ನಾನು ಮೆಚ್ಚಿದ ವಾಟ್ಸಪ್

Thursday, April 5, 2018

ಇಂದಿನ ಇತಿಹಾಸ History Today ಏಪ್ರಿಲ್ 04

ಇಂದಿನ ಇತಿಹಾಸ History Today ಏಪ್ರಿಲ್ 04
2018: ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯು ತನ್ನ ಭಯೋತ್ಪಾದಕರು ಮತ್ತು ವ್ಯಕ್ತಿಗಳ ನಿಷೇಧಿತ ವ್ಯಕ್ತಿಗಳ ಪಟ್ಟಿಯನ್ನು ಪರಿಷ್ಕರಿಸಿದ್ದು, ಹಫೀಜ್ ಸಯೀದ್ ಮತ್ತಿತರ ನೂರಾರು ಮಂದಿ ಭಯೋತ್ಪಾದಕರ ಸಾಲಿಗೆ ದಾವೂದ್ ಇಬ್ರಾಹಿಂ ಹೆಸರನ್ನೂ ಸೇರ್ಪಡೆ ಮಾಡಿತು. ವಿಶ್ವಸಂಸ್ಥೆ ನಿಷೇಧಿತ ಪಟ್ಟಿಯ ಪರಿಷ್ಕರಣೆ ಪಾಕಿಸ್ತಾನಕ್ಕೆ ಇನ್ನೊಂದು ಹೊಡೆತವಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆಯು ಮಂಗಳವಾರ ತನ್ನ ನಿಷೇಧ ಪಟ್ಟಿಯನ್ನು ಪರಿಷ್ಕರಿಸಿದ್ದು, ಅದಕ್ಕೆ ಭಯೋತ್ಪಾದಕ ಹಫೀದ್ ಸಯೀದ್ ಮತ್ತು ಆತನ ರಾಜಕೀಯ ಪಕ್ಷದ ಸದಸ್ಯರನ್ನೂ ಸೇರಿಸಿತ್ತು.  ವಿಶ್ವಸಂಸ್ಥೆಯ ಪರಿಷ್ಕೃತ ಪಟ್ಟಿ ಈದಿನ ಲಭ್ಯವಾಗಿದ್ದು, ಇದರಲ್ಲಿ ಹಫೀಜ್ ಸಯೀದನನ್ನು ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ನಾಯಕ ಎಂಬುದಾಗಿ ನಮೂದಿಸಲಾಯಿತು.  ಆತನ ನಿಕಟ ಸಹಾಯಕ ಝಕಿ-ಉರ್-ರಹಮಾನ್ ನನ್ನು ಎಲ್ ಇಟಿಯ ಮುಖ್ಯ ಕಾರ್‍ಯಾಚರಣೆ ವ್ಯಕ್ತಿ ಎಂಬುದಾಗಿ ಗುರುತಿಸಲಾಯಿತು.  ಇತರ ಎಲ್ ಇಟಿ ಸದಸ್ಯರಲ್ಲಿ ಹಾಜಿ ಮುಹಮ್ಮದ್ ಅಶ್ರಫ್, ಮಹಮೂದ್ ಬಹಾಜಿಕ್, ಅರಿಫ್ ಖಾಸ್ಮನಿ, ಮೊಹಮದ್ ಯಾಹ್ಯಾ ಮುಜಾಹಿದ್, ಅಬ್ದುಲ್ ಸಲಾಮ್, ಝಾಫರ್ ಇಕ್ಬಾಲ್ ಮತ್ತಿತರರನ್ನು ಪಟ್ಟಿಗೆ ಸೇರಿಸಲಾಗಿದೆ. ಇವರು ಇಂಟರ್ ಪೋಲ್ ವಾಂಟೆಡ್ ಪಟ್ಟಿಯಲ್ಲೂ ಇದ್ದಾರೆ.  ಅಮೆರಿಕವು ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್ -ದವಾ ಸಂಘಟನೆಯ ರಾಜಕೀಯ ಪಕ್ಷವಾದ ಮಿಲ್ಲಿ ಮುಸ್ಲಿಮ್ ಲೀಗ್‌ನ್ನು (ಎಂಎಂಎಲ್) ವಿದೇಶೀ ಭಯೋತ್ಪಾದಕ ಸಂಘಟನೆ ಎಂಬುದಾಗಿ ಹೆಸರಿಸಿದ ಒಂದು ದಿನದ ಬಳಿಕ ವಿಶ್ವ ಸಂಸ್ಥೆಯು ತನ್ನ ನಿಷೇಧ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸಿತು.  ಏಕಕಾಲಕ್ಕೆ ಕೈಗೊಳ್ಳಲಾಗಿರುವ ಕ್ರಮದಲ್ಲಿ ಎಂಎಂಎಲ್ ವರಿಷ್ಠ ನಾಯಕತ್ವವನ್ನು ಕೂಡಾ ವಿದೇಶೀ ಭಯೋತ್ಪಾದಕರು ಎಂಬುದಾಗಿ ಅಮೆರಿಕ ಹೆಸರಿಸಿದೆ. ತೆಹ್ರೀಕ್ -ಇ-ಆಜಾದಿ-ಇ-ಕಾಶ್ಮೀರ್ (ಟಿಎಜೆಕೆ) ಸಂಘಟನೆಯನ್ನೂ ಅಮೆರಿಕ ತನ್ನ ಭಯೋತ್ಪಾದಕ ಗುಂಪುಗಳ ಪಟ್ಟಿಗೆ ಸೇರಿಸಿತು. ಟಿಎಜೆಕೆಯು ಲಷ್ಕರ್-ಇ-ತೊಯ್ಬಾ ಸಂಘಟನೆಯ ಒಂದು ರಂಗವಾಗಿದ್ದು, ಟ್ರಂಪ್ ಆಡಳಿತದ ಪ್ರಕಾರ ಪಾಕಿಸ್ತಾನದಲ್ಲಿ ಮುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿದೆ.  ವಿಶ್ವಸಂಸ್ಥೆಯ ಪರಿಷ್ಕೃತ ನಿಷೇಧ ಪಟ್ಟಿಯಲ್ಲಿ ಪಾಕಿಸ್ತಾನದ ೧೩೦ಕ್ಕೂ ಹೆಚ್ಚು ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಒಸಾಮಾ ಬಿನ್ ಲಾಡೆನ್ ನ ಉತ್ತರಾಧಿಕಾರಿ ಐಮಾನ್ ಅಲ್ ಜವಾಹಿರಿ ಕೂಡಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾನೆ. ವಿಶ್ವಸಂಸ್ಥೆ ಪಟ್ಟಿಯು ಈತನನ್ನು ಈಜಿಪ್ಟಿನಲ್ಲಿ ಜನಿಸಿದ್ದಾನೆ ಎಂದು ಗುರುತಿಸಿದ್ದು, ಈಗ ಆತ ಆಫ್ಘಾನಿಸ್ಥಾನ/ ಪಾಕಿಸ್ತಾನ ಗಡಿಯಲ್ಲಿ ಇದ್ದಾನೆ ಎಂದು ನಂಬಿದೆ. ಒಸಮಾ ಬಿನ್ ಲಾಡೆನ್ನ ಸಹಾಯಕ ಅಮೀನ್ ಉಲ್ ಹಕ್ ಹೆಸರು ಕೂಡಾ ಪಟ್ಟಿಯಲ್ಲಿದ್ದು, ಆದರೆ ಆತ ೨೦೦೬ರಲ್ಲಿ ಆಫ್ಘಾನಿಸ್ಥಾನಕ್ಕೆ ವಾಪಸಾಗಿದ್ದ ಎನ್ನಲಾಯಿತು.  ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಹೆಸರೂ ವಿಶ್ವಸಂಸ್ಥೆ ಪಟ್ಟಿಯಲ್ಲಿ ಸೇರಿತು. ಭಾರತ ರಾಷ್ಟ್ರೀಯ ಎಂಬುದಾಗಿ ಗುರುತಿಸಲ್ಪಟ್ಟಿರುವ ದಾವೂದ್ ಪಾಕಿಸ್ತಾನದ ಹಲವಾರು ಪಾಸ್ ಪೋರ್ಟ್‌ಗಳನ್ನು ಹೊಂದಿದ್ದಾನೆ. ವಿಶ್ವಸಂಸ್ಥೆಯು ಆತನ ವಿಳಾಸಗಳು ಕರಾಚಿಯಲ್ಲಿವೆ ಎಂದು ಪ್ರಸ್ತಾಪಿಸಿತು.  ಪಟ್ಟಿಯು ದಾವೂದನ ಕುಟುಂಬ ಸದಸ್ಯರ ಹೆಸರುಗಳನ್ನೂ ಪ್ರಸ್ತಾಪಿಸಿತು.  ದಾವೂದ್ ಕೂಡಾ ಇಂಟರ್ ಪೋಲ್ ವಾಂಟೆಡ್ ಪಟ್ಟಿಯಲ್ಲಿ ಇರುವ ವ್ಯಕ್ತಿ.

