ನಾನು ಮೆಚ್ಚಿದ ವಾಟ್ಸಪ್

Tuesday, April 17, 2018

ಇಂದಿನ ಇತಿಹಾಸ History Today ಏಪ್ರಿಲ್ 16

ಇಂದಿನ ಇತಿಹಾಸ History Today ಏಪ್ರಿಲ್ 16
 2018: ಹೈದರಾಬಾದ್: ನಭ ಕುಮಾರ ಸರ್ಕಾರ್ ಯಾನೆ ಸ್ವಾಮಿ ಅಸೀಮಾನಂದ ಮತ್ತು ಇತರ ನಾಲ್ವರು ಆರೋಪಿಗಳನ್ನು ಹೈದರಾಬಾದಿನ ನಾಂಪಲ್ಲಿಯಲ್ಲಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ವಿಶೇಷ ನ್ಯಾಯಾಲಯವು ೧೧ ವರ್ಷಗಳಷ್ಟು ಹಿಂದಿನ ಮಕ್ಕಾ ಮಸೀದಿ ಮೇಲಿನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಕ್ಷ್ಯದ ಕೊರತೆ ನೆಲೆಯಲ್ಲಿ ಖುಲಾಸೆ ಮಾಡಿತು. ಹಳೆಯ ನಗರದ ಚಾರಿತ್ರಿಕ ಚಾರ್ ಮಿನಾರ್ ಸಮೀಪದ ಮಕ್ಕಾ ಮಸೀದಿಯೊಳಗೆ ೨೦೦೭ರ ಮೇ ೧೮ರಂದು ಸುಧಾರಿತ ಸ್ಫೋಟಕ ಬಳಸಿ ನಡೆಸಲಾದ ಈ ಬಾಂಬ್ ಸ್ಫೋಟಗಳಲ್ಲಿ ೧೬ ಮಂದಿ ಸಾವನ್ನಪ್ಪಿ, ೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.  ಸ್ವಾಮಿ ಅಸೀಮಾನಂದ ಹೊರತಾಗಿ ಖುಲಾಸೆಯಾಗಿರುವ ಇತರರು: ದೇವೇಂದ್ರ ಗುಪ್ತ, ಲೋಕೇಶ ಶರ್ಮ, ಭರತ್ ಮೋಹನ್ ಲಾಲ್ ರಾಟೇಶ್ವರ ಮತ್ತು ರಾಜೇಂದ್ರ ಚೌಧರಿ.  ನಾಂಪಳ್ಳಿ ಕೋರ್ಟ್ ಸಮುಚ್ಚಯದಲ್ಲಿ ಬಿಗಿ ಭದ್ರತೆಯ ಮಧ್ಯೆ ತೀರ್ಪನ್ನು ಪ್ರಕಟಿಸಲಾಯಿತು. ಎಲ್ಲ ಆರೋಪಿಗಳೂ ಈ ಸಂದರ್ಭದಲ್ಲಿ ಹಾಜರಿದ್ದರು.  ಪೊಲೀಸರು ನ್ಯಾಯಾಲಯದ ಕಡೆಗೆ ಸಾಗುವ ಎಲ್ಲ ರಸ್ತೆಗಳಲ್ಲೂ ಸಂಚಾರವನ್ನು ನಿರ್ಬಂಧಿಸಿದ್ದರು.  ಇದಕ್ಕೆ ಮುನ್ನ ನ್ಯಾಯಾಲಯ ಸಮುಚ್ಚಯ ಪ್ರವೇಶಿಸದಂತೆ ಪೊಲೀಸರು ನಿರ್ಬಂಧಿಸಿದ್ದನ್ನು ಪ್ರತಿಭಟಸಿ ಮಾಧ್ಯಮ ಮಂದಿ ನ್ಯಾಯಾಲಯದ ದ್ವಾರಗಳಲ್ಲಿ ಧರಣಿ ನಡೆಸಿದ್ದರು.  ತೀರ್ಪಿನ ಬಳಿಕ ವರದಿಗಾರರ ಜೊತೆ ಮಾತನಾಡಿದ ಅಸೀಮಾನಂದರ ವಕೀಲ ಜೆ.ಪಿ. ಶರ್ಮ ಅವರು ’ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಐವರು ಆರೋಪಿಗಳ ವಿರುದ್ಧ ಆರೋಪ ಸಾಬೀತು ಪಡಿಸಲು ಪ್ರಾಸೆಕ್ಯೂಷನ್ ವಿಫಲಾಗಿದೆ ಎಂದು ಹೇಳಿ ನ್ಯಾಯಾಲಯ ಅವರನ್ನು ಖುಲಾಸೆ ಮಾಡಿದೆ ಎಂದು ಹೇಳಿದರು.  ಪ್ರಾರಂಭದಲ್ಲಿ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಕೊನೆಗೆ ೨೦೧೧ರಲ್ಲಿ ಎನ್ ಐಎಗೆ ಒಪ್ಪಿಸಲಾಗಿತ್ತು.  ಬಲಪಂಥೀಯ ಹಿಂದು ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದರೆನ್ನಲಾದ ೧೦ ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಏನಿದ್ದರೂ, ಅವರ ಪೈಕಿ ವಿಚಾರಣೆ ಎದುರಿಸಿದ ಐದು ಮಂದಿಯನ್ನು ಮಾತ್ರವೇ ನ್ಯಾಯಾಲಯ ಖುಲಾಸೆ ಮಾಡಿತು.  ಎನ್ ಐಎ ಮೊದಲಿಗೆ ೧೦ ಜನರ ವಿರುದ್ಧ ದಾಳಿ ಸಂಚು ರೂಪಿಸಿ ಅದನ್ನು ಜಾರಿಗೊಳಿಸಿದ್ದಕ್ಕಾಗಿ ೧೦ ಜನರ ವಿರುದ್ಧ ದೋಪಾರೋಪ ಪಟ್ಟಿ ಸಲ್ಲಿಸಿತ್ತು.  ಮಧ್ಯಪ್ರದೇಶದ ನಿವಾಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಪ್ರಚಾರಕ ಆರೋಪಿ ಸುನಿಲ್ ಜೋಶಿ ಅವರನ್ನು ಪ್ರಕರಣದ ತನಿಖೆ ನಡೆಯುತ್ತಿದ್ದಾಗ ಕೊಲೆಗೈಯಲಾಗಿತ್ತು.  ಇನ್ನಿಬ್ಬರು ಆರೋಪಿಗಳಾದ ಆರೆಸ್ಸೆಸ್ಸಿನ ಮಾಜಿ ಪ್ರಚಾರಕರಾದ ಸಂದೀಪ್ ವಿ. ಡಾಂಗೆ ಮತ್ತು ಆರೆಸ್ಸೆಸ್ ಕಾರ್ಯಕರ್ತ ಮಧ್ಯಪ್ರದೇಶದ ಎಲೆಕ್ಟ್ರೀಷಿಯನ್ ರಾಮಚಂದ್ರ ಕಲ್ಸಂಗ್ರ ತನಿಖೆಗಾರರಿಗೆ ಸಿಗದೆ ತಲೆತಪ್ಪಿಸಿಕೊಂಡಿದ್ದರು.  ಇದೇ ರಾಜ್ಯದವರಾದ ತೇಜ್ ರಾಮ್ ಪರ್ಮಾರ್ ಮತ್ತು ಅಮಿತ್ ಚೌಹಾಣ್ ಈ ಇಬ್ಬರ ವಿರುದ್ಧದ ತನಿಖೆ ಮುಂದುವರೆಯಿತು. ವಿಚಾರಣೆ ಕಾಲದಲ್ಲಿ ೨೨೬ ಸಾಕ್ಷ್ಯಗಳನ್ನು ವಿಚಾರಿಸಲಾಗಿತ್ತು. ೪೧೧ ದಾಖಲೆಗಳನ್ನು ಸಲ್ಲಿಸಲಾಗಿತ್ತು.   ಸ್ವಾಮಿ ಅಸೀಮಾನಂದ ಮತ್ತು ಭರತ್ ಮೋಹನಲಾಲ್ ರಾಟೇಶ್ವರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಇತರ ಮೂವರನ್ನು ಇಲ್ಲಿನ ಕೇಂದ್ರೀಯ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು.  ಕಾಂಗ್ರೆಸ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ: ತೀರ್ಪು ಹೊರಬಿದ್ದ ಬೆನ್ನಲ್ಲೇ ಯುಪಿಎ ಆಡಳಿತಾವಧಿಯಲ್ಲಿ ’ಕೇಸರಿ ಭಯೋತ್ಪಾದನೆ (ಸಾಫ್ರನ್ ಟೆರರ್) ಪದ ಪ್ರಯೋಗ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ಕ್ಷಮೆ ಕೇಳಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.  ‘ಕೇಸರಿ ಭಯೋತ್ಪಾದನೆ ಎಂಬುದು ಮಾನಹಾನಿಕರವಾದ ಪದ. ರಾಹುಲ್ ಗಾಂಧಿಯವರು ಈ ಪದ ಪ್ರಯೋಗಿಸಿದ್ದಕ್ಕಾಗಿ ಈಗ ಕ್ಷಮೆಯಾಚನೆ ಮಾಡಿ ಮಧ್ಯರಾತ್ರಿಯಲ್ಲಿ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸುತ್ತಾರೆಯೇ? ಎಂದು ಸಂಬಿತ್ ಪಾತ್ರ ಪ್ರಶ್ನಿಸಿದರು. ಪದ ಪ್ರಯೋಗಿಸಿಲ್ಲ-: ಕಾಂಗ್ರೆಸ್: ಈಮಧ್ಯೆ ಮಾಧ್ಯಮ ಒಂದರ ಜೊತೆಗೆ ಮಾತನಾಡಿದ ಕಾಂಗ್ರೆಸ್ ನಾಯಕ ಆಗ ಗೃಹ ಸಚಿವರಾಗಿದ್ದ  ಶಿವರಾಜ ಪಾಟೀಲ್ ಅವರು ಸ್ಫೋಟ ಸಂಭವಿಸಿದಾಗ ತಮ್ಮ ಪಕ್ಷ ’ಕೇಸರಿ ಭಯೋತ್ಪಾದನೆ ಪದವನ್ನು ಪ್ರಯೋಗಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.  ‘ಬಹುತೇಕ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರು. ಸಾಕ್ಷಿಗಳಿಗೆ ಪಾಟೀ ಸವಾಲಿನ ವೇಳೆಯಲಿ ಯಾವ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬುದನ್ನು ಪರಿಶೀಲಿಸಬೇಕು. ಯಾರೋ ಹೇಳಿದ್ದಕ್ಕಾಗಿ ನಾನು ಯಾಕೆ ಕ್ಷಮೆ ಕೇಳಬೇಕು? ಕಾಂಗ್ರೆಸ್ ಎಂದೂ ರಾಷ್ಟ್ರವನ್ನು ತಪ್ಪು ದಾರಿಗೆ ಎಳೆದಿಲ್ಲ. ಕಾಂಗ್ರೆಸ್ ಪಕ್ಷವು ಹೇಳದೇ ಇದ್ದ ಯಾವುದೋ ವಿಷಯದಲ್ಲಿ ನಾನು ತೀರ್ಪು ಕೊಡಲು ಸಾಧ್ಯವಿಲ್ಲ ಎಂದೂ ಪಾಟೀಲ್ ನುಡಿದರು. 


