ನಾನು ಮೆಚ್ಚಿದ ವಾಟ್ಸಪ್

Wednesday, April 11, 2018

ಇಂದಿನ ಇತಿಹಾಸ History Today ಏಪ್ರಿಲ್ 10

ಇಂದಿನ ಇತಿಹಾಸ History Today ಏಪ್ರಿಲ್ 10
 2018: ನವದೆಹಲಿ:  ಭಾರತದ ಏಳು ರಾಷ್ಟ್ರೀಯ ಪಕ್ಷಗಳು ೨೦೧೬-೧೭ನೇ ಸಾಲಿನಲ್ಲಿ ಒಟ್ಟು ೧,೫೫೯.೧೭ ಕೋಟಿ ರೂಪಾಯಿ ಆದಾಯ ಘೋಷಿಸಿವೆ. ಈ ಪೈಕಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅತ್ಯಂತ ಹೆಚ್ಚಿನ ಆದಾಯ ಹೊಂದಿದ್ದು ಅದರ ಆದಾಯ ೧,೦೩೪ ಕೋಟಿ ರೂಪಾಯಿಗಳು  ಎಂದು ವರದಿಯೊಂದು ತಿಳಿಸಿತು.  ‘೨೦೧೬-೧೭ರ ಸಾಲಿನಲ್ಲಿ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಬಿಜೆಪಿ ಒಂದರ ಆದಾಯವೇ ಶೇಕಡಾ ೬೬.೩೪ರಷ್ಟಿದೆ ಎಂದು ದೆಹಲಿ ಮೂಲದ ಅಸೋಸಿಯೇಶನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಚಿಂತನ ಸಂಸ್ಥೆ ಈದಿನ ಬಿಡುಗಡೆ ಮಾಡಲಾದ ತನ್ನ ವರದಿಯಲ್ಲಿ ಹೇಳಿತು.  ಬಿಜೆಪಿಯ ನಂತರದ ಸ್ಥಾನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದ್ದು ಅದರ ಆದಾಯ ೨೨೫.೩೬ ಕೋಟಿ ರೂಪಾಯಿಗಳು ಅಂದರೆ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಶೇಕಡಾ ೧೪.೪೫ ಎಂದು ವರದಿ ಹೇಳಿತು. ಸಿಪಿಐ ಅತ್ಯಂತ ಕಡಿಮೆ ಆದಾಯ ಹೊಂದಿರುವ ಪಕ್ಷವಾಗಿದ್ದು ಅದರ ಆದಾಯ ೨.೦೮ ಕೋಟಿ ರೂಪಾಯಿಗಳು. ಅಂದರೆ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ಶೇಕಡಾ ೦.೧೩ ಮಾತ್ರ.  ದೇಶಾದ್ಯಂತ ಪಕ್ಷಗಳು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್‌ನಿಂದ ಈ ಮಾಹಿತಿ ಸಂಗ್ರಹಿಸಲಾಯಿತು. ಏಳು ರಾಷ್ಟ್ರೀಯ ಪಕ್ಷಗಳು ಒಟ್ಟು ೧,೨೨೮.೨೬ ಕೋಟಿ ರೂಪಾಯಿ ವೆಚ್ಚವನ್ನೂ ಘೋಷಿಸಿವೆ ಎಂದು ವರದಿ ತಿಳಿಸಿತು. ಬಿಜೆಪಿಯು ೨೦೧೬-೧೭ರ ಸಾಲಿನಲ್ಲಿ ತಾನು ೭೧೦.೦೫ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿರುವುದಾಗಿ ಘೋಷಿಸಿದೆ. ಇದು ರಾಷ್ಟ್ರೀಯ ಪಕ್ಷಗಳು ಮಾಡಿರುವ ವೆಚ್ಚದಲ್ಲಿ ಅತ್ಯಧಿಕ. ಕಾಂಗ್ರೆಸ್ ಪಕ್ಷವು ತಾನು ೩೨೧.೬೬ ಕೋಟಿ ರೂ. (ಒಟ್ಟು ಆದಾಯಕ್ಕಿಂತ ೯೬.೩೦ ಕೋಟಿ ರೂ. ಹೆಚ್ಚು) ವೆಚ್ಚ ಮಾಡಿರುವುದಾಗಿ ಹೇಳಿತು. ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶೇಕಡಾ ೭೦ರಷ್ಟು ಆದಾಯ, ಬಿಜೆಪಿ ಮತ್ತು ಸಿಪಿಐಯ ಶೇಕಡಾ ೩೧ರಷ್ಟು ಆದಾಯ, ಸಿಪಿಐ(ಎ)ನ ಶೇಕಡಾ ೬ರಷ್ಟು ಆದಾಯ ವೆಚ್ಚವಾಗಿಲ್ಲ ಎಂದು ಪಕ್ಷಗಳು ಘೋಷಿಸಿದ್ದವು.   ೨೦೧೬-೧೭ರಲ್ಲಿ ಬಿಎಸ್ಪಿಯ ಒಟ್ಟು ಆದಾಯ ೧೭೩.೫೮ ಕೋಟಿ ರೂಪಾಯಿಗಳಾಗಿದ್ದರೆ ಅದರ ಒಟ್ಟು ವೆಚ್ಚ ೫೧.೮೩ ಕೋಟಿ ರೂಪಾಯಿಗಳು.  ೨೦೧೫-೧೬ ಮತ್ತು ೨೦೧೬-೧೭ರಲ್ಲಿ ಬಿಜೆಪಿಯ ಆದಾಯ ಶೇಕಡಾ ೮೧.೧೮ರಷ್ಟು ಅಂದರೆ ೫೭೦.೮೬ ಕೋಟಿ ರೂಪಾಯಿಗಳಿಂದ ೧,೦೩೪.೨೭ ಕೋಟಿ ರೂಪಾಯಿಗಳಿಗೆ ಏರಿದೆ. ಇದೇ ವೇಳೆಯಲ್ಲಿ ಕಾಂಗ್ರೆಸ್ ಆದಾಯ ಶೇಕಡಾ ೧೪ರಷ್ಟು ಅಂದರೆ ೨೬೧.೫೬ ಕೋಟಿ ರೂಪಾಯಿಗಳಿಂದ ೨೨೫.೩೬ ಕೋಟಿ ರೂಪಾಯಿಗಳಿಗೆ ಏರಿದೆ.  ಬಿಎಸ್ಪಿಯ ಆದಾಯ ೨೦೧೫-೧೬ರಲ್ಲಿ ೪೭.೩೮ ಕೋಟಿ ರೂಪಾಯಿಗಳಿಂದ ೨೬೬.೩೨ ಕೋಟಿ ರೂಪಾಯಿಗಳಿಗೆ, ೨೦೧೬-೧೭ರಲ್ಲಿ ೧೭೩.೫೮ ಕೋಟಿ ರೂಪಾಯಿಗಳಿಗೆ ಏರಿದೆ. ಎನ್ ಸಿಪಿಯ ಆದಾಯ ೨೦೧೫-೧೬ರಲ್ಲಿ ಶೇಕಡಾ ೮೮.೬೩ರಷ್ಟು ಅಂದರೆ ೯.೧೩೭ ಕೋಟಿ ರೂಪಾಯಿಗಳಿಂದ ೨೦೧೬-೧೭ರಲ್ಲಿ ೧೭.೨೩೫ ಕೋಟಿ ರೂಪಾಯಿಗಳಷ್ಟು ಏರಿದೆ.  ೨೦೧೫-೧೬ ಮತ್ತು ೨೦೧೬-೧೭ರಲ್ಲಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಆದಾಯ ಶೇಕಡಾ ೮೧.೫೨ರಷ್ಟು ಮತ್ತು ಸಿಪಿಐ(ಎಂ) ಆದಾಯ ಶೇಕಡಾ ೬.೭೨ರಷ್ಟು ಕುಸಿದಿದೆ ಎಂದೂ ವರದಿ ತಿಳಿಸಿತು. ಬಿಜೆಪಿ ಮತ್ತು ಕಾಂಗ್ರೆಸ್ ಕಾಣಿಕೆ/ ಕೊಡುಗೆಗಳು ತಮ್ಮ ಮೂರು ಮುಖ್ಯ ಆದಾಯ ಮೂಲಗಳಲ್ಲಿ ಒಂದು ಎಂದು ಘೋಷಿಸಿವೆ. ’ಅನುದಾನಗಳು/ ಕಾಣಿಕೆಗಳು ಮತ್ತು ಕೊಡುಗೆಗಳಿಂದ ೯೯೭.೧೨ ಕೋಟಿ ರೂಪಾಯಿಗಳು ೨೦೧೬-೧೭ರ ಸಾಲಿನಲ್ಲಿ ಬಿಜೆಪಿಗೆ ಬಂದಿದ್ದು ಒಟ್ಟು ಒಟ್ಟು ಆದಾಯದ ಶೇಕಡಾ ೯೬.೪೧ರಷ್ಟು ಆಗಿದೆ. ೨೦೧೬-೧೭ರ ಸಾಲಿನಲ್ಲಿ ಕಾಂಗ್ರೆಸ್ ಪಕ್ಷದ ಶೇಕಡಾ ೫೧.೩೨ರಷ್ಟು ಅಂದರೆ ೧೧೫.೬೪ ಕೋಟಿ ರೂಪಾಯಿ ಆದಾಯ ಐಎನ್ ಸಿ ಫಾರಂಗಳಿಗಾಗಿ ಕೂಪನ್ ನೀಡಿಕೆಯಿಂದ ಬಂದಿದೆ ಕಾಂಗ್ರೆಸ್ ಘೋಷಿಸಿದೆ ಎಂದು ಎಡಿಆರ್ ವರದಿ ಹೇಳಿತು.  ೨೦೧೬-೧೭ರಲ್ಲಿ ಬಿಜೆಪಿಯ ಗರಿಷ್ಠ ವೆಚ್ಚ ಚುನಾವಣೆ / ಸಾಮಾನ್ಯ ಪ್ರಚಾರಕ್ಕಾಗಿ ಆಗಿದ್ದು ಈ ಮೊತ್ತ ೬೦೬.೬೪ ಕೋಟಿ ರೂ. ಆಡಳಿತ ವೆಚ್ಚ ೬೯.೭೮ ಕೋಟಿ ರೂ. ಆಗಿದೆ. ಕಾಂಗ್ರೆಸ್ ಪಕ್ಷವು ಗರಿಷ್ಠ ೧೪೯.೬೫ ಕೋಟಿ ರೂಪಾಯಿಗಳನ್ನು ಚುನಾವಣೆಗಾಗಿ ವೆಚ್ಚ ಮಾಡಿದ್ದು, ಆಡಳಿತ ಮತ್ತು ಸಾಮಾನ್ಯ ವೆಚ್ಚಗಳಿಗಾಗಿ ೧೧೫.೬೫ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ ಎಂದು ವರದಿ ತಿಳಿಸಿತು.  ೨೦೧೬-೧೭ರಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಗರಿಷ್ಠ ಶೇ,೭೪.೯೮ ರಷ್ಟು (ರೂ.೧,೧೬೯.೦೭ ಕೋಟಿ) ಆದಾಯವನ್ನು ಸ್ವಯಂ ಕಾಣಿಕೆಗಳಿಂದ ಸಂಗ್ರಹಿಸಿದೆ. ೨೦೧೬-೧೭ರಲ್ಲಿ ರಾಷ್ಟ್ರೀಯ ಪಕ್ಷಗಳು ೧೨೮.೬೦ ಕೋಟಿ ರೂಪಾಯಿಗಳ ಆದಾಯವನ್ನು ಬ್ಯಾಂಕುಗಳು ಮತ್ತು ಎಫ್ ಡಿಗಳ ಬಡ್ಡಿಯಿಂದ ಪಡೆದಿವೆ. ೨೦೧೬-೧೭ರಲ್ಲಿ ರಾಷ್ಟ್ರೀಯ ಪಕ್ಷಗಳು ಕೂಪನ್ ನೀಡಿಕೆಯಿಂದ ಶೇಕಡಾ ೭.೯೮ರಷ್ಟು ಅಂದರೆ ೧೨೪.೪೬ ಕೋಟಿ ರೂಪಾಯಿಗಳನ್ನು ಗಳಿಸಿವೆ ಎಂದೂ ವರದಿ ಹೇಳಿತು. ಪಕ್ಷಗಳು ತಮ್ಮ ಖಾತೆಗಳ ಆಡಿಟ್ ಮಾಡಲಾದ ವಾರ್ಷಿಕ ವರದಿಯನ್ನು ೨೦೧೭ರ ಅಕ್ಟೋಬರ್ ೩೦ರಂದು ನೀಡಬೇಕು. ಬಿಜೆಪಿ ತನ್ನ ಆಡಿಟ್ ವರದಿಯನ್ನು ೨೦೧೮ರ ಫೆಬ್ರುವರಿ ೮ರಂದು (೯೯ ದಿನ ವಿಳಂಬ) ಮತ್ತು ಕಾಂಗ್ರೆಸ್ ೨೦೧೮ರ ಮಾರ್ಚ್ ೧೯ರಂದು (೧೩೮ ದಿನಗಳಷ್ಟು ವಿಳಂಬ) ಸಲ್ಲಿಸಿವೆ. ಏಳೂ ರಾಷ್ಟ್ರೀಯ ಪಕ್ಷಗಳು ಕಳೆದ ಐದು ವರ್ಷಗಳಿಂದ ತಮ್ಮ ಆಡಿಟ್ ವರದಿಗಳನ್ನು ನಿರಂತರವಾಗಿ ವಿಳಂಬವಾಗಿಯೇ ಸಲ್ಲಿಸಿವೆ ಎಂಬುದು ತಮ್ಮ ಅಧ್ಯಯನದಿಂದ ಕಂಡು ಬಂದಿದೆ ಎಂದು ಎಡಿಆರ್ ತಿಳಿಸಿತು.