2018: ನವದೆಹಲಿ: ರಾಷ್ಟ್ರೀಯ ಮಹತ್ವದ ಪ್ರಮುಖ ವಿಷಯಗಳ ಚರ್ಚೆಗೆ ಆಗ್ರಹಿಸಲು ಸುಮಾರು ೧೨ ಪಕ್ಷಗಳ ನಾಯಕರು  ರಾಜ್ಯಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಂಸತ್ತಿನ ಉಭಯ ಸದನಗಳೂ ಸತತ ೨೦ನೇ ದಿನವಾದ ಈದಿನವೂ ಗದ್ದಲದ ಪರಿಣಾಮವಾಗಿ ವ್ಯತ್ಯಯಗೊಂಡವು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಯಾವುದೇ ಪ್ರಮುಖ ವಿಷಯಗಳನ್ನೂ ಚರ್ಚಿಸಲು ಆಗದೇ ಇರುವ ಬಗ್ಗೆ ಚರ್ಚಿಸಲು ಕಾಂಗ್ರೆಸ್, ಬಿಎಸ್ ಪಿ, ಎಸ್ ಪಿ, ಡಿಎಂಕೆ, ಎನ್ ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ನಾಯಕರು ಚರ್ಚಿಸಿದರು.  ಬಳಿಕ ವಿಪಕ್ಷ ನಾಯಕರು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರನ್ನು ಭೇಟಿ ಮಾಡಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕಾಯ್ದೆ, ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಗಳಂತಹ ಪ್ರಮುಖ ವಿಷಯಗಳ ಚರ್ಚೆಯಾಗಬೇಕು ಎಂಬ ತಮ್ಮ ಬೇಡಿಕೆಯನ್ನು ಅವರ ಮುಂದಿಟ್ಟರು ಎಂದು ವರದಿಗಳು ತಿಳಿಸಿದವು.  ಅಧಿವೇಶನವನ್ನು ಒಂದೆರಡು ದಿನಗಳ ಕಾಲ ವಿಸ್ತರಿಸಿದರೂ ಅಡ್ಡಿಯಿಲ್ಲ ಎಂದು ಕಾಂಗ್ರೆಸ್ ಹೇಳಿತು.  ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ನಾವು ಬಯಸುತ್ತೇವೆ. ಹಾಗೆಯೇ ಶಾಸನಗಳ ಅಂಗೀಕಾರವನ್ನೂ ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಳುತ್ವ ವಹಿಸಬೇಕು. ಅಧಿವೇಶನವನ್ನು ಈ ಉದ್ದೇಶಕಕ್ಕಾಗಿ ಒಂದೆರಡು ದಿನಗಳ ಕಾಲ ವಿಸ್ತರಿಸಿದರೂ ನಮ್ಮ ಆಕ್ಷೇಪವಿಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ನುಡಿದರು.

2018: ನವದೆಹಲಿ : ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೇ ವಿಧಿಯು ತಾತ್ಕಾಲಿಕವಾದುದಲ್ಲ, ಶಾಶ್ವತ ಸ್ವರೂಪದ್ದು ಎಂದು ಸುಪ್ರೀಂಕೋರ್ಟ್ ಹೇಳಿತು.  ೨೦೧೭ರಲ್ಲಿ ಸರ್ಫೇಸಿ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪಿನಲ್ಲಿ ಕೂಡ ತಾನು ಸಂವಿಧಾನದ ೩೭೦ನೇ ವಿಧಿಯು ತಾತ್ಕಾಲಿಕವಾದುದಲ್ಲ ಎಂದು ಸ್ಪಷ್ಟಪಡಿಸಿದ್ದುದಾಗಿ ಸುಪ್ರೀಂ ಕೋರ್ಟ್ ಹೇಳಿತು.  ೩೭೦ನೇ ವಿಧಿಯ ತಲೆಟಿಪ್ಪಣಿಯ ಹೊರತಾಗಿಯೂ ಅದರಲ್ಲಿನ ಅವಕಾಶಗಳು ತಾತ್ಕಾಲಿಕವಲ್ಲ, ಶಾಶ್ವತ ಸ್ವರೂಪದ್ದಾಗಿವೆ ಎಂದು ಸರ್ಫೇಸಿ ಪ್ರಕರಣದ ತೀರ್ಪಿನಲ್ಲಿ ಹೇಳಲಾಗಿತ್ತು ಎಂದು ನ್ಯಾಯಮೂರ್ತಿಗಳಾದ ಎ ಕೆ ಗೋಯಲ್ ಮತು ಆರ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠವು ಹೇಳಿತು.  ಜಮ್ಮು ಕಾಶ್ಮೀರ ಸರ್ಕಾರದ ಪರವಾಗಿ ಕೋರ್ಟಿನಲ್ಲಿ  ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಮತ್ತು ಶೋಯಿಬ್ ಆಲಂ ಅವರು ಸುಪ್ರೀಂಕೋರ್ಟಿನ ಮುಂದೆ ಇತ್ಯರ್ಥಕ್ಕೆ ಬಾಕಿ ಇರುವ ವಿಷಯಗಳು ೩೭೦ನೇ ವಿಧಿಗೆ ಮಾತ್ರವೇ ಸಂಬಂಧಿಸಿದುದಾಗಿಲ್ಲ ಬದಲು ೩೫ಎ ವಿಧಿಗೂ ಸಂಬಂಧಿಸಿದವುಗಳು ಎಂದು ಹೇಳಿದರು.  ಹಾಲಿ ಪ್ರಕರಣವು ೩೭೦ನೇ ವಿಧಿಗೆ ಮಾತ್ರವೇ ಸಂಬಂಧಿಸಿರುವುದರಿಂದ ಇತರೇ ವಿಷಯಗಳನ್ನು ಈ ವಿಷಯದಡಿ ವಿಚಾರಣೆ ನಡೆಸಲಾಗದು ಎಂದು ರಾಜೀವ ಧವನ್ ಕೋರ್ಟಿಗೆ ಮನವಿ ಮಾಡಿದರು.  ಧವನ್ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಎಎಸ್‌ಜಿ ಅವರ ಕೋರಿಕೆಯ ಮೇರೆಗೆ ಮೂರು ವಾರಗಳ ಬಳಿಕ ವಿಚಾರಣೆಯನ್ನು ಕೈಗೊಳ್ಳಲು ನಿರ್ಧರಿಸಿತು.  ಸಂವಿಧಾನದ ೩೭೦ನೇ ವಿಧಿಯನ್ನು ತಾತ್ಕಾಲಿಕ ಎಂದು ಘೋಷಿಸಬೇಕು ಎಂಬ ಮನವಿಯನ್ನು ೨೦೧೭ರ ಏಪ್ರಿಲ್ ೧೧ರಂದು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವಿಜಯಲಕ್ಷ್ಮಿ ಝಾ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈದಿನ ನಡೆಸಿತು.  ಕೇಂದ್ರ ಸರ್ಕಾರದ ಪರ ಅಭಿಪ್ರಾಯ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಂತಹ ಕೆಲವು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅವುಗಳನ್ನು ಪಟ್ಟಿ ಮಾಡಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

2018: ನವದೆಹಲಿ: ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಪ್ರಸ್ತಾವವನ್ನು ತಾನು ಬೆಂಬಲಿಸುವುದಾಗಿ ಚುನಾವಣಾ ಆಯೋಗವು ಸುಪ್ರೀಂಕೋರ್ಟಿಗೆ ಸ್ಪಷ್ಟ ಪಡಿಸಿತು.
ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣ ಪತ್ರ (ಅಫಿಡವಿಟ್) ಒಂದರಲ್ಲಿ ಚುನಾವಣಾ ಆಯೋಗವು ’ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಪ್ರಸ್ತಾವ ಬಗ್ಗೆ ತನ್ನ ಅಭಿಪ್ರಾಯವನ್ನು ಸಲ್ಲಿಸಿತು.  ೨೦೧೭ರ ಡಿಸೆಂಬರಿನಲ್ಲಿ ಸುಪ್ರೀಂ ಕೋರ್ಟ್, "ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಪ್ರಸ್ತಾವದ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿತ್ತು.  ‘ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರದಿಂದ ಜಯಿಸಿದ ಸಂದರ್ಭದಲ್ಲಿ ಉಪ ಚುನಾವಣೆಯನ್ನು ನಡೆಸುವ ಖರ್ಚು ವೆಚ್ಚದ ಹೊರೆ ಸರ್ಕಾರಿ ಬೊಕ್ಕಸಕ್ಕೆ ಬೀಳುತ್ತದೆ. ಆದುದರಿಂದ ಇದನ್ನು ತಪ್ಪಿಸುವ ಸಲುವಾಗಿ ಒಬ್ಬ ಅಭ್ಯರ್ಥಿಗೆ ಒಂದಕ್ಕಿಂತ ಹೆಚ್ಚು  ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ನಾಯಕ ಹಾಗೂ ವಕೀಲರಾಗಿರುವ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.  ಪ್ರಧಾನಿ ನರೇಂದ್ರ ಮೋದಿ ಅವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ವಡೋದರ ಮತ್ತು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದುದು ಇದಕ್ಕೊಂದು  ತಾಜಾ ಉದಾಹರಣೆಯಾಗಿತ್ತು.  ಇಂತಹ ಸಂದರ್ಭಗಳನ್ನು ನಿವಾರಿಸುವ ಸಲುವಾಗಿ ಉಪಾಧ್ಯಾಯ ಅವರು ಜನತಾ ಪ್ರಾತಿನಿಧ್ಯ ಕಾಯ್ದೆಯ  ೩೩(೭) ಸೆಕ್ಷನ್ ಗೆ ತಿದ್ದುಪಡಿ ಮಾಡಬೇಕು ಎಂದು ಕೋರಿದ್ದರು.  ಚುನಾವಣೆಗಳಲ್ಲಿ ಪಕ್ಷೇತರರು ಸ್ಪರ್ಧಿಸುವುದರ ವಿರುದ್ಧವೂ ನಿರ್ದೇಶನ ನೀಡುವಂತೆ ಉಪಾಧ್ಯಾಯ ಅವರು ಸುಪ್ರೀಂಕೋರ್ಟನ್ನು ಕೋರಿದ್ದರು.