2018: ನವದೆಹಲಿ: ಕಥುವಾ ಅತ್ಯಾಚಾರ -ಹತ್ಯೆ ಪ್ರಕರಣದ ನತದೃಷ್ಟ ಬಾಲಕಿಯ ಕುಟುಂಬ ಮತ್ತು ಕುಟುಂಬದ ವಕೀಲರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಾಗೂ ಪೊಲೀಸರಿಗೆ ಆಜ್ಞಾಪಿಸಿತು.  ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸುವಂತೆ ಮಾಡಲಾಗಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆಯೂ ಜಮ್ಮ ಮತ್ತು ಕಾಶ್ಮೀರ ಸರ್ಕಾರಕ್ಕೆ ಸೂಚಿಸಿದ ಸುಪ್ರೀಂಕೋಟ್ ಪ್ರಕರಣದ ಮುಂದಿನ ವಿಚಾರಣೆಗೆ ಏಪ್ರಿಲ್ ೨೭ರ ದಿನಾಂಕವನ್ನು ನಿಗದಿಪಡಿಸಿತು.  ನತದೃಷ್ಟ ಬಾಲಕಿಯ ತಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ತನಿಖೆಯನ್ನು ಶ್ಲಾಘಿಸಿ, ರಾಜ್ಯ ಪೊಲೀಸರು ತನಿಖೆ ಮುಂದುವರೆಸಲು ತಮ್ಮ ಆಕ್ಷೇಪ ಇಲ್ಲ ಎಂದು ಸ್ಪಷ್ಟ ಪಡಿಸಿದರು.  ಇದಕ್ಕೆ ಮುನ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಎರಡು ಅರ್ಜಿಗಳನ್ನು ಈದಿನವೇ ತುರ್ತಾಗಿ ಆಲಿಸಬೇಕು ಎಂಬುದಾಗಿ ಕೋರಿ ರಜಾವತ್ ಮತ್ತು ಕಪೂರ್ ಪರವಾಗಿ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮಾಡಿದ ಮನವಿಯನ್ನು ಪರಿಗಣಿಸಿತು.  ಕಥುವಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳೀಯ ವಕೀಲರು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಏಪ್ರಿಲ್ ೧೩ರಂದು ಪ್ರಬ ಆಕ್ಷೇಪ ವ್ಯಕ್ತ ಪಡಿಸಿದ್ದ ಸುಪ್ರೀಂಕೋರ್ಟ್, ಸ್ವಯಂಪ್ರೇರಿತ ಪ್ರಕರಣ  ದಾಖಲಿಸಿ,  ’ವಕೀಲರಿಂದ ಆಗುವ ಇಂತಹ ಅಡ್ಡಿ ನ್ಯಾಯದಾನಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿತ್ತು.  ಮಂಪರು ಪರೀಕ್ಷೆಗೆ ಆರೋಪಿಗಳ ಮನವಿ: ಕಥುವಾ ವರದಿ: ಈ ಮಧ್ಯೆ ಕಳೆದ ಜನವರಿ ತಿಂಗಳಲ್ಲಿ ಕಥುವಾ ದಲ್ಲಿ ನಡೆದ ೮ರ ಹರೆಯದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ೮ ಮಂದಿ ಆರೋಪಿಗಳು ತಾವು ತಪ್ಪಿತಸ್ಥರು ಎಂದು ಹೇಳಿ ತಮ್ಮ ಮಂಪರು ಪರೀಕ್ಷೆ ನಡೆಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.  ಇಡೀ ದೇಶದ ಗಮನ ಸೆಳೆದ ಪ್ರಕರಣದ ವಿಚಾರಣೆ ಈದಿನ ಕಥುವಾದಲ್ಲಿ ಆರಂಭವಾಗುತ್ತಿದ್ದಂತೆಯೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಜಯ್ ಗುಪ್ತ ಅವರ ಮುಂದೆ ೭ ಆರೋಪಿಗಳನ್ನು ಹಾಜರು ಪಡಿಸಲಾಯಿತು. ದೋಷಾರೋಪ ಪಟ್ಟಿಯ (ಚಾರ್ಜ್‌ಶೀಟ್) ಪ್ರತಿಗಳನ್ನು ಆರೋಪಿಗಳಿಗೆ ನೀಡುವಂತೆ ರಾಜ್ಯ ಅಪರಾಧ ಶಾಖೆಗೆ ಸೂಚಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಗೆ ಏಪ್ರಿಲ್ ೨೮ರ ದಿನಾಂಕವನ್ನು ನಿಗದಿ ಪಡಿಸಿದರು. ಎಂಟನೇ ಆರೋಪಿ ಅಪ್ರಾಪ್ತ ಬಾಲಕನಾಗಿದ್ದು, ಆತ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣ ವಿಚಾರಣೆ ಏಪ್ರಿಲ್ ೨೬ರಂದು ನಡೆಯಲಿದೆ.  ಕಥುವಾ ಜಿಲ್ಲೆಯ ಗ್ರಾಮದ ಸಣ್ಣ ದೇವಾಲಯ ಒಂದರಲ್ಲಿ ಅಲ್ಪಸಂಖ್ಯಾತ ಅಲೆಮಾರಿ ಸಮುದಾಯದ ಮಗುವನ್ನು ಬಂಧನದಲ್ಲಿಟ್ಟು, ಮತ್ತು ಬರಿಸುವ ಔಷಧ ಕೊಟ್ಟು ಅತ್ಯಾಚಾರ ನಡೆಸಿ ಬಳಿಕ ಕೊಂದು ಹಾಕಲಾಗಿದೆ ಎಂದು ಆಪಾದಿಸಲಾಗಿತ್ತು. ವ್ಯವಸ್ಥಿತ ಷಡ್ಯಂತ್ರ: ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯು ಅಲೆಮಾರಿ ಜನಾಂಗವನ್ನು ಪ್ರದೇಶದಿಂದ ಹೊರತಳ್ಳಲು ನಡೆದಿರುವ ವ್ಯವಸ್ಥಿತ ಯೋಜನೆಯ ಭಾಗ ಎಂದು ಅಪರಾಧ ಶಾಖೆ ಸಲ್ಲಿಸಿದ ದೋಷಾರೋಪ ಪಟ್ಟಿ ಹೇಳಿದೆ. ಅಪ್ರಾಪ್ತ ಬಾಲಕನ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.  ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರ ಮುಂದೆ ಏಪ್ರಿಲ್ ೯ರಂದು ಸಲ್ಲಿಸಲಾದ ದೋಷಾರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆ ಆರೋಪಿಗಳ ಪರ ವಕೀಲರು ಒತ್ತಾಯಿಸಿದರು. ಸೆಷನ್ಸ್ ನ್ಯಾಯಾಲಯದಲ್ಲಿ ಸಂಕ್ಷಿಪ್ತ ವಿಚಾರಣೆಯ ಬಳಿಕ ಬಿಗಿ ಭದ್ರತೆಯ ನಡುವೆ ಆರೋಪಿಗಳನ್ನು ಸೆರೆಮನೆಗೆ ವಾಪಸ್ ಕರೆದೊಯ್ಯಲಾಯಿತು. ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜೂರಿಯಾ  ಕೂಡಾ ’ಸತ್ಯ ಹೊರಬರುವಂತಾಗಲು ತಮ್ಮನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಮತ್ತು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಮನವಿ ಮಾಡಿದರು.  ನ್ಯಾಯಾಲಯದ ಒಳಗೆ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಹೊರಗೆ ಮುಖ್ಯ ಆರೋಪಿ ಸಾಂಜಿ ರಾಮ್  ಪುತ್ರಿ ಮಧು ಶರ್ಮ ಅವರು ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟಸಿದರು.  ಕಥುವಾ ನ್ಯಾಯಾಲಯ ಸಮುಚ್ಚಯದಲ್ಲಿ ಏಪ್ರಿಲ್ ೯ರಂದು ಅಪರಾಧ ಶಾಖೆಗೆ ಚಾಜ್‌ಶೀಟ್ ಸಲ್ಲಿಸಲು ಸ್ಥಳೀಯ ವಕೀಲರ ಸಂಘದ ಸದಸ್ಯರು ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಈದಿನ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಜಮ್ಮುವಿನಿಂದ ೯೦ ಕಿಮೀ ದೂರದಲ್ಲಿರುವ ಕಥುವಾದಲ್ಲಿನ ಗ್ರಾಮದ ’ದೇವಿಸ್ಥಾನದ ಮುಖ್ಯಸ್ಥನಾದ ಸಾಂಜಿರಾಮ್ ಅವರನ್ನು ಮುಖ್ಯ ಆರೋಪಿ ಎಂಬುದಾಗಿ ಪೊಲೀಸರು ಹೆಸರಿಸಿದ್ದರು.
ವಿಶೇಷ ಪೊಲೀಸ್ ಅಧಿಕಾರಿಗಳಾದ ಖಜೂರಿಯಾ, ಸುರೇಂದ್ರ ವರ್ಮ, ಗೆಳೆಯ ಪರ್ವೇಶ ಕುಮಾರ್ ಯಾನೆ ಮನ್ನು, ರಾಮ್ ಅಳಿಯ ಅಪ್ರಾಪ್ತ ಬಲಕ ವಿಶಾಲ್ ಜಗೋತ್ರ ಯಾನೆ ಶಮ್ಮ ಅವರೂ ಪ್ರಕರಣದಲ್ಲಿ ಶಾಮೀಲಾಗಿರುವ ಇತರರು ಎಂದು ಜಾಜ್‌ಶೀಟ್ ಹೇಳಿತ್ತು. ತನಿಖಾಧಿಕಾರಿಗಳಾದ ಹೆಡ್ ಕಾನ್‌ಸ್ಟೇಬಲ್ ತಿಲಕ್ ರಾಜ್ ಮತ್ತು ಸಬ್ ಇನ್‌ಸ್ಪೆಕ್ಟರ್ ಆನಂದ ದತ್ತ ಅವರು ನಿರ್ಣಾಯಕ ಸಾಕ್ಷ್ಯ ನಾಶಕ್ಕಾಗಿ ಸಾಂಜಿ ರಾಮ್ ಅವರಿಂದ ೪ ಲಕ್ಷ ರೂಪಾಯಿಗಳನ್ನು ಪಡೆದರು ಎಂದು ಚಾರ್ಜಶೀಟ್ ಆಪಾದಿಸಿತ್ತು.

