ಇಂದಿನ ಇತಿಹಾಸ History Today ಏಪ್ರಿಲ್ 13
2018: ನವದೆಹಲಿ: ದಿವಂಗತ ಖ್ಯಾತ ನಟ
ವಿನೋದ್ ಖನ್ನಾ ಮತ್ತು ದಿವಂಗತ ಖ್ಯಾತ ಚಿತ್ರನಟಿ ಶ್ರೀದೇವಿ ಅವರಿಗೆ ಅವರಿಗೆ ಕ್ರಮವಾಗಿ ದಾದಾ ಸಾಹೇಬ್
ಫಾಲ್ಕೆ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ಪ್ರತಿಷ್ಠಿತ ೬೫ನೇ ರಾಷ್ಟ್ರೀಯ
ಚಲನ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಭಯ ಮೇರು ಕಲಾವಿದರನ್ನು ಮರಣೋತ್ತರವಾಗಿ ಗೌರವಿಸಿತು. ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಕನ್ನಡದ ’ಹೆಬ್ಬೆಟ್ಟು ರಾಮಕ್ಕ’
ಮತ್ತು ತುಳು ಭಾಷೆಯ ’ಪಡ್ಡಾಯಿ’ ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದವು. ಅತ್ಯುತ್ತಮ ಚಿತ್ರನಟಿ ಪ್ರಶಸ್ತಿಗೆ ಶ್ರೀದೇವಿ ಅವರ ಹೆಸರನ್ನು
ಪ್ರಕಟಿಸಿದ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ ಖ್ಯಾಥ ನಿರ್ದೇಶಕ ಶೇಖರ್ ಕಪೂರ್ ಅವರು ಚಿತ್ರನಟಿ
ಈ ಪ್ರಶಸ್ತಿಗೆ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಹೇಳಿದರು. ತಮಿಳು ತೆಲುಗು, ಹಿಂದಿ, ಕನ್ನಡ ಭಾಷೆಗಳು ಸೇರಿದಂತೆ ೩೦೦ಕ್ಕೂ
ಹೆಚ್ಚು ಚಿತ್ರಗಳಲ್ಲಿ ತಮ್ಮ ೫೦ ವರ್ಷಗಳ ಅಭಿನಯ ಅವಧಿಯಲ್ಲಿ ನಟಿಸಿದ ಶ್ರೀದೇವಿ ಅವರಿಗೆ ’ಮಾಮ್’
ಚಿತ್ರದಲ್ಲಿ ವಹಿಸಿದ ’ಸಿಟ್ಟಿನ ತಾಯಿ’ ಪಾತ್ರಕ್ಕೆ ’ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿತು. ಈ ವರ್ಷ
ಫೆಬ್ರುವರಿ ತಿಂಗಳಲ್ಲಿ ತಮ್ಮ ೫೪ನೇ ವರ್ಷದಲ್ಲಿ ನಿಧನರಾದ ಶ್ರೀದೇವಿ ಅವರ ಸಾವು ದೇಶಕ್ಕೆ ಆಘಾತ ಉಂಟು
ಮಾಡಿತ್ತು. ಕಪೂರ್ ಅವರು ಶ್ರೀದೇವಿ ಜೊತೆಗೆ ’ಮಿಸ್ಟರ್ ಇಂಡಿಯಾ’ದಲ್ಲಿ ನಟಿಸಿದ್ದರು. ಪ್ರತಿಷ್ಠಿತ ೬೫ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು
ಈದಿನ ನವದೆಹಲಿಯ ಶಾಸ್ತ್ರಿ ಭವನದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಕಾನ್ಫರೆನ್ಸ್ ಕೊಠಡಿಯಲ್ಲಿ
ಪ್ರಕಟಿಸಲಾಯಿತು. ಮೇರು ನಟ ವಿನೋದ್ ಖನ್ನಾ ಅವರಿಗೆ
ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ದಾದಾ ಸಾಹೇಬ್
ಫಾಲ್ಕೆ ಗೌರವವನ್ನು ಮರಣೋತ್ತರವಾಗಿ ನೀಡಲಾಯಿತು.
ಬಾಲಿವುಡ್‌ನ ’ನ್ಯೂಟನ್’ ಚಿತ್ರ ಅತ್ಯುತ್ತಮ ಹಿಂದಿ ಚಿತ್ರವಾಗಿ ಹೊರಹೊಮ್ಮಿತು. ಸಂಗೀತ ನಿರ್ದೇಶಕ
ಎ ಆರ್ ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಗೌರವಕ್ಕೆ ಪಾತ್ರರಾದರು. ಇದುವರೆಗೆ ಆರು ರಾಷ್ಟ್ರ
ಪ್ರಶಸ್ತಿಗಳು ರಹಮಾನ್ ಅವರ ಮುಡಿಗೇರಿದ್ದವು. ಈ ಸಲದ
೨೦೧೭ರ ಅತ್ಯುತ್ತಮ ನಟ ಪ್ರಶಸ್ತಿಗೆ ’ನಗರ್ ಕೀರ್ತನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ರಿದ್ಧಿ ಸೇನ್
ಭಾಜನರಾದರು. ಅತ್ಯುತ್ತಮ ನಟಿಯಾಗಿ (ಮರಣೋತ್ತರ) ’ಮಾಮ್’ ಚಿತ್ರದಲ್ಲಿನ ಅಭಿನಯಕ್ಕೆ ತಾರೆ ಶ್ರೀದೇವಿ
ಪಾತ್ರರಾದರು. ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ
ಅತ್ಯುತ್ತಮ ಚಿತ್ರವಾಗಿ ’ಹೆಬ್ಬೆಟ್ಟು ರಾಮಕ್ಕ’ ಆಯ್ಕೆಯಾಯಿತು. ಉತ್ತಮ ತುಳು ಸಿನಿಮಾ ಪ್ರಶಸ್ತಿಗೆ
’ಪಡ್ಡಾಯಿ’ ಭಾಜನವಾಯಿತು. ಈ ಸಿನಿಮಾವನ್ನು ಅಭಯ್ ಸಿಂಹ ನಿರ್ದೇಶನ ಮಾಡಿದ್ದರು. ನಿತ್ಯಾನಂದ ಪೈ
ನಿರ್ಮಾಣ ಮಾಡಿದ್ದರು. ಅತ್ಯುತ್ತಮ ಜನಪ್ರಿಯ
ಚಿತ್ರ ಪ್ರಶಸ್ತಿ ’ಬಾಹುಬಲಿ ೨’ ಚಿತ್ರಕ್ಕೆ ಒಲಿಯಿತು. ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ಕೆ ಜೆ
ಯೇಸುದಾಸ್ ಹಾಗೂ ಗಾಯಕಿಯಾಗಿ ಸಷಾ ತಿರುಪತಿ ಆಯ್ಕೆಯಾದರು.
ಪ್ರಾದೇಶಿಕ ಭಾಷೆಗಳ ವಿಭಾಗದ ಅತ್ಯುತ್ತಮ ಚಿತ್ರಗಳ ಪ್ರಶಸ್ತಿ: ಬಂಗಾಳಿಯ ಮಯೂರಾಕ್ಷಿ, ಅಸ್ಸಾಮಿಯ ಈಶೂ, ತಮಿಳಿನ ಟು ಲೆಟ್,
ತೆಲುಗಿನ ಘಾಜಿ, ಗುಜರಾತಿಯ ಧಾ, ಹಿಂದಿಯ ನ್ಯೂಟನ್, ಮರಾಠಿಯ ಕಚ್ಛಾಲಿಂಬೂ ಸಿನಿಮಾಗಳು ಆಯ್ಕೆಯಾದವು. ಅತ್ಯುತ್ತಮ ಸಾಹಸಮಯ ಸಿನಿಮಾ: ಲಡಾಖ್ ಚೆಲೇ ರಿಕ್ಷಾ ವಾಲೇ
(ಬಂಗಾಳಿ). ಅತ್ಯುತ್ತಮ ತನಿಖಾ ಸಿನಿಮಾ: ೧೯೮೪ ೧೯೮೪
when the sun did not rise. ಅತ್ಯುತ್ತಮ ಅನಿಮೇಶನ್
ಚಿತ್ರ: ಫಿಶ್ ಕರ್ರಿ. ವಿಶೇಷ ಜ್ಯೂರಿ ಪ್ರಶಸ್ತಿ: ದಿ ಓಲ್ಡ್ ಮ್ಯಾನ್. ಅತ್ಯುತ್ತಮ ಕಿರುಚಿತ್ರ:
ಮಯತ್. ಕೌಟುಂಬಿಕ ಮೌಲ್ಯಗಳ ಅತ್ಯುತ್ತಮ ಚಿತ್ರ: ಹ್ಯಾಪಿ
ಬರ್ತಡೆ. ಉತ್ತಮ ಸಿನಿಮೋಟೋಗ್ರಫಿ ಚಿತ್ರ: ಐ ಟೆಸ್ಟ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮೇ ೩, ೨೦೧೮ರಂದು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕೃತರಿಗೆ ನೀಡಿ ಗೌರವಿಸಲಿದ್ದಾರೆ. ಹತ್ತು ಸದಸ್ಯರನ್ನು ಒಳಗೊಂಡಿರುವ
ಆಯ್ಕೆ ಸಮಿತಿಯಲ್ಲಿ ಚಿತ್ರಕಥೆಗಾರರಾದ ಇಮ್ತಿಯಾಜ್ ಹುಸ್ಸೇನ್, ಗೀತಸಾಹಿತಿ ಮೆಹಬೂಬ್, ನಟಿ ಗೌತಮಿ
ತಡಿಮಲ್ಲ, ಕನ್ನಡದ ನಿರ್ದೇಶಕ ಪಿ ಶೇಷಾದ್ರಿ, ಅನಿರುದ್ಧ್ ರಾಯ್ ಚೌದರಿ, ರಂಜಿತ್ ದಾಸ್, ರಾಜೇಶ್