2018: ನವದೆಹಲಿ:  ಹತ್ತು ಮತ್ತು ೧೨ನೇ ತರಗತಿಯ ಕೆಲವು ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಸಿಬಿಎಸ್ ಇ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು.  ಮರುಪರೀಕ್ಷೆ ನಡೆಸುವ ಸಿಬಿಎಸ್ ಇ ವಿವೇಚನಾಧಿಕಾರದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಲಾಗದು ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಈದಿನ ಹೇಳಿತು.  ೧೦ನೇ ತರಗತಿಯ ಗಣಿತ (ಮ್ಯಾಥ್ಸ್) ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಲು  ಸಿಬಿಎಸ್ ಇ ಕೈಗೊಂಡಿದ್ದ ನಿರ್ಧಾರವನ್ನು ಕೇರಳದ ೧೫ರ ಹರೆಯದ ವಿದ್ಯಾರ್ಥಿ ರೋಹನ್ ಮ್ಯಾಥ್ಯೂ ಪ್ರಶ್ನಿಸಿದ್ದು ಸೇರಿದಂತೆ ಸಿಬಿಎಸ್ ಇ ನಿರ್ಧಾರಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು.  ದೆಹಲಿಯಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸಾಬೀತಾಗದ ಊಹೆಯ ಆಧಾರದಲ್ಲಿ ಗಣಿತ ಪರೀಕ್ಷೆಯನ್ನು ರದ್ದು ಪಡಿಸಲು ಸಿಬಿಎಸ್ ಕೈಗೊಂಡ ನಿರ್ಧಾರವು ಮಾರ್ಚ್ ೨೮ರಂದು ಪರೀಕ್ಷೆಗೆ ಹಾಜರಾಗಿದ್ದ ರಾಷ್ಟ್ರ ಹಾಗೂ ಹೊರದೇಶಗಳ  ೧೬ ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಮಸುಕುಗೊಳಿಸಿದೆ ಎಂದು ಮ್ಯಾಥ್ಯೂ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.  ಅನಸೂಯ ಮತ್ತು ಗಾಯತ್ರಿ ಥಾಮಸ್ ಎಂಬ ಇಬ್ಬರು ಸಹೋದರಿಯರು ಸಲ್ಲಿಸಿದ್ದ ಇನ್ನೊಂದು ಅರ್ಜಿಯು ಕೇವಲ ದೆಹಲಿ ಮತ್ತು ಹರಿಯಾಣದಲ್ಲಿ ೧೦ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕಾಗಿ ವಿಷಯದ ಮೇಲೆ ದೇಶವ್ಯಾಪಿ ಮರು ಪರೀಕ್ಷೆ ನಡೆಸಲು ಸಿಬಿಎಸ್ ಇ ಕೈಗೊಂಡ ನಿರ್ಧಾರವನ್ನು ರದ್ದು ಪಡಿಸುವಂತೆ ಸುಪ್ರೀಂಕೋರ್ಟನ್ನು ಕೋರಿತ್ತು. ೧೦ ಮತ್ತು ೧೨ನೇ ತರಗತಿಗಳ ಸಿಬಿಎಸ್ ಇ ಪ್ರಶ್ನೆಪತ್ರಿಕೆಗಳ ಸೋರಿಕೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಘಟನೆಯು ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ಮಕ್ಕಳ ಭವಿಷ್ಯ ರಕ್ಷಣೆಯ ಕೆಲಸದಲ್ಲಿ ಸಾಮೂಹಿಕವಾಗಿ ವಿಫಲವಾಗಿರುವುದನ್ನು ಪ್ರತಿಫಲಿಸಿವೆ ಎಂದು ಅವರು ಪ್ರತಿಪಾದಿಸಿದ್ದರು.

2018: ವಾಷಿಂಗ್ಟನ್:  ಕೇಂಬ್ರಿಜ್ ಅನಾಲಿಟಿಕಾ ರಾಜಕೀಯ ಸಮಾಲೋಚನಾ ಸಂಸ್ಥೆಯು ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕಳವು ನಡೆಸಿದ ಹಗರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಸಿಇಒ (ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ) ಮಾರ್ಕ್ ಜುಕೆರ್ ಬರ್ಗ್ ಮುಂದಿನವಾರ ಕಾಂಗ್ರೆಸ್ ಮುಂದೆ ಸಾಕ್ಷ್ಯ ನೀಡಲಿದ್ದಾರೆ.  ಹೌಸ್ ಎನರ್ಜಿ ಅಂಡ್ ಕಾಮರ್ಸ್ ಸಮಿತಿಯು ಏಪ್ರಿಲ್ ೧೧ರಂದು ಬೆಳಗ್ಗೆ ೧೦ ಗಂಟೆಗೆ ವಿಚಾರಣಾ ಸಮಯ ನಿಗದಿ ಪಡಿಸಿದ್ದು, ನಿರ್ಣಾಯಕ ಗ್ರಾಹಕ ಮಾಹಿತಿ ಖಾಸಗಿ ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಉದ್ದೇಶಿಸಿದೆ. ಇದರಿಂದ ಆನ್ ಲೈನಿನಲ್ಲಿ ತಮ್ಮ ವೈಯಕ್ತಿಕ ಮಾಹಿತಿಗೆ ಏನಾಗುತ್ತದೆ ಎಂಬುದನ್ನು ಅರಿತುಕೊಳ್ಳಲು ಅಮೆರಿಕನ್ನರಿಗೆ ನೆರವಾಗಲಿದೆ ಎಂದು ಸಮಿತಿಅಧ್ಯಕ್ಷ ಗ್ರೆಗ್ ವಾಲ್ಡನ್ ಮತ್ತು ಡೆಮಾಕ್ರಾಟ್ ಸದಸ್ಯ ಫ್ರಾಂಕ್ ಪಲ್ಲೋನ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು. ‘ಸಮಿತಿಯ ಮುಂದೆ ಸಾಕ್ಷ್ಯ ನುಡಿಯಲು ಜುಕೆರ್ ಬರ್ಗ್ ಅವರು ಇಚ್ಛಿಸಿರುವುದನ್ನು ನಾವು ಮೆಚ್ಚುತ್ತೇವೆ ಮತ್ತು ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಾವು ಎದುರು ನೋಡುತ್ತೇವೆ ಎಂದು ಅವರು ನುಡಿದರು.  ಜುಕೆರ್ ಬರ್ಗ್ ಅವರು ಕೇಂಬ್ರಿಜ್ ಅನಾಲಿಟಿಕಾ ಹಗರಣದ ಪರಿಣಾಮವಾಗಿ ತೀವ್ರ ಬಿರುಗಾಳಿಗೆ ಸಿಲುಕಿರುವ ತಮ್ಮ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಮಿತಿಯ ಮುಂದೆ ಹಲವಾರು ಬಾರಿ ವಿಚಾರಣೆ ಎದುರಿಸುವ ಸಾಧ್ಯತೆಗಳಿವೆ.  ೨೦೧೬ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕೆ ಡೊನಾಲ್ಡ್ ಟ್ರಂಪ್ ಅವರು ಬಾಡಿಗೆಗೆ ಪಡೆದಿದ್ದ ಬ್ರಿಟಿಷ್ ರಾಜಕೀಯ ಸಮಾಲೋಚನಾ ಕಂಪೆನಿಯು ಅಮೆರಿಕನ್ ಮತದಾರರ ಮೇಲೆ ಪ್ರಭಾವ ಬೀರಲು ಬಳಸುವ ಸಲುವಾಗಿ ರಾಜಕೀಯ ಮನಸ್ಥಿತಿ ದಾಖಲೆಗಳನ್ನು ಸೃಷ್ಟಿಸಲು ೫೦ ಮಿಲಿಯ (೫ ಕೋಟಿ) ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕದ್ದಿತ್ತು.  ಜುಕೆರ್ ಬರ್ಗ್ ಅವರನ್ನು ಏಪ್ರಿಲ್ ೧೦ರಂದು ಸೆನೆಟ್ ನ್ಯಾಯಾಂಗ ಸಮಿತಿಯ ಮುಂದೆ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಮತ್ತು ಟ್ವಿಟ್ಟರ್ ಮುಖ್ಯಸ್ಥ ಜ್ಯಾಕ್ ಡೋರ್ಸೆ ಅವರ ಜೊತೆಗೆ ಹಾಜರಾಗುವಂತೆಯೂ ಆಹ್ವಾನಿಸಲಾಗಿದೆ. ಈ ವಿಚಾರಣೆಯಲ್ಲಿ ಜುಕೆರ್ ಬರ್ಗ್ ಅವರ ಪಾಲ್ಗೊಳ್ಳುವಿಕೆ ಇನ್ನೂ ದೃಢ ಪಟ್ಟಿಲ್ಲ. ಆದರೆ ಸೆನೆಟರ್ ಡಯಾನ್ನೆ ಫೀನ್ಸ್ಟೀನ್ ಅವರು ಸ್ಯಾನ್ ಪ್ರಾನ್ಸಿಸ್ಕೋ ಕ್ರಾನಿಕಲ್ ಗೆ ಜುಕೆರ್ ಬರ್ಗ್ ಅವರ ಆ ವಿಚಾರಣೆಗೆ ಹಾಜರಾಗಲು ಒಪ್ಪಿದ್ದಾರೆ ಎಂದು ತಿಳಿಸಿದರು.