2018: ನವದೆಹಲಿ:  ಪ್ರಸಕ್ತ ವರ್ಷ ದೇಶಾದ್ಯಂತ ಮಾಮೂಲಿ ಮುಂಗಾರು ಮಳೆಯಾಗಲಿದ್ದು, ಮೇ ತಿಂಗಳ ಕೊನೆಯವಾರ ಅಥವಾ ಜೂನ್ ಮೊದಲ ವಾರ ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತು. 
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಬಹುದು ಎಂದೂ ಹವಾಮಾನ ಇಲಾಖೆಯ ವರದಿ ತಿಳಿಸಿತು.  ೨೦೧೮ರಲ್ಲಿ ಶೇಕಡ ೯೭ರಷ್ಟು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ  ಮಾಮೂಲಿ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ.  ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಮಾಡಿರುವ ವರದಿಯಲ್ಲೂ ಇಷ್ಟೇ ಪ್ರಮಾಣದ ಮಳೆಯಾಗುತ್ತದೆ ಎಂದು ತಿಳಿಸಲಾಗಿದೆ.  ನಾಲ್ಕು ತಿಂಗಳ ಅವಧಿಯಲ್ಲಿ ಕೆಲವೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಕೆ.ಜೆ. ರಮೇಶ್ ಮಾಹಿತಿ ನೀಡಿದರು. ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಕೇರಳಕ್ಕೆ ಮುಂಗಾರು ಅಪ್ಪಳಿಸುವ ಸಾಧ್ಯತೆ ಇದೆ.  ಮೇ ತಿಂಗಳ ಮಧ್ಯ ಅವಧಿಯಲ್ಲಿ ಇನ್ನಷ್ಟು ನಿಖರವಾಗಿ ಮಾಹಿತಿ ನೀಡಲಾಗುವುದು ಎಂದು ರಮೇಶ್ ವಿವರಿಸಿದರು.  ಕಳೆದ ವರ್ಷ ಕೂಡ ಮಾಮೂಲಿ ಮುಂಗಾರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಶೇಕಡ ೯೫ರಷ್ಟು ಮಳೆಯಾಗಿತ್ತು.  ೨೦೧೫, ೨೦೧೪ರಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿತ್ತು. ಆ ಎರಡೂ ವರ್ಷಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.

2018: ಮಾಸ್ಕೋ:  ಸಿರಿಯಾದಲ್ಲಿನ ರಷ್ಯಾದ ’ಛಾಯಾ ಸೇನೆ (ಶ್ಯಾಡೋ ಆರ್ಮಿ) ಬಗ್ಗೆ ಬರೆದಿದ್ದ ರಷ್ಯಾದ ತನಿಖಾ ಪತ್ರಕರ್ತ ಮಕ್ಸಿಮ್ ಬೊರೊಡಿನ್ ಅವರು ಉರಾಲ್ಸ್ ನ ಯೆಕಟರಿನ್ ಬರ್ಗ್ ನಗರದಲ್ಲಿನ ತನ್ನ ಅಪಾರ್ಟ್‌ಮೆಂಟಿನ ೫ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ ತನಿಖೆಗಾರರು ಈ ಸಾವಿನಲ್ಲಿ ಸಂಶಯಾಸ್ಪದ ಅಂಶವೇನೂ ಇಲ್ಲ ಎಂದು ಈದಿನ  ಹೇಳಿದರು. ಮಕ್ಸಿಮ್ ಬೊರೊಡಿನ್ ಅವರು ಕಳೆದವಾರ ಅಪಾರ್ಟ್‌ಮೆಂಟಿನ ೫ನೇ ಮಹಡಿಯಿಂದ ಬಿದ್ದ ಬಳಿಕ ಗಾಯಗಳ ಪರಿಣಾಮವಾಗಿ ಏಪ್ರಿಲ್ 5ರ ಭಾನುವಾರ ಅಸು ನೀಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು. ಬೊರೊಡಿನ್ ಅವರು ’ನೋವಿ ಡೆನ್ (ನ್ಯೂ ಡೇ)’ ಸುದ್ದಿ ಸೇವಾ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರು ರಷ್ಯಾವು ಸಿರಿಯಾದಲ್ಲಿ ಬಳಸುತ್ತಿರುವ ಖಾಸಗಿ ಸೇನೆ ’ವಾಗ್ನೆರ್ ಗ್ರೂಪ್ ನ ನೌಕರರ ಸಾವುಗಳ ಬಗ್ಗೆ ಬರೆದಿದ್ದರು.   ‘ಪ್ರಕರಣ ದಾಖಲಿಸಲು ಯಾವುದೇ ನೆಲೆ ಇಲ್ಲ ಎಂದು ಸ್ಥಳೀಯ ತನಿಖಾ ಸಮಿತಿ ’ತಾಸ್ ಸುದ್ದಿ ಸಂಸ್ಥೆಗೆ ಈದಿನ ತಿಳಿಸಿತು.  ‘ಇದು ದುರದೃಷ್ಟಕರ ಅಪಘಾತ ಎಂಬ ಅಭಿಪ್ರಾಯ ಸೇರಿದಂತೆ ಘಟನೆಯ ಹಲವಾರು ಆಯಾಮಗಳನ್ನು ಪರಿಗಣಿಸಲಾಗುತ್ತಿದೆ. ಆದರೆ ಅಪರಾಧ ಘಟಿಸಿದ್ದಕ್ಕೆ ಸಂಬಂಧಿಸಿದ ಯಾವುದೇ ಚಿಹ್ನೆಯೂ ಕಂಡು ಬರುತ್ತಿಲ್ಲ ಎಂದು ಅದು ಹೇಳಿತು.  ಘಟನೆ ಬಗ್ಗೆ ವಿದೇಶೀ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಥಳೀಯ ಸಮಿತಿಯು ಎಎಫ್ ಪಿ ಗೆ ತಿಳಿಸಿತು.  ಆದರೆ ಐರೋಪ್ಯ ಭದ್ರತೆ ಮತ್ತು ಸಹಕಾರ ಸಂಘಟನೆಯಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಪ್ರತಿನಿಧಿ ಹರ್ಲೆಮ್ ಡೆಸಿರ್ ಅವರು ಬೊರೊಡಿನ್ ಸಾವು ’ಗಂಭೀರ ವಿಷಯ ಎಂದು ಹೇಳಿದರು.  ವಿಸ್ತೃತವಾದ ಕ್ಷಿಪ್ರ ತನಿಖೆ ನಡೆಸುವಂತೆ ಒತ್ತಾಯಿಸಲು ನಾನು ಅಧಿಕಾರಿಗಳನ್ನು ಭೇಟಿ ಮಾಡುವೆ ಎಂದು ಅವರು ಟ್ವೀಟ್ ಮಾಡಿದರು.  ವರದಿಗಾರರ ಮೇಲೆ ದಾಳಿಗಳು ನಡೆದ ಹಲವಾರು ದಾಖಲೆಗಳನ್ನು ರಷ್ಯಾ ಹೊಂದಿದೆ. ೧೯೯೨ರಿಂದ ಇಲ್ಲಿಯವರೆಗೆ ರಷ್ಯಾದಲ್ಲಿ ೫೮ ಪತ್ರಕರ್ತರ ಹತ್ಯೆಯಾಗಿದೆ ಎಂದು ಪತ್ರಕರ್ತರನ್ನು ರಕ್ಷಿಸಿ ಸಮಿತಿ ಹೇಳಿದೆ.

