ನಾನು ಮೆಚ್ಚಿದ ವಾಟ್ಸಪ್

Sunday, April 29, 2018

ಇಂದಿನ ಇತಿಹಾಸ History Today ಏಪ್ರಿಲ್ 28

ಇಂದಿನ ಇತಿಹಾಸ History Today ಏಪ್ರಿಲ್ 28
2018: ವುಹಾನ್ (ಚೀನಾ): ಸಂಪರ್ಕ ಬಲವರ್ಧನೆ ಮತ್ತು ಪರಸ್ಪರ ವಿಶ್ವಾಸ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಸೇನೆಗಳಿಗೆ ವ್ಯೂಹಾತ್ಮಕ ಮಾರ್ಗದರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಇಲ್ಲಿ ನಿರ್ಧರಿಸಿದರು.  ಕೇಂದ್ರ ಚೀನಾದ ವುಹಾನ್ ನಗರದಲ್ಲಿ ನಡೆದ ಎರಡು ದಿನಗಳ ಅಭೂತಪೂರ್ವ ಅನೌಪಚಾರಿಕ ಶೃಂಗ ಸಮ್ಮೇಳನದ ಸಮಾರೋಪದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಿಚಾರವನ್ನು ತಿಳಿಸಿದರು.  ಶೃಂಗಸಭೆಯಲ್ಲಿ ಉಭಯ ನಾಯಕರೂ ಭಾರತ ಮತ್ತು ಚೀನಾ ನಡುವಣ ಎಲ್ಲ ಗಡಿ ಪ್ರದೇಶಗಳಲ್ಲೂ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮಹತ್ವದ ವಿಚಾರ ಎಂದು ಒಪ್ಪಿಕೊಂಡರು ಎಂದು ಗೋಖಲೆ ಹೇಳಿದರು. ಈ ನಿಟ್ಟಿನಲ್ಲಿ ತಮ್ಮ ತಮ್ಮ ಸೇನೆಗಳಿಗೆ ಸಂಪರ್ಕ ಬಲವರ್ಧನೆ ಮತ್ತು ವಿಶ್ವಾಸ ಹಾಗೂ ಅರಿವು ಮೂಡಿಸುವ ಸಲುವಾಗಿ ಈಗಾಗಲೇ ಒಪ್ಪಿಕೊಂಡಿರುವ ವಿವಿಧ ವಿಶ್ವಾಸ ನಿರ್ಮಾಣ ಕ್ರಮಗಳನ್ನು ಜಾರಿಗೊಳಿಸಲು ಮತ್ತು ಗಡಿ ಪ್ರದೇಶಗಳ ಪರಿಸ್ಥಿತಿ ನಿಭಾವಣೆಗಾಗಿ ಮತ್ತು ಪ್ರಕ್ಷುಬ್ಧತೆ ನಿವಾರಣೆಗಾಗಿ ಹಾಲಿ ಸಾಂಸ್ಥಿಕ ವ್ಯವಸ್ಥೆಗಳನ್ನು ಬಲಪಡಿಸಲು ಉಭಯ ನಾಯಕರೂ ಒಪ್ಪಿದರು ಎಂದು ಗೋಖಲೆ ಹೇಳಿದರು.  ಹೃದಯದಿಂದ ಹೃದಯಕ್ಕೆ ಶೃಂಗ: ’ಹೃದಯದಿಂದ ಹೃದಯಕ್ಕೆ ಶೃಂಗದ ಅಂತ್ಯದಲ್ಲಿ ಈ ಮಾತುಗಳನ್ನು ಹೇಳಿದ ಗೋಖಲೆ ೨೦೧೭ರಲ್ಲಿ ಸಂಭವಿಸಿದ ೭೩ ದಿನಗಳ ಡೊಕ್ಲಾಮ್ ಬಿಕ್ಕಟ್ಟಿನಿಂದಾಗಿ ಹದಗೆಟ್ಟ ಬಾಂಧವ್ಯ, ಸುಧಾರಣೆ ಮತ್ತು ವಿಶ್ವಾಸ ಮರುನಿರ್ಮಾಣ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡೆಸಿರುವ ಮಹತ್ವದ ಪ್ರಯತ್ನ ಇದು ನುಡಿದರು.  ‘ಉಭಯ ರಾಷ್ಟ್ರಗಳೂ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಶಾಂತಿಯುತ ಮಾತುಕತೆಗಳ ಮೂಲಕ ಬಾಂಧವ್ಯದ ಒಟ್ಟಾರೆ ಪರಿಧಿಯ ಒಳಗೇ ಮತ್ತು ಪರಸ್ಪರರ ಸೂಕ್ಷ್ಮತೆ, ಕಾಳಜಿ ಮತ್ತು ಆಶಯಗಳನ್ನು ಗೌರವಿಸಿಕೊಂಡು ಇತ್ಯರ್ಥ ಪಡಿಸುವ ಪ್ರೌಢತ್ವ ಮತ್ತು ವಿವೇಕವನ್ನು ಹೊಂದಿವೆ ಎಂಬ ಅಭಿಪ್ರಾಯವನ್ನು ಉಭಯ ನಾಯಕರೂ ವ್ಯಕ್ತ ಪಡಿಸಿದರು ಎಂದು ಗೋಖಲೆ ನುಡಿದರು. ಉಭಯ ನಾಯಕರೂ ಭಯೋತ್ಪಾದನೆಯು ಸಮಾನ ಬೆದರಿಕೆ ಎಂದು ಮಾನ್ಯ ಮಾಡಿದರು ಮತ್ತು ಭಯೋತ್ಪಾದನೆ ನಿಗ್ರಹ ಕಾರ್‍ಯದಲ್ಲಿ ಸಹಕರಿಸಲು ಬದ್ಧತೆ ವ್ಯಕ್ತ ಪಡಿಸಿದು ಎಂದು ಅವರು ಹೇಳಿದರು.  ಆಫ್ಘಾನಿಸ್ಥಾನದಲ್ಲಿ ಜಂಟಿ ಆರ್ಥಿಕ ಯೋಜನೆ:  ಯುದ್ಧ ಮತ್ತು ದಾಳಿಗಳಿಂದ ನಲುಗಿದ  ಆಫ್ಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಯೋಜನೆ ಕಾರ್ಯಗತಗೊಳಿಸಲು ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ಸಮ್ಮತಿಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ನಡುವಣ ನಡೆದ ಎರಡು ದಿನಗಳ ಅನೌಪಚಾರಿಕ ಮಾತುಕತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಆಫ್ಘಾನಿಸ್ತಾನ ಹಾಗೂ ಅಲ್ಲಿನ ಜನರ ಅಭಿವೃದ್ಧಿಗಾಗಿ ಜಂಟಿ ಯೋಜನೆ ರೂಪಿಸಲು ಉಭಯ ರಾಷ್ಟ್ರಗಳು ಮುಂದಾದವು. ಮೂರನೇ ರಾಷ್ಟ್ರವೊಂದರ ಅಭಿವೃದ್ಧಿಗಾಗಿ ಭಾರತ ಮತ್ತು ಚೀನಾ ಯೋಜನೆ ರೂಪಿಸಿದ್ದು ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಏನಿದ್ದರೂ ಆರ್ಥಿಕ ಯೋಜನೆಯ ರೂಪುರೇಷೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆಫ್ಘಾನಿಸ್ತಾನದ ಹೆದ್ದಾರಿಗಳು ಹಾಗೂ ಜಲಾಶಯಗಳ ನಿರ್ಮಾಣ ಮತ್ತು ಪುನಶ್ಚೇತನ ಕಾರ್ಯಗಳಿಗಾಗಿ ಭಾರತ ಈ ಹಿಂದೆ ಕೋಟ್ಯಂತರ ಡಾಲರ್ ಸಹಕಾರ ನೀಡಿದೆ. ಚೀನಾಕ್ಕೆ ತನ್ನ ಭದ್ರತೆಯ ದೃಷ್ಟಿಯಿಂದ ಆಫ್ಘಾನ್ ಮೂಲದ ಅಲ್-ಕೈದಾ ಮತ್ತು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಗಳ ನಿಯಂತ್ರಣ ಅಗತ್ಯವಾಗಿದೆ. ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಶಾಂತಿ ಮಾತುಕತೆ ಸೇರಿ ಯಾವುದೇ ಪ್ರಕ್ರಿಯೆಯಲ್ಲಿ ನಾಯಕತ್ವ ವಹಿಸುವ ಪಾಕಿಸ್ತಾನವು ಭಾರತದ ಪಾಲ್ಗೊಳ್ಳುವಿಕೆಯನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ.  ತಾಲಿಬಾನ್ ಸಂಘಟನೆ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಸುವ ಚೀನಾ-ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ-ಅಮೆರಿಕದ ಪ್ರಯತ್ನಗಳು ಈವರೆಗೂ ಫಲಿಸಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಭಾರತ-ಚೀನಾ ಸಹಕಾರದ ಕುರಿತು ಮಾತುಕತೆ ಆಗಿದೆ. ಉಭಯ ರಾಷ್ಟ್ರಗಳ ಜನರ ನಡುವಿನ ಸಂಬಂಧ ಹಾಗೂ ಆರ್ಥಿಕ ವಲಯದ ಸಹಕಾರಗಳ ಚರ್ಚೆ ನಡೆಯಿತು. ಇದರೊಂದಿಗೆ ಕೃಷಿ, ತಂತ್ರಜ್ಞಾನ, ಇಂಧನ ಹಾಗೂ ಪ್ರವಾಸೋದ್ಯಮದ ಬಗ್ಗೆಯೂ ಮಾತನಾಡಿದೆವು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು.