 2018: ನವದೆಹಲಿ: ಬಿಹಾರಿನ ಹಾಜಿಪುರ ಪಟ್ಟಣದಲ್ಲಿ ಭಾರತ ಬಂದ್ ವೇಳೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಉಪೇಂದ್ರ ಕುಶವಾಹ ಅವರ ಮೇಲೆ ಮೀಸಲು ವಿರೋಧಿ ಪ್ರತಿಭಟನಕಾರರು ಹಲ್ಲೆ ನಡೆಸಿದ ಘಟನೆ ಘಟಿಸಿತು.  ಸಚಿವರು ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೊರಟಿದ್ದಾಗ ಈ ಘಟನೆ ಘಟಿಸಿತು. ಈ ಸಮಾರಂಭದಲ್ಲಿ ’ಸ್ವಚ್ಛಾಗ್ರಹ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚಂಪಾರಣ್ ಸತ್ಯಾಗ್ರಹವನ್ನು ಗೌರವಿಸಲಿದ್ದರು.  ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಕುಶವಾಹ ಅವರು ಬಿಜೆಪಿಯ ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷರಾಗಿದ್ದಾರೆ.  ದಲಿತ ಸಂಘಟನೆಗಳು ಕರೆ ನೀಡಿದ್ದ ಏಪ್ರಿಲ್ ೨ರ ಬಂದ್ ಸಂದರ್ಭದ ಹಿಂಸಾಚಾರದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಬಿಹಾರ ಈದಿನ ಮೀಸಲಾತಿ ವಿರೋಧಿ ಪ್ರತಿಭಟನಕಾರರು ದಲಿತರು ಕರೆ ನೀಡಿದ್ದ ಬಂದ್ ವಿರುದ್ಧ ಪ್ರತಿಭಟನೆಗೆ ಇಳಿದ ಪರಿಣಾಮವಾಗಿ ಈದಿನ ಮತ್ತೆ ಹಿಂಸೆಯ ಮಡಿಲಿಗೆ ತಳ್ಳಲ್ಪಟ್ಟಿತು.  ಮುಜಾಫ್ಫರಪುರ, ಬೆಗುಸರಾಯ್, ಲಖಿಸರಾಯ್ ಮತ್ತು ಅರ್ರಾಹ್ ಈದಿನದ ಬಂದ್ ಹಿಂಸೆಯಿಂದ ನಲುಗಿದವು. ಮೀಸಲಾತಿ ಪರ ಮತ್ತು ವಿರೋಧಿಗಳ ಅಲ್ಲಲ್ಲಿ ಘರ್ಷಣೆಗಳು ಸಂಭವಿಸಿದವು ಎಂದು ವರದಿಗಳು ಹೇಳಿವೆ.  ಮುಜಾಫ್ಫರಪುರದ ಗೋಬರಸಾಹಿ ಪ್ರದೇಶದಲ್ಲಿ ಪ್ರಕ್ಷುಬ್ಧ ಪ್ರತಿಭಟನಕಾರರ ಗುಂಪುಗಳು ಎಎಸ್ಪಿ, ಡಿಎಸ್ಪಿ ಸೇರಿದಂತೆ ಪೊಲೀಸರ ಮೇಲೆ ಅವರನ್ನು ಅಟ್ಟಸಿಕೊಂಡು ಹೋಗಿ ಹಲ್ಲೆ ನಡೆಸಿದವು. ಅರ್ರಾಹ್ ನಲ್ಲಿ ಪ್ರತಿಭಟನಕಾರರು ರೈಲನ್ನು ಯಶಸ್ವಿಯಾಗಿ ತಡೆದರು. ಹಿಂಸಾಚಾರವನ್ನು ಅನುಸರಿಸಿ, ಭೀಮ್ ಆರ್ಮಿಯ ಕೇಂದ್ರ ಕಚೇರಿ ಇರುವ ಪಶ್ಚಿಮ ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯಲ್ಲಿ ಸೋಮವಾರ ಸಂಜೆ ೭ ಗಂಟೆಯವರೆಗೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಎರಡು ದಿನಗಳ ಕಾಲ ಇಂಟರ್‌ನೆಟ್ ಸೇವೆ ಇರುವುದಿಲ್ಲ ಎಂದು ಜಿಲ್ಲಾ ಆಡಳಿತ ಹೇಳಿತು. ಪ್ರತಿಭಟನಾ ಕಾಲದಲ್ಲಿ ವದಂತಿ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.  ಏಪ್ರಿಲ್ ೨ರ ಪ್ರತಿಭಟನೆ ವೇಳೆಯಲ್ಲಿ ಭೀಮ ಆರ್ಮಿ ಬೆಂಬಲಿಗರು  ಸಹರಾನ್ ಪುರದ ಕೇಂದ್ರ ಭಾಗದಲ್ಲಿ ಘಂಟಾಗರ್ ಚೌಕದಿಂದ ಕಲ್ಪನಾ ಸಿನೆಮಾವರೆಗೆ ೨ ಕಿಮೀಯಷ್ಟು ದೂರ ರಸ್ತೆಗಳನ್ನು ಪೂರ್ತಿಯಾಗಿ ಆವರಿಸಿದ್ದರು. ಏನಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಹಿಂಸಾಚಾರಗಳು ಘಟಿಸಿದ್ದವು. ಕೆಲವು ಪ್ರತಿಭಟನಕಾರರಿಂದ ಪೊಲೀಸ್ ಕಾರೊಂದು ನಾಶವಾಗಿತ್ತು.  ಉತ್ತರ ಪ್ರದೇಶದ ಪಶ್ಚಿಮದ ಇತರ ಭಾಗಗಳಲ್ಲಿ ಮತ್ತು ಬಾಗ್ಪತ್ ಪ್ರದೇಶದಲ್ಲೂ ಈದಿನ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಸಾಮಾಜಿಕ ಮಾಧ್ಯಮ ವೇದಿಕೆ ಅಥವಾ ಬೇರಾವುದೇ ವೇದಿಕೆ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಮಾಜ-ವಿರೋಧಿ ಶಕ್ತಿಗಳನ್ನು ದಮನಿಸಲಾಗುವುದು ಮತ್ತು ಶಿಕ್ಷಿಸಲಾಗುವುದು ಎಂದು ಮುಜಾಫ್ಫರನಗರ ಎಸ್‌ಎಸ್ ಪಿ ಹೇಳಿದರು.  ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ (ಎಸ್ ಸಿ/ಎಸ್ ಟಿ) (ದೌರ್ಜನ್ಯ ನಿಗ್ರಹ) ಕಾಯ್ದೆ ೧೯೮೯ನ್ನು ಸುಪ್ರೀಂಕೋರ್ಟ್ ತೀರ್ಪಿನ ಮೂಲಕ ದುರ್ಬಲಗೊಳಿಸಲಾಗಿದೆ ಎಂದು ಆಪಾದಿಸಿ ಏಪ್ರಿಲ್ ೨ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಾಗಿತ್ತು.  ಏಪ್ರಿಲ್ ೨ರ ಪ್ರತಿಭಟನೆ ಹಿಂಸೆಗೆ ತಿರುಗಿದ ಬಳಿಕ, ಅಲ್ಲಲ್ಲಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆಪಾದಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಉತ್ತರ ಪ್ರದೇಶದ ನಾಲ್ವರು ಸಂಸತ್ ಸದಸ್ಯರು ಪ್ರಧಾನಿಯವರಿಗೆ ಪತ್ರ ಬರೆದು ಪೊಲೀಸರು ದಲಿತರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರಿದ್ದರು.  ಭೀಮ ಆರ್ಮಿ ಸಂಸ್ಥಾಪಕ ಚಂದ್ರಶೇಖರ ಆಜಾದ್ ರಾವಣ್ ಅವರು ಸಹರಾನ್ ಪುರ ಜಿಲ್ಲಾ ಸೆರೆಮನೆಯಲ್ಲಿ ನಿರಶನ ಆರಂಭಿಸಿದ್ದಾರೆ. ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ.