2018: ಅಹಮದಾಬಾದ್:  ಏಪ್ರಿಲ್ ೧೭ರಂದು ಅಹಮದಾಬಾದಿನಲ್ಲಿ ಅನಿರ್ದಿಷ್ಟ ನಿರಶನ ಆರಂಭಿಸಲು ನಿರ್ಧರಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶೀ ಪ್ರವಾಸವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.  ‘ದೇಶದಲ್ಲಿ ಹೆಣ್ಮಕ್ಕಳು ಅಸುರಕ್ಷಿತರಾಗಿರುವಾಗ ಪ್ರಧಾನಿಯವರು ವಿದೇಶಪ್ರವಾಸ ಹೋಗುವುದೇಕೆ?’  ಎಂದು ತೊಗಾಡಿಯಾ ಎಂದು ಪ್ರಶ್ನಿಸಿದರು.  ಈ ಮಧ್ಯೆ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ವಕ್ತಾರರು ತೊಗಾಡಿಯಾ ಅವರ ಬೆಂಬಲಕ್ಕೆ ಬಂದರು. ’ಇಡೀ ಗುಜರಾತ್ ಫೈರ್ ಬ್ರಾಂಡ್ ನಾಯಕನ ಹಿಂದಿದೆ ಎಂದು ಅವರು ಪ್ರತಿಪಾದಿಸಿದರು.  ‘ಇಂದು ನಮ್ಮ ಯೋಧರು ಗಡಿಗಳಲ್ಲಿ ಸುರಕ್ಷಿತರಾಗಿಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ನಮ್ಮ ಹೆಣ್ಮಕ್ಕಳು ತಮ್ಮ ಮನೆಗಳಲ್ಲೇ ಅಸುರಕ್ಷಿತರಾಗಿದ್ದಾರೆ. ಆದರೂ, ನಮ್ಮ ಪ್ರಧಾನಿ ವಿದೇಶೀ ಪ್ರವಾಸ ಹೊರಟಿದ್ದಾರೆ ಎಂದು ತೊಗಾಡಿಯಾ ಪತ್ರಕರ್ತರೊಂದಿಗೆ ಮಾತನಾಡುತ್ತಾ ಟೀಕಿಸಿದರು.  ಪ್ರಧಾನಿ ಮೋದಿ ಅವರು ಈದಿನ (ಏಪ್ರಿಲ್ ೧೬) ಸ್ವೀಡನ್ ಮತ್ತು ಇಂಗ್ಲೆಂಡಿಗೆ ಐದು ದಿನಗಳ ಪ್ರವಾಸ ಆರಂಭಿಸಿದರು. ಎರಡು ದಿನಗಳ ಹಿಂದೆ ತೊಗಾಡಿಯಾ ಅವರ ಅಭ್ಯರ್ಥಿ ರಾಘವ ರೆಡ್ಡಿ ಅವರನ್ನು ಪರಾಭವಗೊಳಿಸಿ, ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿ.ಎಸ್. ಕೊಕ್ಜೆ ಅವರನ್ನು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಬಳಿಕ ತೊಗಾಡಿಯಾ ಅವರು ವಿಎಚ್ ಪಿಯನ್ನು ತ್ಯಜಿಸಿದ್ದರು.  ತಮ್ಮ ಬಲ ಪ್ರದರ್ಶನ ಸಲುವಾಗಿ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ತೊಗಾಡಿಯಾ ಅವರು ಏಪ್ರಿಲ್ ೧೭ರಂದು ಅನಿರ್ದಿಷ್ಟ ನಿರಶನ ಆರಂಭಿಸಲಿದ್ದಾರೆ.  ತೊಗಾಡಿಯಾ ಅವರನ್ನು ಬೆಂಬಲಿಸಿರುವ ಸುಮಾರು ೫,೦೦೦ ಮಂದಿ ಜಿಲ್ಲಾ ಮಟ್ಟದ ವಿಎಚ್ ಪಿ ಕಾರ್ಯಕರ್ತರು ವಿಶ್ವ ಹಿಂದೂ ಪರಿಷತ್ತಿಗೆ ರಾಜೀನಾಮೆ ನೀಡಿದ್ದಾರೆ ಎಂದು ವಿಎಚ್ ಪಿ ವಕ್ತಾರ ಜೇ ಶಾ ಪ್ರತಿಪಾದಿಸಿದರು.  ವಿಶ್ವ ಹಿಂದೂ ಪರಿಷತ್ತಿನ ಸಂಪೂರ್ಣ ಗುಜರಾತ್ ಘಟಕ ತೊಗಾಡಿಯಾ ಅವರ ಹಿಂದೆ ಇದೆ. ಹೀಗಾಗಿಯೇ ೫೦೦೦ ಮಂದಿ ವಿಎಚ್ ಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಈಗಾಗಲೇ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ. ಬಿಜೆಪಿಗೆ ತನ್ನದೇ ಭರವಸೆಗಳನ್ನು ನೆನಪಿಸುವ ಸಲುವಾಗಿ ತೊಗಾಡಿಯಾ ಅವರು ನಾಳೆ ಅನಿರ್ದಿಷ್ಟ ನಿರಶನ ಆರಂಭಿಸುವರು ಎಂದು ಶಾ ಹೇಳಿದರು.  ‘ಈ ಉಪವಾಸದ ಮೂಲಕ, ತೊಗಾಡಿಯಾ ಅವರು ಬಿಜೆಪಿಗೆ ರಾಮಮಂದಿರ ನಿರ್ಮಾಣ, ೩೭೦ನೇ ಪರಿಚ್ಛೇದ ರದ್ದು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಇದ್ದವು ಎಂಬುದನ್ನು ನೆನಪಿಸಬಯಸಿದ್ದಾರೆ. ವಿಎಚ್ ಪಿ ಅಥವಾ ತೊಗಾಡಿಯಾ ಯಾವುದೇ ಹೊಸತನ್ನು ಈಗ ಒತ್ತಾಯಿಸುತ್ತಿಲ್ಲ ಎಂದು ಶಾ ನುಡಿದರು.
ಅಹಮದಾಬಾದಿನ ಜಿಎಂಡಿಸಿ ಮೈದಾನದಲ್ಲಿ ತೊಗಾಡಿಯಾ ಅವರ ಅನಿರ್ದಿಷ್ಟ ನಿರಶನ ನಡೆಯಲಿದೆ ಎಂದು ಇನ್ನೊಬ್ಬ ವಿಎಚ್ ಪಿ ವಕ್ತಾರ  ರಾಜುಭಾಯಿ ಪಟೇಲ್ ಹೇಳಿದರು.  ಫೈರ್ ಬ್ರಾಂಡ್ ಹಿಂದುತ್ವ ನಾಯಕ ಹೊಸ ಸಂಘಟನೆ ಆರಂಭಿಸಲಿದ್ದಾರೆ ಎಂಬ ಪುಕಾರುಗಳು ಹರಡಿದ್ದರೂ, ತೊಗಾಡಿಯಾ ಅವರು ತಮ್ಮ ಯೋಜನೆಗಳ ಬಗ್ಗೆ ತುಟಿ ಬಿಚ್ಚಿಲ್ಲ. ಏಪ್ರಿಲ್ ೧೭ರ ಬಳಿಕ ಸಂಪೂರ್ಣ ಚಿತ್ರ ಸ್ಪಷ್ಟವಾಗಲಿದೆ ಎಂದಷ್ಟೇ ಅವರು ಹೇಳಿದರು.  ಮೋದಿ ಮತ್ತು ತೊಗಾಡಿಯಾ ಇಬ್ಬರೂ ಗುಜರಾತಿನವರಾಗಿದ್ದು, ಇಬ್ಬರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ತಮ್ಮ ಸಾಮಾಜಿಕ ಬದುಕು ಆರಂಭಿಸಿದ್ದು, ಕಳೆದ ಒಂದು ದಶಕದಲ್ಲಿ ಮೋದಿ ಅವರ ಬೆಳವಣಿಗೆಯೊಂದಿಗೆ ದೂರ ದೂರವಾಗಿದ್ದರು.  ೨೦೧೪ರ ಚುನಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೋದಿ ಅವರಿಗೆ ಸಂಪೂರ್ಣ ಬೆಂಬಲ ನೀಡಿತು, ಆದರೆ ಪ್ರಧಾನಿಯಾದ ಬಳಿಕ ಮೋದಿ ಅವರು ಗೋ-ರಕ್ಷಕರನ್ನು ’ಗೂಂಡಾಗಳು ಎಂದು ಕರೆದರು ಎಂದು ತೊಗಾಡಿಯಾ ಏಪ್ರಿಲ್ ೧೫ರಂದು ಟೀಕಿಸಿದ್ದರು.  ಮೋದಿ ಹೇಳಿಕೆಯ ಬಳಿಕ, ಜಾರ್ಖಂಡಿನಲ್ಲಿ  ೧೧ ಮಂದಿ ಗೋ ರಕ್ಷಕರಿಗೆ (ನ್ಯಾಯಾಲಯದಿಂದ) ಜೀವಾವಧಿ ಸಜೆ ವಿಧಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕೂಡಾ ಹೀಗೆ ಆಗಿರಲಿಲ್ಲ ಎಂದು ತೊಗಾಡಿಯಾ ಹೇಳಿದ್ದರು. ಈ ಸರ್ಕಾರವು ಪಾಕಿಸ್ತಾನ ಬೆಂಬಲಿಗರು ಮತ್ತು ಕಾಶ್ಮೀರ ದಲ್ಲಿ ಕಲ್ಲೆಸೆಯುವವರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ ಎಂದೂ ಅವರು ಪ್ರತಿಪಾದಿಸಿದ್ದರು.