ಮಪುಸ್ಕರ್, ತ್ರಿಪುರಾರಿ ಶರ್ಮಾ ಮತ್ತು ರುಮಿ ಜಾಫ್ರಿ ಇದ್ದರು.2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ೮ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಂದು ಹಾಕಿದ ಪ್ರಕರಣದ ಪೊಲೀಸ್ ತನಿಖೆಯ ದಾರಿ ತಪ್ಪಿಸುವ ಸಲುವಾಗಿ, ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲು ಸ್ಥಳೀಯ ವಕೀಲರು ಅಡ್ಡಿ ಪಡಿಸಲು ನಡೆಸಿದ ಯತ್ನದ ವಿರುದ್ಧ ಸುಪ್ರೀಂಕೋರ್ಟ್ ಸ್ವ ಇಚ್ಛೆಯ ಪ್ರಕರಣ ದಾಖಲಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಸುಪ್ರೀಂಕೋರ್ಟಿನ ವಕೀಲರ ಗುಂಪೊಂದು ಮಾಡಿದ ಲಿಖಿತ ಮನವಿ ಮೇರೆಗೆ ಈ ಕ್ರಮ ಕೈಗೊಂಡಿತು. ಕಥುವಾದಲ್ಲಿನ ಸ್ಥಳೀಯ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸುವುದನ್ನು ವಿರೋಧಿಸಿದ್ದಾರೆ. ಎರಡನೇಯದಾಗಿ ಸಂತ್ರಸ್ತೆ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಂತೆಯೂ ನಿರ್ಬಂಧಿಸಿದ್ದಾರೆ, ತನ್ಮೂಲಕ ನ್ಯಾಯದ ಹಾದಿಗೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಸುಪ್ರೀಂಕೋರ್ಟಿನ ವಕೀಲ ಪಿ.ವಿ. ದಿನೇಶ್ ನೇತೃತ್ವದ ವಕೀಲರ ತಂಡವು ಪೀಠಕ್ಕೆ ಲಿಖಿತ ಮನವಿ ಮಾಡಿತು. ಚಾರ್ಜ್‌ಶೀಟ್ ದಾಖಲಿಸುವುದರ ವಿರುದ್ಧ ಜಮ್ಮುವಿನಲ್ಲಿನ ಹೈಕೋರ್ಟ್ ವಕೀಲರ ಸಂಘವು ಮುಷ್ಕರ ನಡೆಸುತ್ತಿದೆ ಎಂದೂ ಅವರು ಹೇಳಿದರು. ’ಕಕ್ಷಿದಾರನ ಬೆಂಬಲಕ್ಕೆ ನಿಲ್ಲಬೇಕಾದ್ದು ವಕೀಲನ ಕರ್ತವ್ಯ, ಆತ ನ್ಯಾಯದಾನದ ಮಾರ್ಗಕ್ಕೆ ಅಡ್ಡಿ ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದರು. ’ಯಾವುದೇ ರೀತಿಯ ಅಡ್ಡಿಯು ನ್ಯಾಯದಾನದ ಹಾದಿಯ ಮೇಲೆ ಪ್ರಭಾವ ಬೀರುತ್ತದೆ’ ಎಂದೂ ಮುಖ್ಯ ನ್ಯಾಯಮೂರ್ತಿ ಮಿಶ್ರ ನುಡಿದರು. ’ನ್ಯಾಯದಾನ ವ್ಯವಸ್ಥೆಗೆ ಅಡ್ಡಿ ಪಡಿಸುವ ನಿರ್ಣಯಗಳನ್ನು ವಕೀಲರ ಸಂಘಟನೆಗಳು ಅಂಗೀಕರಿಸುವುದರ ವಿರುದ್ಧ ತೀರ್ಪುಗಳೇ ಇವೆ’ ಎಂದೂ ಮುಖ್ಯ ನ್ಯಾಯಮೂರ್ತಿ ಹೇಳಿದರು. ’ಬಾರ್ ಅಸೋಸಿಯೇಶನ್ ಸದಸ್ಯರು ಆರೋಪಿಗಳಾಗಲೀ, ಸಂತ್ರಸ್ಥರಾಗಲೀ ಅಥವಾ ತನಿಖಾ ಸಂಸ್ಥೆಯಾಗಲೀ ಯಾರನ್ನೂ ನ್ಯಾಯಾಲಯಕ್ಕೆ ಹಾಜರಾಗದಂತೆ ತಡೆಯುವಂತಿಲ್ಲ’ ಎಂದೂ ನ್ಯಾಯಾಲಯ ಹೇಳಿತು. ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ಸ್ಥಳೀಯ ವಕೀಲರು ಚಾರ್ಜ್‌ಶೀಟ್ ಸಲ್ಲಿಸದಂತೆ ಅಡ್ಡಿ ಪಡಿಸಲು ಸ್ಥಳೀಯ ವಕೀಲರು ಯತ್ನಿಸಿದ್ದಕ್ಕೆ ಸಂಬಂಧಿಸಿದ ಏನಾದರೂ ಸಾಕ್ಷ್ಯಗಳು ಇದ್ದರೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಸುಪ್ರೀಂಕೋರ್ಟ್ ವಕೀಲರ ಗುಂಪು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ಜಮ್ಮು ಮತ್ತು ಕಾಶ್ಮೀರ ವಕೀಲರ ವರ್ತನೆ ಬಗ್ಗೆ ಸ್ವ ಇಚ್ಛೆಯ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಸುಪ್ರೀಂಕೋರ್ಟ್ ಶೂನ್ಯದಲ್ಲಿ ಮನವಿಯನ್ನು ಪರಿಗಣಿಸಲಾಗದು, ಕಾರ್ಯೋನ್ಮುಖರಾಗಲು ಅನುಕೂಲವಾಗುವಂತಹ ಏನಾದರೂ ವಸ್ತು-ವಿಷಯ ಬೇಕು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದ್ದರು. ಸ್ಥಳೀಯ ವಕೀಲರು ಚಾರ್ಜ್‌ಶೀಟ್ ದಾಖಲಿಸದಂತೆ ಪೊಲೀಸರನ್ನು ತಡೆದರು ಮತ್ತು ಜಮ್ಮು ಹೈಕೋರ್ಟ್ ಬಾರ್ ಅಸೋಸಿಯೇಶನ್ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ ಬಗ್ಗೆ ವರದಿಗಳು ಬಂದಿದ್ದವು. ಆರೋಪಿಗಳಲ್ಲಿ ಪೊಲೀಸರೂ ಸೇರಿದ್ದು, ಅವರು ಸಾಕ್ಷ್ಯಾಧಾರ ನಾಶ ಪಡಿಸುವ ಶಂಕೆ ಇದೆ. ಈ ಪ್ರಕರಣದಲ್ಲಿ ೧೫ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಚಾರ್ಜ್‌ಶೀಟಿನಲ್ಲಿ ರಸನಾದಲ್ಲಿನ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಮುಖ್ಯ ಸಂಚುಗಾರ ಎಂದು ಹೆಸರಿಸಲಾಗಿದೆ. ಬಖೇರ್ ವಾಲ್ ಅಲೆಮಾರಿ ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಈ ದೇವಾಲಯದಲ್ಲಿ ಇರಿಸಲಾಗಿತ್ತು ಎನ್ನಲಾಗಿತ್ತು. ಬಾಲಕಿ ಜನವರಿ ೧೦ರಿಂದ ರಸನಾ ಗ್ರಾಮದಿಂದ ಕಣ್ಮರೆಯಾಗಿದ್ದಳು. ಜನವರಿ ೧೭ರಂದು ಛಿದ್ರ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ದೇಹದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಗುರುತುಗಳು ಕಂಡು ಬಂದಿದ್ದವು.
2018: ನವದೆಹಲಿ: ಉತ್ತರ ಪ್ರದೇಶದ ಉನ್ನಾವೋದಲ್ಲಿ ೧೮ರ ಹರೆಯದ ತರುಣಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ’ಸ್ಥಾನ ಬದ್ಧತೆ’ಯಲ್ಲಿ ಇಡುವುದಲ್ಲ, ’ಬಂಧಿಸಿ’ ಎಂದು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅಲಹಾಬಾದ್ ಹೈಕೋರ್ಟ್ ಬೆಳಗ್ಗೆ ಆಜ್ಞಾಪಿಸಿತು. ರಾತ್ರಿಯವೇಳೆಗೆ ಸೆಂಗರ್ ಅವರನ್ನು ಬಂಧಿಸಲಾಯಿತು. ತನಿಖೆಯ ಮೇಲೆ ತಾನು ನಿಗಾ ಇಟ್ಟಿರುವುದಾಗಿ ಹೇಳಿದ ಕೋರ್ಟ್, ಮೇ ೨ರ ವೇಳೆಗೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಗತಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿತು. ಶಾಸಕನನ್ನು ಈದಿನ ನಸುಕಿನ ವೇಳೆಯಲ್ಲಿ ಅವರ ಲಕ್ನೋ ನಿವಾಸದಿಂದ ಸಿಬಿಐ ತನ್ನ ವಶಕ್ಕೆ ಪಡೆದುಕೊಂಡಿತ್ತು. ಯುವತಿಯ ಮೇಲಿನ ಅತ್ಯಾಚಾರ ಆರೋಪ ಮತ್ತು ಪೊಲೀಸರ ವಶದಲ್ಲಿ ಆಕೆಯ ತಂದೆಯ ಸಾವು ಈ ಅವಳಿ ಪ್ರಕರಣಗಳ ತನಿಖೆಯನ್ನು ನಡೆಸಿದ ಲಕ್ನೋ ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ರಚಿಸಿದ ವಿಶೇಷ ತನಿಖಾ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊದ (ಪಿಒಸಿಎಸ್ ಒ) ಸಂಬಂಧಿತ ವಿಧಿಗಳ ಅಡಿಯಲ್ಲಿ ಗುರುವಾರ ಬೆಳಗ್ಗೆ ಶಾಸಕನ ವಿರುದ್ಧ ಉನ್ನಾವೋದ ಮಕ್ಹಿ ಪೊಲೀಸ್ ಠಾಣೆಯಲ್ಲಿ, ಶಾಸಕ ಪೊಲೀಸ್ ಠಾಣೆಗೆ ನಾಟಕೀಯವಾಗಿ ಹಾಜರಾಗಿ, ಶರಣಾಗತಿಗೆ ನಿರಾಕರಿಸಿದ ಬಳಿಕ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಹೊರಭಾಗದಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ವ್ಯಾಪಕ ವಿವಾದ ಭುಗಿಲೆದ್ದಿತ್ತು.