2018: ನವದೆಹಲಿ: ಸುಪ್ರೀಂಕೋರ್ಟಿನ ಐವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ನಿವೃತ್ತಿಯ ಬಳಿಕ ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ತಿರಸ್ಕರಿಸುವುದಾಗಿ ಪ್ರತಿಜ್ಞೆ ಮಾಡಿದರು.  ೨೦೧೮ರಲ್ಲಿ ನಿವೃತ್ತರಾಗುತ್ತಿರುವ ಎರಡನೇ ಹಿರಿಯ ನ್ಯಾಯಮೂರ್ತಿ ಕುರಿಯನ್ ಅವರು ನಿವೃತ್ತಿಗೆ ಮೊದಲು ಅಥವಾ ಬಳಿಕ ಸರ್ಕಾರ ಕೊಡುವ ಹುದ್ದೆಗಳ ಸುತ್ತ ಸುತ್ತುವುದನ್ನು ನ್ಯಾಯಮೂರ್ತಿಗಳು ಬಿಡಬೇಕು ಎಂದು ಸ್ಪಷ್ಟ ಪಡಿಸಿದರು.  ಸುಪ್ರೀಂಕೋರ್ಟಿನಲ್ಲಿ ೨ನೇ ಸ್ಥಾನದಲ್ಲಿದ್ದ ನ್ಯಾಯಮೂರ್ತಿ ಜಸ್ಟಿ ಚೆಲಮೇಶ್ವರ್ ಅವರು ತಾವು ನಿವೃತ್ತಿ ಬಳಿಕದ ಹುದ್ದೆಗಳನ್ನು ನಿರಾಕರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ನ್ಯಾಯಮೂರ್ತಿ ಕುರಿಯನ್ ಅವರಿಂದಲೂ ಅಂತಹುದೇ ಘೋಷಣೆ ಹೊರಬಿದ್ದಿತು.  ನ್ಯಾಯಮೂರ್ತಿ ಚೆಲಮೇಶ್ವರ್ ಮತ್ತು ನ್ಯಾಯಮೂರ್ತಿ ಕುರಿಯನ್ ಅವರು ಇತರ ಹಿರಿಯ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯಿ ಮತ್ತು ಮದನ್ ಬಿ. ಲೋಕುರ್ ಅವರ ಜೊತೆಗೆ ಜನವರಿ ೧೨ರಂದು ಚಾರಿತ್ರಿಕ ಪತ್ರಿಕಾಗೋಷ್ಠಿ ಕರೆದು ನ್ಯಾಯಾಂಗವು ಸ್ವತಂತ್ರವಾಗಿರಬೇಕು ಎಂದು ಪ್ರತಿಪಾದಿಸಿದ್ದರು. ನ್ಯಾಯಮೂರ್ತಿಗಳಾದ ಚೆಲಮೇಶ್ವರ ಮತ್ತು ಲೋಕುರ್ ಅವರೂ ಈ ವರ್ಷ ನಿವೃತ್ತರಾಗುತ್ತಿದ್ದಾರೆ. ನ್ಯಾಯಮೂರ್ತಿ ಗೊಗೋಯಿ ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವವರ ಸಾಲಿನಲ್ಲಿ ಇದ್ದಾರೆ.  ಏಪ್ರಿಲ್ ೯ರಂದು ಕೇರಳ ಮಾದ್ಯಮ ಅಕಾಡೆಮಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನ್ಯಾಯಮೂರ್ತಿ ಕುರಿಯನ್ ಅವರು ನ್ಯಾಯಾಂಗ ಮತ್ತು ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲುನಾಯಿಗಳು (ವಾಚ್ ಡಾಗ್ಸ್) ಎಂಬುದಾಗಿ ಬಣ್ಣಿಸಿದ್ದರು.  ತನ್ನ ಯಜಮಾನನಿಗೆ ಅಪಾಯದ ಸುಳಿವು ಕಂಡೊಡನೆಯೇ ಕಾವಲು ನಾಯಿಗಳು ಎಚ್ಚರಿಕೆಯ ಸದ್ದು ಮಾಡುತ್ತವೆ. ಅಪರೂಪದ ಸಂದರ್ಭಗಳಲ್ಲಿ ಅವು ತನ್ನ ಯಜಮಾನನನ್ನು ರಕ್ಷಿಸಲು ಅತಿಕ್ರಮಣಕಾರನನ್ನು ಕಚ್ಚಲೂ ಹಿಂಜರಿಯುವುದಿಲ್ಲ ಎಂದು ನ್ಯಾಯಮೂರ್ತಿ ಕುರಿಯನ್ ಹೇಳಿದ್ದರು. ಸುಪ್ರೀಂಕೋರ್ಟಿನಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ನಶಿಸುತ್ತಿರುವ ಬಗ್ಗೆ ನಾಲ್ವರು ನ್ಯಾಯಮೂರ್ತಿಗಳು ಜನವರಿ ೧೨ರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ನಾಲ್ವರು ನ್ಯಾಯಮೂರ್ತಿಗಳು ಇತ್ತೀಚಿನ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದರು.  ಕೆಲವು ಮಹತ್ವದ ಸೂಕ್ಷ್ಮ ಪ್ರಕರಣಗಳನ್ನು ಸುಪ್ರೀಂಕೋರ್ಟಿನ ಪರಂಪರೆಗೆ ವಿರುದ್ಧವಾಗಿ ಆಯ್ದ ಪೀಠಗಳಿಗೆ ನಿಯೋಜಿಸಲಾಗುತ್ತಿದೆ ಎಂದು ನಾಲ್ವರೂ ನ್ಯಾಯಮೂರ್ತಿಗಳು ತಮ್ಮ ಪತ್ರ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತ ಪಡಿಸಿದ್ದರು. ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ತಿಳಿವಳಿಕೆ ಪತ್ರವನ್ನು ಅಂತಿಮ ಗೊಳಿಸುವುದರೊಂದಿಗೆ ಸರ್ಕಾರ ಮತ್ತು ಉನ್ನತ ನ್ಯಾಯಾಂಗ ನಡುವಣ ಬಾಂಧವ್ಯಕ್ಕೆ ಧಕ್ಕೆ ಉಂಟಾಗಿದ್ದು, ಕಳೆದೆರಡು ವರ್ಷಗಳಿಂದ ಅದು ಹಾಗೆಯೇ ಉಳಿದಿತ್ತು. ಹೈಕೋರ್ಟ್‌ಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಅತಿಯಾಗಿ ಹೆಚ್ಚಿದೆ. ಕಲ್ಕತ್ತ ಹೈಕೋರ್ಟಿನಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಅದರ ಒಟ್ಟು ಬಲದ ಮೂರನೇ ಎರಡರಷ್ಟಕ್ಕೆ ತಲುಪಿದೆ ಎಂದು ದೂರಿ ಮುಷ್ಕರ ಕೂಡಾ ನಡೆದಿತ್ತು. ಸುಪ್ರೀಂಕೋರ್ಟಿನಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ೭ಕ್ಕೆ ಏರಿದೆ. ಹಿರಿಯ ವಕೀಲರಾದ ಇಂದು ಮಲ್ಹೋತ್ರ ಮತ್ತು ಉತ್ತರಾ ಖಂಡ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸುಗಳು ಕಳೆದ ೩ ತಿಂಗಳುಗಳಿಂದ ನನೆಗುದಿಯಲ್ಲಿಯೇ ಇವೆ.   ಜನವರಿ ೧೨ರ ಪತ್ರಿಕಾಗೋಷ್ಠಿಯ ಬಳಿಕ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವಣ ಬಾಂಧವ್ಯವೂ ಕುಸಿದಿದೆ. ಸುಪ್ರೀಂಕೋರ್ಟಿನ ನ್ಯಾಯಾಂಗ ಆಡಳಿತವನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಯವರ ಮನ ಒಲಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದು ಪತ್ರಿಕಾಗೋಷ್ಠಿ ಕರೆದಿದ್ದ ಹಿರಿಯ ನ್ಯಾಯಮೂರ್ತಿಗಳು ಹೇಳಿದ್ದರು.

2018: ನವದೆಹಲಿ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನೂರ್ಪುರದಲ್ಲಿ  ಏಪ್ರಿಲ್ ೯ರ ಸೋಮವಾರ ಮಧ್ಯಾಹ್ನ ಸಂಭವಿಸಿದ ಶಾಲಾ ಬಸ್ ದುರಂತದ ಸಂದರ್ಭದಲ್ಲಿ ೧೦ ವರ್ಷದ ರಣಬೀರ್ ಸಿಂಗ್ ಎಂಬ ಬಾಲಕ ಸಮಯಸ್ಫೂರ್ತಿಯಿಂದ ಅಪೂರ್ವ ದೈರ್ಯ ಪ್ರದರ್ಶಿಸಿ ಹಲವಾರು ಮಕ್ಕಳ ಜೀವ ಉಳಿಸಲು ನೆರವಾದ ವಿಚಾರ ಬೆಳಕಿಗೆ ಬಂದಿತು. ಬಸ್ಸು ಇನ್ನೂರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಸಂಭವಿಸಿದ ಭೀಕರ ದುರಂತದಲ್ಲಿ ೨೭ ಮಕ್ಕಳ ಸಹಿತ ಒಟ್ಟು ೩೦ ಮಂದಿ ದಾರುಣವಾಗಿ ಮೃತರಾಗಿದ್ದರು. ಬಸ್ಸಿನಲ್ಲಿದ್ದ ೪೦ಕ್ಕೂ ಅಧಿಕ ಸಂಖ್ಯೆಯ ಮಕ್ಕಳು ರಾಮ್ ಸಿಂಗ್ ಪಠಾಣಿಯಾ ಮೆಮೋರಿಯಲ್ ಶಾಲೆಯ ಮಕ್ಕಳಾಗಿದ್ದು ಅವರೆಲ್ಲರೂ ೧೨ ವರ್ಷಕ್ಕಿಂತ  ಕೆಳಗಿನವರಾಗಿದ್ದರು. ಈ ಮಕ್ಕಳನ್ನು ಕರೆದೊಯ್ಯುತ್ತಿದ್ದ ನತದೃಷ್ಟ ಬಸ್ಸು ನೂರ್ಪುರ - ಚಂಬಾ ರಸ್ತೆಯಲ್ಲಿ ಗುರ್ಚಾಲ್ ಗ್ರಾಮದ ಸಮೀಪ ಅತ್ಯಂತ ಹದಗೆಟ್ಟ, ಕಡಿದಾದ ತಿರುವಿನಲ್ಲಿ ೬೭ರ ಹರೆಯದ ಚಾಲಕ ಬಸ್ಸು ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ೨೦೦ ಅಡಿ ಆಳದ ಕಮರಿಗೆ ಉರುಳಿತ್ತು.  ಬಸ್ಸು ಕೆಳಕ್ಕೆ ಉರುಳುವಾಗ ಬಸ್ಸಿನ ಕಿಟಕಿಯಿಂದ ಹೊರಗೆಸೆಯಲ್ಪಟ್ಟು ದೇಹ ತುಂಬ ಗಾಯಗಳಾಗಿದ್ದ  ರಣಬೀರ್ ಮತ್ತು ಅವನಿ ಎಂಬ ಹುಡುಗಿ ಮರದ ಗೆಲ್ಲನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡರು. ಅವನಿಯನ್ನು ರಣಬೀರ್ ಕಷ್ಟಪಟ್ಟು ಮರದಿಂದ ಇಳಿಸಿ ಆಕೆ ಮತ್ತೆ ಪ್ರಪಾತಕ್ಕೆ ಬೀಳದಂತೆ ನೋಡಿಕೊಂಡ. ಬಳಿಕ ಇಬ್ಬರೂ ಕಷ್ಟಪಟ್ಟು ಸುಮಾರು ೫೦ ಅಡಿ ಎತ್ತರದ ಜಾರು ಹಾದಿಯ ಬೆಟ್ಟವನ್ನು ಏರಿ ಮುಖ್ಯರಸ್ತೆಗೆ ಬಂದು ಅಲ್ಲಿ ಸಾಗುತ್ತಿದ್ದ ಜನರನ್ನು, ವಾಹನಗಳನ್ನು ತಡೆದು ಅಪಘಾತದ ಮಾಹಿತಿ ನೀಡಿದರು.
೧೦ ವರ್ಷದ ಬಾಲಕನ ಈ ಸಮಯಸ್ಫೂರ್ತಿ, ಧೈರ್ಯ ಸಾಹಸದ ನಡೆಯಿಂದ ಗ್ರಾಮಸ್ಥರು ಮತ್ತು ಯುವಕರಿಗೆ ಅಪಘಾತದ ಮಾಹಿತಿ ಬೇಗನೆ ದೊರಕಿ ಅವರು ರಕ್ಷಣಾ ಕಾರ್ಯಕ್ಕೆ ಧುಮುಕಲು ಮತ್ತು ಅನೇಕ ಮಕ್ಳಳ ಜೀವ ಉಳಿಯಲು ಸಾಧ್ಯವಾಯಿತು.   ವಿಷಯ ಗೊತ್ತಾದ ತತ್ ಕ್ಷಣವೇ ಸ್ಥಳೀಯರು, ಮುಖ್ಯವಾಗಿ ಯುವಕರು ೩೦ ನಿಮಿಷಗಳ ಒಳಗೆ ಬಸ್ಸು ಉರುಳಿ ಬಿದ್ದ  ಪ್ರಪಾತದ ತಾಣವನ್ನು ತಲುಪಿ ರಕ್ಷಣಾ ಕಾರ್ಯಕ್ಕೆ ಇಳಿದರು.  ಇವರ ಪ್ರಯತ್ನದಿಂದಾಗಿ ಹಲವು ಮಕ್ಕಳ ಜೀವ ಉಳಿಯಿತು.   ಈ ವರೆಗೆ ಹಲವಾರು ಗಂಭೀರ ಅಪಘಾತಗಳನ್ನು ಕಂಡಿರುವ ಈ ಹದಗೆಟ್ಟ ರಸ್ತೆ ಮತ್ತು ತಿರುವನ್ನು ಅಧಿಕಾರಿಗಳು ಈ ವರೆಗೂ ಸರಿಪಡಿಸಿಲ್ಲ; ನಾವು ಅನೇಕ ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರೊಬ್ಬರು ಮಾಧ್ಯಮಕ್ಕೆ ತಿಳಿಸಿದರು.  ಈ ಭೀಕರ ಅವಘಡದಲ್ಲಿ ಸತ್ತಿರುವ ಅನೇಕ ಮಕ್ಕಳು ಪರಸ್ಪರ ಸಂಬಂಧಿಕರು. ಒಂದೇ ಕುಟುಂಬದ ಇಬ್ಬರು ಸಹೋದರರ ನಾಲ್ವರು ಮಕ್ಕಳು ಅಸುನೀಗಿದರೆ, ನರೇಶ್ ಕುಮಾರ್ ಎಂಬವರ ಪುತ್ರ ಮತ್ತು ಪುತ್ರಿ ಅಸುನೀಗಿದ್ದಾರೆ. ಮೃತ ಮಕ್ಕಳ ದೇಹಗಳು ಚೆಲ್ಲಾಪಿಲ್ಲಿ ಹರಡಿಕೊಂಡು ಬಿದ್ದ ತಾಣವನ್ನು ಕಂಡು ಅನೇಕ ತಂದೆ - ತಾಯಂದಿರು ದುಃಖ ತಾಳಲಾರದೆ ಕುಸಿದು ಬಿದ್ದರು.