2017: ಭುವನೇಶ್ವರ : ‘ತ್ರಿವಳಿ ತಲಾಖ್ಹೆಸರಿನಲ್ಲಿ ಮುಸ್ಲಿಮ್ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಬೇಕು ಮತ್ತು ಅವರಿಗೆ ನ್ಯಾಯ ದೊರೆಯಬೇಕುಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು. ಆದರೆ, ವಿಚಾರದಲ್ಲಿ ಮುಸ್ಲಿಮ್ ಸಮುದಾಯದಲ್ಲಿಸಂಘರ್ಷಉಂಟು ಮಾಡುವ ಪ್ರಯತ್ನ ಮಾಡಬಾರದು ಎಂದು ಹೇಳಿದ ಅವರುಸಾಮಾಜಿಕ ಜಾಗೃತಿ ಮೂಲಕ ಇದನ್ನು ನಿಭಾಯಿಸಬೇಕುಎಂದು ಕರೆ ನೀಡಿದರು. ಭುವನೇಶ್ವರದಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ಪದ್ಧತಿಯಿಂದಾಗಿ ಸಂತ್ರಸ್ತರಾದವರನ್ನು ಭೇಟಿ ಮಾಡಿ ಅವರಲ್ಲಿ ಜಾಗೃತಿ ಮೂಡಿಸುವಂತೆ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಕರೆ ನೀಡಿದರು. ‘ ಮಹಿಳೆಯರನ್ನು ಭೇಟಿ ಮಾಡುವ ಅಗತ್ಯವಿದೆ. ಆದರೆ, ಅವರನ್ನು ಪ್ರಚೋದಿಸಬಾರದು ಅಥವಾ ಅವರು ತಮ್ಮ ಧರ್ಮದ ವಿರುದ್ಧವಾಗಿ ಹೋಗುವಂತೆ ಮಾಡಬಾರದುಎಂದು ಕಿವಿ ಮಾತು ಹೇಳಿದರು. ಅಭಿವೃದ್ಧಿಗೆ ಬದ್ಧ: 2022 ಹೊತ್ತಿಗೆ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಮೂಲಕ ಹೊಸ ಭಾರತದ ನಿರ್ಮಾಣಕ್ಕಾಗಿಉದ್ದ ಜಿಗಿತಮಾಡಲು ಇದು ಸೂಕ್ತ ಕಾಲ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ದೇಶದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಭಾಷಣದ ಉದ್ದಕ್ಕೂ  ಪಕ್ಷದಪಿ2–ಜಿ2’ (pro-people, pro - active, good governance) ಕಾರ್ಯಸೂಚಿಗೆ ಹೆಚ್ಚು ಒತ್ತು ನೀಡಿದರು. ವಾಗ್ದಾಳಿ: ಎಲೆಕ್ಟ್ರಾನಿಕ್ಮತಯಂತ್ರಗಳ ವಿಶ್ವಾಸಾರ್ಹತೆ ವಿವಾದದ ಬಗ್ಗೆ ಪ್ರಸ್ತಾಪಿಸಿದ ಅವರು ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದರು. ಮುಸ್ಲಿಮರ ಪರ: ಶೀಘ್ರದಲ್ಲಿ ಸಾಂವಿಧಾನಿಕ ಸ್ಥಾನಮಾನ ಪಡೆಯಲಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದಿಂದ ಹಿಂದುಳಿದ ಮುಸ್ಲಿಮರು ಹೆಚ್ಚು ಅನುಕೂಲ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಪಕ್ಷದ ಮುಖಂಡರಿಗೆ ಮೋದಿ ಅವರು ಸಲಹೆಯನ್ನೂ ನೀಡಿದರು.
2017: ಉಧಂಪುರ: ಈಚೆಗೆ ಸಾರ್ವಜನಿಕರ ಬಳಕೆಗೆ ತೆರವಾದ ದೇಶದ ಉದ್ದನೆಯ ಚಿನಾನಿನಶ್ರಿ
ರಸ್ತೆ ಸುರಂಗಮಾರ್ಗದಲ್ಲಿ ಇರುವ ವೆಂಟಿಲೇಷನ್ (ವಾತಾಯನ) ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದವು.  ವೆಂಟಿಲೇಷನ್ವ್ಯವಸ್ಥೆಯಲ್ಲಿ ದೋಷ ಇರುವುದರಿಂದ ವಾಹನಗಳ ಹೊಗೆ ಸುರಂಗದಿಂದ ಹೊರಗೆ ಹೋಗುವುದಿಲ್ಲ. ಇದರಿಂದಾಗಿ, ಎದುರು ಬರುತ್ತಿರುವ ವಾಹನಗಳು ಕಾಣುವುದಿಲ್ಲ. ಮುಂದೆ ಹೋಗುತ್ತಿರುವ ವಾಹನಗಳೂ ಸರಿಯಾಗಿ ಕಾಣುವುದಿಲ್ಲ. ಇದರಿಂದ ಅಪಘಾತಗಳು ನಡೆಯುವ ಅಪಾಯವೂ ಇದೆಎಂದು ಸುರಂಗವನ್ನು ಪ್ರತಿ ದಿನವೂ ಬಳಸುತ್ತಿರುವ ಇಲ್ಲಿನ ಶಿಕ್ಷಣಾಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು. ಇಲ್ಲಿನ ವೈದ್ಯರೊಬ್ಬರು, ‘ವಾಹನ ದಟ್ಟಣೆ ಇರುವ ಅವಧಿಯಲ್ಲಿ ಸಮಸ್ಯೆ ಹೆಚ್ಚಾಗಿರುತ್ತದೆ. ಸುರಂಗದೊಳಗೆ ಇದ್ದಾಗ, ಕಾರಿನ ಗಾಜು ಇಳಿಸಿದರೆ ಕಣ್ಣಿನಲ್ಲಿ ನವೆ ಉಂಟಾಗುತ್ತದೆ. ಜತೆಗೆ ಕೆಮ್ಮು ಬರುತ್ತದೆಎಂದು ದೂರಿದರು. ಈ ಸಮಸ್ಯೆಯ ಬಗ್ಗೆ ಸುರಂಗ ನಿರ್ಮಿಸಿದ ಕಂಪೆನಿಯನ್ನೇ ಕೇಳಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತು. ಇದನ್ನು ನಿರ್ಮಿಸಿದ ಐಎಲ್ಅಂಡ್ಎಫ್ಎಸ್ಕಂಪೆನಿ, ‘ಸುರಂಗದಲ್ಲಿ ಅಂತಹ ಸಮಸ್ಯೆ ಏನೂ ಇಲ್ಲ. ಇದು ಉದ್ದನೆಯ ಸುರಂಗ ಆಗಿರುವುದರಿಂದ, ಸುರಂಗ ಭೀತಿ ಇದ್ದವರಿಗೆ   ರೀತಿ ಭಾಸವಾಗುತ್ತಿರಬಹುದುಎಂದು ಹೇಳಿತು.  ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವೆಂಟಿಲೇಷನ್ವ್ಯವಸ್ಥೆ ಅಳವಡಿಸಲಾಗಿದೆ ಎಂದು ಕಂಪೆನಿ ಹಿಂದೆ ಹೇಳಿತ್ತು. 2009: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಬಿಹಾರ, ಜಾರ್ಖಂಡ್, ಒರಿಸ್ಸಾ ಹಾಗೂ ಛತ್ತೀಸ್‌ಗಡ ರಾಜ್ಯಗಳ ಕೆಲವು ಮತಗಟ್ಟೆ ಕೇಂದ್ರಗಳ ಮೇಲೆ ಮಾವೋವಾದಿಗಳು ದಾಳಿ ನಡೆಸಿ 19 ಮಂದಿಯನ್ನು ಕೊಂದು ಹಾಕಿದರು. 17 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಮಾವೋಗಳು 'ಚುನಾವಣೆ ಬಹಿಷ್ಕರಿಸುವಂತೆ' ಒತ್ತಡ ಹೇರುವ ಮೂಲಕ ಹಿಂಸಾಚಾರಕ್ಕೆ ಯತ್ನಿಸಿದರು.

2009: ಸುಪ್ರೀಂಕೋರ್ಟ್ ನೀಡಿದ ಎರಡು ವಾರದ ಪೆರೋಲ್ ಮೇಲೆ 'ತತ್‌ಕ್ಷಣದ ಬಿಡುಗಡೆ' ಆದೇಶದ ಅನುಸಾರ ಬಿಜೆಪಿಯ ಯುವ ನಾಯಕ ವರುಣ್ ಗಾಂಧಿ, ಎಟಾ ಜೈಲಿನಿಂದ ಹೊರಗೆ ಬಂದರು. ಉತ್ತರ ಪ್ರದೇಶ ಸರ್ಕಾರದ ವಕೀಲರು ವರುಣ್ ಬಿಡುಗಡೆ ಮಾಡಬಾರದು ಎಂದು ಕಠಿಣ ವಾದ ಮಂಡಿಸಿದ್ದರೂ, ನ್ಯಾಯಮೂರ್ತಿಗಳಾದ ಕೆ.ಜಿ.ಬಾಲಕೃಷ್ಣನ್, ಪಿ.ಸದಾಶಿವಂ ಹಾಗೂ ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠ ಈ ನಿರ್ದೇಶನ ನೀಡಿತು.

2009: ಮುಂಬೈ ದಾಳಿಯ ಬಂಧಿತ ಆರೋಪಿ ಅಜ್ಮಲ್ ಕಸಾಬ್ ಪರ ವಾದಿಸಲು ಹಿರಿಯ ಕ್ರಿಮಿನಲ್ ವಕೀಲ ಅಬ್ಬಾಸ್ ಕಾಜ್ಮಿ ಅವರನ್ನು ವಿಶೇಷ ನ್ಯಾಯಾಲಯ ನೇಮಿಸಿತು. ಕಸಾಬ್ ಪರ ಈ ಮೊದಲು ನೇಮಕವಾಗಿದ್ದ ಅಂಜಲಿ ವಾಗ್ಮೋರೆ ಅವರನ್ನು 'ವೃತ್ತಿ ವೈರುಧ್ಯ'ದ ಕಾರಣಕ್ಕಾಗಿ ವಿಶೇಷ ನ್ಯಾಯಾಲಯ ಅನರ್ಹಗೊಳಿಸಿತ್ತು. ಈದಿನ ಬೆಳಗ್ಗೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ಕಸಾಬ್ ತನ್ನ ಪರ ವಾದ ಮಂಡಿಸಲು ಪಾಕಿಸ್ಥಾನಿ ವಕೀಲರನ್ನು ನೇಮಿಸಬೇಕು ಎಂದು ಮನವಿ ಸಲ್ಲಿಸಿದ್ದ. ವಿಶೇಷ ನ್ಯಾಯಾಧೀಶ ಎಂ.ಎಲ್.ತಹಿಲ್ಯಾ ಆ ಅರ್ಜಿಯನ್ನು ತಿರಸ್ಕರಿಸಿದ್ದರು. ಹಿಂದಿನ ವಾರ ನೇಮಕಗೊಂಡ ಇನ್ನೋರ್ವ ವಕೀಲ ಕೆ.ಪಿ.ಪವಾರ್ ಅವರು ನೂತನ ವಿಶೇಷ ವಕೀಲ ಕಾಜ್ಮಿ ಅವರ ಸಹಾಯಕರಾಗಿ ಮುಂದುವರಿಯುವರು.