2018: ನವದೆಹಲಿ: ತಮ್ಮ ಸರ್ಕಾರವು ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ನೀಡಿದಷ್ಟು ಗೌರವ ಮತ್ತು ಮಹತ್ವವನ್ನು ಬೇರೆ ಯಾವ ಸರ್ಕಾರವೂ ಈವರೆಗೆ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  ಇಲ್ಲಿ ಹೇಳಿದರು. ಸಂಸದರಿಗೆ ವಸತಿ ಸೌಕರ್ಯ ಕಲ್ಪಿಸುವ ಸಲುವಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸ್ಮರಣಾರ್ಥ ರೂಪಿಸಲಾದ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ನಮ್ಮ ಸರ್ಕಾರ ಅಂಬೇಡ್ಕರ್ ಅವರಿಗೆ ಸೂಕ್ತ ಸ್ಥಾನ ನೀಡಿದೆ ಎಂದು ಹೇಳಿದರು.  ಈ ನೂತನ ಕಟ್ಟಡವು ಹೊಸದಾಗಿ ಚುನಾಯಿತರಾದ ಶಾಸಕರಿಗೆ ತಮ್ಮ ಪ್ರಯಾಣದ ನಡುವಿನ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತದೆ.  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗೆ (ಎಸ್ ಸಿ/ ಎಸ್ ಟಿ ಕಾಯ್ದೆ) ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಭುಗಿಲೆದ್ದ ದೇಶವ್ಯಾಪಿ ದಲಿತ ಸಮೂಹಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ, ’ಅಂಬೇಡ್ಕರ್ ಅವರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿದರು.  "ನಾವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಡಾ. ಅಂಬೇಡ್ಕರ್ ಸಾರಿದ ಮೂಲ ತತ್ವಗಳಲ್ಲಿ ಸಾಮರಸ್ಯ ಮತ್ತು ಏಕತೆ ಮುಖ್ಯವಾಗಿವೆ. ಬಡವರಲ್ಲಿ ಬಡವರಿಗಾಗಿ ಕೆಲಸ ಮಾಡುವುದೇ ನಮ್ಮ ಧ್ಯೇಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.  ಎಸ್ಸಿ/ಎಸ್ಟಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ತೀರ್ಪು ದುರ್ಬಲಗೊಳಿಸಿದೆ ಎಂದು ಆಪಾದಿಸಿ, ಅದರ ವಿರುದ್ಧ  ದಲಿತ ಸಮೂಹಗಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ  ೧೦ ಮಂದಿ ಸಾವನ್ನಪ್ಪಿ, ೬೦ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು. ಅಪಾರ ಆಸ್ತಿಪಾಸ್ತಿಯೂ ನಷ್ಟವಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ಹೊಂದಿದ್ದ ಪರಿಕಲ್ಪನೆಯನ್ನು ತಮ್ಮ ಸರ್ಕಾರ ನನಸುಗೊಳಿಸಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸಂಪೂರ್ಣಗೊಳಿಸಿದೆ. ಹಿಂದಿನ ಯುಪಿಎ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸದೆ ಅದರ ಹೆಸರಿನಲ್ಲಿ ವರ್ಷಗಟ್ಟಲೆ ಕಾಲಹರಣ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.  ಅಂಬೇಡ್ಕರ್ ಅವರು ಕೊನೆಯುಸಿರೆಳೆದ ಅಲಿಪುರ ರಸ್ತೆಯಲ್ಲಿರುವ ಮನೆಯನ್ನು ಅವರು ಹುಟ್ಟಿದ ದಿನದಂದು (ಏಪ್ರಿಲ್ ೧೩) ದೇಶಕ್ಕೆ ಸಮರ್ಪಿಸಲಾಗುವುದು ಎಂದು ಮೋದಿ ಹೇಳಿದರು.


2017: ಡಮಾಸ್ಕಸ್ (ಐಎಎನ್ಎಸ್/ ಎಎಫ್ಪಿ): ಬಂಡುಕೋರರ ಹಿಡಿತದಲ್ಲಿರುವ ವಾಯವ್ಯ ಸಿರಿಯಾದ ಖಾನ್ಶೇಕ್ಹೌನ್ ಪಟ್ಟಣದ ಮೇಲೆ ನಡೆದ ರಾಸಾಯನಿಕ ದಾಳಿಗೆ 11 ಮಕ್ಕಳು ಸೇರಿ 58 ಮಂದಿ ಬಲಿಯಾದರು. ದಾಳಿಯಲ್ಲಿ 160 ಮಂದಿ ಅಸ್ವಸ್ಥ ಗೊಂಡರು. ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆ ತಂದ ಬಳಿಕವೇ ಹೆಚ್ಚಿನವರು ಅಸುನೀಗಿದರು. ರಾಸಾಯನಿಕ ದಾಳಿಗೆ ಒಳಗಾದ  ಹೆಚ್ಚಿನವರು ಉಸಿರುಕಟ್ಟಿ ಮೃತರಾದರು. ಕೆಲವರು ವಾಂತಿ ಮಾಡಿ ಕೊಂಡಿದ್ದರು, ಪ್ರಜ್ಞಾಹೀನರಾಗಿದ್ದರು, ಇನ್ನುಳಿದವರ ಬಾಯಲ್ಲಿ ನೊರೆ ಕಂಡು ಬಂದಿತು ಎಂದು ಸಿರಿಯಾದ ಮಾನವ ಹಕ್ಕುಗಳ ಕಣ್ಗಾವಲು ಸಮಿತಿ ತಿಳಿಸಿತು. ರಾಸಾಯನಿಕ ದಾಳಿಯಿಂದ ಗಾಯಗೊಂಡವರು ಮತ್ತು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದ ಪಟ್ಟಣದ ಆಸ್ಪತ್ರೆ  ಮೇಲೆಯೂ ಬಾಂಬ್ ದಾಳಿ ನಡೆಸಲಾಯಿತು. ದಾಳಿಯ ರಭಸಕ್ಕೆ ಆಸ್ಪತ್ರೆ ಪ್ರವೇಶ ದ್ವಾರಕ್ಕೆ ಹಾನಿಯಾಯಿತು. ಯಾವ ಬಗೆಯ ರಾಸಾಯನಿಕ ಬಳಸಿ  ದಾಳಿ ನಡೆಸಲಾಗಿದೆ ಎಂಬುದು  ಸ್ಪಷ್ಟವಾಗಲಿಲ್ಲ. ದಾಳಿ ನಡೆಸಿದ್ದು ಸಿರಿಯಾ ಸೇನೆಯೇ ಅಥವಾ  ಮಿತ್ರರಾಷ್ಟ್ರವಾದ ರಷ್ಯಾದ ಪಡೆಗಳೇ ಎಂಬುದು ಸ್ಪಷ್ಟವಾಗಲಿಲ್ಲ. ರಷ್ಯಾ ತಾನು ದಾಳಿ ನಡೆಸಿಲ್ಲ ಎಂದು ಸ್ಪಷ್ಟ ಪಡಿಸಿತು. ವಿಶ್ವಸಂಸ್ಥೆ ಮತ್ತು ಐರೋಪ್ಯ ಒಕ್ಕೂಟವು ಬ್ರಸಲ್ಸ್ನಲ್ಲಿಸಿರಿಯಾದ ಭವಿಷ್ಯಕುರಿತು ಆಯೋಜಿಸಿರುವ ಸಮ್ಮೇಳನದ ಆರಂಭದ ದಿನವೇ ದಾಳಿ ನಡೆಯಿತು. ಖಾನ್ಶೇಕ್ಹೌನ್ ಪಟ್ಟಣದ ಮೇಲೆ  ಹಾರಾಟ ನಡೆಸಿದ್ದ ಯುದ್ಧ ವಿಮಾನ ವೊಂದು ವಿಷಯುಕ್ತ ಅನಿಲವನ್ನು ಬಿಡುಗಡೆ ಮಾಡಿದೆಎಂದು ಕಣ್ಗಾವಲು ಸಮಿತಿ  ಹೇಳಿತು. ಸುಳ್ಳು ಆರೋಪ:  ರಾಸಾಯನಿಕ ದಾಳಿ ನಡೆದ ವರದಿ ಸುಳ್ಳು ಆರೋಪ ಎಂದು ಸಿರಿಯಾದ ಭದ್ರತಾ ಮೂಲಗಳು ಹೇಳಿದವುವಿರೋಧಿ ಪಡೆಗಳು ತಾವು ಮಾಡಿದ್ದನ್ನು ಬೇರೆಯವರ ಮೇಲೆ ಹಾಕುತ್ತಿವೆಅದು ಎಂದು ದೂರಿತು. ತುರ್ತು ಸಭೆಗೆ ಫ್ರಾನ್ಸ್ ಒತ್ತಾಯ: ಸಿರಿಯಾ ರಾಸಾಯನಿಕ ದಾಳಿ ಸಂಬಂಧ  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತು ಸಭೆ ಕರೆಯಬೇಕು ಎಂದು ಫ್ರಾನ್ಸ್  ಒತ್ತಾಯಿಸಿತು. ಇದೊಂದು ಹೇಯ ಕೃತ್ಯಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜಿಯಾನ್ ಮಾರ್ಕ್ ಅರೌಲ್ಟ್ ಹೇಳಿದರು
2017: ಲಖನೌ: ಚುನಾವಣಾ ಪ್ರಣಾಳಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು, ಸಣ್ಣ ಮತ್ತು ಬಡ ವರ್ಗದ ಸುಮಾರು 2.15 ಕೋಟಿ ರೈತರ 36,359 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿತು.  ಉತ್ತರಪ್ರದೇಶ ಸರ್ಕಾರ ರೈತರ ರೂ.1 ಲಕ್ಷದವರೆಗಿನ ಸಾಲ ಮನ್ನಾ ಮಾಡಲು ಸಮ್ಮತಿಸಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿದವು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯ ನೇತೃತ್ವ ವಹಿಸಿದ್ದ ಆದಿತ್ಯನಾಥ್, ಚುನಾವಣೆ ಭರವಸೆ ಈಡೇರಿಸಿದರು. ಉತ್ತರ ಪ್ರದೇಶದಲ್ಲಿ ಒಟ್ಟಾರೆ 2.3 ಲಕ್ಷ ರೈತರ ಪೈಕಿ ಶೇ 92.5 ರಷ್ಟು ರೈತರು ಬಡ ಮತ್ತು ಸಣ್ಣ ರೈತರಾಗಿದ್ದಾರೆ. ಸುಮಾರು 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಹಿರಿಯ ಸಚಿವರಾದ ಸಿದ್ಧಾರ್ಥನಾಥಸಿಂಗ್ ಮತ್ತು ಶ್ರೀಕಂಠ ಶರ್ಮಾ ಅವರು ಮಾಧ್ಯಮಗಳಿಗೆ ತಿಳಿಸಿದರು. ರೈತರ ಸಾಲ ಮನ್ನಾ ಮಾಡಲು 30,729 ಕೋಟಿ ರೂಪಾಯಿ ಅಗತ್ಯವಿದೆ ಎಂದು ಅವರು ತಿಳಿಸಿದರು.
2017: ನವದೆಹಲಿ: ಉತ್ತರ ಪ್ರದೇಶದಲ್ಲಿ ಶೀಘ್ರದಲ್ಲೇ ಯೋಗ ಶಿಕ್ಷಣ ಕಾರ್ಯಕ್ರಮ ಕಡ್ಡಾಯವಾಗಲಿದ್ದು, ಸಂಬಂಧ ಕಾರ್ಯಪ್ರವೃತ್ತವಾಗುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರ ಜೊತೆಗೆ ಹೆಣ್ಣು ಮಕ್ಕಳಿಗೆ ಸ್ವ ರಕ್ಷಣಾ ತರಬೇತಿಯನ್ನೂ ಶಾಲೆಯಲ್ಲಿ ನೀಡುವುದಕ್ಕೂ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಆದಿತ್ಯನಾಥ್, ರಾಣಿ ಲಕ್ಷ್ಮಿಬಾಯಿ ಆತ್ಮರಕ್ಷಕ ಕಾರ್ಯಕ್ರಮ ಹಾಗೂ ಯೋಗ ಶಿಕ್ಷಣ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೆಗೊಳಿಸಲು ಸಿದ್ಧರಾಗುವಂತೆ ಸೂಚನೆ ನೀಡಿದರು. ಸಾಮೂಹಿಕ ನಕಲು ಹಾಗೂ ಸರ್ಕಾರಿ ಶಿಕ್ಷಕರು ಖಾಸಗಿ ತರಬೇತಿ ಕೇಂದ್ರ ನಡೆಸುತ್ತಿದ್ದರೆ ಅಂಥವರ ವಿರುದ್ಧ ಪ್ರಥಮ ತನಿಖಾ ವರದಿ ದಾಖಲಿಸುವಂತೆ ಸಿಎಂ ಸೂಚಿಸಿದರು. ದುಬಾರಿ ವಂತಿಗೆ ವಸೂಲಿ ಮಾಡುವ ಖಾಸಗಿ ಶಾಲೆ ಮತ್ತು ಕಾಲೇಜುಗಳ ನಿಯಂತ್ರಣಕ್ಕೆ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು.