2018: ನವದೆಹಲಿ: ವಿಶಿಷ್ಠ ಉಪಕ್ರಮ ಒಂದರಲ್ಲಿ ೭೭ ವರ್ಷಗಳ ದಾಲ್ಮಿಯಾ ಭಾರತ್ ಸಮೂಹವು ಐದು ವರ್ಷಗಳ ಅವಧಿಗಾಗಿ ಕೆಂಪು ಕೋಟೆಯನ್ನು ದತ್ತು ಪಡೆದುಕೊಂಡಿತು. ತನ್ಮೂಲಕ ಚಾರಿತ್ರಿಕ ಸ್ಮಾರಕವನ್ನು ದತ್ತು ಪಡೆದ ಮೊತ್ತ ಮೊದಲ ಕಾರ್ಪೋರೇಟ್ ಹೌಸ್ ಎಂಬ ಹೆಗ್ಗಳಿಕೆಗೆ ಸಮೂಹ ಪಾತ್ರವಾಯಿತು.  ಇಂಡಿಗೋ ಏರ್ ಲೈನ್ಸ್ ಮತ್ತು ಜಿಎಂಆರ್ ಸಮೂಹವನ್ನು ಪರಾಭವಗೊಳಿಸಿ ೨೫ ಕೋಟಿ ರೂಪಾಯಿಗಳ ಗುತ್ತಿಗೆಯನ್ನು ದಾಲ್ಮಿಯ ಭಾರತ್ ಸಮೂಹ ಗೆದ್ದುಕೊಂಡಿತು. ಇನ್ನು ಮುಂದಿನ ಐದು ವರ್ಷಗಳ ಅವಧಿಗೆ ಐದನೇ ಮೊಘಲ್ ದೊರೆ ಶಹಜಹಾನ್ ಕಟ್ಟಿದ ೧೭ನೇ ಶತಮಾನದ ಸ್ಮಾರಕವನ್ನು ನಿರ್ವಹಿಸುವ ಮತ್ತು ಆಕರ್ಷಕವನ್ನಾಗಿ ಮಾಡುವ ಹೊಣೆಗಾಗಿಕೆ ದಾಲ್ಮಿಯಾ ಭಾರತ್ ಸಮೂಹದ್ದಾಗಿದೆ.   ‘ಪರಂಪರೆಯನ್ನು ದತ್ತು ಪಡೆಯಿರಿ (ಅಪನೀ ಧರೋಹರ್ ಅಪ್ನಿ ಪೆಹಚಾನ್ ಪ್ರೊಜೆಕ್ಟ್) ಯೋಜನೆಗೆ ರಾಷ್ಟ್ರಪತಿಯವರು ಕಳೆದ ವರ್ಷ ಸೆಪ್ಟೆಂಬರ್ ೧೭ರಂದು ಚಾಲನೆ ನೀಡಿದ್ದರು. ಅದನ್ನು ಅನುಸರಿಸಿ ವಿವಿಧ ಕಂಪೆನಿಗಳು ಸ್ಮಾರಕವನ್ನು ದತ್ತು ಪಡೆಯಲು ಮುಂದೆ ಬಂದಿದ್ದವು. ಇದೀಗ ದಾಲ್ಮಿಯಾ ಭಾರತ್ ಸಮೂಹದ ಜೊತೆಗೆ ಏಪ್ರಿಲ್ ೨೪ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕಾಂಗ್ರೆಸ್  ತರಾಟೆ: ಚಾರಿತ್ರಿಕ ಸ್ಮಾರಕಗಳನ್ನು ದತ್ತು ನೀಡುವ ಯೋಜನೆಗಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತು. ’ಕೇಸರಿ ಪಕ್ಷವು ಮುಂದೆ ಯಾವ ಸ್ಮಾರಕವನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಿದೆ?’ ಎಂದು ಪಕ್ಷವು ಟ್ವಿಟ್ಟರಿನಲ್ಲಿ ಪ್ರಶ್ನಿಸಿತು.  ‘ಕೆಂಪುಕೋಟೆಯನ್ನು ದಾಲ್ಮಿಯಾ ಸಮೂಹಕ್ಕೆ ನೀಡಿದ ಬಳಿಕ ಯಾವ ವಿಶಿಷ್ಠ ಸ್ಥಳವನ್ನು ಬಿಜೆಪಿ ಸರ್ಕಾರವು ಖಾಸಗಿ ಸಂಸ್ಥೆಗೆ ಗುತ್ತಿಗೆಗೆ ನೀಡಲಿದೆ?’ ಎಂದು ಕಾಂಗ್ರೆಸ್ ಟ್ವೀಟ್ ಕೇಳಿತು.  ಉಪಕ್ರಮವನ್ನು ಲೇಖಕ ಹಾಗೂ ಇತಿಹಾಸಕಾರ ವಿಲಿಯಂ ದಾಲ್ರಿಂಪಲ್ ಅವರೂ ಪ್ರಶ್ನಿಸಿದರು.  ರಾಷ್ಟ್ರದ ಮಹಾನ್ ಸ್ಮಾರಕಗಳನ್ನು ಕಾರ್ಪೋರೇಟ್ ಹೌಸ್‌ಗಳಿಗೆ ಹರಾಜು ಹಾಕುವುದಕ್ಕೆ ಬದಲಾಗಿ ಅವುಗಳನ್ನು ನಿರ್ವಹಿಸುವ ಬೇರೆ ಉತ್ತಮ ಮಾರ್ಗಗಳು ಇರಬೇಕು ಎಂದು ಅವರು ಟ್ವೀಟ್ ಮಾಡಿದರು.
ಒಪ್ಪಂದದ ಪ್ರಕಾರ, ದಾಲ್ಮಿಯ ಭಾರತ್ ಸಮೂಹವು ಕೆಂಪುಕೋಟೆಯಲ್ಲಿ ಕುಡಿಯುವ ನೀರಿನ ಕಿಯೋಸ್ಕಗಳು, ಬೆಂಚುಗಳೇ ಇತ್ಯಾದಿ ರಸ್ತೆ ಪೀಠೋಪಕರಣಗಳು, ಅಂಗಡಿ ಸಂಕೇತಗಳನ್ನು ಆರು ತಿಂಗಳುಗಳ ಒಳಗಾಗಿ ಮಾಡಬೇಕು. ಬಳಿಕ ಶೌಚಾಲಯಗಳನ್ನು ಮೇಲ್ದರ್ಜೆಗೆ ಏರಿಸುವುದು, ಕೆಂಪುಕೋಟೆಯ ಪಥಗಳಿಗೆ ದೀಪಗಳ ವ್ಯವಸ್ಥೆ ಮಾಡುವುದು, ನಕ್ಷೆಗಳನ್ನು ಹಾಕುವುದು, ಲ್ಯಾಂಡ್ ಸ್ಕೇಪಿಂಗ್, ೧೦೦೦ ಚದರ ಅಡಿಗಳ ಸಂದರ್ಶಕರ ಸವಲತ್ತು ಕೇಂದ್ರ ನಿರ್ಮಾಣ, ಕೆಂಪುಕೋಟೆಯ ಒಳಾಂಗಣ, ಹೊರಾಂಗಣಗಳ ೩-ಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಅಂತಹ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಂತಹ ಕೆಫೆಟೇರಿಯಾ ಸ್ಥಾಪನೆ ಇತ್ಯಾದಿ ಕೆಲಸಗಳನ್ನು ಒಂದು ವರ್ಷದ ಒಳಗಾಗಿ ಮಾಡಬೇಕು.  ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯಗಳಿಂದ ಒಪ್ಪಿಗೆ ಪಡೆದ ಬಳಿಕ ಸಮೂಹವು ಕೆಂಪು ಕೋಟೆಯ ಸಂದರ್ಶಕರಿಗೆ ಶುಲ್ಕವನ್ನೂ ವಿಧಿಸಬಹುದು. ಯೋಜಿತ ಚಟುವಟಿಕೆಗಳಿಂದ ಬರುವ ಯಾವುದೇ ಆದಾಯವನ್ನು ಕೋಟೆಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಬೇಕು.  ದಾಲ್ಮಿಯಾ ಭಾರತ್ ಸಮೂಹದ ಕಾರ್ಯಕಾರಿ ನಿರ್ದೇಶಕ ಸಂದೀಪ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯೊಂದರಲ್ಲಿ ’ನಮಗೆ ಈ ಅವಕಾಶವನ್ನು ಕೊಟ್ಟದ್ದಕ್ಕಾಗಿ ಮತ್ತು ನಮ್ಮ ಮೇಲೆ ವಿಶ್ವಾಸ ಇರಿಸಿದ್ದಕ್ಕಾಗಿ ನಾವು ಪ್ರವಾಸೋದ್ಯಮ ಸಚಿವಾಲಯಕ್ಕೆ ಕೃತಜ್ಞರಾಗಿದ್ದೇವೆ. ನಮ್ಮ ಸಮರ್ಪಿತ ಪ್ರಯತ್ನಗಳ ಮೂಲಕ ನಾವು ಕೆಂಪುಕೋಟೆಯನ್ನು ಸವಲತ್ತುಗಳು ಮತ್ತು ಅನುಭವದ ದೃಷ್ಟಿಯಿಂದ ವಿಶ್ವದರ್ಜೆಯ ಸ್ಮಾರಕವನ್ನಾಗಿ ಮಾಡಲು ಯತ್ನಿಸುತ್ತೇವೆ. ಇಂತಹ ಪ್ರಯತ್ನಗಳು ಪ್ರವಾಸೀ ಅನುಭವವನ್ನು ವಿಸ್ತಾರಗೊಳಿಸುವ ಮೂಲಕ ರಾಷ್ಟ್ರೀಯ ಹಾಗೂ ವಿದೇಶೀ ಪ್ರವಾಸಿಗರ ಸಂಖ್ಯೆ ಹೆಚ್ಚುವಂತೆ ಮಾಡುತ್ತದೆ. ನಮ್ಮ ಪ್ರಯತ್ನಗಳ ಮೂಲಕ ನಾವು ಭಾರತದ ಪರಂಪರೆ ತಾಣಗಳನ್ನು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗುವಂತೆ ಮಾಡುತ್ತೇವೆ ಎಂದು ತಿಳಿಸಿದರು.  ದಾಲ್ಮಿಯಾ ಭಾರತ್ ಸಮೂಹವು ಆಪ್ ಆಧಾರಿತ ಬಹುಭಾಷಾ ಆಡಿಯೋ ಗೈಡ್, ಡಿಜಿಟಲ್ ಇಂಟರ್‍ಯಾಕ್ಟಿವ್ ಕಿಯೋಸ್ಕ್, ಡಿಜಿಟಲ್ (ಎಲ್ ಇಡಿ) ಸ್ಕ್ರೀನಿಂಗ್, ಉಚಿತ ವೈ-ಫೈ, ಕೆಫೆಟೇರಿಯಾ ಮತ್ತು ಸ್ಥಳೀಯ ಕಲೆ ಮತ್ತು ಕೌಶಲ್ಯ ವೃದ್ಧಿ ಮಾಡುವಂತಹ ಸೊವೆನೀರ್ ಶಾಪ್‌ಗಳನ್ನೂ ಅಭಿವೃದ್ಧಿ ಪಡಿಸಲಿದೆ. ದಿವ್ಯಾಂಗರಿಗೆ ಅನುಕೂಲವಾಗುವಂತಹ ರಾಂಪ್ ಗಳು ಮತ್ತು ಶೌಚಾಲಯಗಳನ್ನೂ ನಿರ್ಮಿಸಲಿದೆ.  ‘ಪರಂಪರೆ ತಾಣಗಳ ದತ್ತು ಯೋಜನೆಯ ಅಡಿಯಲ್ಲಿ ದೆಹಲಿಯ ಕುತುಬ್ ಮೀನಾರ್, ಜಂತರ್ ಮಂತರ್, ಪುರಾನಾ ಕಿಲಾ, ಸಪ್ಧರ್ ಜಂಗ್ ಸಮಾಧಿ ಮತ್ತು ಅಗ್ರಸೇನ್ ಕಿ ಬವೋಲಿ, ಒಡಿಶಾದ ಸೂರ್‍ಯ ದೇವಾಲಯ, ರತ್ನಗಿರಿ ಸ್ಮಾರಕಗಳು, ರಾಜರಾಣಿ ದೇವಾಲಯ, ಕರ್ನಾಟಕದ ಹಂಪಿ, ಲೆಹ್ ಅರಮನೆ, ಜಮ್ಮು ಮತ್ತು ಕಾಶ್ಮೀರದ ಸ್ಟೊಕ್ ಕಾಂಗ್ರಿ, ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರಾ ಗುಹಾಲಯಗಳು, ಕೋಚಿಯ ಮಟ್ಟಂಚೆರ್ರಿ ಪ್ಯಾಲೇಸ್, ಗಂಗೋತ್ತಿ ದೇವಾಲಯ ಮತ್ತು ಉತ್ತರಾಖಂಡದ ಗೋಮುಖವನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಈ ನಿವೇಶನಗಳನ್ನು ದತ್ತು ಸ್ವೀಕರಿಸಲು ಏಳು ಖಾಸಗಿ ಕಂಪೆನಿಗಳಿಎಗೆ ಸರ್ಕಾರವು ಕಳೆದ ವರ್ಷ ಆಶಯ ಪತ್ರಗಳನ್ನು (ಲೆಟರ್ ಆಫ್ ಇಂಟೆಂಟ್) ನೀಡಿತ್ತು.

2018: ವಯನಾಡು (ಕೇರಳ): ಕೇರಳದ ವಯನಾಡು ಜಿಲ್ಲೆಯ ಕನಿಯಂಪೆಟ್ಟ ಗ್ರಾಮಪಂಚಾಯತ್ ವ್ಯಾಪ್ತಿಯ ಬುಡಕಟ್ಟು ಜನರ ಸಮೂಹವೊಂದು ಕೀಟ ನಾಶಕ ಮುಕ್ತ ತರಕಾರಿ ವ್ಯವಸಾಯ ಮಾಡುವ ಮೂಲಕ ಯಶಸ್ವೀ ಮಾದರಿಯನ್ನು ಹಾಕಿಕೊಟ್ಟಿತು.
ಪಣಿಯ ಮತ್ತು ಮುಲ್ಲಕುರುಮ ಬುಡಕಟ್ಟು ಸಮೂಹದ ೬೪ ಕುಟುಂಬಗಳು ಉದ್ದನೆಯ ಬಳ್ಳಿ ಬೀನ್ಸ್, ಹಾಗಲಕಾಯಿ, ಟೊಮೆಟೊ, ಪಡುವಲಕಾಯಿ, ಬೆಂಡೆಕಾಯಿ, ಹಸಿ ಮೆಣಸು ಸೇರಿದಂತೆ ೧೦ ಬಗೆಯ ತರಕಾರಿಗಳನ್ನು ಕವಡೊಮ್, ಚಿಟ್ಟಲೂರು, ಕವಕ್ಕುನ್ನು ಮತ್ತು ನಡವಯಲ್ ಸಮೀಪದ ನೆಲ್ಲಿಯಂಬೊಮ್ ನಲ್ಲಿ ಬಾಡಿಗೆಗೆ ಪಡೆದ ೧೬ ಎಕರೆ ಜಾಗದಲ್ಲಿ ಕೀಟನಾಶಕಗಳನ್ನು ಬಳಸದೇ ಬೆಳೆಸಿ ಇತರರಿಗೆ ಮಾದರಿಯಾದರು.   ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯು ಜನವರಿ ತಿಂಗಳಲ್ಲಿ ಕೇಂದ್ರದ ವಿಶೇಷ ನೆರವಿನೊಂದಿಗೆ ಆರಂಭಿಸಿದ ತರಕಾರಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಈ ಉದ್ದೇಶಕ್ಕಾಗಿ ೯.೬೪ ಲಕ್ಷ ರೂಪಾಯಿಗಳನ್ನು ಒದಗಿಸಲಾಗಿತ್ತು.  ಮೂರು ಮಹಿಳಾ ಗುಂಪುಗಳು ಸೇರಿದಂತೆ ಐದು ಸ್ವ ಸಹಾಯ ಗುಂಪುಗಳನ್ನು ಯೋಜನೆಯ ಅಡಿಯಲ್ಲಿ ರಚಿಸಲಾಗಿತ್ತು. ಪ್ರತಿಯೊಂದು ಗುಂಪು ತಲಾ ೧೦ರಿಂದ ೧೪ ಸದಸ್ಯರನ್ನು ಹೊಂದಿದ್ದವು. ಭೂಮಿಯ ಬಾಡಿಗೆ, ಬೀಜಗಳು, ಸಾವಯವ ಗೊಬ್ಬರ, ನೀರಾವರಿಗೆ ಪಂಪ್ ಸೆಟ್ ಗಳು, ಕೃಷಿ ಉಪಕರಣಗಳು ಮತ್ತು ವೇತನ ಸೇರಿದಂತೆ ಎಲ್ಲ ವೆಚ್ಚವನ್ನೂ ಇಲಾಖೆಯೇ ಭರಿಸಿತ್ತು.  ‘ನಮ್ಮ ವ್ಯವಸಾಯ ವಿಧಾನಗಳು ಪಾರದರ್ಶಕವಾಗಿದ್ದುದರಿಂದ ಮತ್ತು ಯಾರು ಬೇಕಾದರೂ ವೀಕ್ಷಿಸಲು ಸಾಧ್ಯವಿದ್ದುದರಿಂದ ನಮ್ಮ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಬಂತು ’ ಎಂದು ಕವಡೊಮ್ ಪಣಿಯ ವಸತಿಯ ಬುಡಕಟ್ಟು ಮುಖ್ಯಸ್ಥ, ಸೂರ್ಯ ಸ್ವ ಸಹಾಯ ಗುಂಪಿನ ಅಧ್ಯಕ್ಷ ಕಾವಲನ್ ಹೇಳಿದರು.
ಕಡಿಮೆ ಬೆಲೆ: ಸಾವಯವ ಉತ್ಪನ್ನಗಳ ಬೆಲೆ ಹೆಚ್ಚಾಗಿದ್ದರೂ, ನಮ್ಮ ಸ್ವ ಸಹಾಯ ಗುಂಪುಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ತರಕಾರಿಗಳನ್ನು ಮಾರಲು ಸಫಲವಾದವು. ಮೊದಲು, ಸದಸ್ಯರು ತಮ್ಮ ಬೆಳೆಗಳನ್ನು ಮಧ್ಯವರ್ತಿಗಳ ಮೂಲಕ ಮಾರುತ್ತಿದ್ದರು. ಬಳಿಕ, ಕೇರಳಂ ತರಕಾರಿ ಮತ್ತು ಹಣ್ಣು ಅಭಿವೃದ್ಧಿ ಮಂಡಳಿ ಜೊತೆಗೆ ಒಪ್ಪಂದ ಮಾಡಿಕೊಂಡು ಮಧ್ಯವರ್ತಿಗಳನ್ನು ನಿವಾರಿಸಿಕೊಂಡರು ಮತ್ತು ಉತ್ತಮ ಆದಾಯ ಗಳಿಸಿದರು ಎಂದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕರ್ತ ಎ. ಮನೋಜ್ ಕುಮಾರ್ ನುಡಿದರು.   ‘ನಾವು ಸುಮಾರು ಒಂದು ಟನ್ ಉದ್ದನೆಯ ಬಳ್ಳಿ ಬೀನ್ಸನ್ನು ಕಿಲೋ ಗ್ರಾಂಗೆ ೨೨ ರೂಪಾಯಿಗಳಂತೆ ಕುಡುಂಬಶ್ರೀ ಮೂಲಕ ಮಾರಾಟ ಮಾಡಲು ಯಶಸ್ವಿಯಾದೆವು. ಇತರ ತರಕಾರಿಗಳ ಕಟಾವು ಋತು ಇನ್ನೀಗ ಆರಂಭವಾಗಲಿದೆ ಎಂದು ಆರ್‍ಯ ಸ್ವ ಸಹಾಯ ಗುಂಪಿನ ಅಧ್ಯಕ್ಷೆ ಕೆ. ಮೀನಾಕ್ಷಿ ಹೇಳಿದರು.   ‘ಸಮೀಪದ ಪಟ್ಟಣಗಳ ತರಕಾರಿ ಮಾರಾಟಗಾರರು ಕರ್ನಾಟಕದ ಗುಂಡ್ಲುಪೇಟೆಯಿಂದ ಬರುವ ತರಕಾರಿಗಳನ್ನು ಹೆಚ್ಚಿನ ದರಕ್ಕೆ ಮಾರುತ್ತಾರೆ. ನಾವು ಕೀಟನಾಶಕ ಮುಕ್ತ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತ ಶೇಕಡಾ ೨೦ರಿಂದ ೨೫ರಷ್ಟು ಕಡಿಮೆ ದರದಲ್ಲಿ ಮಾರಲು ಸಮರ್ಥರಾಗಿದ್ದೇವೆ ಎಂದು ಅವರು ನುಡಿದರು.  ಲಾಭ ನಿರೀಕ್ಷೆ: ನಾವು ಈ ಋತುವಿನಲ್ಲಿ ಯೋಜನೆಯಿಂದ ೧೫ ಲಕ್ಷ ರೂಪಾಯಿ ಲಾಭ ಗಳಿಸುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಕನಿಯಂಪೆಟ್ಟ ಗ್ರಾಮ ಪಂಚಾಯತಿನ ಬುಡಕಟ್ಟು ವಿಸ್ತರಣಾ ಅಧಿಕಾರಿ ಎನ್.ಜೆ. ರೇಜಿ ಹೇಳಿದರು.  ನಾವು ಕಳೆದ ೨ ತಿಂಗಳಲ್ಲಿ ೬೪ ಕುಟುಂಬಗಳಿಗೆ ೬೦ ಕೆಲಸದ ದಿನಗಳನ್ನು ಒದಗಿಸಲು ಸಮರ್ಥರಾಗಿದ್ದೇವೆ. ಯೋಜನೆಯಿಂದ ಲಭಿಸುವ ಲಾಭವನ್ನು ಆವರ್ತ ನಿಧಿಯಾಗಿ ಬಳಸಿ ತರಕಾರಿ ವ್ಯವಸಾಯವನ್ನು ವಿಸ್ತರಿಸಲು  ಮತ್ತು  ತನ್ಮೂಲಕ ಬುಡಕಟ್ಟು ಸದಸ್ಯರಿಗೆ ಸುಸ್ಥಿರ ಆದಾಯದ ಖಾತರಿ ನೀಡಲು ಬಳಸಲಾಗುವುದು ಎಂದು ಅವರು ವಿವರಿಸಿದರು.

2018: ನವದೆಹಲಿ: ರಾಷ್ಟ್ರದ ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಪ್ರತಿಪಾದಿಸಿರುವ ಶಿಕ್ಷಣ ಸಚಿವ ಪ್ರಕಾಶ ಜಾವಡೇಕರ್ ಮತ್ತು ಶಿಕ್ಷಣ ರಾಜ್ಯಸಚಿವ ಸತ್ಯಪಾಲ್ ಸಿಂಗ್ ಅವರು ಭವಿಷ್ಯದ ಜನಾಂಗವನ್ನು ನೈಜ ರಾಷ್ಟ್ರಭಕ್ತರನ್ನಾಗಿ ರೂಪಿಸಲು ವೇದ ಶಿಕ್ಷಣದಿಂದ ಮಾತ್ರವೇ ಸಾಧ್ಯ, ಆಧುನಿಕ ಶಿಕ್ಷಣ ಹಲವಾರು ರೀತಿಯಿಂದ ವಿಫಲವಾಗಿದೆ ಎಂದು ಇಲ್ಲಿ ಹೇಳಿದರು.  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಆಧುನಿಕ ಶಿಕ್ಷಣದ ಪಾಠಪಟ್ಟಿಯ ಕೆಲವು ಹೊರೆಯ ಭಾಗಗಳನ್ನು ಕೈಬಿಟ್ಟು ಮೌಲ್ಯ ಆಧಾರಿತ ಶಿಕ್ಷಣ ಒದಗಿಸುವ ಮಾರ್ಗಗಳ ಬಗ್ಗೆ ತಮ್ಮ ಇಲಾಖೆ ಪರಿಶೀಲಿಸುತ್ತಿದೆ ಎಂದು ಹೇಳಿದರೆ, ಶಿಕ್ಷಣ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಆಧುನಿಕ ಶಿಕ್ಷಣವು ಹೆಚ್ಚುತ್ತಿರುವ ಅಪರಾಧಗಳನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ  ಎಂದರು.  ಈ ಹಿನ್ನೆಲೆಯಲ್ಲಿ ನೂತನ ಶಿಕ್ಷಣ ನೀತಿ ರೂಪಿಸುವ ಬಗ್ಗೆ ಕೂಡಾ ಸುಳಿವು ನೀಡಿದ ಜಾವಡೇಕರ್ ನೂತನ ಶಿಕ್ಷಣ ನೀತಿಯ ಕರಡನ್ನು ತಯಾರಿಸಲಾಗುತ್ತಿದ್ದು, ಮೂರು ತಿಂಗಳುಗಳ ಒಳಗಾಗಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ನುಡಿದರು. ನೂತನ ಶಿಕ್ಷಣ ನೀತಿ ಬಗ್ಗೆ ನಾವು ಕಾರ್ಯೋನ್ಮುಖರಾಗಿದ್ದೇವೆ ಮತ್ತು ಸಲಹೆಗಳನ್ನು ಕೇಳಿದ್ದೇವೆ. ಒಂದು ತಿಂಗಳಲ್ಲಿ ಕರಡನ್ನು ನಾವು ಸಿದ್ಧ ಪಡಿಸಲಿದ್ದೇವೆ ಮತ್ತು ಮೂರು ತಿಂಗಳಲ್ಲಿ ನೀತಿಯು ಎಲ್ಲರಿಗೂ ಲಭ್ಯವಾಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಹೇಳಿದರು. ಹೆಚ್ಚುತ್ತಿರುವ ಅಪರಾಧಗಳನ್ನು ನಿಗ್ರಹಿಸುವಲ್ಲಿ ಮತ್ತು ನಮ್ಮ ಸಮಾಜದ ಅಸ್ಥಿರತೆಯನ್ನು ನಿವಾರಿಸುವಲ್ಲಿ ಆಧುನಿಕ ಶಿಕ್ಷಣ ವಿಫಲವಾಗಿದೆ. ಭಾರತದಲ್ಲಿನ ಪ್ರತಿಯೊಂದು ಮಗುವನ್ನೂ ಮೊದಲ ಐದು ವರ್ಷಗಳ ಅವಧಿಗೆ ಗುರುಕುಲಕ್ಕೆ ಕಳುಹಿಸಬೇಕು. ಕೇವಲ ವೇದ ಶಿಕ್ಷಣ ಮಾತ್ರ ನಮ್ಮ ಮಕ್ಕಳನ್ನು ವಿಕಸನಗೊಳ್ಳುವಂತೆ ಮಾಡಿ ಮಾನಸಿಕ ಶಿಸ್ತು ಹೊಂದಿದ ರಾಷ್ಟ್ರಭಕ್ತರನ್ನಾಗಿಯೂ ರೂಪಿಸಬಲ್ಲುದು ಎಂದು ಸಿಂಗ್ ನುಡಿದರು.   ಉಭಯ ಸಚಿವರೂ ಉಜ್ಜೈನಿಯಲ್ಲಿ ಶನಿವಾರ ನಡೆದ ೩ನೇ ಅಂತಾರಾಷ್ಟ್ರೀಯ ವಿರಾಟ್ ಗುರುಕುಲ ಸಮ್ಮೇಳನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾರತ ಮತ್ತು ನೇಪಾಳದ ೯೦೦ಕ್ಕೂ ಹೆಚ್ಚು ಗುರುಕುಲಗಳು  ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ಗುರುಕುಲಗಳನ್ನು ಮುಖ್ಯಪ್ರವಾಹಕ್ಕೆ ತುರುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಿವೆ.  ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಆರೆಸ್ಸೆಸ್ ಮಾತ್ರವೇ ಭಾರತೀಯರಿಗೆ ಸ್ಫೂರ್ತಿಯನ್ನು ನೀಡಬಲ್ಲುದು. ನಮ್ಮ ಬದುಕಿನಲ್ಲಿನ ಏಕೈಕ ಸ್ಫೂರ್ತಿ ಆರೆಸ್ಸೆಸ್ ಎಂದೂ ಜಾವಡೇಕರ್ ಹೇಳಿದರು.  ಸರ್ಕಾರವು ೧೧ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ’ಭಾರತ ಬೋಧ ಅಥವಾ ಭಾರತ ಬಗೆಗಿನ ಅರಿವು ಕುರಿತ ವಿಷಯವನ್ನು ಅಳವಡಿಸಲು ಯೋಜಿಸುತ್ತಿದೆ ಎಂದು ಜಾವಡೇಕರ್ ನುಡಿದರು. ಈ ವಿಷಯದ ಹಿಂದಿನ ಉದ್ದೇಶ ಹೇಗೆ ಪ್ರಾಚೀನ ಭಾರತವು ಖಗೋಳ ವಿಜ್ಞಾನ, ವಿಜ್ಞಾನ, ವೈಮಾನಿಕ ಶಾಸ್ತ್ರ ಇತ್ಯಾದಿಗಳಿಗೆ ತನ್ನ ಕಾಣಿಕೆ ನೀಡಿದೆ ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡುವುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಧ್ಯಯನ ಮಾಡಬಯಸುವ ಕುತೂಹಲಕಾರಿ ವಿಷಯ ಅದಾಗಲಿದೆ ಎಂದು ಸಚಿವರು ಹೇಳಿದರು.