2009: ಹಗರಣದ ಸುಳಿಯಲ್ಲಿ ಸಿಲುಕಿದ್ದ ಸತ್ಯಂ ಕಂಪ್ಯೂಟರ್‌ನ್ನ್ನು ಸ್ವಾಧೀನ ಪಡಿಸಿಕೊಳ್ಳಲು ತಲಾ ಷೇರಿಗೆ ರೂ 58 ನೀಡುವ ಟೆಕ್ ಮಹೀಂದ್ರಾದ ಖರೀದಿ ಪ್ರಸ್ತಾವಕ್ಕೆ ಕಂಪೆನಿ ಕಾನೂನು ಮಂಡಳಿ (ಸಿಎಲ್‌ಬಿ) ಅಂಗೀಕಾರ ನೀಡಿತು.

2009: ಆತ್ಮಾಹುತಿ ದಳದ ಉಗ್ರನೊಬ್ಬ ಸ್ಫೋಟಕಗಳು ತುಂಬಿದ್ದ ಲಾರಿಯನ್ನು ಭದ್ರತಾ ಪಡೆಯ ತನಿಖಾ ಕೇಂದ್ರಕ್ಕೆ ಡಿಕ್ಕಿ ಹೊಡೆಸಿ 10 ಮಂದಿ ಪೊಲೀಸರು ಸೇರಿದಂತೆ 16 ಜನರನ್ನು ಬಲಿ ತಗೆದುಕೊಂಡ ಘಟನೆ ವಾಯವ್ಯ ಪಾಕಿಸ್ಥಾನದ ಗಡಿ ಪ್ರದೇಶ ಚಾರ್ಸ್ದಾದ ಜಿಲ್ಲೆಯಲ್ಲಿನ ಹರಿಚಂದ್ ಗ್ರಾಮದ ತನಿಖಾ ಕೇಂದ್ರದಲ್ಲಿ ನಡೆಯಿತು.

2009: ಬೆಳಗಿನ ತಿಂಡಿ ತಿನ್ನುವುದಕ್ಕೂ, ಅದಾದ ನಂತರ ಮುಖಕ್ಷೌರ (ಶೇವ್) ಮಾಡಿದರೆ ಮುಖದಲ್ಲಿ ರಕ್ತ ಒಸರುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ!? ಹೌದು ಸಂಬಂಧ ಇದೆ ಎಂದು ಜರ್ಮನಿಯ ಸೌಂದರ್ಯ ಪ್ರಸಾಧನ ಮಾರುಕಟ್ಟೆ ವೃದ್ಧಿ ಮತ್ತು ಆರೋಗ್ಯ ಜಾಗೃತಿಯಲ್ಲಿ ತೊಡಗಿರುವ ಸಂಘಟನೆಗಳು ಸೇರಿ ನಡೆಸುತ್ತಿರುವ ಅಂತರ್‌ಜಾಲ ತಾಣವೊಂದರಲ್ಲಿ ಸಲಹೆ ನೀಡಲಾಯಿತು. ಆ ಸಂಬಂಧದ ಕೊಂಡಿ ಹೀಗಿದೆ- ತಿಂಡಿ ತಿನ್ನುತ್ತಿದ್ದಂತೆಯೇ ಹೊಟ್ಟೆಯಲ್ಲಿ ಪಚನ ಕ್ರಿಯೆ ಶುರುವಾಗುತ್ತದೆ. ಆದ್ದರಿಂದ ಹೃದಯ ಬಡಿತ ಹೆಚ್ಚಾಗಿ ನರನಾಡಿಗಳಲ್ಲಿ ರಕ್ತ ಸಂಚಾರ ಏರುತ್ತದೆ. ಸಹಜವಾಗಿಯೇ ಮುಖ ಮತ್ತು ಕತ್ತಿನ ಭಾಗದ ಚರ್ಮದಡಿ ಇರುವ ನರ- ನಾಡಿಗಳು ಹಿಗ್ಗುತ್ತವೆ. ಹೀಗಾಗಿ ಅವು ಹರಿತ ಬ್ಲೇಡ್‌ಗೆ ಸುಲಭವಾಗಿ ಸಿಲುಕಿ ರಕ್ತ ಒಸರುವ ಸಾಧ್ಯತೆ ಇರುತ್ತದೆ ಎಂದು ಲೇಖನದಲ್ಲಿ ವಿವರಿಸಲಾಯಿತು. ಇದರ ಜೊತೆಗೆ, ಶೇವ್ ಮಾಡುವ ಮುನ್ನ ಮುಖದ ಮೇಲಿನ ಕೂದಲನ್ನು ಚೆನ್ನಾಗಿ ನೀರಿನಲ್ಲಿ ಒದ್ದೆ ಮಾಡಿಕೊಳ್ಳಬೇಕೆಂದೂ ಸಲಹೆ ನೀಡಲಾಯಿತು. ಮುಖದ ಕೂದಲು ಒಂದಷ್ಟು ನೀರಿನಲ್ಲಿ ಒದ್ದೆಯಾದರೆ ಸ್ಪಂಜಿನಂತೆ ಹಿಗ್ಗುತ್ತದಾದ್ದರಿಂದ ಶೇವ್ ಮಾಡುವುದು ಸಲೀಸಾಗುತ್ತದೆ. ತುಂಬಾ ಹೊತ್ತು ನೆನೆಸಿದರೆ ಕ್ಷೌರ ಕಷ್ಟವಾಗುತ್ತದೆ ಎಂದು ಜಾಲ ತಾಣ ವಿವರಿಸಿತು.

2008: ಪರೀಕ್ಷಾ ಕೇಂದ್ರಕ್ಕೆ 60 ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಗುಜರಾತ್ ರಾಜ್ಯ ಸಾರಿಗೆ ಸಂಸ್ಥೆ ಬಸ್ಸೊಂದು ಗುಜರಾತಿನ ಬೊಡೆಲಿ ನಗರ ಸಮೀಪ ನರ್ಮದಾ ಕಾಲುವೆಗೆ ಉರುಳಿದ ಪರಿಣಾಮ 42 ವಿದ್ಯಾರ್ಥಿಗಳು ಸೇರಿ ಒಟ್ಟು 45 ಮಂದಿ ಮೃತರಾದರು. ಪರೀಕ್ಷೆ ಬರೆಯುವ ಸಲುವಾಗಿ ಬಾಘ್ ಪುರದಿಂದ ಬೊಡೆಲಿಗೆ 60 ಮಂದಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಸೇತುವೆಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. 50 ಅಡಿ ಮೇಲಿನಿಂದ ಬಸ್ ಕಾಲುವೆಗೆ ಉರುಳಿದ ನಂತರವೂ ನಾಲ್ಕು ಮಂದಿ ಬದುಕುಳಿದಿದ್ದು ಅವರು ಈಜಿಕೊಂಡು ದಡ ಸೇರಿದರು.

2008: ಸುಪ್ರೀಂಕೋರ್ಟ್ ಆದೇಶದನ್ವಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇ 27ರಷ್ಟು ಮೀಸಲಾತಿ ನಿಯಮವನ್ನು ಜಾರಿಗೊಳಿಸಲು ಐಐಟಿಗಳು ನಿರ್ಧರಿಸಿದವು. ದೇಶದ ಏಳು ಐಐಟಿಗಳು ತಮ್ಮ ಸಂಸ್ಥೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇ 13ರಷ್ಟು ಮೀಸಲಾತಿ ಹೆಚ್ಚಿಸಲು ನಿಶ್ಚಯಿಸಿದವು. ಇದನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ನವದೆಹಲಿಯಲ್ಲಿ ನಡೆದ ಐಐಟಿ ಸಂಸ್ಥೆಗಳ ನಿರ್ದೇಶಕರ ಮಂಡಳಿ ನಿರ್ಧರಿಸಿತು.

2008: ಕಳೆದ ತಿಂಗಳು ನಡೆದ ಕಾರ್ಯಾಚರಣೆಯೊಂದರಲ್ಲಿ ತಮ್ಮ ಸಹಚರರ ಹತ್ಯೆಗೈದುದನ್ನುಪ್ರತಿಭಟಿಸಿ ಜಾರ್ಖಂಡಿನಲ್ಲಿ ನಕ್ಸಲೀಯರ ಕರೆ ಮೇರೆಗೆ ನಡೆದ 24 ಗಂಟೆಗಳ ಬಂದ್ ಕಾಲದಲ್ಲಿ ಗಿರಿಧಿ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವನ್ನು ಸ್ಫೋಟಿಸಲಾಯಿತು. ಇದರಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

2008: ಹೆಸರಾಂತ ಕವಿ ಖಲೀಲ್ ಗಿಬ್ರಾನ್ ಅವರ ಜೀವನಚರಿತ್ರೆಯನ್ನು ಬರೆದ ಅವರದೇ ಹೆಸರಿನ ವ್ಯಕ್ತಿಯೊಬ್ಬರು ಬೋಸ್ಟನ್ನಿನಲ್ಲಿ ಮೃತರಾದರು. ಮೃತರು ಕವಿ ಗಿಬ್ರಾನ್ ಅವರ ಸಂಬಂಧಿಯೂ ಹೌದು. ಖ್ಯಾತ ಶಿಲ್ಪಿ ಹಾಗೂ ಚಿತ್ರಕಲಾವಿದರಾಗಿದ್ದ ಅವರಿಗೆ 85 ವರ್ಷ ವಯಸ್ಸಾಗಿತ್ತು. ಚಿತ್ರಕಲಾವಿದರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದರೂ ಅವರು 50ರ ದಶಕದಲ್ಲಿ ಪ್ರಖ್ಯಾತ ಶಿಲ್ಪಕಲಾಕಾರರಾಗಿ ಗುರುತಿಸಿಕೊಂಡರು. ಶಿಲ್ಪಕಲೆಯಲ್ಲಿನ ಸಾಧನೆಗಾಗಿ ಅವರಿಗೆ ಪ್ರಶಸ್ತಿ, ಪದಕ ಹಾಗೂ ಫೆಲೊಶಿಫ್ಗಳು ದೊರಕಿದ್ದವು.