2017: ಜೈಪುರ: ಜಾನುವಾರುಗಳನ್ನು ವಧೆ ಮಾಡುವಂತಹ ಎಲ್ಲ ಕಸಾಯಿಖಾನೆಗಳನ್ನು ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಅಜ್ಮೇರ್ ದರ್ಗಾದ ಧರ್ಮ ಗುರು ಹೇಳಿದರು. ಮುಸ್ಲಿಮರು ಕಸಾಯಿಖಾನೆಗಳಿಂದ ದೂರವಿರಬೇಕು ಮತ್ತು ಗೋಮಾಂಸ ಸೇವಿಸುವುದನ್ನು ತ್ಯಜಿಸಬೇಕು. ಮೂಲಕ ಧನಾತ್ಮಕ ಸಂದೇಶವೊಂದನ್ನು ದೇಶಕ್ಕೆ ನೀಡಬೇಕು ಎಂದು ದರ್ಗಾ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಹೇಳಿದರು. ಸೂಫಿ ಸಂತ ಖ್ವಾಜಾ ಮೊಹಿನುದ್ದೀನ್ ಚಿಸ್ತಿ ದರ್ಗಾದಲ್ಲಿ 805ನೇ ಉರುಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಗಾ ದಿವಾನ್ ತಾನು ಮತ್ತು ತನ್ನ ಕುಟುಂಬ ಇನ್ನು ಮುಂದೆ ಗೋಮಾಂಸ ಸೇವನೆ ಮಾಡುವುದಿಲ್ಲ ಎಂದು ತೀರ್ಮಾನ ಪ್ರಕಟಿಸಿದರು. ಗೋಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಗುಜರಾತ್ ಸರ್ಕಾರದ ನಡೆಯನ್ನು ಸ್ವಾಗತಿಸಿದ ದಿವಾನ್, ಗೋವು ಧಾರ್ಮಿಕ ನಂಬಿಕೆಯ ಸಂಕೇತವಾಗಿದೆ. ಸರ್ಕಾರ ಮಾತ್ರವಲ್ಲ, ಧರ್ಮದ ಅನುಯಾಯಿಗಳೆಲ್ಲರೂ ಗೋವಿನ ರಕ್ಷಣೆಗೆ ಬದ್ಧರಾಗಿರಬೇಕು ಎಂದು ಹೇಳಿದರು.
2009: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ (86) ಬೆಂಗಳೂರು ನಗರದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಸುಶೀಲಮ್ಮ, ಪುತ್ರರಾದ ಅಮೆರಿಕದಲ್ಲಿ ವೈದ್ಯರಾಗಿರುವ ಡಾ. ಅರವಿಂದ್, ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ. ಅಶೋಕ್ ಹಾರನಹಳ್ಳಿ ಅವರನ್ನು ಅಗಲಿದರು. ಅನಾರೋಗ್ಯದ ನಿಮಿತ್ತ ಅವರು ಚಿಕಿತ್ಸೆಗಾಗಿ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲಾಗಿದ್ದರು. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿ 1923ರಲ್ಲಿ ಜನಿಸಿದ್ದ ರಾಮಸ್ವಾಮಿ, 1942ರಲ್ಲಿ ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲುವಾಸ ಅನುಭವಿಸಿದ್ದರು. ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದ್ದ ಅವರು, 1946ರಲ್ಲಿ ಬೆಳಗಾವಿಯ ರಾಜಾ ಲಖಮನಗೌಡ ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದರು. ಆರಂಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ ನಂತರ ಪ್ರಾದೇಶಿಕ ವಿದ್ಯಾರ್ಥಿ ಕಾಂಗ್ರೆಸ್ ಸಮಿತಿ ಸ್ಥಾಪಿಸುವ ಮೂಲಕ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದರು. ಕರ್ನಾಟಕ ಸೇವಾ ದಳದ ಮುಖ್ಯಸ್ಥರಾಗಿದ್ದಾಗ ಮಹಾತ್ಮ ಗಾಂಧಿ ಅವರನ್ನು 1947ರಲ್ಲೇ ಭೇಟಿ ಮಾಡಿದ್ದರು. ಕರ್ನಾಟಕ ಏಕೀಕರಣ ಚಳವಳಿ ಮುಖಂಡರಲ್ಲಿ ಒಬ್ಬರಾಗಿದ್ದ ಅವರು, 'ಕರ್ನಾಟಕ ಏಕೀಕರಣ ಮಸೂದೆ'ಗೆ ಸರ್ವಪಕ್ಷ ಸಭೆಯ ಅನುಮೋದನೆ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1991ರಲ್ಲಿ ಕೆಪಿಸಿಸಿಯ ತಾತ್ಕಾಲಿಕ ಅಧ್ಯಕ್ಷರಾಗಿದ್ದ ಅವರು 14 ವರ್ಷ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಒಂದು ಅವಧಿಗೆ ವಿಧಾನಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಂಸದೀಯ ವ್ಯವಹಾರ ಹಾಗೂ ಮುಜರಾಯಿ ಸಚಿವರಾಗಿದ್ದರು. 2000-2001ರಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