2018: ಪುದುಚೇರಿ : ’ಪುದುಚೆರಿಯನ್ನು ಬಯಲು ಶೌಚ ಮತ್ತು ಕಸ ಮುಕ್ತ ಮಾಡುವವರೆಗೆ ಉಚಿತ ಅಕ್ಕಿ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಕೇಂದ್ರಾಡಳಿತ ಪ್ರದೇಶವನ್ನು ಬಯಲು ಶೌಚ, ಕಸಮುಕ್ತ ಗೊಳಿಸಲು ಮೇ ೩೧ರವರೆಗೆ ಗಡುವು ನೀಡಿ, ಹೇಳಿಕೆಗೆ ತೀವ್ರ ಟೀಕೆಗಳು ಬಂದ ಹಿನ್ನೆಲೆಯಲ್ಲ್ಲಿಕೆಲವೇ ಗಂಟೆಗಳ ಒಳಗಾಗಿ ಅದನ್ನು ಹಿಂಪಡೆದರು. ‘ಇನ್ನು ಮುಂದೆ ಉಚಿತ ಅಕ್ಕಿಯನ್ನು ಪೂರೈಸಬೇಕಾದರೆ ಸ್ಥಳೀಯಾಡಳಿತೆಗಳು ತಮ್ಮ ವ್ಯಾಪ್ತಿಯೊಳಗಿನ ಗ್ರಾಮಗಳು ಬಯಲು ಶೌಚ ಮತ್ತು ಕಸ ಮುಕ್ತವಾಗಿರುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು ಎಂದು ಕಿರಣ್ ಬೇಡಿ ಅವರು ಖಡಕ್ ಟ್ವೀಟ್ ಮಾಡಿದ್ದರು.  ಕೇಂದ್ರಾಡಳಿತ ಪ್ರದೇಶವನ್ನು ಬಯಲು ಶೌಚ ಮತ್ತು ಕಸಮುಕ್ತ ಗೊಳಿಸಲು ಮೇ ೩೧ರವರೆಗೆ ನಾಲ್ಕು ವಾರಗಳ ಗಡುವು ನೀಡಲಾಗಿದೆ ಎಂದು ಖಂಡತುಂಡವಾಗಿ ಅವರು ತಿಳಿಸಿದ್ದರು. ಪುದುಚೆರಿಯ ಅರ್ಧಕ್ಕೂ ಅಧಿಕ ಜನಸಂಖ್ಯೆಗೆ ಉಚಿತ ಅಕ್ಕಿ ಪೂರೈಕೆಯಾಗುತ್ತಿದೆ. ಆದರೆ ಪುದುಚೇರಿಯ ಗ್ರಾಮಗಳು ಇನ್ನೂ ಬಯಲು ಶೌಚ ಮತ್ತು ಕಸದಿಂದ ಮುಕ್ತವಾಗಿಲ್ಲ ಎಂದು ಕಿರಣ್ ಬೇಡಿ ತೀವ್ರ ಅತೃಪ್ತಿ ವ್ಯಕ್ತ ಪಡಿಸಿದ್ದರು.  ‘ಇನ್ನು ಮುಂದೆ ಉಚಿತ ಅಕ್ಕಿ ಪಡೆಯಲು ಸ್ಥಳೀಯಾಡಳಿತಗಳು  ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಕಡ್ಡಾಯವಾಗಿ ಬಯಲು ಶೌಚ ಮತ್ತು ಕಸ ಮುಕ್ತ ಮಾಡಬೇಕು. ಆ ಬಗ್ಗೆ ಅವು ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರವೇ ಉಚಿತ ಅಕ್ಕಿ ಪೂರೈಕೆಯನ್ನು ಮಾಡಲಾಗುವುದು ಎಂದು ಬೇಡಿ ಸ್ಪಷ್ಟ ಪಡಿಸಿದ್ದರು. ಪುದುಚೇರಿಯ ಎಲ್ಲೆಂದರಲ್ಲಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ರಾಶಿ ಬಿದ್ದಿರುವುದು ಕಂಡು ಬರುತ್ತಿವೆ ಎಂದು ಅವರು ಹೇಳಿದ್ದರು.


2017: ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಬಿಕ್ಕಟ್ಟು ಪರಿಹಾರಕ್ಕೆ ಕಾನೂನುಬದ್ಧ ಪಕ್ಷಗಳು ಮತ್ತು ಸಂಘಟನೆಗಳಜತೆಗೆ ಮಾತುಕತೆಗೆ ಸಿದ್ಧ. ಆದರೆ ಪ್ರತ್ಯೇಕತಾವಾದಿಗಳ ಜತೆಗೆ ಮಾತುಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ  ಸ್ಪಷ್ಟವಾಗಿ ತಿಳಿಸಿತು.  ಬಿಕ್ಕಟ್ಟು ನಿವಾರಣೆಗಾಗಿ ಕೇಂದ್ರ ಸರ್ಕಾರ ಮಾತುಕತೆಗೆ ಮುಂದೆ ಬರುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್ನೇತೃತ್ವದ ಪೀಠ ನಡೆಸಿತು. ಸಂದರ್ಭದಲ್ಲಿ ಅಟಾರ್ನಿ ಜನರಲ್ಮುಕುಲ್ರೋಹಟಗಿ ಅವರು ವಿಚಾರ ತಿಳಿಸಿದರು. ಪ್ರಧಾನಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಇತ್ತೀಚೆಗಷ್ಟೇ ವಿಚಾರ ಚರ್ಚಿಸಿದ್ದಾರೆ ಎಂಬುದನ್ನೂ ಅವರು ಪೀಠದ ಗಮನಕ್ಕೆ ತಂದರು. ಕಾಶ್ಮೀರ ಕಣಿವೆಯ ಬೀದಿಗಳಲ್ಲಿ ನಡೆಯುತ್ತಿರುವ ಕಲ್ಲು ತೂರಾಟ ಮತ್ತು ಹಿಂಸಾತ್ಮಕ ಪ್ರತಿಭಟನೆಗಳನ್ನು ಯಾವ ರೀತಿ ನಿಲ್ಲಿಸಬಹುದು ಎಂಬ ಸಲಹೆಗಳನ್ನು ಕೊಡಿ ಎಂದು ವಕೀಲರ ಸಂಘಕ್ಕೆ ಸುಪ್ರೀಂ ಕೋರ್ಟ್ಸೂಚಿಸಿತು. ಕಾಶ್ಮೀರದಲ್ಲಿ ಸಕಾರಾತ್ಮಕ ಕ್ರಮವೊಂದರ ಅಗತ್ಯ ಇದೆ. ಸಹಜ ಸ್ಥಿತಿಯನ್ನು ಮರಳಿ ಸ್ಥಾಪಿಸುವಲ್ಲಿ ವಕೀಲರ ಸಂಘ ಮಹತ್ವದ ಪಾತ್ರ ವಹಿಸಬಹುದು. ಹಾಗಾಗಿ ಸಹಜ ಸ್ಥಿತಿ ಸ್ಥಾಪಿಸಲು ಬೇಕಾದ ನೀಲಕ್ಷನೆಯೊಂದಿಗೆ ಬನ್ನಿ ಎಂದು ಪೀಠ ಹೇಳಿತುಪ್ರತಿಭಟನೆಗೆ ಸಂಬಂಧಿಸಿ ಎಲ್ಲರ ಪರವಾಗಿ ಭರವಸೆ ನೀಡಲು ಸಾಧ್ಯವಿಲ್ಲ ಎಂಬ ವಕೀಲರ ಸಂಘದ ಹೇಳಿಕೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಎಲ್ಲರ ಪರವಾಗಿ ಮಾತು ಕೊಡಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ ಎಂದು ತಿಳಿಸಿತು. ಪ್ರತ್ಯೇಕತಾವಾದಿಗಳಪರ ವಾದ: ಹುರಿಯತ್ಮುಖಂಡರನ್ನು ಸರ್ಕಾರ ಬಂಧಿಸಿದೆ. ಅವರ ಜತೆಗೆ ಮಾತುಕತೆಗೆ ಮುಂದಾಗುತ್ತಿಲ್ಲ ಎಂದು ವಕೀಲರ ಸಂಘವನ್ನು ಪ್ರತಿನಿಧಿಸುತ್ತಿರುವ ವಕೀಲರು ಹೇಳಿದರು. ಇದಕ್ಕೆ ರೋಹಟಗಿ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ಸಲ್ಲಿಸಿರುವ ಅರ್ಜಿ ಬೇರೆ. ವಕೀಲರು ಜೀಲಾನಿ ಮತ್ತು ಇತರ ಪ್ರತ್ಯೇಕತಾವಾದಿಗಳ ಬಗ್ಗೆ ಮಾತನಾಡುತ್ತಿದ್ದಾರೆಮುಖಂಡರ ಜತೆಆಜಾದಿಗೆ ಸಂಬಂಧಿಸಿ ಮಾತನಾಡಲು ಸರ್ಕಾರ ಸಿದ್ಧವಿಲ್ಲ ಎಂದು ಅವರು ಹೇಳಿದರು. ಪೆಲೆಟ್ಗನ್ನಿಷೇಧಕ್ಕೆಸುಪ್ರಿಂನಕಾರ: ಭದ್ರತಾ ಪಡೆಗಳು ಪೆಲೆಟ್ಗನ್ಬಳಕೆನಿಷೇಧಿಸಬೇಕು ಎಂಬುದು ವಕೀಲರ ಸಂಘದ ಒಂದು ಬೇಡಿಕೆಯಾಗಿತ್ತು. ಆದರೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ನಿರಾಕರಿಸಿತು. ಹಿಂಸಾಚಾರ ಮತ್ತು ಕಲ್ಲು ತೂರಾಟ ನಿಂತರೆ  ಕೂಡಲೇ ಪೆಲೆಟ್ಗನ್ಬಳಕೆ ನಿಲ್ಲಿಸಲು ಸೂಚಿಸಬಹುದು ಎಂದು ಪೀಠ ಹೇಳಿತು. ವಕೀಲರ ಸಂಘವೇಮುಂದೆ ನಿಂತು ಬಿಕ್ಕಟ್ಟು ನಿವಾರಣೆಗೆ ಒಂದು ಸಕಾರಾತ್ಮಕ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಿಂದಿರುಗಲಿ. ಶಿಕ್ಷಣ ಅವರನ್ನು ಸಬಲಗೊಳಿಸುತ್ತದೆ ಎಂದು ಪೀಠ ಹೇಳಿತುಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ಕೂಡ ಪೆಲೆಟ್ಗನ್ಬಳಕೆಗೆ ನಿಷೇಧ ಹೇರಲು ಕಳೆದ ವರ್ಷ ನಿರಾಕರಿಸಿತ್ತು. ಭದ್ರತಾ ಪಡೆ ವಾಪಸ್ಇಲ್ಲ: ಜಮ್ಮು ಮತ್ತು ಕಾಶ್ಮೀರದಿಂದ ಭದ್ರತಾ ಪಡೆಗಳನ್ನು ಹಿಂದಕ್ಕೆ ಪಡೆಯುವುದಕ್ಕೆ ಸಾಧ್ಯವಿಲ್ಲ. ಗಡಿ ರಾಜ್ಯದಿಂದ ಭದ್ರತಾ ಪಡೆಗಳನ್ನು ವಾಪಸ್ಕರೆಸಿಕೊಂಡರೆ ಅದು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಬಹುದು ಎಂದು ಸರ್ಕಾರ ಹೇಳಿತು
2017: ಲಖನೌ: ಜನರನ್ನು ಭೇಟಿ ಮಾಡಲು ನಿಗದಿಪಡಿಸಿದ ಸಮಯದಲ್ಲಿ  ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿದ್ದಾರೆಯೇ ಎಂದು ಪರಿಶೀಲಿಸಲು ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರು ಸ್ಥಿರ ದೂರವಾಣಿಗೆ ಕರೆ ಮಾಡಲು ಆರಂಭಿಸಿದರು. ಇದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು. ಮುಖ್ಯಮಂತ್ರಿ ಅವರು ಸ್ಥಿರ ದೂರವಾಣಿಗೆ ಕರೆ ಮಾಡಿದಾಗ ಸಂಬಂಧಪಟ್ಟ ಅಧಿಕಾರಿ ಉತ್ತರಿಸಬೇಕು. ಅವರು ಅಲ್ಲಿ ಇಲ್ಲ ಎಂದಾದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು. ಸಕಾರಣವಿಲ್ಲದೆ ಕಚೇರಿಗೆ ಗೈರಾದರೆ ಶಿಕ್ಷೆ ಎದುರಿಸಬೇಕು.
ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಯೋಗಿ ಅವರು ಅನುಸರಿಸಿದ ಹೊಸ ಕ್ರಮ ಇದು. ಪೊಲೀಸ್ ಮತ್ತು ನಾಗರಿಕ ಸೇವೆ ಅಧಿಕಾರಿಗಳು ಬೆಳಿಗ್ಗೆ 9ರಿಂದ 11 ವರೆಗೆ ಕಚೇರಿಯಲ್ಲಿ ಇದ್ದು ಜನರ ಆಹವಾಲುಗಳನ್ನು ಕೇಳಿ ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಅವರು ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದರು. ಜಿಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳು ಸಿಗುವುದಿಲ್ಲ ಎಂಬ ಅನೇಕ ದೂರುಗಳು ಬಂದಿರುವ ಕಾರಣ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದರು.  ಕರ್ತವ್ಯ ನಿರ್ವಹಿಸಲು ವಿಫಲರಾದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅವರು ನೀಡಿದರು.