2018: ಸ್ಟಾಕ್ ಹೋಮ್: ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರತಿಷ್ಠಿತ ’ನೊಬೆಲ್’ ಸಾಹಿತ್ಯ ಪ್ರಶಸ್ತಿ ನೀಡುವ ಸ್ವೀಡಿಶ್ ಅಕಾಡೆಮಿಯು ಲೈಂಗಿಕ ಹಗರಣದಿಂದ ತತ್ತರಿಸಿದ್ದು, ನೂತನ ಮುಖ್ಯಸ್ಥನಾಗಿ ಬರಹಗಾರ, ಸಾಹಿತ್ಯ ಪ್ರೊಫೆಸರ್ ಆಂಡರ್‍ಸ್ ಒಲೆಸ್ಸನ್ ಅವರನ್ನು ನೇಮಕ ಮಾಡಿತು. ಅಕಾಡೆಮಿಯ ಕಾಯಂ ಕಾರ್‍ಯದರ್ಶಿ ಸಾರಾ ಡೇನಿಯಸ್ ಸೇರಿದಂತೆ ಇಬ್ಬರು ಸದಸ್ಯರು ವಿವಾದದ ಹಿನ್ನೆಲೆಯಲ್ಲಿ ಅಕಾಡೆಮಿ ಎರಡು ಶಿಬಿರಗಳಾಗಿ ಒಡೆದ ಬಳಿಕ ಗುರುವಾರ ಅಕಾಡೆಮಿಗೆ ರಾಜೀನಾಮೆ ನೀಡಿದರು. ಅಕಾಡೆಮಿಯ ಸದಸ್ಯೆ ಕತ್ರೀನಾ ಫ್ರೋಸ್ಟೆನ್‌ಸನ್ ಅವರ ಫ್ರೆಂಚ್ ಪತಿ ಜೀನ್-ಕ್ಲಾಡ್ ಅರ್‍ನಾಲ್ಟ್ ಅವರಿಂದ ದೈಹಿಕ ಹಿಂಸೆಗೆ ಒಳಗಾಗಿರುವುದಾಗಿ ೧೮ ಮಹಿಳೆಯರು ಆಪಾದಿಸುವುದರೊಂದಿಗೆ ಹಗರಣ ಭುಗಿಲೆದ್ದಿತು. ಏನಿದ್ದರೂ ಕತ್ತೀನಾ ಮತ್ತು ಜೀನ್ ಕ್ಲಾಡ್ ಅರ್‍ನಾಲ್ಟ್ ಅವರು ಆರೋಪಗಳನ್ನು ನಿರಾಕರಿಸಿದರು. ಬರಹಗಾರ ಹಾಗೂ ಸಾಹಿತ್ಯ ಪ್ರೊಫೆಸರ್ ಆಂಡರ್‍ಸ್ ಒಲೆಸ್ಸನ್ ಅವರನ್ನು ಅಕಾಡೆಮಿಯ ಮುಖ್ಯಸ್ಥರಾಗಿ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಲಾಗಿದೆ ಎಂದು ಎಸ್ ಆರ್ ರೇಡಿಯೋ ವರದಿ ಮಾಡಿದೆ. ಅಕಾಡೆಮಿಯ ಸದಸ್ಯರಾದ ಒಲೆಸ್ಸನ್ ಅವರು ಸ್ವೀಡಿಶ್ ಯುನಿವರ್ಸಿಟಿಯಲ್ಲಿ ಸಾಹಿತ್ಯ ಪ್ರಾಧ್ಯಾಪಕರು. ’ನಾನು ಅಕಾಡೆಮಿಯ ಕಾಯಂ ಸದಸ್ಯತ್ವವನ್ನು ತ್ಯಜಿಸಬೇಕು ಎಂಬುದು ಅಕಾಡೆಮಿಯ ಆಶಯವಾಗಿದೆ’ ಎಂದು ೧೭೮೬ರಲ್ಲಿ ಸ್ಥಾಪನೆಯಾದ ಸ್ವೀಡಿಶ್ ಅಕಾಡೆಮಿಯ ಮೊದಲ ಮಹಿಳಾ ಮುಖ್ಯಸ್ಥೆ ಡೇನಿಯಸ್ ಹೇಳಿದರು. ’ನಾನು ಮುಂದುವರೆಯಬಹುದಿತ್ತು. ಆದರೆ ಬದುಕಿನಲ್ಲಿ ಮಾಡಲು ಇತರ ಕೆಲಸಗಳಿವೆ’ ಎಂದು ಅವರು ನುಡಿದರು. ತಾನು ಅಕಾಡೆಮಿಯನ್ನು ತ್ಯಜಿಸುತ್ತಿರುವುದಾಗಿ ಅವರು ಹೇಳಿದರು. ತಾಂತ್ರಿಕವಾಗಿ ಅಕಾಡೆಮಿಯ ೧೮ ಸದಸ್ಯರನ್ನು ಜೀವಮಾನದ ಅವಧಿಗೆ ನೇಮಿಸಲಾಗುತ್ತದೆ ಮತ್ತು ಅವರು ರಾಜೀನಾಮೆ ನೀಡುವಂತಿಲ್ಲ. ಆದರೆ ಅವರು ಅಕಾಡೆಮಿಯ ಸಭೆಗಳಲ್ಲಿ ಮತ್ತು ನಿರ್ಧಾರಗಳಲ್ಲಿ ಭಾಗಿಯಾಗದೇ ಇರುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಪತಿಯ ಮೇಲಿನ ಆರೋಪವನ್ನು ನಿರಾಕರಿಸಿರುವ ಕತ್ರೀನಾ ಫ್ರೋಸ್ಟೆನ್ಸನ್ ಅವರೂ ತಾವು ಇನ್ನು ಮುಂದೆ ಅಕಾಡೆಮಿಯ ಕೆಲಸಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದರು. ಹಲವಾರು ವರ್ಷಗಳಿಂದ ಸ್ಟಾಕ್ ಹೋಮ್ ನಲ್ಲಿ ಇರುವ ಕತ್ರೀನಾ ಅವರ ಪತಿಯ ಸಾಂಸ್ಕೃತಿಕ ಕ್ಲಬ್ ಫೋರಂನಿಂದ ಸಬ್ಸಿಡಿ ಪಡೆಯುತ್ತಿದ್ದ ಸ್ವೀಡಿಶ್ ಅಕಾಡೆಮಿಯು ಆಪಾದನೆಗಳ ಬಳಿಕ ಫೋರಂನ ಜೊತೆಗಿನ ಬಾಂಧವ್ಯಗಳನ್ನು ರದ್ದು ಪಡಿಸಿತು. ಈ ಕ್ಲಬ್ ರಾಷ್ಟ್ರದ ಸಾಂಸ್ಕೃತಿಕ ಪ್ರಮುಖರು ಪರಸ್ಪರ ಭೇಟಿಯಾಗುವ, ಸಭೆ ನಡೆಸುವ ಮುಖ್ಯ ತಾಣವಾಗಿತ್ತು. ಆಪಾದನೆಗಳ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿರುವ ಸ್ವೀಡಿಶ್ ಅಕಾಡೆಮಿ, ನೊಬೆಲ್ ಪ್ರಶಸ್ತಿ ನೀಡುವ ತನ್ನ ಜಾಗತಿಕ ಕೀರ್ತಿಗೆ ಎಲ್ಲಿ ಧಕ್ಕೆ ಉಂಟಾಗುವುದೋ ಎಂದು ಭೀತಿ ಪಟ್ಟಿತು. ’ನೊಬೆಲ್ ಪ್ರಶಸ್ತಿ’ಯ ಗೌರವಕ್ಕೆ ಇದು ವಿನಾಶಕಾರಿ’ ಎಂದು ಎಸ್ ಆರ್ ರೇಡಿಯೋದ ಸಾಂಸ್ಕೃತಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಮತ್ತಾಯಿಸ್ ಬರ್ಗ್ ಹೇಳಿದರು. ಸ್ವೀಡನ್ ದೊರೆಯ ನೇರ ಆಶ್ರಯದಲ್ಲಿ ಕಾರ್ಯ ನಿರ್ವಹಿಸುವ ಸ್ವೀಡಿಶ್ ಅಕಾಡೆಮಿಯ ಸಭೆಗಳು ಮತ್ತು ನಿರ್ಣಯಗಳು ಸಾಮಾನ್ಯವಾಗಿ ಅತ್ಯಂತ ರಹಸ್ಯವಾಗಿರುತ್ತದೆ. ಈಗ ಅಕಾಡೆಮಿ ಮೇಲಿನ ವಿಶ್ವಾಸಾರ್ಹತೆಯನ್ನೇ ಹಗರಣ ಅಲುಗಾಡಿಸಿತು. ಸಾಹಿತ್ಯದ ಜೊತೆಗೆ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ ಮತ್ತು ಶಾಂತಿ ಕ್ಷೇತ್ರಗಳಲ್ಲಿಯೂ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ಸ್ವೀಡನ್ ಮತ್ತು ನಾರ್ವೆಯ ಇತರ ಸಂಸ್ಥೆಗಳು ನಿರ್ಧರಿಸುತ್ತವೆ.
2018: ನವದೆಹಲಿ: ಜಮ್ಮುವಿನಲ್ಲಿ ೮ ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಆಕೆಯ ಹತ್ಯೆ ಪ್ರಕರಣ ಹಾಗೂ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಸಂತ್ರಸ್ಥೆಯ ತಂದೆ ಪೊಲೀಸ್ ವಶದಲ್ಲಿ ಸಾವನ್ನಪ್ಪಿದ ಪ್ರಕರಣಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಒಂದು ದಿನದ ಬಳಿಕ ಈದಿನ ಹಾನಿ ನಿಯಂತ್ರಣ ಕ್ರಮ ಕೈಗೊಂಡ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿತು. ಬಿಜೆಪಿ ಶಾಸಕನನ್ನು ಬಂಧಿಸಲಾಗಿರುವ ಉತ್ತರ ಪ್ರದೇಶದ ಉನ್ನಾವೋ ಪ್ರಕರಣ ಮತ್ತು ಜಮ್ಮು ಕಾಶ್ಮೀರದಲ್ಲಿ ೮ ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಆಕೆಯ ಸಾವಿನ ಬಗ್ಗೆ ಚಾಜ್‌ಶೀಟ್ ಸಲ್ಲಿಕೆ ವಿರೋಧಿಸಿ ನಡೆದ ಮೆರವಣಿಗೆಗೆ ಮೆಹಬೂಬಾ ಮುಫ್ತಿ ಸರ್ಕಾರದ ಇಬ್ಬರು ಬಿಜೆಪಿ ಸಚಿವರ ಬೆಂಬಲ ನೀಡಿದ್ದಕ್ಕಾಗಿ ಬಿಜೆಪಿ ಸರ್ಕಾರಗಳ ಮೇಲೆ ನಡೆಯುತ್ತಿರುವ ದಾಳಿ ’ಒಂದೇ ಮಾದರಿಯವು’ ಮತ್ತು ’ಮೋದಿ ಸರ್ಕಾರಕ್ಕೆ’ ಕೆಟ್ಟ ಹೆಸರು ತರಲು ವಿಪಕ್ಷಗಳು ಹೆಣೆದ ತಂತ್ರ ಎಂದು ಲೋಕಸಭಾ ಸದಸ್ಯೆ ಮೀನಾಕ್ಷಿ ಲೇಖಿ ಹೇಳಿದರು. ’ಅವರ ಯೋಜನೆ ನೋಡಿ. ಮೊದಲು ’ಅಲ್ಪಸಂಖ್ಯಾತರು ಅಲ್ಪಸಂಖ್ಯಾತರು ಎಂದು, ಬಳಿಕ ದಲಿತ ದಲಿತ ಎಂದು ಬೊಬ್ಬಿರಿಯುತ್ತಾರೆ. ಈಗ ’ಮಹಿಳೆ ಮಹಿಳೆ’ ಎಂದು ಬೊಬ್ಬರಿಯುತ್ತಿದ್ದಾರೆ. ಆಮೇಲೆ ಹೇಗಾದರೂ ಮಾಡಿ ರಾಜ್ಯ ವಿಚಾರಗಳನ್ನು ಕೇಂದ್ರದ ಮೇಲೆ ಹೇರಲು ಯತ್ನಿಸುತ್ತಾರೆ. ಇದೆಲ್ಲವನ್ನೂ ರಾಜ್ಯ ಸರ್ಕಾರಗಳು ಬಿಗಿ ಕ್ರಮಕೈಗೊಂಡಿದ್ದರೂ ಅದನ್ನು ನಿರ್ಲಕ್ಷಿಸಿ ಮಾಡಲಾಗುತ್ತದೆ’ ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕವು ತನ್ನ ರಾಜ್ಯ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ಕಥುವಾದ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ನಿರ್ಣಯ ಅಂಗೀಕರಿಸಿದೆ. ಆರೋಪಿ ಪರ ಮೆರವಣಿಗೆಯಲ್ಲಿ ಪಾಲ್ಗೊಂಡ ಇಬ್ಬರು ಸಚಿವರು ತಪ್ಪು ಮಾಹಿತಿಯಿಂದ ಅದರಲ್ಲಿ ಪಾಲ್ಗೊಂಡಿದ್ದಾರೆ ಅಷ್ಟೆ ಎಂದು ಅವರು ಸ್ಪಷ್ಟ ಪಡಿಸಿದರು. ತನಿಖೆ ನಡೆಯುತ್ತಿರುವಾಗ ಯಾವುದೇ ಹೇಳಿಕೆ ನೀಡಬೇಡಿ ಎಂಬುದು ಎಲ್ಲರಿಗೂ ನನ್ನ ಸಲಹೆ ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್. ಸ್ಲಾಥಿಯಾ ಅವರ ವಿರುದ್ಧ ಸಂತ್ರಸ್ಥರ ವಕೀಲರಿಗೆ ಕಿರುಕುಳ ನೀಡಿದ ಮತ್ತು ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸದಂತೆ ತಡೆಯಲು ಯತ್ನಿಸುತ್ತಿರುವ ಆಪಾದನೆ ಇದೆ. ಈ ವ್ಯಕ್ತಿ ಗುಲಾಂ ನಬಿ ಆಜಾದ್ ಅವರ ಚುನಾವಣಾ ಏಜೆಂಟರಾಗಿದ್ದರು ಎಂದು ನುಡಿದ ಲೇಖಿ, ತಮ್ಮ ಪಕ್ಷದ ಸದಸ್ಯರೇ ಪ್ರಾಸೆಕ್ಯೂಷನನ್ನು ತಡೆಯಲು ಯತ್ನಿಸುವ ಕೃತ್ಯದಲ್ಲಿ ಭಾಗಿಯಾಗಿರುವಾಗ ಕಾಂಗ್ರೆಸ್ಸಿಗರು ಬಿಜೆಪಿಯನ್ನು ದೂಷಿಸಿ ಹೇಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಉನ್ನಾವೋ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಈ ಪ್ರಕರಣ ೧೦ ತಿಂಗಳುಗಳಷ್ಟು ಹಳೆಯದು. ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ಪ್ರಾಥಮಿಕ ದೂರಿನಲ್ಲಿ ಸಂತ್ರಸ್ಥೆ ಶಾಸಕರನ್ನು ಹೆಸರಿಸಿರಲಿಲ್ಲ. ಬಳಿಕ ಆಕೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬರೆದ ಪತ್ರದಲ್ಲಿ ಶಾಸಕರನ್ನು ಹೆಸರಿಸಿದ್ದು, ಆಗ ತನಿಖೆಯ ದಿಕ್ಕು ಬದಲಾಯಿತು’ ಎಂದು ಲೇಖಿ ನುಡಿದರು. ಪೊಲೀಸರ ವಶದಲ್ಲಿ ಸಂತ್ರಸ್ಥೆಯ ತಂದೆ ಸಾವನ್ನಪ್ಪಿದ ಬಗ್ಗೆ ಪ್ರಸ್ತಾಪಿಸಿದ ಲೇಖಿ, ಪೊಲೀಸರು ಗಾಯಾಳುವನ್ನು ಕಳುಹಿಸಿದ್ದ ಆಸ್ಪತ್ರೆಯಲ್ಲಿನ ಅಧಿಕಾರಿಗಳು ತಪ್ಪು ಸರ್ಟಿಫಿಕೇಟ್ ನೀಡಿದ್ದರ ಫಲ ಇದು. ಈ ಬಗ್ಗೆ ಪ್ರಶ್ನಿಸುವ ಸಲುವಾಗಿ ಇಬ್ಬರು ವೈದ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಗುರುವಾರ ರಾತ್ರಿ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆದ ಬಗ್ಗೆ ಪ್ರಸ್ತಾಪಿಸಿದ ಅವರು ’ಕಾಂಗ್ರೆಸ್ ಪಕ್ಷವು ಆಯ್ದುಕೊಂಡು ಪ್ರತಿಭಟನೆಗಳನ್ನು ಮಾಡುತ್ತದೆ. ಹಿಂದಿನ ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಾಗಲೀ, ೧೯೮೪ರ ಸಿಖ್ ವಿರೋಧಿ ದಂಗೆಗಳ ಸಂದರ್ಭದಲ್ಲಾಗಲೀ ಅವರು ಪ್ರತಿಭಟನೆಗಳನ್ನು ಮಾಡಲಿಲ್ಲ’ ಎಂದು ಟೀಕಿಸಿದರು.
2018: ನವದೆಹಲಿ: ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸದೆ ತ್ರಿಶಂಕು ಸ್ಥಿತಿ ತಲೆದೋರಲಿದೆ ಎಂದು ಇಂಡಿಯಾ ಟುಡೆ ಮತ್ತು ಕಾರ್ವಿ ಇನ್ಸೈಟ್ಸ್ ಒಟ್ಟಾಗಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿಯಿತು. ಇಂಡಿಯಾ ಟುಡೆ - ಕಾರ್ವಿ ಸಮೀಕ್ಷೆಯ ಪ್ರಕಾರ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ೯೦ ರಿಂದ ೧೦೧ ಸ್ಥಾನಗಳು ಸಿಗಲಿವೆ. ಭಾರತೀಯ ಜನತಾ ಪಕ್ಷಕ್ಕೆ ೭೮ರಿಂದ ೮೬ ಸ್ಥಾನಗಳು ಸಿಗಲಿವೆ. ೩೪ರಿಂದ ೪೩ ಸ್ಥಾನಗಳನ್ನು ಪಡೆಯಲಿರುವ ಎಚ್.ಡಿ. ದೇವೇಗೌಡ ಅವರ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ತಿಳಿಸಿತು. ೨೨೫ ಸದಸ್ಯ ಬಲದ ಕರ್ನಾಟಕ ವಿಧಾನ ಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು ಸರಳ ಬಹುಮತಕ್ಕಾಗಿ ಯಾವುದೇ ಒಂದು ಪಕ್ಷ ೧೧೨ ಸ್ಥಾನಗಳನ್ನು ಗೆಲ್ಲಬೇಕು. ಮತ ಹಂಚಿಕೆ ಪ್ರಕಾರ ಕಾಂಗ್ರೆಸ್ ಶೇ.೩೭ ಮತಗಳನ್ನು ಗಳಿಸಲಿದೆ. ಬಿಜೆಪಿಗೆ ಶೇ.೩೫ ಮತಗಳು ಸಿಗಲಿವೆ. ಜೆಡಿಎಸ್-ಬಿಎಸ್ಪಿ ಗೆ ಒಟ್ಟಾರೆಯಾಗಿ ಶೇ.೧೯ ಮತಗಳು ಪ್ರಾಪ್ತವಾಗಲಿವೆ. ತ್ರಿಶಂಕು ಸ್ಥಿತಿ ಏರ್ಪಟ್ಟಲ್ಲಿ ಅತ್ಯಂತ ಹಳೆಯ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಬೆಂಬಲ ಕೊಡಬೇಕು ಎಂದು ಶೇ.೩೯ ಜನರು ಬಯಸಿದರೆ, ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡಬೇಕು ಎಂದು ಶೇ.೨೯ ಮಂದಿ ಬಯಸಿದ್ದಾರೆ ಎಂದು ಸಮೀಕ್ಷೆ ಹೇಳಿತು. ಈ ಚುನಾವಣಾ ಪೂರ್ವ ಸಮೀಕ್ಷೆಗಾಗಿ ಇಂಡಿಯಾ ಟುಡೆ ಮತ್ತು ಕಾರ್ವಿ ಇನ್ಸೈಟ್ಸ್ ರಾಜ್ಯಾದ್ಯಂತದ ೨೨೪ ವಿಧಾನಸಭಾ ಕ್ಷೇತ್ರಗಳ ೨೭,೯೧೯ ಮಂದಿಯನ್ನು ಸಂದರ್ಶಿಸಿತ್ತು. ಕರ್ನಾಟಕ ವಿಧಾನಸಭೆಗೆ ಮೇ ೧೨ರಂದು ಏಕಹಂತದ ಮತದಾನ ನಡೆಯಲಿದ್ದು ಮೇ ೧೫ರಂದು ಫಲಿತಾಂಶ ಹೊರಬೀಳಲಿದೆ.
