನ್ನು ನಾಶಪಡಿಸಿ, ರೆಕ್ತಾವೈಕ್ಕಲ್ ಕೋಟೆ ಪ್ರದೇಶವನ್ನು ವಶಪಡಿಸಿಕೊಂಡವು.

2009: ಹಂದಿಜ್ವರ ಮೊದಲಿಗೆ ಪತ್ತೆಯಾದ ಮೆಕ್ಸಿಕೊ ದೇಶದಲ್ಲಿ ಮೃತರ ಸಂಖ್ಯೆ 159ಕ್ಕೆ ಏರಿತು. ಈವರೆಗೆ ದೇಶದಲ್ಲಿ 2498 ಶಂಕಿತ ಹಂದಿಜ್ವರ ಪ್ರಕರಣಗಳು ಪತ್ತೆಯಾದವು.

2009: ಎಲ್‌ಟಿಟಿಇ ನಾಯಕ ವಿ. ಪ್ರಭಾಕರನ್ ಮತ್ತು ಗುಪ್ತದಳ ಮುಖ್ಯಸ್ಥ ಪೊಟ್ಟು ಅಮ್ಮನ್ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಸಂಚು ರೂಪಿಸಿದ್ದುದಾಗಿ ಪ್ರಭಾಕರನ್ ನಿಕಟವರ್ತಿ ಮತ್ತು ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಸರ್ಕಾರದಲ್ಲಿ ರಾಷ್ಟ್ರೀಯ ಏಕೀಕರಣ ಸಚಿವರಾದ ಕರುಣಾ ಅಮ್ಮನ್ ತಿಳಿಸಿದರು. 'ಸಂಘಟನೆಯ ಯಾರೊಬ್ಬರ ಗಮನಕ್ಕೂ ತಾರದೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಇಬ್ಬರೇ ಸದ್ದಿಲ್ಲದೆ ಪಿತೂರಿ ಹೆಣೆದಿದ್ದರು. ಅಂತಹ ಪ್ರತಿಕೂಲ ಕ್ರಮಗಳನ್ನು ನಾನು ಯಾವಾಗಲೂ ವಿರೋಧಿಸುತ್ತಿದ್ದೆ' ಎಂದು 2004ರಲ್ಲಿ ಎಲ್‌ಟಿಟಿಇಯಿಂದ ಹೊರಬಂದ ಅದರ ಪೂರ್ವ ಪ್ರಾಂತ್ಯ ಕಮಾಂಡರ್ ಆಗಿದ್ದ ಕರುಣಾ ವಿವರಿಸಿದರು.

2009: ಅಮೆರಿಕದ ಪ್ರತಿಷ್ಠಿತ 'ಹೂವರ್' ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಏಷ್ಯಾದ ಪ್ರಥಮ ವ್ಯಕ್ತಿ ಕಲಾಂ.