2018: ಪುಣೆ: ಹಲವಾರು ಮಹಿಳೆಯರನ್ನು ಒಳಗೊಂಡಂತೆ ೩೫ ಮಂದಿ ಕಾರ್ಮಿಕರನ್ನು ಒಯ್ಯುತ್ತಿದ್ದ ಟ್ರಕ್ ಒಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸಮೀಪ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಪಲ್ಟಿಯಾದ ಪರಿಣಾಮವಾಗಿ ಸಂಭವಿಸಿದ ಭೀಕರ ದುರಂತದಲ್ಲಿ ೧೮ ಕಾರ್ಮಿಕರು ಅಸು ನೀಗಿ ಇತರ ಹಲವರು ಗಾಯಗೊಂಡರು.  ಕರ್ನಾಟಕದ ವಿಜಯಪುರದವರು ಎನ್ನಲಾಗಿರುವ ಕಾರ್ಮಿಕರು ಪುಣೆ ಜಿಲ್ಲೆಯಲ್ಲಿನ ಶಿರ್ವಾಲ್ ಎಂಐಡಿಸಿಗೆ ಕೆಲಸಕ್ಕಾಗಿ ಬರುತ್ತಿದ್ದಾಗ ಸತಾರಾ ಜಿಲ್ಲೆಯ ಖಂಡಾಲ ತೆಹ್ಸಿಲ್ ನಲ್ಲಿ ಈ ದುರಂತ ಸಂಭವಿಸಿತು. ಕಾರ್ಮಿಕರ ಗುಂಪಿನಲ್ಲಿ ಕನಿಷ್ಠ ಮೂರು ಕುಟುಂಬಗಳ ಸದಸ್ಯರಿದ್ದರು ಎನ್ನಲಾಗಿದ್ದು ಅವರೆಲ್ಲರೂ ಪರಸ್ಪರ ಸಂಬಂಧಿಗಳಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದರು.  ಮೃತರನ್ನು ಮಾಧವಿ ರಾಥೋಡ್ (೪೫) ಶಂಕರ ಚವಾಣ್ (೫೫), ಸಂತೋಷ ನಾಯ್ಕ್ (೩೨), ಮಂಗಲಬಾಯಿ ನಾಯ್ಕ್ (೪೨), ಕೃಷ್ಣ ಪವಾರ್ (೬೦), ಕಿರಣ್ ರಾಥೋಡ್ (೧೫), ದೇವಬಾಯಿ ರಾಥೋಡ್ (೨೭), ಪ್ರಿಯಾಂಕಾ ರಾಥೋಡ್ (೧೮), ವಿಠ್ಠಲ್ ರಾಥೋಡ್ (೪೦) ಮತ್ತು ಅವರ ಪತ್ನಿ ಕಲ್ಲುಬಾಯಿ (೩೫), ದೇವಾನಂದ ರಾಥೋಡ್ (೩೫), ಸಂಗೀತಾ ರಾಥೋಡ್ (೨೬), ತನ್ವೀರ್ ರಾಥೋಡ್ ಅವರ ಒಂದು ಮಗು (೧೮ ತಿಂಗಳುಗಳು), ಶ್ರೀಕಾಂತ ರಾಥೋಡ್ (೩೮) ಮತ್ತು ಅವರ ಸಹೋದರ ಸಿನೂ (೩೦), ಅರ್ಜುನ್ ಚವಾಣ್ (೩೦), ಮೆಹಮೂಬ್ ಅತರ್ (೫೫) ಮತ್ತು ಅವರ ಪುತ್ರ ಮಜೀದ್ (೨೫) ಎಂಬುದಾಗಿ ಗುರುತಿಸಲಾಯಿತು.  ನಸುಕಿನ ೫.೩೦ರ ವೇಳೆಗೆ ಅಪಘಾತ ಸಂಭವಿಸಿತು.  ಕನಿಷ್ಠ ೩೫ ಕಾರ್ಮಿಕರನ್ನು ಒಯ್ಯುತ್ತಿದ್ದ ಟ್ರಕ್ ಖಂಬಾತ್ಕಿ ಘಟ್ಟ ದಾಟಿದ ಬಳಿಕ ತಿರುವಿನಲ್ಲಿ ಪಲ್ಟಿಯಾಯಿತು. ೧೮ ಮಂದಿ ಕಾರ್ಮಿಕರ ಗುಂಪಿನಲ್ಲಿ ನಾಲ್ವರು ಮಹಿಳೆಯರು, ಒಂದು ಮಗು ಕೂಡಾ ಇದ್ದು ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದರು. ಇತರ ೧೫ ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಮೃತರಲ್ಲಿ ಟ್ರಕ್ ಚಾಲಕನೂ ಸೇರಿದ್ದಾನೆ.  ಬೆಟ್ಟದ ತುದಿಯಲ್ಲಿನ ಖಂಬಾತ್ಕಿ ಘಟ್ಟವನ್ನು ಏರಿದ ಬಳಿಕ ಕಡಿದಾದ ತಿರುವಿನಲ್ಲಿ ತಿರುಗುತ್ತಿದ್ದಾದ ಚಾಲಕನಿಗೆ ನಿಯಂತ್ರಣ ತಪ್ಪಿದ್ದರಿಂದ ಟ್ರಕ್ ಪಲ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಈ ’ಎಸ್ ಕಾರ್ನರಿನಲ್ಲಿ ಹಲವಾರು ಅಪಘಾತಗಳು ಸಂಭವಿಸಿದ್ದು, ಚಾಲಕರು ಅದನ್ನು ಅಂದಾಜು ಮಾಡುವಲ್ಲಿ ಹಲವಾರು ಬಾರಿ ವಿಫಲರಾಗಿ ದುರಂತಗಳು ಸಂಭವಿಸಿವೆ ಎಂದು ಸ್ಥಳೀಯರು ಹೇಳಿದರು.  ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಕಾರ್ಮಿಕರ ಗುಂಪಿನ ಕೆಲವು ಪುರುಷರು ಸತಾರಾ ಗ್ರಾಮೀಣ ಪೊಲೀಸರಿಗೆ ದುರಂತದ ಬಗ್ಗೆ ತಿಳಿಸಿದರು. ಗಾಯಾಳುಗಳನ್ನು ಖಂಡಾಲಾ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿದವು.

2018: ನವದೆಹಲಿ: ಸಂಸತ್ತಿನ ಮುಂಗಡಪತ್ರ ಅಧಿವೇಶನ ವಿಪಕ್ಷಗಳ ಗದ್ದಲದಿಂದಾಗಿ ಸ್ಥಗಿತಗೊಂಡದ್ದನ್ನು ಪ್ರತಿಭಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಏ.೧೨ರ ಗುರುವಾರ ಬಿಜೆಪಿ ಸಂಸತ್ ಸದಸ್ಯರ ಜೊತೆಗೆ ಇಡೀ ದಿನ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಇದೇ ದಿನ ಚುನಾವಣೆ ನಡೆಯಲಿರುವ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಿರಶನ ನಡೆಸಲಿದ್ದಾರೆ. ಉಪವಾಸ ನಡೆಸಿದರೂ ಜನರನ್ನು ಮತ್ತು ಅಧಿಕಾರಿಗಳನ್ನು ಭೇಟಿ ಮಾಡುವ ಹಾಗೂ ಕಡತಗಳನ್ನು ವಿಲೇವಾರಿ ಮಾಡುವ ತಮ್ಮ ಅನುದಿನದ ಕಾರ್‍ಯಕ್ರಮವನ್ನು ಅವರು ಬಿಟ್ಟು ಬಿಡುವುದಿಲ್ಲ ಎಂದು ಮೂಲಗಳು ಹೇಳಿದವು. ಶುಕ್ರವಾರ ಬಿಜೆಪಿ ಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ ಅವರು ’ವಿಪಕ್ಷಗಳು, ನಿರ್ದಿಷ್ಟವಾಗಿ ಕಾಂಗ್ರೆಸ್ ವಿಭಜನಕಾರಿ ರಾಜಕೀಯವನ್ನು ಮಾಡುತ್ತಿದೆ ಎಂದು ಆಪಾದಿಸಿದ್ದರು.  ಸಂಸತ್ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದನ್ನು ಪ್ರತಿಭಟಿಸಿ ಬಿಜೆಪಿ ಸಂಸತ್ ಸದಸ್ಯರೂ ಏಪ್ರಿಲ್ ೧೨ರಂದು ಪ್ರತಿಭಟನಾ ನಿರಶನ ನಡೆಸಲು ನಿರ್ಧರಿಸಿದ್ದರು.  ಕೋಮು ಸೌಹಾರ್ದ ವೃದ್ಧಿಗಾಗಿ ಏಪ್ರಿಲ್ ೯ರಂದು ಪಕ್ಷದ ಸದಸ್ಯರು ನಿರಶನ ನಡೆಸುವರು ಎಂದು ಪ್ರಕಟಿಸುವ ಮೂಲಕ ಬಿಜೆಪಿ ಕಾರ್‍ಯಕ್ರಮವನ್ನು ಗೌಣಗೊಳಿಸಲು ಕಾಂಗ್ರೆಸ್ ಯತ್ನಿಸಿತ್ತು. ಏಪ್ರಿಲ್ ೧೨ರಂದು ಎಲ್ಲ ಬಿಜೆಪಿ ಸಂಸತ್ ಸದಸ್ಯರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿರಶನ ನಡೆಸಲಿದ್ದಾರೆ.
 
2018: ಚೆನ್ನೈ: ಕರ್ನಾಟಕ ಜೊತೆಗಿನ ಕಾವೇರಿ ಜಲವಿವಾದ ಮಧ್ಯೆ ಚೆನ್ನೈಯ ಚೀಪಾಕ್ ನ  ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ಸಂಜೆಗೆ ನಿಗದಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವನ್ನು ಪ್ರತಿಭಟಿಸಿ, ಕ್ರೀಡಾಂಗಣದತ್ತ ನುಗ್ಗಲು ಯತ್ನಿಸಿದ ಸೀಮನ್, ಭಾರತಿರಾಜಾ, ತಮೀಮ್ ಅನ್ಸಾರಿ ಮತ್ತಿತರರನ್ನು ಸಂಜೆ ಪೊಲೀಸರು ಬಂಧಿಸಿದರು. ತಮಿಳುನಾಡಿದ ವಿಸಿಕೆ, ಎಸ್ ಡಿಪಿಐ, ಟಿವಿಕೆ, ಟಿಇಐ, ಇತ್ಯಾದಿ ಸಂಘಟನೆಗಳ ನೂರಾರು ಬೆಂಬಲಿಗರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು. ವಲ್ಲಾಜ ರಸ್ತೆ, ಅಣ್ಣಾ ಸಲಾಯಿ, ಎಲ್ಲಿಸ್ ರಸ್ತೆ, ಬೆಲ್ಸ್ ರಸ್ತೆ ಮತ್ತಿತರ ಕಡೆಯಿಂದಲೂ ಸ್ಟೇಡಿಯಂನತ್ತ ಹೊರಟ ಪ್ರತಿಭಟನಕಾರರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.  ಪೊಲೀಸ್ ವಾಹನಗಳಲ್ಲಿ ಒಯ್ಯುವುದಕ್ಕೆ ಮುಂಚಿತವಾಗಿ ಘೋಷಣೆ ಕೂಗುತ್ತಿದ್ದ ಪ್ರತಿಭಟನಕಾರರು ಸ್ಥಳದಲ್ಲೇ ಧರಣಿ ನಡೆಸಿದರು. ಪ್ರತಿಭಟನೆಯ ಪರಿಣಾಮವಾಗಿ ಈ ಪ್ರದೇಶದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.  ಕ್ರೀಡಾಂಗಣವನ್ನು ಸಂಪರ್ಕಿಸುವ ವಲ್ಲಾಜ ರಸ್ತೆಯಲ್ಲಿ ನಾಮ್ ತಮಿಳರ್ ಕಚ್ಚಿ ಮತ್ತು ಮಾನಿತ ನೆಯ ಜನನಾಯಗ ಕಚ್ಚಿ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಅಡ್ಡಗಟ್ಟೆಗಳನ್ನು ಮುರಿದು ನುಗ್ಗಲು ಯತ್ನಿಸಿದಾಗ ಪೊಲೀಸರು ಬೆತ್ತ ಪ್ರಹಾರ ನಡೆಸಿದರು. ಬೆತ್ತ ಪ್ರಹಾರದಲ್ಲಿ ಹಲವರು ಗಾಯಗೊಂಡರು. ಹಲವಾರು ಪ್ರತಿಭಟನಕಾರರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು.  ನಾಮ್ ತಮಿಳರ್ ಕಚ್ಚಿ ನಾಯಕ ಸೀಮನ್, ಎಸ್ ಡಿಪಿಐ ನಾಯಕರು ಶಾಸಕರಾದ ತಮೀಮ್ ಅನ್ಸಾರಿ, ಯು. ತಣ್ಣಿರಸು ಮತ್ತು ಕರುಣಾಸ್, ತಮಿಳುನಾಡು ಫಾರ್ಮರ್‍ಸ್ ಫೆಡರೇಶನ್ ಅಧ್ಯಕ್ಷ ಪಿ.ಆರ್. ಪಾಂಡ್ಯನ್ ಅಣ್ಣಾ ಸಲಾಯಿ ಸಮೀಪ ಪೊಲೀಸರು ಅಡ್ಡಗಟ್ಟೆ ಮುರಿದ ಬಳಿಕ ನಡೆದ ಮೆರವಣಿಗೆಯ ನೇತೃತ್ವ ವಹಿಸಿದರು.  ಚಿತ್ರ ನಿರ್ದೇಶಕರಾದ ಭಾರತಿರಾಜಾ, ಸೀಮನ್, ಅಮೀರ್, ರಾಮ್, ವೆಟ್ರಿಮಾರನ್ ಮತ್ತು ಅನ್ಸಾರಿ ಅವರನ್ನು ಬಂಧಿಸಲಾಯಿತು. ಇತರ ಪ್ರತಿಭಟನಕಾರರನ್ನೂ ಪೊಲೀಸರು ಟ್ರಿಪ್ಲಿಕೇನ್ ಪೊಲೀಸ್ ಠಾಣೆಯ ಸಮೀಪ ಬಂಧಿಸಿದರು. ಇದಕ್ಕೆ ಮುನ್ನ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲ ಅವರು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಸುರಳೀತವಾಗಿ ನಡೆಯುವಂತೆ ಮಾಡಲು ಕೇಂದ್ರ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದರು. ಶುಕ್ಲ ಅವರು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಅವರನ್ನು ಭೇಟಿ ಮಾಡಿ ಭದ್ರತಾ ಖಾತರಿ ನೀಡುವಂತೆ ಕೋರಿದರು. ಗೃಹ ಕಾರ್ಯದರ್ಶಿಯವರು ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕರ ಬಳಿ ಮಾತನಾಡಿ ಭದ್ರತಾ ವ್ಯವಸ್ಥೆಯ ಖಾತರಿ ನೀಡುವಂತೆ ಸೂಚಿಸಿದರು ಎಂದು ಶುಕ್ಲ ಹೇಳಿದರು.