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಹುಶಃ ರಾಷ್ಟ್ರದ ಮೊತ್ತ ಮೊದಲ ಅಂಬೇಡ್ಕರ್ ಮ್ಯೂಸಿಯಂನ್ನು (ವಸ್ತು ಸಂಗ್ರಹಾಲಯ) ರಾಷ್ಟ್ರದ ರಾಜಧಾನಿಯಲ್ಲಿ ಉದ್ಘಾಟಿಸಿದರು. ೨೦೧೬ರಲ್ಲಿ, ಎರಡು ವರ್ಷಗಳ ಹಿಂದೆ ಸ್ವತಃ ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದ ಈ ಮ್ಯೂಸಿಯಂ ಯೋಜನೆಯ ಪ್ರಗತಿ ಬಗ್ಗೆ ಪ್ರಧಾನಿಯವರೇ ಸ್ವತಃ ಪ್ರತಿದಿನ ಗಮನಿಸುತ್ತಿದ್ದರು ಎಂದು ಪ್ರಧಾನ ಮಂತ್ರಿಯವರ ಸಚಿವಾಲಯ ತಿಳಿಸಿತು. ’ಅಂಬೇಡ್ಕರ್ ಬದುಕಿನ ಬಗ್ಗೆ ಮ್ಯೂಸಿಯಂನಲ್ಲಿ ಎಲ್ಲವೂ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ. ಸಂವಿಧಾನ ರೂಪಿಸುವಲ್ಲಿನ ಅವರ ಕೆಲಸ, ಬೌದ್ಧಮತದ ಬಗೆಗಿನ ಅವರ ಒಲವು ಮತ್ತು ಅವರ ಬದುಕಿನ ವಿವಿಧ ಆಯಾಮಗಳ ಚಿತ್ರ ಡಿಜಿಟಲ್ ರೂಪದಲ್ಲಿ ಮೂಡಿಬರಲಿದೆ ಎಂದು ಸಚಿವಾಲಯ ಮೂಲಗಳು ಹೇಳಿದವು. ದಲಿತರಿಗೆ ತಮ್ಮ ಬೆಂಬಲದ ಸಂಕೇತವಾಗಿರುವ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿಯವರೇ ಈ ಯೋಜನೆ ಬಗ್ಗೆ ತೀವ್ರ ಆಸಕ್ತಿ ಇಟ್ಟುಕೊಂಡಿದ್ದಾರೆ ಎಂದು ಮೂಲಗಳು ಹೇಳಿದವು. ಅಲಿಪುರ ರಸ್ತೆಯಲ್ಲಿ ವಿಧಾನಸಭೆಯ ಎದುರಿಗೆ ಇರುವ ನಿರ್ಮಾಣವು ಹಿಂದೆ ದಲಿತ ನಾಯಕ ಬಿ.ಆರ್. ಅಂಬೇಡ್ಕರ್ ಅವರ ಮನೆಯಾಗಿತ್ತು. ಈ ಮನೆಯನ್ನು ಕೆಡವಿ ೨೦೦೩ರಲ್ಲಿ ಅಲ್ಲಿ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಬಿಜೆಪಿ ಸರ್ಕಾರವು ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಯೋಜನೆ ಇದೆ ಎಂದು ೨೦೧೪ರಲ್ಲಿ ಪ್ರಕಟಿಸಿತ್ತು. ನಿವೇಶನದಲ್ಲಿ ನಿರ್ಮಾಣಕಾರ್‍ಯಗಳು ಭರದಿಂದ ನಡೆಯುತ್ತಿವೆ. ಇಡೀ ಕಟ್ಟಡವನ್ನು ಸಂವಿಧಾನದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಆವರಣದ ಉತ್ತರ ದ್ವಾರದಲ್ಲಿ ಸಾಂಚಿಸ್ತೂಪದ ಪ್ರತಿಕೃತಿ ಇರುತ್ತದೆ. ಅಂಬೇಡ್ಕರ್ ಅವರಿಗೆ ಬೌದ್ಧ ಮತದ ಬಗ್ಗೆ ಒಲವು ಇದ್ದ ಹಿನ್ನೆಲೆಯಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನೂ ಸ್ಥಾಪಿಸಲಾಗುತ್ತದೆ ಎಂದು ಸಚಿವಾಲಯ ಮೂಲಗಳು ಹೇಳಿದವು. ಕಟ್ಟಡವು ಧ್ಯಾನ ಸಭಾಂಗಣವನ್ನು ಹೊಂದಿರಲಿದೆ. ಗೋಡೆಯಲ್ಲಿ ಸಂವಿಧಾನ ರಚನೆಯ ಪೂರ್ತಿ ಕಾರ್‍ಯವು ಡಿಜಿಟಲ್ ರೂಪದಲ್ಲಿ ಮೂಡಿಬರಲಿದೆ. ದಲಿತ ನಾಯಕರ ಭಾಷಣಗಳೂ ಪರದೆಯ ಮೇಲೆ ಮೂಡುತ್ತಿರುತ್ತದೆ ಎಂದು ಮೂಲಗಳು ತಿಳಿಸಿದವು. ಸರ್ಕಾರವು ಅಂಬೇಡ್ಕರ್ ಅವರು ತೋರಿದ ಹಾದಿಯಲ್ಲಿ ತಮ್ಮ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ಹೇಳಿದ್ದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ಎಸ್ ಸಿ / ಎಸ್ ಟಿ) (ದೌರ್ಜನ್ಯ ತಡೆ) ಕಾಯ್ದೆ ಸುಪ್ರೀಂಕೋರ್ಟ್ ತೀರ್ಪಿನಿಂದ ದುರ್ಬಲಗೊಂಡಿದೆ ಎಂದು ಆಪಾದಿಸಿ ದಲಿತ ಸಂಘಟನೆಗಳು ಇತ್ತೀಚೆಗೆ ಸಂಘಟಿಸಿದ್ದ ವ್ಯಾಪಕ ಪ್ರತಿಭಟನೆಗಳ ಸಂದರ್ಭದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಕನಿಷ್ಠ ೯ ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಹಾಗೂ ಸಹಸ್ರಾರು ಮಂದಿಯನ್ನು ಪೊಲೀಸರು ಬಂಧಿಸಿದ ವಿದ್ಯಮಾನ ಘಟಿಸಿದ ಕೆಲವೇ ಸಮಯದ ಒಳಗಾಗಿ ಮ್ಯೂಸಿಯಂನ್ನು ಪ್ರಧಾನಿ ಉದ್ಘಾಟಿಸಿರುವುದು ಹೆಚ್ಚಿನ ಮಹತ್ವವನ್ನು ಪಡೆಯಿತು.
2018: ನವದೆಹಲಿ: ಕಥುವಾ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣಗಳ ಬಗ್ಗೆ ಪರೋಕ್ಷವಾಗಿ ಇದೇ ಪ್ರಪ್ರಥಮ ಬಾರಿಗೆ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಯಾವನೇ ಅಪರಾಧಿಯನ್ನೂ ರಕ್ಷಿಸಲಾಗುವುದಿಲ್ಲ. ನಮ್ಮ ಪುತ್ರಿಯರಿಗೆ/ ಹೆಣ್ಣುಮಕ್ಕಳಿಗೆ ಖಚಿತವಾಗಿ ನ್ಯಾಯ ಲಭಿಸುತ್ತದೆ’ ಎಂದು ರಾಷ್ಟ್ರಕ್ಕೆ ಭರವಸೆ ನೀಡಿದರು. ’ಕಳೆದ ಎರಡು ದಿನಗಳಿಂದ ಚರ್ಚೆಯಾಗುತ್ತಿರುವ ಘಟನೆಗಳು ಸಭ್ಯ ನಾಗರಿಕ ಸಮಾಜದ ಭಾಗವಾಗಿರಲು ಸಾಧ್ಯವಿಲ್ಲ. ರಾಷ್ಟ್ರವಾಗಿ, ಸಮಾಜವಾಗಿ ನಾವೆಲ್ಲರೂ ಇದರ ಬಗ್ಗೆ ನಾಚಿಕೆ ಪಡಬೇಕಾಗಿದೆ. ಯಾವನೇ ಅಪರಾಧಿಯನ್ನು ರಕ್ಷಿಸಲಾಗುವುದಿಲ್ಲ, ಸಂಪೂರ್ಣ ನ್ಯಾಯವನ್ನು ಒದಗಿಸಲಾಗುತ್ತದೆ. ನಮ್ಮ ಪುತ್ರಿಯರು ಖಚಿತವಾಗಿ ನ್ಯಾಯ ಪಡೆಯುತ್ತಾರೆ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಬಯಸುತ್ತೇನೆ’ ಎಂದು ಮೋದಿ ಅಂಬೇಡ್ಕರ್ ಮ್ಯೂಸಿಯಂ ಉದ್ಘಾಟಿಸಿದ ಬಳಿಕ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಅಲ್ಪಸಂಖ್ಯಾತ ಅಲೆಮಾರಿ ಸಮುದಾಯದ ೮ ವರ್ಷದ ಬಾಲಕಿಯೊಬ್ಬಳು ಜನವರಿ ೧೦ರಂದು ತನ್ನ ಮನೆಯ ಬಳಿಯಿಂದ ಕಣ್ಮರೆಯಾಗಿದ್ದಳು. ವಾರದ ಬಳಿಕ ಆಕೆಯ ಶವ ಅದೇ ಪ್ರದೇಶದಲ್ಲಿ ಲಭಿಸಿತ್ತು. ಘಟನೆ ಬಗ್ಗೆ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡವು ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ಹೆಡ್ ಕಾನ್ ಸ್ಟೇಬಲ್ ಸೇರಿ ೮ ಜನರನ್ನು ಬಂಧಿಸಿದೆ. ಇವರ ವಿರುದ್ಧ ಸಾಕ್ಷ್ಯ ನಾಶದ ಆಪಾದನೆ ಇತ್ತು. ಉತ್ತರ ಪ್ರದೇಶದ ಉನ್ನಾವೋದಲ್ಲಿ ಹದಿ ಹರೆಯದ ತರುಣಿ ಒಬ್ಬಳ ಮೇಲೆ ಆಡಳಿತಾರೂಢ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅತ್ಯಾಚಾರ ನಡೆಸಿದ ಆಪಾದನೆ ಇದ್ದು, ಶುಕ್ರವಾರ ನಸುಕಿನಲ್ಲಿ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ. ೨೦೧೭ರ ಜೂನ್ ೪ರಂದು ಶಾಸಕನ ಮನೆಯಲ್ಲಿ ಶಾಸಕನೇ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ತರುಣಿ ಆಪಾದಿಸಿದ್ದಾಳೆ. ಬಂಧು ಒಬ್ಬರಿಗೆ ಕೆಲಸ ಕೇಳಲು ಹೋಗಿದ್ದಾಗ ಈ ಘಟನೆ ನಡೆಯಿತು ಎಂದು ಆಕೆ ಹೇಳಿದ್ದಳು. ಪ್ರಕರಣ ದಾಖಲಾದ ಬಳಿಕ, ಆಕೆಯ ತಂದೆಯ ವಿರುದ್ಧ ಪೊಲೀಸರು ಈ ವರ್ಷ ಏಪ್ರಿಲ್ ೩ರಂದು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಏಪ್ರಲ್ ೫ ರಂದು ಬಂಧಿಸಿ ಸೆರೆಯಲ್ಲಿ ಇಟ್ಟಿದ್ದರು. ಪೊಲೀಸ್ ವಶದಲ್ಲಿ ಇದ್ದಾಗಲೇ ಆತ ಸಾವನ್ನಪ್ಪಿದ್ದು, ತೀವ್ರ ಕೋಲಾಹಲ ಉಂಟು ಮಾಡಿತ್ತು. ಕಥುವಾ ಮತ್ತು ಉನ್ನಾವೋ ಪ್ರಕರಣಗಳ ಬಗ್ಗೆ ಮೌನ ಮುರಿಯಿರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈದಿನ ಬೆಳಗ್ಗೆಯಷ್ಟೇ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದರು.