2009: ಹೃದಯ ಚಿಕಿತ್ಸೆಯಲ್ಲಿ ಇತ್ತೀಚಿನ ಬೆಳವಣಿಗೆಯಾದ 'ಕೀಹೋಲ್' ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಬಳಸಿ, ಗುಲ್ಬರ್ಗದ ಯುವಕನ ಹೃದಯ ಕವಾಟವನ್ನು ಸರಿಪಡಿಸಲಾಯಿತು. ಸಾಮಾನ್ಯವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಹೃದಯವನ್ನು ತಲುಪಲು ಎದೆಯ ಮೂಳೆಯನ್ನು ಗರಗಸದಂತಹ ಉಪಕರಣದಿಂದ ಕತ್ತರಿಸಲಾಗುತ್ತದೆ. ಸುಮಾರು 14 ಇಂಚಿನಷ್ಟು ಗುರುತು ಶಸ್ತ್ರಚಿಕಿತ್ಸೆಯ ನಂತರ ಉಳಿಯುತ್ತದೆ. ಇದರಿಂದ ಶಾಶ್ವತವಾದ ಕಲೆಯೂ ಉಳಿಯುತ್ತದೆ. ಇದರಿಂದ ಮಹಿಳೆಯರು ರವಿಕೆ ಧರಿಸಲು ಮುಜುಗರ ಪಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಇದಕ್ಕೆ ಪರಿಹಾರವಾಗಿ ಮೂಳೆಯನ್ನು ಕತ್ತರಿಸದೆ ಹೃದಯ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ತಜ್ಞರು ಅಭಿವೃದ್ಧಿಪಡಿಸಿದ್ದು., ಇದಕ್ಕೆ 'ಕೀ ಹೋಲ್' ಎಂದು ಹೆಸರಿಸಲಾಗಿದೆ.

2009: ಎಲ್‌ಟಿಟಿಇಗೆ ಸೇರಿದ್ದ ಇನ್ನಷ್ಟು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸೇನೆ ಮುಂದಾದ ಸಂದರ್ಭ ಭದ್ರತಾ ಪಡೆಗಳು ಪ್ರಭಾಕರನ್ ಅವರ ಗುಂಡು ನಿರೋಧಕ ಲಿಮೋಸಿನ್ ಕಾರನ್ನು ವಶಪಡಿಸಿಕೊಂಡವು. ಅವರು ಸೇನೆಯ ಕಾರ್ಯಾಚರಣೆಯ ಪ್ರದೇಶದ ಸಮೀಪದಲ್ಲೇ ಇರುವರೆಂದು ಶಂಕಿಸಲಾಯಿತು. ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್ ಮತ್ತು ಅವರ ಹಿರಿಯ ಕಮಾಂಡರ್ ಪೊಟ್ಟು ಅಮ್ಮಾನ್ ಪುದುಕುಡಿಯಿರಿಪ್ಪು ಪ್ರದೇಶದಲ್ಲಿ ಅಡಗಿಕೊಂಡಿದ್ದರೂ ಶ್ರೀಲಂಕಾ ಸೇನೆ ಸುತ್ತುವರಿಯುವ ಸ್ವಲ್ಪ ಮುನ್ನ ಸ್ಥಳದಿಂದ ತಪ್ಪಿಸಿಕೊಂಡರು ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳಿದರು.

2009: ಪ್ರಸಕ್ತ ಸಾಲಿನ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಕಥೆಗಾರ ಅಶೋಕ ಹೆಗಡೆ ಆಯ್ಕೆಯಾದರು. ಸಾಹಿತ್ಯ ಕ್ಷೇತ್ರದ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಬಿ.ಎಚ್.ಶ್ರೀ ಪ್ರಶಸ್ತಿಗೆ ಅಶೋಕ ಅವರ 'ವಾಸನೆ ಶಬ್ಧ ಬಣ್ಣ ಇತ್ಯಾದಿ..' ಕಥಾ ಸಂಕಲನ ಆಯ್ಕೆಯಾಯಿತು. ಅಶೋಕ ಸಿದ್ದಾಪುರ ತಾಲ್ಲೂಕಿನ ಗುಂಜಗೋಡಿನವರು. 'ಒಂದು ತಗಡಿನ ಚೂರು', 'ಒಳ್ಳೆಯವನು' ಕಥಾ ಸಂಕಲನ. 'ಅಶ್ವಮೇಧ' ಕಾದಂಬರಿ ಅವರ ಪ್ರಕಟಿತ ಕೃತಿಗಳು. 60ಕ್ಕೂ ಹೆಚ್ಚು ಸಣ್ಣ ಕಥಾ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು. ಎಂ.ಜಿ.ಹೆಗಡೆ, ಶ್ರೀಪಾದ ಭಟ್ಟ, ಪ್ರಾ.ಎಂ.ರಮೇಶ, ರಾಜಶೇಖರ ಹೆಬ್ಬಾರ ಅವರನ್ನೊಳಗೊಂಡ ಸಮಿತಿ ಅಶೋಕ ಅವರ ಕೃತಿಯನ್ನು ಆಯ್ಕೆ ಮಾಡಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಟಿ.ನಾರಾಯಣ ಭಟ್ಟ ಸಿರಸಿಯಲ್ಲಿ ತಿಳಿಸಿದರು.

2008: ಸುಮಾರು ನಾಲ್ಕು ದಶಕಗಳ ನಂತರ ಭಾರತದಲ್ಲಿ ಪಾಕಿಸ್ಥಾನದ ಸಿನಿಮಾ ತೆರೆಕಾಣುವ ಮೂಲಕ ಉಭಯ ದೇಶಗಳ ಚಿತ್ರೋದ್ಯಮಗಳಿಗೆ ಹೊಸ ಭರವಸೆ ಮೂಡಿಸಿತು. ಅದೇ ರೀತಿ ಮೂರು ದಶಕಗಳ ಬಳಿಕ ಬಾಲಿವುಡ್ ಚಿತ್ರಗಳೆರಡು ಪಾಕಿಸ್ಥಾನದಲ್ಲಿ ಪ್ರದರ್ಶನಗೊಂಡವು. ನಿರ್ದೇಶಕ ಶೋಯೇಬ್ ಮನ್ಸೂರ್ ಅವರ ಪ್ರಥಮ ಚಿತ್ರ `ಖುದಾ ಕೆ ಲಿ ಯೆ' ಈದಿನ ಭಾರತದಾದ್ಯಂತ ಸುಮಾರು 20 ನಗರಗಳಲ್ಲಿ ತೆರೆ ಕಂಡಿತು. ಇದೇ ವೇಳೆ ಬಾಲಿವುಡ್ ಚಿತ್ರಗಳಾದ `ಮುಘಲ್-ಎ-ಅಝಂ' ಹಾಗೂ ` ತಾಜ್ ಮಹಲ್-ಎ ಲವ್ ಸ್ಟೋರಿ' ಮೂರು ದಶಕಗಳ ಬಳಿಕ ಪಾಕಿಸ್ಥಾನದಲ್ಲಿ ತೆರೆಕಂಡವು. ಪಾಕಿಸ್ಥಾನವು ತನ್ನ ದೇಶದಲ್ಲಿ ಬಾಲಿವುಡ್ ಚಿತ್ರ ಪ್ರದರ್ಶನಕ್ಕೆ ವಿಧಿಸಿದ್ದ ನಿರ್ಬಂಧವನ್ನು ಇತ್ತೀಚೆಗೆ ತೆರವುಗೊಳಿಸಿದ್ದು ಈ ಬೆಳವಣಿಗೆಗೆ ಕಾರಣವಾಯಿತು.

2008: ಎರಡು ವರ್ಷಗಳ ಹಿಂದೆ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿಯವನ್ನು ಬಹಿರಂಗವಾಗಿ ಟೀಕಿಸಿದ್ದಕ್ಕೇ ಪಕ್ಷ ತ್ಯಜಿಸಿದ್ದ ಹಿರಿಯ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರು ಮತ್ತೆ ಬಿಜೆಪಿ ಸೇರಿದರು. ಅಡ್ವಾಣಿ ವಿರುದ್ಧ ನೀಡಿದ್ದ ಹೇಳಿಕೆಗೆ ಖುರಾನಾ ಅವರು ವಿಷಾದ ವ್ಯಕ್ತಪಡಿಸಿದ ಬಳಿಕ ಅವರನ್ನು ಪಕ್ಷಕ್ಕೆ ಮತ್ತೆ ಬರಮಾಡಿಕೊಳ್ಳಲಾಯಿತು. ಈ ಹಿಂದೆಯೂ ಅಡ್ವಾಣಿ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಖುರಾನಾ 2005 ರ ಡಿಸೆಂಬರಿನಲ್ಲಿ ಮರಳಿ ಬಿಜೆಪಿ ಸೇರಿದ್ದರು. 2006 ರಲ್ಲಿ ಮತ್ತೆ ಪಕ್ಷ ತ್ಯಜಿಸಿದ ಬಳಿಕ ಖುರಾನಾ ಉಮಾ ಭಾರತಿ ನೇತೃತ್ವದ ಭಾರತೀಯ ಜನಶಕ್ತಿ ಪಕ್ಷ ಸೇರಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಉಮಾ ಅವರು ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ಖುರಾನಾ ಕಳೆದ ವರ್ಷ ಭಾರತೀಯ ಜನಶಕ್ತಿ ಪಕ್ಷ ತೊರೆದಿದ್ದರು.