2017: ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿತು. ಜಾಧವ್ ಅವರನ್ನು ಭಾರತದ ಬೇಹುಗಾರಿಕಾ ಸಂಸ್ಥೆರಾ ಏಜೆಂಟ್ ಎಂದು ಪಾಕಿಸ್ತಾನ ಆರೋಪಿಸಿತು. ಪಾಕಿಸ್ತಾನದಲ್ಲಿ ವಿಧ್ವಸಂಕ ಕೃತ್ಯಗಳನ್ನೆಸಗಲು ಸಂಚು ರೂಪಿಸಿದ್ದಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಅಲ್ಲಿನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆಇಂಟರ್ಸರ್ವೀಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ಪಿಆರ್) ತಿಳಿಸಿತು. ಜಾಧವ್ ಅವರನ್ನು 2016 ಮಾರ್ಚ್ 3ರಂದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ನಂತರ, ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಜಾಧವ್ ಹೇಳಿಕೆ ನೀಡಿರುವತಪ್ಪೊಪ್ಪಿಗೆ ವಿಡಿಯೊವನ್ನು ಪಾಕಿಸ್ತಾನದ ಸೇನೆ ಬಿಡುಗಡೆ ಮಾಡಿತ್ತು. ಜಾಧವ್ ಅವರು ನೌಕಾಪಡೆಯ ನಿವೃತ್ತ ಅಧಿಕಾರಿ ಎಂಬುದನ್ನು ಭಾರತ ದೃಡಪಡಿಸಿತ್ತು. ಆದರೆ, ಸದ್ಯ ಸರ್ಕಾರದೊಂದಿಗೆ ಅವರಿಗೆ ಯಾವುದೇ ಸಂಪರ್ಕ ಇಲ್ಲ ಎಂದೂ ಹೇಳಿತ್ತು. ಸಾಕ್ಷ್ಯ ನಾಶಕ್ಕೆ ಸಂಚು: ಪಾಕಿಸ್ತಾನದ ಸೇನಾ ನ್ಯಾಯಾಲಯದಲ್ಲಿ ರಹಸ್ಯ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಲಾಗಿದೆ. ಬಗ್ಗೆ ಭಾರತ ಸರ್ಕಾರಕ್ಕೆ ಪಾಕಿಸ್ತಾನ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿದವು. ರಹಸ್ಯ ವಿಚಾರಣೆ ನಡೆಸುವ ಬದಲು ಮುಕ್ತ ವಿಚಾರಣೆ ನಡೆಸಬೇಕಿತ್ತು. ಪಾಕಿಸ್ತಾನದ ನಡೆಯಿಂದ ಸಾಕ್ಷ್ಯ ನಾಶಪಡಿಸಲು ಅದು ಮುಂದಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿದವು. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಅಜೀಜ್ ಅವರು ಜಾಧವ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೆಲ ತಿಂಗಳ ಹಿಂದೆ ಪಾಕ್ ಸಂಸತ್ತಿನಲ್ಲಿ ಹೇಳಿದ್ದರು. ನಂತರ ಪಾಕಿಸ್ತಾನದ ಸೇನಾ ನ್ಯಾಯಾಲಯ ರಹಸ್ಯ ವಿಚಾರಣೆ ನಡೆಸಿತ್ತು.
2017: ನವದೆಹಲಿ: ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಪೂರ್ಯೋಜಿತ ಹತ್ಯೆಗೆ ಸಮ ಎಂದು ಪರಿಗಣಿಸುವುದಾಗಿ ಭಾರತ ಹೇಳಿತು. ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ಅವರಿಗೆ ಕೇಂದ್ರ ಸಮನ್ಸ್ ಜಾರಿ ಮಾಡಿತು. ಕಾನೂನು ಮತ್ತು ನ್ಯಾಯದ ಮೂಲ ಆಶಯಗಳನ್ನು ಗಮನಿಸದೆ ಭಾರತೀಯನಿಗೆ ಮರಣದಂಡನೆ ವಿಧಿಸಲಾಗಿರುವುದನ್ನು ಭಾರತ ಸರ್ಕಾರ ಮತ್ತು ಇಲ್ಲಿನ ಜನತೆ ಪೂರ್ವಯೋಜಿತ ಕೊಲೆಗೆ ಸಮ ಎಂದು ಪರಿಗಣಿಸಲಿದ್ದಾರೆಎಂದು ಸರ್ಕಾರ ಹೇಳಿತು. ಜಾಧವ್ ಅವರು ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಬಗ್ಗೆ ಪಾಕಿಸ್ತಾನ ಸರ್ಕಾರ ನಮಗೆ ಅಧಿಕೃತ ಮಾಹಿತಿ ನೀಡಿಲ್ಲ. ಪತ್ರಿಕಾ ಹೇಳಿಕೆಯಿಂದ ಕುರಿತು ಮಾಹಿತಿ ಲಭಿಸಿತ್ತುಎಂದು ಸರ್ಕಾರಿ ಅಧಿಕಾರಿಗಳು ಹೇಳಿದರು. ಜಾಧವ್ ಅವರಿಗೆ ವಕೀಲರ ನೆರವು ನೀಡಲು ಪದೇಪದೇ ಮನವಿ ಮಾಡಿದರೂ ಪಾಕಿಸ್ತಾನ ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ಭಾರತದ ರಾಯಭಾರಿಗೆ ಜಾಧವ್ ಅವರನ್ನು ಭೇಟಿಯಾಗುವ ಅವಕಾಶವನ್ನೂ ಕಲ್ಪಿಸಿಲ್ಲ ಎಂದು ಅಧಿಕಾರಿಗಳು ದೂರಿದರು. ಜಾಧವ್ ಅವರನ್ನು ಭಾರತದ ಬೇಹುಗಾರಿಕಾ ಸಂಸ್ಥೆರಾ ಏಜೆಂಟ್ ಎಂದು ಪಾಕಿಸ್ತಾನ ಆರೋಪಿಸಿತ್ತು. ಪಾಕಿಸ್ತಾನದಲ್ಲಿ ವಿಧ್ವಸಂಕ ಕೃತ್ಯಗಳನ್ನೆಸಗಲು ಸಂಚು ರೂಪಿಸಿದ್ದಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಅಲ್ಲಿನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆಇಂಟರ್ಸರ್ವೀಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ಪಿಆರ್) ತಿಳಿಸಿತ್ತು. ಜಾಧವ್ ಅವರನ್ನು 2016 ಮಾರ್ಚ್ 3ರಂದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು.
2017: ರಾಂಚಿ: ಕ್ರೈಸ್ತಮುಕ್ತ ಜಾರ್ಖಂಡ್ ರೂಪಿಸಲು ಮುಂದಾಗಿರುವ ರಾಷ್ಟ್ರೀಯ ಸ್ವಯಂಸೇವಕ
ಸಂಘ (ಆರ್ಎಸ್ಎಸ್) ಬುಡಕಟ್ಟು ಜನರೇ ಹೆಚ್ಚಾಗಿರುವ ಸಿಂದ್ರಿ ಪಂಚಾಯತ್ ವ್ಯಾಪ್ತಿಯ ಅರ್ಕಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ 53 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತು. ಆರ್ಎಸ್ಎಸ್ಕಾರ್ಯಕರ್ತರೇ ಬಗ್ಗೆ ಮಾಹಿತಿ ನೀಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಹೇಳಿತು. ಈ ಕುಟುಂಬಗಳನ್ನು ಕಳೆದ 10 ವರ್ಷಗಳಲ್ಲಿ ಕೈಸ್ತ ಮಿಷನರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದವು. ನೀವಿದನ್ನು ಮತಾಂತರ ಎಂದು ಕರೆಯಬಾರದು. ನಮ್ಮ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡ ಸಹೋದರ ಸಹೋದರಿಯರನ್ನು ನಾವು ಮರಳಿ ಕರೆತರುತ್ತಿದ್ದೇವೆಎಂದು ಆರ್ಎಸ್ಎಸ್ ಸಂಚಾಲಕ ಲಕ್ಷ್ಮಣ್ ಸಿಂಗ್ ಮುಂಡಾ ಹೇಳಿದರು. ಇವರೇ ಮರುಮತಾಂತರ (ಘರ್ವಾಪ್ಸಿ) ಕಾರ್ಯದ ನೇತೃತ್ವ ವಹಿಸಿದ್ದರು. ಸಿಂದ್ರಿ ಪಂಚಾಯತ್ ಇರುವ ಕುಂತಿ ಜಿಲ್ಲೆಯ ಬಿಜೆಪಿ ಘಟಕದ ಉಪಾಧ್ಯಕ್ಷರೂ ಆಗಿರುವ ಮುಂಡಾ, ‘ಬುಡಕಟ್ಟು ಜನರನ್ನು ಕ್ರೈಸ್ತ ಮಿಷನರಿಗಳು ಅವರ ಧರ್ಮಕ್ಕೆ ಮತಾಂತರಿಸಿದ್ದವುಎಂದರು. ಏಪ್ರಿಲ್ ತಿಂಗಳಿಡೀ ಘರ್ವಾಪ್ಸಿ ಪ್ರಕ್ರಿಯೆ ಮುಂದುವರಿಯಲಿದೆ ಎಂದೂ ಆರ್ಎಸ್ಎಸ್ ಹೇಳಿತು. ಈ ಮಧ್ಯೆ, ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳು ಧರ್ಮ ಬದಲಾಯಿಸುವಂತೆ ಜನರನ್ನು ಒತ್ತಾಯಿಸುತ್ತಿವೆ ಎಂಬ ಆರೋಪವೂ ಕೇಳಿಬಂತು. ಶುದ್ಧೀಕರಣ ನಡೆಸಿದ್ಧ ಸಂಘ: ಏಪ್ರಿಲ್ 7ರಂದು 7 ಕ್ರೈಸ್ತ ಕುಟುಂಬಗಳನ್ನು (ಬುಡಕಟ್ಟು ಮತ್ತು ಇತರ) ಹಿಂದೂ ಧರ್ಮಕ್ಕೆ ಮತಾಂತರಿಸಲು ಕೊಚಸಿಂದ್ರಿ ಗ್ರಾಮದಲ್ಲಿ ಆರ್ಎಸ್ಎಸ್ ಶುದ್ಧೀಕರಣ ವಿಧಿವಿಧಾನ ನೆರವೇರಿಸಿತ್ತು. ಸ್ಥಳೀಯ ಹಿಂದು ಅರ್ಚಕರನ್ನು ಬಳಸಿಕೊಂಡು ಕ್ರೈಸ್ತ ಕುಟುಂಬದ ಸದಸ್ಯರ ಮುಖ ಮತ್ತು ಪಾದಕ್ಕೆ ಗಂಧ ಹಚ್ಚಿ ತೊಳೆಯಿಸಲಾಗಿತ್ತು. ಬಳಿಕ ಅವರ ಹಣೆಗೆ ತಿಲಕವನ್ನಿಟ್ಟು ಮತಾಂತರಗೊಳಿಸಲಾಗಿತ್ತು ಎಂದು ವರದಿಗಳು ಹೇಳಿದ್ದವು.
2016: ನವದೆಹಲಿ: ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರು
ಪ್ರಧಾನ ಮಂತ್ರಿಕಚೇರಿ ಬಳಿ ಬೆತ್ತಲೆಯಾಗಿ, ನಡು ರಸ್ತೆಯಲ್ಲೇ ಉರುಳುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದರು. ಅಯ್ಯಕಣ್ಣು ನೇತೃತ್ವದಲ್ಲಿ 9 ರೈತರ ತಂಡ ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಪ್ರಧಾನಿ ಭೇಟಿಗೆ ಅವಕಾಶ ನೀಡಲಿಲ್ಲ.  ಇದರಿಂದ ಕುಪಿತಗೊಂಡ ಹೋರಾಟಗಾರರು ಸ್ಥಳದಲ್ಲೇ ತಮ್ಮ ಬಟ್ಟೆಗಳನ್ನು ಕಳಚಿ ನಡು ರಸ್ತೆಯಲ್ಲೇ ಉರುಳುತ್ತ ಪ್ರತಿಭಟಿಸಿದರು. ತೀವ್ರ ಬರ ಹಾಗೂ ವಾರ್ದಾ ಚಂಡಮಾರುತಗಳಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದೇವೆ. ನಮ್ಮಿಂದ ಕೃಷಿ ಸಾಲ ಮರುಪಾವತಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾ ನಿರತ ರೈತರು ಹೇಳಿದರು. ದೆಹಲಿಯ  ಜಂತರ್ ಮಂತರ್ ಆವರಣದಲ್ಲಿ ಮೂರು ವಾರಗಳಿಂದ ರೈತರ ಕೃಷಿ ಸಾಲ ಮನ್ನಾ, ಬರ ಪರಿಹಾರ ಹಾಗೂ ಕಾವೇರಿ ನದಿ ನೀರು ನಿರ್ವಹಣೆಗಾಗಿ ಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರು.  ಶೀಘ್ರ ನಮ್ಮ ಸಮಸ್ಯೆಗಳತ್ತ ಗಮನ ಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