2009: ಅತ್ಯುತ್ತಮ ಪ್ರದರ್ಶನ ತೋರಿದ ಸಾನಿಯಾ ಮಿರ್ಜಾ ಹಾಗೂ ಚೀನಾ ತೈಪೆಯ ಚಿಯಾ ಜಂಗ್ ಚುವಾಂಗ್ ಜೋಡಿ ಫ್ಲೋರಿಡಾದಲ್ಲಿ ನಡೆದ ಎರಡು ಲಕ್ಷ ಡಾಲರ್ ಬಹುಮಾನ ಮೊತ್ತದ ಎಂಪಿಎಸ್ ಗ್ರೂಪ್ ಟೆನಿಸ್ ಟೂರ್ನಿಯ ಮಹಿಳೆಯರ ಡಬ್ಬಲ್ಸಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂದ್ಯದಲ್ಲಿ ಸಾನಿಯಾ-ಚುವಾಂಗ್ 6-3, 4-6, 10-7ರಲ್ಲಿ ಜೆಕ್ ಗಣರಾಜ್ಯದ ಕ್ವೆಟಾ ಪೆಶ್ಕೆ ಹಾಗೂ ಅಮೆರಿಕಾದ ಲೀಸಾ ರೇಮೊಂಡ್ ಅವರನ್ನು ಮಣಿಸಿದರು. ಟೂರ್ನಿಯಲ್ಲಿ ಶ್ರೇಯಾಂಕ ರಹಿತರಾಗಿ ಕಣಕ್ಕಿಳಿದಿದ್ದ ಭಾರತ-ಚೀನಾ ತೈಪೆ ಜೋಡಿ ಸೊಗಸಾದ ಪ್ರದರ್ಶನ ತೋರಿತು. ಫೈನಲ್ ಎದುರಾಳಿಗಳಾಗಿದ್ದ ಲೀಸಾ ಹಾಗೂ ಪೆಶ್ಕೆ ಈ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು. ಆದರೆ ಅವರ ಸವಾಲನ್ನು ಸಮರ್ಥವಾಗಿ ಎದುರಿಸಿದ ಸಾನಿಯಾ ಹಾಗೂ ಚುವಾಂಗ್ ಪ್ರಶಸ್ತಿ ಜಯಿಸಿದರು.
2009: ಲಂಡನ್‌ನ ವಿಶ್ವ ವಿಖ್ಯಾತ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲಾಗುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮೇಣದ ಪ್ರತಿಮೆಯನ್ನು ಈದಿನ ಸ್ವತಃ ತೆಂಡೂಲ್ಕರ್ ಮುಂಬೈಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲಿನಲ್ಲಿ ಅನಾವರಣಗೊಳಿಸಿದರು. ಇದನ್ನು ಸಚಿನ್ ಜನ್ಮದಿನ ಏಪ್ರಿಲ್ 24ರಂದು ಲಂಡನ್ನಿನಲ್ಲಿ ಉದ್ಘಾಟಿಸಲಾಗುವುದು. ಬಳಿಕ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತದೆ. ಇದನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಕ್ರೀಡಾಪಟು. ಆದರೆ ಈಗಾಗಲೇ ಮಹಾತ್ಮ ಗಾಂಧಿ, ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಅವರ ಮೇಣದ ಪ್ರತಿಮೆ ನಿರ್ಮಿಸಲಾಗಿದೆ. ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ, ಆಸ್ಟ್ರೇಲಿಯಾದ ಶೇನ್ ವಾರ್ನ್ ಹಾಗೂ ಸರ್ ಇಯಾನ್ ಬೋಥಂ ಪ್ರತಿಮೆ ಕೂಡ ಅಲ್ಲಿದೆ. ಆದರೆ ಮೇಣದ ಪ್ರತಿಮೆಯನ್ನು ಮೊದಲ ಬಾರಿ ಲಂಡನ್‌ನಿಂದ ಹೊರಗಡೆ ಅನಾವರಣಗೊಳಿಸಿದ್ದು ಇದೇ ಮೊದಲ ಸಲ.
2009: ಸತ್ಯಂ ಕಂಪ್ಯೂಟರ್ ಟೆಕ್ ಮಹೀಂದ್ರಾ ಕಂಪೆನಿಯಲ್ಲಿ ಹೊಸ ಮಾಲೀಕನನ್ನು ಕಂಡುಕೊಂಡಿತು. ಎಂಜಿನಿಯರಿಂಗ್ ದೈತ್ಯ ಕಂಪೆನಿ ಎಲ್ ಅಂಡ್ ಟಿ ಯನ್ನು ಹಿಂದಿಕ್ಕಿ ಸತ್ಯಂ ಖರೀದಿಗೆ ಅತಿ ಹೆಚ್ಚಿನ ಬಿಡ್ ಸಲ್ಲಿಸಿದ ಕಂಪೆನಿಯಾಗಿ ಟೆಕ್ ಮಹೀಂದ್ರಾ ಹೊರಹೊಮ್ಮಿತು. ಹಗರಣದ ಸುಳಿಗೆ ಸಿಲುಕಿರುವ ಕಂಪೆನಿಯಲ್ಲಿ ಶೇ.51ರಷ್ಟು ಷೇರು ಪಡೆಯಲು ಟೆಕ್ ಮಹೀಂದ್ರಾ ರೂ 2900 ಕೋಟಿ ನೀಡಬೇಕು.. ಪ್ರತಿ 10 ರೂಪಾಯಿ ಷೇರಿಗೆ ಟೆಕ್ ಮಹೀಂದ್ರಾ ರೂ 58 ನೀಡುವ ಪ್ರಸ್ತಾವ ನೀಡಿತ್ತು. ಎಲ್ ಅಂಡ್ ಟಿ ಬಿಡ್ ಮೌಲ್ಯ ರೂ 45.90 ಆಗಿತ್ತು.
2009: ಹರಕತ್ ಉಲ್ ಜಿಹಾದ್ ಉಗ್ರರು ಆರು ತಿಂಗಳ ಹಿಂದೆ ಅಪಹರಿಸಿದ್ದ, ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಚಿಕ್ಕಪ್ಪ ಹಾಗೂ ಖ್ಯಾತ ಪಾಕಿಸ್ಥಾನಿ ಚಿತ್ರ ನಿರ್ಮಾಪಕ, ವಿತರಕ ಸತೀಶ್ ಆನಂದ ಅವರನ್ನು ಬಿಡುಗಡೆ ಮಾಡಲಾಯಿತು. ಅವರನ್ನು ಬಿಡುಗಡೆ ಮಾಡಲು 1 ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ ಉಗ್ರರು ಆರು ತಿಂಗಳ ಕಾಲ ಆನಂದ್ ಅವರನ್ನು ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದರು. ಪಾಕಿಸ್ಥಾನಿ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆನಂದ ಅವರನ್ನು ಕಳೆದ ಅಕ್ಟೋಬರ್ 20 ರಂದು ಮನೆಗೆ ಮರಳುತ್ತಿದ್ದಾಗ, ಇಬ್ಬರು ಅಪರಿಚಿತ ಬಂದೂಕುಧಾರಿಗಳು ಅಪಹರಿಸಿದ್ದರು. ಪಾಕಿಸ್ಥಾನದ ಕಾನೂನು ಜಾರಿ ಸಂಸ್ಥೆಯೊಂದು ಅಪಹರಣಕಾರರನ್ನು ಪಾಕಿಸ್ಥಾನದ ವಾಯವ್ಯ ಗಡಿ ಪ್ರಾಂತ್ಯದಲ್ಲಿ ಪತ್ತೆ ಹಚ್ಚಿ, ಬಿಡುಗಡೆಗಾಗಿ ಮಾತುಕತೆ ನಡೆಸಿತ್ತು.
2009: ರಷ್ಯಾದ ಉರಾಲ್ಸ್ ಪ್ರಾಂತ್ಯದಲ್ಲಿನ ವೈದ್ಯರು ವ್ಯಕ್ತಿಯೊಬ್ಬನ ಶ್ವಾಸಕೋಶದಲ್ಲಿದ್ದ 5 ಸೆ. ಮೀ. ಉದ್ದದ ಸಸಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿತು. ಉರಾಲ್ಸ್ ನಗರದ ಆರ್ಟಿಯೊಮ್‌ಸಿಡೊರ್ಕಿನ್ (28) ಎಂಬ ಯುವಕನನ್ನು ಶ್ವಾಸಕೋಶ ಶಸ್ತ್ರಚಿಕಿತ್ಸೆ ಒಳಪಡಿಸಿದಾಗ ಅಲ್ಲಿ ಸಸಿ ಬೆಳೆದಿರುವುದು ವೈದರ ಗಮನಕ್ಕೆ ಬಂತು. ತೀವ್ರ ಎದೆನೋವಿನ ಕಾರಣ ಆರ್ಟಿಯೊಮ್ ಆಸ್ಪತ್ರೆಗೆ ದಾಖಲಾಗಿದ್ದರು.. ಆರ್ಟಿಯೊಮ್ ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿರಬಹುದು ಎಂದು ವೈದ್ಯರು ಶಂಕಿಸಿದ್ದರು. ಉಸಿರಾಟದ ವೇಳೆ ಶ್ವಾಸಕೋಶ ಸೇರಿದ ಬೀಜವೊಂದು ನಂತರ ಅಲ್ಲೇ ಮೊಳಕೆಯೊಡೆದು ಬೆಳೆಯಲಾರಂಭಿಸಿತ್ತು.
2009: ನಿಮ್ಮ ದೇಹದ ಒಂದು ಹನಿ ರಕ್ತ ಅಥವಾ ಸೂಜಿಮೊನೆ ಗಾತ್ರದ ಅಂಗಾಂಶದಿಂದ ಕ್ಯಾನ್ಸರ್ ಪತ್ತೆ ಹಚ್ಚುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿಜ್ಞಾನಿಗಳು ಪ್ರಕಟಿಸಿದರು. ಕ್ಯಾಲಿಫೋರ್ನಿಯಾ ಮೂಲದ ಸ್ಟ್ಯಾಂಡರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನವರು ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು. ದೇಹದಲ್ಲಿ ವಿಷಕಾರಿ ಅಂಶಗಳು ಹೇಗೆ ಕ್ಯಾನ್ಸರ್ ಹುಟ್ಟುಹಾಕುತ್ತವೆ ಎಂಬುದನ್ನು ವಿಶೇಷ ಸಂಶೋಧಕ ಯಂತ್ರದ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ಕ್ಯಾನ್ಸರ್ ಪತ್ತೆ ಹಚ್ಚಲು ಇದುವರೆಗೆ ಸರ್ಜಿಕಲ್ ಬಯಾಪ್ಸಿ ವಿಧಾನವನ್ನು ಬಳಸಲಾಗುತ್ತಿತ್ತು. ಈ ವಿಧಾನದಲ್ಲಿ ದೇಹದಲ್ಲಿನ ಬಹಳಷ್ಟು ಜೀವಕೋಶಗಳು ಹಾನಿಗೊಳಗಾಗುತ್ತಿದ್ದವು. ಅದರೆ ಹೊಸವಿಧಾನದಲ್ಲಿ ಸುಲಭವಾಗಿ ನಾವು ಕ್ಯಾನ್ಸರ್ ಪತ್ತೆ ಹಚ್ಚಬಹುದು ಎಂದು ಸಂಶೋಧಕ ಅಲೈಸ್ ಫ್ಯಾನ್ ಹೇಳಿದರು.