2008: ಚಿ. ಉದಯಶಂಕರ್ ಸ್ಮಾರಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಿತಿಯು 2005-06ನೇ ಸಾಲಿನ `ಉದಯಶಂಕರ್ ಪ್ರಶಸ್ತಿ'ಗೆ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ನಿರ್ದೇಶಕ ಕೆ. ಎಸ್. ಎಲ್. ಸ್ವಾಮಿ, ಗಾಯಕ ಡಾ. ಕೆ.ಜೆ. ಜೇಸುದಾಸ್ ಅವರನ್ನು ಆಯ್ಕೆ ಮಾಡಿತು. 2006-07ನೇ ಸಾಲಿಗೆ ಹಿರಿಯ ನಿರ್ಮಾಪಕ ಕೆ.ಸಿ.ಎನ್. ಗೌಡ, ನಿರ್ದೇಶಕ ಎಸ್. ಕೆ. ಭಗವಾನ್, ಗೀತ ರಚನೆಕಾರರಾದ ಆರ್. ಎನ್. ಜಯಗೋಪಾಲ್, ಗೀತಪ್ರಿಯ, ಗಾಯಕಿ ವಾಣಿ ಜಯರಾಮ್ ಅವರನ್ನು ಆಯ್ಕೆ ಮಾಡಲಾಗಿದೆ' ಎಂದು ಸಮಿತಿ ಕಾರ್ಯಾಧ್ಯಕ್ಷ ಡಾ. ಸಿ.ಸೋಮಶೇಖರ್ ತಿಳಿಸಿದರು.

2008: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಸೇವೆಯನ್ನು ಗ್ರಾಮೀಣ ಜನತೆಗೆ ತಲುಪಿಸುವ ಮಹತ್ವಾಕಾಂಕ್ಷೆಯ ಟೆಲಿ ಮೆಡಿಸಿನ್ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ದೊರಕಿತು. ಇದರಿಂದಾಗಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಣೆಗೊಂಡಂತಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಾಜ್ಯ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರು ಎರಡನೇ ಹಂತದ ಯೋಜನೆಯನ್ನು ಉದ್ಘಾಟಿಸಿದರು. ಕರ್ನಾಟಕದಲ್ಲಿ 2001ರಲ್ಲಿ ಆರಂಭವಾದ ಈ ಯೋಜನೆ ಇದುವರೆಗೆ ಕೇವಲ 11 ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿತ್ತು. ಎರಡನೇ ಹಂತದಲ್ಲಿ ಈಗ ಇನ್ನೂ 14 ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಕೋಲಾರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಈಗ ಈ ಯೋಜನೆ ಜಾರಿಗೆ ಬಂದಂತಾಯಿತು.

2008: ವಿವಾದಿತ ವೇಗದ ಬೌಲರ್ ಪಾಕಿಸ್ಥಾನದ ಶೋಯಬ್ ಅಖ್ತರ್ ಅವರು ತಮ್ಮ ಮೇಲೆ ಹೇರಿರುವ ಐದು ವರ್ಷಗಳ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದರು.

2008: ಅಹಮದಾಬಾದಿನ ಮೊಟೇರಾದ ಸರದಾರ ಪಟೇಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ಮನ್ ಅಬ್ರಹಾಮ್ ಬೆಂಜಮಿನ್ ಡಿ ವಿಲೀಯರ್ಸ್ ಫ್ಯೂಚರ್ ಕಪ್ ಸರಣಿಯ ಎರಡನೇ ಟೆಸ್ಟಿನಲ್ಲಿ ತಮ್ಮ ಜೀವನದ ಪ್ರಥಮ ದ್ವಿ ್ವಶತಕ ದಾಖಲಿಸಿದರು. ಇನ್ನಿಂಗ್ಸಿನಲ್ಲಿ 217 ರನ್ ಗಳಿಸಿ ಕ್ರೀಸಿನಲ್ಲಿ ಇರುವ ಅವರು ಅವರು ತಮ್ಮ ದ್ವಿಶತಕಕ್ಕೆ ತೆಗೆದುಕೊಂಡ ಸಮಯ 481 ನಿ. ಮತ್ತು 333 ಎಸೆತಗಳು. ಭಾರತದ ಆರು ಬೌಲರುಗಳನ್ನು ಮುಲಾಜಿಲ್ಲದೇ ದಂಡಿಸಿದ 24 ವರ್ಷದ ಬಲಗೈ ಬ್ಯಾಟ್ಸ್ಮನ್ ತಮ್ಮ ದ್ವಿಶತಕದ ಹಾದಿಯಲ್ಲಿ ತಮ್ಮದೇ ತಂಡದ ಹರ್ಷಲ್ ಗಿಬ್ಸ್ ಭಾರತದ ವಿರುದ್ಧ ಮಾಡಿದ್ದ 196 ರನ್ನುಗಳ ದಾಖಲೆಯನ್ನು ದಾಟಿ ನಡೆದರು. ಡಿವಿಲೀಯರ್ಸ್ 2005 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 178 ರನ್ನುಗಳು ಇದುವರೆಗಿನ ಸಾಧನೆಯಾಗಿತ್ತು.

2008: ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ತಮಿಳು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಬೆಂಗಳೂರಿನ ಚಿತ್ರಮಂದಿರಗಳ ಮೇಲೆ ದಾಳಿ ನಡೆದದ್ದನ್ನು ಪ್ರತಿಭಟಿಸಿ ತಮಿಳು ಚಿತ್ರೋದ್ಯಮದ ಗಣ್ಯರು ಚೆನ್ನೈಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಕರ್ನಾಟಕ ಮೂಲದ ನಟ ರಜನಿಕಾಂತ್ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಕುತೂಹಲಕ್ಕೆ ತೆರೆ ಎಳೆದರು. ಹೊಗೇನಕಲ್ ವಿವಾದವನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಕರ್ನಾಟಕದ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಎಸ್.ಎಂ. ಕೃಷ್ಣ ಅವರಿಗೆ ರಜನಿಕಾಂತ್ ಛೀಮಾರಿ ಹಾಕಿದರು.

2008: ಸುರಿನಾಮೆಯ ಗಣಿ ಪ್ರಾಂತ್ಯಕ್ಕೆ ತೆರಳುತ್ತಿದ್ದ ವಿಮಾನವೊಂದು ಹಿಂದಿನ ದಿನ ದಟ್ಟ ಅರಣ್ಯದಲ್ಲಿ ಕೆಳಗೆ ಬಿದ್ದು ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 19 ಪ್ರಯಾಣಿಕರು ಮೃತರಾದರು. ಸುರಿನಾಮೆಯ ಬ್ಲೂವಿಂಗ್ ಏರ್ ಲೈನ್ಸಿಗೆ ಸೇರಿದ ಈ ಅವಳಿ ಎಂಜಿನ್ ಹೊಂದಿದ ಅಂತೊನಾವ್-ಎ28 ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಒಳಗೊಂಡಂತೆ ಸುಮಾರು 19 ಮಂದಿ ಪ್ರಯಾಣಿಸುತ್ತಿದ್ದರು.

2007: ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತು. ಅಡಿಕೆಯ ಉತ್ಪನ್ನಗಳಾದ ಗುಟ್ಕಾ, ಪಾನ್ ಮಸಾಲಾಗಳ ಸೇವನೆ ಆರೋಗ್ಯಕ್ಕೆ ಹಾನಿಕರ ನಿಜ. ಆದರೆ ವೈಜ್ಞಾನಿಕವಾಗಿ ಪರೀಕ್ಷೆ ನಡೆಸದೇ ಅಡಿಕೆ ಪ್ಯಾಕೆಟ್ಟುಗಳ ಮೇಲೆ `ಹಾನಿಕಾರಕ ಎಚ್ಚರಿಕೆ' ಎಂದು ಲೇಬಲ್ ಅಂಟಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅಭಿಪ್ರಾಯಪಟ್ಟರು. ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಪ್ಯಾಕೇಟಿನ ಮೇಲೆ ಲೇಬಲ್ ಅಂಟಿಸುವಂತೆ ಸೂಚಿಸಿರುವ ಕೇಂದ್ರ ಸರ್ಕಾರದ ಆಹಾರ ಕಲಬೆರಕೆ ಕಾಯ್ದೆ ಅಡಿಯ ನಿಯಮ ರದ್ದು ಪಡಿಸುವಂತೆ ಕೋರಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ ಮತ್ತಿತರರು ಸಲ್ಲಿಸಿದ ಅರ್ಜಿಯ ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದರು.

2007: ಲೀಗ್ ಹಂತದಲ್ಲಿಯೇ ವಿಶ್ವಕಪ್ ಕ್ರಿಕೆಟಿನಿಂದ ಭಾರತವು ನಿರ್ಗಮಿಸಿದ ನಂತರ ಎದ್ದ ವಿವಾದಗಳ ಹಿನ್ನೆಲೆಯಲ್ಲಿ ಕೋಚ್ ಗ್ರೆಗ್ ಚಾಪೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2007: ಮಾಜಿ ಶಿಕ್ಷಣ ಸಚಿವ, ಕಾಂಗ್ರೆಸ್ಸಿನ ಹಿರಿಯ ಸದಸ್ಯ ಪ್ರೊ.ಬಿ.ಕೆ. ಚಂದ್ರಶೇಖರ್ ಅವರು ವಿಧಾನ ಪರಿಷತ್ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು.