2017: ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕ ಹೊಂದಿದ್ದು, ದೇಶದ ವಿವಿಧೆಡೆ ಬಾಂಬ್ ಸ್ಪೋಟಿಸಲು ಬಾಂಬ್ ಪೂರೈಸಿದ್ದೂ ಸೇರಿದಂತೆ ವಿವಿಧ ಆರೋಪಗಳಡಿ ಬಂಧಿಸಲಾದ ಮೂವರು ಉಗ್ರರು ದೋಷಿಗಳೆಂದು ಸಾಬೀತಾಯಿತು. ಇವರೊಂದಿಗೆ ಬಂಧಿಸಲಾಗಿದ್ದ ನಾಲ್ವರನ್ನು ನ್ಯಾಯಾಲಯ ದೋಷಮುಕ್ತ ಗೊಳಿಸಿತು. ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಈದಿನ ಬೆಳಗ್ಗೆ ಪಾಂಡೇಶ್ವರ ಸುಭಾಷನಗರದ ಸೈಯದ್ ಮಹಮ್ಮದ್ ನೌಶಾದ್, ಮೂಲ್ಕಿ ಹಳೆಯಂಗಡಿಯ ಅಹ್ಮದ್ ಬಾವಾ ಮತ್ತು ಫಕೀರ್ ಅಹ್ಮದ್ ದೋಷಿಗಳೆಂದು ಸಾಬೀತಾಗಿದೆ ಎಂದು ಕೋರ್ಟ್ ಹೇಳಿತು. ಶಬೀರ್ ಭಟ್ಕಳ, ಅಹ್ಮದ್ ಅಲಿ, ಜಾವೇದ್ ಅಲಿ, ಉಮರ್ ರಫೀಕ್ ಎಂಬವರನ್ನು ದೋಷಮುಕ್ತಗೊಳಿಸಲಾಯಿತು.  2008ರಲ್ಲಿ ಉಳ್ಳಾಲದಿಂದ ಮಹಮ್ಮದ್ ಅಲಿ, ಆತನ ಪುತ್ರ ಜಾವೇದ್ ಅಲಿ, ಮಂಗಳೂರಿನ ಸುಭಾಷ್ನಗರದಿಂದ ನೌಶಾದ್, ಹಳೆಯಂಗಡಿಯಿಂದ ಅಹ್ಮದ್ ಬಾವಾನನ್ನು ಬಂಧಿಸಿದ್ದರು. ಕೆಲದಿನಗಳಲ್ಲಿ ಚಿಕ್ಕಮಗಳೂರು ಕೊಪ್ಪದ ಹಕ್ಲಮನೆ ಎಂಬಲ್ಲಿಂದ ಪಡುಬಿದ್ರೆ ಮೂಡೂರು ಮೂಲದ ಫಕೀರ್ ಬಾವಾ, ವಿಟ್ಲ ವೀರಕಂಭದ ಉಮ್ಮರ್ ರಫೀಕ್ ಎಂಬುವವರನ್ನು ಬಂಧಿಸಲಾಗಿತ್ತು. ಮಂಗಳೂರು ಪೊಲೀಸರು ನಕ್ಸಲ್ ನಿಗ್ರಹ ದಳದ ನೆರವಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಶಬೀರ್ ಭಟ್ಕಳನನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ದಳದವರು ಬಂಧಿಸಿದ್ದು ಆತ ಪುಣೆಯ ಜೇಲಿನಲ್ಲಿದ್ದ.
ಇಂದು ವಿಶ್ವ ಹೋಮಿಯೋಪಥಿ ದಿನ.

2009: ಭಯೋತ್ಪಾದನೆ ತಡೆಗಟ್ಟುವಲ್ಲಿ ತಮ್ಮ ಸರ್ಕಾರ ವಿಫಲವಾಗಿದೆ ಎಂಬುಗುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಈದಿನ ನವದೆಹಲಿಯಲ್ಲಿ ಒಪ್ಪಿಕೊಂಡರು. ಮಹಿಳಾ ಪತ್ರಕರ್ತರ ಜತೆಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಸಿಂಗ್, ಭಯೋತ್ಪಾದನೆ ನಿವಾರಿಸುವಲ್ಲಿ ತಮ್ಮ ಸರ್ಕಾರ ಯಶಸ್ವಿಯಾಗಿಲ್ಲ ಎಂದರು. ಚುನಾವಣಾ ಪ್ರಕ್ರಿಯೆಗೆ ಉಗ್ರರು ಅಡ್ಡಿಯಾಗುವ ಸಾಧ್ಯತೆಯೂ ಇದೆ' ಎಂದು ಆತಂಕ ವ್ಯಕ್ತಪಡಿಸಿದರು. ಭಯೋತ್ಪಾದನೆ ತಡೆಗಟ್ಟಲು ನಾವು ಸರ್ವಸಿದ್ಧತೆ ನಡೆಸಿದ್ದರೂ, ಬೇಹುಗಾರಿಕೆ ಬಲಪಡಿಸಲು, ರಾಜ್ಯ ಪೊಲೀಸ್ ವ್ಯವಸ್ಥೆ ಸುಧಾರಿಸಲು ಹಾಗೂ ದಾಳಿಯಾದಲ್ಲಿ ಅದನ್ನು ಎದುರಿಸಲು ಮತ್ತಷ್ಟು ಸಾಮರ್ಥ್ಯ ಬೆಳೆಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

2009: ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರ ಮೇಲೆ ಮಾರ್ಚ್ 3ರಂದು ಲಾಹೋರಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತದ ಕೈವಾಡ ಸ್ಪಷ್ಟವಾಗಿದೆ ಎಂದು ಪಾಕಿಸ್ಥಾನಿ ಪೊಲೀಸ್ ಇಲಾಖೆ ಪುನರುಚ್ಚರಿಸಿತು. ಲಾಹೋರ್ ಪೊಲೀಸ್ ಮುಖ್ಯಸ್ಥ ಪರ್ವೇಜ್ ರಾಥೋರ್ ಪತ್ರಕರ್ತರೊಂದಿಗೆ ಮಾತನಾಡುತ್ತಾ 'ಆ ದಾಳಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಭಾರತದ ಕೈವಾಡ ಮೇಲ್ನೊಟಕ್ಕೆ ಎದ್ದು ಕಾಣುತ್ತಿದೆ' ಎಂದರು. 'ನಿಖರ ಸಾಕ್ಷ್ಯಾಧಾರಗಳು ಇರುವುದರಿಂದಲೇ ನಾನು ಈ ಆರೋಪ ಮಾಡುತ್ತಿದ್ದೇನೆ' ಎಂದೂ ಅವರು ಹೇಳಿದರು..

2009: ಅಸ್ಸಾಮಿನ ಜೋರ್ಹಾಟ್‌ನಲ್ಲಿ 26 ವರ್ಷದ ಮಹಿಳೆ ಆನಂದಿತ ದತ್ತ ಟಮುಲೆ ಅವರು ಕೇವಲ ಎರಡು ನಿಮಿಷದಲ್ಲಿ ವಿಶ್ವದಲ್ಲಿಯೇ ಅತಿಯಾದ ಖಾರದ ಮೆಣಸಿನಕಾಯಿ ಎಂದು ಹೆಸರು ಪಡೆದ ಭುಟ್ ಜೋಕೊಲಿಯಾ ಎಂಬ 51 ಮೆಣಸಿನಕಾಯಿಗಳನ್ನು ತಿಂದು ದಾಖಲೆ ಮಾಡಿದರು. ಬ್ರಿಟಿಷ್ ಬಾಣಸಿಗ ಗಾರ್ಡನ್ ರಾಮ್ಸೆ ಇದಕ್ಕೆ ಸಾಕ್ಷಿಯಾದರು. ಗುವಾಹಟಿ ಸಮೀಪದ ಜೋರ್ಹಾಟ್‌ನಲ್ಲಿ ಸ್ಥಳೀಯ ಬಾಣಸಿಗ ಅತುಲ್ ಲಷ್ಕರ್ ಛಾನೆಲ್ 4 ಟೆಲಿವಿಷನ್‌ಗಾಗಿ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಿದ್ದರು. ಇದಕ್ಕೆ ರಾಮ್ಸೆ ನಿರೂಪಕರಾಗಿದ್ದರು. ಎರಡು ನಿಮಿಷದಲ್ಲಿ 51 ಮೆಣಸಿನಕಾಯಿ ತಿಂದರೂ ಆನಂದಿತ ಅವರ ಕಣ್ಣಿನಲ್ಲಿ ಸ್ಪಲ್ಪವೂ ನೀರು ಬರದೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇಷ್ಟೇ ಅಲ್ಲದೇ 25 ಮೆಣಸಿನಕಾಯಿಯ ಬೀಜಗಳನ್ನು ಒಂದು ನಿಮಿಷ ಕಣ್ಣಿಗೆ ಹಾಕಿಕೊಳ್ಳುವ ಮೂಲಕವೂ ಅವರು ನೆರೆದವರನ್ನು ಅಚ್ಚರಿಯಲ್ಲಿ ಕೆಡವಿದರು.

2009: ನೂತನ ಚುನಾವಣಾ ಆಯುಕ್ತರಾಗಿ ಕೇಂದ್ರ ವಿದ್ಯುತ್ ಕಾರ್ಯದರ್ಶಿ ವಿ.ಎಸ್. ಸಂಪತ್ ನೇಮಕವನ್ನು ಪ್ರಧಾನಿ ಮನ ಮೋಹನ್ ಸಿಂಗ್ ಅನುಮೋದಿಸಿದರು.

2009: ಶಾಂತಸಾಗರದಲ್ಲಿರುವ ದ್ವೀಪ ರಾಷ್ಟ್ರ ಫಿಜಿ ಮತ್ತೆ ಅಶಾಂತಗೊಂಡಿತು. ಸ್ವಯಂ ಘೋಷಿತ ಅಧ್ಯಕ್ಷ ರತು ಜೊಸೆಫಾ ಇಲೊಯಿಲೊ ಅವರು ಸಂವಿಧಾನ ಮತ್ತು ನ್ಯಾಯಪೀಠವನ್ನು ರದ್ದುಮಾಡಿ, 2014ರ ವರೆಗೆ ಚುನಾವಣೆ ನಡೆಸುವುದಿಲ್ಲ ಎಂದು ಘೋಷಿಸಿದರು. ಫಿಜಿ 2006ರಿಂದಲೇ ಆಡಳಿತ ಸ್ಥಿತ್ಯಂತರಕ್ಕೆ ಒಳಗಾಗಿತ್ತು. ಅಂದು ವರೇಖ್ ಬಯಿನಿಮರಮ ಅವರು ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರ ವಶಪಡಿಸಿಕೊಂಡಿದ್ದರು.