2008: ಹಿರಿಯ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಶಾಂತರಸ ಹೆಂಬೇರಾಳು (85) ಅವರು ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶಾಂತರಸರ ಪತ್ನಿ ಲಕ್ಷ್ಮಿದೇವಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಕವಯತ್ರಿ ಮುಕ್ತಾಯಕ್ಕ ಸೇರಿದಂತೆ ಇಬ್ಬರು ಪುತ್ರಿಯರು, ಇಬ್ಬರು ಪುತ್ರರನ್ನು ಅವರು ಅಗಲಿದರು
ರಾಯಚೂರು ತಾಲ್ಲೂಕಿನ ಹೆಂಬೇರಾಳು ಗ್ರಾಮದಲ್ಲಿ 1924ರ ಏಪ್ರಿಲ್ 7ರಂದು ಜನಿಸಿದ್ದ ಶಾಂತರಸ 50ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಯಾವುದೇ ಪದವಿ-ಪುರಸ್ಕಾರಗಳ ಬೆನ್ನುಹತ್ತದ ಇವರಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. 1962ರಲ್ಲಿ `ಸತ್ಯಸ್ನೇಹಿ' ರಗಳೆ ನಾಟಕಕ್ಕೆ ಮೈಸೂರು ಸರ್ಕಾರದಿಂದ ಪ್ರಶಸ್ತಿ, `ನಾಯಿ ಮತ್ತು ಪಿಂಚಣಿ' ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ಬರ್ಗ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿವಿಯಿಂದ ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ. 2006ರಲ್ಲಿ ಬೀದರಿನಲ್ಲಿ ನಡೆದ 72ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದರು. ತಮ್ಮ ದಿಟ್ಟ ಹಾಗೂ ನೇರ ನುಡಿಗಳಿಗೆ ಅವರು ಹೆಸರುವಾಸಿಯಾಗಿದ್ದರು. ಉರ್ದು ಭಾಷೆಯ ಹಲವು ಮಹತ್ವದ ಕೃತಿಗಳು, ಘಜಲ್ ಗಳನ್ನು ಶಾಂತರಸ ಕನ್ನಡಕ್ಕೆ ಅನುವಾದಿಸಿದ್ದರು. ಹೈದರಾಬಾದ್ ಕರ್ನಾಟಕದ ಸಾಹಿತಿಗಳನ್ನು ಕೈಬಿಟ್ಟು ಹೊರತಂದ `ಅಕ್ಷರ ಹೊಸ ಕಾವ್ಯ'ವೇ ಕನ್ನಡದ ಪ್ರಾತಿನಿಧಿಕ ಕಾವ್ಯ ಎಂದು ಬೀಗುತ್ತಿದ್ದ ದಿನಗಳಲ್ಲಿ ಅದಕ್ಕೆ ಪರ್ಯಾಯವಾಗಿ ಕೈಬಿಟ್ಟ ಸಾಹಿತಿಗಳ `ಬೆನ್ನ ಹಿಂದಿನ ಬೆಳಕು' ಸಂಕಲನವನ್ನು ಶಾಂತರಸ ಹೊರತಂದರು. ಪತ್ರಿಕೆಗಳಿಂದ ವಾಪಸಾಗಿದ್ದ ಹೈದರಾಬಾದ್ ಕರ್ನಾಟಕ ಭಾಗದ ಸಾಹಿತಿಗಳ ಕತೆ, ಕವನಗಳನ್ನು ಸೇರಿಸಿಕೊಂಡು 'ಮುಸುಕು ತೆರೆ' ಸಂಕಲನ ಹೊರತಂದರು. ಇವೆರಡೂ ಅತ್ಯಂತ ಮೌಲಿಕ ಕೃತಿಗಳು ಎಂದು ಅವೇ ಪತ್ರಿಕೆ ಹಾಗೂ ವಿಮರ್ಶಕರಿಂದ ನಂತರ ಪ್ರಶಂಸೆಗೊಳಗಾದವು. ಎಂ.ಎ.ಬಿ.ಎಡ್. ಪದವೀಧರರಾದ ಇವರು ಪ್ರಾಥಮಿಕದಿಂದ ಬಿ.ಎ.ವರೆಗೆ ಉರ್ದು ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದರು. ಸುಮಾರು 35 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಶಾಂತರಸರು ರಾಯಚೂರಿನ ಹಮ್ ದರ್ದ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ, ಮುಂದೆ ಅದೇ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಅನಂತರ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.
2008: ಅತ್ಯಂತ ಕಿರಿಯ ವಯಸ್ಸಿನ ಮ್ಯಾರಥಾನ್ ಓಟಗಾರ ಬುಧಿಯಾ ಸಿಂಗ್ ಗೆ ತರಬೇತಿ ನೀಡಿದ್ದ ಖ್ಯಾತಿಯ ಕೋಚ್ ಬಿರಾಂಚಿ ದಾಸ್ ಅವರನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಭುವನೇಶ್ವರದಲ್ಲಿ ಗುಂಡಿಟ್ಟು ಕೊಲೆಗೈದರು. ಜೂಡೊ ತರಬೇತುದಾರರಾದ ಬಿರಾಂಚಿ ದಾಸ್ ಅವರು ಇಲ್ಲಿನ ಬಿಜೆಬಿ ಕಾಲೇಜಿನ ಜೂಡೊ ಕೇಂದ್ರದಲ್ಲಿ ತಮ್ಮ ಗೆಳೆಯರೊಡನೆ ಮಾತನಾಡುತ್ತಾ ಕುಳಿತಿದ್ದಾಗ ಈ ಘಟನೆ ನಡೆಯಿತು ಎಂದು ಪೊಲೀಸ್ ಉಪ ಆಯುಕ್ತ ಅಮಿತಾಭ್ ಠಾಕೂರ್ ತಿಳಿಸಿದರು. ಗುಂಡು ಬಿರಾಂಚಿ ದಾಸ್ ಅವರ ಕೊರಳು, ಎದೆ ಮತ್ತು ಕಾಲಿಗೆ ತಾಗಿತು. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದರು ಎಂದೂ ಅವರು ಹೇಳಿದರು. ಬುಧಿಯಾನ ಪ್ರತಿಭೆಯನ್ನು ಆತನ ಎಳವೆಯಲ್ಲಿಯೇ ಗುರುತಿಸಿದ್ದ ಬಿರಾಂಚಿದಾಸ್, ಬುಧಿಯಾ ಪುರಿಯಿಂದ ಭುವನೇಶ್ವರದವರೆಗಿನ 65 ಕಿ.ಮೀ. ದೂರವನ್ನು ನಿರಂತರವಾಗಿ ಓಡಿ ದಾಖಲೆ ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
2008: ನೇಪಾಳದಲ್ಲಿ ಪ್ರಚಂಡ ಜಯಭೇರಿಯೊಂದಿಗೆ ಸಿಪಿಎನ್-ಮಾವೋ ಪಕ್ಷ ಉದಯವಾಗುವ ಮೂಲಕ 240 ವರ್ಷಗಳ ರಾಜ ಮನೆತನದ ಪಾರಂಪರಿಕ ಆಡಳಿತಕ್ಕೆ ಮಂಗಳ ಹಾಡಿದಂತಾಯಿತು. ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದ 73 ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಸಿಪಿಎನ್- ಮಾವೋವಾದಿ ಪಕ್ಷ ತನ್ನದಾಗಿಸಿಕೊಂಡಿತು. ಸಿಪಿಎನ್ -ಯುಎಂಎಲ್- 12, ಪ್ರಧಾನಮಂತ್ರಿ ಗಿರಿಜಾಪ್ರಸಾದ್ ಕೊಯಿರಾಲ ಅವರ ಕಾಂಗ್ರೆಸ್ ಪಕ್ಷ-10, ಮಾದೇಶಿ ಪೀಪಲ್ಸ್ ರೈಟ್ಸ್ ಫೋರಂ-5, ನೇಪಾಲ್ ವರ್ಕರ್ಸ್ ಅಂಡ್ ಪೀಸಂಟ್ಸ್ ಪಾರ್ಟಿ-2 ಮತ್ತು ಟೆರಾಯ್ ಮಾದೇಶ್ ಡೆಮಾಕ್ರಟಿಕ್ ಪಾರ್ಟಿ-1 ಸ್ಥಾನವನ್ನು ಪಡೆದವು.
2008: ಬ್ರಿಟಿಷ್ ಪಡೆಗಳು ಆಫ್ಘಾನಿಸ್ಥಾನದಲ್ಲಿ ಕಳೆದ 2 ವರ್ಷಗಳಲ್ಲಿ ಸುಮಾರು 7000 ತಾಲಿಬಾನ್ ಉಗ್ರಗಾಮಿಗಳನ್ನು ಹತ್ಯೆ ಮಾಡಿವೆ. ಆದರೆ ಇಂತಹ ದಾಳಿಗಳಿಂದ ಸ್ಥಳೀಯವಾಗಿ ಉಗ್ರಗಾಮಿಗಳ ಜನಪ್ರಿಯತೆ ಹೆಚ್ಚುವ ಸಂಭವವಿರುವುದರಿಂದ ದಾಳಿ ಯೋಜನೆಗಳನ್ನು ಕಡಿತಗೊಳಿಸಲಾಗಿದೆ ಎಂದು 'ದಿ ಸಂಡೇ ಟೈಮ್ಸ್' ವರದಿ ಮಾಡಿತು. ಪತ್ರಿಕೆಯ ವರದಿಯಂತೆ 2006 ರಲ್ಲಿ ಹೆಲ್ಮಂಡ್ ಪ್ರಾಂತ್ಯದಲ್ಲಿ ಮೊದಲು ನಿಯೋಜಿಸಿದ್ದ ವಾಯು ಪಡೆಯವರು ಕನಿಷ್ಠ 1000 ತಾಲಿಬಾನ್ ಉಗ್ರಗಾಮಿಗಳನ್ನು ಹತ್ಯೆ ಮಾಡಿದ್ದಾರೆ. ಅಲ್ಲಿಂದೀಚೆಗೆ 6000 ತಾಲಿಬಾನ್ ಉಗ್ರಗಾಮಿಗಳನ್ನು ಬ್ರಿಟಿಷ್ ಪಡೆಗಳು ಹತ್ಯೆಗೈದಿವೆ.
2008: ತರಕಾರಿಗಳು ಮತ್ತು ಹಣ್ಣುಗಳನ್ನು ಕೇವಲ ತೊಳೆಯುವುದರಿಂದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲಾಗುವುದಿಲ್ಲ ಎಂಬ ಸಂಗತಿಯನ್ನು ಹೊಸ ಅಧ್ಯಯನವೊಂದು ಹೊರಗೆಡವಿತು. ತರಕಾರಿ, ಹಣ್ಣುಗಳನ್ನು ತೊಳೆಯುವುದರಿಂದ ಆಹಾರ ವಿಷವಾಗುವುದು ತಪ್ಪುತ್ತದೆ. ಆದರೆ, ತೊಳೆಯುವಾಗ ಕ್ಲೋರಿನ್ನಿನಂತಹ ರಾಸಾಯನಿಕ ಬಳಸಿ ತೊಳೆದರೂ ಬ್ಯಾಕ್ಟೀರಿಯಾಗಳು ಬಗ್ಗುವುದಿಲ್ಲ ಎಂದು ಬ್ರಿಟನ್ನಿನ `ದಿ ಡೈಲಿ ಟೆಲಿಗ್ರಾಫ್' ಪತ್ರಿಕೆ ವರದಿ ಮಾಡಿತು.