2017: ನವದೆಹಲಿ: ಉತ್ತರ ಪ್ರದೇಶದ ಸರ್ಕಾರದ ಬಳಿಕ ದೆಹಲಿ ಸರ್ಕಾರವು ಶ್ರೇಷ್ಠ ವ್ಯಕ್ತಿಗಳ
ಜನ್ಮದಿನ ಹಾಗೂ ಸ್ಮರಣಾರ್ಥವಾಗಿ ನೀಡಲಾಗುತ್ತಿದ್ದ ಸಾರ್ವತ್ರಿಕ ರಜಾದಿನಗಳನ್ನು ರದ್ದು ಪಡಿಸಲು ಮುಂದಾಯಿತು. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ಸಿಸೋಡಿಯಾ ಅವರು ಬಗ್ಗೆ ತಿಳಿಸಿದರು.  ಶ್ರೇಷ್ಠ ವ್ಯಕ್ತಿಗಳ ಜನ್ಮದಿನ ಹಾಗೂ ಸ್ಮರಣಾರ್ಥವಾಗಿ ನೀಡಲಾಗುತ್ತಿದ್ದ ಸಾರ್ವತ್ರಿಕ ರಜಾದಿನವನ್ನು ರದ್ದುಪಡಿಸಲಾಗುವುದು ಎಂದು ಸಿಸೋಡಿಯಾ ಟ್ವೀಟ್ ಮಾಡಿದರು. ಕೆಲವು ರಾಜ್ಯಗಳ ಉತ್ತಮ ನಿರ್ಧಾರಗಳನ್ನು ಅಳವಡಿಸಿ ಕೊಳ್ಳುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಸಿಸೋಡಿಯಾ ಟ್ವೀಟ್ಮಾಡಿದರು.
2016: ಚೆನ್ನೈ: ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 7ನೇ ಮತ್ತು ಅಂತಿಮ ಉಪಗ್ರಹ ಐಆರ್ಎನ್ಎಸ್ಎಸ್-1ಜಿ ಯನ್ನು ಈದಿನ ಮಧ್ಯಾಹ್ನ 12.50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿತು. 1,425 ಕೆ.ಜಿ. ತೂಕದ ಐಆರ್ಎನ್ಎಸ್ಎಸ್-1ಜಿ ಉಪಗ್ರಹವನ್ನು ಪಿಎಸ್ಎಲ್ವಿ-ಸಿ33 ರಾಕೆಟ್ ಉಪಗ್ರಹವನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕೊಂಡೊಯ್ದಿತು.
ಉಪಗ್ರಹ ಯಶಸ್ವಿಯಾಗಿ ಕಕ್ಷೆ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಉಪಗ್ರಹ ಈಗಾಗಲೇ ಉಡಾಯಿಸಲಾಗಿರುವ ಐಆರ್ಎನ್ಎಸ್ಎಸ್ 1, 1ಬಿ, 1ಸಿ, 1ಡಿ, 1 ಮತ್ತು 1ಎಫ್ ಉಪಗ್ರಹಗಳೊಂದಿಗೆ ಕಾರ್ಯ ನಿರ್ವಹಿಸಲಿದೆಐಆರ್ಎನ್ಎಸ್ಎಸ್ 1 ಉಪಗ್ರಹವನ್ನು 2013 ಜುಲೈ 1ರಂದು, 1ಬಿಯನ್ನು 2014 ಏಪ್ರಿಲ್ 4ರಂದು, 1ಸಿ ಉಪಗ್ರಹವನ್ನು 2014 ಅಕ್ಟೋಬರ್ 16 ರಂದು, 1 ಡಿ ಉಪಗ್ರಹವನ್ನು 2015 ಮಾರ್ಚ್ 28ರಂದು ಹಾಗೂ 1 ಉಪಗ್ರಹವನ್ನು ಜನವರಿ 20ರಂದು ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಮತ್ತು ಮಾರ್ಚ್ 10ರಂದು 1 ಎಫ್ ಉಪಗ್ರಹವನ್ನು ಉಡಾಯಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಉಪಗ್ರಹ ಉಡಾವಣೆಯನ್ನು ವೀಕ್ಷಿಸಿದರು ಮತ್ತು ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಿದ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಿದರು.

2016: ಬೆಂಗಳೂರು: ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಅವರು ಅಲ್ಪಕಾಲದ ಅಸ್ವಸ್ಥತೆ ಕಾರಣ ಈದಿನ ಖಾಸಗಿ
ಆಸ್ಪತ್ರೆಯಲ್ಲಿ ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ  ನಗರದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸಂಜೆ  ವಿಧಿವಶರಾದರು. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಸಂಪೆಮನೆ ಜಯಶೀಲರಾವ್ ಅವರು ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಜಾವಾಣಿಯಲ್ಲಿ ವರದಿಗಾರ, ಮುಖ್ಯವರದಿಗಾರಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ  ವಿಧಾನಮಂಡಲ ಕಲಾಪ ವರದಿಗಳನ್ನು ಅತ್ಯಂತ ಸೊಗಸಾಗಿ ವರದಿ ಮಾಡುವ ಕಲೆ ಕರಗತವಾಗಿತ್ತು. ಸಂಯುಕ್ತ ಕರ್ನಾಟಕದ ಜಂಟಿ ಸಂಪಾದಕರಾಗಿ,  ಮುಂಜಾನೆ ಪತ್ರಿಕೆಯ  ಸಂಪಾದಕರಾಗಿ, ಪ್ರಜಾವಾಣಿಯ ಸಲಹೆಗಾರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಎಚ್‌.ಡಿ. ದೇವೇಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿ ಜಯಶೀಲ ರಾವ್ ಕೆಲಸ ಮಾಡಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.