2009: ಕೊಲೆಸ್ಟ್ರಾಲ್ (ಕೊಬ್ಬು) ನಿಯಂತಣಕ್ಕೆ ನಿಯಾಸಿನ್ ಆಮ್ಲವೇ ಅತ್ಯಂತ ಉತ್ತಮ ಮತ್ತು ಅಗ್ಗದ ಮಾರ್ಗ ಎಂಬುದನ್ನು ವಿಜ್ಞಾನಿಗಳ ಹೊಸ ಸಂಶೋಧನೆಯೊಂದು ಮತ್ತೊಮ್ಮೆ ದೃಢಪಡಿಸಿತು. ಇದರಿಂದ ನಿಯಾಸಿನ್ ಸೇವನೆಯ ಅಡ್ಡ ಪರಿಣಾಮಗಳನ್ನು ಸರಿಪಡಿಸಿ ಈ ಚಿಕಿತ್ಸೆಗೆ ಪುನಶ್ಚೇತನ ನೀಡಲು ತಜ್ಞರು ಮುಂದಾದರು. ನಿಕೊಟಿನಿಕ್ ಆಮ್ಲ ಅಥವಾ ವಿಟಮಿನ್ ಬಿ3 ಎಂದು ಸಹ ಕರೆಯಲಾಗುವ ನಿಯಾಸಿನ್, ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸಿ ಕೊಬ್ಬಿನ ಅಂಶ ಕಡಿಮೆ ಮಾಡುವುದಲ್ಲದೆ, ಕೆಟ್ಟ ಕೊಲೆಸ್ಟ್ರಾಲ್‌ನ್ನು ಉತ್ತಮವಾಗಿ ಮಾರ್ಪಡಿಸಲು ಸಹ ಅತ್ಯಂತ ಪರಿಣಾಮಕಾರಿ ಅಸ್ತ್ರ. ಆದರೆ ಇದಕ್ಕಿರುವ ಒಂದೇ ಅಪವಾದವೆಂದರೆ ಅದರ ಅಡ್ಡ ಪರಿಣಾಮ. ನಿಯಾಸಿನ್ ಚಿಕಿತ್ಸೆ ಪಡೆದವರಲ್ಲಿ ಕೆಲವೊಮ್ಮೆ ರಕ್ತ ಮುಖಕ್ಕೆ ನುಗ್ಗಿ ಮೋರೆ ಕೆಂಪಾಗುವುದಲ್ಲದೆ ಚರ್ಮದಲ್ಲಿ ಮುಳ್ಳು ಚುಚ್ಚಿದಂತೆ ಭಾಸವಾಗಿ ಮುಜುಗರಕ್ಕೆ ಈಡು ಮಾಡುತ್ತದೆ. ಇದರಿಂದ ರೋಗಿಗಳು ಈ ಚಿಕಿತ್ಸೆಯನ್ನು ಹೆಚ್ಚಾಗಿ ಇಷ್ಟ ಪಡುವುದಿಲ್ಲ.

2009: ಅನುಭವಿ ಶೂಟರ್ ಗಗನ್ ನಾರಂಗ್ ಅವರು ದಕ್ಷಿಣ ಕೊರಿಯಾದ ಚಾಂಗ್‌ವಾನ್‌ನಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು. 

2008: ಐಐಟಿ, ಐಐಎಂ, ಎಐಐಎಂಎಸ್ ಮತ್ತಿತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ(ಓಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೆ ಈ ಮೀಸಲಾತಿ ಸೌಲಭ್ಯದಿಂದ ಕೆನೆಪದರವನ್ನು ಹೊರಗಿಟ್ಟಿದ್ದು ವಾರ್ಷಿಕ ರೂ 2.5 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದಿದ ಕುಟುಂಬಗಳನ್ನು ಕೆನೆಪದರ ವರ್ಗಕ್ಕೆ ಸೇರಿಸಿತು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಮೀಸಲಾತಿಯನ್ನು ಮರುವಿಮರ್ಶೆಗೆ ಒಳಪಡಿಸಬೇಕೆಂದೂ ನ್ಯಾಯಪೀಠ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಕಾಯ್ದೆ - 2006ಕ್ಕೆ ಅವಿರೋಧವಾಗಿ ಒಪ್ಪಿಗೆ ನೀಡಿತು. ಈ `ಕಾಯ್ದೆ ಸಂವಿಧಾನದ ಮೂಲ ರಚನಾ ಕ್ರಮವನ್ನು ಉಲ್ಲಂಘಿಸಿಲ್ಲ. ಓಬಿಸಿಗಳನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.' ಎಂದು ಅದು ತಿಳಿಸಿತು. ಓಬಿಸಿಗಳಿಗೆ ಉದ್ಯೋಗ ಕಲ್ಪಿಸುವಾಗ ಕೆನೆಪದರವನ್ನು ಗುರುತಿಸಲು 1993ರ ಸೆಪ್ಟೆಂಬರ್ 8ರಂದು ಹೊರಡಿಸಿರುವ ಆದೇಶವೇ ಮಾನದಂಡ ಎಂದೂ ಅದು ತಿಳಿಸಿತು. ಈ ಕಾಯ್ದೆಯಡಿ ಮೀಸಲಾತಿ ಕಲ್ಪಿಸುವ ಕೋಟಾದಿಂದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರಗಿಟ್ಟ ನಿರ್ಧಾರವೂ ಸಮಂಜಸವಾಗಿದೆ ಎಂದು ಅದು ಹೇಳಿತು. ಕಾಯ್ದೆಯನ್ನು ಪ್ರಶ್ನಿಸಿ ಮೀಸಲಾತಿ ವಿರೋಧಿ ಕಾರ್ಯಕರ್ತರು ಸಲ್ಲಿಸಿದ್ದ ಹಲವು ಅರ್ಜಿಗಳ ಹಿನ್ನೆಲೆಯಲ್ಲಿ ಈ ತೀರ್ಪು ಹೊರಬಿದ್ದಿತು. ಸರ್ಕಾರದ ಈ ಮೀಸಲಾತಿ ನಿರ್ಧಾರವನ್ನು ಬಲವಾಗಿ ವಿರೋಧಿಸಿದ ಅರ್ಜಿದಾರರು, `ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿಯೇ ಮೂಲ ಆಧಾರವಲ್ಲ' ಎಂದು ಟೀಕಿಸಿದ್ದರು. ಮೀಸಲಾತಿ ನೀತಿಯಲ್ಲಿ ಕೆನೆಪದರವನ್ನು ಸೇರಿಸಿದ ಕ್ರಮವನ್ನು ಸಹ ಅರ್ಜಿದಾರರು ಪ್ರಶ್ನಿಸಿದ್ದರು. ಈ ತೀರ್ಪಿನಿಂದ ಓಬಿಸಿ ಮೀಸಲಾತಿ ಕಾಯ್ದೆಯನ್ನು ತಡೆಹಿಡಿದಿದ್ದ 2007ರ ಮಾರ್ಚ್ 29ರ ಮಧ್ಯಂತರ ಆದೇಶ ರದ್ದಾಯಿತು. ತೀರ್ಪಿನ ಪರಿಣಾಮವಾಗಿ ಒಟ್ಟಾರೆ ಉನ್ನತ ಶಿಕ್ಷಣದ ಮೀಸಲಾತಿ ಪ್ರಮಾಣ ಶೇ 49.5ಕ್ಕೆ ಏರಿದಂತಾಯಿತು.

2008: ಶೈತ್ಯಾಗಾರವುಳ್ಳ ವಾಹನದಲ್ಲಿ ಕುಳಿತು ಅಕ್ರಮವಾಗಿ ಥಾಯ್ಲೆಂಡಿಗೆ ಬರುತ್ತಿದ್ದ 54 ಜನ ಮ್ಯಾನ್ಮಾರ್ ವಲಸೆಗಾರರು ಉಸಿರುಗಟ್ಟಿ ಸಾವನ್ನಪ್ಪಿದರು. 6 ಮೀಟರ್ ಉದ್ದದ 2.2 ಮೀಟರ್ ಅಗಲದ ಈ ಕಂಟೇನರಿನಲ್ಲಿ 121 ಜನ ಒತ್ತಾಗಿ ಕುಳಿತಿದ್ದರು. ಸಮುದ್ರ ಉತ್ಪನ್ನಗಳನ್ನು ಸಾಗಿಸಲು ಈ ಶೀತಲೀಕೃತ ವಾಹನ ಬಳಸಲಾಗುತ್ತಿತ್ತು. ಆಮ್ಲಜನಕದ ಕೊರತೆಯಿಂದ 21 ಜನ ಅಸ್ವಸ್ಥರಾದರು. ಇತರ 46 ಜನರನ್ನು ಬಂಧಿಸಲಾಯಿತು. ಇವರೆಲ್ಲ ಮ್ಯಾನ್ಮಾರ್-ಥಾಯ್ ಗಡಿಯಿಂದ  ಕೂಲಿ ಕೆಲಸ ಹುಡುಕಿಕೊಂಡು ಜನಪ್ರಿಯ ಪ್ರವಾಸಿ ದ್ವೀಪ ಫುಕೆಟ್ ಗೆ ತೆರಳಲು ಬಯಸಿದ್ದರು.

2008: ನೇಪಾಳದಲ್ಲಿ 240 ವರ್ಷಗಳ ಐತಿಹಾಸಿಕ ರಾಜಸತ್ತೆ ಆಳ್ವಿಕೆಗೆ ಇತಿಶ್ರೀ ಹಾಡಲು ನಡೆದ ಮೊದಲ ಚುನಾವಣೆಯಲ್ಲಿ ಶೇ 70ರಷ್ಟು ಮತದಾನ ನಡೆಯಿತು. ನೇಪಾಳದಾದ್ಯಂತ 20,800 ಕೇಂದ್ರಗಳಲ್ಲಿ ಬೆಳಿಗ್ಗೆ 7ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಸುಮಾರು 17 ದಶಲಕ್ಷ (1.70 ಕೋಟಿ) ಜನರು ಈ ಐತಿಹಾಸಿಕ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದರು.

2008: ಥಾಯ್ಲೆಂಡ್ ಸಾರ್ವಜನಿಕ ಆರೋಗ್ಯ ಸಚಿವ ಚೈಯ್ಯಾ ಸಸೊಮ್ ಸ್ಯಾಪ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಧಾನಿ ಸಮಕ್ ಸುಂದರವೇಜ್ ಅವರಿಗೆ ಮೌಖಿಕವಾಗಿ ತಿಳಿಸಿದರು. ಚೈಯ್ಯಾ ಅವರ ಪತ್ನಿ ಅಕ್ರಮವಾಗಿ ಖಾಸಗಿ ಕಂಪೆನಿಯ ಷೇರುಗಳನ್ನು ಹೊಂದಿರುವ ಕಾರಣಕ್ಕಾಗಿ ಸಮಕ್ ಅವರು ಚೈಯ್ಯಾ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದರು.

2007: ಸಾಂಪ್ರದಾಯಿಕವಾಗಿ ಅಗ್ನಿಸ್ಪರ್ಶ ಮಾಡುವ ಮೂಲಕ ಬಹಿರಂಗವಾಗಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ನಿರಾಕರಿಸಿದ ಲಂಡನ್ನಿನ ಸ್ಥಳೀಯ ಅಧಿಕಾರಿಗಳ ನಿರ್ಧಾರದ ನ್ಯಾಯಾಂಗ ಪರಾಮರ್ಶೆಗೆ ಇಂಗ್ಲೆಂಡ್ ಹೈಕೋರ್ಟ್ ಒಪ್ಪಿಗೆ ನೀಡಿತು. ದೇವೇಂದ್ರ ಕುಮಾರ ಘಾಯ್ ಎಂಬ 68 ವರ್ಷದ ಅಸ್ವಸ್ಥ ಹಿಂದೂ ಒಬ್ಬರು ಈ ನಿಟ್ಟಿನಲ್ಲಿ ನಡೆಸಿದ ಯತ್ನಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿತು. ಈಶಾನ್ಯ ಇಂಗ್ಲೆಂಡಿನಲ್ಲಿ ಮಂಜೂರಾತಿ ಪಡೆದ ಮೊತ್ತ ಮೊದಲ ನಿವೇಶನದಲ್ಲಿ 4000 ವರ್ಷಗಳಷ್ಟು ಪುರಾತನ ಪರಂಪರೆಯಾದ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸಲು ವರ್ಷದ ಹಿಂದೆ ನಡೆದಿದ್ದ ಯತ್ನವನ್ನು ಸ್ಥಳೀಯ ಆಡಳಿತವು `ಅಂತ್ಯಕ್ರಿಯೆ ಕಾನೂನಿನ ಉಲ್ಲಂಘನೆೆ ಆಗುತ್ತದೆ' ಎಂದು ಹೇಳಿ ನಿರ್ಬಂಧಿಸಿತ್ತು.