2008: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ಪ್ರತಿಮೆ ನಿರ್ಮಿಸಲು ಸಮನ್ವಯ ಪರಿವಾರ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಗೆ ಲಂಡನ್ನಿನ ಲೀಸೆಸ್ಟರ್ ನಗರಸಭೆ ಅನುಮೋದನೆ ನೀಡಿತು. ಈ ಗಾಂಧಿ ಪ್ರತಿಮೆಗೆ 20 ಸಾವಿರ ಪೌಂಡ್ ಖರ್ಚಾಗಲಿದ್ದು ಇದನ್ನು ಲೀಸೆಸ್ಟರಿನ ಬೆಲ್ ಗ್ರೇವ್ ಪ್ರದೇಶದ ಆರ್ಚರ್ಡಸನ್ ಅವೆನ್ಯೂ ಬಳಿ ಸ್ಥಾಪಿಸಲಾಗುವುದು. ಏಳು ಅಡಿ ಎತ್ತರದ ಈ ಪ್ರತಿಮೆಯನ್ನು 5 ಅಡಿ ಎತ್ತರದ ಪೀಠದ ಮೇಲೆ ನಿಲ್ಲಿಸಲು ಉದ್ದೇಶಿಸಲಾಯಿತು.

2008: ಇಂಡೋನೇಷ್ಯಾದ ಫೊಲ್ಲಾರಸ್ ದ್ವೀಪದಲ್ಲಿ ಜ್ವಾಲಾಮುಖಿಯೊಂದು ಹೊಗೆಯುಗುಳಲು ಆರಂಭಿಸಿದ್ದರಿಂದ ಭಯಗೊಂಡ ನೂರಾರು ಗ್ರಾಮಸ್ಥರು ಮನೆ ತೊರೆದು ದಿಕ್ಕಪಾಲಾಗಿ ಓಡಿದರು.

2008: ಕಾಂಗೋದ ಗೋಮಾದಲ್ಲಿ ಪ್ರಯಾಣಿಕರಿದ್ದ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಜನನಿಬಿಡ ಮಾರುಕಟ್ಟೆಗೆ ನುಗ್ಗಿದ್ದರಿಂದ 37 ಮಂದಿ ಮೃತರಾಗಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ತಮ್ಮ www.pankajadvani.com ಗೆ ವಿದ್ಯುಕ್ತ ಚಾಲನೆ ನೀಡಿದರು. ಭವಿಷ್ಯದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ವೆಬ್ ಸೈಟನ್ನು ರೂಪಿಸಲಾಯಿತು. ಸ್ಪೋರ್ಟ್ಸ್ ಇಂಟರ್ಯಾಕ್ಟಿವ್ ಸಂಸ್ಥೆಯ ಮೊದಲ ಹೆಜ್ಜೆಯಾದ ಈ ವೆಬ್ ಸೈಟಿನಲ್ಲಿ ವಿಶ್ವ ಚಾಂಪಿಯನ್ನನ ಸಂಪೂರ್ಣ ಮಾಹಿತಿ ಇದೆ.

2008: ಒಲಿಂಪಿಕ್ ಜ್ಯೋತಿ ಆಗಮಿಸುವ ಮುನ್ನ ಸುಮಾರು ನೂರು ಜನಕ್ಕೂ ಹೆಚ್ಚು ಟಿಬೆಟಿಯನ್ನರು ನವದೆಹಲಿಯಲ್ಲಿನ ಚೀನಾ ರಾಯಬಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

2008: ಅಪರಾಧಿಗಳನ್ನು ಗಡೀಪಾರು ಮಾಡುವುದು, ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಸಹಕಾರ ಸಹಿತ ಒಟ್ಟು ನಾಲ್ಕು ಒಪ್ಪಂದಗಳಿಗೆ ಭಾರತ ಮತ್ತು ಬ್ರೆಜಿಲ್ ಈದಿನ ಬ್ರಸಿಲಿಯಾದಲ್ಲಿ ಸಹಿ ಹಾಕಿದವು. ಬ್ರೆಜಿಲ್ಗೆ ತೆರಳಿದ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿಯ ಕೊನೆಯ ಹಂತವಾಗಿ ನಡೆದ ಈ ಕಾರ್ಯಕ್ರಮದ ವೇಳೆ ಬ್ರಿಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೂ ಇದ್ದರು. ಅಸಾಂಪ್ರದಾಯಿಕ ಇಂಧನ ಖಾತೆ ರಾಜ್ಯ ಸಚಿವ ವಿಲಾಸರಾವ್ ಮುಟ್ಟೆಮ್ವರ್ ಮತ್ತು ಬ್ರೆಜಿಲಿನ ವಿದೇಶಾಂಗ ಸಚಿವ ಸೆಲ್ಸೊ ಅಮೊರಿನ್ ಒಪ್ಪಂದಕ್ಕೆ ಸಹಿ ಹಾಕಿದರು.

2007: ಖ್ಯಾತ ಹಿನ್ನೆಲೆ ಗಾಯಕರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ 2007ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಲು ಬಸವ ವೇದಿಕೆ ನಿರ್ಧರಿಸಿತು.

2007: ನಾಲ್ಕು ದಶಕಗಳ ಹಿಂದೆ ವಿಯೆಟ್ನಾಮ್ ಸಮರ ಕಾಲದಲ್ಲಿ ಅಮೆರಿಕ ಪಡೆಗಳ ಗುಂಡೇಟಿಗೆ ತುತ್ತಾಗಿದ್ದ ವಿಯೆಟ್ನಾಮೀ ಯೋಧ ಡಿನ್ಹ್ ಹಂಗ್ ಅವರ ಎದೆಯಲ್ಲಿ ಉಳಿದಿದ್ದ ಗುಂಡನ್ನು ಸುಮಾರು 40 ವರ್ಷಗಳ ಬಳಿಕ ವಿಯೆಟ್ನಾಮಿನ ಹನೋಯಿಯಲ್ಲಿನ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದರು.

2007: ಅಮೆರಿಕದ ವರ್ಜೀನಿಯಾ ತಾಂತ್ರಿಕ (ಟೆಕ್) ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಕೊರಿಯಾದ ವಿದ್ಯಾರ್ಥಿ ಚೊ ಸೆಯುಂಗ್ ಹೊ ಎಂಬಾತ ಎರಡು ಗಂಟೆಗಳ ಅಂತರದಲ್ಲಿ ಎರಡು ಬಾರಿ ದಾಳಿ ನಡೆಸಿ ಯದ್ವಾತದ್ವ ಗುಂಡು ಹಾರಿಸಿದ ಪರಿಣಾಮವಾಗಿ ಭಾರತೀಯ ಮೂಲದ ಪ್ರಾಧ್ಯಾಪಕ ಪ್ರೊ. ಜಿ.ವಿ. ಲೋಕನಾಥನ್ (51) ಸಹಿತ ಇಬ್ಬರು ಭಾರತೀಯರು ಸೇರಿದಂತೆ 33 ಅಮಾಯಕರು ಮೃತರಾಗಿ ಇತರ 22 ಮಂದಿ ಗಾಯಗೊಂಡರು. ಅಮೆರಿಕದ ಇತಿಹಾಸದಲ್ಲೇ ವಿವಿ ಕ್ಯಾಂಪಸ್ಸಿನಲ್ಲಿ ನಡೆದ ಭೀಕರ ಹತ್ಯಾಕಾಂಡ ಇದು. 1872ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯದಲ್ಲಿ 100 ದೇಶಗಳ 26,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಅವರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ 500ರಷು.

2007: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ಅನುಷ್ಠಾನದ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರವು ಈ ವಿಷಯದ ವಿಚಾರಣೆಗಾಗಿ ಪಂಚ ಸದಸ್ಯ ಸಂವಿಧಾನ ಪೀಠ ರಚಿಸುವಂತೆ ಮನವಿ ಮಾಡಿತು. ಕೇಂದ್ರ ಸರ್ಕಾರ ರಚಿಸಿದ ಕಾಯ್ದೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ವಿಧಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ 15 ದಿನಗಳ ಬಳಿಕ `ಸ್ಪಷ್ಟೀಕರಣ ಅರ್ಜಿ' ಸಲ್ಲಿಸಿದ ಸರ್ಕಾರವು ಮೀಸಲಾತಿಯ ಲಾಭದಿಂದ `ಕೆನೆ ಪದರ' (ಹಿಂದುಳಿದವರಲ್ಲಿ ಆರ್ಥಿಕವಾಗಿ ಮುಂದುವರೆದವರು) ವರ್ಗವನ್ನು ಹೊರತುಪಡಿಸಬೇಕು ಎಂಬ ನ್ಯಾಯಾಲಯದ ಸೂಚನೆಯನ್ನೂ ವಿರೋಧಿಸಿತು. ಮಂಡಲ ಪ್ರಕರಣ ಎಂದೇ ಖ್ಯಾತಿ ಪಡೆದ ಇಂದ್ರಾ- ಸಾಹ್ನಿ ಪ್ರಕರಣದಲ್ಲಿ ಒಂಬತ್ತು ಸದಸ್ಯರ ಸಂವಿಧಾನ ಪೀಠವು ನೀಡಿರುವ ತೀರ್ಪಿನಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿ ಹಿಡಿಯಲಾಗಿದ್ದು ಈ ತೀರ್ಮಾನ ಅರ್ಜಿದಾರರು, ಸರ್ಕಾರ, ಈ ನ್ಯಾಯಾಲಯದ ದ್ವಿ ಸದಸ್ಯ ಪೀಠ ಸೇರಿದಂತೆೆ ಎಲ್ಲರಿಗೂ ಅನ್ವಯಿಸುತ್ತದೆ ಎಂದೂ ಸರ್ಕಾರವು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತು.