 2016: ನವದೆಹಲಿ: ಕೋಟ್ಯಂತರ ಡಾಲರ್ ಸಾಲಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಮದ್ಯ ಉದ್ಯಮಿ ವಿಜಯ್
ಮಲ್ಯ ಅವರನ್ನು ಗಡೀಪಾರು ಮಾಡಬೇಕು ಎಂದು ಭಾರತ ಸರ್ಕಾರವು ಇಂಗ್ಲೆಂಡ್ಗೆ ಔಪಚಾರಿಕ ಮನವಿ ಸಲ್ಲಿಸಿತು. ಮಲ್ಯ ಅವರು ಮಾರ್ಚ್ 2ರಂದು ಲಂಡನ್ಗೆ ಹಾರಿದ್ದು, ವಿಚಾರಣೆಗಾಗಿ ಮತ್ತು ಬ್ಯಾಂಕುಗಳಿಗೆ ಆಗಮಿಸುವಂತೆ ನೀಡಲಾದ ಎಲ್ಲಾ ಆದೇಶಗಳನ್ನು ನಿರ್ಲಕ್ಷಿಸಿದ್ದರು. 60 ಹರೆಯದ ಮಲ್ಯ ಅವರು 2003ರಲ್ಲಿ ಭಾರತೀಯರಿಗೆ ನ್ಯಾಯೋಚಿತ ದರದಲ್ಲಿ ಐಷಾರಾಮಿ ಪಯಣದ ಸವಲತ್ತು ಕಲ್ಪಿಸುವುದಾಗಿ ಹೇಳಿ ಕಿಂಗ್ಫಿಷರ್ ಏರ್ಲೈನ್ಸ್ ಆರಂಭಿಸಿದ್ದರು. 2012 ವೇಳೆಗೆ ಆರ್ಥಿಕ ನಷ್ಟದಿಂದ ಏರ್ಲೈನ್ಸ್ ಕುಸಿದಿತ್ತು. ಕಿಂಗ್ ಫಿಷರ್ ಏರ್ಲೈನ್ಸ್ಗೆ ಸಂಬಂಧಿಸಿದಂತೆ 18 ಬ್ಯಾಂಕ್ಗಳಿಗೆ ಮಲ್ಯ ಅವರು ಕೋಟ್ಯಂತರ ಡಾಲರ್ಗಳಿಗೂ ಹೆಚ್ಚಿನ ಸಾಲದ ಹಣ ಮರುಪಾವತಿ ಮಾಡಬೇಕಾದ ಹಿನ್ನೆಲೆಯಲ್ಲಿ ಮಲ್ಯ ಅವರ ಪಾಸ್ಪೋರ್ಟ್ನ್ನು ರದ್ದು ಪಡಿಸಲಾಗಿದೆ. ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮಾತನಾಡಿರುವ ಮಲ್ಯ ಅವರು ತಾವು ತಲೆತಪ್ಪಿಸಿಕೊಂಡಿಲ್ಲ ಎಂದು ಪ್ರತಿಪಾದಿಸಿದ್ದರು. ಅವರ ಹೆಸರು ಈಗ ಇಂಗ್ಲೆಂಡ್ ಮತಪಟ್ಟಿಯಲ್ಲಿ ಸೇರಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.
 2016: ನವದೆಹಲಿ: ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಏಕೈಕ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್ಇಇಟಿ-
ನೀಟ್) ನಡೆಸಲು ಸುಪ್ರೀಂಕೋರ್ಟ್  ಮಾರ್ಗ ಮುಕ್ತಗೊಳಿಸಿತು. ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್ಗಳಿಗೆ 'ನೀಟ್' ಮೂಲಕ ಎರಡು ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಸುವಂತೆ ಕೇಂದ್ರ ಮತ್ತು ಸಿಬಿಎಸ್ಇಗೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಮೇ 1ರಂದು ನಡೆಯಲಿರುವ ಎಐಪಿಎಂಟಿ ಪರೀಕ್ಷೆಯನ್ನು ಎನ್ಇಇಟಿಯ ಮೊದಲ ಹಂತವಾಗಿ ಪರಿಗಣಿಸಲಾಗುವುದು ಎಂದೂ ಸುಪ್ರೀಂಕೋರ್ಟ್ ಹೇಳಿತು. ಎರಡನೇ ಹಂತದ ಪರೀಕ್ಷೆ ಜುಲೈ 24ರಂದು ನಡೆಯುವುದು ಎಂದು ಸುಪ್ರೀಂಕೋರ್ಟ್ ಹೇಳಿತು. ತಮ್ಮ ಮೇಲೆ ಎನ್ಇಇಟಿಯನ್ನು ಹೇರಲಾಗದು ಎಂಬುದಾಗಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಾಲೇಜುಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿತು. ಸುಪ್ರೀಂಕೋರ್ಟಿನ ತೀರ್ಪಿನ ಪರಿಣಾಮವಾಗಿ ಮುಂದಿನ ತಿಂಗಳು ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳೂ ರದ್ದಾದವು.
2016: ಟೊರಾಂಟೋ: ನಮ್ಮ ಕೆಲಸದ ಒತ್ತಡದ ನಡುವೆ ನಿದ್ದೆಗೂ ಸಹ ಟೈಮ್ ಸಿಗುವುದಿಲ್ಲ. ಅಂತಹುದರಲ್ಲಿ ವ್ಯಾಯಾಮ ಮಾಡೋದು ಎಲ್ಲಿ ಎಂಬುದು ಬಹುತೇಕರ ಸಾಮಾನ್ಯ ದೂರು. ಆದರೆ ಕೇವಲ ಒಂದೇ ಒಂದು ನಿಮಿಷ ನೀವು ವ್ಯಾಯಾಮ ಮಾಡಿ ನಿಮ್ಮ ಫಿಟ್ನೆಸ್ ಕಾಪಾಡಿಕೊಳ್ಳಬಹುದು ಎಂದು ಸಂಶೋಧಕರು ನಿರೂಪಿಸಿರುವುದಾಗಿ ಸಂಶೋಧಕರು
ಪ್ರಕಟಿಸಿದರು. ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ಸಂಪ್ರದಾಯಿಕ ವ್ಯಾಯಾಮಗಳಿಂದ ನಮ್ಮ ದೇಹಕ್ಕೆ ಸಿಗುವಷ್ಟೇ ಫಿಟ್ನೆಸ್ ಕೇವಲ ಒಂದೇ ನಿಮಿಷ ಕಠಿಣ ವ್ಯಾಯಾಮದಿಂದಲೂ ಸಹ ಸಿಗುತ್ತದೆ. ಒಂದು ನಿಮಿಷದಲ್ಲಿ ತೀವ್ರತರವಾದ ವ್ಯಾಯಾಮ ಮಾಡಿದರೆ ಸಾಕು ಎಂದು ಕೆನಡಾದ ಮ್ಯಾಕ್ ಮಾಸ್ಟರ್ ವಿಶ್ವವಿದ್ಯಾಲಯದ ವಿಜ್ಞಾನಿ ಪ್ರೊಫೆಸರ್ ಮರ್ಟಿನ್ ಗಿಬಾಲಾ ತಿಳಿಸಿದರು. ವಿಜ್ಞಾನಿಗಳು ವಿಧಾನವನ್ನು ಸ್ಪಿಂಟ್ ಇಂಟರ್ವೆಲ್ ಟ್ರೖೆನಿಂಗ್(ಎಸ್ಐಟಿ) ಎಂದು ಕರೆದಿದ್ದಾರೆ. ಇದನ್ನು ಪರೀಕ್ಷೆಗೆ ಒಳಪಡಿಸಲು 2 ತಂಡಗಳನ್ನು ಆಯ್ದುಕೊಳ್ಳಲಾಯಿತು. ವಿಜ್ಞಾನಿಗಳು ಸೈಕ್ಲಿಂಗ್ ವ್ಯಾಯಾಮವನ್ನು ಪರೀಕ್ಷೆಗಾಗಿ ಆಯ್ದುಕೊಂಡಿದ್ದರು. ಇಲ್ಲಿ ಎಸ್ಐಟಿ ವಿಧಾನದಲ್ಲಿ ವ್ಯಾಯಾಮ ಮಾಡುವವರು ಒಟ್ಟು 10 ನಿಮಿಷ ಮಾತ್ರ ವ್ಯಾಯಾಮ ಮಾಡಬೇಕು. ಮೊದಲ 2 ನಿಮಿಷ ವಾರ್ಮ್ ಅಪ್ ಆಗಲು ನಿಧಾನವಾಗಿ ಸೈಕಲ್ ತುಳಿಯಬೇಕು. ನಂತರ 20 ಸೆಕೆಂಡ್ ಅತ್ಯಂತ ವೇಗವಾಗಿ ಸೈಕಲ್ ತುಳಿಯಬೇಕು. ನಂತರ 2 ನಿಮಿಷ ನಿಧಾನ ಗತಿಯಲ್ಲಿ ಸೈಕಲ್ ತುಳಿಯಬೇಕು. ಮತ್ತೆ 20 ಸೆಕೆಂಡ್ ಅತ್ಯಂತ ವೇಗವಾಗಿ, ನಂತರ 2 ನಿಮಿಷ ನಿಧಾನವಾಗಿ ಹಾಗೂ ಕೊನೆಯದಾಗಿ 20 ಸೆಕೆಂಡ್ ಅತ್ಯಂತ ವೇಗವಾಗಿ ಸೈಕಲ್ ತುಳಿಯಬೇಕು. ಅಂತಿಮವಾಗಿ 3 ನಿಮಿಷ ಕೂಲ್ಡೌನ್ ಅವಧಿಯಾಗಿದೆ. ವಿಧಾನದಲ್ಲಿ ಒಟ್ಟು 1 ನಿಮಿಷ ಅತ್ಯಂತ ವೇಗವಾಗಿ ಸೈಕಲ್ ತುಳಿಯುವ ಮೂಲಕ ದೇಹಕ್ಕೆ ಅಗತ್ಯವಿರುವ ಅತ್ಯಂತ ಶ್ರಮದಾಯಕ ವ್ಯಾಯಾಮ ಮಾಡಿದಂತಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು. ಮತ್ತೊಂದು ತಂಡಕ್ಕೆ ಒಟ್ಟು 45 ನಿಮಿಷಗಳ ಕಾಲ ನಿರಂತರವಾಗಿ ಸೈಕಲ್ ತುಳಿಯಲು ಸೂಚಿಸಲಾಗಿತ್ತು. ಎಸ್ಐಟಿ ವಿಧಾನದಲ್ಲಿ 12 ವಾರಗಳವರೆಗೆ ವ್ಯಾಯಾಮ ಮಾಡಲಾಯಿತು. ಕೇವಲ 10 ನಿಮಿಷಗಳ ವ್ಯಾಯಾಮ ಮಾಡಿದರೂ ಸಹ 45 ನಿಮಿಷ ವ್ಯಾಯಾಮ ಮಾಡಿದವರಷ್ಟೇ ಫಿಟ್ನೆಸ್ ಇತ್ತು. ಹಾಗಾಗಿ ನಗರ ಪ್ರದೇಶದಲ್ಲಿ ಸಮಯದ ಅಭಾವದಿಂದ ವ್ಯಾಯಾಮ ಮಾಡಲು ಸಮಯ ಹೊಂದಿಸಲು ಸಾಧ್ಯವಿಲ್ಲದವರು, ಕೇವಲ 10 ನಿಮಿಷಗಳಲ್ಲಿ ದೇಹದ ಫಿಟ್ನೆಸ್ ಕಾಯ್ದುಕೊಳ್ಳಬಹುದು ಎಂದು ಗಿಬಾಲಾ ಹೇಳಿದರು.
 2009: ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬದುಕುಳಿದ ಏಕೈಕ ಆರೋಪಿ ಹಾಗೂ
ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಅವರನ್ನು ಸಿಬಿಐ ಮತ್ತು ಇಂಟರ್‌ಪೋಲ್‌ನ 'ಬೇಕಾದ ವ್ಯಕ್ತಿ' ಪಟ್ಟಿಯಿಂದ ತೆರವುಗೊಳಿಸಲಾಯಿತು. ಇದು ಭಾರತದಲ್ಲಿ ತೀವ್ರ ಸ್ವರೂಪದ ರಾಜಕೀಯ ಸಂಚಲನ ಮೂಡಿಸಿತು. ಈಚೆಗಷ್ಟೇ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರನ್ನು ದೋಷಮುಕ್ತಗೊಳಿಸಿದ್ದ ಸಿಬಿಐ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಬಿಜೆಪಿ ಮತ್ತು ಎಡಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳ ಸಿಬಿಐ ಕಾರ್ಯಗಳ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದವು. ಕ್ವಟ್ರೋಚಿ ವಿಷಯದಲ್ಲಿ ಸಿಬಿಐ ಈ ಮೊದಲಿನಿಂದಲೂ ಉದಾಸೀನ ಧೋರಣೆಯನ್ನೇ ತಳೆಯುತ್ತ ಬಂದಿತ್ತು. ಭಾರತದ ಹೊರಗೆ ಎರಡು ಬಾರಿ ಕ್ವಟ್ರೋಚಿ ಅವರನ್ನು ಬಂಧಿಸಿದಾಗಲೂ ಅವರನ್ನು ಗಡಿಪಾರು ಮಾಡಿಸಿಕೊಳ್ಳುವಲ್ಲೂ ಸಿಬಿಐ ದಿವ್ಯ ತಾಳಿ, ವೈಫಲ್ಯ ಅನುಭವಿಸಿತ್ತು. ಇದೀಗ ಸಿಬಿಐ ನೀಡಿದ ಸೂಚನೆ ಮೇರೆಗೆ ಇಂಟರ್‌ಪೋಲ್ ತನ್ನ ರೆಡ್‌ಕಾರ್ನರ್ ನೋಟಿಸ್ ಪಟ್ಟಿಯಿಂದ ಕ್ವಟ್ರೋಚಿ ಅವರ ಹೆಸರನ್ನು ತೆಗೆದುಹಾಕಿದ್ದು ಬೆಳಕಿಗೆ ಬಂತು.

2009: ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ಜೆಡಿಎಸ್ ಕಾರ್ಯಕರ್ತನೊಬ್ಬ ಚಪ್ಪಲಿ ಎಸೆದ ಪ್ರಕರಣ ಚನ್ನರಾಯಪಟ್ಟಣದಲ್ಲಿ ನಡೆಯಿತು. ಪ್ರಚಾರ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ ಅವರ ಮೇಲೆ ಹೊಳೆನರಸೀಪುರ ತಾಲ್ಲೂಕಿನ ಕುಂಚೇವು ಕೋಡಿಹಳ್ಳಿ ಗ್ರಾಮದ ಚಂದ್ರಶೇಖರ್ (33) ಎಂಬಾತ ಚಪ್ಪಲಿ ಎಸೆದ. ಅದು ರಕ್ಷಣಾ ಪರಿಧಿಯೊಳಗೆ ಬಿದ್ದಿತು. ಈ ಅನಿರೀಕ್ಷಿತ ಘಟನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ವಿಚಲಿತರಾದರು. ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದರು.

2009: ತನ್ನ ನೆಲದಿಂದ ತಾಲಿಬಾನ್ ಉಗ್ರರನ್ನು ಹೊರಗಟ್ಟುವ ಕಾರ್ಯವನ್ನು ಪಾಕ್ ರಕ್ಷಣಾಪಡೆಗಳು ತೀವ್ರಗೊಳಿಸಿ ವಾಯವ್ಯ ಪ್ರಾಂತ್ಯದಲ್ಲಿ 70 ಉಗ್ರರನ್ನು ಹತ್ಯೆ ಮಾಡಿದವು. ಪಾಕ್ ರಕ್ಷಣಾ ಪಡೆಗಳು ದಿರ್ ಜಿಲ್ಲೆಯ ಕಾಲ್ಪಾನಿ ಮತ್ತು ಅಕಖೇಲ್‌ದರ ಪರ್ವತಗಳ ಮೇಲೆ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿದ್ದು, ತಾಲಿಬಾನ್ ಉಗ್ರರು ತಾವು ಆಕ್ರಮಿಸಿಕೊಂಡ ಬುನೆರ್ ಮತ್ತು ಇತರೆ ಪ್ರದೇಶಗಳನ್ನು ಬಿಡದೇ ಅನ್ಯ ಮಾರ್ಗವಿಲ್ಲ' ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿದರು.

2009: 2011ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಗಳು ಭಾರತದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿತು. ಇದೇ ವೇಳೆ ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಪಂದ್ಯಗಳನ್ನು ನಡೆಸದಿರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಲಾಹೋರಿನಲ್ಲಿ ಇದ್ದ ಕೇಂದ್ರ ಕಚೇರಿಯನ್ನು ಮುಚ್ಚಲು ತೀರ್ಮಾನಿಸಲಾಯಿತು.