2008: ಮಗಳನ್ನೇ 24 ವರ್ಷಗಳ ಕಾಲ ನೆಲಮಾಳಿಗೆಯಲ್ಲಿ ಸೆರೆಯಲ್ಲಿಟ್ಟು ಆಕೆಗೆ 7 ಮಕ್ಕಳನ್ನು ಕರುಣಿಸಿದ ಆಸ್ಟ್ರಿಯದ ಅಮಸ್ಟಿಟೆನ್ನಿನ ಕ್ರೂರ ತಂದೆ ಜೋಸೆಫ್ ಫ್ರಿಜ್ಜಿ (73) ಕುರಿತು ಮತ್ತಷ್ಟು ಮಾಹಿತಿಗಳು ಪತ್ತೆಯಾದವು. `ನನ್ನ ಮಗಳಿಗೆ ಜನಿಸಿದ ಮಗುವೊಂದು ಹುಟ್ಟಿದ ತತ್ ಕ್ಷಣವೇ ಸತ್ತಾಗ ಅದನ್ನು ನಾನೇ ಕೈಯಾರೆ ಸುಟ್ಟೆ' ಎಂದು ಜೋಸೆಫ್ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು. ತನ್ನ ತಂದೆಯ ಮಕ್ಕಳಿಗೇ ತಾಯಿಯಾಗಿರುವ 42ರ ಹರೆಯದ ಎಲಿಜಬೆತ್ 1984ರಿಂದ ಮನೆಯ ನೆಲಮಾಳಿಗೆಯಲ್ಲಿ ಸೆರೆಯಾಗಿದ್ದಾಳೆ. ಆಕೆಯ 7 ಮಕ್ಕಳಲ್ಲಿ ಮೂರು ಮಕ್ಕಳು ಇದುವರೆಗೂ ಬೆಳಕನ್ನೇ ಕಾಣದೇ ಸೆರೆಯಲ್ಲಿದ್ದರೆ, ಉಳಿದ ನಾಲ್ಕು ಮಕ್ಕಳಲ್ಲಿ ಒಂದು ಹುಟ್ಟಿದ ತತ್ ಕ್ಷಣವೇ ತೀರಿಕೊಂಡಿದೆ. ಇನ್ನುಳಿದ ಮೂರು ಮಕ್ಕಳು ತಂದೆ ಜೋಸೆಫ್ ಮತ್ತು ಆತನ ಪತ್ನಿ ರೋಸ್ ಮೇರಿ ಬಳಿ ಇದ್ದಾರೆ. ಎಲಿಜಬೆತ್ತಳ ಹಿರಿಯ ಮಗಳು ಉಸಿರಾಟದ ತೀವ್ರ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದಾಗ, ಅನುಮಾನಗೊಂಡ ವೈದ್ಯರು ಆಕೆಯ ಕುಟುಂಬದ ಮಾಹಿತಿ ಕೇಳಿದಾಗ ಈ ಪ್ರಕರಣ ಬಯಲಿಗೆ ಬಂದಿತು. ಜನ ನಿಬಿಡ ಸ್ಥಳದಲ್ಲಿರುವ ಆ ನೆಲಮಾಳಿಗೆಯಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಯಾರ ಗಮನಕ್ಕೂ ಬಂದಿಲ್ಲ ಎನ್ನುವುದೇ ಅಶ್ಚರ್ಯ ಎಂದು ಆಸ್ಟ್ರಿಯದ `ಡೆರ್ ಸ್ಟ್ಯಾಂಡರ್ಡ್' ಪತ್ರಿಕೆಯಲ್ಲಿ ವಿಶ್ಲೇಷಕಿ ಪೆಟ್ರಾ ಸ್ಟುಬೆರ್ ದಿಗ್ಭ್ರಮೆ ವ್ಯಕ್ತಪಡಿಸಿದರು.

2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ 1989ರಿಂದ ಚೀನಾ ಸರ್ಕಾರದ ವಿರುದ್ಧ ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ 17 ಮಂದಿಗೆ ಮೂರು ವರ್ಷ ಜೀವಾವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಲ್ಹಾಸಾದ ಜನತಾ ನ್ಯಾಯಾಲಯವು ಈದಿನ ಈ ಶಿಕ್ಷೆಯನ್ನು ಪ್ರಕಟಿಸಿದೆ ಎಂದು ಚೀನಾ ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ ಹುವಾ ವರದಿ ಮಾಡಿತು. ಕಳೆದ ಮಾರ್ಚ್ ತಿಂಗಳಲ್ಲಿ ಲ್ಹಾಸಾ ಮತ್ತು ಇತರ ಕಡೆಗಳಲ್ಲಿ ಚೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದ ಹಿಂಸಾಚಾರದಲ್ಲಿ 20 ಮಂದಿ ಸತ್ತಿದ್ದರು. ಇದಕ್ಕೆ ದಲೈ ಲಾಮ ಕಾರಣ ಎಂಬುದು ಚೀನಾ ಸರ್ಕಾರದ ಅರೋಪ. ಆದರೆ ದೇಶ ಭ್ರಷ್ಟರಾಗಿ ಭಾರತದಲ್ಲಿರುವ ದಲೈ ಲಾಮ ಈ ಆಪಾದನೆಯನ್ನು ನಿರಾಕರಿಸಿದ್ದರು.

2008: ಸುಮಾರು 26 ತಾಲಿಬಾನಿಗಳನ್ನು ಆಘ್ಘಾನಿಸ್ಥಾನದ ಮಿಲಿಟರಿ ಕಾರ್ಯಪಡೆ ಹತ್ಯೆ ಮಾಡಿತು.