2008: ರಫ್ತುದಾರರ ಉತ್ಪನ್ನವನ್ನು ತಡವಾಗಿ ಮುಟ್ಟಿಸಿದ್ದಕ್ಕಾಗಿ 50,000 ರೂ. ದಂಡ ಪಾವತಿಸುವಂತೆ ದೆಹಲಿ ಗ್ರಾಹಕ ನ್ಯಾಯಾಲಯವು ಯುನೈಟೆಡ್ ಏರ್ ಲೈನ್ಸಿಗೆ ಸೂಚಿಸಿತು. ಅನಿಘ್ ಎಕ್ಸ್ ಪೋರ್ಟ್ ಇಂಟರ್ ನ್ಯಾಷನಲ್ನ ಮಾಲೀಕ ಎ.ಪಿ. ಶರ್ಮಾ ಅವರ ದೂರನ್ನು ಅಂಗೀಕರಿಸಿದ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಜೆ.ಡಿ. ಕಪೂರ್, ವ್ಯಾಜ್ಯದ ವೆಚ್ಚವಾಗಿ ಹೆಚ್ಚುವರಿ 10,000 ರೂ.ಪಾವತಿಸುವಂತೆ ಏರ್ ಲೈನ್ಸಿಗೆ ಆದೇಶಿಸಿದರು. ವಸ್ತು ತಲುಪಿಸುವುದು ವಿಳಂಬವಾದಲ್ಲಿ ಪರಿಹಾರ ನೀಡಬೇಕು ಎಂದು ಏರ್ ಲೈನ್ಸ್ ಮತ್ತು ಗ್ರಾಹಕರು ಮೊದಲೇ ಒಪ್ಪಂದ ಮಾಡಿಕೊಳ್ಳದಿದ್ದರೂ, ಸೇವೆಯಲ್ಲಿ ನ್ಯೂನತೆಯಾದಲ್ಲಿ ಸೇವೆ ಒದಗಿಸುವವರು ಗ್ರಾಹಕರಿಗೆ ಪರಿಹಾರ ಒದಗಿಸಲೇಬೇಕಾಗುತ್ತದೆ ಎಂದು ಆಯೋಗ ಹೇಳಿತು. ಗಿಡಮೂಲಿಕೆ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ರಫ್ತಿನಲ್ಲಿ ತೊಡಗಿಕೊಂಡ ಶರ್ಮಾ 1998ರ ಮಾರ್ಚ್ ತಿಂಗಳಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಾಣಿಜ್ಯ ಮೇಳದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಮೇಳ ಮುಕ್ತಾಯಗೊಂಡ 3 ದಿನಗಳ ನಂತರ ವಸ್ತುಗಳನ್ನು ತಲುಪಿಸಲಾಯಿತು. ತನ್ನ ವ್ಯವಹಾರ ನಷ್ಟವಾದುದಕ್ಕಾಗಿ, ಆ ಸಂದರ್ಭದಲ್ಲಿ ಎದುರಿಸಿದ ಅಡಚಣೆ, ಮಾನಸಿಕ ಒತ್ತಡಕ್ಕಾಗಿ 40,000 ಅಮೆರಿಕ ಡಾಲರ್ ಪರಿಹಾರ ನೀಡುವಂತೆ ಶರ್ಮಾ ಅರ್ಜಿಯಲ್ಲಿ ಕೋರಿದ್ದರು.
2008: ಈಶಾನ್ಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟದಿಂದಾಗಿ 14 ಗಣಿ ಕಾರ್ಮಿಕರು ಮೃತರಾಗಿರುವುದಾಗಿ ಸರ್ಕಾರಿ ಮಾಧ್ಯಮ ತಿಳಿಸಿತು.
2007: ಪ್ರಸ್ತುತ ಸಾಲಿನ ಅನುಪಮಾ ನಿರಂಜನ ಪ್ರಶಸ್ತಿಗೆ ಲೇಖಕಿ ಆನಂದಿ ಸದಾಶಿವರಾವ್ ಆಯ್ಕೆಯಾದರು.
2007: ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ಅವಧಿಯೊಳಗೆ 25 ಮಂದಿಗೆ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಕೇಂದ್ರವು ರಾಷ್ಟ್ರೀಯ ದಾಖಲೆ ಮಾಡಿತು ಎಂದು ಕೇಂದ್ರದ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಪ್ರಕಟಿಸಿದರು.
2007: 2006-07 ಸಾಲಿನ ಪ್ರೌಢಶಾಲಾ ಸಹಾಯಕ ಶಿಕ್ಷಕರ (ಗ್ರೇಡ್-2) ನೇಮಕಾತಿಯಲ್ಲಿ ಅಂಗವಿಕಲರಿಗೆ ಶಾಸನಬದ್ಧವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತು.
2007: ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಾನೂನು ಹೋರಾಟ ಮುಂದುವರೆಸಿದ ಲೋಕಾಯುಕ್ತರು ಬೆಂಗಳೂರಿನಲ್ಲಿ ವಿಧಾನಸೌಧದ ಮೊಗಸಾಲೆಯಲ್ಲಿ ಎಲ್ಲರಿಗೂ ನೋಟಿಸ್ ಜಾರಿಮಾಡಿದರು.
2006: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗಾಗಿ ಮೊದಲ ಬಾರಿ ಜಾರಿಗೆ ತರಲಾಗಿರುವ ಸೂಕ್ಷ್ಮ ಪಿಂಚಣಿ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಉದ್ಘಾಟಿಸಿದರು. ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕ್ (ಸೇವಾ ಬ್ಯಾಂಕ್) ತನ್ನ ಎಂಟು ಲಕ್ಷ ಸದಸ್ಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಸಂಸ್ಥಾಪಕಿ ಇಳಾ ಭಟ್ ಅವರ ಚಿಂತನೆಯ ಮೂಸೆಯಲ್ಲಿ ರೂಪುಗೊಂಡ ಈ ಯೋಜನೆಗೆ ಆರಂಭದ ದಿನವೇ 25,025 ಮಹಿಳೆಯರು ಸದಸ್ಯರಾದರು.
2006: ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಈದಿನ ಚಿತ್ರಾ ಪೌರ್ಣಮಿಯಂದು ಸಂಜೆ 5.40ರ ಗೋಧೂಳಿ ಲಗ್ನದಲ್ಲಿ ಅವರ ಕರ್ಮಭೂಮಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಸಂಭವಿಸಿದ ಹಿಂಸಾಚಾರ, ಪೊಲೀಸ್ ಗೋಲಿಬಾರಿಗೆ 8 ಜನ ಬಲಿಯಾದರು, ಬಸ್ ಮತ್ತಿತರ ವಾಹನಗಳು ಬೆಂಕಿಗೆ ಆಹುತಿಯಾದವು.
2006: ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಪಿನಾಕ ಬಹುಬ್ಯಾರೆಲ್ ರಾಕೆಟ್ ವ್ಯವಸ್ಥೆಯನ್ನು ಎರಡು ಬಾರಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಪಿನಾಕವನ್ನು ಅಭಿವೃದ್ಧಿ ಪಡಿಸಿದೆ. ಅತಿ ಶೀಘ್ರವಾಗಿ ಚಲಿಸಬಲ್ಲ ಈ ರಾಕೆಟ್ ವ್ಯವಸ್ಥೆ 30 ಕಿ.ಮೀ. ವ್ಯಾಪ್ತಿ ಮೀರಿ ಗುರಿ ಇಡುವ ಹಾಗೂ ಬಂಕರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇದು 44 ಸೆಕೆಂಡುಗಳಲ್ಲಿ 144 ರಾಕೆಟ್ಟುಗಳನ್ನು ಚಿಮ್ಮಿಸಬಲ್ಲುದು.
2006: ಜಾರ್ಖಂಡಿನ ರಾಂಚಿಯ ತಪೋವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಐದು ದಿನಗಳ ಭಾರತ ಸುರಕ್ಷಾ ಯಾತ್ರೆಯ ಎರಡನೇ ಸುತ್ತನ್ನು ಆರಂಭಿಸಿದರು.
1999: `ಡಾ. ಡೆತ್' ಎಂದೇ ಕುಖ್ಯಾತಿ ಪಡೆದ ಜ್ಯಾಕ್ ಕೆರ್ವೋರ್ಕಿಯನ್ ಗೆ ಮಿಚಿಗನ್ನಿನ ಪೊಂಟಿಯಾಕಿಯಲ್ಲಿ 10ರಿಂದ 25 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. 1998ರಲ್ಲಿ ಥಾಮಸ್ ಯೌಕ್ ಎಂಬ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿ ಅದನ್ನು ವಿಡಿಯೋಟೇಪ್ ಮಾಡಿ ಟೆಲಿವಿಷನ್ನಿನಲ್ಲಿ ಪ್ರಸಾರ ಮಾಡಿದುದಕ್ಕಾಗಿ ಈತನಿಗೆ ಈ ಶಿಕ್ಷೆ ವಿಧಿಸಲಾಯಿತು.
1968: ಕಲಾವಿದ ಗೋವಿಂದರಾಜ ಸ್ವಾಮಿ ಜನನ.
1963: ಗ್ಯಾರಿ ಕ್ಯಾಸ್ಪರೋವ್ ಹುಟ್ಟಿದ ದಿನ. ರಷ್ಯಾದ ಚೆಸ್ ಮಾಸ್ಟರ್ ಆದ ಇವರು 1985ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1951: ಗಾನಕೋಗಿಲೆ ಎನಿಸಿದ ಭಾಗ್ಯಮೂರ್ತಿ ಅವರು ಸುಬ್ರಹ್ಮಣ್ಯ ಶಾಸ್ತ್ರಿ- ರಂಗನಾಯಕಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1948: ಕಲಾವಿದ ಜಿ.ಎಂ. ಹೆಗಡೆ ಜನನ.
1919: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.
1772: ವಾರನ್ ಹೇಸ್ಟಿಂಗ್ಸ್ ನನ್ನು ಬಂಗಾಳದ ಗವರ್ನರ್ ಆಗಿ ನೇಮಿಸಲಾಯಿತು.
1772: ಅಮೆರಿಕದ ಗಡಿಯಾರ ತಯಾರಕ ಎಲಿ ಟೆರ್ರಿ (1772-1852) ಹುಟ್ಟಿದ ದಿನ. ಅಮೆರಿಕದಲ್ಲಿ ಬೃಹತ್ ಪ್ರಮಾಣದಲ್ಲಿ ಹೊಸ ವಿನ್ಯಾಸದ ಗಡಿಯಾರಗಳನ್ನು ತಯಾರಿಸಿದ ಈತ `ಹೆನ್ರಿ ಫೋರ್ಡ್ ಆಫ್ ಕ್ಲಾಕ್ಸ್' ಎಂಬ ಹೆಸರನ್ನು ಗಳಿಸಿದ.
1743: ಅಮೆರಿಕದ ಮೂರನೇ ಅಧ್ಯಕ್ಷ ಥಾಮಸ್ ಜೆಫರ್ ಸನ್ (1743-1826) ಜನ್ಮದಿನ.
No comments:
Post a Comment