2009: 64 ಕೋಟಿ ರೂಪಾಯಿಗಳ ಬೊಫೋರ್ಸ್ ಹಗರಣಲ್ಲಿ ಕ್ವಟ್ರೋಚಿ ಅವರು 7.32 ದಶಲಕ್ಷ ಡಾಲರ್ ಲಂಚ ಪಡೆದಿರುವುದು ನಿಜ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ವಿಸ್ ಅಧಿಕಾರಿಗಳು ನೀಡಿದ್ದು, ಅವುಗಳು ಸರ್ಕಾರದ ಬಳಿಯೇ ಇವೆ ಎಂದು ಸಿಬಿಐನ ಮಾಜಿ ನಿರ್ದೇಶಕ ಜೋಗಿಂದರ್ ಸಿಂಗ್ ನವದೆಹಲಿಯಲ್ಲಿ ಹೇಳಿದರು. '1997ರಲ್ಲಿ ನಾನು ಸ್ವಿಸ್ ಬ್ಯಾಂಕ್‌ಗಳಿಂದ 500 ಪುಟಗಳ ದಾಖಲೆಗಳನ್ನು ತಂದಿದ್ದೆ. ನಾನು ಸಿಬಿಐ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿದಾಗ ಒಂದು ಕೊಠಡಿ ತುಂಬ ಬೊಫೋರ್ಸ್‌ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದವು. ಆದರೆ ಅದುವರೆಗೆ ಯಾರೊಬ್ಬರೂ ಅದನ್ನು ಮುಟ್ಟಿರಲಿಲ್ಲ' ಎಂದು ಅವರು ತಿಳಿಸಿದರು. 'ಸಿಬಿಐ ಕೂಡ ಸ್ವತಂತ್ರ ತನಿಖಾ ಸಂಸ್ಥೆಯಲ್ಲ, ಸರ್ಕಾರ ಹೇಳಿದ್ದನ್ನು ಅದು ಮಾಡಲೇಬೇಕಾಗುತ್ತದೆ' ಎಂದು ಅವರು ಹೇಳಿದರು.

ಬೊಫೋರ್ಸ್ ಲಂಚ: ಪ್ರಮುಖ ಘಟನಾವಳಿ
1987: ಬೊಫೋರ್ಸ್ ಲಂಚ ಹಗರಣ ಬೆಳಕಿಗೆ
1997: ಸ್ವಿಸ್ ಬ್ಯಾಂಕ್‌ಗಳಿಂದ ಸುಮಾರು 500 ದಾಖಲೆಗಳು ಬಿಡುಗಡೆ. ವರ್ಷಗಳ ಕಾನೂನು ತೊಡಕುಗಳ ಬಳಿಕ ಸಿಬಿಐನಿಂದ ಇಟಲಿ ಉದ್ಯಮಿ ಕ್ವಟ್ರೋಚಿ, ಶಸ್ತ್ರಾಸ್ತ್ರ ವ್ಯಾಪಾರಿ ವಿನ್ ಛಡ್ಡಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಆಗಿನ ರಕ್ಷಣಾ ಕಾರ್ಯದರ್ಶಿ ಎಸ್. ಕೆ. ಭಟ್ನಾಗರ್ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲು.

2003: ಹೈಕೋರ್ಟ್ ಆದೇಶದ ಮೇರೆಗೆ ಕ್ವಟ್ರೋಚಿಯ ಎರಡು ಬ್ರಿಟಿಷ್ ಬ್ಯಾಂಕ್ ಖಾತೆಗಳ ಮುಟ್ಟುಗೋಲು.
2004ರ ಫೆ. 5: ರಾಜೀವ್ ಗಾಂಧಿ ಮತ್ತು ಇತರರ ಮೆಲಿನ ಲಂಚ ಆರೋಪಗಳು ದೆಹಲಿ ಹೈಕೋರ್ಟ್‌ನಿಂದ ವಜಾ.
2005ರ ಮೇ 31: ಬ್ರಿಟನ್‌ನ ಸಹೋದರರಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ ಅವರ ಮೆಲಿನ ಆರೋಪಗಳೂ ದೆಹಲಿ ಹೈಕೋರ್ಟ್‌ನಿಂದ ವಜಾ.

2009: ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದ ಏಕೈಕ ಉಗ್ರ ಅಜ್ಮಲ್ ಕಸಾಬ್ ವಯಸ್ಸು 20 ಅಥವಾ ಅದಕ್ಕಿಂತ ಹೆಚ್ಚು ಎಂಬುದು ಖಂಡಿತ! ದಾಳಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ಮಾಹಿತಿಯಿಂದ ಈ ಅಂಶ ದೃಢಪಟ್ಟಿದೆ. ಕಸಾಬ್ ವಯಸ್ಸು ಪತ್ತೆಗಾಗಿ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದ ವಿಶೇಷ ನ್ಯಾಯಾಧೀಶ ಎಂ.ಎಲ್.ತಹಿಲಿಯಾನಿ ಅವರು ಈ ವಿಷಯದಲ್ಲಿ ತೀರ್ಪು ನೀಡುವರು ಎಂದು ವಿಶೇಷ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ವಿಚಾರಣೆ ನಂತರ ಸುದ್ದಿಗಾರರಿಗೆ ತಿಳಿಸಿದರು. ತನ್ನ ವಯಸ್ಸು 18 ಎಂದು ಹೇಳಿದ್ದ ಕಸಾಬ್ ತನ್ನನ್ನು ಬಾಲಪರಾಧಿಗಳ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮುಂಬೈನ ಜೆ.ಜೆ.ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ಕಸಾಬ್‌ನ ದಂತ ಮತ್ತು ಮೂಳೆಯ ಬೆಳವಣಿಗೆಯನ್ನು ಮುಖ್ಯವಾಗಿ ಪರೀಕ್ಷಿಸಿ ಆತನ ವಯಸ್ಸು 20 ಅಥವಾ ಅದಕ್ಕಿಂತ ಹೆಚ್ಚು ಎಂಬುದನ್ನು ಸಾಬೀತುಪಡಿಸಿದರು.

2009: ವಿಶ್ವದ ಹಲವು ರಾಷ್ಟ್ರಗಳಲ್ಲಿ ಆತಂಕ ತಂದೊಡ್ಡಿದ ಹಂದಿ ಜ್ವರಕ್ಕೆ ಮೆಕ್ಸಿಕೊ ದೇಶವೊಂದರಲ್ಲೇ ಒಟ್ಟು 149 ಮಂದಿ ಬಲಿಯಾದರು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದ ಇಸ್ರೋದ ಪಿ ಎಸ್ ಎಲ್ ವಿ ರಾಕೆಟ್ ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಬಿಡುವ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನವು ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿತು. 230 ಟನ್ ಅಂದರೆ 50 ಆನೆ ತೂಕದ, 12 ಮಹಡಿ ಎತ್ತರದ ಪಿ ಎಸ್ ಎಲ್ ವಿ ಯು ನಮ್ಮ ದೇಶದ ಒಂದು ನಕ್ಷೆ ಉಪಗ್ರಹ `ಕಾರ್ಟೋಸ್ಯಾಟ್-2ಎ' ಒಂದು ದೂರ ಸಂವೇದಿ ಮಿನಿ ಉಪಗ್ರಹ ಹಾಗೂ ವಿದೇಶಗಳ ಎಂಟು ನ್ಯಾನೋ ಉಪಗ್ರಹಗಳನ್ನು ಹಾಗೂ ಒಂದು ದೂರಸಂವೇದಿ ಉಪಗ್ರಹವನ್ನು ನಿಶ್ಚಿತ ಕಕ್ಷೆಗೆ ಸೇರಿಸಿತು. ಉಡಾವಣಾ ಹಲಗೆ ಮೇಲಿನಿಂದ 9.23ಕ್ಕೆ ಚಿಮ್ಮಿದ ಈ ರಾಕೆಟ್ ಯಾವುದೇ ಆತಂಕಕ್ಕೆ ಎಡೆ ಮಾಡಿಕೊಡದೆ ಸುಮಾರು 14 ನಿಮಿಷಗಳ ಅವದಿಯಲ್ಲಿ 635 ಕಿ.ಮೀ. ದೂರದ `ಪೋಲಾರ್ ಸನ್ ಸಿಂಕ್ರೋನಸ್ ಕಕ್ಷೆ'ಗೆ ಉಪಗ್ರಹಗಳನ್ನು ಹಾರಿಸಿತು. ಈದಿನದ ಉಡಾವಣೆಯೂ ಸೇರಿ ಪಿ ಎಸ್ ಎಲ್ ವಿ 12 ಸಲ ಯಶಸ್ವಿಯಾಗಿ ಉಡಾವಣೆಗಳನ್ನು ಮಾಡಿದೆಯಾದರೂ, ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದು ಇದೇ ಮೊದಲು. ರಷ್ಯಾದ ರಾಕೆಟ್ ಒಂದು ಕಳೆದ ವರ್ಷ ಒಂದೇ ಸಲಕ್ಕೆ 16 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತಾದರೂ ಅವುಗಳ ಒಟ್ಟು ತೂಕ ಕೇವಲ 300 ಕಿ.ಲೋ. ಮಾತ್ರ. ಆದರೆ ಪಿ ಎಸ್ ಎಲ್ ವಿ ಕಕ್ಷೆಗೆ ಸೇರಿಸಿದ ಉಪಗ್ರಹಗಳ ತೂಕ ಒಟ್ಟು 824 ಕೆ.ಜಿ.

2008: ವೇಗಿ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಭಜನ್ ಸಿಂಗ್ ಅವರ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಐಪಿಎಲ್ ಮ್ಯಾಚ್ ರೆಫರಿ ಹಾಗೂ ಮಾಜಿ ಆಟಗಾರ ಫಾರೂಕ್ ಎಂಜಿನಿಯರ್ ಅವರು ಈದಿನ ಮಧ್ಯಾಹ್ನ ನವದೆಹಲಿಯ ಹೋಟೆಲ್ ಒಂದರಲ್ಲಿ ಎರಡು ಗಂಟೆ ಕಾಲ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಭಜ್ಜಿ ಕ್ಷಮೆಯಾಚಿಸಿದರು. ಬಳಿಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಜ್ಜಿ ಮೇಲೆ ಐಪಿಎಲ್ `ಟ್ವೆಂಟಿ-20' ಟೂರ್ನಿಯ 11 ಪಂದ್ಯಗಳ ನಿಷೇಧದ ತೀರ್ಪನ್ನು ಪ್ರಕಟಿಸಿತು.

2008: ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಗೆ ಕೊನೆಗೂ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಂತ್ಯ ಹಾಡಿತು. ಈದಿನ ನಡೆದ ತುರ್ತು ಸಭೆಯಲ್ಲಿ ಐಒಎ, ಭಾರತ ಹಾಕಿ ಫೆಡರೇಷನನ್ನು ಅಮಾನತು ಮಾಡುವುದರ ಜೊತೆಯಲ್ಲಿ ಒಲಿಂಪಿಯನ್ ಅಸ್ಲಮ್ ಷೇರ್ ಖಾನ್ ಅವರ ನೇತೃತ್ವದಲ್ಲಿ ತಾತ್ಕಾಲಿಕ ಆಯ್ಕೆ ಸಮಿತಿಯನ್ನು ನೇಮಿಸಲಾಯಿತು. ಐ ಎಚ್ ಎಫ್ ಕಾರ್ಯದರ್ಶಿ ಕೆ. ಜ್ಯೋತಿಕುಮಾರನ್ ಅಜ್ಲನ್ ಷಾ ಕಪ್ ಹಾಕಿ ಚಾಂಪಿಯನ್ ಶಿಪ್ಪಿನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಯ್ಕೆಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಟಿ.ವಿ. ಸ್ಟಿಂಗ್ ಆಪರೇಷನ್ನಿನಲ್ಲಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಐಒಎ ತುರ್ತು ಸಭೆ ನಡೆಸಿ ಐ ಎಚ್ ಎಫ್ನ ಪ್ರಸ್ತುತ ಆಡಳಿತ ಮಂಡಳಿಯನ್ನು ಕಿತ್ತೊಗೆಯುವುದಕ್ಕೆ ಸರ್ವಾನುಮತದಿಂದ ಸಮ್ಮತಿಸಿತು.