2008: ಪಾಕಿಸ್ಥಾನಕ್ಕೆ ಹತ್ತಿರದಲ್ಲಿರುವ ಪೂರ್ವ ಆಘ್ಘಾನಿಸ್ಥಾನದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಕನಿಷ್ಠ 15 ಮಂದಿ ಆಘ್ಘನ್ನರು ಬಲಿಯಾಗಿ, 25ಮಂದಿ ಗಾಯಗೊಂಡರು ಎಂದು ನ್ಯಾಟೊ ನೇತೃತ್ವದ ಪಡೆಗಳ ವಕ್ತಾರ ತಿಳಿಸಿದರು.

2008: ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.

2008: ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾದ ಸರಬ್ಜಿತ್ ಸಿಂಗ್ ಅವರನ್ನು ಭೇಟಿ ಮಾಡಿದ ಕುಟುಂಬದ ಸದಸ್ಯರು ಕ್ಷಮಾದಾನ ದೊರೆಯಬಹುದೆಂಬ ಭರವಸೆಯೊಂದಿಗೆ ಭಾರತಕ್ಕೆ ವಾಪಸಾದರು. ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ಥಾನದಲ್ಲಿ ಭೇಟಿ ಮಾಡಲು ಪತ್ನಿ ಸುಖಪ್ರೀತ್ ಸಿಂಗ್, ಸಹೋದರಿ ದಲ್ಬೀರ್ ಕೌರ್ ಹಾಗೂ ಪುತ್ರಿಯರಾದ ಸ್ವಪನ್ ದೀಪ್ ಮತ್ತು ಪೂನಂ ತೆರಳಿದ್ದರು. ಸರಬ್ಜಿತ್ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ಥಾನ ಸರ್ಕಾರ ಮತ್ತೆ ಮೂರು ವಾರಗಳ ತಡೆಯಾಜ್ಞೆ ನೀಡಿದ್ದು `ಸಕಾರಾತ್ಮಕ ನಿಲುವು' ಎಂದು ಆತನ ಕುಟುಂಬ ಬಣ್ಣಿಸಿತು. 2008ರ ಏಪ್ರಿಲ್ 1ರಂದು ಸರಬ್ಜಿತ್ ನೇಣುಗಂಬಕ್ಕೇರಬೇಕಿತ್ತು. ಆದರೆ ಪಾಕ್ ಸರ್ಕಾರ ಅದನ್ನು 30 ದಿನ ಮುಂದೂಡಿತ್ತು. ಆ ಅವಧಿಯನ್ನು ಮತ್ತೆ ಮೂರು ವಾರಗಳ ಕಾಲ ಮುಂದೂಡಲಾಯಿತು.

2007: ಕಂಡು ಕೇಳರಿಯದ ನೈಜ ಗೋವಿನ ರಥೋತ್ಸವದೊಂದಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಶ್ರೀ ರಾಮಚಂದ್ರಾಪುರ ಮಠವು ಸಂಘಟಿಸಿದ್ದ 10 ದಿನಗಳ ವಿಶ್ವ ಗೋ ಸಮ್ಮೇಳನಕ್ಕೆ ಸಡಗರದ ತೆರೆ ಬಿದ್ದಿತು. ಲಕ್ಷಾಂತರ ಮಂದಿ ಸಂಭ್ರಮೋತ್ಸಾಹದೊಂದಿಗೆ ಗೋ ರಥೋತ್ಸವ ವೀಕ್ಷಿಸಿದರು. ಅಭೂತಪೂರ್ವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ಕಲಾ, ಭಜನಾ, ಸಂಕೀರ್ತನಾ ತಂಡಗಳು ಭಾಗವಹಿಸಿದ್ದವು. ಕುದುರೆ ಸಾರೋಟು, ನಾಲ್ಕು ಆನೆಗಳು, ಸಶಸ್ತ್ರ ದಳದವರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಗೋ ತುಲಾಭಾರ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆರೆಸ್ಸೆಸ್ ಸರಸಂಘ ಚಾಲಕ ಕೆ.ಸಿ. ಸುದರ್ಶನ್ ಪಾಲ್ಗೊಂಡಿದ್ದರು.