2007: ಅಮಾನತುಗೊಂಡ ಮುಖ್ಯನ್ಯಾಯಮೂರ್ತಿ ಇಫಿಕರ್ ಅಹ್ಮದ್ ಚೌಧರಿ ಅವರ ವಿರುದ್ಧ ವಿಚಾರಣೆ ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಂಗ ಮಂಡಳಿಯ (ಎಸ್ ಜೆ ಸಿ) ಶಾಸನಬದ್ಧತೆಯನ್ನೇ ಪ್ರಶ್ನಿಸಿದ ಎರಡು ಅರ್ಜಿಗಳನ್ನು ಅಂಗೀಕರಿಸಿದ ಪಾಕಿಸ್ಥಾನದ ಸುಪ್ರೀಂಕೋರ್ಟ್, ಅಧ್ಯಕ್ಷರ ಸಚಿವಾಲಯ ಹಾಗೂ ಕಾನೂನು ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿತು.

2007: ಭಾರತೀಯ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸುವುದು, ಶೋಷಣೆಗೆ ತಡೆಹಾಕುವುದು, ವೇತನ ಖಾತರಿ ನೀಡುವುದು ಸೇರಿದಂತೆ ವಿವಿಧ ಸವಲತ್ತುಗಳ ಭರವಸೆಯನ್ನು ನೇಮಕಾತಿ ಕಾಲದಲ್ಲೇ ನೀಡಲು ಕ್ರಮ ಕೈಗೊಳ್ಳುವಂತಹ ಮಹತ್ವದ ಕಾರ್ಮಿಕ ಒಪ್ಪಂದ ಒಂದಕ್ಕೆ ಕುವೈತ್ ಮತ್ತು ಭಾರತ ಸಹಿ ಹಾಕಿದವು. ಈ ನಿಟ್ಟಿನ ತಿಳುವಳಿಕೆ ಪತ್ರಕ್ಕೆ ಭಾರತದ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಮತ್ತು ಕುವೈತಿನ ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಮಿಕ ಸಚಿವ ಶೇಖ್ ಸಬಾ ಅಲ್ ಖಲೀದ್ ಅಲ್- ಹಮದ್ ಅಲ್ ಸಬಾ ಸಹಿ ಮಾಡಿದರು.

2006: ಉತ್ತರಪ್ರದೇಶದ ಮೀರತ್ತಿನ ವಿಕ್ಟೋರಿಯಾ ಪಾರ್ಕಿನಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಗ್ರಾಹಕರ ವಸ್ತುಗಳ ವ್ಯಾಪಾರದ ಬ್ರಾಂಡ್ ಇಂಡಿಯಾ ಮೇಳದ ಕೊನೆಯ ದಿನ ಅಗ್ನಿ ಅನಾಹುತ ಸಂಭವಿಸಿ 50ಕ್ಕೂ ಹೆಚ್ಚು ಜನ ಮೃತರಾಗಿ 115ಕ್ಕೂ ಹೆಚ್ಚು ಜನ ಗಾಯಗೊಂಡರು. ಶಾರ್ಟ್ ಸರ್ಕಿಟಿನಿಂದ ಈ ದುರಂತ ಸಂಭವಿಸಿತು.

2006: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಕಾಯಂ ಉದ್ಯೋಗ ಪಡೆಯುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ಸದಸ್ಯರ ಪೀಠ ಈ ತೀರ್ಪು ನೀಡಿದ್ದು, ಇದರಿಂದ ಕರ್ನಾಟಕದ ಸುಮಾರು 17,000 ದಿನಗೂಲಿ ನೌಕರರ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿತು. 15 ವರ್ಷಗಳಿಂದ ದಿನಗೂಲಿ ನೌಕರರು ನಡೆಸುತ್ತಾ ಬಂದಿದ್ದ ಹೋರಾಟಕ್ಕೂ ಹಿನ್ನಡೆಯಾಯಿತು.

2006: ಕೀನ್ಯ ಸೇನಾ ಪಡೆಗೆ ಸೇರಿದ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿದ ಪರಿಣಾಮವಾಗಿ ಅದರಲ್ಲಿದ್ದ 14 ಮಂದಿ ಮೃತರಾದರು.

2006: ರಾಯಬರೇಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ಪಡೆಯುವ ನೆಹರೂ- ಗಾಂಧಿ ಕುಟುಂಬದ ಸಂಘಟನೆಗಳು ಸೇರಿದಂತೆ ಎಲ್ಲ ಸಾಮಾಜಿಕ, ಸಾಂಸ್ಕತಿಕ ಸಂಘಗಳಿಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀನಾಮೆ ನೀಡಿದರು.

2006: ಕೃಷ್ಣಮೃಗ ಬೇಟೆಯಾಡಿದ ಅಪರಾಧಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಜೋಧಪುರ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆ ವಿಧಿಸಿತು. ತೀರ್ಪು ನೀಡಿದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬ್ರಿಜೇಂದ್ರ ಕುಮಾರ ಜೈನ್ ಅವರು 25,000 ರೂಪಾಯಿಗಳ ದಂಡವನ್ನೂ ವಿಧಿಸಿದರು. ತೀರ್ಪು ಹೊರಬಿದ್ದ ಕೂಡಲೇ ಸಲ್ಮಾನ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. 1998ರಲ್ಲಿ ಸಲ್ಮಾನ್ ಖಾನ್ ಮತ್ತು ಇತರ ಐವರು ಅಕ್ರಮವಾಗಿ ಬೇಟೆಯಾಡಿ ಕೃಷ್ಣಮೃಗವನ್ನು ಹತ್ಯೆ ಮಾಡಿದ ಆರೋಪಕ್ಕೆ ಒಳಗಾಗಿದ್ದರು.

2006: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ಎಂಬುದಾಗಿ ಹೆಸರು ನಮೂದಿಸಲು ಯತ್ನಿಸಿದ ಬೆಂಗಳೂರಿನ ಒಂಬತ್ತು ವರ್ಷದ ಬಾಲಕ ಕಿಷನ್ ಶ್ರೀಕಾಂತ್ ತನ್ನ 'ಸಾಧನೈ ಕೇರಾಫ್ ಪ್ಲಾಟ್ ಫಾರಂ' ತ್ರಿಭಾಷಾ ಚಿತ್ರದ ತಮಿಳು ಆವೃತ್ತಿಗಾಗಿ ಚಿತ್ರೀಕರಣ ಆರಂಭಿಸಿದ.

2000: ಜುಂಪಾ ಲಾಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ `ಇಂಟರ್ ಪ್ರೆಟರ್ ಆಫ್ ಮ್ಯಾಲಡೀಸ್' ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.

1995: ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಂಬೈಯಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಮೃತರಾದರು.

1982: ಭಾರತದ ಇನ್ಸಾಟ್-1ಎ ಉಪಗ್ರಹವನ್ನು ಅಮೆರಿಕದ ಡೆಲ್ಟಾ ರಾಕೆಟ್ ಬಾಹ್ಯಾಕಾಶಕ್ಕೆ ಹಾರಿಸಿತು. ಇದು ಜಗತ್ತಿನ ಮೊತ್ತ ಮೊದಲ ಹವಾಮಾನ ಮತ್ತು ಸಂಪರ್ಕ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1959: ಕಲಾವಿದೆ ಜ್ಯೋತಿ ಜನನ.

1957: ಶ್ರೀರಾಮ ನವಮಿ ಉತ್ಸವ ಮುಗಿಸಿ ಭದ್ರಾಚಲಂನಿಂದ ವಾಪಸಾಗುತ್ತಿದ್ದ ಭಕ್ತರ ದೋಣಿಯೊಂದು ಹೈದರಾಬಾದ್ ಸಮೀಪ ಗೋದಾವರಿ ನದಿಯಲ್ಲಿ ಮಗುಚಿ 70 ಜನ ಮೃತರಾದರು. ದೋಣಿಯಲ್ಲಿ ಸುಮಾರು 100 ಜನರಿದ್ದರು.

1943: ಕಲಾವಿದ ಕೃಷ್ಣಾನಂದ ರಾಜು ಜನನ.

1930: ಕಲಾವಿದ ಎಂ. ವಾದಿರಾಜ ಜನನ.

1924: ಕಲಾವಿದ ವೇಣುಗೋಪಾಲ್ ಬಿ.ಡಿ. ಜನನ.

1917: ಖ್ಯಾತ ಪಿಟೀಲು ವಿದ್ವಾಂಸ ಬಿ.ಆರ್. ಗೋವಿಂದಸ್ವಾಮಿ (10-4-1917ರಿಂದ 25-1-1966) ಅವರು ರಾಮಯ್ಯ- ನಾಗಮ್ಮ ದಂಪತಿಯ ಮಗನಾಗಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.

1875: ಸ್ವಾಮಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೊದಲ ಶಾಖೆಯನ್ನು ಮುಂಬೈಯಲ್ಲಿ ಸ್ಥಾಪಿಸಿದರು. ವೇದಗಳನ್ನು ಹಿಂದೂ ನಂಬಿಕೆ ಹಾಗೂ ಆಚರಣೆಗಳ ಆಧಾರವಾಗಿ ಪುನಃಸ್ಥಾಪನೆ ಮಾಡುವ ಉದ್ದೇಶ ಇದಕ್ಕಿತ್ತು. ವೇದಗಳ ಜೊತೆಗೇ ಶಿಕ್ಷಣಕ್ಕೂ ಮಹತ್ವ ನೀಡುವ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜ ಮಹತ್ವದ ಪಾತ್ರ ವಹಿಸಿತು.

1858: ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲಿನಲ್ಲಿ ಜಗತ್ತಿನ ಖ್ಯಾತ ಗಂಟೆ `ಬಿಗ್ ಬೆನ್' ನ್ನು ಎರಕಹೊಯ್ಯಲಾಯಿತು. 13.5 ಟನ್ ತೂಕದ ಈ ಗಂಟೆಗೆ ಆಗಿನ ಕಮೀಷನರ್ ಸರ್ ಬೆಂಜಮಿನ್ ಹಾಲ್ ಅವರ ಹೆಸರನ್ನು ಇಡಲಾಯಿತು. ಅತ್ಯಂತ ಉದ್ದನೆಯ ವ್ಯಕ್ತಿಯಾಗಿದ್ದ ಬೆಂಜಮಿನ್ `ಬಿಗ್ ಬೆನ್' ಎಂದೇ ಖ್ಯಾತಿ ಪಡಿದಿದ್ದರು.

1849: ವಾಲ್ಟೇರ್ ಹಂಟ್ ಅವರಿಗೆ `ಸೇಫ್ಟಿ ಪಿನ್' ಗೆ ಪೇಟೆಂಟ್ ಲಭಿಸಿತು. ತನ್ನ 15 ಡಾಲರ್ ಸಾಲವನ್ನು ತೀರಿಸುವ ಸಲುವಾಗಿ ಹಂಟ್ ಈ `ಸೇಫ್ಟಿ ಪಿನ್' ಸಂಶೋಧಿಸಿದನಂತೆ. ಇದನ್ನು ರೂಪಿಸಲು ಆತನಿಗೆ ತಗುಲಿದ ಸಮಯ ಕೇವಲ ಮೂರು ಗಂಟೆ. ಈ ಐಡಿಯಾವನ್ನು ಈತ 400 ಡಾಲರುಗಳಿಗೆ ಮಾರಾಟ ಮಾಡಿದ.

1847: ಜೋಸೆಫ್ ಪುಲಿಟ್ಜರ್ (1847-1911) ಹುಟ್ಟಿದ ದಿನ. ಅಮೆರಿಕಾದ ಖ್ಯಾತ ವೃತ್ತಪತ್ರಿಕಾ ಸಂಪಾದಕನಾದ ಈತ `ಪುಲಿಟ್ಜರ್ ಪ್ರಶಸ್ತಿ' ಹುಟ್ಟುಹಾಕಿ 1917ರಿಂದ ಪ್ರತಿವರ್ಷ ಅದನ್ನು ನೀಡುತ್ತಾ ಬಂದ.

1755: ಸ್ಯಾಮ್ಯುಯೆಲ್ ಹ್ಯಾನಿಮನ್ (1755-1843) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ಸ್ಥಾಪಿಸಿದ.

No comments:

Post a Comment