2007: `ಆಕರ ಜೀವಕೋಶ' (ಸ್ಟೆಮ್ ಸೆಲ್ ಥೆರೆಪಿ) ಚಿಕಿತ್ಸೆಯ ಮೂಲಕ ಪಾರ್ಕಿನ್ ಸನ್ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸುವ ಪ್ರಯೋಗವನ್ನು ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿ ಮಾಡಿದೆ ಎಂದು ಆಸ್ಪತ್ರೆಯ ನರರೋಗ ವಿಭಾಗದ ನಿರ್ದೇಶಕ ಡಾ. ಕೆ. ವೆಂಕಟರಮಣ ನೀಲಂ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಕುಂಭಕೋಣಂನ ಸಿವಪುರಂ ಜಿಲ್ಲೆಯ ಮೆಕ್ಯಾನಿಕ್ ನಾರಾಯಣಸ್ವಾಮಿ (66) ಅವರ ಅಂತ್ಯಕ್ರಿಯೆಯನ್ನು ಅವರ ಪಾರ್ಥಿವ ಶರೀರದ ಜೊತೆಗೆ ಅವರ ಒಲವಿನ ಮೋರ್ರಿಸ್ ಮೈನರ್ ಕಾರನ್ನೂ ಸಮಾಧಿ ಮಾಡುವ ಮೂಲಕ ನೆರವೇರಿಸಲಾಯಿತು. ತಮಗೆ ಆಪ್ತವಾದ ಕಾರನ್ನು ತಮ್ಮ ಜೊತೆಗೇ ಸಮಾಧಿ ಮಾಡಬೇಕು ಎಂದು ನಾರಾಯಣ ಸ್ವಾಮಿ ಅಪೇಕ್ಷಿಸಿದ್ದರು. ಮೂರು ವಾರಗಳ ಅಸ್ವಸ್ಥತೆಯ ಬಳಿಕ ನಾರಾಯಣಸ್ವಾಮಿ ಮಾರ್ಚ್ 31ರಂದು ನಿಧನರಾಗಿದ್ದರು.

2007: ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ. ಮಾಲತಮ್ಮ ಅವರು ಕರ್ನಾಟಕ ರಾಜ್ಯ ಸರ್ಕಾರವು ನೀಡುವ `ಗುಬ್ಬಿ ವೀರಣ್ಣ' ಪ್ರಶಸ್ತೆಗೆ ಆಯ್ಕೆಯಾದರು.

2007: ಪ್ರತ್ಯೇಕ ಖಾಲಿಸ್ಥಾನ ರಾಷ್ಟ್ರದ ಮೂಲ ಪ್ರತಿಪಾದಕ ಜಗಜಿತ್ ಸಿಂಗ್ ಚೌಹಾಣ್ (80) ಅವರು ಹೊಷಿಯಾರ್ ಜಿಲ್ಲೆಯ ಟಂಡಾದಲ್ಲಿನ ಸ್ವಗೃಹದಲ್ಲಿ ನಿಧನರಾದರು.

2007: ಬೆಂಗಳೂರಿನ ಪ್ರತಿಷ್ಠಿತ ಗಂಗಾರಾಮ್ಸ್ ಪುಸ್ತಕ ಮಳಿಗೆಯ ಮಾಲೀಕ ಎನ್. ಗಂಗಾರಾಮ್ (79) ಹೃದಯಾಘಾತದಿಂದ ನಿಧನರಾದರು.

2006: ಕರ್ನಾಟಕದ ಹಿರಿಯ ಚಿತ್ರಕಲಾವಿದ ಮೈಸೂರಿನ ಕಾವೇರಿ ಕಲಾಕುಟೀರದ ತಪಸ್ವಿ ರಘೋತ್ತಮ ಪುಟ್ಟಿ (92) ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕುಂಚ ಹಿಡಿದ ಅವರು ಬದುಕಿನ ಸಂಜೆಯಲ್ಲಿ ಬಿಡಿಸಿದ ಕಲಾಕೃತಿಗಳ ಸಂಖ್ಯೆ 200ಕ್ಕೂ ಹೆಚ್ಚು.

2006: ವಿಚ್ಛೇದನದ ನಂತರ ಜೀವನಾಂಶಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಲೇರಿದ್ದ ದಿವಂಗತ ಶಾ ಬಾನು ಅವರ ಪತಿ ಹಿರಿಯ ವಕೀಲ ಮೊಹಮ್ಮದ್ ಖಾನ್ (94) ಮೃತರಾದರು. 1978ರಲ್ಲಿ ವಿಚ್ಛೇದನ ಪಡೆದಿದ್ದ 62 ವರ್ಷ ವಯಸ್ಸಿನ ಶಾಬಾನು ತಮಗೆ ಹಾಗೂ ತಮ್ಮ 5 ಜನ ಮಕ್ಕಳನ್ನು ನೋಡಿಕೊಳ್ಳಲು ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿ ಯಶಸ್ವಿಯಾಗಿದ್ದರು.

2006: ಬೆಂಗಳೂರಿನ ಚಿತ್ರಾ ಮಾಗಿಮೈರಾಜ್ (32) ಅವರು ಇಂಗ್ಲೆಂಡಿನ ಕೇಂಬ್ರಿಜ್ನಲ್ಲಿ ನಡೆದ ವಿಶ್ವ ಮಹಿಳೆಯರ ಬಿಲಿಯರ್ಡ್ಸ್ ಪಂದ್ಯದಲ್ಲಿ ಇಂಗ್ಲೆಂಡಿನ ಎಮ್ಮಾ ಬಾನ್ನಿ ಅವರನ್ನು 193-164 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಕಿರೀಟ ಗೆದ್ದುಕೊಂಡರು.

1979: ಪಾಕಿಸ್ಥಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ರಾವಲ್ಪಿಂಡಿಯಲ್ಲಿ ಗಲ್ಲಿಗೇರಿಸಲಾಯಿತು. ಜಾಗತಿಕ ನಾಯಕರು ಕ್ಷಮಿಸುವಂತೆ ಕೋರಿದರೂ ಅದನ್ನು ಒಪ್ಪದೆ ರಾಜಕೀಯ ವಿರೋಧಿಯ ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.

1968: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಜೇಮ್ಸ್ ಅರ್ಲ್ ರೇ ಟೆನ್ನೆಸ್ಸೀಯ ಮೆಂಫಿಸ್ ನಲ್ಲಿ ಹತ್ಯೆ ಮಾಡಿದ.

1957: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಮೈಸೂರು ಸರ್ಕಾರವು ತೀರ್ಮಾನಿಸಿತು.

1949: ಅಮೆರಿಕ ಸೇರಿದಂತೆ 12 ರಾಷ್ಟ್ರಗಳು ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ ಸಹಿ ಹಾಕಿದವು. ದ್ವಿತೀಯ ಜಾಗತಿಕ ಸಮರದ ಬಳಿಕ ಪೂರ್ವ ಯುರೋಪಿನಲ್ಲಿ ಬಲಗೊಂಡ ಸೋವಿಯತ್ ಸೇನೆಗೆ ಪ್ರತಿಯಾಗಿ ಸೇನಾಶಕ್ತಿಯೊಂದನ್ನು ಸ್ಥಾಪಿಸುವುದು ಈ ಒಪ್ಪಂದದ ಉದ್ದೇಶವಾಗಿತ್ತು.

1938: ಆನಂದ ಮೋಹನ್ ಚಕ್ರವರ್ತಿ ಹುಟ್ಟಿದ ದಿನ. ಭಾರತೀಯ ಸಂಜಾತ ಅಮೆರಿಕನ್ ವಿಜ್ಞಾನಿಯಾದ ಇವರು ನೀರಿನ ಮೇಲೆ ತೇಲುವ ತೈಲ ಪದರವನ್ನು ಜೀರ್ಣಿಸಿಕೊಳ್ಳುವ ಕೃತಕ ಸೂಕ್ಷ್ಮ ಜೀವಿಯನ್ನು ಅಭಿವೃದ್ಧಿ ಪಡಿಸಿದರು.

1884: ಇಸೊರೊಕು ಯಮಾಂಟೊ (1884-1943) ಹುಟ್ಟಿದ ದಿನ. ಜಪಾನಿನ ನೌಕಾ ಅಧಿಕಾರಿಯಾಗಿದ್ದ ಈತ 1940ರಲ್ಲಿ ಅಮೆರಿಕಾದ ಪರ್ಲ್ ಬಂದರಿನ ನೌಕಾನೆಲೆ ಮೇಲೆ ನಡೆದ ಹಠಾತ್ ದಾಳಿಯ ರೂವಾರಿಯಾಗಿದ್ದ.

1818: ಅಮೆರಿಕದ ಧ್ವಜವು 13 ಕೆಂಪು ಮತ್ತು ಬಿಳಿ ಪಟ್ಟಿಗಳನ್ನು ಹಾಗೂ 20 ನಕ್ಷತ್ರಗಳನ್ನು ಒಳಗೊಂಡಿರಬೇಕು ಹಾಗೂ ಪ್ರತಿ ಹೊಸ ರಾಜ್ಯಕ್ಕೆ ಒಂದು ನಕ್ಷತ್ರವನ್ನು ಸೇರಿಸಬೇಕು ಎಂದು ಅಮೆರಿಕ ಕಾಂಗ್ರೆಸ್ ನಿರ್ಧರಿಸಿತು.

No comments:

Post a Comment