2007: ಭಾರತದ ಗೌರವ್ ಘಾಯ್ ಅವರು ಬೀಜಿಂಗಿನಲ್ಲಿ ಮುಕ್ತಾಯವಾದ ಐದು ಲಕ್ಷ ಡಾಲರ್ ಬಹುಮಾನ ಮೊತ್ತದ ಪ್ರಥಮ ಫೈನ್ ವ್ಯಾಲಿ ಬೀಜಿಂಗಿನ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು..

2007: ಉಕ್ಕು ಉದ್ಯಮ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರು ಸತತ ಮೂರನೇ ವರ್ಷ ಬ್ರಿಟಿನ್ನಿನ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಿಂದುಜಾ ಸಹೋದರರು ಮತ್ತು ಲಾರ್ಡ್ ಸ್ವರಾಜ್ ಪಾಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

2006: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ಪ್ರತಿಷ್ಠಿತ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ' ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ಸಲಹೆಗಾರ ಎನ್.ವಿ. ಜೋಶಿ ಅವರಿಗೆ ಲಭಿಸಿತು. ಇಲ್ಲಿಯವರೆಗೆ ಹಿರಿಯ ಪತ್ರಕರ್ತರಾದ ಎನ್. ಎಸ್. ಸೀತಾರಾಮ ಶಾಸ್ತ್ರಿ, ಅಮ್ಮೆಂಬಳ ಆನಂದ, ಸಿ.ಜಿ.ಕೆ.ರೆಡ್ಡಿ, ಬಾಬು ಕೃಷ್ಣಮೂರ್ತಿ, ಮಿಂಚು ಶ್ರೀನಿವಾಸ, ಎಸ್. ವಿ. ಜಯಶೀಲರಾವ್, ಎಂ.ಬಿ.ಸಿಂಗ್, ಜಿ.ನಾರಾಯಣ, ಎಸ್. ಪಟ್ಟಾಭಿರಾಮನ್, ಸಿ.ವಿ. ರಾಜಗೋಪಾಲ, ಸುರೇಂದ್ರ ದಾನಿ, ತುಮಕೂರಿನ ಪ್ರಜಾ ಪ್ರಗತಿ ಸಂಪಾದಕ ನಾಗಣ್ಣ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು.

2001: ಅಮೆರಿಕದ ಕೋಟ್ಯಧೀಶ ಡೆನ್ನಿಸ್ ಟಿಟೋ ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡರು. 60 ವರ್ಷ ವಯಸ್ಸಿನ ಇವರು ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ರಷ್ಯದ ರಾಕೆಟ್ ಮೂಲಕ 20 ದಶಲಕ್ಷ ಡಾಲರ್ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ `ಮೋಜಿನ ಹಾರಾಟ' ನಡೆಸಿದರು. 2002ರ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕದ ಮಾರ್ಕ್ ಶಟ್ಲ್ ವರ್ತ್ ಎರಡನೇ ಖಾಸಗಿ ಬಾಹ್ಯಾಕಾಶ ಪ್ರವಾಸಿ ಎಂಬ ಹೆಸರಿಗೆ ಪಾತ್ರರಾದರು.

1937: ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.

1929: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಸಿಸು ಸಂಗಮೇಶ (29-4-1929ರಿಂದ 29-5-2001) ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಸಿದ್ದರಾಮಪ್ಪ-- ಗೌರಮ್ಮ ದಂಪತಿಯ ಮಗನಾಗಿ ಜನಿಸಿದರು. ಅವರ ಮೊದಲಿನ ಹೆಸರು ಸಂಗಮೇಶ ಸಿದ್ದಾಮಪ್ಪನಗೊಂಡ. 80ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ ಮೂಲಕ ಶಿಶು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿರುವ ಸಿಸು ಸಂಗಮೇಶ ಅವರು ಇತರ ವಿಚಾರಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

1848: ಭಾರತದ ಖ್ಯಾತ ವರ್ಣಚಿತ್ರಗಾರ ರಾಜಾ ರವಿ ವರ್ಮ (1848-1912) ಜನ್ಮದಿನ.

1630: ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರು ಈದಿನ ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ ಜನಿಸಿದರು.

1236: ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬನಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತನಾದ. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.