2008: ಮಲೇಷ್ಯಾದ ಸಂಸತ್ತಿಗೆ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಭಾರತೀಯ ಮೂಲದ 10 ಶಾಸಕರು ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಮಹಿಳೆಯೊಬ್ಬರು ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದರು. ಮಾರ್ಚ್ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಶಾಲಿಗಳಾಗಿದ್ದ ಭಾರತೀಯ ಮೂಲದ 10ಮಂದಿ ಈದಿನ ಆರಂಭವಾದ ಮಲೇಷ್ಯಾದ ಸಂಸತ್ತಿನ 12ನೇ ಅಧಿವೇಶನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಬ್ದುಲ್ಲಾ ಅಹಮದ್ ಬದಾವಿ ನೇತೃತ್ವದ್ಲಲಿ ಆಡಳಿತಾರೂಢ ಬರಿಸಾನ್ ನಾಸಿಯೊನಾಲ್ (ಬಿಎನ್) ಪಕ್ಷ ಮಲೇಷ್ಯಾದ ಇತಿಹಾಸದಲ್ಲೇ ಎರಡನೇ ಬಾರಿಗೆ ಮೂರನೇ ಎರಡರಷ್ಟು ಬಹುಮತ ಗಳಿಸಿತು.

2008: ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆಯ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸ್ಥಾನ ಗಳಿಸಿದ್ದಾನೆ! ಸೌಂದರ್ಯ ಅಥವಾ ಆಕರ್ಷಕ ಪುರುಷ ಎಂಬ ಕಾರಣಕ್ಕಾಗಿ ಅಲ್ಲ, ದೇಶಭ್ರಷ್ಟತೆಯ ಕಾರಣಕ್ಕಾಗಿ. ಫೋರ್ಬ್ಸ್ ತಯಾರಿಸಿದ ವಿಶ್ವದ ಪ್ರಮುಖ ಹತ್ತು ದೇಶಭ್ರಷ್ಟರ ಪಟ್ಟಿಯಲ್ಲಿ ಅಲ್ ಖೈದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮೂಲದ ದಾವೂದ್ ಇಬ್ರಾಹಿಂ ಮತ್ತು ಆತನ `ಡಿ' ಕಂಪನಿ ನಾಲ್ಕನೇ ಸ್ಥಾನ ಗಳಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ ಭೂಗತ ದೊರೆ ದಾವೂದ್ (52) ಈಗ ಪಾಕಿಸ್ಥಾನದಲ್ಲಿ ಇರಬಹುದು ಎಂಬ ಶಂಕೆ ಇದ್ದು, ಈತ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಅಮೆರಿಕ ಘೋಷಿಸಿದೆ. ಪೊಲೀಸರಿಗೆ ತನ್ನ ಗುರುತು ಸಿಗಬಾರದೆಂದು ದಾವೂದ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದೆಂದೂ `ಫೋರ್ಬ್ಸ್' ಹೇಳಿತು.

2008: ತನ್ನ ಸ್ವಂತ ಮಗಳನ್ನೇ 24 ವರ್ಷಗಳ ಕಾಲ ಮನೆಯಲ್ಲಿ ಸೆರೆಯಾಗಿಟ್ಟು, ಮಗಳಿಗೇ 7 ಮಕ್ಕಳನ್ನು ಕರುಣಿಸಿದ ಆಸ್ಟ್ರೇಲಿಯಾದ 73 ವರ್ಷದ ಜೋಸೆಫ್ ಎಂಬ ತಂದೆಯೊಬ್ಬ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು ತನ್ನ `ಪಾಪಕೃತ್ಯ'ಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ಆಸ್ಟ್ರಿಯಾ ಸುದ್ದಿ ವಾಹಿತಿನಯೊಂದು ವರದಿ ಮಾಡಿತು. ತಂದೆಯಿಂದಲೇ ಮಕ್ಕಳನ್ನು ಪಡೆದಿರುವ ಮಗಳು ಎಲಿಜಬೆತ್ ಫ್ರಿಜ್ ಹಾಗೂ ಆಕೆಯ ಮಕ್ಕಳು ಸೆರೆಯಾಗಿರುವ ಸ್ಥಳವನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ವರದಿ ಹೇಳಿತು.

2008: ಚೀನಾದ ಪೂರ್ವ ಭಾಗದ ಶಾಂಡೊಂಗ್ ಪ್ರಾಂತ್ಯದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಪಕ್ಷ 60 ಮಂದಿ ಸತ್ತು 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 57 ಜನರು ಸ್ಥಳದಲ್ಲಿಯೇ ಮೃತರಾದರೆ ಮೂವರು ಆಸ್ಪತ್ರೆಯಲ್ಲಿ ಅಸು ನೀಗಿದರು. ಬೀಜಿಂಗಿನಿಂದ ಕ್ವಿಂಗಾಡೊಗೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಹಳಿ ತಪ್ಪಿ ಯಂತಾಯಿ ರೈಲಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು.

2008: ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನಡೆಸಿದ ಹೋರಾಟಕ್ಕಾಗಿ ಮಾಜಿ ಪ್ರಧಾನಿ ದಿ. ಬೆನಜೀರ್ ಭುಟ್ಟೊ ಅವರಿಗೆ ಪ್ರತಿಷ್ಠಿತ ತಿಪ್ಪೆರರಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಭುಟ್ಟೊ ಅವರ ದೀರ್ಘ ಕಾಲದ ನಿಕಟವರ್ತಿ ಬಶೀರ್ ರೈಜಾ ಅವರು ಭುಟ್ಟೊ ಕುಟುಂಬದ ಪರವಾಗಿ ಐರ್ಲೆಂಡಿನಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡರು.

2008: ಕರ್ನಾಟಕದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ಸಲ್ಲಿಸಿದ್ದ `ಸೂತ್ರ'ಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತು. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜಾರಿಗೆ ತಂದಿದ್ದ `ಸೂತ್ರ'ವನ್ನೇ ಒಪ್ಪಿಕೊಂಡಿವೆ ಎಂದು ನ್ಯಾಯಮೂರ್ತಿ ಬಿ.ಎನ್.ಅಗರವಾಲ್ ನೇತೃತ್ವದ ನ್ಯಾಯಪೀಠವು ತಿಳಿಸಿತು.

2008: ರೋಗಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ. ಪ್ರಕಾಶ್ ಕಪಾಟೆ ಅವರಿಗೆ ಒಂದು ವರ್ಷ ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿತು. ಕ್ಯಾನ್ಸರಿನಿಂದ ಬಳಲುತ್ತಿದ್ದ ಚಿಂತಾಮಣಿಯ ಐಮರೆಡ್ಡಿಹಳ್ಳಿಯ ರಾಮಣ್ಣ ಎಂಬುವರು 2000ನೇ ಸಾಲಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ರಾಮಣ್ಣ ಅವರಿಗೆ ರೆಡಿಯೋಥೆರೆಫಿ ಮಾಡಲು ಪ್ರಕಾಶ್ ಎರಡು ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಬಗ್ಗೆ ರಾಮಣ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಒಂದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ತನಿಖಾ ತಂಡ ಪ್ರಕಾಶ್ ಅವರನ್ನು ಬಂಧಿಸಿತ್ತು. ಲೋಕಾಯುಕ್ತದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೈ.ಆರ್. ಜಗದೀಶ್ ವಾದ ಮಂಡಿಸಿದ್ದರು. ವಿಶೇಷ ನ್ಯಾಯಾಧೀಶರಾದ ಆರ್.ಎಂ. ಶೆಟ್ಟರ್ ಅವರು ಮೇಲಿನ ಆದೇಶ ನೀಡಿದರು.

2006: ಎಚ್. ಟಿ. ಮೀಡಿಯಾ ಲಿಮಿಟೆಡ್ ಉಪಾಧ್ಯಕ್ಷೆ ಶೋಭನಾ ಭಾರ್ತಿಯಾ ಮತ್ತು ಪಯೋನೀರ್ ಸಂಪಾದಕ ಚಂದನ್ ಮಿತ್ರ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ತನ್ನ ಅರ್ಜಿಯಲ್ಲಿ ಮೇಲ್ಮನೆಗೆ ಮಾಡಲಾದ ಇವರಿಬ್ಬರ ನಾಮಕರಣ ಸಂವಿಧಾನದ 80 (3) ವಿಧಿಯಡಿಯಲ್ಲಿ ಸೂಚಿತವಾಗಿರುವ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆ ಈ ವರ್ಗಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪೀಠವು ಸಮಾಜ ಸೇವೆ ಶಬ್ಧದ ಅರ್ಥವ್ಯಾಪ್ತಿ ಇಂತಹ ಪ್ರಕರಣಗಳು ಒಳಗೊಳ್ಳುವಷ್ಟು ವಿಶಾಲವಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದರು.

2006: ಯುತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದಕ್ಕಾಗಿ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವೊಂದು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2006: ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಕರ್ತೃ ಭಾರತೀಯ ಮೂಲದ ಲೇಖಕಿ ಕಾವ್ಯ ವಿಶ್ವನಾಥನ್ ಕೃತಿಚೌರ್ಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾದಂಬರಿ ಪ್ರಕಟಿಸಿದ ಪ್ರಕಾಶನ ಸಂಸ್ಥೆಯ ಲಿಟ್ಲ್ ಬ್ರೌನ್ ಕಾದಂಬರಿಯ ಎಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು.

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಅತ್ಯಾಧುನಿಕ ಕರಾವಳಿ ಕಡಲು ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವಂತಿಲ್ಲ ಎಂದು ಭಾರತದ ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು 1986ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿ ಈ ತೀರ್ಪನ್ನು ನೀಡಿತು. ಲಾಟರಿ ಟಿಕೆಟ್ಟುಗಳ ಮಾರಾಟವನ್ನು ವಸ್ತುಗಳ ಮಾರಾಟಕ್ಕೆ ಸಮಾನವಾಗಿ ನೋಡಲಾಗದು. ಆದ್ದರಿಂದ ಅದರ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಹೇಳಿತು. ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ತೆರಿಗೆ ವಿಧಿಸಬಹುದು ಎಂದು 1986ರಲ್ಲಿ ನೀಡಲಾಗಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

1946: ಭಾಷೆ ಹಾಗೂ ಕೋಶ ವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ- ಪಾರ್ವತಿ ದಂಪತಿಯ ಪುತ್ರರಾಗಿ ಜನಿಸಿದರು.

1945: ಇಟೆಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೋಲಿನಿ ಮತ್ತು ಆತನ ಪ್ರೇಯಸಿ ಕ್ಲಾರಾ ಪೆಟಾಸ್ಸಿಯನ್ನು ಅವರು ರಾಷ್ಟ್ರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೊಲ್ಲಲಾಯಿತು. ತಲೆಕೆಳಗಾಗಿ ನೇತಾಡುತ್ತಿದ್ದ ಅವರ ಶವಗಳು ಮಿಲಾನಿನ ಪಿಯಾಝಾ ಲೊರೆಟೊದಲ್ಲಿ ಪತ್ತೆಯಾದವು.

1937: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಜನ್ಮದಿನ. 1979ರಿಂದ ಇತ್ತೀಚೆಗೆ ಅಮೆರಿಕ ಪಡೆಗಳು ದಾಳಿ ನಡೆಸುವವರೆಗೂ ಈತ ಇರಾಕಿನ ಅಧ್ಯಕ್ಷನಾಗಿದ್ದ.

1928: ಇ.ಎಂ. ಶೂಮೇಕರ್ (1928-97) ಹುಟ್ಟಿದ ದಿನ. ಅಮೆರಿಕದ ಖಭೌತ ತಜ್ಞನಾದ ಈತ ಚಂದ್ರನ ಮಣ್ಣಿನ ಪದರ ಹಾಗೂ ಒಡೆದ ಕಲ್ಲುಗಳಿಗೆ `ರಿಗೋಲಿತ್' ಎಂದು ಹೆಸರಿಟ್ಟ. 1994ರಲ್ಲಿ ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಪಿ/ಶೂಮೇಕರ್-ಲೆವಿ 9 ಧೂಮಕೇತುವನ್ನೂ ಈತ ಸಂಶೋಧಿಸಿದ.

1924: ಕೆನ್ನೆತ್ ಕೌಂಡಾ ಜನ್ಮದಿನ. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈತ 1991ರವರೆಗೂ ಅಲ್ಲಿನ ಅಧ್ಯಕ್ಷನಾಗಿದ್ದ.

1865: ಸ್ಯಾಮುಯೆಲ್ ಕ್ಯುನಾರ್ಡ್ 77ನೇ ವಯಸಿನಲ್ಲಿ ಮೃತನಾದ. ಬ್ರಿಟಿಷ್ ವರ್ತಕನಾದ ಈತ ಬ್ರಿಟಿಷ್ ಸ್ಟೀಮ್ ಶಿಪ್ ಕಂಪೆನಿಯ ಸ್ಥಾಪಕ. ಈ ಕಂಪೆನಿಗೆ ಆತನ ಹೆಸರನ್ನೇ ಇಡಲಾಗಿತ್ತು.

No comments:

Post a Comment