2006: ಚೀನಾದ ಹಾಂಗ್ ಹುವಾ ಅಂತರರಾಷ್ಟ್ರೀಯ ಗಾಲ್ಫ್ ಕ್ಲಬ್ಬಿನಲ್ಲಿ ನಡೆದ ಅಂತಿಮ ಹಂತದ ವೋಲ್ವೊ ಚೀನಾ ಓಪನ್ ಗಾಲ್ಫ್ ಟೂರ್ನಿಯಲ್ಲಿ ಭಾರತದ ಜೀವ್ ಮಿಲ್ಕಾಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕೊನೆಯ ಹಂತದ ಸ್ಪರ್ಧೆಯಲ್ಲಿ 71 ಸ್ಕೋರ್ ಗಳಿಸಿದ ಮಿಲ್ಕಾಸಿಂಗ್ ಒಟ್ಟು 278 ಸ್ಕೋರ್ ಗಳಿಕೆಯೊಂದಿಗೆ ಏಳುವರ್ಷಗಳ ಬಳಿಕ ಪ್ರಶಸ್ತಿ ಗೆದ್ದುಕೊಂಡರು. ಐರೋಪ್ಯ ಪ್ರವಾಸದಲ್ಲಿ ಜೀವ್ ಗೆದ್ದ ಚೊಚ್ಚಲ ಪ್ರಶಸ್ತಿ ಇದು. ಚಂಡೀಗಢದ ಈ ಗಾಲ್ಫರ್ 1999ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದರು.

2006: ಲಾಹೋರ್ ಬಳಿಯ ನಾಂಖನಾ ಸಾಹಿಬ್ ನ ಹರಚರಣ್ ಸಿಂಗ್ ಪಾಕಿಸ್ಥಾನ ಸೇನೆಯಲ್ಲಿ ಕಮೀಷನ್ಡ್ ದರ್ಜೆಗೆ ಮೊತ್ತ ಮೊದಲ ಬಾರಿಗೆ ನೇಮಕಗೊಂಡ ಸಿಖ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ ವರ್ಷ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧರಿ ವಿದೇಶ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ಭಗವಾನದಾಸ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವುದರೊಂದಿಗೆ ಹಿಂದು ಒಬ್ಬರು ಪಾಕಿಸ್ಥಾನದಲ್ಲಿ ಇತಿಹಾಸ ನಿರ್ಮಿಸಿದಂತಾಗಿತ್ತು.

2006: ದುಜೈಲ್ ಪಟ್ಟಣದಲ್ಲಿ 1982ರಲ್ಲಿ ಸದ್ದಾಂ ಹುಸೇನ್ ಅವರ ಹತ್ಯೆ ಯತ್ನ ನಡೆದ ಬಳಿಕ ನಡೆದ 148 ಶಿಯಾ ಮುಸ್ಲಿಮರ ಹತ್ಯೆ ಹಾಗೂ ಸೆರೆಮನೆಯಲ್ಲಿ ಅನೇಕರಿಗೆ ನೀಡಲಾದ ಚಿತ್ರಹಿಂಸೆಗೆ ಸಂಬಂಧಿಸಿದ ದಾಖಲೆಗಳಲ್ಲಿನ ಸಹಿ ಪದಚ್ಯುತ ಇರಾಕಿ ನಾಯಕ ಸದ್ದಾಂ ಹುಸೇನ್ ಅವರದ್ದೇ ಎಂದು ತಜ್ಞರು ದೃಢಪಡಿಸಿದರು. ಕೈಬರಹ ತಜ್ಞರ ವರದಿಯ ಪ್ರಕಾರ ಶಿಯಾ ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಜಾಗೃತಾ ಏಜೆಂಟರಿಗೆ ಬಹುಮಾನಗಳನ್ನು ಮಂಜೂರು ಮಾಡಿದ ದಾಖಲಗಳಲ್ಲಿ ಇರುವ ಸಹಿ ಸದ್ದಾಂ ಹುಸೇನ್ ಅವರದೇ ಎಂದು ಖಚಿತಗೊಂಡಿದೆ ಎಂದು ಬಾಗ್ದಾದಿನಲ್ಲಿ ಪುನರಾರಂಭವಾದ ಸದ್ದಾಂ ಹುಸೇನ್ ಹಾಗೂ 7 ಸಹಚರರ ವಿಚಾರಣೆ ಕಾಲದಲ್ಲಿ ಪ್ರಾಸಿಕ್ಯೂಟರುಗಳು ಈ ವಿಚಾರವನ್ನು ತಿಳಿಸಿದರು.

1975: ಭಾರತದ ವಿದ್ವಾಂಸ ಹಾಗೂ ಮುತ್ಸದ್ದಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಮದ್ರಾಸಿನಲ್ಲಿ ನಿಧನರಾದರು. 1962-1967ರ ಅವಧಿಯಲ್ಲಿ ಅವರು ಭಾರತದ ರಾಷ್ಟ್ರಪತಿಯಾಗಿದ್ದರು.

1912: ಅಮೆರಿಕಾದ ವಿಮಾನಯಾನಿ ಹ್ಯಾರಿಯೆಟ್ ಕ್ವಿಂಬೆ ಅವರು 50 ಹಾರ್ಸ್ ಪವರ್ ಮಾನೋಪ್ಲೇನ್ ಮೂಲಕ ಇಂಗ್ಲಿಷ್ ಕಡಲ್ಗಾಲುವೆ ದಾಟಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 59 ನಿಮಿಷಗಳ ಹಾರಾಟದ ಬಳಿಕ ಕ್ವಿಂಬೆ ಅವರು ಫ್ರಾನ್ಸಿನ ಹಾರ್ಡೆಲೊಟ್ ಸಮೀಪ ಇಳಿದರು.

1889: ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್ (1889-1977) ಹುಟ್ಟಿದ ದಿನ. ಬ್ರಿಟಿಷ್ ಸಂಜಾತ ಅಮೆರಿಕನ್ ಚಿತ್ರನಟ, ನಿರ್ದೇಶಕರಾದ ಇವರು ಮೂಕಿ ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು.

1881: ಇರ್ವಿನ್ (1881-1959) ಹುಟ್ಟಿದ ದಿನ. ಇವರು 1925-1931ರ ಅವಧಿಯಲ್ಲಿ ಭಾರತದ ವೈಸ್ ರಾಯ್ ಆಗಿದ್ದರು.

1867: ವಿಲ್ಬರ್ ರೈಟ್ (1867-1912) ಹುಟ್ಟಿದ ದಿನ. ಅಮೆರಿಕಾದ ಸಂಶೋಧಕ ಹಾಗೂ ಮುಂಚೂಣಿಯ ವಿಮಾನಯಾನಿಯಾದ ಈತ ತನ್ನ ಸಹೋದರ ಓರ್ವಿಲ್ ಜೊತೆಗೆ ಮೊತ್ತ ಮೊದಲ ವಿಮಾನ ಹಾರಾಟ ನಡೆಸಿದ.

1853: ಬಾಂಬೆಯ (ಈಗಿನ ಮುಂಬೈ) ಬೋರೀ ಬಂದರಿನಿಂದ ಟಣ್ಣ (ಈಗಿನ ಥಾಣೆ)ವರೆಗೆ 400 ಜನರನ್ನು ಹೊತ್ತ 14 ಬೋಗಿಗಳು ಸಂಚರಿಸುವುದರೊಂದಿಗೆ ಭಾರತಕ್ಕೆ ರೈಲ್ವೆಯ ಆಗಮನವಾಯಿತು. ಬಾಂಬೆ-ಟಣ್ಣ ಮಧ್ಯೆ ದಿ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ (ಜಿಐಪಿ) ರೈಲ್ವೆಯು 34 ಕಿ.ಮೀ. ಉದ್ದದ ಹಳಿಯನ್ನು ನಿರ್ಮಿಸಿತ್ತು. ಈ ದಿನವನ್ನು ರಜಾದಿನವಾಗಿ ಆಚರಿಸಲಾಯಿತು. ರೈಲುಸಂಚಾರದ ಹೊಸ `ಘಟನೆ'ಯನ್ನು ನೋಡಲು ಸಹಸ್ರಾರು ಮಂದಿ ರೈಲ್ವೆ ಹಳಿಗಳ ಉದ್ದಕ್ಕ್ಕೂ ಸಾಲುಗಟ್ಟಿ ನಿಂತಿದ್ದರು. 21 ಸುತ್ತಿನ ಗನ್ ಸೆಲ್ಯೂಟ್ ಹಾಗೂ ಗವರ್ನರ್ ಬ್ಯಾಂಡ್ ಸೆಟ್ ಸಂಗೀತದ ಮಧ್ಯೆ ಮಧ್ಯಾಹ್ನ 3.35 ಗಂಟೆಗೆ ರೈಲು ಚಲಿಸಿತು. 34 ಕಿ.ಮೀ. ದೂರದ ಪಯಣಕ್ಕೆ 57 ನಿಮಿಷ ಬೇಕಾಯಿತು. ಮರುದಿನ ಜಿಐಪಿ ನಿರ್ದೇಶಕ ಸರ್ ಜೆಮ್ ಸೆಟ್ ಜಿ ಜೀಜೆಭಾಯ್ ಇಡೀ ರೈಲುಗಾಡಿಯನ್ನು ರಿಸರ್ವ್ ಮಾಡಿಸಿ ತಮ್ಮ ಕುಟುಂಬದೊಂದಿಗೆ ಮುಂಬೈಯಿಂದ ಥಾಣೆಗೆ ಪಯಣಿಸಿ ಅದರಲ್ಲೇ ವಾಪಸಾದರು.

1838: ಅರ್ನೆಸ್ಟ್ ಸಾಲ್ವೆ (1838-1922) ಹುಟ್ಟಿದ ದಿನ. ಬೆಲ್ಜಿಯಂನ ಕೈಗಾರಿಕಾ ರಾಸಾಯನಿಕ ತಜ್ಞನಾದ ಈತ ವಾಣಿಜ್ಯ ಪ್ರಮಾಣದಲ್ಲಿ ಸೋಡಾ ಪುಡಿ ಉತ್ಪಾದಿಸಲು ಬಳಸಲಾಗುವ ಅಮೋನಿಯಾ ಸೋಡಾ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಿದ.

No comments:

Post a Comment